ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 16

ದೇವರೊಂದಿಗೆ ನಡೆಯುವುದರಲ್ಲಿ “ನ್ಯಾಯವನ್ನು ಆಚರಿಸುವದು”

ದೇವರೊಂದಿಗೆ ನಡೆಯುವುದರಲ್ಲಿ “ನ್ಯಾಯವನ್ನು ಆಚರಿಸುವದು”

1-3. (ಎ) ನಾವು ಯೆಹೋವನಿಗೆ ಏಕೆ ಋಣಿಗಳಾಗಿರುತ್ತೇವೆ? (ಬಿ) ನಮ್ಮ ಪ್ರೀತಿಯುಳ್ಳ ರಕ್ಷಕನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?

ಮುಳುಗುತ್ತಿರುವ ಹಡಗೊಂದರಲ್ಲಿ ನೀವು ಸಿಕ್ಕಿಬಿದ್ದಿದ್ದೀರೆಂದು ಊಹಿಸಿಕೊಳ್ಳಿ. ಇನ್ನು ಪಾರುಗೊಳಿಸಲ್ಪಡುವ ಯಾವ ನಿರೀಕ್ಷೆಯೂ ಇಲ್ಲವೆಂದು ನೀವು ನೆನಸುತ್ತಿರುವಾಗಲೇ, ಒಬ್ಬ ರಕ್ಷಕನು ಬಂದು ನಿಮ್ಮನ್ನು ಪಾರುಗೊಳಿಸುತ್ತಾನೆ. ನಿಮ್ಮ ರಕ್ಷಕನು ನಿಮ್ಮನ್ನು ಆ ಅಪಾಯದಿಂದ ಹೊರತಂದು “ನೀವೀಗ ಸುರಕ್ಷಿತರಾಗಿದ್ದೀರಿ” ಎಂದು ಹೇಳುವಾಗ ನಿಮಗೆಷ್ಟು ಹಾಯೆನಿಸುವುದು! ಆ ವ್ಯಕ್ತಿಗೆ ನೀವು ಚಿರಋಣಿಯಾಗಿರುವಿರಲ್ಲವೇ? ಹೌದು, ನಿಜಾರ್ಥದಲ್ಲಿ ನೀವು ನಿಮ್ಮ ಜೀವಕ್ಕಾಗಿ ಅವನಿಗೆ ಹಂಗಿಗರಾಗಿರುವಿರಿ.

2 ಯೆಹೋವನು ನಮಗಾಗಿ ಏನೇನು ಮಾಡಿದ್ದಾನೊ ಅದನ್ನು ಕೆಲವೊಂದು ರೀತಿಗಳಲ್ಲಿ ಇದು ಚೆನ್ನಾಗಿ ಚಿತ್ರಿಸುತ್ತದೆ. ನಿಶ್ಚಯವಾಗಿಯೂ ನಾವು ಆತನಿಗೆ ಋಣಿಗಳು. ಎಷ್ಟೆಂದರೂ, ನಮ್ಮನ್ನು ಪಾಪ ಮತ್ತು ಮರಣದ ಬಿಗಿಮುಷ್ಟಿಯಿಂದ ಬಿಡಿಸಲಿಕ್ಕಾಗಿ ಈಡು ಬೆಲೆಯನ್ನು ತೆರಲು ಏರ್ಪಡಿಸಿದವನು ಆತನೇ ಅಲ್ಲವೇ? ಎಷ್ಟರ ತನಕ ನಾವು ಆ ಅಮೂಲ್ಯ ಯಜ್ಞಾರ್ಪಣೆಯಲ್ಲಿ ನಂಬಿಕೆಯನ್ನಿಡುತ್ತೇವೊ ಅಷ್ಟರ ತನಕ ನಮ್ಮ ಪಾಪಗಳು ಕ್ಷಮಿಸಲ್ಪಟ್ಟಿವೆ ಮತ್ತು ನಮ್ಮ ನಿತ್ಯ ಭವಿಷ್ಯತ್ತು ಭದ್ರವಾಗಿದೆಯೆಂಬ ಅರಿವಿನಿಂದಾಗಿ ನಮಗೆ ಸುರಕ್ಷಿತ ಭಾವನೆಯಿರುತ್ತದೆ. (1 ಯೋಹಾನ 1:7; 4:9) ನಾವು ಅಧ್ಯಾಯ 14ರಲ್ಲಿ ನೋಡಿದ ಪ್ರಕಾರ, ಈಡು ಯಜ್ಞವು ಯೆಹೋವನ ಪ್ರೀತಿ ಮತ್ತು ನ್ಯಾಯದ ಪರಮೋಚ್ಚ ಅಭಿವ್ಯಕ್ತಿಯಾಗಿರುತ್ತದೆ. ನಾವಿದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?

3 ನಮ್ಮ ಪ್ರೀತಿಯುಳ್ಳ ರಕ್ಷಕನು ತಾನೇ ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆಂದು ಪರಿಗಣಿಸುವುದು ಸೂಕ್ತವಾಗಿದೆ. ತನ್ನ ಪ್ರವಾದಿಯಾದ ಮೀಕನ ಮೂಲಕವಾಗಿ ಯೆಹೋವನು ಹೇಳುವುದು: “ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” (ಮೀಕ 6:8) ಯೆಹೋವನು ನಮ್ಮಿಂದ ಕೇಳಿಕೊಳ್ಳುವಂಥ ಒಂದು ಸಂಗತಿಯು, ನಾವು “ನ್ಯಾಯವನ್ನು ಆಚರಿಸು”ವುದೇ ಎಂಬುದನ್ನು ಗಮನಿಸಿರಿ. ನಾವದನ್ನು ಮಾಡುವುದು ಹೇಗೆ?

“ಸತ್ಯಾನುಗುಣವಾದ ನೀತಿಯನ್ನು” ಬೆನ್ನಟ್ಟುವುದು

4. ನಾವು ಆತನ ನೀತಿಯುತ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆಂದು ನಮಗೆ ಹೇಗೆ ಗೊತ್ತು?

4 ನಾವು, ಸರಿ ಮತ್ತು ತಪ್ಪಿನ ಆತನ ಮಟ್ಟಗಳಿಗನುಸಾರವಾಗಿ ಜೀವಿಸುವಂತೆ ಯೆಹೋವನು ನಮ್ಮಿಂದ ನಿರೀಕ್ಷಿಸುತ್ತಾನೆ. ಆತನ ಮಟ್ಟಗಳು ಯಾವಾಗಲೂ ನ್ಯಾಯ ಮತ್ತು ನೀತಿಯುತವಾಗಿರಲಾಗಿ, ನಾವು ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸುವಾಗ ನ್ಯಾಯ ನೀತಿಯನ್ನು ಬೆನ್ನಟ್ಟುವವರಾಗುತ್ತೇವೆ. “ಸದಾಚಾರವನ್ನು ಅಭ್ಯಾಸಮಾಡಿರಿ; ನ್ಯಾಯನಿರತರಾಗಿರಿ” ಎಂದು ಯೆಶಾಯ 1:17 ಹೇಳುತ್ತದೆ. “ನೀತಿಯನ್ನು ಹುಡುಕುವಂತೆ” ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (ಚೆಫನ್ಯ 2:​3, NW) ‘ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿ ನಿರ್ಮಿಸಲ್ಪಟ್ಟಿರುವ ನೂತನ ಸ್ವಭಾವವನ್ನು ಧರಿಸಿಕೊಳ್ಳುವಂತೆಯೂ’ ಅದು ನಮ್ಮನ್ನು ಪ್ರೇರೇಪಿಸುತ್ತದೆ. (ಎಫೆಸ 4:24) ಸತ್ಯಾನುಗುಣವಾದ ನೀತಿಯು​—ನಿಜ ನ್ಯಾಯವು​—ಹಿಂಸಾಚಾರ, ಅಶುದ್ಧತೆ, ಮತ್ತು ಅನೈತಿಕತೆಯನ್ನು ದೂರವಿರಿಸುತ್ತದೆ ಯಾಕಂದರೆ ಅವು ಯಾವುದು ಪರಿಶುದ್ಧವೋ ಅದನ್ನು ಭ್ರಷ್ಟಗೊಳಿಸುತ್ತವೆ.​—ಕೀರ್ತನೆ 11:5; ಎಫೆಸ 5:3-5.

