ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 41

ದೇವರಿಗೆ ಸಂತೋಷ ತರುವ ಚಿಣ್ಣರು

ದೇವರಿಗೆ ಸಂತೋಷ ತರುವ ಚಿಣ್ಣರು

ಯೆಹೋವನ ಹೃದಯವನ್ನು ತುಂಬಾ ಸಂತೋಷಪಡಿಸಿದ ಹುಡುಗ ಯಾರು ಅಂತ ಗೊತ್ತಾ?— ಬೇರಾರೂ ಅಲ್ಲ ಆತನ ಮಗನಾದ ಯೇಸುವೇ. ಯೇಸು ಹೇಗೆ ಯೆಹೋವನನ್ನು ಸಂತೋಷಪಡಿಸಿದನು ಅಂತ ನಾವೀಗ ನೋಡೋಣ.

ಯೇಸುವಿದ್ದ ಊರಿಂದ ಯೆರೂಸಲೇಮಿಗೆ ಮೂರು ದಿನಗಳ ಪ್ರಯಾಣ. ಯೆರೂಸಲೇಮಿನಲ್ಲಿ ಯೆಹೋವನ ವೈಭವದ ಆಲಯವಿತ್ತು. ಆ ಆಲಯವನ್ನು ಯೇಸು “ನನ್ನ ತಂದೆಯ ಮನೆ” ಎಂದು ಹೇಳುತ್ತಿದ್ದನು. ಯೇಸುವಿನ ಮನೆಯವರೆಲ್ಲಾ ಪ್ರತಿವರ್ಷ ಅಲ್ಲಿಗೆ ಪಸ್ಕಹಬ್ಬಕ್ಕಾಗಿ ಹೋಗಿಬರುತ್ತಿದ್ದರು.

ಹೀಗೆ ಒಂದು ವರ್ಷ ಅವರೆಲ್ಲರೂ ಹಬ್ಬವನ್ನು ಆಚರಿಸಿ ಹಿಂದಿರುಗುತ್ತಿದ್ದರು. ಯೇಸುವಿಗಾಗ 12 ವರ್ಷ. ರಾತ್ರಿ ವಿಶ್ರಮಿಸಲಿಕ್ಕಾಗಿ ಒಂದು ಸ್ಥಳದಲ್ಲಿ ಉಳುಕೊಂಡಾಗ ಯೇಸು ತಮ್ಮೊಂದಿಗೆ ಇಲ್ಲದಿರುವುದು ಮರಿಯ ಯೋಸೇಫರ ಗಮನಕ್ಕೆ ಬಂತು. ಹುಡುಕಿದಾಗ ಬಂಧುಮಿತ್ರರ ಹತ್ತಿರವೂ ಇರಲಿಲ್ಲ. ಹಾಗಾಗಿ ಮರಿಯ ಯೋಸೇಫರು ಯೇಸುವನ್ನು ಹುಡುಕುತ್ತಾ ಯೆರೂಸಲೇಮಿಗೆ ವಾಪಸ್‌ ಬಂದರು. ನಿನಗೇನನಿಸುತ್ತೆ, ಯೇಸು ಎಲ್ಲಿದ್ದಿರಬಹುದು?—

ಯೇಸು ದೇವಾಲಯದಲ್ಲಿ ಇರುವುದು ಅವರ ಕಣ್ಣಿಗೆ ಬಿತ್ತು. ಅಲ್ಲವನು ಬೋಧಕರ ಉಪದೇಶಗಳನ್ನು ಆಲಿಸುತ್ತಾ, ಪ್ರಶ್ನೆಗಳನ್ನು ಕೇಳುತ್ತಾ ಇದ್ದನು. ಅಷ್ಟೇ ಅಲ್ಲ ಪುಟ್ಟೂ, ಬೋಧಕರೇ ಪ್ರಶ್ನೆ ಕೇಳಿ ಅವನಿಂದ ತಿಳಿದುಕೊಳ್ಳುತ್ತಿದ್ದರು. ಅವರ ಪ್ರಶ್ನೆಗೆಲ್ಲಾ ಅವನು ಸರಾಗವಾಗಿ ಉತ್ತರಿಸುತ್ತಿದ್ದನು. ಅವನ ಉತ್ತರಗಳನ್ನು ಕೇಳಿ ಅಲ್ಲಿದ್ದವರೆಲ್ಲಾ ದಂಗಾಗಿ ಹೋಗಿದ್ದರು. ತನ್ನ ಮಗನ ವಿಷಯದಲ್ಲಿ ದೇವರು ಬಹಳ ಸಂತೋಷಪಟ್ಟಿದ್ದು ಏಕೆಂದು ನಿನಗೀಗ ಅರ್ಥವಾಯಿತಾ?—

