ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 38

ಯೇಸುವನ್ನು ನಾವೇಕೆ ಪ್ರೀತಿಸಬೇಕು?

ಯೇಸುವನ್ನು ನಾವೇಕೆ ಪ್ರೀತಿಸಬೇಕು?

ನೀನು ಪ್ರಯಾಣಿಸುತ್ತಿರುವ ದೋಣಿ ನಡು ನೀರಿನಲ್ಲಿ ಮುಳುಗುತ್ತಿದೆ ಅಂತಿಟ್ಟುಕೋ. ನಿನ್ನನ್ನು ಕಾಪಾಡಲು ಯಾರಾದರೂ ಧಾವಿಸಿ ಬರೋದನ್ನು ನೀನು ಆಶೀಸುತ್ತೀಯಾ ತಾನೆ?— ಅವರು ತಮ್ಮ ಪ್ರಾಣವನ್ನೇ ನೀಡಿ ನಿನ್ನನ್ನು ಕಾಪಾಡಿರುವುದಾದರೆ ನಿನಗೆ ಹೇಗನಿಸುತ್ತದೆ?— ಯೇಸು ಕ್ರಿಸ್ತನು ಇದನ್ನೇ ಮಾಡಿದನು. ನಾವು ಕಳೆದ ಅಧ್ಯಾಯದಲ್ಲಿ ಕಲಿತಂತೆ ನಮ್ಮೆಲ್ಲರನ್ನು ರಕ್ಷಿಸಲಿಕ್ಕಾಗಿ ಅವನು ತನ್ನ ಜೀವವನ್ನೇ ವಿಮೋಚನಾ ಮೌಲ್ಯವಾಗಿ ಅರ್ಪಿಸಿದನು.

ದೋಣಿ ಮುಳುಗುವಂಥ ಸಂದರ್ಭಗಳಲ್ಲಿ ಯೇಸು ಬಂದು ನಮ್ಮನ್ನು ಕಾಪಾಡುತ್ತಾನೆ ಅಂತ ನಾವಿಂದು ನಿರೀಕ್ಷಿಸುವುದಿಲ್ಲ. ಹಾಗಾದರೆ, ಯೇಸುವಿನಿಂದ ನಮಗೆ ಯಾವ ರಕ್ಷಣೆ ಸಿಗುತ್ತದೆ? ನಿನಗೆ ಗೊತ್ತಿದೆಯಾ?— ಯೇಸು ನಮ್ಮನ್ನು ಪಾಪ ಮತ್ತು ಮರಣದಿಂದ ಬಿಡುಗಡೆಗೊಳಿಸಿ ರಕ್ಷಿಸುತ್ತಾನೆ. ತುಂಬಾ ಕೆಟ್ಟ ಕೆಲಸಗಳನ್ನು ಮಾಡಿದ ಜನರಿಗಾಗಿಯೂ ಯೇಸು ಜೀವ ಅರ್ಪಿಸಿದನು. ನೀನಾಗಿದ್ದರೆ ಅಂಥ ಜನರನ್ನು ರಕ್ಷಿಸಲು ನಿನ್ನ ಜೀವವನ್ನು ಅಪಾಯಕ್ಕೆ ಒಡ್ಡುತ್ತಿದ್ದಿಯಾ?—

ಬೈಬಲ್‌ ಏನು ಹೇಳುತ್ತದೆ ಅಂತ ಗಮನಿಸು: ‘ಒಬ್ಬ ನೀತಿವಂತನಿಗೋಸ್ಕರ ಯಾರಾದರೂ ಜೀವಕೊಡುವುದು ತುಂಬಾ ಅಪರೂಪ. ಒಳ್ಳೆಯ ಮನುಷ್ಯನಿಗಾಗಿ ಯಾರಾದರೂ ಸಾಯಲು ಧೈರ್ಯಮಾಡಿದರೂ ಮಾಡಬಹುದು.’ ಆದರೆ, ಯೇಸು “ಭಕ್ತಿಹೀನ ಜನರಿಗೋಸ್ಕರ” ಪ್ರಾಣಕೊಟ್ಟನು. ಅಂಥವರಲ್ಲಿ ದೇವರ ಸೇವೆಯನ್ನೇ ಮಾಡದವರು ಕೂಡ ಇದ್ದಾರೆ. ಬೈಬಲ್‌ ಮತ್ತೂ ಹೇಳುವುದು: ‘ನಾವು ಇನ್ನೂ ಪಾಪಿಗಳಾಗಿದ್ದಾಗಲೇ [ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾಗಲೇ] ಕ್ರಿಸ್ತನು ನಮಗೋಸ್ಕರ ಜೀವ ಕೊಟ್ಟನು.’—ರೋಮನ್ನರಿಗೆ 5:6-8.

