ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 25

“ನಮ್ಮ ದೇವರ ಕೋಮಲ ಕನಿಕರ”

“ನಮ್ಮ ದೇವರ ಕೋಮಲ ಕನಿಕರ”

1, 2. (ಎ) ಒಬ್ಬ ತಾಯಿಯು ಅಳುತ್ತಿರುವ ತನ್ನ ಮಗುವಿಗೆ ಸಹಜವಾಗಿಯೇ ಹೇಗೆ ಪ್ರತಿಕ್ರಿಯೆ ತೋರಿಸುತ್ತಾಳೆ? (ಬಿ) ತಾಯಿಯ ಕನಿಕರಕ್ಕಿಂತಲೂ ಅತಿ ಬಲವಾದ ಭಾವನೆಯು ಯಾವುದು?

ನಡುರಾತ್ರಿಯಲ್ಲಿ ಮಗುವೊಂದು ಅಳಲು ಆರಂಭಿಸುತ್ತದೆ. ಕೂಡಲೆ ತಾಯಿಗೆ ಎಚ್ಚರವಾಗುತ್ತದೆ. ಮಗು ಹುಟ್ಟಿದಂದಿನಿಂದ ಅವಳಿಗೆ ಹಿಂದಿನಂತೆ ಗಾಢನಿದ್ರೆ ಬರುವುದಿಲ್ಲ. ಆಕೆ ತನ್ನ ಕೂಸಿನ ಅಳುವಿನಲ್ಲಿರುವ ವೈವಿಧ್ಯಗಳನ್ನು ಗುರುತಿಸಲು ಈಗ ಕಲಿತಿದ್ದಾಳೆ. ಆದಕಾರಣ ಮಗುವಿನ ಅಳುವಿನಿಂದಲೇ, ಅದಕ್ಕೆ ಹಸಿವೆಯಾಗಿದೆಯೊ, ಅದನ್ನು ಮುದ್ದುಮಾಡಬೇಕೊ ಇಲ್ಲವೆ ಆರೈಕೆಮಾಡಬೇಕೊ ಎಂದಾಕೆ ಅನೇಕವೇಳೆ ಹೇಳಬಲ್ಲಳು. ಆದರೆ ಮಗು ಯಾವ ಕಾರಣಕ್ಕಾಗಿಯೇ ಅಳುತ್ತಿರಲಿ, ತಾಯಿ ಸ್ಪಂದಿಸುತ್ತಾಳೆ. ತನ್ನ ಮಗುವಿನ ಅಗತ್ಯಗಳನ್ನು ಅಸಡ್ಡೆಮಾಡುವಂತೆ ಆಕೆಗೆ ಸ್ವಲ್ಪವೂ ಮನಸ್ಸಾಗದು.

2 ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವಿಗಾಗಿ ತಾಯಿಯಲ್ಲಿರುವ ಕನಿಕರವು, ಮಾನವರಿಗೆ ತಿಳಿದಿರುವವುಗಳಲ್ಲೇ ಅತ್ಯಂತ ಕೋಮಲವಾದ ಭಾವನೆಗಳಲ್ಲಿ ಒಂದಾಗಿದೆ. ಆದರೂ ಅದಕ್ಕಿಂತಲೂ ಅಪರಿಮಿತವಾಗಿ ಬಲವಾದ ಒಂದು ಭಾವನೆಯಿದೆ​—ನಮ್ಮ ದೇವರಾದ ಯೆಹೋವನ ಕೋಮಲ ಕನಿಕರವೇ ಅದು. ಈ ಮನಮೋಹಕ ಗುಣದ ಚರ್ಚೆಯು ನಾವು ಯೆಹೋವನ ಇನ್ನೂ ಸಮೀಪಕ್ಕೆ ಹೋಗುವಂತೆ ಸಹಾಯಮಾಡಬಲ್ಲದು. ಆದುದರಿಂದ ಕನಿಕರವೆಂದರೇನು ಮತ್ತು ದೇವರು ಅದನ್ನು ಹೇಗೆ ತೋರಿಸುತ್ತಾನೆಂಬುದನ್ನು ನಾವೀಗ ಚರ್ಚಿಸೋಣ.

ಕನಿಕರವೆಂದರೇನು?

3. “ಕರುಣಿಸು” ಇಲ್ಲವೆ “ದಯೆ ತೋರು” ಎಂದು ತರ್ಜುಮೆಯಾದ ಹೀಬ್ರು ಕ್ರಿಯಾಪದದ ಅರ್ಥವೇನು?

3 ಕನ್ನಡ ಬೈಬಲಿನಲ್ಲಿ ಕನಿಕರ ಎಂಬ ಪದವನ್ನು ಕರುಣೆ ಎಂದಾಗಿಯೂ ಭಾಷಾಂತರಿಸಲಾಗಿದೆ. ಇದು ಸೂಕ್ತವಾಗಿದೆ ಏಕೆಂದರೆ ಕನಿಕರ ಮತ್ತು ಕರುಣೆಯ ನಡುವೆ ಹತ್ತಿರದ ಸಂಬಂಧವು ಸೂಚಿಸಲ್ಪಟ್ಟಿದೆ. ಹಲವಾರು ಹೀಬ್ರು ಮತ್ತು ಗ್ರೀಕ್‌ ಪದಗಳು ಕೋಮಲವಾದ ಕನಿಕರದ ಅರ್ಥವನ್ನು ವ್ಯಕ್ತಪಡಿಸುತ್ತವೆ. ಉದಾಹರಣೆಗಾಗಿ, ಹೀಬ್ರು ಕ್ರಿಯಾಪದ ರಾಕಾಮ್‌ ಅನ್ನು ಪರಿಗಣಿಸಿರಿ. ಅದನ್ನು ಅನೇಕಸಾರಿ “ಕರುಣಿಸು” ಇಲ್ಲವೆ “ದಯೆ ತೋರು” ಎಂಬುದಾಗಿ ತರ್ಜುಮೆಮಾಡಲಾಗಿದೆ. ಈ ಕ್ರಿಯಾಪದ ರಾಕಾಮ್‌, “ನಮಗೆ ಪ್ರಿಯರಾದವರಲ್ಲಿ ಅಥವಾ ನಮ್ಮ ಸಹಾಯದ ಅಗತ್ಯವಿರುವವರಲ್ಲಿ ಬಲಹೀನತೆ ಅಥವಾ ನರಳುವಿಕೆಯನ್ನು ನೋಡಿದಾಕ್ಷಣ ನಮ್ಮಲ್ಲಿ ಹುಟ್ಟುವ ಗಾಢವಾದ ಮತ್ತು ಕೋಮಲವಾದ ಕನಿಕರದ ಭಾವನೆಯನ್ನು ವ್ಯಕ್ತಪಡಿಸುತ್ತದೆ” ಎಂದು ಒಂದು ಪರಾಮರ್ಶ ಕೃತಿಯು ವಿವರಿಸುತ್ತದೆ. ಯೆಹೋವನು ತನಗಾಗಿ ಅನ್ವಯಿಸಿಕೊಳ್ಳುವ ಈ ಹೀಬ್ರು ಪದರೂಪವು “ಗರ್ಭ” ಎಂಬ ಪದಕ್ಕೆ ಸಂಬಂಧಿಸಿದೆ ಮತ್ತು “ಮಾತೃಸಹಜ ಕನಿಕರ”ವೆಂದು ವರ್ಣಿಸಲ್ಪಡಬಲ್ಲದು. *​—ವಿಮೋಚನಕಾಂಡ 33:19; ಯೆರೆಮೀಯ 33:​26, NW.

