ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 7

ಸಂರಕ್ಷಣಾತ್ಮಕ ಶಕ್ತಿ​—“ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ”

ಸಂರಕ್ಷಣಾತ್ಮಕ ಶಕ್ತಿ​—“ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ”

1, 2. ಇಸ್ರಾಯೇಲ್ಯರು ಸಾ.ಶ.ಪೂ. 1513ರಲ್ಲಿ ಸೀನಾಯಿ ಪ್ರಾಂತವನ್ನು ಪ್ರವೇಶಿಸುತ್ತಿರುವಾಗ ಯಾವ ಗಂಡಾಂತರವು ಅವರಿಗಾಗಿ ಕಾದಿತ್ತು, ಮತ್ತು ಯೆಹೋವನು ಅವರಿಗೆ ಹೇಗೆ ಪುನರಾಶ್ವಾಸನೆಯನ್ನು ಕೊಟ್ಟನು?

ಇಸ್ರಾಯೇಲ್ಯರು ಸಾ.ಶ.ಪೂ. 1513ರ ಆರಂಭದಲ್ಲಿ ಸೀನಾಯಿ ಪ್ರಾಂತವನ್ನು ಪ್ರವೇಶಿಸಿದಾಗ ಗಂಡಾಂತರವು ಅವರನ್ನು ಕಾದಿತ್ತು. ‘ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾರಣ್ಯವನ್ನು’ ಹಾದುಹೋಗುವ ಒಂದು ಭಯಪ್ರೇರಕ ಪ್ರಯಾಣವು ಅವರ ಮುಂದಿತ್ತು. (ಧರ್ಮೋಪದೇಶಕಾಂಡ 8:15) ಶತ್ರು ರಾಷ್ಟ್ರಗಳ ಆಕ್ರಮಣದ ಬೆದರಿಕೆಯೂ ಅವರ ಎದುರಿಗಿತ್ತು. ಯೆಹೋವನು ತನ್ನ ಜನರನ್ನು ಈ ಪರಿಸ್ಥಿತಿಯೊಳಕ್ಕೆ ಕರೆತಂದಿದ್ದನು. ಅವರ ದೇವರೋಪಾದಿ, ಈಗ ಅವರನ್ನು ರಕ್ಷಿಸಿ ಕಾಪಾಡಲು ಆತನು ಶಕ್ತನಾಗಿರುವನೋ?

2 ಯೆಹೋವನ ಮಾತುಗಳು ಅತ್ಯಂತ ಆಶ್ವಾಸನದಾಯಕವಾಗಿದ್ದವು: “ನಾನು ಐಗುಪ್ತ್ಯರಿಗೆ ಏನು ಮಾಡಿದೆನೋ, ಹದ್ದು ತನ್ನ ಮರಿಗಳನ್ನು ರೆಕ್ಕೆಗಳ ಮೇಲೆ ಹೊತ್ತುಕೊಳ್ಳುವಂತೆ ನಾನು ನಿಮ್ಮನ್ನು ಹೊತ್ತುಕೊಂಡು ನನ್ನ ಸ್ಥಳಕ್ಕೆ ಹೇಗೆ ಸೇರಿಸಿದೆನೋ ಇದನ್ನೆಲ್ಲಾ ನೀವು ನೋಡಿದ್ದೀರಷ್ಟೆ.” (ವಿಮೋಚನಕಾಂಡ 19:4) ತನ್ನ ಜನರನ್ನು ಐಗುಪ್ತ್ಯರಿಂದ ಬಿಡುಗಡೆಮಾಡಿ, ಹದ್ದುಗಳನ್ನು ಉಪಯೋಗಿಸಿಯೋ ಎಂಬಂತೆ ಸುರಕ್ಷಿತವಾದ ಸ್ಥಳಕ್ಕೆ ಒಯ್ದದ್ದನ್ನು ಯೆಹೋವನು ಅವರಿಗೆ ಜ್ಞಾಪಕಹುಟ್ಟಿಸುತ್ತಾನೆ. ಆದರೆ ‘ಹದ್ದಿನ ರೆಕ್ಕೆಗಳು’ ದೈವಿಕ ಸುರಕ್ಷೆಯನ್ನು ಏಕೆ ತಕ್ಕದ್ದಾಗಿ ಚಿತ್ರಿಸುತ್ತವೆಂಬುದಕ್ಕೆ ಬೇರೆ ಕಾರಣಗಳಿವೆ.

3. ‘ಹದ್ದಿನ ರೆಕ್ಕೆಗಳು’ ದೈವಿಕ ಸಂರಕ್ಷಣೆಯನ್ನು ತಕ್ಕದ್ದಾಗಿ ಚಿತ್ರಿಸುತ್ತವೆ ಏಕೆ?

3 ಹದ್ದು ತನ್ನ ಅಗಲವಾದ, ಬಲಾಢ್ಯವಾದ ರೆಕ್ಕೆಗಳನ್ನು ಗಗನದಲ್ಲಿ ಬಹಳ ಎತ್ತರಕ್ಕೆ ಹಾರಲು ಮಾತ್ರವೇ ಅಲ್ಲ ಬೇರೆ ಕಾರಣಗಳಿಗಾಗಿಯೂ ಉಪಯೋಗಿಸುತ್ತದೆ. ಹಗಲುಹೊತ್ತಿನ ಉರಿಬಿಸಿಲಿನ ಸಮಯದಲ್ಲಿ, ತಾಯಿ ಹದ್ದು ಏಳಡಿಗಳಿಗಿಂತಲೂ ಹೆಚ್ಚು ಅಗಲವಿರಬಹುದಾದ ತನ್ನ ರೆಕ್ಕೆಗಳನ್ನು ಕಮಾನಿನಾಕಾರದಲ್ಲಿ, ರಕ್ಷಣಾತ್ಮಕ ಕೊಡೆಯಂತೆ ಚಾಚಿ, ಗೂಡುಬಿಟ್ಟು ಹೊರಬರಲಾಗದ ತನ್ನ ಎಳೆಯ ಮರಿಗಳನ್ನು ಬಿಸಿಲಿನ ಬೇಗೆಯಿಂದ ಕಾಪಾಡುತ್ತದೆ. ಬೇರೆ ಸಮಯಗಳಲ್ಲಿ ಅದು ತನ್ನ ರೆಕ್ಕೆಗಳನ್ನು ತನ್ನ ಮರಿಗಳ ಸುತ್ತಲೂ ಬಳಸಿಕೊಂಡು ಅವುಗಳನ್ನು ಶೀತಲ ಗಾಳಿಯಿಂದ ರಕ್ಷಿಸುತ್ತದೆ. ಹದ್ದು ತನ್ನ ಮರಿಗಳನ್ನು ಹೇಗೆ ಸುರಕ್ಷಿತವಾಗಿಡುತ್ತದೊ ಹಾಗೆಯೆ ಯೆಹೋವನು ಒಂದು ನವಜನಿತ ಜನಾಂಗವಾಗಿದ್ದ ಇಸ್ರಾಯೇಲನ್ನು ಕಾಪಾಡಿ ರಕ್ಷಿಸಿದ್ದನು. ಈಗ ಈ ಮಹಾರಣ್ಯದಲ್ಲಿ, ಆತನ ಮಹಾ ಸಾಂಕೇತಿಕ ರೆಕ್ಕೆಗಳ ನೆರಳಿನಡಿಯಲ್ಲಿ, ಆತನ ಜನರು ಎಷ್ಟರ ತನಕ ನಂಬಿಗಸ್ತರಾಗಿ ಉಳಿಯುವರೊ ಅಷ್ಟರ ತನಕ ಆಶ್ರಯವನ್ನು ಪಡೆಯುತ್ತಾ ಮುಂದುವರಿಯಲಿದ್ದರು. (ಧರ್ಮೋಪದೇಶಕಾಂಡ 32:9-11; ಕೀರ್ತನೆ 36:7) ಆದರೆ ಇಂದು ನಾವು ದೇವರಿಂದ ಸಂರಕ್ಷಣೆಯನ್ನು ನಿರೀಕ್ಷಿಸಬಲ್ಲೆವೊ?

