ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 29

ಯಾವ ರೀತಿಯ ಪಾರ್ಟಿ ದೇವರಿಗೆ ಇಷ್ಟ?

ಯಾವ ರೀತಿಯ ಪಾರ್ಟಿ ದೇವರಿಗೆ ಇಷ್ಟ?

ದೇವರು ಈ ಪಾರ್ಟಿಯನ್ನು ಏಕೆ ಇಷ್ಟಪಟ್ಟನು?

ಯಾವುದಾದರೂ ಪಾರ್ಟಿಗೆ ಹೋಗುವುದೆಂದರೆ ನಿನಗೆ ಇಷ್ಟನಾ?— ಪಾರ್ಟಿಯಲ್ಲಿ ತುಂಬಾ ಮಜಾ ಮಾಡಬಹುದು ಅಲ್ವಾ. ನಾವು ಪಾರ್ಟಿಗಳಿಗೆ ಹೋಗುವುದನ್ನು ಮಹಾ ಬೋಧಕನು ಇಷ್ಟಪಡುತ್ತಾನಾ? ನಿನಗೇನು ಅನಿಸುತ್ತೆ?— ಮಹಾ ಬೋಧಕನು ಸಹ ಒಂದು ಮದುವೆ ಪಾರ್ಟಿಗೆ ಹೋಗಿದ್ದನು. ಅವನೊಂದಿಗೆ ಅವನ ಕೆಲವು ಶಿಷ್ಯರೂ ಹೋಗಿದ್ದರು. ಯೆಹೋವನು ‘ಸಂತೋಷದ ದೇವರಾಗಿರುವ’ ಕಾರಣ ಸಭ್ಯವಾಗಿರುವ ಪಾರ್ಟಿಗಳಲ್ಲಿ ನಾವು ಖುಷಿಪಡುವಾಗ ಆತನಿಗೂ ಸಂತೋಷವಾಗುತ್ತದೆ.—1 ತಿಮೊಥೆಯ 1:11; ಯೋಹಾನ 2:1-11.

ಯೆಹೋವನು ಕೆಂಪು ಸಮುದ್ರದ ನೀರನ್ನು ವಿಭಾಗಿಸಿ ಇಸ್ರಾಯೇಲ್ಯರು ಸಮುದ್ರ ದಾಟುವಂತೆ ದಾರಿಮಾಡಿಕೊಟ್ಟ ಕಥೆ 29ನೆಯ ಪುಟದಲ್ಲಿ ಇದೆ. ಆ ಕಥೆ ಓದಿದ್ದು ನಿನಗೆ ನೆನಪಿದೆಯಾ?— ಕೆಂಪು ಸಮುದ್ರವನ್ನು ದಾಟಿದ ಮೇಲೆ ಜನರು ಹಾಡಿ ನರ್ತಿಸಿ ಯೆಹೋವನಿಗೆ ಕೃತಜ್ಞತೆ ಸಲ್ಲಿಸಿದರು. ಅದೊಂದು ದೊಡ್ಡ ಪಾರ್ಟಿಯ ಹಾಗೇ ಇತ್ತು. ಜನರೆಲ್ಲರೂ ತುಂಬಾ ಸಂತೋಷದಿಂದ ಇದ್ದರು. ಅದನ್ನು ನೋಡಿ ಯೆಹೋವನು ಸಹ ಖಂಡಿತ ಸಂತೋಷಪಟ್ಟಿರಬೇಕು.—ವಿಮೋಚನಕಾಂಡ 15:1, 20, 21.

