ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 4

‘ಯೆಹೋವನ ಶಕ್ತಿಯು ಅಪಾರ’

‘ಯೆಹೋವನ ಶಕ್ತಿಯು ಅಪಾರ’

1, 2. ಎಲೀಯನು ತನ್ನ ಜೀವಿತದಲ್ಲಿ ಯಾವ ಬೆರಗುಗೊಳಿಸುವಂಥ ವಿಷಯಗಳನ್ನು ಕಂಡಿದ್ದನು, ಆದರೆ ಹೋರೇಬ್‌ ಬೆಟ್ಟದ ಗವಿಯಿಂದ ಯಾವ ದಂಗುಬಡಿಸುವಂಥ ಘಟನೆಗಳನ್ನು ಅವನು ಕಣ್ಣಾರೆ ಕಂಡನು?

ಎಲೀಯನು ಈ ಮೊದಲು ಕೆಲವು ಆಶ್ಚರ್ಯಚಕಿತಗೊಳಿಸುವ ವಿಷಯಗಳನ್ನು ನೋಡಿದ್ದನು. ಅವನು ಅಡಗಿ ವಾಸಿಸುತ್ತಿದ್ದಾಗ, ದಿನಕ್ಕೆರಡು ಬಾರಿ ಕಾಗೆಗಳು ಅವನಿಗೆ ಆಹಾರವನ್ನು ತಂದುಕೊಡುವುದನ್ನು ಕಂಡಿದ್ದನು. ಒಂದು ದೀರ್ಘ ಬರಗಾಲದಾದ್ಯಂತ, ಎರಡು ಪಾತ್ರೆಗಳು ಎಂದಿಗೂ ಬರಿದಾಗಿ ಹೋಗದೆ ಸದಾ ಹಿಟ್ಟು ಮತ್ತು ಎಣ್ಣೆಯನ್ನು ಒದಗಿಸುತ್ತಿದ್ದದ್ದನ್ನು ಕಂಡಿದ್ದನು. ಅವನ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ ಆಕಾಶದಿಂದ ಬೆಂಕಿಯು ಬೀಳುವುದನ್ನೂ ನೋಡಿದ್ದನು. (1 ಅರಸುಗಳು, ಅಧ್ಯಾಯಗಳು 17, 18) ಆದರೂ, ಇದರಷ್ಟು ಬೆರಗುಗೊಳಿಸುವಂಥ ಯಾವುದನ್ನೂ ಎಲೀಯನು ಎಂದೂ ಕಂಡಿರಲಿಲ್ಲ.

2 ಹೋರೇಬ್‌ ಬೆಟ್ಟದ ಗವಿಯೊಂದರ ದ್ವಾರದಲ್ಲಿ ಮುದುರಿಕೊಂಡು ನಿಂತಿದ್ದಾಗ, ದಂಗುಬಡಿಸುವಂಥ ಘಟನೆಗಳ ಒಂದು ಸರಮಾಲೆಯು ಅವನ ಕಣ್ಮುಂದೆ ನಡೆಯಿತು. ಮೊದಲಾಗಿ ಬಿರುಗಾಳಿ ಬೀಸತೊಡಗಿತು. ಅದರ ಭೋರ್ಗರೆಯುವ ಹುಯ್ಯಲು ಕಿವಿಬಿರಿಯುವಂತಿದ್ದಿರಬೇಕು ಯಾಕಂದರೆ ಅದು ಬೆಟ್ಟಗಳನ್ನು ಭೇದಿಸಿ ಬಂಡೆಗಳನ್ನು ಪುಡಿಪುಡಿಮಾಡುವಷ್ಟು ಶಕ್ತಿಶಾಲಿಯಾಗಿತ್ತು. ನಂತರ ಒಂದು ಭೂಕಂಪವಾಯಿತು, ಅದು ಭೂಮಿಯ ಹೊರಪದರದಡಿಯಲ್ಲಿ ಬಂಧಿಸಲ್ಪಟ್ಟಿದ್ದ ಅಪಾರವಾದ ಶಕ್ತಿಗಳನ್ನು ಹೊರಗೆಡವಿ ಹಾಕಿತು. ಆಮೇಲೆ ಸಿಡಿಲುಬೆಂಕಿ (NW) ಉಂಟಾಗಿ, ಅದು ಆ ಪ್ರದೇಶವನ್ನೆಲ್ಲಾ ವ್ಯಾಪಿಸಿತು, ಮತ್ತು ಅದರ ಸುಡುವ ತಾಪದ ತೀಕ್ಷ್ಣತೆಯು ಎಲೀಯನಿಗೆ ತಟ್ಟಿದ್ದಿರಬಹುದು.​—1 ಅರಸುಗಳು 19:8-12.

“ಆಹಾ, ಯೆಹೋವನು ಅಲ್ಲಿ ಹಾದುಹೋದನು”

3. ಯಾವ ದೈವಿಕ ಗುಣದ ರುಜುವಾತನ್ನು ಎಲೀಯನು ನೋಡಿದನು, ಮತ್ತು ಇದೇ ಗುಣದ ಪುರಾವೆಯನ್ನು ನಾವೆಲ್ಲಿ ಕಾಣಬಲ್ಲೆವು?

3 ಎಲೀಯನು ಕಂಡ ಈ ವಿಭಿನ್ನ ಘಟನೆಗಳಲ್ಲೆಲ್ಲಾ ಒಂದು ಸರ್ವಸಾಮಾನ್ಯ ವಿಷಯವಿತ್ತು​—ಅದೇನಂದರೆ ಅವೆಲ್ಲವು ಯೆಹೋವನ ಮಹಾಶಕ್ತಿಯ ಪ್ರದರ್ಶನಗಳಾಗಿದ್ದವು. ದೇವರಿಗೆ ಈ ಶಕ್ತಿ ಇದೆಯೆಂಬುದನ್ನು ಕಾಣಲು ನಾವು ಅದ್ಭುತಕೃತ್ಯವೊಂದನ್ನು ನೋಡುವ ಅಗತ್ಯವಿರುವುದಿಲ್ಲ. ಅದು ಸುಲಭವಾಗಿಯೆ ಕಾಣಸಿಗುತ್ತದೆ. ಸೃಷ್ಟಿಕ್ರಿಯೆಯು ಯೆಹೋವನ ‘ನಿತ್ಯಶಕ್ತಿ ಮತ್ತು ದೇವತ್ವದ’ ರುಜುವಾತನ್ನು ಕೊಡುತ್ತದೆಂದು ಬೈಬಲು ನಮಗನ್ನುತ್ತದೆ. (ರೋಮಾಪುರ 1:20) ಒಂದು ಬಿರುಮಳೆಯ ಕಣ್ಣುಕೋರೈಸುವ ಮಿಂಚಿನ ಮಿನುಗುಗಳು ಮತ್ತು ಆರ್ಭಟಿಸುವ ಗುಡುಗುಗಳನ್ನು, ಬಿರುಸಾದ ದೊಡ್ಡ ಜಲಪಾತವೊಂದರ ಶೋಭಾಯಮಾನ ಧುಮುಕುವಿಕೆಯನ್ನು, ಹಾಗೂ ನಕ್ಷತ್ರಗಳಿಂದ ಕಂಗೊಳಿಸುವ ಆಕಾಶದ ಭಾವಪರವಶಗೊಳಿಸುವಂಥ ವಿಸ್ತಾರ್ಯವನ್ನು ತುಸು ಮನಸ್ಸಿಗೆ ತಂದುಕೊಳ್ಳಿರಿ! ಅಂಥ ಪ್ರದರ್ಶನಗಳಲ್ಲಿ ದೇವರ ಅಪಾರಶಕ್ತಿಯ ಮಹಿಮೆಯನ್ನು ನೀವು ಕಾಣಲಾರಿರೆ? ಆದರೂ, ಇಂದಿನ ಲೋಕದಲ್ಲಿ ದೇವರ ಶಕ್ತಿಯನ್ನು ನಿಜವಾಗಿ ಅಂಗೀಕರಿಸುವವರು ಕೇವಲ ಕೊಂಚ ಜನ. ಅದನ್ನು ಯೋಗ್ಯವಾಗಿ ವೀಕ್ಷಿಸುವವರೊ ಇನ್ನೂ ಕಡಿಮೆ. ಈ ದೈವಿಕ ಗುಣವನ್ನು ಅರ್ಥಮಾಡಿಕೊಳ್ಳುವುದು, ನಾವು ಯೆಹೋವನ ಸಮೀಪಕ್ಕೆ ಬರಲು ಇನ್ನೂ ಅನೇಕ ಕಾರಣಗಳನ್ನು ಕೊಡುತ್ತದೆ. ಈ ವಿಭಾಗದಲ್ಲಿ, ನಾವು ಯೆಹೋವನ ಅತುಲ್ಯವಾದ ಶಕ್ತಿಯ ಸವಿವರ ಅಧ್ಯಯನವನ್ನು ಮಾಡಲಿದ್ದೇವೆ.