ಹಿಂದೊಮ್ಮೆ ಅರಿವಿಲ್ಲದೆ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದ ಅಪೊಸ್ತಲನು ಯಾರೆಂದು ನಿನಗೆ ನೆನಪಿದೆಯಾ?— ಅಪೊಸ್ತಲ ಪೌಲನಲ್ವಾ. ಅವನು ಏನೆಂದು ಬರೆದನು ಅಂತ ನೋಡು: ‘ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು. ಆ ಪಾಪಿಗಳಲ್ಲಿ ನಾನೇ ಪ್ರಮುಖನು.’ ತಾನು ಈ ಹಿಂದೆ ಬುದ್ಧಿಹೀನನಾಗಿ ಕೆಟ್ಟತನವನ್ನು ನಡೆಸುತ್ತಾ ಇದ್ದನೆಂದು ಪೌಲನು ಒಪ್ಪಿಕೊಂಡನು.—1 ತಿಮೊಥೆಯ 1:15; ತೀತ 3:3.

ಇಂಥ ಕೆಟ್ಟ ಜನರಿಗಾಗಿ ಪ್ರಾಣವನ್ನು ಅರ್ಪಿಸಲು ತನ್ನ ಒಬ್ಬನೇ ಮಗನನ್ನು ದೇವರು ಕಳುಹಿಸಿಕೊಟ್ಟನು. ಮನುಷ್ಯರ ಮೇಲೆ ದೇವರಿಗೆ ಎಷ್ಟು ಪ್ರೀತಿ ಇದ್ದಿರಬೇಕಲ್ವಾ. ಆ ಕುರಿತು ಬೈಬಲಿನಲ್ಲಿ ಯೋಹಾನ 3ನೇ ಅಧ್ಯಾಯ 16ನೇ ವಚನವನ್ನು ತೆರೆದು ಓದೋಣ. ಅದು ತಿಳಿಸುವುದು: “ದೇವರು ಲೋಕವನ್ನು [ಅಂದರೆ ಮಾನವರನ್ನು] ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”

ನಮಗೋಸ್ಕರ ಪ್ರಾಣ ಕೊಡುವ ಮುಂಚೆ ಯೇಸು ಯಾವೆಲ್ಲ ಕಷ್ಟಗಳನ್ನು ಅನುಭವಿಸಿದನು?

ತಂದೆಯಂತೆ ಯೇಸು ಸಹ ತನಗೆ ಮಾನವರ ಮೇಲೆ ಅಪಾರ ಪ್ರೀತಿಯಿದೆ ಎಂದು ತೋರಿಸಿಕೊಟ್ಟನು. ಬಂಧನಕ್ಕೊಳಗಾದ ರಾತ್ರಿ ಯೇಸು ಏನೆಲ್ಲಾ ಕಷ್ಟಗಳನ್ನು ಅನುಭವಿಸಿದನೆಂದು ನಾವು ಅಧ್ಯಾಯ 30ರಲ್ಲಿ ಓದಿದ ನೆನಪು ನಿನಗಿರಬಹುದು. ಆ ರಾತ್ರಿ ಅವನನ್ನು ಮಹಾ ಯಾಜಕನಾದ ಕಾಯಫನ ಮನೆಗೆ ಕರೆದೊಯ್ದು ವಿಚಾರಣೆ ಮಾಡಿದರು. ಅವನ ವಿರುದ್ಧ ಸುಳ್ಳು ಸಾಕ್ಷಿಗಳನ್ನು ಹೇಳಿಸಿದರು. ಜನರು ಮುಷ್ಟಿಯಿಂದ ಗುದ್ದಿದರು. ಅದೇ ಸಮಯ ಪೇತ್ರನು ಕೂಡ ಯೇಸು ಯಾರೋ ತನಗೆ ಗೊತ್ತಿಲ್ಲವೆಂದು ಹೇಳಿ ಕೈಕೊಟ್ಟನು. ಇದೆಲ್ಲಾ ನಡೆಯುತ್ತಿರುವಾಗ ನಾವು ಕಾಯಫನ ಮನೆಯಂಗಳದಲ್ಲಿ ನಿಂತಿದ್ದೇವೆಂದು ನೆನಸಿಕೋ. ಯೇಸುವಿಗೆ ಇನ್ನೇನು ಮಾಡಲಿದ್ದಾರೆಂದು ನೋಡೋಣ.

