ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

“ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು”

“ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು”

1, 2. ಪ್ರವಾದಿಯಾದ ಯೆಶಾಯನಿಗೆ ಯಾವ ದರ್ಶನವು ದೊರೆಯಿತು, ಮತ್ತು ಅದು ನಮಗೆ ಯೆಹೋವನ ಕುರಿತು ಏನನ್ನು ಕಲಿಸುತ್ತದೆ?

ಯೆಶಾಯನು ಯೆಹೋವನಿಂದ ಒಂದು ದರ್ಶನವನ್ನು ಪಡೆದಾಗ, ಅವನ ಕಣ್ಣಿಗೆ ಬಿದ್ದ ದೃಶ್ಯದಿಂದ ಅವನು ಭಯವಿಸ್ಮಿತನಾದನು. ಅದೆಷ್ಟು ನೈಜವಾದ ದೃಶ್ಯವಾಗಿ ತೋರಿಬಂತು! ತನ್ನ ಕಣ್ಣುಗಳು ಉನ್ನತೋನ್ನತ ಸಿಂಹಾಸನದಲ್ಲಿ ಕೂತಿರುವ ಯೆಹೋವನನ್ನು ಸಾಕ್ಷಾತ್‌ ‘ಕಂಡವೊ’ ಎಂಬಂತೆ ಇತ್ತೆಂದು ಅವನು ಅನಂತರ ಬರೆದನು. ಯೆಹೋವನ ವಸ್ತ್ರದ ನೆರಿಗೆಯು ಯೆರೂಸಲೇಮಿನ ಮಹಾ ಮಂದಿರದಲ್ಲೆಲ್ಲಾ ಹರಡಿತ್ತು.​—ಯೆಶಾಯ 6:1, 2.

2 ಯೆಶಾಯನ ಕಿವಿಗೆಬಿದ್ದಂಥ ನಾದವು ಸಹ ಅವನನ್ನು ಭಯಚಕಿತಗೊಳಿಸಿತು. ಅದು, ಆಲಯವು ಮಾತ್ರವಲ್ಲ ಅದರ ಅಸ್ತಿವಾರವೂ ಕಂಪಿಸುವಷ್ಟು ಗಟ್ಟಿಯಾದ ಗಾಯನವಾಗಿತ್ತು. ಆ ಹಾಡಿನ ಧ್ವನಿಯು ಅತ್ಯುಚ್ಚ ದರ್ಜೆಯ ಆತ್ಮಜೀವಿಗಳಾದ ಸೆರಾಫಿಯರಿಂದ ಹೊರಡುತ್ತಿತ್ತು. ಅವರ ಮಹತ್ತಾದ ಸ್ವರಮೇಳವು ಈ ಸರಳವಾದ ಪ್ರಭಾವಯುಕ್ತ ಮಾತುಗಳನ್ನು ಪ್ರತಿಧ್ವನಿಸಿತು: “ಸೇನಾಧೀಶ್ವರನಾದ ಯೆಹೋವನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿದೆ.” (ಯೆಶಾಯ 6:3, 4) “ಪರಿಶುದ್ಧನು” ಎಂಬ ಪದವನ್ನು ಮೂರು ಬಾರಿ ಕೂಗಿಹಾಡುವುದು ಒಂದು ವಿಶೇಷ ಒತ್ತನ್ನು ನೀಡಿತು ಮತ್ತು ಇದು ತಕ್ಕದ್ದಾಗಿತ್ತು ಏಕೆಂದರೆ ಯೆಹೋವನು ಅತಿ ಉತ್ಕೃಷ್ಟ ಮಟ್ಟದಲ್ಲಿ ಪರಿಶುದ್ಧನಾಗಿದ್ದಾನೆ. (ಪ್ರಕಟನೆ 4:8) ಯೆಹೋವನ ಪರಿಶುದ್ಧತೆಯ ಬಗ್ಗೆ ಬೈಬಲಿನಾದ್ಯಂತ ಒತ್ತಿಹೇಳಲಾಗಿದೆ. ನೂರಾರು ವಚನಗಳಲ್ಲಿ “ಪರಿಶುದ್ಧನು” ಮತ್ತು “ಪರಿಶುದ್ಧತೆ” ಎಂಬ ಪದಗಳು ಆತನ ನಾಮದೊಂದಿಗೆ ಜೊತೆಗೂಡಿಸಲ್ಪಟ್ಟಿವೆ.

3. ಯೆಹೋವನ ಪರಿಶುದ್ಧತೆಯ ಕುರಿತ ತಪ್ಪಾದ ದೃಷ್ಟಿಕೋನಗಳು ಅನೇಕರನ್ನು ದೇವರ ಸಮೀಪಕ್ಕೆ ತರುವ ಬದಲಿಗೆ ಆತನಿಂದ ದೂರ ಹೋಗುವಂತೆ ಮಾಡುವುದು ಹೇಗೆ?

3 ಹೀಗಿರಲಾಗಿ, ಯೆಹೋವನ ಕುರಿತು ನಾವು ಗ್ರಹಿಸಿಕೊಳ್ಳುವಂತೆ ಆತನು ಬಯಸುವ ಪ್ರಮುಖ ವಿಷಯಗಳಲ್ಲೊಂದು ಆತನ ಪರಿಶುದ್ಧತೆಯೇ. ಆದರೂ ಆ ವಿಚಾರವೇ ಇಂದು ಅನೇಕರನ್ನು ವಿಕರ್ಷಿಸುತ್ತದೆ. ಪರಿಶುದ್ಧತೆ ಎಂದಾಕ್ಷಣ ಕೆಲವರ ಮನಸ್ಸಿಗೆ, ಸ್ವನೀತಿ ಅಥವಾ ಹುಸಿ ಭಕ್ತಿ ಎಂಬ ತಪ್ಪಭಿಪ್ರಾಯ ಬರುತ್ತದೆ. ಸ್ವಗೌರವದ ಕೊರತೆಯೊಂದಿಗೆ ಹೋರಾಡುತ್ತಿರುವ ಇತರರಿಗೆ ದೇವರ ಪರಿಶುದ್ಧತೆಯು ಆಕರ್ಷಕವಾಗಿರುವುದರ ಬದಲಿಗೆ ಹೆಚ್ಚು ಅಂಜಿಕೆಯನ್ನುಂಟುಮಾಡಬಹುದು. ಈ ಪರಿಶುದ್ಧನಾದ ದೇವರ ಸಮೀಪಕ್ಕೆ ಬರುವುದಕ್ಕೆ ತಾವೆಂದೂ ಅರ್ಹರಾಗಲಿಕ್ಕಿಲ್ಲವೆಂಬ ಅಳುಕು ಅವರಿಗೆ ಇರಬಹುದು. ಆದಕಾರಣ ಅನೇಕರು ದೇವರ ಪರಿಶುದ್ಧತೆಯಿಂದಾಗಿ ಆತನಿಂದ ದೂರ ಸರಿಯುತ್ತಾರೆ. ಇದು ವಿಷಾದಕರ, ಯಾಕಂದರೆ ವಾಸ್ತವದಲ್ಲಿ ದೇವರ ಪರಿಶುದ್ಧತೆಯೇ ಆತನ ಸಮೀಪಕ್ಕೆ ಬರಲಿಕ್ಕಾಗಿರುವ ಒಂದು ಮನವೊಲಿಸುವ ಕಾರಣವಾಗಿರುತ್ತದೆ. ಯಾಕೆ? ಆ ಪ್ರಶ್ನೆಯನ್ನು ಉತ್ತರಿಸುವ ಮುಂಚೆ, ನಿಜವಾದ ಪರಿಶುದ್ಧತೆಯು ಏನೆಂಬುದನ್ನು ನಾವು ಚರ್ಚಿಸೋಣ.

ಪರಿಶುದ್ಧತೆ ಎಂದರೇನು?

4, 5. (ಎ) ಪರಿಶುದ್ಧತೆಯ ಅರ್ಥವೇನು, ಮತ್ತು ಅದರ ಅರ್ಥವೇನಲ್ಲ? (ಬಿ) ಯಾವ ಎರಡು ಪ್ರಾಮುಖ್ಯ ವಿಧಗಳಲ್ಲಿ ಯೆಹೋವನು “ಪ್ರತ್ಯೇಕ”ನಾಗಿರುತ್ತಾನೆ?

