ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 17

‘ದೇವರ ವಿವೇಕವು ಎಷ್ಟೋ ಅಗಾಧ!’

‘ದೇವರ ವಿವೇಕವು ಎಷ್ಟೋ ಅಗಾಧ!’

1, 2. ಏಳನೆಯ ದಿನಕ್ಕಾಗಿ ಯೆಹೋವನ ಉದ್ದೇಶವು ಏನಾಗಿತ್ತು, ಮತ್ತು ಆ ದಿನದ ಆರಂಭದಲ್ಲೇ ದೈವಿಕ ವಿವೇಕವು ಪರೀಕ್ಷೆಗೊಳಗಾದದ್ದು ಹೇಗೆ?

ಹಾಳಾಗಿಹೋಯಿತು! ಆರನೆಯ ಸೃಷ್ಟಿಕಾರಕ ದಿನದ ಭೂಷಣವಾಗಿದ್ದ ಮಾನವಕುಲವು, ಥಟ್ಟನೆ ಶಿಖರದಿಂದ ಪ್ರಪಾತಕ್ಕೆ ಬಿದ್ದಿತು. ಯೆಹೋವನು “ತಾನು ಉಂಟುಮಾಡಿದ್ದನ್ನೆಲ್ಲಾ,” ಮಾನವಕುಲವನ್ನು ಸಹ, “ಅದು ಬಹು ಒಳ್ಳೇದಾಗಿತ್ತು” ಎಂದು ಆಗಲೇ ಘೋಷಿಸಿದ್ದನು. (ಆದಿಕಾಂಡ 1:31) ಆದರೆ ಏಳನೆಯ ದಿನದಾರಂಭದಲ್ಲೇ ಆದಾಮಹವ್ವರು ಸೈತಾನನೊಂದಿಗೆ ದಂಗೆಯಲ್ಲಿ ಸೇರಿಕೊಳ್ಳಲು ಆರಿಸಿಕೊಂಡರು. ಅವರು ಪಾಪ, ಅಪರಿಪೂರ್ಣತೆ, ಮತ್ತು ಮರಣದೊಳಗೆ ದುಮುಕಿದರು.

2 ಏಳನೆಯ ದಿನಕ್ಕಾಗಿದ್ದ ಯೆಹೋವನ ಉದ್ದೇಶವು ಹಳಿತಪ್ಪಿ, ಯಾವುದೇ ನಿರೀಕ್ಷೆಯು ಉಳಿದಿಲ್ಲವೆಂಬಂತೆ ಆಗ ತೋರಿದ್ದಿರಬಹುದು. ಆ ಏಳನೆಯ ದಿನವು, ಅದಕ್ಕೆ ಮುಂಚಿನ ಆರು ದಿನಗಳಂತೆ, ಸಾವಿರಾರು ವರ್ಷಗಳಷ್ಟು ದೀರ್ಘವಾಗಿರಲಿತ್ತು. ಯೆಹೋವನು ಅದನ್ನು ಪರಿಶುದ್ಧ ದಿನವಾಗಿರಲೆಂದು ಘೋಷಿಸಿದ್ದನು, ಮತ್ತು ಅದು ಕಟ್ಟಕಡೆಗೆ ಇಡೀ ಭೂಮಿಯು ಪರದೈಸಾಗಿ ಮಾರ್ಪಟ್ಟು ಪರಿಪೂರ್ಣ ಮಾನವಕುಲದ ಕುಟುಂಬದಿಂದ ತುಂಬುವುದನ್ನು ಕಾಣಲಿತ್ತು. (ಆದಿಕಾಂಡ 1:28; 2:3) ಆದರೆ ಆ ವಿಪತ್ಕಾರಕ ದಂಗೆಯ ಬಳಿಕ, ಅಂಥ ಒಂದು ಸಂಗತಿಯು ನೆರವೇರುವುದಾದರೂ ಹೇಗೆ? ದೇವರು ಏನನ್ನು ಮಾಡಲಿದ್ದನು? ಇಲ್ಲಿಯೇ ಯೆಹೋವನ ವಿವೇಕದ ಒಂದು ಗಮನಾರ್ಹ ಪರೀಕ್ಷೆ​—ಪ್ರಾಯಶಃ ಗರಿಷ್ಠಮಟ್ಟದ ಪರೀಕ್ಷೆಯು ಆಯಿತು.

3, 4. (ಎ) ಏದೆನಿನಲ್ಲಾದ ದಂಗೆಗೆ ಯೆಹೋವನ ಪ್ರತಿಕ್ರಿಯೆಯು ಆತನ ವಿವೇಕದ ಒಂದು ವಿಸ್ಮಯಕರವಾದ ಉದಾಹರಣೆಯಾಗಿದೆ ಏಕೆ? (ಬಿ) ಯೆಹೋವನ ವಿವೇಕವನ್ನು ಅಧ್ಯಯನಿಸಲು ತೊಡಗುವಾಗ ಯಾವ ಸತ್ಯವನ್ನು ಮನಸ್ಸಿನಲ್ಲಿಡಲು ನಮ್ರತೆಯು ನಮ್ಮನ್ನು ಪ್ರೇರಿಸಬೇಕು?

3 ಯೆಹೋವನು ಆ ಕೂಡಲೇ ಪ್ರತಿಕ್ರಿಯಿಸಿದನು. ಏದೆನ್‌ ತೋಟದಲ್ಲಿ ಆ ದಂಗೆಕೋರರಿಗೆ ಆತನು ಶಿಕ್ಷೆ ವಿಧಿಸಿದ ಅದೇ ಸಮಯದಲ್ಲಿ, ವಿಸ್ಮಯಕರವಾದ ಒಂದು ಸಂಗತಿಯ ಕ್ಷಣಿಕ ನೋಟವನ್ನೂ ಆತನು ಒದಗಿಸಿದನು: ಅವರು ಆಗತಾನೇ ಆರಂಭಿಸಿದ ಕೆಡುಕುಗಳನ್ನು ನಿವಾರಿಸಲಿಕ್ಕಾಗಿರುವ ಆತನ ಉದ್ದೇಶವೇ ಅದು. (ಆದಿಕಾಂಡ 3:15) ಯೆಹೋವನ ದೂರದೃಷ್ಟಿಯ ಆ ಉದ್ದೇಶವು ಏದೆನಿನಿಂದ ತೊಡಗಿ, ಮಾನವ ಇತಿಹಾಸದ ಸಾವಿರಾರು ವರ್ಷಗಳ ಉದ್ದಕ್ಕೂ ಮುಂದುವರಿದು, ಭವಿಷ್ಯತ್ತಿನಲ್ಲಿ ಅತಿದೂರದ ತನಕ ವಿಸ್ತರಿಸುತ್ತದೆ. ಅದು ಅತ್ಯುತ್ಕೃಷ್ಟವಾಗಿ ಸರಳವಾಗಿದ್ದರೂ ಎಷ್ಟು ಗಹನವಾಗಿದೆಯೆಂದರೆ, ಅದರ ಅಧ್ಯಯನ ಮತ್ತು ಧ್ಯಾನದಲ್ಲಿ ಬೈಬಲ್‌ ವಾಚಕನೊಬ್ಬನು ಪ್ರತಿಫಲದಾಯಕವಾಗಿರುವ ಇಡೀ ಜೀವಮಾನವನ್ನೇ ವ್ಯಯಿಸಸಾಧ್ಯವಿದೆ. ಅಷ್ಟಲ್ಲದೆ, ಯೆಹೋವನ ಉದ್ದೇಶವು ಸಾಫಲ್ಯ ಪಡೆಯುವುದಂತೂ ಖಂಡಿತ. ಸಕಲ ದುಷ್ಟತನ, ಪಾಪ, ಮತ್ತು ಮರಣವನ್ನು ಅದು ಅಂತ್ಯಗೊಳಿಸುವುದು. ನಂಬಿಗಸ್ತ ಮಾನವಕುಲವನ್ನು ಅದು ಪರಿಪೂರ್ಣ ಸ್ಥಿತಿಗೇರಿಸುವುದು. ಇದೆಲ್ಲವು ಆ ಏಳನೆಯ ದಿನವು ಕೊನೆಗೊಳ್ಳುವ ಮೊದಲು ಆಗುವುದು ಯಾಕಂದರೆ ಎದುರಾದ ಎಲ್ಲಾ ಅಡ್ಡಿತಡೆಗಳ ಹೊರತೂ ಯೆಹೋವನು ಭೂಮಿಗಾಗಿ ಮತ್ತು ಮಾನವಕುಲಕ್ಕಾಗಿರುವ ತನ್ನ ಉದ್ದೇಶವನ್ನು ತನ್ನ ಸಮಯಕ್ಕೆ ಸರಿಯಾಗಿಯೇ ನೆರವೇರಿಸಿರುವನು!

