ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 29

‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲಿಕ್ಕಾಗಿ’

‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲಿಕ್ಕಾಗಿ’

1-3. (ಎ) ಯೇಸುವನ್ನು ತನ್ನ ತಂದೆಯಂತಾಗಲು ಪ್ರೇರೇಪಿಸಿದ್ದು ಯಾವುದು? (ಬಿ) ಯೇಸುವಿನ ಪ್ರೀತಿಯ ಯಾವ ವೈಶಿಷ್ಟ್ಯಗಳನ್ನು ನಾವು ಪರೀಕ್ಷಿಸಲಿದ್ದೇವೆ?

ಒಬ್ಬ ಪುಟ್ಟ ಬಾಲಕನು ತನ್ನ ತಂದೆಯಂತಿರಲು ಪ್ರಯತ್ನಿಸುವುದನ್ನು ನೀವೆಂದಾದರೂ ನೋಡಿದ್ದೀರೋ? ತನ್ನ ತಂದೆ ಹೇಗೆ ನಡೆಯುತ್ತಾನೆ, ಮಾತಾಡುತ್ತಾನೆ, ಅಥವಾ ವರ್ತಿಸುತ್ತಾನೊ ಅದನ್ನೇ ಮಗನು ಅನುಕರಿಸಲು ಪ್ರಯತ್ನಿಸಬಹುದು. ಸಮಯಾನಂತರ ತಂದೆಯ ನೈತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನೂ ಆ ಬಾಲಕನು ತನ್ನದಾಗಿ ಮಾಡಿಕೊಳ್ಳಬಹುದು. ಹೌದು, ತನ್ನ ಒಲುಮೆಯ ತಂದೆಗಾಗಿ ಆ ಮಗನಿಗಿರುವ ಪ್ರೀತಿ ಮತ್ತು ಮೆಚ್ಚುಗೆಯು, ತನ್ನ ಅಪ್ಪನಂತೆಯೇ ಆಗಲು ಆ ಬಾಲಕನನ್ನು ಪ್ರೇರಿಸುತ್ತದೆ.

2 ಯೇಸು ಮತ್ತು ಅವನ ಸ್ವರ್ಗೀಯ ತಂದೆಯ ನಡುವಣ ಸಂಬಂಧದ ಕುರಿತಾಗಿ ಏನು? “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಯೇಸು ಒಂದು ಸಂದರ್ಭದಲ್ಲಿ ಹೇಳಿದನು. (ಯೋಹಾನ 14:31) ಬೇರೆ ಯಾವುದೇ ಸೃಷ್ಟಿಜೀವಿಯು ಅಸ್ತಿತ್ವಕ್ಕೆ ಬರುವ ಬಹಳ ಮುಂಚೆಯೇ ತಂದೆಯಾದ ಯೆಹೋವನೊಂದಿಗಿದ್ದ ಈ ಮಗನು ಆತನಿಗಾಗಿ ತೋರಿಸಿದಂಥ ಪ್ರೀತಿಗಿಂತಲೂ ಹೆಚ್ಚು ಪ್ರೀತಿಯನ್ನು ಬೇರೆ ಯಾರೂ ತೋರಿಸಸಾಧ್ಯವಿಲ್ಲ. ಆ ಪ್ರೀತಿಯೇ ಈ ಶ್ರದ್ಧಾಳು ಮಗನನ್ನು ತನ್ನ ತಂದೆಯಂತಾಗಲು ಬಯಸುವಂತೆ ಪ್ರೇರಿಸಿತು.​—ಯೋಹಾನ 14:9.

3 ಈ ಪುಸ್ತಕದ ಆರಂಭದ ಅಧ್ಯಾಯಗಳಲ್ಲಿ, ಯೇಸು ಹೇಗೆ ಯೆಹೋವನ ಶಕ್ತಿ, ನ್ಯಾಯ, ಮತ್ತು ವಿವೇಕವನ್ನು ಪರಿಪೂರ್ಣವಾಗಿ ಅನುಕರಿಸಿದನೆಂಬುದನ್ನು ನಾವು ಚರ್ಚಿಸಿದೆವು. ತನ್ನ ತಂದೆಯ ಪ್ರೀತಿಯನ್ನಾದರೋ ಯೇಸು ಹೇಗೆ ಪ್ರತಿಬಿಂಬಿಸಿ ತೋರಿಸಿದನು? ಯೇಸುವಿನ ಪ್ರೀತಿಯ ಮೂರು ವೈಶಿಷ್ಟ್ಯಗಳನ್ನು​—ಅವನ ಸ್ವತ್ಯಾಗದ ಆತ್ಮ, ಅವನ ಕೋಮಲವಾದ ಕನಿಕರ, ಮತ್ತು ಕ್ಷಮಿಸಲು ಅವನಲ್ಲಿದ್ದ ಸಿದ್ಧಮನಸ್ಸು ಇವುಗಳನ್ನು ನಾವೀಗ ಪರೀಕ್ಷಿಸೋಣ.

ಇದಕ್ಕಿಂತಲೂ “ಹೆಚ್ಚಿನ ಪ್ರೀತಿಯು ಯಾವುದೂ ಇಲ್ಲ”

4. ಸ್ವತ್ಯಾಗದ ಪ್ರೀತಿಯ ಅತಿ ಶ್ರೇಷ್ಠ ಮಾನವ ಮಾದರಿಯನ್ನು ಯೇಸು ಇಟ್ಟದ್ದು ಹೇಗೆ?

4 ಸ್ವತ್ಯಾಗದ ಪ್ರೀತಿಯಲ್ಲಿ ಯೇಸು ಒಂದು ಎದ್ದುಕಾಣುವ ಮಾದರಿಯನ್ನಿಟ್ಟಿದ್ದಾನೆ. ನಿಸ್ವಾರ್ಥಭಾವದಿಂದ ಇತರರ ಅಗತ್ಯಗಳನ್ನು ಮತ್ತು ಚಿಂತೆಗಳನ್ನು ನಮ್ಮ ಸ್ವಂತದವುಗಳಿಗಿಂತ ಮುಂದಾಗಿ ಇಡುವುದೇ ಸ್ವತ್ಯಾಗದ ಪ್ರೀತಿಯಾಗಿದೆ. ಅಂಥ ಪ್ರೀತಿಯನ್ನು ಯೇಸು ತೋರಿಸಿದ್ದು ಹೇಗೆ? ಅವನೇ ವಿವರಿಸಿದ್ದು: “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ.” (ಯೋಹಾನ 15:13) ಯೇಸು ಮನಃಪೂರ್ವಕವಾಗಿ ತನ್ನ ಪರಿಪೂರ್ಣ ಜೀವವನ್ನು ನಮಗಾಗಿ ಕೊಟ್ಟನು. ಯಾವನೇ ಮಾನವನು ಆ ರೀತಿಯಲ್ಲಿ ಪ್ರೀತಿಯ ಅತ್ಯಂತ ಮಹಾನ್‌ ಅಭಿವ್ಯಕ್ತಿಯನ್ನು ಎಂದಿಗೂ ತೋರಿಸಿರುವುದಿಲ್ಲ. ಆದರೆ ಬೇರೆ ವಿಧಗಳಲ್ಲೂ ಯೇಸು ಸ್ವತ್ಯಾಗದ ಪ್ರೀತಿಯನ್ನು ತೋರಿಸಿದನು.

5. ಪರಲೋಕವನ್ನು ಬಿಟ್ಟುಬರುವುದು ದೇವರ ಏಕಜಾತ ಪುತ್ರನ ಕಡೆಯಿಂದ ಒಂದು ಪ್ರೀತಿಭರಿತ ತ್ಯಾಗವಾಗಿತ್ತೇಕೆ?