4 ದೇವರು ಪರಿಶುದ್ಧನು ಎಂದರೆ ಆತನು ಸ್ವತೃಪ್ತನು, ದರ್ಪದವನು ಅಥವಾ ಇತರರನ್ನು ಧಿಕ್ಕರಿಸುವವನೆಂದು ಅರ್ಥವಲ್ಲ. ಅದಕ್ಕೆ ವಿರುದ್ಧವಾಗಿ ಅವನು ಅಂಥ ಗುಣಗಳನ್ನು ದ್ವೇಷಿಸುತ್ತಾನೆ. (ಜ್ಞಾನೋಕ್ತಿ 16:5; ಯಾಕೋಬ 4:6) ಹಾಗಾದರೆ, “ಪರಿಶುದ್ಧ” ಎಂಬ ಶಬ್ದದ ಅರ್ಥವು ನಿಜವಾಗಿಯೂ ಏನು? ಬೈಬಲಿನ ಹೀಬ್ರು ಭಾಷೆಯಲ್ಲಿ “ಪರಿಶುದ್ಧ” ಎಂದು ಭಾಷಾಂತರವಾದ ಶಬ್ದವು “ಪ್ರತ್ಯೇಕಿಸು” ಎಂಬ ಅರ್ಥವುಳ್ಳ ಪದದಿಂದ ಬಂದಿರುತ್ತದೆ. ಆರಾಧನೆಯಲ್ಲಿ ‘ಪರಿಶುದ್ಧತೆಯು,’ ಸಾಮಾನ್ಯ ಬಳಕೆಯಿಂದ ಪ್ರತ್ಯೇಕವಾಗಿರಿಸಲ್ಪಟ್ಟಿರುವ ಅಥವಾ ಪವಿತ್ರವೆಂದು ಎಣಿಸಲಾಗುವ ವಿಷಯಕ್ಕೆ ಅನ್ವಯಿಸುತ್ತದೆ. ಪರಿಶುದ್ಧತೆಯು ಸ್ವಚ್ಛತೆ ಮತ್ತು ಶುದ್ಧತೆ ಎಂಬ ವಿಚಾರವನ್ನೂ ಬಲವಾಗಿ ಅರ್ಥೈಸುತ್ತದೆ. ಈ ಶಬ್ದವು ಯೆಹೋವನಿಗೆ ಅನ್ವಯಿಸುವುದು ಹೇಗೆ? ಇದರ ಅರ್ಥವು ಆತನು ಅಪರಿಪೂರ್ಣ ಮಾನವರಿಂದ “ಪ್ರತ್ಯೇಕ”ನಾಗಿರುತ್ತಾನೆ, ನಮ್ಮಿಂದ ಅತಿ ದೂರವಿರುವಾತನು ಎಂದೊ?

5 ಖಂಡಿತವಾಗಿಯೂ ಇಲ್ಲ. “ಇಸ್ರೇಲರ ಪರಿಶುದ್ಧನು” ಆಗಿರುವ ಯೆಹೋವನು ತನ್ನ ‘ಜನರೊಂದಿಗೆ’ ನಿವಾಸಿಸುವವನಾಗಿ ವರ್ಣಿಸಲ್ಪಟ್ಟಿದ್ದಾನೆ; ಅವರು ಪಾಪಿಗಳಾಗಿದ್ದಾಗ್ಯೂ. (ಯೆಶಾಯ 12:​6, ಪರಿಶುದ್ಧ ಬೈಬಲ್‌; ಹೋಶೇಯ 11:9) ಹೀಗೆ ಆತನ ಪರಿಶುದ್ಧತೆಯು ಆತನನ್ನು ದೂರವಿಡುವುದಿಲ್ಲ. ಹೀಗಿರಲಾಗಿ ಆತನು “ಪ್ರತ್ಯೇಕ”ನಾಗಿರುವುದು ಹೇಗೆ? ಎರಡು ಪ್ರಾಮುಖ್ಯ ವಿಧಗಳಲ್ಲಿ. ಒಂದನೆಯದಾಗಿ, ಆತನು ಸೃಷ್ಟಿಯೆಲ್ಲದರಿಂದ ಪ್ರತ್ಯೇಕನು ಹೇಗಂದರೆ ಆತನೊಬ್ಬನೇ ಮಹೋನ್ನತನು. ಆತನ ಶುದ್ಧತೆ, ಆತನ ಸ್ವಚ್ಛತೆಯು ಪರಮವಾದದ್ದು ಹಾಗೂ ಅಪರಿಮಿತವಾದದ್ದು. (ಕೀರ್ತನೆ 40:5; 83:18) ಎರಡನೆಯದಾಗಿ, ಸಮಸ್ತ ಪಾಪದಿಂದ ಯೆಹೋವನು ಪೂರ್ಣವಾಗಿ ಪ್ರತ್ಯೇಕನು, ಮತ್ತು ಇದು ನಮ್ಮನ್ನು ಸಮಾಧಾನಪಡಿಸುವ ಒಂದು ವಿಚಾರವಾಗಿದೆ. ಏಕೆ?

6. ಪಾಪದಿಂದ ಯೆಹೋವನು ಸಂಪೂರ್ಣ ಪ್ರತ್ಯೇಕನಾಗಿದ್ದಾನೆಂಬ ಸಂಗತಿಯು ನಮ್ಮನ್ನೇಕೆ ಸಮಾಧಾನಪಡಿಸಬಲ್ಲದು?

6 ನಿಜ ಪರಿಶುದ್ಧತೆಯು ಅಪರೂಪದ ಸಂಗತಿಯಾಗಿರುವಂಥ ಒಂದು ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. ದೇವರಿಂದ ದೂರವಾಗಿರುವ ಮಾನವ ಸಮಾಜದ ಪ್ರತಿಯೊಂದು ವಿಷಯವು ಭ್ರಷ್ಟಗೊಂಡದ್ದಾಗಿದ್ದು, ಪಾಪ ಮತ್ತು ಅಪರಿಪೂರ್ಣತೆಯಿಂದ ಕಳಂಕಿತವಾಗಿದೆ. ನಮ್ಮಲ್ಲಿರುವ ಪಾಪದ ವಿರುದ್ಧ ನಮಗೆಲ್ಲರಿಗೂ ಹೋರಾಟವನ್ನು ನಡಿಸಲಿಕ್ಕಿದೆ. ಮತ್ತು ನಾವು ಹುಷಾರಾಗಿರದಿದ್ದರೆ, ಪಾಪವು ಮೇಲುಗೈ ಹೊಂದುವ ಅಪಾಯವು ನಮ್ಮೆಲ್ಲರ ಮುಂದಿದೆ. (ರೋಮಾಪುರ 7:15-25; 1 ಕೊರಿಂಥ 10:12) ಯೆಹೋವನಿಗಾದರೊ ಅಂಥ ಯಾವುದೇ ಅಪಾಯವಿಲ್ಲ. ಪಾಪದಿಂದ ಸಂಪೂರ್ಣವಾಗಿ ದೂರವಿರುವ ಆತನು, ಪಾಪದ ಲೇಶಮಾತ್ರ ಕಲೆಯಿಂದಲೂ ಎಂದಿಗೂ ಕಳಂಕಿತನಾಗನು. ಯೆಹೋವನು ಆದರ್ಶ ಪಿತನಾಗಿದ್ದಾನೆಂಬ ನಮ್ಮ ಭಾವನೆಯನ್ನು ಇದು ಇನ್ನಷ್ಟು ದೃಢೀಕರಿಸುತ್ತದೆ, ಯಾಕಂದರೆ ಇದು ಆತನು ಸಂಪೂರ್ಣವಾಗಿ ಭರವಸಾರ್ಹನೆಂಬುದನ್ನು ಅರ್ಥೈಸುತ್ತದೆ. ಅನೇಕಮಂದಿ ಪಾಪಪೂರ್ಣ ಮಾನವ ತಂದೆಗಳು ನೈತಿಕವಾಗಿ ಭ್ರಷ್ಟರು, ಆತ್ಮಸಂಯಮವಿಲ್ಲದವರು ಇಲ್ಲವೆ ದುರಾಚಾರಿಗಳಾಗಿ ಬದಲಾಗಬಹುದು, ಆದರೆ ಯೆಹೋವನು ಎಂದಿಗೂ ಹಾಗಾಗಲಾರನು. ಆತನ ಪರಿಶುದ್ಧತೆಯು ಅಂಥ ಯಾವುದೇ ವಿಷಯವನ್ನು ತೀರ ಅಸಂಭವನೀಯವನ್ನಾಗಿ ಮಾಡುತ್ತದೆ. ಕೆಲವೊಮ್ಮೆ ಯೆಹೋವನು, ತನ್ನ ಸ್ವಂತ ಪರಿಶುದ್ಧತ್ವದ ಮೇಲೂ ಆಣೆಯಿಟ್ಟು ಪ್ರಮಾಣ ಮಾಡಿದ್ದಾನೆ, ಮತ್ತು ಇದು ಆತನ ಪ್ರಮಾಣಗಳನ್ನು ನೂರು ಪ್ರತಿಶತ ಭರವಸಾರ್ಹವನ್ನಾಗಿ ಮಾಡುತ್ತದೆ. (ಆಮೋಸ 4:2) ಇದು ನಮಗೆ ಅಭಯವನ್ನು ನೀಡುತ್ತದಲ್ಲವೊ?

