ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 21

“ದೇವರಿಂದ ಬರುವ ವಿವೇಕ”ವನ್ನು ಯೇಸು ಪ್ರಕಟಪಡಿಸುತ್ತಾನೆ

“ದೇವರಿಂದ ಬರುವ ವಿವೇಕ”ವನ್ನು ಯೇಸು ಪ್ರಕಟಪಡಿಸುತ್ತಾನೆ

1-3. ಯೇಸುವಿನ ಮುಂಚಿನ ನೆರೆಯವರು ಅವನ ಬೋಧನೆಗೆ ಹೇಗೆ ಪ್ರತಿಕ್ರಿಯೆ ತೋರಿಸಿದರು, ಮತ್ತು ಅವನ ಕುರಿತು ಏನನ್ನು ಮನಗಾಣಲು ಅವರು ತಪ್ಪಿದರು?

ಶ್ರೋತೃವೃಂದವು ದಂಗುಬಡಿದು ಕುಳಿತಿತ್ತು. ಯುವ ಪುರುಷನಾದ ಯೇಸು ಸಭಾಮಂದಿರದಲ್ಲಿ ಅವರ ಮುಂದೆ ನಿಂತು ಬೋಧಿಸುತ್ತಿದ್ದನು. ಅವನೇನೂ ಅವರಿಗೆ ಅಪರಿಚಿತನಲ್ಲ​—ಅವರ ಊರಿನಲ್ಲೇ ಹುಟ್ಟಿಬೆಳೆದವನು, ವರ್ಷಗಳಿಂದ ಅವರ ಮಧ್ಯೆ ಬಡಗಿಯ ಕೆಲಸಮಾಡಿದ್ದವನು. ಪ್ರಾಯಶಃ ಅವರಲ್ಲಿ ಕೆಲವರು, ಯೇಸು ಕಟ್ಟಲು ಸಹಾಯಮಾಡಿದ್ದ ಮನೆಗಳಲ್ಲಿ ವಾಸಿಸುತ್ತಿದ್ದರು ಅಥವಾ ಅವನು ತನ್ನ ಸ್ವಂತ ಕೈಗಳಿಂದ ಮಾಡಿದ್ದ ನೇಗಿಲುನೊಗಗಳಿಂದ ತಮ್ಮ ಗದ್ದೆಗಳನ್ನು ಉಳುತ್ತಿದ್ದಿರಬಹುದು. * ಆದರೆ ಈ ಮಾಜಿ ಬಡಗಿಯ ಬೋಧನೆಗೆ ಅವರು ಹೇಗೆ ಪ್ರತಿಕ್ರಿಯಿಸುವರು?

2 ಅವನಿಗೆ ಕಿವಿಗೊಡುತ್ತಿದ್ದ ಅನೇಕರು ಬೆಕ್ಕಸಬೆರಗಾಗಿ ಕೇಳಿದ್ದು: “ಇವನಿಗೆ ಈ ವಿವೇಕವು ಬಂದದ್ದು ಎಲ್ಲಿಂದ?” ಅವರು, “ಇವನು ಆ ಬಡಗಿಯಲ್ಲವೇ. ಮರಿಯಳ ಮಗನಲ್ಲವೇ” ಎಂದೂ ಹೇಳಿದರು. (ಮತ್ತಾಯ 13:54-58, NW; ಮಾರ್ಕ 6:1-3) ‘ಈ ಬಡಗಿಯು, ನಮ್ಮ ಊರಿನವನೇ, ನಮ್ಮಂತೆಯೇ ಒಬ್ಬ ಸಾಮಾನ್ಯ ವ್ಯಕ್ತಿಯಷ್ಟೆ’ ಎಂದು ಒಂದುಕಾಲದಲ್ಲಿ ಯೇಸುವಿನ ನೆರೆಯವರಾಗಿದ್ದ ಆ ಜನರು ತರ್ಕಿಸಿದ್ದು ಶೋಚನೀಯವೇ ಸರಿ. ಅವನು ವಿವೇಕದ ನುಡಿಗಳನ್ನು ನುಡಿದಾಗ್ಯೂ ಅವರು ಅವನನ್ನು ತಿರಸ್ಕರಿಸಿದರು. ಅವರೊಂದಿಗೆ ಅವನು ಹಂಚಿದ ವಿವೇಕವು ಅವನ ಸ್ವಂತದ್ದಲ್ಲವೆಂದು ಅವರಿಗೆ ತಿಳಿಯಲೇ ಇಲ್ಲ.

3 ಯೇಸು ಈ ವಿವೇಕವನ್ನು ಪಡೆದುಕೊಂಡದ್ದಾದರೂ ಎಲ್ಲಿಂದ? “ನಾನು ಹೇಳುವ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದಾತನದು” ಎಂದನವನು. (ಯೋಹಾನ 7:16) ಯೇಸು “ನಮಗೆ ದೇವರಿಂದ ಬರುವ ವಿವೇಕವಾಗಿ ಪರಿಣಮಿಸಿದ್ದಾನೆ” ಎಂದು ಅಪೊಸ್ತಲ ಪೌಲನು ವಿವರಿಸಿದನು. (1 ಕೊರಿಂಥ 1:​30, NW) ಯೆಹೋವನ ಸ್ವಂತ ವಿವೇಕವು ಆತನ ಮಗನಾದ ಯೇಸುವಿನ ಮೂಲಕ ಪ್ರಕಟಪಡಿಸಲ್ಪಟ್ಟಿದೆ. ನಿಜವಾಗಿಯೂ ಇದು ಎಷ್ಟರ ಮಟ್ಟಿಗೆ ಸತ್ಯವಾಗಿತ್ತೆಂದರೆ ಯೇಸು ಹೀಗೆ ಹೇಳಸಾಧ್ಯವಿತ್ತು: “ನಾನೂ ತಂದೆಯೂ ಒಂದಾಗಿದ್ದೇವೆ.” (ಯೋಹಾನ 10:30) “ದೇವರಿಂದ ಬರುವ ವಿವೇಕ”ವನ್ನು ಯೇಸು ತೋರಿಸಿದ ಮೂರು ಕ್ಷೇತ್ರಗಳನ್ನು ನಾವೀಗ ಪರೀಕ್ಷಿಸೋಣ.

ಅವನು ಕಲಿಸಿದ ವಿಷಯಗಳು

4. (ಎ) ಯೇಸುವಿನ ಸಂದೇಶದ ಮುಖ್ಯ ವಿಷಯ ಯಾವುದಾಗಿತ್ತು, ಮತ್ತು ಅದು ಏಕೆ ಅತಿ ಪ್ರಾಮುಖ್ಯವಾಗಿತ್ತು? (ಬಿ) ಯೇಸುವಿನ ಬುದ್ಧಿವಾದವು ಯಾವಾಗಲೂ ಪ್ರಾಯೋಗಿಕ ಮತ್ತು ಅವನಿಗೆ ಕಿವಿಗೊಟ್ಟವರ ಅತ್ಯುತ್ತಮ ಹಿತಕ್ಕಾಗಿಯೇ ಇತ್ತೇಕೆ?

