ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 19

“ಪವಿತ್ರ ರಹಸ್ಯದಲ್ಲಿನ ದೇವರ ವಿವೇಕ”

“ಪವಿತ್ರ ರಹಸ್ಯದಲ್ಲಿನ ದೇವರ ವಿವೇಕ”

1, 2. ಯಾವ “ಪವಿತ್ರ ರಹಸ್ಯ”ವು ನಮ್ಮ ಆಸಕ್ತಿಯನ್ನು ಕೆರಳಿಸಬೇಕು, ಮತ್ತು ಏಕೆ?

ರಹಸ್ಯಗಳು! ಅವು ಕುತೂಹಲವನ್ನು ಕೆರಳಿಸುತ್ತವೆ, ಮಂತ್ರಮುಗ್ಧಗೊಳಿಸುತ್ತವೆ, ಮತ್ತು ತಬ್ಬಿಬ್ಬುಗೊಳಿಸುತ್ತವೆ. ಆದುದರಿಂದಲೇ ಮನುಷ್ಯರಿಗೆ ಹೆಚ್ಚಾಗಿ ಅವುಗಳನ್ನು ಗುಪ್ತವಾಗಿಡಲು ಕಷ್ಟವಾಗುತ್ತದೆ. ಆದರೂ ಬೈಬಲು ಹೇಳುವುದು: “ವಿಷಯವನ್ನು ರಹಸ್ಯಮಾಡುವದು ದೇವರ ಪ್ರಭಾವ.” (ಜ್ಞಾನೋಕ್ತಿ 25:2) ಹೌದು, ಪರಮಾಧಿಕಾರಿ ಅರಸನೂ ಸೃಷ್ಟಿಕರ್ತನೂ ಆಗಿರುವ ಯೆಹೋವನು ನ್ಯಾಯಯುತವಾಗಿಯೇ ಕೆಲವು ರಹಸ್ಯಗಳನ್ನು ತನ್ನ ಕ್ಲುಪ್ತಕಾಲವು ಬರುವ ತನಕ ಮಾನವರಿಂದ ಗುಪ್ತವಾಗಿಟ್ಟು ಅನಂತರ ಪ್ರಕಟಪಡಿಸುತ್ತಾನೆ.

2 ಆದರೂ ಯೆಹೋವನು ತನ್ನ ವಾಕ್ಯದಲ್ಲಿ ಪ್ರಕಟಪಡಿಸಿರುವ ಮಂತ್ರಮುಗ್ಧಗೊಳಿಸುವ, ಕುತೂಹಲ ಕೆರಳಿಸುವ ರಹಸ್ಯವೊಂದಿದೆ. ಅದನ್ನು “[ದೇವರ] ಚಿತ್ತದ ಪವಿತ್ರ ರಹಸ್ಯ” ಎಂದು ಕರೆಯಲಾಗಿದೆ. (ಎಫೆಸ 1:​9, NW) ಅದರ ಕುರಿತು ಕಲಿಯುವುದು ನಿಮ್ಮ ಕುತೂಹಲವನ್ನು ತಣಿಸುವುದಷ್ಟೇ ಅಲ್ಲ, ಹೆಚ್ಚನ್ನೂ ಮಾಡುವುದು. ಈ ರಹಸ್ಯದ ಕುರಿತಾದ ಜ್ಞಾನವು ನಿಮ್ಮನ್ನು ರಕ್ಷಣೆಯ ಮಾರ್ಗಕ್ಕೆ ನಡಿಸಬಲ್ಲದು ಮಾತ್ರವಲ್ಲ ಯೆಹೋವನ ಅಳೆಯಲಾಗದ ವಿವೇಕದ ತುಸು ಒಳನೋಟವನ್ನೂ ಒದಗಿಸಬಲ್ಲದು.

ಪ್ರಗತಿಪೂರ್ವಕವಾಗಿ ಪ್ರಕಟಿಸಲ್ಪಟ್ಟದ್ದು

3, 4. ಆದಿಕಾಂಡ 3:15 ರಲ್ಲಿ ದಾಖಲೆಯಾಗಿರುವ ಪ್ರವಾದನೆಯು ಹೇಗೆ ನಿರೀಕ್ಷೆಯನ್ನು ಒದಗಿಸಿತು, ಮತ್ತು ಯಾವ ಗೂಢಾರ್ಥ ಅಥವಾ “ಪವಿತ್ರ ರಹಸ್ಯ” ಅದರಲ್ಲಿ ಅಡಕವಾಗಿತ್ತು?

3 ಪರಿಪೂರ್ಣ ಮಾನವರು ವಾಸಿಸುವಂಥ ಭೂಪರದೈಸನ್ನು ತರುವ ದೇವರ ಉದ್ದೇಶವು ಆದಾಮಹವ್ವರು ಪಾಪಗೈದಾಗ ಭಂಗಗೊಂಡಂತೆ ತೋರಿರಬಹುದು. ಆದರೆ ದೇವರು ಆ ಕೂಡಲೆ ಸಮಸ್ಯೆಗೆ ಪ್ರತಿವರ್ತಿಸಿದನು. ಆತನಂದದ್ದು: “ನಿನಗೂ [ಸರ್ಪನಿಗೂ] ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.”​—ಆದಿಕಾಂಡ 3:​15.

4 ಇವು ಕಕ್ಕಾಬಿಕ್ಕಿಗೊಳಿಸುವ, ಗೂಢ ಶಬ್ದಗಳಾಗಿದ್ದವು. ಈ ಸ್ತ್ರೀ ಯಾರು? ಸರ್ಪನು ಯಾರು? ಸರ್ಪನ ತಲೆಯನ್ನು ಜಜ್ಜುವ ಆ “ಸಂತಾನ” ಯಾರು? ಆದಾಮಹವ್ವರು ಇದನ್ನು ಕೇವಲ ಊಹಿಸಿಕೊಳ್ಳಬಹುದಿತ್ತು ಅಷ್ಟೇ. ಆದರೂ ಆ ಅಪನಂಬಿಗಸ್ತ ಜೋಡಿಯ ಯಾವನೇ ನಂಬಿಗಸ್ತ ಸಂತತಿಗೆ ದೇವರ ಈ ಮಾತುಗಳು ನಿರೀಕ್ಷೆಯನ್ನು ಒದಗಿಸಿದವು. ನೀತಿಯು ಜಯಶಾಲಿಯಾಗಲಿತ್ತು. ಯೆಹೋವನ ಉದ್ದೇಶವು ಕೈಗೂಡಲಿಕ್ಕಿತ್ತು. ಆದರೆ ಹೇಗೆ? ಹಾಂ! ಅದೇ ರಹಸ್ಯವಾಗಿರಲಿತ್ತು! ಬೈಬಲು ಅದನ್ನು, “ಪವಿತ್ರ ರಹಸ್ಯದಲ್ಲಿನ ದೇವರ ವಿವೇಕ, ಗುಪ್ತ ವಿವೇಕ” ಎಂದು ಕರೆದದೆ.​—1 ಕೊರಿಂಥ 2:​7, NW.

5. ಯೆಹೋವನು ತನ್ನ ರಹಸ್ಯವನ್ನು ಪ್ರಗತಿಪೂರ್ವಕವಾಗಿ ಪ್ರಕಟಿಸಿದ್ದೇಕೆಂಬುದನ್ನು ದೃಷ್ಟಾಂತಿಸಿರಿ.