5, 6. (ಎ) ಯೆಹೋವನ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವುದು ನಮಗೊಂದು ಹೊರೆಯಾಗಿಲ್ಲವೇಕೆ? (ಬಿ) ನೀತಿಯನ್ನು ಬೆನ್ನಟ್ಟುವುದು ಸತತವಾಗಿ ಮುಂದುವರಿಯುತ್ತಿರುವ ಪ್ರಕ್ರಿಯೆಯೆಂದು ಬೈಬಲು ತೋರಿಸುವುದು ಹೇಗೆ?

5 ಯೆಹೋವನ ನೀತಿಯುತ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವುದು ನಮಗೆ ಒಂದು ಭಾರವಾದ ಹೊರೆಯಾಗಿದೆಯೇ? ಇಲ್ಲ, ಯೆಹೋವನೆಡೆಗೆ ಸೆಳೆಯಲ್ಪಟ್ಟಿರುವ ಹೃದಯವು ಆತನ ಆವಶ್ಯಕತೆಗಳನ್ನು ಭಾರವಾದವುಗಳಾಗಿ ಕಾಣುವುದಿಲ್ಲ. ನಾವು ನಮ್ಮ ದೇವರನ್ನು ಮತ್ತು ಆತನು ಎಂಥ ರೀತಿಯ ದೇವರಾಗಿದ್ದಾನೊ ಆ ಎಲ್ಲಾ ಗುಣಗಳನ್ನು ಪ್ರೀತಿಸುತ್ತೇವಾದ್ದರಿಂದ ಆತನಿಗೆ ಮೆಚ್ಚಿಗೆಯಾದ ರೀತಿಯಲ್ಲಿ ಜೀವಿಸಲು ಬಯಸುತ್ತೇವೆ. (1 ಯೋಹಾನ 5:3) ಯೆಹೋವನು “ನೀತಿಯನ್ನು ಮೆಚ್ಚುವವನಾಗಿದ್ದಾನೆ” ಎಂಬುದನ್ನು ಜ್ಞಾಪಿಸಿಕೊಳ್ಳಿರಿ. (ಕೀರ್ತನೆ 11:7) ನಾವು ನಿಜವಾಗಿಯೂ ದೈವಿಕ ನ್ಯಾಯ ಅಥವಾ ನೀತಿಯನ್ನು ಅನುಕರಿಸುವವರಾಗಬೇಕಾದಲ್ಲಿ, ಯೆಹೋವನು ಯಾವುದನ್ನು ಪ್ರೀತಿಸುತ್ತಾನೋ ಅದನ್ನು ಪ್ರೀತಿಸುವವರೂ ಯಾವುದನ್ನು ಹಗೆ ಮಾಡುತ್ತಾನೋ ಅದನ್ನು ಹಗೆಮಾಡುವವರೂ ಆಗಬೇಕು.​—ಕೀರ್ತನೆ 97:10.

6 ಅಪರಿಪೂರ್ಣ ಮಾನವರಿಗೆ ನೀತಿಯನ್ನು ಬೆನ್ನಟ್ಟುವುದು ಅಷ್ಟೇನೂ ಸುಲಭದ ಸಂಗತಿಯಲ್ಲ. ನಾವು ನಮ್ಮ ಹಳೆಯ ವ್ಯಕ್ತಿತ್ವವನ್ನು ಅದರ ಪಾಪಪೂರ್ಣ ಕೃತ್ಯಗಳೊಂದಿಗೆ ತೆಗೆದುಹಾಕಿ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವುದು ಆವಶ್ಯಕ. ಹೊಸ ವ್ಯಕ್ತಿತ್ವವು ನಿಷ್ಕೃಷ್ಟವಾದ ಜ್ಞಾನದ ಮೂಲಕವಾಗಿ ‘ನೂತನವಾಗುತ್ತಾ ಇದೆ’ ಎಂದು ಬೈಬಲು ಹೇಳುತ್ತದೆ. (ಕೊಲೊಸ್ಸೆ 3:9, 10NW) ‘ನೂತನವಾಗುತ್ತಾ ಇದೆ’ ಎಂಬ ಪದಗಳು, ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವಂಥದ್ದು, ಸತತವಾಗಿ ಮುಂದುವರಿಯುವಂಥ, ಬಹಳಷ್ಟು ಪ್ರಯಾಸವನ್ನು ಅವಶ್ಯಪಡಿಸುವಂಥ ಪ್ರಕ್ರಿಯೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಯಾವುದು ಸರಿಯೋ ಅದನ್ನು ಮಾಡಲು ನಾವೆಷ್ಟೇ ಕಷ್ಟಪಟ್ಟು ಪ್ರಯತ್ನಿಸಲಿ, ನಮ್ಮ ಪಾಪಪೂರ್ಣ ಸ್ವಭಾವವು ನಾವು ನಮ್ಮ ನಡೆ, ನುಡಿ, ಮತ್ತು ಯೋಚನೆಯಲ್ಲಿ ಎಡವಿಬೀಳುವಂತೆ ಮಾಡುವ ಸಮಯಗಳು ಇದ್ದೇ ಇರುತ್ತವೆ.​—ರೋಮಾಪುರ 7:14-20; ಯಾಕೋಬ 3:2.

7. ನೀತಿಯನ್ನು ಬೆನ್ನಟ್ಟುವ ನಮ್ಮ ಪ್ರಯತ್ನಗಳಲ್ಲಿ ಆಗುವ ಹಿನ್ನಡೆಗಳನ್ನು ನಾವು ಹೇಗೆ ವೀಕ್ಷಿಸಬೇಕು?

7 ನೀತಿಯನ್ನು ಬೆನ್ನಟ್ಟುವ ನಮ್ಮ ಪ್ರಯತ್ನಗಳಲ್ಲಿ ಆಗುವ ಹಿನ್ನಡೆಗಳನ್ನು ನಾವು ಹೇಗೆ ವೀಕ್ಷಿಸಬೇಕು? ಪಾಪದ ಗಂಭೀರತೆಯನ್ನು ನಾವು ತಗ್ಗಿಸಬಾರದು ನಿಶ್ಚಯ. ಆದರೆ ಅದೇ ಸಮಯದಲ್ಲಿ, ನಮ್ಮ ಕುಂದುಕೊರತೆಗಳಿಂದಾಗಿ ನಾವು ಯೆಹೋವನ ಸೇವೆಮಾಡಲು ಅಯೋಗ್ಯರು ಎಂದೆಣಿಸಿ ನಾವೆಂದೂ ಪ್ರಯತ್ನವನ್ನು ನಿಲ್ಲಿಸಬಾರದು. ಪ್ರಾಮಾಣಿಕತೆಯಿಂದ ಪಶ್ಚಾತ್ತಾಪಪಡುವವರನ್ನು ತನ್ನ ಅನುಗ್ರಹಕ್ಕೆ ಪುನಃ ತರಲು ನಮ್ಮ ಕೃಪಾಳು ದೇವರು ಏರ್ಪಾಡನ್ನು ಮಾಡಿರುತ್ತಾನೆ. ಅಪೊಸ್ತಲ ಯೋಹಾನನ ಆಶ್ವಾಸನೆಭರಿತ ಮಾತುಗಳನ್ನು ಗಮನಕ್ಕೆ ತನ್ನಿರಿ: “ನೀವು ಪಾಪಮಾಡದಂತೆ ಈ ಮಾತುಗಳನ್ನು ನಿಮಗೆ ಬರೆಯುತ್ತೇನೆ.” ಆದರೆ ನಂತರ ಅವನು ವಾಸ್ತವಿಕತೆಯನ್ನು ತಿಳಿಸುತ್ತಾ ಕೂಡಿಸಿದ್ದು: “ಯಾವನಾದರೂ [ಬಾಧ್ಯತೆಯಾಗಿ ಪಡೆದಿರುವ ಅಪರಿಪೂರ್ಣತೆಯಿಂದಾಗಿ] ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ.” (1 ಯೋಹಾನ 2:1) ಹೌದು, ನಾವು ಪಾಪಿಗಳಾಗಿದ್ದಾಗ್ಯೂ ಸ್ವೀಕರಣೀಯವಾದ ರೀತಿಯಲ್ಲಿ ಆತನ ಸೇವೆಮಾಡಲಾಗುವಂತೆ ಯೇಸುವಿನ ಈಡು ಯಜ್ಞವನ್ನು ಯೆಹೋವನು ಏರ್ಪಡಿಸಿರುತ್ತಾನೆ. ಇದು ನಾವು ಯೆಹೋವನನ್ನು ಮೆಚ್ಚಿಸಲು ಕೈಲಾದದ್ದೆಲ್ಲವನ್ನು ಮಾಡುವಂತೆ ಪ್ರೇರೇಪಿಸುವುದಿಲ್ಲವೇ?