4 ಮೊದಲಾಗಿ, ಯೇಸು ಏನನ್ನು ಕಲಿಸಿದನೋ ಅದನ್ನು ಪರಿಗಣಿಸಿರಿ. ಅವನ ಸಂದೇಶದ ಮುಖ್ಯ ವಿಷಯ “ದೇವರ ರಾಜ್ಯದ ಸುವಾರ್ತೆ” ಆಗಿತ್ತು. (ಲೂಕ 4:43) ಅದು ಅತಿ ಪ್ರಾಮುಖ್ಯವಾಗಿತ್ತು ಯಾಕಂದರೆ ಯೆಹೋವನ ಪರಮಾಧಿಕಾರವನ್ನು ನಿರ್ದೋಷೀಕರಿಸುವುದರಲ್ಲಿ ಮತ್ತು ಮಾನವಕುಲಕ್ಕೆ ಬಾಳುವ ಆಶೀರ್ವಾದಗಳನ್ನು ತರುವುದರಲ್ಲಿ ಆ ರಾಜ್ಯವೇ ಪಾತ್ರವಹಿಸಲಿತ್ತು. ತನ್ನ ಬೋಧನೆಗಳಲ್ಲಿ, ದಿನನಿತ್ಯದ ಜೀವನಕ್ಕಾಗಿ ಅಗತ್ಯವಿರುವ ವಿವೇಕಪ್ರದ ಸಲಹೆಯನ್ನೂ ಯೇಸು ನೀಡಿದನು. ಮುಂತಿಳಿಸಲ್ಪಟ್ಟ “ಅದ್ಭುತ ಸಲಹೆಗಾರ”ನು ತಾನೇ ಎಂಬುದನ್ನು ಯೇಸು ರುಜುಪಡಿಸಿದನು. (ಯೆಶಾಯ 9:​6, NW) ಅಲ್ಲದೆ, ಅವನ ಸಲಹೆಯು ಅದ್ಭುತಕರವಾಗಿರದೆ ಇರುವುದು ಹೇಗೆ ಸಾಧ್ಯ? ದೇವರ ವಾಕ್ಯದ ಮತ್ತು ಆತನ ಚಿತ್ತದ ಗಹನವಾದ ಜ್ಞಾನವು ಅವನಿಗಿತ್ತು. ಮಾನವ ಸ್ವಭಾವದ ಗಹನವಾದ ತಿಳಿವಳಿಕೆಯೂ ಮಾನವಕುಲದ ಮೇಲೆ ಆಳವಾದ ಪ್ರೀತಿಯೂ ಅವನಿಗಿತ್ತು. ಆದುದರಿಂದಲೇ ಅವನ ಬುದ್ಧಿವಾದವು ಯಾವಾಗಲೂ ಪ್ರಾಯೋಗಿಕ ಮತ್ತು ಅವನಿಗೆ ಕಿವಿಗೊಡುವವರ ಅತ್ಯುತ್ತಮ ಹಿತಕ್ಕಾಗಿಯೇ ಇರುತ್ತಿತ್ತು. “ನಿತ್ಯಜೀವವನ್ನು ಉಂಟುಮಾಡುವ ವಾಕ್ಯ”ಗಳನ್ನು ಯೇಸು ನುಡಿದನು. ಹೌದು, ಅವನ ಸಲಹೆಯು ಪರಿಪಾಲಿಸಲ್ಪಟ್ಟಾಗ, ಅದು ನಿತ್ಯಜೀವದ ಕಡೆಗೆ ನಡಿಸುವುದು ನಿಶ್ಚಯ.​—ಯೋಹಾನ 6:68.

5. ಪರ್ವತಪ್ರಸಂಗದಲ್ಲಿ ಯೇಸು ಚರ್ಚಿಸಿದ ಕೆಲವು ವಿಷಯಗಳು ಯಾವುವು?

5 ಪರ್ವತಪ್ರಸಂಗವು, ಯೇಸುವಿನ ಬೋಧನೆಗಳಲ್ಲಿ ಕಂಡುಬರುವ ಅತುಲ್ಯವಾದ ವಿವೇಕದ ಎದ್ದುಕಾಣುವ ಮಾದರಿಯಾಗಿದೆ. ಮತ್ತಾಯ 5:​3–7:27​ರಲ್ಲಿ ದಾಖಲಿಸಲ್ಪಟ್ಟ ಈ ಪ್ರಸಂಗವನ್ನು ನೀಡಲು ಕೇವಲ 20 ನಿಮಿಷಗಳು ಸಾಕಾದೀತು. ಅದರಲ್ಲಿರುವ ಬುದ್ಧಿವಾದವಾದರೋ ಅನಂತ. ಅದು ಮೊದಲಾಗಿ ಕೊಡಲ್ಪಟ್ಟಾಗ ಹೇಗೋ ಹಾಗೆಯೆ ಇಂದೂ ಅಷ್ಟೇ ಉಪಯುಕ್ತಕರವಾಗಿದೆ. ಯೇಸು ಒಂದು ವಿಸ್ತಾರವಾದ ವಿಷಯಮಾಲೆಯನ್ನೇ ಆವರಿಸಿದನು. ಇತರರೊಂದಿಗೆ ಸಂಬಂಧವನ್ನು ಸುಧಾರಿಸಿಕೊಳ್ಳುವುದು ಹೇಗೆ (5:​23-26, 38-42; 7:​1-512), ನೈತಿಕವಾಗಿ ಶುದ್ಧವಾಗಿರುವುದು ಹೇಗೆ (5:​27-32), ಉದ್ದೇಶಭರಿತ ಜೀವನವನ್ನು ನಡಿಸುವುದು ಹೇಗೆ (6:​19-24; 7:​24-27) ಮುಂತಾದವುಗಳು ಅದರಲ್ಲಿ ಕೂಡಿದ್ದವು. ಆದರೆ ಯೇಸು ತನ್ನ ಕೇಳುಗರಿಗೆ ವಿವೇಕದ ಮಾರ್ಗವು ಯಾವುದೆಂದು ತಿಳಿಸಿದ್ದು ಮಾತ್ರವೇ ಅಲ್ಲ, ಅದನ್ನು ವಿವರಿಸಿ, ವಿವೇಚಿಸಿ, ಪುರಾವೆಯನ್ನು ನೀಡುವ ಮೂಲಕ ಅದನ್ನು ತೋರಿಸಿದನು ಸಹ.

6-8. (ಎ) ಚಿಂತೆಯನ್ನು ದೂರವಿರಿಸಲಿಕ್ಕಾಗಿ ಯಾವ ಬಲವಾದ ಕಾರಣಗಳನ್ನು ಯೇಸು ನೀಡುತ್ತಾನೆ? (ಬಿ) ಯೇಸುವಿನ ಸಲಹೆಯು ಮೇಲಣಿಂದ ಬರುವ ವಿವೇಕವನ್ನು ಪ್ರತಿಬಿಂಬಿಸುತ್ತದೆಂದು ಯಾವುದು ತೋರಿಸುತ್ತದೆ?

6 ಉದಾಹರಣೆಗಾಗಿ, ಮತ್ತಾಯ 6ನೆಯ ಅಧ್ಯಾಯದಲ್ಲಿ ತಿಳಿಸಿದಂತೆ, ಭೌತಿಕ ವಿಷಯಗಳ ಕುರಿತಾದ ಚಿಂತೆಯನ್ನು ನಿಭಾಯಿಸಿಕೊಳ್ಳುವುದು ಹೇಗೆಂಬುದರ ಕುರಿತು ಯೇಸುವಿತ್ತ ವಿವೇಕಯುತ ಸಲಹೆಯನ್ನು ಗಮನಿಸಿರಿ. “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ” ಎಂದು ಯೇಸು ನಮಗೆ ಬುದ್ಧಿವಾದ ನೀಡುತ್ತಾನೆ. (ವಚನ 25) ಊಟ ಮತ್ತು ಬಟ್ಟೆ ನಮ್ಮ ಮೂಲಭೂತ ಆವಶ್ಯಕತೆಗಳು, ಮತ್ತು ಅವನ್ನು ಪಡೆದುಕೊಳ್ಳುವುದರ ಬಗ್ಗೆ ಚಿಂತೆಮಾಡುವುದು ತೀರ ಸ್ವಾಭಾವಿಕ. ಆದರೆ ಅಂಥ ವಿಷಯಗಳ ಕುರಿತು “ಚಿಂತೆಮಾಡಬೇಡಿರಿ” ಎಂದು ಯೇಸು ನಮಗನ್ನುತ್ತಾನೆ. * ಯಾಕೆ?

