ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’

ನಿಮ್ಮ ಶಕ್ತಿಯ ಪ್ರಯೋಗದಲ್ಲಿ ‘ದೇವರನ್ನು ಅನುಸರಿಸುವವರಾಗಿರಿ’

1. ಅಪರಿಪೂರ್ಣ ಮಾನವರು ಯಾವ ಅಗೋಚರ ಜಾಲಕ್ಕೆ ಸುಲಭವಾಗಿಯೆ ಬಲಿಬೀಳುತ್ತಾರೆ?

“ಅಧಿಕಾರವಿದ್ದಲ್ಲಿ ಹೊಂಚುಹಾಕುತ್ತಿದೆ ಗೂಢಜಾಲ.” 19ನೆಯ ಶತಮಾನದ ಒಬ್ಬಾಕೆ ಕವಯಿತ್ರಿಯ ಈ ಮಾತುಗಳು, ಒಂದು ಅಗೋಚರ ಅಪಾಯಕ್ಕೆ, ಅಂದರೆ ಅಧಿಕಾರದ ದುರುಪಯೋಗಕ್ಕೆ ಗಮನ ಸೆಳೆಯುತ್ತವೆ. ಈ ಜಾಲಕ್ಕೆ ಅಪರಿಪೂರ್ಣ ಮಾನವರು ಬಹಳ ಸುಲಭವಾಗಿ ಬಲಿಬೀಳುವುದು ಶೋಚನೀಯವೇ ಸರಿ. ಮನುಷ್ಯರು ಇತಿಹಾಸದಾದ್ಯಂತ “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನು” ಉಂಟುಮಾಡಿರುವುದು ನಿಶ್ಚಯ. (ಪ್ರಸಂಗಿ 8:9) ಪ್ರೀತಿರಹಿತವಾದ ಶಕ್ತಿಯ ಪ್ರಯೋಗದಿಂದಾಗಿ ಹೇಳಲಾಗದಷ್ಟು ಮಾನವ ಕಷ್ಟಾನುಭವವು ಪ್ರಾಪ್ತಿಸಿದೆ.

2, 3. (ಎ) ಯೆಹೋವನ ಶಕ್ತಿಯ ಬಳಕೆಯ ಸಂಬಂಧದಲ್ಲಿ ಗಮನಾರ್ಹವಾದ ಸಂಗತಿಯು ಏನಾಗಿದೆ? (ಬಿ) ನಮ್ಮ ಶಕ್ತಿಯಲ್ಲಿ ಏನೆಲ್ಲಾ ಸೇರಿರಬಹುದು, ಮತ್ತು ಆ ಎಲ್ಲಾ ಶಕ್ತಿಯನ್ನು ನಾವು ಹೇಗೆ ಬಳಸಬೇಕು?

2 ಹೀಗಿರಲಾಗಿ, ಅಪರಿಮಿತ ಶಕ್ತಿಯುಳ್ಳಾತನಾದ ಯೆಹೋವ ದೇವರು ಆ ಶಕ್ತಿಯನ್ನು ಎಂದಿಗೂ ದುರುಪಯೋಗಿಸುವುದಿಲ್ಲ ಎಂಬುದು ಗಮನಾರ್ಹವಾದ ವಿಷಯವಲ್ಲವೇ? ಹಿಂದಿನ ಅಧ್ಯಾಯಗಳಲ್ಲಿ ನಾವು ನೋಡಿರುವ ಪ್ರಕಾರ, ಆತನು ಯಾವಾಗಲೂ ತನ್ನ ಸೃಷ್ಟಿಕಾರಕ, ನಾಶಕಾರಕ, ಸಂರಕ್ಷಣಾತ್ಮಕ, ಅಥವಾ ಪುನಸ್ಸ್ಥಾಪಕ ಶಕ್ತಿಯನ್ನು, ತನ್ನ ಪ್ರೀತಿಭರಿತ ಉದ್ದೇಶಗಳಿಗೆ ಹೊಂದಿಕೆಯಲ್ಲಿ ಬಳಸುತ್ತಾನೆ. ಆತನು ತನ್ನ ಶಕ್ತಿಯನ್ನು ಪ್ರಯೋಗಿಸುವ ವಿಧವನ್ನು ನಾವು ಪರ್ಯಾಲೋಚಿಸುವಾಗ, ನಾವಾತನ ಸಮೀಪಕ್ಕೆ ಸೆಳೆಯಲ್ಪಡುತ್ತೇವೆ. ಪ್ರತಿಯಾಗಿ ಅದು ನಮ್ಮನ್ನು ನಮ್ಮ ಸ್ವಂತ ಶಕ್ತಿಯ ಬಳಕೆಯಲ್ಲಿ ‘ದೇವರನ್ನು ಅನುಸರಿಸುವವರಾಗುವಂತೆ’ ಪ್ರೇರೇಪಿಸುವುದು. (ಎಫೆಸ 5:1) ಆದರೆ ಅಲ್ಪ ಮಾನವರಾದ ನಾವು ಯಾವ ಶಕ್ತಿಯನ್ನು ಹೊಂದಿರುತ್ತೇವೆ?

3 ಮನುಷ್ಯನು ದೇವರ “ಸ್ವರೂಪ” ಮತ್ತು ಹೋಲಿಕೆಗೆ ಸರಿಯಾಗಿ ನಿರ್ಮಿಸಲ್ಪಟ್ಟಿದ್ದಾನೆಂಬುದನ್ನು ನೆನಪಿನಲ್ಲಿಡಿರಿ. (ಆದಿಕಾಂಡ 1:26, 27) ಆದುದರಿಂದ ನಮಗೂ ಶಕ್ತಿ ಇದೆ​—ಕಡಿಮೆಪಕ್ಷ ಸ್ವಲ್ಪ ಪ್ರಮಾಣದಲ್ಲಿ. ನಮ್ಮ ಶಕ್ತಿಯಲ್ಲಿ, ಕೆಲಸದ ಮೂಲಕ ವಿಷಯಗಳನ್ನು ಕೈಗೂಡಿಸುವ ಸಾಮರ್ಥ್ಯ; ಇತರರ ಮೇಲೆ ಹತೋಟಿ ಅಥವಾ ಅಧಿಕಾರವನ್ನು ಹೊಂದಿರುವುದು; ಇತರರ ಮೇಲೆ, ವಿಶೇಷವಾಗಿ ನಮ್ಮನ್ನು ಪ್ರೀತಿಸುವವರ ಮೇಲೆ ಪ್ರಭಾವವನ್ನು ಹಾಕುವ ಸಾಮರ್ಥ್ಯ; ಶಾರೀರಿಕ ಬಲ (ತ್ರಾಣ); ಅಥವಾ ಭೌತಿಕ ಸಾಧನಸಂಪತ್ತು ಸೇರಿರಬಹುದು. ಯೆಹೋವನ ಕುರಿತು ಕೀರ್ತನೆಗಾರನು ಅಂದದ್ದು: “ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ.” (ಕೀರ್ತನೆ 36:9) ಆದುದರಿಂದ ನಮ್ಮ ಬಳಿಯಿರುವ ಯಾವುದೇ ಯುಕ್ತವಾದ ಶಕ್ತಿಗೆ, ನೇರವಾಗಿ ಇಲ್ಲವೆ ಪರೋಕ್ಷವಾಗಿ ದೇವರೇ ಮೂಲನಾಗಿದ್ದಾನೆ. ಹೀಗಿರಲಾಗಿ ಅವನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ನಾವದನ್ನು ಬಳಸಲು ಬಯಸುತ್ತೇವೆ. ನಾವದನ್ನು ಹೇಗೆ ಮಾಡಬಲ್ಲೆವು?

ಪ್ರೀತಿಯೇ ಕೀಲಿ ಕೈ

4, 5. (ಎ) ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಬಳಸುವುದರ ಕೀಲಿ ಕೈ ಯಾವುದು, ಮತ್ತು ದೇವರ ಸ್ವಂತ ಮಾದರಿಯು ಇದನ್ನು ಹೇಗೆ ತೋರಿಸುತ್ತದೆ? (ಬಿ) ನಮ್ಮ ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಬಳಸಲಿಕ್ಕೆ ಪ್ರೀತಿಯು ನಮಗೆ ಹೇಗೆ ಸಹಾಯಮಾಡುತ್ತದೆ?