ಸುವಾರ್ತೆ ಮತ್ತು ದೈವಿಕ ನ್ಯಾಯ

8, 9. ಸುವಾರ್ತೆಯ ಸಾರುವಿಕೆಯು ಯೆಹೋವನ ನ್ಯಾಯವನ್ನು ಪ್ರದರ್ಶಿಸುತ್ತದೆ ಹೇಗೆ?

8 ಇತರರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಪೂರ್ಣವಾಗಿ ಪಾಲುಗಾರರಾಗುವ ಮೂಲಕ ನಾವು ನ್ಯಾಯವನ್ನು​—ವಾಸ್ತವದಲ್ಲಿ ದೈವಿಕ ನ್ಯಾಯವನ್ನು​—ಆಚರಿಸಬಲ್ಲೆವು. ಆದರೆ ಯೆಹೋವನ ನ್ಯಾಯ ಮತ್ತು ಸುವಾರ್ತೆಯ ನಡುವೆ ಇರುವ ಸಂಬಂಧವಾದರೂ ಯಾವುದು?

9 ಎಚ್ಚರಿಕೆಯನ್ನು ನೀಡಿದ ಹೊರತು ಈ ದುಷ್ಟ ವ್ಯವಸ್ಥೆಗೆ ಯೆಹೋವನು ಅಂತ್ಯವನ್ನು ಬರಮಾಡನು. ಅಂತ್ಯಕಾಲದಲ್ಲಿ ಏನು ಸಂಭವಿಸಲಿದೆ ಎಂಬುದರ ಕುರಿತಾದ ತನ್ನ ಪ್ರವಾದನೆಯಲ್ಲಿ ಯೇಸು ಅಂದದ್ದು: “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು.” (ಮಾರ್ಕ 13:10; ಮತ್ತಾಯ 24:3) “ಮೊದಲು” ಎಂಬ ಪದದ ಪ್ರಯೋಗವು, ಲೋಕದಾದ್ಯಂತ ಸಾರುವ ಕಾರ್ಯವನ್ನು ಬೇರೆ ಘಟನೆಗಳು ಹಿಂಬಾಲಿಸಲಿವೆಯೆಂದು ಸೂಚಿಸುತ್ತದೆ. ಆ ಘಟನೆಗಳಲ್ಲಿ ಮುಂತಿಳಿಸಲ್ಪಟ್ಟ ಮಹಾ ಸಂಕಟವು ಸೇರಿರುತ್ತದೆ. ಅದು ದುಷ್ಟರ ನಾಶನದ ಅರ್ಥದಲ್ಲಿದ್ದು ನೀತಿಯ ನೂತನ ಲೋಕಕ್ಕಾಗಿ ದಾರಿಮಾಡುವುದು. (ಮತ್ತಾಯ 24:14, 21, 22) ದೇವರಾದ ಯೆಹೋವನು ದುಷ್ಟರೊಂದಿಗೆ ಅನ್ಯಾಯದಿಂದ ವರ್ತಿಸಿದ್ದಾನೆಂದು ಯಾರೂ ನ್ಯಾಯವಾಗಿ ಆರೋಪಿಸಲಾರರು ನಿಶ್ಚಯ. ಯಾಕಂದರೆ ಎಚ್ಚರಿಕೆಯನ್ನು ಘೋಷಿಸುವ ಮೂಲಕ, ಆತನು ಅಂಥವರಿಗೆ ತಮ್ಮ ದುಷ್ಟಮಾರ್ಗವನ್ನು ಬದಲಾಯಿಸಿಕೊಳ್ಳಲು ಮತ್ತು ಹೀಗೆ ನಾಶನದಿಂದ ಪಾರಾಗಲು ಸಾಕಷ್ಟು ಅವಕಾಶವನ್ನು ಕೊಡುತ್ತಿದ್ದಾನೆ.​—ಯೋನ 3:1-10.

ನಾವು ನಿಷ್ಪಕ್ಷಪಾತದಿಂದ ಇತರರೊಂದಿಗೆ ಸುವಾರ್ತೆಯನ್ನು ಹಂಚುವಾಗ, ದೈವಿಕ ನ್ಯಾಯವನ್ನು ಪ್ರದರ್ಶಿಸುತ್ತೇವೆ

10, 11. ಸುವಾರ್ತೆಯನ್ನು ಸಾರುವುದರಲ್ಲಿ ನಮ್ಮ ಪಾಲ್ಗೊಳ್ಳುವಿಕೆಯು ದೈವಿಕ ನ್ಯಾಯವನ್ನು ಹೇಗೆ ಪ್ರತಿಬಿಂಬಿಸುತ್ತದೆ?

10 ನಮ್ಮ ಸುವಾರ್ತೆ ಸಾರುವಿಕೆಯು ದೈವಿಕ ನ್ಯಾಯವನ್ನು ಪ್ರತಿಬಿಂಬಿಸುವುದು ಹೇಗೆ? ಮೊತ್ತಮೊದಲಾಗಿ, ಇತರರು ರಕ್ಷಣೆಯನ್ನು ಪಡೆದುಕೊಳ್ಳುವಂತೆ ಸಹಾಯ ನೀಡಲು ನಮ್ಮಿಂದಾದದನ್ನು ಮಾಡುವುದು ಅತಿ ಸೂಕ್ತವಾದದ್ದಾಗಿದೆ. ಮುಳುಗುತ್ತಿರುವ ಹಡಗೊಂದರಿಂದ ಪಾರುಗೊಳಿಸಲ್ಪಡುವುದರ ಆ ದೃಷ್ಟಾಂತವನ್ನು ಪುನಃ ಗಮನಕ್ಕೆ ತನ್ನಿರಿ. ರಕ್ಷಾನೌಕೆಯಲ್ಲಿ ಸುರಕ್ಷಿತರಾಗಿರುವ ನೀವು, ನೀರಿನಲ್ಲಿ ಇನ್ನೂ ಒದ್ದಾಡುತ್ತಿರುವ ಇತರರಿಗೆ ನಿಶ್ಚಯವಾಗಿಯೂ ಸಹಾಯಮಾಡಲು ಬಯಸುವಿರಿ. ತದ್ರೀತಿಯಲ್ಲಿ, ಈ ದುಷ್ಟ ಲೋಕವೆಂಬ “ನೀರಿನಲ್ಲಿ” ಇನ್ನೂ ಒದ್ದಾಡುತ್ತಿರುವ ಜನರಿಗೆ ಸಹಾಯಮಾಡುವ ಹಂಗು ನಮಗಿದೆ. ಅನೇಕರು ನಮ್ಮ ಸಂದೇಶವನ್ನು ತಿರಸ್ಕರಿಸುತ್ತಾರೆ ನಿಜ. ಆದರೆ ಎಷ್ಟರ ತನಕ ಯೆಹೋವನು ತಾಳ್ಮೆ ತೋರಿಸುವುದನ್ನು ಮುಂದರಿಸುತ್ತಾನೊ ಅಷ್ಟರ ತನಕ, ಜನರು ಪಶ್ಚಾತ್ತಾಪಪಟ್ಟು “ತಿರುಗಿಕೊಂಡು,” ಹೀಗೆ ರಕ್ಷಣೆಯ ದಾರಿಗೆ ಬರುವ ಅವಕಾಶವನ್ನು ಕೊಡುವ ಜವಾಬ್ದಾರಿ ನಮಗಿರುತ್ತದೆ.​—2 ಪೇತ್ರ 3:9.