4 ಅಂಥ ವಿವೇಕವು ಅಪಾರ ಭಯಭಕ್ತಿಯನ್ನು ಪ್ರೇರೇಪಿಸುತ್ತದೆ, ಅಲ್ಲವೇ? ಅಪೊಸ್ತಲ ಪೌಲನು ಹೀಗೆ ಬರೆಯಲು ಪ್ರೇರಿಸಲ್ಪಟ್ಟನು: ‘ಆಹಾ, ದೇವರ ವಿವೇಕವು ಎಷ್ಟೋ ಅಗಾಧ!’ (ರೋಮಾಪುರ 11:33) ಈ ದೈವಿಕ ವಿವೇಕದ ವಿವಿಧ ಅಂಶಗಳನ್ನು ನಾವು ಅಧ್ಯಯನಿಸಲು ತೊಡಗುವಾಗ, ಒಂದು ಪ್ರಾಮುಖ್ಯ ಸತ್ಯವನ್ನು ಮನಸ್ಸಿನಲ್ಲಿಡಲು ನಮ್ರತೆಯು ನಮ್ಮನ್ನು ಪ್ರೇರಿಸಬೇಕು, ಅದೇನಂದರೆ, ನಾವೆಷ್ಟೇ ಪ್ರಯತ್ನಪಟ್ಟರೂ ನಾವು ಯೆಹೋವನ ಅಪಾರವಾದ ವಿವೇಕದ ಮೇಲ್ಮೈಯನ್ನು ಕೇವಲ ಮೇಲಿಂದ ಮೇಲೆ ಕೆದಕಬಲ್ಲೆವು ಅಷ್ಟೇ. (ಯೋಬ 26:14) ಆದರೆ ಮೊದಲಾಗಿ, ಈ ವಿಸ್ಮಯಪ್ರೇರಕ ಗುಣದ ಅರ್ಥವೇನೆಂಬುದನ್ನು ನಾವು ನೋಡೋಣ.

ದೈವಿಕ ವಿವೇಕವೆಂದರೇನು?

5, 6. ಜ್ಞಾನ ಮತ್ತು ವಿವೇಕಗಳ ನಡುವಣ ಸಂಬಂಧವೇನು, ಮತ್ತು ಯೆಹೋವನ ಜ್ಞಾನದ ವಿಸ್ತಾರ್ಯವೆಷ್ಟು?

5 ವಿವೇಕ ಮತ್ತು ಜ್ಞಾನ ಒಂದೇ ಆಗಿಲ್ಲ. ಕಂಪ್ಯೂಟರುಗಳು ಜ್ಞಾನದ ಅಪಾರ ಸಂಗ್ರಹವನ್ನು ಶೇಖರಿಸಿಡಬಲ್ಲವು, ಆದರೆ ಅಂಥ ಯಂತ್ರಗಳನ್ನು ವಿವೇಕಿಗಳೆಂದು ಯಾರಾದರೂ ಕರೆದಾರೆಂಬುದನ್ನು ಊಹಿಸುವುದೂ ಕಷ್ಟ. ಹೀಗಿದ್ದರೂ, ಜ್ಞಾನ ಮತ್ತು ವಿವೇಕಗಳು ಒಂದಕ್ಕೊಂದು ಸಂಬಂಧಿಸಿವೆ. (ಜ್ಞಾನೋಕ್ತಿ 10:​14, NW) ಉದಾಹರಣೆಗೆ, ಒಂದು ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ ನಿಮಗೆ ವಿವೇಕಭರಿತ ಸಲಹೆಯು ಬೇಕಿದ್ದಲ್ಲಿ, ಔಷಧದ ಕುರಿತಾಗಿ ಅಲ್ಪ ಜ್ಞಾನವಿರುವ ಇಲ್ಲವೆ ಅದರ ಕುರಿತು ಏನನ್ನೂ ಅರಿಯದ ಒಬ್ಬ ವ್ಯಕ್ತಿಯನ್ನು ನೀವು ಸಂಪರ್ಕಿಸುವಿರೊ? ನಿಶ್ಚಯವಾಗಿಯೂ ಇಲ್ಲ! ಹಾಗೆಯೇ, ನಿಜ ವಿವೇಕಕ್ಕೆ ನಿಷ್ಕೃಷ್ಟ ಜ್ಞಾನವು ಅತ್ಯಾವಶ್ಯಕ.

6 ಯೆಹೋವನ ಬಳಿಯಿರುವ ಜ್ಞಾನದ ಭಂಡಾರಕ್ಕೆ ಮಿತಿಯೇ ಇಲ್ಲ. “ಸರ್ವಯುಗಗಳ ಅರಸ”ನೋಪಾದಿ ಆತನೊಬ್ಬನೇ ಸದಾಕಾಲ ಜೀವಿಸುತ್ತಾ ಇದ್ದವನು. (1 ತಿಮೊಥೆಯ 1:17) ಮತ್ತು ಆ ಎಲ್ಲಾ ಅಗಣಿತ ಯುಗಗಳಲ್ಲಿ ನಡೆದಿರುವ ಸಮಸ್ತ ವಿಷಯಗಳ ಪರಿಜ್ಞಾನವು ಆತನಿಗಿದೆ. ಬೈಬಲು ಹೇಳುವುದು: “ನಾವು ಯಾವಾತನಿಗೆ ಲೆಕ್ಕಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.” (ಇಬ್ರಿಯ 4:13; ಜ್ಞಾನೋಕ್ತಿ 15:3) ಸೃಷ್ಟಿಕರ್ತನೋಪಾದಿ ಯೆಹೋವನಿಗೆ ತಾನು ಉಂಟುಮಾಡಿದ ಸಮಸ್ತ ವಸ್ತುಗಳ ಪೂರ್ಣ ತಿಳಿವಳಿಕೆಯು ಇದೆ ಮತ್ತು ಆತನು ಆರಂಭದಿಂದಲೇ ಮಾನವರ ಸಕಲ ಚಟುವಟಿಕೆಗಳನ್ನು ಅವಲೋಕಿಸಿದ್ದಾನೆ. ಆತನು ಪ್ರತಿಯೊಂದು ಮಾನುಷ ಹೃದಯವನ್ನು ಪರೀಕ್ಷಿಸುತ್ತಾನೆ, ಆತನ ಕಣ್ಣಿಗೆ ಯಾವುದೂ ಮರೆಯಾಗಿಲ್ಲ. (1 ಪೂರ್ವಕಾಲವೃತ್ತಾಂತ 28:9) ನಮ್ಮನ್ನು ಇಚ್ಛಾಸ್ವಾತಂತ್ರ್ಯವುಳ್ಳ ವ್ಯಕ್ತಿಗಳಾಗಿ ಆತನು ನಿರ್ಮಿಸಿರಲಾಗಿ, ಜೀವನದಲ್ಲಿ ನಾವು ವಿವೇಕವುಳ್ಳ ಆಯ್ಕೆಗಳನ್ನು ಮಾಡುವುದನ್ನು ನೋಡುವಾಗ ಆತನಿಗೆ ಸಂತೋಷವಾಗುತ್ತದೆ. “ಪ್ರಾರ್ಥನೆಯನ್ನು ಕೇಳುವವ”ನೋಪಾದಿ ಆತನು ಏಕಕಾಲದಲ್ಲೇ ಅಗಣಿತ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ! (ಕೀರ್ತನೆ 65:2) ಯೆಹೋವನ ಸ್ಮರಣಶಕ್ತಿಯಾದರೊ ಪರಮ ಪರಿಪೂರ್ಣವಾದುದೆಂದು ಹೇಳಬೇಕಾಗಿಯೇ ಇಲ್ಲ.

7, 8. ಯೆಹೋವನು ತಿಳಿವಳಿಕೆ, ವಿವೇಚನೆ, ಮತ್ತು ವಿವೇಕವನ್ನು ಹೇಗೆ ಪ್ರದರ್ಶಿಸುತ್ತಾನೆ?