ಸುಮಾರು 40 ವರ್ಷಗಳ ನಂತರ, ಇಸ್ರಾಯೇಲ್ಯರು ಇನ್ನೊಂದು ದೊಡ್ಡ ಪಾರ್ಟಿಗೆ ಹೋದರು. ಆ ಪಾರ್ಟಿಯನ್ನು ಏರ್ಪಡಿಸಿದವರು ಯೆಹೋವನ ಆರಾಧಕರಾಗಿರಲಿಲ್ಲ. ಬೇರೆ ದೇವರುಗಳನ್ನು ಆರಾಧಿಸುತ್ತಿದ್ದ ಜನರಾಗಿದ್ದರು. ಅವರು ಅನೈತಿಕ ಸಂಬಂಧದಂಥ ದುರಾಚಾರಗಳನ್ನು ಮಾಡುತ್ತಿದ್ದರು. ಅಂಥವರ ಪಾರ್ಟಿಗೆ ಇಸ್ರಾಯೇಲ್ಯರು ಹೋಗಿದ್ದು ಸರಿಯೆಂದು ನಿನಗೆ ಅನಿಸುತ್ತದಾ?— ಅದು ಯೆಹೋವನಿಗೆ ಇಷ್ಟವಾಗಲಿಲ್ಲ. ಅವನು ಇಸ್ರಾಯೇಲ್ಯರನ್ನು ಶಿಕ್ಷಿಸಿದನು.—ಅರಣ್ಯಕಾಂಡ 25:1-9; 1 ಕೊರಿಂಥ 10:8.

ಬೈಬಲ್‌ ಎರಡು ಬರ್ತಡೇ ಪಾರ್ಟಿಗಳ ಬಗ್ಗೆ ತಿಳಿಸುತ್ತದೆ. ಅದರಲ್ಲೊಂದು ಮಹಾ ಬೋಧಕನ ಬರ್ತಡೇ ಆಗಿರಬಹುದಾ?— ಇಲ್ಲ. ಯೆಹೋವನ ಸೇವಕರಲ್ಲದವರ ಹುಟ್ಟು ಹಬ್ಬದ ಆಚರಣೆಯಾಗಿತ್ತು. ಅವುಗಳಲ್ಲಿ ಒಂದು ರಾಜ ಹೆರೋದ ಅಗ್ರಿಪ್ಪನ ಹುಟ್ಟು ಹಬ್ಬವಾಗಿತ್ತು. ಅವನು ಯೇಸು ಜೀವಿಸುತ್ತಿದ್ದ ಸಮಯದಲ್ಲಿ ಗಲಿಲಾಯದ ಉಪರಾಜನಾಗಿದ್ದನು.

ರಾಜ ಹೆರೋದನು ತುಂಬಾ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದನು. ಅವನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳನ್ನು ತನ್ನ ಹೆಂಡತಿಯನ್ನಾಗಿ ಮಾಡಿಕೊಂಡಿದ್ದನು. ಅದು ತಪ್ಪೆಂದು ದೇವರ ಸೇವಕನಾದ ಸ್ನಾನಿಕ ಯೋಹಾನನು ಹೆರೋದನಿಗೆ ಹೇಳಿದನು. ಅದು ಹೆರೋದನಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವನನ್ನು ಬಂಧಿಸಿ ಸೆರೆಮನೆಯಲ್ಲಿ ಹಾಕಿಸಿದನು.—ಲೂಕ 3:19, 20.

ಪಾಪ ಯೋಹಾನನು ಸೆರೆಮನೆಯಲ್ಲೇ ಇದ್ದನು. ಅದೊಂದು ದಿನ ರಾಜ ಹೆರೋದನ ಹುಟ್ಟು ಹಬ್ಬವಾಗಿತ್ತು. ಅಂದು ಹೆರೋದನು ದೊಡ್ಡ ಪಾರ್ಟಿಯನ್ನು ಏರ್ಪಡಿಸಿದನು. ಅದಕ್ಕೆ ಅನೇಕ ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದನು. ಅವರೆಲ್ಲರೂ ತಿಂದು ಕುಡಿದು ಮಜಾ ಮಾಡಿದರು. ಆಮೇಲೆ ಹೆರೋದ್ಯಳ ಮಗಳು ಬಂದು ಅವರಿಗೋಸ್ಕರ ನಾಟ್ಯವಾಡಿದಳು. ಎಲ್ಲರೂ ಅವಳ ನಾಟ್ಯವನ್ನು ಭೇಷ್‌! ಭೇಷ್‌! ಎಂದು ಮೆಚ್ಚಿದರು. ಖುಷಿಯಾದ ಹೆರೋದನು ಅವಳಿಗೆ ಏನಾದರೂ ಬಹುಮಾನ ಕೊಡಬೇಕೆಂದು ಇಷ್ಟಪಟ್ಟನು. ಅವನು ಆಕೆಗೆ, “ನೀನು ಏನು ಕೇಳಿದರೂ ಸರಿ, ನನ್ನ ರಾಜ್ಯದಲ್ಲಿ ಅರ್ಧದಷ್ಟನ್ನು ಕೇಳಿದರೂ ಕೊಡುತ್ತೇನೆ” ಎಂದು ವಚನಕೊಟ್ಟನು.

