ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

“ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು”

“ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು”

1, 2. ಕಾನೂನಿನ ವಿಷಯದಲ್ಲಿ ಅನೇಕ ಜನರಿಗೆ ಗೌರವವಿಲ್ಲವೇಕೆ, ಆದರೂ ದೇವರ ನಿಯಮಗಳ ಬಗ್ಗೆ ನಾವು ಯಾವ ಭಾವನೆಯನ್ನು ಬೆಳೆಸಿಕೊಳ್ಳಬಹುದು?

“ಕಾನೂನು ತಳವಿಲ್ಲದ ಗುಂಡಿ, ಅದು . . . ಎಲ್ಲವನ್ನೂ ಕಬಳಿಸಿಬಿಡುತ್ತದೆ.” ಈ ಹೇಳಿಕೆಯು 1712ರಷ್ಟು ಹಿಂದೆ ಪ್ರಕಾಶಿಸಲ್ಪಟ್ಟ ಒಂದು ಪುಸ್ತಕದಲ್ಲಿ ಪ್ರಕಟವಾಯಿತು. ಎಲ್ಲಿ ಮೊಕದ್ದಮೆಗಳು ಕೆಲವು ಬಾರಿ ಕೋರ್ಟ್‌ಗಳಲ್ಲಿ ವರ್ಷಾನುಗಟ್ಟಲೆ ಮುಂದೂಡಲ್ಪಡುತ್ತಾ ಇದ್ದು, ನ್ಯಾಯವನ್ನು ಕೋರುವವರನ್ನು ದಿವಾಳಿಯಾಗಿಸುತ್ತವೋ ಆ ಕಾನೂನು ವ್ಯವಸ್ಥೆಯನ್ನು ಆ ಪುಸ್ತಕದ ಲೇಖಕನು ಹಳಿಯುತ್ತಿದ್ದನು. ಅನೇಕ ದೇಶಗಳಲ್ಲಿ ಕಾನೂನು ಮತ್ತು ನ್ಯಾಯವಿಧಾಯಕ ವ್ಯವಸ್ಥೆಗಳು ಎಷ್ಟು ಜಟಿಲವೂ, ಎಷ್ಟೊಂದು ಅನ್ಯಾಯ, ಪೂರ್ವಾಗ್ರಹ, ಮತ್ತು ಅಸಂಗತತೆಗಳಿಂದಲೂ ತುಂಬಿವೆಯೆಂದರೆ, ಕಾನೂನಿನ ಕಡೆಗೆ ತಿರಸ್ಕಾರಭಾವವು ಬಹಳವಾಗಿ ಹಬ್ಬಿದೆ.

2 ಇದಕ್ಕೆ ವೈದೃಶ್ಯವಾಗಿ, 2,700 ವರ್ಷಗಳಷ್ಟು ಹಿಂದೆ ಬರೆಯಲ್ಪಟ್ಟ ಈ ಮಾತುಗಳನ್ನು ಗಮನಿಸಿರಿ: “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ.” (ಕೀರ್ತನೆ 119:97) ಕೀರ್ತನೆಗಾರನಿಗೆ ಅಷ್ಟೊಂದು ತೀವ್ರ ಪ್ರೀತಿಯೇಕಿತ್ತು? ಯಾಕಂದರೆ ಅವನು ಹೊಗಳಿದ ಆ ಧರ್ಮಶಾಸ್ತ್ರವು ಯಾವುದೇ ಐಹಿಕ ಸರ್ಕಾರದಿಂದಲ್ಲ, ಬದಲಾಗಿ ದೇವರಾದ ಯೆಹೋವನಿಂದ ಬಂದಿತ್ತು. ನೀವು ಯೆಹೋವನ ನಿಯಮಗಳನ್ನು ಅಧ್ಯಯನಿಸುತ್ತಾ ಹೋದಂತೆ, ನಿಮಗೂ ಅಧಿಕಾಧಿಕವಾಗಿ ಕೀರ್ತನೆಗಾರನಿಗಾದ ಅನಿಸಿಕೆಯೇ ಆಗಬಹುದು. ಅಂಥ ಅಧ್ಯಯನವು ನ್ಯಾಯತೀರ್ಮಾನದ ವಿಷಯದಲ್ಲಿ ವಿಶ್ವದಲ್ಲೆಲ್ಲಾ ಅತ್ಯಂತ ಶ್ರೇಷ್ಠ ಮೇಧಾವಿಯ ಬಗ್ಗೆ ಒಳನೋಟವನ್ನು ನಿಮಗೆ ಕೊಡುವುದು.

ಸರ್ವಶ್ರೇಷ್ಠ ನಿಯಮದಾತನು

3, 4. ಯಾವ ರೀತಿಗಳಲ್ಲಿ ಯೆಹೋವನು ನಿಯಮದಾತನಾಗಿ ಪರಿಣಮಿಸಿದ್ದಾನೆ?

3 “ನಿಯಮದಾತನೂ ನ್ಯಾಯಾಧಿಪತಿಯೂ ಒಬ್ಬನೇ” ಎಂದು ಬೈಬಲು ನಮಗೆ ಹೇಳುತ್ತದೆ. (ಯಾಕೋಬ 4:​12, NW) ಹೌದು, ಯೆಹೋವನೇ ಏಕಮಾತ್ರ ನಿಜ ನಿಯಮದಾತನು ಎಂಬುದಂತೂ ನಿಶ್ಚಯ. ಆಕಾಶಸ್ಥಕಾಯಗಳ ಚಲನೆಗಳು ಸಹ ಆತನ “ಖಗೋಲದ ಕಟ್ಟಳೆ”ಗಳಿಂದ ನಿಯಂತ್ರಿಸಲ್ಪಡುತ್ತವೆ. (ಯೋಬ 38:33) ಯೆಹೋವನ ಪರಿಶುದ್ಧ ದೇವದೂತರ ಗಣಗಳೂ ತದ್ರೀತಿಯಲ್ಲಿ ದೈವಿಕ ನಿಯಮದಿಂದ ನಡೆಸಲ್ಪಡುತ್ತವೆ, ಯಾಕಂದರೆ ಅವುಗಳು ನಿರ್ದಿಷ್ಟ ದರ್ಜೆಗಳಾಗಿ ಸಂಘಟಿಸಲ್ಪಟ್ಟು ಯೆಹೋವನ ಅಧಿಕಾರದ ಕೆಳಗೆ ಆತನ ಸೇವಕರೋಪಾದಿ ಸೇವೆಯನ್ನು ಸಲ್ಲಿಸುತ್ತವೆ.​—ಇಬ್ರಿಯ 1:​7, 14.

4 ಮಾನವಕುಲಕ್ಕೂ ಯೆಹೋವನು ನಿಯಮಗಳನ್ನು ಕೊಟ್ಟಿರುತ್ತಾನೆ. ನಮ್ಮಲ್ಲಿ ಪ್ರತಿಯೊಬ್ಬರಿಗೆ ಒಂದು ಮನಸ್ಸಾಕ್ಷಿ ಇದೆ, ಇದು ಯೆಹೋವನ ನ್ಯಾಯಪರತೆಯ ಒಂದು ಪ್ರತಿಬಿಂಬವಾಗಿದೆ. ಒಂದು ರೀತಿಯ ಆಂತರಿಕ ನಿಯಮದಂತಿರುವ ಮನಸ್ಸಾಕ್ಷಿಯು, ಸರಿ ತಪ್ಪಿನ ನಡುವಣ ಭೇದವನ್ನು ಗ್ರಹಿಸಲು ನಮಗೆ ಸಹಾಯಮಾಡಬಲ್ಲದು. (ರೋಮಾಪುರ 2:14) ನಮ್ಮ ಮೊದಲನೆಯ ಹೆತ್ತವರಿಗೆ ಒಂದು ಪರಿಪೂರ್ಣವಾದ ಮನಸ್ಸಾಕ್ಷಿಯು ನೀಡಲ್ಪಟ್ಟಿತ್ತು, ಆದ್ದರಿಂದ ಅವರಿಗೆ ಅಗತ್ಯವಿದ್ದದ್ದು ಕೇವಲ ಕೆಲವೇ ನಿಯಮಗಳು ಮಾತ್ರ. (ಆದಿಕಾಂಡ 2:​15-17) ಅಪರಿಪೂರ್ಣ ಮನುಷ್ಯನಿಗಾದರೊ, ದೇವರ ಚಿತ್ತವನ್ನು ಮಾಡುವುದಕ್ಕೆ ಮಾರ್ಗದರ್ಶಕವಾಗಿ ಹೆಚ್ಚಿನ ನಿಯಮಗಳ ಅಗತ್ಯವಿದೆ. ಮೂಲಪಿತೃಗಳಾದಂಥ ನೋಹ, ಅಬ್ರಹಾಮ, ಮತ್ತು ಯಾಕೋಬರು ಯೆಹೋವ ದೇವರಿಂದ ನಿಯಮಗಳನ್ನು ಪಡೆದುಕೊಂಡವರಾಗಿ ತಮ್ಮ ತಮ್ಮ ಕುಟುಂಬಗಳಿಗೆ ಅವನ್ನು ದಾಟಿಸಿದರು. (ಆದಿಕಾಂಡ 6:​22; 9:​3-6; 18:19; 26:​4, 5) ಮೋಶೆಯ ಮೂಲಕವಾಗಿ ಒಂದು ನಿಯಮ ಸಂಹಿತೆಯನ್ನು ಇಸ್ರಾಯೇಲ್‌ ಜನಾಂಗಕ್ಕೆ ಕೊಟ್ಟಾಗ, ಯೆಹೋವನು ಒಂದು ಅಭೂತಪೂರ್ವ ರೀತಿಯಲ್ಲಿ ತನ್ನನ್ನು ಒಬ್ಬ ನಿಯಮದಾತನನ್ನಾಗಿ ಮಾಡಿಕೊಂಡನು. ಈ ನಿಯಮ ಸಂಹಿತೆಯು ಯೆಹೋವನ ನ್ಯಾಯಪರತೆಯ ಬಗ್ಗೆ ವಿಸ್ತಾರವಾದ ಒಳನೋಟವನ್ನು ನಮಗೆ ನೀಡುತ್ತದೆ.