4 ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಬಳಸಲಿಕ್ಕಿರುವ ಮುಖ್ಯ ಕೀಲಿ ಕೈ ಪ್ರೀತಿಯಾಗಿದೆ. ದೇವರ ಸ್ವಂತ ಮಾದರಿಯು ಇದನ್ನು ಪ್ರದರ್ಶಿಸಿ ತೋರಿಸುತ್ತದಲ್ಲವೇ? ಅಧ್ಯಾಯ 1ರಲ್ಲಿ ದೇವರ ಪ್ರಧಾನ ಗುಣಗಳಾದ ಶಕ್ತಿ, ನ್ಯಾಯ, ವಿವೇಕ, ಮತ್ತು ಪ್ರೀತಿಯ ಕುರಿತು ಚರ್ಚಿಸಿದ್ದನ್ನು ನೆನಪಿಗೆ ತನ್ನಿರಿ. ಆ ನಾಲ್ಕೂ ಗುಣಗಳಲ್ಲಿ ಅತಿ ಪ್ರಧಾನವಾಗಿರುವುದು ಯಾವುದು? ಪ್ರೀತಿಯೇ. “ದೇವರು ಪ್ರೀತಿಸ್ವರೂಪಿಯು” ಎನ್ನುತ್ತದೆ 1 ಯೋಹಾನ 4:8. ಹೌದು, ಯೆಹೋವನು ಪ್ರೀತಿಯ ಸಾರವೇ ಆಗಿರುತ್ತಾನೆ. ಆತನು ಮಾಡುವುದೆಲ್ಲವು ಅದರಿಂದ ಪ್ರಭಾವಿತವಾಗುತ್ತದೆ. ಹೀಗೆ ಆತನ ಶಕ್ತಿಯ ಪ್ರತಿಯೊಂದು ಪ್ರದರ್ಶನವು ಪ್ರೀತಿಯಿಂದ ಪ್ರೇರಿತವಾಗಿ ಕಟ್ಟಕಡೆಗೆ ಆತನನ್ನು ಪ್ರೀತಿಸುವವರ ಪ್ರಯೋಜನಕ್ಕಾಗಿ ಇರುವುದು.

5 ನಮ್ಮ ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಬಳಸಲಿಕ್ಕೆ ಪ್ರೀತಿಯು ನಮಗೂ ನೆರವು ನೀಡುವುದು. ಎಷ್ಟೆಂದರೂ, ಬೈಬಲು ಹೇಳುವಂತೆ ಪ್ರೀತಿ “ದಯೆ ತೋರಿಸು”ತ್ತದೆ ಮತ್ತು “ಸ್ವಪ್ರಯೋಜನವನ್ನು ಚಿಂತಿಸುವುದಿಲ್ಲ.” (1 ಕೊರಿಂಥ 13:4, 5) ಆದಕಾರಣ, ಯಾರ ಮೇಲೆ ನಮಗೆ ತುಸು ಅಧಿಕಾರವಿದೆಯೊ ಅವರೊಂದಿಗೆ ಕಠೋರವಾಗಿ ಅಥವಾ ಕ್ರೂರ ರೀತಿಯಲ್ಲಿ ವರ್ತಿಸಲು ಪ್ರೀತಿಯು ಬಿಡುವುದಿಲ್ಲ. ಬದಲಿಗೆ, ಇತರರನ್ನು ನಾವು ಘನಮಾನದೊಂದಿಗೆ ಉಪಚರಿಸಿ, ಅವರ ಆವಶ್ಯಕತೆಗಳು ಮತ್ತು ಭಾವನೆಗಳನ್ನು ನಮ್ಮದ್ದಕ್ಕಿಂತಲೂ ಮುಂದೆ ಇಡುವೆವು.​—ಫಿಲಿಪ್ಪಿ 2:3, 4.

6, 7. (ಎ) ದೇವಭಯ ಎಂದರೇನು, ಮತ್ತು ಈ ಗುಣವು ನಾವು ಶಕ್ತಿಯನ್ನು ದುರುಪಯೋಗಿಸದಂತೆ ಏಕೆ ಸಹಾಯಮಾಡುತ್ತದೆ? (ಬಿ) ದೇವರನ್ನು ಅಸಂತೋಷಪಡಿಸುವ ಭಯ ಮತ್ತು ದೇವರಿಗಾಗಿ ಪ್ರೀತಿಯ ನಡುವಣ ಸಂಬಂಧವನ್ನು ದೃಷ್ಟಾಂತಿಸಿರಿ.

6 ಪ್ರೀತಿಯು, ಶಕ್ತಿಯನ್ನು ದುರುಪಯೋಗಿಸದಂತೆ ನಮಗೆ ಸಹಾಯಮಾಡುವ ಇನ್ನೊಂದು ಗುಣಕ್ಕೆ ಸಂಬಂಧಿಸಿದೆ: ಅದೇ ದೇವಭಯ. ಈ ಗುಣದ ಮೌಲ್ಯವೇನು? “ಯೆಹೋವನ ಭಯದಿಂದ ಒಬ್ಬನು ಕೆಟ್ಟತನದಿಂದ ದೂರಹೋಗುತ್ತಾನೆ,” ಎನ್ನುತ್ತದೆ ಜ್ಞಾನೋಕ್ತಿ 16:​6 (NW). ನಿಶ್ಚಯವಾಗಿಯೂ, ಅಧಿಕಾರದ ದುರುಪಯೋಗವು ನಾವು ದೂರಸರಿಯಬೇಕಾದ ಕೆಟ್ಟ ಮಾರ್ಗಗಳಲ್ಲಿ ಒಂದಾಗಿದೆ. ಯಾರ ಮೇಲೆ ನಮಗೆ ಅಧಿಕಾರವಿದೆಯೊ ಅವರನ್ನು ದುರುಪಚರಿಸದಂತೆ ದೇವಭಯವು ನಮ್ಮನ್ನು ತಡೆಗಟ್ಟುತ್ತದೆ. ಏಕೆ? ಒಂದು ಕಾರಣವು, ನಾವು ಅಂಥವರನ್ನು ಉಪಚರಿಸುವ ವಿಧಕ್ಕಾಗಿ ದೇವರಿಗೆ ಲೆಕ್ಕಕೊಡಲಿಕ್ಕಿದೆಯೆಂದು ನಮಗೆ ಗೊತ್ತಿದೆ. (ನೆಹೆಮೀಯ 5:1-7, 15) ಆದರೆ ದೇವಭಯದಲ್ಲಿ ಅದಕ್ಕಿಂತ ಹೆಚ್ಚಿನದ್ದು ಕೂಡಿದೆ. “ಭಯ”ಕ್ಕಾಗಿ ಪ್ರಯೋಗಿಸಲ್ಪಟ್ಟ ಮೂಲಭಾಷಾ ಪದಗಳು ಅನೇಕವೇಳೆ ದೇವರ ಕಡೆಗೆ ಆಳವಾದ ಪೂಜ್ಯಭಾವನೆಯನ್ನು ಸೂಚಿಸುತ್ತವೆ. ಹೀಗೆ ಬೈಬಲು ದೇವರ ಪ್ರೀತಿಯೊಂದಿಗೆ ಭಯವನ್ನೂ ಜೊತೆಗೂಡಿಸುತ್ತದೆ. (ಧರ್ಮೋಪದೇಶಕಾಂಡ 10:12, 13) ಈ ಪೂಜ್ಯಭಯದಲ್ಲಿ, ಶಿಕ್ಷೆಯಾಗುತ್ತದೆಂಬ ಭಯದಿಂದಲ್ಲ ಬದಲಿಗೆ ನಾವು ಆತನನ್ನು ನಿಜವಾಗಿ ಪ್ರೀತಿಸುವ ಕಾರಣದಿಂದ ಆತನನ್ನು ಅಸಂತೋಷಪಡಿಸಬಾರದೆಂಬ ಹಿತಕರವಾದ ಭಯವು ಸೇರಿರುತ್ತದೆ.

