ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 28

ಯಾರ ಮಾತಿಗೆ ವಿಧೇಯರಾಗಬೇಕು?

ಯಾರ ಮಾತಿಗೆ ವಿಧೇಯರಾಗಬೇಕು?

ಒಂದೊಂದು ಸಲ, ಯಾರ ಮಾತು ಕೇಳಬೇಕು ಯಾರ ಮಾತು ಕೇಳಬಾರದು ಅಂತ ತೀರ್ಮಾನಿಸೋದೇ ಕಷ್ಟ. ಅಪ್ಪ ಅಮ್ಮ ಹೀಗೆ ಮಾಡು ಅಂತ ಹೇಳಿದ್ರೆ ಟೀಚರ್‌ ಅಥವಾ ಪೊಲೀಸ್‌ ಹಾಗಲ್ಲ ನೀನು ಈ ರೀತಿ ಮಾಡಬೇಕು ಅಂತ ಉಲ್ಟಾ ಹೇಳಬಹುದು. ಆಗ ನೀನು ಯಾರ ಮಾತು ಕೇಳುತ್ತೀ ಯಾರಿಗೆ ವಿಧೇಯತೆ ತೋರಿಸುತ್ತೀ?—

ಅಧ್ಯಾಯ ಏಳನ್ನು ಕಲಿತಾಗ ನಾವು ಎಫೆಸ 6:1-3 ನೇ ವಚನವನ್ನು ಬೈಬಲಿನಿಂದ ಓದಿದ್ದು ನಿನಗೆ ನೆನಪಿರಬಹುದು. ಆ ವಚನವು ಮಕ್ಕಳು ತಂದೆತಾಯಿಗೆ ವಿಧೇಯರಾಗಬೇಕು ಅಂತ ಪ್ರೋತ್ಸಾಹಿಸುತ್ತಾ ಹೇಳುವುದು: “ಮಕ್ಕಳೇ, ಕರ್ತನೊಂದಿಗೆ ಐಕ್ಯದಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ.” “ಕರ್ತನೊಂದಿಗೆ ಐಕ್ಯದಲ್ಲಿ” ಅಂದರೇನು?— ದೇವರ ನಿಯಮಗಳಿಗೆ ವಿಧೇಯರಾಗುವಂತೆ ಹೆತ್ತವರು ಕಲಿಸುವಾಗ ಮಕ್ಕಳು ವಿಧೇಯರಾಗಬೇಕು.

ಆದರೆ ಯೆಹೋವ ದೇವರಲ್ಲಿ ದೊಡ್ಡವರೆಲ್ಲರೂ ನಂಬಿಕೆಯಿಡುವುದಿಲ್ಲ. ಅಂಥವರಲ್ಲಿ ಯಾರಾದರೂ ನಿನಗೆ ಪರೀಕ್ಷೆಯಲ್ಲಿ ಕಾಪಿ ಹೊಡಿ ಪರವಾಗಿಲ್ಲ ಅಂತ ಹೇಳಿದರೆ? ಅಥವಾ ಅಂಗಡಿಯಿಂದ ಸಾಮಾನು ಕದಿ ಅದೇನು ತಪ್ಪಲ್ಲ ಅಂತ ಹೇಳಿದರೆ? ಅದು ಸರಿನಾ? ಮಕ್ಕಳು ಕಾಪಿ ಹೊಡೆಯಬಹುದಾ ಅಥವಾ ಕದಿಯಬಹುದಾ?—

ಬಂಗಾರದ ಪ್ರತಿಮೆಗೆ ಎಲ್ಲರೂ ಅಡ್ಡಬೀಳಬೇಕೆಂದು ರಾಜ ನೆಬೂಕದ್ನೆಚ್ಚರನು ಆಜ್ಞೆ ಕೊಟ್ಟಾಗ ಏನಾಯಿತು ಅಂತ ನಿನಗೆ ನೆನಪಿರಬಹುದು. ಶದ್ರಕ್‌, ಮೇಶಕ್‌, ಅಬೇದ್‌ನೆಗೋ ಅದಕ್ಕೆ ಅಡ್ಡಬಿದ್ದಿರಲಿಲ್ಲ. ಯಾಕೆ ಅಂತ ಹೇಳುತ್ತೀಯಾ?— ಯಾಕೆಂದರೆ ಮನುಷ್ಯರು ಯೆಹೋವನನ್ನು ಮಾತ್ರ ಆರಾಧಿಸಬೇಕು ಎಂದು ಬೈಬಲ್‌ ಹೇಳುತ್ತದೆ.—ವಿಮೋಚನಕಾಂಡ 20:3; ಮತ್ತಾಯ 4:10.

