ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

ಮಹಾ ಬೋಧಕ ಯೇಸು

ಮಹಾ ಬೋಧಕ ಯೇಸು

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಒಂದು ವಿಶೇಷ ಮಗು ಹುಟ್ಟಿತು. ಆ ಮಗು ಬೆಳೆದು ದೊಡ್ಡವನಾದ ಮೇಲೆ ಒಬ್ಬ ಪ್ರಸಿದ್ಧ ವ್ಯಕ್ತಿಯಾದನು. ಅವನ ಕಾಲದಲ್ಲಿ ವಿಮಾನ, ಕಾರು, ಟಿ.ವಿ., ಕಂಪ್ಯೂಟರ್‌, ಇಂಟರ್‌ನೆಟ್‌ ಇರಲಿಲ್ಲ.

ಅವನ ಹೆಸರೇ ಯೇಸು. ಅವನು ಭೂಮಿಯಲ್ಲಿ ಇದ್ದ ಎಲ್ಲರಿಗಿಂತಲೂ ಬುದ್ಧಿಶಾಲಿಯಾಗಿದ್ದನು. ಅಷ್ಟೇ ಅಲ್ಲ, ಉತ್ತಮ ಬೋಧಕನೂ ಆಗಿದ್ದನು. ಅವನು ಕಷ್ಟವಾದ ವಿಷಯಗಳನ್ನು ಚೆನ್ನಾಗಿ ಅರ್ಥವಾಗುವ ಹಾಗೆ ವಿವರಿಸುತ್ತಿದ್ದನು.

ಯೇಸು ಹೋದಲೆಲ್ಲ ಜನರಿಗೆ ಕಲಿಸುತ್ತಿದ್ದನು. ಸಮುದ್ರ ತೀರದಲ್ಲಿದ್ದಾಗ, ದೋಣಿಯಲ್ಲಿದ್ದಾಗ, ಜನರ ಮನೆಗಳಿಗೆ ಹೋದಾಗ ಮತ್ತು ಪ್ರಯಾಣ ಮಾಡುತ್ತಿದ್ದಾಗ ತುಂಬಾ ವಿಷಯಗಳನ್ನು ಕಲಿಸುತ್ತಿದ್ದನು. ಆಗ ಯೇಸುವಿನ ಹತ್ತಿರ ಕಾರ್‌ ಇರಲಿಲ್ಲ. ಬಸ್ಸಾಗಲಿ ರೈಲಾಗಲಿ ಆ ಕಾಲದಲ್ಲಿ ಇರಲಿಲ್ಲ. ಅವನು ಎಲ್ಲಾ ಕಡೆಗೂ ನಡೆದುಕೊಂಡೇ ಹೋಗಿ ಜನರಿಗೆ ಕಲಿಸುತ್ತಿದ್ದನು.

ನಾವು ಬೇರೆಯವರಿಂದ ಎಷ್ಟೋ ವಿಷಯಗಳನ್ನು ಕಲಿಯುತ್ತೇವೆ ಅಲ್ವಾ. ಆದರೆ ಅದೆಲ್ಲಕ್ಕಿಂತಲೂ ಹೆಚ್ಚು ಪ್ರಾಮುಖ್ಯ ವಿಷಯಗಳನ್ನು ಮಹಾ ಬೋಧಕನಾದ ಯೇಸು ನಮಗೆ ಕಲಿಸಿಕೊಡುತ್ತಾನೆ. ಯೇಸು ಕಲಿಸಿದ ವಿಷಯಗಳು ಬೈಬಲ್‌ನಲ್ಲಿವೆ. ಅವುಗಳನ್ನು ನಾವು ಬೈಬಲಿನಿಂದ ಓದುವಾಗ ಯೇಸುವೇ ನಮ್ಮ ಹತ್ತಿರ ಮಾತಾಡುತ್ತಿರುವಂತೆ ಅನಿಸುತ್ತದೆ.

ಯೇಸು ಒಬ್ಬ ಮಹಾ ಬೋಧಕನಾಗಿದ್ದು ಹೇಗೆ? ಹೇಗೆಂದರೆ, ಯೇಸು ಕೂಡ ಇನ್ನೊಬ್ಬರಿಂದ ಕಲಿತನು. ಅಷ್ಟೇ ಅಲ್ಲ, ಗಮನಕೊಟ್ಟು ಕೇಳುವುದು ತುಂಬಾ ಪ್ರಾಮುಖ್ಯ ಎಂದು ಅವನಿಗೆ ಗೊತ್ತಿತ್ತು. ಅದ್ಸರಿ, ಯೇಸು ಯಾರಿಂದ ಕಲಿತುಕೊಂಡನು?— ಅವನ ತಂದೆಯಿಂದ. ದೇವರೇ ಯೇಸುವಿನ ತಂದೆ.