ಮೋಶೆಯ ಧರ್ಮಶಾಸ್ತ್ರ​—ಒಂದು ಸ್ಥೂಲ ಸಮೀಕ್ಷೆ

5. ಮೋಶೆಯ ಧರ್ಮಶಾಸ್ತ್ರವು ಹೊರೆದಾಯಕವಾದ, ಜಟಿಲವಾದ ನಿಯಮಗಳ ಒಂದು ಕಟ್ಟಾಗಿತ್ತೋ, ಮತ್ತು ನೀವು ಹಾಗೆ ಉತ್ತರಿಸುವುದೇಕೆ?

5 ಮೋಶೆಯ ಧರ್ಮಶಾಸ್ತ್ರವು ಹೊರೆದಾಯಕವಾದ ಜಟಿಲ ನಿಯಮಗಳ ಕಟ್ಟಾಗಿತ್ತೆಂದು ಅನೇಕರು ನೆನಸುತ್ತಾರೆ. ಆದರೆ ಅಂಥ ಅಭಿಪ್ರಾಯವು ಸತ್ಯವೇ ಅಲ್ಲ. ಆ ಇಡೀ ಸಂಹಿತೆಯಲ್ಲಿ 600ಕ್ಕಿಂತಲೂ ಹೆಚ್ಚು ನಿಯಮಗಳಿವೆ. ಎಷ್ಟೊಂದು ನಿಯಮಗಳಪ್ಪಾ ಎಂದು ನೀವು ಹೇಳಬಹುದು, ಆದರೆ ತುಸು ಯೋಚಿಸಿರಿ: 20ನೆಯ ಶತಮಾನದ ಅಂತ್ಯದೊಳಗೆ ಅಮೆರಿಕದ ಸರ್ಕಾರಿ ನಿಯಮಗಳು ಕಾನೂನು ಪುಸ್ತಕಗಳ 1,50,000 ಪುಟಗಳನ್ನೂ ಮಿಕ್ಕಿಹೋದವು. ಪ್ರತಿ ಎರಡು ವರ್ಷಗಳಲ್ಲಿ ಸುಮಾರು 600 ಹೆಚ್ಚು ನಿಯಮಗಳು ಅದಕ್ಕೆ ಕೂಡಿಸಲ್ಪಡುತ್ತವೆ! ಹೀಗೆ ಬರಿಯ ಪರಿಮಾಣವನ್ನು ಮಾತ್ರ ಹೋಲಿಸುವುದಾದರೂ, ಬೆಟ್ಟದಷ್ಟು ಎತ್ತರವಿರುವ ಮಾನವ ಕಾನೂನುಕಾಯಿದೆಗಳ ಮುಂದೆ, ಮೋಶೆಯ ಧರ್ಮಶಾಸ್ತ್ರವು ಏನೂ ಅಲ್ಲ. ಹೀಗಿದ್ದರೂ, ಆಧುನಿಕ ನಿಯಮಗಳು ಪ್ರಸ್ತಾಪಿಸಲೂ ಆರಂಭಿಸಿರದಂಥ ಜೀವನದ ಕ್ಷೇತ್ರಗಳಲ್ಲಿ ದೇವರ ನಿಯಮಗಳು ಇಸ್ರಾಯೇಲ್ಯರನ್ನು ನಡಿಸಿದವು. ಒಂದು ಸ್ಥೂಲ ಸಮೀಕ್ಷೆಯನ್ನು ಪರಿಗಣಿಸಿರಿ.

6, 7. (ಎ) ಬೇರೆ ಯಾವುದೇ ನಿಯಮ ಸಂಹಿತೆಯಿಂದ ಮೋಶೆಯ ಧರ್ಮಶಾಸ್ತ್ರವನ್ನು ಪ್ರತ್ಯೇಕಿಸುವಂಥಾದ್ದು ಯಾವುದು, ಮತ್ತು ಆ ಧರ್ಮಶಾಸ್ತ್ರದ ಅತಿ ಮುಖ್ಯ ನಿಯಮವು ಯಾವುದು? (ಬಿ) ಯೆಹೋವನ ಪರಮಾಧಿಕಾರವನ್ನು ತಾವು ಸ್ವೀಕರಿಸುತ್ತೇವೆಂದು ಇಸ್ರಾಯೇಲ್ಯರು ಹೇಗೆ ತೋರಿಸಬಹುದಿತ್ತು?

6ಆ ಧರ್ಮಶಾಸ್ತ್ರವು ಯೆಹೋವನ ಪರಮಾಧಿಕಾರವನ್ನು ಉತ್ಕರ್ಷಿಸಿತು. ಈ ಕಾರಣದಿಂದ ಮೋಶೆಯ ಧರ್ಮಶಾಸ್ತ್ರವನ್ನು ಬೇರೆ ಯಾವುದೇ ನಿಯಮ ಸಂಹಿತೆಯೊಂದಿಗೆ ಹೋಲಿಸಲಾಗದು. ಅದರ ಅತಿ ಮುಖ್ಯ ನಿಯಮವು ಇದಾಗಿತ್ತು: “ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” ದೇವಜನರು ಆತನಿಗಾಗಿರುವ ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕಿತ್ತು? ಆತನ ಪರಮಾಧಿಕಾರಕ್ಕೆ ಅಧೀನರಾಗಿ ಅವರು ಆತನ ಸೇವೆಯನ್ನು ಮಾಡಬೇಕಿತ್ತು.​—ಧರ್ಮೋಪದೇಶಕಾಂಡ 6:​4, 5; 11:13.

7 ಪ್ರತಿಯೊಬ್ಬ ಇಸ್ರಾಯೇಲ್ಯನು ತನ್ನ ಮೇಲೆ ಅಧಿಕಾರ ನಡಿಸಲು ನೇಮಿತರಾದವರಿಗೆ ಅಧೀನನಾಗಿರುವ ಮೂಲಕ, ಯೆಹೋವನ ಪರಮಾಧಿಕಾರವನ್ನು ತಾನು ಸ್ವೀಕರಿಸುತ್ತೇನೆಂದು ತೋರಿಸಿದನು. ಹೆತ್ತವರು, ಅಧಿಪತಿಗಳು, ನ್ಯಾಯಾಧಿಪತಿಗಳು, ಯಾಜಕರು, ಮತ್ತು ಕಾಲಾನಂತರ ಅರಸರು ಸಹ ದೈವಿಕ ಅಧಿಕಾರವನ್ನು ಪ್ರತಿನಿಧಿಸಿದರು. ಅಧಿಕಾರದ ಸ್ಥಾನದಲ್ಲಿರುವ ಯಾವನೇ ವ್ಯಕ್ತಿಯ ವಿರುದ್ಧ ದಂಗೆಯೇಳುವುದನ್ನು ಯೆಹೋವನು ತನ್ನ ವಿರುದ್ಧವಾದ ದಂಗೆಯಾಗಿ ಪರಿಗಣಿಸಿದ್ದನು. ಇನ್ನೊಂದು ಕಡೆ, ಅಧಿಕಾರದ ಸ್ಥಾನದಲ್ಲಿರುವವರು ಯೆಹೋವನ ಜನರೊಂದಿಗೆ ಅನ್ಯಾಯ ಅಥವಾ ಅಹಂಕಾರದಿಂದ ವ್ಯವಹರಿಸಿದ್ದಲ್ಲಿ ಆತನ ಕ್ರೋಧಕ್ಕೆ ಪಾತ್ರರಾಗುವ ಅಪಾಯವಿತ್ತು. (ವಿಮೋಚನಕಾಂಡ 20:12; 22:28; ಧರ್ಮೋಪದೇಶಕಾಂಡ 1:​16, 17; 17:​8-20; 19:​16, 17) ಹೀಗೆ ಅಧಿಕಾರ ನಡೆಸುವವರೂ ಅಧಿಕಾರಕ್ಕೆ ಅಧೀನರಾಗಿರುವವರೂ ಇಬ್ಬರೂ ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯಲು ಹೊಣೆಗಾರರಾಗಿದ್ದರು.

8. ಯೆಹೋವನ ಪರಿಶುದ್ಧತೆಯ ಮಟ್ಟವನ್ನು ಧರ್ಮಶಾಸ್ತ್ರವು ಹೇಗೆ ಎತ್ತಿಹಿಡಿಯಿತು?

