ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 18

“ದೇವರ ವಾಕ್ಯ”ದಲ್ಲಿರುವ ವಿವೇಕ

“ದೇವರ ವಾಕ್ಯ”ದಲ್ಲಿರುವ ವಿವೇಕ

1, 2. ಯೆಹೋವನು ನಮಗೆ ಯಾವ “ಪತ್ರ”ವನ್ನು ಬರೆದಿದ್ದಾನೆ, ಮತ್ತು ಏಕೆ?

ದೂರದಲ್ಲಿ ವಾಸಿಸುತ್ತಿರುವ ಪ್ರಿಯ ವ್ಯಕ್ತಿಯೊಬ್ಬನಿಂದ ಕೊನೆಯ ಬಾರಿ ನಿಮಗೆ ಯಾವಾಗ ಪತ್ರ ಬಂತೆಂಬುದು ನಿಮಗೆ ಜ್ಞಾಪಕವಿದೆಯೇ? ನಮ್ಮ ನೆಚ್ಚಿನ ವ್ಯಕ್ತಿಯಿಂದ ಬಂದ ಹೃತ್ಪೂರ್ವಕ ಪತ್ರವು ನಮಗೆ ತರುವಷ್ಟು ಸಂತೋಷವನ್ನು ಬೇರೆ ಕೆಲವೇ ವಿಷಯಗಳು ತಂದಾವು. ಅವನ ಸುಕ್ಷೇಮ, ಅವನ ಅನುಭವಗಳು, ಮತ್ತು ಯೋಜನೆಗಳ ಕುರಿತು ತಿಳಿಯಲು ನಾವು ಹರ್ಷಿಸುತ್ತೇವೆ. ಅಂಥ ಸಂವಾದವು ನಮ್ಮ ಪ್ರಿಯರನ್ನು ಅವರು ಶಾರೀರಿಕವಾಗಿ ದೂರವಿದ್ದರೂ ಇನ್ನೂ ಹತ್ತಿರಕ್ಕೆ ತರುತ್ತದೆ.

2 ಹೀಗಿರಲಾಗಿ, ನಾವು ಪ್ರೀತಿಸುವ ದೇವರಿಂದ ಒಂದು ಲಿಖಿತ ಸಂದೇಶವು ದೊರಕುವಾಗ ಅದು ನಮಗೆ ತರುವಷ್ಟು ಸಂತೋಷವನ್ನು ಬೇರೆ ಯಾವುದು ತಂದೀತು? ಯೆಹೋವನು ಒಂದು ಅರ್ಥದಲ್ಲಿ ನಮಗೆ ಒಂದು “ಪತ್ರ”ವನ್ನು​—ತನ್ನ ವಾಕ್ಯವಾದ ಬೈಬಲನ್ನು​—ಬರೆದಿದ್ದಾನೆ. ಅದರಲ್ಲಿ ಆತನು ಯಾರು, ಆತನು ಏನೆಲ್ಲ ಮಾಡಿರುತ್ತಾನೆ, ಏನೆಲ್ಲಾ ಮಾಡಲು ಉದ್ದೇಶಿಸಿರುತ್ತಾನೆ, ಮತ್ತು ಇನ್ನೂ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತಾನೆ. ಯೆಹೋವನು, ನಾವು ಆತನ ಸಮೀಪಕ್ಕೆ ಬರುವಂತೆ ಬಯಸುವುದರಿಂದಲೇ ತನ್ನ ವಾಕ್ಯವನ್ನು ನಮಗೆ ಕೊಟ್ಟಿರುತ್ತಾನೆ. ನಮ್ಮ ಸರ್ವವಿವೇಕಿ ದೇವರು ನಮ್ಮೊಂದಿಗೆ ಸಂವಾದಮಾಡಲು ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಮಾರ್ಗವನ್ನು ಆರಿಸಿಕೊಂಡನು. ಬೈಬಲು ಬರೆಯಲ್ಪಟ್ಟಿರುವ ರೀತಿಯಲ್ಲಿ ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳಲ್ಲಿ ಅತುಲ್ಯವಾದ ವಿವೇಕವು ಕಂಡುಬರುತ್ತದೆ.

ಒಂದು ಲಿಖಿತ ವಾಕ್ಯವೇಕೆ?

3. ಯಾವ ರೀತಿಯಲ್ಲಿ ಯೆಹೋವನು ಧರ್ಮಶಾಸ್ತ್ರವನ್ನು ಮೋಶೆಗೆ ರವಾನಿಸಿದನು?

3 ‘ಮಾನವರೊಡನೆ ಸಂವಾದಮಾಡಲು, ಪರಲೋಕದಿಂದ ಬಂದ ಒಂದು ವಾಣಿಯಂಥ ಯಾವುದೊ ಅಧಿಕ ಕೌತುಕಕಾರಿ ವಿಧಾನವನ್ನು ಯೆಹೋವನೇಕೆ ಉಪಯೋಗಿಸಲಿಲ್ಲ?’ ಎಂದು ಕೆಲವರು ಯೋಚಿಸಾರು. ವಾಸ್ತವದಲ್ಲಿ, ಕೆಲವೊಮ್ಮೆ ದೇವರು ತನ್ನ ದೇವದೂತ ಪ್ರತಿನಿಧಿಗಳ ಮೂಲಕ ಪರಲೋಕದಿಂದ ಮಾತಾಡಿದ್ದನು. ಉದಾಹರಣೆಗೆ, ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟಾಗ ಆತನು ಹಾಗೆ ಮಾಡಿದ್ದನು. (ಗಲಾತ್ಯ 3:19) ಪರಲೋಕದಿಂದ ಬಂದ ಆ ವಾಣಿಯು ಭಯಪ್ರೇರಕವಾಗಿತ್ತು​—ಎಷ್ಟರ ಮಟ್ಟಿಗೆಯೆಂದರೆ ಇಸ್ರಾಯೇಲ್ಯರು ಭಯದಿಂದ ತತ್ತರಿಸುತ್ತಾ, ಯೆಹೋವನು ತಮ್ಮೊಂದಿಗೆ ಈ ರೀತಿಯಲ್ಲಿ ಮಾತಾಡದೆ ಮೋಶೆಯ ಮೂಲಕವೇ ಮಾತಾಡಬೇಕೆಂದು ಬೇಡಿಕೊಂಡರು. (ವಿಮೋಚನಕಾಂಡ 20:18-20) ಹೀಗೆ ಸುಮಾರು 600 ನಿಯಮಗಳು ಕೂಡಿದ್ದ ಆ ಧರ್ಮಶಾಸ್ತ್ರವು ಪದಶಃ ಬಾಯಿಮಾತಿನ ಮೂಲಕ ಮೋಶೆಗೆ ರವಾನಿಸಲ್ಪಟ್ಟಿತ್ತು.

4. ದೇವರ ನಿಯಮಗಳನ್ನು ಬಾಯಿಮಾತಿನ ಮೂಲಕ ದಾಟಿಸುವುದು ಏಕೆ ಒಂದು ಭರವಸಯೋಗ್ಯ ವಿಧಾನವಾಗಿರುತ್ತಿರಲಿಲ್ಲವೆಂದು ವಿವರಿಸಿರಿ.

