ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 18

ಧನ್ಯವಾದ ಹೇಳಲು ನಾವು ಮರೆಯಬಾರದು

ಧನ್ಯವಾದ ಹೇಳಲು ನಾವು ಮರೆಯಬಾರದು

ನೀನು ಇವತ್ತು ಊಟ ಮಾಡಿದೆಯಾ?— ಯಾರು ಅಡುಗೆ ಮಾಡಿ ಊಟ ಬಡಿಸಿದರು?— ಅಮ್ಮ ಅಡುಗೆ ಮಾಡಿರಬಹುದು ಅಥವಾ ಬೇರೆ ಯಾರೋ ಮಾಡಿರಬಹುದು. ಆದರೆ ಊಟಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳಬೇಕು. ಏಕೆ ಗೊತ್ತಾ?— ಏಕೆಂದರೆ ಆಹಾರಪದಾರ್ಥ, ಕಾಯಿಪಲ್ಯಗಳನ್ನೆಲ್ಲಾ ಬೆಳೆಯುವಂತೆ ಮಾಡುವವನು ದೇವರು. ಅದಕ್ಕಾಗಿ ಆತನಿಗೆ ಧನ್ಯವಾದ ಹೇಳಬೇಕು. ದೇವರಿಗೆ ಧನ್ಯವಾದ ಹೇಳುವುದರ ಜೊತೆಗೆ ಅದನ್ನು ತಯಾರಿಸಿದವರಿಗೂ ಬಡಿಸಿದವರಿಗೂ ನಾವು ಧನ್ಯವಾದ ಹೇಳಬೇಕು.

ಆದರೆ ಬೇರೆಯವರು ನಮಗೆ ಸಹಾಯಮಾಡಿದಾಗ ಕೆಲವೊಮ್ಮೆ ನಾವು ಅವರಿಗೆ ಧನ್ಯವಾದ ಹೇಳಲು ಮರೆತುಬಿಡುತ್ತೇವೆ. ನಿಜ ತಾನೆ? ಮಹಾ ಬೋಧಕನಿಂದ ಸಹಾಯ ಪಡೆದುಕೊಂಡಿದ್ದ ಕೆಲವು ಕುಷ್ಠ ರೋಗಿಗಳು ಕೂಡ ಹಾಗೆ ಮರೆತು ಬಿಟ್ಟರು.

ಅದ್ಸರಿ, ಕುಷ್ಠರೋಗ ಅಂದರೆ ಏನು ಅಂತ ಗೊತ್ತಾ?— ಅದು ಒಂದು ರೀತಿಯ ಭಯಂಕರ ಕಾಯಿಲೆ. ಯಾರಿಗೆ ಈ ರೋಗ ಇದೆಯೋ ಅವರ ದೇಹದ ಮಾಂಸವು ಕೊಳೆತು ಆ ಭಾಗ ಉದುರಿಹೋಗುತ್ತದೆ. ಇದೊಂದು ಅಂಟು ರೋಗ. ಅದಕ್ಕೆ ಯೇಸುವಿನ ಕಾಲದಲ್ಲಿ ಕುಷ್ಠರೋಗಿಗಳು ಸಾಮಾನ್ಯ ಜನರಿಂದ ಪ್ರತ್ಯೇಕವಾಗಿ ವಾಸಿಸಬೇಕಾಗಿತ್ತು. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿ ತನ್ನ ಕಡೆಗೆ ಬರುವುದನ್ನು ಕುಷ್ಠರೋಗಿ ನೋಡಿದಾಗ ತನ್ನ ಹತ್ತಿರ ಬರದಂತೆ ಕೂಗಿ ಹೇಳಬೇಕಿತ್ತು. ಒಂದು ವೇಳೆ ಆ ವ್ಯಕ್ತಿ ಈ ಕುಷ್ಠರೋಗಿಯ ಹತ್ತಿರ ಬಂದರೆ ಆ ಕುಷ್ಠರೋಗ ಅವನಿಗೂ ತಗಲುವ ಸಾಧ್ಯತೆಯಿತ್ತು.