ಯೆಹೋವನ ಅತ್ಯಾವಶ್ಯಕ ಗುಣ

4, 5. (ಎ) ಯೆಹೋವನ ನಾಮ ಮತ್ತು ಆತನ ಸಾಮರ್ಥ್ಯ ಅಥವಾ ಶಕ್ತಿಯ ನಡುವೆ ಯಾವ ಸಂಬಂಧವಿದೆ? (ಬಿ) ತನ್ನ ಶಕ್ತಿಯನ್ನು ಸೂಚಿಸಲು ಯೆಹೋವನು ಹೋರಿಯನ್ನು ಆರಿಸಿಕೊಂಡದ್ದು ಏಕೆ ತಕ್ಕದ್ದಾಗಿದೆ?

4 ಯೆಹೋವನು ಅಸದೃಶ ಶಕ್ತಿಯುಳ್ಳಾತನು. ಯೆರೆಮೀಯ 10:6 ಹೇಳುವುದು: “ಯೆಹೋವನೇ, ನಿನ್ನ ಸಮಾನನು ಯಾವನೂ ಇಲ್ಲ; ನೀನು ಮಹತ್ತಮನು, ನಿನ್ನ ನಾಮವೂ ಸಾಮರ್ಥ್ಯದಿಂದ ಕೂಡಿ ಮಹತ್ತಮವಾಗಿದೆ.” ಆತನ ಸಾಮರ್ಥ್ಯ ಅಥವಾ ಶಕ್ತಿಯು ಆತನ ನಾಮದೊಂದಿಗೆ ಜೋಡಿಸಲ್ಪಟ್ಟಿರುವುದನ್ನು ಗಮನಿಸಿರಿ. ಈ ನಾಮದ ಅರ್ಥವು, “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ ಎಂಬುದನ್ನು ಮರೆಯದಿರಿ. ತನ್ನ ಆಯ್ಕೆಗನುಸಾರ ಆಗುವಂತೆ ಯಾವುದು ಯೆಹೋವನನ್ನು ಶಕ್ಯಗೊಳಿಸುತ್ತದೆ? ಒಂದು ವಿಷಯ, ಆತನ ಶಕ್ತಿಯೇ. ಹೌದು, ಕ್ರಿಯೆಗೈಯಲು ಯೆಹೋವನಿಗಿರುವ ಸಾಮರ್ಥ್ಯವು, ತನ್ನ ಚಿತ್ತವನ್ನು ನೆರವೇರಿಸಲು ಆತನಿಗಿರುವ ಶಕ್ತಿಯು ಅಪಾರವೇ ಸರಿ. ಅಂಥ ಶಕ್ತಿಯು ಆತನ ಅತ್ಯಾವಶ್ಯಕ ಗುಣಗಳಲ್ಲಿ ಒಂದು.

5 ಆತನ ಶಕ್ತಿಯ ಪೂರ್ಣ ಪರಿಮಾಣವನ್ನು ನಾವೆಂದೂ ಗ್ರಹಿಸಶಕ್ತರಲ್ಲವಾದ ಕಾರಣ, ನಮ್ಮ ಸಹಾಯಕ್ಕಾಗಿ ಯೆಹೋವನು ದೃಷ್ಟಾಂತಗಳನ್ನು ಉಪಯೋಗಿಸುತ್ತಾನೆ. ನಾವು ಈ ಮೊದಲೇ ನೋಡಿರುವಂತೆ ತನ್ನ ಶಕ್ತಿಯನ್ನು ಸಂಕೇತಿಸಲಿಕ್ಕಾಗಿ ಆತನು ಹೋರಿಯನ್ನು ಉಪಯೋಗಿಸುತ್ತಾನೆ. (ಯೆಹೆಜ್ಕೇಲ 1:​4-10) ಆ ಆಯ್ಕೆಯು ತಕ್ಕದಾದದ್ದೇ, ಯಾಕಂದರೆ ಪಳಗಿಸಲ್ಪಟ್ಟಿರುವ ಹೋರಿಯು ಸಹ ಭಾರಿ ಗಾತ್ರದ್ದೂ ಶಕ್ತಿಶಾಲಿಯೂ ಆದ ಜೀವಿಯಾಗಿರುತ್ತದೆ. ಬೈಬಲಿನ ಸಮಯದಲ್ಲಿ ಪಲೆಸ್ತೀನಿನ ಜನರಿಗೆ ಅದಕ್ಕಿಂತ ಬಲಾಢ್ಯವಾದ ಒಂದು ಜೀವಿಯು ಎಂದಾದರೂ ಎದುರಾಗಿದ್ದಲ್ಲಿ, ಅದು ಬಹಳ ಅಪರೂಪವೇ ಎನ್ನಬೇಕು. ಆದರೆ ಅಧಿಕ ಭಯಂಕರ ರೀತಿಯ ಹೋರಿಯ ಬಗ್ಗೆ ಅವರಿಗೆ ಗೊತ್ತಿತ್ತು. ಅದೇ ಕಾಡುಗೂಳಿ ಅಥವಾ ಕಾಡೆತ್ತು. ಅದರ ಜಾತಿ ಈಗ ಅಳಿದುಹೋಗಿದೆ. (ಯೋಬ 39:​9-12) ಈ ಗೂಳಿಗಳು ಬಹಳ ಮಟ್ಟಿಗೆ ಆನೆಗಳಷ್ಟೇ ದೊಡ್ಡದಾಗಿದ್ದವು ಎಂದು ರೋಮನ್‌ ಸಾಮ್ರಾಟನಾದ ಜೂಲಿಯಸ್‌ ಸೀಸರ್‌ ಒಮ್ಮೆ ಹೇಳಿದನು. ಅವನು ಬರೆದದ್ದು: “ಅವು ಅಪರಿಮಿತ ಬಲವುಳ್ಳವುಗಳು, ಮತ್ತು ತೀವ್ರ ವೇಗದಿಂದ ಓಡುತ್ತವೆ.” ಅಂಥ ಒಂದು ಜೀವಿಯ ಪಕ್ಕದಲ್ಲಿ ನೀವು ನಿಲ್ಲುವುದಾದರೆ, ನೀವೆಷ್ಟು ಅಲ್ಪರೂ ದುರ್ಬಲರೂ ಆಗಿದ್ದೀರೆಂದು ನಿಮಗನಿಸುವುದೆಂಬುದನ್ನು ಊಹಿಸಿಕೊಳ್ಳಿ!

6. ಯೆಹೋವನು ಒಬ್ಬನೇ “ಸರ್ವಶಕ್ತ” ಎಂದು ಕರೆಯಲ್ಪಟ್ಟಿರುವುದೇಕೆ?

6 ತದ್ರೀತಿಯಲ್ಲಿ ಮನುಷ್ಯನು, ಶಕ್ತಿಯುಳ್ಳ ದೇವರಾದ ಯೆಹೋವನಿಗೆ ಹೋಲಿಕೆಯಲ್ಲಿ ಅಲ್ಪನೂ ಅಶಕ್ತನೂ ಆಗಿರುತ್ತಾನೆ. ಆತನ ಎದುರಲ್ಲಿ ಮಹತ್ತಾದ ಜನಾಂಗಗಳೂ ತ್ರಾಸಿನ ತಟ್ಟೆಯ ಮೇಲಿನ ಬರಿಯ ದೂಳಿನ ಹಾಗಿದ್ದಾರೆ. (ಯೆಶಾಯ 40:15) ಬೇರೆ ಯಾವುದೇ ಜೀವಿಗೆ ಅಸದೃಶವಾಗಿ, ಯೆಹೋವನಿಗಿರುವ ಶಕ್ತಿಯಾದರೊ ಅಪರಿಮಿತ, ಯಾಕಂದರೆ ಆತನೊಬ್ಬನೆ “ಸರ್ವಶಕ್ತ” ಎಂದು ಕರೆಯಲ್ಪಟ್ಟಿದ್ದಾನೆ. * (ಪ್ರಕಟನೆ 15:3) ಯೆಹೋವನು ‘ಅತಿ ಬಲಾಢ್ಯನು’ ಮತ್ತು ‘ಮಹಾಶಕ್ತನು’ ಆಗಿದ್ದಾನೆ. (ಯೆಶಾಯ 40:26) ಆತನು ಸದಾ ಸಮೃದ್ಧವಾದ, ಎಂದೂ ಮುಗಿಯದ ಶಕ್ತಿಯ ಮೂಲನಾಗಿದ್ದಾನೆ. ಶಕ್ತಿಗಾಗಿ, ಬೇರೆ ಯಾವ ಶಕ್ತಿಯ ಮೂಲದ ಮೇಲೂ ಆತನು ಅವಲಂಬಿಸುವುದಿಲ್ಲ, ಯಾಕಂದರೆ “ಶಕ್ತಿಯು ದೇವರಿಂದಲೇ” ಬರುತ್ತದೆ. (ಓರೆ ಅಕ್ಷರಗಳು ನಮ್ಮವು.) (ಕೀರ್ತನೆ 62:​11, ಪರಿಶುದ್ಧ ಬೈಬಲ್‌) ಆದರೆ ಯೆಹೋವನು ತನ್ನ ಶಕ್ತಿಯನ್ನು ಪ್ರಯೋಗಿಸುವುದು ಯಾವುದರ ಮೂಲಕವಾಗಿ?