5 “ರಹಸ್ಯಗಳನ್ನು ವ್ಯಕ್ತಗೊಳಿಸುವ” ದೇವರೋಪಾದಿ ಯೆಹೋವನು ಈ ರಹಸ್ಯದ ನೆರವೇರಿಕೆಯ ಸಂಬಂಧದಲ್ಲಿ ಪ್ರಸಕ್ತ ವಿವರಗಳನ್ನು ಕಟ್ಟಕಡೆಗೆ ಪ್ರಕಟಪಡಿಸಲಿದ್ದನು. (ದಾನಿಯೇಲ 2:28) ಆದರೆ ಆತನು ಅದನ್ನು ಕ್ರಮೇಣವಾಗಿ, ಹಂತಹಂತವಾಗಿ ಮಾಡಲಿದ್ದನು. ದೃಷ್ಟಾಂತಕ್ಕಾಗಿ, “ಅಪ್ಪಾ, ನಾನು ಎಲ್ಲಿಂದ ಬಂದೆ?” ಎಂದು ಪುಟ್ಟ ಮಗನು ಪ್ರಶ್ನಿಸುವಾಗ, ಪ್ರೀತಿಯ ತಂದೆಯು ಉತ್ತರವನ್ನು ಕೊಡುವ ರೀತಿಯ ಬಗ್ಗೆ ನಾವು ಯೋಚಿಸಬಹುದು. ಒಬ್ಬ ವಿವೇಕಿ ತಂದೆಯು ಆ ಪುಟ್ಟ ಮಗನು ಗ್ರಹಿಸಶಕ್ತನಾಗುವಷ್ಟೇ ಮಾಹಿತಿಯನ್ನು ಒದಗಿಸುವನು. ಮಗನು ಬೆಳೆದು ದೊಡ್ಡವನಾದಷ್ಟಕ್ಕೆ, ತಂದೆಯು ಅವನಿಗೆ ಹೆಚ್ಚನ್ನು ತಿಳಿಸುವನು. ಅದೇ ರೀತಿಯಲ್ಲಿ, ತನ್ನ ಚಿತ್ತ ಮತ್ತು ಉದ್ದೇಶದ ಪ್ರಕಟನೆಗಳನ್ನು ತಿಳಿದುಕೊಳ್ಳಲು ತನ್ನ ಜನರು ಯಾವಾಗ ಸಿದ್ಧರಾಗಿರುತ್ತಾರೆ ಎಂಬುದನ್ನು ಯೆಹೋವನು ನಿರ್ಧರಿಸುತ್ತಾನೆ.​—ಜ್ಞಾನೋಕ್ತಿ 4:18; ದಾನಿಯೇಲ 12:4.

6. (ಎ) ಒಂದು ಒಡಂಬಡಿಕೆ ಅಥವಾ ಕರಾರು ಯಾವ ಉದ್ದೇಶವನ್ನು ಪೂರೈಸುತ್ತದೆ? (ಬಿ) ಯೆಹೋವನು ಮಾನವರೊಡನೆ ಒಡಂಬಡಿಕೆಗಳನ್ನು ಮಾಡಿಕೊಂಡಿರುವುದು ಗಮನಾರ್ಹವೇಕೆ?

6 ಅಂತಹ ಪ್ರಕಟನೆಗಳನ್ನು ಯೆಹೋವನು ಮಾಡಿದ್ದು ಹೇಗೆ? ಒಡಂಬಡಿಕೆ ಅಥವಾ ಕರಾರುಗಳ ಒಂದು ಸರಣಿಯನ್ನುಪಯೋಗಿಸಿ ಆತನು ಹೆಚ್ಚನ್ನು ಪ್ರಕಟಪಡಿಸಿದನು. ಪ್ರಾಯಶಃ ಒಂದು ಮನೆಯನ್ನು ಕೊಳ್ಳಲಿಕ್ಕಾಗಿ ಅಥವಾ ಹಣವನ್ನು ಸಾಲವಾಗಿ ಕೊಡಲು ಇಲ್ಲವೆ ಸಾಲವನ್ನು ಪಡೆಯಲು ಒಂದು ಕರಾರಿಗೆ ನೀವು ಯಾವಾಗಲಾದರೂ ಸಹಿಹಾಕಿದ್ದಿರಬಹುದು. ಅಂಥ ಕರಾರು ನೀವು ಒಪ್ಪಿರುವ ಷರತ್ತುಗಳನ್ನು ಪೂರೈಸಲಿದ್ದೀರೆಂಬುದಕ್ಕೆ ಒಂದು ಕಾನೂನುಬದ್ಧ ಗ್ಯಾರಂಟಿಯನ್ನು ಒದಗಿಸುತ್ತದೆ. ಆದರೆ ಯೆಹೋವನು ಮಾನವರೊಂದಿಗೆ ವಿಧಿವಿಹಿತವಾದ ಒಡಂಬಡಿಕೆಗಳು ಅಥವಾ ಕರಾರುಗಳನ್ನು ಮಾಡುವ ಅಗತ್ಯವಾದರೂ ಏಕಿತ್ತು? ನಿಶ್ಚಯವಾಗಿ ಆತನ ಮಾತೇ ಆತನ ವಾಗ್ದಾನಗಳಿಗೆ ಗ್ಯಾರಂಟಿಯಾಗಿದೆಯಲ್ಲಾ. ಅದು ಹೌದಾದರೂ, ಹಲವಾರು ಸಂದರ್ಭಗಳಲ್ಲಿ ದೇವರು ದಯೆಯಿಂದ ತನ್ನ ಮಾತಿಗೆ ಶಾಸನಬದ್ಧ ಕರಾರುಗಳ ಆಧಾರವನ್ನು ಕೊಟ್ಟಿದ್ದಾನೆ. ಈ ಅಭೇದ್ಯ ಒಪ್ಪಂದಗಳು ಅಪರಿಪೂರ್ಣ ಮಾನವರಾದ ನಮಗೆ ಯೆಹೋವನ ವಾಗ್ದಾನಗಳಲ್ಲಿ ಭರವಸೆಯಿಡಲು ಇನ್ನೂ ಹೆಚ್ಚಿನ ದೃಢ ಆಧಾರವನ್ನು ಕೊಡುತ್ತವೆ.​—ಇಬ್ರಿಯ 6:16-18.

ಅಬ್ರಹಾಮನೊಂದಿಗೆ ಒಡಂಬಡಿಕೆ

7, 8. (ಎ) ಅಬ್ರಹಾಮನೊಂದಿಗೆ ಯೆಹೋವನು ಯಾವ ಒಡಂಬಡಿಕೆಯನ್ನು ಮಾಡಿಕೊಂಡನು, ಇದರಿಂದ ಪವಿತ್ರ ರಹಸ್ಯದ ಮೇಲೆ ಯಾವ ಬೆಳಕು ಬಿತ್ತು? (ಬಿ) ವಾಗ್ದತ್ತ ಸಂತಾನವು ಬರಲಿದ್ದ ಸಂತತಿಯ ವಂಶಾವಳಿಯನ್ನು ಯೆಹೋವನು ಪ್ರಗತಿಪೂರ್ವಕವಾಗಿ ಕಿರಿದಾಗಿಸುತ್ತಾ ಬಂದದ್ದು ಹೇಗೆ?