11 ನಾವು ಭೇಟಿಯಾಗುವವರೆಲ್ಲರಿಗೆ ಸುವಾರ್ತೆಯನ್ನು ಸಾರುವ ಮೂಲಕ, ಇನ್ನೊಂದು ಮಹತ್ತಾದ ರೀತಿಯಲ್ಲಿ ನಾವು ನ್ಯಾಯವನ್ನು ಪ್ರದರ್ಶಿಸುತ್ತೇವೆ: ನಾವು ನಿಷ್ಪಕ್ಷಪಾತವನ್ನು ತೋರಿಸುತ್ತೇವೆ. “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂಬುದನ್ನು ಜ್ಞಾಪಕಕ್ಕೆ ತನ್ನಿ. (ಅ. ಕೃತ್ಯಗಳು 10:34, 35) ನಾವು ಆತನ ನ್ಯಾಯವನ್ನು ಅನುಕರಿಸುವವರಾಗಿದ್ದರೆ, ಜನರ ಬಗ್ಗೆ ಪೂರ್ವಾಗ್ರಹವನ್ನು ಇಟ್ಟುಕೊಳ್ಳಬಾರದು. ಬದಲಿಗೆ ಅವರ ಜಾತಿ, ಸಾಮಾಜಿಕ ಅಂತಸ್ತು ಅಥವಾ ಆರ್ಥಿಕ ಅನುಕೂಲತೆ ಏನೇ ಇರಲಿ ನಾವು ಅವರೊಂದಿಗೆ ಸುವಾರ್ತೆಯನ್ನು ಹಂಚಬೇಕು. ಹೀಗೆ ನಾವು ಕಿವಿಗೊಡುವವರೆಲ್ಲರಿಗೆ ಸುವಾರ್ತೆಯನ್ನು ಕೇಳುವ ಮತ್ತು ಅದಕ್ಕೆ ಪ್ರತಿಕ್ರಿಯೆ ತೋರಿಸುವ ಒಂದು ಅವಕಾಶವನ್ನು ಕೊಡುತ್ತೇವೆ.​—ರೋಮಾಪುರ 10:11-13.

ಇತರರೊಂದಿಗೆ ನಾವು ವ್ಯವಹರಿಸುವ ವಿಧ

12, 13. (ಎ) ಇತರರಿಗೆ ತೀರ್ಪುಮಾಡಲು ನಾವು ತ್ವರೆಪಡಬಾರದೇಕೆ? (ಬಿ) “ತೀರ್ಪುಮಾಡುವುದನ್ನು ನಿಲ್ಲಿಸಿರಿ” ಮತ್ತು “ಅಪರಾಧಿಯೆಂದು ನಿರ್ಣಯಿಸುವುದನ್ನು ನಿಲ್ಲಿಸಿರಿ” ಎಂಬ ಯೇಸುವಿನ ಬುದ್ಧಿವಾದದ ಅರ್ಥವೇನು? (ಪಾದಟಿಪ್ಪಣಿಯನ್ನೂ ನೋಡಿ.)

12 ಯೆಹೋವನು ನಮ್ಮೊಂದಿಗೆ ವ್ಯವಹರಿಸುವ ರೀತಿಯಲ್ಲೇ ಇತರರೊಂದಿಗೆ ವ್ಯವಹರಿಸುವ ಮೂಲಕವೂ ನ್ಯಾಯವನ್ನು ಆಚರಿಸಬಲ್ಲೆವು. ಇತರರ ತಪ್ಪುಗಳ ಬಗ್ಗೆ ಟೀಕೆ ಮಾಡುತ್ತಾ, ಅವರ ಹೇತುಗಳ ಬಗ್ಗೆ ಶಂಕಿಸುತ್ತಾ, ಅವರಿಗೆ ತೀರ್ಪುಮಾಡುವದು ಬಹು ಸುಲಭ. ಆದರೂ ಯೆಹೋವನು ನಮ್ಮ ಹೇತುಗಳನ್ನೂ ಕುಂದುಕೊರತೆಗಳನ್ನೂ ನಿರ್ದಯತೆಯಿಂದ ಸೂಕ್ಷ್ಮವಾಗಿ ಪರಿಶೋಧಿಸುವುದನ್ನು ನಮ್ಮಲ್ಲಿ ಯಾವನು ಬಯಸಾನು? ಯೆಹೋವನು ನಮ್ಮೊಂದಿಗೆ ಆ ರೀತಿಯಲ್ಲಿ ವ್ಯವಹರಿಸುವುದಿಲ್ಲ. ಕೀರ್ತನೆಗಾರನು ಅವಲೋಕಿಸಿದ್ದು: “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3) ಕರುಣಾಳುವೂ ನ್ಯಾಯವಂತನೂ ಆಗಿರುವ ನಮ್ಮ ದೇವರು ನಮ್ಮ ಕುಂದುಕೊರತೆಗಳಿಗೆ ಸದಾ ಗಮನಕೊಡದಿರುವ ಆಯ್ಕೆಮಾಡಿರುವುದಕ್ಕಾಗಿ ನಾವು ಕೃತಜ್ಞರಾಗಿದ್ದೇವಲ್ಲವೇ? (ಕೀರ್ತನೆ 103:8-10) ಹಾಗಾದರೆ ನಾವು ಇತರರೊಂದಿಗೆ ಹೇಗೆ ವ್ಯವಹರಿಸಬೇಕು?

13 ದೇವರ ನ್ಯಾಯದ ಕರುಣಾಭರಿತ ಸ್ವಭಾವವನ್ನು ನಾವು ಗಣ್ಯಮಾಡುವುದಾದರೆ, ನಮಗೆ ನಿಜವಾಗಿ ಸಂಬಂಧಿಸದಂಥ ಅಥವಾ ಅಷ್ಟೇನೂ ಮಹತ್ವವಲ್ಲದ ವಿಷಯದಲ್ಲಿ ಇತರರನ್ನು ತೀರ್ಪುಮಾಡಲು ನಾವು ತ್ವರೆಪಡಬಾರದು. ತನ್ನ ಪರ್ವತಪ್ರಸಂಗದಲ್ಲಿ ಯೇಸು ಎಚ್ಚರಿಕೆ ನೀಡಿದ್ದು: “ತೀರ್ಪುಮಾಡುವುದನ್ನು ನಿಲ್ಲಿಸಿರಿ; ಆಗ ನಿಮಗೂ ತೀರ್ಪಾಗುವದಿಲ್ಲ.” (ಮತ್ತಾಯ 7:​1, NW) ಲೂಕನ ವೃತ್ತಾಂತಕ್ಕನುಸಾರ, ಯೇಸು ಕೂಡಿಸಿದ್ದು: “ಅಪರಾಧಿಯೆಂದು ನಿರ್ಣಯಿಸುವುದನ್ನು ನಿಲ್ಲಿಸಿರಿ; ಆಗ ನಿಮಗೂ ಖಂಡನೆಯಾಗುವದಿಲ್ಲ.” * (ಲೂಕ 6:​37, NW) ಅಪರಿಪೂರ್ಣ ಮಾನವರಲ್ಲಿರುವಂಥ, ಇತರರಿಗೆ ತೀರ್ಪುಮಾಡುವ ಪ್ರವೃತ್ತಿ ಯೇಸುವಿಗೆ ಗೊತ್ತಿತ್ತು. ಅವನಿಗೆ ಕಿವಿಗೊಡುತ್ತಿದ್ದ ಜನರಲ್ಲಿ ಯಾವನಿಗಾದರೂ ಇತರರನ್ನು ಕಠಿನವಾಗಿ ತೀರ್ಪುಮಾಡುವ ಅಭ್ಯಾಸವಿದ್ದಲ್ಲಿ ಅವನದನ್ನು ನಿಲ್ಲಿಸಬೇಕಿತ್ತು.

14. ನಾವು ಏಕೆ ಇತರರಿಗೆ ‘ತೀರ್ಪುಮಾಡುವುದನ್ನು ನಿಲ್ಲಿಸಬೇಕು’?