7 ಯೆಹೋವನಲ್ಲಿ ಜ್ಞಾನ ಮಾತ್ರವೇ ಅಲ್ಲ, ಇನ್ನೂ ಹೆಚ್ಚಿನದ್ದು ಇದೆ. ವಾಸ್ತವಾಂಶಗಳು ಹೇಗೆ ಒಂದಕ್ಕೊಂದು ಸಂಬಂಧಿಸುತ್ತವೆಂದೂ ಆತನು ನೋಡುತ್ತಾನೆ, ಮತ್ತು ಅಸಂಖ್ಯಾತ ವಿವರಗಳಿಂದ ನಿರ್ಮಿಸಲ್ಪಡುವ ಪೂರ್ಣ ಚಿತ್ರವನ್ನು ಆತನು ವಿವೇಚಿಸುತ್ತಾನೆ. ಒಳ್ಳೇದರ ಮತ್ತು ಕೆಟ್ಟದರ ಹಾಗೂ ಪ್ರಾಮುಖ್ಯ ಮತ್ತು ಕ್ಷುಲ್ಲಕ ವಿಷಯಗಳ ನಡುವಣ ಭೇದವನ್ನು ಮಾಡುತ್ತಾ, ಆತನು ವಿಷಯಗಳನ್ನು ತೂಗಿನೋಡಿ ತೀರ್ಮಾನಿಸುತ್ತಾನೆ. ಅಷ್ಟುಮಾತ್ರವಲ್ಲದೆ, ಆತನು ಬರಿಯ ಹೊರತೋರಿಕೆಯನ್ನು ನೋಡದೆ ನೇರವಾಗಿ ಹೃದಯದೊಳಗೆ ಇಣಿಕಿನೋಡಿ ಸೂಕ್ಷ್ಮಪರೀಕ್ಷೆಯನ್ನು ಮಾಡುತ್ತಾನೆ. (1 ಸಮುವೇಲ 16:7) ಹೀಗೆ, ಯೆಹೋವನಲ್ಲಿ ತಿಳಿವಳಿಕೆ ಮತ್ತು ವಿವೇಚನೆಯಿದೆ, ಮತ್ತು ಇವು ಜ್ಞಾನಕ್ಕಿಂತ ಮಿಗಿಲಾದ ಗುಣಗಳು. ಆದರೆ ವಿವೇಕವಾದರೊ ಇವೆಲ್ಲಕ್ಕಿಂತಲೂ ಹೆಚ್ಚು ಉತ್ಕೃಷ್ಟವಾದ ಗುಣವಾಗಿದೆ.

8 ವಿವೇಕವು ಜ್ಞಾನ, ವಿವೇಚನೆ, ಮತ್ತು ತಿಳಿವಳಿಕೆಯನ್ನು ಒಂದುಗೂಡಿಸಿ ಅವನ್ನು ಕಾರ್ಯರೂಪಕ್ಕೆ ಹಾಕುತ್ತದೆ. ವಾಸ್ತವದಲ್ಲಿ, “ವಿವೇಕ” ಎಂದು ತರ್ಜುಮೆಮಾಡಲ್ಪಟ್ಟಿರುವ ಕೆಲವು ಮೂಲ ಬೈಬಲ್‌ ಪದಗಳಿಗೆ ಅಕ್ಷರಶಃವಾಗಿ “ಫಲಕಾರಿ ಕಾರ್ಯ” ಅಥವಾ “ವ್ಯಾವಹಾರಿಕ ವಿವೇಕ”ವೆಂಬ ಅರ್ಥವಿದೆ. ಹಾಗಾದರೆ, ಯೆಹೋವನ ವಿವೇಕವು ಕೇವಲ ತಾತ್ತ್ವಿಕವಾದದ್ದಲ್ಲ. ಅದು ವ್ಯಾವಹಾರಿಕವಾಗಿರುತ್ತದೆ, ಮತ್ತು ಕಾರ್ಯಸಾಧಕವೂ ಹೌದು. ಆತನಿಗಿರುವ ವಿಸ್ತಾರವಾದ ಜ್ಞಾನ ಮತ್ತು ಅಗಾಧವಾದ ತಿಳಿವಳಿಕೆಯನ್ನು ಉಪಯೋಗಿಸಿಕೊಂಡು, ಯೆಹೋವನು ಯಾವಾಗಲೂ ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ನಿರ್ಣಯಗಳನ್ನು ಮಾಡುತ್ತಾನೆ ಮತ್ತು ಊಹಿಸಸಾಧ್ಯವಿರುವ ಅತ್ಯುತ್ತಮ ಮಾರ್ಗಕ್ರಮದ ಮೂಲಕ ಅವುಗಳನ್ನು ನೆರವೇರಿಸುತ್ತಾನೆ. ಇದೇ ನಿಜ ವಿವೇಕವಾಗಿದೆ! ಯೇಸುವಿನ ಹೇಳಿಕೆಯ ಸತ್ಯತೆಯನ್ನು ಯೆಹೋವನು ಪ್ರದರ್ಶಿಸಿ ತೋರಿಸುತ್ತಾನೆ: “ವಿವೇಕವು ತನ್ನ ಕಾರ್ಯಗಳಿಂದ ನೀತಿಯಾಗಿ ರುಜುವಾಗುತ್ತದೆ.” (ಮತ್ತಾಯ 11:​19, NW) ವಿಶ್ವದಾದ್ಯಂತವಿರುವ ಯೆಹೋವನ ಕೈಕೆಲಸಗಳು ಆತನ ವಿವೇಕಕ್ಕೆ ಮಹತ್ತಾದ ಸಾಕ್ಷ್ಯವನ್ನು ಕೊಡುತ್ತವೆ.

ದೈವಿಕ ವಿವೇಕದ ಸಾಕ್ಷ್ಯಗಳು

9, 10. (ಎ) ಯಾವ ರೀತಿಯ ವಿವೇಕವನ್ನು ಯೆಹೋವನು ಪ್ರದರ್ಶಿಸುತ್ತಾನೆ, ಮತ್ತು ಆತನದನ್ನು ಹೇಗೆ ತೋರಿಸಿದ್ದಾನೆ? (ಬಿ) ಒಂದು ಜೀವಕೋಶವು ಯೆಹೋವನ ವಿವೇಕದ ರುಜುವಾತನ್ನು ಹೇಗೆ ಕೊಡುತ್ತದೆ?

9 ಚೆನ್ನಾಗಿ ಕೆಲಸಮಾಡುವಂಥ ಸುಂದರ ವಸ್ತುಗಳನ್ನು ರಚಿಸುವ ಕರಕುಶಲಿಗನ ಕಲ್ಪನಾ ಚಾತುರ್ಯವನ್ನು ನೋಡಿ ನೀವೆಂದಾದರೂ ಬೆರಗಾದದ್ದುಂಟೊ? ಇದು ಭಾವೋತ್ಪಾದಕ ರೀತಿಯ ವಿವೇಕವಾಗಿದೆ. (ವಿಮೋಚನಕಾಂಡ 31:​1, 4, 5) ಯೆಹೋವನು ತಾನೇ ಇಂಥ ವಿವೇಕದ ಮೂಲನೂ ಸರ್ವಶ್ರೇಷ್ಠ ಒಡೆಯನೂ ಆಗಿರುತ್ತಾನೆ. ರಾಜ ದಾವೀದನು ಯೆಹೋವನ ಕುರಿತು ಅಂದದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” (ಕೀರ್ತನೆ 139:14) ಹೌದು, ಮನುಷ್ಯ ಶರೀರದ ಕುರಿತು ನಾವು ಎಷ್ಟು ಹೆಚ್ಚನ್ನು ಕಲಿಯುತ್ತೇವೊ ಅಷ್ಟು ಹೆಚ್ಚಾಗಿ ಯೆಹೋವನ ವಿವೇಕದಿಂದ ನಾವು ಮೂಕವಿಸ್ಮಿತರಾಗುವುದು ನಿಶ್ಚಯ.