7 ಮನುಷ್ಯನನ್ನು ಪರದೈಸಿನಿಂದ ಹೊರಗಟ್ಟಿದ ಬಳಿಕ ಸುಮಾರು ಎರಡು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳ ನಂತರ, ತನ್ನ ನಂಬಿಗಸ್ತ ಸೇವಕನಾದ ಅಬ್ರಹಾಮನಿಗೆ ದೇವರು ಅಂದದ್ದು: “ನಿನ್ನ ಸಂತತಿಯನ್ನು . . . ಆಕಾಶದ ನಕ್ಷತ್ರಗಳಂತೆ . . . ಅಸಂಖ್ಯವಾಗಿ ಮಾಡುವೆನು; . . . ನೀನು ನನ್ನ ಮಾತನ್ನು ಕೇಳಿದ್ದರಿಂದ ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:17, 18) ಇದು ಒಂದು ವಾಗ್ದಾನಕ್ಕಿಂತಲೂ ಹೆಚ್ಚಾಗಿತ್ತು; ಯೆಹೋವನು ಅದನ್ನು ಒಂದು ಕಾನೂನುಬದ್ಧ ಒಡಂಬಡಿಕೆಯಾಗಿ ರಚಿಸಿದ್ದು ಮಾತ್ರವಲ್ಲ ಮುರಿಯಲಾಗದ ತನ್ನಾಣೆಯಿಟ್ಟು ಅದನ್ನು ಬೆಂಬಲಿಸಿದನು. (ಆದಿಕಾಂಡ 17:1, 2; ಇಬ್ರಿಯ 6:13-15) ಪರಮಾಧಿಕಾರಿ ಕರ್ತನು ಮಾನವಕುಲವನ್ನು ಆಶೀರ್ವದಿಸಲು ಸಾಕ್ಷಾತ್‌ ಕರಾರು ಮಾಡಿದ್ದು ಅದೆಷ್ಟು ಗಮನಾರ್ಹವಾದ ಸಂಗತಿ!

‘ನಿನ್ನ ಸಂತತಿಯನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನು’

8 ವಾಗ್ದಾತ್ತ ಸಂತಾನವು ಮನುಷ್ಯನಾಗಿ ಆಗಮಿಸಲಿದ್ದನೆಂದು ಅಬ್ರಹಾಮನೊಂದಿಗಿನ ಆ ಒಡಂಬಡಿಕೆಯು ಪ್ರಕಟಪಡಿಸಿತು, ಯಾಕಂದರೆ ಅವನು ಅಬ್ರಹಾಮನ ವಂಶದಲ್ಲಿ ಬರಲಿಕ್ಕಿದ್ದನು. ಆದರೆ ಅವನು ಯಾರಾಗಿರುವನು? ಅಬ್ರಹಾಮನ ಪುತ್ರರಲ್ಲಿ ಇಸಾಕನೇ ಆ ಸಂತಾನದ ಪೂರ್ವಜನಾಗಿರುವನು ಎಂಬುದಾಗಿ ಕಾಲಾನಂತರ ಯೆಹೋವನು ಪ್ರಕಟಪಡಿಸಿದನು. ಮತ್ತು ಇಸಾಕನ ಇಬ್ಬರು ಪುತ್ರರಲ್ಲಿ ಯಾಕೋಬನು ಆರಿಸಲ್ಪಟ್ಟನು. (ಆದಿಕಾಂಡ 21:12; 28:13, 14) ತದನಂತರ ಯಾಕೋಬನು ತನ್ನ 12 ಮಂದಿ ಪುತ್ರರಲ್ಲಿ ಒಬ್ಬನಿಗೆ ಈ ಪ್ರವಾದನಾ ಮಾತುಗಳನ್ನು ನುಡಿದನು: “ಶಿಲೋವನೆಂಬವನು [“ಯಾರಿಗೆ ಅದು ಸೇರಿದೆಯೋ ಅವನು”] ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು.” (ಆದಿಕಾಂಡ 49:​10, ಸತ್ಯವೇದವು Reference Edition ಪಾದಟಿಪ್ಪಣಿ) ಆ ಸಂತಾನವು ಯೆಹೂದನ ವಂಶದಲ್ಲಿ ಹುಟ್ಟಿ ಬರಲಿದ್ದು ಅವನು ಒಬ್ಬ ರಾಜನಾಗಿರಲಿದ್ದನೆಂದು ತಿಳಿದುಬಂದದ್ದು ಆಗಲೇ!

ಇಸ್ರಾಯೇಲಿನೊಂದಿಗೆ ಒಡಂಬಡಿಕೆ

9, 10. (ಎ) ಇಸ್ರಾಯೇಲ್‌ ಜನಾಂಗದೊಂದಿಗೆ ಯೆಹೋವನು ಯಾವ ಒಡಂಬಡಿಕೆಯನ್ನು ಮಾಡಿಕೊಂಡನು, ಮತ್ತು ಆ ಒಡಂಬಡಿಕೆಯು ಯಾವ ಭದ್ರತೆಯನ್ನು ಒದಗಿಸಿತ್ತು? (ಬಿ) ಧರ್ಮಶಾಸ್ತ್ರವು ಮಾನವಕುಲಕ್ಕಾಗಿ ಈಡಿನ ಅಗತ್ಯವಿದೆಯೆಂಬುದನ್ನು ತೋರಿಸಿದ್ದು ಹೇಗೆ?

9 ಪವಿತ್ರ ರಹಸ್ಯದ ಕುರಿತ ಇನ್ನೂ ಹೆಚ್ಚಿನ ಪ್ರಕಟನೆಗಳಿಗಾಗಿ ದಾರಿಮಾಡಲು ಸಾ.ಶ.ಪೂ. 1513ರಲ್ಲಿ ಯೆಹೋವನು ಒಂದು ಏರ್ಪಾಡನ್ನು ಮಾಡಿದನು. ಅಬ್ರಹಾಮನ ಸಂತತಿಯವರಾದ ಇಸ್ರಾಯೇಲ್‌ ಜನಾಂಗದೊಂದಿಗೆ ಆತನು ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಈಗ ಆ ಮೋಶೆಯ ಧರ್ಮಶಾಸ್ತ್ರದ ಒಡಂಬಡಿಕೆಯು ಜಾರಿಯಲ್ಲಿಲ್ಲವಾದರೂ, ವಾಗ್ದತ್ತ ಸಂತಾನವನ್ನು ತರುವ ಯೆಹೋವನ ಉದ್ದೇಶದಲ್ಲಿ ಅದು ಆಗ ಅತ್ಯಾವಶ್ಯಕ ಭಾಗವಾಗಿತ್ತು. ಅದು ಹೇಗೆ? ಮೂರು ವಿಧಾನಗಳನ್ನು ಪರಿಗಣಿಸಿರಿ. ಒಂದನೆಯದಾಗಿ, ಧರ್ಮಶಾಸ್ತ್ರವು ಒಂದು ರಕ್ಷಣಾತ್ಮಕ ಅಡ್ಡಗೋಡೆಯಂತಿತ್ತು. (ಎಫೆಸ 2:14) ಅದರ ನೀತಿಯುತ ನಿಬಂಧನೆಗಳು ಯೆಹೂದ್ಯರ ಮತ್ತು ಅನ್ಯರ ನಡುವೆ ಒಂದು ಅಡ್ಡಗಟ್ಟಿನಂತೆ ಕಾರ್ಯನಡಿಸಿತು. ಹೀಗೆ ಆ ಧರ್ಮಶಾಸ್ತ್ರವು ವಾಗ್ದತ್ತ ಸಂತಾನದ ವಂಶಾವಳಿಯನ್ನು ಕಾಪಾಡಲು ಸಹಾಯಮಾಡಿತು. ಬಹುತೇಕ ಅಂಥ ಸಂರಕ್ಷಣೆಯ ಕಾರಣದಿಂದಾಗಿಯೇ, ಯೆಹೂದಕುಲದಲ್ಲಿ ಮೆಸ್ಸೀಯನ ಜನನಕ್ಕಾಗಿ ದೇವರ ಕ್ಲುಪ್ತಕಾಲವು ಬಂದಾಗ ಆ ಜನಾಂಗವಿನ್ನೂ ಅಸ್ತಿತ್ವದಲ್ಲಿತ್ತು.

