ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 22

“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?

“ಮೇಲಣಿಂದ ಬರುವ ವಿವೇಕವು” ನಿಮ್ಮ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?

1-3. (ಎ) ಮಗುವಿನ ತಾಯಿ ಯಾರೆಂಬುದರ ಕುರಿತಾದ ಒಂದು ವಿವಾದವನ್ನು ನಿರ್ವಹಿಸಿದ ರೀತಿಯಲ್ಲಿ ಸೊಲೊಮೋನನು ಅಸಾಧಾರಣ ವಿವೇಕವನ್ನು ತೋರಿಸಿದ್ದು ಹೇಗೆ? (ಬಿ) ಯೆಹೋವನು ನಮಗೆ ಏನನ್ನು ಕೊಡಲು ವಾಗ್ದಾನಿಸಿದ್ದಾನೆ, ಮತ್ತು ಯಾವ ಪ್ರಶ್ನೆಗಳು ಏಳುತ್ತವೆ?

ಅದೊಂದು ಜಟಿಲವಾದ ವ್ಯಾಜ್ಯವಾಗಿತ್ತು. ಒಂದು ಮಗುವಿನ ವಿಷಯದಲ್ಲಿ ಇಬ್ಬರು ಹೆಂಗಸರು ಜಗಳಾಡುತ್ತಿದ್ದರು. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ, ಕೆಲವೇ ದಿನಗಳ ಅಂತರದಲ್ಲಿ ಒಂದೊಂದು ಗಂಡು ಮಗುವನ್ನು ಹೆತ್ತಿದ್ದರು. ಅದರಲ್ಲಿ ಒಂದು ಮಗು ಸತ್ತಿತು; ಮತ್ತು ಈಗ ಸ್ತ್ರೀಯರಲ್ಲಿ ಇಬ್ಬರೂ ಬದುಕಿ ಉಳಿದಿದ್ದ ಇನ್ನೊಂದು ಮಗುವಿನ ತಾಯಿ ತಾನೆಂದು ವಾದಿಸತೊಡಗಿದರು. * ಏನು ಸಂಭವಿಸಿತೆಂಬುದನ್ನು ಕಣ್ಣಾರೆ ಕಂಡವರು ಅಲ್ಲಿ ಬೇರೆ ಯಾರೂ ಇದ್ದಿರಲಿಲ್ಲ. ಒಂದು ಚಿಕ್ಕ ಕೋರ್ಟಿನಲ್ಲಿ ಈ ವ್ಯಾಜ್ಯದ ವಿಚಾರಣೆ ನಡೆದಿದ್ದರೂ ಅದು ಇತ್ಯರ್ಥವಾಗಿರಲಿಲ್ಲವೆಂದು ತೋರುತ್ತದೆ. ಕೊನೆಗೆ ಅದನ್ನು ಇಸ್ರಾಯೇಲಿನ ಅರಸನಾದ ಸೊಲೊಮೋನನ ಬಳಿಗೆ ತರಲಾಯಿತು. ಅವನು ಸತ್ಯವನ್ನು ಬಯಲುಪಡಿಸಲು ಶಕ್ತನಾಗಿರುವನೊ?

2 ಆ ಸ್ತ್ರೀಯರ ವಾದವಿವಾದಗಳನ್ನು ಸ್ವಲ್ಪಹೊತ್ತು ಆಲಿಸಿದ ಬಳಿಕ, ಒಂದು ಕತ್ತಿಯು ತರಲ್ಪಡುವಂತೆ ಸೊಲೊಮೋನನು ಕೇಳಿಕೊಂಡನು. ಅನಂತರ, ಅವನು ದೃಢನಿಶ್ಚಯದಿಂದಲೋ ಎಂಬಂತೆ, ಜೀವದಿಂದಿರುವ ಕೂಸನ್ನು ಕಡಿದು ಎರಡು ಭಾಗಮಾಡಿ ಅರ್ಧರ್ಧವನ್ನು ಪ್ರತಿಯೊಬ್ಬ ಸ್ತ್ರೀಗೆ ಕೊಡುವಂತೆ ಅಪ್ಪಣೆಕೊಟ್ಟನು. ಆ ಕೂಡಲೆ ಕೂಸಿನ ನಿಜವಾದ ತಾಯಿ ತನ್ನ ಮಗುವನ್ನು​—ತನ್ನ ಅತ್ಯಮೂಲ್ಯ ಕಂದನನ್ನು​—ಆ ಇನ್ನೊಬ್ಬ ಸ್ತ್ರೀಗೆ ಕೊಟ್ಟುಬಿಡುವಂತೆ ಅರಸನ ಬಳಿ ಅಂಗಲಾಚಿದಳು. ಆದರೆ ಆ ಇನ್ನೊಬ್ಬ ಸ್ತ್ರೀಯಾದರೋ ಮಗುವನ್ನು ಕಡಿದು ಎರಡು ಭಾಗಮಾಡುವಂತೆ ಒತ್ತಾಯಿಸತೊಡಗಿದಳು. ಸೊಲೊಮೋನನಿಗೆ ಈಗ ಸತ್ಯ ತಿಳಿಯಿತು. ಒಬ್ಬ ತಾಯಿಗೆ ತನ್ನ ಹೊಟ್ಟೆಯಲ್ಲಿ ಹುಟ್ಟಿರುವ ಮಗುವಿನ ಕಡೆಗಿರುವ ಕೋಮಲ ವಾತ್ಸಲ್ಯದ ಬಗ್ಗೆ ಸೊಲೊಮೋನನಿಗೆ ಗೊತ್ತಿತ್ತು ಮತ್ತು ಆ ಜ್ಞಾನವನ್ನು ಉಪಯೋಗಿಸಿ ಈ ವಿವಾದವನ್ನು ಅವನು ಇತ್ಯರ್ಥಗೊಳಿಸಿದನು. ಸೊಲೊಮೋನನು ಆ ಮಗುವನ್ನು ಆಕೆಗೆ ಕೊಟ್ಟು, “ಅವಳೇ ಅದರ ತಾಯಿ” ಎಂದು ಹೇಳಿದಾಗ ಆ ತಾಯಿಗೆಷ್ಟು ನೆಮ್ಮದಿಯಾಗಿದ್ದಿರಬೇಕೆಂಬುದನ್ನು ಸ್ವಲ್ಪ ಊಹಿಸಿಕೊಳ್ಳಿರಿ.​—1 ಅರಸುಗಳು 3:16-27.

3 ಇದು ಅಸಾಧಾರಣವಾದ ವಿವೇಕ, ಅಲ್ಲವೇ? ಸೊಲೊಮೋನನು ಆ ವಿವಾದವನ್ನು ಹೇಗೆ ಪರಿಹರಿಸಿದನೆಂಬುದು ಜನರಿಗೆ ತಿಳಿದಾಗ, “ಈತನಲ್ಲಿ ದೇವಜ್ಞಾನವಿದೆ [“ದೇವರ ವಿವೇಕವಿದೆ,” NW] ಎಂದು ತಿಳಿದು” ಅವರು ಮೂಕವಿಸ್ಮಿತರಾದರು. ಹೌದು, ಸೊಲೊಮೋನನ ವಿವೇಕವು ಒಂದು ದೈವಿಕ ವರದಾನವಾಗಿತ್ತು. ಯೆಹೋವನು ಅವನಿಗೆ “ಜ್ಞಾನವನ್ನೂ ವಿವೇಕವನ್ನೂ” ಅನುಗ್ರಹಿಸಿದ್ದನು. (1 ಅರಸುಗಳು 3:12, 28) ಆದರೆ ನಮ್ಮ ಕುರಿತೇನು? ನಮಗೂ ದೈವಿಕ ವಿವೇಕವು ಲಭಿಸಬಹುದೋ? ಹೌದು, ಯಾಕಂದರೆ ಪ್ರೇರಣೆಯ ಕೆಳಗೆ ಸೊಲೊಮೋನನು ಬರೆದದ್ದು: “ಯೆಹೋವನೇ ಜ್ಞಾನವನ್ನು [“ವಿವೇಕವನ್ನು,” NW] ಕೊಡುವಾತನು.” (ಜ್ಞಾನೋಕ್ತಿ 2:6) ಯಾರು ಅದಕ್ಕಾಗಿ ಪ್ರಾಮಾಣಿಕತೆಯಿಂದ ಹುಡುಕುತ್ತಾರೋ ಅವರಿಗೆ ಯೆಹೋವನು ವಿವೇಕವನ್ನು​—ಅಂದರೆ ಜ್ಞಾನ, ತಿಳಿವಳಿಕೆ, ಮತ್ತು ವಿವೇಚನಾಶಕ್ತಿಯನ್ನು ಸದುಪಯೋಗಕ್ಕೆ ಹಾಕುವ ಸಾಮರ್ಥ್ಯವನ್ನು​—ಕೊಡುವನೆಂದು ವಾಗ್ದಾನಿಸಿದ್ದಾನೆ. ಮೇಲಣಿಂದ ಬರುವ ಈ ವಿವೇಕವನ್ನು ನಾವು ಹೇಗೆ ಪಡೆದುಕೊಳ್ಳಸಾಧ್ಯವಿದೆ? ಮತ್ತು ಅದನ್ನು ನಮ್ಮ ಜೀವಿತದಲ್ಲಿ ಹೇಗೆ ಕಾರ್ಯಗತಮಾಡಬಲ್ಲೆವು?