ದೈವಿಕ ಸಂರಕ್ಷಣೆಯ ವಾಗ್ದಾನ

4, 5. ದೇವರ ಸಂರಕ್ಷಣೆಯ ವಾಗ್ದಾನದಲ್ಲಿ ನಮಗೆ ಸಂಪೂರ್ಣ ಭರವಸವಿರಸಾಧ್ಯವಿದೆ ಏಕೆ?

4 ದೇವರಾದ ಯೆಹೋವನು ತನ್ನ ಸೇವಕರನ್ನು ರಕ್ಷಿಸಲು ಪೂರ್ಣ ಶಕ್ತನಾಗಿದ್ದಾನೆಂಬುದು ಖಂಡಿತ. ಆತನು “ಸರ್ವಶಕ್ತನಾದ ದೇವರು,” ಮತ್ತು ಈ ಬಿರುದು ಆತನಿಗೆ ಅಪರಿಮಿತ ಶಕ್ತಿಯಿದೆಯೆಂಬುದನ್ನು ಸೂಚಿಸುತ್ತದೆ. (ಆದಿಕಾಂಡ 17:1) ಉಬ್ಬರವಿಳಿತವನ್ನು ಹೇಗೆ ತಡೆಗಟ್ಟಲಸಾಧ್ಯವೊ ಹಾಗೆಯೇ ಯೆಹೋವನ ಶಕ್ತಿಯ ಪ್ರಯೋಗಕ್ಕೆ ಅಡ್ಡಬರಲು ಸಾಧ್ಯವೇ ಇಲ್ಲ. ಆತನ ಚಿತ್ತವು ಮಾರ್ಗದರ್ಶಿಸುವ ಯಾವುದೇ ವಿಷಯವನ್ನು ಮಾಡಲು ಆತನು ಶಕ್ತನಾಗಿರುವುದರಿಂದ, ನಾವು ಹೀಗೆ ಕೇಳಬಹುದು, ‘ತನ್ನ ಶಕ್ತಿಯನ್ನು ಪ್ರಯೋಗಿಸಿ ತನ್ನ ಜನರನ್ನು ಸಂರಕ್ಷಿಸುವುದು ಯೆಹೋವನ ಚಿತ್ತವಾಗಿದೆಯೇ?’

5 ಒಂದೇ ಮಾತಿನಲ್ಲಿ ಉತ್ತರಕೊಡುವುದಾದರೆ, ಹೌದು! ತನ್ನ ಜನರನ್ನು ತಾನು ಸಂರಕ್ಷಿಸುವೆನು ಎಂಬ ಆಶ್ವಾಸನೆಯನ್ನು ಯೆಹೋವನು ನಮಗೆ ಕೊಡುತ್ತಾನೆ. “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು” ಎಂದು ಕೀರ್ತನೆ 46:1 ಹೇಳುತ್ತದೆ. ದೇವರು “ಸುಳ್ಳಾಡ”ಲಾರನಾದ್ದರಿಂದ, ಸಂರಕ್ಷಣೆಯನ್ನು ಕೊಡುವೆನೆಂಬ ಆತನ ವಾಗ್ದಾನದಲ್ಲಿ ನಾವು ಸಂಪೂರ್ಣ ಭರವಸವನ್ನು ಇಡಬಲ್ಲೆವು. (ತೀತ 1:1) ತನ್ನ ಸಂರಕ್ಷಣಾತ್ಮಕ ಪರಿಪಾಲನೆಯನ್ನು ವರ್ಣಿಸಲು ಯೆಹೋವನು ಉಪಯೋಗಿಸುವ ಸುಸ್ಪಷ್ಟ ದೃಷ್ಟಾಂತಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.

6, 7. (ಎ) ಬೈಬಲ್‌ ಸಮಯಗಳಲ್ಲಿ ಒಬ್ಬ ಕುರುಬನು ತನ್ನ ಕುರಿಗಳಿಗೆ ಯಾವ ಸಂರಕ್ಷಣೆಯನ್ನು ಒದಗಿಸುತ್ತಿದ್ದನು? (ಬಿ) ತನ್ನ ಕುರಿಗಳನ್ನು ಕಾಪಾಡಲು ಮತ್ತು ಪರಾಮರಿಕೆ ಮಾಡಲು ಯೆಹೋವನಿಗಿರುವ ಹೃತ್ಪೂರ್ವಕ ಅಪೇಕ್ಷೆಯನ್ನು ಬೈಬಲು ಹೇಗೆ ಚಿತ್ರಿಸುತ್ತದೆ?

6 ಯೆಹೋವನು ಒಬ್ಬ ಕುರುಬನು, ಮತ್ತು “ನಾವು . . . ಆತನ ಪ್ರಜೆಯೂ ಆತನು ಪಾಲಿಸುವ ಹಿಂಡೂ ಆಗಿದ್ದೇವೆ.” (ಕೀರ್ತನೆ 23:1; 100:3) ಸಾಧುಪ್ರಾಣಿಯಾದ ಕುರಿಗಳಷ್ಟು ನಿಸ್ಸಹಾಯಕ ಪ್ರಾಣಿಗಳು ಕೊಂಚವೇ. ಬೈಬಲ್‌ ಸಮಯಗಳಲ್ಲಿ ಒಬ್ಬ ಕುರುಬನು ತನ್ನ ಕುರಿಗಳನ್ನು ಸಿಂಹಗಳು, ತೋಳಗಳು, ಮತ್ತು ಕರಡಿಗಳಿಂದ ಹಾಗೂ ಕಳ್ಳಕಾಕರಿಂದ ರಕ್ಷಿಸಲು ಧೈರ್ಯಶಾಲಿಯಾಗಿರಬೇಕಿತ್ತು. (1 ಸಮುವೇಲ 17:34, 35; ಯೋಹಾನ 10:12, 13) ಆದರೆ ಕುರಿಗಳನ್ನು ಸಂರಕ್ಷಿಸುವಾಗ ಕೆಲವೊಮ್ಮೆ ಕೋಮಲತೆಯನ್ನೂ ತೋರಿಸಬೇಕಾದ ಸಮಯಗಳಿರುತ್ತಿದ್ದವು. ಕುರಿಯೊಂದು ಮಂದೆಯಿಂದ ದೂರದಲ್ಲಿ ಮರಿಹಾಕಿದಲ್ಲಿ, ಆ ಸಹಾಯಶೂನ್ಯ ತಾಯಿಯ ನಿಸ್ಸಹಾಯಕ ಕ್ಷಣಗಳಲ್ಲಿ ಚಿಂತಿತನಾದ ಕುರುಬನು ಅದಕ್ಕೆ ಕಾವಲಾಗಿದ್ದು, ಅನಂತರ ಅದರ ನಿತ್ರಾಣಿ ಮರಿಯನ್ನೆತ್ತಿಕೊಂಡು ಮಂದೆಗೆ ಒಯ್ಯುತ್ತಿದ್ದನು.

‘ಆತನು ಮರಿಗಳನ್ನು ಎದೆಗೆತ್ತಿಕೊಳ್ಳುವನು’