ಆದರೆ ಯೇಸುವಿಗೆ ಕುಷ್ಠರೋಗಿಗಳನ್ನು ನೋಡುವಾಗ ಮರುಕ ಹುಟ್ಟುತ್ತಿತ್ತು. ಅವರೊಟ್ಟಿಗೆ ದಯೆಯಿಂದ ನಡೆದುಕೊಳ್ಳುತ್ತಿದ್ದನು. ಒಂದು ದಿನ ಯೇಸು ಯೆರೂಸಲೇಮಿಗೆ ಹೋಗುತ್ತಿದ್ದನು. ದಾರಿಯಲ್ಲಿ ಒಂದು ಚಿಕ್ಕ ಊರನ್ನು ಹಾದುಹೋಗಬೇಕಾಗಿತ್ತು. ಅವನು ಆ ಊರಿನ ಸಮೀಪ ಬಂದಾಗ ಹತ್ತು ಮಂದಿ ಕುಷ್ಠರೋಗಿಗಳು ಅವನನ್ನು ಭೇಟಿಯಾಗಲು ಬಂದರು. ಯಾಕೆ ಗೊತ್ತಾ? ಯಾಕೆಂದರೆ ಎಲ್ಲಾ ರೋಗಗಳನ್ನು ವಾಸಿಮಾಡುವ ಶಕ್ತಿಯನ್ನು ಯೇಸುವಿಗೆ ದೇವರು ಕೊಟ್ಟಿದ್ದಾನೆ ಅಂತ ಅವರು ಜನರಿಂದ ಕೇಳಿಸಿಕೊಂಡಿದ್ದರು.

ಯೇಸುವನ್ನು ನೋಡಿದಾಕ್ಷಣ ಆ ಕುಷ್ಠರೋಗಿಗಳು ಅವನ ಹತ್ತಿರ ಓಡಿ ಹೋಗಲಿಲ್ಲ. ದೂರದಲ್ಲೇ ನಿಂತುಕೊಂಡರು. ಆದರೆ ತಮ್ಮ ಕುಷ್ಠರೋಗವನ್ನು ಯೇಸು ವಾಸಿಮಾಡುತ್ತಾನೆ ಎಂಬ ನಂಬಿಕೆ ಅವರಿಗಿತ್ತು. ಆದುದರಿಂದ ‘ಯೇಸುವೇ, ಬೋಧಕನೇ, ನಮಗೆ ಸಹಾಯಮಾಡು’ ಎಂದು ಗಟ್ಟಿಯಾಗಿ ಕೂಗಿದರು.

ಕಾಯಿಲೆ ಬಿದ್ದಿರುವ ಜನರನ್ನು ನೋಡುವಾಗ ನೀನು ಕನಿಕರ ಪಡುತ್ತೀಯಾ?— ಯೇಸು ಕನಿಕರ ಪಡುತ್ತಿದ್ದನು. ಕುಷ್ಠರೋಗಿಗಳ ಪಾಡು ಏನು ಅಂತನೂ ಅವನಿಗೆ ಚೆನ್ನಾಗಿ ಗೊತ್ತಿತ್ತು. ಆದುದರಿಂದ ಅವನು ಅವರಿಗೆ, “ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ” ಎಂದು ಹೇಳಿದನು.—ಲೂಕ 17:11-14.

ಈ ಕುಷ್ಠರೋಗಿಗಳಿಗೆ ಯೇಸು ಏನು ಮಾಡುವಂತೆ ಹೇಳುತ್ತಿದ್ದಾನೆ?

ಯೇಸು ಅವರಿಗೆ ಯಾಜಕರ ಬಳಿ ತೋರಿಸಿಕೊಳ್ಳುವಂತೆ ಏಕೆ ಹೇಳಿದನು?— ಏಕೆಂದರೆ ಯೆಹೋವನು ತನ್ನ ಜನರಿಗೆ ಕುಷ್ಠರೋಗದ ಕುರಿತು ಒಂದು ನಿಯಮವನ್ನು ಕೊಟ್ಟಿದ್ದನು. ಆ ನಿಯಮದ ಪ್ರಕಾರ ದೇವರ ಯಾಜಕನು ಕುಷ್ಠರೋಗಿಯ ಚರ್ಮವನ್ನು ಪರೀಕ್ಷಿಸಬೇಕಿತ್ತು. ಅದನ್ನು ನೋಡಿ ಒಬ್ಬ ಕುಷ್ಠರೋಗಿಯು ಸಂಪೂರ್ಣವಾಗಿ ಗುಣವಾಗಿದ್ದಾನೊ ಇಲ್ಲವೋ ಎಂದು ಯಾಜಕನು ಹೇಳುತ್ತಿದ್ದನು. ಅವನ ಕುಷ್ಠ ಪೂರ್ಣವಾಗಿ ವಾಸಿಯಾದ ಮೇಲೆ ಪುನಃ ಇತರರೊಂದಿಗೆ ವಾಸಿಸಬಹುದಿತ್ತು.—ಯಾಜಕಕಾಂಡ 13:16, 17.