10 ಎರಡನೆಯದಾಗಿ, ಮಾನವಕುಲಕ್ಕೆ ಈಡಿನ ಅಗತ್ಯವಿದೆಯೆಂಬುದನ್ನು ಧರ್ಮಶಾಸ್ತ್ರವು ಸಂಪೂರ್ಣವಾಗಿ ತೋರಿಸಿಕೊಟ್ಟಿತು. ಅದು ಪರಿಪೂರ್ಣವಾದ ಧರ್ಮಶಾಸ್ತ್ರವಾಗಿದ್ದರಿಂದ, ಪಾಪಿ ಮಾನವರು ಅದನ್ನು ಪೂರ್ಣವಾಗಿ ಪರಿಪಾಲಿಸಲು ಅಶಕ್ತರೆಂಬುದನ್ನು ಬಯಲುಪಡಿಸಿತು. ಹೀಗೆ ಅದು, “ವಾಗ್ದಾನದಲ್ಲಿ ಸೂಚಿತನಾದವನು ಹುಟ್ಟಿ ಬರುವತನಕ ದೇವರು ಇಂಥಿಂಥದು ಅಪರಾಧವೆಂದು ತೋರಿಸುವದಕ್ಕಾಗಿ” ಕಾರ್ಯನಡಿಸಿತು. (ಗಲಾತ್ಯ 3:19) ಪ್ರಾಣಿಯಜ್ಞಗಳ ಮೂಲಕ, ಧರ್ಮಶಾಸ್ತ್ರವು ತಾತ್ಕಾಲಿಕವಾಗಿ ಪಾಪನಿವಾರಣೆಯನ್ನು ನೀಡಿತ್ತು. ಆದರೆ ಪೌಲನು ಬರೆದ ಪ್ರಕಾರ, “ಹೋರಿಗಳ ಮತ್ತು ಹೋತಗಳ ರಕ್ತದಿಂದ ಪಾಪಗಳು ಪರಿಹಾರವಾಗುವದು ಅಸಾಧ್ಯ”ವಾಗಿರುವುದರಿಂದ ಈ ಯಜ್ಞಗಳು ಕ್ರಿಸ್ತನ ಈಡು ಯಜ್ಞವನ್ನು ಮುನ್ಸೂಚಿಸಿದವು ಅಷ್ಟೆ. (ಇಬ್ರಿಯ 10:1-4) ಹೀಗಿರಲಾಗಿ ನಂಬಿಗಸ್ತ ಯೆಹೂದ್ಯರಿಗೆ ಆ ಒಡಂಬಡಿಕೆಯು “ಕ್ರಿಸ್ತನಲ್ಲಿಗೆ ಸೇರುವ ತನಕ” ಕಾಯುವ ಆಳಿನಂತಾಗಿತ್ತು.​—ಗಲಾತ್ಯ 3:24.

11. ಯಾವ ಭವ್ಯ ಪ್ರತೀಕ್ಷೆಯನ್ನು ನಿಯಮದೊಡಂಬಡಿಕೆಯು ಇಸ್ರಾಯೇಲ್‌ ಜನಾಂಗಕ್ಕೆ ನೀಡಿತ್ತು, ಆದರೆ ಇಡೀ ಜನಾಂಗದೋಪಾದಿ ಅವರದನ್ನು ಕಳೆದುಕೊಂಡದ್ದೇಕೆ?

11 ಮೂರನೆಯದಾಗಿ, ಆ ಒಡಂಬಡಿಕೆಯು ಇಸ್ರಾಯೇಲ್‌ ಜನಾಂಗಕ್ಕೆ ಒಂದು ಭವ್ಯ ಪ್ರತೀಕ್ಷೆಯನ್ನು ನೀಡಿತ್ತು. ಆ ಒಡಂಬಡಿಕೆಗೆ ಅವರು ನಂಬಿಗಸ್ತರಾಗಿ ಉಳಿದಲ್ಲಿ, ಅವರು “ಯಾಜಕರಾಜ್ಯವೂ ಪರಿಶುದ್ಧಜನವೂ” ಆಗುವರೆಂದು ಯೆಹೋವನು ಅವರಿಗೆ ಹೇಳಿದ್ದನು. (ವಿಮೋಚನಕಾಂಡ 19:5, 6) ಮಾಂಸಿಕ ಇಸ್ರಾಯೇಲ್‌ ಕಟ್ಟಕಡೆಗೆ ಸ್ವರ್ಗೀಯ ಯಾಜಕರಾಜ್ಯಕ್ಕೆ ಮೊತ್ತಮೊದಲಿನ ಸದಸ್ಯರನ್ನು ಒದಗಿಸಿತ್ತೆಂಬುದು ನಿಜ. ಆದರೆ ಇಸ್ರಾಯೇಲ್‌ ಒಂದು ಇಡೀ ಜನಾಂಗದೋಪಾದಿ ನಿಯಮದೊಡಂಬಡಿಕೆಯ ವಿರುದ್ಧ ದಂಗೆಯೆದ್ದಿತು, ಮೆಸ್ಸೀಯ ಸಂತಾನವನ್ನು ತಿರಸ್ಕರಿಸಿಬಿಟ್ಟಿತು, ಮತ್ತು ಆ ಪ್ರತೀಕ್ಷೆಯನ್ನು ಕಳೆದುಕೊಂಡಿತು. ಹೀಗಿರಲಾಗಿ, ಆ ಯಾಜಕರಾಜ್ಯವನ್ನು ಪೂರ್ಣಗೊಳಿಸುವವರು ಯಾರು? ಮತ್ತು ಆ ಪವಿತ್ರ ಜನಾಂಗಕ್ಕೂ ವಾಗ್ದತ್ತ ಸಂತಾನಕ್ಕೂ ಹೇಗೆ ಸಂಬಂಧವಿರುವುದು? ಪವಿತ್ರ ರಹಸ್ಯದ ಆ ಅಂಶಗಳು ದೇವರ ಕ್ಲುಪ್ತಕಾಲದಲ್ಲಿ ಪ್ರಕಟಿಸಲ್ಪಡಲಿದ್ದವು.

ದಾವೀದನೊಂದಿಗೆ ರಾಜ್ಯದ ಒಡಂಬಡಿಕೆ

12. ದಾವೀದನೊಂದಿಗೆ ಯೆಹೋವನು ಯಾವ ಒಡಂಬಡಿಕೆಯನ್ನು ಮಾಡಿದನು, ಮತ್ತು ಅದು ದೇವರ ಪವಿತ್ರ ರಹಸ್ಯದ ಮೇಲೆ ಯಾವ ಬೆಳಕನ್ನು ಚೆಲ್ಲಿತು?

12 ಸಾ.ಶ.ಪೂ. 11ನೆಯ ಶತಮಾನದಲ್ಲಿ ಯೆಹೋವನು ಇನ್ನೊಂದು ಒಡಂಬಡಿಕೆಯನ್ನು ಮಾಡಿಕೊಂಡಾಗ, ಆ ಪವಿತ್ರ ರಹಸ್ಯದ ಮೇಲೆ ಇನ್ನಷ್ಟು ಬೆಳಕನ್ನು ಚೆಲ್ಲಿದನು. ನಂಬಿಗಸ್ತ ಅರಸ ದಾವೀದನಿಗೆ ಆತನು ವಚನವಿತ್ತದ್ದು: “ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. . . . ನಾನು ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.” (2 ಸಮುವೇಲ 7:12, 13; ಕೀರ್ತನೆ 89:3) ಈಗ ವಾಗ್ದತ್ತ ಸಂತಾನದ ವಂಶಾವಳಿಯು ಕಿರಿದುಗೊಂಡು ದಾವೀದನ ಮನೆತನಕ್ಕೆ ಪರಿಮಿತಗೊಳಿಸಲ್ಪಟ್ಟಿತು. ಆದರೆ ಒಬ್ಬ ಸಾಮಾನ್ಯ ಮಾನವನು “ಶಾಶ್ವತವಾಗಿ” ಆಳಸಾಧ್ಯವೊ? (ಕೀರ್ತನೆ 89:20, 29, 34-36) ಮತ್ತು ಅಂಥ ಒಬ್ಬ ಮಾನವ ಅರಸನು ಮಾನವಕುಲವನ್ನು ಪಾಪ ಮತ್ತು ಮರಣದಿಂದ ವಿಮೋಚಿಸಶಕ್ತನೊ?