ಕತ್ತಲು ಕರಗಿ ಬೆಳಗಾಗುತ್ತಿದೆ. ಯೇಸು ರಾತ್ರಿಯಿಡೀ ಎಚ್ಚರವಾಗಿಯೇ ಇದ್ದನು. ಯಾಕೆಂದರೆ ರಾತ್ರಿಯೆಲ್ಲ ಅವನ ವಿರುದ್ಧ ವಿಚಾರಣೆ ನಡೆಸಿದ್ದರು. ಆದರೆ ರಾತ್ರಿ ಮಾಡಿದ ವಿಚಾರಣೆ ಕಾನೂನಿಗನುಸಾರ ಸರಿಯಾಗಿರದ ಕಾರಣ ಕೂಡಲೇ ಮತ್ತೊಂದು ವಿಚಾರಣೆಗೆ ಸಿದ್ಧತೆ ನಡಿಸುತ್ತಾರೆ. ಅದಕ್ಕಾಗಿ ಬೆಳಗಾಗುತ್ತಿದಂತೆ ಯಾಜಕರೆಲ್ಲಾ ಹಿರೀಸಭೆಯಲ್ಲಿ ಅಂದರೆ ಯೆಹೂದಿ ಮುಖ್ಯ ನ್ಯಾಯಾಲಯದಲ್ಲಿ ಒಟ್ಟುಗೂಡಿ ವಿಚಾರಣೆ ಆರಂಭಿಸುತ್ತಾರೆ. ಯೇಸು ದೇವರ ವಿರುದ್ಧ ಅಪರಾಧ ಗೈದಿದ್ದಾನೆಂದು ಪುನಃ ಸುಳ್ಳಾರೋಪ ಹೊರಿಸುತ್ತಾರೆ.

ಹಿರೀಸಭೆಯ ವಿಚಾರಣೆ ನಂತರ ಯಾಜಕರು ಯೇಸುವಿನ ಕೈಗಳನ್ನು ಬಂಧಿಸಿ ರೋಮನ್‌ ಗವರ್ನರ್‌ ಪಿಲಾತನ ಮುಂದೆ ಹಾಜರುಪಡಿಸುತ್ತಾರೆ. ‘ಯೇಸು ಸರಕಾರದ ವಿರುದ್ಧ ಪಿತೂರಿಮಾಡುತ್ತಿದ್ದಾನೆ. ಅವನಿಗೆ ಮರಣ ಶಿಕ್ಷೆಯಾಗಬೇಕು’ ಎಂದು ಆರೋಪ ಹೊರಿಸುತ್ತಾರೆ. ಯಾಜಕರ ಅರೋಪ ಸುಳ್ಳೆಂದು ಪಿಲಾತನಿಗೆ ತಿಳಿದುಬರುತ್ತೆ. ಹಾಗಾಗಿ ಪಿಲಾತನು, ‘ಈ ಮನುಷ್ಯನಲ್ಲಿ ನನಗೆ ಯಾವ ತಪ್ಪೂ ಕಾಣುತ್ತಿಲ್ಲ. ನಾನು ಇವನನ್ನು ಬಿಡುಗಡೆಮಾಡುತ್ತೇನೆ’ ಎಂದನ್ನುತ್ತಾನೆ. ಆದರೆ ಯಾಜಕರು ಮತ್ತು ಜನರು, ‘ಇಲ್ಲ! ಅವನನ್ನು ಕೊಲ್ಲಿಸು ಕೊಲ್ಲಿಸು!’ ಎಂದು ಅರಚುತ್ತಾರೆ.