7 ವಿಷಯವನ್ನು ಮನದಟ್ಟು ಮಾಡಿಕೊಡುತ್ತಾ ಯೇಸು ತರ್ಕಿಸುವಾಗ ಕಿವಿಗೊಡಿರಿ. ಯೆಹೋವನು ನಮಗೆ ಜೀವವನ್ನೂ ಒಂದು ದೇಹವನ್ನೂ ಕೊಟ್ಟಿರಲಾಗಿ, ಆ ಜೀವದ ಪೋಷಣೆಗಾಗಿ ಆಹಾರವನ್ನೂ ಆ ದೇಹದ ಹೊದಿಕೆಗಾಗಿ ಬಟ್ಟೆಯನ್ನೂ ಆತನು ಒದಗಿಸಶಕ್ತನಲ್ಲವೇ? (ವಚನ 25) ದೇವರು ಪಕ್ಷಿಗಳಿಗೆ ಆಹಾರವನ್ನು ಒದಗಿಸಿ, ಹೂವುಗಳಿಗೆ ಸೌಂದರ್ಯವನ್ನು ತೊಡಿಸುತ್ತಾನಾದರೆ, ತನ್ನ ಮಾನವ ಆರಾಧಕರ ಪರಾಮರಿಕೆಯನ್ನು ಆತನು ಇನ್ನೆಷ್ಟು ಹೆಚ್ಚು ಮಾಡಲಿಕ್ಕಿಲ್ಲ? (ವಚನಗಳು 26, 28-30) ನಿಜವಾಗಿಯೂ, ಅನಾವಶ್ಯಕವಾಗಿ ಚಿಂತಿಸುವುದರಲ್ಲೇನೂ ಅರ್ಥವಿಲ್ಲ. ಅದು ನಮ್ಮ ಆಯುಸ್ಸನ್ನು ಒಂದಂಶವಾದರೂ ಹೆಚ್ಚಿಸದು. * (ವಚನ 27) ಚಿಂತೆಯನ್ನು ನಾವು ದೂರವಿರಿಸುವುದಾದರೂ ಹೇಗೆ? ಯೇಸು ನಮಗೆ ಸಲಹೆ ನೀಡುವುದು: ದೇವರ ಆರಾಧನೆಗೆ ನಿಮ್ಮ ಜೀವನದಲ್ಲಿ ಪ್ರಥಮ ಸ್ಥಾನ ಕೊಡುತ್ತಾ ಇರಿ. ಯಾರು ಹೀಗೆ ಮಾಡುತ್ತಾರೋ ಅವರಿಗೆ ಅವರ ಸ್ವರ್ಗೀಯ ತಂದೆಯಿಂದ ದಿನನಿತ್ಯದ ಎಲ್ಲ ಅಗತ್ಯಗಳು “ದೊರಕುವವು” ಎಂಬ ಭರವಸೆಯಿರಬಲ್ಲದು. (ವಚನ 33) ಕೊನೆಗೆ ಯೇಸು ಒಂದು ಅತ್ಯಂತ ಪ್ರಾಯೋಗಿಕ ಸಲಹೆಯನ್ನು ಕೊಡುತ್ತಾನೆ​—ಆಯಾ ದಿನದ ಬದುಕನ್ನು ಆಯಾ ದಿನವೇ ಬದುಕುವುದನ್ನು ರೂಢಿಸಿಕೊಳ್ಳಿ. ನಾಳಿನ ಚಿಂತೆಗಳನ್ನು ಇಂದಿನ ದಿನಕ್ಕೆ ಯಾಕೆ ಕೂಡಿಸಬೇಕು? (ವಚನ 34) ಅದಲ್ಲದೆ ಎಂದೂ ಸಂಭವಿಸದೇ ಇರಬಹುದಾದ ವಿಷಯಗಳ ಬಗ್ಗೆ ಅನಾವಶ್ಯಕ ಚಿಂತೆಯೇಕೆ? ಇಂಥ ವಿವೇಕಯುತ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕ ಈ ಒತ್ತಡಭರಿತ ಲೋಕದಲ್ಲಿ ಬಹಳಷ್ಟು ಮನೋವ್ಯಥೆಯಿಂದ ನಾವು ತಪ್ಪಿಸಿಕೊಳ್ಳಬಲ್ಲೆವು.

8 ಯೇಸು ಕೊಟ್ಟಿರುವ ಸಲಹೆಯು ಸುಮಾರು 2,000 ವರ್ಷಗಳ ಹಿಂದೆ ಕೊಡಲ್ಪಟ್ಟಾಗ ಹೇಗಿತ್ತೋ ಇಂದು ಸಹ ಅಷ್ಟೇ ಪ್ರಾಯೋಗಿಕವಾಗಿದೆಯೆಂಬುದು ಸ್ಪಷ್ಟ. ಇದು ಮೇಲಣಿಂದ ಬಂದ ವಿವೇಕಕ್ಕೆ ಪುರಾವೆಯಾಗಿಲ್ಲವೇ? ಮಾನವ ಸಲಹೆಗಾರರಿಂದ ಬರುವ ಅತ್ಯುತ್ತಮ ಸಲಹೆಯೂ ಕಾಲಕ್ರಮೇಣ ಹಳೆದಾಗುತ್ತಾ ಪರಿಷ್ಕರಿಸಲ್ಪಡುತ್ತದೆ ಅಥವಾ ಸ್ಥಾನಪಲ್ಲಟಗೊಳ್ಳುತ್ತದೆ. ಆದರೆ ಯೇಸುವಿನ ಬೋಧನೆಗಳಾದರೊ ಕಾಲಪರೀಕ್ಷೆಯನ್ನು ಪಾರಾಗಿ ಬಂದಿವೆ. ಆದರೆ ಇದೇನೂ ಆಶ್ಚರ್ಯದ ಸಂಗತಿಯಲ್ಲ ಯಾಕಂದರೆ ಈ ಅದ್ಭುತ ಸಲಹೆಗಾರನು “ದೇವರ ಮಾತುಗಳನ್ನೇ” ನುಡಿದನಲ್ಲವೇ?.​—ಯೋಹಾನ 3:34.

ಅವನು ಬೋಧಿಸಿದ ವಿಧ

9. ಯೇಸುವಿನ ಬೋಧಿಸುವಿಕೆಯ ವಿಷಯದಲ್ಲಿ ಕೆಲವು ಸೈನಿಕರು ಏನಂದರು, ಮತ್ತು ಇದೇನೂ ಅತಿಶಯೋಕ್ತಿಯಲ್ಲವೇಕೆ?

9 ಯೇಸು, ದೇವರ ವಿವೇಕವನ್ನು ಪ್ರತಿಬಿಂಬಿಸಿದ ಎರಡನೆಯ ಕ್ಷೇತ್ರವು ಅವನು ಬೋಧಿಸಿದ ವಿಧಾನದಲ್ಲೇ ಆಗಿದೆ. ಒಂದು ಸಂದರ್ಭದಲ್ಲಿ, ಅವನನ್ನು ಕೈದುಮಾಡಲು ಕಳುಹಿಸಲ್ಪಟ್ಟ ಸೈನಿಕರು ಬರಿಗೈಯಲ್ಲಿ ಹಿಂದೆಬಂದು ಹೇಳಿದ್ದು: “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ.” (ಯೋಹಾನ 7:45, 46) ಈ ಹೇಳಿಕೆಯೇನೂ ಅತಿಶಯೋಕ್ತಿಯಲ್ಲ. “ಮೇಲಿನವ”ನಾದ ಯೇಸುವಿಗೆ, ಜೀವಿಸಿರುವ ಸಕಲ ಮಾನವರಿಗಿಂತ ಎಷ್ಟೋ ಮಹತ್ತಾದ ಜ್ಞಾನಭಂಡಾರವೂ ಅನುಭವವೂ ಇತ್ತು. (ಯೋಹಾನ 8:23) ಅವನು ನಿಜವಾಗಿಯೂ ಬೇರೆ ಯಾವ ಮನುಷ್ಯನೂ ಕಲಿಸಸಾಧ್ಯವಿದ್ದಿರದ ರೀತಿಯಲ್ಲಿ ಕಲಿಸಿದನು. ಈ ವಿವೇಕಿಯಾದ ಬೋಧಕನ ಕಲಿಸುವ ವಿಧಾನಗಳಲ್ಲಿ ಕೇವಲ ಎರಡನ್ನು ಗಮನಿಸಿರಿ.

“ಜನರ ಗುಂಪುಗಳು ಅವನ ಬೋಧನಾ ರೀತಿಯನ್ನು ನೋಡಿ ಚಕಿತರಾದರು”

10, 11. (ಎ) ದೃಷ್ಟಾಂತಗಳನ್ನು ಯೇಸು ಉಪಯೋಗಿಸಿದ ವಿಧದಿಂದ ನಾವು ಅಚ್ಚರಿಪಡದಿರಲು ಸಾಧ್ಯವಿಲ್ಲವೇಕೆ? (ಬಿ) ಸಾಮ್ಯಗಳು ಎಂದರೇನು, ಮತ್ತು ಯೇಸುವಿನ ಸಾಮ್ಯಗಳು ಬೋಧಿಸುವುದರಲ್ಲಿ ಏಕೆ ತುಂಬ ಕಾರ್ಯಸಾಧಕವಾಗಿವೆಯೆಂದು ಯಾವ ಉದಾಹರಣೆಯು ತೋರಿಸುತ್ತದೆ?