13, 14. (ಎ) ಕೀರ್ತನೆ 110 ಕ್ಕನುಸಾರವಾಗಿ, ತನ್ನ ಅಭಿಷಿಕ್ತ ಅರಸನಿಗೆ ಯೆಹೋವನು ಯಾವ ವಚನವನ್ನು ಕೊಡುತ್ತಾನೆ? (ಬಿ) ಬರಲಿದ್ದ ಸಂತಾನದ ಕುರಿತು ಯೆಹೋವನ ಪ್ರವಾದಿಗಳ ಮೂಲಕ ಯಾವ ಅಧಿಕ ಪ್ರಕಟನೆಗಳು ಮಾಡಲ್ಪಟ್ಟವು?

13 ದಾವೀದನು ಪ್ರೇರಿತನಾಗಿ ಬರೆದದ್ದು: “ಯೆಹೋವನು ನನ್ನ ಒಡೆಯನಿಗೆ​—ನಾನು ನಿನ್ನ ವಿರೋಧಿಗಳನ್ನು ನಿನಗೆ ಪಾದಪೀಠವಾಗ ಮಾಡುವ ತನಕ ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು ನುಡಿದನು. . . . ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಯೆಹೋವನು ಆಣೆಯಿಟ್ಟು ನುಡಿದಿದ್ದಾನೆ; ಪಶ್ಚಾತ್ತಾಪಪಡುವದಿಲ್ಲ.” (ಕೀರ್ತನೆ 110:1, 4) ದಾವೀದನ ಮಾತುಗಳು ವಾಗ್ದತ್ತ ಸಂತಾನಕ್ಕೆ ಇಲ್ಲವೆ ಮೆಸ್ಸೀಯನಿಗೆ ನೇರವಾಗಿ ಅನ್ವಯಿಸಿದವು. (ಅ. ಕೃತ್ಯಗಳು 2:34ಬಿ, 36) ಈ ಅರಸನು ಯೆರೂಸಲೇಮಿನಿಂದಲ್ಲ, ಬದಲಾಗಿ ಪರಲೋಕದಲ್ಲಿ ಯೆಹೋವನ “ಬಲಗಡೆ”ಯಿಂದ ಆಳುವನು. ಅದು ಅವನಿಗೆ ಕೇವಲ ಇಸ್ರಾಯೇಲ್‌ ದೇಶದ ಮೇಲಲ್ಲ, ಬದಲಾಗಿ ಇಡೀ ಭೂಮಿಯ ಮೇಲೆ ಅಧಿಕಾರವನ್ನು ಕೊಡುವುದು. (ಕೀರ್ತನೆ 2:6-8) ಇಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ವಿಷಯವು ಪ್ರಕಟಿಸಲ್ಪಟ್ಟಿತು. ಮೆಸ್ಸೀಯನು “ಮೆಲ್ಕಿಚೆದೇಕನ ತರಹದ ಯಾಜಕನು” ಆಗಿರುವನೆಂದು ಯೆಹೋವನು ತನ್ನಾಣೆಯಿಟ್ಟು ನುಡಿದ ವಿಷಯವನ್ನು ಗಮನಿಸಿರಿ. ಅಬ್ರಹಾಮನ ಕಾಲದಲ್ಲಿ ರಾಜಯಾಜಕನಾಗಿ ಸೇವೆಮಾಡಿದ್ದ ಮೆಲ್ಕಿಚೆದೇಕನಂತೆ, ಬರಲಿದ್ದ ಸಂತಾನವು ಸಹ ರಾಜ ಮತ್ತು ಯಾಜಕನಾಗಿ ಸೇವೆಮಾಡಲು ದೇವರಿಂದ ನೇರವಾದ ನೇಮಕವನ್ನು ಪಡೆದುಕೊಂಡಿರುವನು!​—ಆದಿಕಾಂಡ 14:17-20.

14 ವರ್ಷಗಳು ದಾಟಿದಂತೆ, ಯೆಹೋವನು ತನ್ನ ಪ್ರವಾದಿಗಳನ್ನು ಉಪಯೋಗಿಸಿ ತನ್ನ ಪವಿತ್ರ ರಹಸ್ಯದ ಕುರಿತಾದ ಹೆಚ್ಚಿನ ಪ್ರಕಟನೆಗಳನ್ನು ಮಾಡಿದನು. ಉದಾಹರಣೆಗಾಗಿ, ಯೆಶಾಯನು ಆ ಸಂತಾನವು ಒಂದು ಯಜ್ಞಾರ್ಪಿತ ಮರಣವನ್ನು ಅನುಭವಿಸುವನೆಂದು ಪ್ರಕಟಪಡಿಸಿದನು. (ಯೆಶಾಯ 53:3-12) ಮೆಸ್ಸೀಯನ ಜನನದ ಸ್ಥಳವನ್ನು ಮೀಕನು ಮುಂತಿಳಿಸಿದನು. (ಮೀಕ 5:2) ದಾನಿಯೇಲನು ಆ ಸಂತಾನದ ಆಗಮನ ಹಾಗೂ ಮರಣದ ಸರಿಯಾದ ಸಮಯವನ್ನು ಸಹ ಪ್ರವಾದಿಸಿದನು.​—ದಾನಿಯೇಲ 9:24-27.

ಪವಿತ್ರ ರಹಸ್ಯವು ಪ್ರಕಟವಾಯಿತು!

15, 16. (ಎ) ಯೆಹೋವನ ಪುತ್ರನು “ಸ್ತ್ರೀಯಲ್ಲಿ ಹುಟ್ಟಿದವನಾಗಿ” ಬಂದದ್ದು ಹೇಗೆ? (ಬಿ) ತನ್ನ ಮಾನವ ಹೆತ್ತವರಿಂದ ಯೇಸು ಏನನ್ನು ಬಾಧ್ಯತೆಯಾಗಿ ಪಡೆದನು, ಮತ್ತು ವಾಗ್ದತ್ತ ಸಂತಾನವಾಗಿ ಅವನು ಯಾವಾಗ ಆಗಮಿಸಿದನು?

15 ಆ ಸಂತಾನವು ವಾಸ್ತವದಲ್ಲಿ ಗೋಚರವಾಗುವ ತನಕ ಈ ಪ್ರವಾದನೆಗಳು ಹೇಗೆ ನೆರವೇರಲಿದ್ದವೆಂಬುದು ನಿಗೂಢವಾಗಿಯೇ ಉಳಿಯಿತು. ಗಲಾತ್ಯ 4:​4, 5 ಹೇಳುವುದು: ‘ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು. ಆತನು ಸ್ತ್ರೀಯಲ್ಲಿ ಹುಟ್ಟಿದವನಾಗಿ ಬಂದನು.’ ಸಾ.ಶ.ಪೂ. 2ರಲ್ಲಿ, ಮರಿಯಳೆಂಬ ಹೆಸರಿನ ಯೆಹೂದಿ ಕನ್ಯೆಗೆ ಒಬ್ಬ ದೇವದೂತನು ಹೇಳಿದ್ದು: “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು [“ಯೆಹೋವನು,” NW] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. . . . ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು.”​—ಲೂಕ 1:31, 32, 35.