7 ಉದಾಹರಣೆಗಾಗಿ: ಒಬ್ಬ ಪುಟ್ಟ ಬಾಲಕ ಮತ್ತು ಅವನ ತಂದೆಯ ನಡುವೆ ಇರುವ ಹಿತಕರವಾದ ಸಂಬಂಧದ ಕುರಿತು ಯೋಚಿಸಿರಿ. ತನ್ನ ತಂದೆಗೆ ತನ್ನಲ್ಲಿ ವಾತ್ಸಲ್ಯಪೂರ್ವಕ, ಪ್ರೀತಿಭರಿತ ಆಸಕ್ತಿಯಿದೆ ಎಂಬುದು ಆ ಬಾಲಕನಿಗೆ ತಿಳಿದಿರುತ್ತದೆ. ಆದರೆ ತನ್ನ ತಂದೆಯು ತನ್ನಿಂದ ಏನನ್ನು ಅಪೇಕ್ಷಿಸುತ್ತಾನೆಂಬ ಅರಿವೂ ಆ ಬಾಲಕನಿಗಿದೆ, ಮತ್ತು ತಾನು ಸರಿಯಾಗಿ ನಡೆದುಕೊಳ್ಳದಿದ್ದಲ್ಲಿ ತಂದೆಯು ತನ್ನನ್ನು ಶಿಸ್ತಿಗೊಳಪಡಿಸುವನೆಂದೂ ಗೊತ್ತಿದೆ. ತಂದೆಯ ವಿಷಯದಲ್ಲಿ ಅವನಿಗೆ ವಿಕಾರವಾದ ಭಯವಿಲ್ಲ. ಬದಲಿಗೆ ಅವನು ತಂದೆಯನ್ನು ತುಂಬ ಪ್ರೀತಿಸುತ್ತಾನೆ. ತನ್ನ ತಂದೆಯ ಮೆಚ್ಚುಗೆಯನ್ನು ಗಳಿಸುವಂಥ ಕೆಲಸವನ್ನು ಮಾಡಲು ಮಗನು ಸಂತೋಷಪಡುತ್ತಾನೆ. ದೇವಭಯವು ಕೂಡ ಹೀಗೆಯೆ. ನಮ್ಮ ಸ್ವರ್ಗೀಯ ಪಿತನಾದ ಯೆಹೋವನನ್ನು ನಾವು ಪ್ರೀತಿಸುವುದರಿಂದ, ಆತನು “ಹೃದಯದಲ್ಲಿ ನೊಂದು”ಕೊಳ್ಳುವಂತೆ ಮಾಡುವ ಯಾವುದೇ ಕೆಲಸವನ್ನು ಮಾಡಲು ನಾವು ಅಳುಕುತ್ತೇವೆ. (ಆದಿಕಾಂಡ 6:6) ಬದಲಿಗೆ, ಆತನ ಮನಸ್ಸನ್ನು ಸಂತೋಷಪಡಿಸಲು ನಾವು ತವಕಿಸುತ್ತೇವೆ. (ಜ್ಞಾನೋಕ್ತಿ 27:11) ಆದುದರಿಂದಲೇ ನಮ್ಮ ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಪ್ರಯೋಗಿಸಲು ನಾವು ಬಯಸುತ್ತೇವೆ. ನಾವದನ್ನು ಹೇಗೆ ಮಾಡಬಹುದೆಂದು ಪರೀಕ್ಷಿಸೋಣ.

ಕುಟುಂಬದಲ್ಲಿ

8. (ಎ) ಕುಟುಂಬದಲ್ಲಿ ಗಂಡಂದಿರಿಗೆ ಯಾವ ಅಧಿಕಾರವಿದೆ, ಮತ್ತು ಅದು ಹೇಗೆ ನಿರ್ವಹಿಸಲ್ಪಡಬೇಕು? (ಬಿ) ಒಬ್ಬ ಗಂಡನು ತಾನು ತನ್ನ ಹೆಂಡತಿಗೆ ಮಾನಕೊಡುತ್ತೇನೆಂಬುದನ್ನು ಹೇಗೆ ತೋರಿಸಬಲ್ಲನು?

8 ಕುಟುಂಬ ವೃತ್ತವನ್ನು ಮೊದಲಾಗಿ ಪರ್ಯಾಲೋಚಿಸಿರಿ. “ಗಂಡನು ಹೆಂಡತಿಗೆ ತಲೆಯಾಗಿದ್ದಾನೆ” ಎನ್ನುತ್ತದೆ ಎಫೆಸ 5:23. ಈ ದೇವದತ್ತ ಅಧಿಕಾರವನ್ನು ಗಂಡನು ಹೇಗೆ ನಿರ್ವಹಿಸಬೇಕು? ತಮ್ಮ ಹೆಂಡತಿಯರೊಂದಿಗೆ, ಅವಳು “ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು . . . ವಿವೇಕದಿಂದ ಒಗತನಮಾಡಿ . . . ಮಾನವನ್ನು ಸಲ್ಲಿ”ಸುವಂತೆ ಬೈಬಲ್‌ ಗಂಡಂದಿರಿಗೆ ಹೇಳುತ್ತದೆ. (1 ಪೇತ್ರ 3:7) “ಮಾನ” ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್‌ ನಾಮಪದಕ್ಕೆ “ಬೆಲೆ, ಮೌಲ್ಯ, . . . ಗೌರವ” ಎಂಬರ್ಥವಿದೆ. ಬೇರೆ ವಚನಗಳಲ್ಲಿ ಈ ಪದದ ರೂಪಗಳು ‘ಕೊಡುಗೆಗಳು’ ಮತ್ತು ‘ಅಮೂಲ್ಯ’ ಎಂಬುದಾಗಿಯೂ ತರ್ಜುಮೆಯಾಗಿವೆ. ಹೆಂಡತಿಗೆ ಮಾನಕೊಡುವ ಗಂಡನು ಎಂದೂ ಅವಳ ಮೇಲೆ ಕೈಮಾಡುವುದಿಲ್ಲ; ಅವಳನ್ನು ಅವಮಾನಗೊಳಿಸಿ ಅಥವಾ ಹೀನೈಸಿ ಮಾತಾಡಿ, ಅವಳು ಕೆಲಸಕ್ಕೆ ಬಾರದವಳೆಂಬ ಭಾವನೆಯನ್ನು ಮೂಡಿಸುವುದಿಲ್ಲ. ಬದಲಿಗೆ, ಅವನು ಅವಳ ಮೌಲ್ಯವನ್ನು ಅಂಗೀಕರಿಸುತ್ತಾ ಅವಳನ್ನು ಗೌರವದಿಂದ ಉಪಚರಿಸುವನು. ತನ್ನ ಮಾತುಗಳಿಂದ ಮತ್ತು ಕೃತಿಗಳಿಂದ​—ಖಾಸಗಿಯಾಗಿ ಮತ್ತು ಬಹಿರಂಗವಾಗಿ​—ಅವಳು ತನಗೆ ಅಮೂಲ್ಯಳೆಂದು ತೋರಿಸುವನು. (ಜ್ಞಾನೋಕ್ತಿ 31:29) ಅಂಥ ಗಂಡನು ತನ್ನ ಪತ್ನಿಯ ಪ್ರೀತಿ ಮತ್ತು ಗೌರವವನ್ನು ಗಿಟ್ಟಿಸಿಕೊಳ್ಳುತ್ತಾನೆ ಮಾತ್ರವಲ್ಲ, ಹೆಚ್ಚು ಮಹತ್ವಪೂರ್ಣವಾಗಿ ದೇವರ ಮೆಚ್ಚಿಕೆಯು ಅವನಿಗೆ ಲಭಿಸುವುದು.

ಗಂಡಹೆಂಡತಿಯರು ಒಬ್ಬರನ್ನೊಬ್ಬರು ಪ್ರೀತಿ ಮತ್ತು ಗೌರವದಿಂದ ಉಪಚರಿಸುವ ಮೂಲಕ ತಮ್ಮ ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುತ್ತಾರೆ

9. (ಎ) ಕುಟುಂಬದಲ್ಲಿ ಹೆಂಡತಿಯರಿಗೆ ಯಾವ ಅಧಿಕಾರವಿದೆ? (ಬಿ) ತನಗಿರುವ ಸಾಮರ್ಥ್ಯಗಳನ್ನು ತನ್ನ ಗಂಡನನ್ನು ಬೆಂಬಲಿಸಲು ಬಳಸುವಂತೆ ಹೆಂಡತಿಗೆ ಯಾವುದು ಸಹಾಯಮಾಡಬಲ್ಲದು, ಮತ್ತು ಯಾವ ಫಲಿತಾಂಶ ಲಭಿಸುವುದು?

