ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 20

‘ವಿವೇಕವುಳ್ಳ ಹೃದಯವುಳ್ಳವನು’​—ಆದರೂ ದೀನನು

‘ವಿವೇಕವುಳ್ಳ ಹೃದಯವುಳ್ಳವನು’​—ಆದರೂ ದೀನನು

1-3. ಯೆಹೋವನು ದೀನನಾಗಿದ್ದಾನೆಂಬ ನಿಶ್ಚಯತೆ ನಮಗಿರಬಲ್ಲದೇಕೆ?

ತನ್ನ ಚಿಕ್ಕ ಮಗುವಿಗೆ ಮಹತ್ವದ ಪಾಠವನ್ನು ಕಲಿಸಲು ತಂದೆಯು ಬಯಸುತ್ತಾನೆ. ಅದು ಮಗುವಿನ ಹೃದಯವನ್ನು ತಲಪಬೇಕೆಂಬ ತವಕ ಅವನಲ್ಲಿ. ಯಾವ ವಿಧಾನವನ್ನು ಅವನು ಉಪಯೋಗಿಸಬೇಕು? ಅವನು ಹೆದರಿಸುವಂಥ ರೀತಿಯಲ್ಲಿ ಮಗುವಿನ ಎದುರು ಕಂಬದಂತೆ ನೆಟ್ಟಗೆ ನಿಂತುಕೊಂಡು ಕಟುವಾದ ಮಾತುಗಳನ್ನು ಉಪಯೋಗಿಸಬೇಕೊ? ಇಲ್ಲವೆ ಮಗುವಿನ ಬಳಿ ಬಾಗಿ ಸೌಮ್ಯವಾದ, ಹಿಡಿಸುವಂಥ ರೀತಿಯಲ್ಲಿ ಮಾತಾಡಬೇಕೊ? ವಿವೇಕಿಯಾದ, ದೀನನಾದ ಒಬ್ಬ ತಂದೆಯು ಖಂಡಿತವಾಗಿಯೂ ಸೌಮ್ಯವಾದ ವಿಧಾನವನ್ನು ಉಪಯೋಗಿಸುವನು.

2 ಯೆಹೋವನು ಯಾವ ರೀತಿಯ ತಂದೆಯಾಗಿದ್ದಾನೆ​—ಗರ್ವಿಷ್ಠನೋ ದೀನನೊ? ಕಠೋರನೋ ಅಥವಾ ಸೌಮ್ಯಭಾವದವನೊ? ಯೆಹೋವನು ಸರ್ವಜ್ಞಾನಿಯೂ ಸರ್ವವಿವೇಕಿಯೂ ಆದ ದೇವರು. ಆದರೂ ಜ್ಞಾನ ಮತ್ತು ಬುದ್ಧಿವಂತಿಕೆಯು ಜನರನ್ನು ಯಾವಾಗಲೂ ದೀನರನ್ನಾಗಿ ಮಾಡುವುದಿಲ್ಲ ಎಂಬುದನ್ನು ನೀವು ಗಮನಿಸಿದ್ದೀರೊ? ಬೈಬಲನ್ನುವಂತೆ, “ಜ್ಞಾನವು ಉಬ್ಬಿಸುತ್ತದೆ.” (1 ಕೊರಿಂಥ 3:19; 8:1) ಆದರೆ ‘ಹೃದಯದಲ್ಲಿ ವಿವೇಕಿ’ಯಾದ ಯೆಹೋವನು ದೀನನೂ ಆಗಿದ್ದಾನೆ. (ಯೋಬ 9:4) ಆತನ ಸ್ಥಾನವು ಕೆಳಮಟ್ಟದ್ದು ಇಲ್ಲವೆ ಆತನು ಘನಗಾಂಭೀರ್ಯದ ಕೊರತೆಯುಳ್ಳವನು ಎಂದಿದರ ಅರ್ಥವಲ್ಲವಾದರೂ, ಆತನು ಸೊಕ್ಕಿಲ್ಲದವನು. ಅದು ಹೇಗೆ?

3 ಯೆಹೋವನು ಪರಿಶುದ್ಧನು. ಆದುದರಿಂದ ಹೊಲೆಮಾಡುವಂಥ ಗುಣವಾದ ಸೊಕ್ಕು ಆತನಲ್ಲಿಲ್ಲ. (ಮಾರ್ಕ 7:20-22) ಅದಲ್ಲದೆ, ಪ್ರವಾದಿಯಾದ ಯೆರೆಮೀಯನು ಯೆಹೋವನಿಗೆ ಏನಂದನೋ ಅದನ್ನು ಗಮನಿಸಿರಿ: “ನಿನ್ನ ಆತ್ಮವು [ಯೆಹೋವನು ತಾನೇ] ಇವುಗಳನ್ನು ಜ್ಞಾಪಿಸಿಕೊಳ್ಳುತ್ತಾ ನನ್ನ ಮೇಲೆ ತಗ್ಗಿಬಾಗುವುದು.” * (ಪ್ರಲಾಪಗಳು 3:​20, NW) ಊಹಿಸಿರಿ! ಇಡೀ ವಿಶ್ವದ ಪರಮಾಧಿಕಾರಿ ಕರ್ತನಾದ ಯೆಹೋವನು ಆ ಅಪರಿಪೂರ್ಣ ಮಾನವನಿಗೆ ಅನುಗ್ರಹದಾಯಕ ಗಮನಕೊಡಲಿಕ್ಕೋಸ್ಕರ ‘ತಗ್ಗಿಬಾಗಲು,’ ಅಂದರೆ ಯೆರೆಮೀಯನ ಮಟ್ಟಕ್ಕೆ ಕೆಳಗಿಳಿಯಲು ಸಿದ್ಧನಾಗಿದ್ದನು. (ಕೀರ್ತನೆ 113:7) ಹೌದು, ಯೆಹೋವನು ದೀನನು. ಆದರೆ ದೇವರು ತೋರಿಸುವ ದೀನತೆಯಲ್ಲಿ ಏನೆಲ್ಲಾ ಒಳಗೂಡಿರುತ್ತದೆ? ಅದು ವಿವೇಕಕ್ಕೆ ಹೇಗೆ ಸಂಬಂಧಿಸುತ್ತದೆ? ಮತ್ತು ನಮಗೆ ಅದು ಯಾಕೆ ಪ್ರಾಮುಖ್ಯವಾಗಿದೆ?

ಯೆಹೋವನು ದೀನನಾಗಿರುವ ವಿಧ

4, 5. (ಎ) ದೀನತೆಯೆಂದರೇನು, ಅದು ಹೇಗೆ ತೋರಿಸಲ್ಪಡುತ್ತದೆ, ಮತ್ತು ಅದನ್ನೆಂದೂ ಬಲಹೀನತೆ ಅಥವಾ ಪುಕ್ಕಲುತನವೆಂದು ತಪ್ಪುತಿಳಿಯಬಾರದೇಕೆ? (ಬಿ) ದಾವೀದನೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೆಹೋವನು ದೀನತೆಯನ್ನು ತೋರಿಸಿದ್ದು ಹೇಗೆ, ಮತ್ತು ಯೆಹೋವನ ದೀನತೆಯು ನಮಗೆಷ್ಟು ಪ್ರಾಮುಖ್ಯವಾಗಿದೆ?