ಪಿಲಾತನಿಗೆ ಯೇಸುವನ್ನು ಕೊಲ್ಲಿಸಲು ಇಷ್ಟವಿಲ್ಲ. ಆದ್ದರಿಂದ ಅವನನ್ನು ಬಿಡುಗಡೆಮಾಡುತ್ತೇನೆಂದು ಪುನಃ ಜನರಿಗೆ ಹೇಳುತ್ತಾನೆ. ಅದಕ್ಕೆ ಒಪ್ಪದಂತೆ ಯಾಜಕರು ಜನರಿಗೆ ಪ್ರಚೋದನೆ ನೀಡುತ್ತಾರೆ. ಉಗ್ರಗೊಂಡ ಜನರು, ‘ಅವನನ್ನು ಬಿಡುಗಡೆಮಾಡಿದರೆ ನೀನು ಸಹ ಸರಕಾರಕ್ಕೆ ವಿರುದ್ಧವಾಗಿದ್ದೀ! ಅವನನ್ನು ಕೊಲ್ಲಿಸು!’ ಅಂತ ಗಟ್ಟಿಯಾಗಿ ಕಿರಿಚಿ ಗದ್ದಲವೆಬ್ಬಿಸುತ್ತಾರೆ. ಪಿಲಾತನು ಏನು ಮಾಡುತ್ತಾನೆ ಗೊತ್ತಾ?—

ಜನರ ಒತ್ತಾಯಕ್ಕೆ ಮಣಿಯುತ್ತಾನೆ. ಮೊದಲು ಯೇಸುವಿಗೆ ಚಡಿಯೇಟು ಕೊಟ್ಟು ಶಿಕ್ಷಿಸುತ್ತಾನೆ. ನಂತರ ಮರಣದಂಡನೆ ವಿಧಿಸಿ ಸೈನಿಕರ ಕೈಗೆ ಒಪ್ಪಿಸುತ್ತಾನೆ. ಅವರು ಯೇಸುವಿಗೆ ಮುಳ್ಳಿನ ಕಿರೀಟ ತೊಡಿಸುತ್ತಾರೆ. ಅವನ ಮುಂದೆ ಮೊಣಕಾಲೂರಿ ಗೇಲಿಮಾಡುತ್ತಾರೆ. ಅದಲ್ಲದೆ ಭಾರೀ ತೂಕದ ಮರದ ಕಂಬವೊಂದನ್ನು ಅವನ ಹೆಗಲ ಮೇಲೆ ಹೊರಿಸಿ ಪಟ್ಟಣದ ಹೊರಗಿರುವ ಕಪಾಲ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಬಂದಾಗ ಅವನ ಕೈಗಳನ್ನು ಮತ್ತು ಕಾಲುಗಳನ್ನು ಕಂಬಕ್ಕೆ ಸೇರಿಸಿ ದೊಡ್ಡ ದೊಡ್ಡ ಮೊಳೆಗಳಿಂದ ಜಡಿಯುತ್ತಾರೆ. ಬಳಿಕ ಆ ಕಂಬವನ್ನು ನೆಟ್ಟಗೆ ನಿಲ್ಲಿಸಿ ನೆಲದಲ್ಲಿ ಗಟ್ಟಿಮಾಡುತ್ತಾರೆ. ಯೇಸುವಿಗೆ ಭಯಂಕರ ನೋವಾಗುತ್ತಿದೆ. ಅವನ ದೇಹ ಕಂಬದಲ್ಲಿ ತೂಗುತ್ತಿದೆ. ಚಡಿಯೇಟು, ಕಿರೀಟದ ಮುಳ್ಳು ಇತ್ಯಾದಿಯಿಂದಾಗಿ ಅವನ ಮೈಯಿಂದ ರಕ್ತ ಸುರಿಯುತ್ತಿದೆ. ಆ ವೇದನೆ ಊಹಿಸಲಸಾಧ್ಯ.