9 ಕುಟುಂಬದಲ್ಲಿ ಹೆಂಡತಿಯರಿಗೂ ಸ್ವಲ್ಪಮಟ್ಟಿಗಿನ ಅಧಿಕಾರವಿದೆ. ಯೋಗ್ಯ ತಲೆತನದ ಚೌಕಟ್ಟಿನ ಒಳಗಿದ್ದುಕೊಂಡೇ, ಒಂದು ಉಪಯುಕ್ತ ಕಾರ್ಯಕ್ಕಾಗಿ ತಮ್ಮ ಗಂಡಂದಿರನ್ನು ಪ್ರಭಾವಿಸಲು ಅಥವಾ ತಪ್ಪು ತೀರ್ಮಾನಗಳನ್ನು ಮಾಡದಂತೆ ಸಹಾಯಮಾಡಲು ಮುಂದಾದ ದೇವಭಕ್ತ ಸ್ತ್ರೀಯರ ಕುರಿತಾಗಿ ಬೈಬಲ್‌ ಹೇಳುತ್ತದೆ. (ಆದಿಕಾಂಡ 21:9-12; 27:46–28:2) ಹೆಂಡತಿಯೊಬ್ಬಳು ಗಂಡನಿಗಿಂತ ಹೆಚ್ಚು ಚುರುಕು ಬುದ್ಧಿಯವಳಾಗಿರಬಹುದು, ಅಥವಾ ಅವನಲ್ಲಿಲ್ಲದ ಕೆಲವು ಸಾಮರ್ಥ್ಯಗಳು ಅವಳಲ್ಲಿರಬಹುದು. ಹಾಗಿದ್ದರೂ ಅವಳು, ತನ್ನ ಗಂಡನಿಗೆ ‘ಆಳವಾದ ಗೌರವವನ್ನು’ (NW) ತೋರಿಸಬೇಕು ಮತ್ತು “ಕರ್ತನಿಗೆ ಹೇಗೊ ಹಾಗೆ” ಅವನಿಗೆ “ಅಧೀನ”ಳಾಗಿರಬೇಕು. (ಎಫೆಸ 5:22, 33) ಪತ್ನಿಗೆ, ತಾನು ದೇವರನ್ನು ಸಂತೋಷಪಡಿಸಬೇಕು ಎಂಬ ಧ್ಯೇಯವಿದ್ದರೆ ಅದು ಅವಳಿಗೆ, ತನ್ನ ಗಂಡನನ್ನು ಕಡೆಗಣಿಸುವ ಇಲ್ಲವೆ ಅವನ ಮೇಲೆ ಅಧಿಕಾರ ಚಲಾಯಿಸುವ ಬದಲಿಗೆ ತನಗಿರುವ ಸಾಮರ್ಥ್ಯಗಳನ್ನು ಅವನನ್ನು ಬೆಂಬಲಿಸಲಿಕ್ಕಾಗಿ ಬಳಸುವಂತೆ ಸಹಾಯಮಾಡುವುದು. ಅಂಥ “ಜ್ಞಾನವಂತೆಯಾದ” ಸ್ತ್ರೀಯು ಕುಟುಂಬವನ್ನು ಕಟ್ಟಲು ತನ್ನ ಗಂಡನಿಗೆ ಬಹಳಷ್ಟು ಸಹಕಾರವನ್ನು ಕೊಡುವಳು. ಈ ಮೂಲಕ ಆಕೆ ದೇವರೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳುವಳು.​—ಜ್ಞಾನೋಕ್ತಿ 14:1.

10. (ಎ) ಹೆತ್ತವರಿಗೆ ಯಾವ ಅಧಿಕಾರವನ್ನು ದೇವರು ದಯಪಾಲಿಸಿದ್ದಾನೆ? (ಬಿ) “ಶಿಸ್ತು” ಎಂಬ ಪದದ ಅರ್ಥವೇನು, ಮತ್ತು ಅದನ್ನು ಹೇಗೆ ನಿರ್ವಹಿಸಬೇಕು? (ಪಾದಟಿಪ್ಪಣಿಯನ್ನೂ ನೋಡಿ.)

10 ಹೆತ್ತವರಿಗೆ ಸಹ ದೇವರಿಂದ ಅನುಗ್ರಹಿಸಲ್ಪಟ್ಟ ಅಧಿಕಾರವು ಇದೆ. ಬೈಬಲ್‌ ಉಪದೇಶಿಸುವುದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಅವರನ್ನು ಬೆಳೆಸುತ್ತಾ ಹೋಗಿರಿ.” (ಎಫೆಸ 6:​4, NW) ಬೈಬಲಿನಲ್ಲಿ “ಶಿಸ್ತು” ಎಂಬ ಪದದ ಅರ್ಥವು “ಪಾಲನೆಪೋಷಣೆ, ತರಬೇತಿ, ಉಪದೇಶ” ಎಂದಾಗಿರಬಲ್ಲದು. ಮಕ್ಕಳಿಗೆ ಶಿಸ್ತು ಅಗತ್ಯ; ಸ್ಪಷ್ಟವಾದ ನಿರ್ದೇಶನಗಳು, ಸರಹದ್ದುಗಳು ಮತ್ತು ಇತಿಮಿತಿಗಳ ಕೆಳಗೆ ಅವರು ಸಂತೋಷಿತರೂ ಸಫಲರೂ ಆಗಿ ಬೆಳೆಯುತ್ತಾರೆ. ಬೈಬಲು ಅಂಥ ಶಿಸ್ತು ಅಥವಾ ಉಪದೇಶವನ್ನು ಪ್ರೀತಿಯೊಂದಿಗೆ ಜೊತೆಗೂಡಿಸುತ್ತದೆ. (ಜ್ಞಾನೋಕ್ತಿ 13:24) ಆದುದರಿಂದ “ಶಿಸ್ತಿನ ಬೆತ್ತ” ಎಂದಿಗೂ, ಭಾವನಾತ್ಮಕವಾಗಿರಲಿ ಶಾರೀರಿಕವಾಗಿರಲಿ ದೌರ್ಜನ್ಯಕರವಾದದ್ದು ಆಗಿರಲೇಬಾರದು. * (ಜ್ಞಾನೋಕ್ತಿ 22:​15, NW; 29:15) ಪ್ರೀತಿಯಿಲ್ಲದ ಗಡುಸಾದ ಅಥವಾ ಕಠೋರ ಶಿಸ್ತು ಹೆತ್ತವರ ಅಧಿಕಾರದ ದುರುಪಯೋಗವೇ ಸರಿ ಮತ್ತು ಅದು ಮಗುವಿನ ಮನೋಬಲವನ್ನು ಕುಗ್ಗಿಸುವುದು. (ಕೊಲೊಸ್ಸೆ 3:21) ಇನ್ನೊಂದು ಕಡೆಯಲ್ಲಿ, ಸರಿಯಾದ ರೀತಿಯಲ್ಲಿ ಕೊಡಲ್ಪಡುವ ಸಮತೋಲನದ ಶಿಸ್ತು, ತಮ್ಮ ಹೆತ್ತವರು ತಮ್ಮನ್ನು ಪ್ರೀತಿಸುತ್ತಾರೆ ಹಾಗೂ ತಾವು ಉತ್ತಮ ವ್ಯಕ್ತಿಗಳಾಗುವುದನ್ನು ಬಯಸುತ್ತಾರೆಂಬ ಸಂದೇಶವನ್ನು ಮಕ್ಕಳಿಗೆ ತಲಪಿಸುವುದು.

11. ಮಕ್ಕಳು ತಮ್ಮ ಶಕ್ತಿಯನ್ನು ಹೇಗೆ ಯೋಗ್ಯ ರೀತಿಯಲ್ಲಿ ಬಳಸಬಹುದು?