‘ಒಬ್ಬ ಹೆಂಗಸು ತಾನು ಹೆತ್ತ ಮಗುವನ್ನು ಮರೆತಾಳೇ?’

4, 5. ಯೆಹೋವನ ಕನಿಕರದ ಕುರಿತು ನಮಗೆ ಕಲಿಸಲಿಕ್ಕಾಗಿ, ಒಬ್ಬ ತಾಯಿಗೆ ತನ್ನ ಮಗುವಿನ ಕಡೆಗಿರುವ ಭಾವನೆಗಳನ್ನು ಬೈಬಲು ಹೇಗೆ ಉಪಯೋಗಿಸಿದೆ?

4 ಯೆಹೋವನ ಕನಿಕರದ ಕುರಿತಾದ ಅರ್ಥವನ್ನು ನಮಗೆ ಕಲಿಸಲಿಕ್ಕಾಗಿ, ಒಬ್ಬ ತಾಯಿಗೆ ತನ್ನ ಮಗುವಿನ ಕಡೆಗಿರುವ ಭಾವನೆಗಳನ್ನು ಬೈಬಲು ಉಪಯೋಗಿಸುತ್ತದೆ. ಯೆಶಾಯ 49:15 ರಲ್ಲಿ ನಾವು ಓದುವುದು: “ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆ [ರಾಕಾಮ್‌]ಯಿಡದೆ ತನ್ನ ಮೊಲೆಕೂಸನ್ನು ಮರೆತಾಳೇ? ಒಂದು ವೇಳೆ ಮರೆತಾಳು, ನಾನಾದರೆ ನಿನ್ನನ್ನು ಮರೆಯೆ.” ಈ ಹೃದಯಸ್ಪರ್ಶಿ ವರ್ಣನೆಯು ತನ್ನ ಜನರಿಗಾಗಿ ಯೆಹೋವನಿಗಿರುವ ಕನಿಕರದ ಅಗಾಧತೆಯನ್ನು ಒತ್ತಿಹೇಳುತ್ತದೆ. ಅದು ಹೇಗೆ?

5 ತನ್ನ ಮೊಲೆಕೂಸನ್ನು ಪೋಷಿಸಿ ಪಾಲಿಸಲು ತಾಯಿಯೊಬ್ಬಳು ಮರೆತಾಳೆಂಬುದನ್ನು ಊಹಿಸುವುದೂ ಕಷ್ಟ. ಎಷ್ಟೆಂದರೂ ಒಂದು ಚಿಕ್ಕ ಕೂಸು ನಿಸ್ಸಹಾಯಕವಾಗಿದೆ; ಹಗಲೂರಾತ್ರಿ ಅದಕ್ಕೆ ತಾಯಿಯ ಗಮನ ಮತ್ತು ಮಮತೆಯ ಅಗತ್ಯವಿದೆ. ಆದರೂ ತಾಯಂದಿರ ಅಸಡ್ಡೆಯು ಇಂದು ಕೇಳಿರದಂಥ ವಿಷಯವಾಗಿ ಉಳಿದಿಲ್ಲ; ವಿಶೇಷವಾಗಿ “ಮಮತೆಯ” ಕೊರತೆಯು ತೋರಿಬರುವ ಈ “ಕಠಿನಕಾಲ”ಗಳಲ್ಲಿ ಇದು ಸತ್ಯ. (2 ತಿಮೊಥೆಯ 3:1, 3) ಯೆಹೋವನಾದರೊ ಘೋಷಿಸುವುದು: “ನಾನಾದರೆ ನಿನ್ನನ್ನು ಮರೆಯೆ.” ತನ್ನ ಸೇವಕರಿಗಾಗಿ ಯೆಹೋವನಿಗಿರುವ ಕೋಮಲವಾದ ಕನಿಕರವು ಎಂದೂ ಕಡಿಮೆಬೀಳದು. ನಾವು ಊಹಿಸಸಾಧ್ಯವಿರುವವುಗಳಲ್ಲಿ ಅತ್ಯಂತ ಕೋಮಲವಾದ ಸ್ವಾಭಾವಿಕ ಭಾವನೆಗಿಂತ​—ತನ್ನ ಮಗುವಿಗಾಗಿ ಒಬ್ಬ ತಾಯಿಯ ಸಹಜವಾದ ಕನಿಕರದ ಭಾವಕ್ಕಿಂತಲೂ​—ಅದು ಅಳೆಯಲಾಗದಷ್ಟು ಬಲವಾದದ್ದು. ಆದುದರಿಂದಲೇ ಯೆಶಾಯ 49:15 ರ ಕುರಿತು ಒಬ್ಬ ವ್ಯಾಖ್ಯಾನಗಾರನು ಹೀಗಂದದ್ದರಲ್ಲಿ ಆಶ್ಚರ್ಯವೇನಿಲ್ಲ: “ಇದು ಹಳೇ ಒಡಂಬಡಿಕೆಯಲ್ಲಿ ದೇವರ ಪ್ರೀತಿಯ ಅತಿ ಶಕ್ತಿಶಾಲಿಯಾದ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ, ಇಲ್ಲವೆ ಏಕೈಕ ಅತಿ ಶಕ್ತಿಶಾಲಿ ಅಭಿವ್ಯಕ್ತಿಯೆಂದೇ ಹೇಳಬಹುದು.”

6. ಅನೇಕ ಅಪರಿಪೂರ್ಣ ಮನುಷ್ಯರು ಕೋಮಲ ಕನಿಕರವನ್ನು ಹೇಗೆ ವೀಕ್ಷಿಸಿದ್ದಾರೆ, ಆದರೆ ಯಾವುದರ ಆಶ್ವಾಸನೆಯನ್ನು ಯೆಹೋವನು ನಮಗೆ ಕೊಡುತ್ತಾನೆ?