4 ಒಂದುವೇಳೆ ಧರ್ಮಶಾಸ್ತ್ರವು ಲಿಖಿತರೂಪದಲ್ಲಿ ನಮೂದಿಸಲ್ಪಡದೇ ಇದ್ದಲ್ಲಿ ಏನಾಗುತ್ತಿತ್ತು? ಮೋಶೆಯು ಆ ಸವಿಸ್ತಾರವಾದ ಸಂಹಿತೆಯ ನಿಖರವಾದ ಪದಗಳನ್ನು ನೆನಪಿನಲ್ಲಿಡಲು ಮತ್ತು ಅದನ್ನು ಆ ಜನಾಂಗದಲ್ಲಿ ಉಳಿದವರಿಗೆ ಚಾಚೂತಪ್ಪದೆ ತಿಳಿಸಶಕ್ತನಾಗುತ್ತಿದ್ದನೋ? ಮುಂದಿನ ತಲೆಮಾರುಗಳ ಕುರಿತಾಗಿಯೇನು? ಬಾಯಿಮಾತಿನಲ್ಲಿ ತಿಳಿಸಲ್ಪಟ್ಟವುಗಳ ಮೇಲೆ ಮಾತ್ರ ಅವರು ಹೊಂದಿಕೊಂಡಿರಬೇಕಿತ್ತೋ? ದೇವರ ನಿಯಮಗಳನ್ನು ಒಬ್ಬರಿಂದೊಬ್ಬರಿಗೆ ದಾಟಿಸಲಿಕ್ಕೆ ಇದು ಎಷ್ಟು ಮಾತ್ರಕ್ಕೂ ಭರವಸಯೋಗ್ಯ ವಿಧಾನವಾಗಿದ್ದಿರಲು ಸಾಧ್ಯವಿರಲಿಲ್ಲ. ಒಂದು ಉದ್ದವಾದ ಸಾಲಿನಲ್ಲಿರುವ ಅನೇಕ ವ್ಯಕ್ತಿಗಳಿಗೆ ಒಂದು ಕಥೆಯನ್ನು ನೀವು ದಾಟಿಸಬೇಕೆಂದು ನೆನಸಿರಿ. ನೀವದನ್ನು ಮೊದಲನೆಯ ವ್ಯಕ್ತಿಗೆ ತಿಳಿಸುತ್ತೀರಿ ಮತ್ತು ಅವನಿಂದ ಇನ್ನೊಬ್ಬನಿಗೆ ಆಮೇಲೆ ಮತ್ತೊಬ್ಬನಿಗೆ ಹೀಗೆ ಆ ಸಾಲಿನ ಉದ್ದಕ್ಕೂ ಅದನ್ನು ದಾಟಿಸುವಲ್ಲಿ ಏನು ಸಂಭವಿಸಬಹುದೆಂದು ಊಹಿಸಿರಿ. ಆ ಸಾಲಿನ ಕೊನೆಯ ವ್ಯಕ್ತಿಯು ಏನನ್ನು ಕೇಳಿಸಿಕೊಂಡನೋ ಅದು ಮೂಲ ಕಥೆಗಿಂತ ಬಹಳಷ್ಟು ಭಿನ್ನವಾಗಿರುವ ಸಂಭಾವ್ಯತೆ ಇದೆ. ಆದರೆ ದೇವರ ಧರ್ಮಶಾಸ್ತ್ರದ ಮಾತುಗಳಾದರೊ ಅಂಥ ಅಪಾಯಕ್ಕೆ ಒಳಗಾಗಲಿಲ್ಲ.

5, 6. ತನ್ನ ಮಾತುಗಳನ್ನು ಏನು ಮಾಡುವಂತೆ ಯೆಹೋವನು ಮೋಶೆಗೆ ಸೂಚನೆಯಿತ್ತನು, ಮತ್ತು ಯೆಹೋವನ ವಾಕ್ಯವು ಲಿಖಿತರೂಪದಲ್ಲಿರುವುದು ನಮಗೆ ಪ್ರಯೋಜನಕಾರಿ ಏಕೆ?

5 ಯೆಹೋವನು ವಿವೇಕಯುತವಾಗಿಯೇ ತನ್ನ ಮಾತುಗಳನ್ನು ಲಿಖಿತರೂಪದಲ್ಲಿ ಹಾಕಿಸಿದನು. ಆತನು ಮೋಶೆಗೆ ಆಜ್ಞಾಪಿಸಿದ್ದು: “ನೀನು ಈ ವಾಕ್ಯಗಳನ್ನು ಬರೆ. ಈ ವಾಕ್ಯಗಳ ಮೇರೆಗೆ ನಿನ್ನ ಸಂಗಡಲೂ ಇಸ್ರಾಯೇಲ್ಯರ ಸಂಗಡಲೂ ನಿಬಂಧನಮಾಡಿದ್ದೇನೆ.” (ವಿಮೋಚನಕಾಂಡ 34:27) ಹೀಗೆ ಸಾ.ಶ.ಪೂ. 1513ರಲ್ಲಿ ಬೈಬಲ್‌ ಬರವಣಿಗೆಯ ಯುಗವು ಪ್ರಾರಂಭಗೊಂಡಿತು. ಮುಂದಣ 1,610 ವರ್ಷಗಳಲ್ಲಿ ಯೆಹೋವನು ಸುಮಾರು 40 ಮಂದಿ ಮಾನವ ಲೇಖಕರೊಂದಿಗೆ “ಭಾಗಭಾಗವಾಗಿಯೂ ವಿಧವಿಧವಾಗಿಯೂ ಮಾತಾಡಿ”ದನು ಮತ್ತು ಅನಂತರ ಅವರು ಬೈಬಲನ್ನು ಬರೆದರು. (ಇಬ್ರಿಯ 1:1) ಈ ನಡುವೆ ಸಮರ್ಪಣಾಭಾವದ ನಕಲುಗಾರರು ಶಾಸ್ತ್ರಗ್ರಂಥಗಳನ್ನು ಕಾಪಾಡಲಿಕ್ಕೋಸ್ಕರ, ನಿಷ್ಕೃಷ್ಟವಾದ ನಕಲು ಪ್ರತಿಗಳನ್ನು ಉತ್ಪಾದಿಸಲಿಕ್ಕಾಗಿ ಅತಿಸೂಕ್ಷ್ಮವಾದ ರೀತಿಯಲ್ಲಿ ಜಾಗ್ರತೆವಹಿಸಿದರು.​—ಎಜ್ರ 7:6; ಕೀರ್ತನೆ 45:1.

6 ಲಿಖಿತರೂಪದಲ್ಲಿ ನಮ್ಮೊಂದಿಗೆ ಸಂವಾದಮಾಡುವ ಮೂಲಕ ಯೆಹೋವನು ನಮ್ಮನ್ನು ನಿಜವಾಗಿಯೂ ಆಶೀರ್ವದಿಸಿದ್ದಾನೆ. ನಿಮಗೆ ಅತಿ ಪ್ರಿಯವಾದ ಒಂದು ಪತ್ರವನ್ನು ನೀವೆಂದಾದರೂ ಪಡೆದದ್ದುಂಟೋ? ಅದು ನಿಮಗೆಷ್ಟು ಪ್ರಿಯವಾಗಿತ್ತೆಂದರೆ ನೀವದನ್ನು ಜೋಪಾನವಾಗಿ ಕಾಪಾಡಿಕೊಂಡು, ಪುನಃ ಪುನಃ ಓದಿದಿರಲ್ಲವೇ? ಪ್ರಾಯಶಃ ನಿಮಗದು ಬೇಕಾದ ಆದರಣೆಯನ್ನು ನೀಡಿದ ಕಾರಣದಿಂದಾಗಿ ಅದು ಅಷ್ಟು ಪ್ರಿಯವಾದದ್ದಾಗಿತ್ತು. ನಮಗೆ ಬರೆಯಲ್ಪಟ್ಟಿರುವ ಯೆಹೋವನ “ಪತ್ರ”ದ ವಿಷಯದಲ್ಲೂ ಇದು ಸತ್ಯ. ಯೆಹೋವನು ತನ್ನ ಮಾತುಗಳನ್ನು ಲಿಖಿತರೂಪದಲ್ಲಿ ಹಾಕಿರುವದರಿಂದ ನಾವದನ್ನು ಕ್ರಮವಾಗಿ ಓದಲು ಮತ್ತು ಅವು ತಿಳಿಸುವ ವಿಷಯಗಳ ಕುರಿತು ಮನನಮಾಡಲು ಶಕ್ತರಾಗಿದ್ದೇವೆ. (ಕೀರ್ತನೆ 1:2) ನಮಗೆ ಬೇಕಾದಾಗಲೆಲ್ಲಾ ನಾವು ಆ ಗ್ರಂಥಗಳಿಂದ ‘ಆದರಣೆಯನ್ನು’ ಹೊಂದಬಲ್ಲೆವು.​—ರೋಮಾಪುರ 15:4.

ಮಾನವ ಲೇಖಕರೇಕೆ?

7. ಮಾನವ ಲೇಖಕರನ್ನು ಯೆಹೋವನು ಉಪಯೋಗಿಸಿದ್ದರಲ್ಲಿ ಆತನ ವಿವೇಕವು ಹೇಗೆ ತೋರಿಬರುತ್ತದೆ?