8ಆ ಧರ್ಮಶಾಸ್ತ್ರವು ಯೆಹೋವನ ಪರಿಶುದ್ಧತೆಯ ಮಟ್ಟವನ್ನು ಎತ್ತಿಹಿಡಿದಿತ್ತು. ಸಾಮಾನ್ಯವಾಗಿ “ಪರಿಶುದ್ಧ” ಮತ್ತು “ಪವಿತ್ರ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದಗಳು ಮೋಶೆಯ ಧರ್ಮಶಾಸ್ತ್ರದ ಮೂಲಪ್ರತಿಯಲ್ಲಿ 280ಕ್ಕಿಂತಲೂ ಹೆಚ್ಚು ಬಾರಿ ಕಂಡುಬರುತ್ತವೆ. ಯಾವುದು ಶುದ್ಧ ಮತ್ತು ಯಾವುದು ಅಶುದ್ಧ ಎಂಬುದರ ನಡುವಣ ಭೇದವನ್ನು ಗ್ರಹಿಸಿಕೊಳ್ಳಲು ಧರ್ಮಶಾಸ್ತ್ರವು ದೇವಜನರಿಗೆ ಸಹಾಯಮಾಡಿತು. ಒಬ್ಬ ಇಸ್ರಾಯೇಲ್ಯನನ್ನು ವಿಧಿವಿಹಿತವಾಗಿ ಅಶುದ್ಧನನ್ನಾಗಿ ಮಾಡಸಾಧ್ಯವಿದ್ದ 70 ವಿವಿಧ ವಿಷಯಗಳನ್ನು ಅದರಲ್ಲಿ ತಿಳಿಸಲಾಗಿತ್ತು. ಈ ನಿಯಮಗಳು ಶಾರೀರಿಕ ಆರೋಗ್ಯ, ಪಥ್ಯೆ, ಮತ್ತು ಕಲ್ಮಶವನ್ನು ತೊಲಗಿಸಿಬಿಡುವ ವಿಧಾನದ ಕುರಿತಾಗಿಯೂ ತಿಳಿಸಿದ್ದವು. ಅಂಥ ನಿಯಮಗಳು ಗಮನಾರ್ಹವಾದಂಥ ಶಾರೀರಿಕ ಸೌಖ್ಯಕ್ಕೆ ದಾರಿಮಾಡಿದವು. * ಆದರೆ ಅವುಗಳ ಉದ್ದೇಶವು ಇನ್ನೂ ಉನ್ನತವಾದದ್ದಾಗಿತ್ತು. ಅದೇನೆಂದರೆ, ಆ ಜನರನ್ನು, ಸುತ್ತಮುತ್ತಲಿದ್ದ ಅವನತಿಗಿಳಿದಂಥ ಜನಾಂಗಗಳ ಪಾಪಪೂರ್ಣ ಪದ್ಧತಿಗಳಿಂದ ಪ್ರತ್ಯೇಕವಾಗಿಟ್ಟು, ಯೆಹೋವನ ಅನುಗ್ರಹದ ಕೆಳಗೆ ಉಳಿಯುವಂತೆ ಮಾಡುವುದೇ. ಒಂದು ಉದಾಹರಣೆಯನ್ನು ಪರಿಗಣಿಸಿರಿ.

9, 10. ನಿಯಮದೊಡಂಬಡಿಕೆಯಲ್ಲಿ ಲೈಂಗಿಕ ಸಂಭೋಗ ಮತ್ತು ಹೆರಿಗೆಗಳ ಸಂಬಂಧದಲ್ಲಿ ಯಾವ ಕಟ್ಟಳೆಗಳು ಇದ್ದವು, ಮತ್ತು ಅಂಥ ನಿಯಮಗಳು ಯಾವ ಪ್ರಯೋಜನಗಳನ್ನು ಒದಗಿಸಿದವು?

9 ನಿಯಮದೊಡಂಬಡಿಕೆಯ ಕಟ್ಟಳೆಗಳು, ಲೈಂಗಿಕ ಸಂಭೋಗ ಮತ್ತು ಹೆರಿಗೆಗಳು​—ವಿವಾಹಿತ ವ್ಯಕ್ತಿಗಳಲ್ಲೂ​—ಅಶುದ್ಧತೆಯ ಅವಧಿಯನ್ನು ಪಾಲಿಸುವುದನ್ನು ಅವಶ್ಯಪಡಿಸಿದವು. (ಯಾಜಕಕಾಂಡ 12:​2-4; 15:​16-18) ಅಂಥ ಕಟ್ಟಳೆಗಳು ದೇವರಿಂದ ಬಂದ ಈ ಶುದ್ಧ ವರದಾನಗಳನ್ನು ತುಚ್ಛೀಕರಿಸುತ್ತಿರಲಿಲ್ಲ. (ಆದಿಕಾಂಡ 1:28; 2:​18-25) ಬದಲಿಗೆ, ಆ ನಿಯಮಗಳು ದೇವರ ಆರಾಧಕರನ್ನು ಹೊಲೆಗೆಡುವುದರಿಂದ ದೂರವಿರಿಸಿ, ಯೆಹೋವನ ಪರಿಶುದ್ಧತೆಯನ್ನು ಎತ್ತಿಹಿಡಿದವು. ಇಸ್ರಾಯೇಲಿನ ಸುತ್ತುಮುತ್ತಲಿನ ಜನಾಂಗಗಳು ಆರಾಧನೆಯೊಂದಿಗೆ, ಸಂಭೋಗ ಮತ್ತು ಗರ್ಭಮೂಡಿಸುವ ಸಂಸ್ಕಾರಗಳನ್ನು ಬೆರೆಸುತ್ತಿದ್ದವೆಂಬುದು ಇಲ್ಲಿ ಗಮನಿಸಬೇಕಾದ ವಿಷಯವಾಗಿದೆ. ಕಾನಾನ್ಯ ಧರ್ಮದಲ್ಲಿ ಪುರುಷ ಮತ್ತು ಸ್ತ್ರೀಯರ ವೇಶ್ಯಾವಾಟಿಕೆಯು ನಡಿಯುತಿತ್ತು. ಇದೆಲ್ಲದರಿಂದಾಗಿ ಅತ್ಯಂತ ಕೀಳುಮಟ್ಟದ ಕೆಟ್ಟತನವು ಫಲಿಸಿ, ಹಬ್ಬಿತು. ಇದಕ್ಕೆ ವೈದೃಶ್ಯದಲ್ಲಿ, ಧರ್ಮಶಾಸ್ತ್ರವಾದರೊ ಯೆಹೋವನ ಆರಾಧನೆಯನ್ನು ಲೈಂಗಿಕ ವಿಷಯಗಳಿಂದ ಪೂರ್ಣವಾಗಿ ಪ್ರತ್ಯೇಕವಾಗಿಟ್ಟಿತು. * ಬೇರೆ ಪ್ರಯೋಜನಗಳೂ ಅದರಲ್ಲಿದ್ದವು.

10 ಆ ನಿಯಮಗಳು ಒಂದು ಪ್ರಾಮುಖ್ಯ ಸತ್ಯವನ್ನು ಕಲಿಸಿದವು. * ವಾಸ್ತವದಲ್ಲಿ, ಆದಾಮನ ಪಾಪದ ಕಲೆಯು ಒಂದು ಸಂತತಿಯಿಂದ ಇನ್ನೊಂದು ಸಂತತಿಗೆ ರವಾನಿಸಲ್ಪಡುವುದಾದರೂ ಹೇಗೆ? ಲೈಂಗಿಕ ಸಂಭೋಗ ಮತ್ತು ಹೆರಿಗೆಗಳ ಮೂಲಕವೇ ಅಲ್ಲವೇ? (ರೋಮಾಪುರ 5:12) ಹೌದು, ದೇವರ ಧರ್ಮಶಾಸ್ತ್ರವು ಯಾವಾಗಲೂ ಇರುವ ಪಾಪದ ವಾಸ್ತವಿಕತೆಯನ್ನು ದೇವಜನರಿಗೆ ಜ್ಞಾಪಕಹುಟ್ಟಿಸುತ್ತಿತ್ತು. ವಾಸ್ತವದಲ್ಲಿ ನಾವೆಲ್ಲರೂ ಪಾಪದಲ್ಲಿಯೆ ಜನಿಸಿದ್ದೇವೆ. (ಕೀರ್ತನೆ 51:5) ನಮ್ಮ ಪರಿಶುದ್ಧ ದೇವರ ಸಮೀಪಕ್ಕೆ ಬರುವುದಕ್ಕಾಗಿ ನಮಗೆ ಕ್ಷಮಾಪಣೆಯೂ ವಿಮೋಚನೆಯೂ ಅಗತ್ಯವಾಗಿ ಬೇಕು.

11, 12. (ಎ) ನ್ಯಾಯದ ಕುರಿತ ಯಾವ ಪ್ರಧಾನ ಸೂತ್ರವನ್ನು ಧರ್ಮಶಾಸ್ತ್ರವು ಸಮರ್ಥಿಸಿತ್ತು? (ಬಿ) ನ್ಯಾಯವನ್ನು ವಿಕೃತಗೊಳಿಸುವುದರ ವಿರುದ್ಧ ಧರ್ಮಶಾಸ್ತ್ರದಲ್ಲಿ ಯಾವ ರಕ್ಷಣೋಪಾಯಗಳಿದ್ದವು?