ಯೆಹೋವನು ತನ್ನ ಶಕ್ತಿಯನ್ನು ಪ್ರಯೋಗಿಸುವ ವಿಧ

7. ಯೆಹೋವನ ಪವಿತ್ರಾತ್ಮ ಎಂದರೇನು, ಮತ್ತು ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಮೂಲ ಭಾಷೆಯ ಶಬ್ದಗಳಿಂದ ಏನು ಸೂಚಿಸಲ್ಪಟ್ಟಿರುತ್ತದೆ?

7 ಯೆಹೋವನಿಂದ ಪವಿತ್ರಾತ್ಮವು ಅಪರಿಮಿತ ಪ್ರಮಾಣದಲ್ಲಿ ಹೊರಟುಬರುತ್ತದೆ. ಅದು ಕ್ರಿಯೆಯಲ್ಲಿ ತೋರಿಬರುವ ದೇವರ ಶಕ್ತಿಯಾಗಿದೆ. ವಾಸ್ತವದಲ್ಲಿ, ಆದಿಕಾಂಡ 1:2 ರಲ್ಲಿ ಬೈಬಲು ಅದನ್ನು ದೇವರ “ಕಾರ್ಯಕಾರಿ ಶಕ್ತಿ” (NW) ಎಂದು ಕರೆಯುತ್ತದೆ. “ಆತ್ಮ” ಎಂಬುದಾಗಿ ತರ್ಜುಮೆಯಾದ ಮೂಲ ಹೀಬ್ರು ಮತ್ತು ಗ್ರೀಕ್‌ ಪದಗಳು, ಬೇರೆ ಪೂರ್ವಾಪರ ವಚನಗಳಲ್ಲಿ “ಗಾಳಿ,” “ಶ್ವಾಸ” ಮತ್ತು “ಪ್ರವಾಹ” ಎಂದು ಭಾಷಾಂತರಿಸಲ್ಪಡಬಹುದು. ಹೀಬ್ರು ನಿಘಂಟುಕಾರರಿಗನುಸಾರ, ಮೂಲ ಭಾಷೆಯ ಶಬ್ದಗಳು ಕ್ರಿಯೆಯಲ್ಲಿರುವ ಅದೃಶ್ಯಶಕ್ತಿಯನ್ನು ಸೂಚಿಸುತ್ತವೆ. ಗಾಳಿಯು ಹೇಗೋ ಹಾಗೆ ದೇವರ ಆತ್ಮವು ನಮ್ಮ ಕಣ್ಣಿಗೆ ಅದೃಶ್ಯವಾಗಿರುತ್ತದೆ, ಆದರೆ ಅದರ ಪರಿಣಾಮಗಳು ನೈಜವೂ ಗ್ರಾಹ್ಯವೂ ಆಗಿವೆ.

8. ದೇವರ ಆತ್ಮವು ಬೈಬಲಿನಲ್ಲಿ ಸಾಂಕೇತಿಕವಾಗಿ ಏನೆಂದು ಕರೆಯಲ್ಪಡುತ್ತದೆ, ಮತ್ತು ಈ ಹೋಲಿಕೆಗಳು ಏಕೆ ತಕ್ಕದ್ದಾಗಿವೆ?

8 ದೇವರ ಪವಿತ್ರಾತ್ಮವು ಅನಂತವಾದ ಬಹುಮುಖ ಸಾಮರ್ಥ್ಯದಿಂದ ಕೂಡಿದೆ. ತನ್ನ ಮನಸ್ಸಿನಲ್ಲಿರುವ ಯಾವುದೇ ಉದ್ದೇಶವನ್ನು ನೆರವೇರಿಸಲು ಯೆಹೋವನು ಅದನ್ನು ಉಪಯೋಗಿಸಬಲ್ಲನು. ಹೀಗಿರುವಾಗ ಬೈಬಲು ದೇವರಾತ್ಮವನ್ನು ಉಚಿತವಾಗಿಯೆ, ಆತನ ‘ಬೆರಳು,’ ಆತನ “ಹಸ್ತ” ಅಥವಾ ಆತನ “ಕೈ” ಎಂದು ಸಾಂಕೇತಿಕವಾಗಿ ಕರೆಯುತ್ತದೆ. (ಲೂಕ 11:​20, ಸತ್ಯವೇದವು Reference Edition ಪಾದಟಿಪ್ಪಣಿ; ಧರ್ಮೋಪದೇಶಕಾಂಡ 5:15; ಕೀರ್ತನೆ 8:3) ವಿವಿಧ ಪರಿಮಾಣದ ಶಕ್ತಿ ಮತ್ತು ಹಸ್ತಕೌಶಲವನ್ನು ಆವಶ್ಯಪಡಿಸುವ ವಿವಿಧ ರೀತಿಯ ಕೆಲಸಗಳನ್ನು ಮಾಡಲು ವ್ಯಕ್ತಿಯೊಬ್ಬನು ಹೇಗೆ ತನ್ನ ಕೈಯನ್ನು ಬಳಸಬಹುದೊ ಹಾಗೆ, ದೇವರು ತನ್ನ ಯಾವುದೇ ಉದ್ದೇಶವನ್ನು ಪೂರೈಸಲಿಕ್ಕಾಗಿ​—ಉದಾಹರಣೆಗೆ ಅತಿ ಚಿಕ್ಕದಾದ ಅಣುವಿನ ರಚನೆಯಲ್ಲಿ ಅಥವಾ ಕೆಂಪು ಸಮುದ್ರವನ್ನು ವಿಭಾಗ ಮಾಡಿದ್ದರಲ್ಲಿ ಅಥವಾ ಪ್ರಥಮ ಶತಮಾನದ ಕ್ರೈಸ್ತರು ಅನ್ಯ ಭಾಷೆಗಳಲ್ಲಿ ಮಾತಾಡುವಂತೆ ಮಾಡಿದ್ದರಲ್ಲಿ​—ತನ್ನ ಆತ್ಮವನ್ನು ಉಪಯೋಗಿಸಶಕ್ತನು.

9. ಯೆಹೋವನ ಆಳುವ ಅಧಿಕಾರದ ವಿಸ್ತಾರವೆಷ್ಟು?

9 ವಿಶ್ವ ಪರಮಾಧಿಕಾರಿಯೋಪಾದಿ ತನ್ನ ಅಧಿಕಾರದ ಮೂಲಕವೂ ಯೆಹೋವನು ತನ್ನ ಶಕ್ತಿಯನ್ನು ಪ್ರಯೋಗಿಸುತ್ತಾನೆ. ಬುದ್ಧಿಜೀವಿಗಳೂ ದಕ್ಷತೆಯುಳ್ಳವರೂ ಆಗಿರುವ ಕೋಟ್ಯನುಕೋಟಿ ಪ್ರಜೆಗಳು ನಿಮ್ಮ ಅಪ್ಪಣೆಯನ್ನು ಪಾಲಿಸಲು ತುದಿಗಾಲಲ್ಲಿ ನಿಂತಿರುವುದನ್ನು ನೀವು ಊಹಿಸಬಲ್ಲಿರೊ? ಯೆಹೋವನು ಅಂಥ ಆಳುವ ಅಧಿಕಾರವನ್ನು ಹೊಂದಿರುತ್ತಾನೆ. ಆತನಿಗೆ ಮಾನವ ಸೇವಕರು ಇದ್ದಾರೆ. ಇವರನ್ನು ಶಾಸ್ತ್ರವಚನಗಳಲ್ಲಿ ಅನೇಕವೇಳೆ ಒಂದು ಸೇನೆಗೆ ಹೋಲಿಸಲಾಗಿದೆ. (ಕೀರ್ತನೆ 68:​11, NW; 110:3) ಆದರೂ, ಒಬ್ಬ ದೇವದೂತನಿಗೆ ಹೋಲಿಸುವಲ್ಲಿ ಮನುಷ್ಯನು ಬಲಹೀನ ಜೀವಿಯಾಗಿರುತ್ತಾನೆ. ಅಶ್ಶೂರ್ಯದ ಸೇನೆಯು ದೇವಜನರ ಮೇಲೆ ಆಕ್ರಮಣಗೈದಾಗ, ಕೇವಲ ಒಬ್ಬ ದೇವದೂತನು ಆ ಸೈನಿಕರಲ್ಲಿ 1,85,000 ಮಂದಿಯನ್ನು ಒಂದೇ ರಾತ್ರಿಯಲ್ಲಿ ವಧಿಸಿದನು! (2 ಅರಸುಗಳು 19:35) ದೇವರ ದೂತರು “ಪರಾಕ್ರಮಶಾಲಿ”ಗಳಾಗಿದ್ದಾರೆ.​—ಕೀರ್ತನೆ 103:​19, 20.