16 ತದನಂತರ ದೇವರು ತನ್ನ ಪುತ್ರನ ಜೀವವನ್ನು ಪರಲೋಕದಿಂದ ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿದನು. ಹೀಗೆ ಅವನು ಸ್ತ್ರೀಯಲ್ಲಿ ಹುಟ್ಟಿದವನಾಗಿ ಭೂಮಿಗೆ ಬಂದನು. ಮರಿಯಳು ಒಬ್ಬಾಕೆ ಅಪರಿಪೂರ್ಣ ಸ್ತ್ರೀಯಾಗಿದ್ದಳು. ಹಾಗಿದ್ದರೂ ಯೇಸು ಅವಳಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆಯಲಿಲ್ಲ, ಯಾಕಂದರೆ ಅವನು “ದೇವರ ಮಗ”ನಾಗಿದ್ದನು. ಅದೇ ಸಮಯದಲ್ಲಿ, ಯೇಸುವಿನ ಮಾನುಷ ಹೆತ್ತವರು ದಾವೀದನ ಸಂತತಿಯವರಾಗಿದ್ದರಿಂದ, ಅವನಿಗೆ ದಾವೀದನ ಉತ್ತರಾಧಿಕಾರಿಯಾಗಿರುವ ಸ್ವಾಭಾವಿಕ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಒದಗಿಸಿದರು. (ಅ. ಕೃತ್ಯಗಳು 13:22, 23) ಸಾ.ಶ. 29ರಲ್ಲಿ ಯೇಸುವಿಗೆ ದೀಕ್ಷಾಸ್ನಾನವಾದಾಗ, ಯೆಹೋವನು ಅವನನ್ನು ಪವಿತ್ರಾತ್ಮದಿಂದ ಅಭಿಷೇಕಿಸಿ, ಹೀಗಂದನು: “ಈತನು ಪ್ರಿಯನಾಗಿರುವ ನನ್ನ ಮಗನು.” (ಮತ್ತಾಯ 3:16, 17) ಹೇಗೂ ಕೊನೆಗೆ ‘ಸಂತತಿಯ’ ಅಥವಾ ಸಂತಾನದ ಆಗಮನವಾಯಿತು! (ಗಲಾತ್ಯ 3:16) ಪವಿತ್ರ ರಹಸ್ಯದ ಕುರಿತು ಹೆಚ್ಚನ್ನು ತಿಳಿಸುವ ಸಮಯವು ಅದಾಗಿತ್ತು.​—2 ತಿಮೊಥೆಯ 1:10.

17. ಆದಿಕಾಂಡ 3:15 ರ ಅರ್ಥದ ಮೇಲೆ ಹೇಗೆ ಬೆಳಕನ್ನು ಚೆಲ್ಲಲಾಯಿತು?

17ಆದಿಕಾಂಡ 3:15 ರ ಸರ್ಪವು ಸೈತಾನನೆಂದೂ, ಸರ್ಪದ ಸಂತಾನವು ಸೈತಾನನ ಹಿಂಬಾಲಕರೆಂದೂ ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಗುರುತಿಸಿ ಹೇಳಿದನು. (ಮತ್ತಾಯ 23:33; ಯೋಹಾನ 8:44) ಇವರೆಲ್ಲರು ಕಟ್ಟಕಡೆಗೆ ಹೇಗೆ ಜಜ್ಜಲ್ಪಟ್ಟು ಶಾಶ್ವತವಾಗಿ ಇಲ್ಲದೆ ಹೋಗುವರೆಂದೂ ಅನಂತರ ಪ್ರಕಟಿಸಲಾಯಿತು. (ಪ್ರಕಟನೆ 20:1-3, 10, 15) ಮತ್ತು ಆ ಸ್ತ್ರೀಯು, “ಮೇಲಣ ಯೆರೂಸಲೇಮ್‌,” ಅಂದರೆ ಆತ್ಮಜೀವಿಗಳಿಂದ ಕೂಡಿರುವ ಯೆಹೋವನ ಸ್ವರ್ಗೀಯ ಪತ್ನಿಯಂಥ ಸಂಸ್ಥೆಯೆಂದು ಗುರುತಿಸಲಾಯಿತು. *​—ಗಲಾತ್ಯ 4:26; ಪ್ರಕಟನೆ 12:1-6.

ಹೊಸ ಒಡಂಬಡಿಕೆ

18. ‘ಹೊಸ ಒಡಂಬಡಿಕೆಯ’ ಉದ್ದೇಶವೇನು?

18 ಪ್ರಾಯಶಃ ಎಲ್ಲದ್ದರಲ್ಲಿ ಅತ್ಯಂತ ಗಮನಾರ್ಹವಾದ ಪ್ರಕಟನೆಯು, ಯೇಸು ತನ್ನ ಮರಣಕ್ಕೆ ಮುಂಚಿನ ರಾತ್ರಿಯಂದು ತನ್ನ ನಂಬಿಗಸ್ತ ಶಿಷ್ಯರಿಗೆ “ಹೊಸ ಒಡಂಬಡಿಕೆ”ಯ ಕುರಿತಾಗಿ ಹೇಳಿದಾಗ ಮಾಡಲ್ಪಟ್ಟಿತು. (ಲೂಕ 22:20) ಅದಕ್ಕೆ ಹಿಂದಿನ ಮೋಶೆಯ ನಿಯಮದೊಡಂಬಡಿಕೆಯಂತೆ, ಈ ಹೊಸ ಒಡಂಬಡಿಕೆಯೂ ಒಂದು “ಯಾಜಕರಾಜ್ಯ”ವನ್ನು ಉತ್ಪಾದಿಸಲಿತ್ತು. (ವಿಮೋಚನಕಾಂಡ 19:6; 1 ಪೇತ್ರ 2:9) ಈ ಒಡಂಬಡಿಕೆಯಾದರೊ ಒಂದು ಮಾಂಸಿಕ ಜನಾಂಗವನ್ನಲ್ಲ, ಬದಲಾಗಿ ಒಂದು ಆಧ್ಯಾತ್ಮಿಕ ಜನಾಂಗವನ್ನು ಉತ್ಪಾದಿಸಲಿತ್ತು. ಕ್ರಿಸ್ತನ ನಂಬಿಗಸ್ತ ಅಭಿಷಿಕ್ತ ಹಿಂಬಾಲಕರನ್ನು ಮಾತ್ರವೇ ಒಳಗೂಡಿರುವ ‘ದೇವರ ಇಸ್ರಾಯೇಲೇ’ ಆ ಜನಾಂಗ. (ಗಲಾತ್ಯ 6:16) ಹೊಸ ಒಡಂಬಡಿಕೆಯಲ್ಲಿ ಸಹಭಾಗಿಗಳಾಗಿರುವ ಇವರು ಮಾನವಜಾತಿಯನ್ನು ಆಶೀರ್ವದಿಸುವುದರಲ್ಲಿ ಕ್ರಿಸ್ತನೊಂದಿಗೆ ಪಾಲುಗಾರರಾಗುವರು!

19. (ಎ) “ಯಾಜಕರಾಜ್ಯ”ವನ್ನು ಉತ್ಪಾದಿಸುವುದರಲ್ಲಿ ಹೊಸ ಒಡಂಬಡಿಕೆಯು ಏಕೆ ಯಶಸ್ವಿಯಾಗುತ್ತದೆ? (ಬಿ) ಅಭಿಷಿಕ್ತ ಕ್ರೈಸ್ತರನ್ನು “ನೂತನಸೃಷ್ಟಿ” ಎಂದು ಏಕೆ ಕರೆಯಲಾಗುತ್ತದೆ, ಮತ್ತು ಕ್ರಿಸ್ತನೊಂದಿಗೆ ಪರಲೋಕದಲ್ಲಿ ಎಷ್ಟು ಮಂದಿ ಸೇವೆಮಾಡುವರು?