7 ತನ್ನನ್ನು ಒಬ್ಬ ಕುರುಬನಿಗೆ ಹೋಲಿಸಿಕೊಳ್ಳುವ ಮೂಲಕ, ನಮ್ಮನ್ನು ರಕ್ಷಿಸುವುದಕ್ಕೆ ಆತನಿಗಿರುವ ಹೃತ್ಪೂರ್ವಕ ಅಪೇಕ್ಷೆಯ ಆಶ್ವಾಸನೆಯನ್ನು ಯೆಹೋವನು ನಮಗೆ ಕೊಡುತ್ತಾನೆ. (ಯೆಹೆಜ್ಕೇಲ 34:11-16) ಈ ಪುಸ್ತಕದ 2ನೆಯ ಅಧ್ಯಾಯದಲ್ಲಿ ಚರ್ಚಿಸಲ್ಪಟ್ಟಿರುವ ಯೆಶಾಯ 40:11 ರಲ್ಲಿ ತಿಳಿಸಲಾದ ಯೆಹೋವನ ವರ್ಣನೆಯನ್ನು ನೆನಪಿಗೆ ತನ್ನಿರಿ: “ಆತನು ಕುರುಬನಂತೆ ತನ್ನ ಮಂದೆಯನ್ನು ಮೇಯಿಸುವನು, ಮರಿಗಳನ್ನು ಕೈಯಿಂದ ಕೂಡಿಸಿ ಎದೆಗೆತ್ತಿಕೊಳ್ಳುವನು.” ಚಿಕ್ಕ ಕುರಿಮರಿಯು ಕುರುಬನ “ಎದೆಗೆ,” ಅಂದರೆ ಅವನ ಮೇಲಂಗಿಯ ಮಡಿಕೆಗಳ ವರೆಗೆ ತಲಪುವುದಾದರೂ ಹೇಗೆ? ಒಂದು ಕುರಿಮರಿಯು ಕುರುಬನ ಬಳಿಸಾರಿ, ಅವನ ಕಾಲನ್ನು ಮೆತ್ತಗೆ ತಿವಿಯಲೂ ಬಹುದು. ಆದರೆ ಮುಂದೆ ಬಾಗಿ, ಅದನ್ನು ಕೈಗಳಲ್ಲೆತ್ತಿ, ತನ್ನ ಎದೆಯ ಬಳಿ ಭದ್ರವಾಗಿಯೂ ಮೃದುವಾಗಿಯೂ ತಬ್ಬಿಹಿಡಿಯಬೇಕಾದವನು ಕುರುಬನೇ ತಾನೇ? ನಮ್ಮ ಮಹಾ ಕುರುಬನಿಗೆ ನಮ್ಮನ್ನು ಕಾಪಾಡಿ ಸಂರಕ್ಷಿಸಲು ಇರುವ ಸಿದ್ಧಮನಸ್ಸಿನ ಎಂಥ ಕೋಮಲವಾದ ಚಿತ್ರಣವಿದು!

8. (ಎ) ದೇವರ ಸಂರಕ್ಷಣಾ ವಾಗ್ದಾನವು ಯಾರಿಗೆ ಮಾತ್ರ ನೀಡಲ್ಪಡುತ್ತದೆ, ಮತ್ತು ಜ್ಞಾನೋಕ್ತಿ 18:10 ರಲ್ಲಿ ಇದು ಹೇಗೆ ಸೂಚಿಸಲ್ಪಟ್ಟಿದೆ? (ಬಿ) ದೇವರ ನಾಮದಲ್ಲಿ ಆಶ್ರಯವನ್ನು ಕಂಡುಕೊಳ್ಳುವುದರಲ್ಲಿ ಏನು ಒಳಗೂಡಿರುತ್ತದೆ?

8 ಆದರೆ ದೇವರ ಸಂರಕ್ಷಣೆಯ ವಾಗ್ದಾನದೊಂದಿಗೆ ಒಂದು ಷರತ್ತೂ ಇದೆ. ಯಾರು ಆತನ ಸಮೀಪಕ್ಕೆ ಬರುತ್ತಾರೋ ಅವರು ಮಾತ್ರ ಆ ಸಂರಕ್ಷಣೆಯನ್ನು ಅನುಭವಿಸುವರು. ಜ್ಞಾನೋಕ್ತಿ 18:10 ಹೇಳುವುದು: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” ಬೈಬಲ್‌ ಸಮಯಗಳಲ್ಲಿ, ಕೆಲವೊಮ್ಮೆ ಅರಣ್ಯಗಳಲ್ಲಿ ಬುರುಜುಗಳು ಸುರಕ್ಷೆಯ ಆಶ್ರಯಸ್ಥಾನಗಳಾಗಿ ಕಟ್ಟಲ್ಪಡುತ್ತಿದ್ದವು. ಆದರೆ ಅಂಥ ಒಂದು ಬುರುಜಿಗೆ ಓಡಿಹೋಗಿ ಸುರಕ್ಷೆಯನ್ನು ಪಡೆದುಕೊಳ್ಳುವ ಜವಾಬ್ದಾರಿಯು ಅಪಾಯದಲ್ಲಿದ್ದವನದ್ದಾಗಿತ್ತು. ದೇವರ ನಾಮದಲ್ಲಿ ಆಶ್ರಯವನ್ನು ಕಂಡುಕೊಳ್ಳುವ ವಿಷಯದಲ್ಲೂ ಇದೇ ರೀತಿ ಅದೆ. ಇದರಲ್ಲಿ ದೇವರ ನಾಮವನ್ನು ಪುನರುಚ್ಚರಿಸುತ್ತಾ ಇರುವುದಕ್ಕಿಂತ ಹೆಚ್ಚಿನದ್ದು ಸೇರಿದೆ; ದೈವಿಕ ನಾಮವೇನೂ ಮಂತ್ರರಕ್ಷೆಯಲ್ಲ. ಬದಲಿಗೆ, ಆ ನಾಮಧಾರಿಯನ್ನು ತಿಳಿದುಕೊಳ್ಳುವ ಮತ್ತು ಆತನಲ್ಲಿ ಭರವಸೆಯಿಡುವ ಹಾಗೂ ಆತನ ನೀತಿಯುತ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಅಗತ್ಯವಿದೆ. ನಾವು ನಂಬಿಕೆಯಲ್ಲಿ ಆತನೆಡೆಗೆ ತಿರುಗುವುದಾದರೆ, ಆತನು ನಮಗೆ ಸಂರಕ್ಷಣೆಯ ಬುರುಜಾಗಿ ಇರುವನೆಂಬ ಆಶ್ವಾಸನೆಯನ್ನೀಯಲು ಯೆಹೋವನೆಷ್ಟು ದಯಾಪರನು!

“ನಾವು ಸೇವಿಸುವ ದೇವರು . . . ನಮ್ಮನ್ನು ಬಿಡಿಸಬಲ್ಲನು”

9. ಯೆಹೋವನು ಸಂರಕ್ಷಣೆಯನ್ನು ಕೇವಲ ವಾಗ್ದಾನಿಸುವುದಕ್ಕಿಂತಲೂ ಹೆಚ್ಚನ್ನು ಮಾಡಿರುವುದು ಹೇಗೆ?

9 ದೇವರು ಸಂರಕ್ಷಣೆಯನ್ನು ಕೇವಲ ವಾಗ್ದಾನಿಸಿದ್ದೇ ಅಲ್ಲ, ಹೆಚ್ಚನ್ನು ಮಾಡಿರುತ್ತಾನೆ. ತನ್ನ ಜನರನ್ನು ಸಂರಕ್ಷಿಸಬಲ್ಲನೆಂದು ಬೈಬಲ್‌ ಸಮಯಗಳಲ್ಲಿ ಆತನು ಅದ್ಭುತ ರೀತಿಗಳಲ್ಲಿ ತೋರಿಸಿಕೊಟ್ಟನು. ಇಸ್ರಾಯೇಲಿನ ಇತಿಹಾಸದಲ್ಲಿ, ಅನೇಕ ಸಲ ಯೆಹೋವನ ಬಲಿಷ್ಠ “ಕೈ” ಶತ್ರುಗಳನ್ನು ತಡೆಗಟ್ಟಿ ದೂರವಿಟ್ಟಿತ್ತು. (ವಿಮೋಚನಕಾಂಡ 7:​4, 5) ಆದರೆ ಯೆಹೋವನು ತನ್ನ ಸಂರಕ್ಷಣಾತ್ಮಕ ಶಕ್ತಿಯನ್ನು ಒಬ್ಬೊಬ್ಬ ವ್ಯಕ್ತಿಯ ಪರವಾಗಿಯೂ ಉಪಯೋಗಿಸಿದ್ದಾನೆ.

10, 11. ಯೆಹೋವನು ಒಬ್ಬೊಬ್ಬ ವ್ಯಕ್ತಿಯ ಪರವಾಗಿಯೂ ತನ್ನ ಸಂರಕ್ಷಣಾತ್ಮಕ ಶಕ್ತಿಯನ್ನು ಉಪಯೋಗಿಸಿದ ವಿಧವನ್ನು ಯಾವ ಬೈಬಲ್‌ ಉದಾಹರಣೆಗಳು ತೋರಿಸುತ್ತವೆ?

