ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 44

ನಾವು ಯಾರೊಂದಿಗೆ ಗೆಳೆತನ ಬೆಳೆಸಬೇಕು?

ನಾವು ಯಾರೊಂದಿಗೆ ಗೆಳೆತನ ಬೆಳೆಸಬೇಕು?

ನಾವೆಲ್ಲರೂ ಗೆಳೆಯರೊಂದಿಗೆ ಮಾತಾಡಲು, ಸುತ್ತಾಡಲು ಇಷ್ಟಪಡುತ್ತೇವಲ್ವಾ. ಆದರೆ ಒಳ್ಳೇ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಮುಖ್ಯ. ಯಾರು ನಮ್ಮ ಅತ್ಯಾಪ್ತ ಸ್ನೇಹಿತನಾಗಿರಬಲ್ಲನು?— ಹೌದು, ಯೆಹೋವ ದೇವರು.

ಮನುಷ್ಯರಾದ ನಾವು ದೇವರ ಸ್ನೇಹಿತರಾಗಲು ಸಾಧ್ಯನಾ?— ಅನೇಕಾನೇಕ ವರ್ಷಗಳ ಹಿಂದೆ ಜೀವಿಸಿದ್ದ ಅಬ್ರಹಾಮನೆಂಬ ವ್ಯಕ್ತಿ ‘ಯೆಹೋವನ ಸ್ನೇಹಿತನಾಗಿದ್ದ’ ಅಂತ ಬೈಬಲ್‌ ತಿಳಿಸುತ್ತದೆ. (ಯಾಕೋಬ 2:23) ಅವನು ದೇವರ ಸ್ನೇಹಿತನಾಗಿದ್ದು ಹೇಗೆ ಗೊತ್ತಾ?— ಬೈಬಲ್‌ ಹೇಳುತ್ತದೆ ಅವನು ದೇವರಿಗೆ ತುಂಬಾ ವಿಧೇಯನಾಗಿ ನಡೆದುಕೊಂಡನು. ದೇವರು ಹೇಳಿದ ಕೆಲಸ ಅವನಿಗೆ ಬಲು ಕಷ್ಟವಾಗಿದ್ದರೂ ಎರಡು ಮಾತಿಲ್ಲದೆ ಅವನು ವಿಧೇಯನಾದನು. ನಾವು ಯೆಹೋವನ ಸ್ನೇಹಿತರಾಗಬೇಕಾದರೆ ಅಬ್ರಹಾಮ ಮಾಡಿದಂತೆ ದೇವರಿಗೆ ಇಷ್ಟವಾಗುವ ಕೆಲಸಗಳನ್ನೇ ಮಾಡಬೇಕು. ಮಹಾ ಬೋಧಕ ಯೇಸು ಯಾವಾಗಲೂ ಅದನ್ನೇ ಮಾಡಿದನಲ್ವಾ.—ಆದಿಕಾಂಡ 22:1-14; ಯೋಹಾನ 8:28, 29; ಇಬ್ರಿಯ 11:8, 17-19.

ಅಬ್ರಹಾಮನು ‘ಯೆಹೋವನ ಸ್ನೇಹಿತನಾಗಿದ್ದು’ ಹೇಗೆ?

ಯೇಸು, “ನಾನು ಆಜ್ಞಾಪಿಸುತ್ತಿರುವುದನ್ನು ನೀವು ಮಾಡುವುದಾದರೆ ನೀವು ನನ್ನ ಸ್ನೇಹಿತರು” ಅಂತ ಅಪೊಸ್ತಲರಿಗೆ ಹೇಳಿದನು. (ಯೋಹಾನ 15:14) ಯೇಸು ಏನೇ ಹೇಳಲಿ, ಆಜ್ಞಾಪಿಸಲಿ ಅದೆಲ್ಲವೂ ಯೆಹೋವನಿಂದ ಕಲಿತುಕೊಂಡದ್ದಾಗಿತ್ತು. ಹಾಗಾಗಿ ಯಾರು ದೇವರ ಚಿತ್ತದಂತೆ ಮಾಡುತ್ತಾರೋ ಅವರೇ ತನ್ನ ಸ್ನೇಹಿತರೆಂದು ಯೇಸು ಇಲ್ಲಿ ಹೇಳುತ್ತಿದ್ದನು. ಹೌದು, ಯೇಸುವಿನ ಸ್ನೇಹಿತರೆಲ್ಲರೂ ದೇವರನ್ನು ಪ್ರೀತಿಸುವ ಜನರಾಗಿದ್ದರು.