ಆದರೆ ಯಾಜಕರ ಬಳಿ ಹೋಗಿ ತೋರಿಸಿಕೊಳ್ಳಿ ಅಂತ ಯೇಸು ಅವರಿಗೆ ಹೇಳಿದಾಗ ಅವರ ಮೈ ತುಂಬ ಕುಷ್ಠ ಇತ್ತಲ್ವಾ. ಹಾಗಿದ್ದರೂ ಯೇಸು ಹೇಳಿದಂತೆಯೇ ಅವರು ಯಾಜಕನ ಬಳಿಗೆ ಹೋದರಾ?— ಹೌದು, ಅವರು ಕೂಡಲೇ ಹೋದರು. ಯೇಸು ತಮ್ಮ ರೋಗವನ್ನು ಗುಣಪಡಿಸಬಲ್ಲನು ಎಂಬ ಭರವಸೆ ಅವರಿಗಿತ್ತು. ಮುಂದೆ ಏನಾಯಿತು?

ಅವರು ಯಾಜಕನನ್ನು ನೋಡಲು ಹೋಗುತ್ತಿದ್ದಾಗ ದಾರಿಯಲ್ಲೇ ಕುಷ್ಠ ಇಲ್ಲವಾಯಿತು. ಅವರ ಮಾಂಸವು ಸರಿಹೋಯಿತು. ಅವರಿಗೆ ಗುಣವಾಯಿತು! ಅವರು ಯೇಸುವಿನ ಶಕ್ತಿಯಲ್ಲಿ ನಂಬಿಕೆ ಇಟ್ಟಿದ್ದಕ್ಕೆ ಒಳ್ಳೇ ಪ್ರತಿಫಲ ಸಿಕ್ಕಿತು. ಅವರಿಗೆಷ್ಟು ಆನಂದವಾಗಿರಬೇಕು ಅಲ್ವಾ! ಕುಣಿದು ಕುಪ್ಪಳಿಸಿರಬೇಕು! ಅವರ ರೋಗ ಏನೋ ವಾಸಿಯಾಯಿತು. ಈಗ ಅವರು ಏನು ಮಾಡಬೇಕಿತ್ತು? ಯೇಸುವಿಗೆ ಕೃತಜ್ಞತೆ ತೋರಿಸಬೇಕಿತ್ತು ತಾನೆ? ನೀನಾಗಿದ್ದರೆ ಏನು ಮಾಡಿರುತ್ತಿದ್ದೆ?—

ಈ ಕುಷ್ಠರೋಗಿಯು ಏನು ಹೇಳಲು ಮರೆಯಲಿಲ್ಲ?

ಅವರಲ್ಲಿ ಒಬ್ಬನು ಪುನಃ ಯೇಸುವಿನ ಬಳಿ ಹಿಂದಿರುಗಿ ಬಂದನು. ಅವನು ಯೆಹೋವನನ್ನು ಸ್ತುತಿಸತೊಡಗಿದನು. ತಾನು ಗುಣವಾಗಿದ್ದಕ್ಕಾಗಿ ದೇವರಿಗೆ ಮಹಿಮೆ ಸಲ್ಲಿಸತೊಡಗಿದನು. ಅವನು ವಾಸಿಯಾಗಿದ್ದು ಯೇಸುವಿನಿಂದ. ಆದರೂ ಅವನು ಯೆಹೋವನನ್ನು ಸ್ತುತಿಸಿದನು. ಏಕೆಂದರೆ ಯೇಸುವಿಗೆ ವಾಸಿಮಾಡುವ ಶಕ್ತಿಯನ್ನು ಕೊಟ್ಟಿದ್ದು ದೇವರೇ. ದೇವರಿಗೆ ಸ್ತುತಿ ಸಲ್ಲಿಸಿದ ಆ ಮನುಷ್ಯನು ಮಹಾ ಬೋಧಕನ ಕಾಲಿಗೆ ಬಿದ್ದು ಅವನಿಗೂ ಧನ್ಯವಾದ ಹೇಳಿದನು. ಹೀಗೆ ಅವನು ಯೇಸುವಿಗೆ ಕೃತಜ್ಞತೆ ತೋರಿಸಿದನು.