“ವಿವೇಕವನ್ನು ಪಡೆ”ಯುವುದು ಹೇಗೆ?

4-7. ವಿವೇಕವನ್ನು ಪಡೆಯುವುದಕ್ಕಾಗಿರುವ ನಾಲ್ಕು ಆವಶ್ಯಕತೆಗಳು ಯಾವುವು?

4 ದೈವಿಕ ವಿವೇಕವನ್ನು ಪಡೆಯಬೇಕಾದರೆ ನಾವು ಅತಿ ಬುದ್ಧಿವಂತರೂ ಉಚ್ಚ ಶಿಕ್ಷಣಪಡೆದವರೂ ಆಗಿರಬೇಕೋ? ಇಲ್ಲ. ನಮ್ಮ ಹಿನ್ನೆಲೆ ಮತ್ತು ಶಿಕ್ಷಣದ ಮಟ್ಟವು ಏನೇ ಆಗಿರಲಿ ತನ್ನ ವಿವೇಕವನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಯೆಹೋವನು ಸಿದ್ಧಮನಸ್ಸುಳ್ಳವನಾಗಿದ್ದಾನೆ. (1 ಕೊರಿಂಥ 1:26-29) ಆದರೆ ನಾವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವ ಅಗತ್ಯವಿದೆ ಯಾಕಂದರೆ “ವಿವೇಕವನ್ನು ಪಡೆ”ಯುವಂತೆ ಬೈಬಲು ನಮ್ಮನ್ನು ಪ್ರೇರಿಸುತ್ತದೆ. (ಜ್ಞಾನೋಕ್ತಿ 4:​7, NW) ನಾವದನ್ನು ಪಡೆಯುವುದು ಹೇಗೆ?

5 ಮೊದಲನೆಯದಾಗಿ, ನಾವು ದೇವರಿಗೆ ಭಯಪಡುವ ಅಗತ್ಯವಿದೆ. “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು [“ವಿವೇಕಕ್ಕೆ ಮೊದಲನೆಯ ಹೆಜ್ಜೆ,” ದ ನ್ಯೂ ಇಂಗ್ಲಿಷ್‌ ಬೈಬಲ್‌]” ಎನ್ನುತ್ತದೆ ಜ್ಞಾನೋಕ್ತಿ 9:10. ದೇವರ ಭಯವು ನಿಜ ವಿವೇಕದ ಮೂಲಾಧಾರವಾಗಿದೆ. ಯಾಕೆ? ಜ್ಞಾನವನ್ನು ಯಶಸ್ವಿಯಾಗಿ ಉಪಯೋಗಿಸುವ ಸಾಮರ್ಥ್ಯವೇ ವಿವೇಕವೆಂಬುದನ್ನು ನೆನಪಿಗೆ ತನ್ನಿರಿ. ದೇವರಿಗೆ ಭಯಪಡುವುದೆಂದರೆ ಆತನ ಮುಂದೆ ಭೀತಿಯಿಂದ ನಡುಗುವುದಲ್ಲ, ಬದಲಿಗೆ ಭಯಭಕ್ತಿ, ಗೌರವ ಮತ್ತು ಭರವಸೆಯಿಂದ ಆತನ ಮುಂದೆ ತಲೆಬಾಗುವುದೇ ಆಗಿದೆ. ಅಂಥ ಭಯವು ಹಿತಕರವೂ ಶಕ್ತಿಶಾಲಿಯಾದ ಪ್ರೇರೇಪಕವೂ ಆಗಿರುತ್ತದೆ. ಅದು ನಮ್ಮ ಜೀವಿತವನ್ನು ದೇವರ ಚಿತ್ತ ಮತ್ತು ಮಾರ್ಗಗಳಿಗೆ ಹೊಂದಿಕೆಯಲ್ಲಿ ತರುವಂತೆ ಪ್ರೇರೇಪಿಸುತ್ತದೆ. ಇದಕ್ಕಿಂತ ವಿವೇಕಭರಿತವಾದ ಬೇರೆ ಯಾವ ಮಾರ್ಗವೂ ಇಲ್ಲ, ಯಾಕಂದರೆ ಯೆಹೋವನ ನೀತಿಯ ಮಟ್ಟಗಳು ಯಾವಾಗಲೂ ಅವನ್ನು ಪರಿಪಾಲಿಸುವವರ ಅತ್ಯುತ್ತಮ ಹಿತಕ್ಕಾಗಿಯೇ ಇವೆ.

6 ಎರಡನೆಯದಾಗಿ, ನಾವು ದೀನರೂ ಮಿತವರ್ತಿಗಳೂ ಆಗಿರಬೇಕು. ದೀನತೆ ಮತ್ತು ಮಿತವರ್ತನೆಯು ಇಲ್ಲದಿದ್ದಲ್ಲಿ ದೈವಿಕ ವಿವೇಕವು ದೊರೆಯಲಾರದು. (ಜ್ಞಾನೋಕ್ತಿ 11:​2, NW) ಅದು ಏಕೆ? ಏಕೆಂದರೆ ನಾವು ದೀನರೂ ಮಿತವರ್ತಿಗಳೂ ಆಗಿರುವಲ್ಲಿ, ನಮಗೆಲ್ಲವೂ ತಿಳಿದಿಲ್ಲವೆಂದೂ, ನಮ್ಮ ಅಭಿಪ್ರಾಯಗಳು ಯಾವಾಗಲೂ ಸರಿಯಾಗಿರುವುದಿಲ್ಲವೆಂದೂ ಮತ್ತು ವಿಷಯಗಳ ಕುರಿತು ಯೆಹೋವನ ದೃಷ್ಟಿಕೋನ ಏನಾಗಿದೆಯೆಂದು ತಿಳಿಯುವ ಅಗತ್ಯ ನಮಗಿದೆಯೆಂದೂ ಒಪ್ಪಿಕೊಳ್ಳಲು ನಾವು ಸಿದ್ಧರಾಗಿರುತ್ತೇವೆ. ಯೆಹೋವನು “ಅಹಂಕಾರಿಗಳನ್ನು ಎದುರಿಸುತ್ತಾನೆ,” ಆದರೆ ಯಾರು ಹೃದಯದಲ್ಲಿ ದೀನರೋ ಅವರಿಗೆ ವಿವೇಕವನ್ನು ದಯಪಾಲಿಸಲು ಆತನು ಸಂತೋಷಪಡುತ್ತಾನೆ.​—ಯಾಕೋಬ 4:6.

ದೈವಿಕ ವಿವೇಕವನ್ನು ಗಳಿಸಲಿಕ್ಕಾಗಿ, ನಾವು ಪ್ರಯತ್ನಪಟ್ಟು ಅದಕ್ಕಾಗಿ ಹುಡುಕಬೇಕಾಗಿದೆ

7 ಮೂರನೆಯ ಆವಶ್ಯಕತೆಯು ದೇವರ ಲಿಖಿತ ವಾಕ್ಯದ ಅಧ್ಯಯನವಾಗಿದೆ. ಯೆಹೋವನ ವಿವೇಕವು ಆತನ ವಾಕ್ಯದಲ್ಲಿ ಪ್ರಕಟಪಡಿಸಲ್ಪಟ್ಟಿದೆ. ಆ ವಿವೇಕವನ್ನು ಸಂಪಾದಿಸಲಿಕ್ಕಾಗಿ ನಾವದನ್ನು ಪ್ರಯತ್ನಪೂರ್ವಕವಾಗಿ ಹುಡುಕಬೇಕಾಗಿದೆ. (ಜ್ಞಾನೋಕ್ತಿ 2:1-5) ನಾಲ್ಕನೆಯ ಆವಶ್ಯಕತೆಯು ಪ್ರಾರ್ಥನೆ. ದೇವರ ವಿವೇಕಕ್ಕಾಗಿ ನಾವು ಪ್ರಾಮಾಣಿಕತೆಯಿಂದ ಬೇಡಿಕೊಂಡಲ್ಲಿ, ಆತನು ನಮಗದನ್ನು ಉದಾರವಾಗಿ ಕೊಡುವನು. (ಯಾಕೋಬ 1:5) ಆತನ ಆತ್ಮದ ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳಿಗೆ ಸದುತ್ತರವು ದೊರೆಯದೆ ಹೋಗಲಾರದು. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಅಪಾಯಗಳಿಂದ ತಪ್ಪಿಸಿಕೊಳ್ಳಲು, ಮತ್ತು ವಿವೇಕಯುತ ನಿರ್ಣಯಗಳನ್ನು ಮಾಡಲು ಸಹಾಯಮಾಡಬಲ್ಲ ನಿಕ್ಷೇಪಗಳನ್ನು ಆತನ ವಾಕ್ಯದಲ್ಲಿ ಕಂಡುಕೊಳ್ಳಲು ಆತನ ಆತ್ಮವು ನಮ್ಮನ್ನು ಶಕ್ತರನ್ನಾಗಿ ಮಾಡುವುದು.​—ಲೂಕ 11:13.