11ಆ ಧರ್ಮಶಾಸ್ತ್ರವು ಯೆಹೋವನ ಪರಿಪೂರ್ಣ ನ್ಯಾಯವನ್ನು ಎತ್ತಿಹಿಡಿಯಿತು. ಮೋಶೆಯ ಧರ್ಮಶಾಸ್ತ್ರವು ನ್ಯಾಯದ ಸಂಬಂಧದಲ್ಲಿ ಸಮಬೆಲೆಯುಳ್ಳ ಅಥವಾ ಸಮತೆಯ ಸೂತ್ರವನ್ನು ಸಮರ್ಥಿಸಿತ್ತು. ಆದುದರಿಂದ ಧರ್ಮಶಾಸ್ತ್ರವು ಹೇಳಿದ್ದು: “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನು ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನು ಕೈಗೆ ಪ್ರತಿಯಾಗಿ ಕೈಯನ್ನೂ ಕಾಲಿಗೆ ಪ್ರತಿಯಾಗಿ ಕಾಲನ್ನೂ ಅವನಿಗೆ ನಷ್ಟಪಡಿಸಬೇಕು.” (ಧರ್ಮೋಪದೇಶಕಾಂಡ 19:21) ಹೀಗಿರಲಾಗಿ ತಕ್ಷೀರು ಮೊಕದ್ದಮೆಗಳಲ್ಲಿ, ಒಬ್ಬನು ಮಾಡಿದ ಅಪರಾಧಕ್ಕೆ ಅನುಗುಣವಾದ ಶಿಕ್ಷೆಯನ್ನು ವಿಧಿಸುವುದು ಆವಶ್ಯಕವಾಗಿತ್ತು. ದೈವಿಕ ನ್ಯಾಯದ ಈ ಅಂಶವು ಆ ಇಡೀ ಧರ್ಮಶಾಸ್ತ್ರದಲ್ಲಿ ಎದ್ದುಕಾಣುತ್ತಿತ್ತು ಮತ್ತು ಅಧ್ಯಾಯ 14 ತೋರಿಸಲಿರುವ ಪ್ರಕಾರ, ಕ್ರಿಸ್ತ ಯೇಸುವಿನ ಈಡು ಯಜ್ಞವನ್ನು ಅರ್ಥಮಾಡಿಕೊಳ್ಳುವುದಕ್ಕೆ ಇಂದಿನ ವರೆಗೂ ಆವಶ್ಯಕವಾಗಿದೆ.​—1 ತಿಮೊಥೆಯ 2:5, 6.

12 ನ್ಯಾಯವನ್ನು ವಿಕೃತಗೊಳಿಸುವುದರ ವಿರುದ್ಧ ಧರ್ಮಶಾಸ್ತ್ರದಲ್ಲಿ ರಕ್ಷಣೋಪಾಯಗಳೂ ಇದ್ದವು. ಉದಾಹರಣೆಗೆ, ಒಂದು ಅಪರಾಧದ ಸಪ್ರಮಾಣತೆಯನ್ನು ಸ್ಥಾಪಿಸಲು ಕಡಿಮೆಪಕ್ಷ ಇಬ್ಬರು ಸಾಕ್ಷಿಗಳ ಆವಶ್ಯಕತೆಯಿತ್ತು. ಸುಳ್ಳು ಸಾಕ್ಷ್ಯಕ್ಕೆ ತೀಕ್ಷ್ಣ ಶಿಕ್ಷೆಯಾಗುತ್ತಿತ್ತು. (ಧರ್ಮೋಪದೇಶಕಾಂಡ 19:​15, 18, 19) ಭ್ರಷ್ಟಾಚಾರ ಮತ್ತು ಲಂಚಗಾರಿಕೆಯು ಸಹ ಕಟ್ಟುನಿಟ್ಟಾಗಿ ನಿಷೇಧಿಸಲ್ಪಟ್ಟಿತ್ತು. (ವಿಮೋಚನಕಾಂಡ 23:8; ಧರ್ಮೋಪದೇಶಕಾಂಡ 27:25) ತಮ್ಮ ವ್ಯಾಪಾರ ವಹಿವಾಟುಗಳಲ್ಲೂ ಯೆಹೋವನ ನ್ಯಾಯದ ಉನ್ನತ ಮಟ್ಟವನ್ನು ದೇವಜನರು ಎತ್ತಿಹಿಡಿಯಬೇಕಿತ್ತು. (ಯಾಜಕಕಾಂಡ 19:35, 36; ಧರ್ಮೋಪದೇಶಕಾಂಡ 23:19, 20) ಆ ಉದಾತ್ತ ಮತ್ತು ನಿಷ್ಪಕ್ಷಪಾತದ ಕಾನೂನು ಸಂಹಿತೆಯು ಇಸ್ರಾಯೇಲಿಗೆ ಒಂದು ದೊಡ್ಡ ಆಶೀರ್ವಾದವಾಗಿತ್ತು!

ನ್ಯಾಯವಿಧಾಯಕ ವಿಷಯಗಳಲ್ಲಿ ಕರುಣೆ ಮತ್ತು ನಿಷ್ಪಕ್ಷಪಾತದಿಂದ ಕೂಡಿದ ವ್ಯವಹಾರವನ್ನು ಎತ್ತಿಹಿಡಿಯುವ ನಿಯಮಗಳು

13, 14. ಕಳ್ಳನಿಗೆ ಮತ್ತು ಯಾರ ಸ್ವತ್ತು ಕಳವಾಗಿದೆಯೊ ಅವನಿಗೆ ನಿಷ್ಪಕ್ಷಪಾತದ ಮತ್ತು ಸರಿಯಾದ ನ್ಯಾಯವನ್ನು ಧರ್ಮಶಾಸ್ತ್ರವು ಹೇಗೆ ಪ್ರವರ್ಧಿಸಿತು?

13 ಮೋಶೆಯ ಧರ್ಮಶಾಸ್ತ್ರವು, ಕಟ್ಟುನಿಟ್ಟಾದ ಕರುಣೆಯಿಲ್ಲದ ನಿಯಮಗಳ ಸಂಗ್ರಹವಾಗಿತ್ತೊ? ನಿಶ್ಚಯವಾಗಿಯೂ ಅಲ್ಲ! ಅರಸನಾದ ದಾವೀದನು ಹೀಗೆ ಬರೆಯಲು ಪ್ರೇರಿಸಲ್ಪಟ್ಟನು: “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು.” (ಕೀರ್ತನೆ 19:7) ಅವನಿಗೆ ಚೆನ್ನಾಗಿ ಗೊತ್ತಿದ್ದ ಪ್ರಕಾರ, ಧರ್ಮಶಾಸ್ತ್ರವು ಕರುಣೆ ಮತ್ತು ನಿಷ್ಪಕ್ಷಪಾತದ ವ್ಯವಹಾರಕ್ಕೆ ಇಂಬುಕೊಡುತ್ತಿತ್ತು. ಅದು ಹೇಗೆ?

14 ಇಂದು ಕೆಲವು ದೇಶಗಳಲ್ಲಿನ ಕಾನೂನು, ದುಷ್ಕರ್ಮಕ್ಕೆ ಗುರಿಯಾದವರಿಗಿಂತ ದುಷ್ಕರ್ಮಿಗಳಿಗೇ ಹೆಚ್ಚಿನ ದಯೆ ಮತ್ತು ಒಲವು ತೋರುತ್ತಿರುವಂತೆ ಕಾಣುತ್ತದೆ. ಉದಾಹರಣೆಗೆ, ಕಳ್ಳರು ಸೆರೆಮನೆಯಲ್ಲಿ ಕುಳಿತು ದಿನಕಳೆಯುತ್ತಿರುವಾಗ, ಯಾರ ಸ್ವತ್ತು ಕಳವಾಗಿದೆಯೊ ಅವರು ನಷ್ಟವನ್ನು ಅನುಭವಿಸುವುದರ ಜೊತೆಗೆ ಆ ದುಷ್ಕರ್ಮಿಗಳ ಊಟ ಮತ್ತು ವಸತಿಗಾಗಿ ಹಣ ಒದಗಿಸುವಂಥ ತೆರಿಗೆಗಳನ್ನು ಸಹ ಕೊಡುತ್ತಲೇ ಇರಬೇಕಾಗುತ್ತದೆ. ಪುರಾತನ ಇಸ್ರಾಯೇಲಿನಲ್ಲಿ ಇಂದಿನ ಹಾಗೆ ಸೆರೆಮನೆಗಳು ಇರಲಿಲ್ಲ. ಶಿಕ್ಷೆಯ ತೀಕ್ಷ್ಣತೆಯ ಸಂಬಂಧದಲ್ಲಿ ಕಟ್ಟುನಿಟ್ಟಾದ ಮಿತಿಗಳಿದ್ದವು. (ಧರ್ಮೋಪದೇಶಕಾಂಡ 25:1-3) ಒಬ್ಬ ಕಳ್ಳನು ತಾನು ಕದ್ದುಕೊಂಡಿದ್ದ ವಸ್ತುಗಳಿಗಾಗಿ ಆ ವ್ಯಕ್ತಿಗೆ ನಷ್ಟಭರ್ತಿಮಾಡಬೇಕಾಗಿತ್ತು. ಅದಲ್ಲದೆ ಕಳ್ಳನು ಹೆಚ್ಚಿನ ಹಣವನ್ನು ಸಲ್ಲಿಸಬೇಕಾಗುತ್ತಿತ್ತು. ಎಷ್ಟು ಹಣವನ್ನು ಕೊಡಬೇಕಾಗಿತ್ತು? ಅದು ಭಿನ್ನಭಿನ್ನವಾಗಿರುತ್ತಿತ್ತು. ಪಾಪಿಯ ಪಶ್ಚಾತ್ತಾಪವೇ ಮುಂತಾದ ಹಲವಾರು ಸಂಗತಿಗಳನ್ನು ನ್ಯಾಯಾಧಿಪತಿಗಳು ತೂಗಿನೋಡುವಷ್ಟು ಸ್ವಾತಂತ್ರ್ಯ ಕೊಡಲ್ಪಟ್ಟಿತ್ತೆಂಬುದು ವ್ಯಕ್ತ. ಇದು, ಯಾಜಕಕಾಂಡ 6:1-7 ರಲ್ಲಿ ಒಬ್ಬ ಕಳ್ಳನಿಂದ ಅವಶ್ಯಪಡಿಸಲ್ಪಟ್ಟ ನಷ್ಟಭರ್ತಿಯು ವಿಮೋಚನಕಾಂಡ 22:7 ರಲ್ಲಿ ತಿಳಿಸಲ್ಪಟ್ಟ ನಷ್ಟಭರ್ತಿಗಿಂತ ಎಷ್ಟೋ ಪಾಲು ಕಡಿಮೆಯಾಗಿರುವುದೇಕೆಂಬುದನ್ನು ವಿವರಿಸುತ್ತದೆ.