19 ಆದರೆ ಮಾನವಕುಲವನ್ನು ಆಶೀರ್ವದಿಸುವುದಕ್ಕಾಗಿ “ಯಾಜಕರಾಜ್ಯ”ವನ್ನು ಉತ್ಪಾದಿಸುವುದರಲ್ಲಿ ಹೊಸ ಒಡಂಬಡಿಕೆಯು ಏಕೆ ಯಶಸ್ವಿಯಾಗುತ್ತದೆ? ಏಕೆಂದರೆ ಕ್ರಿಸ್ತನ ಶಿಷ್ಯರನ್ನು, ಅವರು ಪಾಪಿಗಳೆಂದು ಖಂಡಿಸುವ ಬದಲಿಗೆ, ಅವನ ಯಜ್ಞದ ಮೂಲಕವಾಗಿ ಅವರ ಪಾಪಗಳ ಕ್ಷಮೆಯನ್ನು ಅದು ಸಾಧ್ಯಗೊಳಿಸುತ್ತದೆ. (ಯೆರೆಮೀಯ 31:31-34) ಯೆಹೋವನ ಮುಂದೆ ನೀತಿವಂತರೆಂಬ ನಿಲುವನ್ನು ಅವರು ಪಡೆದಾಗ, ಆತನು ಅವರನ್ನು ತನ್ನ ಸ್ವರ್ಗೀಯ ಕುಟುಂಬದೊಳಗೆ ಸೇರಿಸಿಕೊಂಡು ಪವಿತ್ರಾತ್ಮದಿಂದ ಅಭಿಷೇಕಿಸುತ್ತಾನೆ. (ರೋಮಾಪುರ 8:15-17; 2 ಕೊರಿಂಥ 1:21) ಹೀಗೆ ಅವರು, “ಒಂದು ಜೀವಂತ ನಿರೀಕ್ಷೆಗೆ ಹೊಸ ಜನ್ಮವನ್ನು” ಅನುಭವಿಸುತ್ತಾರೆ, ಮತ್ತು ಇದು “ಪರಲೋಕದಲ್ಲಿ ಕಾದಿರಿಸಲ್ಪಟ್ಟಿದೆ.” (1 ಪೇತ್ರ 1:3, 4, NW) ಅಂಥ ಒಂದು ಉನ್ನತ ಅಂತಸ್ತು ಮಾನವರಿಗೆ ತೀರ ಹೊಸತಾಗಿರುವುದರಿಂದ, ಆ ಆತ್ಮಜನಿತ ಅಭಿಷಿಕ್ತ ಕ್ರೈಸ್ತರನ್ನು “ನೂತನಸೃಷ್ಟಿ” ಎಂದು ಕರೆಯಲಾಗುತ್ತದೆ. (2 ಕೊರಿಂಥ 5:17) ಈ 1,44,000 ಮಂದಿ ಆತ್ಮಾಭಿಷಿಕ್ತರು ಕಟ್ಟಕಡೆಗೆ ಭೂಮಿಯಲ್ಲಿರುವ ವಿಮೋಚಿತ ಮಾನವಕುಲದ ಮೇಲೆ ಪರಲೋಕದಿಂದ ಆಳುವುದರಲ್ಲಿ ಭಾಗವಹಿಸುವರು ಎಂದು ಬೈಬಲ್‌ ಪ್ರಕಟಪಡಿಸುತ್ತದೆ.​—ಪ್ರಕಟನೆ 5:9, 10; 14:1-4.

20. (ಎ) ಸಾ.ಶ. 36ರಲ್ಲಿ ಪವಿತ್ರ ರಹಸ್ಯದ ಕುರಿತಾಗಿ ಯಾವ ಪ್ರಕಟನೆಯು ಮಾಡಲ್ಪಟ್ಟಿತು? (ಬಿ) ಅಬ್ರಹಾಮನಿಗೆ ವಾಗ್ದಾನಮಾಡಲ್ಪಟ್ಟ ಆಶೀರ್ವಾದಗಳನ್ನು ಯಾರೆಲ್ಲಾ ಅನುಭವಿಸುವರು?

20 ಯೇಸುವಿನೊಂದಿಗೆ ಈ ಅಭಿಷಿಕ್ತ ಜನರು “ಅಬ್ರಹಾಮನ ಸಂತತಿ”ಯಾಗಿ ಪರಿಣಮಿಸುತ್ತಾರೆ. * (ಗಲಾತ್ಯ 3:29) ಮೊದಲಾಗಿ ಆರಿಸಿಕೊಳ್ಳಲ್ಪಟ್ಟವರು ಮಾಂಸಿಕ ಯೆಹೂದ್ಯರಾಗಿದ್ದರು, ಆದರೆ ಸಾ.ಶ. 36ರಲ್ಲಿ, ಪವಿತ್ರ ರಹಸ್ಯದ ಇನ್ನೊಂದು ಮುಖಮುದ್ರೆಯು ಪ್ರಕಟಿಸಲ್ಪಟ್ಟಿತು. ಅದೇನಂದರೆ, ಅನ್ಯಜನರು ಅಥವಾ ಯೆಹೂದ್ಯೇತರರೂ ಆ ಸ್ವರ್ಗೀಯ ನಿರೀಕ್ಷೆಯಲ್ಲಿ ಪಾಲುಗಾರರಾಗಲಿದ್ದರು. (ರೋಮಾಪುರ 9:6-8; 11:25, 26; ಎಫೆಸ 3:5, 6) ಅಬ್ರಹಾಮನಿಗೆ ವಾಗ್ದಾನಿಸಲ್ಪಟ್ಟ ಆಶೀರ್ವಾದಗಳನ್ನು ಅಭಿಷಿಕ್ತ ಕ್ರೈಸ್ತರು ಮಾತ್ರವೇ ಅನುಭವಿಸಲಿದ್ದರೋ? ಇಲ್ಲ, ಯಾಕಂದರೆ ಯೇಸುವಿನ ಯಜ್ಞವು ಇಡೀ ಲೋಕಕ್ಕೆ ಪ್ರಯೋಜನವನ್ನು ತರುತ್ತದೆ. (1 ಯೋಹಾನ 2:2) ಒಂದು ಅಸಂಖ್ಯಾತ “ಮಹಾ ಸಮೂಹವು” ಸೈತಾನನ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವದೆಂದು ಕಾಲಾನಂತರ ಯೆಹೋವನು ಪ್ರಕಟಪಡಿಸಿದನು. (ಪ್ರಕಟನೆ 7:9, 14) ಪರದೈಸಿನ ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ, ಸತ್ತವರಾದ ಕೋಟ್ಯಂತರ ಜನರೂ ಪುನರುತ್ಥಾನವನ್ನು ಪಡೆಯಲಿರುವರು!​—ಲೂಕ 23:43; ಯೋಹಾನ 5:28, 29; ಪ್ರಕಟನೆ 20:11-15; 21:3, 4.

ದೇವರ ವಿವೇಕ ಮತ್ತು ಪವಿತ್ರ ರಹಸ್ಯ

21, 22. ಯಾವ ರೀತಿಯಲ್ಲಿ ಯೆಹೋವನ ಪವಿತ್ರ ರಹಸ್ಯವು ಆತನ ವಿವೇಕವನ್ನು ಪ್ರದರ್ಶಿಸುತ್ತದೆ?

21 ಈ ಪವಿತ್ರ ರಹಸ್ಯವು “ದೇವರ ನಾನಾ ವಿಧವಾದ ವಿವೇಕದ” ಆಶ್ಚರ್ಯಚಕಿತಗೊಳಿಸುವ ಪ್ರದರ್ಶನವಾಗಿದೆ. (ಎಫೆಸ 3:8-10, NW) ಈ ರಹಸ್ಯವನ್ನು ಸೂತ್ರೀಕರಿಸಿ ಅನಂತರ ಅಷ್ಟು ಹಂತಹಂತವಾಗಿ ಪ್ರಕಟಪಡಿಸಿದರಲ್ಲಿ ಎಂಥ ವಿವೇಕವನ್ನು ಯೆಹೋವನು ತೋರಿಸಿದನು! ಆತನು ವಿವೇಕದಿಂದ ಮಾನವರ ಇತಿಮಿತಿಗಳನ್ನು ಪರಿಗಣನೆಗೆ ತಂದುಕೊಂಡು, ಅವರು ತಮ್ಮ ಹೃದಯದ ನಿಜಸ್ಥಿತಿಯನ್ನು ತೋರಿಸುವಂತೆ ಬಿಟ್ಟುಕೊಟ್ಟನು.​—ಕೀರ್ತನೆ 103:14.