8. ನಾವು ನಿಜವಾಗಿಯೂ ದೈವಿಕ ವಿವೇಕವನ್ನು ಗಳಿಸಿರುವುದಾದರೆ, ಅದು ಹೇಗೆ ಪ್ರತ್ಯಕ್ಷವಾಗಿ ತೋರಿಬರುವುದು?

8 ಅಧ್ಯಾಯ 17ರಲ್ಲಿ ನಾವು ಪರಿಗಣಿಸಿದ ಪ್ರಕಾರ, ಯೆಹೋವನ ವಿವೇಕವು ಪ್ರಾಯೋಗಿಕವಾಗಿದೆ. ಆದುದರಿಂದ ನಾವು ನಿಜವಾಗಿ ದೈವಿಕ ವಿವೇಕವನ್ನು ಪಡೆದಿರುವುದಾದರೆ, ನಾವು ನಮ್ಮನ್ನು ನಡಿಸಿಕೊಳ್ಳುವ ರೀತಿಯಲ್ಲಿ ಅದು ಪ್ರತ್ಯಕ್ಷವಾಗಿ ತೋರಿಬರುವುದು. ಶಿಷ್ಯ ಯಾಕೋಬನು ದೈವಿಕ ವಿವೇಕದ ಫಲಗಳನ್ನು ವಿವರವಾಗಿ ಬರೆದದ್ದು: “ಮೇಲಣಿಂದ ಬರುವ ವಿವೇಕವು ಮೊದಲು ನೈತಿಕವಾಗಿ ಶುದ್ಧವಾದದ್ದು, ಆಮೇಲೆ ಸಮಾಧಾನ ಪ್ರವೃತ್ತಿಯದ್ದು, ನ್ಯಾಯಸಮ್ಮತವಾದದ್ದು, ವಿಧೇಯತೆ ತೋರಿಸಲು ಸಿದ್ಧವಾದದ್ದು, ಕರುಣೆ ಹಾಗೂ ಸುಫಲಗಳಿಂದ ತುಂಬಿರುವಂಥದ್ದು, ಪಕ್ಷಭೇದಗಳನ್ನು ಮಾಡದಿರುವುದೂ, ಕಪಟಾಚರಣೆಯಿಲ್ಲದ್ದೂ ಆಗಿದೆ.” (ಯಾಕೋಬ 3:​17, NW) ದೈವಿಕ ವಿವೇಕದ ಈ ಅಂಶಗಳಲ್ಲಿ ಪ್ರತಿಯೊಂದನ್ನು ನಾವು ಚರ್ಚಿಸುವಾಗ, ನಮ್ಮನ್ನು ಹೀಗೆ ಕೇಳಿಕೊಳ್ಳೋಣ: ‘ಮೇಲಣಿಂದ ಬರುವ ವಿವೇಕವು ನನ್ನ ಜೀವನದಲ್ಲಿ ಕಾರ್ಯನಡಿಸುತ್ತಿದೆಯೇ?’

“ನೈತಿಕವಾಗಿ ಶುದ್ಧವಾದದ್ದು, ಆಮೇಲೆ ಸಮಾಧಾನಕರ ಪ್ರವೃತ್ತಿಯದ್ದು”

9. ನೈತಿಕವಾಗಿ ಶುದ್ಧವಾಗಿರುವುದು ಎಂಬುದರ ಅರ್ಥವೇನು, ಮತ್ತು ಈ ನೈತಿಕ ಶುದ್ಧತೆಯು ವಿವೇಕದ ಮೊದಲನೆಯ ಗುಣವಾಗಿ ಪಟ್ಟಮಾಡಲ್ಪಟ್ಟಿರುವುದು ಏಕೆ ತಕ್ಕದಾಗಿದೆ?

9“ಮೊದಲು ನೈತಿಕವಾಗಿ ಶುದ್ಧವಾದದ್ದು.” ಶುದ್ಧವಾಗಿರುವುದು ಎಂದರೆ ಹೊರಗೂ ಒಳಗೂ ನಿರ್ಮಲರೂ ನಿಷ್ಕಳಂಕರೂ ಆಗಿರುವುದಾಗಿದೆ. ಬೈಬಲು ವಿವೇಕವನ್ನು ಒಂದು ಹೃದಯದೊಂದಿಗೆ ಜೊತೆಗೂಡಿಸುತ್ತದೆ, ಆದರೆ ಸ್ವರ್ಗೀಯ ವಿವೇಕವು ದುಷ್ಟ ಆಲೋಚನೆಗಳು, ಅಪೇಕ್ಷೆಗಳು, ಮತ್ತು ಹೇತುಗಳಿಂದ ಕಲುಷಿತವಾಗಿರುವ ಒಂದು ಹೃದಯವನ್ನು ಪ್ರವೇಶಿಸಲಾರದು. (ಜ್ಞಾನೋಕ್ತಿ 2:10; ಮತ್ತಾಯ 15:19, 20) ಆದರೂ ನಮ್ಮ ಹೃದಯವು​—ಅಪರಿಪೂರ್ಣ ಮಾನವರಾಗಿರುವ ನಮಗೆ ಶಕ್ಯವಾದಷ್ಟು ಮಟ್ಟಿಗೆ​—ಶುದ್ಧವಾಗಿದ್ದರೆ, ನಾವು “ಕೆಟ್ಟದ್ದಕ್ಕೆ ಹೋಗದೆ ಒಳ್ಳೆಯದನ್ನೇ ಮಾಡು”ವವರಾಗಿರುವೆವು. (ಕೀರ್ತನೆ 37:27; ಜ್ಞಾನೋಕ್ತಿ 3:7) ಹೀಗಿರುವಾಗ, ಪಟ್ಟಿಮಾಡಲ್ಪಟ್ಟವುಗಳಲ್ಲಿ ವಿವೇಕದ ಮೊದಲನೆಯ ಗುಣವು ನೈತಿಕ ಶುದ್ಧತೆ ಆಗಿರುವುದು ತಕ್ಕದಾಗಿದೆ ಅಲ್ಲವೇ? ಎಷ್ಟೆಂದರೂ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಾವು ಶುದ್ಧರಾಗಿರದೆ ಇದ್ದಲ್ಲಿ, ಮೇಲಣಿಂದ ಬರುವ ವಿವೇಕದ ಇತರ ಗುಣಗಳನ್ನು ನಾವು ನಿಜವಾಗಿಯೂ ಹೇಗೆ ಪ್ರದರ್ಶಿಸೇವು?

10, 11. (ಎ) ನಾವು ಸಮಾಧಾನ ಪ್ರವೃತ್ತಿಯವರಾಗಿರುವುದು ಏಕೆ ಮಹತ್ವವುಳ್ಳದ್ದು? (ಬಿ) ಜೊತೆ ಆರಾಧಕನೊಬ್ಬನ ಮನನೋಯಿಸಿದ್ದೀರೆಂದು ನಿಮಗೆ ಅನಿಸಿದರೆ, ನೀವು ಶಾಂತಿಕರ್ತರಾಗಿದ್ದೀರೆಂದು ಹೇಗೆ ಸಿದ್ಧಪಡಿಸಿ ತೋರಿಸುವಿರಿ? (ಪಾದಟಿಪ್ಪಣಿಯನ್ನೂ ನೋಡಿ.)