15. ಒಬ್ಬನು ಅಕಸ್ಮಾತ್ತಾಗಿ ಇನ್ನೊಬ್ಬನನ್ನು ಕೊಂದ ಸಂದರ್ಭದಲ್ಲಿ, ಧರ್ಮಶಾಸ್ತ್ರವು ಕರುಣೆ ಮತ್ತು ನ್ಯಾಯ ಇವೆರಡನ್ನೂ ತೋರಿಸುತ್ತಿದ್ದದ್ದು ಹೇಗೆ?

15 ಮಾಡಲ್ಪಟ್ಟ ಎಲ್ಲಾ ಅಪರಾಧಗಳು ಬೇಕುಬೇಕೆಂದು ಗೈದವುಗಳಲ್ಲವೆಂಬುದನ್ನು ಧರ್ಮಶಾಸ್ತ್ರವು ಕರುಣಾಪೂರ್ವಕವಾಗಿ ಅಂಗೀಕರಿಸಿತು. ದೃಷ್ಟಾಂತಕ್ಕಾಗಿ, ಒಬ್ಬ ಮನುಷ್ಯನು ಅಕಸ್ಮಾತ್ತಾಗಿ ಇನ್ನೊಬ್ಬನನ್ನು ಕೊಂದಲ್ಲಿ, ಇಸ್ರಾಯೇಲಿನಾದ್ಯಂತ ಚದರಿದ್ದ ಆಶ್ರಯನಗರಗಳಲ್ಲೊಂದಕ್ಕೆ ಓಡಿಹೋಗುವ ಮೂಲಕ ಯೋಗ್ಯ ಕ್ರಮವನ್ನು ಕೈಕೊಂಡಲ್ಲಿ ಅವನಿಗೆ ಪ್ರಾಣಕ್ಕೆ ಬದಲಾಗಿ ಪ್ರಾಣವನ್ನು ಕೊಡುವ ಆವಶ್ಯಕತೆ ಇರಲಿಲ್ಲ. ಅರ್ಹತೆಯಿದ್ದ ನ್ಯಾಯಾಧಿಪತಿಗಳು ಅವನ ಪಾತಕವನ್ನು ತನಿಖೆಮಾಡಿದ ಬಳಿಕ, ಅವನು ಮಹಾಯಾಜಕನ ಮರಣದ ತನಕ ಆ ಆಶ್ರಯ ನಗರದಲ್ಲೇ ವಾಸಿಸಬೇಕಿತ್ತು. ಆಮೇಲೆ ಅವನು ಬೇಕಾದಲ್ಲಿಗೆ ಹೋಗಿ ಜೀವಿಸಲು ಸ್ವತಂತ್ರನಿದ್ದನು. ಹೀಗೆ ಅವನು ದೈವಿಕ ಕರುಣೆಯಿಂದ ಪ್ರಯೋಜನವನ್ನು ಹೊಂದಿದ್ದನು. ಅದೇ ಸಮಯದಲ್ಲಿ, ಮಾನವ ಜೀವದ ಶ್ರೇಷ್ಠ ಮೌಲ್ಯಕ್ಕೆ ಈ ನಿಯಮವು ಒತ್ತು ಕೊಟ್ಟಿತ್ತು.​—ಅರಣ್ಯಕಾಂಡ 15:30, 31; 35:12-25.

16. ನಿರ್ದಿಷ್ಟವಾದ ವೈಯಕ್ತಿಕ ಹಕ್ಕುಗಳನ್ನು ಧರ್ಮಶಾಸ್ತ್ರವು ಹೇಗೆ ರಕ್ಷಿಸಿತ್ತು?

16 ವೈಯಕ್ತಿಕ ಹಕ್ಕುಗಳನ್ನು ಸಹ ಧರ್ಮಶಾಸ್ತ್ರವು ಸುರಕ್ಷಿತಗೊಳಿಸಿತ್ತು. ಸಾಲ ಮಾಡಿದವರನ್ನು ಅದು ಯಾವ ರೀತಿಯಲ್ಲಿ ರಕ್ಷಿಸಿತ್ತೆಂಬುದನ್ನು ತುಸು ಪರಿಗಣಿಸಿರಿ. ಸಾಲಕ್ಕಾಗಿ ಒತ್ತೆಯಾಗಿ ಇಡಲು ಯಾವುದೇ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸಾಲಗಾರನ ಮನೆಯೊಳಗೆ ಪ್ರವೇಶಿಸುವುದನ್ನು ಧರ್ಮಶಾಸ್ತ್ರವು ನಿಷೇಧಿಸಿತ್ತು. ಬದಲಿಗೆ, ಸಾಲಕೊಟ್ಟವನು ಹೊರಗೆ ನಿಂತು ಸಾಲಗಾರನೇ ಒತ್ತೆಯ ಸಾಮಾನನ್ನು ತಂದುಕೊಡುವಂತೆ ಬಿಡಬೇಕಿತ್ತು. ಹೀಗೆ ಒಬ್ಬ ಮನುಷ್ಯನ ಮನೆಯನ್ನು ನುಗ್ಗಿ ಅತಿಕ್ರಮಣ ಮಾಡುವಂಥಾಗುವುದಿಲ್ಲ. ಸಾಲಕೊಟ್ಟವನು ಸಾಲಗಾರನ ಕಂಬಳಿಯನ್ನೇ ಒತ್ತೆಯಾಗಿ ತೆಗೆದುಕೊಂಡ ಸಂದರ್ಭದಲ್ಲಿ, ಅದನ್ನು ರಾತ್ರಿಯಾಗುವ ಮುಂಚೆ ಹಿಂದೆಕೊಡಬೇಕಿತ್ತು ಯಾಕಂದರೆ ರಾತ್ರಿವೇಳೆಯಲ್ಲಿ ಬೆಚ್ಚಗಿರಲು ಆ ಸಾಲಗಾರನಿಗೆ ಅದು ಬೇಕಾಗಬಹುದು.​—ಧರ್ಮೋಪದೇಶಕಾಂಡ 24:10-14.

17, 18. ಯುದ್ಧ ಕಾರ್ಯಾಚರಣೆಯ ಸಂಬಂಧದಲ್ಲಿ, ಇಸ್ರಾಯೇಲ್ಯರು ಬೇರೆ ಜನಾಂಗಗಳಿಗಿಂತ ಹೇಗೆ ಭಿನ್ನರಾಗಿದ್ದರು, ಮತ್ತು ಏಕೆ?

