ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಒಂದು

ದೇವರ ಕುರಿತಾದ ಸತ್ಯವೇನು?

ದೇವರ ಕುರಿತಾದ ಸತ್ಯವೇನು?
  •  ದೇವರಿಗೆ ನಿಮ್ಮ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೊ?

  • ದೇವರು ಎಂಥವನು? ಆತನಿಗೆ ಒಂದು ಹೆಸರಿದೆಯೊ?

  • ದೇವರ ಸಮೀಪಕ್ಕೆ ಬರಲು ಸಾಧ್ಯವಿದೆಯೊ?

1, 2. ಪ್ರಶ್ನೆಗಳನ್ನು ಕೇಳುವುದು ಅನೇಕವೇಳೆ ಒಳ್ಳೆಯದೇಕೆ?

ಮಕ್ಕಳು ಪ್ರಶ್ನೆಗಳನ್ನು ಕೇಳುವ ರೀತಿಯನ್ನು ನೀವು ಎಂದಾದರೂ ಗಮನಿಸಿದ್ದುಂಟೊ? ಅನೇಕ ಮಕ್ಕಳು ಮಾತಾಡಲು ಕಲಿತ ಕೂಡಲೆ ಪ್ರಶ್ನೆಗಳನ್ನು ಕೇಳಲಾರಂಭಿಸುತ್ತಾರೆ. ಕಣ್ಣುಗಳನ್ನು ಅಗಲಿಸಿ ಕುತೂಹಲದಿಂದ ನಿಮ್ಮನ್ನು ನೋಡುತ್ತ, ಆಕಾಶವು ಏಕೆ ನೀಲಿಯಾಗಿದೆ? ನಕ್ಷತ್ರಗಳು ಏಕೆ ಮಿನುಗುತ್ತವೆ? ಹಕ್ಕಿಗಳಿಗೆ ಹಾಡಲು ಕಲಿಸಿಕೊಟ್ಟವರು ಯಾರು? ಎಂಬಂಥ ಪ್ರಶ್ನೆಗಳನ್ನು ಅವರು ಕೇಳುತ್ತಾರೆ. ಆಗ ನೀವು ಉತ್ತರ ಕೊಡಲು ತುಂಬ ಪ್ರಯತ್ನ ಮಾಡಬಹುದು, ಆದರೆ ಅದು ಯಾವಾಗಲೂ ಸುಲಭವಾಗಿರುವುದಿಲ್ಲ. ನಿಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮ ಉತ್ತರವನ್ನು ಕೊಟ್ಟ ಬಳಿಕವೂ, ಅದೇಕೆ ಹಾಗೆ? ಎಂಬ ಇನ್ನೊಂದು ಪ್ರಶ್ನೆ ಸಿದ್ಧವಾಗಿರುತ್ತದೆ.

2 ಆದರೆ ಪ್ರಶ್ನೆಗಳನ್ನು ಕೇಳುವವರು ಮಕ್ಕಳು ಮಾತ್ರವೇ ಅಲ್ಲ. ದೊಡ್ಡವರಾಗುತ್ತಾ ಹೋದಂತೆ ನಾವು ಸಹ ಪ್ರಶ್ನೆಗಳನ್ನು ಕೇಳುತ್ತಿರುತ್ತೇವೆ. ದಾರಿಯನ್ನು ಕಂಡುಕೊಳ್ಳಲಿಕ್ಕಾಗಿ, ನಾವು ತಪ್ಪಿಸಬೇಕಾದ ಅಪಾಯಗಳಾವುವು ಎಂಬುದರ ಕುರಿತು ಕಲಿಯಲಿಕ್ಕಾಗಿ ಇಲ್ಲವೆ ನಮ್ಮ ಕುತೂಹಲವನ್ನು ತಣಿಸಲಿಕ್ಕಾಗಿ ನಾವು ಪ್ರಶ್ನೆಗಳನ್ನು ಕೇಳುತ್ತಿರುತ್ತೇವೆ. ಆದರೆ ಅನೇಕ ಜನರು ಪ್ರಶ್ನೆಗಳನ್ನು ಕೇಳುವುದನ್ನು, ವಿಶೇಷವಾಗಿ ಅತಿ ಪ್ರಾಮುಖ್ಯ ಪ್ರಶ್ನೆಗಳನ್ನು ಕೇಳುವುದನ್ನೇ ನಿಲ್ಲಿಸಿಬಿಡುತ್ತಾರೆಂದು ತೋರುತ್ತದೆ. ಅಥವಾ, ಅವರು ಉತ್ತರಗಳಿಗಾಗಿ ಹುಡುಕುವುದನ್ನು ನಿಲ್ಲಿಸುತ್ತಾರೆಂದು ಹೇಳಿದರೆ ಉತ್ತಮವಾಗಿರಬಹುದು.

3. ಅತಿ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನವನ್ನು ಅನೇಕರು ನಿಲ್ಲಿಸಿಬಿಡುವುದೇಕೆ?