5 ಆತನ ಮಾನವಪೂರ್ವ ಅಸ್ತಿತ್ವದಲ್ಲಿ, ದೇವರ ಈ ಏಕಜಾತ ಪುತ್ರನಿಗೆ ಪರಲೋಕದಲ್ಲಿ ಒಂದು ಅಸದೃಶವೂ ಉನ್ನತವೂ ಆದ ಸ್ಥಾನವಿತ್ತು. ಯೆಹೋವನೊಂದಿಗೆ ಮತ್ತು ಇತರ ಆತ್ಮಜೀವಿಗಳ ಸಮೂಹದೊಂದಿಗೆ ಅತ್ಯಾಪ್ತ ಸಹವಾಸವು ಅವನಿಗಿತ್ತು. ಈ ವೈಯಕ್ತಿಕ ಅನುಕೂಲತೆಗಳಿದ್ದಾಗ್ಯೂ ಈ ಪ್ರಿಯ ಕುಮಾರನು “ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು.” (ಫಿಲಿಪ್ಪಿ 2:7) ‘ಕೆಡುಕನ ವಶದಲ್ಲಿ ಬಿದ್ದಿರುವ’ ಒಂದು ಲೋಕದಲ್ಲಿ ಪಾಪಿಗಳಾದ ಮಾನವರ ಮಧ್ಯೆ ಜೀವಿಸಲಿಕ್ಕಾಗಿ ಭೂಮಿಗೆ ಬರಲು ಅವನು ಸಿದ್ಧಮನಸ್ಸುಳ್ಳವನಾಗಿದ್ದನು. (1 ಯೋಹಾನ 5:19) ಅದು ದೇವಕುಮಾರನ ಕಡೆಯಿಂದ ಒಂದು ಪ್ರೀತಿಭರಿತ ತ್ಯಾಗವಾಗಿರಲಿಲ್ಲವೇ?

6, 7. (ಎ) ಯೇಸು ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯಾವ ರೀತಿಗಳಲ್ಲಿ ಸ್ವತ್ಯಾಗದ ಪ್ರೀತಿಯನ್ನು ತೋರಿಸಿದನು? (ಬಿ) ಯೋಹಾನ 19:25-27 ರಲ್ಲಿ ಸ್ವತ್ಯಾಗದ ಪ್ರೀತಿಯ ಯಾವ ಹೃದಯಸ್ಪರ್ಶಿ ಉದಾಹರಣೆಯು ದಾಖಲೆಯಾಗಿದೆ?

6 ತನ್ನ ಭೂಶುಶ್ರೂಷೆಯಾದ್ಯಂತ ಯೇಸು ಅನೇಕ ವಿಧಗಳಲ್ಲಿ ಸ್ವತ್ಯಾಗದ ಪ್ರೀತಿಯನ್ನು ತೋರಿಸಿದನು. ಅವನು ಸಂಪೂರ್ಣವಾಗಿ ನಿಸ್ವಾರ್ಥಿಯಾಗಿದ್ದನು. ಅವನು ತನ್ನ ಶುಶ್ರೂಷೆಯಲ್ಲಿ ಎಷ್ಟು ತಲ್ಲೀನನಾಗಿದ್ದನೆಂದರೆ, ಮಾನವರಿಗೆ ಸರ್ವಸಾಮಾನ್ಯವಾಗಿ ರೂಢಿಯಾಗಿರುವ ಸೌಲಭ್ಯಗಳನ್ನು ಸಹ ಅವನು ತ್ಯಾಗಮಾಡಿದನು. “ನರಿಗಳಿಗೆ ಗುದ್ದುಗಳವೆ, ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದನವನು. (ಮತ್ತಾಯ 8:20) ಕುಶಲ ಬಡಗಿಯಾಗಿದ್ದ ಯೇಸು ತನಗಾಗಿ ಒಂದು ಆರಾಮವಾಗಿರುವ ಮನೆಯನ್ನು ಕಟ್ಟಿಕೊಳ್ಳಲಿಕ್ಕೋಸ್ಕರ ಅಥವಾ ಸ್ವಲ್ಪ ಹೆಚ್ಚು ಹಣವನ್ನು ಗಳಿಸಲಿಕ್ಕೋಸ್ಕರ ಸುಂದರವಾದ ಪೀಠೋಪಕರಣಗಳನ್ನು ಮಾಡಿ ಮಾರಲು ಸ್ವಲ್ಪ ಸಮಯವನ್ನು ಬದಿಗಿಡಬಹುದಿತ್ತು. ಆದರೆ ಐಹಿಕ ವಸ್ತುಗಳನ್ನು ಗಿಟ್ಟಿಸಿಕೊಳ್ಳಲಿಕ್ಕಾಗಿ ಅವನು ತನ್ನ ಕೌಶಲಗಳನ್ನು ಉಪಯೋಗಿಸಲಿಲ್ಲ.

7 ಯೇಸುವಿನ ಸ್ವತ್ಯಾಗದ ಪ್ರೀತಿಯ ನಿಜವಾದ ಹೃದಯಸ್ಪರ್ಶಿ ಉದಾಹರಣೆಯು ಯೋಹಾನ 19:​25-27 ರಲ್ಲಿ ದಾಖಲೆಯಾಗಿರುತ್ತದೆ. ತನ್ನ ಮರಣದ ಆ ಮಧ್ಯಾಹ್ನದ ಹೊತ್ತಿನಲ್ಲಿ ಯೇಸುವಿನ ಹೃದಮನಗಳಲ್ಲಿ ಅವೆಷ್ಟು ವಿಷಯಗಳು ತುಂಬಿದ್ದಿರಬಹುದೆಂಬುದನ್ನು ಕಲ್ಪಿಸಿಕೊಳ್ಳಿರಿ. ಯಾತನಾ ಕಂಬದಲ್ಲಿ ತೂಗಾಡುತ್ತಿದ್ದಾಗಲೂ ಅವನು ತನ್ನ ಶಿಷ್ಯರ ಕುರಿತು, ಸಾರುವ ಕೆಲಸದ ಕುರಿತು, ಮತ್ತು ವಿಶೇಷವಾಗಿ ತನ್ನ ಸಮಗ್ರತೆಯ ವಿಷಯದಲ್ಲಿ ಹಾಗೂ ಇದು ತನ್ನ ತಂದೆಯ ಹೆಸರಿನ ಬಗ್ಗೆ ಯಾವ ಅಭಿಪ್ರಾಯವನ್ನು ಮೂಡಿಸುವುದೆಂಬುದರ ವಿಷಯದಲ್ಲಿ ಚಿಂತಿಸುತ್ತಲಿದ್ದನು. ವಾಸ್ತವದಲ್ಲಿ ಮಾನವಕುಲದ ಇಡೀ ಭವಿಷ್ಯತ್ತೇ ಅವನ ಮೇಲೆ ಆತುಕೊಂಡಿತ್ತು! ಆದರೂ ಯೇಸು ಸಾಯುವ ಕೆಲವೇ ಕ್ಷಣಗಳ ಮುಂಚೆ, ಅಷ್ಟರೊಳಗೆ ವಿಧವೆಯಾಗಿದ್ದಿರಬಹುದಾದ ತನ್ನ ತಾಯಿಯಾದ ಮರಿಯಳ ಬಗ್ಗೆಯೂ ಚಿಂತೆಯನ್ನು ವ್ಯಕ್ತಪಡಿಸಿದನು. ಅಪೊಸ್ತಲ ಯೋಹಾನನಿಗೆ, ಮರಿಯಳನ್ನು ತನ್ನ ಸ್ವಂತ ತಾಯಿಯೋ ಎಂಬಂತೆ ನೋಡಿ ಸಾಕಿಸಲಹುವಂತೆ ಯೇಸು ಕೇಳಿಕೊಂಡನು. ತದನಂತರ ಆ ಅಪೊಸ್ತಲನು ಆಕೆಯನ್ನು ತನ್ನ ಮನೆಗೆ ಕರೆದೊಯ್ದನು. ಹೀಗೆ ಯೇಸು ತನ್ನ ತಾಯಿಯ ಭೌತಿಕ ಮತ್ತು ಆಧ್ಯಾತ್ಮಿಕ ಆರೈಕೆಗಾಗಿ ಏರ್ಪಾಡು ಮಾಡಿದನು. ನಿಸ್ವಾರ್ಥ ಪ್ರೀತಿಯ ಎಂಥ ಕೋಮಲವಾದ ಅಭಿವ್ಯಕ್ತಿಯಿದು!

‘ಅವನು ಮರುಕಪಟ್ಟನು’

8. ಯೇಸುವಿನ ಕನಿಕರವನ್ನು ವರ್ಣಿಸಲು ಬೈಬಲು ಉಪಯೋಗಿಸುವ ಗ್ರೀಕ್‌ ಪದದ ಅರ್ಥವೇನು?