7. ಪರಿಶುದ್ಧತೆಯು ಯೆಹೋವನ ಸ್ವಭಾವದ ಅಂತರ್ಗತ ಭಾಗವಾಗಿದೆ ಎಂದು ಏಕೆ ಹೇಳಸಾಧ್ಯವಿದೆ?

7 ಪರಿಶುದ್ಧತೆಯು ಯೆಹೋವನ ಸ್ವಭಾವದ ಅಂತರ್ಗತ ಭಾಗವಾಗಿದೆ. ಇದರ ಅರ್ಥವೇನು? ದೃಷ್ಟಾಂತಕ್ಕಾಗಿ: “ಮನುಷ್ಯ” ಮತ್ತು “ಅಪರಿಪೂರ್ಣತೆ” ಎಂಬ ಪದಗಳನ್ನು ಪರಿಗಣಿಸಿರಿ. ಮನುಷ್ಯನನ್ನು, ಅಪರಿಪೂರ್ಣತೆಗೆ ಸೂಚಿಸದ ಹೊರತು ನಾವು ವರ್ಣಿಸಸಾಧ್ಯವಿಲ್ಲ. ಅಪರಿಪೂರ್ಣತೆಯು ನಮ್ಮನ್ನು ಪೂರಾ ಆವರಿಸಿರುತ್ತದೆ, ಮತ್ತು ನಾವು ಮಾಡುವುದೆಲ್ಲವನ್ನು ಪ್ರಭಾವಿಸುತ್ತದೆ. ಈಗ, “ಯೆಹೋವ” ಮತ್ತು “ಪರಿಶುದ್ಧ” ಎಂಬ ತೀರಾ ಭಿನ್ನವಾದ ಎರಡು ಶಬ್ದಗಳನ್ನು ಪರಿಗಣಿಸಿರಿ. ಪರಿಶುದ್ಧತೆಯು ಯೆಹೋವನಲ್ಲಿ ಪೂರ್ತಿಯಾಗಿ ಆವರಿಸಿರುತ್ತದೆ. ಆತನ ವಿಷಯದಲ್ಲಿ ಎಲ್ಲವೂ ಶುದ್ಧ, ಸ್ವಚ್ಛ, ಮತ್ತು ಯಥಾರ್ಥವಾಗಿರುತ್ತದೆ. ಈ ಅಗಾಧವಾದ “ಪರಿಶುದ್ಧ” ಎಂಬ ಶಬ್ದಕ್ಕೆ ನಾವು ಪೂರಾ ಪರಿಗಣನೆಯನ್ನು ಕೊಡದ ಹೊರತು, ಯೆಹೋವನು ನಿಜವಾಗಿಯೂ ಏನಾಗಿರುತ್ತಾನೆಂದು ನಾವು ತಿಳಿದುಕೊಳ್ಳಲಾರೆವು.

“ಪರಿಶುದ್ಧತೆ ಯೆಹೋವನಿಗೆ ಮೀಸಲು”

8, 9. ಅಪರಿಪೂರ್ಣ ಮಾನವರು ಸಂಬಂಧಸೂಚಕ ಅರ್ಥದಲ್ಲಿ ಪರಿಶುದ್ಧರಾಗುವಂತೆ ಯೆಹೋವನು ಸಹಾಯಮಾಡುತ್ತಾನೆಂದು ಯಾವುದು ತೋರಿಸುತ್ತದೆ?

8 ಯೆಹೋವನು ಪರಿಶುದ್ಧತೆಯೆಂಬ ಗುಣದ ಸಾಕಾರರೂಪವಾಗಿರುವುದರಿಂದ, ಎಲ್ಲಾ ಪರಿಶುದ್ಧತ್ವದ ಮೂಲನು ಆತನೇ ಎಂದು ನ್ಯಾಯವಾಗಿ ಹೇಳಸಾಧ್ಯವಿದೆ. ಈ ಅಮೂಲ್ಯ ಗುಣವನ್ನು ಆತನು ಸ್ವಾರ್ಥದಿಂದ ಗಂಟುಮಾಡಿ ಇಟ್ಟುಕೊಳ್ಳುವುದಿಲ್ಲ; ಬೇರೆಯವರಿಗೂ ಅದರಲ್ಲಿ ಪಾಲುಕೊಡುತ್ತಾನೆ, ಮತ್ತು ಅದನ್ನು ಉದಾರವಾಗಿ ಮಾಡುತ್ತಾನೆ. ಅಷ್ಟೇಕೆ, ದೇವರು ಮೋಶೆಯೊಂದಿಗೆ ಉರಿಯುತ್ತಿರುವ ಪೊದೆಯ ಬಳಿ ದೇವದೂತನ ಮುಖಾಂತರ ಮಾತಾಡಿದಾಗ, ಯೆಹೋವನ ಸಂಪರ್ಕಕ್ಕೆ ಬಂದ ಸುತ್ತಮುತ್ತಲಿನ ನೆಲವು ಸಹ ಪರಿಶುದ್ಧ ಭೂಮಿಯಾಯಿತು!​—ವಿಮೋಚನಕಾಂಡ 3:5.

9 ಅಪರಿಪೂರ್ಣ ಮಾನವರು ಯೆಹೋವನ ಸಹಾಯದಿಂದ ಪರಿಶುದ್ಧರಾಗಬಲ್ಲರೊ? ಹೌದು, ಪರಿಶುದ್ಧರಾಗಬಲ್ಲರು, ಆದರೆ ಸಂಬಂಧಸೂಚಕ ಅರ್ಥದಲ್ಲಿ. ದೇವರು ತನ್ನ ಜನರಾದ ಇಸ್ರಾಯೇಲ್ಯರಿಗೆ “ಪರಿಶುದ್ಧಜನ”ರಾಗಿರುವ ಪ್ರತೀಕ್ಷೆಯನ್ನು ದಯಪಾಲಿಸಿದನು. (ವಿಮೋಚನಕಾಂಡ 19:6) ಆತನು ಒಂದು ಪರಿಶುದ್ಧವೂ ಸ್ವಚ್ಛವೂ ನಿರ್ಮಲವೂ ಆಗಿರುವ ಆರಾಧನಾ ವ್ಯವಸ್ಥೆಯನ್ನು ಆ ಜನಾಂಗಕ್ಕೆ ಕೊಟ್ಟು ಆಶೀರ್ವದಿಸಿದ್ದನು. ಹೀಗಿರುವುದರಿಂದಲೇ ಪರಿಶುದ್ಧತೆಯು, ಮೋಶೆಯ ಧರ್ಮಶಾಸ್ತ್ರದಲ್ಲಿ ಪದೇಪದೇ ಬರುವ ಒಂದು ಮುಖ್ಯ ವಿಷಯವಾಗಿರುತ್ತದೆ. ವಾಸ್ತವದಲ್ಲಿ, ಮಹಾಯಾಜಕನು ತನ್ನ ಮುಂಡಾಸಿನ ಮುಂಭಾಗದಲ್ಲಿ ಚೊಕ್ಕಬಂಗಾರದ ಪಟ್ಟವನ್ನು ಧರಿಸುತ್ತಿದ್ದನು, ಬೆಳಕಿನಲ್ಲಿ ಅದು ಹೊಳೆಯುತ್ತಿರುವುದನ್ನು ಎಲ್ಲರೂ ಕಾಣಶಕ್ತರಾಗಿದ್ದರು. ಆ ಪಟ್ಟದ ಮೇಲೆ “ಪರಿಶುದ್ಧತೆ ಯೆಹೋವನಿಗೆ ಮೀಸಲು” ಎಂಬ ಲಿಪಿಯನ್ನು ಕೆತ್ತಲಾಗಿತ್ತು. (ವಿಮೋಚನಕಾಂಡ 28:​36, NW) ಹೀಗೆ ಸ್ವಚ್ಛತೆ ಮತ್ತು ಶುದ್ಧತೆಯ ಒಂದು ಉಚ್ಚ ಮಟ್ಟವು, ಅವರ ಆರಾಧನೆ ಮತ್ತು ನಿಶ್ಚಯವಾಗಿಯೂ ಅವರ ಜೀವನ ರೀತಿಯು ಭಿನ್ನವಾಗಿತ್ತೆಂಬುದನ್ನು ತೋರಿಸಲಿತ್ತು. ಯೆಹೋವನು ಅವರಿಗಂದದ್ದು: “ನಿಮ್ಮ ದೇವರಾದ ಯೆಹೋವನೆಂಬ ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು.” (ಯಾಜಕಕಾಂಡ 19:2) ಎಷ್ಟರ ತನಕ ಇಸ್ರಾಯೇಲ್ಯರು ಅಪರಿಪೂರ್ಣ ಮಾನವರಿಗೆ ಶಕ್ಯವಾದಷ್ಟು ಮಟ್ಟಿಗೆ ದೇವರ ಆಜ್ಞೆಗಳಿಗನುಸಾರ ಜೀವಿಸಿದರೋ, ಅಷ್ಟರ ತನಕ ಅವರು ಒಂದು ಸಂಬಂಧಸೂಚಕ ಅರ್ಥದಲ್ಲಿ ಪರಿಶುದ್ಧರಾಗಿದ್ದರು.