10. (ಎ) ಸರ್ವಶಕ್ತನನ್ನು ಸೇನಾಧೀಶ್ವರನಾದ ಯೆಹೋವನು ಎಂದು ಕರೆಯುವುದೇಕೆ? (ಬಿ) ಯೆಹೋವನ ಸೃಷ್ಟಿಯಲ್ಲೆಲ್ಲಾ ಅತ್ಯಂತ ಪರಾಕ್ರಮಿಯು ಯಾರು?

10 ದೇವದೂತರ ಸಂಖ್ಯೆಯು ಎಷ್ಟಿದೆ? ದಾನಿಯೇಲನು ನೋಡಿದಂಥ ಪರಲೋಕದ ದರ್ಶನದಲ್ಲಿ, ಅವನು ದಶಕೋಟಿಗಿಂತಲೂ ಹೆಚ್ಚು ಆತ್ಮಜೀವಿಗಳನ್ನು ಯೆಹೋವನ ಸಿಂಹಾಸನದ ಮುಂದೆ ಕಂಡನು, ಆದರೆ ಯೆಹೋವನು ನಿರ್ಮಿಸಿದ ಸಮಸ್ತ ದೇವದೂತ ಗಣವನ್ನು ಆತನು ಕಂಡಿದ್ದನೆಂಬುದಕ್ಕೆ ಯಾವ ಸೂಚನೆಯೂ ಇರುವುದಿಲ್ಲ. (ದಾನಿಯೇಲ 7:10) ಆದುದರಿಂದ ಶತಕೋಟಿಗಟ್ಟಲೆ ದೇವದೂತರು ಅಲ್ಲಿರಸಾಧ್ಯವಿದೆ. ಈ ಕಾರಣದಿಂದಲೇ ದೇವರನ್ನು ಸೇನಾಧೀಶ್ವರನಾದ ಯೆಹೋವನು ಎಂದು ಕರೆಯಲಾಗಿದೆ. ಈ ಬಿರುದು, ಪರಾಕ್ರಮಿಗಳಾದ ದೇವದೂತರ ಒಂದು ಮಹಾ, ಸಂಘಟಿತ ಸೇನೆಯ ಸೇನಾಧೀಶ್ವರನೋಪಾದಿ ಆತನ ಅಧಿಕಾರಯುಕ್ತ ಸ್ಥಾನವನ್ನು ವರ್ಣಿಸುತ್ತದೆ. ಈ ಎಲ್ಲಾ ಆತ್ಮಜೀವಿಗಳ ಮೇಲೆ, ಆತನು ತನ್ನ ಸ್ವಂತ ಪ್ರಿಯ ಪುತ್ರನೂ “ಸೃಷ್ಟಿಗೆಲ್ಲಾ ಜೇಷ್ಠ ಪುತ್ರನೂ” ಆಗಿರುವಾತನನ್ನು ಅಧಿಕಾರಿಯಾಗಿ ನೇಮಿಸಿರುತ್ತಾನೆ. (ಕೊಲೊಸ್ಸೆ 1:15) ದೇವದೂತರು, ಸೆರಾಫಿಯರು ಮತ್ತು ಕೆರೂಬಿಯರ ಮುಖ್ಯಸ್ಥನೋಪಾದಿ, ಅಂದರೆ ಪ್ರಧಾನ ದೇವದೂತನೋಪಾದಿ ಯೇಸು ಯೆಹೋವನ ಎಲ್ಲಾ ಸೃಷ್ಟಿಯಲ್ಲಿ ಅತ್ಯಂತ ಪರಾಕ್ರಮಶಾಲಿಯಾಗಿದ್ದಾನೆ.

11, 12. (ಎ) ದೇವರ ವಾಕ್ಯವು ಯಾವ ವಿಧಗಳಲ್ಲಿ ಶಕ್ತಿಯನ್ನು ಪ್ರಯೋಗಿಸುತ್ತದೆ? (ಬಿ) ಯೆಹೋವನ ಶಕ್ತಿಯ ಪರಿಮಾಣಕ್ಕೆ ಯೇಸು ಸಾಕ್ಷಿಕೊಟ್ಟದ್ದು ಹೇಗೆ?

11 ಯೆಹೋವನು ತನ್ನ ಶಕ್ತಿಯನ್ನು ಪ್ರಯೋಗಿಸುವ ಇನ್ನೊಂದು ಸಾಧನವೂ ಇದೆ. ಇಬ್ರಿಯ 4:12 ಹೇಳುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು [“ಶಕ್ತಿಯನ್ನು ಪ್ರಯೋಗಿಸುತ್ತದೆ,” NW].” ಬೈಬಲಿನಲ್ಲಿ ಈ ವರೆಗೂ ಕಾಪಾಡಿ ಉಳಿಸಲ್ಪಟ್ಟಿರುವ ದೇವರ ವಾಕ್ಯ ಅಥವಾ ಆತ್ಮಪ್ರೇರಿತ ಸಂದೇಶದ ಅಸಾಧಾರಣ ಶಕ್ತಿಯನ್ನು ನೀವು ಗಮನಿಸಿರುವಿರೊ? ಅದು ನಮ್ಮನ್ನು ಬಲಪಡಿಸಬಲ್ಲದು, ನಮ್ಮ ನಂಬಿಕೆಯನ್ನು ಕಟ್ಟಬಲ್ಲದು, ಮತ್ತು ನಮ್ಮಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಳ್ಳಲು ಸಹಾಯಮಾಡಬಲ್ಲದು. ಘೋರವಾದ ಅನೈತಿಕ ಜೀವನಗಳನ್ನು ನಡಿಸುತ್ತಿರುವ ಜನರ ವಿರುದ್ಧ ಅಪೊಸ್ತಲ ಪೌಲನು ಜೊತೆ ವಿಶ್ವಾಸಿಗಳನ್ನು ಎಚ್ಚರಿಸಿದನು. ಅವನು ಅನಂತರ ಕೂಡಿಸಿ ಹೇಳಿದ್ದು: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ.” (1 ಕೊರಿಂಥ 6:​9-11) ಹೌದು, “ದೇವರ ವಾಕ್ಯವು” ಅವರಲ್ಲಿ ಅದರ ಶಕ್ತಿಯನ್ನು ಪ್ರಯೋಗಿಸಿ, ಅವರು ಬದಲಾಗುವಂತೆ ಸಹಾಯಮಾಡಿತ್ತು.

12 ಯೆಹೋವನ ಶಕ್ತಿಯು ಎಷ್ಟೊಂದು ಅಪಾರವೂ, ಅದರ ಕಾರ್ಯಸಾಧಕ ಶಕ್ತಿಯು ಎಷ್ಟು ಪರಿಣಾಮಕಾರಿಯೂ ಆಗಿದೆಯೆಂದರೆ, ಆ ಶಕ್ತಿಯನ್ನು ಪ್ರಯೋಗಿಸುವುದರಿಂದ ಯಾವುದೂ ಆತನನ್ನು ತಡೆದು ನಿಲ್ಲಿಸಲಾರದು. “ದೇವರಿಗೆ ಎಲ್ಲವೂ ಸಾಧ್ಯ” ಎಂದನು ಯೇಸು. (ಮತ್ತಾಯ 19:26) ಯಾವ ಉದ್ದೇಶಗಳಿಗಾಗಿ ಯೆಹೋವನು ತನ್ನ ಶಕ್ತಿಯನ್ನು ನಿರ್ದೇಶಿಸುತ್ತಾನೆ?

ಉದ್ದೇಶದಿಂದ ನಿಯಂತ್ರಿತವಾದ ಶಕ್ತಿ

13, 14. (ಎ) ಯೆಹೋವನು ವ್ಯಕ್ತಿಸ್ವರೂಪವಿಲ್ಲದ ಶಕ್ತಿಯ ಉಗಮವಲ್ಲವೆಂದು ನಾವೇಕೆ ಹೇಳಬಲ್ಲೆವು? (ಬಿ) ಯೆಹೋವನು ತನ್ನ ಶಕ್ತಿಯನ್ನು ಯಾವ ವಿಧಗಳಲ್ಲಿ ಉಪಯೋಗಿಸುತ್ತಾನೆ?