10 ದೃಷ್ಟಾಂತಕ್ಕಾಗಿ: ನಿಮ್ಮ ಆರಂಭವು ಆದದ್ದು ಒಂದೇ ಒಂದು ಜೀವಕೋಶದಿಂದ​—ನಿಮ್ಮ ತಾಯಿಯ ಒಂದು ಅಂಡಾಣು, ನಿಮ್ಮ ತಂದೆಯ ವೀರ್ಯದಿಂದ ಫಲಿತವಾಗುತ್ತದೆ. ಬೇಗನೇ, ಆ ಜೀವಕೋಶವು ವಿಭಾಗವಾಗಲಾರಂಭಿಸಿತು. ಇದರ ಉತ್ಪಾದನೆಯಾಗಿರುವ ನೀವು ಈಗ ಸುಮಾರು ಒಂದು ಕೋಟಿ ಕೋಟಿ ಜೀವಕೋಶಗಳುಳ್ಳವರಾಗಿದ್ದೀರಿ. ಇವು ಅತಿ ಸೂಕ್ಷ್ಮವಾದ ಜೀವಕೋಶಗಳು. ಸಾಮಾನ್ಯ ಗಾತ್ರದ ಸುಮಾರು 10,000 ಜೀವಕೋಶಗಳನ್ನು ಒಂದು ಗುಂಡುಸೂಜಿಯ ತಲೆಯಷ್ಟು ಚಿಕ್ಕ ಜಾಗದಲ್ಲಿಡಬಹುದು. ಆದರೂ, ಅವುಗಳಲ್ಲಿ ಪ್ರತಿಯೊಂದು ಜೀವಕೋಶವು ಮನಸ್ಸನ್ನು ತಬ್ಬಿಬ್ಬುಗೊಳಿಸುವಷ್ಟು ಸಂಕೀರ್ಣತೆಯಿಂದ ಕೂಡಿವೆ. ಒಂದು ಜೀವಕೋಶವು ಯಾವುದೇ ಮಾನವ ನಿರ್ಮಿತ ಯಂತ್ರ ಅಥವಾ ಕಾರ್ಖಾನೆಗಿಂತಲೂ ಎಷ್ಟೋ ಹೆಚ್ಚು ಜಟಿಲವಾಗಿದೆ. ಒಂದು ಜೀವಕೋಶವು ಒಂದು ಕೋಟೆ ಪಟ್ಟಣದಂತಿದೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಅದರೊಳಗೆ ನಿಯಂತ್ರಿಸಲ್ಪಟ್ಟಿರುವ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಸಾರಿಗೆ ವ್ಯವಸ್ಥೆ, ಸಂವಾದ ಅಂತರ್ಜಾಲ, ಶಕ್ತ್ಯುತ್ಪತ್ತಿ ಸ್ಥಾವರಗಳು, ಉತ್ಪಾದಕ ಸ್ಥಾವರಗಳು, ತ್ಯಾಜ್ಯ ತೊಲಗಿಸುವಿಕೆ, ಮತ್ತು ಪುನರ್‌ಚಕ್ರೀಕರಣ, ರಕ್ಷಣಾ ವ್ಯೂಹಗಳು, ಹಾಗೂ ಅದರ ಕೇಂದ್ರ ಭಾಗದಲ್ಲಿ ಕೇಂದ್ರ ಸರಕಾರದಂಥ ಒಂದು ವ್ಯವಸ್ಥೆಯೂ ಇದೆ. ಅಷ್ಟಲ್ಲದೆ, ಕೆಲವೇ ತಾಸುಗಳೊಳಗೆ ಒಂದು ಜೀವಕೋಶವು ತನ್ನ ಸಂಪೂರ್ಣ ಪಡಿಯಚ್ಚನ್ನು ತಾನೇ ನಿರ್ಮಿಸಬಲ್ಲದು!

11, 12. (ಎ) ಬೆಳೆಯುತ್ತಿರುವ ಭ್ರೂಣದ ಜೀವಕೋಶಗಳು ವಿಭಜಿಸುತ್ತಾ ಹೋಗುವಂತೆ ಮಾಡುವಂಥಾದ್ದು ಯಾವುದು, ಮತ್ತು ಇದು ಕೀರ್ತನೆ 139:16 ರೊಂದಿಗೆ ಹೇಗೆ ಹೊಂದಿಕೆಯಲ್ಲಿದೆ? (ಬಿ) ನಾವು “ಅದ್ಭುತವಾಗಿ ರಚಿಸಲ್ಪಟ್ಟಿ”ದ್ದೇವೆಂದು ಮಾನವ ಮಿದುಳು ಯಾವ ರೀತಿಗಳಲ್ಲಿ ತೋರಿಸುತ್ತದೆ?

11 ಎಲ್ಲಾ ಜೀವಕೋಶಗಳು ಒಂದೇ ರೀತಿಯವುಗಳಲ್ಲ ನಿಜ. ಭ್ರೂಣದ ಜೀವಕೋಶಗಳು ವಿಭಜಿಸುತ್ತಾ ಹೋದಂತೆ, ಅವು ತೀರ ಭಿನ್ನ ಭಿನ್ನವಾದ ಕಾರ್ಯಾಚರಣೆಗಳನ್ನು ವಹಿಸಿಕೊಳ್ಳುತ್ತವೆ. ಕೆಲವು ನರಗ್ರಂಥಿಗಳ ಜೀವಕೋಶಗಳಾಗಿರುವವು; ಇನ್ನು ಕೆಲವು ಎಲುಬಿನ, ಸ್ನಾಯುಖಂಡದ, ರಕ್ತದ, ಅಥವಾ ನೇತ್ರ ಜೀವಕೋಶಗಳಾಗುವವು. ಇಂಥ ವಿಭಿನ್ನತೆಗಳೆಲ್ಲ ಜೀವಕೋಶದ ಆನುವಂಶೀಯ ನೀಲಿಪ್ರತಿಗಳ “ಭಂಡಾರ”ವಾದ ಡಿ.ಎನ್‌.ಎ.ಯಲ್ಲಿ ಪ್ರೋಗ್ರ್ಯಾಮ್‌ ಮಾಡಲ್ಪಟ್ಟಿರುತ್ತವೆ. ಆಸಕ್ತಿಯ ಸಂಗತಿಯೇನೆಂದರೆ, ದಾವೀದನು ಯೆಹೋವನಿಗೆ, “ನಿನ್ನ ಕಣ್ಣುಗಳು ನನ್ನ ಭ್ರೂಣವನ್ನೂ ನೋಡಿದವು, ಮತ್ತು ನಿನ್ನ ಪುಸ್ತಕದಲ್ಲಿ ಅದರ ಸಕಲ ಅಂಗಗಳು ಬರೆದಿಡಲ್ಪಟ್ಟವು,” ಎಂದು ನುಡಿಯುವಂತೆ ಪ್ರೇರಿಸಲ್ಪಟ್ಟನು.​—ಕೀರ್ತನೆ 139:​16, NW.

12 ಕೆಲವು ಶಾರೀರಿಕ ಅಂಗಗಳಂತೂ ಅತ್ಯಂತ ಜಟಿಲವಾಗಿರುತ್ತವೆ. ಉದಾಹರಣೆಗಾಗಿ ಮನುಷ್ಯನ ಮಿದುಳನ್ನು ಪರಿಗಣಿಸಿರಿ. ವಿಶ್ವದಲ್ಲಿ ಇಂದಿನ ವರೆಗೆ ಕಂಡುಹಿಡಿಯಲ್ಪಟ್ಟಿರುವ ವಸ್ತುಗಳಲ್ಲೇ ಅತ್ಯಂತ ಜಟಿಲವಾದದ್ದೆಂದು ಕೆಲವರು ಅದನ್ನು ಕರೆಯುತ್ತಾರೆ. ಅದರೊಳಗೆ ಸುಮಾರು ಹತ್ತು ಸಾವಿರ ಕೋಟಿ ನರಕೋಶಗಳಿವೆ​—ನಮ್ಮ ಗ್ಯಾಲಕ್ಸಿಯಲ್ಲಿರುವ ನಕ್ಷತ್ರಗಳ ಸಂಖ್ಯೆಯಷ್ಟು. ಆ ನರಕೋಶಗಳಲ್ಲಿ ಪ್ರತಿಯೊಂದು ಕವಲೊಡೆದು ಬೇರೆ ಜೀವಕೋಶಗಳೊಂದಿಗೆ ಸಾವಿರಾರು ಜೋಡಣೆಗಳನ್ನು ಮಾಡುತ್ತವೆ. ಒಂದು ಮಾನವ ಮಿದುಳು, ಲೋಕದಲ್ಲಿರುವ ಎಲ್ಲಾ ಪುಸ್ತಕ ಭಂಡಾರಗಳಲ್ಲಿರುವ ಸಕಲ ಮಾಹಿತಿಯನ್ನು ಸಂಗ್ರಹಿಸಬಲ್ಲದು ಮತ್ತು ಅದರ ಶೇಖರಣ ಶಕ್ತಿಯ ಅಪಾರತೆಯನ್ನಂತೂ ಅಳೆಯಲಿಕ್ಕೂ ಆಗಲಿಕ್ಕಿಲ್ಲವೆಂದು ವಿಜ್ಞಾನಿಗಳು ಹೇಳುತ್ತಾರೆ. ‘ಅದ್ಭುತವಾಗಿ ರಚಿಸಲ್ಪಟ್ಟಿರುವ’ ಈ ಅಂಗವನ್ನು ಎಷ್ಟೋ ದಶಮಾನಗಳಿಂದ ಅಧ್ಯಯನ ಮಾಡಿದಾಗ್ಯೂ, ಅದರ ಕಾರ್ಯವಿಧಾನವನ್ನು ತಾವೆಂದೂ ಪೂರ್ತಿಯಾಗಿ ತಿಳಿದುಕೊಳ್ಳಲು ಆಗದಿರಬಹುದೆಂದು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ.