14 ನಾವು ಏಕೆ ಇತರರ ‘ತೀರ್ಪುಮಾಡುವುದನ್ನು ನಿಲ್ಲಿಸಬೇಕು’? ಒಂದು ಕಾರಣವೇನೆಂದರೆ, ನಮಗಿರುವ ಅಧಿಕಾರವು ಸೀಮಿತವಾಗಿರುತ್ತದೆ. ಶಿಷ್ಯ ಯಾಕೋಬನು ನಮಗೆ ಮರುಜ್ಞಾಪನ ಕೊಟ್ಟಿರುವುದು: ‘ನಿಯಮದಾತನೂ, ನ್ಯಾಯಾಧಿಪತಿಯೂ ಒಬ್ಬನೇ’​—ಯೆಹೋವನು. ಆದುದರಿಂದ ಯಾಕೋಬನು ನೇರವಾಗಿ ಕೇಳುವುದು: “ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು?” (ಯಾಕೋಬ 4:12; ರೋಮಾಪುರ 14:1-4) ಅದಲ್ಲದೆ, ನಮ್ಮ ಪಾಪಪೂರ್ಣ ಸ್ವಭಾವದಿಂದಾಗಿ ನಾವು ಅತಿ ಸುಲಭವಾಗಿಯೇ ತಪ್ಪಾದ ತೀರ್ಪುಗಳನ್ನು ಮಾಡಬಲ್ಲೆವು. ಪೂರ್ವಾಭಿಪ್ರಾಯ, ಅಭಿಮಾನಕ್ಕೆ ಬಿದ್ದಿರುವ ಪೆಟ್ಟು, ಹೊಟ್ಟೆಕಿಚ್ಚು, ಮತ್ತು ಸ್ವನೀತಿಯೇ ಮುಂತಾದವುಗಳು ಸೇರಿರುವ ಅನೇಕ ಮನೋಭಾವಗಳು ಮತ್ತು ಹೇತುಗಳು, ನಾವು ನಮ್ಮ ಜೊತೆ ಮಾನವರನ್ನು ದೃಷ್ಟಿಸುವ ವಿಧವನ್ನೇ ವಕ್ರಗೊಳಿಸಬಲ್ಲವು. ನಮ್ಮಲ್ಲಿ ಇನ್ನೂ ಅನೇಕ ಇತಿಮಿತಿಗಳಿವೆ, ಮತ್ತು ಇವುಗಳ ಕುರಿತಾದ ಮನವರಿಕೆಯು ನಮ್ಮನ್ನು ಇತರರ ತಪ್ಪುಗಳನ್ನು ಹುಡುಕಲು ತ್ವರೆಪಡುವುದರಿಂದ ತಡೆಯತಕ್ಕದ್ದು. ಇತರರ ಹೃದಯದಲ್ಲೇನಿದೆಯೆಂಬುದು ನಮಗೆ ಗೊತ್ತಿಲ್ಲ; ಇಲ್ಲವೆ ಅವರ ವೈಯಕ್ತಿಕ ಪರಿಸ್ಥಿತಿಗಳೆಲ್ಲವನ್ನೂ ನಾವು ಬಲ್ಲವರಲ್ಲ. ಹೀಗಿರಲಾಗಿ ಜೊತೆ ಕ್ರೈಸ್ತರಿಗೆ ತಪ್ಪು ಹೇತುಗಳಿವೆಯೆಂದು ಆಪಾದಿಸಲು ಇಲ್ಲವೆ ದೇವರ ಸೇವೆಯಲ್ಲಿ ಅವರ ಪ್ರಯತ್ನಗಳನ್ನು ಟೀಕಿಸಲು ನಾವಾರು? ನಮ್ಮ ಸಹೋದರ ಸಹೋದರಿಯರ ಬಲಹೀನತೆಗಳ ಮೇಲೆ ಕೇಂದ್ರೀಕರಿಸುವ ಬದಲಿಗೆ ಅವರಲ್ಲಿರುವ ಒಳಿತನ್ನು ಹುಡುಕುವ ಮೂಲಕ ಯೆಹೋವನನ್ನು ಅನುಕರಿಸುವುದು ಅದೆಷ್ಟು ಹೆಚ್ಚು ಉತ್ತಮ!

15. ದೇವರ ಆರಾಧಕರ ನಡುವೆ ಯಾವ ರೀತಿಯ ಮಾತುಗಳಿಗೆ ಮತ್ತು ವ್ಯವಹಾರಕ್ಕೆ ಆಸ್ಪದವಿಲ್ಲ, ಮತ್ತು ಏಕೆ?

15 ನಮ್ಮ ಕುಟುಂಬ ಸದಸ್ಯರ ಕುರಿತಾಗಿ ಏನು? ಇಂದಿನ ಲೋಕದಲ್ಲಿ, ಶಾಂತಿಯ ಬೀಡಾಗಿರಬೇಕಾದ ಮನೆಯಲ್ಲೇ ಅತ್ಯಂತ ಕಠೋರವಾದ ಕೆಲವು ತೀರ್ಪುಗಳು ಕೊಡಲ್ಪಡುವುದು ವಿಷಾದನೀಯವೇ ಸರಿ. ಒಬ್ಬರನ್ನೊಬ್ಬರು ಸದಾ ದೂಷಿಸುವ ಗಂಡಹೆಂಡಂದಿರು ಅಥವಾ ತಮ್ಮ ಕುಟುಂಬ ಸದಸ್ಯರನ್ನು ಸದಾ ಬೈಗುಳಗಳಿಂದ ಜರೆಯುತ್ತಾ ಅಥವಾ ಶಾರೀರಿಕ ದೌರ್ಜನ್ಯಕ್ಕೊಳಪಡಿಸುತ್ತಾ “ದಂಡನೆ ವಿಧಿಸುವ” ಹೆತ್ತವರ ಕುರಿತು ಕೇಳಿಸಿಕೊಳ್ಳುವುದೇನೂ ಅಸಾಮಾನ್ಯವಲ್ಲ. ಆದರೆ ಅಣಕದ ಮಾತುಗಳು, ಕಟುವಾದ ವ್ಯಂಗ್ಯನುಡಿ, ಮತ್ತು ಶಾರೀರಿಕ ದುರುಪಚಾರ ಮುಂತಾದವುಗಳಿಗೆ ದೇವರ ಆರಾಧಕರ ನಡುವೆ ಯಾವುದೇ ಆಸ್ಪದವಿಲ್ಲ. (ಎಫೆಸ 4:29, 31; 5:33; 6:4) “ತೀರ್ಪುಮಾಡುವುದನ್ನು ನಿಲ್ಲಿಸಿರಿ” ಮತ್ತು “ಖಂಡನೆಮಾಡುವುದನ್ನು ನಿಲ್ಲಿಸಿರಿ” ಎಂಬ ಯೇಸುವಿನ ಸಲಹೆಯು ನಾವು ಮನೆಯಲ್ಲಿರುವಾಗ ಅನ್ವಯವಾಗುವುದಿಲ್ಲ ಎಂದಲ್ಲ. ನ್ಯಾಯವನ್ನು ಆಚರಿಸುವುದರಲ್ಲಿ, ಯೆಹೋವನು ನಮ್ಮೊಂದಿಗೆ ವ್ಯವಹರಿಸುವ ರೀತಿಯಲ್ಲೇ ನಾವು ಇತರರೊಂದಿಗೆ ವ್ಯವಹರಿಸುವುದು ಸೇರಿದೆಯೆಂಬುದನ್ನು ನೆನಪಿಗೆ ತನ್ನಿರಿ. ನಮ್ಮ ದೇವರು ನಮ್ಮೊಂದಿಗೆ ಎಂದೂ ಕ್ರೂರವಾಗಿ ಅಥವಾ ಕಠಿನವಾಗಿ ವ್ಯವಹರಿಸುವುದಿಲ್ಲವಲ್ಲಾ. ಬದಲಿಗೆ, ತನ್ನನ್ನು ಪ್ರೀತಿಸುವವರ ಕಡೆಗೆ ಆತನು “ಕರುಣಾಸಾಗರನು” ಆಗಿದ್ದಾನೆ. (ಯಾಕೋಬ 5:11) ನಮಗೆ ಅನುಕರಿಸಲಿಕ್ಕಾಗಿ ಎಂಥ ಅದ್ಭುತಕರ ಮಾದರಿಯಿದು!

