ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 46

ಜಲಪ್ರಳಯ-ಮತ್ತೆ ಲೋಕವನ್ನು ನಾಶಮಾಡುತ್ತಾ?

ಜಲಪ್ರಳಯ-ಮತ್ತೆ ಲೋಕವನ್ನು ನಾಶಮಾಡುತ್ತಾ?

ಲೋಕ ಪ್ರಳಯದಿಂದ ನಾಶವಾಗುತ್ತೆ ಅಂತ ಜನರು ಮಾತಾಡುವುದನ್ನು ನೀನು ಕೇಳಿದ್ದೀಯಾ?— ಇಂದು ಅನೇಕರು ಅದರ ಕುರಿತು ಮಾತಾಡಿಕೊಳ್ಳುತ್ತಾರೆ. ಮನುಷ್ಯರು ಯುದ್ಧಕ್ಕಾಗಿ ಬಳಸುವ ಅಣು ಬಾಂಬುಗಳಿಂದ ಇಡೀ ಪ್ರಪಂಚವೇ ನಾಶವಾಗಿಬಿಡುತ್ತೆ ಅಂತ ನೆನಸುತ್ತಾರೆ. ನಿನಗೇನನಿಸುತ್ತದೆ, ಈ ಸುಂದರ ಭೂಮಿಯನ್ನು ಮನುಷ್ಯರು ನಾಶ ಮಾಡಲು ದೇವರು ಬಿಡುತ್ತಾನಾ?—

ನಾವು ಈಗಾಗಲೇ ಕಲಿತಿರುವಂತೆ, ಲೋಕವು ಅಂತ್ಯವಾಗುತ್ತದೆಂದು ಬೈಬಲ್‌ ತಿಳಿಸುತ್ತದೆ. ‘ಲೋಕ ಗತಿಸಿಹೋಗುತ್ತಿದೆ’ ಎಂದು ಅದು ಹೇಳುತ್ತದೆ. (1 ಯೋಹಾನ 2:17) ಲೋಕದ ಅಂತ್ಯವೆಂದರೆ ಭೂಮಿ ಸರ್ವನಾಶವಾಗುತ್ತೆ ಅಂತನಾ?— ಇಲ್ಲ. ಏಕೆಂದರೆ ದೇವರು ಭೂಮಿಯನ್ನು “ಜನನಿವಾಸಕ್ಕಾಗಿಯೇ” ರೂಪಿಸಿದನು ಎಂದು ಬೈಬಲ್‌ ತಿಳಿಸುತ್ತದೆ. ಅಂದರೆ ಜನರು ಜೀವಿಸಲಿಕ್ಕಾಗಿ ಸಂತೋಷಿಸಲಿಕ್ಕಾಗಿ ಈ ಭೂಮಿಯನ್ನು ಸೃಷ್ಟಿಸಿದನು. (ಯೆಶಾಯ 45:18) ಕೀರ್ತನೆ 37:29, “ನೀತಿವಂತರೋ ದೇಶವನ್ನು [ಅಂದರೆ ಭೂಮಿಯನ್ನು] ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂದು ತಿಳಿಸುತ್ತದೆ. ನೋಡಿದ್ಯಾ ಭೂಮಿ ಶಾಶ್ವತವಾಗಿ ಇರುವುದೆಂದು ಬೈಬಲೇ ತಿಳಿಸುತ್ತದೆ.—ಕೀರ್ತನೆ 104:5; ಪ್ರಸಂಗಿ 1:4.