10ದೃಷ್ಟಾಂತಗಳ ಕಾರ್ಯಸಾಧಕ ಉಪಯೋಗ. “ಯೇಸು ಈ ಮಾತುಗಳನ್ನೆಲ್ಲಾ ಜನರ ಗುಂಪುಗಳಿಗೆ ಸಾಮ್ಯ [“ದೃಷ್ಟಾಂತ,” NW]ರೂಪವಾಗಿ ಹೇಳಿದನು” ಎಂದು ನಮಗೆ ಹೇಳಲಾಗಿದೆ. ಅವನು “ಸಾಮ್ಯ [“ದೃಷ್ಟಾಂತ,” NW]ವಿಲ್ಲದೆ ಒಂದನ್ನೂ ಹೇಳಲಿಲ್ಲ.” (ಮತ್ತಾಯ 13:34) ದಿನನಿತ್ಯದ ವಿಷಯಗಳನ್ನು ಉಪಯೋಗಿಸುತ್ತಾ ಗಹನವಾದ ಸತ್ಯಗಳನ್ನು ಕಲಿಸುವ ಅವನ ಅಪ್ರತಿಮ ಸಾಮರ್ಥ್ಯವನ್ನು ನೋಡಿ ನಾವು ಅಚ್ಚರಿಪಡದಿರಲು ಸಾಧ್ಯವಿಲ್ಲ. ಉದಾಹರಣೆಗೆ, ರೈತರು ಬೀಜಗಳನ್ನು ಬಿತ್ತುವುದು, ಸ್ತ್ರೀಯರು ರೊಟ್ಟಿಮಾಡಲು ಹಿಟ್ಟನ್ನು ತಯಾರಿಸುವುದು, ಪೇಟೆಬೀದಿಗಳಲ್ಲಿ ಮಕ್ಕಳು ಆಟವಾಡುವುದು, ಬೆಸ್ತರು ಬಲೆಗಳನ್ನೆಳೆಯುವುದು, ಕುರುಬರು ತಪ್ಪಿಸಿಕೊಂಡ ಕುರಿಯನ್ನು ಹುಡುಕುವುದು​—ಮುಂತಾದ ವಿಷಯಗಳನ್ನು ಅವನಿಗೆ ಕಿವಿಗೊಡುತ್ತಿದ್ದ ಜನರು ಅನೇಕ ಸಾರಿ ಕಂಡಿದ್ದರು. ಮಹತ್ವಪೂರ್ಣ ಸತ್ಯಗಳನ್ನು ಸುಪರಿಚಿತವಾದ ವಿಷಯವಸ್ತುಗಳೊಂದಿಗೆ ಜೋಡಿಸುವಾಗ, ಆಲಿಸುವವರ ಮನಸ್ಸು ಮತ್ತು ಹೃದಯದಲ್ಲಿ ಅವು ಕೂಡಲೆ ಮತ್ತು ಆಳವಾಗಿ ಅಚ್ಚೊತ್ತಲ್ಪಡುತ್ತವೆ.​—ಮತ್ತಾಯ 11:16-19; 13:3-8, 33, 47-50; 18:12-14.

11 ಯೇಸು ಅನೇಕವೇಳೆ ಸಾಮ್ಯಗಳನ್ನು ಉಪಯೋಗಿಸಿದನು. ಇವು ನೈತಿಕ ಅಥವಾ ಆಧ್ಯಾತ್ಮಿಕ ಸತ್ಯಗಳನ್ನು ಕಲಿಸುವ ಚಿಕ್ಕ ಕಥೆಗಳಾಗಿವೆ. ತತ್ತ್ವಸ್ವರೂಪ ವಿಚಾರಗಳಿಗಿಂತ ಕಥೆಗಳನ್ನು ಗ್ರಹಿಸಲು ಮತ್ತು ನೆನಪಿಡಲು ಸುಲಭವಾಗುವುದರಿಂದ, ಸಾಮ್ಯಗಳು ಯೇಸುವಿನ ಬೋಧನೆಯನ್ನು ಸಂರಕ್ಷಿಸಲು ಸಹಾಯಮಾಡಿದವು. ಅನೇಕ ಸಾಮ್ಯಗಳಲ್ಲಿ ಯೇಸು ತನ್ನ ತಂದೆಯನ್ನು, ಬೇಗನೆ ಮರೆತುಬಿಡಲಾಗದಂಥ, ಕಣ್ಣಿಗೆ ಕಟ್ಟುವಂಥ ರೀತಿಯ ದೃಷ್ಟಾಂತಗಳಿಂದ ವರ್ಣಿಸಿದನು. ಉದಾಹರಣೆಗೆ, ಪೋಲಿಹೋದ ಮಗನ ಸಾಮ್ಯದ ಪಾಠವನ್ನು ಗ್ರಹಿಸಲಾಗದವರು ಯಾರಿದ್ದಾರೆ, ಅಂದರೆ ತಪ್ಪು ದಾರಿಗಿಳಿದವರು ನಿಜವಾದ ಪಶ್ಚಾತ್ತಾಪವನ್ನು ತೋರಿಸಿದ್ದಲ್ಲಿ ಯೆಹೋವನು ಕರುಣೆದೋರಿ ಕೋಮಲಭಾವದಿಂದ ಅವರನ್ನು ಹಿಂದೆ ಸ್ವೀಕರಿಸುವನೆಂಬ ಆ ಪಾಠವನ್ನು ಗ್ರಹಿಸದವರಿದ್ದಾರೋ?​—ಲೂಕ 15:11-32.

12. (ಎ) ಯೇಸು ತನ್ನ ಬೋಧಿಸುವಿಕೆಯಲ್ಲಿ ಪ್ರಶ್ನೆಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಿದನು? (ಬಿ) ಯೇಸು, ತನ್ನ ಅಧಿಕಾರದ ಕುರಿತು ಪ್ರಶ್ನಿಸಿದವರ ಬಾಯಿಮುಚ್ಚಿಸಿದ್ದು ಹೇಗೆ?

12ಪ್ರಶ್ನೆಗಳ ಕೌಶಲಭರಿತ ಉಪಯೋಗ. ತನಗೆ ಕಿವಿಗೊಟ್ಟವರು ತಮ್ಮ ಸ್ವಂತ ತೀರ್ಮಾನಗಳಿಗೆ ಬರುವಂತೆ ಮಾಡಲು, ಅವರ ಹೇತುಗಳನ್ನು ಪರೀಕ್ಷಿಸಿಕೊಳ್ಳಲು, ಅಥವಾ ನಿರ್ಣಯಗಳನ್ನು ಮಾಡಲು ಯೇಸು ಪ್ರಶ್ನೆಗಳನ್ನು ಉಪಯೋಗಿಸಿದನು. (ಮತ್ತಾಯ 12:24-30; 17:24-27; 22:41-46) ಯೇಸುವಿಗೆ ಅಧಿಕಾರ ಕೊಟ್ಟವನು ದೇವರೋ ಎಂದು ಧಾರ್ಮಿಕ ಮುಖಂಡರು ಅವನನ್ನು ಪ್ರಶ್ನಿಸಲಾಗಿ, ಯೇಸು ಉತ್ತರಿಸಿದ್ದು: “ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂತೋ? ಮನುಷ್ಯರಿಂದ ಬಂತೋ?” ಆ ಪ್ರಶ್ನೆಯಿಂದ ಬೆಚ್ಚಿಬಿದ್ದ ಅವರು ತಮ್ಮತಮ್ಮೊಳಗೆ ತರ್ಕಿಸಿದ್ದು: “ಪರಲೋಕದಿಂದ ಬಂತೆಂದು ನಾವು ಹೇಳಿದರೆ ಹಾಗಾದರೆ ನೀವು ಅವನನ್ನು ಯಾಕೆ ನಂಬಲಿಲ್ಲ ಎಂದು ನಮಗೆ ಹೇಳಾನು; ಮನುಷ್ಯರಿಂದ ಬಂತೆಂದು ಹೇಳಿದರೆ ನಮಗೆ ಜನರ ಭಯವದೆ; ಯೋಹಾನನು ಪ್ರವಾದಿಯೆಂದು ಎಲ್ಲರೂ ಎಣಿಸಿದ್ದಾರಲ್ಲಾ.” ಕೊನೆಗೆ ಅವರು “ನಾವರಿಯೆವು” ಎಂದು ಉತ್ತರಕೊಟ್ಟರು. (ಮಾರ್ಕ 11:27-33; ಮತ್ತಾಯ 21:23-27) ಒಂದೇ ಒಂದು ಸರಳವಾದ ಪ್ರಶ್ನೆಯನ್ನು ಹಾಕಿ ಯೇಸು ಅವರ ಬಾಯಿಮುಚ್ಚಿಸಿದನು ಮತ್ತು ಅವರ ಹೃದಯಗಳಲ್ಲಿದ್ದ ಮೋಸವನ್ನು ಬಯಲಿಗೆಳೆದನು.