ಯೇಸು ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟುವುದಕ್ಕೆ ಮುಂಚೆ ಸ್ವರ್ಗದಲ್ಲಿ ದೇವರೊಂದಿಗೆ ಇದ್ದನು. ಬೇರೆ ಯಾವ ಮನುಷ್ಯರೂ ಯೇಸುವಿನಂತೆ ಸ್ವರ್ಗದಲ್ಲಿ ಜೀವಿಸಿರಲಿಲ್ಲ. ಹಾಗಾಗಿ ಅವನು ವಿಶೇಷ ಮನುಷ್ಯನಾಗಿದ್ದನು. ಸ್ವರ್ಗದಲ್ಲಿದ್ದಾಗ ಯೇಸು ತನ್ನ ತಂದೆ ಹೇಳಿಕೊಡುತ್ತಿದ್ದ ವಿಷಯಗಳನ್ನು ಶ್ರದ್ಧೆಯಿಂದ ಕಲಿಯುತ್ತಿದ್ದನು. ಈ ಕಾರಣದಿಂದಲೇ ದೇವರಿಂದ ಕಲಿತ ವಿಷಯಗಳನ್ನು ಜನರಿಗೆ ಕಲಿಸಿಕೊಡಲು ಅವನಿಗೆ ಸಾಧ್ಯವಾಯಿತು. ಯೇಸುವಿನಂತೆ ಇರಲು ನಿನಗೂ ಮನಸ್ಸಿದೆ ಅಲ್ವಾ. ಹಾಗಾದರೆ ನೀನು ಕೂಡ ನಿನ್ನ ತಂದೆತಾಯಿಯ ಮಾತನ್ನು ಕೇಳಬೇಕು.

ಯೇಸು ಮಹಾ ಬೋಧಕನು ಆಗಿದ್ದಕ್ಕೆ ಇನ್ನೊಂದು ಕಾರಣ, ಅವನಿಗೆ ಜನರ ಮೇಲೆ ತುಂಬಾ ಪ್ರೀತಿ ಇತ್ತು. ಜನರು ದೇವರ ಬಗ್ಗೆ ತಿಳಿದುಕೊಳ್ಳಬೇಕೆಂದು ಅವನು ಇಷ್ಟಪಟ್ಟನು. ಯೇಸು ಎಲ್ಲರನ್ನೂ ಪ್ರೀತಿಸುತ್ತಿದ್ದನು. ಅದರಲ್ಲೂ, ಮಕ್ಕಳೆಂದರೆ ಅವನಿಗೆ ಪಂಚಪ್ರಾಣ. ಮಕ್ಕಳಿಗೂ ಅಷ್ಟೇ, ಯೇಸು ಎಂದರೆ ತುಂಬಾ ಪ್ರೀತಿ. ಅವನು ಅವರೊಂದಿಗೆ ಕುಳಿತು ಮಾತಾಡುತ್ತಿದ್ದನು. ಅವರು ಮಾತಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದನು. ಆದುದರಿಂದ ಮಕ್ಕಳೆಲ್ಲರೂ ಯೇಸುವಿನ ಜೊತೆ ಇರಲು ಖುಷಿಪಡುತ್ತಿದ್ದರು.

ಮಕ್ಕಳು ಯೇಸುವಿನ ಜೊತೆ ಇರಲು ಇಷ್ಟಪಟ್ಟರೇಕೆ?