ಭೂಮಿ ನಾಶವಾಗದೆ ಶಾಶ್ವತವಾಗಿ ಇರೋದಾದರೆ ಲೋಕ ಅಂತ್ಯವಾಗುತ್ತದೆ ಅಂತ ಬೈಬಲ್‌ ತಿಳಿಸುವುದರ ಅರ್ಥವೇನು?— ಇದಕ್ಕೆ ಉತ್ತರ ಕಂಡುಹಿಡಿಯಬೇಕಾದರೆ ನಾವು ನೋಹನ ದಿನಗಳಲ್ಲಿ ನಡೆದ ಘಟನೆಯನ್ನು ಪರಿಶೀಲಿಸಬೇಕು. ಏಕೆಂದರೆ “ಆ ಕಾಲದ ಲೋಕವು  ಜಲಪ್ರಳಯ ಬಂದಾಗ ನಾಶವಾಯಿತುಎಂದು ಬೈಬಲ್‌ ತಿಳಿಸುತ್ತದೆ.—2 ಪೇತ್ರ 3:6.

ಜಲಪ್ರಳಯದ ಮೂಲಕ ನೋಹನ ಕಾಲದ ಲೋಕ ನಾಶವಾದಾಗ ಯಾರಾದರೂ ಬದುಕಿ ಉಳಿದ್ರಾ?— ಬೈಬಲ್‌ ಇದಕ್ಕೆ ಉತ್ತರಿಸುತ್ತಾ, ದೇವರು “ಭಕ್ತಿಹೀನ ಜನರ ಆ ಲೋಕದ ಮೇಲೆ ಜಲಪ್ರಳಯವನ್ನು ಬರಮಾಡಿದನು; ಆದರೆ ನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ರಕ್ಷಿಸಿದನು” ಎಂದು ಹೇಳುತ್ತದೆ.—2 ಪೇತ್ರ 2:5.

ನೋಹನ ಕಾಲದಲ್ಲಿ ನಾಶವಾದ ಲೋಕ ಯಾವುದು?

ಹಾಗಾದರೆ ಆ ಕಾಲದಲ್ಲಿ ನಾಶವಾದ ಲೋಕ ಯಾವುದು? ಆಗ ಇದ್ದ ಕೆಟ್ಟ ಜನರಾ ಅಥವಾ ಇಡೀ ಭೂಮಿಯಾ?— ಬೈಬಲ್‌ “ಭಕ್ತಿಹೀನ ಜನರ ಆ ಲೋಕ” ಅಂತ್ಯವಾಯಿತು ಅಂತ ತಿಳಿಸುತ್ತದೆ. ಆ ವಚನ ನೋಹನನ್ನು ‘ಸಾರುವವನು’ ಅಂತ ಹೇಳುವುದನ್ನು ಗಮನಿಸು. ನೋಹನು ಯಾವುದರ ಕುರಿತು ಸಾರುತ್ತಿದ್ದನು ಗೊತ್ತಾ?— “ಆ ಕಾಲದ ಲೋಕ” ನಾಶವಾಗುತ್ತದೆ ಅಂತ ಸಾರಿ ಜನರಿಗೆ ಎಚ್ಚರಿಕೆ ನೀಡುತ್ತಿದ್ದನು.

ಯೇಸು ಆ ಜಲಪ್ರಳಯದ ಬಗ್ಗೆ ಮಾತಾಡುತ್ತಿದ್ದಾಗ, ಅಂತ್ಯ ಬರುವ ಮುಂಚೆ ಆಗಿನ ಜನರು ಏನು ಮಾಡುತ್ತಿದ್ದರು ಎಂದು ಶಿಷ್ಯರಿಗೆ ಹೀಗೆ ವಿವರಿಸಿದನು: “ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯೊಳಗೆ ಪ್ರವೇಶಿಸುವ ದಿನದ ವರೆಗೆ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು; ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.” ಈಗಿನ ಲೋಕ ಅಂತ್ಯವಾಗುವ ಮುಂಚೆ ಜನರು ನೋಹನ ಕಾಲದ ಜನರಂತೆಯೇ ವರ್ತಿಸುವರು ಅಂತನೂ ಯೇಸು ಹೇಳಿದನು.—ಮತ್ತಾಯ 24:37-39.