11 ಮಕ್ಕಳ ಕುರಿತೇನು? ಅವರು ತಮ್ಮ ಶಕ್ತಿಯನ್ನು ಹೇಗೆ ಯೋಗ್ಯ ರೀತಿಯಲ್ಲಿ ಬಳಸಬಲ್ಲರು? “ಯುವಕರಿಗೆ ಬಲವು ಭೂಷಣ” ಎನ್ನುತ್ತದೆ ಜ್ಞಾನೋಕ್ತಿ 20:29. ನಮ್ಮ “ಸೃಷ್ಟಿಕರ್ತನ” ಸೇವೆಯಲ್ಲಿ ತಮ್ಮ ಬಲ ಮತ್ತು ಶಕ್ತಿಯನ್ನು ಬಳಸುವುದಕ್ಕಿಂತ ಉತ್ತಮವಾದ ಮಾರ್ಗವು ಯುವ ಜನರಿಗೆ ಬೇರೊಂದಿಲ್ಲ. (ಪ್ರಸಂಗಿ 12:1) ತಮ್ಮ ಕೃತ್ಯಗಳು ತಮ್ಮ ಹೆತ್ತವರ ಭಾವನೆಗಳನ್ನು ಬಾಧಿಸಬಲ್ಲವೆಂಬುದನ್ನು ಯುವ ಜನರು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. (ಜ್ಞಾನೋಕ್ತಿ 23:24, 25) ಮಕ್ಕಳು ತಮ್ಮ ದೇವಭಯವುಳ್ಳ ಹೆತ್ತವರಿಗೆ ವಿಧೇಯರಾಗಿ, ಸರಿಯಾದ ಮಾರ್ಗಕ್ಕೆ ಅಂಟಿಕೊಂಡು ನಡೆಯುವಾಗ, ಹೆತ್ತವರ ಹೃದಯವನ್ನು ಸಂತೋಷಪಡಿಸುವರು. (ಎಫೆಸ 6:1) ಅಂಥ ನಡವಳಿಕೆಯು “ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.”​—ಕೊಲೊಸ್ಸೆ 3:20.

ಸಭೆಯಲ್ಲಿ

12, 13. (ಎ) ಸಭೆಯಲ್ಲಿ ತಮಗಿರುವ ಅಧಿಕಾರದ ವಿಷಯದಲ್ಲಿ ಹಿರಿಯರ ನೋಟವು ಹೇಗಿರಬೇಕು? (ಬಿ) ಹಿರಿಯರು ಮಂದೆಯನ್ನು ಕೋಮಲವಾಗಿ ಏಕೆ ಉಪಚರಿಸಬೇಕೆಂಬುದನ್ನು ದೃಷ್ಟಾಂತಿಸಿರಿ.

12 ಕ್ರೈಸ್ತ ಸಭೆಯೊಳಗೆ ನಾಯಕತ್ವವನ್ನು ವಹಿಸಲು ಯೆಹೋವನು ಮೇಲ್ವಿಚಾರಕರನ್ನು ಒದಗಿಸಿರುತ್ತಾನೆ. (ಇಬ್ರಿಯ 13:17) ಈ ಅರ್ಹ ಪುರುಷರು ತಮ್ಮ ದೇವದತ್ತ ಅಧಿಕಾರವನ್ನು, ಹಿಂಡಿನ ಆಧ್ಯಾತ್ಮಿಕ ಸಮೃದ್ಧಿಯ ವರ್ಧನೆಗಾಗಿ ಮತ್ತು ಬೇಕಾದ ಸಹಾಯವನ್ನು ಒದಗಿಸಲಿಕ್ಕಾಗಿ ಬಳಸಬೇಕು. ಅವರಿಗಿರುವ ಈ ಸ್ಥಾನವು ಅವರು ತಮ್ಮ ಜೊತೆ ವಿಶ್ವಾಸಿಗಳ ಮೇಲೆ ದೊರೆತನ ನಡಿಸುವ ಹಕ್ಕನ್ನು ಕೊಡುತ್ತದೊ? ಇಲ್ಲವೇ ಇಲ್ಲ! ಹಿರಿಯರು ಸಭೆಯಲ್ಲಿರುವ ತಮ್ಮ ಪಾತ್ರದ ಬಗ್ಗೆ ಸಮತೆಯುಳ್ಳ, ದೀನ ನೋಟವುಳ್ಳವರಾಗಿರಬೇಕು. (1 ಪೇತ್ರ 5:2, 3) ಬೈಬಲು ಮೇಲ್ವಿಚಾರಕರಿಗೆ ಹೇಳುವುದು: ‘ದೇವರು [ತನ್ನ ಪುತ್ರನ] ರಕ್ತದಿಂದ ಸಂಪಾದಿಸಿಕೊಂಡ ಸಭೆಯನ್ನು ಪರಿಪಾಲಿಸಿರಿ.’ (ಅ. ಕೃತ್ಯಗಳು 20:28) ಮಂದೆಯ ಪ್ರತಿಯೊಬ್ಬ ಸದಸ್ಯನನ್ನು ಕೋಮಲವಾಗಿ ಉಪಚರಿಸುವುದಕ್ಕೆ ಒಂದು ಪ್ರಬಲವಾದ ಕಾರಣವು ಆ ವಚನದಲ್ಲಿದೆ.

13 ನಾವದನ್ನು ಈ ರೀತಿಯಲ್ಲಿ ದೃಷ್ಟಾಂತಿಸಬಹುದು. ನಿಮ್ಮ ಆತ್ಮೀಯ ಮಿತ್ರನು ತುಂಬ ಇಷ್ಟಪಡುವಂಥ ಒಂದು ವಸ್ತುವನ್ನು ನಿಮಗೆ ಕೊಟ್ಟು ಅದರ ಜೋಕೆವಹಿಸುವಂತೆ ಹೇಳುತ್ತಾನೆ. ನಿಮ್ಮ ಮಿತ್ರನು ಅದಕ್ಕೆ ಬಹಳ ಹಣ ತೆತ್ತಿದ್ದಾನೆಂದು ನಿಮಗೆ ಗೊತ್ತಿದೆ. ನೀವದನ್ನು ಬಹಳ ನಾಜೂಕಿನಿಂದ, ಅತಿ ಜಾಗರೂಕತೆಯಿಂದ ನೋಡಿಕೊಳ್ಳುವುದಿಲ್ಲವೇ? ತದ್ರೀತಿಯಲ್ಲಿ, ನಿಜವಾಗಿಯೂ ಬಹುಮೂಲ್ಯವಾದ ಸೊತ್ತನ್ನು, ಯಾವುದರ ಸದಸ್ಯರು ಕುರಿಗಳಿಗೆ ಹೋಲಿಸಲ್ಪಟ್ಟಿದ್ದಾರೊ ಆ ಸಭೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ದೇವರು ಹಿರಿಯರಿಗೆ ವಹಿಸಿದ್ದಾನೆ. (ಯೋಹಾನ 21:16, 17) ಯೆಹೋವನಿಗೆ ತನ್ನ ಕುರಿಗಳೆಂದರೆ ಪಂಚಪ್ರಾಣ​—ಎಷ್ಟರ ಮಟ್ಟಿಗೆಂದರೆ ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನ ಅಮೂಲ್ಯ ರಕ್ತವನ್ನು ಕೊಟ್ಟು ಆತನು ಅವರನ್ನು ಕೊಂಡುಕೊಂಡಿದ್ದಾನೆ. ತನ್ನ ಕುರಿಗಳಿಗಾಗಿ ಯೆಹೋವನು ಕೊಡಸಾಧ್ಯವಿದ್ದ ಉತ್ಕೃಷ್ಟ ಬೆಲೆಯು ಇದಕ್ಕಿಂತ ಬೇರೊಂದಿಲ್ಲ. ದೀನರಾದ ಹಿರಿಯರು ಇದನ್ನು ಮನಸ್ಸಿನಲ್ಲಿಟ್ಟವರಾಗಿ ಯೆಹೋವನ ಕುರಿಗಳನ್ನು ಅದಕ್ಕೆ ಹೊಂದಿಕೆಯಲ್ಲಿ ಉಪಚರಿಸುತ್ತಾರೆ.