17 ಯುದ್ಧಾಚರಣೆಯು ಸಹ ಧರ್ಮಶಾಸ್ತ್ರಕ್ಕೆ ಒಳಪಡಿಸಲ್ಪಟ್ಟಿತ್ತು. ದೇವಜನರು ಯುದ್ಧಮಾಡಿದ್ದು ಬರಿಯ ಅಧಿಕಾರದ ಅಥವಾ ರಾಜ್ಯಗಳನ್ನು ಗೆಲ್ಲಬೇಕೆಂಬ ದಾಹವನ್ನು ತಣಿಸಲಿಕ್ಕಾಗಿ ಅಲ್ಲ, ಬದಲಿಗೆ ‘ಯೆಹೋವನ ಯುದ್ಧಗಳಲ್ಲಿ’ ಆತನ ಕಾರ್ಯಭಾರಿಗಳಾಗಿ ಕ್ರಿಯೆಗೈಯಲಿಕ್ಕಾಗಿಯೇ. (ಅರಣ್ಯಕಾಂಡ 21:​14, ಪರಿಶುದ್ಧ ಬೈಬಲ್‌) ಹೆಚ್ಚಿನ ಸಂದರ್ಭಗಳಲ್ಲಿ ಇಸ್ರಾಯೇಲ್ಯರು ಮೊದಲು ಶತ್ರುಗಳ ಮುಂದೆ ಶರಣಾಗತರಾಗುವ ಷರತ್ತುಗಳನ್ನು ಇಡಬೇಕಿತ್ತು. ಆ ನೀಡಿಕೆಯನ್ನು ಒಂದು ಪಟ್ಟಣವು ತಿರಸ್ಕರಿಸಿದರೆ, ಆಗ ಮಾತ್ರ ಇಸ್ರಾಯೇಲ್ಯರು ಅದರ ಮೇಲೆ ಆಕ್ರಮಣ ನಡಿಸಬಹುದಿತ್ತು​—ಆದರೆ ಅದು ಸಹ ದೇವರ ನಿಬಂಧನೆಗಳಿಗೆ ಹೊಂದಿಕೆಯಲ್ಲೇ. ಇತಿಹಾಸದಾದ್ಯಂತ ಅನೇಕ ಸೈನಿಕರು ಮಾಡಿರುವಂತೆ, ಇಸ್ರಾಯೇಲ್‌ ಸೇನೆಯ ಪುರುಷರಿಗಾದರೋ ಸ್ತ್ರೀಯರ ಮೇಲೆ ಬಲಾತ್ಕಾರ ಸಂಭೋಗ ಮಾಡಲಿಕ್ಕಾಗಲಿ ಅಥವಾ ಸಿಕ್ಕಾಬಟ್ಟೆ ಹತಿಸುವುದಕ್ಕಾಗಲಿ ಅನುಮತಿಯಿರಲಿಲ್ಲ. ಅವರು ಪರಿಸರವನ್ನೂ ಗೌರವಿಸಬೇಕಿತ್ತು, ಶತ್ರುಗಳ ಹಣ್ಣಿನ ಮರಗಳನ್ನು ಕಡಿದುಹಾಕಬಾರದಿತ್ತು. * ಬೇರೆ ಸೈನ್ಯಗಳಿಗಾದರೊ ಅಂಥ ಯಾವುದೇ ನಿರ್ಬಂಧಗಳಿರಲಿಲ್ಲ.​—ಧರ್ಮೋಪದೇಶಕಾಂಡ 20:10-15, 19, 20; 21:10-13.

18 ಕೆಲವು ದೇಶಗಳಲ್ಲಿ ಚಿಕ್ಕ ಮಕ್ಕಳು ಸಹ ಸೈನಿಕರಾಗಿ ತರಬೇತು ಪಡೆಯುತ್ತಿರುವುದನ್ನು ಕೇಳುವಾಗ ನಿಮಗೆ ಜುಗುಪ್ಸೆ ಹುಟ್ಟುವುದಿಲ್ಲವೇ? ಪುರಾತನ ಇಸ್ರಾಯೇಲಿನಲ್ಲಿ 20 ವರ್ಷಕ್ಕಿಂತಲೂ ಕೆಳಗಿನ ಪ್ರಾಯದ ಪುರುಷನನ್ನು ಸೇನೆಗೆ ಭರ್ತಿಮಾಡಲಾಗುತ್ತಿರಲಿಲ್ಲ. (ಅರಣ್ಯಕಾಂಡ 1:2, 3) ಒಬ್ಬ ವಯಸ್ಕ ಪುರುಷನು ಸಹ ಒಂದುವೇಳೆ ಯುದ್ಧದ ಬಗ್ಗೆ ಹೆದರಿಕೆಯುಳ್ಳವನಾಗಿದ್ದಾದರೆ ಅವನಿಗೆ ವಿನಾಯಿತಿ ಸಿಗುತ್ತಿತ್ತು. ಒಬ್ಬ ನವ ವಿವಾಹಿತ ಪುರುಷನಿಗೂ ಒಂದು ಇಡೀ ವರ್ಷ ವಿನಾಯಿತಿ ದೊರೆಯುತ್ತಿತ್ತು ಯಾಕಂದರೆ ಅಂಥ ಅಪಾಯಕರ ಸೇವೆಗೆ ತೊಡಗುವ ಮೊದಲು ಅವನು ತನ್ನ ವಾರಸುದಾರನು ಹುಟ್ಟುವುದನ್ನು ನೋಡಬಹುದಿತ್ತು. ಈ ರೀತಿಯಲ್ಲಿ ಆ ಯುವ ಗಂಡನು ತನ್ನ ಹೊಸ ಹೆಂಡತಿಯು “ಹರ್ಷಿಸುವಂತೆ” (NW) ಮಾಡಶಕ್ತನಾಗುವನೆಂದು ಧರ್ಮಶಾಸ್ತ್ರವು ವಿವರಿಸಿತು.​—ಧರ್ಮೋಪದೇಶಕಾಂಡ 20:5, 6, 8; 24:5.

19. ಸ್ತ್ರೀಯರ, ಮಕ್ಕಳ, ಕುಟುಂಬಗಳ, ವಿಧವೆಯರ, ಮತ್ತು ಅನಾಥರ ಭದ್ರತೆಗಾಗಿ ಧರ್ಮಶಾಸ್ತ್ರದಲ್ಲಿ ಯಾವ ಒದಗಿಸುವಿಕೆಗಳು ಸೇರಿದ್ದವು?

19 ಧರ್ಮಶಾಸ್ತ್ರವು ಸ್ತ್ರೀಯರನ್ನು, ಮಕ್ಕಳನ್ನು ಮತ್ತು ಕುಟುಂಬಗಳನ್ನು ಸಂರಕ್ಷಿಸಿತು ಮತ್ತು ಅವರ ಪರಾಮರಿಕೆಯನ್ನೂ ಮಾಡಿತು. ತಮ್ಮ ಮಕ್ಕಳ ಕಡೆಗೆ ಸದಾ ಗಮನವನ್ನು ಕೊಡುತ್ತಾ ಆಧ್ಯಾತ್ಮಿಕ ವಿಷಯಗಳಲ್ಲಿ ಉಪದೇಶವನ್ನು ನೀಡುವಂತೆ ಧರ್ಮಶಾಸ್ತ್ರವು ಹೆತ್ತವರಿಗೆ ಆಜ್ಞೆಯನ್ನು ಕೊಟ್ಟಿತ್ತು. (ಧರ್ಮೋಪದೇಶಕಾಂಡ 6:6, 7) ಎಲ್ಲಾ ತರದ ಅಗಮ್ಯಗಮನವನ್ನು ಅದು ನಿಷೇಧಿಸಿತು, ಅದನ್ನು ಗೈದವರಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು. (ಯಾಜಕಕಾಂಡ, 18ನೇ ಅಧ್ಯಾಯ) ತದ್ರೀತಿ ಅನೇಕವೇಳೆ ಕುಟುಂಬಗಳನ್ನು ಮುರಿದು ಅವುಗಳ ಭದ್ರತೆ ಹಾಗೂ ಘನತೆಯನ್ನು ಮಣ್ಣುಪಾಲುಮಾಡುವ ಹಾದರವನ್ನು ಸಹ ಅದು ನಿಷೇಧಿಸಿತ್ತು. ಧರ್ಮಶಾಸ್ತ್ರವು ವಿಧವೆಯರಿಗೆ ಮತ್ತು ಅನಾಥರಿಗೆ ಒದಗಿಸುವಿಕೆಯನ್ನು ಮಾಡಿತ್ತು ಮಾತ್ರವಲ್ಲ, ಅವರೊಂದಿಗೆ ದುರ್ವ್ಯವಹಾರ ಮಾಡುವುದನ್ನು ಸಾಧ್ಯವಿರುವಷ್ಟು ಕಠಿನವಾದ ಮಾತುಗಳಲ್ಲಿ ನಿಷೇಧಿಸಿತ್ತು.​—ವಿಮೋಚನಕಾಂಡ 20:14; 22:22-24.

20, 21. (ಎ) ಮೋಶೆಯ ಧರ್ಮಶಾಸ್ತ್ರವು ಇಸ್ರಾಯೇಲ್ಯರಲ್ಲಿ ಬಹುಪತ್ನೀತ್ವವನ್ನು ಅನುಮತಿಸಿದ್ದೇಕೆ? (ಬಿ) ವಿವಾಹವಿಚ್ಛೇದದ ವಿಷಯದಲ್ಲಿ, ಯೇಸು ತದನಂತರ ಜಾರಿಗೆ ತಂದ ಮಟ್ಟಕ್ಕಿಂತ ಧರ್ಮಶಾಸ್ತ್ರವು ಭಿನ್ನವಾಗಿದ್ದದ್ದೇಕೆ?