ಪೇತ್ರನು ಕಾಯಫನಿಗೆ ಏನು ಹೇಳುತ್ತಿದ್ದಾನೆ?

ಇಂಥದೊಂದು ಘಟನೆ ಯೇಸುವಿನ ಅಪೊಸ್ತಲರಿಗೂ ಸಂಭವಿಸಿತು. ಯೇಸು ಮೃತಪಟ್ಟು ಕೆಲವು ವರ್ಷಗಳ ನಂತರ ಅವನ ಅಪೊಸ್ತಲರನ್ನು ಹಿರೀಸಭೆಯ ಮುಂದೆ ಹಾಜರುಪಡಿಸಲಾಯಿತು. ಹಿರೀಸಭೆಯೆಂದರೆ ಯೆಹೂದ್ಯರ ಧಾರ್ಮಿಕ ನ್ಯಾಯಾಲಯ. ಅಲ್ಲಿ ಅಪೊಸ್ತಲರಿಗೆ ಮಹಾ ಯಾಜಕನಾದ ಕಾಯಫನು, ‘[ಯೇಸುವಿನ] ಹೆಸರೆತ್ತಿ ಬೋಧಿಸಲೇ ಬಾರದೆಂದು ನಾವು ನಿಮಗೆ ಕಟ್ಟುನಿಟ್ಟಾಗಿ ಆಜ್ಞಾಪಿಸಿದೆವು. ಆದರೆ ನೀವೋ ಯೆರೂಸಲೇಮನ್ನು ನಿಮ್ಮ ಬೋಧನೆಯಿಂದ ತುಂಬಿಸಿದ್ದೀರಿ’ ಅಂತ ಗದರಿಸಿದನು. ಹಿರೀಸಭೆಯವರು ಕಟ್ಟಾಜ್ಞೆ ನೀಡಿದ್ದರೂ ಅಪೊಸ್ತಲರು ಯಾಕೆ ವಿಧೇಯತೆ ತೋರಿಸಿರಲಿಲ್ಲ?— ಇದಕ್ಕೆ ಉತ್ತರ ಪೇತ್ರ ಕೊಡುತ್ತಾನೆ. ಎಲ್ಲಾ ಅಪೊಸ್ತಲರ ಪರವಾಗಿ ಮಾತಾಡುತ್ತಾ ಅವನು ಕಾಯಫನಿಗೆ, ‘ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗಬೇಕು’ ಅಂತ ಹೇಳಿದನು.—ಅಪೊಸ್ತಲರ ಕಾರ್ಯಗಳು 5:27-29.

ಆಗಿನ ಕಾಲದಲ್ಲಿ ಯೆಹೂದಿ ಧಾರ್ಮಿಕ ನಾಯಕರು ತುಂಬಾ ಅಧಿಕಾರ ಹೊಂದಿದ್ದರು. ಹಾಗಿದ್ದರೂ ಅವರ ದೇಶದಲ್ಲಿ ರೋಮನ್‌ ಸರಕಾರ ಆಳ್ವಿಕೆ ನಡೆಸುತಿತ್ತು. ಆ ಸರಕಾರದ ಮುಖ್ಯಾಧಿಕಾರಿಯನ್ನು ಕೈಸರ ಅಂತ ಕರೆಯಲಾಗುತ್ತಿತ್ತು. ಕೈಸರನ ಆಳ್ವಿಕೆಯನ್ನು ಯೆಹೂದ್ಯರು ಇಷ್ಟಪಡದಿದ್ದರೂ ಅವರಿಗೆ ಬೇಕಾದ ಅನೇಕ ಸೌಲಭ್ಯ ಸವಲತ್ತುಗಳನ್ನು ಆ ಸರಕಾರ ಮಾಡಿಕೊಟ್ಟಿತ್ತು. ಅದೇ ರೀತಿಯಲ್ಲಿ ಇಂದಿನ ಸರಕಾರಗಳು ಸಹ ತಮ್ಮ ಪ್ರಜೆಗಳಿಗಾಗಿ ಒಳ್ಳೊಳ್ಳೇ ಸೌಕರ್ಯಗಳನ್ನು ಮಾಡಿಕೊಡುತ್ತವೆ. ಯಾವೆಲ್ಲ ಸೌಲಭ್ಯಗಳನ್ನು ಮಾಡಿಕೊಟ್ಟಿವೆ ಅಂತ ಹೇಳಬಲ್ಲಿಯಾ?—