ಹಿರಿಯರು “ನ್ಯಾಯದಿಂದ” ಸೇವೆಮಾಡುವರು

16, 17. (ಎ) ಹಿರಿಯರಿಂದ ಯೆಹೋವನು ಅಪೇಕ್ಷಿಸುವುದೇನನ್ನು? (ಬಿ) ಪಾಪಿಯೊಬ್ಬನು ನಿಜ ಪಶ್ಚಾತ್ತಾಪವನ್ನು ತೋರಿಸಲು ತಪ್ಪುವಾಗ ಏನನ್ನು ಮಾಡುವ ಅಗತ್ಯವಿದೆ, ಮತ್ತು ಏಕೆ?

16 ನ್ಯಾಯವನ್ನು ಆಚರಿಸುವ ಜವಾಬ್ದಾರಿಯು ನಮಗೆಲ್ಲರಿಗೆ ಇದೆ, ಆದರೆ ಕ್ರೈಸ್ತ ಸಭೆಯ ಹಿರಿಯರು ಈ ವಿಷಯದಲ್ಲಿ ವಿಶೇಷವಾದ ಜವಾಬ್ದಾರಿಯುಳ್ಳವರಾಗಿದ್ದಾರೆ. ಯೆಶಾಯನಿಂದ ದಾಖಲಿಸಲ್ಪಟ್ಟ “ಅಧಿಪತಿಗಳು” ಅಥವಾ ಹಿರಿಯರ ಕುರಿತ ಪ್ರವಾದನಾ ವರ್ಣನೆಯನ್ನು ತುಸು ಗಮನಿಸಿರಿ: “ಇಗೋ, ಒಬ್ಬ ರಾಜನು ನೀತಿಗನುಸಾರವಾಗಿ ಆಳುವನು, ಅಧಿಪತಿಗಳು ನ್ಯಾಯದಿಂದ ದೊರೆತನ ಮಾಡುವರು.” (ಯೆಶಾಯ 32:1) ಹೌದು, ಹಿರಿಯರು ನ್ಯಾಯಕ್ಕೆ ಹೊಂದಿಕೆಯಲ್ಲಿ ಸೇವೆಸಲ್ಲಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ. ಅವರು ಇದನ್ನು ಹೇಗೆ ಮಾಡಬಲ್ಲರು?

17 ಸಭೆಯು ಆಧ್ಯಾತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧವಾಗಿರುವಂತೆ ನೀತಿ ಅಥವಾ ನ್ಯಾಯವು ಅವಶ್ಯಪಡಿಸುತ್ತದೆಂದು ಈ ಆಧ್ಯಾತ್ಮಿಕ ಅರ್ಹತೆಗಳುಳ್ಳ ಹಿರಿಯರಿಗೆ ಚೆನ್ನಾಗಿ ತಿಳಿದಿರುತ್ತದೆ. ಕೆಲವೊಮ್ಮೆ ಗಂಭೀರವಾದ ತಪ್ಪುಗೈಯುವಿಕೆಯ ಕೇಸುಗಳ ಬಗ್ಗೆ ನ್ಯಾಯತೀರಿಸಲು ಹಿರಿಯರು ಕರೆಯಲ್ಪಡುತ್ತಾರೆ. ಹಾಗೆ ಮಾಡುವಾಗ ಸಾಧ್ಯವಾದಲ್ಲೆಲ್ಲಾ ಕರುಣೆಯನ್ನು ತೋರಿಸಲು ದೈವಿಕ ನ್ಯಾಯವು ಪ್ರಯತ್ನಿಸುತ್ತದೆಂಬುದನ್ನು ಅವರು ಜ್ಞಾಪಕದಲ್ಲಿಡುತ್ತಾರೆ. ಹೀಗೆ ಅವರು ಪಾಪಮಾಡಿದವನನ್ನು ಪಶ್ಚಾತ್ತಾಪಕ್ಕೆ ನಡಿಸಲು ಪ್ರಯತ್ನಿಸುತ್ತಾರೆ. ಆದರೆ ಅವನಿಗೆ ಸಹಾಯಕೊಡಲು ಮಾಡಲ್ಪಟ್ಟ ಅಂಥ ಪ್ರಯತ್ನಗಳ ಹೊರತೂ ಆ ಪಾಪಿಯು ನಿಜ ಪಶ್ಚಾತ್ತಾಪವನ್ನು ತೋರಿಸದೆಹೋದಲ್ಲಿ ಆಗೇನು? ಪರಿಪೂರ್ಣ ನ್ಯಾಯಪರತೆಯಲ್ಲಿ ಯೆಹೋವನ ವಾಕ್ಯವು ಒಂದು ದೃಢವಾದ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಮಾರ್ಗದರ್ಶಿಸುತ್ತದೆ: “ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.” ಅವನನ್ನು ಸಭೆಯೊಳಗಿಂದ ಬಹಿಷ್ಕರಿಸುವುದೆಂದೇ ಇದರ ಅರ್ಥವು. (1 ಕೊರಿಂಥ 5:11-13; 2 ಯೋಹಾನ 9-11) ಅಂಥ ಕ್ರಿಯೆಯನ್ನು ಕೈಕೊಳ್ಳಲು ಹಿರಿಯರಿಗೆ ದುಃಖವಾಗುತ್ತದೆ, ಆದರೆ ಸಭೆಯ ನೈತಿಕ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಕಾಪಾಡುವುದಕ್ಕೋಸ್ಕರ ಅದು ಆವಶ್ಯಕವೆಂದು ಅವರು ಮನಗಾಣುತ್ತಾರೆ. ಆಗಲೂ ಅವರ ನಿರೀಕ್ಷೆಯೇನಾಗಿದೆಯೆಂದರೆ, ಒಂದಲ್ಲ ಒಂದು ದಿನ ಆ ಪಾಪಿಗೆ ಬುದ್ಧಿಬಂದು ಅವನು ಸಭೆಗೆ ಮರಳಿ ಬಂದಾನು ಎಂಬದೇ.​—ಲೂಕ 15:17, 18.

18. ಇತರರಿಗೆ ಬೈಬಲಾಧಾರಿತ ಸಲಹೆಯನ್ನು ನೀಡುವಾಗ ಹಿರಿಯರು ಏನನ್ನು ಮನಸ್ಸಿನಲ್ಲಿಡುತ್ತಾರೆ?