ಜಲಪ್ರಳಯದ ಮುಂಚೆ ಜನರು ನಡೆದುಕೊಂಡ ರೀತಿಯಿಂದ ನಮಗೆ ಕಲಿಯಲು ಪ್ರಾಮುಖ್ಯ ಪಾಠವಿದೆಯೆಂದು ಯೇಸುವಿನ ಮಾತಿನಿಂದ ತಿಳಿದುಬರುತ್ತೆ. ಆ ಜನರು ಹೇಗೆ ವರ್ತಿಸುತ್ತಿದ್ದರೆಂದು ಅಧ್ಯಾಯ 10ರಲ್ಲಿ ಓದಿದ್ದು ನಿನಗೆ ನೆನಪಿದೆಯಾ?— ಕೆಲವರು ಗೂಂಡಾಗಿರಿ ಮಾಡಿ ಜನರನ್ನು ಹಿಂಸಿಸುತ್ತಿದ್ದರು ಅಲ್ವಾ. ಇತರ ಅನೇಕರು ಏನು ಮಾಡಿದರು ಅಂತ ಯೇಸು ವಿವರಿಸಿದನು. ಎಚ್ಚರಿಕೆಯ ಸಂದೇಶ ಸಾರುವಂತೆ ದೇವರು ಕಳುಹಿಸಿದ ನೋಹನ ಮಾತನ್ನು ಅವರ್ಯಾರೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಹಾಗಾಗಿ ಕೆಟ್ಟ ಜನರನ್ನೆಲ್ಲಾ ಜಲಪ್ರಳಯದ ಮೂಲಕ ನಾಶಮಾಡಲಿರುವುದಾಗಿ ಯೆಹೋವನು ನೋಹನಿಗೆ ತಿಳಿಸಿದನು. ಇಡೀ ಭೂಮಿಯನ್ನು ನೀರು ಆವರಿಸಲಿತ್ತು. ಅತ್ಯಂತ ಎತ್ತರವಾದ ಬೆಟ್ಟ ಗುಡ್ಡಗಳು ಸಹ ಮುಳುಗಿ ಹೋಗಲಿದ್ದವು. ಜೀವ ರಕ್ಷಣೆಗಾಗಿ ದೊಡ್ಡದೊಂದು ನಾವೆ ಕಟ್ಟುವಂತೆ ಯೆಹೋವನು ನೋಹನಿಗೆ ಆಜ್ಞಾಪಿಸಿದನು. ಅದು ದೊಡ್ಡದಾದ, ಉದ್ದವಾದ ಪೆಟ್ಟಿಗೆಯ ಆಕಾರದಲ್ಲಿತ್ತು. ಪುಟ 238ರಲ್ಲಿರುವ ಚಿತ್ರದಲ್ಲಿ ನೀನು ಅದನ್ನು ನೋಡಬಹುದು.

ಆ ನಾವೆ ಎಷ್ಟು ದೊಡ್ಡದು ಇರಬೇಕಿತ್ತೆಂದರೆ ನೋಹನ ಕುಟುಂಬ ಹಾಗೂ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳು ಅದರೊಳಗೆ ಸುರಕ್ಷಿತವಾಗಿ ತಂಗುವಷ್ಟು ಸ್ಥಳವಿರಬೇಕಿತ್ತು. ನೋಹ ಮತ್ತವನ ಕುಟುಂಬ ಬಿಡುವಿಲ್ಲದೇ ಕೆಲಸಮಾಡಿದರು. ದೊಡ್ಡ ದೊಡ್ಡ ಮರಗಳನ್ನು ಕಡಿದು ಹಲಗೆಗಳನ್ನು ಕೊಯ್ದು ನಾವೆಯನ್ನು ನಿರ್ಮಿಸತೊಡಗಿದರು. ದೊಡ್ಡ ನಾವೆಯಾದ್ದರಿಂದ ಕಟ್ಟಿ ಮುಗಿಸಲು ಅನೇಕಾನೇಕ ವರ್ಷಗಳೇ ಹಿಡಿದವು.