6 ಕೋಮಲವಾದ ಕನಿಕರವು ಬಲಹೀನತೆಯ ಲಕ್ಷಣವೋ? ಅಪರಿಪೂರ್ಣರಾದ ಅನೇಕ ಮನುಷ್ಯರಿಗೆ ಆ ಅಭಿಪ್ರಾಯವಿರುತ್ತದೆ. ಉದಾಹರಣೆಗೆ, ಯೇಸುವಿನ ಸಮಕಾಲೀನನೂ ರೋಮಿನ ಅತಿ ಪ್ರಜ್ಞಾಶಾಲಿಯಾದ ವ್ಯಕ್ತಿಯೂ ಆಗಿದ್ದ ರೋಮನ್‌ ತತ್ತ್ವಜ್ಞಾನಿ ಸೆನಿಕನು, “ಕನಿಕರಿಸುವುದು ಮನಸ್ಸಿನ ಒಂದು ಬಲಹೀನತೆ” ಎಂದು ಕಲಿಸಿದ್ದನು. ಸೆನಿಕನು ಸ್ಟೋಯಿಕ್‌ವಾದದ ಪ್ರತಿಪಾದಿಯಾಗಿದ್ದನು, ಮತ್ತು ಆ ತತ್ತ್ವಜ್ಞಾನವು ಭಾವಶೂನ್ಯವಾದಂಥ ಪ್ರಶಾಂತತೆಯನ್ನು ಒತ್ತಿಹೇಳುತ್ತಿತ್ತು. ವಿವೇಕಿಯಾದ ವ್ಯಕ್ತಿಯೊಬ್ಬನು ಕಷ್ಟದಲ್ಲಿರುವವರಿಗೆ ಸಹಾಯಮಾಡಬಹುದು, ಆದರೆ ಕನಿಕರ ತೋರಿಸಲು ಆಸ್ಪದ ಕೊಡಬಾರದು, ಯಾಕಂದರೆ ಅಂಥ ಭಾವನೆಯು ಅವನ ಪ್ರಶಾಂತತೆಯನ್ನು ಅಪಹರಿಸುವುದು ಎಂದು ಸೆನಿಕನು ಹೇಳಿದ್ದನು. ಜೀವನದ ಕುರಿತಾದ ಅಂಥ ಸ್ವಾರ್ಥಮಗ್ನ ದೃಷ್ಟಿಕೋನವು ಹೃತ್ಪೂರ್ವಕವಾದ ಕನಿಕರಕ್ಕೆ ಯಾವ ಅವಕಾಶವನ್ನೂ ಕೊಟ್ಟಿರಲಿಲ್ಲ. ಆದರೆ ಯೆಹೋವನು ಎಂದಿಗೂ ಹಾಗಿರುವಾತನಲ್ಲ! ಆತನು “ಕರುಣಾಸಾಗರನೂ ದಯಾಳುವೂ [ಅಕ್ಷರಶಃ “ಕನಿಕರವುಳ್ಳವನೂ”] ಆಗಿದ್ದಾನೆಂದು” ಯೆಹೋವನು ತಾನೇ ನಮಗೆ ತನ್ನ ವಾಕ್ಯದಲ್ಲಿ ಆಶ್ವಾಸನೆ ಕೊಡುತ್ತಾನೆ. (ಯಾಕೋಬ 5:11) ನಾವು ನೋಡಲಿರುವ ಪ್ರಕಾರ, ಕನಿಕರವು ಒಂದು ಬಲಹೀನತೆಯಲ್ಲ, ಬದಲಾಗಿ ಶಕ್ತಿಯುತವಾದ, ಪ್ರಬಲ ಗುಣವಾಗಿದೆ. ಒಬ್ಬ ಪ್ರೀತಿಯ ಹೆತ್ತವನೋಪಾದಿ ಯೆಹೋವನು ಅದನ್ನು ಹೇಗೆ ತೋರಿಸುತ್ತಾನೆಂದು ನಾವೀಗ ಪರೀಕ್ಷಿಸೋಣ.

ಒಂದು ಜನಾಂಗಕ್ಕೆ ಯೆಹೋವನು ಕನಿಕರ ತೋರಿಸಿದ ಸಮಯ

7, 8. ಪುರಾತನ ಐಗುಪ್ತದಲ್ಲಿ ಯಾವ ರೀತಿಯಲ್ಲಿ ಇಸ್ರಾಯೇಲ್ಯರು ಕಷ್ಟಾನುಭವಿಸಿದರು, ಮತ್ತು ಯೆಹೋವನು ಅವರ ಕಷ್ಟಾನುಭವಕ್ಕೆ ಹೇಗೆ ಪ್ರತಿಕ್ರಿಯಿಸಿದನು?

7 ಇಸ್ರಾಯೇಲ್‌ ಜನಾಂಗದೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯಲ್ಲಿ ಆತನ ಕನಿಕರವು ಸ್ಪಷ್ಟವಾಗಿ ತೋರಿಬರುತ್ತದೆ. ಸಾ.ಶ.ಪೂ. 16ನೆಯ ಶತಮಾನದ ಅಂತ್ಯದೊಳಗೆ ಲಕ್ಷಾಂತರ ಮಂದಿ ಇಸ್ರಾಯೇಲ್ಯರು ಪುರಾತನ ಐಗುಪ್ತದಲ್ಲಿ ದಾಸತ್ವಕ್ಕೆ ಒಳಗಾಗಿ ತೀವ್ರವಾದ ದಬ್ಬಾಳಿಕೆಗೆ ಗುರಿಯಾಗಿದ್ದರು. ಐಗುಪ್ತ್ಯರು “ಮಣ್ಣಿನ ಕೆಲಸದಲ್ಲಿಯೂ ಇಟ್ಟಿಗೆಮಾಡುವ ಕೆಲಸದಲ್ಲಿಯೂ . . . ಕಠಿಣವಾಗಿ ದುಡಿಸಿಕೊಂಡು ಅವರ ಜೀವಗಳನ್ನು ಬೇಸರಪಡಿಸಿದರು.” (ವಿಮೋಚನಕಾಂಡ 1:11, 14) ತಮ್ಮ ಸಂಕಷ್ಟದ ಸಮಯದಲ್ಲಿ ಸಹಾಯಕ್ಕಾಗಿ ಇಸ್ರಾಯೇಲ್ಯರು ಯೆಹೋವನಿಗೆ ಮೊರೆಯಿಟ್ಟರು. ಕೋಮಲ ಕನಿಕರದ ದೇವರು ಹೇಗೆ ಪ್ರತಿಕ್ರಿಯೆ ತೋರಿಸಿದನು?

8 ಯೆಹೋವನ ಮನಸ್ಸು ಕರಗಿತು. ಆತನಂದದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೆನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” (ವಿಮೋಚನಕಾಂಡ 3:7) ತನ್ನ ಜನರ ಕಷ್ಟಾನುಭವವನ್ನು ನೋಡಿ, ಸಹಾಯಕ್ಕಾಗಿ ಅವರ ಮೊರೆಯನ್ನು ಕೇಳಿ ಯೆಹೋವನು ಭಾವಶೂನ್ಯನಾಗಿ ಇರಲು ಸಾಧ್ಯವಿರಲಿಲ್ಲ. ಈ ಪುಸ್ತಕದ ಅಧ್ಯಾಯ 24ರಲ್ಲಿ ನಾವು ನೋಡಿದ ಪ್ರಕಾರ, ಯೆಹೋವನು ಪರಾನುಭೂತಿಯ ದೇವರು. ಮತ್ತು ಪರಾನುಭೂತಿಯು​—ಇತರರ ನೋವನ್ನು ಸ್ವತಃ ಅನುಭವಿಸುವಂಥ ಸಾಮರ್ಥ್ಯ​—ಕನಿಕರಕ್ಕೆ ಅತಿ ಹತ್ತಿರದ ಸಂಬಂಧವುಳ್ಳ ಗುಣವಾಗಿದೆ. ಆದರೆ ಯೆಹೋವನು ತನ್ನ ಜನರಿಗಾಗಿ ಬರೀ ಮರುಕಪಟ್ಟದ್ದು ಮಾತ್ರವಲ್ಲ; ಅವರ ಪರವಾಗಿ ಕ್ರಿಯೆಗೈಯಲೂ ಆತನು ಪ್ರೇರಿಸಲ್ಪಟ್ಟನು. ಯೆಶಾಯ 63:9 ಹೇಳುವುದು: “ತನ್ನಲ್ಲಿನ ಮಮತೆ [“ಕನಿಕರ,” NW]ಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ”ದನು. ತನ್ನ “ಭುಜಪರಾಕ್ರಮ”ದಿಂದ ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿಹೊರತಂದನು. (ಧರ್ಮೋಪದೇಶಕಾಂಡ 4:34) ತದನಂತರ, ಆತನು ಅವರಿಗೆ ಅದ್ಭುತಕರವಾಗಿ ಆಹಾರವನ್ನು ಒದಗಿಸಿದನು ಮತ್ತು ಅವರನ್ನು ಅವರದ್ದೇ ಆದ, ಫಲಸಮೃದ್ಧವಾದ ಒಂದು ದೇಶಕ್ಕೆ ತಲಪಿಸಿದನು.