10. ಪರಿಶುದ್ಧತೆಯ ವಿಷಯದಲ್ಲಿ, ಪುರಾತನ ಇಸ್ರಾಯೇಲ್‌ ಮತ್ತು ಅದರ ಸುತ್ತಮುತ್ತಲಿನ ಜನಾಂಗಗಳ ನಡುವೆ ಯಾವ ಭಿನ್ನತೆ ಇತ್ತು?

10 ಪರಿಶುದ್ಧತೆಗೆ ಕೊಡಲ್ಪಟ್ಟ ಈ ಒತ್ತು, ಇಸ್ರಾಯೇಲಿನ ಸುತ್ತುಮುತ್ತಲಿನ ಜನಾಂಗಗಳ ಆರಾಧನೆಯಿಂದ ತೀರಾ ಭಿನ್ನವಾಗಿತ್ತು. ಆ ವಿಧರ್ಮಿ ಜನಾಂಗಗಳು, ಯಾರ ಅಸ್ತಿತ್ವವೇ ಮಿಥ್ಯವೂ ಕೃತ್ರಿಮವೂ ಆಗಿತ್ತೊ, ಯಾರು ಕ್ರೂರರು, ದುರಾಶೆಪಡುವವರು ಮತ್ತು ಸ್ವೇಚ್ಛಾಪ್ರವೃತ್ತಿಯವರು ಆಗಿ ಚಿತ್ರಿಸಲ್ಪಟ್ಟಿದ್ದರೊ ಅಂಥ ದೇವರುಗಳನ್ನು ಆರಾಧಿಸುತ್ತಿದ್ದವು. ನೆನಸಬಹುದಾದಂಥ ಪ್ರತಿಯೊಂದು ವಿಷಯದಲ್ಲೂ ಅವರು ಅಪರಿಶುದ್ಧರಾಗಿದ್ದರು. ಅಂಥ ದೇವರುಗಳ ಆರಾಧನೆಯು ಜನರನ್ನು ಅಪರಿಶುದ್ಧರನ್ನಾಗಿ ಮಾಡಿತು. ಈ ಕಾರಣದಿಂದ, ತನ್ನ ಸೇವಕರು ವಿಧರ್ಮಿ ಆರಾಧಕರಿಂದ ಮತ್ತು ಅವರ ಭ್ರಷ್ಟ ಧಾರ್ಮಿಕ ಆಚಾರಗಳಿಂದ ಪ್ರತ್ಯೇಕವಾಗಿರುವಂತೆ ಯೆಹೋವನು ಎಚ್ಚರಿಕೆ ಕೊಟ್ಟನು.​—ಯಾಜಕಕಾಂಡ 18:24-28; 1 ಅರಸುಗಳು 11:1, 2.

11. ಯೆಹೋವನ ಸ್ವರ್ಗೀಯ ಸಂಸ್ಥೆಯ ಪರಿಶುದ್ಧತೆಯು (ಎ) ದೇವದೂತರಲ್ಲಿ, (ಬಿ) ಸೆರಾಫಿಯರಲ್ಲಿ, ಮತ್ತು (ಸಿ) ಯೇಸುವಿನಲ್ಲಿ ಹೇಗೆ ತೋರಿಬರುತ್ತದೆ?

11 ಅತ್ಯಂತ ಅನುಕೂಲ ಪರಿಸ್ಥಿತಿಗಳ ಕೆಳಗೂ, ಯೆಹೋವನಾದುಕೊಂಡ ಜನಾಂಗವಾದ ಪುರಾತನ ಇಸ್ರಾಯೇಲ್‌ ದೇವರ ಸ್ವರ್ಗೀಯ ಸಂಸ್ಥೆಯ ಪರಿಶುದ್ಧತೆಯ ಕೇವಲ ಮಸುಕಾದ ಪ್ರತಿಬಿಂಬವನ್ನು ಕೊಡಶಕ್ತವಾಗಿತ್ತು. ದೇವರನ್ನು ನಿಷ್ಠೆಯಿಂದ ಸೇವಿಸುತ್ತಿರುವ ಲಕ್ಷಾಂತರ ಆತ್ಮಜೀವಿಗಳನ್ನು ಆತನ “ಪರಿಶುದ್ಧದೂತ”ರೆಂದು ಕರೆಯಲಾಗಿದೆ. (ಧರ್ಮೋಪದೇಶಕಾಂಡ 33:2; ಯೂದ 14) ಅವರು ದೇವರ ಪರಿಶುದ್ಧತೆಯ ಪ್ರಕಾಶಮಾನವಾದ, ಶುದ್ಧ ಸೌಂದರ್ಯವನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಾರೆ. ಯೆಶಾಯನು ತನ್ನ ದರ್ಶನದಲ್ಲಿ ಕಂಡ ಸೆರಾಫಿಯರನ್ನು ನೆನಪಿಗೆ ತನ್ನಿರಿ. ಅವರ ಹಾಡಿನಲ್ಲಿ ಒಳಗೂಡಿದ್ದ ವಿಷಯವು, ವಿಶ್ವದಾದ್ಯಂತ ಯೆಹೋವನ ಪರಿಶುದ್ಧತೆಯನ್ನು ಪ್ರಕಟಪಡಿಸುವುದರಲ್ಲಿ ಈ ಮಹಾ ಆತ್ಮಜೀವಿಗಳು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತಾರೆಂಬುದನ್ನು ಸೂಚಿಸುತ್ತದೆ. ಆದರೂ, ಒಬ್ಬ ಆತ್ಮಜೀವಿಯು ಇವರೆಲ್ಲರಿಗಿಂತ ಮೇಲಿನವನಾಗಿದ್ದಾನೆ​—ದೇವರ ಏಕಜಾತ ಪುತ್ರನೇ ಅವನು. ಯೇಸುವು ಯೆಹೋವನ ಪರಿಶುದ್ಧತೆಯ ಉತ್ಕೃಷ್ಟ ಪ್ರತಿರೂಪವಾಗಿರುತ್ತಾನೆ. ಯೋಗ್ಯವಾಗಿಯೇ, ಅವನನ್ನು ‘ದೇವರಿಂದ ಬಂದ ಪರಿಶುದ್ಧನು’ ಎಂದು ಕರೆಯಲಾಗಿದೆ.​—ಯೋಹಾನ 6:68, 69, ಪರಿಶುದ್ಧ ಬೈಬಲ್‌.

ಪರಿಶುದ್ಧ ಹೆಸರು, ಪರಿಶುದ್ಧ ಆತ್ಮ

12, 13. (ಎ) ದೇವರ ನಾಮವು ಪರಿಶುದ್ಧವೆಂದು ವರ್ಣಿಸಲ್ಪಟ್ಟಿರುವುದು ಏಕೆ ತಕ್ಕದಾಗಿದೆ? (ಬಿ) ದೇವರ ನಾಮವು ಏಕೆ ಪರಿಶುದ್ಧಗೊಳಿಸಲ್ಪಡಬೇಕು?

12 ದೇವರ ಸ್ವಂತ ಹೆಸರಿನ ಕುರಿತೇನು? ಅಧ್ಯಾಯ 1ರಲ್ಲಿ ನಾವು ನೋಡಿದ ಪ್ರಕಾರ, ಆ ಹೆಸರು ಕೇವಲ ಬಿರುದಲ್ಲ ಅಥವಾ ಗುರುತುಪಟ್ಟಿಯಲ್ಲ. ಅದು ಯೆಹೋವ ದೇವರನ್ನು ಪ್ರತಿನಿಧಿಸುತ್ತದೆ, ಆತನ ಎಲ್ಲಾ ಗುಣಗಳನ್ನು ಆವರಿಸುತ್ತದೆ. ಆದುದರಿಂದ, ಆತನ “ನಾಮವು ಪರಿಶುದ್ಧವಾದದ್ದು” ಎನ್ನುತ್ತದೆ ಬೈಬಲು. (ಲೂಕ 1:49) ದೇವರ ನಾಮವನ್ನು ನಿಂದಿಸಿದವನಿಗೆ ಮೋಶೆಯ ಧರ್ಮಶಾಸ್ತ್ರವು ಮರಣಶಿಕ್ಷೆಯನ್ನು ವಿಧಿಸಿತ್ತು. (ಯಾಜಕಕಾಂಡ 24:16) ಮತ್ತು ಯೇಸು ಪ್ರಾರ್ಥನೆಯಲ್ಲಿ ಪ್ರಥಮ ಸ್ಥಾನವನ್ನು ಯಾವುದಕ್ಕೆ ಕೊಟ್ಟನೆಂಬುದನ್ನು ಗಮನಿಸಿರಿ: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ.” (ಮತ್ತಾಯ 6:9, 10) ಯಾವುದನ್ನಾದರೂ ಪರಿಶುದ್ಧಗೊಳಿಸುವುದರ ಅರ್ಥ, ಅದನ್ನು ಪವಿತ್ರವಾದುದಾಗಿ ಮೀಸಲಾಗಿಟ್ಟು, ಪೂಜ್ಯವಾದುದೆಂದು ಎಣಿಸುವುದು, ಪಾವನವಾಗಿ ಎತ್ತಿಹಿಡಿಯುವುದು ಆಗಿದೆ. ಆದರೆ ಸಹಜವಾಗಿಯೆ ಶುದ್ಧವಾಗಿರುವ ದೇವರ ನಾಮವನ್ನು ಪರಿಶುದ್ಧಗೊಳಿಸುವ ಅಗತ್ಯವೇನಿದೆ?