ಯೇಸು ಅಲ್ಲಿರುವುದನ್ನು ನೋಡಿದಾಗ ಉಫ್‌! ಮರಿಯ ಯೋಸೇಫರಿಗೆ ಸಮಾಧಾನವಾಯಿತು. ಯೇಸು ಯಾವುದೇ ಅಳುಕು ಆತಂಕವಿಲ್ಲದೆ ಇದ್ದನು. ಏಕೆಂದರೆ, ಯೆಹೋವನ ಆಲಯಕ್ಕಿಂತ ಒಳ್ಳೆಯ ಸ್ಥಳ ಬೇರೊಂದಿರಲಿಲ್ಲ ಅಂತ ಅವನಿಗೆ ಗೊತ್ತಿತ್ತು. ಅದಕ್ಕೆ ಅವನು, “ನಾನು ನನ್ನ ತಂದೆಯ ಮನೆಯಲ್ಲಿರಬೇಕು ಎಂಬುದು ನಿಮಗೆ ತಿಳಿದಿರಲಿಲ್ಲವೊ?” ಎಂದು ಗಾಬರಿಗೊಂಡ ಅಪ್ಪಅಮ್ಮನಿಗೆ ಕೇಳಿದನು. ದೇವರ ಮನೆಯಾಗಿದ್ದ ಆ ಆಲಯದಲ್ಲಿ ಇರಲು ಅವನು ತುಂಬಾ ತುಂಬಾ ಇಷ್ಟಪಟ್ಟನು.

ಮರಿಯ ಯೋಸೇಫರು ಅಲ್ಲಿಂದ ಯೇಸುವನ್ನು ಕರೆದುಕೊಂಡು ತಮ್ಮ ಊರಾದ ನಜರೇತಿಗೆ ಹೋದರು. ಯೇಸು ಅಪ್ಪಅಮ್ಮನೊಂದಿಗೆ ಹೇಗೆ ವರ್ತಿಸಿದ್ದಿರಬಹುದು? ನಿನಗೇನು ಅನಿಸುತ್ತೆ?— ಬೈಬಲ್‌ ತಿಳಿಸುತ್ತೆ ಅವನು “ಅವರಿಗೆ ಅಧೀನನಾಗಿ ಮುಂದುವರಿದನು.” ಅಂದರೆ ಏನರ್ಥ?— ಅಂದರೆ ಅವನು ಅವರಿಗೆ ಸದಾ ವಿಧೇಯನಾಗಿದ್ದನು. ಅಪ್ಪಅಮ್ಮ ಹೇಳಿದ ಎಲ್ಲಾ ವಿಷಯವನ್ನು ಅವನು ಮಾಡುತ್ತಿದ್ದನು. ಬಾವಿಯಿಂದ ನೀರು ಸೇದಿ ತರುವಂತ ಮನೆಗೆಲಸವನ್ನೂ ಮಾಡಿಕೊಡುತ್ತಿದ್ದನು.—ಲೂಕ 2:41-52.

ಬಾಲಕ ಯೇಸು ಹೇಗೆ ದೇವರನ್ನು ಸಂತೋಷಪಡಿಸಿದನು?

ಇಲ್ಲಿ ನಾವೊಂದು ವಿಷಯ ಗಮನಿಸಬೇಕು. ಯೇಸು ಪರಿಪೂರ್ಣನಾಗಿದ್ದನು. ಆದರೂ ಅಪರಿಪೂರ್ಣರಾಗಿದ್ದ ತನ್ನ ತಂದೆತಾಯಿಗೆ ವಿಧೇಯನಾಗಿ ನಡೆದುಕೊಂಡನು. ಇದು ದೇವರನ್ನು ಸಂತೋಷಪಡಿಸಿತಾ?— ಖಂಡಿತ. ಏಕೆಂದರೆ “ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ” ಅಂತ ಮಕ್ಕಳಿಗೆ ದೇವರ ವಾಕ್ಯ ಬುದ್ಧಿವಾದ ನೀಡುತ್ತದೆ. (ಎಫೆಸ 6:1) ಯೇಸುವಿನ ಹಾಗೆ ಅಪ್ಪಅಮ್ಮನಿಗೆ ನೀನೂ ವಿಧೇಯನಾಗುವುದಾದರೆ ದೇವರಿಗೆ ಸಂತೋಷವಾಗುತ್ತೆ.