“ನಾಲಿಗೆಯ ಶಕ್ತಿ”

14. ನಾಲಿಗೆಗೆ ಯಾವ ಶಕ್ತಿಯಿದೆ?

14 “ಜೀವನಮರಣಗಳು ನಾಲಿಗೆಯ ವಶ” ಎನ್ನುತ್ತದೆ ಬೈಬಲು. (ಜ್ಞಾನೋಕ್ತಿ 18:21) ನಾಲಿಗೆಯು ಬಹಳ ಹಾನಿಯನ್ನು ಮಾಡಬಲ್ಲದು ನಿಶ್ಚಯ. ಅವಿಚಾರದಿಂದ ಅಥವಾ ಹೀನೈಸಿಯೂ ನುಡಿಯಲ್ಪಟ್ಟಿರುವ ಮಾತಿನ ಚುಚ್ಚುವಿಕೆಯನ್ನು ಎಂದೂ ಅನುಭವಿಸದವನು ನಮ್ಮಲ್ಲಿ ಯಾವನಿದ್ದಾನೆ? ಆದರೆ ನಾಲಿಗೆಗೆ ತಿದ್ದಿಕೊಳ್ಳುವ ಶಕ್ತಿಯು ಸಹ ಇದೆ. “ಮತಿವಂತರ ಮಾತೇ [“ನಾಲಗೆಯು,” NW] ಮದ್ದು” ಎಂದು ಹೇಳುತ್ತದೆ ಜ್ಞಾನೋಕ್ತಿ 12:18. ಹೌದು, ಪ್ರೋತ್ಸಾಹನೀಯವಾದ ಹಿತಕರ ಮಾತುಗಳು ಹೃದಯವನ್ನು ಶಮನಗೊಳಿಸುವ, ವಾಸಿಕಾರಕ ಲೇಪನದಂತಿರಬಲ್ಲವು. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.

15, 16. ಇತರರ ಪ್ರೋತ್ಸಾಹನೆಗಾಗಿ ನಾವು ನಮ್ಮ ನಾಲಿಗೆಯನ್ನು ಯಾವ ವಿಧಗಳಲ್ಲಿ ಬಳಸಬಹುದು?

15 “ಮನಗುಂದಿದವರನ್ನು ಧೈರ್ಯಪಡಿಸಿರಿ” ಎಂದು 1 ಥೆಸಲೊನೀಕ 5:14 ಉಪದೇಶಿಸುತ್ತದೆ. ಹೌದು, ಕೆಲವೊಮ್ಮೆ ಯೆಹೋವನ ನಂಬಿಗಸ್ತ ಸೇವಕರು ಸಹ ಖಿನ್ನತೆಯನ್ನು ಅನುಭವಿಸುತ್ತಾರೆ. ಅಂಥವರಿಗೆ ನಾವು ಹೇಗೆ ಸಹಾಯ ಮಾಡಬಲ್ಲೆವು? ಯೆಹೋವನ ದೃಷ್ಟಿಯಲ್ಲಿ ಅವರು ಅಮೂಲ್ಯರೆಂಬುದನ್ನು ಮನಗಾಣಲು ಸಹಾಯವಾಗುವ ನಿರ್ದಿಷ್ಟವಾದ, ಯಥಾರ್ಥ ಪ್ರಶಂಸೆಯನ್ನು ಅವರಿಗೆ ನೀಡಿರಿ. “ಮುರಿದ ಮನಸ್ಸುಳ್ಳ”ವರನ್ನು ಮತ್ತು “ಕುಗ್ಗಿಹೋದವರನ್ನು” ಯೆಹೋವನು ನಿಜವಾಗಿಯೂ ಪ್ರೀತಿಸುತ್ತಾನೆ ಮತ್ತು ಅವರ ಬಗ್ಗೆ ಚಿಂತಿಸುತ್ತಾನೆಂದು ತೋರಿಸುವ ಬೈಬಲ್‌ ವಚನಗಳ ಪ್ರಭಾವಶಾಲಿ ಮಾತುಗಳನ್ನು ಅವರೊಂದಿಗೆ ಹಂಚಿಕೊಳ್ಳಿರಿ. (ಕೀರ್ತನೆ 34:18) ಇತರರಿಗೆ ಸಾಂತ್ವನ ಕೊಡಲು ನಾವು ನಮ್ಮ ನಾಲಿಗೆಯ ಶಕ್ತಿಯನ್ನು ಬಳಸುವಾಗ, “ಖಿನ್ನಾವಸ್ಥೆಯಲ್ಲಿರುವವರನ್ನು ಸಂತೈಸುವ” ನಮ್ಮ ಕನಿಕರವುಳ್ಳ ದೇವರನ್ನು ಅನುಸರಿಸುವವರಾಗಿದ್ದೇವೆಂದು ತೋರಿಸುತ್ತೇವೆ.​—2 ಕೊರಿಂಥ 7:6, ನ್ಯೂ ಅಮೆರಿಕನ್‌ ಸ್ಟ್ಯಾಂಡರ್ಡ್‌ ಬೈಬಲ್‌.

16 ಇತರರಿಗೆ ತುಂಬ ಅಗತ್ಯವಿರುವ ಪ್ರೋತ್ಸಾಹವನ್ನು ನೀಡುವುದಕ್ಕಾಗಿಯೂ ನಾವು ನಮ್ಮ ನಾಲಿಗೆಯ ಶಕ್ತಿಯನ್ನು ಬಳಸಬಲ್ಲೆವು. ಜೊತೆ ವಿಶ್ವಾಸಿಯೊಬ್ಬರು ತಮ್ಮ ಪ್ರಿಯ ವ್ಯಕ್ತಿಯೊಬ್ಬರನ್ನು ಮರಣದಲ್ಲಿ ಕಳೆದುಕೊಂಡಿದ್ದಾರೊ? ನಮ್ಮ ಚಿಂತನೆ ಮತ್ತು ಪರಿಗಣನೆಯನ್ನು ಸೂಚಿಸುವ ಸಹಾನುಭೂತಿಯ ಮಾತುಗಳು ಅವರ ದುಃಖತಪ್ತ ಹೃದಯಕ್ಕೆ ಆದರಣೆಯನ್ನು ನೀಡಬಹುದು. ಒಬ್ಬ ವೃದ್ಧ ಸಹೋದರ ಅಥವಾ ಸಹೋದರಿಗೆ ತಾವು ಯಾರಿಗೂ ಬೇಕಾಗಿಲ್ಲ ಎಂದು ಅನಿಸುತ್ತಿದೆಯೊ? ಕುಶಲೋಪಹಾರಿ, ಭರವಸೆಕೊಡುವ ಮಾತುಗಳು ಆ ವೃದ್ಧರಿಗೆ, ಅವರು ಬೇಕಾಗಿದ್ದಾರೆ ಮತ್ತು ನೆಚ್ಚಲ್ಪಡುತ್ತಾರೆಂಬ ಆಶ್ವಾಸನೆಯನ್ನು ನೀಡುವವು. ಯಾರಾದರೂ ಒಂದು ದೀರ್ಘಕಾಲಿಕ ರೋಗದಿಂದ ಪೀಡಿತರಾಗಿದ್ದಾರೊ? ಫೋನಿನ ಮೂಲಕ ಅಥವಾ ವ್ಯಕ್ತಿಗತವಾಗಿ ಭೇಟಿ ನೀಡಿ ನಾವು ನುಡಿಯುವ ದಯಾಪರ ಮಾತುಗಳು ಆ ರೋಗಿಯ ನೊಂದ ಮನಸ್ಸನ್ನು ಹಿಗ್ಗಿಸಬಲ್ಲದು. ಹೀಗೆ “ಭಕ್ತಿಯನ್ನು ವೃದ್ಧಿಮಾಡುವ” ಮಾತುಗಳನ್ನಾಡಲು ನಮ್ಮ ವಾಕ್‌ಶಕ್ತಿಯನ್ನು ನಾವು ಬಳಸುವಾಗ ನಮ್ಮ ಸೃಷ್ಟಿಕರ್ತನೆಷ್ಟು ಸಂತೋಷಪಡುತ್ತಿರಬೇಕು!​—ಎಫೆಸ 4:29.