ಅವಳು ಏನು ಕೇಳಿದಳು? ಹಣ ಕೇಳಿದಳಾ? ಬಗೆಬಗೆಯ ಉಡುಪು ಕೇಳಿದಳಾ? ಅಥವಾ ಅರಮನೆ ಕೇಳಿದಳಾ? ಪಾಪ ಆ ಹುಡುಗಿಗೆ ಏನು ಕೇಳಬೇಕು ಅಂತನೇ ಗೊತ್ತಾಗಲಿಲ್ಲ. ಆದುದರಿಂದ ತನ್ನ ತಾಯಿಯಾದ ಹೆರೋದ್ಯಳ ಬಳಿಗೆ ಹೋಗಿ, “ನಾನೇನು ಕೇಳಲಿ?” ಅಂತ ಪ್ರಶ್ನೆ ಹಾಕಿದಳು.

ಹೆರೋದ್ಯಳು ಸಹ ಸ್ನಾನಿಕನಾದ ಯೋಹಾನನನ್ನು ತುಂಬಾ ದ್ವೇಷಿಸುತ್ತಿದ್ದಳು. ಹಾಗಾಗಿ ಅವನ ತಲೆಯನ್ನು ಕೇಳುವಂತೆ ಮಗಳಿಗೆ ಹೇಳಿಕೊಟ್ಟಳು. ಆ ಹುಡುಗಿ ರಾಜನ ಬಳಿಗೆ ಹೋಗಿ, “ಈಗಲೇ ನೀನು ನನಗೆ ಸ್ನಾನಿಕನಾದ ಯೋಹಾನನ ತಲೆಯನ್ನು ದೊಡ್ಡ ತಟ್ಟೆಯಲ್ಲಿ ತಂದುಕೊಡಬೇಕು” ಎಂದು ಹೇಳಿದಳು.

ಯೋಹಾನನನ್ನು ಕೊಲ್ಲುವುದು ರಾಜ ಹೆರೋದನಿಗೆ ಇಷ್ಟವಿರಲಿಲ್ಲ. ಯೋಹಾನನು ಒಬ್ಬ ಒಳ್ಳೇ ಮನುಷ್ಯನೆಂದು ಅವನಿಗೆ ಗೊತ್ತಿತ್ತು. ಆದರೆ ಹೆರೋದನು ಈಗಾಗಲೇ ಎಲ್ಲರ ಮುಂದೆ ಮಾತುಕೊಟ್ಟಿದ್ದನು. ಈಗ ಮನಸ್ಸನ್ನು ಬದಲಾಯಿಸುವಲ್ಲಿ ಪಾರ್ಟಿಯಲ್ಲಿದ್ದ ಇತರರು ಏನು ನೆನಸುತ್ತಾರೋ ಎಂದು ಅವನು ಅಂಜಿದನು. ಆದುದರಿಂದ ಯೋಹಾನನ ತಲೆಯನ್ನು ಕಡಿದು ತರುವಂತೆ ಒಬ್ಬ ಸೇವಕನನ್ನು ಸೆರೆಮನೆಗೆ ಕಳುಹಿಸಿದನು. ಅವನು ಕೂಡಲೇ ಯೋಹಾನನ ತಲೆಯನ್ನು ತಟ್ಟೆಯಲ್ಲಿ ತಂದು ಆ ಹುಡುಗಿಗೆ ಕೊಟ್ಟನು. ಅವಳದನ್ನು ತನ್ನ ತಾಯಿಗೆ ಕೊಟ್ಟಳು.—ಮಾರ್ಕ 6:17-29.