3 ಈ ಪುಸ್ತಕದ ಆವರಣದಲ್ಲಿನ ಪ್ರಶ್ನೆಯ ಬಗ್ಗೆ ಮತ್ತು ಮುನ್ನುಡಿಯಲ್ಲಿ ಎಬ್ಬಿಸಲ್ಪಟ್ಟಿರುವ ಇಲ್ಲವೆ  ಈ ಅಧ್ಯಾಯದ ಆರಂಭದಲ್ಲಿ ಕೊಡಲ್ಪಟ್ಟಿರುವ ಪ್ರಶ್ನೆಗಳ ಕುರಿತು ಯೋಚಿಸಿರಿ. ಇವು ನೀವು ಕೇಳಬಹುದಾದ ಅತಿ ಪ್ರಾಮುಖ್ಯವಾದ ಪ್ರಶ್ನೆಗಳಲ್ಲಿ ಕೆಲವಾಗಿವೆ. ಆದರೂ ಅನೇಕ ಜನರು ಇವುಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಏಕೆ? ಬೈಬಲಿನಲ್ಲಿ ಇವುಗಳಿಗೆ ಉತ್ತರಗಳಿವೆಯೆ? ಬೈಬಲ್‌ ಕೊಡುವಂಥ ಉತ್ತರಗಳು ಅರ್ಥಮಾಡಿಕೊಳ್ಳಲು ತೀರ ಕಷ್ಟಕರವಾಗಿವೆಯೆಂದು ಕೆಲವರು ಎಣಿಸುತ್ತಾರೆ. ಅಂತಹ ಪ್ರಶ್ನೆಗಳನ್ನು ಕೇಳುವುದು ನಾಚಿಕೆಗೊ ಪೇಚಾಟಕ್ಕೊ ನಡೆಸುವುದೆಂದು ಇತರರ ಚಿಂತೆ. ಇನ್ನೂ ಕೆಲವರು, ಅಂತಹ ಪ್ರಶ್ನೆಗಳನ್ನು ಧಾರ್ಮಿಕ ಮುಖಂಡರಿಗೆ ಮತ್ತು ಬೋಧಕರಿಗೆ ಬಿಟ್ಟುಬಿಡುವುದೇ ಒಳ್ಳೇದೆಂದು ನಿರ್ಣಯಿಸುತ್ತಾರೆ. ನಿಮ್ಮ ಕುರಿತಾಗಿ ಏನು?

4, 5. ಜೀವನದಲ್ಲಿ ನಾವು ಕೇಳಬಲ್ಲ ಅತಿ ಪ್ರಾಮುಖ್ಯ ಪ್ರಶ್ನೆಗಳಲ್ಲಿ ಕೆಲವು ಯಾವುವು, ಮತ್ತು ಇವುಗಳಿಗೆ ನಾವೇಕೆ ಉತ್ತರಗಳನ್ನು ಹುಡುಕಬೇಕು?

4 ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಲು ನೀವು ಆಸಕ್ತರಾಗಿದ್ದೀರಿ ಎಂಬುದು ಅತಿ ಸಂಭವನೀಯ. ಹಲವು ಬಾರಿ ನೀವು ಹೀಗೆ ಯೋಚಿಸಿರುವುದರಲ್ಲಿ ಸಂಶಯವಿಲ್ಲ: ‘ಜೀವನದ ಉದ್ದೇಶವೇನು? ಜೀವನವೆಂದರೆ ಇಷ್ಟೆಯೊ? ದೇವರು ನಿಜವಾಗಿಯೂ ಎಂಥವನು?’ ಇಂತಹ ಪ್ರಶ್ನೆಗಳನ್ನು ಕೇಳುವುದು ಒಳ್ಳೆಯದು, ಮಾತ್ರವಲ್ಲ ಇವಕ್ಕೆ ತೃಪ್ತಿಕರವಾದ ಮತ್ತು ಭರವಸಾರ್ಹವಾದ ಉತ್ತರಗಳನ್ನು ಕಂಡುಹಿಡಿಯುವ ತನಕ ಪಟ್ಟುಹಿಡಿಯುವುದೂ ಪ್ರಾಮುಖ್ಯ. ಪ್ರಸಿದ್ಧ ಬೋಧಕನಾದ ಯೇಸು ಕ್ರಿಸ್ತನು ಹೇಳಿದ್ದು: “ಬೇಡಿಕೊಳ್ಳುತ್ತಲೇ ಇರಿ, ನಿಮಗೆ ಕೊಡಲ್ಪಡುವುದು; ಹುಡುಕುತ್ತಲೇ ಇರಿ, ನಿಮಗೆ ಸಿಗುವುದು; ತಟ್ಟುತ್ತಲೇ ಇರಿ, ನಿಮಗೆ ತೆರೆಯಲ್ಪಡುವುದು.”—ಮತ್ತಾಯ 7:7, NW.