13 ಯೆಹೋವನ ಆತ್ಮವು ಯಾವುದೇ ಭೌತಿಕ ಶಕ್ತಿಗಿಂತ ಎಷ್ಟೋ ಮಹತ್ತಾದದ್ದಾಗಿದೆ; ಮತ್ತು ಯೆಹೋವನೇನು ವ್ಯಕ್ತಿಸ್ವರೂಪವಿಲ್ಲದ ಶಕ್ತಿಯಲ್ಲ, ಇಲ್ಲವೆ ಬರಿಯ ಶಕ್ತಿಯ ಉಗಮವಲ್ಲ. ಬದಲಾಗಿ ತನ್ನ ಸ್ವಂತ ಶಕ್ತಿಯನ್ನು ಪೂರ್ಣ ಹತೋಟಿಯಲ್ಲಿಟ್ಟಿರುವ ವ್ಯಕ್ತಿಸ್ವರೂಪವುಳ್ಳ ದೇವರು ಆತನು. ಅದನ್ನು ಉಪಯೋಗಿಸುವಂತೆ ಆತನನ್ನು ಯಾವುದು ಪ್ರೇರಿಸುತ್ತದೆ?

14 ನಾವು ನೋಡಲಿರುವ ಪ್ರಕಾರ ದೇವರು ನಿರ್ಮಿಸಲಿಕ್ಕಾಗಿ, ನಾಶಗೊಳಿಸಲಿಕ್ಕಾಗಿ, ಕಾಪಾಡಲಿಕ್ಕಾಗಿ, ಮತ್ತು ಪುನಸ್ಸ್ಥಾಪಿಸಲಿಕ್ಕಾಗಿ, ಅಥವಾ ಚುಟುಕಾಗಿ ಹೇಳುವುದಾದರೆ ತನ್ನ ಪರಿಪೂರ್ಣ ಉದ್ದೇಶಗಳಿಗೆ ಹೊಂದಿಕೊಳ್ಳುವ ಯಾವುದೇ ಕೆಲಸವನ್ನು ಮಾಡಲಿಕ್ಕಾಗಿ ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. (ಯೆಶಾಯ 46:10) ಕೆಲವು ಸಂದರ್ಭಗಳಲ್ಲಿ, ಯೆಹೋವನು ತನ್ನ ವ್ಯಕ್ತಿತ್ವ ಮತ್ತು ಮಟ್ಟಗಳ ಪ್ರಾಮುಖ್ಯ ವೈಶಿಷ್ಟ್ಯಗಳನ್ನು ತಿಳಿಸಲಿಕ್ಕಾಗಿ ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. ಎಲ್ಲದಕ್ಕಿಂತ ಹೆಚ್ಚಾಗಿ, ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ, ಅಂದರೆ ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಲಿಕ್ಕೂ ಮೆಸ್ಸೀಯ ಸಂಬಂಧಿತ ರಾಜ್ಯದ ಮೂಲಕ ತನ್ನ ಪರಿಶುದ್ಧ ನಾಮವನ್ನು ಪವಿತ್ರೀಕರಿಸಲಿಕ್ಕೂ ಆತನು ತನ್ನ ಶಕ್ತಿಯನ್ನು ನಿರ್ದೇಶಿಸುತ್ತಾನೆ. ಆ ಉದ್ದೇಶವನ್ನು ಯಾವುದೂ ಎಂದಿಗೂ ಭಂಗಪಡಿಸಲಾರದು.

15. ಯೆಹೋವನು ತನ್ನ ಸೇವಕರ ಸಂಬಂಧದಲ್ಲಿ ಯಾವ ಉದ್ದೇಶಕ್ಕಾಗಿ ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ, ಮತ್ತು ಎಲೀಯನ ವಿಷಯದಲ್ಲಿ ಇದು ಹೇಗೆ ಪ್ರದರ್ಶಿಸಲ್ಪಟ್ಟಿತು?

15 ನಮ್ಮಲ್ಲಿ ಒಬ್ಬೊಬ್ಬರ ಪ್ರಯೋಜನಕ್ಕಾಗಿಯೂ ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸುತ್ತಾನೆ. 2 ಪೂರ್ವಕಾಲವೃತ್ತಾಂತ 16:9 ಏನನ್ನುತ್ತದೆಂಬುದನ್ನು ಗಮನಿಸಿರಿ: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು [“ಬಲವನ್ನು,” NW] ತೋರ್ಪಡಿಸುತ್ತಾನೆ.” ಆರಂಭದಲ್ಲಿ ತಿಳಿಸಲಾದ ಎಲೀಯನ ಅನುಭವವು ಇದಕ್ಕೊಂದು ದೃಷ್ಟಾಂತವಾಗಿದೆ. ದೈವಿಕ ಶಕ್ತಿಯ ಆ ಭಯಚಕಿತಗೊಳಿಸುವ ಪ್ರದರ್ಶನವನ್ನು ಯೆಹೋವನು ಅವನಿಗೆ ಕೊಟ್ಟದ್ದೇಕೆ? ಏಕೆಂದರೆ ದುಷ್ಟ ರಾಣಿಯಾದ ಇಜಬೇಲಳು ಎಲೀಯನನ್ನು ಕೊಂದುಹಾಕುವೆನೆಂದು ಶಪಥತೊಟ್ಟಿದ್ದಳು. ಪ್ರವಾದಿಯು ತನ್ನ ಜೀವರಕ್ಷಣೆಗಾಗಿ ಪಲಾಯನಗೈಯುತ್ತಿದ್ದನು. ಅವನಿಗೆ ಒಂಟಿತನದ ಅನಿಸಿಕೆಯಾಯಿತು. ಅವನು ಹೆದರಿದನು, ಮತ್ತು ತನ್ನೆಲ್ಲಾ ಪರಿಶ್ರಮದ ಕೆಲಸವು ವ್ಯರ್ಥವಾಗಿತ್ತೊ ಎಂಬಂತೆ ನಿರಾಶೆಗೊಂಡನು. ಈ ವ್ಯಥೆಗೀಡಾದ ಮನುಷ್ಯನನ್ನು ಸಂತೈಸಲು, ಯೆಹೋವನು ತನ್ನ ದೈವಿಕ ಶಕ್ತಿಯ ಬಗ್ಗೆ ಅವನ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ನೆನಪು ಹುಟ್ಟಿಸಿದನು. ಆ ಬಿರುಗಾಳಿ, ಭೂಕಂಪ, ಮತ್ತು ಬೆಂಕಿಯು, ಎಲೀಯನೊಂದಿಗಿದ್ದವನು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯೆಂಬುದನ್ನು ತೋರ್ಪಡಿಸಿತು. ಸರ್ವಶಕ್ತನಾದ ದೇವರೇ ಅವನ ಪಕ್ಕದಲ್ಲಿರುವಾಗ, ಅವನು ಇಜಬೇಲಳ ಬಗ್ಗೆ ಭಯಪಡಬೇಕಾದರೂ ಏತಕ್ಕೆ?​—1 ಅರಸುಗಳು 19:​1-12. *

16. ಯೆಹೋವನ ಮಹಾಶಕ್ತಿಯ ಕುರಿತು ನಾವು ಪರಿಗಣಿಸುವಲ್ಲಿ, ನಾವು ಸಾಂತ್ವನವನ್ನು ಪಡೆಯಬಲ್ಲೆವೇಕೆ?