8 ತನ್ನ ತಂದೆಯಂತೆ ಯೇಸುವೂ ಕನಿಕರವುಳ್ಳವನಾಗಿದ್ದನು. ಕಷ್ಟದಲ್ಲಿದ್ದವರನ್ನು ನೋಡಿ ಮನಕರಗಿ ಅವರಿಗೆ ಸಹಾಯಮಾಡಲು ಅತಿ ಪ್ರಯಾಸಪಟ್ಟ ವ್ಯಕ್ತಿಯೆಂದು ಶಾಸ್ತ್ರಗಳು ಯೇಸುವಿನ ಕುರಿತಾಗಿ ವರ್ಣಿಸುತ್ತವೆ. ಯೇಸುವಿನ ಕನಿಕರವನ್ನು ವರ್ಣಿಸುವುದಕ್ಕಾಗಿ, “ಮರುಕಪಟ್ಟನು” ಎಂದು ತರ್ಜುಮೆಯಾಗಿರುವ ಒಂದು ಗ್ರೀಕ್‌ ಶಬ್ದವನ್ನು ಬೈಬಲು ಉಪಯೋಗಿಸುತ್ತದೆ. ಒಬ್ಬ ವಿದ್ವಾಂಸನು ಹೇಳುವುದು: “ಅದು . . . ಒಬ್ಬನನ್ನು ಆಂತರ್ಯದಿಂದ ಆಳವಾಗಿ ಪ್ರೇರೇಪಿಸುವ ಒಂದು ಭಾವನೆಯನ್ನು ವರ್ಣಿಸುತ್ತದೆ. ಕನಿಕರದ ಭಾವನೆಯನ್ನು ಅತ್ಯಂತ ಬಲವಾಗಿ ಒತ್ತಿಹೇಳುವ ಗ್ರೀಕ್‌ ಶಬ್ದವು ಅದಾಗಿರುತ್ತದೆ.” ಕ್ರಿಯೆನಡಿಸಲು ಅವನನ್ನು ಒತ್ತಾಯಪಡಿಸಿದ್ದ ಅಂಥ ಆಳವಾದ ಕನಿಕರದಿಂದ ಯೇಸು ಪ್ರೇರೇಪಿಸಲ್ಪಟ್ಟ ಕೆಲವು ಸನ್ನಿವೇಶಗಳನ್ನು ಪರಿಗಣಿಸಿರಿ.

9, 10. (ಎ) ಯೇಸು ಮತ್ತು ಅವನ ಅಪೊಸ್ತಲರು ಒಂದು ಏಕಾಂತ ಸ್ಥಳವನ್ನು ಹುಡುಕಿಕೊಂಡು ಹೋಗುವಂತೆ ನಡಿಸಿದ ಪರಿಸ್ಥಿತಿಗಳಾವುವು? (ಬಿ) ಯೇಸುವಿನ ಏಕಾಂತತೆಯು ಒಂದು ಗುಂಪಿನಿಂದ ಭಂಗಗೊಳಿಸಲ್ಪಟ್ಟಾಗ ಅವನು ಹೇಗೆ ಪ್ರತಿಕ್ರಿಯಿಸಿದನು, ಮತ್ತು ಏಕೆ?

9ಆಧ್ಯಾತ್ಮಿಕ ಅಗತ್ಯಗಳಿಗೆ ಪ್ರತಿವರ್ತಿಸುವಂತೆ ಪ್ರೇರಿಸಲ್ಪಟ್ಟನು. ಮಾರ್ಕ 6:​30-34 ರ ವೃತ್ತಾಂತವು, ಯೇಸು ತನ್ನ ಮರುಕವನ್ನು ವ್ಯಕ್ತಪಡಿಸಲು ನಡಿಸಿದ ಮುಖ್ಯ ವಿಷಯವು ಯಾವುದೆಂಬುದನ್ನು ತೋರಿಸುತ್ತದೆ. ಆ ದೃಶ್ಯವನ್ನು ನಿಮ್ಮ ಮನಸ್ಸಿಗೆ ತಂದುಕೊಳ್ಳಿರಿ. ಅಪೊಸ್ತಲರು ಬಹಳ ಸಂಭ್ರಮದಲ್ಲಿದ್ದರು, ಯಾಕಂದರೆ ಅವರು ಆವಾಗಲೆ ಒಂದು ದೀರ್ಘವಾದ ಸಾರುವ ಸಂಚಾರವನ್ನು ಮುಗಿಸಿ ಬಂದಿದ್ದರು. ಅವರು ಯೇಸುವಿನ ಬಳಿಗೆ ಬಂದು ತಾವು ಕಂಡ ಮತ್ತು ಕೇಳಿದ ವಿಷಯಗಳೆಲ್ಲವನ್ನು ಆತುರಾತುರವಾಗಿ ವರದಿಸಿದ್ದರು. ಆದರೆ ಜನರ ಒಂದು ದೊಡ್ಡ ಗುಂಪು ಅಲ್ಲಿ ಒಟ್ಟು ಸೇರಿತು ಮತ್ತು ಯೇಸು ಹಾಗೂ ಅವನ ಶಿಷ್ಯರಿಗೆ ಊಟಮಾಡಲೂ ಸಮಯ ಸಿಗಲಿಲ್ಲ. ಸದಾ ಗಮನಿಸುತ್ತಾ ಇರುವವನಾಗಿದ್ದ ಯೇಸು, ಅಪೊಸ್ತಲರು ದಣಿದಿರುವುದನ್ನು ನೋಡಿದನು. “ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ” ಎಂದನವನು ಅವರಿಗೆ. ಅವರು ಒಂದು ದೋಣಿಯನ್ನು ಹತ್ತಿ ಗಲಿಲಾಯ ಸಮುದ್ರದ ಉತ್ತರ ದಿಕ್ಕಿನಾಚೆಗೆ ಒಂದು ಏಕಾಂತ ಸ್ಥಳಕ್ಕೆ ಹೋದರು. ಆದರೆ ಜನರು ಅವರು ಹೊರಟುಹೋಗುವುದನ್ನು ನೋಡಿಬಿಟ್ಟರು. ಬೇರೆಯವರಿಗೆ ಸಹ ಆ ಸುದ್ದಿ ತಿಳಿದುಬಂತು. ಅವರೆಲ್ಲರೂ ಕೂಡಿ ಉತ್ತರ ಕಿನಾರೆಯ ಉದ್ದಕ್ಕೂ ಓಡುತ್ತಾ ದೋಣಿಯು ದಡಸೇರುವ ಮುಂಚೆಯೇ ಆಚೆದಡವನ್ನು ತಲಪಿದರು!

10 ತನ್ನ ಏಕಾಂತತೆ ಭಂಗವಾಯಿತೆಂದು ಯೇಸು ರೇಗಿದನೋ? ಖಂಡಿತವಾಗಿಯೂ ಇಲ್ಲ! ತನಗಾಗಿ ಕಾಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೆರೆದುಬಂದಿದ್ದ ಗುಂಪನ್ನು ಕಂಡು ಅವನ ಹೃದಯ ತುಂಬಿಬಂತು. ಮಾರ್ಕನು ಬರೆದದ್ದು: “ಆತನು . . . ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು [“ಮರುಕಪಟ್ಟು,” NW] ಅವರಿಗೆ ಬಹಳ ಉಪದೇಶ”ಮಾಡಿದನು. ಈ ಜನರನ್ನು ಯೇಸು, ಆಧ್ಯಾತ್ಮಿಕ ಅಗತ್ಯಗಳಿರುವ ವ್ಯಕ್ತಿಗಳೋಪಾದಿ ಪರಿಗಣಿಸಿದನು. ಮಾರ್ಗದರ್ಶಿಸಲು ಅಥವಾ ರಕ್ಷಿಸಲು ಒಬ್ಬ ಕುರುಬನಿಲ್ಲದೇ ನಿಸ್ಸಹಾಯಕವಾಗಿ ಅಲೆದಾಡುವ ಕುರಿಗಳೋಪಾದಿ ಅವರಿದ್ದರು. ಯಾರು ಪರಿಪಾಲಿಸುವ ಕುರುಬರಾಗಿ ಇರಬೇಕಾಗಿತ್ತೋ ಆ ನಿರ್ದಯಿ ಧಾರ್ಮಿಕ ಮುಖಂಡರು ಈ ಸಾಮಾನ್ಯ ಜನರನ್ನು ದುರ್ಲಕ್ಷಿಸುತ್ತಿದ್ದರೆಂದು ಯೇಸುವಿಗೆ ತಿಳಿದಿತ್ತು. (ಯೋಹಾನ 7:47-49) ಆ ಜನರಿಗಾಗಿ ಅವನಲ್ಲಿ ಮರುಕಹುಟ್ಟಿತು, ಆದುದರಿಂದ “ದೇವರ ರಾಜ್ಯದ” ಕುರಿತು ಅವನು ಅವರಿಗೆ ಕಲಿಸತೊಡಗಿದನು. (ಲೂಕ 9:11) ತಾನು ಅವರಿಗೆ ಏನನ್ನು ಕಲಿಸಲಿದ್ದನೋ ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಕಾಣುವ ಮೊದಲೇ ಯೇಸು ಆ ಜನರಿಗಾಗಿ ಮರುಕಪಟ್ಟನೆಂಬುದನ್ನು ಗಮನಿಸಿರಿ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅವನ ಕೋಮಲ ಕನಿಕರವು, ಆ ಗುಂಪಿಗೆ ಕಲಿಸಿದ ಮೇಲೆ ದೊರೆತ ಫಲಿತಾಂಶವಾಗಿರಲಿಲ್ಲ, ಬದಲಿಗೆ ಅವರಿಗೆ ಕಲಿಸಲು ಅವನಿಗಿದ್ದ ಹೇತು ಆಗಿತ್ತು.