20 ಈ ವಿಷಯದ ಸಂಬಂಧದಲ್ಲಿಯಾದರೊ, ಕೆಲವರು ಹೀಗೆ ಪ್ರಶ್ನಿಸಬಹುದು: ‘ಬಹುಪತ್ನೀತ್ವಕ್ಕೆ ಧರ್ಮಶಾಸ್ತ್ರವು ಅನುಮತಿಯನ್ನು ಕೊಟ್ಟದ್ದಾದರೂ ಏಕೆ?’ (ಧರ್ಮೋಪದೇಶಕಾಂಡ 21:15-17) ಅಂಥ ನಿಯಮಗಳನ್ನು ನಾವು ಆ ಕಾಲಗಳ ಸನ್ನಿವೇಶವನ್ನು ಮನಸ್ಸಿನಲ್ಲಿಟ್ಟು ಪರಿಗಣಿಸುವ ಅಗತ್ಯವಿದೆ. ಮೋಶೆಯ ಧರ್ಮಶಾಸ್ತ್ರವನ್ನು ಆಧುನಿಕ ಸಮಯ ಮತ್ತು ಸಂಸ್ಕೃತಿಗಳ ದೃಷ್ಟಿಕೋನದಿಂದ ನೋಡಿ ತೀರ್ಮಾನಿಸುವ ಜನರು ನಿಶ್ಚಯವಾಗಿ ಅದನ್ನು ಅಪಾರ್ಥಮಾಡಿಕೊಳ್ಳುವರು. (ಜ್ಞಾನೋಕ್ತಿ 18:13) ಬಹಳ ಹಿಂದೆ ಏದೆನ್‌ ತೋಟದಲ್ಲಿ ಸ್ಥಾಪಿಸಲ್ಪಟ್ಟ ಯೆಹೋವನ ಮಟ್ಟವು, ಮದುವೆಯನ್ನು ಕೇವಲ ಒಬ್ಬ ಗಂಡ ಮತ್ತು ಒಬ್ಬಾಕೆ ಹೆಂಡತಿಯ ನಡುವಿನ ಒಂದು ಬಾಳುವ ಬಂಧವನ್ನಾಗಿ ಮಾಡಿತ್ತು. (ಆದಿಕಾಂಡ 2:18, 20-24) ಆದರೆ ಯೆಹೋವನು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟ ಸಮಯದೊಳಗೆ, ಬಹುಪತ್ನೀತ್ವದಂಥ ಪದ್ಧತಿಗಳು ಆಳವಾಗಿ ಬೇರೂರಿ ಅನೇಕ ಶತಮಾನಗಳು ಕಳೆದಿದ್ದವು. ‘ಆಜ್ಞೆಗೆ ಬೊಗ್ಗದವರಾದ’ ತನ್ನ ಜನರು ವಿಗ್ರಹಾರಾಧನೆಯ ನಿಷೇಧದಂತಹ ಅತ್ಯಂತ ಮೂಲಭೂತ ಆಜ್ಞೆಗಳನ್ನು ಸಹ ಪದೇಪದೇ ಉಲ್ಲಂಘಿಸುವರೆಂದು ಯೆಹೋವನಿಗೆ ಗೊತ್ತಿತ್ತು. (ವಿಮೋಚನಕಾಂಡ 32:9) ವಿವೇಕಯುತವಾಗಿಯೆ ಯೆಹೋವನು ಆ ಯುಗವನ್ನು, ಅವರ ಎಲ್ಲಾ ದಾಂಪತ್ಯ ಪದ್ಧತಿಗಳನ್ನು ಸುಧಾರಿಸುವ ಸಮಯವಾಗಿ ಆರಿಸಲಿಲ್ಲ. ಆದರೆ ಜ್ಞಾಪಕದಲ್ಲಿಡಿ, ಯೆಹೋವನು ಬಹುಪತ್ನೀತ್ವ ಪದ್ಧತಿಯನ್ನು ಸ್ಥಾಪಿಸಲಿಲ್ಲ. ತನ್ನ ಜನರ ನಡುವೆಯಿದ್ದ ಬಹುಪತ್ನೀತ್ವವನ್ನು ಕಟ್ಟುಪಾಡಿಗೊಳಪಡಿಸಲು ಮತ್ತು ಆ ಪದ್ಧತಿಯ ಅಪಪ್ರಯೋಗವನ್ನು ತಡೆಯಲು ಆತನು ಧರ್ಮಶಾಸ್ತ್ರವನ್ನು ಉಪಯೋಗಿಸಿದ್ದನೆಂಬುದು ಮಾತ್ರ ನಿಜ.

21 ತದ್ರೀತಿಯಲ್ಲಿ, ಒಬ್ಬ ಪುರುಷನು ತನ್ನ ಪತ್ನಿಯನ್ನು ಹಲವಾರು ಗಂಭೀರ ಕಾರಣಗಳ್ಳುಳ್ಳ ವಿಸ್ತಾರ ಶ್ರೇಣಿಯ ಆಧಾರದ ಮೇಲೆ ವಿಚ್ಛೇದ ಮಾಡಲು ಧರ್ಮಶಾಸ್ತ್ರವು ಅನುಮತಿಯನ್ನಿತ್ತಿತ್ತು. (ಧರ್ಮೋಪದೇಶಕಾಂಡ 24:1-4) ಯೆಹೂದ್ಯರ “ಮೊಂಡತನವನ್ನು ನೋಡಿ” ದೇವರು ಇದನ್ನು ಅನುಮತಿಸಿರಲಾಗಿ, ಇದನ್ನು ಯೇಸು, ಅವರಿಗಾಗಿ ಮಾಡಲ್ಪಟ್ಟಿದ್ದ ಒಂದು ವಿನಾಯಿತಿ ಎಂದು ಕರೆದನು. ಆದರೂ, ಅಂಥ ವಿನಾಯಿತಿಗಳು ತಾತ್ಕಾಲಿಕವಾಗಿದ್ದವು. ತನ್ನ ಹಿಂಬಾಲಕರಿಗಾಗಿ ಯೇಸು, ವಿವಾಹಕ್ಕಾಗಿರುವ ಯೆಹೋವನ ಆರಂಭದ ಮಟ್ಟವನ್ನೇ ಪುನಃ ಜಾರಿಗೆ ತಂದನು.​—ಮತ್ತಾಯ 19:8.

ಧರ್ಮಶಾಸ್ತ್ರವು ಪ್ರೀತಿಯನ್ನು ಪ್ರವರ್ಧಿಸಿತು

22. ಯಾವ ವಿಧಗಳಲ್ಲಿ ಮೋಶೆಯ ಧರ್ಮಶಾಸ್ತ್ರವು ಪ್ರೀತಿಯನ್ನು ತೋರಿಸಲು ಪ್ರೋತ್ಸಾಹಿಸಿತು, ಮತ್ತು ಯಾರ ಕಡೆಗೆ?

22 ಆಧುನಿಕ ದಿನದ ಕಾನೂನು ವ್ಯವಸ್ಥೆಯೊಂದು ಪ್ರೀತಿಯನ್ನು ತೋರಿಸಲು ಪ್ರೋತ್ಸಾಹಿಸುವುದನ್ನು ನೀವು ಊಹಿಸಬಲ್ಲಿರೊ? ಮೋಶೆಯ ಧರ್ಮಶಾಸ್ತ್ರವು ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಪ್ರವರ್ಧಿಸಿತು. ಅಷ್ಟೇಕೆ, ಧರ್ಮೋಪದೇಶಕಾಂಡ ಪುಸ್ತಕ ಒಂದರಲ್ಲಿಯೇ, “ಪ್ರೀತಿ”ಗಾಗಿರುವ ಪದವು ಬೇರೆ ಬೇರೆ ರೂಪದಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ಬಾರಿ ತೋರಿಬರುತ್ತದೆ! “ನಿಮ್ಮ ನೆರಯವರನ್ನು ನಿಮ್ಮಂತೆಯೇ ಪ್ರೀತಿಸಬೇಕು” ಎಂಬುದೇ ಧರ್ಮಶಾಸ್ತ್ರದಲ್ಲಿನ ಎರಡನೆಯ ಮುಖ್ಯ ಆಜ್ಞೆ. (ಯಾಜಕಕಾಂಡ 19:18; ಮತ್ತಾಯ 22:37-40) ಅಂಥ ಪ್ರೀತಿಯನ್ನು ದೇವಜನರು ಒಬ್ಬರಿಗೊಬ್ಬರು ಮಾತ್ರವಲ್ಲ ತಮ್ಮ ನಡುವೆ ಜೀವಿಸುತ್ತಿದ್ದ ಪರದೇಶಸ್ಥರಿಗೂ ತೋರಿಸಬೇಕಿತ್ತು; ಒಮ್ಮೆ ತಾವೂ ಪರದೇಶಿಗಳಾಗಿದ್ದೇವೆಂಬುದನ್ನು ಇಸ್ರಾಯೇಲ್ಯರು ಜ್ಞಾಪಿಸಿಕೊಳ್ಳಬೇಕಿತ್ತು. ಅವರು ಬಡವರಿಗೂ ಪೀಡಿತರಿಗೂ ಪ್ರೀತಿಯನ್ನು ತೋರಿಸುತ್ತಾ, ಅವರ ಕಷ್ಟಕರ ಸ್ಥಿತಿಯ ದುರುಪಯೋಗಮಾಡದೆ, ಅವರಿಗೆ ಭೌತಿಕ ಸಹಾಯವನ್ನು ಮಾಡಬೇಕಾಗಿತ್ತು. ಹೊರೆಹೊರುವ ಪ್ರಾಣಿಗಳನ್ನೂ ದಯೆ ಮತ್ತು ಪರಿಗಣನೆಯಿಂದ ನೋಡಿಕೊಳ್ಳುವಂತೆ ಅವರಿಗೆ ನಿರ್ದೇಶಿಸಲಾಯಿತು.​—ವಿಮೋಚನಕಾಂಡ 23:6; ಯಾಜಕಕಾಂಡ 19:14, 33, 34; ಧರ್ಮೋಪದೇಶಕಾಂಡ 22:4, 10; 24:17, 18.