16 ಈಗ ಅದ್ಭುತಗಳನ್ನು ನಡಿಸುವ ಸಮಯವು ಆತನದಲ್ಲವಾದರೂ ಎಲೀಯನ ದಿನಗಳಂದಿನಿಂದ ಯೆಹೋವನು ಸ್ವಲ್ಪವೂ ಬದಲಾಗಿರುವುದಿಲ್ಲ. (1 ಕೊರಿಂಥ 13:8) ಆತನು ತನ್ನನ್ನು ಪ್ರೀತಿಸುವವರ ಪರವಾಗಿ ತನ್ನ ಶಕ್ತಿಯನ್ನು ಉಪಯೋಗಿಸಲು ಇಂದೂ ಅಷ್ಟೇ ತವಕಿಸುತ್ತಾನೆ. ಆತನು ಉನ್ನತವಾದ ಆತ್ಮಜೀವಿಗಳ ಕ್ಷೇತ್ರದಲ್ಲಿ ನಿವಾಸಿಸುತ್ತಾನೆ ನಿಜ, ಆದರೆ ಆತನು ನಮ್ಮಿಂದ ದೂರವಾಗಿರುವಾತನಲ್ಲ. ಆತನ ಶಕ್ತಿಯೋ ಅಪರಿಮಿತ, ಆದುದರಿಂದ ಅಂತರವು ಆತನಿಗೆ ಅಡಚಣೆಯಾಗಿರದು. ಅದರ ಬದಲು, “ಯೆಹೋವನಿಗೆ . . . ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ.” (ಕೀರ್ತನೆ 145:18) ಒಮ್ಮೆ ಪ್ರವಾದಿಯಾದ ದಾನಿಯೇಲನು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟಾಗ, ಅವನ ಪ್ರಾರ್ಥನೆಯು ಮುಗಿಯುವ ಮುಂಚೆಯೆ ದೇವದೂತನೊಬ್ಬನು ಸಹಾಯಕ್ಕಾಗಿ ಬಂದಿದ್ದನು! (ದಾನಿಯೇಲ 9:​20-23) ಯೆಹೋವನು ಯಾರನ್ನು ಪ್ರೀತಿಸುತ್ತಾನೊ ಅವರಿಗೆ ಸಹಾಯ ಮಾಡುವುದರಿಂದ ಮತ್ತು ಅವರನ್ನು ಬಲಪಡಿಸುವುದರಿಂದ ಆತನನ್ನು ತಡೆಯುವಂಥದ್ದು ಯಾವುದೂ ಇಲ್ಲ.​—ಕೀರ್ತನೆ 118:6.

ದೇವರಿಗಿರುವ ಶಕ್ತಿ ಮತ್ತು ಅಧಿಕಾರವು, ನಾವು ಆತನ ಬಳಿಸಾರದಂತೆ ಮಾಡುತ್ತದೊ?

17. ಯಾವ ಅರ್ಥದಲ್ಲಿ ಯೆಹೋವನ ಶಕ್ತಿ ಮತ್ತು ಅಧಿಕಾರವು ನಮ್ಮಲ್ಲಿ ಭಯವನ್ನು ಪ್ರೇರಿಸುತ್ತದೆ, ಆದರೆ ಯಾವ ರೀತಿಯ ಭಯವನ್ನು ಅದು ಪ್ರವರ್ಧಿಸುವುದಿಲ್ಲ?

17 ದೇವರ ಅಪಾರ ಶಕ್ತಿ ಮತ್ತು ಅದರ ಫಲವಾಗಿರುವ ಅಧಿಕಾರವು ನಾವು ಆತನಿಗೆ ಭಯಪಡುವಂತೆ ಮಾಡಬೇಕೊ? ಹೌದು ಮತ್ತು ಇಲ್ಲ ಎಂಬ ಎರಡೂ ಉತ್ತರಗಳನ್ನು ನಾವು ಕೊಡಬೇಕು. ಈ ಗುಣವು, ನಾವು ಹಿಂದಿನ ಅಧ್ಯಾಯದಲ್ಲಿ ಸಂಕ್ಷೇಪವಾಗಿ ಚರ್ಚಿಸಿದ ಪ್ರಕಾರ ದೈವಿಕ ಭಯವನ್ನು, ಅಂದರೆ ಅಪಾರವಾದ ಭಯಭಕ್ತಿ ಮತ್ತು ಗೌರವವನ್ನು ತೋರಿಸುವುದಕ್ಕೆ ಬಹುತೇಕ ಕಾರಣವನ್ನು ನಮಗೆ ಕೊಡುವದರಿಂದ, ಹೌದು ಎಂಬ ಉತ್ತರ. ಅಂಥ ಭಯವು “ವಿವೇಕದ ಆರಂಭ” ಎಂದು ಬೈಬಲು ನಮಗನ್ನುತ್ತದೆ. (ಕೀರ್ತನೆ 111:​10, NW) ಆದರೂ, ನಾವು ಇಲ್ಲ ಎಂದೂ ಉತ್ತರ ಕೊಡುತ್ತೇವೆ ಯಾಕಂದರೆ ದೇವರ ಶಕ್ತಿ ಮತ್ತು ಅಧಿಕಾರವು ನಾವಾತನ ವಿಷಯದಲ್ಲಿ ವಿಕಾರವಾದ ಭಯದಿಂದ ನಡುಗುವಂತೆ ಅಥವಾ ಆತನ ಬಳಿಸಾರುವುದರಿಂದ ಹಿಂದಟ್ಟುವಂತೆ ಮಾಡುವುದಿಲ್ಲ.

18. (ಎ) ಅನೇಕರು ಅಧಿಕಾರದಲ್ಲಿರುವ ಜನರಲ್ಲಿ ಭರವಸೆಯಿಡುವುದಿಲ್ಲ ಏಕೆ? (ಬಿ) ಯೆಹೋವನು ತನ್ನ ಶಕ್ತಿ ಮತ್ತು ಅಧಿಕಾರದಿಂದಾಗಿ ಭ್ರಷ್ಟಗೊಳಿಸಲ್ಪಡನೆಂದು ನಮಗೆ ತಿಳಿದಿರುವುದೇಕೆ?

18 ಇತಿಹಾಸವು ಪದೇಪದೇ ದೃಢೀಕರಿಸಿರುವಂತೆ ಅಪರಿಪೂರ್ಣ ಮಾನವರು ಅನೇಕವೇಳೆ ಅಧಿಕಾರವನ್ನು ದುರುಪಯೋಗಿಸುತ್ತಾರೆ. ಅಧಿಕಾರವು ಜನರನ್ನು ಭ್ರಷ್ಟಗೊಳಿಸುತ್ತದೆಂಬಂತೆ ತೋರುತ್ತದೆ, ಮತ್ತು ಕೆಲವು ಅಧಿಪತಿಗಳ ಅಧಿಕಾರವು ಹೆಚ್ಚಾಗುತ್ತಾ ಹೋದಂತೆ ಅವರ ಭ್ರಷ್ಟಾಚಾರವೂ ಹೆಚ್ಚಾಗುತ್ತಿರುವಂತೆ ತೋರುತ್ತದೆ. (ಪ್ರಸಂಗಿ 4:1; 8:9) ಈ ಕಾರಣದಿಂದಾಗಿ, ಅಧಿಕಾರದಲ್ಲಿರುವ ಜನರಲ್ಲಿ ಅನೇಕರು ಭರವಸೆಯಿಡುವುದಿಲ್ಲ, ಮತ್ತು ಅವರಿಂದ ದೂರಸರಿಯುತ್ತಾರೆ. ಈಗ, ಯೆಹೋವನೂ ಸರ್ವಶಕ್ತನು, ಸರ್ವಾಧಿಕಾರಿಯು. ಆದರೆ ಇದು ಆತನನ್ನು ಯಾವ ರೀತಿಯಲ್ಲಾದರೂ ಭ್ರಷ್ಟಗೊಳಿಸಿದೆಯೊ? ಖಂಡಿತವಾಗಿಯೂ ಇಲ್ಲ! ನಾವು ಈ ಮೊದಲೆ ನೋಡಿರುವ ಪ್ರಕಾರ, ಆತನು ಪರಿಶುದ್ಧನು. ಭ್ರಷ್ಟತೆಯ ಲವಲೇಶವೂ ಆತನಲ್ಲಿಲ್ಲ. ಈ ಭ್ರಷ್ಟಗೊಂಡಿರುವ ಲೋಕದ ಅಪರಿಪೂರ್ಣ ಸ್ತ್ರೀಪುರುಷರಂತೆ ಯೆಹೋವನಿರುವುದಿಲ್ಲ. ಆತನು ತನ್ನ ಶಕ್ತಿ ಹಾಗೂ ಅಧಿಕಾರವನ್ನು ಎಂದೂ ದುರುಪಯೋಗಿಸಿಲ್ಲ, ಮತ್ತು ಮುಂದೆಂದಿಗೂ ದುರುಪಯೋಗಿಸನು.

19, 20. (ಎ) ಯೆಹೋವನು ತನ್ನ ಶಕ್ತಿಯನ್ನು ಯಾವಾಗಲೂ ಬೇರೆ ಯಾವ ಗುಣಗಳಿಗೆ ಹೊಂದಿಕೆಯಲ್ಲಿ ಉಪಯೋಗಿಸುತ್ತಾನೆ, ಮತ್ತು ಇದು ಆಶ್ವಾಸನದಾಯಕವೇಕೆ? (ಬಿ) ಯೆಹೋವನ ಆತ್ಮಸಂಯಮವನ್ನು ನೀವು ಹೇಗೆ ದೃಷ್ಟಾಂತಿಸಬಹುದು, ಮತ್ತು ಈ ಗುಣವು ನಿಮಗೆ ಆಕರ್ಷಕರವೇಕೆ?