4 ದೀನತೆಯು, ಅಹಂಕಾರ ಮತ್ತು ಹೆಮ್ಮೆ ಇಲ್ಲದಿರುವುದನ್ನು ಸೂಚಿಸುತ್ತದೆ. ಹೃದಯದಾಳದ ಗುಣವಾದ ದೀನತೆಯು ಸೌಮ್ಯತೆ, ತಾಳ್ಮೆ, ಮತ್ತು ನ್ಯಾಯಸಮ್ಮತತೆಯಂಥ ಸ್ವಭಾವಲಕ್ಷಣಗಳಲ್ಲಿ ತೋರಿಬರುತ್ತದೆ. (ಗಲಾತ್ಯ 5:22, 23) ಈ ದೈವಿಕ ಗುಣಗಳನ್ನು ಬಲಹೀನತೆ ಅಥವಾ ಪುಕ್ಕಲುತನವೆಂದು ನಾವೆಂದೂ ತಪ್ಪುತಿಳಿಯಬಾರದು. ಅವು ಯೆಹೋವನ ಧರ್ಮಕ್ರೋಧ ಅಥವಾ ಆತನ ನಾಶಕಾರಕ ಶಕ್ತಿಯ ಉಪಯೋಗದೊಂದಿಗೆ ಅಸಂಗತವಾಗಿಲ್ಲ. ಬದಲಿಗೆ ತನ್ನ ದೀನತೆ ಮತ್ತು ಸೌಮ್ಯತೆಯ ಮೂಲಕ, ಯೆಹೋವನು ತನ್ನ ಅಪಾರವಾದ ಬಲವನ್ನು, ತನ್ನನ್ನು ಪರಿಪೂರ್ಣವಾಗಿ ನಿಯಂತ್ರಿಸಿಕೊಳ್ಳುವ ಶಕ್ತಿಯನ್ನು ಪ್ರದರ್ಶಿಸುತ್ತಾನೆ. (ಯೆಶಾಯ 42:14) ದೈನ್ಯವು ವಿವೇಕದೊಂದಿಗೆ ಹೇಗೆ ಸಂಬಂಧಿಸಿದೆ? ಬೈಬಲಿನ ಒಂದು ಪರಾಮರ್ಶೆ ಗ್ರಂಥವು ಹೇಳುವುದು: “ದೀನತೆಯನ್ನು ಅಂತಿಮವಾಗಿ . . . ನಿಸ್ವಾರ್ಥತೆಯಾಗಿ ಅರ್ಥನಿರೂಪಿಸಲಾಗುತ್ತದೆ, ಮತ್ತು ಸಕಲ ವಿವೇಕಕ್ಕೂ ಅದು ಮೂಲಾಧಾರವಾಗಿದೆ.” ಹಾಗಾದರೆ ದೀನತೆಯಿಲ್ಲದೆ ನಿಜ ವಿವೇಕವು ಇರಲಾರದೆಂಬುದು ಸ್ಪಷ್ಪ. ಆದರೆ ಯೆಹೋವನ ದೈನ್ಯವು ನಮಗೆ ಪ್ರಯೋಜನಕಾರಿ ಆಗಿರುವುದಾದರೂ ಹೇಗೆ?

ಒಬ್ಬ ವಿವೇಕಿಯಾದ ತಂದೆಯು ತನ್ನ ಮಕ್ಕಳೊಂದಿಗೆ ದೀನಭಾವದಿಂದ ಮತ್ತು ಸೌಮ್ಯತೆಯಿಂದ ವ್ಯವಹರಿಸುತ್ತಾನೆ

5 ಅರಸ ದಾವೀದನು ಯೆಹೋವನಿಗೆ ಹಾಡಿದ್ದು: “ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಬಲಗೈ ನನಗೆ ಆಧಾರ; ನಿನ್ನ ಕೃಪಾಕಟಾಕ್ಷವು [“ದೀನತೆಯು,” NW] ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ.” (ಕೀರ್ತನೆ 18:​35) ಈ ಬರಿಯ ಅಪರಿಪೂರ್ಣ ಮನುಷ್ಯಮಾತ್ರದವನನ್ನು ದಿನದಿನವೂ ರಕ್ಷಿಸುತ್ತಾ ಬಲಪಡಿಸುತ್ತಾ ಅವನ ಪರವಾಗಿ ಕಾರ್ಯನಡಿಸಲು ಯೆಹೋವನು ಸಾಕ್ಷಾತ್‌ ತನ್ನನ್ನು ತಗ್ಗಿಸಿಕೊಂಡನು. ದಾವೀದನು, ತನಗೆ ರಕ್ಷಣೆಯು ದೊರಕಬೇಕಾದರೆ​—ಅಥವಾ ಕಟ್ಟಕಡೆಗೆ ಅರಸನಾಗಿ ಒಂದಿಷ್ಟು ದೊಡ್ಡಸ್ತಿಕೆಯನ್ನು ಗಳಿಸಲಿದ್ದರೂ​—ಅದು ಯೆಹೋವನು ಈ ರೀತಿ ತನ್ನನ್ನು ತಗ್ಗಿಸಿಕೊಳ್ಳಲು ಸಿದ್ಧನಾಗಿದ್ದ ಕಾರಣ ಮಾತ್ರದಿಂದಲೇ ಆಗುವುದೆಂದು ಅರಿತುಕೊಂಡನು. ಒಂದುವೇಳೆ ಯೆಹೋವನು ದೈನ್ಯವನ್ನು ತೋರಿಸದೆ, ಪ್ರೀತಿಯುಳ್ಳ ಸೌಮ್ಯ ತಂದೆಯೋಪಾದಿ ನಮ್ಮೊಂದಿಗೆ ವ್ಯವಹರಿಸಲು ತನ್ನನ್ನು ತಗ್ಗಿಸಿಕೊಳ್ಳದೆ ಇರುತ್ತಿದ್ದಲ್ಲಿ, ನಮ್ಮಲ್ಲಿ ಯಾವನಿಗೆ ರಕ್ಷಣೆಯ ನಿರೀಕ್ಷೆ ಇರುತ್ತಿತ್ತು?

6, 7. (ಎ) ಬೈಬಲು ಯೆಹೋವನನ್ನು ಮಿತವರ್ತಿಯಾಗಿ ಎಂದೂ ಸೂಚಿಸುವುದಿಲ್ಲವೇಕೆ? (ಬಿ) ಸೌಮ್ಯತೆ ಮತ್ತು ವಿವೇಕದ ಮಧ್ಯೆ ಯಾವ ಸಂಬಂಧವಿದೆ, ಮತ್ತು ಈ ಕುರಿತು ಯಾರು ನಿರ್ಧಾರಕ ಮಾದರಿಯನ್ನಿಡುತ್ತಾನೆ?

6 ದೀನತೆ ಮತ್ತು ಮಿತವರ್ತನೆಯ ಮಧ್ಯೆ ಒಂದು ಭಿನ್ನತೆಯಿದೆ ಎಂಬುದನ್ನು ಗಮನಿಸುವುದು ಗಮನಾರ್ಹವು. ಮಿತವರ್ತನೆಯು ನಂಬಿಗಸ್ತ ಮಾನವರು ಬೆಳೆಸಿಕೊಳ್ಳಬಹುದಾದ ಸೊಗಸಾದ ಗುಣವಾಗಿದೆ. ದೀನತೆಯಂತೆ ಇದು ಸಹ ವಿವೇಕದೊಂದಿಗೆ ಜೊತೆಗೂಡಿರುತ್ತದೆ. ದೃಷ್ಟಾಂತಕ್ಕಾಗಿ, ಜ್ಞಾನೋಕ್ತಿ 11:2 (NW) ಹೇಳುವುದು: “ಮಿತವರ್ತಿಗಳಲ್ಲಿದೆ ವಿವೇಕ.” ಆದರೂ ಯೆಹೋವನನ್ನು ಮಿತವರ್ತಿ ಎಂದು ಬೈಬಲು ಎಲ್ಲಿಯೂ ಹೇಳುವುದಿಲ್ಲ. ಯಾಕೆ ಹೇಳಿಲ್ಲ? ಯಾಕಂದರೆ, ಶಾಸ್ತ್ರದಲ್ಲಿ ಉಪಯೋಗಿಸಲ್ಪಟ್ಟಿರುವ ಮಿತವರ್ತನೆ ಎಂಬ ಶಬ್ದವು, ಒಬ್ಬನಿಗೆ ತನ್ನ ಸ್ವಂತ ಇತಿಮಿತಿಗಳ ಬಗ್ಗೆ ಯೋಗ್ಯವಾದ ಅರಿವು ಇರುವುದನ್ನು ಸೂಚಿಸುತ್ತದೆ. ಆದರೆ ಸರ್ವಶಕ್ತನಿಗೆ, ಆತನ ಸ್ವಂತ ನೀತಿಯ ಮಟ್ಟಗಳ ಕಾರಣ ಆತನು ತನ್ನ ಮೇಲೆಯೇ ಹೊರಿಸಿಕೊಳ್ಳುವ ಇತಿಮಿತಿಗಳ ಹೊರತು ಯಾವ ಇತಿಮಿತಿಗಳೂ ಇಲ್ಲ. (ಮಾರ್ಕ 10:27; ತೀತ 1:1ಬಿ) ಅದಲ್ಲದೆ ಮಹೋನ್ನತನೋಪಾದಿ ಆತನು ಯಾರಿಗೂ ಅಧೀನತೆಯಲ್ಲಿ ಇಲ್ಲ. ಆದ್ದರಿಂದ ಮಿತವರ್ತನೆ ಎಂಬ ವಿಚಾರವು ಯೆಹೋವನಿಗೆ ಅನ್ವಯಿಸುವುದೇ ಇಲ್ಲ.

7 ಆದರೂ ಯೆಹೋವನು ದೀನನೂ ಸೌಮ್ಯನೂ ಆಗಿದ್ದಾನೆ. ಸೌಮ್ಯತೆಯು ನಿಜ ವಿವೇಕಕ್ಕೆ ಅತ್ಯಾವಶ್ಯಕವೆಂದು ಆತನು ತನ್ನ ಸೇವಕರಿಗೆ ಕಲಿಸುತ್ತಾನೆ. “ವಿವೇಕದ ಲಕ್ಷಣವಾಗಿರುವ ಸೌಮ್ಯಗುಣ”ದ ಕುರಿತಾಗಿ ಆತನ ವಾಕ್ಯವು ಹೇಳುತ್ತದೆ. * (ಯಾಕೋಬ 3:​13, NW) ಇದರ ಸಂಬಂಧದಲ್ಲಿ ಯೆಹೋವನ ಮಾದರಿಯನ್ನು ಪರಿಗಣಿಸಿರಿ.