10“ಆಮೇಲೆ ಸಮಾಧಾನ ಪ್ರವೃತ್ತಿಯದ್ದು.” ಸ್ವರ್ಗೀಯ ವಿವೇಕವು, ದೇವರಾತ್ಮದ ಫಲಗಳಲ್ಲೊಂದಾಗಿರುವ ಸಮಾಧಾನವನ್ನು ಬೆನ್ನಟ್ಟುವಂತೆ ನಮ್ಮನ್ನು ಪ್ರೇರೇಪಿಸುತ್ತದೆ. (ಗಲಾತ್ಯ 5:22) ಯೆಹೋವನ ಜನರನ್ನು ಐಕ್ಯಗೊಳಿಸುವ “ಸಮಾಧಾನವೆಂಬ ಬಂಧನ”ವನ್ನು ಒಡೆಯದಿರಲು ನಾವು ಪ್ರಯಾಸಪಡುತ್ತೇವೆ. (ಎಫೆಸ 4:3) ಸಮಾಧಾನವು ಕದಡಿಸಲ್ಪಟ್ಟಾಗಲೂ ಅದನ್ನು ಪುನಸ್ಸ್ಥಾಪಿಸಲು ನಮ್ಮಿಂದಾದಷ್ಟು ಮಟ್ಟಿಗಿನ ಪ್ರಯತ್ನಗಳನ್ನು ನಾವು ಮಾಡುತ್ತೇವೆ. ಇದು ಯಾಕೆ ಪ್ರಾಮುಖ್ಯವಾಗಿದೆ? ಬೈಬಲು ಅನ್ನುವುದು: “ಸಮಾಧಾನದಿಂದಿರಿ; ಆಗ ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು ನಿಮ್ಮ ಸಂಗಡ ಇರುವನು.” (2 ಕೊರಿಂಥ 13:11) ಹೀಗೆ ನಾವೆಷ್ಟರ ತನಕ ಸಮಾಧಾನದಿಂದ ಜೀವಿಸುತ್ತಾ ಮುಂದುವರಿಯುವೆವೋ ಅಷ್ಟರ ತನಕ ಶಾಂತಿಯ ದೇವರು ನಮ್ಮೊಂದಿಗಿರುವನು. ನಮ್ಮ ಜೊತೆ ಆರಾಧಕರನ್ನು ನಾವು ಉಪಚರಿಸುವ ರೀತಿಯು, ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾದ ಪ್ರಭಾವವನ್ನು ಬೀರುತ್ತದೆ. ನಾವು ಶಾಂತಿಕರ್ತರಾಗಿದ್ದೇವೆಂದು ಹೇಗೆ ಸಿದ್ಧಪಡಿಸಿ ತೋರಿಸಬಲ್ಲೆವು? ಒಂದು ಉದಾಹರಣೆಯನ್ನು ಪರಿಗಣಿಸಿರಿ.

11 ಜೊತೆ ಆರಾಧಕನೊಬ್ಬನ ಮನಸ್ಸನ್ನು ನೋಯಿಸಿದ್ದೀರೆಂದು ನಿಮಗೆ ತಿಳಿದು ಬರುವಾಗ ನೀವೇನು ಮಾಡಬೇಕು? ಯೇಸುವಂದದ್ದು: “ಆದಕಾರಣ ನೀನು ನಿನ್ನ ಕಾಣಿಕೆಯನ್ನು ಯಜ್ಞವೇದಿಯ ಹತ್ತರಕ್ಕೆ ತಂದಾಗ ನಿನ್ನ ಸಹೋದರನ ಮನಸ್ಸಿನಲ್ಲಿ ನಿನ್ನ ಮೇಲೆ ಏನೋ ವಿರೋಧವದೆ ಎಂಬದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಯಜ್ಞವೇದಿಯ ಮುಂದೆಯೇ ಬಿಟ್ಟುಹೋಗಿ ಮೊದಲು ನಿನ್ನ ಸಹೋದರನ ಸಂಗಡ ಒಂದಾಗು [“ಸಮಾಧಾನವಾಗು,” NW]; ಆ ಮೇಲೆ ಬಂದು ನಿನ್ನ ಕಾಣಿಕೆಯನ್ನು ಕೊಡು.” (ಮತ್ತಾಯ 5:23, 24) ನಿಮ್ಮ ಸಹೋದರನ ಬಳಿ ಹೋಗುವುದಕ್ಕೆ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ ನೀವು ಈ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಬಲ್ಲಿರಿ. ಗುರಿಯೇನು? ನಿಮ್ಮ ಸಹೋದರನ ಸಂಗಡ “ಸಮಾಧಾನವಾಗು”ವುದೇ. * ಅದನ್ನು ಸಾಧಿಸಲಿಕ್ಕಾಗಿ, ನೀವು ಅವನ ಮನನೋಯಿಸಿದ್ದನ್ನು ಒಪ್ಪಿಕೊಳ್ಳಬೇಕಾದೀತು, ಅದನ್ನು ಅಲ್ಲಗಳೆಯುವುದಲ್ಲ. ಶಾಂತಿಯನ್ನು ಪುನಸ್ಸ್ಥಾಪಿಸುವ ಉದ್ದೇಶದಿಂದ ನೀವು ಅವನ ಬಳಿ ಹೋಗುವುದಾದರೆ ಮತ್ತು ಆ ಮನೋಭಾವವನ್ನು ಕಾಪಾಡಿಕೊಂಡರೆ, ಯಾವುದೇ ತಪ್ಪು ತಿಳಿವಳಿಕೆ ಯಾ ಮನಸ್ತಾಪವು ನೀಗಿಸಲ್ಪಡುವ ಸಂಭಾವ್ಯತೆಯಿದೆ, ತಕ್ಕದಾದ ಕ್ಷಮೆಯಾಚಿಸುವಿಕೆಗಳು ಮತ್ತು ಕ್ಷಮಾಪಣೆಗಳು ಮಾಡಲ್ಪಡುವವು. ಸಮಾಧಾನವನ್ನು ಮಾಡಲು ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದಾದರೆ, ದೈವಿಕ ವಿವೇಕದಿಂದ ನೀವು ನಡಿಸಲ್ಪಡುತ್ತಿದ್ದೀರೆಂದು ತೋರಿಸಿಕೊಡುವಿರಿ.

“ನ್ಯಾಯಸಮ್ಮತವಾದುದು, ವಿಧೇಯತೆ ತೋರಿಸಲು ಸಿದ್ಧವಾದುದು”

12, 13. (ಎ) ಯಾಕೋಬ 3:17 ರಲ್ಲಿ “ನ್ಯಾಯಸಮ್ಮತವಾದುದು” (NW) ಎಂದು ಭಾಷಾಂತರವಾಗಿರುವ ಶಬ್ದದ ಅರ್ಥವೇನು? (ಬಿ) ನಾವು ನ್ಯಾಯಸಮ್ಮತರೆಂದು ನಾವು ಹೇಗೆ ತೋರಿಸಬಲ್ಲೆವು?

12“ನ್ಯಾಯಸಮ್ಮತವಾದುದು.” ನ್ಯಾಯಸಮ್ಮತರಾಗಿರುವುದು ಎಂಬುದರ ಅರ್ಥವೇನು? ಬೈಬಲ್‌ ವಿದ್ವಾಂಸರಿಗೆ ಅನುಸಾರವಾಗಿ, “ನ್ಯಾಯಸಮ್ಮತವಾದುದು” ಎಂದು ಭಾಷಾಂತರವಾದ ಯಾಕೋಬ 3:17 ರ (NW) ಮೂಲ ಗ್ರೀಕ್‌ ಶಬ್ದವನ್ನು ಭಾಷಾಂತರಮಾಡುವುದು ಕಷ್ಟ. ಭಾಷಾಂತರಕಾರರು “ಸಾತ್ವಿಕತೆ,” “ವಿನಯ,” ಮತ್ತು “ಸೈರಣೆ” ಮುಂತಾದ ಪದಗಳನ್ನು ಉಪಯೋಗಿಸಿದ್ದಾರೆ. ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲ್‌ ಅದರ ಪಾದಟಿಪ್ಪಣಿಯಲ್ಲಿ ಆ ಪದದ ಅಕ್ಷರಾರ್ಥವು “ಮಣಿಯುವುದು” ಆಗಿದೆಯೆಂದು ಸೂಚಿಸುತ್ತದೆ. ಮೇಲಣ ವಿವೇಕದ ಈ ಅಂಶವು ನಮ್ಮಲ್ಲಿ ಕಾರ್ಯನಡಿಸುತ್ತಿದೆಯೆಂದು ನಾವು ಹೇಗೆ ತೋರಿಸಬಲ್ಲೆವು?