19 ಶಕ್ತಿಯೊಂದೇ ಯೆಹೋವನ ಗುಣವಲ್ಲವೆಂಬುದನ್ನು ನೆನಪಿನಲ್ಲಿಡಿರಿ. ಆತನ ನ್ಯಾಯ, ಆತನ ವಿವೇಕ, ಮತ್ತು ಆತನ ಪ್ರೀತಿ ಎಂಬ ಗುಣಗಳನ್ನು ನಮಗಿನ್ನೂ ಕಲಿಯಲಿಕ್ಕಿದೆ. ಆದರೆ ಯೆಹೋವನ ಗುಣಗಳು, ಆತನು ಒಮ್ಮೆಗೆ ಕೇವಲ ಒಂದೇ ಗುಣವನ್ನು ಪ್ರದರ್ಶಿಸುತ್ತಾನೊ ಎಂಬಂತೆ ಕಟ್ಟುನಿಟ್ಟಾದ, ಯಾಂತ್ರಿಕ ರೀತಿಯಲ್ಲಿ ತೋರಿಬರುತ್ತವೆ ಎಂದು ನಾವು ಊಹಿಸಬಾರದು. ಅದಕ್ಕೆ ಬದಲಾಗಿ, ಮುಂದಿನ ಅಧ್ಯಾಯಗಳಲ್ಲಿ ನಾವು ನೋಡಲಿರುವ ಪ್ರಕಾರ, ಯೆಹೋವನು ಯಾವಾಗಲೂ ತನ್ನ ಶಕ್ತಿಯನ್ನು, ತನ್ನ ನ್ಯಾಯ, ವಿವೇಕ, ಮತ್ತು ಪ್ರೀತಿಗೆ ಹೊಂದಿಕೆಯಲ್ಲಿ ತೋರಿಸುತ್ತಾನೆ. ಲೋಕದ ಧುರೀಣರಲ್ಲಿ ವಿರಳವಾಗಿರುವ ಆದರೆ ದೇವರಿಗಿರುವ ಇನ್ನೊಂದು ಗುಣದ ಕುರಿತು ಯೋಚಿಸಿರಿ. ಅದು ಆತ್ಮಸಂಯಮವೇ.

20 ಒಬ್ಬ ಆಜಾನುಬಾಹು ಮತ್ತು ಬಲಿಷ್ಠ ವ್ಯಕ್ತಿಯನ್ನು ಸಂಧಿಸುವುದನ್ನು ಊಹಿಸಿಕೊಳ್ಳಿರಿ. ಅವನ ತೋರಿಕೆಯೆ ನಿಮ್ಮಲ್ಲಿ ಭಯಹುಟ್ಟಿಸುತ್ತದೆ. ಆದರೆ ಕಾಲದಾಟಿದಂತೆ ಅವನ ಕೋಮಲ ಸ್ವಭಾವವನ್ನು ನೀವು ಗಮನಿಸುತ್ತೀರಿ. ಜನರಿಗೆ ಸಹಾಯಮಾಡಿ ಅವರನ್ನು ಕಾಪಾಡಲಿಕ್ಕಾಗಿ ಮತ್ತು ವಿಶೇಷವಾಗಿ ಅರಕ್ಷಿತರೂ ನಿರ್ಬಲರೂ ಆದವರಿಗಾಗಿ ತನ್ನ ಶಕ್ತಿಯನ್ನು ಉಪಯೋಗಿಸಲು, ಅವನು ಸದಾ ಸಿದ್ಧನೂ ಅತ್ಯಾಸಕ್ತನೂ ಆಗಿರುತ್ತಾನೆ. ತನ್ನ ಶಕ್ತಿಯನ್ನು ಅವನೆಂದೂ ದುರುಪಯೋಗಿಸುವುದಿಲ್ಲ. ನಿಷ್ಕಾರಣವಾಗಿ ಅವನನ್ನು ನಿಂದಿಸಲಾಗುವುದನ್ನು ನೀವು ನೋಡುತ್ತೀರಿ. ಹಾಗಿದ್ದರೂ ಅವನ ವರ್ತನೆ ದೃಢವಾಗಿದ್ದು, ಅದೇ ಸಮಯದಲ್ಲಿ ಪ್ರಶಾಂತವೂ, ಗಂಭೀರವೂ, ಮತ್ತು ದಯೆಯುಳ್ಳದ್ದೂ ಆಗಿದೆ. ಅದೇ ರೀತಿಯ ವಿನಯ ಮತ್ತು ಸಂಯಮವನ್ನು ನೀವು, ವಿಶೇಷವಾಗಿ ಅಷ್ಟು ಶಕ್ತಿಶಾಲಿಯಾಗಿರುವ ವ್ಯಕ್ತಿಯಾಗಿರುತ್ತಿದ್ದಲ್ಲಿ ತೋರಿಸಶಕ್ತರಾಗಿರುತ್ತಿದ್ದೀರೊ ಎಂದು ಯೋಚಿಸಲಾರಂಭಿಸುತ್ತೀರಿ! ನಿಮಗೆ ಅಂಥ ವ್ಯಕ್ತಿಯ ಪರಿಚಯವು ಹೆಚ್ಚುತ್ತಾ ಹೋಗುವಾಗ, ಆತನ ಕಡೆಗೆ ಸೆಳೆಯಲ್ಪಡುವ ಭಾವನೆಯು ನಿಮ್ಮಲ್ಲಿ ಮೂಡದೇ? ಸರ್ವಶಕ್ತನಾದ ಯೆಹೋವನ ಸಮೀಪಕ್ಕೆ ಸೆಳೆಯಲ್ಪಡುವುದಕ್ಕೆ ನಮಗೆ ಇನ್ನೆಷ್ಟೊ ಹೆಚ್ಚು ಕಾರಣಗಳಿವೆ. ಈ ಅಧ್ಯಾಯದ ಶೀರ್ಷಿಕೆಗೆ ಆಧಾರವಾಗಿರುವ ಸಂಪೂರ್ಣ ವಾಕ್ಯವನ್ನು ಗಮನಕ್ಕೆ ತನ್ನಿರಿ: “ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ.” (ಓರೆ ಅಕ್ಷರಗಳು ನಮ್ಮವು.) (ನಹೂಮ 1:3) ಜನರ ವಿರುದ್ಧವಾಗಿ, ದುಷ್ಟರ ವಿರುದ್ಧವಾಗಿಯೂ ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸಲು ತ್ವರೆಪಡುವುದಿಲ್ಲ. ಆತನು ಸಾತ್ವಿಕನೂ ದಯಾಳುವೂ ಆಗಿರುತ್ತಾನೆ. ಅನೇಕ ಚಿತಾವಣೆಗಳ ಎದುರಲ್ಲೂ ಆತನು “ದೀರ್ಘಶಾಂತನಾಗಿ” ಕಂಡುಬಂದಿರುತ್ತಾನೆ.​—ಕೀರ್ತನೆ 78:​37-41.

21. ಜನರು ತನ್ನ ಚಿತ್ತವನ್ನು ಮಾಡಲೇಬೇಕೆಂದು ಯೆಹೋವನು ಒತ್ತಾಯಪಡಿಸುವುದಿಲ್ಲವೇಕೆ, ಮತ್ತು ಇದು ಆತನ ಕುರಿತು ನಮಗೇನನ್ನು ಕಲಿಸುತ್ತದೆ?