13, 14. (ಎ) ಇರುವೆಗಳು ಮತ್ತು ಇತರ ಕೀಟಗಳು “ಸಹಜ ಪ್ರವೃತ್ತಿಯಿಂದಲೇ ವಿವೇಕಿ”ಗಳಾಗಿವೆ ಎಂಬುದನ್ನು ಹೇಗೆ ರುಜುಪಡಿಸುತ್ತವೆ, ಮತ್ತು ಇದು ಅವುಗಳ ಸೃಷ್ಟಿಕರ್ತನ ಕುರಿತು ನಮಗೇನನ್ನು ಕಲಿಸುತ್ತದೆ? (ಬಿ) ಜೇಡರಬಲೆಯಂಥ ಸೃಷ್ಟಿವಸ್ತುಗಳು “ವಿವೇಕ”ದಿಂದಲೇ ಮಾಡಲ್ಪಟ್ಟಿವೆಯೆಂದು ನಾವೇಕೆ ಹೇಳಬಹುದು?

13 ಆದರೂ ಮಾನವರು ಯೆಹೋವನ ಸೃಷ್ಟಿಕಾರಕ ವಿವೇಕದ ಕೇವಲ ಒಂದು ಉದಾಹರಣೆಯಾಗಿದ್ದಾರೆ ಅಷ್ಟೇ. ಕೀರ್ತನೆ 104:24 ಹೇಳುವುದು: “ಯೆಹೋವನೇ, ನಿನ್ನ ಕೈಕೆಲಸಗಳು ಎಷ್ಟೋ ವಿಧವಾಗಿವೆ. ಅವುಗಳನ್ನೆಲ್ಲಾ ಜ್ಞಾನ [“ವಿವೇಕ,” NW] ದಿಂದಲೇ ಮಾಡಿದ್ದೀ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.” ನಮ್ಮ ಸುತ್ತಮುತ್ತಲಿರುವ ಪ್ರತಿಯೊಂದು ಸೃಷ್ಟಿಯಲ್ಲಿ ಯೆಹೋವನ ವಿವೇಕವು ತೋರಿಬರುತ್ತದೆ. ಉದಾಹರಣೆಗೆ ಇರುವೆಯು “ಸಹಜ ಪ್ರವೃತ್ತಿಯಿಂದಲೇ ವಿವೇಕಿ” ಆಗಿದೆ. (ಜ್ಞಾನೋಕ್ತಿ 30:​24, NW) ಇರುವೆಗಳ ಸಮುದಾಯಗಳು ಬಲು ಸೊಗಸಾಗಿ ಸಂಘಟಿಸಲ್ಪಟ್ಟಿರುತ್ತವೆ ನಿಶ್ಚಯ. ಕೆಲವು ಇರುವೆಗಳ ಸಮುದಾಯಗಳು ಗಿಡಹೇನುಗಳೆಂಬ ಕೀಟಗಳನ್ನು ತಮ್ಮ ಜಾನುವಾರುಗಳೋ ಎಂಬಂತೆ ಪರಿಪಾಲಿಸಿ, ಆಶ್ರಯಕೊಟ್ಟು, ಅವುಗಳಿಂದ ಪೋಷಣೆಯನ್ನೂ ಪಡೆಯುತ್ತಿರುತ್ತವೆ. ಬೇರೆ ಇರುವೆಗಳು ಬೇಸಾಯಗಾರರಾಗಿ ಕೆಲಸಮಾಡುತ್ತಾ ಅಣಬೆಯ “ಬೆಳೆಯನ್ನು” ಬೆಳೆಸುತ್ತವೆ ಮತ್ತು ಕೃಷಿಮಾಡುತ್ತವೆ. ಬೇರೆ ಅನೇಕ ಸೃಷ್ಟಿಜೀವಿಗಳು ಹುಟ್ಟರಿವಿನ ಸಹಜ ಪ್ರವೃತ್ತಿಯಿಂದಲೇ ಅನೇಕ ಗಮನಾರ್ಹ ವಿಷಯಗಳನ್ನು ನಡಿಸುವಂತೆ ವಿನ್ಯಾಸಿಸಲ್ಪಟ್ಟಿವೆ. ಸಾಮಾನ್ಯ ನೊಣವೊಂದಕ್ಕೆ ಹಾರುವಿಕೆಯಲ್ಲಿರುವ ಚಾಕಚಕ್ಯತೆಯನ್ನು ಮನುಷ್ಯನ ಅತ್ಯಾಧುನಿಕ ವಿಮಾನಗಳು ಸಹ ನಕಲುಮಾಡಶಕ್ಯವಾಗಿಲ್ಲ. ವಲಸೆಹೋಗುವ ಪಕ್ಷಿಗಳು ನಕ್ಷತ್ರಗಳ ದಿಕ್ಕನ್ನನುಸರಿಸಿ, ಭೂಮಿಯ ಅಯಸ್ಕಾಂತ ಪ್ರಭಾವದಿಂದ ಗುರುತಿಸಿ, ಅಥವಾ ಒಂದು ರೀತಿಯ ಆಂತರಿಕ ನಕ್ಷಾಪಟವನ್ನು ಅನುಸರಿಸಿ ಆಕಾಶಸಂಚಾರವನ್ನು ನಡಿಸುತ್ತವೆ. ಈ ಸೃಷ್ಟಿಜೀವಿಗಳೊಳಗೆ ಪ್ರೋಗ್ರ್ಯಾಮ್‌ ಮಾಡಲ್ಪಟ್ಟಿರುವ ಜಟಿಲವಾದ ವರ್ತನೆಗಳನ್ನು ಅಧ್ಯಯನಮಾಡಲು ಜೀವವಿಜ್ಞಾನಿಗಳು ಅನೇಕ ವರ್ಷಗಳ ಕಾಲವನ್ನು ಕಳೆಯುತ್ತಾರೆ. ಹಾಗಾದರೆ ಆ ದೈವಿಕ ಕಾರ್ಯಕ್ರಮ ಯೋಜಕನ ವಿವೇಕವನ್ನಂತೂ ಎಷ್ಟೆಂದು ಹೇಳಬೇಕು!

14 ಯೆಹೋವನ ಸೃಷ್ಟಿಕಾರಕ ವಿವೇಕದಿಂದ ವಿಜ್ಞಾನಿಗಳು ಬಹಳಷ್ಟನ್ನು ಕಲಿತಿದ್ದಾರೆ. ನಿಸರ್ಗದಲ್ಲಿ ಕಂಡುಬರುವ ವಿನ್ಯಾಸಗಳನ್ನು ನಕಲುಮಾಡಲು ಪ್ರಯತ್ನಿಸುವ ಬಯೊಮಿಮಿಟಿಕ್ಸ್‌ ಎಂಬ ಇಂಜಿನಿಯರಿಂಗ್‌ ರಂಗವೂ ಇದೆ. ಉದಾಹರಣೆಗೆ, ನೀವು ಜೇಡರಬಲೆಯ ಚೆಲುವನ್ನು ಅಚ್ಚರಿಯಿಂದ ಎವೆಯಿಕ್ಕದೆ ನೋಡಿರಬಹುದು. ಆದರೆ ಒಬ್ಬ ಇಂಜಿನಿಯರನು ಅದನ್ನು ವಿನ್ಯಾಸದ ವಿಸ್ಮಯದೋಪಾದಿ ನೋಡುತ್ತಾನೆ. ದುರ್ಬಲವಾಗಿ ತೋರುವ ಅದರ ಕೆಲವೊಂದು ಎಳೆಗಳು, ಪ್ರಮಾಣಾನುಗುಣವಾಗಿ, ಉಕ್ಕಿಗಿಂತಲೂ ಗಟ್ಟಿ ಮತ್ತು ಬುಲೆಟ್‌ಫ್ರೂಫ್‌ ಜ್ಯಾಕೆಟ್‌ನಲ್ಲಿರುವ ನಾರಿಗಿಂತಲೂ ಗಡುಸಾದದ್ದಾಗಿವೆ. ಅದಕ್ಕಿರುವ ಬಲವಾದರೂ ಎಷ್ಟು? ಒಂದು ಜೇಡರಬಲೆಯನ್ನು ಮೀನುಹಿಡಿಯುವ ದೋಣಿಯಲ್ಲಿ ಉಪಯೋಗಿಸಲಾಗುವ ಬಲೆಯ ಗಾತ್ರದಷ್ಟು ದೊಡ್ಡದು ಮಾಡಿದ್ದೀರೆಂದು ನೆನಸಿರಿ. ಅಂಥ ಒಂದು ಬಲೆಯು ಪ್ರಯಾಣಿಕ ವಿಮಾನವೊಂದನ್ನು ಅದು ಹಾರಾಡುತ್ತಿರುವಾಗಲೇ ಮಧ್ಯದಲ್ಲಿ ಹಿಡಿದು ನಿಲ್ಲಿಸಬಲ್ಲದು! ಹೌದು, ಈ ಎಲ್ಲಾ ಸಂಗತಿಗಳನ್ನು ಯೆಹೋವನು ಮಾಡಿರುವುದು “ವಿವೇಕ”ದಿಂದಲೇ.