ಬೈಬಲಿನಲ್ಲಿ ದಾಖಲಾಗಿರುವ ಇನ್ನೊಂದು ಹುಟ್ಟು ಹಬ್ಬದ ದಿನದಲ್ಲಿ ಸಹ ಇದೇ ರೀತಿಯ ಕೆಟ್ಟ ಘಟನೆ ನಡೆದಿತ್ತು. ಆ ಹುಟ್ಟು ಹಬ್ಬ ಈಜಿಪ್ಟ್‌ ದೇಶದ ಫರೋಹ ರಾಜನದಾಗಿತ್ತು. ಆ ಪಾರ್ಟಿಯಲ್ಲಿ ಸಹ ರಾಜನು ಒಬ್ಬನ ತಲೆಯನ್ನು ಕಡಿಸಿದನು. ಆಮೇಲೆ ಅವನ ದೇಹವನ್ನು ಹಕ್ಕಿಗಳು ಬಂದು ತಿನ್ನುವಂತೆ ಮರದಲ್ಲಿ ತೂಗುಹಾಕಿಸಿದನು! (ಆದಿಕಾಂಡ 40:19-22) ಈಗ ಹೇಳು ಚಿನ್ನೂ, ದೇವರು ಆ ಎರಡೂ ಪಾರ್ಟಿಗಳನ್ನು ಇಷ್ಟಪಟ್ಟಿರುತ್ತಾನಾ? ನಿನಗೇನು ಅನಿಸುತ್ತದೆ?— ಅಂಥ ಪಾರ್ಟಿಗಳಿಗೆ ಹೋಗಲು ನೀನು ಇಷ್ಟಪಡುತ್ತಿದ್ಯಾ?—

ಹೆರೋದ ರಾಜನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಏನು ನಡೆಯಿತು?

ಈ ಘಟನೆಗಳನ್ನು ಬೈಬಲಿನಲ್ಲಿ ಬರೆಸಿಟ್ಟಿರುವುದಕ್ಕೆ ಏನೋ ಉದ್ದೇಶ ಇರಲೇಬೇಕಲ್ವಾ. ನೋಡು, ಬೈಬಲಿನಲ್ಲಿ ಎರಡು ಹುಟ್ಟು ಹಬ್ಬಗಳ ಬಗ್ಗೆ ಮಾತ್ರ ಕೊಡಲಾಗಿದೆ. ಆ ಎರಡೂ ಸಂದರ್ಭದಲ್ಲೂ ಕೆಟ್ಟ ಕಾರ್ಯಗಳು ನಡೆಯಿತು. ಹಾಗಾದರೆ, ಬರ್ತಡೇ ಪಾರ್ಟಿ ಮಾಡುವ ವಿಷಯದಲ್ಲಿ ದೇವರು ನಮಗೆ ಏನು ಹೇಳುತ್ತಿದ್ದಾನೆ? ನೀನೇನು ಹೇಳುತ್ತಿ, ಬರ್ತಡೇ ಪಾರ್ಟಿ ಮಾಡೋದನ್ನು ದೇವರು ಇಷ್ಟಪಡುತ್ತಾನಾ?—

ಇವತ್ತು ಪಾರ್ಟಿಗಳಲ್ಲಿ ಜನರು ಯಾರ ತಲೆಯನ್ನೂ ಕಡಿಯುವುದಿಲ್ಲ ನಿಜ. ಆದರೆ ಬರ್ತಡೇ ಪಾರ್ಟಿ ಮಾಡುವ ಆಚಾರವು ಸತ್ಯ ದೇವರನ್ನು ಆರಾಧಿಸದಂಥ ಜನರಿಂದ ಪ್ರಾರಂಭವಾಯಿತು. ಬೈಬಲಿನಲ್ಲಿ ತಿಳಿಸಲಾಗಿರುವ ಬರ್ತಡೇ ಪಾರ್ಟಿಗಳ ವಿಷಯವಾಗಿ ಒಂದು ಪುಸ್ತಕವು ಹೀಗೆ ಹೇಳುತ್ತದೆ: ‘(ಫರೋಹ ಹಾಗೂ ಹೆರೋದನಂಥ) ಪಾಪಿಗಳು ಮಾತ್ರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿ ಸಂತೋಷಪಡುತ್ತಾರೆ.’ (ದ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ) ಆ ಪಾಪಿಗಳಂತಾಗಲು ನಾವು ಇಷ್ಟಪಡುತ್ತೇವಾ?—