9, 10. (ಎ) ವಾಗ್ದತ್ತ ದೇಶದಲ್ಲಿ ನೆಲೆಸಿದ ಮೇಲೂ ಯೆಹೋವನು ಇಸ್ರಾಯೇಲ್ಯರನ್ನು ಪದೇಪದೇ ವಿಮೋಚಿಸಿದ್ದೇಕೆ? (ಬಿ) ಯೆಫ್ತಾಹನ ಸಮಯದಲ್ಲಿ, ಯೆಹೋವನು ಇಸ್ರಾಯೇಲ್ಯರನ್ನು ಯಾವ ದಬ್ಬಾಳಿಕೆಯಿಂದ ಬಿಡಿಸಿದನು, ಮತ್ತು ಹಾಗೆ ಮಾಡುವಂತೆ ಆತನನ್ನು ಪ್ರೇರೇಪಿಸಿದ್ದು ಯಾವುದು?

9 ಯೆಹೋವನ ಕನಿಕರವು ಅಲ್ಲಿಗೇ ನಿಂತುಹೋಗಲಿಲ್ಲ. ವಾಗ್ದತ್ತ ದೇಶದಲ್ಲಿ ನೆಲೆಸಿರುವಾಗಲೂ ಇಸ್ರಾಯೇಲ್ಯರು ಪದೇಪದೇ ಅಪನಂಬಿಗಸ್ತರಾಗಿ ಪರಿಣಮಿಸಿದರ ಫಲಿತಾಂಶವಾಗಿ ಕಷ್ಟವನ್ನು ಅನುಭವಿಸಿದರು. ಆದರೆ ಕಷ್ಟವನ್ನನುಭವಿಸಿದಾಗ ಆ ಜನರಿಗೆ ಬುದ್ಧಿಬರುತ್ತಿತ್ತು ಮತ್ತು ಅವರು ಯೆಹೋವನಿಗೆ ಮೊರೆಯಿಡುತ್ತಿದ್ದರು. ಪುನಃ ಪುನಃ ಯೆಹೋವನು ಅವರನ್ನು ವಿಮೋಚಿಸಿ ನಡಿಸಿದನು. ಯಾಕೆ? ತನ್ನ ಜನರಿಗಾಗಿ ಆತನು ‘ಕನಿಕರ’ಪಟ್ಟದ್ದರಿಂದಲೇ.​—2 ಪೂರ್ವಕಾಲವೃತ್ತಾಂತ 36:15; ನ್ಯಾಯಸ್ಥಾಪಕರು 2:11-16.

10 ಯೆಫ್ತಾಹನ ಸಮಯದಲ್ಲಿ ಏನು ಸಂಭವಿಸಿತ್ತೆಂಬುದನ್ನು ಪರಿಗಣಿಸಿರಿ. ಇಸ್ರಾಯೇಲ್ಯರು ಸುಳ್ಳು ದೇವರುಗಳನ್ನು ಆರಾಧಿಸಲಾರಂಭಿಸಿದ್ದರಿಂದ, 18 ವರ್ಷಗಳ ವರೆಗೆ ಅಮ್ಮೋನಿಯರಿಂದ ದಬ್ಬಾಳಿಕೆಗೆ ಗುರಿಯಾಗುವಂತೆ ಯೆಹೋವನು ಬಿಟ್ಟುಕೊಟ್ಟನು. ಕೊನೆಗೆ ಇಸ್ರಾಯೇಲ್ಯರು ಪಶ್ಚಾತ್ತಾಪಪಟ್ಟರು. ಬೈಬಲು ನಮಗನ್ನುವುದು: “ಅನ್ಯದೇವತೆಗಳನ್ನು ತಮ್ಮಲ್ಲಿಂದ ತೆಗೆದುಹಾಕಿ ಯೆಹೋವನನ್ನು ಸೇವಿಸುವವರಾದರು. ಆಗ ಆತನ ಮನಸ್ಸು ಇಸ್ರಾಯೇಲ್ಯರ ಸಂಕಟದ ನಿಮಿತ್ತ ಬಲು ನೊಂದಿತು.” (ನ್ಯಾಯಸ್ಥಾಪಕರು 10:6-16) ಒಮ್ಮೆ ತನ್ನ ಜನರು ನಿಜವಾದ ಪಶ್ಚಾತ್ತಾಪವನ್ನು ತೋರಿಸಿದ ಮೇಲೆ, ಇನ್ನು ಮುಂದೆ ಅವರು ಸಂಕಟಪಡುವುದನ್ನು ಯೆಹೋವನಿಂದ ನೋಡಲಾಗಲಿಲ್ಲ. ಆದುದರಿಂದ ಕೋಮಲ ಕನಿಕರದ ದೇವರು ಇಸ್ರಾಯೇಲ್ಯರನ್ನು ಅವರ ಶತ್ರುಗಳ ಕೈಯಿಂದ ಬಿಡಿಸುವುದಕ್ಕಾಗಿ ಯೆಫ್ತಾಹನಿಗೆ ಬಲವನ್ನಿತ್ತನು.​—ನ್ಯಾಯಸ್ಥಾಪಕರು 11:30-33.

11. ಇಸ್ರಾಯೇಲ್ಯರೊಂದಿಗೆ ಯೆಹೋವನು ವ್ಯವಹರಿಸಿದ ರೀತಿಯಿಂದ, ಕನಿಕರದ ಕುರಿತು ನಾವೇನನ್ನು ಕಲಿಯುತ್ತೇವೆ?

11 ಇಸ್ರಾಯೇಲ್‌ ಜನಾಂಗದೊಂದಿಗಿನ ಯೆಹೋವನ ವ್ಯವಹಾರಗಳು ಕೋಮಲ ಕನಿಕರದ ಕುರಿತು ನಮಗೇನನ್ನು ಕಲಿಸುತ್ತವೆ? ಒಂದು ವಿಷಯವೇನಂದರೆ, ಜನರು ಅನುಭವಿಸುವ ಸಂಕಷ್ಟಗಳ ಬಗ್ಗೆ ಕೇವಲ ಸಹಾನುಭೂತಿಯ ಅರಿವಿಗಿಂತ ಅದು ಹೆಚ್ಚಿನದ್ದಾಗಿದೆ ಎಂಬುದನ್ನು ನಾವಲ್ಲಿ ಕಾಣುತ್ತೇವೆ. ಅಳುತ್ತಿರುವ ತನ್ನ ಮಗುವಿಗೆ ಪ್ರತಿಕ್ರಿಯಿಸಲು ಯಾರ ಕನಿಕರವು ಪ್ರೇರಿಸುತ್ತದೋ ಆ ತಾಯಿಯ ಉದಾಹರಣೆಯನ್ನು ನೆನಪಿಗೆ ತನ್ನಿರಿ. ತದ್ರೀತಿಯಲ್ಲಿ, ಯೆಹೋವನು ತನ್ನ ಜನರ ಸಂಕಷ್ಟಗಳ ಮೊರೆಗಳನ್ನು ಕಿವಿಗೆ ಹಾಕಿಕೊಳ್ಳದೆ ಇರುವವನಲ್ಲ. ಆತನ ಕೋಮಲ ಕನಿಕರವು ಅವರನ್ನು ಆ ಕಷ್ಟಗಳಿಂದ ಬಿಡಿಸಲು ಕ್ರಿಯೆಗೈಯುವಂತೆ ಮಾಡುತ್ತದೆ. ಅಷ್ಟಲ್ಲದೆ, ಯೆಹೋವನು ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದ ರೀತಿಯು, ಕನಿಕರವು ಎಷ್ಟು ಮಾತ್ರಕ್ಕೂ ಒಂದು ಬಲಹೀನತೆಯಲ್ಲವೆಂಬುದನ್ನು ಕಲಿಸುತ್ತದೆ. ಯಾಕಂದರೆ ಈ ಕೋಮಲವಾದ ಗುಣವೇ ಆತನು ತನ್ನ ಜನರ ಪರವಾಗಿ ದೃಢ ನಿರ್ಧಾರದ ನಿರ್ಣಾಯಕ ಕ್ರಿಯೆಯನ್ನು ಕೈಕೊಳ್ಳುವಂತೆ ಪ್ರೇರೇಪಿಸಿತು. ಆದರೆ ಯೆಹೋವನು ತನ್ನ ಸೇವಕರಿಗೆ ಒಂದು ಗುಂಪಿನೋಪಾದಿ ಮಾತ್ರ ಕನಿಕರವನ್ನು ತೋರಿಸುತ್ತಾನೋ?