ಒಂದು ದಿನ ಕೆಲವು ಜನರು ತಮ್ಮ ಮಕ್ಕಳನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಆದರೆ ಯೇಸುವಿನ ಸ್ನೇಹಿತರು ಅವರನ್ನು ತಡೆದು ನಿಲ್ಲಿಸಿದರು. ಮಹಾ ಬೋಧಕನಿಗೆ ಈ ಚಿಕ್ಕ ಮಕ್ಕಳೊಂದಿಗೆಲ್ಲ ಮಾತಾಡಲು ಸಮಯವಿಲ್ಲ ಎಂದು ನೆನಸಿ ಅಲ್ಲಿಂದ ಹೊರಟುಹೋಗುವಂತೆ ಅವರಿಗೆ ಹೇಳಿಬಿಟ್ಟರು. ಆದರೆ ಆಗ ಯೇಸು ಏನು ಹೇಳಿದನು ಗೊತ್ತಾ?— ‘ಚಿಕ್ಕ ಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿ. ಅವರನ್ನು ತಡೆಯಲು ಪ್ರಯತ್ನಿಸಬೇಡಿ’ ಎಂದು ಹೇಳಿದನು. ಯೇಸುವಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಇಷ್ಟ ಮತ್ತು ಅವರು ತನ್ನ ಬಳಿ ಬರಬೇಕೆಂದು ಅವನು ಇಷ್ಟಪಡುತ್ತಿದ್ದನು ಎಂದು ಇದರಿಂದ ಗೊತ್ತಾಗುತ್ತದೆ. ಯೇಸು ಪ್ರಾಮುಖ್ಯ ವ್ಯಕ್ತಿಯಾಗಿದ್ದರೂ ಮಾಡಲು ತುಂಬಾ ಕೆಲಸವಿದ್ದರೂ ಸಮಯ ಹೊಂದಿಸಿಕೊಂಡು ಚಿಕ್ಕ ಮಕ್ಕಳಿಗೆ ಕಲಿಸಿದನು.—ಮಾರ್ಕ 10:13, 14.

ಯೇಸು ಇಷ್ಟೊಂದು ಸಮಯಕೊಟ್ಟು ಮಕ್ಕಳಿಗೆ ಕಲಿಸಿದ್ದು ಮತ್ತು ಅವರ ಮಾತುಗಳನ್ನು ಆಲಿಸಿದ್ದು ಏಕೆ? ಏಕೆಂದರೆ ಸ್ವರ್ಗದಲ್ಲಿರುವ ದೇವರ ಕುರಿತು ಮಕ್ಕಳಿಗೆ ಕಲಿಸಲು ಯೇಸು ಇಷ್ಟಪಟ್ಟನು. ದೇವರ ಕುರಿತು ಕಲಿಯುವಾಗ ಮಕ್ಕಳಿಗೆ ಸಂತೋಷವಾಗುತ್ತಿತ್ತು. ನೀನೂ ಜನರನ್ನು ಸಂತೋಷಪಡಿಸಬಹುದು. ಅದಕ್ಕಾಗಿ ನೀನು ಏನು ಮಾಡಬೇಕು?— ದೇವರ ಕುರಿತು ನೀನು ಏನು ಕಲಿಯುತ್ತಿಯೋ ಅದನ್ನೆಲ್ಲಾ ಅವರಿಗೆ ಹೇಳಬೇಕು.

ಒಮ್ಮೆ ಯೇಸು ಒಂದು ಚಿಕ್ಕ ಮಗುವಿನ ಮೂಲಕ ತನ್ನ ಸ್ನೇಹಿತರಿಗೆ ಒಂದು ಪಾಠವನ್ನು ಕಲಿಸಿದನು. ಅವನು ಆ ಮಗುವನ್ನು ಕರೆದುಕೊಂಡು ಬಂದು ತನ್ನ ಶಿಷ್ಯರ ಮಧ್ಯೆ ನಿಲ್ಲಿಸಿದನು. ದೊಡ್ಡವರಾದ ಆ ಶಿಷ್ಯರು ತಮ್ಮ ಸ್ವಭಾವಗಳಲ್ಲಿ ಬದಲಾವಣೆ ಮಾಡಿ ಈ ಚಿಕ್ಕ ಮಗುವಿನಂತೆ ಆಗಬೇಕು ಎಂದು ಯೇಸು ಹೇಳಿದನು.

ದೊಡ್ಡವರಾಗಲಿ, ದೊಡ್ಡ ಮಕ್ಕಳಾಗಲಿ ಚಿಕ್ಕ ಮಗುವಿನಿಂದ ಯಾವ ಪಾಠವನ್ನು ಕಲಿಯಬಲ್ಲರು?