18 ನ್ಯಾಯಕ್ಕೆ ಹೊಂದಿಕೆಯಲ್ಲಿ ಸೇವೆಸಲ್ಲಿಸುವುದರಲ್ಲಿ, ಬೈಬಲಾಧಾರಿತ ಬುದ್ಧಿವಾದವನ್ನು ಬೇಕಾದಲ್ಲಿ ನೀಡುವುದೂ ಸೇರಿರುತ್ತದೆ. ಹಿರಿಯರು ಇತರರಲ್ಲಿ ತಪ್ಪು ಹುಡುಕುತ್ತಾ ಇರುವುದಿಲ್ಲವೆಂಬುದು ನಿಶ್ಚಯ. ಇಲ್ಲವೆ, ತಿದ್ದುಪಾಟನ್ನು ನೀಡಲು ಅವರು ಸಂದರ್ಭಕ್ಕಾಗಿ ಕಾದುಕೊಂಡಿರುವುದೂ ಇಲ್ಲ. ಆದರೆ ಜೊತೆ ವಿಶ್ವಾಸಿಯೊಬ್ಬನು ತಿಳಿಯದೆ “ಯಾವುದೋ ಒಂದು ದೋಷದಲ್ಲಿ ಸಿಕ್ಕಿ”ಬೀಳುವ ಸಂಭವವಿದೆ. ದೈವಿಕ ನ್ಯಾಯವು ಕಠೋರವೂ ಅಲ್ಲ ಭಾವಶೂನ್ಯವೂ ಅಲ್ಲವೆಂಬುದನ್ನು ನೆನಪಿನಲ್ಲಿಡುವ ಹಿರಿಯರು, “ಅಂಥವನನ್ನು ಶಾಂತಭಾವದಿಂದ ತಿದ್ದಿ ಸರಿ”ಮಾಡಲು ಪ್ರೇರಿಸಲ್ಪಡುವರು. (ಗಲಾತ್ಯ 6:1) ಆದುದರಿಂದ ಹಿರಿಯರು ತಪ್ಪಿತಸ್ಥನನ್ನು ಬೈಯುವುದಿಲ್ಲ ಅಥವಾ ಕಠಿನ ಮಾತುಗಳಿಂದ ಜರೆಯುವುದಿಲ್ಲ. ಬದಲಿಗೆ ಅವರು ಪ್ರೀತಿಯಿಂದ ಕೊಡುವ ಸಲಹೆಯು, ಅದನ್ನು ಪಡೆಯುವಾತನನ್ನು ಪ್ರೋತ್ಸಾಹಿಸುವುದು. ಅವಿವೇಕದ ಮಾರ್ಗದಿಂದ ಬರುವ ಫಲಿತಾಂಶಗಳನ್ನು ಸ್ಪಷ್ಟವಾಗಿ ತಿಳಿಸಿ ನೇರವಾದ ಗದರಿಕೆಯನ್ನು ನೀಡುವಾಗಲೂ ತಪ್ಪುಗೈದಿರುವ ಜೊತೆ ವಿಶ್ವಾಸಿಯು ಯೆಹೋವನ ಹಿಂಡಿನಲ್ಲಿರುವ ಒಂದು ಕುರಿ ಎಂಬುದನ್ನು ಹಿರಿಯರು ಮನಸ್ಸಿನಲ್ಲಿಡುತ್ತಾರೆ. * (ಲೂಕ 15:7) ಸಲಹೆ ಅಥವಾ ಗದರಿಕೆಯು ಸ್ಪಷ್ಟವಾಗಿ ಪ್ರೀತಿಯಿಂದ ಪ್ರೇರಿಸಲ್ಪಟ್ಟು ಕೊಡಲ್ಪಡುವಾಗ, ತಪ್ಪುಗೈದವನು ತಿದ್ದಲ್ಪಟ್ಟು ಸರಿಯಾಗುವ ಸಂಭಾವ್ಯತೆ ಅಧಿಕ.

19. ಯಾವ ನಿರ್ಣಯಗಳನ್ನು ಹಿರಿಯರು ಮಾಡಬೇಕಾಗುತ್ತದೆ, ಮತ್ತು ಆ ನಿರ್ಣಯಗಳನ್ನು ಅವರು ಯಾವುದರ ಮೇಲೆ ಆಧಾರಿಸತಕ್ಕದ್ದು?

19 ಅನೇಕಸಲ ಹಿರಿಯರು ತಮ್ಮ ಜೊತೆ ವಿಶ್ವಾಸಿಗಳ ಮೇಲೆ ಪರಿಣಾಮ ಬೀರುವಂಥ ನಿರ್ಣಯಗಳನ್ನು ಮಾಡಬೇಕಾಗಿ ಬರುತ್ತದೆ. ಉದಾಹರಣೆಗೆ, ಸಭೆಯಲ್ಲಿರುವ ಇತರ ಸಹೋದರರು ಹಿರಿಯರಾಗಿ ಅಥವಾ ಶುಶ್ರೂಷಾ ಸೇವಕರಾಗಿ ಶಿಫಾರಸು ಮಾಡಲ್ಪಡಲು ಯೋಗ್ಯತೆಯುಳ್ಳವರೊ ಇಲ್ಲವೊ ಎಂಬುದನ್ನು ಚರ್ಚಿಸಲು ಹಿರಿಯರು ಆಗಿಂದಾಗ್ಯೆ ಕೂಡಿಬರುತ್ತಾರೆ. ಈ ವಿಷಯದಲ್ಲಿ ನಿಷ್ಪಕ್ಷಪಾತಿಗಳಾಗಿರುವುದರ ಮಹತ್ವವನ್ನು ಹಿರಿಯರು ಬಲ್ಲರು. ಬರಿಯ ವೈಯಕ್ತಿಕ ಅನಿಸಿಕೆಗಳ ಮೇಲೆ ಆತುಕೊಳ್ಳದೆ, ಅಂಥ ನೇಮಕಗಳನ್ನು ಮಾಡುವುದರಲ್ಲಿ ದೇವರ ಆವಶ್ಯಕತೆಗಳು ತಮ್ಮನ್ನು ಮಾರ್ಗದರ್ಶಿಸುವಂತೆ ಅವರು ಬಿಡುತ್ತಾರೆ. ಹೀಗೆ ಅವರು ‘ವಿಚಾರಿಸುವದಕ್ಕೆ ಮೊದಲೇ ತಪ್ಪುಹೊರಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ’ ಇರುತ್ತಾರೆ.​—1 ತಿಮೊಥೆಯ 5:21.

20, 21. (ಎ) ಹಿರಿಯರು ಏನಾಗಿರುವಂತೆ ಪ್ರಯಾಸಪಡುತ್ತಾರೆ, ಮತ್ತು ಏಕೆ? (ಬಿ) “ಖಿನ್ನರಿಗೆ” ಸಹಾಯಕೊಡಲು ಹಿರಿಯರು ಏನು ಮಾಡಬಲ್ಲರು?

20 ಬೇರೆ ವಿಧಗಳಲ್ಲಿಯೂ ಹಿರಿಯರು ದೈವಿಕ ನ್ಯಾಯವನ್ನು ಆಚರಿಸುತ್ತಾರೆ. ಹಿರಿಯರು “ನ್ಯಾಯದಿಂದ ದೊರೆತನ ಮಾಡುವರು” ಎಂದು ಮುಂತಿಳಿಸಿದ ಅನಂತರ ಯೆಶಾಯನು ಮುಂದರಿಸಿದ್ದು: ಪ್ರತಿ “ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” (ಯೆಶಾಯ 32:2) ಹೀಗೆ ಹಿರಿಯರು ತಮ್ಮ ಜೊತೆ ಆರಾಧಕರಿಗೆ ಆದರಣೆ ಮತ್ತು ಚೈತನ್ಯದ ಮೂಲವಾಗಿರಲು ಪ್ರಯಾಸಪಡುತ್ತಾರೆ.

21 ಇಂದು ಎದೆಗುಂದಿಸಬಲ್ಲ ಸಮಸ್ಯೆಗಳು ತುಂಬಿರಲಾಗಿ ಅನೇಕರಿಗೆ ಪ್ರೋತ್ಸಾಹನೆಯ ಅಗತ್ಯವಿದೆ. ಹಿರಿಯರೇ, “ಖಿನ್ನರಿಗೆ” ಸಹಾಯಕೊಡಲು ನೀವೇನನ್ನು ಮಾಡಬಲ್ಲಿರಿ? (1 ಥೆಸಲೊನೀಕ 5:​14, NW) ಅವರಿಗೆ ಅನುಕಂಪದಿಂದ ಕಿವಿಗೊಡಿರಿ. (ಯಾಕೋಬ 1:19) ತಮ್ಮ ಹೃದಯದ “ಕಳವಳ”ವನ್ನು ತಾವು ಭರವಸೆಯಿಡಬಲ್ಲ ಯಾರಾದರೊಬ್ಬರೊಂದಿಗೆ ಹಂಚಿಕೊಳ್ಳುವ ಅಗತ್ಯ ಅವರಿಗಿರಬಹುದು. (ಜ್ಞಾನೋಕ್ತಿ 12:25) ಅವರು ಬೇಕಾದವರಾಗಿದ್ದಾರೆ, ಅಮೂಲ್ಯರಾಗಿದ್ದಾರೆ ಮತ್ತು ಪ್ರೀತಿಸಲ್ಪಡುತ್ತಾರೆ​—ಹೌದು, ಯೆಹೋವನಿಂದಲೂ ಹಾಗೂ ಅವರ ಸಹೋದರ ಸಹೋದರಿಯರಿಂದಲೂ​—ಎಂಬ ಆಶ್ವಾಸನೆಯನ್ನು ನೀಡಿರಿ. (1 ಪೇತ್ರ 1:22; 5:6, 7) ಅಷ್ಟುಮಾತ್ರವಲ್ಲದೆ, ಅಂಥವರೊಂದಿಗೆ ಮತ್ತು ಅಂಥವರಿಗಾಗಿ ನೀವು ಪ್ರಾರ್ಥನೆಯನ್ನೂ ಮಾಡಬಹುದು. ಒಬ್ಬ ಹಿರಿಯನು ತಮ್ಮ ಪರವಾಗಿ ಹೃದಯದಾಳದಿಂದ ಪ್ರಾರ್ಥನೆ ಮಾಡುವುದನ್ನು ಕೇಳಿಸಿಕೊಳ್ಳುವುದು ಅವರಿಗೆ ಬಹಳಷ್ಟು ಸಾಂತ್ವನ ನೀಡಬಲ್ಲದು. (ಯಾಕೋಬ 5:14, 15) ಖಿನ್ನತೆಗೊಳಗಾದವರಿಗೆ ನೆರವಾಗಲು ನೀವು ಮಾಡುವ ಪ್ರೀತಿಪೂರ್ವಕ ಪ್ರಯತ್ನಗಳನ್ನು ನ್ಯಾಯವಂತನಾದ ನಮ್ಮ ದೇವರು ಗಮನಿಸದೇ ಇರಲಾರನು.