7 ತನ್ನ ವಾಕ್ಯವನ್ನು ಲಿಖಿತರೂಪದಲ್ಲಿ ನಮೂದಿಸುವುದಕ್ಕಾಗಿ ಯೆಹೋವನು ಮನುಷ್ಯರನ್ನು ಉಪಯೋಗಿಸಿ ತನ್ನ ವಿವೇಕವನ್ನು ಪ್ರತಿಬಿಂಬಿಸಿದ್ದಾನೆ. ಇದನ್ನು ಪರಿಗಣಿಸಿರಿ: ಬೈಬಲನ್ನು ದಾಖಲಿಸಲಿಕ್ಕಾಗಿ ಯೆಹೋವನು ದೇವದೂತರನ್ನು ಉಪಯೋಗಿಸುತ್ತಿದ್ದರೆ, ಅದಕ್ಕೆ ಈಗ ಇರುವಂಥದ್ದೇ ರೀತಿಯ ಆಕರ್ಷಣೆ ಇರುತ್ತಿತ್ತೋ? ದೇವದೂತರು ಯೆಹೋವನನ್ನು ತಮ್ಮ ಉನ್ನತವಾದ ದೃಷ್ಟಿಕೋನದಿಂದ ಚಿತ್ರಿಸಸಾಧ್ಯವಿತ್ತು, ಆತನಿಗಾಗಿ ತಮಗಿರುವ ಭಕ್ತಿಯನ್ನು ವ್ಯಕ್ತಪಡಿಸಸಾಧ್ಯವಿತ್ತು, ಹಾಗೂ ದೇವರ ನಂಬಿಗಸ್ತ ಮಾನವ ಸೇವಕರ ವೃತ್ತಾಂತವನ್ನು ಕೊಡಸಾಧ್ಯವಿತ್ತು, ನಿಜ. ಆದರೆ ಯಾರ ಜ್ಞಾನ, ಅನುಭವ, ಮತ್ತು ಬಲವು ನಮ್ಮ ಸ್ವಂತದ್ದಕ್ಕಿಂತ ಹೆಚ್ಚು ಶ್ರೇಷ್ಠವಾಗಿದೆಯೋ ಆ ಪರಿಪೂರ್ಣ ಆತ್ಮಜೀವಿಗಳ ದೃಷ್ಟಿಕೋನವನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತೋ?​—ಇಬ್ರಿಯ 2:6, 7.

‘ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ’

8. ಬೈಬಲ್‌ ಲೇಖಕರು ಯಾವ ರೀತಿಯಲ್ಲಿ ತಮ್ಮ ಸ್ವಂತ ಮಾನಸಿಕ ಸಾಮರ್ಥ್ಯಗಳನ್ನು ಉಪಯೋಗಿಸಲು ಅನುಮತಿಸಲ್ಪಟ್ಟರು? (ಪಾದಟಿಪ್ಪಣಿಯನ್ನೂ ನೋಡಿ.)

8 ಮಾನವ ಲೇಖಕರನ್ನು ಉಪಯೋಗಿಸುವ ಮೂಲಕ ಯೆಹೋವನು ನಮಗೆ ಏನು ಬೇಕಾಗಿದೆಯೋ ಸರಿಯಾಗಿ ಅದನ್ನೇ, ಅಂದರೆ “ದೈವಪ್ರೇರಿತವಾದ” ಆದರೂ ಮಾನವ ಘಟಕಾಂಶವನ್ನು ಉಳಿಸಿಕೊಂಡಿರುವ ಒಂದು ದಾಖಲೆಯನ್ನು ಕೊಟ್ಟಿರುತ್ತಾನೆ. (2 ತಿಮೊಥೆಯ 3:16) ಆತನು ಇದನ್ನು ಸಾಧಿಸಿದ್ದು ಹೇಗೆ? ಅನೇಕ ಸಂದರ್ಭಗಳಲ್ಲಿ ಲೇಖಕರು “ಯಥಾರ್ಥಭಾವದಿಂದ ರಚಿಸಿದ ಒಪ್ಪಿಗೆಯ ಸತ್ಯದ ಮಾತುಗಳನ್ನು” ಹುಡುಕಿ ಆರಿಸಿಕೊಳ್ಳಲು ತಮ್ಮ ಸ್ವಂತ ಮಾನಸಿಕ ಸಾಮರ್ಥ್ಯಗಳನ್ನು ಉಪಯೋಗಿಸಿಕೊಳ್ಳುವಂತೆ ಆತನು ಅನುಮತಿಸಿದ್ದಿರಬಹುದು. (ಪ್ರಸಂಗಿ 12:10, 11) ಬೈಬಲಿನ ಭಾಷಾಶೈಲಿಯಲ್ಲಿರುವ ವೈವಿಧ್ಯಕ್ಕೆ ಇದೇ ಕಾರಣ; ಈ ಬರಹಗಳು, ಲೇಖಕರಲ್ಲಿ ಒಬ್ಬೊಬ್ಬನ ಹಿನ್ನೆಲೆ ಮತ್ತು ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ. * ಆದರೂ ಈ ಮನುಷ್ಯರು “ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:21) ಹೀಗೆ ಅಂತಿಮ ಉತ್ಪನ್ನವು, ನಿಜವಾಗಿಯೂ “ದೇವರ ವಾಕ್ಯ”ವಾಗಿರುತ್ತದೆ.​—1 ಥೆಸಲೊನೀಕ 2:13.

9, 10. ಮಾನವ ಲೇಖಕರ ಬಳಕೆಯು ಬೈಬಲಿನ ಹಾರ್ದಿಕತೆ ಮತ್ತು ಆಕರ್ಷಣೆಗೆ ಹೆಚ್ಚನ್ನು ಕೂಡಿಸುತ್ತದೇಕೆ?

9 ಮಾನವ ಲೇಖಕರ ಬಳಕೆಯು, ಬೈಬಲಿಗೆ ಪ್ರಚಂಡವಾದ ಹಾರ್ದಿಕತೆ ಮತ್ತು ಆಕರ್ಷಣೆಯನ್ನು ಕೊಡುತ್ತದೆ. ಅದರ ಲೇಖಕರು ನಮ್ಮಂಥದ್ದೇ ಭಾವನೆಗಳುಳ್ಳ ಮನುಷ್ಯರಾಗಿದ್ದರು. ಅವರೂ ಅಪರಿಪೂರ್ಣ ಮನುಷ್ಯರಾಗಿದ್ದುದರಿಂದ ನಮ್ಮಂಥದ್ದೇ ಸಂಕಷ್ಟಗಳನ್ನು ಮತ್ತು ಒತ್ತಡಗಳನ್ನು ಅನುಭವಿಸಿದ್ದರು. ಕೆಲವು ಸಂದರ್ಭಗಳಲ್ಲಿ ಅವರು ತಮ್ಮ ಅನಿಸಿಕೆಗಳು ಮತ್ತು ತಮ್ಮೊಳಗೆ ನಡೆಯುತ್ತಿದ್ದ ಹೋರಾಟಗಳ ಕುರಿತು ಬರೆಯುವಂತೆ ಯೆಹೋವನಾತ್ಮವು ಅವರನ್ನು ಪ್ರೇರಿಸಿತ್ತು. (2 ಕೊರಿಂಥ 12:7-10) ಆದುದರಿಂದ, ಅವರು ಉತ್ತಮ ಪುರುಷ ರೂಪವನ್ನು ಬಳಸಿ ಬರೆದರು, ಮತ್ತು ಇಂಥ ಮಾತುಗಳನ್ನು ಯಾವ ದೇವದೂತನೂ ಎಂದಿಗೂ ವ್ಯಕ್ತಪಡಿಸಲು ಸಾಧ್ಯವೇ ಇರಲಿಲ್ಲ.

10 ದೃಷ್ಟಾಂತಕ್ಕಾಗಿ, ಇಸ್ರಾಯೇಲಿನ ರಾಜನಾಗಿದ್ದ ದಾವೀದನನ್ನು ತೆಗೆದುಕೊಳ್ಳಿರಿ. ಅವನು ಕೆಲವೊಂದು ಗಂಭೀರವಾದ ಪಾಪಗಳನ್ನು ಮಾಡಿದ ನಂತರ, ದೇವರ ಕ್ಷಮಾಪಣೆಗಾಗಿ ಯಾಚಿಸುತ್ತಾ ತನ್ನ ಹೃದಯವನ್ನು ತೋಡಿಕೊಂಡು ಒಂದು ಕೀರ್ತನೆಯನ್ನು ರಚಿಸಿದನು. ಅವನು ಬರೆದದ್ದು: “ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ಹುಟ್ಟಿದಂದಿನಿಂದ ನಾನು ಪಾಪಿಯೇ; ಮಾತೃಗರ್ಭವನ್ನು ಹೊಂದಿದ ದಿನದಿಂದ ದ್ರೋಹಿಯೇ. ನಿನ್ನ ಸನ್ನಿಧಿಯಿಂದ ನನ್ನನ್ನು ತಳ್ಳಬೇಡ; ನಿನ್ನ ಪರಿಶುದ್ಧಾತ್ಮವನ್ನು ನನ್ನಿಂದ ತೆಗೆಯಬೇಡ. ಕುಗ್ಗಿದ ಮನಸ್ಸೇ ದೇವರಿಗೆ ಇಷ್ಟಯಜ್ಞ; ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” (ಕೀರ್ತನೆ 51:2, 3, 5, 11, 17) ಆ ಲೇಖಕನ ಮನಸ್ಸಿನ ಬೇಗುದಿಯು ನಿಮಗೆ ತಟ್ಟುವುದಿಲ್ಲವೇ? ಇಂಥ ಮನದಾಳದ ಭಾವನೆಗಳನ್ನು ಒಬ್ಬ ಅಪರಿಪೂರ್ಣ ಮಾನವನಲ್ಲದೆ ಇನ್ನಾವನು ವ್ಯಕ್ತಪಡಿಸಶಕ್ತನು?