13 “ನಿಮ್ಮ ಸೈರಣೆಯು [“ನ್ಯಾಯಸಮ್ಮತತೆಯು,” NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ” ಎನ್ನುತ್ತದೆ ಫಿಲಿಪ್ಪಿ 4:5. ಇನ್ನೊಂದು ಭಾಷಾಂತರವು “ನ್ಯಾಯಸಮ್ಮತರೆಂಬ ಸತ್ಕೀರ್ತಿಯು ನಿಮಗಿರಲಿ” ಎಂದು ಓದುತ್ತದೆ. (ನ್ಯೂ ಟೆಸ್ಟಮೆಂಟ್‌ ಇನ್‌ ಮಾಡರ್ನ್‌ ಇಂಗ್ಲಿಷ್‌, ಜೆ. ಬಿ. ಫಿಲಿಪ್ಸ್‌ರಿಂದ) ಇದು ನಮ್ಮ ಬಗ್ಗೆ ಸ್ವತಃ ನಮಗೆ ಇರುವಂಥ ದೃಷ್ಟಿಕೋನದ ವಿಷಯವಲ್ಲ ಎಂಬುದನ್ನು ಗಮನಿಸಿರಿ; ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೆ, ಅಥವಾ ಯಾವ ರೀತಿಯ ಹೆಸರು ನಮಗಿದೆ ಎಂಬ ವಿಷಯವು ಅದಾಗಿದೆ. ನ್ಯಾಯಸಮ್ಮತತೆಯುಳ್ಳ ವ್ಯಕ್ತಿಯು ಯಾವಾಗಲೂ ಕಾನೂನನ್ನು ಅಕ್ಷರಶಃ ಕಟ್ಟುನಿಟ್ಟಾಗಿ ಪಾಲಿಸಲು ಇಲ್ಲವೆ ಎಲ್ಲವೂ ತನ್ನಿಚ್ಛೆಯ ಪ್ರಕಾರವೇ ನಡಿಯಬೇಕೆಂದು ಪಟ್ಟುಹಿಡಿಯುವುದಿಲ್ಲ. ಬದಲಿಗೆ, ಅವನು ಇತರರಿಗೆ ಕಿವಿಗೊಡಲು ಮತ್ತು ಸೂಕ್ತವಾಗಿರುವಲ್ಲೆಲ್ಲಾ ಅವರ ಇಚ್ಛೆಗಳಿಗೆ ಮಣಿಯಲು ಸಿದ್ಧನಿರುತ್ತಾನೆ. ಅವನು ಇತರರೊಂದಿಗಿನ ತನ್ನ ವ್ಯವಹಾರಗಳಲ್ಲಿ ಒರಟು ಅಥವಾ ಕಠೋರನಾಗಿರದೆ ಕೋಮಲಭಾವದವನಾಗಿದ್ದಾನೆ. ಇದು ಎಲ್ಲಾ ಕ್ರೈಸ್ತರಲ್ಲೂ ಇರಲೇಬೇಕಾದರೂ, ಹಿರಿಯರಾಗಿ ಸೇವೆಮಾಡುವವರಲ್ಲಿ ಪ್ರಮುಖವಾಗಿ ಇರಬೇಕು. ಕೋಮಲತೆಯು ಇತರರನ್ನು ಆಕರ್ಷಿಸುತ್ತದೆ, ಮತ್ತು ಇದರಿಂದಾಗಿ ಹಿರಿಯರ ಬಳಿಸಾರುವುದು ಸುಲಭವಾಗುತ್ತದೆ. (1 ಥೆಸಲೊನೀಕ 2:7, 8) ನಾವೆಲ್ಲರೂ ನಮ್ಮನ್ನು ಈ ರೀತಿಯಾಗಿ ಕೇಳಿಕೊಳ್ಳುವುದು ಹಿತಕರ: ‘ನಾನು ಪರಿಗಣನೆ ತೋರಿಸುವವನು, ಮಣಿಯುವವನು, ಮತ್ತು ವಿನಯವುಳ್ಳವನು ಆಗಿದ್ದೇನೆಂಬ ಹೆಸರು ನನಗಿದೆಯೊ?’

14. ನಾವು “ವಿಧೇಯತೆ ತೋರಿಸಲು ಸಿದ್ಧ”ರೆಂದು ಹೇಗೆ ತೋರಿಸಿಕೊಡಬಲ್ಲೆವು?

14“ವಿಧೇಯತೆ ತೋರಿಸಲು ಸಿದ್ಧವಾದುದು.” ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಬೇರೆಲ್ಲೂ “ವಿಧೇಯತೆ ತೋರಿಸಲು ಸಿದ್ಧ,” ಎಂದು ತರ್ಜುಮೆಯಾಗಿರುವ ಗ್ರೀಕ್‌ ಪದವು ಕಂಡುಬರುವುದಿಲ್ಲ. ಒಬ್ಬ ಬೈಬಲ್‌ ವಿದ್ವಾಂಸನಿಗನುಸಾರ ಈ ಶಬ್ದವು “ಹೆಚ್ಚಾಗಿ ಮಿಲಿಟರಿ ಶಿಸ್ತಿನ ಸಂಬಂಧದಲ್ಲಿ ಪ್ರಯೋಗಿಸಲ್ಪಡುತ್ತದೆ.” ಅದು “ಮನವೊಪ್ಪಿಸಲು ಸುಲಭವಾಗಿರುವುದು” ಮತ್ತು “ಅಧೀನತೆಯಲ್ಲಿರುವುದು” ಎಂಬ ವಿಚಾರವನ್ನು ಸೂಚಿಸುತ್ತದೆ. ಮೇಲಣಿಂದ ಬರುವ ವಿವೇಕದಿಂದ ನಿರ್ದೇಶಿಸಲ್ಪಡುವ ವ್ಯಕ್ತಿಯು ಶಾಸ್ತ್ರವಚನವು ಏನನ್ನುತ್ತದೋ ಅದಕ್ಕೆ ಸುಲಭವಾಗಿ ಅಧೀನನಾಗಲು ಸಿದ್ಧನಾಗಿರುತ್ತಾನೆ. ಮೊದಲೇ ನಿರ್ಣಯವನ್ನು ಮಾಡಿ, ಅದಕ್ಕೆ ವಿರುದ್ಧವಾದ ಯಾವುದೇ ನಿಜತ್ವಗಳಿದ್ದರೂ ಅದರಿಂದ ಪ್ರಭಾವಿಸಲ್ಪಡಲು ಒಪ್ಪದಿರುವ ವ್ಯಕ್ತಿ ಎಂಬ ಖ್ಯಾತಿ ಅವನಿಗಿರುವುದಿಲ್ಲ. ಅದರ ಬದಲಿಗೆ ಅವನು ತೆಗೆದುಕೊಂಡ ನಿಲುವು ತಪ್ಪು ಮತ್ತು ಅವನು ಮಾಡಿರುವ ನಿರ್ಣಯಗಳು ಸರಿಯಲ್ಲವೆಂಬುದಕ್ಕೆ ಶಾಸ್ತ್ರೀಯ ಆಧಾರವು ಸ್ಪಷ್ಟವಾಗಿ ನೀಡಲ್ಪಡುವಾಗ, ಅವನು ಕೂಡಲೆ ತಿದ್ದುಪಡಿಯನ್ನು ಮಾಡಲು ಸಿದ್ಧನಾಗಿರುವನು. ಇಂಥ ಹೆಸರು ನಿಮಗಿದೆಯೊ?

“ಕರುಣೆ ಹಾಗೂ ಸುಫಲಗಳಿಂದ ತುಂಬಿರುವಂಥದ್ದು”

15. ಕರುಣೆ ಎಂದರೇನು, ಮತ್ತು ಯಾಕೋಬ 3:17 ರಲ್ಲಿ “ಕರುಣೆ” ಮತ್ತು ‘ಸುಫಲಗಳು’ ಜೊತೆಯಾಗಿ ತಿಳಿಸಲ್ಪಟ್ಟಿರುವುದು ಏಕೆ ತಕ್ಕದ್ದಾಗಿದೆ?