ಚಿಕ್ಕ ಮಗುವಿನಂತೆ ಆಗಬೇಕು ಎಂದು ಯೇಸು ಹೇಳಿದ ಮಾತಿನ ಅರ್ಥ ಏನಾಗಿತ್ತು? ದೊಡ್ಡವರಾಗಲಿ ದೊಡ್ಡ ಮಕ್ಕಳಾಗಲಿ ಹೇಗೆ ಚಿಕ್ಕ ಮಗುವಿನಂತೆ ಆಗಬಹುದು ಅಂತ ನಿನಗೆ ಗೊತ್ತಾ?— ದೊಡ್ಡವರಿಗೆ ಇರುವಷ್ಟು ಜ್ಞಾನ ಚಿಕ್ಕ ಮಕ್ಕಳಿಗೆ ಇರುವುದಿಲ್ಲ. ಆದರೆ, ಚಿಕ್ಕ ಮಕ್ಕಳು ವಿಷಯಗಳನ್ನು ಬೇರೆಯವರಿಂದ ಕಲಿಯಲು ಇಷ್ಟಪಡುತ್ತಾರೆ. ತನ್ನ ಶಿಷ್ಯರು ಸಹ ಚಿಕ್ಕ ಮಕ್ಕಳ ಹಾಗೆ ಬೇರೆಯವರಿಂದ ಕಲಿಯಲು ಸಿದ್ಧರಿರಬೇಕು. ಅದಕ್ಕಾಗಿ ಅವರಲ್ಲಿ ದೀನ ಸ್ವಭಾವ ಇರಬೇಕು ಅನ್ನೋದೇ ಯೇಸುವಿನ ಮಾತಿನ ಅರ್ಥವಾಗಿತ್ತು. ಹೌದು, ಬೇರೆಯವರಿಂದ ನಾವು ಎಷ್ಟೋ ವಿಷಯಗಳನ್ನು ಕಲಿಯಸಾಧ್ಯವಿದೆ. ಹಾಗಿದ್ದರೂ ನಮ್ಮೆಲ್ಲರ ಯೋಚನೆ, ಅಭಿಪ್ರಾಯಕ್ಕಿಂತಲೂ ಯೇಸುವಿನ ಬೋಧನೆಗಳು ಹೆಚ್ಚು ಶ್ರೇಷ್ಠವಾಗಿವೆ.—ಮತ್ತಾಯ 18:1-5.

ಯೇಸು ಮಹಾ ಬೋಧಕನು ಆಗಿದ್ದಕ್ಕೆ ಮತ್ತೊಂದು ಕಾರಣವೂ ಇತ್ತು. ಅದೇನೆಂದರೆ, ಜನರು ಆಸಕ್ತಿಯಿಂದ ಕೇಳುವ ಹಾಗೆ ವಿಷಯಗಳನ್ನು ಕಲಿಸುವುದು ಹೇಗೆಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನು ಜನರಿಗೆ ಗೊತ್ತಿರುವ ವಿಷಯಗಳನ್ನು ಅಂದರೆ ಪಕ್ಷಿ, ಹೂವು ಮುಂತಾದವುಗಳ ಉದಾಹರಣೆಯನ್ನು ಬಳಸುತ್ತಿದ್ದನು. ಹೀಗೆ, ಸರಳವಾಗಿ ಮತ್ತು ಸ್ಪಷ್ಟವಾಗಿ ವಿವರಿಸಿ ದೇವರ ಬಗ್ಗೆ ತಿಳಿದುಕೊಳ್ಳುವಂತೆ ಜನರಿಗೆ ಸಹಾಯ ಮಾಡುತ್ತಿದ್ದನು.

ಒಂದು ದಿನ ಯೇಸು ಬೆಟ್ಟದ ತಪ್ಪಲಿನಲ್ಲಿ ಇದ್ದಾಗ ಅನೇಕ ಜನರು ಅವನ ಬಳಿ ಬಂದರು. ಆಗ ಯೇಸು ಅಲ್ಲಿ ಕುಳಿತು ಒಂದು ಭಾಷಣವನ್ನು ಕೊಟ್ಟನು. ಅದನ್ನು ನೀನು ಚಿತ್ರದಲ್ಲಿ ನೋಡಬಹುದು. ಈ ಭಾಷಣವನ್ನು ‘ಪರ್ವತ ಪ್ರಸಂಗ’ ಎಂದು ಕರೆಯಲಾಗುತ್ತದೆ. ಯೇಸು ಜನರಿಗೆ, ‘ಆಕಾಶದ ಪಕ್ಷಿಗಳನ್ನು ನೋಡಿರಿ. ಅವು ಬೀಜವನ್ನು ಬಿತ್ತುವುದಿಲ್ಲ. ಆಹಾರವನ್ನು ಕಣಜಗಳಲ್ಲಿ ಶೇಖರಿಸಿಡುವುದಿಲ್ಲ. ಸ್ವರ್ಗದಲ್ಲಿರುವ ದೇವರು ಅವುಗಳಿಗೆ ಆಹಾರವನ್ನು ಒದಗಿಸುತ್ತಾನೆ. ನೀವು ಅವುಗಳಿಗಿಂತ ಹೆಚ್ಚು ಬೆಲೆಬಾಳುವವರಲ್ಲವೆ?’ ಎಂದು ಹೇಳಿದನು.