10 ಮೂವರು ಯೌವನಸ್ಥ ಇಬ್ರಿಯರಾದ ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಎಂಬುವರು ರಾಜ ನೆಬೂಕದ್ನೆಚ್ಚರನು ನಿಲ್ಲಿಸಿದಂಥ ಬಂಗಾರದ ಪ್ರತಿಮೆಗೆ ಅಡ್ಡಬೀಳಲು ನಿರಾಕರಿಸಿದಾಗ, ಕ್ರೋಧಾವಿಷ್ಟನಾದ ಅರಸನು ಅವರನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಎಸೆದುಬಿಡುವ ಬೆದರಿಕೆಯನ್ನು ಹಾಕಿದನು. “ನಿಮ್ಮನ್ನು ನನ್ನ ಕೈಯೊಳಗಿಂದ ಬಿಡಿಸಬಲ್ಲ ದೇವರು ಯಾರು”? ಎಂದು ಹಂಗಿಸಿದನು, ಆ ಕಾಲದಲ್ಲಿ ಭೂಮಿಯಲ್ಲಿದ್ದ ಅತಿ ಬಲಾಢ್ಯ ಸಾಮ್ರಾಟನಾದ ನೆಬೂಕದ್ನೆಚ್ಚರನು. (ದಾನಿಯೇಲ 3:15) ಆ ಮೂವರು ಯುವಕರಿಗಾದರೊ ತಮ್ಮ ದೇವರು ತಮ್ಮನ್ನು ರಕ್ಷಿಸಲು ಶಕ್ತನೆಂಬ ಪೂರ್ಣ ಭರವಸೆಯಿತ್ತು. ಆದರೆ ಆತನು ಆ ಸಂದರ್ಭದಲ್ಲಿ ಹಾಗೆ ಮಾಡಿಯೇ ಮಾಡುತ್ತಾನೆ ಎಂದು ಅವರು ಎಣಿಸಲಿಲ್ಲ. ಆದುದರಿಂದ ಅವರು ಉತ್ತರಕೊಟ್ಟದ್ದು: “ನಾವು ಸೇವಿಸುವ ದೇವರಿಗೆ ಚಿತ್ತವಿದ್ದರೆ . . . ನಮ್ಮನ್ನು ಬಿಡಿಸಬಲ್ಲನು.” (ದಾನಿಯೇಲ 3:17) ಮತ್ತು ನಿಜವಾಗಿಯೂ, ಆ ಬೆಂಕಿಯ ಆವಿಗೆಯು ನಿತ್ಯಕ್ಕಿಂತ ಏಳರಷ್ಟು ಹೆಚ್ಚು ಪಟ್ಟು ಬಿಸಿಮಾಡಿ ಉರಿಸಲ್ಪಟ್ಟರೂ, ಅವರ ಸರ್ವಶಕ್ತನಾದ ದೇವರಿಗೆ ಅದು ಕಿಂಚಿತ್ತೂ ಸವಾಲಾಗಿರಲಿಲ್ಲ. ಆತನು ಅವರನ್ನು ಕಾಪಾಡಿ ಉಳಿಸಿದನು, ಮತ್ತು ಆ ಅರಸನು ಹೀಗೆ ಅಂಗೀಕರಿಸಲೇಬೇಕಾಯಿತು: “ಹೀಗೆ ಉದ್ಧರಿಸಲು ಸಮರ್ಥನಾದ ಇನ್ನಾವ ದೇವರೂ ಇಲ್ಲವಲ್ಲಾ.”​—ದಾನಿಯೇಲ 3:29.

11 ಯೆಹೋವನು ತನ್ನ ಒಬ್ಬನೇ ಮಗನ ಜೀವವನ್ನು ಯೆಹೂದಿ ಕನ್ನಿಕೆಯಾದ ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದಾಗಲೂ, ತನ್ನ ಸಂರಕ್ಷಣಾತ್ಮಕ ಶಕ್ತಿಯ ನಿಜವಾಗಿಯೂ ಗಮನಾರ್ಹವಾದ ಒಂದು ಪ್ರದರ್ಶನವನ್ನು ನೀಡಿದನು. “ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ” ಎಂದು ದೇವದೂತನೊಬ್ಬನು ಮರಿಯಳಿಗೆ ಹೇಳಿದನು. ಆ ದೂತನು ವಿವರಿಸಿದ್ದು: “ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು.” (ಲೂಕ 1:31, 35) ಅಂಥ ಅಸಹಾಯಕ ಪರಿಸ್ಥಿತಿಯಲ್ಲಿ ದೇವಕುಮಾರನು ಹಿಂದೆಂದೂ ಇರಲಿಲ್ಲವೆಂಬಂತೆ ತೋರಿಬಂತು. ಆ ಮಾನವ ಮಾತೆಯ ಪಾಪ ಮತ್ತು ಅಪರಿಪೂರ್ಣತೆಯ ಕಳಂಕವು ಆ ಭ್ರೂಣಕ್ಕೆ ತಟ್ಟುವುದೊ? ದೇವಕುಮಾರನು ಹುಟ್ಟುವ ಮುಂಚೆಯೇ ಸೈತಾನನು ಅವನಿಗೆ ಕೇಡುಮಾಡಲು ಇಲ್ಲವೆ ಅವನನ್ನು ಕೊಂದುಹಾಕಲು ಶಕ್ತನಾಗಿರುತ್ತಿದ್ದನೊ? ಅಶಕ್ಯ! ಯೆಹೋವನು ಮರಿಯಳ ಸುತ್ತಲೂ ಕಾರ್ಯತಃ ಒಂದು ಸಂರಕ್ಷಣಾತ್ಮಕ ಗೋಡೆಯನ್ನು ರಚಿಸಿದ್ದನಾದುದರಿಂದ ಯಾವ ಅಪರಿಪೂರ್ಣತೆಯಾಗಲಿ, ಹಾನಿಕಾರಕ ಶಕ್ತಿಯಾಗಲಿ, ಮಾನವ ಅಥವಾ ಪೈಶಾಚಿಕ ಹಂತಕರಾಗಲಿ ಆ ಬೆಳೆಯುತ್ತಿರುವ ಭ್ರೂಣಕ್ಕೆ ಹಾನಿಮಾಡಲು ಸಾಧ್ಯವಿರಲಿಲ್ಲ; ಗರ್ಭಧಾರಣೆಯ ಕ್ಷಣದಿಂದಲೇ ಅದು ಕಾಪಾಡಲ್ಪಟ್ಟಿತ್ತು. ಯೆಹೋವನು ಯೇಸುವನ್ನು ಅವನ ಯೌವನದಲ್ಲಿ ಸಹ ಕಾಪಾಡುತ್ತಾ ಬಂದನು. (ಮತ್ತಾಯ 2:1-15) ದೇವರ ಕ್ಲುಪ್ತಕಾಲವು ಬರುವ ತನಕ, ಆತನ ಪ್ರಿಯ ಕುಮಾರನ ಮೇಲೆ ಯಾವ ಆಕ್ರಮಣಕ್ಕೂ ಎಡೆಯಿರಲಿಲ್ಲ.

12. ಬೈಬಲ್‌ ಸಮಯಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಯೆಹೋವನು ಅದ್ಭುತಕರವಾಗಿ ಕಾಪಾಡಿದ್ದೇಕೆ?