ಭೂಮಿಯ ಸೃಷ್ಟಿಜೀವಿಗಳು “ಸಹಜ ಪ್ರವೃತ್ತಿಯಿಂದಲೇ ವಿವೇಕಿ”ಗಳಾಗಿರುವಂತೆ ಏರ್ಪಡಿಸಿದಾತನು ಯಾರು?

ಭೂಮಿಯಾಚೆ ತೋರಿಬರುವ ವಿವೇಕ

15, 16. (ಎ) ಆಕಾಶದಲ್ಲಿನ ನಕ್ಷತ್ರಗಳು ಯೆಹೋವನ ವಿವೇಕದ ಯಾವ ಪುರಾವೆಯನ್ನು ಕೊಡುತ್ತವೆ? (ಬಿ) ದೇವದೂತರ ಮಹಾ ಸಂಖ್ಯೆಯ ಮೇಲೆ ಅಧಿಕಾರವಿರುವ ಪರಮೋಚ್ಛ ಸೈನ್ಯಾಧಿಪತಿಯೋಪಾದಿ ಯೆಹೋವನ ಸ್ಥಾನವು ಹೇಗೆ ಈ ಆಡಳಿತಗಾರನ ವಿವೇಕಕ್ಕೆ ಸಾಕ್ಷ್ಯವನ್ನು ಕೊಡುತ್ತದೆ?

15 ವಿಶ್ವದಾದ್ಯಂತವಿರುವ ಆತನ ಕೈಕೆಲಸಗಳಲ್ಲಿ ಯೆಹೋವನ ವಿವೇಕವು ಪ್ರತ್ಯಕ್ಷವಾಗಿ ತೋರಿಬರುತ್ತದೆ. ಅಧ್ಯಾಯ 5ರಲ್ಲಿ ನಾವು ಬಹಳಷ್ಟು ಚರ್ಚಿಸಿದಂಥ ಆಕಾಶದಲ್ಲಿನ ನಕ್ಷತ್ರಗಳು, ಬಾಹ್ಯಾಕಾಶದಲ್ಲೆಲ್ಲಾ ಅಸ್ತವ್ಯಸ್ತವಾಗಿ ಚದರಿಸಲ್ಪಟ್ಟಿರುವುದಿಲ್ಲ. ಯೆಹೋವನ ವಿವೇಕಭರಿತ “ಖಗೋಲದ ಕಟ್ಟಳೆಗಳ” ಕಾರಣದಿಂದಾಗಿ ಈ ನಕ್ಷತ್ರಗಳು ಕ್ರಮಬದ್ಧ ಗ್ಯಾಲಕ್ಸಿಗಳಾಗಿ, ಈ ಗ್ಯಾಲಕ್ಸಿಗಳು ಗ್ಯಾಲಕ್ಸಿಗುಚ್ಛಗಳಾಗಿ, ಮತ್ತು ಈ ಗ್ಯಾಲಕ್ಸಿಗುಚ್ಛಗಳು ಒಟ್ಟುಗೂಡಿ ಮಹಾ ಗ್ಯಾಲಕ್ಸಿಗುಚ್ಛಗಳಾಗಿ ತುಂಬ ಮನೋಹರವಾದ ರೀತಿಯಲ್ಲಿ ಸಂಘಟಿಸಲ್ಪಟ್ಟಿವೆ. (ಯೋಬ 38:33) ಯೆಹೋವನು ಆಕಾಶಸ್ಥಕಾಯಗಳನ್ನು ಒಂದು “ಸೈನ್ಯ”ವೆಂದು ಸೂಚಿಸುವುದರಲ್ಲಿ ಆಶ್ಚರ್ಯವೇನಿಲ್ಲ! (ಯೆಶಾಯ 40:26) ಆದರೂ, ಯೆಹೋವನ ವಿವೇಕವನ್ನು ಇನ್ನೂ ಅಧಿಕ ಸ್ಪಷ್ಟವಾಗಿ ಪ್ರದರ್ಶಿಸುವ ಇನ್ನೊಂದು ಸೈನ್ಯವೂ ಇದೆ.

16 ನಾವು ಅಧ್ಯಾಯ 4ರಲ್ಲಿ ಗಮನಿಸಿದ ಪ್ರಕಾರ, ದೇವರಿಗೆ “ಸೇನಾಧೀಶ್ವರನಾದ ಯೆಹೋವ” ಎಂಬ ಬಿರುದು ಇದೆ. ಇದಕ್ಕೆ ಕಾರಣವು ಆತನು ಶತಕೋಟಿಗಟ್ಟಲೆ ಆತ್ಮಜೀವಿಗಳ ದೊಡ್ಡ ಸೇನೆಯ ಪರಮೋಚ್ಚ ಸೈನ್ಯಾಧಿಪತಿಯ ಸ್ಥಾನವನ್ನು ಹೊಂದಿರುವುದೇ. ಇದು ಯೆಹೋವನ ಶಕ್ತಿಯ ಪುರಾವೆಯಾಗಿದೆ. ಆದರೆ ಇಲ್ಲಿ ಆತನ ವಿವೇಕವು ಒಳಗೂಡಿರುವುದು ಹೇಗೆ? ಇದನ್ನು ಪರಿಗಣಿಸಿರಿ: ಯೆಹೋವ ಮತ್ತು ಯೇಸು ಕೆಲಸಮಾಡುವುದನ್ನೆಂದೂ ನಿಲ್ಲಿಸುವುದಿಲ್ಲ. (ಯೋಹಾನ 5:17) ಹೀಗಿರಲಾಗಿ, ಆ ಮಹೋನ್ನತನ ದೇವದೂತ ಶುಶ್ರೂಷಕರು ಸಹ ಯಾವಾಗಲೂ ಕಾರ್ಯಮಗ್ನರಾಗಿರುವುದು ನ್ಯಾಯಸಮ್ಮತ. ಮತ್ತು ಅವರು ಮನುಷ್ಯರಿಗಿಂತ ಶ್ರೇಷ್ಠರು, ಅತಿಶಯ ಬುದ್ಧಿಶಕ್ತಿಯನ್ನೂ ಅತಿಶಯ ಬಲವನ್ನೂ ಹೊಂದಿರುವವರು ಎಂಬುದನ್ನು ನೆನಪಿನಲ್ಲಿಡಿರಿ. (ಇಬ್ರಿಯ 1:7; 2:7) ಆದರೂ, ಆ ದೇವದೂತರೆಲ್ಲರು ಕೋಟ್ಯನುಕೋಟಿ ವರ್ಷಗಳಿಂದ “ಆತನ ಆಜ್ಞೆಯನ್ನು ನೆರವೇರಿಸುವ” ಮತ್ತು “ಆತನ ಚಿತ್ತವನ್ನು ಮಾಡುವ” (NW) ತೃಪ್ತಿದಾಯಕ ಕೆಲಸದಲ್ಲಿ ಸಂತೋಷದಿಂದ ತೊಡಗಿದ್ದು, ಕಾರ್ಯನಿರತರಾಗಿರುವಂತೆ ಯೆಹೋವನು ಮಾಡಿದ್ದಾನೆ. (ಕೀರ್ತನೆ 103:20, 21) ಈ ಆಡಳಿತಗಾರನ ವಿವೇಕವಾದರೊ ಎಷ್ಟು ಅಪಾರವಾಗಿರಬೇಕು!

ಯೆಹೋವನು “ಒಬ್ಬನೇ ವಿವೇಕಿ”

17, 18. ಯೆಹೋವನು “ಒಬ್ಬನೇ ವಿವೇಕಿ” ಎಂದು ಬೈಬಲು ಹೇಳುವುದೇಕೆ, ಮತ್ತು ಆತನ ವಿವೇಕವು ನಮ್ಮನ್ನು ಏಕೆ ಮೂಕವಿಸ್ಮಿತರನ್ನಾಗಿ ಮಾಡಬೇಕು?