ಇನ್ನೊಂದು ವಿಧದಲ್ಲೂ ನೀನು ದೇವರನ್ನು ಸಂತೋಷಪಡಿಸಬಹುದು. ದೇವರ ಬಗ್ಗೆ ನೀನು ಜನರಿಗೆ ಸಾರಬಹುದು. ಆದರೆ ಓದೋ ವಯಸ್ಸಿನಲ್ಲಿ ಚಿಕ್ಕ ಮಕ್ಕಳೆಲ್ಲಾ ಸಾರೋ ಕೆಲಸಮಾಡಬಾರದು ಅಂತ ಕೆಲವರು ಅಸಮಾಧಾನಗೊಳ್ಳಬಹುದು. ಅಂಥವರು ಒಮ್ಮೆ ಚಿಕ್ಕ ಹುಡುಗರನ್ನು ತಡೆದಾಗ ಯೇಸು, ‘ದೇವರು ಚಿಕ್ಕ ಮಕ್ಕಳ ಬಾಯಿಂದ ಸ್ತುತಿಯನ್ನು ಹೇಳಿಸುವನು ಎಂದು ನೀವು ಶಾಸ್ತ್ರಗ್ರಂಥದಲ್ಲಿ ಓದಲಿಲ್ಲವೇ?’ ಅಂತ ಅವರನ್ನು ಕೇಳಿದನು. (ಮತ್ತಾಯ 21:16) ನೋಡಿದ್ಯಾ, ಯೆಹೋವನ ಬಗ್ಗೆ, ಆತನ ಮಹಿಮೆಯ ಬಗ್ಗೆ ತಿಳಿಸಲು ವಯಸ್ಸಿನ ಮಿತಿ ಇಲ್ಲ. ಎಲ್ಲರೂ ಈ ಕೆಲಸವನ್ನು ಮಾಡಬಹುದು. ಮನಸ್ಸೊಂದಿರಬೇಕಷ್ಟೇ. ಸಾರುವಾಗ ನಾವು ದೇವರನ್ನು ಸಂತೋಷಪಡಿಸುವೆವು.

ದೇವರ ಬಗ್ಗೆ ಸಾರಬೇಕಾದರೆ ತುಂಬಾ ವಿಷಯ ಕಲಿಯಬೇಕಲ್ವಾ. ನಾವದನ್ನು ಎಲ್ಲಿ ಕಲಿಯಬಹುದು?— ಮನೆಯಲ್ಲೇ ಬೈಬಲ್‌ ಅಧ್ಯಯನ ಮಾಡಿ ಕಲಿಯಬಹುದು. ಆದರೆ ಅದಕ್ಕಿಂತ ಹೆಚ್ಚನ್ನು ದೇವಜನರು ಅಧ್ಯಯನಕ್ಕಾಗಿ ಕೂಡಿಬರುವ ಸ್ಥಳದಲ್ಲಿ ಕಲಿಯಬಹುದು. ದೇವಜನರು ಯಾರಂತ ನಮಗೆ ಹೇಗೆ ಗೊತ್ತಾಗುತ್ತೆ?—

ಆರಾಧನಾ ಸ್ಥಳಗಳಲ್ಲಿ ಜನರು ಸಾಮಾನ್ಯವಾಗಿ ಏನು ಮಾಡುತ್ತಾರೆ? ದೇವರ ವಾಕ್ಯವಾದ ಬೈಬಲಿನಲ್ಲಿರುವ ವಿಷಯವನ್ನೇ ಕಲಿಸುತ್ತಾರಾ? ಬೈಬಲಿನಿಂದ ಓದಿ ಚರ್ಚಿಸುತ್ತಾರಾ? ದೇವರ ಮಾತನ್ನು ಕೇಳುವುದು ನಾವು ಬೈಬಲಿನಿಂದಲೇ ಅಲ್ವಾ?— ಕ್ರೈಸ್ತ ಕೂಟ ಅಂದಮೇಲೆ ಅಲ್ಲಿ ದೇವರ ವಾಕ್ಯವನ್ನು ಕಲಿಸಬೇಕಲ್ವಾ. ಅದನ್ನೇ ಆಲಿಸಲು ನಾವು ನಿರೀಕ್ಷಿಸುತ್ತೇವೆ ಅಲ್ವಾ?— ಆದರೆ ಬೈಬಲ್‌ ಕಲಿಸುವ ರೀತಿಯಲ್ಲಿ ಜೀವಿಸಬೇಕಾಗಿಲ್ಲ ಅಂತ ನಿನಗೆ ಹೇಳಿದರೆ, ಅವರನ್ನು ದೇವಜನರೆಂದು ಹೇಳಬಹುದಾ?—