ಯೆಹೋವನು ದೀನತೆಯಿಂದ ಜವಾಬ್ದಾರಿಯನ್ನು ವಹಿಸಿಕೊಡುತ್ತಾನೆ ಮತ್ತು ಕಿವಿಗೊಡುತ್ತಾನೆ

8-10. (ಎ) ಜವಾಬ್ದಾರಿಯನ್ನು ವಹಿಸಿಕೊಡಲು ಮತ್ತು ಕಿವಿಗೊಡಲು ಯೆಹೋವನು ಸಿದ್ಧಮನಸ್ಸನ್ನು ತೋರಿಸುವುದು ಯಾಕೆ ಗಮನಾರ್ಹವಾಗಿದೆ? (ಬಿ) ಸರ್ವಶಕ್ತನಾದ ದೇವರು ತನ್ನ ದೂತರೊಂದಿಗೆ ಹೇಗೆ ದೈನ್ಯದಿಂದ ವ್ಯವಹರಿಸಿದ್ದಾನೆ?

8 ಜವಾಬ್ದಾರಿಯನ್ನು ವಹಿಸಿಕೊಡಲು ಮತ್ತು ಕಿವಿಗೊಡಲು ಯೆಹೋವನಿಗಿರುವ ಸಿದ್ಧಮನಸ್ಸು ಆತನ ದೀನತೆಯ ಬಗ್ಗೆ ಮನಮುಟ್ಟುವಂಥ ಪುರಾವೆಯನ್ನು ಕೊಡುತ್ತದೆ. ಆತನು ನಿಜವಾಗಿಯೂ ಕಿವಿಗೊಡುತ್ತಾನೆಂಬ ನಿಜತ್ವವು ತಾನೇ ಅಚ್ಚರಿಯ ಸಂಗತಿ. ಯೆಹೋವನಿಗೆ ಸಹಾಯ ಅಥವಾ ಸಲಹೆಯ ಯಾವ ಅಗತ್ಯವೂ ಇರುವುದಿಲ್ಲ. (ಯೆಶಾಯ 40:13, 14; ರೋಮಾಪುರ 11:34, 35) ಆದರೂ ಯೆಹೋವನು ಈ ರೀತಿಗಳಲ್ಲೂ ತಗ್ಗಿನಡಿಯುತ್ತಾನೆಂದು ಬೈಬಲು ಪದೇ ಪದೇ ತೋರಿಸುತ್ತದೆ.

9 ಉದಾಹರಣೆಗಾಗಿ, ಅಬ್ರಹಾಮನ ಜೀವಿತದಲ್ಲಿ ನಡೆದ ಒಂದು ಅಸಾಧಾರಣ ಘಟನೆಯನ್ನು ಪರಿಗಣನೆಗೆ ತನ್ನಿರಿ. ಅಬ್ರಹಾಮನಲ್ಲಿಗೆ ಮೂವರು ಸಂದರ್ಶಕರು ಬಂದಿದ್ದರು. ಅವರಲ್ಲೊಬ್ಬನನ್ನು ಅವನು “ಯೆಹೋವ” (NW) ಎಂದು ಸಂಬೋಧಿಸಿದನು. ಭೇಟಿಯಿತ್ತವರು ನಿಜವಾಗಿಯೂ ದೇವದೂತರಾಗಿದ್ದರು, ಆದರೆ ಅವರಲ್ಲೊಬ್ಬನು ಯೆಹೋವನ ಹೆಸರಿನಲ್ಲಿ ಬಂದಿದ್ದನು ಮತ್ತು ಆತನ ಹೆಸರಿನಲ್ಲಿ ಕಾರ್ಯನಡಿಸುತ್ತಿದ್ದನು. ಆದುದರಿಂದ ಆ ದೇವದೂತನು ಮಾತನಾಡಿದಾಗ ಮತ್ತು ಕ್ರಿಯೆಗೈದಾಗ, ಅದು ಕಾರ್ಯತಃ ಯೆಹೋವನು ತಾನೇ ಮಾತಾಡಿ, ಕ್ರಿಯೆಗೈಯುತ್ತಿದ್ದನೋ ಎಂಬಂತೆ ಇತ್ತು. ಈ ಮೂಲಕ, ಯೆಹೋವನು ಅಬ್ರಹಾಮನಿಗೆ ತಾನು “ಸೊದೋಮ್‌ ಗೊಮೋರಗಳ ವಿಷಯವಾಗಿ ಎಷ್ಟೋ ದೊಡ್ಡ ಮೊರೆ”ಯನ್ನು ಕೇಳಿಸಿಕೊಂಡಿದ್ದನೆಂದು ಹೇಳಿದನು. ಯೆಹೋವನಂದದ್ದು: “ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ.” (ಆದಿಕಾಂಡ 18:3, 20, 21) ಸರ್ವಶಕ್ತನು ವ್ಯಕ್ತಿಶಃ ‘ಇಳಿದು ಹೋಗು’ವನು ಎಂಬುದು ಯೆಹೋವನ ಸಂದೇಶದ ಅರ್ಥವಾಗಿರಲಿಲ್ಲ ನಿಶ್ಚಯ. ಬದಲಾಗಿ ತನ್ನನ್ನು ಪ್ರತಿನಿಧಿಸಲು ಆತನು ಪುನಃ ದೇವದೂತರನ್ನು ಕಳುಹಿಸಿಕೊಟ್ಟನು. (ಆದಿಕಾಂಡ 19:1) ಏಕೆ? ಎಲ್ಲವನ್ನು ಕಾಣಶಕ್ತನಾಗಿರುವ ಯೆಹೋವನು ತಾನಾಗಿಯೇ ಆ ಪ್ರದೇಶದ ನಿಜ ಪರಿಸ್ಥಿತಿಯನ್ನು ‘ತಿಳುಕೊಳ್ಳಲು’ ಸಾಧ್ಯವಿರಲಿಲ್ಲವೊ? ಸಾಧ್ಯವಿತ್ತು ನಿಶ್ಚಯ. ಆದರೆ ಹಾಗೆ ಮಾಡುವ ಬದಲು, ಯೆಹೋವನು ದೈನ್ಯದಿಂದ ಆ ದೇವದೂತರಿಗೆ ಪರಿಸ್ಥಿತಿಯ ತನಿಖೆನಡೆಸುವ ಮತ್ತು ಸೋದೋಮಿನಲ್ಲಿದ್ದ ಲೋಟನನ್ನೂ ಅವನ ಕುಟುಂಬವನ್ನೂ ಭೇಟಿಮಾಡುವ ನೇಮಕವನ್ನು ಕೊಟ್ಟನು.

10 ಅಷ್ಟುಮಾತ್ರವಲ್ಲದೆ, ಇತರರು ಮಾತಾಡುವಾಗ ಯೆಹೋವನು ಆಲಿಸುತ್ತಾನೆಂಬುದೂ ನಿಜ. ದುಷ್ಟ ಅರಸನಾಗಿದ್ದ ಆಹಾಬನನ್ನು ಪತನಗೊಳಿಸುವ ಕುರಿತು ವಿವಿಧ ವಿಧಾನಗಳನ್ನು ಸೂಚಿಸಲು ಆತನು ಒಮ್ಮೆ ತನ್ನ ದೂತರ ಸಲಹೆ ಕೇಳಿದ್ದನು. ಯೆಹೋವನಿಗೆ ಅಂಥ ಸಹಾಯದ ಅಗತ್ಯವಿರಲಿಲ್ಲ. ಆದರೂ, ದೇವದೂತನೊಬ್ಬನ ಸಲಹೆಯನ್ನು ಆತನು ಸ್ವೀಕರಿಸಿದನು ಮತ್ತು ಹಾಗೆಯೇ ಮಾಡುವಂತೆ ಅವನಿಗೆ ಆಜ್ಞಾಪಿಸಿದನು. (1 ಅರಸುಗಳು 22:19-22) ಇದು ದೈನ್ಯವಲ್ಲದೆ ಮತ್ತೇನು?

11, 12. ಅಬ್ರಹಾಮನಿಗೆ ಯೆಹೋವನ ದೈನ್ಯದ ಪರಿಚಯವಾದದ್ದು ಹೇಗೆ?