‘ಆತನು ಕೈನೀಡಿ ಅವನನ್ನು ಮುಟ್ಟಿದನು’

11, 12. (ಎ) ಬೈಬಲ್‌ ಕಾಲಗಳಲ್ಲಿ ಕುಷ್ಠರೋಗಿಗಳನ್ನು ಹೇಗೆ ನೋಡಲಾಗುತ್ತಿತ್ತು, ಆದರೆ “ಮೈಯೆಲ್ಲಾ ಕುಷ್ಠರೋಗ ತುಂಬಿದ್ದ” ಒಬ್ಬ ಮನುಷ್ಯನು ಯೇಸುವಿನ ಬಳಿಬಂದಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು? (ಬಿ) ಯೇಸುವಿನ ಸ್ಪರ್ಶವು ಕುಷ್ಠರೋಗಿಯನ್ನು ಹೇಗೆ ಪ್ರಭಾವಿಸಿದ್ದಿರಬಹುದು, ಮತ್ತು ಒಬ್ಬ ಡಾಕ್ಟರನ ಅನುಭವವು ಇದನ್ನು ಹೇಗೆ ದೃಷ್ಟಾಂತಿಸುತ್ತದೆ?

11ಕಷ್ಟಾನುಭವವನ್ನು ಉಪಶಮನಗೊಳಿಸುವಂತೆ ಪ್ರೇರಿಸಲ್ಪಟ್ಟನು. ಅನೇಕ ತರದ ರೋಗಗಳಿಂದ ನರಳುತ್ತಿದ್ದ ಜನರಿಗೆ ಯೇಸು ಕನಿಕರವುಳ್ಳವನೆಂದು ತಿಳಿದಿದ್ದುದರಿಂದ, ಅವರು ಅವನ ಕಡೆಗೆ ಆಕರ್ಷಿಸಲ್ಪಟ್ಟರು. ಇದು ವಿಶೇಷವಾಗಿ, ಜನರ ಗುಂಪು ಯೇಸುವನ್ನು ಹಿಂಬಾಲಿಸಿ ಬರುತ್ತಿದ್ದಾಗ, “ಮೈಯೆಲ್ಲಾ ಕುಷ್ಠರೋಗ ತುಂಬಿದ್ದ” ಒಬ್ಬನು ಅವನ ಬಳಿಬಂದ ಸಮಯದಲ್ಲಿ ತೋರಿಬಂತು. (ಲೂಕ 5:12) ಬೈಬಲ್‌ ಕಾಲಗಳಲ್ಲಿ, ಇತರರಿಗೆ ಸೋಂಕು ತಗಲದಂತೆ ಕಾಪಾಡಲು ಕುಷ್ಠರೋಗಿಗಳನ್ನು ಪ್ರತ್ಯೇಕಿಸಿ ಇಡಲಾಗುತ್ತಿತ್ತು. (ಅರಣ್ಯಕಾಂಡ 5:1-4) ಕಾಲಾನಂತರವಾದರೊ ಯೆಹೂದಿ ಧಾರ್ಮಿಕ ಮುಖಂಡರು ಕುಷ್ಠರೋಗದ ವಿಷಯದಲ್ಲಿ ಅತಿ ನಿರ್ದಯವಾದ ನೋಟವನ್ನು ಬೆಳೆಸಿಕೊಂಡು, ತಮ್ಮದೇ ಆದ ದಬ್ಬಾಳಿಕೆಯ ನಿಯಮಗಳನ್ನು ಜನರ ಮೇಲೆ ಹೇರಿದರು. * ಆದರೂ ಯೇಸು ಆ ಕುಷ್ಠರೋಗಿಗೆ ಹೇಗೆ ಪ್ರತಿಕ್ರಿಯಿಸಿದನೆಂಬುದನ್ನು ಗಮನಿಸಿರಿ: “ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು​—ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಬೇಡಿಕೊಳ್ಳಲು ಆತನು ಕನಿಕರಪಟ್ಟು [“ಮರುಕಪಟ್ಟು,” NW] ಕೈನೀಡಿ ಅವನನ್ನು ಮುಟ್ಟಿ​—ನನಗೆ ಮನಸ್ಸುಂಟು; ಶುದ್ಧವಾಗು ಅಂದನು. ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧವಾದನು.” (ಮಾರ್ಕ 1:40-42) ಆ ಕುಷ್ಠರೋಗಿಯು ಅಲ್ಲಿ ಉಪಸ್ಥಿತನಿರುವುದು ಸಹ ನ್ಯಾಯವಿರುದ್ಧವಾಗಿತ್ತೆಂದು ಯೇಸುವಿಗೆ ತಿಳಿದಿತ್ತು. ಆದರೂ, ಅವನನ್ನು ಹಿಂದೆ ಕಳುಹಿಸಿಬಿಡುವ ಬದಲಿಗೆ ಯೇಸು ಎಷ್ಟೊಂದು ಆಳವಾದ ಕನಿಕರದಿಂದ ಪ್ರೇರಿಸಲ್ಪಟ್ಟನೆಂದರೆ, ಯೋಚಿಸಲೂ ಸಾಧ್ಯವಿಲ್ಲದ ವಿಷಯವೊಂದನ್ನು ಅವನು ಮಾಡಿದನು. ಅವನು ಆ ಕುಷ್ಠರೋಗಿಯನ್ನು ಮುಟ್ಟಿದನು!

12 ಆ ಸ್ಪರ್ಶದಿಂದ ಆ ಕುಷ್ಠರೋಗಿಗೆ ಹೇಗೆನಿಸಿದ್ದಿರಬಹುದೆಂಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೋ? ದೃಷ್ಟಾಂತಕ್ಕಾಗಿ, ಒಂದು ಅನುಭವವನ್ನು ಗಮನಿಸಿರಿ. ಕುಷ್ಠರೋಗ ವಿಶೇಷಜ್ಞರಾದ ಡಾ. ಪೌಲ್‌ ಬ್ರ್ಯಾಂಡ್‌, ಭಾರತದಲ್ಲಿ ತಾವು ಔಷಧೋಪಚಾರ ನೀಡಿದ ಒಬ್ಬ ಕುಷ್ಠರೋಗಿಯ ಕುರಿತು ತಿಳಿಸುತ್ತಾರೆ. ರೋಗ ಪರೀಕ್ಷೆಯ ಸಮಯದಲ್ಲಿ ಡಾಕ್ಟರರು ಆ ಕುಷ್ಠರೋಗಿಯ ಹೆಗಲ ಮೇಲೆ ಕೈಯಿಟ್ಟು, ಅವನು ಯಾವ ಚಿಕಿತ್ಸೆಯನ್ನು ಪಡೆಯಬೇಕೆಂಬುದನ್ನು ತರ್ಜುಮೆಗಾರ್ತಿಯ ಮೂಲಕ ವಿವರಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಆ ಕುಷ್ಠರೋಗಿ ಅಳತೊಡಗಿದನು. “ನಾನು ಹೇಳಿದ್ದರಲ್ಲಿ ಏನಾದರೂ ತಪ್ಪಾಯಿತೋ?” ಎಂದು ಕೇಳಿದರು ಡಾಕ್ಟರ್‌. ತರ್ಜುಮೆಗಾರ್ತಿಯು ಆ ಯುವಕನಿಗೆ ಅವನ ಭಾಷೆಯಲ್ಲಿ ಸಂಗತಿಯೇನೆಂದು ಕೇಳಿ ಪ್ರತ್ಯುತ್ತರ ಕೊಟ್ಟದ್ದು: “ಇಲ್ಲ ಡಾಕ್ಟರ್‌. ನೀವು ಅವನ ಹೆಗಲ ಮೇಲೆ ಕೈಯಿಟ್ಟು ಮಾತಾಡಿದ ಕಾರಣ ಅವನು ಅಳುತ್ತಿದ್ದಾನೆ. ಅವನಿಲ್ಲಿ ಬರುವ ವರೆಗೆ ಅನೇಕ ವರ್ಷಗಳ ತನಕ ಅವನನ್ನು ಯಾರೂ ಮುಟ್ಟಿರಲಿಲ್ಲವಂತೆ.” ಯೇಸುವಿನ ಬಳಿ ಬಂದಿದ್ದ ಆ ಕುಷ್ಠರೋಗಿಗೆ ಅವನ ಸ್ಪರ್ಶವು ಇನ್ನೂ ಹೆಚ್ಚಿನ ಅರ್ಥದಲ್ಲಿತ್ತು. ಆ ಒಂದೇ ಸ್ಪರ್ಶದಿಂದಾಗಿ, ಅವನನ್ನು ಅಸ್ಪರ್ಶನನ್ನಾಗಿ ಮಾಡಿದ್ದ ರೋಗವು ಕಣ್ಮರೆಯಾಯಿತು!