17 ಇಂಥ ಸಾಕ್ಷ್ಯದ ನೋಟದಲ್ಲಿ, ಯೆಹೋವನ ವಿವೇಕವನ್ನು ಬೈಬಲು ಉಚ್ಚತಮ ಭಾವದಲ್ಲಿ ವರ್ಣಿಸುವುದರಲ್ಲಿ ಆಶ್ಚರ್ಯವೇನಿದೆ? ಉದಾಹರಣೆಗೆ, ಯೆಹೋವನು “ಒಬ್ಬನೇ ವಿವೇಕಿ” ಎಂದು ಅದು ಹೇಳುತ್ತದೆ. (ರೋಮಾಪುರ 16:​27, NW) ಯೆಹೋವನೊಬ್ಬನಲ್ಲಿಯೇ ಸಮಗ್ರ ಅರ್ಥದಲ್ಲಿ ವಿವೇಕವು ಇದೆ. ನಿಜ ವಿವೇಕವೆಲ್ಲಾದರ ಮೂಲನು ಆತನೇ. (ಜ್ಞಾನೋಕ್ತಿ 2:6) ಅದುದರಿಂದಲೇ ಯೇಸುವು, ಯೆಹೋವನ ಸೃಷ್ಟಿಯೆಲ್ಲಾದರಲ್ಲಿ ಅತ್ಯಂತ ವಿವೇಕಿಯಾಗಿದ್ದಾಗ್ಯೂ, ತನ್ನ ಸ್ವಂತ ವಿವೇಕದ ಮೇಲೆ ಆತುಕೊಳ್ಳದೆ ತನ್ನ ತಂದೆಯು ಮಾರ್ಗದರ್ಶಿಸಿದ ಪ್ರಕಾರವೇ ಮಾತನಾಡಿದನು.​—ಯೋಹಾನ 12:48-50.

18 ಯೆಹೋವನ ವಿವೇಕದ ಅಸದೃಶತೆಯನ್ನು ಅಪೊಸ್ತಲ ಪೌಲನು ಹೇಗೆ ವ್ಯಕ್ತಪಡಿಸಿದನೆಂಬುದನ್ನು ಗಮನಿಸಿರಿ: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ! ಆತನ ತೀರ್ಮಾನಗಳು ಪರಿಶೋಧನೆಗೆ ಎಷ್ಟೋ ಅಗಮ್ಯ! ಆತನ ಮಾರ್ಗಗಳು ಕಂಡುಹಿಡಿಯುವದಕ್ಕೆ ಎಷ್ಟೋ ಅಸಾಧ್ಯ!” (ರೋಮಾಪುರ 11:33) “ಆಹಾ” ಎಂಬ ಆಶ್ಚರ್ಯಸೂಚಕ ಶಬ್ದದಿಂದ ವಚನವನ್ನು ಆರಂಭಿಸಿದ ಮೂಲಕ ಇಲ್ಲಿ ಪೌಲನು ಬಲವಾದ ಉದ್ವೇಗವನ್ನು​—ಈ ಸಂದರ್ಭದಲ್ಲಿ, ಗಾಢವಾದ ವಿಸ್ಮಯವನ್ನು ವ್ಯಕ್ತಪಡಿಸಿದನು. “ಅಗಾಧ”ಕ್ಕೆ ಅವನು ಪ್ರಯೋಗಿಸಿದ ಗ್ರೀಕ್‌ ಶಬ್ದವು “ಅಧೋಲೋಕ” ಎಂಬ ಶಬ್ದಕ್ಕೆ ಹತ್ತಿರ ಸಂಬಂಧವುಳ್ಳ ಪದವಾಗಿದೆ. ಆದುದರಿಂದ ಅವನ ಮಾತುಗಳು ಕಣ್ಣಿಗೆ ಕಟ್ಟುವಂಥ ರೀತಿಯ ಮಾನಸಿಕ ಚಿತ್ರಣವನ್ನು ಎದುರಿಗೆ ತರುತ್ತವೆ. ಯೆಹೋವನ ವಿವೇಕದ ಕುರಿತು ನಾವು ಪರ್ಯಾಲೋಚಿಸುವಾಗ, ನಾವೊಂದು ಕೊನೆಯೇ ಇಲ್ಲದ, ತಳವಿಲ್ಲದ ಕಂದರವನ್ನು ಎವೆಯಿಕ್ಕದೆ ನೋಡುತ್ತಿದ್ದೇವೋ ಎಂಬಂತಿದೆ. ಆ ಕ್ಷೇತ್ರವು ಎಷ್ಟು ಆಳವಾಗಿದೆಯೆಂದರೆ, ಎಷ್ಟು ವಿಶಾಲವಾಗಿದೆಯೆಂದರೆ ಅದರ ರೇಖಾಚಿತ್ರಣವನ್ನಾಗಲಿ ನಕ್ಷೆನಿರೂಪಣೆಯನ್ನಾಗಲಿ ತಯಾರಿಸುವುದಿರಲಿ, ಅದರ ಅಪಾರತೆಯನ್ನು ಗ್ರಹಿಸಲು ಕೂಡ ನಾವೆಂದೂ ಶಕ್ತರಾಗೆವು. (ಕೀರ್ತನೆ 92:5) ಈ ವಿಚಾರವು ನಮ್ಮನ್ನು ವಿನೀತರನ್ನಾಗಿಸುವುದಿಲ್ಲವೊ?

19, 20. (ಎ) ದೈವಿಕ ವಿವೇಕಕ್ಕೆ ಹದ್ದು ಯೋಗ್ಯ ದ್ಯೋತಕವಾಗಿದೆಯೇಕೆ? (ಬಿ) ಭವಿಷ್ಯತ್ತಿನೊಳಗೆ ಇಣಿಕಿ ನೋಡುವ ತನ್ನ ಶಕ್ತಿಯನ್ನು ಯೆಹೋವನು ಪ್ರದರ್ಶಿಸಿರುವುದು ಹೇಗೆ?

19 ಯೆಹೋವನು “ಒಬ್ಬನೇ ವಿವೇಕಿ” ಎಂದು ಇನ್ನೊಂದು ಅರ್ಥದಲ್ಲೂ ಹೇಳಸಾಧ್ಯವಿದೆ: ದೂರದ ಭವಿಷ್ಯತ್ತಿನೊಳಗೆ ಆತನೊಬ್ಬನೆ ಇಣಿಕಿ ನೋಡಶಕ್ತನು. ದೈವಿಕ ವಿವೇಕವನ್ನು ಸೂಚಿಸಲಿಕ್ಕಾಗಿ ಯೆಹೋವನು ದೂರದೃಷ್ಟಿಯಿರುವ ಹದ್ದನ್ನು ಉಪಯೋಗಿಸುತ್ತಾನೆಂದು ನೆನಪಿನಲ್ಲಿಡಿರಿ. ಒಂದು ಹೊಂಬಣ್ಣದ ಹದ್ದಿನ ತೂಕವು ಬರೇ ಐದು ಕಿಲೊ ಇರಬಹುದು, ಆದರೆ ಅದರ ಕಣ್ಣುಗಳು ಒಬ್ಬ ಪೂರ್ಣವಾಗಿ ಬೆಳೆದಿರುವ ಮನುಷ್ಯನದ್ದಕ್ಕಿಂತಲೂ ದೊಡ್ಡದಾಗಿವೆ. ಹದ್ದಿನ ದೃಷ್ಟಿಯು ಅಚ್ಚರಿಗೊಳಿಸುವ ರೀತಿಯಲ್ಲಿ ಚುರುಕಾಗಿದ್ದು, ನೂರಾರು ಅಡಿ ಎತ್ತರದಿಂದ, ಬಹುಶಃ ಹಲವು ಕಿಲೊಮೀಟರ್‌ಗಿಂತಲೂ ಹೆಚ್ಚು ದೂರದಿಂದ ಅದು ಅತಿ ಚಿಕ್ಕ ಬೇಟೆಯನ್ನೂ ಪತ್ತೆಹಚ್ಚಲು ಶಕ್ತವಾಗಿದೆ! ಹದ್ದಿನ ಕುರಿತು ಯೆಹೋವನು ತಾನೇ ಒಮ್ಮೆ ಅಂದದ್ದು: “ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವದು.” (ಯೋಬ 39:29) ಅದೇ ರೀತಿಯಲ್ಲಿ, “ದೂರದಲ್ಲಿ”ರುವ ಸಮಯವನ್ನು​—ಭವಿಷ್ಯತ್ತನ್ನೂ ಯೆಹೋವನು ನೋಡಶಕ್ತನಾಗಿದ್ದಾನೆ!