11 ತಮ್ಮ ಚಿಂತೆಗಳನ್ನು ವ್ಯಕ್ತಪಡಿಸಲು ಅಪೇಕ್ಷಿಸುವ ಅಪರಿಪೂರ್ಣ ಮಾನವರಿಗೂ ಕಿವಿಗೊಡಲು ಯೆಹೋವನು ಸಿದ್ಧನಾಗಿರುತ್ತಾನೆ. ಉದಾಹರಣೆಗೆ, ಸೊದೋಮ್‌ ಗೊಮೋರಗಳನ್ನು ನಾಶಮಾಡುವ ತನ್ನ ಉದ್ದೇಶವನ್ನು ಯೆಹೋವನು ಅಬ್ರಹಾಮನಿಗೆ ಮೊದಲಾಗಿ ತಿಳಿಸಿದಾಗ, ಆ ನಂಬಿಗಸ್ತ ಪುರುಷನು ತಬ್ಬಿಬ್ಬುಗೊಂಡನು. “ಆ ರೀತಿಯಾಗಿ . . . ನಿನ್ನಿಂದ ಎಂದಿಗೂ ಆಗಬಾರದು” ಎಂದು ಹೇಳುತ್ತಾ, ಅಬ್ರಹಾಮನು ಕೂಡಿಸಿದ್ದು: “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವವನಲ್ಲವೇ”? ಒಂದುವೇಳೆ ಅಲ್ಲಿ 50 ಮಂದಿ ನೀತಿವಂತರು ಇರುವಲ್ಲಿ ಯೆಹೋವನು ಆ ಊರುಗಳನ್ನು ನಾಶಮಾಡದೆ ಉಳಿಸುವನೋ ಎಂದು ಅವನು ಕೇಳಿದನು. ತಾನು ಹಾಗೆಯೇ ಮಾಡುವೆನೆಂದು ಯೆಹೋವನು ಆಶ್ವಾಸನೆಯನ್ನಿತ್ತನು. ಆ ಸಂಖ್ಯೆಯನ್ನು 45ಕ್ಕೆ ಮತ್ತು ನಂತರ 40ಕ್ಕೆ ಇಳಿಸುತ್ತಾ ಅಬ್ರಹಾಮನು ಪುನಃ ಕೇಳಿಕೊಳ್ಳುವುದನ್ನು ಮುಂದುವರಿಸಿದನು. ಯೆಹೋವನು ಆಶ್ವಾಸನೆಗಳನ್ನಿತ್ತಾಗ್ಯೂ, ಆ ಸಂಖ್ಯೆಯು ಹತ್ತರಷ್ಟು ಕಡಿಮೆಯಾಗುವ ತನಕವೂ ಅಬ್ರಹಾಮನು ಎಡೆಬಿಡದೆ ಬಿನ್ನೈಸಿದನು. ಯೆಹೋವನು ಎಷ್ಟು ಕರುಣಾಳುವೆಂಬುದನ್ನು ಪ್ರಾಯಶಃ ಅಬ್ರಹಾಮನು ಇನ್ನೂ ಪೂರ್ಣವಾಗಿ ಗ್ರಹಿಸಿಕೊಂಡಿರಲಿಲ್ಲ. ಆ ವಿನಂತಿಗಳನ್ನು ಅಬ್ರಹಾಮನು ಯಾತಕ್ಕಾಗಿಯೇ ಮಾಡಿದ್ದಿರಲಿ, ಯೆಹೋವನು ಮಾತ್ರ ತಾಳ್ಮೆಯಿಂದ ಮತ್ತು ದೈನ್ಯದಿಂದ ತನ್ನ ಸ್ನೇಹಿತನೂ ಸೇವಕನೂ ಆಗಿದ್ದ ಅಬ್ರಹಾಮನು ಅವನ ಚಿಂತೆಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸುವಂತೆ ಬಿಟ್ಟುಕೊಟ್ಟನು.​—ಆದಿಕಾಂಡ 18:23-33.

12 ತೀಕ್ಷ್ಣಬುದ್ಧಿಯುಳ್ಳ, ವಿದ್ಯಾವಂತ ಮನುಷ್ಯರಲ್ಲಿ ಎಷ್ಟು ಮಂದಿ ತಮಗಿಂತ ತೀರ ಅಲ್ಪಬುದ್ಧಿಯ ವ್ಯಕ್ತಿಯೊಬ್ಬನಿಗೆ ಅಷ್ಟು ತಾಳ್ಮೆಯಿಂದ ಕಿವಿಗೊಟ್ಟಾರು? * ನಮ್ಮ ದೇವರಿಗಿರುವಂಥ ದೈನ್ಯವನ್ನು ನೋಡಿ! ಆ ಮಾತುಕತೆಯ ಸಮಯದಲ್ಲೇ, ಯೆಹೋವನು “ಕೋಪಗೊಳ್ಳುವುದರಲ್ಲಿ ನಿಧಾನವಾಗಿದ್ದಾನೆ” ಎಂಬುದನ್ನೂ ಅಬ್ರಹಾಮನು ಕಂಡುಕೊಂಡನು. (ವಿಮೋಚನಕಾಂಡ 34:​6, ಪರಿಶುದ್ಧ ಬೈಬಲ್‌) ಆ ಮಹೋನ್ನತ ದೇವರ ಕೃತ್ಯಗಳ ಕುರಿತು ಪ್ರಶ್ನಿಸಲು ತನಗೆ ಯಾವ ಹಕ್ಕೂ ಇಲ್ಲವೆಂಬುದನ್ನು ಪ್ರಾಯಶಃ ಗ್ರಹಿಸಿಕೊಳ್ಳುತ್ತಾ, ಅಬ್ರಹಾಮನು ದೇವರಿಗೆ ಕೋಪಗೊಳ್ಳದಂತೆ ಎರಡು ಬಾರಿ ಬೇಡಿಕೊಂಡನು. (ಆದಿಕಾಂಡ 18:30, 32) ಯೆಹೋವನು ಕೋಪಗೊಳ್ಳಲಿಲ್ಲ ನಿಶ್ಚಯ. ಆತನಲ್ಲಿ ನಿಜವಾಗಿಯೂ “ವಿವೇಕದ ಲಕ್ಷಣವಾಗಿರುವ ಸೌಮ್ಯತೆ” ಇದೆ.

ಯೆಹೋವನು ನ್ಯಾಯಸಮ್ಮತನು

13. ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ “ನ್ಯಾಯಸಮ್ಮತತೆ” ಎಂಬ ಶಬ್ದದ ಅರ್ಥವೇನು, ಮತ್ತು ಈ ಪದವು ಯೆಹೋವನನ್ನು ತಕ್ಕದಾಗಿಯೇ ವರ್ಣಿಸುತ್ತದೆಯೇಕೆ?

13 ಯೆಹೋವನ ದೀನತೆಯು ಮತ್ತೊಂದು ಸುಂದರ ಗುಣವಾದ ನ್ಯಾಯಸಮ್ಮತತೆಯಲ್ಲೂ ವ್ಯಕ್ತವಾಗುತ್ತದೆ. ಅಪರಿಪೂರ್ಣ ಮಾನವರಲ್ಲಿ ಈ ಗುಣದ ಕೊರತೆಯಿರುವುದು ವಿಷಾದಕರವೇ ಸರಿ. ಯೆಹೋವನು ತನ್ನ ಬುದ್ಧಿಶಕ್ತಿಯ ಸೃಷ್ಟಿಜೀವಿಗಳಿಗೆ ಕಿವಿಗೊಡಲು ಸಿದ್ಧನಾಗಿರುತ್ತಾನೆ ಮಾತ್ರವಲ್ಲ, ನೀತಿ ತತ್ತ್ವಗಳೊಂದಿಗೆ ಸಂಘರ್ಷವಿರದಾಗ ಮಣಿಯಲು ಸಹ ಸಿದ್ಧನಾಗಿದ್ದಾನೆ. ಬೈಬಲಿನಲ್ಲಿ ಉಪಯೋಗಿಸಲ್ಪಟ್ಟಿರುವ ಪ್ರಕಾರ, “ನ್ಯಾಯಸಮ್ಮತತೆ” ಎಂಬ ಪದವು ಅಕ್ಷರಶಃ “ಮಣಿಯುವುದು” ಎಂಬರ್ಥ ಕೊಡುತ್ತದೆ. ಈ ಗುಣವು ಸಹ ದೈವಿಕ ವಿವೇಕದ ಚೊಕ್ಕಮುದ್ರೆಯಾಗಿದೆ. ಯಾಕೋಬ 3:​17 (NW) ಹೇಳುವುದು: “ಮೇಲಣಿಂದ ಬರುವ ವಿವೇಕವು . . . ನ್ಯಾಯಸಮ್ಮತವುಳ್ಳದ್ದು.” ಸರ್ವವಿವೇಕಿಯಾದ ಯೆಹೋವನು ಯಾವ ಅರ್ಥದಲ್ಲಿ ನ್ಯಾಯಸಮ್ಮತನಾಗಿರುತ್ತಾನೆ? ಒಂದು ವಿಧ, ಆತನು ಪರಿಸ್ಥಿತಿಗನುಸಾರ ಹೊಂದಿಕೊಳ್ಳಲು ಸಿದ್ಧನಿರುತ್ತಾನೆ. ತನ್ನ ಉದ್ದೇಶಗಳನ್ನು ನೆರವೇರಿಸಲಿಕ್ಕಾಗಿ ಏನಾಗಬೇಕೋ ಹಾಗೆ ತನ್ನನ್ನು ಯೆಹೋವನು ಆಗಿಸಿಕೊಳ್ಳುತ್ತಾನೆಂದು ಆತನ ಹೆಸರು ತಾನೇ ನಮಗೆ ಕಲಿಸುತ್ತದೆಂಬುದನ್ನು ನೆನಪಿನಲ್ಲಿಡಿರಿ. (ವಿಮೋಚನಕಾಂಡ 3:​14, NW) ಇದು ಹೊಂದಿಸಿಕೊಳ್ಳುವ ಮತ್ತು ನ್ಯಾಯಸಮ್ಮತತೆಯ ಆತ್ಮವನ್ನು ಸೂಚಿಸುವುದಿಲ್ಲವೇ?