ಜನರ ಕುರಿತಾದ ಗ್ರಂಥವೇಕೆ?

11. ಬೈಬಲಿನಲ್ಲಿ “ನಮ್ಮನ್ನು ಉಪದೇಶಿಸುವುದಕ್ಕಾಗಿ” ಯಾವ ರೀತಿಯ ನಿಜ ಜೀವನದ ದೃಷ್ಟಾಂತಗಳು ಸೇರಿಸಲ್ಪಟ್ಟಿವೆ?

11 ಬೈಬಲಿನ ಆಕರ್ಷಣೆಗೆ ನೆರವಾಗುವ ಬೇರೊಂದು ಸಂಗತಿಯೂ ಇದೆ. ಬಹಳಷ್ಟು ಮಟ್ಟಿಗೆ ಅದು ದೇವರನ್ನು ಸೇವಿಸುತ್ತಿರುವ ಮತ್ತು ಆತನನ್ನು ಸೇವಿಸದೆ ಇರುವ ಜನರ, ಹೌದು ನೈಜ ಜನರ ಕುರಿತಾದ ಒಂದು ಗ್ರಂಥವಾಗಿದೆ. ನಾವು ಅದರಲ್ಲಿ ಅವರ ಅನುಭವಗಳ, ಕಷ್ಟತಾಪತ್ರಯಗಳ, ಮತ್ತು ಸಂತೋಷಗಳ ಕುರಿತು ಓದುತ್ತೇವೆ. ಜೀವನದಲ್ಲಿ ಅವರು ಮಾಡಿದಂಥ ಆಯ್ಕೆಗಳ ಫಲಿತಾಂಶವನ್ನು ನಾವದರಲ್ಲಿ ಕಾಣುತ್ತೇವೆ. ಅಂಥ ವೃತ್ತಾಂತಗಳನ್ನು “ನಮ್ಮನ್ನು ಉಪದೇಶಿಸುವದಕ್ಕಾಗಿ” ಸೇರಿಸಲಾಯಿತು. (ರೋಮಾಪುರ 15:4) ಈ ನಿಜ ಜೀವನ ದೃಷ್ಟಾಂತಗಳ ಮೂಲಕ ಯೆಹೋವನು ನಮ್ಮ ಹೃದಯವನ್ನು ಸ್ಪರ್ಶಿಸುವ ರೀತಿಯಲ್ಲಿ ಕಲಿಸುತ್ತಾನೆ. ಅಂಥ ಕೆಲವು ದೃಷ್ಟಾಂತಗಳನ್ನು ಪರಿಗಣಿಸಿರಿ.

12. ಅಪನಂಬಿಗಸ್ತ ಮನುಷ್ಯರ ಕುರಿತ ಬೈಬಲ್‌ ವೃತ್ತಾಂತಗಳು ಯಾವ ರೀತಿಯಲ್ಲಿ ನಮಗೆ ಸಹಾಯಮಾಡುತ್ತವೆ?

12 ಬೈಬಲು ನಮಗೆ ಅಪನಂಬಿಗಸ್ತರ, ದುಷ್ಟರೂ ಆದ ಮಾನವರ ಬಗ್ಗೆ ಮತ್ತು ಅವರಿಗೆ ಸಂಭವಿಸಿದ ಕೇಡಿನ ಕುರಿತೂ ತಿಳಿಸುತ್ತದೆ. ಈ ವೃತ್ತಾಂತಗಳಲ್ಲಿ ಅನಪೇಕ್ಷಣೀಯ ಗುಣಗಳು ಕ್ರಿಯೆಯಲ್ಲಿ ತೋರಿಬರುವುದರಿಂದ, ನಾವು ಸುಲಭವಾಗಿಯೇ ಅವನ್ನು ಗ್ರಹಿಸಿಕೊಳ್ಳಶಕ್ತರು. ಉದಾಹರಣೆಗಾಗಿ, ಯೇಸುವಿನ ವಿರುದ್ಧವಾಗಿ ವಿಶ್ವಾಸಘಾತಕ ಒಳಸಂಚನ್ನು ನಿರ್ವಹಿಸಿದಾಗ ಯೂದನು ನಂಬಿಕೆದ್ರೋಹ ಮಾಡಿದನು. ಈ ಗುಣದ ವಿರುದ್ಧ ಎಚ್ಚರಿಕೆಯಾಗಿ ಯೂದನ ಸಜೀವ ಮಾದರಿಗಿಂತ ಇನ್ನಾವುದು ಹೆಚ್ಚು ಪ್ರಬಲವಾದ ಆಜ್ಞೆಯಾಗಿರಬಲ್ಲದು? (ಮತ್ತಾಯ 26:14-16, 46-50; 27:3-10) ಇವುಗಳಂಥ ವೃತ್ತಾಂತಗಳು ನಮ್ಮ ಹೃದಯಕ್ಕೆ ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ನಾಟಿ, ಅಸಹ್ಯವಾದ ಪ್ರವೃತ್ತಿಗಳನ್ನು ಗುರುತಿಸಿ ಅವುಗಳನ್ನು ತಿರಸ್ಕರಿಸುವಂತೆ ಸಹಾಯಮಾಡುತ್ತವೆ.

13. ಅಪೇಕ್ಷಣೀಯ ಗುಣಗಳನ್ನು ಗ್ರಹಿಸಿಕೊಳ್ಳಲು ಬೈಬಲು ನಮಗೆ ಯಾವ ರೀತಿಯಲ್ಲಿ ಸಹಾಯಮಾಡುತ್ತದೆ?

13 ದೇವರ ಅನೇಕ ನಂಬಿಗಸ್ತ ಸೇವಕರ ಕುರಿತೂ ಬೈಬಲು ವರ್ಣಿಸುತ್ತದೆ. ಅವರ ದೈವಭಕ್ತಿ ಮತ್ತು ನಿಷ್ಠೆಯ ಕುರಿತು ನಾವು ಓದುತ್ತೇವೆ. ದೇವರ ಸಮೀಪಕ್ಕೆ ಬರುವುದಕ್ಕಾಗಿ ನಾವು ಬೆಳೆಸಿಕೊಳ್ಳತಕ್ಕ ಗುಣಗಳ ಸಜೀವ ಮಾದರಿಗಳನ್ನು ನಾವು ಅವರಲ್ಲಿ ಕಾಣುತ್ತೇವೆ. ದೃಷ್ಟಾಂತಕ್ಕಾಗಿ, ನಂಬಿಕೆಯನ್ನು ತೆಗೆದುಕೊಳ್ಳಿರಿ. ನಂಬಿಕೆಯ ಅರ್ಥವೇನೆಂದು ಬೈಬಲು ತಿಳಿಸುತ್ತದೆ ಮತ್ತು ದೇವರನ್ನು ಮೆಚ್ಚಿಸಬೇಕಾದರೆ ಅದೆಷ್ಟು ಆವಶ್ಯಕವೆಂದು ತೋರಿಸುತ್ತದೆ. (ಇಬ್ರಿಯ 11:1, 6) ಆದರೆ ನಂಬಿಕೆಯನ್ನು ಕ್ರಿಯೆಯಲ್ಲಿ ತೋರಿಸಿದ ವಿವಿಧ ಮಾದರಿಗಳೂ ಬೈಬಲಿನಲ್ಲಿ ಅಡಕವಾಗಿವೆ. ಇಸಾಕನನ್ನು ಬಲಿಯರ್ಪಿಸಲು ಪ್ರಯತ್ನಿಸಿದಾಗ ಅಬ್ರಹಾಮನಿಂದ ತೋರಿಸಲ್ಪಟ್ಟ ನಂಬಿಕೆಯ ಕುರಿತು ಯೋಚಿಸಿರಿ. (ಆದಿಕಾಂಡ, ಅಧ್ಯಾಯ 22; ಇಬ್ರಿಯ 11:17-19) ಇಂಥ ವೃತ್ತಾಂತಗಳ ಮೂಲಕವಾಗಿ “ನಂಬಿಕೆ” ಎಂಬ ಪದವು ನಮಗೆ ಹೆಚ್ಚು ಅರ್ಥವತ್ತಾಗುತ್ತದೆ ಮತ್ತು ಗ್ರಹಿಸಿಕೊಳ್ಳಲು ಹೆಚ್ಚು ಸುಲಭವಾಗುತ್ತದೆ. ಅಪೇಕ್ಷಣೀಯ ಗುಣಗಳನ್ನು ಬೆಳೆಸಿಕೊಳ್ಳುವಂತೆ ಯೆಹೋವನು ನಮಗೆ ಬೋಧಿಸುವುದು ಮಾತ್ರವಲ್ಲ ನಿಜ ಜೀವನದ ಮಾದರಿಗಳನ್ನೂ ಕೊಟ್ಟಿರುವುದು ಅದೆಷ್ಟು ವಿವೇಕಯುತವು!