ಸುವಾರ್ತೆಯನ್ನು ಹಂಚುವುದು​—ನಮ್ಮ ಶಕ್ತಿಯನ್ನು ಉಪಯೋಗಿಸುವ ಅತ್ಯುತ್ತಮ ವಿಧ

17. ಇತರರ ಪ್ರಯೋಜನಕ್ಕಾಗಿ ನಾವು ನಮ್ಮ ನಾಲಿಗೆಯನ್ನು ಯಾವ ಪ್ರಾಮುಖ್ಯ ರೀತಿಯಲ್ಲಿ ಬಳಸಬಲ್ಲೆವು, ಮತ್ತು ಹಾಗೆ ನಾವೇಕೆ ಮಾಡಬೇಕು?

17 ದೇವರ ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚುವುದಕ್ಕಾಗಿ ನಮ್ಮ ನಾಲಿಗೆಯ ಶಕ್ತಿಯನ್ನು ಬಳಸುವದಕ್ಕಿಂತ ಹೆಚ್ಚು ಪ್ರಾಮುಖ್ಯ ವಿಧವು ಬೇರೊಂದಿಲ್ಲ. “ಉಪಕಾರಮಾಡುವದಕ್ಕೆ ನಿನ್ನ ಕೈಲಾದಾಗ ಹೊಂದತಕ್ಕವರಿಗೆ ಅದನ್ನು ತಪ್ಪಿಸಬೇಡ” ಎನ್ನುತ್ತದೆ ಜ್ಞಾನೋಕ್ತಿ 3:27. ಜೀವರಕ್ಷಕ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಹಂಗು ನಮಗಿದೆ. ಯೆಹೋವನು ನಮಗೆ ಇಷ್ಟು ಉದಾರವಾಗಿ ಅನುಗ್ರಹಿಸಿರುವ ಈ ತುರ್ತಿನ ಸಂದೇಶವನ್ನು ಕೇವಲ ನಮ್ಮಲ್ಲಿಯೇ ಇಟ್ಟುಕೊಳ್ಳುವುದು ಯಥೋಚಿತವಾಗಿರದು. (1 ಕೊರಿಂಥ 9:16, 22) ಆದರೆ ಈ ಕೆಲಸದಲ್ಲಿ ನಾವು ಎಷ್ಟರ ಮಟ್ಟಿಗೆ ಪಾಲಿಗರಾಗಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ?

ನಮ್ಮ “ಪೂರ್ಣಶಕ್ತಿಯಿಂದ” ಯೆಹೋವನನ್ನು ಸೇವಿಸುವುದು

18. ನಮ್ಮಿಂದ ಯೆಹೋವನು ಏನನ್ನು ನಿರೀಕ್ಷಿಸುತ್ತಾನೆ?

18 ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಯೆಹೋವನಿಗಾಗಿ ನಮಗಿರುವ ಪ್ರೀತಿಯು ನಮ್ಮನ್ನು ಪ್ರೇರೇಪಿಸುತ್ತದೆ. ಈ ವಿಷಯದಲ್ಲಿ ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ? ಜೀವನದಲ್ಲಿ ನಮ್ಮ ಪರಿಸ್ಥಿತಿಯು ಹೇಗೆಯೇ ಇರಲಿ, ನಾವೆಲ್ಲರೂ ಕೊಡಬಲ್ಲ ವಿಷಯವೊಂದಿದೆ. ಅದೇನೆಂದರೆ, “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ [“ಯೆಹೋವನಿಗೋಸ್ಕರವೇ,” NW] ಎಂದು ಮನಃಪೂರ್ವಕವಾಗಿ ಮಾಡಿರಿ.” (ಕೊಲೊಸ್ಸೆ 3:23) ಮೊದಲನೆಯ ಅತಿ ಶ್ರೇಷ್ಠ ಆಜ್ಞೆಯೇನೆಂಬುದನ್ನು ತಿಳಿಸುವಾಗ ಯೇಸು ಅಂದದ್ದು: “ನಿನ್ನ ದೇವರಾದ ಕರ್ತನನ್ನು [“ಯೆಹೋವನನ್ನು,” NW] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಹೌದು, ನಾವು ಪ್ರತಿಯೊಬ್ಬರು ಆತನನ್ನು ಪೂರ್ಣಪ್ರಾಣದಿಂದ ಪ್ರೀತಿಸುವಂತೆ ಮತ್ತು ಸೇವಿಸುವಂತೆ ಯೆಹೋವನು ನಮ್ಮಿಂದ ನಿರೀಕ್ಷಿಸುತ್ತಾನೆ ನಿಶ್ಚಯ.

19, 20. (ಎ) ಪ್ರಾಣದಲ್ಲೇ ಹೃದಯ, ಮನಸ್ಸು, ಮತ್ತು ಶಕ್ತಿಯು ಸೇರಿರಲಾಗಿ, ಮಾರ್ಕ 12:30​ರಲ್ಲಿ ಈ ಬೇರೆ ಸಾಮರ್ಥ್ಯಗಳು ಏಕೆ ಪ್ರತ್ಯೇಕವಾಗಿ ತಿಳಿಸಲ್ಪಟ್ಟಿವೆ? (ಬಿ) ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸುವುದು ಎಂದರೇನು?

19 ದೇವರನ್ನು ಪೂರ್ಣಪ್ರಾಣದಿಂದ ಸೇವಿಸುವುದು ಎಂಬುದರ ಅರ್ಥವೇನು? ಪ್ರಾಣವು ಒಬ್ಬ ಇಡೀ ವ್ಯಕ್ತಿಗೆ ಸೂಚಿತವಾಗುತ್ತದೆ, ಅವನ ಶಾರೀರಿಕ ಮತ್ತು ಮಾನಸಿಕ ಸಾಮರ್ಥ್ಯಗಳೆಲ್ಲವುಗಳ ಸಮೇತ. ಪ್ರಾಣದಲ್ಲೇ ಒಬ್ಬನ ಹೃದಯ, ಮನಸ್ಸು, ಮತ್ತು ಶಕ್ತಿಯು ಒಳಗೂಡಿರುವುದರಿಂದ, ಮಾರ್ಕ 12:30 ರಲ್ಲಿ ಈ ಬೇರೆ ಸಾಮರ್ಥ್ಯಗಳು ಪ್ರತ್ಯೇಕವಾಗಿ ತಿಳಿಸಲ್ಪಟ್ಟಿರುವುದೇಕೆ? ಒಂದು ದೃಷ್ಟಾಂತವನ್ನು ಗಮನಕ್ಕೆ ತನ್ನಿರಿ. ಬೈಬಲ್‌ ಕಾಲಗಳಲ್ಲಿ ಒಬ್ಬನು ತನ್ನನ್ನು (ಪ್ರಾಣವನ್ನು) ದಾಸ್ಯಕ್ಕೆ ಮಾರಿಕೊಳ್ಳಬಹುದಿತ್ತು. ಆದರೂ, ಆ ದಾಸನು ತನ್ನ ಯಜಮಾನನನ್ನು ಪೂರ್ಣಹೃದಯದಿಂದ ಸೇವಿಸುತ್ತಿದ್ದಿರಲಿಕ್ಕಿಲ್ಲ; ತನ್ನ ಯಜಮಾನನ ಅಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ತನ್ನ ಪೂರ್ಣಶಕ್ತಿಯನ್ನು ಅಥವಾ ತನ್ನ ಪೂರ್ಣ ಮಾನಸಿಕ ಸಾಮರ್ಥ್ಯಗಳನ್ನು ಅವನು ಬಳಸದೆ ಇದ್ದಿರಬಹುದು. (ಕೊಲೊಸ್ಸೆ 3:22) ಹೀಗಿರುವುದರಿಂದ ದೇವರಿಗೆ ನಮ್ಮ ಸೇವೆಯಲ್ಲಿ ನಾವು ಏನನ್ನೂ ತಡೆಹಿಡಿಯಬಾರದೆಂದು ಒತ್ತಿಹೇಳಲಿಕ್ಕಾಗಿ ಯೇಸು ಈ ಬೇರೆ ಸಾಮರ್ಥ್ಯಗಳನ್ನು ಪ್ರತ್ಯೇಕವಾಗಿ ಒತ್ತಿಹೇಳಿದ್ದಿರಬೇಕು. ದೇವರನ್ನು ಪೂರ್ಣಪ್ರಾಣದಿಂದ ಸೇವಿಸುವುದರ ಅರ್ಥ, ಆತನ ಸೇವೆಯಲ್ಲಿ ನಮ್ಮೆಲ್ಲ ಶಕ್ತಿ ಮತ್ತು ಚೈತನ್ಯವನ್ನು ಸಾಧ್ಯವಾದಷ್ಟು ಪೂರ್ಣಮಟ್ಟಿಗೆ ಬಳಸುತ್ತಾ ನಮ್ಮನ್ನೇ ಕೊಟ್ಟುಕೊಳ್ಳುವುದೇ ಆಗಿದೆ.