13 ದೇವರ ಪವಿತ್ರ ನಾಮವನ್ನು ವಿರೋಧಿಸಲಾಗಿದೆ, ಮತ್ತು ಅದಕ್ಕೆ ಸುಳ್ಳು ಹಾಗೂ ನಿಂದೆಗಳಿಂದ ಕಳಂಕ ಹಚ್ಚಲಾಗಿದೆ. ಏದೆನ್‌ ತೋಟದಲ್ಲಿ ಸೈತಾನನು ಯೆಹೋವನ ಕುರಿತು ಸುಳ್ಳನ್ನು ಹೇಳುತ್ತಾ ಆತನೊಬ್ಬ ಅನ್ಯಾಯಿ ಪರಮಾಧಿಕಾರಿಯೆಂಬ ತಪ್ಪಾರೋಪವನ್ನು ಹೊರಿಸಿದನು. (ಆದಿಕಾಂಡ 3:1-5) ಅಂದಿನಿಂದ, ಈ ಅಪರಿಶುದ್ಧ ಲೋಕಾಧಿಪತಿಯಾದ ಸೈತಾನನು, ದೇವರ ಕುರಿತಾದ ಸುಳ್ಳುಗಳು ಅಧಿಕಾಧಿಕವಾಗಿ ಹಬ್ಬುವಂತೆ ನೋಡಿಕೊಂಡಿದ್ದಾನೆ. (ಯೋಹಾನ 8:44; 12:31; ಪ್ರಕಟನೆ 12:9) ಧರ್ಮಗಳು ದೇವರು ನಿರಂಕುಶನು, ನಿರಾಸಕ್ತನು ಅಥವಾ ಕ್ರೂರಿ ಎಂಬ ಚಿತ್ರಣವನ್ನು ಕೊಟ್ಟಿವೆ. ಅವುಗಳ ರಕ್ತಸಿಕ್ತ ಯುದ್ಧಗಳಿಗೆ ದೇವರ ಬೆಂಬಲವಿದೆಯೆಂದು ಅವು ಹೇಳಿಕೊಂಡಿವೆ. ದೇವರ ಆಶ್ಚರ್ಯಕರವಾದ ಸೃಷ್ಟಿಕಾರ್ಯಗಳಿಗಾಗಿ ಕೀರ್ತಿಯು, ಹೆಚ್ಚಾಗಿ ಕುರುಡು ಸಂಭವಕ್ಕೆ ಅಥವಾ ವಿಕಾಸವಾದಕ್ಕೆ ಕೊಡಲ್ಪಡುತ್ತಿದೆ. ಹೌದು, ದೇವರ ನಾಮವು ವಿಪರೀತವಾಗಿ ದೂಷಣೆಗೆ ಗುರಿಯಾಗಿರುತ್ತದೆ. ಅದು ಪರಿಶುದ್ಧಗೊಳಿಸಲ್ಪಡಲೇಬೇಕು; ಅದಕ್ಕೆ ಸಲ್ಲತಕ್ಕ ನ್ಯಾಯವಾದ ಮಾನಮಹಿಮೆಗೆ ಅದು ಪುನಸ್ಸ್ಥಾಪಿಸಲ್ಪಡಬೇಕು. ಆತನ ಹೆಸರಿನ ಪವಿತ್ರೀಕರಣಕ್ಕಾಗಿ ಮತ್ತು ಆತನ ಪರಮಾಧಿಕಾರದ ನಿರ್ದೋಷೀಕರಣಕ್ಕಾಗಿ ನಾವು ಹಾತೊರೆಯುತ್ತೇವೆ, ಮತ್ತು ಆ ಮಹಾ ಉದ್ದೇಶದಲ್ಲಿ ಯಾವುದೇ ಪಾತ್ರವನ್ನು ವಹಿಸಲು ನಾವು ಹರ್ಷೋಲ್ಲಾಸಿಸುತ್ತೇವೆ.

14. ದೇವರ ಆತ್ಮವು ಪರಿಶುದ್ಧವೆಂದು ಕರೆಯಲ್ಪಟ್ಟಿರುವುದೇಕೆ, ಮತ್ತು ಪವಿತ್ರಾತ್ಮವನ್ನು ದೂಷಿಸುವುದು ಏಕೆ ಅಷ್ಟೊಂದು ಗಂಭೀರವಾಗಿರುತ್ತದೆ?

14 ಯೆಹೋವನೊಂದಿಗೆ ಆಪ್ತವಾಗಿ ಜೊತೆಗೂಡಿದ್ದು, ಬಹುಮಟ್ಟಿಗೆ ಯಾವಾಗಲೂ ಪರಿಶುದ್ಧ ಇಲ್ಲವೆ ಪವಿತ್ರವೆಂದು ಕರೆಯಲ್ಪಟ್ಟಿರುವ ಇನ್ನೊಂದು ಸಂಗತಿಯಿದೆ​—ಅದೇ ಆತನ ಆತ್ಮ ಅಥವಾ ಕಾರ್ಯಕಾರಿ ಶಕ್ತಿ. (ಆದಿಕಾಂಡ 1:2) ತನ್ನ ಉದ್ದೇಶಗಳನ್ನು ಪೂರೈಸುವುದಕ್ಕಾಗಿ ಯೆಹೋವನು ಈ ಬಲಾಢ್ಯ ಶಕ್ತಿಯನ್ನು ಉಪಯೋಗಿಸುತ್ತಾನೆ. ಮತ್ತು ದೇವರು ಕೈಗೊಳ್ಳುವ ಎಲ್ಲಾ ಕೆಲಸಗಳು ಪವಿತ್ರವೂ ಶುದ್ಧವೂ ಸ್ವಚ್ಛವೂ ಆಗಿರುವುದರಿಂದ, ಆತನ ಕಾರ್ಯಕಾರಿ ಶಕ್ತಿಯು ತಕ್ಕದ್ದಾಗಿಯೆ ಪವಿತ್ರಾತ್ಮ ಅಥವಾ ಪವಿತ್ರವಾದ ಆತ್ಮ ಎಂದು ಕರೆಯಲ್ಪಟ್ಟಿರುತ್ತದೆ. (ಲೂಕ 11:13; ರೋಮಾಪುರ 1:4) ಪವಿತ್ರಾತ್ಮವನ್ನು ದೂಷಿಸುವುದರಲ್ಲಿ, ಯೆಹೋವನ ಉದ್ದೇಶಗಳಿಗೆ ವಿರುದ್ಧವಾಗಿ ಬುದ್ಧಿಪೂರ್ವಕವಾಗಿ ಮಾಡುವ ಕ್ರಿಯೆಗಳು ಒಳಗೂಡಿರುವುದರಿಂದ, ಅದು ಅಕ್ಷಮ್ಯ ಪಾಪವಾಗಿ ಪರಿಗಣಿಸಲ್ಪಡುತ್ತದೆ.​—ಮಾರ್ಕ 3:29.

ಯೆಹೋವನ ಪರಿಶುದ್ಧತೆ ನಮ್ಮನ್ನು ಆತನ ಸಮೀಪಕ್ಕೆ ಸೆಳೆಯುವ ಕಾರಣ

15. ದೈವಿಕ ಭಯವುಳ್ಳವರಾಗಿರುವುದು ನಾವು ಯೆಹೋವನ ಪರಿಶುದ್ಧತೆಗೆ ತೋರಿಸಬಹುದಾದ ಯೋಗ್ಯ ಪ್ರತಿಕ್ರಿಯೆಯಾಗಿದೆ ಏಕೆ, ಮತ್ತು ಆ ಭಯದಲ್ಲಿ ಏನು ಸೇರಿರುತ್ತದೆ?