15“ಕರುಣೆ ಹಾಗೂ ಸುಫಲಗಳಿಂದ ತುಂಬಿರುವಂಥದ್ದು.” * ಮೇಲಣಿಂದ ಬರುವ ವಿವೇಕದ ಒಂದು ಪ್ರಾಮುಖ್ಯ ಭಾಗವು ಕರುಣೆಯಾಗಿದೆ, ಯಾಕಂದರೆ ಅಂಥ ವಿವೇಕವು ‘ಕರುಣೆಯಿಂದ ತುಂಬಿರುತ್ತದೆ’ ಎಂದು ಹೇಳಲಾಗಿದೆ. “ಕರುಣೆ” ಮತ್ತು “ಸುಫಲ”ವು ಒಟ್ಟಾಗಿ ತಿಳಿಸಲ್ಪಟ್ಟಿರುವುದನ್ನು ಗಮನಿಸಿರಿ. ಇದು ತಕ್ಕದ್ದು ಯಾಕಂದರೆ ಹೆಚ್ಚಾಗಿ ಬೈಬಲಿನಲ್ಲಿ ಕರುಣೆಯು ಇತರರ ಕಡೆಗೆ ತೋರಿಸಲ್ಪಡುವ ಕ್ರಿಯಾಶೀಲ ಕಾಳಜಿ, ದಯಾಪರ ಕೃತ್ಯಗಳ ಸಮೃದ್ಧ ಫಸಲನ್ನು ಉತ್ಪಾದಿಸುವ ಕನಿಕರಕ್ಕೆ ಸೂಚಿಸುತ್ತದೆ. ಒಂದು ಪರಾಮರ್ಶೆ ಕೃತಿಯು ಕರುಣೆಯನ್ನು, “ಬೇರೆಯವರ ದುರವಸ್ಥೆಗಾಗಿ ದುಃಖಪಡುವ ಮತ್ತು ಅದರ ಬಗ್ಗೆ ಏನನ್ನಾದರೂ ಮಾಡಲು ಪ್ರಯತ್ನಿಸುವ ಒಂದು ಭಾವನೆ” ಎಂದು ಅರ್ಥನಿರೂಪಿಸುತ್ತದೆ. ಹೀಗಿರುವುದರಿಂದ ದೈವಿಕ ವಿವೇಕವು ಬರಡಾದದ್ದು, ನಿರ್ದಯವಾದದ್ದು ಅಥವಾ ಕೇವಲ ತಲೆಯಲ್ಲಿ ತುಂಬಿರುವ ಜ್ಞಾನವಲ್ಲ. ಬದಲಿಗೆ, ಅದು ಹಾರ್ದಿಕವೂ ಹೃತ್ಪೂರ್ವಕವೂ ಸೂಕ್ಷ್ಮಸಂವೇದಿಯೂ ಆಗಿರುತ್ತದೆ. ನಾವು ಕರುಣೆಯಿಂದ ತುಂಬಿದವರಾಗಿದ್ದೇವೆಂದು ಹೇಗೆ ತೋರಿಸಬಲ್ಲೆವು?

16, 17. (ಎ) ದೇವರ ಕಡೆಗೆ ಪ್ರೀತಿ ಮಾತ್ರವಲ್ಲದೆ ಬೇರೇನು ನಮ್ಮನ್ನು ಸಾರುವ ಕಾರ್ಯದಲ್ಲಿ ಭಾಗವಹಿಸಲು ಪ್ರೇರಿಸುತ್ತದೆ, ಮತ್ತು ಏಕೆ? (ಬಿ) ನಾವು ಕರುಣೆಯಿಂದ ತುಂಬಿದವರೆಂಬುದನ್ನು ಯಾವ ವಿಧಗಳಲ್ಲಿ ತೋರಿಸಬಲ್ಲೆವು?

16 ನಿಶ್ಚಯವಾಗಿಯೂ ಒಂದು ಪ್ರಾಮುಖ್ಯ ವಿಧಾನವು, ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚುವುದೇ ಆಗಿದೆ. ಈ ಕಾರ್ಯವನ್ನು ಮಾಡಲು ನಮ್ಮನ್ನು ಪ್ರೇರಿಸುವಂಥದ್ದು ಯಾವುದು? ಪ್ರಧಾನವಾಗಿ ದೇವರ ಕಡೆಗಿನ ಪ್ರೀತಿಯೇ ಆಗಿದೆ. ಆದರೆ ಇತರರ ಕಡೆಗೆ ನಮಗಿರುವ ಕರುಣೆ ಮತ್ತು ಕನಿಕರದಿಂದಲೂ ನಾವು ಪ್ರೇರಿಸಲ್ಪಡುತ್ತೇವೆ. (ಮತ್ತಾಯ 22:37-39) ಇಂದು ಅನೇಕರು “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ” ಹೋಗಿದ್ದಾರೆ. (ಮತ್ತಾಯ 9:36) ಸುಳ್ಳು ಧಾರ್ಮಿಕ ಮುಖಂಡರಿಂದ ಅವರು ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಮತ್ತು ಆಧ್ಯಾತ್ಮಿಕವಾಗಿ ಕುರುಡಾಗಿಸಲ್ಪಟ್ಟಿದ್ದಾರೆ. ಇದರಿಂದಾಗಿ, ದೇವರ ವಾಕ್ಯದಲ್ಲಿರುವ ವಿವೇಕಯುತ ಮಾರ್ಗದರ್ಶನದ ಕುರಿತಾಗಲಿ ಆ ರಾಜ್ಯವು ಭೂಮಿಗೆ ಬೇಗನೇ ತರಲಿರುವ ಆಶೀರ್ವಾದಗಳ ಕುರಿತಾಗಲಿ ಅವರಿಗೆ ತಿಳಿದಿರುವದಿಲ್ಲ. ಹೀಗೆ ನಾವು ನಮ್ಮ ಸುತ್ತಮುತ್ತಲಿರುವ ಜನರ ಆಧ್ಯಾತ್ಮಿಕ ಅಗತ್ಯಗಳ ಕುರಿತು ಯೋಚಿಸುವಾಗ, ಯೆಹೋವನ ಪ್ರೀತಿಪರ ಉದ್ದೇಶವನ್ನು ಅವರಿಗೆ ತಿಳಿಸಲು ನಮ್ಮಿಂದಾದದ್ದೆಲ್ಲವನ್ನು ಮಾಡುವಂತೆ ನಮ್ಮ ಹೃತ್ಪೂರ್ವಕ ಕನಿಕರವು ನಮ್ಮನ್ನು ಪ್ರೇರೇಪಿಸುತ್ತದೆ.

ನಾವು ಇತರರಿಗೆ ಕರುಣೆಯನ್ನು ಅಥವಾ ಕನಿಕರವನ್ನು ತೋರಿಸುವಾಗ, “ಮೇಲಣಿಂದ ಬರುವ ವಿವೇಕವನ್ನು” ಪ್ರತಿಬಿಂಬಿಸುತ್ತೇವೆ

17 ಬೇರೆ ಯಾವ ವಿಧಗಳಲ್ಲಿ ನಾವು ಕರುಣೆಯಿಂದ ತುಂಬಿದವರೆಂದು ತೋರಿಸಬಲ್ಲೆವು? ಕಳ್ಳರಿಂದ ದೋಚಲ್ಪಟ್ಟು, ಹೊಡೆಯಲ್ಪಟ್ಟು ದಾರಿಪಕ್ಕದಲ್ಲಿ ಬಿದ್ದಿದ್ದ ಒಬ್ಬ ಪ್ರಯಾಣಿಕನನ್ನು ಉಪಚರಿಸಿದ ಸಮಾರ್ಯದವನ ಕುರಿತಾದ ಯೇಸುವಿನ ಸಾಮ್ಯವನ್ನು ನೆನಪಿಗೆ ತನ್ನಿರಿ. ಕನಿಕರದಿಂದ ಪ್ರೇರಿತನಾದ ಆ ಸಮಾರ್ಯದವನು, ಗಾಯಗೊಂಡವನ ಗಾಯಗಳನ್ನು ಕಟ್ಟಿ ಅವನ ಆರೈಕೆ ಮಾಡುವ ಮೂಲಕ ‘ಕರುಣೆಯಿಂದ ವರ್ತಿಸಿದನು.’ (ಲೂಕ 10:29-37, NW) ಅಗತ್ಯವಿರುವವರಿಗೆ ಪ್ರಾಯೋಗಿಕ ಸಹಾಯವನ್ನು ನೀಡುವುದು ಕರುಣೆಯಲ್ಲಿ ಒಳಗೂಡಿರುತ್ತದೆಂದು ಇದು ತೋರಿಸುವುದಿಲ್ಲವೇ? “ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ,” ಎಂದು ಬೈಬಲು ನಮಗನ್ನುತ್ತದೆ. (ಗಲಾತ್ಯ 6:10) ಕೆಲವು ಸಂಭಾವ್ಯತೆಗಳನ್ನು ಗಮನಕ್ಕೆ ತನ್ನಿರಿ. ವೃದ್ಧ ಜೊತೆ ವಿಶ್ವಾಸಿಯೊಬ್ಬರಿಗೆ ಕ್ರೈಸ್ತ ಕೂಟಗಳಿಗೆ ಹೋಗಿ ಬರಲು ವಾಹನ ಸೌಕರ್ಯದ ಅಗತ್ಯವಿದ್ದೀತು. ಸಭೆಯಲ್ಲಿರುವ ವಿಧವೆಯೊಬ್ಬಳಿಗೆ ಅವಳ ಮನೆಯಲ್ಲಿ ಕೆಲವು ರಿಪೇರಿ ಕೆಲಸಗಳನ್ನು ಮಾಡಲು ಸಹಾಯದ ಅಗತ್ಯವಿರಬಹುದು. (ಯಾಕೋಬ 1:27) ನಿರುತ್ತೇಜಿತ ವ್ಯಕ್ತಿಯೊಬ್ಬನಿಗೆ “ಕನಿಕರದ ಮಾತು” ಗೆಲುವನ್ನು ತಂದೀತು. (ಜ್ಞಾನೋಕ್ತಿ 12:25) ನಾವು ಈ ರೀತಿಗಳಲ್ಲಿ ಕರುಣೆಯನ್ನು ತೋರಿಸುವಾಗ, ಮೇಲಣಿಂದ ಬರುವ ವಿವೇಕವು ನಮ್ಮಲ್ಲಿ ಕಾರ್ಯನಡಿಸುತ್ತಿದೆಯೆಂಬುದಕ್ಕೆ ನಾವು ಪುರಾವೆಯನ್ನು ಕೊಡುತ್ತೇವೆ.