ನಾವೆಯನ್ನು ಕಟ್ಟುವುದರ ಜೊತೆಗೆ ನೋಹನು ಬೇರಾವ ಮುಖ್ಯ ಕೆಲಸವನ್ನು ಮಾಡುತ್ತಿದ್ದನು ಅಂತ ನಿನಗೆ ಗೊತ್ತಿದೆಯಾ?— ಅವನು ಸಾರುತ್ತಿದ್ದನು. ಮುಂದೆ ಜಲಪ್ರಳಯ ಬರಲಿದೆಯೆಂದು ಜನರನ್ನು ಎಚ್ಚರಿಸುತ್ತಿದ್ದನು. ಅದಕ್ಕೆ ಯಾರಾದರೂ ಪ್ರತಿಕ್ರಿಯಿಸಿದರಾ? ನೋಹನ ಕುಟುಂಬ ಬಿಟ್ಟರೆ ಒಬ್ಬರೂ ಪ್ರತಿಕ್ರಿಯಿಸಲಿಲ್ಲ. ಆ ಜನರಿಗೆಲ್ಲಾ ತಮ್ಮ ಕೆಲಸಕಾರ್ಯಗಳೇ ಮುಖ್ಯವಾಗಿತ್ತು. ಅವರು ಯಾವ ವಿಷಯಗಳಲ್ಲಿ ಮುಳುಗಿಹೋಗಿದ್ದರು ಅಂತ ಯೇಸು ಹೇಳಿದನು, ನಿನಗೆ ನೆನಪಿದೆಯಾ?— ತಿನ್ನೋದರಲ್ಲಿ, ಕುಡಿಯೋದರಲ್ಲಿ, ಮದುವೆಮಾಡಿಕೊಳ್ಳೋದರಲ್ಲೇ ಮುಳುಗಿ ಹೋಗಿದ್ದರು. ತಾವು ಕೆಟ್ಟವರೆಂದು ಅವರಿಗೆ ಅನಿಸದ ಕಾರಣ ನೋಹನ ಮಾತುಗಳಿಗೆ ಕಿವಿಗೊಡದೇ ಹೋದರು. ಪರಿಣಾಮ ಏನಾಯಿತು ಅಂತ ನೋಡೋಣ.

ನೋಹ ಮತ್ತವನ ಕುಟುಂಬ ನಾವೆಯನ್ನು ಸೇರಿದ ಕೂಡಲೇ ಯೆಹೋವನು ಅದರ ಬಾಗಿಲನ್ನು ಭದ್ರವಾಗಿ ಮುಚ್ಚಿದನು. ಆಗಲೂ ಹೊರಗಿದ್ದ ಜನರು ಜಲಪ್ರಳಯ ಬರುತ್ತದೆಂದು ನಂಬಲಿಲ್ಲ. ಆದರೆ ಇದ್ದಕ್ಕಿದ್ದಂತೆ ಆಕಾಶದಿಂದ ಮಳೆ ಸುರಿಯತೊಡಗಿತು. ಅದು ಅಂತಿಂಥ ಮಳೆಯಾಗಿರಲಿಲ್ಲ. ಧೋ ಎಂದು ಧಾರಾಕಾರವಾಗಿ ಸುರಿಯುತ್ತಿತ್ತು. ಮಳೆನೀರು ಭೋರ್ಗರೆಯುವ ದೊಡ್ಡ ನದಿಯಂತೆ ಕಂಡಕಂಡ ಕಡೆಗೆ ನುಗ್ಗತೊಡಗಿತು. ಅಬ್ಬಾ! ಅದರ ರಭಸಕ್ಕೆ ಹೆಮ್ಮರಗಳು ನೆಲಕಚ್ಚಿದವು. ದೊಡ್ಡ ದೊಡ್ಡ ಬಂಡೆ ಕಲ್ಲುಗಳು ಕೊಚ್ಚಿ ಹೋದವು. ನಾವೆಯ ಹೊರಗಿದ್ದ ಜನರೆಲ್ಲರ ಗತಿ ಏನಾಯಿತು?— ‘ಪ್ರಳಯದ ನೀರು ಅವರೆಲ್ಲರನ್ನು ಕೊಚ್ಚಿಕೊಂಡು ಹೋಯಿತು’ ಎಂದು ಯೇಸು ಹೇಳಿದನು. ಹೀಗೆ ಅವರೆಲ್ಲಾ ನೀರುಪಾಲಾಗಿ ಸತ್ತುಹೋದರು. ಕಾರಣ ಏನು?— ಅದನ್ನೇ ಯೇಸು ಹೇಳಿದನು: ‘ಅವರು ಲಕ್ಷ್ಯಕೊಡಲಿಲ್ಲ.’ ಹೌದು, ನೋಹನ ಎಚ್ಚರಿಕೆಯ ಸಂದೇಶಕ್ಕೆ ಅವರು ಕಿವಿಗೊಡಲಿಲ್ಲ.—ಮತ್ತಾಯ 24:39; ಆದಿಕಾಂಡ 6:5-7.