15 ಹೀಗೆ ದೇವರ ಪರಿಶುದ್ಧತೆ ಮತ್ತು ಮನುಷ್ಯನ ದೇವಭಯದ ನಡುವೆ ಒಂದು ಸಂಬಂಧವನ್ನು ಬೈಬಲು ತೋರಿಸುವುದೇಕೆಂಬುದನ್ನು ಕಾಣಲು ಕಷ್ಟವಿಲ್ಲ. ಉದಾಹರಣೆಗೆ, ಕೀರ್ತನೆ 99:3 ಹೇಳುವುದು: “ಅವರು ಯೆಹೋವನ ಪೂಜ್ಯವಾದ [“ಭಯಪ್ರೇರಕ,” NW] ಮಹಾನಾಮವನ್ನು ಕೊಂಡಾಡಲಿ; ಆತನು ಪರಿಶುದ್ಧನು.” ಈ ಭಯವಾದರೊ ವಿಕಾರವಾದ ಭೀತಿಯಲ್ಲ, ಬದಲಾಗಿ ಪೂಜ್ಯಭಾವನೆಯ ಭಕ್ತಿಯ ಅಗಾಧ ಪ್ರಜ್ಞೆ, ಅತ್ಯಂತ ಉದಾತ್ತವಾದ ರೂಪದ ಗೌರವವಾಗಿರುತ್ತದೆ. ಆ ರೀತಿಯ ಅನಿಸಿಕೆಯು ಯೋಗ್ಯವಾದದ್ದು ಯಾಕಂದರೆ ದೇವರ ಪರಿಶುದ್ಧತೆಯು ನಮಗಿಂತ ಎಷ್ಟೊ ಮಿಗಿಲಾದದ್ದಾಗಿದೆ. ಅದು ಪ್ರಭಾವಯುಕ್ತವಾಗಿ ಶುದ್ಧವೂ ಮಹಿಮಾಭರಿತವೂ ಆಗಿರುತ್ತದೆ. ಆದರೂ ಅದು ನಮ್ಮನ್ನು ವಿಕರ್ಷಿಸಬಾರದು. ಬದಲಿಗೆ, ದೇವರ ಪರಿಶುದ್ಧತೆಯ ಕುರಿತ ಒಂದು ಯೋಗ್ಯ ನೋಟವು ನಮ್ಮನ್ನು ಆತನ ಸಮೀಪಕ್ಕೆ ಸೆಳೆಯಬೇಕು. ಏಕೆ?

ಸೌಂದರ್ಯದಂತೆ, ಪರಿಶುದ್ಧತೆಯೂ ನಮ್ಮನ್ನು ಆಕರ್ಷಿಸಬೇಕು

16. (ಎ) ಪರಿಶುದ್ಧತೆಯು ಸೌಂದರ್ಯದೊಂದಿಗೆ ಹೇಗೆ ಜೋಡಿಸಲ್ಪಟ್ಟಿದೆ? ಒಂದು ಉದಾಹರಣೆಯನ್ನು ಕೊಡಿರಿ. (ಬಿ) ಯೆಹೋವನ ಕುರಿತಾದ ದಾರ್ಶನಿಕ ವರ್ಣನೆಗಳು ಸ್ವಚ್ಛತೆ, ಶುದ್ಧತೆ, ಮತ್ತು ಬೆಳಕನ್ನು ಹೇಗೆ ವರ್ಣಿಸುತ್ತವೆ?

16 ಏಕೆಂದರೆ ಬೈಬಲು ಪರಿಶುದ್ಧತೆಯನ್ನು ಸೌಂದರ್ಯದೊಂದಿಗೆ ಜೋಡಿಸುತ್ತದೆ. ಯೆಶಾಯ 63:15 ರಲ್ಲಿ ಸ್ವರ್ಗವನ್ನು ದೇವರ “ಪರಿಶುದ್ಧವೂ ಸುಂದರವೂ ಆದ ಉನ್ನತಸ್ಥಾನ” (NW) ಎಂದು ವರ್ಣಿಸಲಾಗಿದೆ. ಸೌಂದರ್ಯವು ನಮ್ಮನ್ನು ಆಕರ್ಷಿಸುತ್ತದೆ, ಅಲ್ಲವೇ? ದೃಷ್ಟಾಂತಕ್ಕಾಗಿ, 33ನೆಯ ಪುಟದಲ್ಲಿರುವ ಚಿತ್ರವನ್ನು ನೋಡಿರಿ. ಆ ದೃಶ್ಯವು ನಿಮ್ಮ ಮನಸೆಳೆಯುವುದಿಲ್ಲವೆ? ಅದನ್ನು ಅಷ್ಟು ಮೋಹಕವಾಗಿ ಮಾಡುವಂಥದ್ದು ಯಾವುದು? ಆ ಜಲವೆಷ್ಟು ಶುಭ್ರವಾಗಿ ಕಾಣುತ್ತದೆಂದು ಗಮನಿಸಿರಿ. ಆಕಾಶವು ನೀಲವರ್ಣದಿಂದ ಬೆಳಗುತ್ತಿದೆ ಮತ್ತು ಬೆಳಕು ಥಳಥಳಿಸುತ್ತಿರುವಂತೆ ತೋರುವುದರಿಂದ ಗಾಳಿಯು ಸಹ ಶುದ್ಧವಾಗಿದ್ದಿರಲೇಬೇಕು. ಈಗ ಅದೇ ದೃಶ್ಯವು ಬದಲಿಸಲ್ಪಟ್ಟಿದೆ ಎಂದೆಣಿಸಿ. ಆ ತೊರೆ ಕಚಡದಿಂದ ಮಡ್ಡುಗಟ್ಟಿದೆ, ಗೀಚುಚಿತ್ರ ಮತ್ತು ಬರಹಗಳಿಂದಾಗಿ ವೃಕ್ಷ ಮತ್ತು ಕಲ್ಲು ಬಂಡೆಗಳು ಅಂದಗೆಟ್ಟಿವೆ, ಹೊಗೆಮಂಜಿನಿಂದ ಗಾಳಿಯು ಮಲಿನಗೊಂಡಿದೆ. ಈಗ ಆ ದೃಶ್ಯವು ನಮ್ಮ ಮನಸೆಳೆಯುವುದಿಲ್ಲ; ನಾವು ಅದರಿಂದ ವಿಕರ್ಷಿಸಲ್ಪಡುವೆವು. ನಾವು ಸ್ವಾಭಾವಿಕವಾಗಿಯೇ ಸೌಂದರ್ಯವನ್ನು ಸ್ವಚ್ಛತೆ, ಶುದ್ಧತೆ, ಮತ್ತು ಬೆಳಕಿನೊಂದಿಗೆ ಜೊತೆಗೂಡಿಸುತ್ತೇವೆ. ಇವೇ ಮಾತುಗಳನ್ನು ಯೆಹೋವನ ಪರಿಶುದ್ಧತೆಯನ್ನು ವರ್ಣಿಸುವಾಗಲೂ ಉಪಯೋಗಿಸಸಾಧ್ಯವಿದೆ. ಯೆಹೋವನ ಆ ದಾರ್ಶನಿಕ ವರ್ಣನೆಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುವುದೇಕೆಂದು ಹೇಳಬೇಕಾಗಿಲ್ಲ! ಪ್ರಕಾಶಮಾನವಾದ ಪ್ರಭೆಯನ್ನು ಹೊರಸೂಸುತ್ತಾ, ರತ್ನದ ಹರಳುಗಳಂತೆ ಥಳಥಳಿಸುತ್ತಾ, ಬೆಂಕಿಯಂತೆ ಅಥವಾ ಅತಿ ಶುದ್ಧವಾದ ಮತ್ತು ಉಜ್ವಲವಾದ ಅತ್ಯಮೂಲ್ಯ ಲೋಹಗಳಂತೆ ಪ್ರಜ್ವಲಿಸುವ ಸುಂದರ ರೂಪವೇ ನಮ್ಮ ಪರಿಶುದ್ಧ ದೇವರದ್ದಾಗಿದೆ.​—ಯೆಹೆಜ್ಕೇಲ 1:25-28; ಪ್ರಕಟನೆ 4:2, 3.

17, 18. (ಎ) ಯೆಶಾಯನು ತನ್ನ ದರ್ಶನದಿಂದ ಆರಂಭದಲ್ಲಿ ಹೇಗೆ ಬಾಧಿತನಾದನು? (ಬಿ) ಯೆಶಾಯನನ್ನು ಸಮಾಧಾನಪಡಿಸಲು ಯೆಹೋವನು ಸೆರಾಫಿಯನನ್ನು ಉಪಯೋಗಿಸಿದ್ದು ಹೇಗೆ, ಮತ್ತು ಆ ಸೆರಾಫಿಯನು ಮಾಡಿದ ಕ್ರಿಯೆಯ ಮಹತ್ವಾರ್ಥವೇನು?