13-15. ನೆರೆಯವನಂತಿದ್ದ ಸಮಾರ್ಯದವನ ಕುರಿತಾದ ಸಾಮ್ಯವು ಯೇಸುವಿನ ವಿವೇಕವನ್ನು ಪ್ರತಿಬಿಂಬಿಸುವುದು ಹೇಗೆ?

13 ಕೆಲವೊಮ್ಮೆ ಯೇಸು ತನ್ನ ಬೋಧಿಸುವಿಕೆಯ ವಿಧಾನಗಳನ್ನು ಒಂದುಗೂಡಿಸಿ, ದೃಷ್ಟಾಂತಗಳಲ್ಲಿ ವಿಚಾರಪ್ರೇರಕ ಪ್ರಶ್ನೆಗಳನ್ನು ಹೆಣೆದನು. ಒಬ್ಬ ಯೆಹೂದಿ ವಕೀಲನು ಯೇಸುವಿನ ಬಳಿ ಬಂದು ನಿತ್ಯಜೀವವನ್ನು ಪಡೆಯಲಿಕ್ಕಾಗಿ ಏನು ಮಾಡಬೇಕು ಎಂದು ಪ್ರಶ್ನಿಸಿದಾಗ, ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸಲು ಆಜ್ಞೆಯನ್ನು ಕೊಟ್ಟಿದ್ದ ಮೋಶೆಯ ಧರ್ಮಶಾಸ್ತ್ರಕ್ಕೆ ಯೇಸು ನಿರ್ದೇಶಿಸಿದನು. ತಾನು ನೀತಿವಂತನೆಂದು ತೋರ್ಪಡಿಸಿಕೊಳ್ಳಲು ಬಯಸಿದವನಾಗಿ ಆ ಮನುಷ್ಯನು ಕೇಳಿದ್ದು: “ನನ್ನ ನೆರೆಯವನು ಯಾರು”? ಒಂದು ಕಥೆಯನ್ನು ಹೇಳುವ ಮೂಲಕ ಯೇಸು ಉತ್ತರಕೊಟ್ಟನು. ಒಬ್ಬಾನೊಬ್ಬ ಯೆಹೂದ್ಯ ಪುರುಷನು ಒಬ್ಬಂಟಿಗನಾಗಿ ಪ್ರಯಾಣಮಾಡುತ್ತಿದ್ದಾಗ ಕಳ್ಳರ ದಾಳಿಗೆ ಗುರಿಯಾದನು. ಅವರು ಅವನನ್ನು ಹೊಡೆದು ಅರೆಜೀವಮಾಡಿ ಬಿಟ್ಟುಹೋದರು. ಇಬ್ಬರು ಯೆಹೂದ್ಯರು ಆ ದಾರಿಯಾಗಿ ಬಂದರು, ಮೊದಲು ಒಬ್ಬ ಯಾಜಕನು ಮತ್ತು ನಂತರ ಒಬ್ಬ ಲೇವಿಯನು. ಇಬ್ಬರೂ ಅವನನ್ನು ನೋಡಿಯೂ ನೋಡದಂತೆ ಮುಂದೆ ಹೋಗಿಬಿಟ್ಟರು. ಆದರೆ ನಂತರ ಒಬ್ಬ ಸಮಾರ್ಯದವನು ಅಲ್ಲಿಗೆ ಬಂದನು. ಅವನಾದರೊ ಆ ಗಾಯಗೊಂಡವನನ್ನು ಕನಿಕರಿಸಿ, ಅವನ ಗಾಯಗಳಿಗೆ ಪಟ್ಟಿಯನ್ನು ಕಟ್ಟಿ, ಪ್ರೀತಿಯಿಂದ ಅವನನ್ನು ಛತ್ರಕ್ಕೆ ಒಯ್ದು ಗುಣಹೊಂದುವ ತನಕ ಅಲ್ಲಿ ಆರೈಕೆ ಹೊಂದುವಂತೆ ಏರ್ಪಡಿಸಿದನು. ಕಥೆಯನ್ನು ಮುಗಿಸುತ್ತಾ ಯೇಸು ಆ ವಿಚಾರಿಸುವವನಿಗೆ ಕೇಳಿದ್ದು: “ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು”? “ಅವನಿಗೆ ದಯತೋರಿಸಿದವನೇ” ಎಂದು ಆ ಮನುಷ್ಯನು ಉತ್ತರಿಸಲೇಬೇಕಾಯಿತು.​—ಲೂಕ 10:25-37.

14 ಈ ಸಾಮ್ಯವು ಯೇಸುವಿನ ವಿವೇಕವನ್ನು ಹೇಗೆ ಪ್ರತಿಬಿಂಬಿಸುತ್ತದೆ? ಯೇಸುವಿನ ದಿನಗಳಲ್ಲಿನ ಯೆಹೂದ್ಯರು “ನೆರೆಯವನು” ಎಂಬ ಶಬ್ದವನ್ನು ತಮ್ಮ ಸಂಪ್ರದಾಯಗಳನ್ನು ಪಾಲಿಸುತ್ತಿದ್ದವರಿಗೆ ಮಾತ್ರವೇ ಅನ್ವಯಿಸುತ್ತಿದ್ದರು​—ಸಮಾರ್ಯದವರಿಗಂತೂ ಅಲ್ಲವೇ ಅಲ್ಲ. (ಯೋಹಾನ 4:9) ಒಂದುವೇಳೆ ಯೇಸು ಆ ಕಥೆಯಲ್ಲಿ, ಗಾಯಗೊಂಡವನು ಸಮಾರ್ಯದವನೆಂದೂ ಸಹಾಯಕೊಟ್ಟವನು ಯೆಹೂದ್ಯನೆಂದೂ ಹೇಳಿರುತ್ತಿದ್ದಲ್ಲಿ, ಅದು ಆ ಪೂರ್ವಾಗ್ರಹವನ್ನು ತೆಗೆದುಹಾಕುತ್ತಿತ್ತೊ? ಒಬ್ಬ ಸಮಾರ್ಯದವನು ಯೆಹೂದ್ಯನನ್ನು ಕೋಮಲವಾಗಿ ಉಪಚರಿಸಿದ್ದನ್ನು ತೋರಿಸುವ ರೀತಿಯಲ್ಲಿ ಯೇಸು ಆ ಕಥೆಯನ್ನು ವಿವೇಕದಿಂದ ಹೆಣೆದನು. ಕಥೆಯ ಕೊನೆಯಲ್ಲಿ ಯೇಸು ಹಾಕಿದ ಪ್ರಶ್ನೆಯ ಕಡೆಗೂ ಗಮನಕೊಡಿರಿ. “ನೆರೆಯವನು” ಎಂಬ ಪದದ ಅನ್ವಯವನ್ನು ಅವನು ಬದಲಾಯಿಸಿದನು. ಆ ವಕೀಲನು ಕಾರ್ಯತಃ ‘ನೆರೆಯವನಿಗಾಗಿರುವ ನನ್ನ ಪ್ರೀತಿಯು ಯಾರಿಗೆ ತೋರಿಸಲ್ಪಡಬೇಕು?’ ಎಂದು ಪ್ರಶ್ನಿಸಿದ್ದನು. ಆದರೆ ಯೇಸು ಕೇಳಿದ್ದು: ‘ಈ ಮೂವರಲ್ಲಿ ಯಾವನು ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು’? ಯೇಸು ಆ ದಯೆಯನ್ನು ಪಡೆದ ವ್ಯಕ್ತಿ, ಅಂದರೆ ಆ ಗಾಯಗೊಂಡ ಮನುಷ್ಯನ ಮೇಲಲ್ಲ, ಬದಲಾಗಿ ದಯೆಯನ್ನು ತೋರಿಸಿದವನ ಮೇಲೆ, ಆ ಸಮಾರ್ಯದವನ ಮೇಲೆ ಗಮನವನ್ನು ಕೇಂದ್ರೀಕರಿಸಿದನು. ಒಬ್ಬ ನಿಜ ನೆರೆಯವನು ಇತರರಿಗೆ, ಅವರ ಜಾತೀಯ ಹಿನ್ನೆಲೆಯು ಯಾವುದೇ ಆಗಿರಲಿ, ಪ್ರೀತಿಯನ್ನು ತೋರಿಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವನು. ಯೇಸು ಇದಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿ ತನ್ನ ಪಾಠವನ್ನು ಕಲಿಸಸಾಧ್ಯವಿದ್ದಿರಲಿಲ್ಲ.