14, 15. ಆಲಯಕ್ಕೆ ಬಂದ ಒಬ್ಬಾಕೆ ಸ್ತ್ರೀಯ ಕುರಿತು ಬೈಬಲು ನಮಗೆ ಏನನ್ನು ತಿಳಿಸುತ್ತದೆ, ಮತ್ತು ಈ ವೃತ್ತಾಂತದಿಂದ ನಾವು ಯೆಹೋವನ ಕುರಿತು ಏನನ್ನು ಕಲಿಯುತ್ತೇವೆ?

14 ಯೆಹೋವನು ಯಾವ ರೀತಿಯ ವ್ಯಕ್ತಿಯೆಂಬುದರ ಕುರಿತೂ ಬೈಬಲಿನಲ್ಲಿ ಕಂಡುಬರುವ ನಿಜ ಜೀವನದ ವೃತ್ತಾಂತಗಳು ನಮಗೆ ಹೆಚ್ಚಾಗಿ ಕಲಿಸುತ್ತವೆ. ಆಲಯದಲ್ಲಿ ಯೇಸು ಅವಲೋಕಿಸಿದ್ದ ಒಬ್ಬಾಕೆ ಸ್ತ್ರೀಯ ಕುರಿತು ನಾವೇನನ್ನು ಓದುತ್ತೇವೊ ಅದನ್ನು ತುಸು ಪರಿಗಣಿಸಿರಿ. ಯೇಸು ಬೊಕ್ಕಸದ ಪೆಟ್ಟಿಗೆಗಳ ಸಮೀಪ ಕೂತಿರಲಾಗಿ, ಜನರು ತಮ್ಮ ಕಾಣಿಕೆಗಳನ್ನು ಬೊಕ್ಕಸದೊಳಗೆ ಹಾಕುವುದನ್ನು ನೋಡುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರೂ ಬಂದು, ತಮಗೆ “ಸಾಕಾಗಿ ಮಿಕ್ಕದ್ದರಲ್ಲಿ” ಹಾಕುತ್ತಿದ್ದರು. ಆದರೆ ಯೇಸುವಿನ ದೃಷ್ಟಿಯು ಒಬ್ಬಾಕೆ ಬಡ ವಿಧವೆಯ ಮೇಲೆ ಬಿತ್ತು. ಆಕೆ “ಎರಡು ತಾಮ್ರದ ನಾಣ್ಯಗಳನ್ನು, ಅಂದರೆ ಒಂದು ಪೈಸೆ”ಯನ್ನು ಕಾಣಿಕೆಯಾಗಿ ಕೊಟ್ಟಳು. * (ಪರಿಶುದ್ಧ ಬೈಬಲ್‌) ಅದು ಅವಳ ಬಳಿ ಉಳಿದಿದ್ದ ಕೊನೆಯ ಹಣವಾಗಿತ್ತು. ಎಲ್ಲಾ ವಿಷಯಗಳಲ್ಲೂ ಪರಿಪೂರ್ಣ ರೀತಿಯಲ್ಲಿ ಯೆಹೋವನ ದೃಷ್ಟಿಕೋನವನ್ನು ಪ್ರತಿಬಿಂಬಿಸಿದ ಯೇಸು ಹೇಳಿದ್ದು: “ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಹೆಚ್ಚು ಹಾಕಿದ್ದಾಳೆ.” ಈ ಮಾತುಗಳಿಗನುಸಾರ, ಇತರರು ಒಟ್ಟುಗೂಡಿ ಹಾಕಿದ ಎಲ್ಲಾ ಹಣಕ್ಕಿಂತ ಈಕೆ ಹಾಕಿದ್ದೇ ಹೆಚ್ಚು ಆಗಿತ್ತು.​—ಮಾರ್ಕ 12:41-44; ಲೂಕ 21:1-4; ಯೋಹಾನ 8:28.

15 ಆ ದಿನ ದೇವಾಲಯಕ್ಕೆ ಬಂದಿದ್ದ ಜನರೆಲ್ಲರಲ್ಲಿ, ಈ ವಿಧವೆಯನ್ನು ಪ್ರತ್ಯೇಕಿಸಿ, ಬೈಬಲಿನಲ್ಲಿ ಅವಳು ಉಲ್ಲೇಖಿಸಲ್ಪಟ್ಟಿರುವುದು ಗಮನಾರ್ಹವಾಗಿದೆಯಲ್ಲವೇ? ಈ ಉದಾಹರಣೆಯ ಮೂಲಕ ಯೆಹೋವನು ತಾನೊಬ್ಬ ಕೃತಜ್ಞತೆ ತೋರಿಸುವ ದೇವರೆಂಬುದನ್ನು ನಮಗೆ ಕಲಿಸುತ್ತಾನೆ. ನಾವು ಪೂರ್ಣಪ್ರಾಣದಿಂದ ನೀಡುವ ಕೊಡುಗೆಗಳು, ಬೇರೆಯವರು ಕೊಡಶಕ್ತರಾದ ಕಾಣಿಕೆಯೊಂದಿಗೆ ತುಲನೆಯಲ್ಲಿ ಎಷ್ಟೇ ಇರಲಿ, ಅವುಗಳನ್ನು ಸ್ವೀಕರಿಸಲು ಆತನು ಸಂತೋಷಿಸುತ್ತಾನೆ. ಈ ಹೃದಯಸ್ಪರ್ಶಿ ಸತ್ಯವನ್ನು ನಮಗೆ ಕಲಿಸಲಿಕ್ಕಾಗಿ ಯೆಹೋವನು ಖಂಡಿತವಾಗಿಯೂ ಅತ್ಯುತ್ತಮವಾದ ವಿಧಾನವನ್ನು ಉಪಯೋಗಿಸಿದನು.

ಬೈಬಲಿನಲ್ಲಿ ಅಡಕವಾಗಿರದ ವಿಷಯಗಳು

16, 17. ಯೆಹೋವನು ಬೈಬಲಿನಲ್ಲಿ ಒಳಗೂಡಿಸದಿರಲು ಆರಿಸಿಕೊಂಡ ವಿಷಯಗಳಲ್ಲೂ ಆತನ ವಿವೇಕವು ಹೇಗೆ ತೋರಿಬರುತ್ತದೆ?