ಯೇಸುವಿನ ಪ್ರಾಣ ತಕ್ಷಣವೇ ಹೋಗುವುದಿಲ್ಲ. ಕಂಬದ ಮೇಲೆ ನೋವನ್ನು ಅನುಭವಿಸುತ್ತಿದ್ದಾನೆ. ಮುಖ್ಯ ಯಾಜಕರು ಅವನನ್ನು ನೋಡಿ ಅಪಹಾಸ್ಯಮಾಡುತ್ತಾರೆ. ಹಾದುಹೋಗುವವರೆಲ್ಲಾ, ‘ನೀನು ದೇವರ ಮಗನಾಗಿರುವಲ್ಲಿ ಈ ಕಂಬದಿಂದ ಕೆಳಗಿಳಿದು ಬಾ!’ ಅಂತ ತಮಾಷೆ ಮಾಡುತ್ತಾರೆ. ತಾನು ಭೂಮಿಗೆ ಬಂದಿರುವ ಉದ್ದೇಶ ಏನಂತ ಯೇಸುವಿಗೆ ತಿಳಿದಿದೆ. ಎಲ್ಲಾ ಮಾನವರು ನಿತ್ಯಜೀವ ಪಡೆಯಬೇಕಾದರೆ ತನ್ನ ಪರಿಪೂರ್ಣ ಜೀವವನ್ನು ತ್ಯಾಗಮಾಡಲೇ ಬೇಕೆಂದು ಅವನಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ನೋವನ್ನು ಸಹಿಸಿಕೊಂಡು ಆ ದಿನ ಮಧ್ಯಾಹ್ನ ಸುಮಾರು ಮೂರು ಗಂಟೆ ಹೊತ್ತಿಗೆ ಗಟ್ಟಿಯಾಗಿ ತನ್ನ ತಂದೆಯನ್ನು ಕೂಗಿ ಪ್ರಾಣ ಬಿಡುತ್ತಾನೆ.—ಮತ್ತಾಯ 26:36–27:50; ಮಾರ್ಕ 15:1; ಲೂಕ 22:39–23:46; ಯೋಹಾನ 18:1–19:30.

ಯೇಸು ಆದಾಮನಿಗಿಂತ ಎಷ್ಟು ಭಿನ್ನನಾಗಿದ್ದಾನೆ ಅಲ್ವಾ! ಆದಾಮನಿಗೆ ದೇವರ ಮೇಲೆ ಪ್ರೀತಿಯಿರಲಿಲ್ಲ. ದೇವರ ಮಾತನ್ನು ಕೇಳಲಿಲ್ಲ. ಆದಾಮನಿಗೆ ನಮ್ಮ ಮೇಲೂ ಪ್ರೀತಿಯಿರಲಿಲ್ಲ. ಅವನು ಮಾಡಿದ ಪಾಪದಿಂದಾಗಿ ನಾವೆಲ್ಲರೂ ಪಾಪಿಗಳಾಗಿ ಹುಟ್ಟುತ್ತಿದ್ದೇವೆ. ಆದರೆ ಯೇಸುವಿಗೆ ದೇವರ ಮೇಲೂ ನಮ್ಮ ಮೇಲೂ ತುಂಬಾ ಪ್ರೀತಿಯಿದೆ. ಅವನು ಸದಾ ದೇವರಿಗೆ ವಿಧೇಯನಾಗಿದ್ದನು. ಆದಾಮನು ಇಡೀ ಮಾನವ ಕುಲಕ್ಕೆ ದಾಟಿಸಿದ ಪಾಪ ಮತ್ತು ಮರಣವನ್ನು ಅಳಿಸಿಹಾಕಲು ಯೇಸು ತನ್ನ ಜೀವವನ್ನೂ ತ್ಯಾಗಮಾಡಿದನು.

ಯೇಸುವನ್ನು ಪ್ರೀತಿಸುತ್ತೇವೆ ಎಂದು ತೋರಿಸಲು ನಾವು ಏನು ಮಾಡಬಹುದು?