17 ಆದರೂ, ದೇವರ ಪರಿಶುದ್ಧತೆಗೆ ಹೋಲಿಸುವಾಗ ಅದು ನಮ್ಮಲ್ಲಿ ಕೀಳರಿಮೆಯನ್ನು ಹುಟ್ಟಿಸಬೇಕೊ? ಉತ್ತರವು ನಿಶ್ಚಯವಾಗಿಯೂ ಹೌದು ಎಂದಾಗಿದೆ. ಏಕೆಂದರೆ ಎಷ್ಟೆಂದರೂ, ನಾವು ಯೆಹೋವನಿಗಿಂತ ಕೆಳಮಟ್ಟದವರೇ ಆಗಿದ್ದೇವಲ್ಲಾ​—ಮತ್ತು ಈ ಹೇಳಿಕೆಯು ಸಹ ತೀರಾ ಕಡಿಮೆಯೆಂದೇ ಹೇಳಬಹುದು, ಯಾಕಂದರೆ ನಾವು ಯೆಹೋವನೆದುರಲ್ಲಿ ಅತಿ ಅಲ್ಪರೆಂಬುದು ನಿಸ್ಸಂಶಯ. ಈ ಪರಿಜ್ಞಾನವು ನಮ್ಮನ್ನು ದೇವರಿಂದ ದೂರಹೋಗುವಂತೆ ಮಾಡಬೇಕೊ? ಸೆರಾಫಿಯರಿಂದ ಯೆಹೋವನ ಪರಿಶುದ್ಧತೆಯ ಘೋಷಣೆಯನ್ನು ಕೇಳಿದಾಗ ಯೆಶಾಯನ ಪ್ರತಿಕ್ರಿಯೆ ಏನಾಗಿತ್ತೆಂಬುದನ್ನು ಪರಿಗಣಿಸಿರಿ: “ಆಗ ನಾನು​—ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ! ನಾಶವಾದೆನಲ್ಲಾ; ನಾನು ಹೊಲಸುತುಟಿಯವನು, ಹೊಲಸುತುಟಿಯವರ ಮಧ್ಯದಲ್ಲಿ ವಾಸಿಸುವವನು; ಇಂಥ ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರನಾದ ಯೆಹೋವನನ್ನು ಕಂಡವು.” (ಯೆಶಾಯ 6:5) ಹೌದು, ಯೆಹೋವನ ಅಪರಿಮಿತವಾದ ಪರಿಶುದ್ಧತೆಯು, ತಾನೆಷ್ಟು ಅಪರಿಪೂರ್ಣನೂ ಪಾಪಿಯೂ ಆಗಿದ್ದೇನೆಂಬುದನ್ನು ಯೆಶಾಯನ ಜ್ಞಾಪಕಕ್ಕೆ ತಂದಿತು. ಆರಂಭದಲ್ಲಿ ಆ ನಂಬಿಗಸ್ತ ಪುರುಷನು ದಿಗ್ಭ್ರಾಂತನಾದನು. ಆದರೆ ಯೆಹೋವನು ಅವನನ್ನು ಆ ಅವಸ್ಥೆಯಲ್ಲೇ ಬಿಡಲಿಲ್ಲ.

18 ಒಡನೆಯೆ ಸೆರಾಫಿಯರಲ್ಲೊಬ್ಬನು ಪ್ರವಾದಿಯನ್ನು ಸಮಾಧಾನಪಡಿಸಿದನು. ಹೇಗೆ? ಆ ಪರಾಕ್ರಮಿಯಾದ ಆತ್ಮಜೀವಿಯು ವೇದಿಯ ಬಳಿಗೆ ಹಾರಿಹೋಗಿ, ಅದರೊಳಗಿಂದ ಒಂದು ಕೆಂಡವನ್ನು ಹೊರತೆಗೆದು, ಆ ಕೆಂಡವನ್ನು ಯೆಶಾಯನ ತುಟಿಗಳಿಗೆ ತಗಲಿಸಿದನು. ಇದು ಸಮಾಧಾನ ಮಾಡುವುದರ ಬದಲು ನೋವನ್ನುಂಟುಮಾಡಿತೆಂಬಂತೆ ತೋರಬಹುದು ನಿಜ. ಆದರೂ ಇದು ಸಾಂಕೇತಿಕ ಅರ್ಥದಿಂದ ತುಂಬಿದ್ದ ಒಂದು ದರ್ಶನವೆಂಬುದನ್ನು ಮನಸ್ಸಿನಲ್ಲಿಡಿರಿ. ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಆಲಯದ ವೇದಿಯ ಮೇಲೆ ದಿನಾಲೂ ಯಜ್ಞಗಳು ಅರ್ಪಿಸಲ್ಪಡುತ್ತಿದ್ದವೆಂಬುದು ನಂಬಿಗಸ್ತ ಯೆಹೂದ್ಯನಾಗಿದ್ದ ಯೆಶಾಯನಿಗೆ ಚೆನ್ನಾಗಿ ತಿಳಿದಿತ್ತು. ಮತ್ತು ಅವನು ನಿಶ್ಚಯವಾಗಿ ಅಪರಿಪೂರ್ಣನೂ ‘ಹೊಲಸುತುಟಿಯವನೂ’ ಆಗಿದ್ದಾಗ್ಯೂ, ಯೆಹೋವನ ಮುಂದೆ ಒಂದು ಶುದ್ಧ ನಿಲುವಿಗೆ ಬರಸಾಧ್ಯವಿತ್ತೆಂಬುದನ್ನು ಸೆರಾಫಿಯನು ಅವನಿಗೆ ಪ್ರೀತಿಯಿಂದ ನೆನಪು ಹುಟ್ಟಿಸಿದನು. * ಅಪರಿಪೂರ್ಣನೂ ಪಾಪಿಯೂ ಆಗಿರುವ ಮಾನವನೊಬ್ಬನನ್ನು​—ಕಡಿಮೆಪಕ್ಷ ಸಂಬಂಧಸೂಚಕ ಅರ್ಥದಲ್ಲಿಯಾದರೂ​—ಪರಿಶುದ್ಧನೋಪಾದಿ ವೀಕ್ಷಿಸುವುದಕ್ಕೆ ಯೆಹೋವನು ಸಿದ್ಧನಾಗಿದ್ದನು.​—ಯೆಶಾಯ 6:6, 7.

19. ನಾವು ಅಪರಿಪೂರ್ಣರಾಗಿದ್ದಾಗ್ಯೂ ಒಂದು ಸಂಬಂಧಸೂಚಕ ಅರ್ಥದಲ್ಲಿ ಪರಿಶುದ್ಧರಾಗಿರಸಾಧ್ಯವಿದೆ ಹೇಗೆ?

19 ಇಂದು ಸಹ ಅದು ಸತ್ಯ. ಯೆರೂಸಲೇಮಿನ ವೇದಿಯ ಮೇಲೆ ಅರ್ಪಿಸಲಾದ ಆ ಯಜ್ಞಗಳೆಲ್ಲವು ಒಂದು ಮಹತ್ತಾದ ವಿಷಯದ, ಅಂದರೆ ಸಾ.ಶ. 33ರಲ್ಲಿ ಯೇಸು ಕ್ರಿಸ್ತನಿಂದ ನೀಡಲ್ಪಟ್ಟ ಆ ಒಂದು ಪರಿಪೂರ್ಣ ಯಜ್ಞದ ಛಾಯೆಗಳಾಗಿದ್ದವು ಅಷ್ಟೇ. (ಇಬ್ರಿಯ 9:11-14) ನಾವು ನಿಜವಾಗಿ ನಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ನಮ್ಮ ತಪ್ಪಾದ ಮಾರ್ಗವನ್ನು ಸರಿಪಡಿಸಿಕೊಂಡು, ಆ ಯಜ್ಞದಲ್ಲಿ ನಂಬಿಕೆಯನ್ನು ಇಡುವುದಾದರೆ ನಮ್ಮನ್ನು ಕ್ಷಮಿಸಲಾಗುವುದು. (1 ಯೋಹಾನ 2:2) ನಾವು ಸಹ ದೇವರ ಮುಂದೆ ಒಂದು ಶುದ್ಧ ನಿಲುವಿನಲ್ಲಿ ಆನಂದಿಸಬಲ್ಲೆವು. ಹೀಗಿರುವುದರಿಂದ, ಅಪೊಸ್ತಲ ಪೇತ್ರನು ನಮಗೆ ಜ್ಞಾಪಕ ಹುಟ್ಟಿಸುವುದು: “ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆ.” (1 ಪೇತ್ರ 1:16) ಯೆಹೋವನು ಎಷ್ಟು ಪರಿಶುದ್ಧನೊ ನಾವೂ ಅಷ್ಟೇ ಪರಿಶುದ್ಧರು ಆಗಬೇಕೆಂದು ಯೆಹೋವನು ಹೇಳಲಿಲ್ಲ ಎಂಬುದನ್ನು ಗಮನಿಸಿರಿ. ನಮ್ಮಿಂದ ಅಸಾಧ್ಯವಾದುದನ್ನು ಆತನೆಂದೂ ಅಪೇಕ್ಷಿಸುವುದಿಲ್ಲ. (ಕೀರ್ತನೆ 103:13, 14) ಬದಲಿಗೆ, ಆತನು ಪರಿಶುದ್ಧನು ಆಗಿರುವುದರಿಂದ ನಾವೂ ಪರಿಶುದ್ಧರಾಗಿರಬೇಕೆಂದು ಯೆಹೋವನು ನಮಗೆ ಹೇಳುತ್ತಾನೆ. “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ,” ಅಪರಿಪೂರ್ಣ ಮಾನವರಾದ ನಾವು ನಮ್ಮ ಕೈಲಾದಷ್ಟು ಉತ್ತಮವಾಗಿ ಆತನನ್ನು ಅನುಕರಿಸಲು ಪ್ರಯತ್ನಿಸುತ್ತೇವೆ. (ಎಫೆಸ 5:1) ಹೀಗೆ ಪರಿಶುದ್ಧತೆಯನ್ನು ಗಳಿಸುವುದು ಒಂದು ಮುಂದುವರಿಯುತ್ತಿರುವ ಕಾರ್ಯಗತಿಯಾಗಿರುತ್ತದೆ. ಆತ್ಮಿಕವಾಗಿ ನಾವು ಬೆಳೆದಂತೆ, ನಾವು ದಿನಾಲೂ “ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ” ಶ್ರಮಿಸುತ್ತಿರುತ್ತೇವೆ.​—2 ಕೊರಿಂಥ 7:1.