ಅದ್ಸರಿ, ಉಳಿದ ಒಂಬತ್ತು ಮಂದಿ ಎಲ್ಲಿ ಹೋದರು? ಅದನ್ನೇ ಹಿಂದಿರುಗಿ ಬಂದ ಆ ವ್ಯಕ್ತಿಯ ಬಳಿ ಯೇಸು ವಿಚಾರಿಸಿದನು. ‘ಹತ್ತು ಮಂದಿ ಕುಷ್ಠರೋಗಿಗಳು ಗುಣವಾದರಲ್ಲವೇ? ಹಾಗಾದರೆ ಉಳಿದ ಒಂಬತ್ತು ಮಂದಿ ಎಲ್ಲಿ? ನೀನು ಮಾತ್ರ ದೇವರನ್ನು ಮಹಿಮೆಪಡಿಸಲು ಹಿಂದಿರುಗಿ ಬಂದೆಯಾ?’ ಅಂತ ಕೇಳಿದನು.

ನಿಜ, ಆ ಹತ್ತು ಮಂದಿಯಲ್ಲಿ ಒಬ್ಬನು ಮಾತ್ರ ದೇವರನ್ನು ಸ್ತುತಿಸಿದನು. ಯೇಸುವಿಗೆ ಧನ್ಯವಾದ ಹೇಳಲು ಹಿಂದಿರುಗಿ ಬಂದನು. ಆತ ಒಬ್ಬ ಸಮಾರ್ಯದವನಾಗಿದ್ದರೂ ಅಂದರೆ ಬೇರೊಂದು ದೇಶದವನಾಗಿದ್ದರೂ ಹಿಂದಿರುಗಿ ಬಂದು ಕೃತಜ್ಞತೆ ಹೇಳಲು ಮರೆಯಲಿಲ್ಲ. ಆದರೆ ಉಳಿದ ಒಂಬತ್ತು ಮಂದಿ ದೇವರಿಗೂ ಧನ್ಯವಾದ ಹೇಳಲಿಲ್ಲ, ಯೇಸುವಿಗೂ ಧನ್ಯವಾದ ಹೇಳಲಿಲ್ಲ.—ಲೂಕ 17:15-19.

ಈ ಹತ್ತು ಮಂದಿಯಲ್ಲಿ ನೀನು ಯಾರಂತೆ ಇರಲು ಇಷ್ಟಪಡುತ್ತಿ? ಆ ಸಮಾರ್ಯದವನಂತೆ ಅಲ್ವಾ?— ಆದುದರಿಂದ ಯಾರಾದರೂ ನಮಗೆ ಸಹಾಯಮಾಡುವಾಗ ನಾವು ಏನು ಹೇಳಲು ಮರೆಯಬಾರದು?— ಜಾಣ ಮರಿ! ಕೆಲವೊಮ್ಮೆ ಜನರು ಧನ್ಯವಾದ ಹೇಳಲು ಮರೆತುಬಿಡುತ್ತಾರೆ. ಆದರೆ ನಾವೆಂದೂ ಮರೆಯಬಾರದು. ನಾವು ಮರೆಯದೇ ಧನ್ಯವಾದ ಹೇಳುವಾಗ ಯೆಹೋವ ದೇವರಿಗೂ ಆತನ ಮಗನಾದ ಯೇಸುವಿಗೂ ತುಂಬ ಸಂತೋಷವಾಗುತ್ತದೆ.

ಹಿಂದಿರುಗಿ ಬಂದ ಕುಷ್ಠರೋಗಿಯಂತೆ ನೀನು ಏನು ಮಾಡಬೇಕು?