ಯೇಸು ಮಾಡಿದ ಈ ಮಹಾ ಕಾರ್ಯವನ್ನು ನೀನು ಗಣ್ಯಮಾಡುತ್ತೀಯಾ?— ತನ್ನ ಮಗನನ್ನು ನಮಗಾಗಿ ಕೊಟ್ಟದ್ದಕ್ಕೆ ಪ್ರಾರ್ಥನೆಯಲ್ಲಿ ದೇವರಿಗೆ ಧನ್ಯವಾದ ಹೇಳುತ್ತೀಯಾ?— ಕ್ರಿಸ್ತನು ಮಾಡಿದ ಮಹಾ ಕಾರ್ಯವನ್ನು ಅಪೊಸ್ತಲ ಪೌಲನು ಗಣ್ಯಮಾಡಿದನು. ದೇವರ ಕುಮಾರನು “ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ ಒಪ್ಪಿಸಿಬಿಟ್ಟನು” ಎಂದು ಪೌಲನು ಬರೆದನು. (ಗಲಾತ್ಯ 2:20) ಯೇಸು ನಿನಗಾಗಿಯೂ ನನಗಾಗಿಯೂ ಸಾವನ್ನಪ್ಪಿದ್ದಾನೆ. ನಾವು ನಿತ್ಯಜೀವ ಪಡೆಯಲೆಂದು ತನ್ನ ಪರಿಪೂರ್ಣ ಜೀವವನ್ನು ಅರ್ಪಿಸಿದ್ದಾನೆ. ಯೇಸುವನ್ನು ಮನಸ್ಸಾರೆ ಪ್ರೀತಿಸಲು ನಮಗೆ ಇದಕ್ಕಿಂತ ದೊಡ್ಡ ಕಾರಣ ಬೇಕಿಲ್ಲ.

ಕೊರಿಂಥ ಪಟ್ಟಣದ ಕ್ರೈಸ್ತರಿಗೆ ಅಪೊಸ್ತಲ ಪೌಲನು, ‘ಕ್ರಿಸ್ತನ ಮೇಲಿನ ಪ್ರೀತಿ ನಮ್ಮನ್ನು ಕ್ರಿಯೆಗೈಯುವಂತೆ ಮಾಡುತ್ತದೆ’ ಎಂದು ಬರೆದನು. ಯಾವ ಕ್ರಿಯೆಗಳನ್ನು ಮಾಡುವಂತೆ ಕ್ರಿಸ್ತನ ಪ್ರೀತಿ ಪ್ರೋತ್ಸಾಹಿಸುತ್ತದೆ? ನಿನಗೇನಾದರೂ ಗೊತ್ತಾ?— ಪೌಲನು ಏನು ಹೇಳಿದನೆಂದು ಗಮನಿಸು: “ಕ್ರಿಸ್ತನು ಎಲ್ಲರಿಗೋಸ್ಕರ ಸತ್ತದ್ದರಿಂದ ಅವರು ಅವನಿಗೋಸ್ಕರ ಜೀವಿಸುವಂತಾಯಿತು. ಅವರು ತಮ್ಮನ್ನು ಸಂತೋಷಪಡಿಸಿಕೊಳ್ಳಲು ಜೀವಿಸಬಾರದು.”2 ಕೊರಿಂಥ 5:14, 15, ನ್ಯೂ ಲೈಫ್‌ ವರ್ಷನ್‌ ಬೈಬಲ್‌.