20 ಪೂರ್ಣಪ್ರಾಣದಿಂದ ಸೇವಿಸುವುದೆಂದರೆ ನಾವೆಲ್ಲರೂ ಸೇವೆಯಲ್ಲಿ ಏಕಮೊತ್ತದ ಸಮಯ ಮತ್ತು ಶಕ್ತಿಯನ್ನು ವ್ಯಯಿಸಬೇಕೆಂದಾಗಿದೆಯೊ? ಇದು ಎಷ್ಟೆಂದರೂ ಅಸಾಧ್ಯವೇ ಸರಿ, ಯಾಕಂದರೆ ಪರಿಸ್ಥಿತಿಗಳು ಮತ್ತು ಸಾಮರ್ಥ್ಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತವೆ. ಉದಾಹರಣೆಗೆ, ಸುದೃಢ ಆರೋಗ್ಯ ಮತ್ತು ದೈಹಿಕ ಶಕ್ತಿಯಿರುವ ಯುವಕನೊಬ್ಬನು, ವೃದ್ಧಾಪ್ಯದಿಂದಾಗಿ ಶಕ್ತಿಹೀನನಾದ ವ್ಯಕ್ತಿಗಿಂತ ಹೆಚ್ಚು ಸಮಯವನ್ನು ಸಾರುವಿಕೆಯಲ್ಲಿ ಕಳೆಯಶಕ್ತನಾಗಬಹುದು. ಕುಟುಂಬ ಜವಾಬ್ದಾರಿಗಳಿಲ್ಲದ ಒಬ್ಬ ಅವಿವಾಹಿತ ವ್ಯಕ್ತಿಯು, ಕುಟುಂಬವನ್ನು ಸಾಕಿಸಲಹಲಿರುವ ವ್ಯಕ್ತಿಗಿಂತ ಹೆಚ್ಚನ್ನು ಮಾಡಶಕ್ತನಾಗಬಹುದು. ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಸಾಧ್ಯಗೊಳಿಸುವ ಶಕ್ತಿಯೂ ಪರಿಸ್ಥಿತಿಗಳೂ ನಮಗಿರುವುದಾದರೆ, ನಾವೆಷ್ಟು ಕೃತಜ್ಞರಾಗಿರಬೇಕು! ಈ ವಿಷಯದಲ್ಲಿ ಇತರರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವಂಥ, ಟೀಕಾತ್ಮಕ ಭಾವವು ನಮ್ಮಲ್ಲಿ ಇರಲೇಬಾರದು ನಿಶ್ಚಯ. (ರೋಮಾಪುರ 14:10-12) ಬದಲಿಗೆ ನಾವು ನಮ್ಮ ಶಕ್ತಿಯನ್ನು ಇತರರ ಪ್ರೋತ್ಸಾಹನೆಗಾಗಿ ಬಳಸಲು ಬಯಸಬೇಕು.

21. ನಮ್ಮ ಶಕ್ತಿಯನ್ನು ಬಳಸುವ ಅತ್ಯುತ್ತಮ ಮತ್ತು ಅತಿ ಪ್ರಾಮುಖ್ಯವಾದ ವಿಧವು ಯಾವುದು?

21 ತನ್ನ ಶಕ್ತಿಯನ್ನು ಯೋಗ್ಯ ರೀತಿಯಲ್ಲಿ ಬಳಸುವುದರಲ್ಲಿ ಯೆಹೋವನು ಪರಿಪೂರ್ಣ ಮಾದರಿಯನ್ನು ಇಟ್ಟಿರುತ್ತಾನೆ. ಅಪರಿಪೂರ್ಣ ಮಾನವರಾದ ನಾವು ಆತನನ್ನು ನಮ್ಮಿಂದಾದಷ್ಟು ಉತ್ತಮವಾಗಿ ಅನುಸರಿಸಲು ಬಯಸುತ್ತೇವೆ. ಯಾರ ಮೇಲೆ ನಮಗೆ ಸ್ವಲ್ಪ ಮಟ್ಟಿಗಿನ ಅಧಿಕಾರವಿದೆಯೋ ಅವರಿಗೆ ಘನಮಾನಕೊಟ್ಟು ಉಪಚರಿಸುವ ಮೂಲಕ ನಾವು ನಮ್ಮ ಶಕ್ತಿಯನ್ನು ಯೋಗ್ಯವಾಗಿ ಬಳಸಬಲ್ಲೆವು. ಅದಲ್ಲದೆ, ಯೆಹೋವನು ನಮಗೆ ಮಾಡಿಮುಗಿಸಲು ಕೊಟ್ಟಿರುವ ಜೀವರಕ್ಷಕ ಸಾರುವ ಕೆಲಸವನ್ನು ನಾವು ಪೂರ್ಣಪ್ರಾಣದಿಂದ ಮಾಡುವವರಾಗಿರಬೇಕು. (ರೋಮಾಪುರ 10:13, 14) ನೀವು ನಿಮ್ಮ ಅತ್ಯುತ್ತಮವಾದುದನ್ನು​—ಪೂರ್ಣಪ್ರಾಣವನ್ನು​—ಕೊಡುವಾಗ ಯೆಹೋವನು ಸಂತೋಷಪಡುತ್ತಾನೆಂದು ನೆನಪಿನಲ್ಲಿಡಿರಿ. ಅಂಥ ತಿಳಿವಳಿಕೆಯುಳ್ಳ ಪ್ರೀತಿಯ ದೇವರನ್ನು ಸೇವಿಸಲಿಕ್ಕಾಗಿ ನಿಮ್ಮ ಕೈಲಾದದ್ದೆಲ್ಲವನ್ನು ಮಾಡಲು ನಿಮ್ಮ ಹೃದಯವು ನಿಮ್ಮನ್ನು ಪ್ರೇರೇಪಿಸುವುದಿಲ್ಲವೇ? ನಿಮ್ಮ ಶಕ್ತಿಯನ್ನು ಬಳಸಲು ಇದಕ್ಕಿಂತ ಅತ್ಯುತ್ತಮ ಅಥವಾ ಹೆಚ್ಚು ಪ್ರಾಮುಖ್ಯವಾದ ವಿಧ ಬೇರೊಂದಿಲ್ಲ.

^ ಪ್ಯಾರ. 10 ಬೈಬಲ್‌ ಕಾಲಗಳಲ್ಲಿ, “ಬೆತ್ತ” ಎಂಬುದಕ್ಕಿರುವ ಹೀಬ್ರು ಪದದ ಅರ್ಥ ಒಂದು ಕೋಲು ಅಥವಾ ದೊಣ್ಣೆಯಾಗಿದ್ದು, ಕುರುಬನು ತನ್ನ ಕುರಿಗಳನ್ನು ನಡಿಸಲು ಬಳಸುವಂಥದ್ದಾಗಿತ್ತು. (ಕೀರ್ತನೆ 23:4) ತದ್ರೀತಿಯಲ್ಲಿ, ಹೆತ್ತವರ ಅಧಿಕಾರದ “ಬೆತ್ತ” ಪ್ರೀತಿಯ ಮಾರ್ಗದರ್ಶನವನ್ನು ಸೂಚಿಸುತ್ತದೆಯೆ ಹೊರತು ಕಠೋರ ಯಾ ಪಾಶವೀಯ ಶಿಕ್ಷೆಯನ್ನಲ್ಲ.