ನೀನು ಯಾರಿಗೆಲ್ಲ ಧನ್ಯವಾದ ಹೇಳಬಹುದು, ಸ್ವಲ್ಪ ಯೋಚಿಸು! ಯಾರೆಲ್ಲ ನಿನಗೆ ಸಹಾಯ ಮಾಡಿದ್ದಾರೆ? ನೆನಪು ಬಂತಾ! ಸರಿ, ಒಂದು ಉದಾಹರಣೆ ನೋಡೋಣ. ನೀನು ಯಾವಾಗಲಾದರೂ ಹುಷಾರಿಲ್ಲದೇ ಮಲಗಿದ್ಯಾ?— ನಿನಗೆ ಕುಷ್ಠರೋಗದಷ್ಟು ದೊಡ್ಡ ಕಾಯಿಲೆ ಬರದೇ ಇದ್ದಿರಬಹುದು. ಆದರೆ ತುಂಬ ನೆಗಡಿನೋ ಹೊಟ್ಟೆ ನೋವೋ ಬಂದಿರಬಹುದು. ಆಗ ಯಾರಾದರೂ ನಿನ್ನ ಪಕ್ಕದಲ್ಲೇ ಕೂತುಕೊಂಡು ನಿನ್ನ ಆರೈಕೆ ಮಾಡಿದ್ರಾ?— ಅವರು ನಿನಗೆ ಔಷಧಿ ಕೊಟ್ಟಿರಬಹುದು, ಊಟ ಮಾಡಿಸಿರಬಹುದು ಅಥವಾ ನಿನಗೆ ಬೇಕಾದ ಸಹಾಯ ಮಾಡಿರಬಹುದು. ಅವರ ಆರೈಕೆಯಿಂದ ಹುಷಾರಾದಾಗ ನಿನಗೆ ಸಂತೋಷ ಆಯ್ತಾ?—

ತನ್ನ ರೋಗ ವಾಸಿಯಾದಾಗ ಆ ಸಮಾರ್ಯದವನಿಗೂ ಸಂತೋಷ ಆಯಿತು. ಮತ್ತು ಅವನು ಯೇಸುವಿಗೆ ಧನ್ಯವಾದ ಕೂಡ ಹೇಳಿದ. ಅವನು ಹಿಂದಿರುಗಿ ಬಂದು ಧನ್ಯವಾದ ಹೇಳಿದಾಗ ಯೇಸುವಿಗೂ ಖುಷಿಯಾಯಿತು. ನೀನು ಹುಷಾರಿಲ್ಲದೆ ಹಾಸಿಗೆಯಲ್ಲಿ ಮಲಗಿರುವಾಗ ಅಪ್ಪ ಅಮ್ಮ ನಿನಗೆ ಸಹಾಯ ಮಾಡುತ್ತಾರೆ. ನೀನು ಹುಷಾರಾದ ಮೇಲೆ ‘ಧನ್ಯವಾದ’ ಅಂತ ಹೇಳಿದರೆ ಅವರಿಗೆ ಸಂತೋಷ ಆಗುತ್ತದಾ?— ಖಂಡಿತ ಆಗುತ್ತೆ.

ಧನ್ಯವಾದ ಹೇಳಲು ಮರೆಯಬಾರದು ಏಕೆ?

ಅಪ್ಪ ಅಮ್ಮ ಮಾತ್ರ ಅಲ್ಲ ಬೇರೆಯವರೂ ನಿನಗೆ ಸಹಾಯಮಾಡುತ್ತಾರೆ. ಕೆಲವರು ಪ್ರತಿ ದಿನ ಅಥವಾ ಪ್ರತಿ ವಾರ ನಿನಗೆ ಸಹಾಯ ಮಾಡುತ್ತಾರೆ. ಅದು ಅವರ ಕರ್ತವ್ಯನೋ ಕೆಲಸನೋ ಆಗಿರಬಹುದು. ಅಷ್ಟೇ ಅಲ್ಲ, ಅವರದನ್ನು ಖುಷಿ ಖುಷಿಯಾಗಿ ಮಾಡಬಹುದು. ಹೀಗೆ ಸಹಾಯಮಾಡುವವರಿಗೆ ನೀನು ಧನ್ಯವಾದ ಹೇಳುತ್ತೀಯಾ? ಅಥವಾ ಅದು ಅವರ ಕರ್ತವ್ಯ ಅಥವಾ ಕೆಲಸ, ಅದಕ್ಕೆಲ್ಲ ನಾನು ಧನ್ಯವಾದ ಹೇಳಬೇಕಾಗಿಲ್ಲ ಎಂದು ನೆನಸುತ್ತಿಯಾ? ಉದಾಹರಣೆಗೆ, ಶಾಲೆಯಲ್ಲಿ ನಿನಗೆ ಪಾಠ ಕಲಿಸಲು ನಿನ್ನ ಟೀಚರ್‌ ತುಂಬಾ ಶ್ರಮಪಡಬಹುದು. ಮಕ್ಕಳಿಗೆ ಪಾಠ ಕಲಿಸುವುದು ಅವರ ಕರ್ತವ್ಯ. ಆದರೆ ಅವರ ಶ್ರಮದಿಂದ ನೀನು ಪಾಠ ಕಲಿಯುತ್ತಿದ್ದಿ. ಅವರಿಗೆ ನೀನು ದಿನಾಲೂ ಧನ್ಯವಾದ ಹೇಳುವುದಾದರೆ ಅವರಿಗೆ ತುಂಬ ಖುಷಿಯಾಗುತ್ತದೆ.