ಈಗ ಮಹಾ ಬೋಧಕನ ಬಗ್ಗೆ ನೋಡೋಣ. ಅವನು ತನ್ನ ಹುಟ್ಟು ಹಬ್ಬವನ್ನು ಆಚರಿಸಿದನಾ?— ಇಲ್ಲ. ಯೇಸುವಿನ ಹುಟ್ಟು ಹಬ್ಬದ ಕುರಿತು ಬೈಬಲಿನಲ್ಲಿ ಎಲ್ಲಿಯೂ ತಿಳಿಸಲಾಗಿಲ್ಲ. ನಿಜ ಹೇಳಬೇಕೆಂದರೆ, ಯೇಸುವಿನ ಶಿಷ್ಯರ್ಯಾರೂ ಅವನ ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ಅಂದ ಮೇಲೆ ಯೇಸುವಿನ ಹುಟ್ಟು ಹಬ್ಬವನ್ನು ಡಿಸೆಂಬರ್‌ 25ರಂದು ಆಚರಿಸುವ ಆಯ್ಕೆಯನ್ನು ಜನರು ಏಕೆ ಮಾಡಿದರು?—

ಇನ್ನೊಂದು ಪುಸ್ತಕ ಅದಕ್ಕೆ ಉತ್ತರ ಕೊಡುತ್ತದೆ. ಅದು ಹೀಗೆ ಹೇಳುತ್ತದೆ: “ರೋಮ್‌ ದೇಶದ ಜನರು ಈಗಾಗಲೇ ಆ ತಾರೀಖಿನಂದು ಸ್ಯಾಟರ್ನ್‌ ದೇವನ ಹಬ್ಬವನ್ನು ಅಂದರೆ ಸೂರ್ಯನ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು.” (ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ) ಅದೇ ತಾರೀಖನ್ನು ಯೇಸುವಿನ ಹುಟ್ಟು ಹಬ್ಬದ ದಿನವಾಗಿ ಆಚರಿಸಲು ಜನರು ಆಯ್ಕೆ ಮಾಡಿದರು. ನಿಜ ಹೇಳಬೇಕಾದರೆ ಅದು ಸುಳ್ಳು ದೇವರುಗಳ ಆರಾಧಕರ ಹಬ್ಬದ ದಿನವಾಗಿತ್ತು.

ಅದ್ಸರಿ, ಯೇಸು ಡಿಸೆಂಬರ್‌ ತಿಂಗಳಿನಲ್ಲಿ ಹುಟ್ಟಲಿಲ್ಲ ಅಂತ ಹೇಳಲು ಕಾರಣವೇನೆಂದು ನಿನಗೆ ಗೊತ್ತಾ?— ಏಕೆಂದರೆ ಬೈಬಲ್‌ ಹೇಳುವ ಪ್ರಕಾರ ಯೇಸು ಹುಟ್ಟಿದ ರಾತ್ರಿಯಲ್ಲಿ ಕುರುಬರು ಹೊಲಗಳಲ್ಲಿ ಕುರಿ ಮೇಯಿಸುತ್ತಿದ್ದರು. (ಲೂಕ 2:8-12) ಆದರೆ ಡಿಸೆಂಬರ್‌ ತಿಂಗಳಿನಲ್ಲಿ ಆ ಊರಿನಲ್ಲಿ ಮಳೆ ಹಾಗೂ ಚಳಿ ಇರುತ್ತೆ. ಮೈ ಕೊರೆಯುವ ಚಳಿಯಲ್ಲಿ ಕುರುಬರು ಮನೆಯ ಹೊರಗೆ ಹೊಲದಲ್ಲಿ ಇರಲು ಖಂಡಿತ ಸಾಧ್ಯವಿರಲಿಲ್ಲ.

ಯೇಸು ಡಿಸೆಂಬರ್‌ 25ರಂದು ಜನಿಸಲಿಲ್ಲವೆಂದು ಹೇಗೆ ಹೇಳಬಹುದು?