ನಾವು ಸದಾ ಮೋಜು ಮಸ್ತಿ ಮಾಡುವುದರ ಬಗ್ಗೆನೇ ಯೋಚಿಸಬಾರದೇಕೆ?

ಆ ಜನರಿಗಾದ ಗತಿ ಇಂದು ನಮಗೆ ಒಂದು ಎಚ್ಚರಿಕೆಯ ಪಾಠವಾಗಿದೆ ಅಂತ ಯೇಸು ಹೇಳಿದ್ದು ನಿನಗೆ ನೆನಪಿರಬಹುದು. ಅದೇನು?— ಆ ಜನರು ನಾಶವಾಗಲು ಎರಡು ಕಾರಣಗಳಿದ್ದವು. ಒಂದು ಅವರ ಕೆಟ್ಟತನ. ಇನ್ನೊಂದು, ದೇವರ ಬಗ್ಗೆಯಾಗಲಿ ಆತನು ಮಾಡಲಿರುವ ವಿಷಯಗಳ ಬಗ್ಗೆಯಾಗಲಿ ಕಲಿಯುವಷ್ಟು ಪುರುಸೊತ್ತು ಮಾಡಿಕೊಳ್ಳದ ಅವರ ಉದ್ಧಟತನ. ನಾವು ಆ ಜನರಂತಿರಬಾರದು ಅಲ್ವಾ?—

ದೇವರು ಮತ್ತೊಮ್ಮೆ ಈ ಲೋಕವನ್ನು ಜಲಪ್ರಳಯದಿಂದ ನಾಶಮಾಡುತ್ತಾನಾ? ನಿನ್ನ ಅಭಿಪ್ರಾಯವೇನು?— ಇಲ್ಲ. ಜಲಪ್ರಳಯದಿಂದ ಇನ್ನೆಂದೂ ಲೋಕವನ್ನು ನಾಶಮಾಡುವುದಿಲ್ಲ ಅಂತ ದೇವರು ಮಾತುಕೊಟ್ಟಿದ್ದಾನೆ. ಇದಕ್ಕೆ ಸಾಕ್ಷಿಯಾಗಿ “ಮೇಘಗಳಲ್ಲಿ ನಾನಿಟ್ಟಿರುವ ಮುಗಿಲುಬಿಲ್ಲೇ ಗುರುತಾಗಿರುವದು” ಎಂದು ದೇವರು ಹೇಳಿದನು. “ಇನ್ನು ಮುಂದೆ ನೀರು ಹೆಚ್ಚಿ ಎಲ್ಲಾ ಭೂಪ್ರಾಣಿಗಳನ್ನು ಹಾಳುಮಾಡುವ ಪ್ರಳಯವಾಗುವದಿಲ್ಲ” ಅನ್ನೋದಕ್ಕೆ ಅದು ಗುರುತಾಗಿರುವುದೆಂದು ಯೆಹೋವನು ಹೇಳಿದನು.—ಆದಿಕಾಂಡ 9:11-17.