ದೇವಜನರು ಯಾರೆಂದು ತಿಳಿದುಕೊಳ್ಳಲು ಇನ್ನೊಂದು ವಿಷಯನೂ ಸಹಾಯಮಾಡುತ್ತದೆ. ದೇವಜನರನ್ನು ಬೈಬಲ್‌ ‘ದೇವರ ಹೆಸರಿಗಾಗಿರುವ ಒಂದು ಪ್ರಜೆ’ ಎಂದು ಕರೆಯುತ್ತದೆ. (ಅಪೊಸ್ತಲರ ಕಾರ್ಯಗಳು 15:14) ಸತ್ಯದೇವರ ಹೆಸರು ಯೆಹೋವ. ಹಾಗಾಗಿ ನೀವು ಆರಾಧಿಸುವ ದೇವರ ಹೆಸರು ಯೆಹೋವನಾ ಅಂತ ನಾವು ಜನರನ್ನು ಕೇಳಬಹುದು. ಇಲ್ಲ ಅಂತ ಹೇಳುವಲ್ಲಿ ಅವರು ದೇವಜನರಲ್ಲ ಎಂದು ನಮಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ, ದೇವಜನರು ಬೇರೆಯವರೊಂದಿಗೆ ದೇವರ ರಾಜ್ಯದ ಕುರಿತು ಮಾತಾಡುತ್ತಾರೆ. ಅವರು ದೇವರ ಆಜ್ಞೆಗಳನ್ನು ಪಾಲಿಸಿ ಆತನೆಡೆಗಿರುವ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.—1 ಯೋಹಾನ 5:3.

ಈ ಎಲ್ಲಾ ವಿಷಯಗಳನ್ನು ಚಾಚೂತಪ್ಪದೇ ಮಾಡುವಂಥ ಜನರೇ ದೇವಜನರು. ಅವರೊಂದಿಗೆ ನೀನು ಆರಾಧನಾ ಕೂಟಗಳಿಗಾಗಿ ಕೂಡಿಬರಬೇಕು. ಕೂಟಗಳಲ್ಲಿ ನೀನು ಗಮನಕೊಟ್ಟು ಆಲಿಸಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಆಲಯದಲ್ಲಿ ಯೇಸು ಮಾಡಿದ್ದು ಅದನ್ನೇ. ಇದನ್ನೆಲ್ಲ ಮಾಡುವಾಗ ನೀನು ಸಹ ಯೇಸುವಿನಂತೆ ಯೆಹೋವನನ್ನು ಸಂತೋಷಪಡಿಸಸಾಧ್ಯ.

ದೇವರನ್ನು ಸಂತೋಷಪಡಿಸಿದ ಬೇರೆ ಮಕ್ಕಳ ಕುರಿತು ಬೈಬಲಿನಲ್ಲಿ ಓದಿದ್ದು ನಿನಗೆ ನೆನಪಿದೆಯಾ?— ಅವರಲ್ಲಿ ತಿಮೊಥೆಯ ಒಬ್ಬನು. ಅವನ ತಂದೆ ಯೆಹೋವನ ಆರಾಧಕನಾಗಿರಲಿಲ್ಲ. ಆದರೆ ತಾಯಿ ಯೂನಿಕೆ ಹಾಗೂ ಅಜ್ಜಿ ಲೋವಿ ದೇವಜನರಾಗಿದ್ದರು. ಅಜ್ಜಿ ಹಾಗೂ ತಾಯಿ ಯೆಹೋವನ ಬಗ್ಗೆ ಕಲಿಸುತ್ತಿದ್ದ ವಿಷಯಗಳನ್ನು ಪುಟ್ಟ ತಿಮೊಥೆಯನು ಗಮನಕೊಟ್ಟು ಆಲಿಸುತ್ತಿದ್ದನು.