‘ಪಕ್ಷಭೇದಗಳನ್ನು ಮಾಡದಿರುವುದು, ಕಪಟಾಚರಣೆಯಿಲ್ಲದ್ದು’

18. ಮೇಲಣಿಂದ ಬರುವ ವಿವೇಕದಿಂದ ನಾವು ಮಾರ್ಗದರ್ಶಿಸಲ್ಪಟ್ಟಿರುವುದಾದರೆ, ನಮ್ಮ ಹೃದಯದಿಂದ ನಾವೇನನ್ನು ಬೇರುಸಮೇತ ಕಿತ್ತುಹಾಕಲು ಪ್ರಯತ್ನಿಸಬೇಕು, ಮತ್ತು ಏಕೆ?

18‘ಪಕ್ಷಭೇದಗಳನ್ನು ಮಾಡದಿರುವುದು.’ ದೈವಿಕ ವಿವೇಕವು ಜಾತೀಯ ಪೂರ್ವಾಗ್ರಹ ಮತ್ತು ರಾಷ್ಟ್ರಾಭಿಮಾನಕ್ಕೆ ಈಡಾಗದೆ ಮೇಲ್ಮಟ್ಟದಲ್ಲಿರುತ್ತದೆ. ನಾವು ಅಂಥ ವಿವೇಕದಿಂದ ಮಾರ್ಗದರ್ಶಿಸಲ್ಪಡುವಲ್ಲಿ, ಪಕ್ಷಪಾತವನ್ನು ತೋರಿಸುವ ಯಾವುದೇ ಪ್ರವೃತ್ತಿಯನ್ನು ನಮ್ಮ ಹೃದಯದಿಂದ ಬೇರುಸಮೇತ ಕಿತ್ತುಹಾಕಲು ಪ್ರಯಾಸಪಡುವೆವು. (ಯಾಕೋಬ 2:9) ಬೇರೆಯವರ ಶೈಕ್ಷಣಿಕ ಹಿನ್ನೆಲೆ, ಆರ್ಥಿಕ ಅಂತಸ್ತು, ಅಥವಾ ಸಭಾ ಜವಾಬ್ದಾರಿಯ ಆಧಾರದ ಮೇಲೆ ಅವರಿಗೆ ಹೆಚ್ಚು ಅಭಿಮಾನಭರಿತ ಉಪಚಾರವನ್ನು ನಾವು ನೀಡುವುದಿಲ್ಲ; ಇಲ್ಲವೆ ನಮ್ಮ ಜೊತೆ ಆರಾಧಕರಲ್ಲಿ ಯಾರನ್ನೂ ಅವರೆಷ್ಟೇ ದೀನಸ್ಥಿತಿಯಲ್ಲಿರುವಂತೆ ಕಂಡುಬಂದರೂ ಅವರನ್ನು ಕೀಳಾಗಿ ನೋಡುವುದಿಲ್ಲ. ಅಂಥವರನ್ನು ಯೆಹೋವನೇ ತನ್ನ ಪ್ರೀತಿಗೆ ಪಾತ್ರರನ್ನಾಗಿ ಮಾಡಿರುವಾಗ, ನಮ್ಮ ಪ್ರೀತಿಗೂ ಅವರು ಅರ್ಹರೆಂದು ನಾವು ನಿಶ್ಚಯವಾಗಿಯೂ ಎಣಿಸಬೇಕು.

19, 20. (ಎ) “ಕಪಟಿ”ಗಾಗಿರುವ ಗ್ರೀಕ್‌ ಶಬ್ದದ ಹಿನ್ನೆಲೆಯೇನು? (ಬಿ) ‘ನಿಷ್ಕಪಟವಾದ ಸಹೋದರಸ್ನೇಹವನ್ನು’ ನಾವು ಹೇಗೆ ಪ್ರದರ್ಶಿಸುತ್ತೇವೆ, ಮತ್ತು ಇದು ಏಕೆ ಪ್ರಾಮುಖ್ಯ?

19‘ಕಪಟಾಚರಣೆಯಿಲ್ಲದ್ದು.’ “ಕಪಟಿ”ಗಾಗಿರುವ ಗ್ರೀಕ್‌ ಶಬ್ದವು “ಒಂದು ಪಾತ್ರವನ್ನು ಅಭಿನಯಿಸಿದ ನಟನಿಗೆ” ಸೂಚಿತವಾಗಬಲ್ಲದು. ಪುರಾತನ ಕಾಲಗಳಲ್ಲಿ ಗ್ರೀಕ್‌ ಮತ್ತು ರೋಮನ್‌ ನಟರು ನಾಟಕಗಳಲ್ಲಿ ಅಭಿನಯಿಸುವಾಗ ದೊಡ್ಡದೊಡ್ಡ ಮುಖವಾಡಗಳನ್ನು ಧರಿಸುತ್ತಿದ್ದರು. ಆದುದರಿಂದ, “ಕಪಟಿ”ಗಾಗಿರುವ ಗ್ರೀಕ್‌ ಶಬ್ದವು ಒಂದು ಸೋಗನ್ನು ಹಾಕಿಕೊಳ್ಳುವವನಿಗೆ, ನಟನೆ ಮಾಡುವವನಿಗೆ ಅನ್ವಯಿಸಲಾರಂಭಿಸಲ್ಪಟ್ಟಿತು. ದೈವಿಕ ವಿವೇಕದ ಈ ಅಂಶವು, ನಮ್ಮ ಜೊತೆ ವಿಶ್ವಾಸಿಗಳನ್ನು ನಾವು ಹೇಗೆ ಉಪಚರಿಸುತ್ತೇವೆಂಬುದನ್ನು ಮಾತ್ರವಲ್ಲ, ಅವರ ಬಗ್ಗೆ ನಮ್ಮ ಅನಿಸಿಕೆಯನ್ನೂ ಪ್ರಭಾವಿಸಬೇಕು.

20 ‘ಸತ್ಯೋಪದೇಶಕ್ಕೆ ವಿಧೇಯತೆಯು’ ನಮ್ಮನ್ನು ‘ನಿಷ್ಕಪಟವಾದ ಸಹೋದರಸ್ನೇಹಕ್ಕೆ’ ನಡಿಸತಕ್ಕದ್ದೆಂದು ಅಪೊಸ್ತಲ ಪೇತ್ರನು ಹೇಳಿದನು. (1 ಪೇತ್ರ 1:22) ಹೌದು, ನಮ್ಮ ಸಹೋದರರ ಕಡೆಗಿರುವ ನಮ್ಮ ಪ್ರೀತಿಯು ಮೇಲುಮೇಲಿನ ನಟನೆಯಾಗಿರಬಾರದು. ಇತರರ ಕಣ್ಣಿಗೆ ಮಣ್ಣೆರಚಲಿಕ್ಕಾಗಿ ನಾವು ಮುಖವಾಡಗಳನ್ನು ಧರಿಸುವುದಿಲ್ಲ, ಇಲ್ಲವೆ ನಾಟಕವಾಡುವುದಿಲ್ಲ. ನಮ್ಮ ಒಲುಮೆಯು ನೈಜವಾದದ್ದೂ ಹೃತ್ಪೂರ್ವಕವೂ ಆಗಿರಲೇಬೇಕು. ಹಾಗಿದ್ದರೆ ಮಾತ್ರ ನಾವು ನಮ್ಮ ಜೊತೆ ವಿಶ್ವಾಸಿಗಳ ಭರವಸೆಯನ್ನು ಗಳಿಸುವೆವು, ಯಾಕಂದರೆ ನಾವು ಹೊರಗೆ ಹೇಗೆ ತೋರುತ್ತೇವೊ ಒಳಗೂ ಹಾಗೆಯೇ ಇದ್ದೇವೆಂದು ಅವರಿಗೆ ತಿಳಿದುಬರುವುದು. ಅಂಥ ಸಾಚಾತನವು ಕ್ರೈಸ್ತರ ನಡುವಣ ಮುಚ್ಚುಮರೆಯಿಲ್ಲದ ಮತ್ತು ಪ್ರಾಮಾಣಿಕ ಸಂಬಂಧಗಳಿಗೆ ದಾರಿಮಾಡುವುದು ಹಾಗೂ ಸಭೆಯಲ್ಲಿ ಒಂದು ಭರವಸೆಯ ವಾತಾವರಣವನ್ನು ಸೃಷ್ಟಿಸುವುದು.