14, 15. ಯೆಹೋವನ ದಿವ್ಯ ರಥದ ಕುರಿತ ಯೆಹೆಜ್ಕೇಲನ ದರ್ಶನವು ಯೆಹೋವನ ಸ್ವರ್ಗೀಯ ಸಂಸ್ಥೆಯ ಕುರಿತು ನಮಗೇನನ್ನು ಕಲಿಸುತ್ತದೆ, ಮತ್ತು ಅದು ಲೌಕಿಕ ಸಂಸ್ಥೆಗಳಿಗಿಂತ ಹೇಗೆ ಭಿನ್ನವಾಗಿದೆ?

14 ಯೆಹೋವನ ಹೊಂದಿಸಿಕೊಳ್ಳುವ ಗುಣವನ್ನು ನಾವು ಗ್ರಹಿಸಲು ಸಹಾಯವಾಗುವಂಥ ಒಂದು ಗಮನಾರ್ಹ ಭಾಗವು ಬೈಬಲಿನಲ್ಲಿದೆ. ಆತ್ಮಜೀವಿಗಳುಳ್ಳ ಯೆಹೋವನ ಸ್ವರ್ಗೀಯ ಸಂಸ್ಥೆಯ ಒಂದು ದರ್ಶನವನ್ನು ಪ್ರವಾದಿಯಾದ ಯೆಹೆಜ್ಕೇಲನಿಗೆ ಕೊಡಲಾಯಿತು. ಭಯಚಕಿತಗೊಳಿಸುವ ಬೃಹದಾಕಾರದ ಒಂದು ಭವ್ಯ ರಥವನ್ನು, ಯಾವಾಗಲೂ ಆತನ ನಿಯಂತ್ರಣದ ಕೆಳಗಿರುವ ಯೆಹೋವನ ಸ್ವಂತ “ವಾಹನ”ವನ್ನು ಅವನು ಕಂಡನು. ಅದು ಚಲಿಸಿದಂಥ ರೀತಿಯು ಅತ್ಯಂತ ಕುತೂಹಲಕಾರಿಯಾಗಿತ್ತು. ದೈತ್ಯಾಕಾರದ ಚಕ್ರಗಳು ನಾಲ್ಕೂ ಕಡೆಗಳಲ್ಲಿ ಚಲಿಸಶಕ್ತವಾಗಿದ್ದು, ಕಣ್ಣುಗಳಿಂದ ತುಂಬಿಕೊಂಡಿದ್ದವು ಮತ್ತು ಹೀಗೆ ಎಲ್ಲಾ ಕಡೆ ನೋಡಶಕ್ತವಾಗಿದ್ದು, ನಿಲ್ಲದೆ ಅಥವಾ ತಿರುಗದೆ ಯಾವ ಪಕ್ಕಕ್ಕಾದರೂ ಹೊರಳಶಕ್ತವಾಗಿದ್ದವು. ಮತ್ತು ಈ ಭವ್ಯವಾದ ರಥಕ್ಕೆ, ನಿರ್ವಹಿಸಲು ಕಷ್ಟಕರವಾಗಿರುವ ಮಾನವ ನಿರ್ಮಿತ ವಾಹನದಂತೆ ನಿಧಾನವಾಗಿ ಸಾಗುತ್ತಾ ಮುಂದರಿಯಬೇಕೆಂದಿರಲಿಲ್ಲ. ಅದು ಮಿಂಚಿನ ವೇಗದಲ್ಲಿ ಚಲಿಸಶಕ್ತವಾಗಿದ್ದು, ಸಮಕೋನ ತಿರುವುಗಳನ್ನೂ ಮಾಡಸಾಧ್ಯವಿತ್ತು! (ಯೆಹೆಜ್ಕೇಲ 1:1, 14-28) ಹೌದು, ಯೆಹೋವನ ಸಂಸ್ಥೆಯು, ಅದರ ಸರ್ವಶಕ್ತನಾದ ಪರಮಾಧಿಕಾರಿ ನಿಯಂತ್ರಕನಂತೆ, ಸದಾ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಮತ್ತು ಪೂರೈಸಲ್ಪಡಬೇಕಾದ ಅಗತ್ಯಗಳಿಗೆ ತಕ್ಕಂತೆ ಪ್ರತಿವರ್ತಿಸುತ್ತಾ, ಅತ್ಯುಚ್ಚವಾದ ರೀತಿಯಲ್ಲಿ ಹೊಂದಾಣಿಕೆಮಾಡುವಂಥದ್ದಾಗಿದೆ.

15 ಅಂಥ ಪರಿಪೂರ್ಣ ಹೊಂದಿಸಿಕೊಳ್ಳುವಿಕೆಯನ್ನು ಮನುಷ್ಯರು ಕೇವಲ ಅನುಕರಿಸಲು ಪ್ರಯತ್ನಿಸಬಲ್ಲರು ಅಷ್ಟೆ. ಬಹಳಷ್ಟು ಸಾರಿ ಮನುಷ್ಯರು ಮತ್ತು ಅವರ ಸಂಸ್ಥೆಗಳು ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಬದಲಿಗೆ ಹೆಚ್ಚು ಕಟ್ಟುನಿಟ್ಟನ್ನೂ, ಮಣಿಯುವುದರ ಬದಲಿಗೆ ಹೆಚ್ಚು ಅನಮ್ಯತೆಯನ್ನೂ ತೋರಿಸುತ್ತವೆ. ದೃಷ್ಟಾಂತಕ್ಕಾಗಿ: ಒಂದು ಅತಿದೊಡ್ಡ ತೈಲವಾಹಕ ಹಡಗು ಅಥವಾ ಸರಕು ರೈಲುಗಾಡಿಯ ಗಾತ್ರ ಮತ್ತು ಸಾಮರ್ಥ್ಯವು ಮನಸ್ಸಿನ ಮೇಲೆ ತುಂಬ ಪರಿಣಾಮಬೀರಬಹುದು. ಆದರೆ ಪರಿಸ್ಥಿತಿಯಲ್ಲಿ ಥಟ್ಟನೆ ಯಾವುದೇ ಬದಲಾವಣೆಗಳಾಗುವಲ್ಲಿ ಇವುಗಳು ಪ್ರತಿವರ್ತನೆ ತೋರಿಸಬಲ್ಲವೊ? ಸರಕು ರೈಲುಗಾಡಿಯ ಎದುರು ಕಂಬಿಯ ಮೇಲೆ ಅಡ್ಡವಾಗಿ ಏನಾದರೂ ಬೀಳುವಲ್ಲಿ, ದಿಕ್ಕು ಬದಲಾಯಿಸುವುದಂತೂ ಅಸಾಧ್ಯ; ಥಟ್ಟನೆ ನಿಲ್ಲಿಸುವುದು ಸಹ ಸುಲಭವಲ್ಲ. ಓಡುತ್ತಿರುವ ಅತಿಭಾರವುಳ್ಳ ಸರಕು ರೈಲುಗಾಡಿಗೆ ಬ್ರೇಕ್‌ ಹಾಕಿದರೂ ಸಹ ಅದು ಹೆಚ್ಚುಕಡಿಮೆ ಎರಡು ಕಿಲೊಮೀಟರ್‌ ದೂರ ಹೋಗಿ, ನಂತರವೇ ನಿಲ್ಲಬಹುದು! ಒಂದು ಅತಿದೊಡ್ಡ ತೈಲವಾಹಕ ಹಡಗಿನ ಸ್ಥಿತಿಯೂ ಹಾಗೆಯೇ ಇರುತ್ತದೆ. ಇಂಜಿನ್‌ ಆಫ್‌ ಮಾಡಿದ ನಂತರ ಸುಮಾರು 8 ಕಿಲೊಮೀಟರ್‌ ದೂರ ಸಾಗಿದ ಬಳಿಕವೇ ಅದು ನಿಂತೀತು. ಇಂಜಿನ್‌ಗಳನ್ನು ರಿವರ್ಸ್‌ ಹಾಕಿದರೂ ಸಹ ಆ ಹಡಗು ನಿಧಾನವಾಗಿ 3 ಕಿಲೊಮೀಟರ್‌ ಮುಂದೆ ಸಾಗಿಯೇ ನಿಲ್ಲಬಹುದು! ಅತಿ ಕಟ್ಟುನಿಟ್ಟಿನಿಂದ ಮತ್ತು ನ್ಯಾಯಸಮ್ಮತತೆಯಿಲ್ಲದೆ ವರ್ತಿಸುವ ಮಾನವ ಸಂಘಟನೆಗಳ ವಿಷಯದಲ್ಲೂ ಹಾಗೆಯೇ. ಬಿಗುಮಾನದ ಕಾರಣ, ಅನೇಕಾವರ್ತಿ ಜನರು ಬದಲಾಗುವ ಪರಿಸ್ಥಿತಿಗಳಿಗೆ ಮತ್ತು ಅಗತ್ಯಗಳಿಗೆ ಹೊಂದಿಕೊಳ್ಳಲು ನಿರಾಕರಿಸುತ್ತಾರೆ. ಅಂಥ ಗಡುಸುತನವು ಕೆಲವೊಂದು ವೃತ್ತಿಸಂಸ್ಥೆಗಳನ್ನು ದಿವಾಳಿಮಾಡಿದೆ ಮತ್ತು ಸರಕಾರಗಳನ್ನೂ ಉರುಳಿಸಿಹಾಕಿದೆ. (ಜ್ಞಾನೋಕ್ತಿ 16:18) ಯೆಹೋವನಾಗಲಿ ಆತನ ಸಂಸ್ಥೆಯಾಗಲಿ ಅಂಥ ಮಾನವ ಸಂಸ್ಥೆಗಳ ಹಾಗಿಲ್ಲ ಎಂಬುದಕ್ಕಾಗಿ ನಾವೆಷ್ಟು ಸಂತೋಷಪಡಸಾಧ್ಯವಿದೆ!