13, 14. (ಎ) ನಾಯಿನೆಂಬ ಊರನ್ನು ಸಮೀಪಿಸುತ್ತಿದ್ದಾಗ ಯೇಸುವಿಗೆ ಯಾವ ಯಾತ್ರೆಯು ಎದುರಾಯಿತು, ಮತ್ತು ಅದನ್ನು ವಿಶೇಷವಾಗಿ ದುಃಖಕರವಾದ ಸನ್ನಿವೇಶವನ್ನಾಗಿ ಮಾಡಿದ್ದು ಯಾವುದು? (ಬಿ) ನಾಯಿನೆಂಬ ಊರಿನ ಆ ವಿಧವೆಯ ಪರವಾಗಿ ಯಾವ ಕ್ರಿಯೆಯನ್ನು ಕೈಕೊಳ್ಳಲು ಯೇಸುವಿನ ಕನಿಕರವು ಅವನನ್ನು ಪ್ರೇರಿಸಿತು?

13ದುಃಖವನ್ನು ಹೋಗಲಾಡಿಸುವಂತೆ ಪ್ರೇರಿಸಲ್ಪಟ್ಟನು. ಬೇರೆಯವರ ದುಃಖವನ್ನು ನೋಡಿ ಯೇಸುವಿನ ಮನಸ್ಸು ಕರಗುತ್ತಿತ್ತು. ಉದಾಹರಣೆಗಾಗಿ, ಲೂಕ 7:​11-15 ರ ವೃತ್ತಾಂತವನ್ನು ಪರಿಗಣಿಸಿರಿ. ಅವನ ಶುಶ್ರೂಷೆಯ ಸುಮಾರು ಅರ್ಧ ಕಾಲಾವಧಿಯು ಕಳೆದ ನಂತರ ಈ ಘಟನೆಯು ನಡೆಯಿತು. ಅವನು ನಾಯಿನೆಂಬ ಗಲಿಲಾಯ ಪಟ್ಟಣದ ಹೊರವಲಯವನ್ನು ಸಮೀಪಿಸುತ್ತಿದ್ದನು. ಯೇಸು ಊರಬಾಗಲಿನ ಹತ್ತಿರಕ್ಕೆ ಬಂದಾಗ ಅವನಿಗೊಂದು ಸ್ಮಶಾನಯಾತ್ರೆಯು ಎದುರಾಯಿತು. ಅಲ್ಲಿನ ಪರಿಸ್ಥಿತಿಗಳು ಹೃದಯವಿದ್ರಾವಕವಾಗಿದ್ದವು. ಒಬ್ಬ ಯೌವನಸ್ಥನು ಸತ್ತಿದ್ದನು, ಮತ್ತು ಅವನು ತನ್ನ ತಾಯಿಯ ಒಬ್ಬನೇ ಮಗನಾಗಿದ್ದು, ಅವಳೊಬ್ಬ ವಿಧವೆಯಾಗಿದ್ದಳು. ಹಿಂದೊಮ್ಮೆ ಇಂಥದ್ದೇ ಒಂದು ಯಾತ್ರೆಯಲ್ಲಿ​—ಅವಳ ಗಂಡನ ಸ್ಮಶಾನಯಾತ್ರೆಯಲ್ಲಿ​—ಅವಳು ಇದ್ದಿರಬಹುದು. ಈ ಸಲ ಇದು ಅವಳ ಮಗನ ಸ್ಮಶಾನಯಾತ್ರೆಯಾಗಿತ್ತು. ಪ್ರಾಯಶಃ ಅವನು ಅವಳ ಬದುಕಿನ ಏಕಮಾತ್ರ ಆಸರೆಯಾಗಿದ್ದನು. ಅವಳೊಂದಿಗಿದ್ದ ಗುಂಪಿನಲ್ಲಿ ವಿಲಾಪಗಳನ್ನು ಪಠಿಸುತ್ತಾ ಶೋಕಿಸುತ್ತಿದ್ದವರು ಮತ್ತು ಶೋಕರಾಗಗಳನ್ನು ನುಡಿಸುತ್ತಿದ್ದ ವಾದ್ಯಗಾರರೂ ಇದ್ದಿರಬಹುದು. (ಯೆರೆಮೀಯ 9:17, 18; ಮತ್ತಾಯ 9:23) ಯೇಸುವಿನ ನೋಟವಾದರೊ ನಿಸ್ಸಂದೇಹವಾಗಿಯೂ, ಮಗನ ಶವವನ್ನು ಹೊತ್ತಿದ್ದ ಚಟ್ಟದ ಬಳಿಯಲ್ಲೇ ನಡೆಯುತ್ತಿದ್ದ ದುಃಖತಪ್ತ ತಾಯಿಯ ಮೇಲೆ ನೆಟ್ಟಿತ್ತು.

14 ವಿಯೋಗ ದುಃಖದಲ್ಲಿದ್ದ ಆ ತಾಯಿಯನ್ನು ನೋಡಿ ಯೇಸು ಬಹು “ಮರುಕಪಟ್ಟನು” (NW). ಧೈರ್ಯತುಂಬುವ ದನಿಯಲ್ಲಿ ಅವನು ಅವಳಿಗೆ “ಅಳಬೇಡ” ಎಂದು ಹೇಳಿದನು. ಯಾರೂ ಏನೂ ಹೇಳದಿದ್ದರೂ, ಅವನು ಆ ಚಟ್ಟದ ಹತ್ತಿರ ಹೋಗಿ ಅದನ್ನು ಮುಟ್ಟಿದನು. ಆಗ ಶವ ಹೊತ್ತವರು​—ಬಹುಶಃ ಹಿಂಬಾಲಿಸುತ್ತಿದ್ದ ಗುಂಪಿನವರು ಸಹ​—ಅಲ್ಲಿಯೇ ನಿಂತುಬಿಟ್ಟರು. ಯೇಸು ಅಧಿಕಾರಯುಕ್ತ ವಾಣಿಯಲ್ಲಿ ಆ ನಿರ್ಜೀವವಾದ ದೇಹಕ್ಕೆ “ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ” ಎಂದನು. ಮುಂದೇನಾಯಿತು? ಗಾಢವಾದ ನಿದ್ರೆಯಿಂದ ಎಬ್ಬಿಸಲ್ಪಟ್ಟನೋ ಎಂಬಂತೆ “ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು”! ಇದರ ನಂತರ ಅತ್ಯಂತ ಹೃದಯಸ್ಪರ್ಶಿಯಾದ ಈ ಹೇಳಿಕೆ ಮಾಡಲ್ಪಟ್ಟಿರುತ್ತದೆ: “ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು.”

15. (ಎ) ಯೇಸು ಮರುಕಪಟ್ಟದ್ದರ ಕುರಿತ ಬೈಬಲ್‌ ವೃತ್ತಾಂತಗಳು ಕನಿಕರ ಮತ್ತು ಕ್ರಿಯೆಯ ನಡುವಣ ಯಾವ ಸಂಬಂಧವನ್ನು ತೋರಿಸುತ್ತವೆ? (ಬಿ) ಈ ವಿಷಯದಲ್ಲಿ ನಾವು ಯೇಸುವನ್ನು ಹೇಗೆ ಅನುಕರಿಸಬಲ್ಲೆವು?