ಮಹಾ ಬೋಧಕನ ಅತ್ಯಾಪ್ತ ಸ್ನೇಹಿತರಲ್ಲಿ ಕೆಲವರು ಅಪೊಸ್ತಲರಾಗಿದ್ದರು. ಅವರ ಚಿತ್ರಗಳನ್ನು 75ನೇ ಪುಟದಲ್ಲಿ ಕೊಡಲಾಗಿದೆ. ಅವರು ಯೇಸುವಿನ ಜೊತೆ ಪ್ರಯಾಣ ಮಾಡುತ್ತಿದ್ದರು. ಸುವಾರ್ತೆ ಸಾರುತ್ತಿದ್ದರು. ಯೇಸು ಸಹ ಅವರೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದನು. ಅವರು ಒಟ್ಟಿಗೆ ಊಟಮಾಡುತ್ತಿದ್ದರು. ದೇವರ ಕುರಿತು ಮಾತಾಡುತ್ತಿದ್ದರು. ಬೇರೆ ಕೆಲಸಗಳನ್ನೂ ಒಟ್ಟಿಗೆ ಮಾಡುತ್ತಿದ್ದರು. ಅಪೊಸ್ತಲರಲ್ಲದೆ ಯೇಸುವಿಗೆ ಬೇರೆ ಸ್ನೇಹಿತರೂ ಇದ್ದರು. ಅವರ ಮನೆಗಳಿಗೂ ಅವನು ಹೋಗುತ್ತಿದ್ದನು. ಅವರೊಟ್ಟಿಗೆ ಊಟ ವಿನೋದದಲ್ಲೂ ಆನಂದಿಸುತ್ತಿದ್ದನು.

ಹೀಗೆ ಯೇಸುವಿಗೆ ಆಪ್ತವಾಗಿದ್ದ ಒಂದು ಕುಟುಂಬ ಯೆರೂಸಲೇಮಿನ ಪಕ್ಕದಲ್ಲಿದ್ದ ಬೇಥಾನ್ಯ ಎಂಬ ಚಿಕ್ಕ ಊರಿನಲ್ಲಿ ವಾಸವಾಗಿತ್ತು. ಆ ಕುಟುಂಬ ಯಾವುದು ಅಂತ ನಿನಗೆ ನೆನಪಿದೆಯಾ?— ಮರಿಯ, ಮಾರ್ಥ ಹಾಗೂ ಅವರ ತಮ್ಮ ಲಾಜರನ ಪುಟ್ಟ ಕುಟುಂಬ. ಲಾಜರನು ಯೇಸುವಿನ ಮಿತ್ರನಾಗಿದ್ದನು ಅಂತ ನಿನಗೆ ನೆನಪಿರಬಹುದು. (ಯೋಹಾನ 11:1, 5, 11) ಯೇಸುವಿಗೆ ಯಾಕೆ ಆ ಕುಟುಂಬದ ಮೇಲೆ ಅಷ್ಟೊಂದು ಪ್ರೀತಿಯಿತ್ತೆಂದರೆ, ಅವರೆಲ್ಲರೂ ಯೆಹೋವನನ್ನು ಪ್ರೀತಿಸುತ್ತಿದ್ದರು, ಆತನ ಸೇವೆಮಾಡುತ್ತಿದ್ದರು. ಹಾಗಾಗಿ ಆ ಕುಟುಂಬದೊಂದಿಗೆ ಇರಲು ಯೇಸು ಇಷ್ಟಪಡುತ್ತಿದ್ದನು.

ಯೆರೂಸಲೇಮಿಗೆ ಹೋಗುತ್ತಿದ್ದಾಗಲೆಲ್ಲಾ ಯೇಸು ಈ ಕುಟುಂಬದೊಂದಿಗೆ ಏಕೆ ಉಳಿದುಕೊಳ್ಳುತ್ತಿದ್ದನು? ಇವರ ಹೆಸರುಗಳು ನಿನಗೆ ಗೊತ್ತಾ?