ಕ್ರಿಸ್ತನನ್ನು ಸಂತೋಷಪಡಿಸುವ ಜೀವನ ನಡೆಸುತ್ತಿದ್ದಿಯಾ ಅಂತ ತೋರಿಸುವ ಕೆಲವು ವಿಧಗಳು ಯಾವುವು ಅಂತ ಹೇಳುತ್ತಿಯಾ?— ಒಂದು ವಿಧ, ಯೇಸುವಿನ ಕುರಿತು ನೀನು ಕಲಿತಿರುವ ವಿಷಯಗಳನ್ನು ಇತರರಿಗೆ ಹೇಳುವುದಾಗಿದೆ. ಅಥವಾ ನಿನ್ನ ಕೋಣೆಯಲ್ಲಿ ನೀನೊಬ್ಬನೇ ಇದ್ದಿಯಾ ಅಂತಿಟ್ಟುಕೋ. ಅಲ್ಲಿ ನೀನು ಏನು ಮಾಡಿದರೂ ನಿನ್ನ ಅಪ್ಪಅಮ್ಮನಿಗಾಗಲಿ ಇತರರಿಗಾಗಲಿ ಗೊತ್ತಾಗುವುದಿಲ್ಲ. ಅಂಥ ಸಮಯದಲ್ಲಿ ಯೇಸುವಿಗೆ ಇಷ್ಟವಾಗದ ಟಿ.ವಿ. ಕಾರ್ಯಕ್ರಮಗಳನ್ನು ಅಥವಾ ಇಂಟರ್‌ನೆಟ್‌ನಲ್ಲಿ ಬರುವ ಕೆಟ್ಟ ಕೆಟ್ಟ ವಿಷಯಗಳನ್ನು ನೀನು ನೋಡುತ್ತೀಯಾ?— ಯೇಸು ಈಗ ಜೀವಂತವಾಗಿದ್ದಾನೆ ಮತ್ತು ನಾವು ಮಾಡುವುದನ್ನೆಲ್ಲಾ ನೋಡಶಕ್ತನು ಅಂತ ಎಂದೂ ಮರೆಯಬೇಡ ಚಿನ್ನಾ.

ನಾವು ಏನು ಮಾಡುತ್ತೇವೋ ನೋಡುತ್ತೇವೋ ಅದು ಯಾರಿಗೆ ತಿಳಿದಿರುತ್ತದೆ?

ನಾವು ಯೇಸುವನ್ನು ಪ್ರೀತಿಸಬೇಕಾದ ಇನ್ನೊಂದು ಕಾರಣವೇನೆಂದರೆ ಯೆಹೋವನನ್ನು ಅನುಕರಿಸಲು ನಾವು ಇಷ್ಟಪಡುತ್ತೇವೆ. “ತಂದೆಯು ನನ್ನನ್ನು ಪ್ರೀತಿಸುತ್ತಾನೆ” ಎಂದು ಯೇಸು ಹೇಳಿದನು. ದೇವರು ಯೇಸುವನ್ನು ಏಕೆ ಪ್ರೀತಿಸುತ್ತಾನೆ? ನಾವೇಕೆ ಯೇಸುವನ್ನು ಪ್ರೀತಿಸಬೇಕು?— ಏಕೆಂದರೆ ಯೇಸು ದೇವರ ಚಿತ್ತವನ್ನು ಪೂರೈಸಲಿಕ್ಕಾಗಿ ಸಾವನ್ನಪ್ಪಲೂ ಸಿದ್ಧನಿದ್ದನು. (ಯೋಹಾನ 10:17) ಆದುದರಿಂದ ಬೈಬಲಿನ ಈ ಮಾತಿನ ಪ್ರಕಾರ ನಾವೆಲ್ಲರೂ ನಡೆದುಕೊಳ್ಳೋಣ: ‘ಪ್ರಿಯ ಮಕ್ಕಳಂತೆ ದೇವರನ್ನು ಅನುಕರಿಸುವವರಾಗಿರಿ. ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಿಮಗೋಸ್ಕರ ತನ್ನನ್ನೇ ಒಪ್ಪಿಸಿಕೊಟ್ಟ ಪ್ರಕಾರವೇ ನೀವೂ ಪ್ರೀತಿಯಲ್ಲಿ ನಡೆಯುತ್ತಾ ಇರಿ.’—ಎಫೆಸ 5:1, 2.

ಯೇಸುವಿನ ಮೇಲೆ ಅಭಿಮಾನ ಬೆಳೆಸಿಕೊಳ್ಳಲು ಹಾಗೂ ನಮಗೋಸ್ಕರ ಅವನು ಮಾಡಿದ ವಿಷಯಗಳಿಗಾಗಿ ಗಣ್ಯತೆಯನ್ನು ಹೆಚ್ಚಿಸಲು, ಯೋಹಾನ 3:35; 15:9, 10 ಮತ್ತು 1 ಯೋಹಾನ 5:11, 12 ಓದೋಣ.