20. (ಎ) ನಮ್ಮ ಪರಿಶುದ್ಧ ದೇವರ ದೃಷ್ಟಿಯಲ್ಲಿ ನಾವು ಶುದ್ಧರಾಗಿರಬಲ್ಲೆವು ಎಂಬುದನ್ನು ತಿಳಿದಿರುವುದು ಏಕೆ ಪ್ರಾಮುಖ್ಯ? (ಬಿ) ತನ್ನ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆಯೆಂದು ಯೆಶಾಯನಿಗೆ ತಿಳಿದಾಗ ಅದು ಯಾವ ಪರಿಣಾಮವನ್ನು ಬೀರಿತು?

20 ಯಾವುದು ಯಥಾರ್ಥವೂ ಶುದ್ಧವೂ ಆಗಿದೆಯೊ ಅದನ್ನು ಯೆಹೋವನು ಪ್ರೀತಿಸುತ್ತಾನೆ. ಆತನು ಪಾಪವನ್ನು ದ್ವೇಷಿಸುತ್ತಾನೆ. (ಹಬಕ್ಕೂಕ 1:13) ಆದರೆ ಆತನು ನಮ್ಮನ್ನು ದ್ವೇಷಿಸುವುದಿಲ್ಲ. ಪಾಪವನ್ನು ಆತನು ನೋಡುವ ರೀತಿಯಲ್ಲಿ ನಾವು ನೋಡುವುದಾದರೆ​—ಕೆಟ್ಟದ್ದನ್ನು ದ್ವೇಷಿಸಿ ಒಳ್ಳೆಯದನ್ನು ಪ್ರೀತಿಸುವುದಾದರೆ​—ಮತ್ತು ಕ್ರಿಸ್ತ ಯೇಸುವಿನ ಪರಿಪೂರ್ಣ ಹೆಜ್ಜೆಜಾಡಿನಲ್ಲಿ ನಡೆಯಲು ಪ್ರಯತ್ನಿಸುವುದಾದರೆ, ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸಿಬಿಡುವನು. (ಆಮೋಸ 5:15; 1 ಪೇತ್ರ 2:21) ನಮ್ಮ ಪರಿಶುದ್ಧ ದೇವರ ದೃಷ್ಟಿಯಲ್ಲಿ ನಾವು ಶುದ್ಧರಾಗಿರಬಲ್ಲೆವು ಎಂಬುದನ್ನು ನಾವು ತಿಳಿದುಕೊಳ್ಳುವಾಗ, ಅದು ಬೀರುವ ಪರಿಣಾಮಗಳಾದರೊ ಅಗಾಧ. ಆರಂಭದಲ್ಲಿ ಯೆಹೋವನ ಪರಿಶುದ್ಧತೆಯು ಯೆಶಾಯನಿಗೆ ಅವನ ಸ್ವಂತ ಅಶುದ್ಧ ಸ್ಥಿತಿಯನ್ನು ಜ್ಞಾಪಕಕ್ಕೆ ತಂದಿತೆಂಬುದನ್ನು ನೆನಪಿನಲ್ಲಿಡಿರಿ. “ಅಯ್ಯೋ, ನನ್ನ ಗತಿಯನ್ನು ಏನು ಹೇಳಲಿ!” ಎಂದಾತನು ಕೂಗಿಹೇಳಿದನು. ಆದರೆ ಅವನ ಪಾಪಗಳಿಗೆ ಪ್ರಾಯಶ್ಚಿತ್ತವು ದೊರೆತ ವಿಷಯವು ಅವನಿಗೆ ತಿಳಿಸಲ್ಪಟ್ಟಾಗ, ಅವನ ಹೊರನೋಟವು ಬದಲಾಯಿತು. ಒಂದು ನೇಮಕವನ್ನು ಪೂರೈಸಲು ಯಾರು ಮುಂದೆ ಬರುವರೆಂದು ಯೆಹೋವನು ಕೇಳಿದಾಗ, ಅದರಲ್ಲಿ ಏನೆಲ್ಲ ಒಳಗೂಡಿದೆಯೆಂದು ಅವನಿಗೆ ತಿಳಿಯದಿದ್ದರೂ, ಯೆಶಾಯನು ಒಡನೆ ಪ್ರತಿವರ್ತನೆ ತೋರಿಸಿದನು. ಅವನು ಘೋಷಿಸಿದ್ದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.”​—ಯೆಶಾಯ 6:5-8.

21. ಪರಿಶುದ್ಧತೆಯ ಗುಣವನ್ನು ನಾವು ಬೆಳೆಸಿಕೊಳ್ಳಸಾಧ್ಯವಿದೆ ಎಂಬ ಭರವಸೆಗೆ ಯಾವ ಆಧಾರವು ನಮಗಿದೆ?

21 ಆ ಪರಿಶುದ್ಧ ದೇವರ ಸ್ವರೂಪದಲ್ಲೇ ನಮ್ಮನ್ನು ಸೃಷ್ಟಿಸಲಾಗಿದೆ ಮತ್ತು ನಮಗೆ ನೈತಿಕ ಗುಣಗಳು ಹಾಗೂ ದೇವರ ಸಂಬಂಧದಲ್ಲಿನ ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವೂ ದಯಪಾಲಿಸಲ್ಪಟ್ಟಿದೆ. (ಆದಿಕಾಂಡ 1:26) ನಮ್ಮೆಲ್ಲರೊಳಗೆ ಪರಿಶುದ್ಧರಾಗಿರುವ ಸಾಮರ್ಥ್ಯವು ಇದೆ. ನಾವು ಪರಿಶುದ್ಧತೆಯನ್ನು ಬೆಳೆಸುತ್ತಾ ಮುಂದುವರಿಯುವಾಗ, ಯೆಹೋವನು ನಮಗೆ ಸಹಾಯಮಾಡಲು ಸಂತೋಷಪಡುವನು. ಹೀಗೆ ಮಾಡುತ್ತಾ ಇರುವಾಗ, ನಮ್ಮ ಪರಿಶುದ್ಧ ದೇವರಿಗೆ ನಾವು ಸದಾ ಸಮೀಪ ಬರುತ್ತಾ ಇರುವೆವು. ಅಷ್ಟುಮಾತ್ರವಲ್ಲದೆ, ಮುಂದಿನ ಅಧ್ಯಾಯಗಳಲ್ಲಿ ನಾವು ಯೆಹೋವನ ಇತರ ಗುಣಗಳನ್ನು ಪರಿಗಣಿಸುತ್ತಾ ಹೋಗುವಾಗ, ಆತನ ಸಮೀಪ ಬರುವುದಕ್ಕೆ ಅನೇಕಾನೇಕ ಬಲವಾದ ಕಾರಣಗಳಿರುವುದನ್ನು ನಾವು ಕಾಣುವೆವು!

^ ಪ್ಯಾರ. 18 “ಹೊಲಸುತುಟಿಯವನು” ಎಂಬ ಅಭಿವ್ಯಕ್ತಿಯು ಸೂಕ್ತವಾದದ್ದಾಗಿದೆ, ಯಾಕಂದರೆ ಬೈಬಲಿನಲ್ಲಿ ತುಟಿಗಳು ಮಾತು ಅಥವಾ ಭಾಷೆಯನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತವೆ. ಅಪರಿಪೂರ್ಣರಾದ ಮಾನವರೆಲ್ಲರಲ್ಲಿ ಹೆಚ್ಚಿನ ಪ್ರಮಾಣದ ಪಾಪಗಳು, ನಾವು ನಮ್ಮ ಮಾತಿನ ಶಕ್ತಿಯನ್ನು ಉಪಯೋಗಿಸುವ ರೀತಿಯಿಂದಲೇ ಆಗುತ್ತವೆ.​—ಜ್ಞಾನೋಕ್ತಿ 10:19; ಯಾಕೋಬ 3:2, 6.