23. ಕೀರ್ತನೆ 119ರ ಲೇಖಕನು ಏನನ್ನು ಮಾಡಲು ಪ್ರೇರಿಸಲ್ಪಟ್ಟನು, ಮತ್ತು ನಾವು ಏನನ್ನು ಮಾಡಲು ದೃಢನಿಶ್ಚಯ ಮಾಡಬಹುದು?

23 ಇಂಥ ಒಂದು ಕಾನೂನು ಸಂಹಿತೆಯ ವರವು ಬೇರೆ ಯಾವ ಜನಾಂಗಕ್ಕಿದ್ದಿರುತ್ತದೆ? “ನಿನ್ನ ಧರ್ಮಶಾಸ್ತ್ರವು ನನಗೆ ಎಷ್ಟೋ ಪ್ರಿಯವಾಗಿದೆ” ಎಂದು ಕೀರ್ತನೆಗಾರನು ಬರೆದುದರಲ್ಲಿ ಆಶ್ಚರ್ಯವೇನಿಲ್ಲ. ಅವನ ಪ್ರೀತಿಯು ಕೇವಲ ಅವನೊಳಗಿನ ಒಂದು ಭಾವನೆಯಾಗಿರಲಿಲ್ಲ. ಅದು ಅವನನ್ನು ಕ್ರಿಯೆಗೈಯಲು ಪ್ರೇರೇಪಿಸಿತು, ಆದುದರಿಂದಲೇ ಅವನು ಅದಕ್ಕೆ ವಿಧೇಯನಾಗಲು ಮತ್ತು ಅದಕ್ಕನುಸಾರ ಜೀವಿಸಲು ಪ್ರಯಾಸಪಟ್ಟನು. ಅವನು ಇನ್ನೂ ಅಂದದ್ದು: “ದಿನವೆಲ್ಲಾ ಅದೇ [ನಿನ್ನ ಧರ್ಮಶಾಸ್ತ್ರವೇ] ನನ್ನ ಧ್ಯಾನ.” (ಕೀರ್ತನೆ 119:11, 97) ಹೌದು, ಯೆಹೋವನ ನಿಯಮಗಳ ಅಧ್ಯಯನದಲ್ಲಿ ಅವನು ಕ್ರಮವಾಗಿ ಸಮಯವನ್ನು ಕಳೆದನು. ಅವನು ಹಾಗೆ ಮಾಡುತ್ತಾ ಹೋದಂತೆ ಅವುಗಳಿಗಾಗಿ ಅವನ ಪ್ರೀತಿಯು ಹೆಚ್ಚುತ್ತಾ ಬಂತೆಂಬುದು ನಿಸ್ಸಂದೇಹ. ಅದೇ ಸಮಯದಲ್ಲಿ, ನಿಯಮದಾತನಾದ ಯೆಹೋವ ದೇವರ ಕಡೆಗೂ ಅವನ ಪ್ರೀತಿಯು ಹೆಚ್ಚುತ್ತಾ ಬಂತು. ದೈವಿಕ ನಿಯಮಗಳನ್ನು ನೀವು ಅಧ್ಯಯನಿಸುತ್ತಾ ಮುಂದುವರಿಯುವಾಗ, ಆ ಮಹಾ ನಿಯಮದಾತನೂ ನ್ಯಾಯವಂತ ದೇವರೂ ಆಗಿರುವ ಯೆಹೋವನಿಗೆ ನೀವು ಸಹ ಮತ್ತಷ್ಟು ಹತ್ತಿರ ಬರುವಂತಾಗಲಿ.

^ ಪ್ಯಾರ. 8 ದೃಷ್ಟಾಂತಕ್ಕಾಗಿ, ಮನುಷ್ಯ ಕಲ್ಮಶವನ್ನು ಹುಗಿಯುವುದು, ರೋಗಸೋಂಕಿದ್ದವರ ಸಂಪರ್ಕ ನಿಷೇಧ, ಮತ್ತು ಮನುಷ್ಯನ ಶವ ಸೋಂಕಿದವನು ತನ್ನನ್ನು ತೊಳೆದುಕೊಳ್ಳುವುದನ್ನು ಆವಶ್ಯಪಡಿಸಿದ ನಿಯಮಗಳು, ಆ ಯುಗದಲ್ಲಿನ ಜ್ಞಾನಕ್ಕೆ ಹೋಲಿಕೆಯಲ್ಲಿ ಎಷ್ಟು ಮುಂದುವರಿದವುಗಳಾಗಿದ್ದವೆಂದರೆ, ಇದೇ ಜ್ಞಾನವು ಬೇರೆ ರಾಷ್ಟ್ರಗಳ ನಿಯಮಗಳ ಭಾಗವಾದದ್ದು ಅನೇಕ ಶತಮಾನಗಳ ನಂತರವೇ.​—ಯಾಜಕಕಾಂಡ 13:​4-8; ಅರಣ್ಯಕಾಂಡ 19:​11-13, 17-19; ಧರ್ಮೋಪದೇಶಕಾಂಡ 23:​13, 14.

^ ಪ್ಯಾರ. 9 ಕಾನಾನ್ಯರ ದೇವಸ್ಥಾನಗಳಲ್ಲಿ ಲೈಂಗಿಕ ಚಟುವಟಿಕೆಗಾಗಿ ಪ್ರತ್ಯೇಕವಾದ ಕೋಣೆಗಳಿದ್ದವು, ಆದರೆ ಮೋಶೆಯ ಧರ್ಮಶಾಸ್ತ್ರವಾದರೋ ಅಶುದ್ಧ ಸ್ಥಿತಿಯಲ್ಲಿದ್ದವರು ಆಲಯದೊಳಗೆ ಪ್ರವೇಶಿಸಲೂ ಬಾರದೆಂಬ ನಿಯಮವನ್ನು ವಿಧಿಸಿತ್ತು. ಲೈಂಗಿಕ ಸಂಭೋಗವು ಅಶುದ್ಧ ಸ್ಥಿತಿಯ ಅವಧಿಯನ್ನು ಪಾಲಿಸುವುದನ್ನು ಅವಶ್ಯಪಡಿಸುತ್ತಿದ್ದುದರಿಂದ, ಯೆಹೋವನಾಲಯದಲ್ಲಿ ಯಾವನಾದರೂ ಸಂಭೋಗವನ್ನು ಆರಾಧನೆಯ ಭಾಗವಾಗಿ ಮಾಡುವುದು ನ್ಯಾಯಬಾಹಿರವಾಗಿತ್ತು.

^ ಪ್ಯಾರ. 10 ಧರ್ಮಶಾಸ್ತ್ರದ ಪ್ರಾಮುಖ್ಯ ಉದ್ದೇಶವು ಕಲಿಸುವಿಕೆಯಾಗಿತ್ತು. ವಾಸ್ತವದಲ್ಲಿ “ನಿಯಮ”ಕ್ಕಾಗಿರುವ ಹೀಬ್ರು ಪದವಾದ ಟೋರಾ ಎಂಬುದರ ಅರ್ಥವೇ “ಉಪದೇಶ”ವಾಗಿದೆ ಎಂದು ಎನ್‌ಸೈಕ್ಲಪೀಡೀಯ ಜೂಡೈಕ ಹೇಳುತ್ತದೆ.

^ ಪ್ಯಾರ. 17 ಧರ್ಮಶಾಸ್ತ್ರವು ಸ್ಪಷ್ಟವಾಗಿ ಕೇಳಿದ್ದು: “ಅಡವಿಯ ಮರಗಳು ಶತ್ರುಗಳೇನು?” (ಧರ್ಮೋಪದೇಶಕಾಂಡ 20:19) ಒಂದನೇ ಶತಮಾನದ ಯೆಹೂದಿ ವಿದ್ವಾಂಸನಾದ ಫೈಲೋ, ಈ ನಿಯಮವನ್ನು ಉಲ್ಲೇಖಿಸುತ್ತಾ, “ಮನುಷ್ಯರ ವಿರುದ್ಧವಾಗಿ ಉದ್ರೇಕಿಸಲ್ಪಟ್ಟ ಕ್ರೋಧದ ಸೇಡನ್ನು, ಯಾವ ಕೆಡುಕನ್ನೂ ಅರಿಯದ ವಸ್ತುಗಳ ಮೇಲೆ ತೀರಿಸಿಕೊಳ್ಳುವುದು ಅನ್ಯಾಯ” ಎಂದು ದೇವರು ನೆನಸುತ್ತಾನೆಂದು ವಿವರಿಸುತ್ತಾನೆ.