ಒಬ್ಬೊಬ್ಬ ವ್ಯಕ್ತಿಗೂ ಯೆಹೋವನ ಕನಿಕರ

12. ಧರ್ಮಶಾಸ್ತ್ರವು ಒಬ್ಬೊಬ್ಬ ವ್ಯಕ್ತಿಯ ಕಡೆಗೂ ಯೆಹೋವನಿಗಿರುವ ಕನಿಕರವನ್ನು ಹೇಗೆ ಪ್ರತಿಬಿಂಬಿಸಿತು?

12 ಇಸ್ರಾಯೇಲ್‌ ಜನಾಂಗಕ್ಕೆ ದೇವರು ಕೊಟ್ಟ ಧರ್ಮಶಾಸ್ತ್ರವು ಒಬ್ಬೊಬ್ಬ ವ್ಯಕ್ತಿಗಾಗಿ ಆತನಿಗಿರುವ ಕನಿಕರವನ್ನು ತೋರಿಸಿತು. ಉದಾಹರಣೆಗೆ, ಬಡವರ ಕಡೆಗೆ ಆತನಿಗಿದ್ದ ಪರಿಗಣನೆಯನ್ನು ಗಮನಿಸಿರಿ. ಮುಂಗಾಣದ ಪರಿಸ್ಥಿತಿಗಳು ಎದ್ದು ಒಬ್ಬ ಇಸ್ರಾಯೇಲ್ಯನನ್ನು ಬಡತನದ ಗುಂಡಿಯೊಳಗೆ ನೂಕಬಹುದೆಂದು ಯೆಹೋವನಿಗೆ ತಿಳಿದಿತ್ತು. ಬಡವರನ್ನು ಯಾವ ರೀತಿಯಲ್ಲಿ ಉಪಚರಿಸಬೇಕಿತ್ತು? ಯೆಹೋವನು ಇಸ್ರಾಯೇಲ್ಯರಿಗೆ ಕಟ್ಟುನಿಟ್ಟಿನ ಆಜ್ಞೆವಿಧಿಸಿದ್ದು: “ಸ್ವದೇಶದವನಾದ ಬಡವನು ಇದ್ದರೆ ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು. ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಪ್ರಯತ್ನಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು.” (ಧರ್ಮೋಪದೇಶಕಾಂಡ 15:7, 10) ಪೈರನ್ನು ಕೊಯ್ಯುವಾಗ ಹೊಲಗಳ ಅಂಚುಗಳಲ್ಲಿರುವದನ್ನೆಲ್ಲಾ ಕೊಯ್ಯಬಾರದೆಂದೂ ಕೆಳಗೆ ಬಿದ್ದಿರುವ ಧಾನ್ಯಗಳ ಸಿವುಡುಗಳನ್ನು ಹೆಕ್ಕಬಾರದೆಂದೂ ಯೆಹೋವನು ಇಸ್ರಾಯೇಲ್ಯರಿಗೆ ಅಪ್ಪಣೆ ಮಾಡಿದ್ದನು. ಅಂಥ ಹಕ್ಕಲಾಯುವಿಕೆಯು, ಕಷ್ಟಕರ ಸ್ಥಿತಿಯಲ್ಲಿದ್ದವರಿಗಾಗಿ ಮೀಸಲಾಗಿತ್ತು. (ಯಾಜಕಕಾಂಡ 23:22; ರೂತಳು 2:2-7) ತಮ್ಮ ಮಧ್ಯದಲ್ಲಿರುವ ಬಡವರಿಗೋಸ್ಕರವಿದ್ದ ಈ ದಯಾಪರ ನಿಯಮವನ್ನು ಜನಾಂಗವು ಅನುಸರಿಸಿದಾಗ, ಕೊರತೆಯುಳ್ಳ ಇಸ್ರಾಯೇಲ್ಯರಿಗೆ ಆಹಾರಕ್ಕಾಗಿ ಭಿಕ್ಷೆಬೇಡುವ ಅಗತ್ಯವಿರಲಿಲ್ಲ. ಇದು ಯೆಹೋವನ ಕೋಮಲ ಕನಿಕರದ ಪ್ರತಿಬಿಂಬವಾಗಿತ್ತಲ್ಲವೇ?

13, 14. (ಎ) ಯೆಹೋವನು ನಮ್ಮಲ್ಲಿ ಒಬ್ಬೊಬ್ಬರ ಕುರಿತಾಗಿಯೂ ಆಳವಾಗಿ ಚಿಂತಿಸುತ್ತಾನೆಂದು ದಾವೀದನ ಮಾತುಗಳು ನಮಗೆ ಹೇಗೆ ಆಶ್ವಾಸನೆ ಕೊಡುತ್ತವೆ? (ಬಿ) “ಮುರಿದ ಮನಸ್ಸುಳ್ಳ”ವರೂ ಅಥವಾ ‘ಕುಗ್ಗಿಹೋಗಿರುವವರೂ’ ಆದವರಿಗೆ ಯೆಹೋವನು ಹತ್ತಿರವಾಗಿಯೇ ಇದ್ದಾನೆಂಬುದನ್ನು ಹೇಗೆ ದೃಷ್ಟಾಂತಿಸಸಾಧ್ಯವಿದೆ?