15 ಹೀಗಿರುವಾಗ ಜನರು ಯೇಸುವಿನ “ಬೋಧನಾ ರೀತಿಯ” ಬಗ್ಗೆ ಚಕಿತರಾದದ್ದು ಮತ್ತು ಅವನ ಕಡೆಗೆ ಸೆಳೆಯಲ್ಪಟ್ಟದ್ದು ಆಶ್ಚರ್ಯದ ಸಂಗತಿಯೇನಲ್ಲ, ಅಲ್ಲವೇ? (ಮತ್ತಾಯ 7:28, 29, NW) ಒಂದು ಸಂದರ್ಭದಲ್ಲಿ ಒಂದು ದೊಡ್ಡ “ಗುಂಪು” ಊಟಕ್ಕೆ ಏನೂ ಇಲ್ಲದಿದ್ದರೂ, ಮೂರು ದಿನಗಳ ತನಕ ಅವನ ಬಳಿಯಲ್ಲಿ ಉಳಿಯಿತು!​—ಮಾರ್ಕ 8:1, 2.

ಅವನ ಜೀವನ ರೀತಿ

16. ದೈವಿಕ ವಿವೇಕದಿಂದ ತಾನು ನಿಯಂತ್ರಿಸಲ್ಪಟ್ಟಿದ್ದೇನೆಂಬುದಕ್ಕೆ ಯಾವ ರೀತಿಯಲ್ಲಿ ಯೇಸು “ಪ್ರಾಯೋಗಿಕ ಪುರಾವೆ”ಯನ್ನು ನೀಡಿದನು?

16 ಯೇಸು ಯೆಹೋವನ ವಿವೇಕವನ್ನು ಪ್ರತಿಬಿಂಬಿಸಿದ ಮೂರನೆಯ ಕ್ಷೇತ್ರವು ಅವನ ಜೀವನ ರೀತಿಯಾಗಿತ್ತು. ವಿವೇಕವು ಪ್ರಾಯೋಗಿಕವಾಗಿದೆ; ಅದು ಕಾರ್ಯಸಾಧಕ. “ನಿಮ್ಮಲ್ಲಿ ವಿವೇಕಿಯು ಯಾರು?” ಎಂದು ಶಿಷ್ಯ ಯಾಕೋಬನು ಕೇಳುತ್ತಾನೆ. ಅನಂತರ ತನ್ನ ಸ್ವಂತ ಪ್ರಶ್ನೆಯನ್ನು ತಾನೇ ಉತ್ತರಿಸುತ್ತಾ ಅವನಂದದ್ದು: “ಅಂಥವನ ಯೋಗ್ಯ ನಡವಳಿಕೆಯು ಅದರ ಪ್ರಾಯೋಗಿಕ ಪುರಾವೆಯನ್ನು ಕೊಡಲಿ.” (ಯಾಕೋಬ 3:​13, ದ ನ್ಯೂ ಇಂಗ್ಲಿಷ್‌ ಬೈಬಲ್‌) ಯೇಸು ತನ್ನನ್ನು ನಡಿಸಿಕೊಂಡ ರೀತಿಯು, ಅವನು ನಿಜವಾಗಿಯೂ ದೈವಿಕ ವಿವೇಕದಿಂದ ನಿಯಂತ್ರಿಸಲ್ಪಟ್ಟಿದ್ದನೆಂಬುದಕ್ಕೆ “ಪ್ರಾಯೋಗಿಕ ಪುರಾವೆಯನ್ನು” ನೀಡುತ್ತದೆ. ತನ್ನ ಜೀವನ ಕ್ರಮದಲ್ಲಿ ಮತ್ತು ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ಯೇಸು ಯುಕ್ತಾಯುಕ್ತ ಪರಿಜ್ಞಾನವನ್ನು ಹೇಗೆ ತೋರಿಸಿದನೆಂಬುದನ್ನು ನಾವೀಗ ಪರಿಗಣಿಸೋಣ.

17. ಯೇಸುವಿನ ಜೀವನದಲ್ಲಿ ಪರಿಪೂರ್ಣ ಸಮತೋಲನವಿತ್ತೆಂಬುದಕ್ಕೆ ಯಾವ ಸೂಚನೆಗಳಿವೆ?

17 ಯಾರಲ್ಲಿ ಯುಕ್ತಾಯುಕ್ತ ಪರಿಜ್ಞಾನವಿಲ್ಲವೊ ಅವರು ಅನೇಕ ಸಲ ಅತಿರೇಕಕ್ಕೆ ಹೋಗುವುದನ್ನು ನೀವು ಗಮನಿಸಿದ್ದೀರೋ? ಹೌದು, ಸಮತೋಲನದಿಂದಿರಲು ವಿವೇಕವು ಅತ್ಯಾವಶ್ಯಕ. ದೈವಿಕ ವಿವೇಕವನ್ನು ಪ್ರತಿಬಿಂಬಿಸುತ್ತಿದ್ದ ಯೇಸುವಿನಲ್ಲಿ ಪರಿಪೂರ್ಣವಾದ ಸಮತೋಲನವಿತ್ತು. ತನ್ನ ಜೀವನದಲ್ಲಿ ಅವನು ಎಲ್ಲಾದಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ವಿಷಯಗಳಿಗೆ ಪ್ರಥಮ ಸ್ಥಾನವನ್ನು ಕೊಟ್ಟನು. ಸುವಾರ್ತೆಯನ್ನು ಘೋಷಿಸುವ ಕೆಲಸದಲ್ಲಿ ಅವನು ತೀವ್ರವಾಗಿ ಕಾರ್ಯಮಗ್ನನಾಗಿದ್ದನು. “ಇದಕ್ಕಾಗಿಯೇ ನಾನು ಹೊರಟುಬಂದಿದ್ದೇನೆ” ಎಂದನು ಯೇಸು. (ಮಾರ್ಕ 1:38) ಸಹಜವಾಗಿಯೇ ಭೌತಿಕ ವಿಷಯಗಳು ಅವನ ಜೀವನದಲ್ಲಿ ಅಧಿಕ ಮಹತ್ವವುಳ್ಳವುಗಳಾಗಿರಲಿಲ್ಲ; ಪ್ರಾಪಂಚಿಕವಾಗಿ ಅವನಲ್ಲಿದ್ದದ್ದು ಅತಿ ಕೊಂಚವೆಂದು ತೋರುತ್ತದೆ. (ಮತ್ತಾಯ 8:20) ಆದರೂ ಅವನೊಬ್ಬ ಸಂನ್ಯಾಸಿಯಾಗಿರಲಿಲ್ಲ. “ಸಂತೋಷಭರಿತ ದೇವರಾದ” ತನ್ನ ತಂದೆಯಂತೆ ಯೇಸು ಹರ್ಷಭರಿತ ವ್ಯಕ್ತಿಯಾಗಿದ್ದನು ಮಾತ್ರವಲ್ಲ ಇತರರ ಆನಂದವನ್ನೂ ಹೆಚ್ಚಿಸಿದನು. (1 ತಿಮೊಥೆಯ 1:​11, NW; 6:​15) ಸಂಗೀತ, ಹಾಡುವಿಕೆ, ಮತ್ತು ಸಂಭ್ರಮಗಳು ಸಹಜವಾಗಿರುವ ಒಂದು ಮದುವೆ ಔತಣಕ್ಕೆ ಅವನು ಹಾಜರಾದಾಗ, ಅಲ್ಲಿನ ಸಂತೋಷಕ್ಕೆ ತಣ್ಣೀರೆರಚಲು ಅವನು ಹೋಗಿರಲಿಲ್ಲ. ಬದಲಿಗೆ ಅಲ್ಲಿ, “ಹೃದಯಾನಂದ”ವನ್ನು ಬರಿಸುವಂಥ ಪಾನೀಯ, ಅಂದರೆ ದ್ರಾಕ್ಷಾಮದ್ಯವು ಮುಗಿದುಹೋದಾಗ, ಅವನು ನೀರನ್ನು ಶ್ರೇಷ್ಠರೀತಿಯ ದ್ರಾಕ್ಷಾಮದ್ಯವಾಗಿ ಮಾಡಿದನು. (ಕೀರ್ತನೆ 104:15; ಯೋಹಾನ 2:1-11) ಊಟಕ್ಕಾಗಿ ಬಂದ ಅನೇಕ ಆಮಂತ್ರಣಗಳನ್ನು ಯೇಸು ಸ್ವೀಕರಿಸಿದ್ದನು, ಮತ್ತು ಅಂಥ ಸಂದರ್ಭಗಳನ್ನು ಅವನು ಅನೇಕ ಸಲ ಬೋಧಿಸುವುದಕ್ಕಾಗಿ ಉಪಯೋಗಿಸಿದನು.​—ಲೂಕ 10:38-42; 14:1-6.