ಯೆಹೋವನು ನ್ಯಾಯಸಮ್ಮತತೆಯನ್ನು ತೋರಿಸುವ ವಿಧ

16. ಸೊದೋಮ್‌ ಗೋಮೋರಗಳ ನಾಶನಕ್ಕೆ ಮುಂಚೆ ಲೋಟನೊಂದಿಗೆ ಮಾಡಿದ ವ್ಯವಹಾರದಲ್ಲಿ ಯೆಹೋವನು ನ್ಯಾಯಸಮ್ಮತತೆಯನ್ನು ತೋರಿಸಿದ್ದು ಹೇಗೆ?

16 ಸೊದೋಮ್‌ ಗೊಮೋರಗಳ ನಾಶನವನ್ನು ಪುನಃ ಒಮ್ಮೆ ಪರಿಗಣಿಸಿರಿ. ಲೋಟ ಮತ್ತು ಅವನ ಕುಟುಂಬಕ್ಕೆ ಯೆಹೋವನ ದೂತನಿಂದ ಸ್ಪಷ್ಟವಾದ ಸೂಚನೆಗಳು ಕೊಡಲ್ಪಟ್ಟಿದ್ದವು: “ಬೆಟ್ಟದ ಸೀಮೆಗೆ ಓಡಿಹೋಗು.” ಆದರೂ ಇದು ಲೋಟನ ಮನಸ್ಸಿಗೆ ಹಿಡಿಸಲಿಲ್ಲ. “ಸ್ವಾಮೀ, ಅದು ನನ್ನಿಂದಾಗದು” ಎಂದು ಬೇಡಿಕೊಂಡನಾತ. ಬೆಟ್ಟದ ಸೀಮೆಗೆ ಓಡಿಹೋದಲ್ಲಿ ತನಗೆ ಸಾವು ನಿಶ್ಚಿತವೆಂದು ಭಾವಿಸಿದ ಲೋಟನು ಸಮೀಪದ ಚೋಗರ್‌ ಎಂಬ ಊರಿಗೆ ತಾನೂ ತನ್ನ ಕುಟುಂಬವೂ ಹೋಗುವಂತೆ ಅನುಮತಿಸಲು ಯಾಚಿಸಿದನು. ಈಗ ಯೆಹೋವನು ಆ ಊರನ್ನು ನಾಶಮಾಡಲು ನಿಶ್ಚೈಸಿದನೆಂಬುದನ್ನು ನೆನಪು ಮಾಡಿಕೊಳ್ಳಿ. ಅಷ್ಟಲ್ಲದೆ, ಲೋಟನ ಹೆದರಿಕೆಗೆ ಯಾವ ನಿಜವಾದ ಆಧಾರವೂ ಇರಲಿಲ್ಲ. ಆ ಬೆಟ್ಟಗಳಲ್ಲೂ ಯೆಹೋವನು ಲೋಟನನ್ನು ಜೀವಂತವಾಗಿ ಪಾರುಗೊಳಿಸಸಾಧ್ಯವಿತ್ತು ನಿಶ್ಚಯ! ಆದರೂ ಯೆಹೋವನು ಲೋಟನ ವಿನಂತಿಗಳಿಗೆ ಮಣಿದು, ಚೋಗರನ್ನು ನಾಶಮಾಡಲಿಲ್ಲ. “ಈ ವಿಷಯದಲ್ಲಿಯೂ ನಿನಗೆ ಅನುಗ್ರಹಮಾಡಿದ್ದೇನೆ, ನೋಡು” ಎಂದನು ದೇವದೂತನು ಲೋಟನಿಗೆ. (ಆದಿಕಾಂಡ 19:17-22) ಇದು ಯೆಹೋವನು ತೋರಿಸಿದ ನ್ಯಾಯಸಮ್ಮತತೆಯಾಗಿರಲಿಲ್ಲವೇ?

17, 18. ನಿನವೆಯ ಜನರೊಂದಿಗಿನ ವ್ಯವಹಾರದಲ್ಲಿ, ತಾನು ನ್ಯಾಯಸಮ್ಮತನೆಂದು ಯೆಹೋವನು ತೋರಿಸಿದ್ದು ಹೇಗೆ?

17 ಯೆಹೋವನು ಹೃತ್ಪೂರ್ವಕವಾದ ಪಶ್ಚಾತ್ತಾಪಕ್ಕೆ ಪ್ರತಿವರ್ತನೆ ತೋರಿಸುತ್ತಾ, ಯಾವುದು ಕರುಣಾಭರಿತವೂ ಯೋಗ್ಯವೂ ಆಗಿದೆಯೊ ಅದನ್ನೇ ಯಾವಾಗಲೂ ಮಾಡುತ್ತಾನೆ. ಹಿಂಸಾಚಾರ ಮತ್ತು ದುಷ್ಟತನದಿಂದ ತುಂಬಿದ್ದ ನಿನೆವೆ ಪಟ್ಟಣಕ್ಕೆ ಪ್ರವಾದಿಯಾದ ಯೋನನು ಕಳುಹಿಸಲ್ಪಟ್ಟಾಗ ಏನು ಸಂಭವಿಸಿತ್ತೆಂಬುದನ್ನು ಪರಿಗಣಿಸಿರಿ. ನಿನೆವೆಯ ಬೀದಿಗಳಲ್ಲಿ ನಡೆಯುತ್ತಾ ಯೋನನು ಘೋಷಿಸಿದ ಪ್ರೇರಿತ ಸಂದೇಶವು ತೀರ ಸರಳವಾಗಿತ್ತು: 40 ದಿನಗಳಲ್ಲಿ ಆ ಮಹಾ ಪಟ್ಟಣವು ನಾಶವಾಗಲಿತ್ತು. ಆದರೆ ಪರಿಸ್ಥಿತಿಗಳು ಬಹಳಷ್ಟು ಬದಲಾದವು. ಹೌದು, ನಿನೆವೆಯ ಜನರು ಪಶ್ಚಾತ್ತಾಪಪಟ್ಟರು!​—ಯೋನ, ಅಧ್ಯಾಯ 3.