16 ಒಬ್ಬ ಪ್ರಿಯ ವ್ಯಕ್ತಿಗೆ ನೀವು ಪತ್ರ ಬರೆಯುವಾಗ, ಇಂತಿಷ್ಟೇ ವಿಷಯಗಳನ್ನು ಸೇರಿಸಬಲ್ಲಿರಿ ಎಂಬ ಮಿತಿಯಿದೆ. ಆದುದರಿಂದ ಏನೆಲ್ಲಾ ಬರೆಯಬೇಕೆಂಬ ಆಯ್ಕೆಯಲ್ಲಿ ನೀವು ವಿವೇಚನೆಯನ್ನು ಬಳಸುತ್ತೀರಿ. ತದ್ರೀತಿಯಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನೂ ನಿರ್ದಿಷ್ಟ ಘಟನೆಗಳನ್ನೂ ತನ್ನ ವಾಕ್ಯದಲ್ಲಿ ಒಳಗೂಡಿಸಲು ಯೆಹೋವನು ಆರಿಸಿಕೊಂಡನು. ಆದರೆ ಈ ವರ್ಣನಾತ್ಮಕ ವೃತ್ತಾಂತಗಳಲ್ಲಿ ಬೈಬಲು ಯಾವಾಗಲೂ ಎಲ್ಲಾ ವಿವರಗಳನ್ನು ಕೊಡುವುದಿಲ್ಲ. (ಯೋಹಾನ 21:25) ದೃಷ್ಟಾಂತಕ್ಕಾಗಿ, ದೇವರ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಯ ಕುರಿತು ಬೈಬಲು ತಿಳಿಸುವಾಗ, ಕೊಡಲ್ಪಟ್ಟ ಮಾಹಿತಿಯು ನಮಗಿರುವ ಪ್ರತಿಯೊಂದೂ ಪ್ರಶ್ನೆಯನ್ನು ಉತ್ತರಿಸದಿರಬಹುದು. ತನ್ನ ವಾಕ್ಯದಲ್ಲಿ ಏನನ್ನು ಒಳಗೂಡಿಸದಿರಲು ಯೆಹೋವನು ಆರಿಸಿಕೊಂಡನೋ ಅದರಲ್ಲಿಯೂ ಯೆಹೋವನ ವಿವೇಕವು ತೋರಿಬರುತ್ತದೆ. ಅದು ಹೇಗೆ?

17 ಬೈಬಲು ಬರೆಯಲ್ಪಟ್ಟಿರುವಂಥ ರೀತಿಯು ನಮ್ಮ ಹೃದಯದಲ್ಲೇನಿದೆ ಎಂಬುದನ್ನು ಪರೀಕ್ಷಿಸಲು ಸಾಧನವಾಗಿರುತ್ತದೆ. ಇಬ್ರಿಯ 4:12 ಹೇಳುವುದು: “ದೇವರ ವಾಕ್ಯವು [ಇಲ್ಲವೆ, ಸಂದೇಶವು] ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ . . . ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು.” ಬೈಬಲಿನ ಸಂದೇಶವು ಆಳವಾಗಿ ತೂರಿಕೊಂಡುಹೋಗಿ, ನಮ್ಮ ನಿಜ ಆಲೋಚನೆಗಳನ್ನು ಮತ್ತು ಹೇತುಗಳನ್ನು ಬಯಲಿಗೆಳೆಯುತ್ತದೆ. ಯಾರು ಅದನ್ನು ಟೀಕಾತ್ಮಕ ಹೃದಯದಿಂದ ಓದುತ್ತಾರೋ ಅವರು ಅನೇಕವೇಳೆ ತಮ್ಮನ್ನು ತೃಪ್ತಿಪಡಿಸಲು ಬೇಕಾಗುವಷ್ಟು ಮಾಹಿತಿಯು ಅಡಕವಾಗಿರದ ವೃತ್ತಾಂತಗಳಿಂದಾಗಿ ಎಡವಿಬೀಳುತ್ತಾರೆ. ಅಂಥ ವ್ಯಕ್ತಿಗಳು ಯೆಹೋವನು ನಿಜವಾಗಿ ಪ್ರೀತಿಪರನೂ ವಿವೇಕಿಯೂ ಹಾಗೂ ನ್ಯಾಯವಂತನೂ ಆಗಿದ್ದಾನೋ ಎಂಬ ವಿಷಯದಲ್ಲಿ ಸಂದೇಹಪಡಲೂ ಬಹುದು.

18, 19. (ಎ) ಒಂದು ನಿರ್ದಿಷ್ಟ ಬೈಬಲ್‌ ವೃತ್ತಾಂತವು ನಮಗೆ ಆ ಕೂಡಲೆ ಉತ್ತರ ಸಿಗಲಾರದ ಪ್ರಶ್ನೆಗಳನ್ನು ಎಬ್ಬಿಸುವಲ್ಲಿ ನಾವೇಕೆ ವಿಚಲಿತರಾಗಬಾರದು? (ಬಿ) ದೇವರ ವಾಕ್ಯವನ್ನು ಗ್ರಹಿಸಿಕೊಳ್ಳಲಿಕ್ಕಾಗಿ ಏನು ಅಗತ್ಯ, ಮತ್ತು ಇದು ಯೆಹೋವನ ಮಹಾ ವಿವೇಕದ ಪುರಾವೆಯಾಗಿದೆ ಹೇಗೆ?

18 ಇದಕ್ಕೆ ವೈದೃಶ್ಯದಲ್ಲಿ, ಒಂದು ಪ್ರಾಮಾಣಿಕ ಹೃದಯದಿಂದ ನಾವು ಬೈಬಲನ್ನು ಜಾಗರೂಕತೆಯಿಂದ ಅಧ್ಯಯನಿಸುವಾಗ, ಇಡೀ ಬೈಬಲು ಯೆಹೋವನನ್ನು ಪರಿಚಯಪಡಿಸುವಂಥ ಸನ್ನಿವೇಶಕ್ಕನುಸಾರ ನಾವಾತನ ಕುರಿತು ಕಲಿಯುತ್ತೇವೆ. ಆದಕಾರಣ ಒಂದು ನಿರ್ದಿಷ್ಟ ವೃತ್ತಾಂತವು, ನಾವು ಆ ಕೂಡಲೆ ಉತ್ತರವನ್ನು ಪಡೆದುಕೊಳ್ಳಲಾರದ ಕೆಲವು ಪ್ರಶ್ನೆಗಳನ್ನು ಎಬ್ಬಿಸುವುದಾದರೆ ನಾವು ವಿಚಲಿತರಾಗುವುದಿಲ್ಲ. ಬೈಬಲನ್ನು ನಾವು ಅಧ್ಯಯನಮಾಡುವಾಗ, ಯೆಹೋವನು ಯಾವ ರೀತಿಯ ದೇವರೆಂದು ನಾವು ಸ್ವಲ್ಪ ಸ್ವಲ್ಪವಾಗಿ ಕಲಿಯುತ್ತೇವೆಂಬುದನ್ನು ನಾವು ಗ್ರಹಿಸುತ್ತೇವೆ. ಒಂದು ನಿರ್ದಿಷ್ಟ ವೃತ್ತಾಂತವು ಮೊದಮೊದಲು ನಮಗೆ ಅರ್ಥವಾಗದಿದ್ದರೂ ಮತ್ತು ದೇವರ ವ್ಯಕ್ತಿತ್ವಕ್ಕೆ ಅದು ಹೇಗೆ ಸರಿಯಾಗಿ ಹೊಂದಿಕೆಯಾಗುತ್ತದೆಂದು ತಿಳಿಯದಿದ್ದರೂ, ಬೈಬಲಿನ ನಮ್ಮ ಅಧ್ಯಯನವು ನಮಗೆ ಯೆಹೋವನ ಕುರಿತು ಈಗಾಗಲೇ ಬೇಕಾದುದಕ್ಕಿಂತ ಹೆಚ್ಚನ್ನು ಕಲಿಸಿ ಆತನು ನಿತ್ಯವೂ ಒಬ್ಬ ಪ್ರೀತಿಪರ, ನಿಷ್ಪಕ್ಷಪಾತದ, ಹಾಗೂ ನ್ಯಾಯಪರನಾದ ದೇವರೆಂಬುದನ್ನು ತಿಳಿಯಲು ಸಾಧ್ಯಗೊಳಿಸಿರುವುದು.

19 ಹಾಗಾದರೆ ದೇವರ ವಾಕ್ಯವನ್ನು ನಾವು ಗ್ರಹಿಸಬೇಕಾದರೆ ನಾವದನ್ನು ಪ್ರಾಮಾಣಿಕ ಹೃದಯದಿಂದಲೂ ಮುಕ್ತ ಮನಸ್ಸಿನಿಂದಲೂ ಓದಿ ಅಧ್ಯಯನ ಮಾಡಬೇಕು. ಇದು ಯೆಹೋವನ ಮಹಾ ವಿವೇಕದ ರುಜುವಾತಲ್ಲವೇ? ಜಾಣರಾದ ಮಾನವರು ಬರೆಯಬಲ್ಲ ಪುಸ್ತಕಗಳನ್ನು ಕೇವಲ ‘ಜ್ಞಾನಿಗಳು ಮತ್ತು ಬುದ್ಧಿವಂತರು’ ಮಾತ್ರವೇ ಗ್ರಹಿಸಬಲ್ಲರು. ಆದರೆ ಯೋಗ್ಯ ಹೃದಯ ಪ್ರೇರಣೆಯುಳ್ಳವರು ಮಾತ್ರವೇ ಗ್ರಹಿಸಬಲ್ಲ ಒಂದು ಗ್ರಂಥವನ್ನು ಬರೆಯಲಿಕ್ಕೆ​—ದೇವರ ವಿವೇಕವೇ ಬೇಕು!​—ಮತ್ತಾಯ 11:25.