18. ತನ್ನ ಶಿಷ್ಯರೊಂದಿಗಿನ ವ್ಯವಹಾರಗಳಲ್ಲಿ ಯೇಸು ಲೋಪವಿಲ್ಲದ ಪರಿಜ್ಞಾನವನ್ನು ಹೇಗೆ ತೋರಿಸಿದನು?

18 ಇತರರೊಂದಿಗಿನ ತನ್ನ ವ್ಯವಹಾರಗಳಲ್ಲೂ ಯೇಸು ಲೋಪವಿಲ್ಲದಂಥ ಪರಿಜ್ಞಾನವನ್ನು ತೋರಿಸಿದನು. ಮಾನವ ಸ್ವಭಾವದ ವಿಷಯದಲ್ಲಿ ಅವನಿಗಿದ್ದ ಒಳನೋಟವು ತನ್ನ ಶಿಷ್ಯರ ವಿಷಯವಾದ ಸುಸ್ಪಷ್ಟ ನೋಟವನ್ನು ಅವನಿಗೆ ಕೊಟ್ಟಿತು. ಅವರು ಪರಿಪೂರ್ಣರಲ್ಲವೆಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೂ, ಅವನು ಅವರಲ್ಲಿದ್ದ ಸದ್ಗುಣಗಳನ್ನು ವಿವೇಚಿಸಿ ತಿಳಿದುಕೊಂಡನು. ಯೆಹೋವನು ತನ್ನ ಬಳಿಗೆ ಎಳೆದಿದ್ದ ಈ ಪುರುಷರಲ್ಲಿದ್ದ ಸಂಭಾವ್ಯ ಸಾಮರ್ಥ್ಯಗಳನ್ನು ಅವನು ಅರಿತನು. (ಯೋಹಾನ 6:44) ಅವರ ಕುಂದುಕೊರತೆಗಳ ಮಧ್ಯೆಯೂ, ಅವರಲ್ಲಿ ಭರವಸೆಯಿಡಲು ಅವನು ಸಿದ್ಧನಿದ್ದನು. ಆ ಭರವಸೆಯನ್ನು ಪ್ರದರ್ಶಿಸುತ್ತಾ, ಅವನು ತನ್ನ ಶಿಷ್ಯರಿಗೆ ಒಂದು ಗಂಭೀರವಾದ ಜವಾಬ್ದಾರಿಯನ್ನು ವಹಿಸಿಕೊಟ್ಟನು. ಸುವಾರ್ತೆಯನ್ನು ಸಾರುವ ಆದೇಶವನ್ನು ಅವರಿಗಿತ್ತನು, ಮತ್ತು ಅದನ್ನು ನೆರವೇರಿಸುವ ಅವರ ಸಾಮರ್ಥ್ಯದಲ್ಲಿ ಅವನಿಗೆ ಭರವಸೆಯಿತ್ತು. (ಮತ್ತಾಯ 28:19, 20) ಅವನು ಮಾಡಲು ಕೊಟ್ಟ ಕೆಲಸವನ್ನು ಅವರು ನಂಬಿಗಸ್ತಿಕೆಯಿಂದ ಮಾಡುತ್ತಾ ಮುಂದುವರಿದರೆಂದು ಅಪೊಸ್ತಲರ ಕೃತ್ಯಗಳ ಪುಸ್ತಕವು ಸಾಕ್ಷ್ಯ ನೀಡುತ್ತದೆ. (ಅ. ಕೃತ್ಯಗಳು 2:41, 42; 4:33; 5:27-32) ಹಾಗಾದರೆ, ಯೇಸು ಅವರ ಮೇಲೆ ಭರವಸೆಯಿಟ್ಟದ್ದರಲ್ಲಿ ವಿವೇಕಿಯಾಗಿದ್ದನೆಂಬುದು ಸ್ಪಷ್ಟ.

19. ಅವನು “ಸಾತ್ವಿಕನೂ ದೀನ ಮನಸ್ಸುಳ್ಳವನೂ” ಆಗಿದ್ದನೆಂಬುದನ್ನು ಯೇಸು ಪ್ರದರ್ಶಿಸಿದ್ದು ಹೇಗೆ?

19 ಅಧ್ಯಾಯ 20ರಲ್ಲಿ ನಾವು ಗಮನಿಸಿದ ಪ್ರಕಾರ, ಬೈಬಲು ದೀನತೆ ಮತ್ತು ಸೌಮ್ಯಭಾವವನ್ನು ವಿವೇಕದೊಂದಿಗೆ ಜೋಡಿಸುತ್ತದೆ. ಇದರಲ್ಲಿ ಅತ್ಯುತ್ತಮ ಮಾದರಿಯು ಯೆಹೋವನದ್ದಾಗಿದೆ ನಿಶ್ಚಯ. ಆದರೆ ಯೇಸುವಿನ ವಿಷಯದಲ್ಲೇನು? ತನ್ನ ಶಿಷ್ಯರೊಂದಿಗೆ ವ್ಯವಹರಿಸುವಾಗ ಯೇಸು ತೋರಿಸಿದ ದೀನತೆಯು ಮನಮುಟ್ಟುವಂಥದ್ದಾಗಿದೆ. ಪರಿಪೂರ್ಣ ಮನುಷ್ಯನಾಗಿದ್ದ ಅವನು ಅವರಿಗಿಂತ ಎಷ್ಟೋ ಶ್ರೇಷ್ಠನಾಗಿದ್ದನು. ಆದರೂ ತನ್ನ ಶಿಷ್ಯರನ್ನು ಅವನೆಂದೂ ಕೀಳಾಗಿ ಕಾಣಲಿಲ್ಲ. ಅವನು ಅವರಲ್ಲಿ ಕೀಳರಿಮೆಯನ್ನಾಗಲಿ, ತಾವು ಅನರ್ಹರೆಂಬ ಭಾವನೆಯನ್ನಾಗಲಿ ಹುಟ್ಟಿಸಲು ಪ್ರಯತ್ನಿಸಲಿಲ್ಲ. ಬದಲಿಗೆ ಅವರ ಇತಿಮಿತಿಗಳನ್ನು ಅವನು ಅರ್ಥಮಾಡಿಕೊಳ್ಳುತ್ತಿದ್ದನು ಮತ್ತು ಅವರ ಕುಂದುಕೊರತೆಗಳ ವಿಷಯದಲ್ಲಿ ತಾಳ್ಮೆಯಿಂದಿದ್ದನು. (ಮಾರ್ಕ 14:34-38; ಯೋಹಾನ 16:12) ಚಿಕ್ಕ ಮಕ್ಕಳು ಸಹ ಯೇಸುವಿನ ಜೊತೆಯಲ್ಲಿರುವಾಗ ಹಾಯಾಗಿರುತ್ತಿದ್ದರೆಂಬುದು ಗಮನಾರ್ಹವಾದ ವಿಷಯವಲ್ಲವೇ? ಅವನು “ಸಾತ್ವಿಕನೂ ದೀನ ಮನಸ್ಸುಳ್ಳವನೂ” ಆಗಿದ್ದನೆಂದು ಅವರು ಅರಿತುಕೊಂಡ ಕಾರಣದಿಂದಲೇ ಅವರು ಅವನತ್ತ ಆಕರ್ಷಿಸಲ್ಪಟ್ಟರೆಂಬುದು ನಿಶ್ಚಯ.​—ಮತ್ತಾಯ 11:29; ಮಾರ್ಕ 10:13-16.

20. ಯಾರ ಮಗಳು ದೆವ್ವಪೀಡಿತಳಾಗಿದ್ದಳೋ ಆ ಅನ್ಯ ಸ್ತ್ರೀಯೊಂದಿಗೆ ವ್ಯವಹರಿಸಿದ ರೀತಿಯಲ್ಲಿ ಯೇಸು ನ್ಯಾಯಸಮ್ಮತತೆಯನ್ನು ತೋರಿಸಿದ್ದು ಹೇಗೆ?