ಸರಕಾರ ನಮಗಾಗಿ ರಸ್ತೆಗಳನ್ನು ನಿರ್ಮಿಸಿ ಕೊಟ್ಟಿವೆ. ನಮ್ಮ ರಕ್ಷಣೆಗಾಗಿ ಪೊಲೀಸ್‌ ಪಡೆ ಹಾಗೂ ಅಗ್ನಿಶಾಮಕ ದಳವನ್ನು ನೇಮಿಸಿ ಅವರಿಗೆ ಸಂಬಳ ಕೊಡುತ್ತಿವೆ. ಮಕ್ಕಳಿಗಾಗಿ ಶಾಲೆಗಳು ವಯಸ್ಸಾದವರಿಗಾಗಿ ಸೇವಾ ಆಸ್ಪತ್ರೆಗಳನ್ನು ಕಟ್ಟಿಸಿಕೊಟ್ಟಿವೆ. ಇಷ್ಟೆಲ್ಲ ಸೌಲಭ್ಯಗಳನ್ನು ಮಾಡಿಕೊಡಲು ಸರಕಾರಕ್ಕೆ ಹಣ ಬೇಕಲ್ವಾ. ಹಾಗಾದರೆ ಸರಕಾರಕ್ಕೆ ಹಣ ಎಲ್ಲಿಂದ ಬರುತ್ತೆ?— ಜನರಿಂದ. ಜನರು ಸರಕಾರಕ್ಕೆ ಕೊಡುವ ಹಣವೇ ಕಂದಾಯ ಅಥವಾ ತೆರಿಗೆಯಾಗಿದೆ.

ಮಹಾ ಬೋಧಕನು ಜೀವಿಸುತ್ತಿದ್ದ ಕಾಲದಲ್ಲಿ ಅನೇಕ ಯೆಹೂದ್ಯರು ರೋಮನ್‌ ಸರಕಾರಕ್ಕೆ ತೆರಿಗೆ ಪಾವತಿಸಲು ಇಷ್ಟಪಡುತ್ತಿರಲಿಲ್ಲ. ಒಂದು ದಿನ ಯಾಜಕರು ಯೇಸುವನ್ನು ಹೇಗಾದರೂ ಸಿಕ್ಕಿಸಿಹಾಕಬೇಕೆಂದು ಉಪಾಯಮಾಡಿ ತಮ್ಮ ಕೆಲವು ಜನರನ್ನು ಅವನ ಹತ್ತಿರ ಕಳುಹಿಸುತ್ತಾರೆ. ಅವರು ಯೇಸುವಿಗೆ, ‘ನಾವು ಕೈಸರನಿಗೆ ಕಂದಾಯ ಕೊಡಬೇಕಾ, ಕೊಡಬಾರದಾ?’ ಅಂತ ಪ್ರಶ್ನೆ ಕೇಳಿದರು. ಆ ಪ್ರಶ್ನೆಯ ಹಿಂದೆ ಒಂದು ಕುತಂತ್ರ ಅಡಗಿತ್ತು. ಒಂದುವೇಳೆ ಯೇಸು ಏನಾದರೂ ‘ಕಂದಾಯ ಕೊಡಬೇಕು’ ಅಂತ ಹೇಳಿದ್ದರೆ, ಹೆಚ್ಚಿನ ಯೆಹೂದ್ಯರಿಗೆ ಅದು ಇಷ್ಟವಾಗುತ್ತಿರಲಿಲ್ಲ. ‘ಕಂದಾಯ ಕೊಡಬಾರದು’ ಅಂತ ಹೇಳಿದ್ದರೆ ಅದುನೂ ತಪ್ಪಾಗುತ್ತಿತ್ತು.