ಪಕ್ಷಿ ಮತ್ತು ಹೂವುಗಳ ಉದಾಹರಣೆಯ ಮೂಲಕ ಯೇಸು ಯಾವ ಪಾಠವನ್ನು ಕಲಿಸಿದನು?

ಯೇಸು ಪಕ್ಷಿಗಳ ಬಗ್ಗೆ ಮಾತ್ರವಲ್ಲ ಹೂವುಗಳ ಬಗ್ಗೆಯೂ ಮಾತಾಡಿದನು. ‘ಕಾಡಿನಲ್ಲಿರುವ ಲಿಲಿಹೂವುಗಳಿಂದ ಪಾಠವನ್ನು ಕಲಿಯಿರಿ. ಅವುಗಳನ್ನು ಯಾರೂ ಬೆಳೆಸುವುದಿಲ್ಲ, ತಾವಾಗಿಯೇ ಬೆಳೆಯುತ್ತವೆ. ಆದರೂ ಅವೆಷ್ಟು ಸುಂದರವಾಗಿರುತ್ತವೆ! ಶ್ರೀಮಂತ ರಾಜನಾಗಿದ್ದ ಸೊಲೊಮೋನನ ಉಡುಪುಗಳು ಸಹ ಈ ಹೂವುಗಳಷ್ಟು ಸುಂದರವಾಗಿರಲಿಲ್ಲ. ಹೂವುಗಳ ವಿಷಯದಲ್ಲಿ ದೇವರು ಇಷ್ಟು ಆಸಕ್ತಿ ತೋರಿಸುತ್ತಾನಾದರೆ ನಿಮ್ಮ ಬಗ್ಗೆಯೂ ಅವನು ಆಸಕ್ತಿ ತೋರಿಸುತ್ತಾನಲ್ಲವೆ?’ ಎಂದು ಯೇಸು ಹೇಳಿದನು.—ಮತ್ತಾಯ 6:25-33.

ಯೇಸು ಇಲ್ಲಿ ಯಾವ ಪಾಠವನ್ನು ಕಲಿಸುತ್ತಿದ್ದನು ಎಂದು ನಿನಗೆ ಗೊತ್ತಾಯಿತಾ?— ಊಟ ಬಟ್ಟೆಗಾಗಿ ಏನಪ್ಪಾ ಮಾಡುವುದು ಎಂದು ನಾವು ಅತಿಯಾಗಿ ಚಿಂತೆ ಮಾಡಬಾರದು. ನಮಗೆ ಏನು ಅಗತ್ಯವಿದೆ ಅಂತ ದೇವರಿಗೆ ಚೆನ್ನಾಗಿ ಗೊತ್ತಿದೆ ಎಂದು ಯೇಸು ಕಲಿಸುತ್ತಿದ್ದನು. ನಾವು ಕೆಲಸವೇನೂ ಮಾಡಬೇಕಾಗಿಲ್ಲ, ಊಟ ಬಟ್ಟೆ ತಾನಾಗಿಯೇ ಬರುತ್ತದೆ ಎಂದು ಇಲ್ಲಿ ಯೇಸು ಹೇಳುತ್ತಿರಲಿಲ್ಲ. ಬದಲಿಗೆ ನಾವು ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರ ವಿಷಯಗಳಿಗೆ ಪ್ರಾಮುಖ್ಯತೆ ಕೊಡಬೇಕು ಎಂದು ಅವನು ಹೇಳಿದನು. ಹೀಗೆ, ನಾವು ದೇವರಿಗೆ ಮೊದಲ ಸ್ಥಾನ ಕೊಟ್ಟರೆ, ಊಟ ಬಟ್ಟೆಗಳ ಯಾವುದೇ ತೊಂದರೆ ನಮಗಾಗದಂತೆ ದೇವರು ನೋಡಿಕೊಳ್ಳುತ್ತಾನೆ. ಅದನ್ನು ನೀನು ನಂಬುತ್ತೀಯಾ?—