ಇದರರ್ಥ ದೇವರ ಸೇವೆ ಮಾಡದ ಜನರ ಮೇಲೆ ಯೇಸುವಿಗೆ ಪ್ರೀತಿಯಿರಲಿಲ್ಲ ಅಂತನಾ? ಇಲ್ಲ. ಅವನು ಅವರನ್ನೂ ಪ್ರೀತಿಸುತ್ತಿದ್ದನು. ಅವರ ಮನೆಗಳಿಗೆ ಹೋಗುತ್ತಿದ್ದನು. ಅಲ್ಲಿ ಊಟ ಮಾಡುತ್ತಿದ್ದನು. ಅದಕ್ಕೆ ಕೆಲವರು ಯೇಸುವನ್ನು “ತೆರಿಗೆ ವಸೂಲಿಗಾರರ ಮತ್ತು ಪಾಪಿಗಳ ಸ್ನೇಹಿತ” ಅಂತ ಕರೆಯುತ್ತಿದ್ದರು. (ಮತ್ತಾಯ 11:19) ಅಂಥ ಜನರ ಕೆಟ್ಟ ಕಾರ್ಯಗಳನ್ನು ಪ್ರೋತ್ಸಾಹಿಸಲಿಕ್ಕಾಗಿ ಯೇಸು ಅವರ ಮನೆಗಳಿಗೆ ಭೇಟಿನೀಡಿರಲಿಲ್ಲ. ಯೆಹೋವನ ಕುರಿತು ಬೋಧಿಸಲಿಕ್ಕಾಗಿ ಹೋದನು. ಕೆಟ್ಟ ಮಾರ್ಗಗಳನ್ನು ಬಿಟ್ಟು ದೇವರ ಸೇವಕರಾಗುವಂತೆ ಅವರಿಗೆ ಸಹಾಯಮಾಡಲು ಪ್ರಯತ್ನಿಸಿದನು.

ಜಕ್ಕಾಯನು ಈ ಮರವನ್ನು ಹತ್ತಿರುವುದೇಕೆ?

ಯೆರಿಕೋ ಪಟ್ಟಣದಲ್ಲಿ ನಡೆದ ಒಂದು ಸಂಗತಿ ಇದಕ್ಕೊಂದು ಉದಾಹರಣೆಯಾಗಿದೆ. ಒಂದು ದಿನ ಯೇಸು ಈ ಪಟ್ಟಣದ ಮಾರ್ಗವಾಗಿ ಯೆರೂಸಲೇಮಿಗೆ ಹೋಗುತ್ತಿದ್ದನು. ಅಲ್ಲಿದ್ದ ಜನರ ಗುಂಪಿನಲ್ಲಿ ಜಕ್ಕಾಯ ಎಂಬ ಒಬ್ಬ ಮನುಷ್ಯನೂ ಇದ್ದನು. ಅವನು ಯೇಸುವನ್ನು ನೋಡಲು ಬಯಸಿದನು. ಆದರೆ ಕುಳ್ಳನಾಗಿದ್ದ ಕಾರಣ ಆ ದೊಡ್ಡ ಗುಂಪಿನಲ್ಲಿ ಯೇಸುವನ್ನು ನೋಡಲಾರದೆ ಹೋದನು. ಆದರೆ ಅವನು ಏನು ಮಾಡಿದನು ಗೊತ್ತಾ? ಎಲ್ಲರಿಗಿಂತಲೂ ಮುಂದೆ ಓಡಿಹೋಗಿ ದಾರಿ ಬದಿಯಲ್ಲಿದ್ದ ಮರ ಹತ್ತಿ ಯೇಸು ಬರುವುದನ್ನು ಕಾಯತೊಡಗಿದನು.

ಯೇಸು ಆ ಮರದ ಹತ್ತಿರ ಬಂದು ನಿಂತು ಜಕ್ಕಾಯನನ್ನು ನೋಡಿ, ‘ಬೇಗನೆ ಕೆಳಗಿಳಿದು ಬಾ. ಇಂದು ನಿನ್ನ ಮನೆಗೆ ನಾನು ಬರುತ್ತೀನಿ’ ಎಂದು ಹೇಳಿದನು. ಶ್ರೀಮಂತನಾಗಿದ್ದ ಜಕ್ಕಾಯನು ಜನರಿಂದ ಅನ್ಯಾಯವಾಗಿ ಹಣ ದೋಚುತ್ತಿದ್ದನು. ಅಂಥವನ ಮನೆಗೆ ಯೇಸು ಹೋಗಲು ಏಕೆ ಇಷ್ಟಪಟ್ಟನು?—

ದೇವರ ಕುರಿತು ಕಲಿಸಲಿಕ್ಕಾಗಿ ಅಲ್ಲಿಗೆ ಹೋದನೇ ವಿನಾ ಅವನ ಜೀವನ ರೀತಿ ನೋಡಿಯಲ್ಲ. ತನ್ನನ್ನು ನೋಡಲು ಅವನು ಪಟ್ಟ ಕಷ್ಟ ಸಾಹಸವನ್ನು ಯೇಸು ಗಮನಿಸಿದ್ದನು. ಹಾಗಾಗಿ, ತಾನು ಹೇಳುವ ವಿಷಯಕ್ಕೆ ಜಕ್ಕಾಯನು ಕಿವಿಗೊಡಬಹುದೆಂಬ ವಿಶ್ವಾಸ ಯೇಸುವಿಗಿತ್ತು. ದೇವರು ಬಯಸುವ ಜೀವನ ರೀತಿಯ ಕುರಿತು ತಿಳಿಸಲು ಇದೊಂದು ಒಳ್ಳೇ ಅವಕಾಶವಾಗಿತ್ತು.

