ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಸ್ತಾವನೆ

ಪ್ರಸ್ತಾವನೆ

ಪ್ರಿಯ ಓದುಗರೇ:

ನೀವು ದೇವರ ಸಮೀಪವಿದ್ದೀರೆಂದು ನಿಮಗನಿಸುತ್ತದೊ? ಅನೇಕರಿಗೆ ಇದು ಸಾಧ್ಯವೇ ಇಲ್ಲವೆಂದು ತೋರುತ್ತದೆ. ಕೆಲವರಿಗಾದರೊ ಆತನು ಅತಿ ದೂರದಲ್ಲಿದ್ದಾನೆ ಎಂಬ ಶಂಕೆ; ಇತರರಿಗಾದರೊ ಆತನ ಸಮೀಪಕ್ಕೆ ಹೋಗಲು ತಾವು ತೀರ ಅಯೋಗ್ಯರೆಂಬ ಭಾವನೆ ಇದೆ. ಆದರೂ ಬೈಬಲು ನಮಗೆ ಪ್ರೀತಿಪೂರ್ವಕವಾಗಿ ಪ್ರೋತ್ಸಾಹಿಸುವುದು: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಆತನು ತನ್ನ ಆರಾಧಕರಿಗೆ ಈ ಆಶ್ವಾಸನೆಯನ್ನೂ ನೀಡುತ್ತಾನೆ: “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”​—ಯೆಶಾಯ 41:13.

ದೇವರೊಂದಿಗೆ ಅಂತಹ ಸಮೀಪದ ಸಂಬಂಧಕ್ಕೆ ಬರಲು ನಾವು ಹೇಗೆ ಪ್ರಯತ್ನಿಸಬಲ್ಲೆವು? ನಾವು ಬೆಳೆಸುವಂತಹ ಯಾವುದೇ ಸ್ನೇಹಸಂಬಂಧದಲ್ಲಿ, ಒಬ್ಬ ವ್ಯಕ್ತಿಯನ್ನು ತಿಳಿದುಕೊಳ್ಳುವುದೂ ಆ ವ್ಯಕ್ತಿಯ ಅಪೂರ್ವ ಗುಣಲಕ್ಷಣಗಳನ್ನು ಮೆಚ್ಚಿ ಅವುಗಳನ್ನು ಅಮೂಲ್ಯವಾಗಿ ಎಣಿಸುವುದೂ ಆ ಬಂಧದ ತಳಪಾಯವಾಗಿ ಪರಿಣಮಿಸುತ್ತದೆ. ಆದುದರಿಂದಲೇ, ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಿರುವಂಥ ದೇವರ ಗುಣಗಳು ಮತ್ತು ಆತನು ಕ್ರಿಯೆಗೈಯುವ ವಿಧಾನವು, ಅಧ್ಯಯನಮಾಡಲಿಕ್ಕಾಗಿ ಒಂದು ಪ್ರಾಮುಖ್ಯ ವಿಷಯವಾಗಿದೆ. ಯೆಹೋವನು ತನ್ನ ಪ್ರತಿಯೊಂದು ಗುಣವನ್ನು ಪ್ರದರ್ಶಿಸುವ ವಿಧಾನದ ಕುರಿತು ಚಿಂತನೆಮಾಡುವುದು, ಯೇಸು ಅವುಗಳನ್ನು ಹೇಗೆ ಪರಿಪೂರ್ಣವಾಗಿ ಪ್ರತಿಬಿಂಬಿಸಿ ತೋರಿಸಿದನೆಂಬುದನ್ನು ತಿಳಿದುಕೊಳ್ಳುವುದು, ಮತ್ತು ನಾವು ಸಹ ಅವುಗಳನ್ನು ಹೇಗೆ ಬೆಳೆಸಿಕೊಳ್ಳಬಹುದೆಂಬುದನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ದೇವರ ಹೆಚ್ಚು ಸಮೀಪಕ್ಕೆ ಸೆಳೆಯುತ್ತದೆ. ಯೆಹೋವನೊಬ್ಬನೇ ವಿಶ್ವದ ನ್ಯಾಯವಾದ ಹಾಗೂ ಪರಿಪೂರ್ಣ ಪರಮಾಧಿಕಾರಿಯೆಂದು ನಾವಾಗ ಕಂಡುಕೊಳ್ಳುವೆವು. ಅಷ್ಟುಮಾತ್ರವಲ್ಲದೆ, ನಮಗೆಲ್ಲರಿಗೆ ಬೇಕಾಗಿರುವ ತಂದೆಯೂ ಆತನಾಗಿದ್ದಾನೆ. ಶಕ್ತಿಶಾಲಿ, ನ್ಯಾಯವಂತ, ವಿವೇಕಿ, ಹಾಗೂ ಪ್ರೀತಿಭರಿತನಾಗಿರುವ ಆತನು ತನ್ನ ನಂಬಿಗಸ್ತ ಮಕ್ಕಳನ್ನು ಎಂದೂ ತೊರೆದುಬಿಡನು.

ಆದುದರಿಂದ, ನೀವು ಯೆಹೋವ ದೇವರನ್ನು ಸರ್ವದಾ ಸ್ತುತಿಸಲಿಕ್ಕಾಗಿ ಜೀವಿಸಸಾಧ್ಯವಾಗುವಂತೆ, ಸದಾ ಆತನಿಗೆ ಹೆಚ್ಚು ಸಮೀಪವಾಗುತ್ತಾ, ಆತನೊಂದಿಗೆ ಎಂದಿಗೂ ಮುರಿಯದ ಒಂದು ಅನಂತವಾದ ಬಂಧವನ್ನು ಬೆಸೆಯಲಿಕ್ಕಾಗಿ ಈ ಪುಸ್ತಕವು ನಿಮಗೆ ಸಹಾಯಮಾಡುವಂತಾಗಲಿ.

ಪ್ರಕಾಶಕರು