ಯೇಸುವಿನ ಪ್ರಸಂಗವನ್ನು ಕೇಳಿದ ಜನರಿಗೆ ಹೇಗನಿಸಿತ್ತು?— ಅವನು ಕಲಿಸಿದ ರೀತಿಯನ್ನು ನೋಡಿ ಅವರು ಆಶ್ಚರ್ಯಚಕಿತರಾದರು ಎಂದು ಬೈಬಲ್‌ ಹೇಳುತ್ತದೆ. ಅವನ ಆಸಕ್ತಿಕರ ಮಾತು ಎಷ್ಟು ಚೆನ್ನಾಗಿ ಇತ್ತೆಂದರೆ ಅದನ್ನು ಕೇಳುತ್ತಾ ಇರಬೇಕೆಂದು ಅವರಿಗೆ ಅನಿಸಿತು. ಅವನ ಮಾತುಗಳು ಒಳ್ಳೆಯ ವಿಷಯಗಳನ್ನು ಮಾಡುವಂತೆ ಜನರಿಗೆ ಪ್ರೋತ್ಸಾಹ ನೀಡಿದವು.—ಮತ್ತಾಯ 7:28.

ಆದುದರಿಂದಲೇ ನಾವು ಯೇಸುವಿನಿಂದ ಪಾಠವನ್ನು ಕಲಿಯುವುದು ತುಂಬ ಪ್ರಾಮುಖ್ಯ. ನಾವು ಹೇಗೆ ಅವನಿಂದ ಪಾಠ ಕಲಿಯಬಹುದು?— ಅವನ ಮಾತುಗಳನ್ನು ಒಂದು ಪುಸ್ತಕದಲ್ಲಿ ಬರೆಯಲಾಗಿದೆಯಲ್ವಾ. ಆ ಪುಸ್ತಕದ ಹೆಸರು ಏನೆಂದು ಹೇಳು ನೋಡೋಣ?— ಪವಿತ್ರ ಬೈಬಲ್‌. ನಾವು ಬೈಬಲಿನಲ್ಲಿ ಏನು ಓದುತ್ತೇವೊ ಅದಕ್ಕೆ ಗಮನ ಕೊಟ್ಟರೆ ಯೇಸುವಿನ ಮಾತುಗಳನ್ನು ಆಲಿಸಿ ಅವನಿಂದ ಕಲಿತುಕೊಳ್ಳುತ್ತೇವೆ. ನಿನಗೆ ಗೊತ್ತಾ, ಯೇಸುವಿನ ಮಾತನ್ನು ಕೇಳಿರಿ ಎಂದು ದೇವರೇ ನಮಗೆ ಹೇಳಿದ್ದಾನೆ. ದೇವರು ಹೇಗೆ ಇದನ್ನು ಹೇಳಿದನು ಎಂದು ಬೈಬಲಿನಲ್ಲಿರುವ ಒಂದು ಕಥೆ ತಿಳಿಸುತ್ತದೆ. ಆ ಕುತೂಹಲಕಾರಿ ಕಥೆಯನ್ನು ನಾವೀಗ ನೋಡೋಣ.

ಒಂದು ದಿನ ಯೇಸು ತನ್ನ ಮೂವರು ಗೆಳೆಯರನ್ನು ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದನು. ಆ ಗೆಳೆಯರ ಹೆಸರು ಪೇತ್ರ, ಯಾಕೋಬ, ಯೋಹಾನ. ಯೇಸುವಿನ ಆಪ್ತ ಗೆಳೆಯರಾಗಿದ್ದ ಅವರ ಬಗ್ಗೆ ಹೆಚ್ಚು ವಿಷಯಗಳನ್ನು ಆಮೇಲೆ ನೋಡಲಿದ್ದೇವೆ. ಈಗ ಬೆಟ್ಟದ ಮೇಲೆ ಏನಾಯಿತು ಅಂತ ನೋಡೋಣ. ಅಲ್ಲಿ, ಈ ಚಿತ್ರದಲ್ಲಿ ಕಾಣುತ್ತಿರುವಂತೆ ಯೇಸುವಿನ ಮುಖ ಸೂರ್ಯನಂತೆ ಪ್ರಕಾಶವಾಗಿ ಹೊಳೆಯತೊಡಗಿತು. ಅವನ ಬಟ್ಟೆ ಸಹ ಬೆಳಕಿನಂತೆ ಪ್ರಜ್ವಲಿಸ ತೊಡಗಿತು.