20 ಇನ್ನೊಂದು ಮಹತ್ತಾದ ರೀತಿಯಲ್ಲೂ ಯೇಸು ದೈವಿಕ ದೈನ್ಯವನ್ನು ತೋರಿಸಿದನು. ಅವನು ನ್ಯಾಯಸಮ್ಮತನು ಅಥವಾ ಮಣಿಯುವವನಾಗಿರುವುದನ್ನು ಕರುಣೆಯು ಅವಶ್ಯಪಡಿಸಿದಾಗ, ಅವನು ಹಾಗೆಯೇ ಮಾಡಿದನು. ಉದಾಹರಣೆಗಾಗಿ, ಅನ್ಯ ಸ್ತ್ರೀಯೊಬ್ಬಳು ದೆವ್ವದಿಂದ ಬಹಳವಾಗಿ ಪೀಡಿತಳಾಗಿದ್ದ ತನ್ನ ಮಗಳನ್ನು ವಾಸಿಮಾಡುವಂತೆ ಅವನಿಗೆ ಮೊರೆಯಿಟ್ಟ ಸಮಯವನ್ನು ನೆನಪಿಗೆ ತನ್ನಿರಿ. ಆರಂಭದಲ್ಲಿ ಯೇಸು ತಾನು ಅವಳಿಗೆ ಸಹಾಯಮಾಡಲೊಲ್ಲೆನೆಂದು ಮೂರು ಭಿನ್ನ ಭಿನ್ನ ರೀತಿಗಳಲ್ಲಿ ಸೂಚಿಸಿದನು. ಒಂದನೆಯದಾಗಿ ಅವನು ಆಕೆಗೆ ಏನೂ ಉತ್ತರ ಕೊಡದೆ ಇರುವ ಮೂಲಕ; ಎರಡನೆಯದಾಗಿ ತಾನು ಅನ್ಯಜನರ ಬಳಿಗಲ್ಲ ಯೆಹೂದ್ಯರ ಬಳಿಗೆ ಕಳುಹಿಸಲ್ಪಟ್ಟವನೆಂದು ನೇರವಾಗಿ ಹೇಳುವ ಮೂಲಕ; ಮತ್ತು ಮೂರನೆಯದಾಗಿ ಅದೇ ವಿಷಯವನ್ನು ದಯಾಪರವಾಗಿ ಪ್ರಸ್ತುತಪಡಿಸುವಂಥ ಒಂದು ಸಾಮ್ಯವನ್ನು ತಿಳಿಸುವ ಮೂಲಕ. ಆದರೂ, ಆ ಸ್ತ್ರೀ ಅಸಾಮಾನ್ಯವಾದ ನಂಬಿಕೆಯನ್ನು ತೋರಿಸುತ್ತಾ ಪಟ್ಟುಹಿಡಿದಳು. ಈ ಅಸಾಧಾರಣ ಸನ್ನಿವೇಶದಲ್ಲಿ ಯೇಸು ಹೇಗೆ ಪ್ರತಿಕ್ರಿಯಿಸಿದನು? ತಾನು ಏನನ್ನು ಮಾಡಲೊಲ್ಲೆನೆಂದು ಹೇಳಿದ್ದನೊ ಅದನ್ನೇ ಅವನು ಮಾಡಿದನು. ಆ ಸ್ತ್ರೀಯ ಮಗಳನ್ನು ವಾಸಿಮಾಡಿದನು. (ಮತ್ತಾಯ 15:21-28) ಇದು ನಿಜವಾಗಿಯೂ ಗಮನಾರ್ಹವಾದ ದೀನತೆಯಲ್ಲವೇ? ಮತ್ತು ನೆನಪಿಡಿರಿ, ದೀನತೆಯು ನಿಜ ವಿವೇಕದ ಬುನಾದಿಯಾಗಿದೆ.

21. ಯೇಸುವಿನ ವ್ಯಕ್ತಿತ್ವ, ಮಾತು, ಮತ್ತು ಕಾರ್ಯವಿಧಾನಗಳನ್ನು ನಾವು ಅನುಕರಿಸಲು ಪ್ರಯತ್ನಪಡಬೇಕು ಯಾಕೆ?

21 ಸುವಾರ್ತಾ ಪುಸ್ತಕಗಳು, ಜೀವಿಸಿರುವವರಲ್ಲಿ ಅತ್ಯಂತ ವಿವೇಕಿ ಪುರುಷನಾಗಿದ್ದ ಯೇಸುವಿನ ನುಡಿಗಳನ್ನೂ ಕ್ರಿಯೆಗಳನ್ನೂ ನಮಗೆ ಪ್ರಕಟಪಡಿಸುತ್ತಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಸಾಧ್ಯವಿದೆ! ಯೇಸು ತನ್ನ ತಂದೆಯ ಪರಿಪೂರ್ಣ ಪ್ರತಿಬಿಂಬವಾಗಿದ್ದನೆಂಬುದನ್ನು ನಾವು ಮನಸ್ಸಿನಲ್ಲಿಡೋಣ. ಯೇಸುವಿನ ವ್ಯಕ್ತಿತ್ವ, ಮಾತು, ಮತ್ತು ಕಾರ್ಯವಿಧಾನಗಳನ್ನು ಅನುಕರಿಸುವ ಮೂಲಕ, ನಾವು ಮೇಲಣಿಂದ ಬರುವ ವಿವೇಕವನ್ನು ಬೆಳೆಸಿಕೊಳ್ಳುತ್ತಿರುವೆವು. ಈ ದೈವಿಕ ವಿವೇಕವನ್ನು ನಾವು ನಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಲ್ಲೆವೆಂದು ನಾವು ಮುಂದಿನ ಅಧ್ಯಾಯದಲ್ಲಿ ನೋಡುವೆವು.

^ ಪ್ಯಾರ. 1 ಬೈಬಲ್‌ ಸಮಯಗಳಲ್ಲಿ ಮನೆಕಟ್ಟುವಿಕೆ, ಪೀಠೋಪಕರಣಗಳ ತಯಾರಿ, ಮತ್ತು ಬೇಸಾಯ ಸಲಕರಣೆಗಳನ್ನು ಮಾಡಲು ಬಡಗಿಗಳನ್ನು ಕೆಲಸಕ್ಕಿಟ್ಟುಕೊಳ್ಳಲಾಗುತ್ತಿತ್ತು. ಸಾ.ಶ. ಎರಡನೆಯ ಶತಮಾನದ ಜಸ್ಟಿನ್‌ ಮಾರ್ಟರ್‌ ಯೇಸುವಿನ ಕುರಿತು ಬರೆದದ್ದು: “ಅವನು ಮನುಷ್ಯರ ನಡುವೆ ಜೀವಿಸುತ್ತಿದ್ದಾಗ, ನೊಗನೇಗಿಲುಗಳನ್ನು ರಚಿಸುತ್ತಾ, ಬಡಗಿಯ ಕೆಲಸವನ್ನು ಮಾಡುವುದು ವಾಡಿಕೆಯಾಗಿತ್ತು.”

^ ಪ್ಯಾರ. 6 ‘ಚಿಂತೆಮಾಡುವುದು’ ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಕ್ರಿಯಾಪದಕ್ಕೆ “ಮನಸ್ಸು ಅಪಕರ್ಷಿಸಲ್ಪಡುವಂತೆ ಮಾಡುವುದು” ಎಂಬರ್ಥವಿದೆ. ಮತ್ತಾಯ 6:25 ರಲ್ಲಿ ಉಪಯೋಗಿಸಲ್ಪಟ್ಟಂತೆ, ಅದು ಮನಸ್ಸನ್ನು ಅಪಕರ್ಷಿಸಿ ಇಲ್ಲವೆ ವಿಭಜಿಸಿ ಜೀವಿತಾನಂದವನ್ನು ಅಪಹರಿಸುವ ಚಿಂತಾಪರ ಭಯಕ್ಕೆ ಸೂಚಿಸುತ್ತದೆ.

^ ಪ್ಯಾರ. 7 ಅತಿರೇಕ ಚಿಂತೆ ಮತ್ತು ಒತ್ತಡಗಳು ನಮ್ಮ ಆಯುಸ್ಸನ್ನು ಮೊಟಕುಗೊಳಿಸುವ ಹೃದಯ-ರಕ್ತನಾಳಗಳ ರೋಗ ಮತ್ತು ಇತರ ಅನೇಕ ವ್ಯಾಧಿಗಳ ಅಪಾಯಕ್ಕೆ ನಮ್ಮನ್ನು ಒಡ್ಡಬಲ್ಲವೆಂದು ವೈಜ್ಞಾನಿಕ ಸಂಶೋಧನೆಯು ತೋರಿಸಿದೆ.