ಆದ್ದರಿಂದ ದೇವರು ಇನ್ನೆಂದೂ ಈ ಲೋಕವನ್ನು ಜಲಪ್ರಳಯದಿಂದ ನಾಶಮಾಡುವುದಿಲ್ಲ ಎಂಬ ಖಾತ್ರಿ ನಮಗಿದೆ. ಆದರೂ ನಾವೀಗಾಗಲೇ ನೋಡಿರುವಂತೆ ಬೈಬಲ್‌ ಲೋಕದ ಅಂತ್ಯದ ಕುರಿತು ತಿಳಿಸುತ್ತದೆ. ದೇವರು ಈ ಲೋಕವನ್ನು ನಾಶ ಮಾಡುವಾಗ ಯಾರನ್ನು ಕಾಪಾಡುತ್ತಾನೆ?— ಲೋಕದ ನಾನಾ ವಿಷಯಗಳಲ್ಲಿ ಮುಳುಗಿ ದೇವರ ವಿಷಯವೇ ಬೇಡವೆನ್ನುವ ಜನರನ್ನೋ? ಬೈಬಲ್‌ ಅಧ್ಯಯನಕ್ಕೆ ಸಮಯಕೊಡದೆ ಟೈಮ್‌ ಇಲ್ಲ ಬ್ಯುಸಿ ಎನ್ನುವ ಜನರನ್ನೋ? ನೀನೇನು ಹೇಳುತ್ತೀ?—

ದೇವರು ನಮ್ಮನ್ನು ಕಾಪಾಡುವಂತೆ ಬಯಸುತ್ತೇವೆ ಅಲ್ವಾ?— ನಮ್ಮ ಕುಟುಂಬನೂ ನೋಹನ ಕುಟುಂಬದಂತೆ ರಕ್ಷಣೆ ಹೊಂದಿದರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ?— ನಾವು ಈ ಲೋಕದ ಅಂತ್ಯವನ್ನು ಪಾರಾಗಿ ಉಳಿಯಬೇಕಾದರೆ, ದೇವರು ಈ ಲೋಕವನ್ನು ಹೇಗೆ ನಾಶಮಾಡುವನು ಮತ್ತು ಹೊಸ ಲೋಕವನ್ನು ಹೇಗೆ ತರುವನು ಅಂತ ಅರ್ಥಮಾಡಿಕೊಳ್ಳಬೇಕು. ದೇವರು ಇದನ್ನು ಹೇಗೆ ಮಾಡುತ್ತಾನೆ ಅಂತ ನಾವೀಗ ನೋಡೋಣ.

ಬೈಬಲ್‌ ಅದನ್ನು ದಾನಿಯೇಲ 2ನೇ ಅಧ್ಯಾಯದ 44ನೇ ವಚನದಲ್ಲಿ ವಿವರಿಸುತ್ತದೆ. ಈ ವಚನವು ನಮ್ಮ ಕಾಲದಲ್ಲಿ ನಡೆಯುವ ಸಂಗತಿ ಬಗ್ಗೆಯೇ ಮಾತಾಡುತ್ತದೆ. ಅದು ಹೀಗೆ ತಿಳಿಸುತ್ತದೆ: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಅಥವಾ ಸರಕಾರವನ್ನು] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”

ವಚನ ಏನು ಹೇಳುತ್ತದೆಂದು ನಿನಗೆ ಅರ್ಥ ಆಯ್ತಾ?— ದೇವರ ಸರಕಾರ ಮಾನವ ಸರಕಾರಗಳನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಲಿದೆ ಎಂದು ವಚನ ತಿಳಿಸುತ್ತದೆ. ಅದೇಕೆ?— ಏಕೆಂದರೆ ಮಾನವ ಸರಕಾರಗಳು ದೇವರು ನೇಮಿಸಿದ ರಾಜನಿಗೆ ವಿಧೇಯತೆ ತೋರಿಸುತ್ತಿಲ್ಲ. ದೇವರು ನೇಮಿಸಿದ ರಾಜ ಯಾರು ಅಂತ ನೆನಪಿದೆ ತಾನೆ?— ಯೇಸು ಕ್ರಿಸ್ತ.