18 ಪರಿಸ್ಥಿತಿಗಳಲ್ಲಾದ ಈ ಬದಲಾವಣೆಗೆ ಯೋನನು ಪ್ರತಿವರ್ತಿಸಿದ ರೀತಿಯೊಂದಿಗೆ ಯೆಹೋವನ ಪ್ರತಿವರ್ತನೆಯ ರೀತಿಯನ್ನು ಹೋಲಿಸುವುದು ಬೋಧಪ್ರದವಾಗಿರುತ್ತದೆ. ಈ ಸನ್ನಿವೇಶದಲ್ಲಿ ಯೆಹೋವನು ಪರಿಸ್ಥಿತಿಗೆ ತಕ್ಕಂತೆ ತನ್ನನ್ನು ಹೊಂದಿಸಿಕೊಂಡು, “ಯುದ್ಧಶೂರ”ನಾಗುವ ಬದಲಾಗಿ ಪಾಪಗಳನ್ನು ಕ್ಷಮಿಸುವವನಾಗಿ ತನ್ನನ್ನು ಮಾಡಿಕೊಂಡನು. * (ವಿಮೋಚನಕಾಂಡ 15:3) ಇನ್ನೊಂದು ಕಡೆ ಯೋನನಾದರೊ ಅನಮ್ಯನೂ, ಬಹಳ ಕಡಿಮೆ ಕರುಣೆಯುಳ್ಳವನೂ ಆಗಿ ತೋರಿಬಂದನು. ಯೆಹೋವನ ನ್ಯಾಯಸಮ್ಮತತೆಯನ್ನು ಪ್ರತಿಬಿಂಬಿಸುವ ಬದಲಿಗೆ ಅವನು ಬಹಳಮಟ್ಟಿಗೆ ಈ ಮುಂಚೆ ತಿಳಿಸಿದ ಆ ಸರಕು ರೈಲುಗಾಡಿಯಂತೆ ಅಥವಾ ಅತಿದೊಡ್ಡ ತೈಲವಾಹಕ ಹಡಗಿನಂತೆ ಪ್ರತಿಕ್ರಿಯೆ ತೋರಿಸಿದನೆನ್ನಬೇಕು. ನಾಶನವನ್ನು ಘೋಷಿಸಿದ್ದನಲ್ಲಾ, ಆದುದರಿಂದ ನಾಶನವೇ ಬರಬೇಕು! ಯೆಹೋವನಾದರೊ ತಾಳ್ಮೆಯಿಂದ, ತನ್ನ ತಾಳ್ಮೆಯಿಲ್ಲದ ಪ್ರವಾದಿಗೆ ನ್ಯಾಯಸಮ್ಮತತೆ ಮತ್ತು ಕರುಣೆಯಲ್ಲಿ ಒಂದು ಸ್ಮರಣೀಯ ಪಾಠವನ್ನು ಕಲಿಸಿಕೊಟ್ಟನು.​—ಯೋನ, ಅಧ್ಯಾಯ 4.

ಯೆಹೋವನು ನ್ಯಾಯಸಮ್ಮತನು ಮತ್ತು ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳಬಲ್ಲನು

19. (ಎ) ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೋ ಅದರಲ್ಲಿಯೂ ಆತನು ನ್ಯಾಯಸಮ್ಮತನೆಂಬ ನಿಶ್ಚಯತೆ ನಮಗಿರಬಲ್ಲದೇಕೆ? (ಬಿ) ಯೆಹೋವನು ‘ಒಳ್ಳೆಯವನೂ ನ್ಯಾಯಸಮ್ಮತನೂ’ ಆಗಿರುವ ಯಜಮಾನನು ಮಾತ್ರವಲ್ಲ ಅಗಾಧವಾದ ರೀತಿಯಲ್ಲಿ ದೀನತೆಯೂ ಉಳ್ಳವನೆಂದು ಜ್ಞಾನೋಕ್ತಿ 19:17 ಹೇಗೆ ತೋರಿಸುತ್ತದೆ?

19 ಕೊನೆಯದಾಗಿ, ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೋ ಅದರಲ್ಲಿಯೂ ಆತನು ನ್ಯಾಯಸಮ್ಮತನು. ಅರಸನಾದ ದಾವೀದನು ಹೇಳಿದ್ದು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:14) ನಮ್ಮ ಇತಿಮಿತಿಗಳನ್ನು ಮತ್ತು ಅಪರಿಪೂರ್ಣತೆಗಳನ್ನು ನಮಗಿಂತಲೂ ಹೆಚ್ಚು ಒಳ್ಳೆಯದಾಗಿ ಯೆಹೋವನು ಅರ್ಥಮಾಡಿಕೊಳ್ಳುತ್ತಾನೆ. ನಾವು ಮಾಡಸಾಧ್ಯವಿರುವುದಕ್ಕಿಂತ ಹೆಚ್ಚಿನದನ್ನು ಆತನು ನಮ್ಮಿಂದ ಎಂದೂ ಅಪೇಕ್ಷಿಸುವುದಿಲ್ಲ. “ಒಳ್ಳೆಯವರೂ ನ್ಯಾಯಸಮ್ಮತರೂ” ಆದ ಮಾನವ ಯಜಮಾನರನ್ನು, “ಮೆಚ್ಚಿಸಲು ಕಷ್ಟವಾಗುವ” ಯಜಮಾನರೊಂದಿಗೆ ಹೋಲಿಸಿ ಬೈಬಲು ವೈದೃಶ್ಯವನ್ನು ತೋರಿಸಿದೆ. (1 ಪೇತ್ರ 2:​18, NW) ಯೆಹೋವನಾದರೋ ಯಾವ ರೀತಿಯ ಯಜಮಾನನು? ಜ್ಞಾನೋಕ್ತಿ 19:17 ಏನನ್ನುತ್ತದೆಂಬುದನ್ನು ಗಮನಿಸಿರಿ: “ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು.” ಬಡವರ ಪರವಾಗಿ ಮಾಡಲ್ಪಡುವ ಪ್ರತಿಯೊಂದು ಉಪಕಾರದ ಕೃತ್ಯವನ್ನು ಒಳ್ಳೆಯವನೂ ನ್ಯಾಯಸಮ್ಮತನೂ ಆಗಿರುವ ಒಬ್ಬ ಯಜಮಾನನು ಮಾತ್ರವೇ ಗಮನಿಸುವನೆಂಬುದು ಸ್ಪಷ್ಟ. ಅದಲ್ಲದೆ, ಅಂಥ ಕರುಣಾಭರಿತ ಕೃತ್ಯಗಳನ್ನು ನಡೆಸುವ ಬರಿಯ ಮನುಷ್ಯಮಾತ್ರದವರಿಗೆ ತಾನು ಋಣಿಯಾಗಿದ್ದೇನೆಂದು ಇಡೀ ವಿಶ್ವದ ನಿರ್ಮಾಣಿಕನು ಎಣಿಸುತ್ತಾನೆಂದೂ ಈ ವಚನವು ತೋರಿಸುತ್ತದೆ! ಅತ್ಯಂತ ಅಗಾಧವಾದ ರೀತಿಯ ದೀನತೆಯು ಇದೇ ಅಲ್ಲವೇ?

20. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ ಮತ್ತು ಅವುಗಳಿಗೆ ಪ್ರತಿಕ್ರಿಯೆಯನ್ನೂ ತೋರಿಸುತ್ತಾನೆಂಬುದಕ್ಕೆ ಆಶ್ವಾಸನೆಯೇನಿದೆ?

20 ಇಂದು ತನ್ನ ಸೇವಕರೊಂದಿಗೆ ವ್ಯವಹರಿಸುವ ರೀತಿಯಲ್ಲೂ ಯೆಹೋವನು ಅಷ್ಟೇ ಸೌಮ್ಯನೂ ನ್ಯಾಯಸಮ್ಮತನೂ ಆಗಿರುತ್ತಾನೆ. ನಾವು ನಂಬಿಕೆಯಿಂದ ಪ್ರಾರ್ಥನೆ ಮಾಡುವಾಗ, ಆತನು ಕಿವಿಗೊಡುತ್ತಾನೆ. ಮತ್ತು ನಮ್ಮೊಂದಿಗೆ ಮಾತನಾಡಲು ಆತನು ಈಗ ದೇವದೂತ ಸಂದೇಶವಾಹಕರನ್ನು ಕಳುಹಿಸದಿದ್ದರೂ, ನಮ್ಮ ಪ್ರಾರ್ಥನೆಗಳಿಗೆ ಆತನು ಉತ್ತರ ಕೊಡುವುದಿಲ್ಲವೆಂಬ ತೀರ್ಮಾನಕ್ಕೆ ನಾವು ಬರಬಾರದು. ಅಪೊಸ್ತಲನಾದ ಪೌಲನು ಸೆರೆಯಿಂದ ತನ್ನ ಬಿಡುಗಡೆಗಾಗಿ “ಪ್ರಾರ್ಥಿಸಿರಿ” ಎಂದು ಜೊತೆ ವಿಶ್ವಾಸಿಗಳನ್ನು ಕೇಳಿಕೊಂಡಾಗ, ಹೀಗೆ ಕೂಡಿಸಿದ್ದನ್ನು ಜ್ಞಾಪಕಕ್ಕೆ ತನ್ನಿರಿ: “ನಿಮ್ಮ ಪ್ರಾರ್ಥನೆಗಳ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.” (ಇಬ್ರಿಯ 13:18, 19) ಹಾಗಾದರೆ ನಮ್ಮ ಪ್ರಾರ್ಥನೆಗಳು, ಅನ್ಯಥಾ ಆತನು ಮಾಡದೆ ಇರುತ್ತಿದ್ದ ವಿಷಯಗಳನ್ನು ಮಾಡುವಂತೆ ಯೆಹೋವನನ್ನು ವಾಸ್ತವದಲ್ಲಿ ಪ್ರೇರೇಪಿಸಬಹುದು!​—ಯಾಕೋಬ 5:16.