22 ಯೇಸುವನ್ನು ಅರಸನಾಗಿ ಆರಿಸಿಕೊಂಡದ್ದರಲ್ಲಿಯೂ ಯೆಹೋವನು ತನ್ನ ಸರಿಸಾಟಿಯಿಲ್ಲದ ವಿವೇಕವನ್ನು ತೋರಿಸಿಕೊಟ್ಟನು. ವಿಶ್ವದಲ್ಲಿರುವ ಬೇರೆ ಯಾವುದೇ ಸೃಷ್ಟಿಜೀವಿಗಿಂತ ಯೆಹೋವನ ಕುಮಾರನು ಅತ್ಯಂತ ಹೆಚ್ಚು ಭರವಸಯೋಗ್ಯನು. ರಕ್ತಮಾಂಸವುಳ್ಳ ಮನುಷ್ಯನಾಗಿ ಜೀವಿಸಿದ್ದುದರಲ್ಲಿ, ಯೇಸು ಅನೇಕ ರೀತಿಯ ಸಂಕಷ್ಟಗಳನ್ನು ಅನುಭವಿಸಿದನು. ಮನುಷ್ಯರ ಸಮಸ್ಯೆಗಳನ್ನು ಅವನು ಚೆನ್ನಾಗಿ ಬಲ್ಲವನಾಗಿದ್ದಾನೆ. (ಇಬ್ರಿಯ 5:7-9) ಯೇಸುವಿನ ಜೊತೆ ಆಡಳಿತಗಾರರ ಕುರಿತೇನು? ಶತಮಾನಗಳಲ್ಲೆಲ್ಲ ಸಕಲ ಜಾತಿ, ಕುಲ, ಭಾಷೆ, ಮತ್ತು ಹಿನ್ನೆಲೆಗಳ ಪುರುಷರೂ ಸ್ತ್ರೀಯರೂ ಅಭಿಷೇಕಿಸಲ್ಪಟ್ಟಿದ್ದಾರೆ. ಅವರ ನಡುವೆ ಇರುವವರು, ಎದುರಿಸಿರದ ಮತ್ತು ಜಯಿಸಿರದ ಒಂದೇ ಒಂದು ಸಮಸ್ಯೆಯೂ ಇಲ್ಲ. (ಎಫೆಸ 4:22-24) ಈ ಕರುಣಾಭರಿತ ರಾಜಯಾಜಕರ ಆಳಿಕೆಯ ಕೆಳಗೆ ಜೀವಿಸುವುದು ಅದೆಷ್ಟು ಹರ್ಷಕರವಾಗಿರುವುದು!

23. ಯೆಹೋವನ ಪವಿತ್ರ ರಹಸ್ಯದ ಸಂಬಂಧದಲ್ಲಿ ಕ್ರೈಸ್ತರಿಗೆ ಯಾವ ವಿಶೇಷ ಸುಯೋಗವಿದೆ?

23 ಅಪೊಸ್ತಲ ಪೌಲನು ಬರೆದದ್ದು: “ಹಿಂದಿನ ವಿಷಯಗಳ ವ್ಯವಸ್ಥೆಗಳಿಂದಲೂ ಗತಿಸಿರುವ ತಲೆಮಾರುಗಳಿಂದಲೂ ಮರೆಯಾಗಿರಿಸಲ್ಪಟ್ಟಿದ್ದ ಆ ಪವಿತ್ರ ರಹಸ್ಯವು . . . ದೇವಜನರಿಗೆ ಪ್ರಕಟವಾಗಿದೆ.” (ಕೊಲೊಸ್ಸೆ 1:​26, NW) ಹೌದು, ಯೆಹೋವನ ಅಭಿಷಿಕ್ತ ಪವಿತ್ರ ಜನರಿಗೆ ಈ ಪವಿತ್ರ ರಹಸ್ಯದ ಕುರಿತು ಬಹಳಷ್ಟು ತಿಳಿದುಬಂದಿದೆ, ಮತ್ತು ಅವರು ಆ ಜ್ಞಾನವನ್ನು ಲಕ್ಷಾಂತರ ಜನರಿಗೆ ಹಂಚಿದ್ದಾರೆ. ಇದು ನಮಗೆಲ್ಲರಿಗೆ ಎಂಥ ವಿಶೇಷ ಸೌಭಾಗ್ಯವಾಗಿದೆ! ಯೆಹೋವನು ನಮಗೆ “ಆತನ ಚಿತ್ತದ ಪವಿತ್ರ ರಹಸ್ಯವನ್ನು ತಿಳಿಯಪಡಿಸಿದ್ದಾನೆ.” (ಎಫೆಸ 1:​9, NW) ಈ ಅದ್ಭುತವಾದ ರಹಸ್ಯವನ್ನು ನಾವು ಇತರರೊಂದಿಗೆ ಹಂಚುತ್ತಾ, ಅವರು ಸಹ ಯೆಹೋವ ದೇವರ ಈ ಅಳೆಯಲಾಗದಂಥ ವಿವೇಕವನ್ನು ಇಣಿಕಿ ನೋಡುವಂತೆ ಸಹಾಯಮಾಡೋಣ!

^ ಪ್ಯಾರ. 17 “ದೇವಭಕ್ತಿಯ . . . ಪವಿತ್ರ ರಹಸ್ಯವು” ಸಹ ಯೇಸುವಿನಲ್ಲೇ ಪ್ರಕಟವಾಯಿತು. (1 ತಿಮೊಥೆಯ 3:​16, NW) ಯೆಹೋವನಿಗೆ ಪರಿಪೂರ್ಣ ಸಮಗ್ರತೆಯನ್ನು ಯಾರಾದರೂ ತೋರಿಸಸಾಧ್ಯವಿತ್ತೊ ಇಲ್ಲವೊ ಎಂಬುದು ಬಹಳ ಕಾಲದಿಂದ ಒಂದು ರಹಸ್ಯವಾಗಿ, ಗುಟ್ಟಾಗಿ ಉಳಿದಿತ್ತು. ಯೇಸು ಅದರ ಉತ್ತರವನ್ನು ಪ್ರಕಟಪಡಿಸಿದನು. ಸೈತಾನನು ಅವನ ಮೇಲೆ ತಂದ ಪ್ರತಿಯೊಂದು ಪರೀಕ್ಷೆಯ ಕೆಳಗೆ ಯೇಸು ಸಮಗ್ರತೆಯನ್ನು ಕಾಪಾಡಿಕೊಂಡನು.​—ಮತ್ತಾಯ 4:1-11; 27:26-50.

^ ಪ್ಯಾರ. 20 ಅದೇ ಗುಂಪಿನೊಂದಿಗೆ ಯೇಸು ಒಂದು “ರಾಜ್ಯಕ್ಕಾಗಿ . . . ಒಡಂಬಡಿಕೆ”ಯನ್ನೂ ಮಾಡಿಕೊಂಡನು. (ಲೂಕ 22:29, 30, NW) ಕಾರ್ಯತಃ, ಯೇಸು ಈ “ಚಿಕ್ಕಹಿಂಡಿ”ನೊಂದಿಗೆ ಕರಾರುಮಾಡಿಕೊಂಡದ್ದು ಅವರು ತನ್ನೊಂದಿಗೆ ಅಬ್ರಹಾಮನ ಸಂತಾನದ ದ್ವಿತೀಯ ಭಾಗವಾಗಿ ಪರಲೋಕದಿಂದ ಆಳುವಂತೆಯೇ.​—ಲೂಕ 12:32.