ಆದರೆ ಯೇಸು ಏನು ಮಾಡಿದನು ಗೊತ್ತಾ? ‘ನನಗೊಂದು ನಾಣ್ಯ ತೋರಿಸಿ’ ಅಂತ ಹೇಳಿದನು. ಅವರು ನಾಣ್ಯ ತೋರಿಸಿದಾಗ, ‘ಇದರ ಮೇಲೆ ಯಾರ ಚಿತ್ರ ಹಾಗೂ ಹೆಸರಿದೆ?’ ಅಂತ ಕೇಳಿದನು. ಅದಕ್ಕವರು, “ಕೈಸರನದು” ಅಂತ ಉತ್ತರ ಕೊಟ್ಟರು. ಯೇಸು ಅವರಿಗೆ, “ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ” ಎಂದು ಹೇಳಿದನು.—ಲೂಕ 20:19-26.

ಈ ಜನರ ಕುಯುಕ್ತಿಯ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು?

ಯೇಸುವಿನ ಉತ್ತರದಲ್ಲಿ ಒಂಚೂರೂ ತಪ್ಪು ಕಂಡುಹಿಡಿಯಲು ಆ ಜನರಿಗೆ ಆಗಲಿಲ್ಲ. ಕೈಸರನು ಜನರಿಗೋಸ್ಕರ ಸೌಕರ್ಯಗಳನ್ನು ನೀಡಿರುವಾಗ ಅದಕ್ಕಾಗಿ ಜನರು ಹಣವನ್ನು ತೆರಿಗೆ ರೂಪದಲ್ಲಿ ಕೊಡುವುದು ನ್ಯಾಯವಾಗಿದೆ. ಅದರಲ್ಲೂ ಅವನು ಮುದ್ರಿಸಿರುವ ಹಣವನ್ನು ಕೊಡುವುದು ಯೋಗ್ಯ. ಹೀಗೆ ನಮಗೆ ಸಿಗುವ ಸವಲತ್ತುಗಳಿಗಾಗಿ ನಾವು ಸರಕಾರಕ್ಕೆ ತೆರಿಗೆ ಕೊಡಬೇಕೆಂದು ಯೇಸು ತೋರಿಸಿಕೊಟ್ಟನು.

ಚಿಕ್ಕ ವಯಸ್ಸಾಗಿರುವುದರಿಂದ ನೀನೇನೂ ಈಗ ಸರಕಾರಕ್ಕೆ ತೆರಿಗೆ ಕೊಡಬೇಕೆಂದಿಲ್ಲ. ಆದರೆ ಒಂದನ್ನು ನೀನು ಸರಕಾರಕ್ಕೆ ಕೊಡಬಹುದು. ಅದೇನು ಗೊತ್ತಾ?— ಸರಕಾರ ಜಾರಿಗೊಳಿಸಿರುವ ನಿಯಮಗಳಿಗೆ ವಿಧೇಯತೆ. ಬೈಬಲ್‌ ಕೂಡ ‘ಮೇಲಧಿಕಾರಿಗಳಿಗೆ ವಿಧೇಯರಾಗಿರಿ’ ಎಂದು ಹೇಳುತ್ತದೆ. ಮೇಲಧಿಕಾರಿಗಳು ಅಂದರೆ ಸರಕಾರದಲ್ಲಿ ಕೆಲಸಮಾಡುವ ಅಧಿಕಾರಿಗಳು. ಹಾಗಾದರೆ ನಾವು ಸರಕಾರದ ನಿಯಮಗಳಿಗೆ ವಿಧೇಯತೆ ತೋರಿಸಬೇಕೆಂದು ದೇವರೇ ಹೇಳುತ್ತಿದ್ದಾನೆ.—ರೋಮನ್ನರಿಗೆ 13:1, 2.