‘ಇವನು ಪ್ರಿಯನಾಗಿರುವ ನನ್ನ ಮಗನು . . . ಇವನ ಮಾತನ್ನು ಕೇಳಿರಿ’

ಆಗ ಸ್ವರ್ಗದಿಂದ ಒಂದು ಧ್ವನಿಯು ಯೇಸುವಿಗೂ ಅವನ ಸ್ನೇಹಿತರಿಗೂ ಕೇಳಿಸಿತು. ‘ಇವನು ಪ್ರಿಯನಾಗಿರುವ ನನ್ನ ಮಗನು, ಇವನನ್ನು ನಾನು ಮೆಚ್ಚಿದ್ದೇನೆ; ಇವನ ಮಾತನ್ನು ಕೇಳಿರಿ’ ಎಂದು ಆ ಧ್ವನಿ ಹೇಳಿತು. (ಮತ್ತಾಯ 17:1-5) ಅದು ಯಾರ ಧ್ವನಿಯಾಗಿತ್ತು ಅಂತ ನಿನಗೆ ಗೊತ್ತಾ?— ದೇವರ ಧ್ವನಿ! ಹೌದು, ತನ್ನ ಮಗನ ಮಾತನ್ನು ಕೇಳಿರೆಂದು ದೇವರೇ ಅವರಿಗೆ ಹೇಳಿದನು.

ನಮ್ಮ ಬಗ್ಗೆ ಏನು? ದೇವರು ಹೇಳಿದಂತೆ ಆತನ ಮಗನಾದ ಯೇಸುವಿನ ಮಾತನ್ನು ಕೇಳಿ ಅದರಂತೆ ನಾವು ನಡೆಯುತ್ತೇವಾ?— ಹೌದು, ನಾವೆಲ್ಲರೂ ಮಹಾ ಬೋಧಕನ ಮಾತನ್ನು ಕೇಳಲೇಬೇಕು. ಅವನ ಮಾತನ್ನು ಹೇಗೆ ಆಲಿಸಬಹುದು ಎಂದು ನಿನಗೆ ನೆನಪಿದೆಯಾ?—

ಯೇಸುವಿನ ಮಾತನ್ನು ನಾವು ಆಲಿಸಬೇಕಾದರೆ, ಬೈಬಲಿನಲ್ಲಿ ಆತನ ಕುರಿತು ಬರೆದಿರುವ ವಿಷಯಗಳನ್ನೆಲ್ಲಾ ಓದಬೇಕು. ಮಹಾ ಬೋಧಕನು ಇನ್ನೂ ಎಷ್ಟೋ ವಿಷಯಗಳನ್ನು ನಮಗೆ ಕಲಿಸಲು ಇಷ್ಟಪಡುತ್ತಾನೆ. ಬೈಬಲಿನಲ್ಲಿ ಬರೆಯಲಾಗಿರುವ ಈ ವಿಷಯಗಳನ್ನು ಕಲಿಯುವಾಗ ನಿನಗೆ ತುಂಬಾ ಸಂತೋಷವಾಗುತ್ತದೆ. ಅಷ್ಟೇ ಅಲ್ಲ, ಕಲಿತ ಒಳ್ಳೇ ವಿಷಯಗಳನ್ನು ನೀನು ನಿನ್ನ ಸ್ನೇಹಿತರಿಗೆ ಹೇಳುವಾಗ ಕೂಡ ನಿನಗೆ ಖುಷಿಯಾಗುತ್ತದೆ.

ಯೇಸುವಿನ ಮಾತನ್ನು ಕೇಳುವಾಗ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂದು ತಿಳಿದುಕೊಳ್ಳಲಿಕ್ಕಾಗಿ ಬೈಬಲಿನಿಂದ ಈ ವಾಕ್ಯಗಳನ್ನು ಓದೋಣ: ಯೋಹಾನ 3:16; 8:28-30 ಮತ್ತು ಅಪೊಸ್ತಲರ ಕಾರ್ಯಗಳು 4:12.