12 ನಿರ್ದಿಷ್ಟ ವ್ಯಕ್ತಿಗಳನ್ನು ಅಷ್ಟು ಅದ್ಭುತ ರೀತಿಯಲ್ಲಿ ಯೆಹೋವನು ಸಂರಕ್ಷಿಸಿದ್ದು ಯಾತಕ್ಕಾಗಿ? ಅನೇಕ ಸಂದರ್ಭಗಳಲ್ಲಿ ಯೆಹೋವನು ವ್ಯಕ್ತಿಗಳನ್ನು ಸಂರಕ್ಷಿಸಿದ್ದು ಹೆಚ್ಚು ಮಹತ್ತಾದ ಕಾರಣಕ್ಕಾಗಿ, ಹೌದು, ಆತನ ಉದ್ದೇಶದ ನೆರವೇರಿಕೆಗಾಗಿಯೇ. ಉದಾಹರಣೆಗೆ, ಕಟ್ಟಕಡೆಗೆ ಸಕಲ ಮಾನವಕುಲಕ್ಕೆ ಪ್ರಯೋಜನವನ್ನು ತರಲಿರುವ ದೇವರ ಉದ್ದೇಶದ ನೆರವೇರಿಕೆಗೋಸ್ಕರ, ಕೂಸಾದ ಯೇಸು ಬದುಕಿ ಉಳಿಯುವುದು ಅತ್ಯಾವಶ್ಯಕವಾಗಿತ್ತು. ಅನೇಕ ಸಂರಕ್ಷಣಾತ್ಮಕ ಶಕ್ತಿಪ್ರದರ್ಶನಗಳ ದಾಖಲೆಯು ಪ್ರೇರಿತ ಶಾಸ್ತ್ರಗಳ ಭಾಗವಾಗಿದ್ದು, “ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ” ಬರೆಯಲ್ಪಟ್ಟಿತು. (ರೋಮಾಪುರ 15:4) ಹೌದು, ಈ ಉದಾಹರಣೆಗಳು ನಮ್ಮ ಸರ್ವಶಕ್ತನಾದ ದೇವರಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುತ್ತವೆ. ಆದರೆ ಇಂದು ನಾವು ದೇವರಿಂದ ಯಾವ ಸಂರಕ್ಷಣೆಯನ್ನು ನಿರೀಕ್ಷಿಸಬಲ್ಲೆವು?

ದೈವಿಕ ಸಂರಕ್ಷಣೆಯ ಅರ್ಥವೇನಲ್ಲ

13. ನಮಗೋಸ್ಕರ ಅದ್ಭುತಕೃತ್ಯಗಳನ್ನು ಮಾಡಲು ಯೆಹೋವನು ಬದ್ಧನಾಗಿದ್ದಾನೊ? ವಿವರಿಸಿರಿ.

13 ದೈವಿಕ ಸಂರಕ್ಷಣೆಯ ವಾಗ್ದಾನದ ಅರ್ಥವು, ದೇವರು ನಮ್ಮ ಪರವಾಗಿ ಅದ್ಭುತಕೃತ್ಯಗಳನ್ನು ನಡಿಸಲು ಬದ್ಧನಾಗಿರುತ್ತಾನೆಂದು ಅಲ್ಲ. ಈ ಹಳೆಯ ವ್ಯವಸ್ಥೆಯಲ್ಲಿ ಒಂದು ಸಮಸ್ಯೆರಹಿತ ಜೀವನದ ಖಾತರಿಯನ್ನು ನಮ್ಮ ದೇವರು ನಮಗೆ ಕೊಡುವುದಿಲ್ಲ. ಯೆಹೋವನ ಅನೇಕ ನಂಬಿಗಸ್ತ ಸೇವಕರು ಬಡತನ, ಯುದ್ಧ, ಕಾಯಿಲೆ, ಮತ್ತು ಮರಣವೇ ಮುಂತಾದ ತೀವ್ರ ಕಷ್ಟಗಳನ್ನು ಎದುರಿಸುತ್ತಾರೆ. ಅವರ ನಂಬಿಕೆಗೋಸ್ಕರ ಅವರು ಕೊಲ್ಲಲ್ಪಡಲೂ ಬಹುದೆಂದು ಯೇಸು ತನ್ನ ಶಿಷ್ಯರಿಗೆ ಸ್ಪಷ್ಟವಾಗಿ ತಿಳಿಸಿದ್ದನು. ಆದುದರಿಂದಲೇ ಕಡೇ ತನಕ ತಾಳಿಕೊಳ್ಳುವ ಅಗತ್ಯವನ್ನು ಯೇಸು ಒತ್ತಿಹೇಳಿದನು. (ಮತ್ತಾಯ 24:9, 13) ಎಲ್ಲಾ ಸಂದರ್ಭಗಳಲ್ಲಿ ಅದ್ಭುತಕರವಾಗಿ ಪಾರುಗೊಳಿಸಲು ಯೆಹೋವನು ತನ್ನ ಶಕ್ತಿಯನ್ನು ಉಪಯೋಗಿಸಿದರೆ, ಯೆಹೋವನನ್ನು ಮೂದಲಿಸಲು ಮತ್ತು ದೇವರಿಗಾಗಿರುವ ನಮ್ಮ ಭಕ್ತಿಯು ಎಷ್ಟು ಯಥಾರ್ಥವೆಂಬುದನ್ನು ಪ್ರಶ್ನಿಸಲು ಸೈತಾನನಿಗೆ ಆಧಾರ ಸಿಕ್ಕೀತು.​—ಯೋಬ 1:9, 10.

14. ಯೆಹೋವನು ತನ್ನೆಲ್ಲಾ ಸೇವಕರನ್ನು ಯಾವಾಗಲೂ ಒಂದೇ ವಿಧದಲ್ಲಿ ಸಂರಕ್ಷಿಸುವುದಿಲ್ಲವೆಂದು ಯಾವ ಉದಾಹರಣೆಗಳು ತೋರಿಸುತ್ತವೆ?

14 ಬೈಬಲ್‌ ಸಮಯಗಳಲ್ಲೂ, ತನ್ನ ಪ್ರತಿಯೊಬ್ಬ ಸೇವಕನನ್ನು ಅಕಾಲ ಮರಣದಿಂದ ತಪ್ಪಿಸಲಿಕ್ಕಾಗಿ ಯೆಹೋವನು ತನ್ನ ಸಂರಕ್ಷಣಾತ್ಮಕ ಶಕ್ತಿಯನ್ನು ಉಪಯೋಗಿಸಲಿಲ್ಲ. ಉದಾಹರಣೆಗೆ, ಅಪೊಸ್ತಲ ಯಾಕೋಬನು ಹೆರೋದನಿಂದ ಸುಮಾರು ಸಾ.ಶ. 44ರಲ್ಲಿ ವಧಿಸಲ್ಪಟ್ಟನು. ಆದರೂ, ಸ್ವಲ್ಪ ಸಮಯದ ನಂತರ ಪೇತ್ರನು “ಹೆರೋದನ ಕೈಯಿಂದ” ಬಿಡಿಸಲ್ಪಟ್ಟನು. (ಅ. ಕೃತ್ಯಗಳು 12:1-11) ಮತ್ತು ಯಾಕೋಬನ ಸೋದರನಾದ ಯೋಹಾನನು, ಪೇತ್ರಯಾಕೋಬರಿಗಿಂತಲೂ ಹೆಚ್ಚುಕಾಲ ಬದುಕಿದನು. ನಮ್ಮ ದೇವರು ತನ್ನೆಲ್ಲಾ ಸೇವಕರನ್ನು ಒಂದೇ ವಿಧದಲ್ಲಿ ಸಂರಕ್ಷಿಸುವನೆಂದು ನಾವು ಅಪೇಕ್ಷಿಸಸಾಧ್ಯವಿಲ್ಲ ಎಂಬುದು ಸ್ಪಷ್ಟ. ಅದಲ್ಲದೆ ‘ಕಾಲವೂ ಮುಂಗಾಣದ ಸಂಭವವೂ’ ನಮ್ಮೆಲ್ಲರ ಮೇಲೆ ಬಂದೆರಗುತ್ತದೆ. (ಪ್ರಸಂಗಿ 9:11) ಹಾಗಾದರೆ ಇಂದು ಯೆಹೋವನು ನಮ್ಮನ್ನು ಹೇಗೆ ಸಂರಕ್ಷಿಸುತ್ತಾನೆ?

ಯೆಹೋವನು ಶಾರೀರಿಕ ಸಂರಕ್ಷಣೆಯನ್ನು ಒದಗಿಸುತ್ತಾನೆ

15, 16. (ಎ) ಯೆಹೋವನು ತನ್ನ ಆರಾಧಕರಿಗೆ ಒಂದು ಗುಂಪಿನೋಪಾದಿ ಶಾರೀರಿಕ ಸಂರಕ್ಷಣೆಯನ್ನು ಒದಗಿಸಿದ್ದಾನೆಂಬುದಕ್ಕೆ ಯಾವ ಪುರಾವೆಯಿದೆ? (ಬಿ) ಯೆಹೋವನು ತನ್ನ ಸೇವಕರನ್ನು ಈಗಲೂ ಮತ್ತು “ಮಹಾಸಂಕಟ”ದಲ್ಲಿ ರಕ್ಷಿಸುವನೆಂದು ನಾವು ಏಕೆ ಭರವಸೆಯಿಂದಿರಬಲ್ಲೆವು?