15 ಈ ವೃತ್ತಾಂತಗಳಿಂದ ನಾವೇನನ್ನು ಕಲಿಯುತ್ತೇವೆ? ಪ್ರತಿಯೊಂದು ಸಂದರ್ಭದಲ್ಲಿ, ಕನಿಕರ ಮತ್ತು ಕ್ರಿಯೆಯ ನಡುವಣ ಸಂಬಂಧವನ್ನು ಗಮನಿಸಿರಿ. ಇತರರ ದುರವಸ್ಥೆಯನ್ನು ನೋಡುವಾಗ ಯಾವಾಗಲೂ ಅವನಲ್ಲಿ ಮರುಕಹುಟ್ಟುತ್ತಿತ್ತು. ಮತ್ತು ಅವರಿಗಾಗಿ ಅವನಿಗಿದ್ದ ಕನಿಕರವು ಅವನನ್ನು ಕ್ರಿಯೆನಡಿಸುವಂತೆ ಪ್ರೇರಿಸುತ್ತಿತ್ತು. ಅವನ ಮಾದರಿಯನ್ನು ನಾವು ಹೇಗೆ ಅನುಸರಿಸಬಲ್ಲೆವು? ಕ್ರೈಸ್ತರೋಪಾದಿ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಹಂಗು ನಮಗಿದೆ. ಇದನ್ನು ಮಾಡಲು ಪ್ರಾಮುಖ್ಯವಾಗಿ ನಮಗೆ ಸ್ಫೂರ್ತಿ ನೀಡುವಂಥದ್ದು ದೇವರ ಕಡೆಗೆ ನಮಗಿರುವ ಪ್ರೀತಿಯೇ. ಆದರೂ ಸಾರುವ ಕಾರ್ಯಕ್ಕಾಗಿ ಕನಿಕರವೂ ಆವಶ್ಯಕವೆಂಬುದನ್ನು ನಾವು ನೆನಪಿನಲ್ಲಿಡೋಣ. ಯೇಸುವಿನಂತೆ ಜನರಿಗಾಗಿ ನಮ್ಮಲ್ಲಿ ಅನುಕಂಪವಿರುವುದಾದರೆ, ಅವರಿಗೆ ಸುವಾರ್ತೆಯನ್ನು ನೀಡಲು ನಮ್ಮಿಂದಾದದ್ದೆಲ್ಲವನ್ನೂ ಮಾಡಲು ನಮ್ಮ ಹೃದಯವು ಪ್ರೇರಿಸುವುದು. (ಮತ್ತಾಯ 22:37-39) ಕಷ್ಟಾಪತ್ತಿನಲ್ಲಿರುವ ಅಥವಾ ಶೋಕಪಡುತ್ತಿರುವ ನಮ್ಮ ಜೊತೆ ವಿಶ್ವಾಸಿಗಳಿಗೆ ಕನಿಕರವನ್ನು ತೋರಿಸುವ ವಿಷಯದಲ್ಲೇನು? ಅದ್ಭುತಕರವಾಗಿ ಅವರ ಶಾರೀರಿಕ ಬೇನೆಯನ್ನು ವಾಸಿಮಾಡಲು ಅಥವಾ ಸತ್ತವರನ್ನು ಎಬ್ಬಿಸಲು ನಮ್ಮಿಂದಾಗದು. ಆದರೂ ಅವರ ಕಡೆಗೆ ನಮ್ಮ ಚಿಂತೆಯನ್ನು ವ್ಯಕ್ತಪಡಿಸಲು ಮುಂದಡಿಯಿಡುವ ಮೂಲಕ ಅಥವಾ ತಕ್ಕದಾದ ಪ್ರಾಯೋಗಿಕ ಸಹಾಯವನ್ನು ನೀಡುವ ಮೂಲಕ ನಾವು ಕನಿಕರವನ್ನು ಕ್ರಿಯೆಯಲ್ಲಿ ತೋರಿಸಬಲ್ಲೆವು.​—ಎಫೆಸ 4:32.

“ತಂದೆಯೇ, ಅವರಿಗೆ ಕ್ಷಮಿಸು”

16. ಯಾತನಾ ಕಂಬದ ಮೇಲೆ ತೂಗಾಡುತ್ತಿರುವಾಗಲೂ ಕ್ಷಮಿಸಲು ಯೇಸುವಿಗಿದ್ದ ಸಿದ್ಧಮನಸ್ಸು ಹೇಗೆ ಪ್ರತ್ಯಕ್ಷವಾಗಿ ತೋರಿಬಂತು?

16 ಯೇಸು ತನ್ನ ತಂದೆಯ ಪ್ರೀತಿಯನ್ನು ಇನ್ನೊಂದು ಪ್ರಧಾನ ರೀತಿಯಲ್ಲಿಯೂ ಪರಿಪೂರ್ಣವಾಗಿ ಪ್ರತಿಬಿಂಬಿಸಿದನು​—ಅವನು ‘ಕ್ಷಮಿಸಲು ಸಿದ್ಧನಾಗಿದ್ದನು.’ (ಕೀರ್ತನೆ 86:​5, NW) ಈ ಸಿದ್ಧಮನಸ್ಸು ಅವನು ಯಾತನಾ ಕಂಬದ ಮೇಲೆ ತೂಗಾಡುತ್ತಿರುವಾಗಲೂ ಪ್ರತ್ಯಕ್ಷವಾಗಿ ತೋರಿಬಂತು. ಕೈಕಾಲುಗಳಿಗೆ ಮೊಳೆಗಳು ಜಡಿಯಲ್ಪಟ್ಟಿದ್ದು, ಲಜ್ಜಾಸ್ಪದವಾದ ಮರಣಕ್ಕೆ ಗುರಿಪಡಿಸಲ್ಪಟ್ಟಾಗಲೂ ಯೇಸು ಮಾತಾಡಿದ್ದು ಯಾವುದರ ಕುರಿತಾಗಿ? ತನ್ನ ಹಂತಕರನ್ನು ಶಿಕ್ಷಿಸು ಎಂದು ಅವನು ಯೆಹೋವನಿಗೆ ಮೊರೆಯಿಟ್ಟನೋ? ಅದಕ್ಕೆ ವಿರುದ್ಧವಾಗಿ, ಯೇಸುವಿನ ಕೊನೆಯ ಮಾತುಗಳಲ್ಲಿ ಕೆಲವು ಹೀಗಿದ್ದವು: “ತಂದೆಯೇ, ಅವರಿಗೆ ಕ್ಷಮಿಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು.”​—ಲೂಕ 23:34. *

17-19. ಅಪೊಸ್ತಲ ಪೇತ್ರನು ತನ್ನನ್ನು ಮೂರು ಬಾರಿ ಅಲ್ಲಗಳೆದುದ್ದನ್ನು ತಾನು ಕ್ಷಮಿಸಿದ್ದೇನೆಂದು ಯೇಸು ಯಾವ ರೀತಿಯಲ್ಲಿ ತೋರಿಸಿಕೊಟ್ಟನು?

17 ಯೇಸುವಿನ ಕ್ಷಮಾಪಣೆಯ ಹೆಚ್ಚು ಹೃದಯಸ್ಪರ್ಶಿ ಉದಾಹರಣೆಯು ಅಪೊಸ್ತಲ ಪೇತ್ರನೊಂದಿಗೆ ಅವನು ವ್ಯವಹರಿಸಿದ ರೀತಿಯಲ್ಲಿ ಕಂಡುಬರಬಹುದು. ಪೇತ್ರನು ಯೇಸುವನ್ನು ಬಹಳವಾಗಿ ಪ್ರೀತಿಸಿದ್ದನೆಂಬ ವಿಷಯದಲ್ಲಿ ಯಾವ ಸಂಶಯವೂ ಇಲ್ಲ. ಯೇಸುವಿನ ಜೀವನದ ಕೊನೆಯ ರಾತ್ರಿಯಾದ ನೈಸಾನ್‌ 14ರಂದು ಪೇತ್ರನು ಯೇಸುವಿಗಂದದ್ದು: “ಸ್ವಾಮೀ, ನಿನ್ನ ಸಂಗಡ ಸೆರೆಮನೆಗೆ ಹೋಗುವದಕ್ಕೂ ಸಾಯುವದಕ್ಕೂ ಸಿದ್ಧನಾಗಿದ್ದೇನೆ.” ಆದರೆ ಕೆಲವೇ ತಾಸುಗಳ ಅನಂತರ, ತನಗೆ ಯೇಸುವಿನ ಪರಿಚಯವೂ ಇಲ್ಲವೆಂದು ಹೇಳುತ್ತಾ ಪೇತ್ರನು ಮೂರು ಬಾರಿ ಅವನನ್ನು ಅಲ್ಲಗಳೆದನು! ಅವನು ಮೂರನೆಯ ಬಾರಿ ಅಲ್ಲಗಳೆದ ನಂತರ ಏನಾಯಿತೆಂದು ಬೈಬಲು ನಮಗೆ ಹೇಳುತ್ತದೆ: “ಸ್ವಾಮಿಯು ತಿರುಗಿಕೊಂಡು ಪೇತ್ರನನ್ನು ದೃಷ್ಟಿಸಿ ನೋಡಿದನು.” ತನ್ನ ಪಾಪದ ಹೊರೆಯಡಿ ಜಜ್ಜಿಹೋದ ಪೇತ್ರನು, “ಹೊರಗೆ ಹೋಗಿ ಬಹು ವ್ಯಥೆಪಟ್ಟು ಅತ್ತನು.” ಆ ದಿನ ಅನಂತರ ಯೇಸು ಸತ್ತಾಗ, ಪೇತ್ರನ ಮನಸ್ಸಿನಲ್ಲಿ ಈ ವಿಚಾರವು ಕೊರೆಯುತ್ತಾ ಇದ್ದಿದ್ದಿರಬಹುದು: ‘ನನ್ನ ಸ್ವಾಮಿಯು ನನ್ನನ್ನು ಕ್ಷಮಿಸಿದನೋ?’​—ಲೂಕ 22:33, 61, 62.