ತನ್ನ ತಂದೆ ಯೆಹೋವನ ಆರಾಧಕನಾಗಿರದಿದ್ದರೂ ತಿಮೊಥೆಯನಲ್ಲಿ ಯಾವ ಹಂಬಲವಿತ್ತು?

ಹೀಗೆ ತಿಮೊಥೆಯನು ಚಿಕ್ಕಂದಿನಿಂದಲೇ ದೇವಭಕ್ತಿಯಲ್ಲಿ ಬೆಳೆದನು. ಅವನು ದೊಡ್ಡವನಾದಾಗ ಅಪೊಸ್ತಲ ಪೌಲನು ಆ ಊರಿಗೆ ಭೇಟಿಕೊಟ್ಟನು. ಯೆಹೋವನ ಸೇವೆಮಾಡಲು ತಿಮೊಥೆಯನಿಗಿದ್ದ ಹಂಬಲ ಹುಮ್ಮಸ್ಸನ್ನು ಗಮನಿಸಿದನು. ಹಾಗಾಗಿ ದೇವರ ಸೇವೆಯನ್ನು ಮತ್ತಷ್ಟು ಮಾಡಲು ಉತ್ತೇಜಿಸುತ್ತಾ ಸಾರುವ ಕೆಲಸದಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ಆಹ್ವಾನಕೊಟ್ಟನು. ಅವರಿಬ್ಬರು ದೂರ ದೂರದ ಊರುಗಳಿಗೆ ಪ್ರಯಾಣಿಸುತ್ತಾ ದೇವರ ರಾಜ್ಯದ ಬಗ್ಗೆ ಹಾಗೂ ಯೇಸುವಿನ ಬಗ್ಗೆ ಸುವಾರ್ತೆ ಸಾರಿದರು.—ಅಪೊಸ್ತಲರ ಕಾರ್ಯಗಳು 16:1-5; 2 ತಿಮೊಥೆಯ 1:5; 3:14, 15.

ದೇವರನ್ನು ಸಂತೋಷಪಡಿಸಿದ ಹುಡುಗರ ಬಗ್ಗೆ ಮಾತ್ರ ಬೈಬಲ್‌ ತಿಳಿಸುತ್ತದಾ?— ಇಲ್ಲ. ಒಬ್ಬ ಇಸ್ರಾಯೇಲ್ಯ ಹುಡುಗಿಯ ಬಗ್ಗೆಯೂ ಇದೆ. ಅವಳಿದ್ದ ಸಮಯದಲ್ಲಿ ಅರಾಮ್ಯ ದೇಶದವರಿಗೂ ಇಸ್ರಾಯೇಲ್ಯ ದೇಶದವರಿಗೂ ಪರಸ್ಪರ ದ್ವೇಷವಿತ್ತು. ಒಮ್ಮೆ ಅರಾಮ್ಯರು ಯುದ್ಧದಲ್ಲಿ ಇಸ್ರಾಯೇಲ್ಯರನ್ನು ಸೋಲಿಸಿ ಕೆಲವರನ್ನು ಸೆರೆಯಾಳಾಗಿ ಒಯ್ದರು. ಪಾಪ ಈ ಚಿಕ್ಕ ಹುಡುಗಿಯನ್ನೂ ಸೆರೆಯಾಳಾಗಿ ಒಯ್ದು ನಾಮಾನ ಎಂಬ ಸೇನಾಪತಿಯ ಮನೆಯಲ್ಲಿ ಕೆಲಸಕ್ಕಿಟ್ಟರು. ಅವಳು ನಾಮಾನನ ಪತ್ನಿಯ ದಾಸಿಯಾದಳು.