ಯೇಸು ಜಕ್ಕಾಯನ ಮನೆಗೆ ಏಕೆ ಹೋದನು? ಜಕ್ಕಾಯನು ಏನೆಂದು ಮಾತು ಕೊಡುತ್ತಿದ್ದಾನೆ?

ಫಲಿತಾಂಶ ಏನಾಯಿತು ಗೊತ್ತಾ?— ಯೇಸುವಿನ ಬೋಧನೆಗಳನ್ನು ಜಕ್ಕಾಯ ಮೆಚ್ಚಿಕೊಂಡನು. ಜನರನ್ನು ವಂಚಿಸಿದ್ದಕ್ಕಾಗಿ ಅವನು ಪಶ್ಚಾತ್ತಾಪಪಟ್ಟನು. ಅನ್ಯಾಯದಿಂದ ಗಳಿಸಿದ್ದ ಹಣವನ್ನು ವಾಪಾಸ್‌ ಕೊಟ್ಟುಬಿಡುವುದಾಗಿ ಮಾತುಕೊಟ್ಟನು. ಯೇಸುವಿನ ಹಿಂಬಾಲಕನೂ ಆದನು. ಯೇಸು ಮತ್ತು ಜಕ್ಕಾಯ ನಡುವೆ ಸ್ನೇಹ ಬೆಸೆದದ್ದು ಆ ನಂತರವೇ.—ಲೂಕ 19:1-10.

ಮಹಾ ಬೋಧಕನಂತೆ ನಾವುನೂ ನಮಗೆ ಪರಿಚಯವಿಲ್ಲದ ಜನರ ಮನೆಗೆ ಹೋಗಬೇಕಾ?— ಹೌದು. ಆದರೆ ನಾವು ಅವರ ಮನೆಗಳಿಗೆ ಹೋಗುವುದು ಅವರ ಜೀವನ ರೀತಿಯನ್ನು ಇಷ್ಟಪಡುವ ಕಾರಣಕ್ಕಾಗಿ ಅಲ್ಲ. ಅಥವಾ ಅವರ ತಪ್ಪಾದ ಕೆಲಸಗಳನ್ನು ಪ್ರೋತ್ಸಾಹಿಸಲಿಕ್ಕಾಗಿ ಅಲ್ಲ. ಬದಲಿಗೆ, ದೇವರ ಕುರಿತು ಸತ್ಯ ತಿಳಿಸಲಿಕ್ಕಾಗಿ ನಾವು ಅವರನ್ನು ಭೇಟಿಯಾಗುತ್ತೇವೆ.

ನಾವು ಹೆಚ್ಚು ಸಮಯ ಕಳೆಯಲು ಬಯಸೋದು ನಮ್ಮ ಆಪ್ತ ಸ್ನೇಹಿತರೊಂದಿಗೆ ಅಲ್ವಾ. ಹಾಗಾಗಿ ಅವರು ನಮ್ಮ ಒಳ್ಳೇ ಸ್ನೇಹಿತರಾಗಿರಬೇಕಾದರೆ ದೇವರು ಮೆಚ್ಚುವಂಥ ವ್ಯಕ್ತಿಗಳಾಗಿರಬೇಕು. ಕೆಲವರಿಗೆ ಯೆಹೋವನ ಬಗ್ಗೆ ಗೊತ್ತಿಲ್ಲದೇ ಇರಬಹುದು. ಅವರು ತಿಳಿಯಲು ಬಯಸಿದರೆ ನಾವು ಅವರಿಗೆ ಸಹಾಯ ಮಾಡಬಹುದು. ಯಾವಾಗ ಅವರೂ ನಮ್ಮಂತೆ ಯೆಹೋವನನ್ನು ಪ್ರೀತಿಸಲು ಆರಂಭಿಸುತ್ತಾರೋ ಆಗ ನಾವು ಅವರನ್ನು ಆಪ್ತ ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು.