‘ಪ್ರಾಯೋಗಿಕ ವಿವೇಕದ’ ಗ್ರಂಥ

20. ಜೀವಿಸುವ ಅತ್ಯುತ್ತಮ ವಿಧಾನವನ್ನು ಯೆಹೋವನೊಬ್ಬನೇ ತಿಳಿಸಬಲ್ಲನೇಕೆ, ಮತ್ತು ನಮಗೆ ಸಹಾಯವಾಗಬಲ್ಲ ಯಾವ ವಿಷಯವು ಬೈಬಲಿನಲ್ಲಿ ಅಡಕವಾಗಿದೆ?

20 ಜೀವಿಸಲಿಕ್ಕಾಗಿರುವ ಅತ್ಯುತ್ತಮವಾದ ವಿಧಾನವನ್ನು ತನ್ನ ವಾಕ್ಯದಲ್ಲಿ ಯೆಹೋವನು ನಮಗೆ ತಿಳಿಸುತ್ತಾನೆ. ನಮ್ಮ ಸೃಷ್ಟಿಕರ್ತನೋಪಾದಿ ನಮ್ಮ ಅಗತ್ಯತೆಗಳೇನೆಂದು ನಮಗಿಂತ ಹೆಚ್ಚಾಗಿ ಆತನಿಗೆ ತಿಳಿದದೆ. ಮತ್ತು ಮಾನವರ ಮೂಲಭೂತ ಅಗತ್ಯತೆಗಳು​—ಪ್ರೀತಿಯನ್ನು ಪಡೆಯುವ ಅಪೇಕ್ಷೆ, ಸಂತೋಷದಿಂದಿರುವ ಮತ್ತು ಸಂಬಂಧಗಳಲ್ಲಿ ಸಾಫಲ್ಯಪಡೆಯುವ ಬಯಕೆ​—ಇವೆಲ್ಲವು ಬದಲಾಗದೆ ಉಳಿದಿವೆ. ಅರ್ಥಭರಿತ ಜೀವನಗಳನ್ನು ನಡೆಸಲಿಕ್ಕಾಗಿ ನಮಗೆ ಸಹಾಯಮಾಡುವಂಥ ‘ಪ್ರಾಯೋಗಿಕ ವಿವೇಕದ’ ಭಂಡಾರವೇ ಬೈಬಲಿನಲ್ಲಿ ಅಡಕವಾಗಿದೆ. (ಜ್ಞಾನೋಕ್ತಿ 2:​7, NW) ಈ ಅಧ್ಯಯನ ಪುಸ್ತಕದ ಪ್ರತಿಯೊಂದು ಭಾಗದಲ್ಲಿ, ಬೈಬಲಿನ ವಿವೇಕಯುತ ಬುದ್ಧಿವಾದವನ್ನು ನಾವು ಅನ್ವಯಿಸುವುದು ಹೇಗೆಂದು ತೋರಿಸುವ ಒಂದೊಂದು ಅಧ್ಯಾಯವು ಸೇರಿರುತ್ತದೆ. ಆದರೆ ಇಲ್ಲಿ ನಾವು ಕೇವಲ ಒಂದು ಉದಾಹರಣೆಯನ್ನು ಪರಿಗಣಿಸೋಣ.

21-23. ಕೋಪ ಮತ್ತು ಅಸಮಾಧಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದನ್ನು ತಡೆಯಲು ಯಾವ ವಿವೇಕಯುತ ಬುದ್ಧಿವಾದವು ನಮಗೆ ಸಹಾಯಮಾಡಬಲ್ಲದು?

21 ಆಂತರ್ಯದಲ್ಲಿ ಕತ್ತಿ ಮಸೆಯುತ್ತಿರುವ ಮತ್ತು ಮನಸ್ಸಿನಲ್ಲಿ ಅಸಮಾಧಾನವನ್ನಿಟ್ಟುಕೊಳ್ಳುವ ಜನರು ಕೊನೆಗೆ ತಮಗೆ ತಾವೇ ಹಾನಿಯನ್ನು ಬರಮಾಡಿಕೊಳ್ಳುವುದನ್ನು ನೀವೆಂದಾದರೂ ಗಮನಿಸಿದ್ದೀರೋ? ಅಸಮಾಧಾನವು ಜೀವನದಲ್ಲಿ ಹೊರಲಿಕ್ಕಿರುವ ಅತಿ ಭಾರವಾದ ಹೊರೆಯಾಗಿದೆ. ನಾವದನ್ನು ಮನಸ್ಸಿನಲ್ಲಿಟ್ಟು ಪೋಷಿಸಿಕೊಳ್ಳುವಾಗ, ನಮ್ಮ ಎಲ್ಲಾ ಯೋಚನೆಗಳು ಅದರಲ್ಲೇ ಮುಳುಗಿರುತ್ತವೆ, ಅದು ನಮ್ಮ ಮನಶ್ಶಾಂತಿಯನ್ನು ಕಸಿದುಕೊಳ್ಳುತ್ತದೆ, ಮತ್ತು ನಮ್ಮ ಆನಂದವನ್ನು ಉಸಿರುಗಟ್ಟಿಸುತ್ತದೆ. ಮನಸ್ಸಿನಲ್ಲಿ ಕೋಪವನ್ನಿಟ್ಟುಕೊಳ್ಳುವುದರಿಂದ ಹೃದ್ರೋಗದ ಅಪಾಯವು ಹಾಗೂ ಇನ್ನಿತರ ಅನೇಕ ದೀರ್ಘಕಾಲಿಕ ವ್ಯಾಧಿಗಳು ಉಂಟಾಗುವ ಅಪಾಯವು ಹೆಚ್ಚಬಲ್ಲದೆಂದು ವೈಜ್ಞಾನಿಕ ಅಧ್ಯಯನಗಳು ಸೂಚಿಸುತ್ತವೆ. ಆದರೆ ಅಂಥ ವೈಜ್ಞಾನಿಕ ಅಧ್ಯಯನಗಳು ನಡೆಸಲ್ಪಡುವ ಬಹಳ ಮುಂಚೆಯೇ, ಬೈಬಲು ವಿವೇಕಯುತವಾಗಿ ಹೀಗಂದಿತ್ತು: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು.” (ಕೀರ್ತನೆ 37:8) ಆದರೆ ನಾವದನ್ನು ಮಾಡುವುದು ಹೇಗೆ?

22 ದೇವರ ವಾಕ್ಯವು ಈ ವಿವೇಕಪ್ರದ ಬುದ್ಧಿವಾದವನ್ನು ಕೊಡುತ್ತದೆ: “ಮನುಷ್ಯನ ವಿವೇಕವು [“ಒಳನೋಟವು,” NW] ಅವನ ಸಿಟ್ಟಿಗೆ ಅಡ್ಡಿ. [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” (ಜ್ಞಾನೋಕ್ತಿ 19:​11) ಒಳನೋಟವೆಂದರೆ ಮೇಲ್ಮೈಯಿಂದ ಒಳಕ್ಕೆ ನೋಡುವ, ಮೇಲ್ನೋಟಕ್ಕಿಂತ ಆಳವಾಗಿ ನೋಡುವ ಸಾಮರ್ಥ್ಯವಾಗಿದೆ. ಒಳನೋಟವು ತಿಳಿವಳಿಕೆಗೆ ಪುಷ್ಟಿಕೊಡುತ್ತದೆ. ಯಾಕಂದರೆ ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ರೀತಿಯಲ್ಲಿ ಮಾತಾಡಿದ್ದು ಅಥವಾ ವರ್ತಿಸಿದ್ದು ಏಕೆಂಬುದನ್ನು ವಿವೇಚಿಸಲು ಅದು ನಮಗೆ ಸಹಾಯಮಾಡುತ್ತದೆ. ಅವನ ನಿಜ ಹೇತುಗಳನ್ನು, ಅನಿಸಿಕೆಗಳನ್ನು, ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ಅವನ ಕಡೆಗಿರುವ ನಮ್ಮ ಟೀಕಾತ್ಮಕ ವಿಚಾರಗಳನ್ನು ಮತ್ತು ಭಾವನೆಗಳನ್ನು ತ್ಯಜಿಸಲು ನಮಗೆ ಸಹಾಯಮಾಡುವುದು.