13 ಇಂದು ಸಹ ನಮ್ಮ ಪ್ರೀತಿಯ ತಂದೆಯು ವ್ಯಕ್ತಿಗಳೋಪಾದಿ ನಮ್ಮಲ್ಲಿ ಒಬ್ಬೊಬ್ಬರ ಬಗ್ಗೆಯೂ ಆಳವಾಗಿ ಚಿಂತಿಸುತ್ತಾನೆ. ನಾವು ಅನುಭವಿಸಬಹುದಾದ ಯಾವುದೇ ಕಷ್ಟಾನುಭವದ ತೀಕ್ಷ್ಣ ಅರಿವು ಆತನಿಗಿದೆಯೆಂಬ ನಿಶ್ಚಯತೆ ನಮಗಿರಸಾಧ್ಯವಿದೆ. ಕೀರ್ತನೆಗಾರನಾದ ದಾವೀದನು ಬರೆದದ್ದು: “ಯೆಹೋವನು ನೀತಿವಂತರನ್ನು ಕಟಾಕ್ಷಿಸುತ್ತಾನೆ; ಅವರು ಮೊರೆಯಿಡುವಾಗ ಕಿವಿಗೊಡುತ್ತಾನೆ. ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ [“ಹತ್ತಿರದಲ್ಲಿದ್ದಾನೆ,” NW]; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.” (ಕೀರ್ತನೆ 34:15, 18) ಈ ಮಾತುಗಳಿಂದ ವರ್ಣಿಸಲ್ಪಟ್ಟವರ ಕುರಿತು ಒಬ್ಬ ಬೈಬಲ್‌ ವ್ಯಾಖ್ಯಾನಕಾರನು ಗಮನಿಸಿದ್ದು: “ಅವರು ಮುರಿದ ಮನಸ್ಸುಳ್ಳವರೂ ಪಶ್ಚಾತ್ತಾಪದ ಆತ್ಮವುಳ್ಳವರೂ ಆಗಿದ್ದಾರೆ, ಅಂದರೆ ಪಾಪದ ಕಾರಣದಿಂದಾಗಿ ದೀನಾವಸ್ಥೆಗಿಳಿದು ಆತ್ಮಗೌರವವನ್ನು ಕಳೆದುಕೊಂಡಿರುತ್ತಾರೆ; ಅವರು ತಮ್ಮ ಸ್ವಂತ ದೃಷ್ಟಿಯಲ್ಲಿ ತುಚ್ಛರೂ ಅತ್ಮಗೌರವದಲ್ಲಿ ಭರವಸೆಯಿಲ್ಲದವರೂ ಆಗಿದ್ದಾರೆ.” ಯೆಹೋವನು ತಮಗೆ ತೀರಾ ದೂರದಲ್ಲಿದ್ದಾನೆ ಮತ್ತು ಆತನು ತಮ್ಮ ಕುರಿತು ಚಿಂತಿಸಲಿಕ್ಕೆ ತಾವು ತೀರಾ ಅಲ್ಪರಾಗಿದ್ದೇವೆಂಬ ಭಾವನೆ ಅವರಿಗಿರಬಹುದು. ಆದರೆ ವಿಷಯವು ಹಾಗಿರುವುದಿಲ್ಲ. “ತಮ್ಮ ಸ್ವಂತ ದೃಷ್ಟಿಯಲ್ಲಿ ತುಚ್ಛ”ರಾಗಿರುವವರನ್ನು ಯೆಹೋವನು ತ್ಯಜಿಸಿಬಿಡುವದಿಲ್ಲವೆಂದು ದಾವೀದನ ಮಾತುಗಳು ನಮಗೆ ಆಶ್ವಾಸನೆ ಕೊಡುತ್ತವೆ. ಅಂಥ ಸಮಯದಲ್ಲಿ, ಎಂದಿಗಿಂತಲೂ ಹೆಚ್ಚಾಗಿ ನಮಗೆ ಆತನ ಅಗತ್ಯವಿದೆಯೆಂದು ನಮ್ಮ ಕನಿಕರವುಳ್ಳ ದೇವರಿಗೆ ತಿಳಿದಿದೆ, ಮತ್ತು ಆತನು ನಮಗೆ ಹತ್ತಿರವಾಗಿಯೇ ಇದ್ದಾನೆ.

14 ಒಂದು ಅನುಭವವನ್ನು ಗಮನಿಸಿರಿ. ಅಮೆರಿಕದಲ್ಲಿ ತಾಯಿಯೊಬ್ಬಳು, ಗಂಭೀರವಾದ ಗಂಟಲಿನ ಉರಿಯೂತ ರೋಗದಿಂದ ಬಳಲುತ್ತಿದ್ದ ತನ್ನ ಎರಡು ವರ್ಷದ ಮಗನನ್ನು ತುರ್ತಾಗಿ ಆಸ್ಪತ್ರೆಗೆ ಒಯ್ದಳು. ಹುಡುಗನನ್ನು ಪರೀಕ್ಷಿಸಿದ ಬಳಿಕ ಆ ರಾತ್ರಿ ಅವನನ್ನು ಆಸ್ಪತ್ರೆಯಲ್ಲೇ ಇರಿಸಬೇಕೆಂದು ಡಾಕ್ಟರರು ತಾಯಿಗೆ ಸೂಚಿಸಿದರು. ತಾಯಿಯು ಆ ರಾತ್ರಿಯನ್ನು ಎಲ್ಲಿ ಕಳೆದಳು? ಆ ಆಸ್ಪತ್ರೆಯ ಕೋಣೆಯಲ್ಲಿದ್ದ ಕುರ್ಚಿಯ ಮೇಲೆ, ತನ್ನ ಮಗನ ಮಂಚದ ಪಕ್ಕದಲ್ಲೇ! ಆಕೆಯ ಪುಟ್ಟ ಮಗನು ಅಸ್ವಸ್ಥನಾಗಿದ್ದನು, ಮತ್ತು ಈ ಕಾರಣದಿಂದ ಆಕೆಗೆ ಅವನ ಹತ್ತಿರದಲ್ಲೇ ಇರಲೇಬೇಕಾಗಿತ್ತು. ನಿಶ್ಚಯವಾಗಿಯೂ, ನಾವು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯಿಂದಲಾದರೋ ಇನ್ನೂ ಹೆಚ್ಚನ್ನು ಅಪೇಕ್ಷಿಸಬಲ್ಲೆವು! ಎಷ್ಟೆಂದರೂ ಆತನ ಸ್ವರೂಪದಲ್ಲಿ ನಾವು ನಿರ್ಮಿಸಲ್ಪಟ್ಟಿದ್ದೇವಲ್ಲಾ. (ಆದಿಕಾಂಡ 1:26) ನಾವು “ಮುರಿದ ಮನಸ್ಸುಳ್ಳ”ವರು ಅಥವಾ “ಕುಗ್ಗಿಹೋದ”ವರಾಗಿರುವಾಗ, ಪ್ರೀತಿಯುಳ್ಳ ತಂದೆಯೋಪಾದಿ ಯೆಹೋವನು “ಹತ್ತಿರ” (NW) ಇದ್ದಾನೆ​—ಸದಾ ಕನಿಕರವುಳ್ಳಾತನಾದ ಆತನು ಸಹಾಯಮಾಡಲು ಸದಾ ಸಿದ್ಧನಾಗಿದ್ದಾನೆ ಎಂದು ಕೀರ್ತನೆ 34:18 ರ ಮನಮುಟ್ಟುವ ಮಾತುಗಳು ನಮಗನ್ನುತ್ತವೆ.

15. ಯಾವ ರೀತಿಯಲ್ಲಿ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವ್ಯಕ್ತಿಗತವಾಗಿ ಸಹಾಯಮಾಡುತ್ತಾನೆ?

15 ಹಾಗಾದರೆ ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರಿಗೂ ವ್ಯಕ್ತಿಗತವಾಗಿ ಹೇಗೆ ಸಹಾಯಮಾಡುತ್ತಾನೆ? ನಮ್ಮ ಕಷ್ಟಾನುಭವದ ಕಾರಣವನ್ನು ಆತನು ಅನಿವಾರ್ಯವಾಗಿ ನಿವಾರಿಸಿಬಿಡುವುದಿಲ್ಲ. ಆದರೆ ಸಹಾಯಕ್ಕಾಗಿ ತನಗೆ ಮೊರೆಯಿಡುವವರಿಗಾಗಿ ಯೆಹೋವನು ಹೇರಳವಾದ ಏರ್ಪಾಡುಗಳನ್ನು ಮಾಡಿರುತ್ತಾನೆ. ಆತನ ವಾಕ್ಯವಾದ ಬೈಬಲು ನೀಡುವ ವ್ಯಾವಹಾರಿಕ ಬುದ್ಧಿವಾದವು ವ್ಯತ್ಯಾಸವನ್ನುಂಟುಮಾಡಬಲ್ಲದು. ಸಭೆಯಲ್ಲಿ ಯೆಹೋವನು, ಆಧ್ಯಾತ್ಮಿಕವಾಗಿ ಅರ್ಹರಾಗಿರುವ ಮೇಲ್ವಿಚಾರಕರನ್ನು ಒದಗಿಸುತ್ತಾನೆ. ಇವರು ಜೊತೆ ಆರಾಧಕರಿಗೆ ಸಹಾಯಮಾಡುವಾಗ ಆತನ ಕನಿಕರವನ್ನು ಪ್ರತಿಬಿಂಬಿಸಲು ಪ್ರಯಾಸಪಡುತ್ತಾರೆ. (ಯಾಕೋಬ 5:14, 15) “ಪ್ರಾರ್ಥನೆಯನ್ನು ಕೇಳುವವ”ನಾದ ಆತನು “ತನ್ನನ್ನು ಬೇಡಿಕೊಳ್ಳುವವರಿಗೆ . . . ಪವಿತ್ರಾತ್ಮವರವನ್ನು” ಕೊಡುತ್ತಾನೆ. (ಕೀರ್ತನೆ 65:2; ಲೂಕ 11:13) ಒತ್ತಡಭರಿತ ಸಮಸ್ಯೆಗಳೆಲ್ಲವನ್ನು ದೇವರ ರಾಜ್ಯವು ತೆಗೆದುಹಾಕುವ ತನಕ ತಾಳಿಕೊಳ್ಳುವುದಕ್ಕೋಸ್ಕರ ಆ ಪವಿತ್ರಾತ್ಮವು ನಮಗೆ “ಬಲಾಧಿಕ್ಯ”ವನ್ನು ಕೊಡಬಲ್ಲದು. (2 ಕೊರಿಂಥ 4:7) ಈ ಎಲ್ಲಾ ಏರ್ಪಾಡುಗಳಿಗಾಗಿ ನಾವು ಕೃತಜ್ಞರಾಗಿಲ್ಲವೇ? ಅವು ಯೆಹೋವನ ಕೋಮಲ ಕನಿಕರದ ಅಭಿವ್ಯಕ್ತಿಗಳೆಂಬುದನ್ನು ನಾವು ಮರೆಯದಿರೋಣ.