21. ಯೆಹೋವನ ದೈನ್ಯದಿಂದಾಗಿ ನಾವೆಂದೂ ಯಾವ ತೀರ್ಮಾನಕ್ಕೆ ಬರಬಾರದು, ಬದಲಿಗೆ ಆತನ ಕುರಿತಾಗಿ ನಾವೇನನ್ನು ಅಂಗೀಕರಿಸಬೇಕು?

21 ಯೆಹೋವನ ದೀನತೆಯ ಈ ವ್ಯಕ್ತಪಡಿಸುವಿಕೆಗಳು, ಅಂದರೆ ಸೌಮ್ಯತೆ, ಕಿವಿಗೊಡಲು ಆತನಿಗಿರುವ ಸಿದ್ಧಮನಸ್ಸು, ಆತನ ತಾಳ್ಮೆ, ನ್ಯಾಯಸಮ್ಮತತೆಯೇ ಮುಂತಾದ ಯಾವುದೇ ಗುಣಗಳು ಯೆಹೋವನು ತನ್ನ ನೀತಿಯ ತತ್ತ್ವಗಳನ್ನು ಹೊಂದಿಸಿಕೊಂಡು ರಾಜಿಮಾಡಿಕೊಳ್ಳುತ್ತಾನೆಂಬುದನ್ನು ಅರ್ಥೈಸುವುದಿಲ್ಲ ನಿಶ್ಚಯ. ಕ್ರೈಸ್ತಪ್ರಪಂಚದ ಪಾದ್ರಿಗಳು, ಯೆಹೋವನ ನೈತಿಕ ಮಟ್ಟಗಳ ತೀಕ್ಷ್ಣತೆಯನ್ನು ಕಡಿಮೆ ಮಾಡಿ, ತಮ್ಮ ಮಂದೆಗಳ ಕಿವಿಗಳನ್ನು ರಂಜಿಸುವಾಗ, ತಾವು ನ್ಯಾಯಸಮ್ಮತರಾಗಿದ್ದೇವೆಂದು ನೆನಸಬಹುದು. (2 ತಿಮೊಥೆಯ 4:3) ಆದರೆ ತಮ್ಮ ಅನುಕೂಲಕ್ಕಾಗಿ ರಾಜಿಮಾಡಿಕೊಳ್ಳುವ ಮಾನವ ಪ್ರವೃತ್ತಿಗೂ ದೈವಿಕ ನ್ಯಾಯಸಮ್ಮತತೆಗೂ ಯಾವ ಸಂಬಂಧವೂ ಇಲ್ಲ. ಯೆಹೋವನು ಪರಿಶುದ್ಧನು; ತನ್ನ ನೀತಿಯುತ ಮಟ್ಟಗಳನ್ನು ಅವನೆಂದೂ ಭ್ರಷ್ಟಗೊಳಿಸನು. (ಯಾಜಕಕಾಂಡ 11:44) ಹೀಗಿರಲಾಗಿ, ಯೆಹೋವನ ನ್ಯಾಯಸಮ್ಮತತೆಯನ್ನು​—ಅದೇನಾಗಿದೆಯೋ ಅದಕ್ಕಾಗಿ​—ಆತನ ದೀನತೆಯ ಪುರಾವೆಯಾಗಿರುವುದಕ್ಕಾಗಿ ಪ್ರೀತಿಸೋಣ. ವಿಶ್ವದಲ್ಲೆಲ್ಲಾ ಅತ್ಯಂತ ವಿವೇಕಿಯಾಗಿರುವ ಯೆಹೋವ ದೇವರು ಪರಮ ದೀನನೂ ಆಗಿದ್ದಾನೆಂಬುದರ ಕುರಿತು ನೆನಸುವಾಗ ನಿಮ್ಮ ಮನಸ್ಸು ನವಿರೇಳುವುದಿಲ್ಲವೇ? ಈ ಭಯಭಕ್ತಿಹುಟ್ಟಿಸುವ, ಆದರೂ ಸೌಮ್ಯನೂ, ತಾಳ್ಮೆಯುಳ್ಳವನೂ, ನ್ಯಾಯಸಮ್ಮತನೂ ಆಗಿರುವ ದೇವರ ಸಮೀಪಕ್ಕೆ ಬರುವುದು ಅದೆಷ್ಟು ಹರ್ಷದಾಯಕ!

^ ಪ್ಯಾರ. 3 ಪುರಾತನ ಲಿಪಿಕಾರರು ಅಥವಾ ಸೋಫೆರಿಮರು ಈ ವಚನವನ್ನು ಬದಲಾಯಿಸಿ, ತಗ್ಗಿಬಾಗುವವನು ಯೆಹೋವನಲ್ಲ, ಯೆರೆಮೀಯನೆಂಬ ಅರ್ಥದಲ್ಲಿ ಬರೆದಿದ್ದಾರೆ. ಅಂಥ ದೀನ ಕ್ರಿಯೆಯನ್ನು ದೇವರಿಗೆ ಅನ್ವಯಿಸುವುದು ಅಯೋಗ್ಯವೆಂಬುದಾಗಿ ಅವರು ನೆನಸಿದರೆಂದು ತೋರುತ್ತದೆ. ಪರಿಣಾಮವಾಗಿ ಅನೇಕ ಭಾಷಾಂತರಗಳು ಈ ಸುಂದರವಾದ ವಚನದ ನಿಜಾರ್ಥವನ್ನು ಕಳೆದುಕೊಂಡಿವೆ. ಆದರೂ ದ ನ್ಯೂ ಇಂಗ್ಲಿಷ್‌ ಬೈಬಲ್‌, ಯೆರೆಮೀಯನು ಯೆಹೋವನಿಗೆ ಅಂದದ್ದನ್ನು ನಿಷ್ಕೃಷ್ಟವಾಗಿ ಹೀಗೆ ಹೇಳಿದೆ: “ಜ್ಞಾಪಿಸಿಕೋ ಜ್ಞಾಪಿಸಿಕೊ, ಮತ್ತು ನನ್ನೆಡೆಗೆ ಬಗ್ಗು.”

^ ಪ್ಯಾರ. 7 ಬೇರೆ ಭಾಷಾಂತರಗಳು “ವಿವೇಕದಿಂದ ಬರುವ ದೀನತೆ” ಮತ್ತು “ವಿವೇಕದ ಗುರುತುಲಕ್ಷಣವಾಗಿರುವ ಮೃದುಸ್ವಭಾವ” ಎಂಬುದಾಗಿ ಹೇಳುತ್ತವೆ.

^ ಪ್ಯಾರ. 12 ಬೈಬಲು ತಾಳ್ಮೆಯನ್ನು ಗರ್ವದೊಂದಿಗೆ ವೈದೃಶ್ಯದಲ್ಲಿ ತೋರಿಸಿರುವುದು ಕುತೂಹಲಕರ. (ಪ್ರಸಂಗಿ 7:8) ಯೆಹೋವನ ತಾಳ್ಮೆಯು ಆತನ ದೀನತೆಯ ಬಗ್ಗೆ ಇನ್ನಷ್ಟು ಹೆಚ್ಚು ಪುರಾವೆಯನ್ನು ಕೊಡುತ್ತದೆ.​—2 ಪೇತ್ರ 3:9.

^ ಪ್ಯಾರ. 18 ಕೀರ್ತನೆ 86:5 ರಲ್ಲಿ (NW) ಯೆಹೋವನನ್ನು “ಒಳ್ಳೆಯವನೂ ಕ್ಷಮಿಸಲು ಸಿದ್ಧನೂ” ಎಂದು ಹೇಳಲಾಗಿದೆ. ಆ ಕೀರ್ತನೆಯು ಗ್ರೀಕ್‌ ಭಾಷೆಗೆ ತರ್ಜುಮೆಯಾದಾಗ, “ಕ್ಷಮಿಸಲು ಸಿದ್ಧನು” ಎಂಬುದನ್ನು ಎಪಿಈಕೆಸ್‌ ಅಥವಾ “ನ್ಯಾಯಸಮ್ಮತನು” ಎಂದು ಅನುವಾದಿಸಲಾಯಿತು.