ದೇವರು ನೇಮಿಸಿರುವ ರಾಜ ಯೇಸು ಕ್ರಿಸ್ತನು ಈ ಲೋಕವನ್ನು ಅರ್ಮಗೆದೋನ್‌ ಯುದ್ಧದಲ್ಲಿ ನಾಶಮಾಡುವನು

ಭೂಮಿಯನ್ನು ಯಾವ ಸರಕಾರ ಆಳಬೇಕೆಂದು ನಿರ್ಧರಿಸುವ ಹಕ್ಕು ಯೆಹೋವ ದೇವರಿಗಿದೆ. ತನ್ನ ಮಗನಾದ ಯೇಸುವನ್ನು ರಾಜನಾಗಿ ಆಯ್ಕೆಮಾಡಿರುವುದು ಆತನೇ ಅಲ್ವಾ. ದೇವರಿಂದ ರಾಜ್ಯಭಾರ ಪಡೆದಿರುವ ಯೇಸು ಕ್ರಿಸ್ತನು ಶೀಘ್ರದಲ್ಲೇ ಲೋಕದ ಎಲ್ಲಾ ಸರಕಾರಗಳನ್ನು ನಾಶಮಾಡುವನು. ಪ್ರಕಟನೆ 19ನೇ ಅಧ್ಯಾಯದ 11ರಿಂದ 16ನೇ ವಚನಗಳು ಅವನು ಈ ಕೆಲಸವನ್ನು ಮಾಡುತ್ತಿರುವಂತೆ ವರ್ಣಿಸುತ್ತವೆ. ಅದನ್ನೇ ಈ ಚಿತ್ರದಲ್ಲಿ ನೀನು ನೋಡಬಹುದು. ಲೋಕದ ಎಲ್ಲಾ ಸರಕಾರಗಳು ಮಣ್ಣುಮುಕ್ಕುವ ಈ ಯುದ್ಧವನ್ನು ಬೈಬಲಿನಲ್ಲಿ ಹರ್ಮಗೆದೋನ್‌ ಅಥವಾ ಅರ್ಮಗೆದೋನ್‌ ಎಂದು ಕರೆಯಲಾಗಿದೆ.

ಆ ಯುದ್ಧದಲ್ಲಿ ನಾವೇನಾದರೂ ಭಾಗವಹಿಸಬೇಕಾ?— ಇಲ್ಲ. ಏಕೆಂದರೆ ಬೈಬಲಿನಲ್ಲಿ ಅರ್ಮಗೆದೋನನ್ನು “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧ” ಎಂದು ಕರೆಯಲಾಗಿದೆ. (ಪ್ರಕಟನೆ 16:14, 16) ಹೌದು, ಅರ್ಮಗೆದೋನ್‌ ದೇವರು ಮಾಡುವ ಯುದ್ಧವಾಗಿದೆ. ಈ ಹೋರಾಟದಲ್ಲಿ ಯೇಸು ಕ್ರಿಸ್ತನು ಸ್ವರ್ಗೀಯ ಸೈನ್ಯಗಳನ್ನು ಮುನ್ನಡೆಸುತ್ತಾನೆ. ಈ ಯುದ್ಧ ಶೀಘ್ರದಲ್ಲೇ ನಡೆಯಲಿದೆಯೋ? ಮುಂದಿನ ಅಧ್ಯಾಯದಲ್ಲಿ ನೋಡೋಣ.

ಎಲ್ಲಾ ಕೆಟ್ಟ ಜನರ ನಾಶನ ಹಾಗೂ ದೇವರ ಸೇವಕರ ರಕ್ಷಣೆಯ ಕುರಿತು, ಜ್ಞಾನೋಕ್ತಿ 2:21, 22; ಯೆಶಾಯ 26:20, 21; ಯೆರೆಮೀಯ 25:31-33 ಮತ್ತು ಮತ್ತಾಯ 24:21, 22 ಓದಿ ತಿಳಿದುಕೊಳ್ಳೋಣ.