ರಸ್ತೆಯಲ್ಲೋ ಸಾರ್ವಜನಿಕ ಸ್ಥಳದಲ್ಲೋ ಪೇಪರ್‌ ಚೂರನ್ನಾಗಲಿ ಕಸವನ್ನಾಗಲಿ ಹಾಕಬಾರದೆಂಬ ನಿಯಮವಿದೆ ಅಂತಿಟ್ಟುಕೋ. ಆ ನಿಯಮಕ್ಕೆ ನೀನು ವಿಧೇಯತೆ ತೋರಿಸಬೇಕಾ?— ಹೌದು, ವಿಧೇಯತೆ ತೋರಿಸಬೇಕೆಂದು ದೇವರು ಇಷ್ಟಪಡುತ್ತಾನೆ. ಸರಿ, ನೀನು ಪೊಲೀಸರಿಗೂ ವಿಧೇಯನಾಗಬೇಕಾ?— ಹೌದು, ಏಕೆಂದರೆ ಜನರ ರಕ್ಷಣೆಗಾಗಿಯೇ ಪೊಲೀಸರಿಗೆ ಸರಕಾರ ಸಂಬಳ ಕೊಡುತ್ತದೆ. ನೀನು ಪೊಲೀಸರಿಗೆ ವಿಧೇಯನಾದರೆ ಸರಕಾರಕ್ಕೆ ವಿಧೇಯನಾದಂತೆ.

ನಿನಗೆ ಅವಸರ ಅವಸರವಾಗಿ ರಸ್ತೆ ದಾಟಬೇಕಾಗಿದೆ. ಆದರೆ ಪೊಲೀಸ್‌ “ನಿಲ್ಲು!” ಅಂತ ಹೇಳುತ್ತಾನೆ. ಆಗ ನೀನು ಏನು ಮಾಡಬೇಕು?— ಒಂದುವೇಳೆ ಬೇರೆಯವರು ದಾಟಬಹುದು. ಹಾಗಂತ ನೀನು ದಾಟಬೇಕಾ?— ನೀನು ಕಾಯಬೇಕು. ಎಲ್ಲರೂ ರಸ್ತೆ ದಾಟಿಹೋಗಿ ನೀನೊಬ್ಬನೇ ಅಲ್ಲಿ ನಿಂತಿದ್ದರೂ ಪರವಾಗಿಲ್ಲ. ಪೊಲೀಸ್‌ ಹೇಳುವ ತನಕ ನೀನು ಕಾಯಬೇಕು. ಏಕೆಂದರೆ ವಿಧೇಯತೆ ತೋರಿಸುವಂತೆ ಹೇಳಿರುವುದು ದೇವರು.

ನಿನ್ನ ಮನೆಯ ಹತ್ತಿರ ಏನೋ ಗಲಭೆ ಉಂಟಾಗಿದೆ ಎಂದಿಟ್ಟುಕೋ. ಆಗ ಪೊಲೀಸರು “ಮನೆಯಲ್ಲೇ ಇರಿ. ಹೊರಗೆ ಬರಬೇಡಿ” ಅಂತ ಎಚ್ಚರಿಸಬಹುದು. ಆದರೆ ಹೊರಗಡೆಯಿಂದ ಜೋರು ಜೋರಾಗಿ ಕೂಗಾಟ ಕೇಳಿಸುತ್ತಿದೆ. ಅಲ್ಲಿ ಏನಾಗುತ್ತಿದೆ ಅಂತ ತಿಳಿದುಕೊಳ್ಳಲು ನಿನಗೆ ಭಾರಿ ಕುತೂಹಲವಾಗಬಹುದು. ನೀನದನ್ನು ನೋಡಲು ಹೊರಗೆ ಹೋಗುವುದು ಸರಿನಾ?— ಹಾಗೆ ಮಾಡಿದರೆ “ಮೇಲಧಿಕಾರಿಗಳಿಗೆ” ನೀನು ವಿಧೇಯತೆ ತೋರಿಸಿದಂತೆ ಆಗುತ್ತಾ?—

ಸರಕಾರವು ಅನೇಕ ಸ್ಥಳಗಳಲ್ಲಿ ಶಾಲೆಗಳನ್ನು ತೆರೆದು ಪಾಠ ಹೇಳಿಕೊಡಲು ಟೀಚರ್‌ಗಳನ್ನು ನೇಮಿಸಿ ಸಂಬಳ ಕೊಡುತ್ತದೆ. ಟೀಚರ್‌ಗಳಿಗೂ ನೀನು ವಿಧೇಯತೆ ತೋರಿಸಬೇಕೆಂದು ದೇವರು ಬಯಸುತ್ತಾನಾ?— ಸರಕಾರ ಜನರ ರಕ್ಷಣೆಗಾಗಿ ಹೇಗೆ ಪೊಲೀಸರಿಗೆ ಸಂಬಳ ಕೊಡುತ್ತದೋ ಅದೇ ರೀತಿಯಲ್ಲಿ ಪಾಠ ಕಲಿಸುವ ಟೀಚರ್‌ಗಳಿಗೂ ಸಂಬಳ ಕೊಡುತ್ತದೆ. ನಾವು ಪೊಲೀಸ್‌ಗಾಗಲಿ ಟೀಚರ್‌ಗಾಗಲಿ ವಿಧೇಯತೆ ತೋರಿಸುವಾಗ ಸರಕಾರಕ್ಕೆ ವಿಧೇಯತೆ ತೋರಿಸಿದಂತೆ.