15 ಮೊದಲಾಗಿ ಶಾರೀರಿಕ ಸಂರಕ್ಷಣೆಯ ವಿಷಯವನ್ನು ತುಸು ಪರಿಗಣಿಸಿರಿ. ಯೆಹೋವನ ಆರಾಧಕರೋಪಾದಿ, ನಾವು ಒಂದು ಗುಂಪಿನೋಪಾದಿ ಅಂಥ ಸಂರಕ್ಷಣೆಯನ್ನು ನಿರೀಕ್ಷಿಸಬಲ್ಲೆವು. ಇಲ್ಲವಾದರೆ, ನಾವು ಸೈತಾನನಿಗೆ ಸುಲಭವಾದ ಬೇಟೆಯಾಗಿರುತ್ತಿದ್ದೆವು. ಇದರ ಕುರಿತು ಯೋಚಿಸಿರಿ: “ಇಹಲೋಕಾಧಿಪತಿಯಾದ” ಸೈತಾನನಿಗೆ, ಸತ್ಯಾರಾಧನೆಯನ್ನು ನಿರ್ಮೂಲಗೊಳಿಸುವುದಕ್ಕಿಂತ ಪ್ರಿಯವಾದ ವಿಷಯವು ಬೇರೊಂದಿಲ್ಲ. (ಯೋಹಾನ 12:31; ಪ್ರಕಟನೆ 12:17) ಭೂಮಿಯಲ್ಲಿರುವ ಅತ್ಯಂತ ಪ್ರಬಲವಾದ ಕೆಲವು ಸರಕಾರಗಳು ನಮ್ಮ ಸಾರುವ ಕಾರ್ಯವನ್ನು ನಿಷೇಧಿಸಿವೆ ಮತ್ತು ನಮ್ಮನ್ನು ಪೂರ್ಣವಾಗಿ ಅಳಿಸಿಹಾಕಲು ಪ್ರಯತ್ನಮಾಡಿವೆ. ಆದರೂ ಯೆಹೋವನ ಜನರು ದೃಢವಾಗಿ ನಿಂತಿರುತ್ತಾರೆ ಮತ್ತು ಸಾರುವ ಕಾರ್ಯವನ್ನು ಎಡೆಬಿಡದೆ ಮುಂದರಿಸುತ್ತಿದ್ದಾರೆ! ಈ ಪ್ರಬಲ ರಾಷ್ಟ್ರಗಳು, ತುಲನಾತ್ಮಕವಾಗಿ ಅತಿಚಿಕ್ಕದಾಗಿ ಹಾಗೂ ಅರಕ್ಷಿತರಾಗಿ ತೋರುವ ಈ ಕ್ರೈಸ್ತರ ಗುಂಪಿನ ಚಟುವಟಿಕೆಯನ್ನು ನಿಲ್ಲಿಸಲು ಯಾಕೆ ಶಕ್ತರಾಗಿಲ್ಲ? ಯಾಕಂದರೆ ಯೆಹೋವನು ತನ್ನ ಬಲಾಢ್ಯವಾದ ಸಾಂಕೇತಿಕ ರೆಕ್ಕೆಗಳನ್ನು ಚಾಚಿ ನಮ್ಮನ್ನು ಕಾಪಾಡಿದ್ದಾನೆ.​—ಕೀರ್ತನೆ 17:7, 8.

16 ಬರಲಿರುವ “ಮಹಾಸಂಕಟದ” ಸಮಯದಲ್ಲಿ ನಮ್ಮ ಶಾರೀರಿಕ ಸಂರಕ್ಷಣೆಯ ಕುರಿತೇನು? ದೇವರ ನ್ಯಾಯತೀರ್ಪುಗಳ ಜಾರಿಗೊಳಿಸುವಿಕೆಯ ಬಗ್ಗೆ ನಾವು ಹೆದರಬೇಕಾಗಿಲ್ಲ. ಯೆಹೋವನು ತನ್ನ “ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವುದಕ್ಕೂ ಬಲ್ಲವನಾಗಿದ್ದಾನೆ.” (ಪ್ರಕಟನೆ 7:​14, NW; 2 ಪೇತ್ರ 2:9) ಈ ಮಧ್ಯೆ, ಎರಡು ವಿಷಯಗಳ ಕುರಿತು ನಾವು ಯಾವಾಗಲೂ ನಿಶ್ಚಿತರಾಗಿರಬಲ್ಲೆವು. ಒಂದನೆಯದಾಗಿ, ಯೆಹೋವನೆಂದೂ ತನ್ನ ನಿಷ್ಠಾವಂತ ಸೇವಕರು ಈ ಭೂಮಿಯಿಂದ ಅಳಿಸಲ್ಪಡಲು ಅನುಮತಿಸನು. ಎರಡನೆಯದಾಗಿ, ಸಮಗ್ರತೆಯನ್ನು ಪಾಲಿಸುವ ತನ್ನ ಜನರಿಗೆ ಆತನ ನೀತಿಯ ಹೊಸ ಲೋಕದಲ್ಲಿ ನಿತ್ಯಜೀವದ ಬಹುಮಾನವನ್ನು ಖಂಡಿತವಾಗಿಯೂ ಕೊಡುವನು​—ಆವಶ್ಯಕವಾಗಿರುವಲ್ಲಿ ಪುನರುತ್ಥಾನವನ್ನೂ ಮಾಡುವನು. ಯಾರು ಮರಣಪಡುತ್ತಾರೊ ಅವರಿಗೆ, ದೇವರ ಸ್ಮರಣೆಯಲ್ಲಿರುವುದಕ್ಕಿಂತ ಹೆಚ್ಚು ಸುರಕ್ಷಿತವಾದ ಸ್ಥಳವು ಬೇರೊಂದಿಲ್ಲ!​—ಯೋಹಾನ 5:28, 29.

17. ಯೆಹೋವನು ತನ್ನ ವಾಕ್ಯದ ಮೂಲಕ ನಮ್ಮನ್ನು ಕಾಪಾಡಿ ಕಾಯುವುದು ಹೇಗೆ?

17 ಈಗಲೂ, ಯೆಹೋವನು ತನ್ನ ಸಜೀವವಾದ ‘ವಾಕ್ಯದ’ ಮೂಲಕ ನಮ್ಮನ್ನು ಕಾಪಾಡುತ್ತಾ ಇದ್ದಾನೆ. ಆ ವಾಕ್ಯಕ್ಕೆ ಹೃದಯಗಳನ್ನು ವಾಸಿಮಾಡುವ ಹಾಗೂ ಜೀವಿತಗಳನ್ನು ತಿದ್ದಿಸರಿಮಾಡುವ ಪ್ರೇರೇಪಕ ಶಕ್ತಿಯು ಇದೆ. (ಇಬ್ರಿಯ 4:12) ಅದರ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವ ಮೂಲಕ, ಕೆಲವು ಅಂಶಗಳಲ್ಲಿ ನಾವು ಶಾರೀರಿಕ ಹಾನಿಗಳಿಂದ ನಮ್ಮನ್ನು ಸಂರಕ್ಷಿಸಬಲ್ಲೆವು. ‘ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನಡೆಸುವವನು’ ಎನ್ನುತ್ತದೆ ಯೆಶಾಯ 48:17. ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿ ಜೀವಿಸುವಲ್ಲಿ, ನಮ್ಮ ಆರೋಗ್ಯವು ಸುಧಾರಿಸಿ, ಆಯುಸ್ಸು ವೃದ್ಧಿಯಾಗುವುದೆಂಬುದಕ್ಕೆ ಯಾವ ಸಂದೇಹವೂ ಇಲ್ಲ. ಉದಾಹರಣೆಗೆ, ವ್ಯಭಿಚಾರದಿಂದ ದೂರವಿರಲು ಮತ್ತು ಕಲುಷಿತ ಪದ್ಧತಿಗಳನ್ನು ತೊಲಗಿಸಿ ನಮ್ಮನ್ನು ಶುದ್ಧೀಕರಿಸಲು ಬೈಬಲು ಕೊಡುವ ಸೂಚನೆಯನ್ನು ನಾವು ಅನ್ವಯಿಸಿಕೊಳ್ಳುವ ಕಾರಣ, ಭಕ್ತಿಹೀನ ಜನರಲ್ಲಿ ಹೆಚ್ಚಿನವರ ಜೀವನವನ್ನು ಧ್ವಂಸಗೊಳಿಸುವ ಅಶುದ್ಧ ಆಚಾರಗಳು ಮತ್ತು ಹಾನಿಕಾರಕ ದುರಭ್ಯಾಸಗಳಿಂದ ನಾವು ದೂರವಿರುತ್ತೇವೆ. (ಅ. ಕೃತ್ಯಗಳು 15:29; 2 ಕೊರಿಂಥ 7:1) ದೇವರ ವಾಕ್ಯವು ಕೊಡುವ ಈ ಸಂರಕ್ಷಣೆಗಾಗಿ ನಾವೆಷ್ಟು ಕೃತಜ್ಞರು!