23 ಬೈಬಲಿನಲ್ಲಿ ಈ ಹೆಚ್ಚಿನ ಬುದ್ಧಿವಾದವೂ ಅಡಕವಾಗಿದೆ: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ.” (ಕೊಲೊಸ್ಸೆ 3:13) ‘ಒಬ್ಬರಿಗೊಬ್ಬರು ಸೈರಿಸಿಕೊಳ್ಳಿರಿ’ ಎಂಬ ಹೇಳಿಕೆಯು ಇತರರೊಂದಿಗೆ ತಾಳ್ಮೆಯಿಂದಿರುವುದನ್ನು, ನಮಗೆ ಕಿರುಕುಳವನ್ನು ಉಂಟುಮಾಡಬಹುದಾದ ಪ್ರವೃತ್ತಿಗಳನ್ನು ಸಹಿಸಿಕೊಳ್ಳುವುದನ್ನು ಸೂಚಿಸುತ್ತದೆ. ಇಂಥ ಸಹನಶೀಲತೆಯು ನಾವು ಚಿಕ್ಕಪುಟ್ಟ ದ್ವೇಷಗಳನ್ನು ಪೋಷಿಸದಂತೆ ತಡೆಯಲು ಸಹಾಯಮಾಡುತ್ತದೆ. “ಕ್ಷಮಿಸಿರಿ” ಎಂಬ ಪದವು ಅಸಮಾಧಾನವನ್ನು ಬಿಟ್ಟುಬಿಡುವ ವಿಚಾರವನ್ನು ಸೂಚಿಸುತ್ತದೆ. ಇತರರನ್ನು ಕ್ಷಮಿಸಲು ಯೋಗ್ಯವಾದ ಆಧಾರವಿರುವಾಗ ನಾವು ಕ್ಷಮಿಸುವ ಅಗತ್ಯವಿದೆಯೆಂದು ನಮ್ಮ ವಿವೇಕಿಯಾದ ದೇವರಿಗೆ ತಿಳಿದದೆ. ಇದು ಅವರ ಪ್ರಯೋಜನಕ್ಕಾಗಿ ಮಾತ್ರವಲ್ಲ ನಮ್ಮ ಸ್ವಂತ ಹೃದಮನದ ಶಾಂತಿಗಾಗಿಯೂ ಅದೆ. (ಲೂಕ 17:3, 4) ದೇವರ ವಾಕ್ಯದಲ್ಲಿ ಕಂಡುಬರುವ ವಿವೇಕವೆಷ್ಟು ಅಪಾರ!

24. ನಾವು ನಮ್ಮ ಜೀವನವನ್ನು ದೈವಿಕ ವಿವೇಕಕ್ಕೆ ಹೊಂದಿಕೆಯಲ್ಲಿ ತರುವಾಗ ಏನು ಫಲಿಸುತ್ತದೆ?

24 ತನ್ನ ಎಲ್ಲೆಯಿಲ್ಲದ ಪ್ರೀತಿಯಿಂದ ಪ್ರೇರಿತನಾಗಿ, ಯೆಹೋವನು ನಮ್ಮೊಂದಿಗೆ ಸಂವಾದಮಾಡಲು ಬಯಸಿದನು. ಇದಕ್ಕೋಸ್ಕರ ಆತನು ಸಾಧ್ಯವಿರುವ ಅತ್ಯುತ್ತಮವಾದ ವಿಧಾನವನ್ನು ಆರಿಸಿಕೊಂಡನು, ಅದು ಪವಿತ್ರಾತ್ಮದ ಮಾರ್ಗದರ್ಶನದ ಕೆಳಗೆ ಮಾನವ ಲೇಖಕರಿಂದ ಬರೆಯಲ್ಪಟ್ಟ ಒಂದು ಲಿಖಿತ “ಪತ್ರ”ವೇ. ಫಲಿತಾಂಶವಾಗಿ, ಯೆಹೋವನ ಸ್ವಂತ ವಿವೇಕವು ಅದರ ಪುಟಗಳಲ್ಲಿ ಕಂಡುಬರುತ್ತದೆ. ಈ ವಿವೇಕವು ‘ಬಹು ಭರವಸಯೋಗ್ಯವಾಗಿದೆ.’ (ಕೀರ್ತನೆ 93:​5, NW) ಅದರೊಂದಿಗೆ ನಾವು ನಮ್ಮ ಜೀವನವನ್ನು ಹೊಂದಿಕೆಗೆ ತರುವಾಗ ಮತ್ತು ಅದನ್ನು ಇತರರೊಂದಿಗೆ ಹಂಚುವಾಗ, ನಾವು ಸ್ವಾಭಾವಿಕವಾಗಿಯೇ ಸರ್ವವಿವೇಕಿಯಾದ ನಮ್ಮ ದೇವರ ಹತ್ತಿರಕ್ಕೆ ಸೆಳೆಯಲ್ಪಡುತ್ತೇವೆ. ಮುಂದಿನ ಅಧ್ಯಾಯದಲ್ಲಿ, ಯೆಹೋವನ ದೂರದೃಷ್ಟಿಯಿಂದ ಕೂಡಿರುವ ವಿವೇಕದ ಇನ್ನೊಂದು ಎದ್ದುಕಾಣುವ ಉದಾಹರಣೆಯನ್ನು, ಭವಿಷ್ಯತ್ತನ್ನು ಮುಂತಿಳಿಸುವ ಮತ್ತು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕೆ ಆತನಿಗಿರುವ ಸಾಮರ್ಥ್ಯದ ಕುರಿತು ಚರ್ಚಿಸುವೆವು.

^ ಪ್ಯಾರ. 8 ಉದಾಹರಣೆಗೆ ಕುರುಬನಾಗಿದ್ದ ದಾವೀದನು ತನ್ನ ಕುರಿಪಾಲನೆಯ ಜೀವನದಿಂದ ತೆಗೆದ ದೃಷ್ಟಾಂತಗಳನ್ನು ಉಪಯೋಗಿಸುತ್ತಾನೆ. (ಕೀರ್ತನೆ 23) ಹಿಂದೆ ಸುಂಕದವನಾಗಿದ್ದ ಮತ್ತಾಯನು ಹಲವಾರು ಅಂಕೆಸಂಖ್ಯೆಗಳನ್ನು ಮತ್ತು ಹಣಕಾಸಿನ ಮೌಲ್ಯಗಳನ್ನು ಸೂಚಿಸಿ ಬರೆದಿದ್ದಾನೆ. (ಮತ್ತಾಯ 17:27; 26:15; 27:3) ವೈದ್ಯನಾಗಿದ್ದ ಲೂಕನು ತನ್ನ ವೈದ್ಯಕೀಯ ಹಿನ್ನೆಲೆಯನ್ನು ಪ್ರತಿಬಿಂಬಿಸುವಂಥ ಶಬ್ದಗಳನ್ನು ಉಪಯೋಗಿಸುತ್ತಾನೆ.​—ಲೂಕ 4:38; 14:2; 16:​20, 21.

^ ಪ್ಯಾರ. 14 ಈ ನಾಣ್ಯಗಳಲ್ಲಿ ಪ್ರತಿಯೊಂದು ಒಂದು ಲೆಪ್ಟನ್‌ ಆಗಿತ್ತು. ಆ ಕಾಲದಲ್ಲಿ ಚಲಾವಣೆಯಲ್ಲಿದ್ದ ಅತ್ಯಂತ ಕಡಿಮೆ ಬೆಲೆಯ ಯೆಹೂದಿ ನಾಣ್ಯವದು. ಎರಡು ಲೆಪ್ಟ ಒಂದು ದಿನದ ಸಂಬಳದ 1/64ನೆಯ ಅಂಶಕ್ಕೆ ಸಮಾನವಾಗಿತ್ತು. ಬಡವರು ಆಹಾರಕ್ಕಾಗಿ ಉಪಯೋಗಿಸುತ್ತಿದ್ದ ಅತಿ ಅಗ್ಗದ ಪಕ್ಷಿಯಾದ ಒಂದು ಗುಬ್ಬಿಯನ್ನೂ ಖರೀದಿಸಲು ಆ ಎರಡು ನಾಣ್ಯಗಳು ಸಾಕಾಗುತ್ತಿರಲಿಲ್ಲ.