ಪೊಲೀಸರಿಗೆ ನಾವೇಕೆ ವಿಧೇಯರಾಗಬೇಕು?

ಒಂದುವೇಳೆ ಒಂದು ವಿಗ್ರಹವನ್ನು ಪೂಜಿಸುವಂತೆ ಟೀಚರೇ ನಿನಗೆ ಹೇಳಿದರೆ? ನೀನೇನು ಮಾಡುತ್ತೀ?— ಪ್ರತಿಮೆಗೆ ಅಡ್ಡಬೀಳುವಂತೆ ರಾಜ ನೆಬೂಕದ್ನೆಚ್ಚರನು ಹೇಳಿದಾಗ ಆ ಮೂವರು ಇಬ್ರಿಯರು ಅಡ್ಡಬೀಳಲಿಲ್ಲ. ಯಾಕಂತ ನಿನಗೆ ನೆನಪಿದೆಯಾ?— ಯಾಕೆಂದರೆ ಅವರು ದೇವರಿಗೆ ಅವಿಧೇಯತೆ ತೋರಿಸಲು ಇಷ್ಟಪಡಲಿಲ್ಲ.

ಇತಿಹಾಸಕಾರನಾದ ವಿಲ್‌ ಡ್ಯೂರಂಟ್‌ ಎಂಬವರು ಆರಂಭದ ಕ್ರೈಸ್ತರ ಕುರಿತು ಹೀಗೆ ಬರೆದರು: ‘ಕ್ರೈಸ್ತರು ಮುಖ್ಯವಾಗಿ ತಮ್ಮ ಭಕ್ತಿ [ಅಥವಾ ನಿಷ್ಠೆ] ತೋರಿಸಿದ್ದು ಕೈಸರನಿಗಲ್ಲ.’ ಹೌದು ಯೆಹೋವನಿಗೆ ಮಾತ್ರವೇ ತೋರಿಸಿದರು. ನಮ್ಮ ಜೀವನದಲ್ಲೂ ದೇವರಿಗೆ ಆದ್ಯತೆ ಕೊಡಬೇಕೆಂದು ಸದಾ ನೆನಪಿನಲ್ಲಿಡು ಮಗು.

ನಾವು ಸರಕಾರಕ್ಕೆ ವಿಧೇಯರಾಗುತ್ತೇವೆ. ಏಕೆಂದರೆ ಅದು ದೇವರ ಅಪೇಕ್ಷೆಯಾಗಿದೆ. ಆದರೆ ದೇವರಿಗೆ ಇಷ್ಟವಿಲ್ಲದ ವಿಷಯವನ್ನು ಮಾಡುವಂತೆ ಯಾರಾದರೂ ನಮಗೆ ಹೇಳುವಾಗ ನಾವೇನು ಮಾಡಬೇಕು?— ‘ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗಬೇಕು’ ಎಂದು ಅಪೊಸ್ತಲರು ಆ ಮಹಾ ಯಾಜಕನಿಗೆ ಹೇಳಿದ ಮಾತುಗಳನ್ನೇ ನಾವೂ ಹೇಳಬೇಕು.—ಅಪೊಸ್ತಲರ ಕಾರ್ಯಗಳು 5:29.

ನಿಯಮವನ್ನು ಪಾಲಿಸಬೇಕೆಂದು ಬೈಬಲ್‌ ಕಲಿಸುತ್ತದೆ. ನಾವೀಗ ಮತ್ತಾಯ 5:41; ತೀತ 3:1 ಮತ್ತು 1 ಪೇತ್ರ 2:12-14 ನ್ನು ಓದಿ ನೋಡೋಣ.