18 ಅದರ ಉತ್ತರಕ್ಕಾಗಿ ಪೇತ್ರನಿಗೆ ಬಹಳ ಸಮಯ ಕಾಯಬೇಕಾಗಲಿಲ್ಲ. ನೈಸಾನ್‌ 16ರಂದು ಬೆಳಗಾತ ಯೇಸುವಿನ ಪುನರುತ್ಥಾನವಾಯಿತು, ಮತ್ತು ಬಹುಮಟ್ಟಿಗೆ ಅದೇ ದಿನ ಅವನು ಪೇತ್ರನಿಗೆ ಒಂದು ವೈಯಕ್ತಿಕ ಭೇಟಿಯಿತ್ತನು. (ಲೂಕ 24:34; 1 ಕೊರಿಂಥ 15:4-8) ತನ್ನನ್ನು ಅಷ್ಟೊಂದು ಖಡಾಖಂಡಿತವಾಗಿ ಅಲ್ಲಗಳೆದಿದ್ದ ಆ ಅಪೊಸ್ತಲನಿಗೆ ಯೇಸು ಅಷ್ಟು ವಿಶೇಷ ಗಮನವನ್ನು ಕೊಟ್ಟದ್ದೇಕೆ? ಪಶ್ಚಾತ್ತಾಪಪಟ್ಟಿದ್ದ ಪೇತ್ರನನ್ನು ಅವನ ಸ್ವಾಮಿಯು ಇನ್ನೂ ಪ್ರೀತಿಸುತ್ತಿದ್ದಾನೆ ಮತ್ತು ಅಮೂಲ್ಯವೆಂದೆಣಿಸುತ್ತಾನೆ ಎಂಬ ಆಶ್ವಾಸನೆಯನ್ನೀಯಲು ಯೇಸು ಬಯಸಿದ್ದಿರಬಹುದು. ಆದರೆ ಪೇತ್ರನಿಗೆ ಆಶ್ವಾಸನೆ ಕೊಡಲು ಯೇಸು ಇನ್ನೂ ಹೆಚ್ಚಿನದನ್ನು ಮಾಡಿದನು.

19 ಸ್ವಲ್ಪ ಸಮಯದ ನಂತರ, ಗಲಿಲಾಯ ಸಮುದ್ರದ ದಡದಲ್ಲಿ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡನು. ಈ ಸಂದರ್ಭದಲ್ಲಿ, ಯೇಸು ತನಗಾಗಿ (ತನ್ನ ಸ್ವಾಮಿಯನ್ನು ಮೂರು ಸಾರಿ ಅಲ್ಲಗಳೆದಿದ್ದ) ಪೇತ್ರನಿಗಿದ್ದ ಪ್ರೀತಿಯ ಕುರಿತು ಅವನನ್ನು ಮೂರು ಬಾರಿ ಪ್ರಶ್ನಿಸಿದನು. ಮೂರನೆಯ ಸಾರಿ ಕೇಳಿದ ನಂತರ ಪೇತ್ರನು ಉತ್ತರಿಸಿದ್ದು: “ಸ್ವಾಮೀ, ನೀನು ಎಲ್ಲಾ ಬಲ್ಲೆ; ನಿನ್ನ ಮೇಲೆ ನಾನು ಮಮತೆ ಇಟ್ಟಿದ್ದೇನೆಂಬದು ನಿನಗೆ ತಿಳಿದದೆ.” ಹೃದಯವನ್ನು ಓದಬಲ್ಲವನಾಗಿದ್ದ ಯೇಸುವಿಗೆ, ತನಗಾಗಿ ಪೇತ್ರನಲ್ಲಿ ಪ್ರೀತಿ ಮತ್ತು ಮಮತೆಯಿದೆ ಎಂಬುದು ಚೆನ್ನಾಗಿ ತಿಳಿದಿತ್ತು ನಿಜ. ಆದಾಗ್ಯೂ, ಅವನ ಪ್ರೀತಿಯನ್ನು ಒತ್ತಿಹೇಳುವಂತೆ ಯೇಸು ಪೇತ್ರನಿಗೆ ಒಂದು ಅವಕಾಶವನ್ನು ಒದಗಿಸಿಕೊಟ್ಟನು. ಅಷ್ಟಲ್ಲದೆ, ಯೇಸು ತನ್ನ “ಪುಟ್ಟ ಕುರಿಗಳನ್ನು” (NW) “ಮೇಯಿಸುವ” ಮತ್ತು “ಕಾಯುವ” ನಿಯೋಗವನ್ನು ಪೇತ್ರನಿಗೆ ಕೊಟ್ಟನು. (ಯೋಹಾನ 21:15-17) ಇದಕ್ಕೆ ಮುಂಚೆ, ಯೇಸು ಪೇತ್ರನಿಗೆ ಸಾರುವ ನೇಮಕವನ್ನೂ ಕೊಟ್ಟಿದ್ದನು. (ಲೂಕ 5:10) ಆದರೆ ಈಗ, ಅವನಲ್ಲಿಟ್ಟಿದ್ದ ಭರವಸೆಯನ್ನು ಗಮನಾರ್ಹವಾಗಿ ಪ್ರದರ್ಶಿಸುತ್ತಾ, ಯೇಸು ಅವನಿಗೆ ಇನ್ನೊಂದು ದೊಡ್ಡ ಜವಾಬ್ದಾರಿಯನ್ನು​—ಕ್ರಿಸ್ತನ ಹಿಂಬಾಲಕರಾಗಲಿರುವವರನ್ನು ಪರಿಪಾಲಿಸುವ ಜವಾಬ್ದಾರಿಯನ್ನು ಕೊಟ್ಟನು. ತದನಂತರ ಸ್ವಲ್ಪ ಸಮಯದಲ್ಲಿ, ಯೇಸುವು ಪೇತ್ರನಿಗೆ ಶಿಷ್ಯರ ಚಟುವಟಿಕೆಯಲ್ಲಿ ಒಂದು ಪ್ರಧಾನ ಪಾತ್ರವನ್ನೂ ನೀಡಿದನು. (ಅ. ಕೃತ್ಯಗಳು 2:1-41) ಯೇಸು ತನ್ನನ್ನು ಕ್ಷಮಿಸಿದ್ದನು ಮತ್ತು ತನ್ನಲ್ಲಿ ಇನ್ನೂ ಭರವಸವಿಟ್ಟಿದ್ದನು ಎಂಬುದು ಪೇತ್ರನಿಗೆ ಗೊತ್ತಾದಾಗ ಅವನಿಗೆಷ್ಟು ನೆಮ್ಮದಿಯಾಗಿದ್ದಿರಬೇಕು!

ನೀವು ‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡಿದ್ದೀರೋ’?

20, 21. ನಾವು ಪೂರ್ಣವಾಗಿ ‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲು’ ಹೇಗೆ ಶಕ್ತರಾಗಬಲ್ಲೆವು?