21 ಯೆಹೋವನ ಆತ್ಮಸಂಯಮವನ್ನು ಒಂದು ಭಿನ್ನ ಕೋನದಿಂದ ಪರಿಗಣಿಸಿರಿ. ಅಪರಿಮಿತವಾದ ಶಕ್ತಿಯು ನಿಮಗಿದ್ದಿದ್ದರೆ, ಜನರು ನಿಮ್ಮ ಇಷ್ಟದ ಪ್ರಕಾರ ನಡೆಯುವಂತೆ ಕೆಲವೊಮ್ಮೆ ಒತ್ತಾಯಿಸುವ ಪ್ರೇರಣೆ ನಿಮಗೆ ಬರುತ್ತಿತ್ತೊ ಏನೋ ಎಂದು ನೆನಸುತ್ತೀರೊ? ಯೆಹೋವನಾದರೊ ತನ್ನೆಲ್ಲಾ ಅಪಾರ ಶಕ್ತಿಯೊಂದಿಗೆ, ಜನರು ತನ್ನನ್ನು ಸೇವಿಸಲೇಬೇಕೆಂದು ಒತ್ತಾಯಿಸುವುದಿಲ್ಲ. ನಿತ್ಯಜೀವಕ್ಕೆ ನಡಿಸುವುದಕ್ಕೆ ಇರುವ ಒಂದೇ ಮಾರ್ಗವು ದೇವರ ಸೇವೆಯಾಗಿದ್ದರೂ, ಅಂಥ ಸೇವೆಗಾಗಿ ಯೆಹೋವನು ನಮ್ಮನ್ನು ಬಲವಂತಪಡಿಸುವುದಿಲ್ಲ. ಬದಲಿಗೆ ಆಯ್ಕೆಮಾಡುವ ಸ್ವಾತಂತ್ರ್ಯದೊಂದಿಗೆ ಅವನು ಪ್ರತಿಯೊಬ್ಬ ವ್ಯಕ್ತಿಯನ್ನು ದಯೆಯಿಂದ ಸನ್ಮಾನಿಸುತ್ತಾನೆ. ಕೆಟ್ಟ ಆಯ್ಕೆಗಳ ಫಲಿತಾಂಶಗಳ ಕುರಿತು ಎಚ್ಚರಿಸುತ್ತಾ, ಒಳ್ಳೆಯ ಆಯ್ಕೆಗಳ ಪ್ರತಿಫಲಗಳ ಕುರಿತಾಗಿಯೂ ತಿಳಿಸುತ್ತಾನೆ. ಆದರೆ ಆಯ್ಕೆಯನ್ನು ನಾವೇ ಮಾಡಬೇಕು, ಅದನ್ನು ನಮಗೇ ಬಿಟ್ಟಿರುತ್ತಾನೆ. (ಧರ್ಮೋಪದೇಶಕಾಂಡ 30:​19, 20) ಒತ್ತಾಯದಿಂದ ಮಾಡಲ್ಪಡುವ ಸೇವೆಯಲ್ಲಾಗಲಿ ಅಥವಾ ಆತನ ಭಯಭಕ್ತಿ ಹುಟ್ಟಿಸುವ ಶಕ್ತಿಗೆ ಹೆದರಿ ಮಾಡುವ ಸೇವೆಯಲ್ಲಾಗಲಿ ಯೆಹೋವನಿಗೆ ಆಸಕ್ತಿಯೇ ಇಲ್ಲ. ಯಾರು ಇಷ್ಟಪೂರ್ವಕವಾಗಿ, ಪ್ರೀತಿಯಿಂದಾಗಿ ಆತನನ್ನು ಸೇವಿಸುತ್ತಾರೊ ಅವರಿಗಾಗಿ ಆತನು ಹುಡುಕುತ್ತಾನೆ.​—2 ಕೊರಿಂಥ 9:7.

22, 23. (ಎ) ಇತರರಿಗೆ ಶಕ್ತಿಯನ್ನು ಕೊಡಲು ಯೆಹೋವನು ಸಂತೋಷಿಸುತ್ತಾನೆಂದು ಯಾವುದು ತೋರಿಸುತ್ತದೆ? (ಬಿ) ಮುಂದಿನ ಅಧ್ಯಾಯದಲ್ಲಿ ನಾವೇನನ್ನು ಚರ್ಚಿಸಲಿದ್ದೇವೆ?

22 ಸರ್ವಶಕ್ತನಾದ ದೇವರಿಗೆ ಹೆದರಿ ನಡುಗುತ್ತಾ ಜೀವಿಸುವ ಅಗತ್ಯ ಏಕಿಲ್ಲವೆಂಬುದಕ್ಕೆ ಒಂದು ಕೊನೆಯ ಕಾರಣವನ್ನು ನಾವೀಗ ನೋಡೋಣ. ಅಧಿಕಾರ ಶಕ್ತಿಯಿರುವ ಮಾನವರು ಇತರರೊಂದಿಗೆ ಆ ಶಕ್ತಿಯನ್ನು ಹಂಚಲು ಹೆದರುತ್ತಾರೆ. ಯೆಹೋವನಾದರೊ ತನ್ನ ನಿಷ್ಠಾವಂತ ಆರಾಧಕರಿಗೆ ಶಕ್ತಿಯನ್ನು ಕೊಡಲು ಆನಂದಿಸುತ್ತಾನೆ. ಇತರರಿಗೆ, ಉದಾಹರಣೆಗೆ ಆತನ ಪುತ್ರ ಮುಂತಾದವರಿಗೆ ಗಣನೀಯ ಪ್ರಮಾಣದಲ್ಲಿ ಅಧಿಕಾರವನ್ನು ಆತನು ವಹಿಸಿಕೊಡುತ್ತಾನೆ. (ಮತ್ತಾಯ 28:18) ಇನ್ನೊಂದು ರೀತಿಯಲ್ಲೂ ಯೆಹೋವನು ತನ್ನ ಸೇವಕರಿಗೆ ಶಕ್ತಿಕೊಡುತ್ತಾನೆ. ಬೈಬಲು ವಿವರಿಸುವುದು: “ಯೆಹೋವಾ, ಮಹಿಮಪ್ರತಾಪ ವೈಭವಪರಾಕ್ರಮಪ್ರಭಾವಗಳು ನಿನ್ನವು; ಭೂಮ್ಯಾಕಾಶಗಳಲ್ಲಿರುವದೆಲ್ಲಾ ನಿನ್ನದೇ. . . . ಬಲಪರಾಕ್ರಮಗಳು ನಿನ್ನ ಹಸ್ತದಲ್ಲಿರುತ್ತವೆ; ಎಲ್ಲಾ ದೊಡ್ಡಸ್ತಿಕೆಗೂ ಶಕ್ತಿಗೂ [“ಎಲ್ಲರಿಗೂ ಶಕ್ತಿ ನೀಡಲು,” NW] ನೀನೇ ಮೂಲನು.”​—1 ಪೂರ್ವಕಾಲವೃತ್ತಾಂತ 29:​11, 12.

23 ಹೌದು, ಯೆಹೋವನು ನಿಮಗೆ ಶಕ್ತಿಯನ್ನು ದಯಪಾಲಿಸಲಿಕ್ಕೆ ಸಂತೋಷಪಡುತ್ತಾನೆ. ಯಾರು ಆತನನ್ನು ಸೇವಿಸಬಯಸುತ್ತಾರೊ ಅವರಿಗೆ “ಬಲಾಧಿಕ್ಯ”ವನ್ನು ಸಹ ಆತನು ಕೊಡುತ್ತಾನೆ. (2 ಕೊರಿಂಥ 4:7) ತನ್ನ ಶಕ್ತಿಯನ್ನು ಅಷ್ಟು ದಯೆಯಿಂದ ಮತ್ತು ನೀತಿನಿಷ್ಠೆಯಿಂದ ಉಪಯೋಗಿಸುವ ಈ ದೇವರತ್ತ ನೀವು ಆಕರ್ಷಿತರಾಗುವುದಿಲ್ಲವೇ? ಮುಂದಿನ ಅಧ್ಯಾಯದಲ್ಲಿ, ಯೆಹೋವನು ಸೃಷ್ಟಿಕ್ರಿಯೆಯಲ್ಲಿ ತನ್ನ ಶಕ್ತಿಯನ್ನು ಉಪಯೋಗಿಸುವ ವಿಧವನ್ನು ನಾವು ಚರ್ಚಿಸಲಿರುವೆವು.

^ ಪ್ಯಾರ. 6 “ಸರ್ವಶಕ್ತ” ಎಂದು ತರ್ಜುಮೆಯಾದ ಗ್ರೀಕ್‌ ಪದಕ್ಕೆ ಅಕ್ಷರಶಃ “ಸರ್ವರನ್ನು ಆಳುವಾತ; ಸರ್ವಶಕ್ತಿಯುಳ್ಳಾತ” ಎಂಬರ್ಥವಿದೆ.

^ ಪ್ಯಾರ. 15 ‘ಬಿರುಗಾಳಿ . . . ಭೂಕಂಪ . . . ಸಿಡಿಲುಂಟಾಯಿತು . . . ಅದರಲ್ಲಿ ಯೆಹೋವನಿರಲಿಲ್ಲ’ ಎಂದು ಬೈಬಲು ಹೇಳುತ್ತದೆ. ಪೌರಾಣಿಕ ನಿಸರ್ಗ ದೇವತೆಗಳ ಆರಾಧಕರಂತೆ, ಯೆಹೋವನ ಸೇವಕರಾದರೊ ಆತನನ್ನು ನಿಸರ್ಗದ ಶಕ್ತಿಗಳಲ್ಲಿ ಹುಡುಕುವುದಿಲ್ಲ. ಆತನು, ತಾನು ನಿರ್ಮಿಸಿದ ಯಾವುದೇ ವಸ್ತುವಿನೊಳಗೆ ಬಂಧಿಸಲಾಗದಷ್ಟು ಅತ್ಯಂತ ಮಹೋನ್ನತನಾಗಿದ್ದಾನೆ.​—1 ಅರಸುಗಳು 8:27.