ಯೆಹೋವನು ಆಧ್ಯಾತ್ಮಿಕವಾಗಿ ನಮ್ಮನ್ನು ಸಂರಕ್ಷಿಸುತ್ತಾನೆ

18. ಯಾವ ಆಧ್ಯಾತ್ಮಿಕ ಸಂರಕ್ಷಣೆಯನ್ನು ಯೆಹೋವನು ನಮಗೋಸ್ಕರ ಒದಗಿಸುತ್ತಾನೆ?

18 ಯೆಹೋವನು ಒದಗಿಸುವ ಆಧ್ಯಾತ್ಮಿಕ ಸಂರಕ್ಷಣೆಯಾದರೊ ಅತ್ಯಂತ ಪ್ರಾಮುಖ್ಯವಾದದ್ದು. ಸಂಕಷ್ಟಗಳನ್ನು ತಾಳಿಕೊಳ್ಳಲಿಕ್ಕಾಗಿ ಮತ್ತು ಆತನೊಂದಿಗಿನ ನಮ್ಮ ಸಂಬಂಧವನ್ನು ಕಾಪಾಡಲು ನಮಗೆ ಬೇಕಾದ ಸಾಧನಗಳನ್ನು ಕೊಡುವ ಮೂಲಕ, ನಮ್ಮ ಪ್ರೀತಿಯುಳ್ಳ ದೇವರು ನಮ್ಮನ್ನು ಆಧ್ಯಾತ್ಮಿಕ ಹಾನಿಯಿಂದ ಕಾಪಾಡುತ್ತಾನೆ. ಹೀಗೆ ಯೆಹೋವನು ನಮ್ಮ ಜೀವವನ್ನು ಜೋಪಾನವಾಗಿರಿಸಲು ಕಾರ್ಯನಡಿಸುತ್ತಾನೆ, ಕೇವಲ ಕೆಲವೇ ವರ್ಷಗಳಿಗಾಗಿ ಅಲ್ಲ, ಬದಲಾಗಿ ನಿತ್ಯಕ್ಕಾಗಿ. ನಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸಬಲ್ಲ ದೇವರ ಕೆಲವು ಏರ್ಪಾಡುಗಳನ್ನು ಪರಿಗಣಿಸಿರಿ.

19. ನಾವು ಎದುರಿಸುವ ಯಾವುದೇ ಸಂಕಷ್ಟವನ್ನು ನಿಭಾಯಿಸುವಂತೆ ಯೆಹೋವನಾತ್ಮವು ಹೇಗೆ ನೆರವಾಗಬಲ್ಲದು?

19 ಯೆಹೋವನು “ಪ್ರಾರ್ಥನೆಯನ್ನು ಕೇಳುವ” ದೇವರು. (ಕೀರ್ತನೆ 65:2) ಜೀವನದ ಒತ್ತಡಗಳು ನಮ್ಮನ್ನು ಕಂಗೆಡಿಸುತ್ತಿರುವಂತೆ ತೋರುವಾಗ, ನಮ್ಮ ಹೃದಯವನ್ನು ಬಿಚ್ಚಿ ಆತನೊಂದಿಗೆ ಮಾತಾಡುವುದು ಉಪಶಮನವನ್ನು ತರಬಲ್ಲದು. (ಫಿಲಿಪ್ಪಿ 4:6, 7) ನಮ್ಮ ಸಂಕಷ್ಟಗಳನ್ನು ಆತನು ಅದ್ಭುತಕರವಾಗಿ ನಿವಾರಿಸಲಿಕ್ಕಿಲ್ಲವಾದರೂ, ನಮ್ಮ ಹೃತ್ಪೂರ್ವಕವಾದ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಲ್ಲಿ, ಅವುಗಳೊಂದಿಗೆ ವ್ಯವಹರಿಸಲು ಬೇಕಾದ ವಿವೇಕವನ್ನು ಆತನು ದಯಪಾಲಿಸಬಲ್ಲನು. (ಯಾಕೋಬ 1:5, 6) ಅದಕ್ಕಿಂತಲೂ ಹೆಚ್ಚಾಗಿ, ಬೇಡಿಕೊಳ್ಳುವವರೆಲ್ಲರಿಗೆ ಆತನು ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. (ಲೂಕ 11:13) ಆ ಶಕ್ತಿಶಾಲಿ ಆತ್ಮವು ನಾವು ಎದುರಿಸುವ ಯಾವುದೇ ಸಂಕಷ್ಟ ಅಥವಾ ಸಮಸ್ಯೆಯನ್ನು ನಿಭಾಯಿಸಲು ನಮಗೆ ಸಹಾಯಮಾಡುವುದು. ಈಗ ಎಷ್ಟೋ ಸಮೀಪದಲ್ಲಿರುವ ಹೊಸ ಲೋಕದಲ್ಲಿ ಯೆಹೋವನು ಎಲ್ಲಾ ವೇದನಾಭರಿತ ಸಮಸ್ಯೆಗಳನ್ನು ಹೋಗಲಾಡಿಸುವನು. ಅಷ್ಟರ ತನಕ ನಾವು ತಾಳಿಕೊಳ್ಳುವಂತೆ ಆತನ ಆತ್ಮವು ನಮಗೆ “ಬಲಾಧಿಕ್ಯವನ್ನು” ಕೊಡಬಲ್ಲದು.​—2 ಕೊರಿಂಥ 4:7.

20. ನಮ್ಮ ಜೊತೆ ಆರಾಧಕರ ಮುಖಾಂತರ ಯೆಹೋವನ ಸಂರಕ್ಷಣಾತ್ಮಕ ಶಕ್ತಿಯು ಹೇಗೆ ವ್ಯಕ್ತಪಡಿಸಲ್ಪಡಬಹುದು?

20 ಕೆಲವೊಮ್ಮೆ ಯೆಹೋವನ ಸಂರಕ್ಷಣಾತ್ಮಕ ಶಕ್ತಿಯು, ನಮ್ಮ ಜೊತೆ ವಿಶ್ವಾಸಿಗಳ ಮುಖಾಂತರವಾಗಿ ವ್ಯಕ್ತಪಡಿಸಲ್ಪಡಬಹುದು. ಯೆಹೋವನು ತನ್ನ ಜನರನ್ನು ಲೋಕವ್ಯಾಪಕ “ಸಹೋದರರ ಸಹವಾಸ”ದೊಳಕ್ಕೆ ಸೆಳೆದಿರುತ್ತಾನೆ. (1 ಪೇತ್ರ 2:​17, NW; ಯೋಹಾನ 6:44) ಆ ಸಹೋದರತ್ವದ ಪ್ರೀತಿಯ ವಾತಾವರಣದಲ್ಲಿ, ಸತ್ಕ್ರಿಯೆಗಾಗಿ ಜನರನ್ನು ಪ್ರೇರೇಪಿಸಲು ಪವಿತ್ರಾತ್ಮಕ್ಕಿರುವ ಶಕ್ತಿಯ ಜೀವಂತ ಸಾಕ್ಷ್ಯವನ್ನು ನಾವು ಕಾಣುತ್ತೇವೆ. ಆ ಆತ್ಮವು ನಮ್ಮಲ್ಲಿ ಪ್ರೀತಿ, ದಯೆ, ಮತ್ತು ಒಳ್ಳೇತನವು ಸೇರಿರುವ ಆಕರ್ಷಕ, ಅಮೂಲ್ಯ ಗುಣಗಳಂಥ ಫಲಗಳನ್ನು ಉತ್ಪಾದಿಸುತ್ತದೆ. (ಗಲಾತ್ಯ 5:22, 23) ಆದಕಾರಣ, ನಾವು ಸಂಕಷ್ಟದಲ್ಲಿರುವಾಗ, ನಮ್ಮ ಜೊತೆ ವಿಶ್ವಾಸಿಯು ನಮಗೆ ಸಹಾಯಕರ ಬುದ್ಧಿವಾದವನ್ನಾಗಲಿ ಅಗತ್ಯವಿರುವ ಪ್ರೋತ್ಸಾಹಕ ಮಾತುಗಳನ್ನಾಗಲಿ ನೀಡುವಲ್ಲಿ, ಯೆಹೋವನ ಸಂರಕ್ಷಣಾತ್ಮಕ ಚಿಂತನೆಯ ಅಂಥ ಅಭಿವ್ಯಕ್ತಿಗಳಿಗಾಗಿ ನಾವು ಆತನಿಗೆ ಉಪಕಾರ ಹೇಳಬಲ್ಲೆವು.