16. ಯೆಹೋವನ ಕನಿಕರದ ಅತ್ಯಂತ ಶ್ರೇಷ್ಠ ಉದಾಹರಣೆಯು ಯಾವುದು, ಮತ್ತು ಅದು ನಮ್ಮನ್ನು ವ್ಯಕ್ತಿಗತವಾಗಿ ಹೇಗೆ ಪ್ರಭಾವಿಸುತ್ತದೆ?

16 ಯೆಹೋವನ ಕನಿಕರದ ಅತ್ಯಂತ ಶ್ರೇಷ್ಠ ಉದಾಹರಣೆಯು, ಆತನಿಗೆ ಅತಿಪ್ರಿಯನಾಗಿದ್ದವನನ್ನೇ ನಮಗಾಗಿ ಈಡು ಯಜ್ಞವಾಗಿ ಕೊಟ್ಟಿರುವುದೇ ಆಗಿದೆ. ಅದು ಯೆಹೋವನ ಪಕ್ಷದಿಂದ ಒಂದು ಪ್ರೀತಿಪೂರ್ಣ ಯಜ್ಞವಾಗಿತ್ತು, ಮತ್ತು ಅದು ನಮ್ಮ ರಕ್ಷಣೆಗಾಗಿ ದಾರಿಯನ್ನು ತೆರೆಯಿತು. ಆ ಈಡಿನ ಏರ್ಪಾಡು ನಮಗೆ ವ್ಯಕ್ತಿಗತವಾಗಿ ಅನ್ವಯಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿರಿ. ಸಕಾರಣದಿಂದಲೇ, ಸ್ನಾನಿಕನಾದ ಯೋಹಾನನ ತಂದೆಯಾದ ಜಕರೀಯನು, ಈ ವರದಾನವು “ನಮ್ಮ ದೇವರ ಕೋಮಲ ಕನಿಕರವನ್ನು” ಮಹೋನ್ನತಗೊಳಿಸುತ್ತದೆಂದು ಮುಂತಿಳಿಸಿದನು.​—ಲೂಕ 1:​78, NW.

ಯೆಹೋವನು ಕನಿಕರವನ್ನು ತಡೆದುಹಿಡಿಯುವ ಸಮಯ

17-19. (ಎ) ಯೆಹೋವನ ಕನಿಕರಕ್ಕೆ ಮಿತಿಗಳಿವೆಯೆಂದು ಬೈಬಲು ಹೇಗೆ ತೋರಿಸುತ್ತದೆ? (ಬಿ) ತನ್ನ ಜನರ ಕಡೆಗಿನ ಯೆಹೋವನ ಕನಿಕರವು ಅದರ ಪರಾಕಾಷ್ಠೆಯನ್ನು ಮುಟ್ಟುವಂತೆ ಯಾವುದು ಕಾರಣವಾಯಿತು?

17 ಯೆಹೋವನ ಈ ಕೋಮಲವಾದ ಕನಿಕರವು ಎಲ್ಲೆಯಿಲ್ಲದ್ದು ಎಂದು ನಾವು ನೆನಸಬಹುದೋ? ಅದಕ್ಕೆ ಪ್ರತಿಯಾಗಿ ಬೈಬಲು ಸ್ಪಷ್ಟವಾಗಿ ತೋರಿಸುವುದೇನಂದರೆ, ಯಾರು ದೇವರ ನೀತಿಯ ಮಾರ್ಗಗಳನ್ನು ವಿರೋಧಿಸುತ್ತಾರೋ ಆ ವ್ಯಕ್ತಿಗಳಿಂದ ಯೆಹೋವನು ತನ್ನ ಕನಿಕರವನ್ನು ಯುಕ್ತವಾಗಿಯೇ ತಡೆದುಹಿಡಿಯುತ್ತಾನೆ. (ಇಬ್ರಿಯ 10:28) ಆತನು ಹೀಗೆ ಮಾಡುವುದೇಕೆಂದು ನೋಡಲು ಇಸ್ರಾಯೇಲ್‌ ಜನಾಂಗದ ಉದಾಹರಣೆಯನ್ನು ನೆನಪಿಗೆ ತನ್ನಿರಿ.

18 ಯೆಹೋವನು ಇಸ್ರಾಯೇಲ್ಯರನ್ನು ಅವರ ಶತ್ರುಗಳಿಂದ ಪದೇಪದೇ ವಿಮೋಚಿಸಿದರೂ, ಆತನ ಕನಿಕರವು ಕಟ್ಟಕಡೆಗೆ ಅದರ ಪರಾಕಾಷ್ಠೆಯನ್ನು ಮುಟ್ಟಿತು. ಈ ಮೊಂಡರಾದ ಜನರು ವಿಗ್ರಹಾರಾಧನೆಯನ್ನು ಮಾಡತೊಡಗಿದರು, ಮತ್ತು ತಮ್ಮ ಅಸಹ್ಯವಾದ ವಿಗ್ರಹಗಳನ್ನು ನೇರವಾಗಿ ಯೆಹೋವನ ಆಲಯದೊಳಕ್ಕೆ ತರುವಷ್ಟೂ ಧೈರ್ಯಮಾಡಿದರು! (ಯೆಹೆಜ್ಕೇಲ 5:11; 8:17, 18) ನಮಗೆ ಹೀಗೂ ಹೇಳಲ್ಪಟ್ಟಿದೆ: “ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು.” (2 ಪೂರ್ವಕಾಲವೃತ್ತಾಂತ 36:16) ಕನಿಕರ ತೋರಿಸಲು ಯಾವುದೇ ಯೋಗ್ಯ ಆಧಾರವಿರದಿದ್ದ ಒಂದು ಹಂತವನ್ನು ಇಸ್ರಾಯೇಲ್ಯರು ತಲಪಿದರು, ಮತ್ತು ಯೆಹೋವನ ಧರ್ಮಕ್ರೋಧವನ್ನು ಚಿತಾಯಿಸಿದರು. ಪರಿಣಾಮವೇನಾಯಿತು?