20 ಇದು ಸತ್ಯವಾಗಿದೆಯೆಂಬುದಕ್ಕೆ ಬೈಬಲಿನಲ್ಲಿ ಪುರಾವೆಯು ತುಂಬಿದೆ. ಅದರಲ್ಲಿ ನೂರಾರು ಪ್ರವಾದನೆಗಳು, ಅಥವಾ ಸಂಭವಿಸುವುದಕ್ಕೆ ಮುಂಚಿತವಾಗಿಯೆ ಬರೆಯಲ್ಪಟ್ಟ ಇತಿಹಾಸವು ಅಡಕವಾಗಿದೆ. ಯುದ್ಧಗಳ ಅಂತ್ಯಫಲ, ಲೋಕಶಕ್ತಿಗಳ ಏಳುಬೀಳುಗಳು, ಮತ್ತು ಮಿಲಿಟರಿ ಸೇನಾಧಿಪತಿಗಳ ಯುದ್ಧತಂತ್ರದ ನಿರ್ದಿಷ್ಟ ವಿಧಾನಗಳೆಲ್ಲವು ಬೈಬಲಿನಲ್ಲಿ​—ಕೆಲವೊಮ್ಮೆ ನೂರಾರು ವರ್ಷಗಳಿಗೆ ಮುಂಚಿತವಾಗಿಯೇ​—ಮುಂತಿಳಿಸಲ್ಪಟ್ಟಿದ್ದವು.​—ಯೆಶಾಯ 44:25–45:4; ದಾನಿಯೇಲ 8:2-8, 20-22.

21, 22. (ಎ) ಜೀವಿತದಲ್ಲಿ ನೀವು ಮಾಡಲಿರುವ ಎಲ್ಲಾ ಆಯ್ಕೆಗಳನ್ನು ಯೆಹೋವನು ಮುಂದಾಗಿಯೇ ನೋಡಿಯಾಗಿದೆಯೆಂದು ತೀರ್ಮಾನಿಸಲಿಕ್ಕೆ ಯಾವ ಆಧಾರವೂ ಇಲ್ಲವೇಕೆ? ದೃಷ್ಟಾಂತಿಸಿರಿ. (ಬಿ) ಯೆಹೋವನ ವಿವೇಕವು ಕಠೋರವೂ ಭಾವರಹಿತವೂ ಆಗಿಲ್ಲವೆಂದು ನಮಗೆ ತಿಳಿದಿರುವುದು ಹೇಗೆ?

21 ಹಾಗಾದರೆ ಜೀವಿತದಲ್ಲಿ ನೀವು ಮಾಡಲಿರುವ ಆಯ್ಕೆಗಳನ್ನು ದೇವರು ಈಗಾಗಲೇ ನೋಡಿಯಾಗಿದೆ ಎಂಬುದು ಇದರ ಅರ್ಥವೊ? ಪೂರ್ವಾದೃಷ್ಟ ನಿರ್ಣಯದ ಬೋಧನೆಯನ್ನು ನಂಬುವವರು ಹೌದೆಂದು ಆಗ್ರಹದಿಂದ ಉತ್ತರಿಸುತ್ತಾರೆ. ಆದರೆ ಈ ವಿಚಾರವು ಕಾರ್ಯತಃ ದೇವರ ವಿವೇಕವನ್ನು ಕುಗ್ಗಿಸುತ್ತದೆ, ಯಾಕಂದರೆ ಭವಿಷ್ಯತ್ತಿನೊಳಗೆ ಇಣಿಕಿ ನೋಡುವ ತನ್ನ ಶಕ್ತಿಯನ್ನು ಆತನು ನಿಯಂತ್ರಿಸಶಕ್ತನಲ್ಲವೆಂದು ಇದು ಸೂಚಿಸುತ್ತದೆ. ದೃಷ್ಟಾಂತಕ್ಕಾಗಿ: ಸುಶ್ರಾವ್ಯವಾಗಿ ಹಾಡುವ ಅಪ್ರತಿಮ ಕಂಠವು ನಿಮಗಿದ್ದುದಾದರೆ, ಬೇರೆ ಆಯ್ಕೆಯೇ ಇಲ್ಲವೋ ಎಂಬಂತೆ ಇಡೀ ಸಮಯ ನೀವು ಹಾಡುತ್ತಲೇ ಕೂತಿರುತ್ತೀರೋ? ಆ ವಿಚಾರವೇ ಹಾಸ್ಯಾಸ್ಪದ! ತದ್ರೀತಿಯಲ್ಲಿ, ಭವಿಷ್ಯತ್ತನ್ನು ಮುಂತಿಳಿಯುವ ಶಕ್ತಿಯು ಯೆಹೋವನಿಗಿದೆ, ಆದರೆ ಅದನ್ನು ಎಲ್ಲಾ ಸಮಯ ಆತನು ಉಪಯೋಗಿಸುತ್ತಾ ಕೂತಿರುವುದಿಲ್ಲ. ಹಾಗೆ ಮಾಡುವುದು ನಮ್ಮ ಸ್ವಂತ ಇಚ್ಛಾಸ್ವಾತಂತ್ರ್ಯವನ್ನು, ಆತನು ನಮಗಿತ್ತಿರುವ ಅಮೂಲ್ಯವಾದ ಆ ಕೊಡುಗೆಯನ್ನು ಅತಿಕ್ರಮಿಸಿದಂಥಾಗುವುದಲ್ಲವೇ? ಆತನೆಂದೂ ಅದನ್ನು ಅತಿಕ್ರಮಿಸದಿರುವನು.​—ಧರ್ಮೋಪದೇಶಕಾಂಡ 30:19, 20.

22 ಇದಕ್ಕಿಂತ ಕೆಟ್ಟದಾದ ಸಂಗತಿಯೇನೆಂದರೆ, ಪೂರ್ವಾದೃಷ್ಟ ನಿರ್ಣಯದ ಕಲ್ಪನೆಯು ತಾನೇ, ಯೆಹೋವನ ವಿವೇಕವು ಕಠೋರವೂ, ಪ್ರೀತಿರಹಿತವೂ, ಭಾವರಹಿತವೂ, ಕರುಣೆಯಿಲ್ಲದ್ದೂ ಆಗಿದೆಯೆಂದು ಸೂಚಿಸುತ್ತದೆ. ಆದರೆ ಇದು ಖಂಡಿತವಾಗಿಯೂ ಸತ್ಯವಲ್ಲ! ಯೆಹೋವನ “ಹೃದಯವು ವಿವೇಕವುಳ್ಳದ್ದು” ಎಂದು ಬೈಬಲು ಕಲಿಸುತ್ತದೆ. (ಓರೆ ಅಕ್ಷರಗಳು ನಮ್ಮವು.) (ಯೋಬ 9:4) ಆತನಿಗೊಂದು ಅಕ್ಷರಾರ್ಥ ಹೃದಯವಿದೆಯೆಂದಲ್ಲ, ಬದಲಿಗೆ ಪ್ರೀತಿಯೇ ಮುಂತಾದ ಹೃದಯದಾಳದ ಪ್ರೇರಣೆಗಳು ಮತ್ತು ಭಾವನೆಗಳು ಸೇರಿರುವ ಆಂತರ್ಯದ ಸಂಬಂಧದಲ್ಲಿ ಬೈಬಲು ಆ ಶಬ್ದವನ್ನು ಆಗಿಂದಾಗ್ಗೆ ಉಪಯೋಗಿಸುತ್ತದೆ. ಹೀಗೆ ಯೆಹೋವನ ವಿವೇಕವು, ಆತನ ಇತರ ಗುಣಗಳಂತೆಯೇ, ಪ್ರೀತಿಯಿಂದ ನಿಯಂತ್ರಿಸಲ್ಪಡುತ್ತದೆ.​—1 ಯೋಹಾನ 4:8.

23. ಯೆಹೋವನ ವಿವೇಕದ ಉತ್ಕೃಷ್ಟತೆಯು ನಾವು ಏನು ಮಾಡುವಂತೆ ನಮ್ಮನ್ನು ಪ್ರೇರಿಸಬೇಕು?

23 ಯೆಹೋವನ ವಿವೇಕವು ಸಹಜವಾಗಿಯೆ ಪರಿಪೂರ್ಣವಾಗಿ ಭರವಸಯೋಗ್ಯವು. ನಮ್ಮ ಸ್ವಂತ ವಿವೇಕಕ್ಕಿಂತ ಅದು ಎಷ್ಟೋ ಮಿಗಿಲಾಗಿರುವುದರಿಂದ ದೇವರ ವಾಕ್ಯವು ಪ್ರೀತಿಪೂರ್ವಕವಾಗಿ ನಮ್ಮನ್ನು ಪ್ರೋತ್ಸಾಹಿಸುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಹೀಗೆ ಸರ್ವವಿವೇಕಿಯಾಗಿರುವ ನಮ್ಮ ದೇವರಿಗೆ ನಾವು ಇನ್ನಷ್ಟು ಸಮೀಪ ಬರುವಂತೆ ನಾವೀಗ ಯೆಹೋವನ ವಿವೇಕವನ್ನು ಪರಿಶೋಧಿಸಿ ತಿಳಿಯೋಣ.