ಕೆಲವೊಮ್ಮೆ ಜನರು ನಿನಗೆ ಚಿಕ್ಕಪುಟ್ಟ ಸಹಾಯಗಳನ್ನು ಮಾಡಬಹುದು. ನೀನು ಪೆನ್ನೊ ಪೆನ್ಸಿಲ್ಲೊ ಮರೆತು ಶಾಲೆಗೆ ಹೋದಾಗ ಬೇರೆಯವರು ತಮ್ಮ ಪೆನ್ನ್‌ ಪೆನ್ಸಿಲ್‌ ನಿನಗೆ ಕೊಡಬಹುದು. ಅಥವಾ ಊಟದ ವೇಳೆಯಲ್ಲಿ ಯಾರಾದರೂ ನಿನಗೆ ಊಟ ಬಡಿಸಿ ಸಹಾಯ ಮಾಡಿರಬಹುದು. ಇಂಥ ಚಿಕ್ಕಪುಟ್ಟ ವಿಷಯಗಳಿಗೂ ನೀನು ಧನ್ಯವಾದ ಹೇಳಬೇಕು.

ಜನರು ಮಾಡುವ ಚಿಕ್ಕಪುಟ್ಟ ಸಹಾಯಕ್ಕೆ ನಾವು ಮರೆಯದೇ ಧನ್ಯವಾದ ಹೇಳುವುದಾದರೆ ದೇವರಿಗೂ ಧನ್ಯವಾದ ಹೇಳಲು ನಾವು ಮರೆಯುವುದಿಲ್ಲ. ನಾವು ಯೆಹೋವನಿಗೆ ಧನ್ಯವಾದ ತಿಳಿಸಲು ಎಷ್ಟೊಂದು ವಿಷಯಗಳಿವೆ ಅಲ್ವಾ? ದೇವರು ನಮಗೆ ಜೀವ ಕೊಟ್ಟಿದ್ದಾನೆ. ನಾವು ಆನಂದವಾಗಿ ಇರಲು ಎಷ್ಟೆಷ್ಟೊ ಒಳ್ಳೇ ವಿಷಯಗಳನ್ನು ಕೊಟ್ಟಿದ್ದಾನೆ. ಹೀಗೆ ದೇವರನ್ನು ಮಹಿಮೆಪಡಿಸಲು ನಮಗೆ ಅನೇಕಾನೇಕ ಕಾರಣಗಳಿವೆ. ಆತನ ಬಗ್ಗೆ ಒಳ್ಳೇ ವಿಷಯಗಳನ್ನು ಇತರರೊಂದಿಗೆ ಪ್ರತಿ ದಿನ ಮಾತಾಡುವ ಮೂಲಕ ನಾವು ಆತನನ್ನು ಮಹಿಮೆಪಡಿಸಬಲ್ಲೆವು.

ಧನ್ಯವಾದ ಹೇಳುವ ವಿಷಯವಾಗಿ ಕೀರ್ತನೆ 118:29; ಎಫೆಸ 5:20; ಕೊಲೊಸ್ಸೆ 3:17 ಮತ್ತು 1 ಥೆಸಲೊನೀಕ 5:18 ಓದೋಣ.