19 ಯೆಹೋವನು ಇನ್ನು ಮುಂದೆ ತನ್ನ ಜನರಿಗೆ ಕನಿಕರಭಾವವನ್ನು ತೋರಿಸಲಾರದೆ ಹೋದನು. ಆತನು ಘೋಷಿಸಿದ್ದು: “ನಾನು ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ನಾಶಮಾಡದೆ ಬಿಡೆನು.” (ಯೆರೆಮೀಯ 13:14) ಹೀಗೆ ಯೆರೂಸಲೇಮ್‌ ಮತ್ತು ಅದರ ದೇವಾಲಯವು ನಾಶಮಾಡಲ್ಪಟ್ಟು, ಇಸ್ರಾಯೇಲ್ಯರನ್ನು ಬಂದಿವಾಸಿಗಳಾಗಿ ಬಬಿಲೋನಿಗೆ ಒಯ್ಯಲಾಯಿತು. ಪಾಪಪೂರ್ಣ ಮಾನವರು ದೇವರ ಕನಿಕರದ ಮಿತಿಗಳನ್ನು ಬರಿದುಮಾಡಿಬಿಡುವಷ್ಟು ಮಟ್ಟಿಗೆ ದಂಗೆಕೋರರಾಗುವಾಗ, ಪರಿಣಾಮವು ಎಷ್ಟು ದುರಂತಕರ!​—ಪ್ರಲಾಪಗಳು 2:21.

20, 21. (ಎ) ನಮ್ಮ ದಿನಗಳಲ್ಲಿ ದೈವಿಕ ಕನಿಕರವು ಅದರ ಪರಾಕಾಷ್ಠೆಯನ್ನು ಮುಟ್ಟುವಾಗ ಏನು ಸಂಭವಿಸುವುದು? (ಬಿ) ಮುಂದಿನ ಅಧ್ಯಾಯದಲ್ಲಿ ಯೆಹೋವನ ಯಾವ ಕನಿಕರಭರಿತ ವರದಾನವು ಚರ್ಚಿಸಲ್ಪಡುವುದು?

20 ಇಂದಿನ ಕುರಿತಾಗಿ ಏನು? ಈಗಲೂ ಯೆಹೋವನು ಬದಲಾಗಿಲ್ಲ. ನಿವಾಸಿತ ಭೂಮಿಯಲ್ಲೆಲ್ಲಾ ‘ರಾಜ್ಯದ ಸುವಾರ್ತೆಯನ್ನು’ ಸಾರಲು ತನ್ನ ಸಾಕ್ಷಿಗಳಿಗೆ ಆತನು ಅಪ್ಪಣೆಯನ್ನಿತ್ತಿರುವುದು ಕನಿಕರದಿಂದಲೇ. (ಮತ್ತಾಯ 24:14) ಯೋಗ್ಯ ಹೃದಯದ ಜನರು ಪ್ರತಿಕ್ರಿಯಿಸುವಾಗ, ರಾಜ್ಯದ ಸಂದೇಶವನ್ನು ಗ್ರಹಿಸಲು ಯೆಹೋವನು ಅವರಿಗೆ ಸಹಾಯಮಾಡುತ್ತಾನೆ. (ಅ. ಕೃತ್ಯಗಳು 16:14) ಆದರೆ ಈ ಕೆಲಸವು ನಿತ್ಯನಿರಂತರಕ್ಕೂ ಮುಂದುವರಿಯಲಾರದು. ಈ ದುಷ್ಟ ಲೋಕವು ಅದರ ಎಲ್ಲಾ ದುರ್ದಶೆ ಮತ್ತು ಕಷ್ಟಾನುಭವದೊಂದಿಗೆ ಅನಿಶ್ಚಿತ ಸಮಯದ ವರೆಗೂ ಮುಂದುವರಿಯುವಂತೆ ಯೆಹೋವನು ಅನುಮತಿಸುವುದು ಕನಿಕರದ ಸಂಗತಿಯಾಗಿರದು ನಿಶ್ಚಯ. ದೈವಿಕ ಕನಿಕರವು ಅದರ ಪರಾಕಾಷ್ಠೆಯನ್ನು ಮುಟ್ಟುವಾಗ, ಯೆಹೋವನು ಈ ದುಷ್ಟ ವಿಷಯಗಳ ವ್ಯವಸ್ಥೆಯ ಮೇಲೆ ತನ್ನ ತೀರ್ಪನ್ನು ಜಾರಿಗೊಳಿಸುವನು. ಆದರೆ ಅದು ಕೂಡ ಆತನ ಕನಿಕರದ ಕೃತ್ಯವೇ ಆಗಿರುವುದು​—ಅದು ತನ್ನ “ಪವಿತ್ರನಾಮ”ಕ್ಕಾಗಿ ಮತ್ತು ತನ್ನ ನಿಷ್ಠಾವಂತ ಸೇವಕರಿಗಾಗಿರುವ ಕನಿಕರವಾಗಿರುವುದು. (ಯೆಹೆಜ್ಕೇಲ 36:20-23) ಯೆಹೋವನು ದುಷ್ಟತನವನ್ನು ತೊಲಗಿಸಿ, ಒಂದು ನೀತಿಯ ಹೊಸ ಲೋಕವನ್ನು ತರುವನು. ದುಷ್ಟರ ಕುರಿತಾಗಿ ಯೆಹೋವನು ಘೋಷಿಸುವುದು: “ನಾನಂತು ಅವರನ್ನು ಕಟಾಕ್ಷಿಸೆನು, ಉಳಿಸೆನು [“ಕನಿಕರ ತೋರಿಸೆನು,” NW], ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು.”​—ಯೆಹೆಜ್ಕೇಲ 9:10.

21 ಆ ಸಮಯದ ತನಕ ಯೆಹೋವನು ಜನರಿಗಾಗಿ ಕನಿಕರವನ್ನು ತೋರಿಸುವನು​—ನಾಶಕ್ಕೆ ಗುರಿಯಾಗಲಿರುವ ಜನರಿಗೂ ಸಹ. ಯಥಾರ್ಥವಾಗಿ ಪಶ್ಚಾತ್ತಾಪಪಡುವ ಪಾಪಿಗಳಾದ ಜನರು ಯೆಹೋವನ ಅತ್ಯಂತ ಕನಿಕರಭರಿತ ವರದಾನಗಳಲ್ಲಿ ಒಂದಾದ ಕ್ಷಮೆಯಿಂದ ಪ್ರಯೋಜನ ಪಡೆಯಸಾಧ್ಯವಿದೆ. ಮುಂದಿನ ಅಧ್ಯಾಯದಲ್ಲಿ, ಯೆಹೋವನ ಕ್ಷಮಾಪಣೆಯ ಸಂಪೂರ್ಣತೆಯನ್ನು ತಿಳಿಯಪಡಿಸುವ ಕೆಲವು ಸುಂದರವಾದ ದೃಷ್ಟಾಂತಗಳನ್ನು ನಾವು ಚರ್ಚಿಸಲಿದ್ದೇವೆ.

^ ಪ್ಯಾರ. 3 ಆದರೂ ಕುತೂಹಲಕರ ಸಂಗತಿಯೇನೆಂದರೆ ಕೀರ್ತನೆ 103:13 ರಲ್ಲಿ ಹೀಬ್ರು ಕ್ರಿಯಾಪದ ರಾಕಾಮ್‌, ಒಬ್ಬ ತಂದೆಯು ತನ್ನ ಮಕ್ಕಳಿಗೆ ತೋರಿಸುವ ಕರುಣೆ ಅಥವಾ ಕನಿಕರಕ್ಕೆ ಸೂಚಿಸುತ್ತದೆ.