‘ಪ್ರಾಯೋಗಿಕ ವಿವೇಕವನ್ನು ಭದ್ರವಾಗಿಟ್ಟುಕೋ’

21, 22. (ಎ) ಸೊಲೊಮೋನನು ವಿವೇಕವನ್ನು ಭದ್ರಪಡಿಸಿಕೊಳ್ಳಲು ತಪ್ಪಿದ್ದು ಹೇಗೆ? (ಬಿ) ವಿವೇಕವನ್ನು ನಾವು ಹೇಗೆ ಭದ್ರವಾಗಿಟ್ಟುಕೊಳ್ಳಬಲ್ಲೆವು, ಮತ್ತು ಹಾಗೆ ಮಾಡುವುದರಿಂದ ನಾವು ಹೇಗೆ ಪ್ರಯೋಜನ ಹೊಂದುವೆವು?

21 ದೈವಿಕ ವಿವೇಕವು ಯೆಹೋವನಿಂದ ಬರುವ ಒಂದು ವರದಾನವಾಗಿದೆ, ಅದನ್ನು ನಾವು ಭದ್ರವಾಗಿಟ್ಟುಕೊಳ್ಳಬೇಕು. ಸೊಲೊಮೋನನು ಹೇಳಿದ್ದು: “ಮಗನೇ, . . . ಪ್ರಾಯೋಗಿಕ ವಿವೇಕವನ್ನೂ ಆಲೋಚನಾ ಶಕ್ತಿಯನ್ನೂ ಭದ್ರವಾಗಿಟ್ಟುಕೋ.” (ಜ್ಞಾನೋಕ್ತಿ 3:​21, NW) ಆದರೆ ಸ್ವತಃ ಸೊಲೊಮೋನನೇ ಹಾಗೆ ಮಾಡಲು ತಪ್ಪಿದ್ದು ವಿಷಾದಕರವೇ ಸರಿ. ಎಷ್ಟರ ತನಕ ಒಂದು ವಿಧೇಯ ಹೃದಯವನ್ನು ಕಾಪಾಡಿಕೊಂಡನೋ ಅಷ್ಟರ ತನಕ ಅವನು ವಿವೇಕಿಯಾಗಿದ್ದನು. ಆದರೆ ಕಟ್ಟಕಡೆಗೆ ಅವನ ಅನೇಕಾನೇಕ ವಿದೇಶೀ ಹೆಂಡತಿಯರು ಅವನ ಹೃದಯವನ್ನು ಯೆಹೋವನ ಶುದ್ಧಾರಾಧನೆಯಿಂದ ದೂರಸೆಳೆದರು. (1 ಅರಸುಗಳು 11:1-8) ಜ್ಞಾನವನ್ನು ನಾವು ಸದುಪಯೋಗಕ್ಕೆ ಹಾಕದಿದ್ದರೆ ಅದಕ್ಕೆ ಯಾವ ಬೆಲೆಯೂ ಇಲ್ಲವೆಂದು ಸೊಲೊಮೋನನ ಅಂತಿಮ ಸ್ಥಿತಿಯು ಚೆನ್ನಾಗಿ ಚಿತ್ರಿಸುತ್ತದೆ.

22 ಪ್ರಾಯೋಗಿಕ ವಿವೇಕವನ್ನು ನಾವು ಹೇಗೆ ಭದ್ರವಾಗಿಟ್ಟುಕೊಳ್ಳಬಲ್ಲೆವು? ನಾವು ಕ್ರಮವಾಗಿ ಬೈಬಲನ್ನು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಒದಗಿಸುವ ಬೈಬಲಾಧಾರಿತ ಪ್ರಕಾಶನಗಳನ್ನು ಓದಬೇಕು ಮಾತ್ರವಲ್ಲ ನಾವು ಏನನ್ನು ಕಲಿಯುತ್ತೇವೋ ಅದನ್ನು ಅನ್ವಯಿಸಿಕೊಳ್ಳಲು ಸಹ ಪ್ರಯತ್ನಿಸಬೇಕು. (ಮತ್ತಾಯ 24:45) ದೈವಿಕ ವಿವೇಕವನ್ನು ಅನ್ವಯಿಸಿಕೊಳ್ಳಲು ನಮಗೆ ಎಷ್ಟೋ ಒಳ್ಳೆಯ ಕಾರಣಗಳಿವೆ. ಅದು ನಮ್ಮ ಪ್ರಸ್ತುತ ಜೀವನ ರೀತಿಯನ್ನು ಉತ್ತಮಗೊಳಿಸುವುದು. “ವಾಸ್ತವವಾದ ಜೀವವನ್ನು” ಅಂದರೆ ದೇವರ ಹೊಸ ಲೋಕದಲ್ಲಿನ ಜೀವನವನ್ನು ಭದ್ರವಾಗಿಟ್ಟುಕೊಳ್ಳಲು ಅದು ನಮಗೆ ಸಾಧ್ಯಗೊಳಿಸುವುದು. (1 ತಿಮೊಥೆಯ 6:18) ಎಲ್ಲದಕ್ಕಿಂತ ಹೆಚ್ಚು ಪ್ರಾಮುಖ್ಯವಾಗಿ, ಮೇಲಣಿಂದ ಬರುವ ವಿವೇಕವನ್ನು ಬೆಳೆಸಿಕೊಳ್ಳುವುದು ನಮ್ಮನ್ನು ಸಕಲ ವಿವೇಕದ ಮೂಲನಾದ ಯೆಹೋವ ದೇವರ ಸಮೀಪಕ್ಕೆ ಸೆಳೆಯುವುದು.

^ ಪ್ಯಾರ. 1 ಒಂದನೆಯ ಅರಸುಗಳು 3:16 ಕ್ಕನುಸಾರವಾಗಿ, ಆ ಇಬ್ಬರು ಹೆಂಗಸರು ಸೂಳೆಯರಾಗಿದ್ದರು. ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕವು ಹೇಳುವುದು: “ಆ ಸ್ತ್ರೀಯರು ಸೂಳೆಯರು ಆಗಿದ್ದಿರಬಹುದಾದರೂ ದೇಹವಿಕ್ರಯಮಾಡಿ ಜೀವಿಸುವ ಅರ್ಥದಲ್ಲಿ ಅಲ್ಲ. ಇವರು ಜಾರತ್ವ ಮಾಡಿದ್ದ ಯೆಹೂದಿ ಹೆಂಗಸರು ಆಗಿದ್ದಿರಬೇಕು, ಅಥವಾ ಪರದೇಶೀಯ ಸ್ತ್ರೀಯರು ಆಗಿದ್ದಿರುವ ಸಾಧ್ಯತೆ ಹೆಚ್ಚು.”​—ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

^ ಪ್ಯಾರ. 11 “ಸಮಾಧಾನವಾಗು” ಎಂದು ಭಾಷಾಂತರಿಸಲ್ಪಟ್ಟ ಗ್ರೀಕ್‌ ಹೇಳಿಕೆಯು “ಮಾರ್ಪಡಿಸು, ವಿನಿಮಯಮಾಡಿಕೊ,” ಮತ್ತು ಈ ಕಾರಣದಿಂದ “ರಾಜಿಮಾಡಿಕೊಳ್ಳುವುದು” ಎಂಬರ್ಥವುಳ್ಳ ಕ್ರಿಯಾಪದದಿಂದ ಬರುತ್ತದೆ. ಆದುದರಿಂದ ನಿಮ್ಮ ಧ್ಯೇಯವು ಒಂದು ಬದಲಾವಣೆಯನ್ನು ತರುವುದಾಗಿದೆ, ಮತ್ತು ಸಾಧ್ಯವಿದ್ದಲ್ಲಿ ಮನನೊಂದಿರುವ ವ್ಯಕ್ತಿಯ ಹೃದಯದಲ್ಲಿನ ಹಗೆಯನ್ನು ತೆಗೆದುಹಾಕುವುದಾಗಿದೆ.​—ರೋಮಾಪುರ 12:18.

^ ಪ್ಯಾರ. 15 ಇನ್ನೊಂದು ಭಾಷಾಂತರವು ಈ ಮಾತುಗಳನ್ನು “ಕನಿಕರ ಹಾಗೂ ಸುಕೃತ್ಯಗಳಿಂದ ತುಂಬಿರುವಂಥದ್ದು” ಎಂದು ತರ್ಜುಮೆಮಾಡಿದೆ.​—ಎ ಟ್ರಾನ್ಸ್‌ಲೇಶನ್‌ ಇನ್‌ ದ ಲ್ಯಾಂಗ್ವೆಜ್‌ ಆಫ್‌ ದ ಪೀಪಲ್‌, ಚಾರ್ಲ್ಸ್‌ ಬಿ. ವಿಲ್ಯಮ್ಸ್‌ರಿಂದ.