ಒಬ್ಬರು ನಮಗೆ ಒಳ್ಳೇ ಸ್ನೇಹಿತರಾಗುತ್ತಾರಾ ಇಲ್ವಾ ಅಂತ ನಾವು ಇನ್ನೊಂದು ವಿಧದಲ್ಲೂ ಕಂಡುಹಿಡಿಯಬಹುದು. ಅವರ ನಡತೆ ಸ್ವಭಾವ ಗಮನಿಸು. ಅವರು ಬೇರೆಯವರಿಗೆ ಕಿರುಕುಳ ನೀಡಿ ತಮಾಷೆ ನೋಡುತ್ತಾರಾ? ಹಾಗೆ ಮಾಡೋದು ಸರಿಯಲ್ಲ ಅಲ್ವಾ?— ಯಾವಾಗಲೂ ತರಲೆ ಕೆಲಸಮಾಡಿ ಸಿಕ್ಕಿಹಾಕಿಕೊಳ್ಳುತ್ತಾರಾ? ಅಂಥವರ ಸಹವಾಸ ಮಾಡಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳಲು ನೀನು ಇಷ್ಟಪಡೋದಿಲ್ಲ ಅಲ್ವಾ?— ಅಥವಾ ತಾವು ತುಂಬಾ ಸ್ಮಾರ್ಟ್‌, ತಪ್ಪು ಕೆಲಸ ಮಾಡಿದರೂ ಯಾರ ಕೈಯಲ್ಲೂ ಸಿಕ್ಕಿಬೀಳೊಲ್ಲ ಎಂದು ಬೀಗುತ್ತಾರಾ? ಅವರು ಯಾರ ಕೈಗೂ ಸಿಕ್ಕಿಬೀಳದಿರಬಹುದು. ಆದರೆ ದೇವರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಆಗೊಲ್ಲ ಅಲ್ವಾ?— ಅಂಥ ಕೆಲಸಗಳನ್ನು ಮಾಡುವವರ ಜೊತೆ ಗೆಳೆತನ ಬೆಳೆಸುವುದು ಸರಿ ಅಂತ ನಿನಗೆ ಅನಿಸುತ್ತದಾ?—

ಗೆಳೆಯರ ಆಯ್ಕೆಯ ವಿಷಯದಲ್ಲಿ ಬೈಬಲ್‌ ಏನು ಹೇಳುತ್ತದೆಂದು ನೋಡೋಣ. 1 ಕೊರಿಂಥ 15ನೇ ಅಧ್ಯಾಯದ 33ನೇ ವಚನವನ್ನು ತೆರೆಯುತ್ತೀಯಾ? ವಚನ ಸಿಕ್ತಾ?— ಅಲ್ಲಿ ಹೀಗಿದೆ: “ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.” ಇದರರ್ಥ ಏನೆಂದರೆ, ಕೆಟ್ಟ ಜನರ ಸಹವಾಸ ಮಾಡಿದರೆ ನಾವೂ ಕೆಟ್ಟವರಾಗಿ ಬಿಡಬಹುದು. ಅದೇ ರೀತಿ ನಮ್ಮ ಸ್ನೇಹಿತರು ಒಳ್ಳೆಯವರಾಗಿದ್ದರೆ ನಾವೂ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳುತ್ತೇವೆ.

ಯೆಹೋವನೇ ನಮ್ಮ ಆತ್ಮೀಯ ಸ್ನೇಹಿತ ಅನ್ನೋದನ್ನು ನಾವೆಂದೂ ಮರೆಯಬಾರದು. ಆತನೊಂದಿಗಿನ ಸ್ನೇಹವನ್ನು ಮುರಿಯಲು ನಾವು ಬಯಸುವುದಿಲ್ಲ ತಾನೆ?— ಆದುದರಿಂದ ದೇವರನ್ನು ಪ್ರೀತಿಸುವವರೊಂದಿಗೆ ಮಾತ್ರ ನಾವು ಗೆಳೆತನ ಬೆಳೆಸಬೇಕು.

ನಮ್ಮ ಸ್ನೇಹಿತರು ಒಳ್ಳೆಯವರಾಗಿರುವುದು ಪ್ರಾಮುಖ್ಯ ಎಂದು ಕೀರ್ತನೆ 119:115; ಜ್ಞಾನೋಕ್ತಿ 13:20; 2 ತಿಮೊಥೆಯ 2:22 ಮತ್ತು 1 ಯೋಹಾನ 2:15 ರಲ್ಲಿ ತೋರಿಸಲಾಗಿದೆ.