ಕ್ರಿಸ್‌ಮಸ್‌ ಯೇಸುವಿನ ಹುಟ್ಟು ಹಬ್ಬವಲ್ಲ ಅನ್ನೋ ಸತ್ಯ ಅನೇಕರಿಗೆ ಗೊತ್ತಿದೆ. ಸುಳ್ಳು ದೇವರುಗಳ ಆರಾಧಕರು ಯೆಹೋವ ದೇವರಿಗೆ ಇಷ್ಟವಾಗದ ಆಚರಣೆಯನ್ನು ಆ ದಿನ ಮಾಡುತ್ತಿದ್ದರು ಅನ್ನೋದು ಸಹ ಅವರಿಗೆ ಗೊತ್ತಿದೆ. ಆದರೂ ಅವರು ಕ್ರಿಸ್‌ಮಸ್‌ ಹಬ್ಬ ಮಾಡುತ್ತಾರೆ. ಯೆಹೋವ ದೇವರಿಗೆ ಅದು ಇಷ್ಟವಾಗುತ್ತಾ ಅನ್ನೋದಕ್ಕಿಂತ ಪಾರ್ಟಿ ಮಾಡೋದೇ ಅವರಿಗೆ ತುಂಬಾ ಮುಖ್ಯ. ಆದರೆ ನಾವು ಯೆಹೋವ ದೇವರನ್ನು ಖುಷಿಪಡಿಸಲು ಇಚ್ಛಿಸುತ್ತೇವೆ ಅಲ್ವಾ?—

ಆದುದರಿಂದ ನಾವು ಪಾರ್ಟಿಗಳನ್ನು ಮಾಡುವಾಗ ಯೆಹೋವನಿಗೆ ಇಷ್ಟವಾಗುವಂತಹ ರೀತಿಯಲ್ಲಿ ಏರ್ಪಡಿಸುವುದು ತುಂಬಾ ಪ್ರಾಮುಖ್ಯ. ನಾವು ಒಂದು ವಿಶೇಷ ದಿನಕ್ಕಾಗಿ ಕಾಯುವ ಅಗತ್ಯವಿಲ್ಲ. ವರ್ಷದ ಯಾವುದೇ ಸಮಯದಲ್ಲಿ ಅದನ್ನು ಏರ್ಪಡಿಸಬಹುದು. ರುಚಿ ರುಚಿಯಾದ ತಿಂಡಿಗಳನ್ನು ತಿನ್ನಬಹುದು, ಆಟೋಟ ವಿನೋದಗಳಲ್ಲಿ ಖುಷಿಪಡಬಹುದು. ಅದು ನಿನಗೆ ಇಷ್ಟನಾ?— ಹಾಗಾದರೆ, ನೀನು ಅಪ್ಪಅಮ್ಮನತ್ತಿರ ಮಾತಾಡಿ ಅವರ ನೆರವಿನೊಂದಿಗೆ ಒಂದು ಪಾರ್ಟಿಯನ್ನು ಏರ್ಪಡಿಸಬಹುದು. ಮಜಾನೂ ಮಾಡಬಹುದು, ಅಲ್ವಾ?— ಆದರೆ ಒಂದು ಪಾರ್ಟಿಗಾಗಿ ಏರ್ಪಾಡು ಮಾಡುವ ಮುಂಚೆ, ಅದು ದೇವರಿಗೆ ಇಷ್ಟವಾಗುವಂತಹ ರೀತಿಯಲ್ಲಿದೆ ಅಂತ ನೋಡಿಕೊಳ್ಳೋದು ಮುಖ್ಯ.

ದೇವರಿಗೆ ಇಷ್ಟವಾಗುವಂತಹ ರೀತಿಯಲ್ಲಿ ಪಾರ್ಟಿಗಳಿರುವಂತೆ ನಾವು ಹೇಗೆ ನೋಡಿಕೊಳ್ಳಬಲ್ಲೆವು?

ಯಾವಾಗಲೂ ದೇವರಿಗೆ ಮೆಚ್ಚಿಗೆಯಾಗುವ ವಿಷಯಗಳನ್ನೇ ಮಾಡಬೇಕೆಂದು ಈ ವಚನಗಳು ತಿಳಿಸುತ್ತವೆ. ಅವುಗಳನ್ನು ಓದೋಣ, ಜ್ಞಾನೋಕ್ತಿ 12:2; ಯೋಹಾನ 8:29; ರೋಮನ್ನರಿಗೆ 12:2 ಮತ್ತು 1 ಯೋಹಾನ 3:22.