20 ಕ್ರಿಸ್ತನ ಪ್ರೀತಿಯನ್ನು ಯೆಹೋವನ ವಾಕ್ಯವು ನಿಜವಾಗಿಯೂ ಸುಂದರವಾಗಿ ವರ್ಣಿಸುತ್ತದೆ. ಆದರೆ ಕ್ರಿಸ್ತನ ಪ್ರೀತಿಗೆ ನಾವು ಹೇಗೆ ಪ್ರತಿವರ್ತನೆ ತೋರಿಸಬೇಕು? ‘ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳಲು’ ಬೈಬಲು ನಮ್ಮನ್ನು ಪ್ರೇರಿಸುತ್ತದೆ. (ಎಫೆಸ 3:19) ನಾವು ನೋಡಿರುವ ಪ್ರಕಾರ, ಯೇಸುವಿನ ಜೀವನ ಮತ್ತು ಶುಶ್ರೂಷೆಯ ಕುರಿತಾದ ಸುವಾರ್ತಾ ವೃತ್ತಾಂತಗಳು ಕ್ರಿಸ್ತನ ಪ್ರೀತಿಯ ಕುರಿತು ನಮಗೆ ಹೆಚ್ಚನ್ನು ಕಲಿಸುತ್ತವೆ. ಹಾಗಿದ್ದರೂ, ಪೂರ್ಣವಾಗಿ ‘ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಳ್ಳುವುದರಲ್ಲಿ’, ಬೈಬಲು ಅವನ ಕುರಿತು ಏನನ್ನುತ್ತದೋ ಅದನ್ನು ಕೇವಲ ಕಲಿಯುವುದಕ್ಕಿಂತ ಹೆಚ್ಚು ಒಳಗೂಡಿರುತ್ತದೆ.

21 ‘ತಿಳಿದುಕೊಳ್ಳಲು’ ಎಂದು ಭಾಷಾಂತರವಾಗಿರುವ ಗ್ರೀಕ್‌ ಶಬ್ದಕ್ಕೆ “ಪ್ರಾಯೋಗಿಕವಾಗಿ ಅನುಭವದ ಮೂಲಕ” ತಿಳಿದುಕೊಳ್ಳುವದು ಎಂಬ ಅರ್ಥವಿದೆ. ಯೇಸು ತೋರಿಸಿದ ರೀತಿಯಲ್ಲಿ ನಾವು ಪ್ರೀತಿ ತೋರಿಸುವಾಗ​—ಇತರರಿಗಾಗಿ ನಮ್ಮನ್ನು ನಿಸ್ವಾರ್ಥಭಾವದಿಂದ ಕೊಟ್ಟುಕೊಳ್ಳುತ್ತಾ, ಅವರ ಆವಶ್ಯಕತೆಗಳಿಗೆ ಕನಿಕರಪೂರ್ವಕವಾಗಿ ಪ್ರತಿಕ್ರಿಯೆ ತೋರಿಸುತ್ತಾ, ಹೃದಯದಾಳದಿಂದ ಅವರನ್ನು ಕ್ಷಮಿಸುವಾಗ​—ನಾವು ಯೇಸುವಿನ ಭಾವನೆಗಳನ್ನು ನಿಜವಾಗಿ ಅರ್ಥಮಾಡಿಕೊಳ್ಳಬಲ್ಲೆವು. ಈ ವಿಧದಲ್ಲಿ “ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು” ಅನುಭವದ ಮೂಲಕ ತಿಳಿದುಕೊಳ್ಳಲು ನಾವು ಶಕ್ತರಾಗುವೆವು. ಮತ್ತು ನಾವು ಎಷ್ಟು ಹೆಚ್ಚೆಚ್ಚಾಗಿ ಕ್ರಿಸ್ತನಂತಾಗಲು ಪ್ರಯತ್ನಿಸುತ್ತೇವೋ ಅಷ್ಟು ಹೆಚ್ಚಾಗಿ, ಯಾರನ್ನು ಯೇಸು ಪರಿಪೂರ್ಣವಾಗಿ ಅನುಕರಿಸಿದನೋ ಆ ನಮ್ಮ ಪ್ರೀತಿಯುಳ್ಳ ದೇವರಾದ ಯೆಹೋವನಿಗೆ ಸಮೀಪವಾಗಿ ಸೆಳೆಯಲ್ಪಡುವೆವೆಂಬುದನ್ನು ಎಂದೂ ಮರೆಯದಿರೋಣ.

^ ಪ್ಯಾರ. 11 ಕುಷ್ಠರೋಗಿಯ ಸಮೀಪ ನಾಲ್ಕು ಕ್ಯೂಬಿಟ್‌ಗಳ (ಸುಮಾರು ಆರು ಅಡಿ) ಅಂತರದೊಳಗೆ ಯಾರೂ ಬರಬಾರದೆಂದು ಯೆಹೂದಿ ರಬ್ಬಿಗಳ ನಿಯಮಗಳು ವಿಧಿಸಿದ್ದವು. ಆದರೆ ಜೋರಾಗಿ ಗಾಳಿ ಬೀಸುತ್ತಿದ್ದಲ್ಲಿ, ಕುಷ್ಠರೋಗಿಯಿಂದ ಕಡಿಮೆಪಕ್ಷ 100 ಕ್ಯೂಬಿಟ್‌ಗಳು (ಸುಮಾರು 150 ಅಡಿ) ದೂರವಿರಬೇಕಿತ್ತು. ಕುಷ್ಠರೋಗಿಗಳನ್ನು ಕಂಡು ಅಡಗಿಕೊಳ್ಳುತ್ತಿದ್ದ ಒಬ್ಬ ರಬ್ಬಿಯ ಕುರಿತು ಮತ್ತು ಅವರನ್ನು ದೂರವಿಡಲು ಅವರಿಗೆ ಕಲ್ಲುಗಳನ್ನೆಸೆಯುತ್ತಿದ್ದ ಇನ್ನೊಬ್ಬನ ಕುರಿತು ಮಿದ್ರಾಶ್‌ ರಾಬ್ಬಾ ತಿಳಿಸುತ್ತದೆ. ಹೀಗೆ ತಿರಸ್ಕರಿಸಲ್ಪಟ್ಟಿರುವುದರ ನೋವು ಏನೆಂಬುದು ಕುಷ್ಠರೋಗಿಗಳಿಗೆ ತಿಳಿದಿತ್ತು, ಮತ್ತು ತುಚ್ಛೀಕರಿಸಲ್ಪಟ್ಟು, ತಾವು ಯಾರಿಗೂ ಬೇಡದವರಾಗಿದ್ದೇವೆಂಬ ಭಾವನೆಯನ್ನು ಅವರು ಅನುಭವಿಸಿದ್ದರು.

^ ಪ್ಯಾರ. 16 ಕೆಲವು ಪುರಾತನ ಹಸ್ತಪ್ರತಿಗಳಲ್ಲಿ ಲೂಕ 23:34 ರ ಮೊದಲ ಭಾಗವು ಬಿಟ್ಟುಬಿಡಲ್ಪಟ್ಟಿದೆ. ಆದರೂ, ಈ ಮಾತುಗಳು ಬೇರೆ ಅನೇಕ ಅಧಿಕೃತ ಹಸ್ತಪ್ರತಿಗಳಲ್ಲಿ ಕಂಡುಬರುವುದರಿಂದ, ಅವುಗಳನ್ನು ನೂತನ ಲೋಕ ಭಾಷಾಂತರದಲ್ಲಿ (ಇಂಗ್ಲಿಷ್‌) ಮತ್ತು ಇತರ ಹಲವಾರು ಭಾಷಾಂತರಗಳಲ್ಲಿ ಒಳಗೂಡಿಸಲಾಗಿದೆ. ಯೇಸು ಅಲ್ಲಿ ತನ್ನನ್ನು ಕಂಬಕ್ಕೆ ಜಡಿದಿದ್ದ ರೋಮನ್‌ ಸೈನಿಕರ ಕುರಿತು ಮಾತಾಡುತ್ತಿದ್ದನೆಂಬುದು ವ್ಯಕ್ತ. ಯೇಸು ನಿಜವಾಗಿ ಯಾರು ಎಂಬ ಅರಿವು ಇಲ್ಲದಿದ್ದ ಅವರಿಗೆ ತಾವೇನು ಮಾಡುತ್ತಿದ್ದೇವೆಂಬುದು ತಿಳಿದಿರಲಿಲ್ಲ. ಆ ವಧೆಯನ್ನು ಚಿತಾಯಿಸಿದ್ದ ಧಾರ್ಮಿಕ ಮುಖಂಡರು ಎಷ್ಟೋ ಹೆಚ್ಚು ದೋಷಪಾತ್ರರಾಗಿದ್ದರು, ಯಾಕಂದರೆ ಅವರು ಬುದ್ಧಿಪೂರ್ವಕವಾಗಿ ಮತ್ತು ಹಗೆಸಾಧನೆಯಿಂದ ಆ ಕೃತ್ಯವೆಸಗಿದ್ದರು. ಅವರಲ್ಲಿ ಹೆಚ್ಚಿನವರಿಗೆ ಕ್ಷಮಾಪಣೆ ನೀಡುವುದು ಅಶಕ್ಯವಾಗಿತ್ತು.​—ಯೋಹಾನ 11:45-53.