ನಾಮಾನನಿಗೆ ಕುಷ್ಠರೋಗವಿತ್ತು. ವೈದ್ಯರಿಂದ ಅದನ್ನು ಗುಣಪಡಿಸಲು ಆಗಿರಲಿಲ್ಲ. ದೇವರ ಪ್ರವಾದಿಯ ಹತ್ತಿರ ಹೋದರೆ ನಾಮಾನನು ಗುಣಮುಖನಾಗಬಲ್ಲನೆಂದು ಆ ಹುಡುಗಿಗೆ ಭರವಸೆಯಿತ್ತು. ಆದರೆ ನಾಮಾನ ಮತ್ತು ಅವನ ಹೆಂಡತಿ ಯೆಹೋವನ ಆರಾಧಕರಾಗಿರಲಿಲ್ಲ. ಪ್ರವಾದಿಯ ಹತ್ತಿರ ಹೋಗುವಂತೆ ಆ ಹುಡುಗಿ ಅವರಿಗೆ ಹೇಳಿದಳಾ? ನೀನಾಗಿದ್ದರೆ ಹೇಳಿರುತ್ತಿದ್ಯಾ?—

ಈ ಇಸ್ರಾಯೇಲ್ಯ ಹುಡುಗಿ ದೇವರನ್ನು ಹೇಗೆ ಸಂತೋಷಪಡಿಸಿದಳು?

ಆ ಚಿಕ್ಕ ಹುಡುಗಿ ಧೈರ್ಯದಿಂದ ಹೇಳಿದಳು. ‘ನಮ್ಮ ದಣಿ ಇಸ್ರಾಯೇಲಿನಲ್ಲಿರುವ ಯೆಹೋವನ ಪ್ರವಾದಿಯ ಬಳಿ ಹೋಗೋದಾದರೆ ಕುಷ್ಠರೋಗ ಖಂಡಿತ ವಾಸಿಯಾಗುತ್ತೆ’ ಅಂತ ಯಜಮಾನಿಗೆ ಹೇಳಿದಳು. ನಾಮಾನನು ಆ ಹುಡುಗಿ ಹೇಳಿದಂತೆ ಯೆಹೋವನ ಪ್ರವಾದಿಯ ಬಳಿ ಹೋದನು. ಅಲ್ಲಿ ಪ್ರವಾದಿ ಹೇಳಿದಂತೆ ಮಾಡಿದಾಗ ಕುಷ್ಠರೋಗ ಗುಣವಾಯಿತು! ಅವನು ಸತ್ಯ ದೇವರನ್ನು ಆರಾಧಿಸತೊಡಗಿದನು.—2 ಅರಸು 5:1-15.

ಜಾಣಮರಿ, ಆ ಪುಟ್ಟ ಬಾಲಕಿಯಂತೆ ಯೆಹೋವನ ಬಗ್ಗೆ ಇತರರಿಗೆ ಕಲಿಸಲು ನಿನಗೆ ಇಷ್ಟವಿದೆಯಾ? ಯೆಹೋವನು ನಮಗೆ ತರುವ ಆಶೀರ್ವಾದಗಳ ಬಗ್ಗೆ ತಿಳಿದುಕೊಳ್ಳುವಂತೆ ಜನರಿಗೆ ಸಹಾಯ ಮಾಡುತ್ತೀಯಾ?— ಯಾರಿಗೆಲ್ಲಾ ಸಹಾಯಮಾಡುತ್ತಿ?— ಮೊದಮೊದಲು ನಿನ್ನ ಸಹಾಯದ ಅಗತ್ಯವಿಲ್ಲವೆಂದು ಅವರಿಗನಿಸಬಹುದು. ಆದರೆ ಯೆಹೋವನು ಮಾಡುವ ಒಳ್ಳೇ ವಿಷಯಗಳ ಕುರಿತು ನೀನು ಮಾತಾಡುವಾಗ ಅವರು ಆಲಿಸಲೂಬಹುದು. ಹೀಗೆ ಇತರರಿಗೆ ಸಹಾಯ ಮಾಡುವಾಗ ಖಂಡಿತ ಯೆಹೋವನು ಸಂತೋಷಪಡುತ್ತಾನೆ.

ಯೆಹೋವನ ಸೇವೆಯನ್ನು ಪುಟಾಣಿ ಮಕ್ಕಳು ಸವಿದು ಆನಂದಿಸುವಂತೆ ಪ್ರೋತ್ಸಾಹಿಸುವ ವಚನಗಳು ಇಲ್ಲಿವೆ: ಕೀರ್ತನೆ 122:1; 148:12, 13; ಪ್ರಸಂಗಿ 12:1; 1 ತಿಮೊಥೆಯ 4:12 ಮತ್ತು ಇಬ್ರಿಯ 10:23-25.