21. (ಎ) ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಮೂಲಕ ಯಾವ ಸಮಯೋಚಿತ ಆಧ್ಯಾತ್ಮಿಕ ಆಹಾರವನ್ನು ಯೆಹೋವನು ಒದಗಿಸುತ್ತಾನೆ? (ಬಿ) ನಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸಲು ಯೆಹೋವನು ಮಾಡಿರುವ ಏರ್ಪಾಡುಗಳಿಂದ ವೈಯಕ್ತಿಕವಾಗಿ ನಿಮಗೆ ಹೇಗೆ ಪ್ರಯೋಜನ ದೊರಕಿದೆ?

21 ನಮ್ಮನ್ನು ಸಂರಕ್ಷಿಸಲಿಕ್ಕಾಗಿ ದೇವರು ಇನ್ನೊಂದು ವಿಷಯವನ್ನೂ ಒದಗಿಸುತ್ತಾನೆ: ಸಮಯೋಚಿತವಾದ ಆಧ್ಯಾತ್ಮಿಕ ಆಹಾರ. ಆತನ ವಾಕ್ಯದಿಂದ ಬಲವನ್ನು ಪಡೆಯಲು ಸಹಾಯಕ್ಕಾಗಿ, ಆತನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಆಧ್ಯಾತ್ಮಿಕ ಆಹಾರವನ್ನು ವಿತರಿಸುವಂತೆ ನೇಮಿಸಿರುತ್ತಾನೆ. ಆ ನಂಬಿಗಸ್ತ ಆಳು ವರ್ಗವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಸೇರಿರುವ ಮುದ್ರಿತ ಪ್ರಕಾಶನಗಳನ್ನು ಹಾಗೂ ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳನ್ನು ಉಪಯೋಗಿಸಿ “ಹೊತ್ತುಹೊತ್ತಿಗೆ ಆಹಾರ”ವನ್ನು, ನಮಗೆ ಅಗತ್ಯವಿರುವ ಸಮಯದಲ್ಲಿ ಅಗತ್ಯವಿರುವ ವಿಷಯವನ್ನು ಒದಗಿಸುತ್ತದೆ. (ಮತ್ತಾಯ 24:45) ಕ್ರೈಸ್ತ ಕೂಟವೊಂದರಲ್ಲಿ​—ಕೊಡಲ್ಪಡುವ ಒಂದು ಉತ್ತರದಲ್ಲಿ, ಭಾಷಣದಲ್ಲಿ ಅಥವಾ ಪ್ರಾರ್ಥನೆಯಲ್ಲಿ ಸಹ​—ನಿಮಗೆ ಜರೂರಿಯಾಗಿ ಬೇಕಾಗಿದ್ದ ಬಲ ಮತ್ತು ಪ್ರೋತ್ಸಾಹನೆಯನ್ನು ಒದಗಿಸಿದ್ದ ವಿಷಯವೊಂದನ್ನು ನೀವೆಂದಾದರೂ ಕೇಳಿಸಿಕೊಂಡಿದ್ದೀರೊ? ನಮ್ಮ ಪತ್ರಿಕೆಗಳೊಂದರಲ್ಲಿ ಪ್ರಕಾಶಿತವಾದ ನಿರ್ದಿಷ್ಟ ಲೇಖನವೊಂದು ನಿಮ್ಮ ಜೀವಿತವನ್ನು ಎಂದಾದರೂ ಸ್ಪರ್ಶಿಸಿ ಪ್ರಭಾವಿಸಿದ್ದುಂಟೊ? ನಮ್ಮನ್ನು ಆಧ್ಯಾತ್ಮಿಕವಾಗಿ ಸಂರಕ್ಷಿಸುವುದಕ್ಕಾಗಿ ಇಂಥ ಎಲ್ಲಾ ಏರ್ಪಾಡುಗಳನ್ನು ಯೆಹೋವನು ಮಾಡುತ್ತಾನೆಂಬುದನ್ನು ನೆನಪಿನಲ್ಲಿಡಿರಿ.

22. ಯೆಹೋವನು ತನ್ನ ಶಕ್ತಿಯನ್ನು ಯಾವಾಗಲೂ ಹೇಗೆ ಉಪಯೋಗಿಸುತ್ತಾನೆ, ಮತ್ತು ಹಾಗೆ ಮಾಡುವುದು ನಮ್ಮ ಕ್ಷೇಮಾಭಿವೃದ್ಧಿಗಾಗಿಯೇ ಇದೆಯೇಕೆ?

22 ಯೆಹೋವನು “ಆಶ್ರಿತರೆಲ್ಲರಿಗೆ” ಗುರಾಣಿಯಾಗಿದ್ದಾನೆ ಖಂಡಿತ. (ಕೀರ್ತನೆ 18:30) ನಮ್ಮನ್ನು ಸಕಲ ವಿಪತ್ತಿನಿಂದ ಸಂರಕ್ಷಿಸಲು ಈಗ ಆತನು ತನ್ನ ಶಕ್ತಿಯನ್ನು ಉಪಯೋಗಿಸುವುದಿಲ್ಲವೆಂಬುದು ನಮಗೆ ತಿಳಿದಿರುತ್ತದೆ. ಆದರೆ ಆತನು ಯಾವಾಗಲೂ ತನ್ನ ಸಂರಕ್ಷಣಾತ್ಮಕ ಶಕ್ತಿಯನ್ನು ತನ್ನ ಉದ್ದೇಶದ ಕೈಗೂಡಿಸುವಿಕೆಯನ್ನು ನಿಶ್ಚಿತಗೊಳಿಸಲು ಉಪಯೋಗಿಸುತ್ತಾನೆ. ಆತನು ಹೀಗೆ ಮಾಡುವುದು ಕಟ್ಟಕಡೆಗೆ ಆತನ ಜನರ ಕ್ಷೇಮಾಭಿವೃದ್ಧಿಗಾಗಿಯೆ ಇರುವುದು. ನಾವು ಆತನ ಸಮೀಪಕ್ಕೆ ಬಂದು ಆತನ ಪ್ರೀತಿಯಲ್ಲಿ ಉಳಿಯುವುದಾದರೆ, ಯೆಹೋವನು ನಮಗೆ ನಿತ್ಯತೆಯಲ್ಲಿ ಪರಿಪೂರ್ಣ ಜೀವನವನ್ನು ಕೊಡುವನು. ಆ ಪ್ರತೀಕ್ಷೆಯನ್ನು ಮನಸ್ಸಿನಲ್ಲಿಟ್ಟವರಾಗಿ, ಈ ವ್ಯವಸ್ಥೆಯಲ್ಲಿ ಬರುವ ಯಾವುದೇ ಕಷ್ಟಾನುಭವವನ್ನು “ಕ್ಷಣಮಾತ್ರವಿರುವ . . . ಹಗುರವಾದ” ಸಂಕಟವಾಗಿ ನಾವು ನಿಶ್ಚಯವಾಗಿ ದೃಷ್ಟಿಸಸಾಧ್ಯವಿದೆ.​—2 ಕೊರಿಂಥ 4:17.