ಖಿನ್ನರನ್ನು ಪ್ರೋತ್ಸಾಹಿಸುವಾಗ ಹಿರಿಯರು ಯೆಹೋವನ ನ್ಯಾಯವನ್ನು ಪ್ರದರ್ಶಿಸುತ್ತಾರೆ

22. ಯೆಹೋವನ ನ್ಯಾಯವನ್ನು ನಾವು ಯಾವ ವಿಧಗಳಲ್ಲಿ ಅನುಕರಿಸಬಲ್ಲೆವು, ಮತ್ತು ಫಲಿತಾಂಶವೇನು?

22 ನಿಜವಾಗಿಯೂ ಯೆಹೋವನ ನ್ಯಾಯವನ್ನು ಅನುಕರಿಸುವ ಮೂಲಕ ನಾವು ಆತನಿಗೆ ಹೆಚ್ಚೆಚ್ಚು ಸಮೀಪ ಬರುವೆವು! ಆತನ ನೀತಿಯುತ ಮಟ್ಟಗಳನ್ನು ನಾವು ಎತ್ತಿಹಿಡಿಯುವಾಗ, ಜೀವರಕ್ಷಕ ಸುವಾರ್ತೆಯನ್ನು ನಾವು ಇತರರೊಂದಿಗೆ ಹಂಚುವಾಗ, ಮತ್ತು ಇತರರಲ್ಲಿರುವ ತಪ್ಪುಗಳನ್ನು ಹುಡುಕುತ್ತಾ ಇರುವ ಬದಲಿಗೆ ಅವರಲ್ಲಿರುವ ಒಳ್ಳೇ ವಿಷಯಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಆಯ್ಕೆಮಾಡುವಾಗ, ನಾವು ದೈವಿಕ ನ್ಯಾಯವನ್ನು ಪ್ರದರ್ಶಿಸುವವರಾಗುವೆವು. ಹಿರಿಯರೇ, ನೀವು ಸಭೆಯ ಶುದ್ಧತೆಯನ್ನು ಕಾಪಾಡುತ್ತಾ ಇರುವಾಗ, ಭಕ್ತಿವರ್ಧಕವಾದ ಶಾಸ್ತ್ರೀಯ ಸಲಹೆಯನ್ನು ನೀಡುವಾಗ, ಪಕ್ಷಪಾತವಿಲ್ಲದ ನಿರ್ಣಯಗಳನ್ನು ಮಾಡುವಾಗ ಹಾಗೂ ಖಿನ್ನರಿಗೆ ಪ್ರೋತ್ಸಾಹನೆ ನೀಡುವಾಗ ನೀವು ದೈವಿಕ ನ್ಯಾಯವನ್ನು ಪ್ರತಿಬಿಂಬಿಸುತ್ತಿರುವಿರಿ. ಯೆಹೋವನು ಪರಲೋಕದಿಂದ ಕೆಳಗೆ ದೃಷ್ಟಿಹಾಯಿಸುವಾಗ, ತನ್ನ ಜನರು ತಮ್ಮ ದೇವರೊಂದಿಗೆ ನಡೆದಾಡುವುದರಲ್ಲಿ “ನ್ಯಾಯವನ್ನು ಆಚರಿಸುವುದಕ್ಕೆ” ತಮ್ಮ ಕೈಲಾದೆಲ್ಲ ಪ್ರಯತ್ನವನ್ನು ಮಾಡುವುದನ್ನು ನೋಡಿ ಆತನ ಹೃದಯವೆಷ್ಟು ಹರ್ಷಿಸುತ್ತಿರಬೇಕು!

^ ಪ್ಯಾರ. 13 ಕೆಲವು ಭಾಷಾಂತರಗಳು “ತೀರ್ಪುಮಾಡಬೇಡಿರಿ” ಮತ್ತು “ಅಪರಾಧಿಯೆಂದು ನಿರ್ಣಯಿಸಬೇಡಿರಿ” ಎಂದು ಹೇಳುತ್ತವೆ. ಅಂಥ ತರ್ಜುಮೆಗಳು ಕಾರ್ಯತಃ “ತೀರ್ಪುಮಾಡಲು ಆರಂಭಿಸಬೇಡಿರಿ” ಮತ್ತು “ಅಪರಾಧಿಯೆಂದು ನಿರ್ಣಯಿಸಲು ಆರಂಭಿಸಬೇಡಿರಿ” ಎಂಬುದನ್ನು ಸೂಚಿಸುತ್ತವೆ. ಆದರೆ ಮೂಲಭಾಷೆಯಲ್ಲಿ ಬೈಬಲ್‌ ಲೇಖಕರು ಇಲ್ಲಿ ನಿಷೇಧದ ಆಜ್ಞೆಗಳನ್ನು, ಮುಂದುವರಿಯುತ್ತಾ ಇರುವ ಕ್ರಿಯೆಯನ್ನು ವರ್ತಮಾನಕಾಲದಲ್ಲಿ ಉಪಯೋಗಿಸಿದ್ದಾರೆ. ಹೀಗೆ ಇಲ್ಲಿ ತಿಳಿಸಲ್ಪಟ್ಟಿರುವ ಕ್ರಿಯೆಗಳು ಆ ಸಮಯದಲ್ಲಿ ನಡೆಯುತ್ತಾ ಇದ್ದವು, ಆದರೆ ಅವನ್ನು ನಿಲ್ಲಿಸಬೇಕಿತ್ತು.

^ ಪ್ಯಾರ. 18 ಕೆಲವು ಸಾರಿ ಹಿರಿಯರು ‘ಖಂಡಿಸಿ, ಗದರಿಸಿ, ಎಚ್ಚರಿಸ’ಬೇಕೆಂದು ಬೈಬಲು 2 ತಿಮೊಥೆಯ 4:2 ರಲ್ಲಿ ಹೇಳುತ್ತದೆ. “ಎಚ್ಚರಿಸು” (ಪಾರಾಕಾಲೀಯೊ) ಎಂದು ತರ್ಜುಮೆಯಾಗಿರುವ ಗ್ರೀಕ್‌ ಪದವು “ಪ್ರೋತ್ಸಾಹಿಸು” ಎಂಬ ಅರ್ಥವನ್ನು ಕೊಡಬಲ್ಲದು. ಸಂಬಂಧಿತ ಗ್ರೀಕ್‌ ಪದವಾದ ಪಾರೆಕ್ಲೆಟಾಸ್‌ ಒಂದು ಕಾನೂನುಸಂಬಂಧಿತ ವಿಷಯದಲ್ಲಿ ಒಬ್ಬ ವಕೀಲನಿಗೆ ಸೂಚಿಸಲ್ಪಡಬಹುದು. ಹೀಗೆ ಹಿರಿಯರು ದೃಢವಾದ ಗದರಿಕೆಯನ್ನು ನೀಡುವಾಗಲೂ, ಆಧ್ಯಾತ್ಮಿಕ ಸಹಾಯದ ಅಗತ್ಯವಿರುವವರಿಗೆ ಅವರು ಸಹಾಯಕರಾಗಿರಬೇಕು.