5 ಪ್ರಾಮುಖ್ಯ ಪ್ರಶ್ನೆಗಳಿಗೆ ನೀವು ಉತ್ತರವನ್ನು “ಹುಡುಕುತ್ತಲೇ” ಇರುವಲ್ಲಿ, ನಿಮ್ಮ ಅನ್ವೇಷಣೆ ತುಂಬ ಪ್ರತಿಫಲದಾಯಕವಾಗಿರುವುದನ್ನು ಕಂಡುಕೊಳ್ಳುವಿರಿ. (ಜ್ಞಾನೋಕ್ತಿ 2:1-5) ಬೇರೆ ಜನರು ನಿಮಗೆ ಏನೇ ಹೇಳಿರಲಿ, ಈ ಪ್ರಶ್ನೆಗಳಿಗೆ ಉತ್ತರಗಳು ಇದ್ದೇ ಇವೆ, ಮತ್ತು ಅವುಗಳನ್ನು ನೀವು ಬೈಬಲಿನಲ್ಲಿ ಖಂಡಿತವಾಗಿಯೂ ಕಂಡುಕೊಳ್ಳಬಲ್ಲಿರಿ. ಈ ಉತ್ತರಗಳು ಅರ್ಥಮಾಡಿಕೊಳ್ಳಲು ಕಷ್ಟಕರವಾದವುಗಳಲ್ಲ. ಇನ್ನೂ ಪ್ರಯೋಜನಕರವಾದ ಸಂಗತಿಯೇನಂದರೆ, ಅವು ನಿರೀಕ್ಷೆ ಮತ್ತು ಆನಂದವನ್ನು ತರುತ್ತವೆ. ಮಾತ್ರವಲ್ಲದೆ, ಸಂತೃಪ್ತಿಕರವಾದ ಜೀವನವನ್ನು ನೀವೀಗಲೇ ಆನಂದಿಸುವಂತೆ ಅವು ನಿಮಗೆ ಸಹಾಯಮಾಡಬಲ್ಲವು. ಪ್ರಥಮತಃ, ಅನೇಕ ಜನರನ್ನು ಕಳವಳಕ್ಕೀಡುಮಾಡಿರುವ ಒಂದು ಪ್ರಶ್ನೆಯನ್ನು ನಾವು ಪರಿಗಣಿಸೋಣ.

ದೇವರು ಕಾಳಜಿ ಇಲ್ಲದವನೂ ಕಲ್ಲೆದೆಯವನೂ ಆಗಿದ್ದಾನೊ?

6. ಮಾನವ ಕಷ್ಟಸಂಕಟಗಳ ಸಂಬಂಧದಲ್ಲಿ ದೇವರು ಕಾಳಜಿಯಿಲ್ಲದವನೆಂದು ಅನೇಕ ಜನರು ನೆನಸುವುದೇಕೆ?

6 ಈ ಪ್ರಶ್ನೆಗೆ ಉತ್ತರವು ಹೌದೆಂಬುದು ಅನೇಕರ ಅಭಿಪ್ರಾಯ. ‘ದೇವರಿಗೆ ಸ್ವಲ್ಪವಾದರೂ ಕಾಳಜಿಯಿರುತ್ತಿದ್ದಲ್ಲಿ, ಈ ಜಗತ್ತು ಇಂದಿಗಿಂತ ಭಿನ್ನವಾಗಿರುತ್ತಿತ್ತಲ್ಲವೆ?’ ಎಂದು ಅವರು ತರ್ಕಿಸುತ್ತಾರೆ. ಏಕೆಂದರೆ ನಾವು ಎತ್ತ ನೋಡಿದರೂ, ಯುದ್ಧ, ದ್ವೇಷ ಮತ್ತು ದುರವಸ್ಥೆ ತುಂಬಿದ ಜಗತ್ತು ಕಂಡುಬರುತ್ತದೆ. ಮತ್ತು ವ್ಯಕ್ತಿಶಃ ನಾವು ಅಸ್ವಸ್ಥರಾಗುತ್ತೇವೆ, ನರಳುತ್ತೇವೆ ಮತ್ತು ಪ್ರಿಯರನ್ನು ಮರಣದಲ್ಲಿ ಕಳೆದುಕೊಳ್ಳುತ್ತೇವೆ. ಆದಕಾರಣ, ‘ದೇವರಿಗೆ ನಮ್ಮ ಬಗ್ಗೆ ಮತ್ತು ನಮ್ಮ ಸಮಸ್ಯೆಗಳ ಬಗ್ಗೆ ಕಾಳಜಿಯಿರುತ್ತಿದ್ದಲ್ಲಿ, ಇಂತಹ ಸಂಗತಿಗಳಾಗದಂತೆ ಆತನು ತಡೆಯುತ್ತಿದ್ದನಲ್ಲವೆ?’ ಎಂದು ಅನೇಕರು ಕೇಳುತ್ತಾರೆ.

7. (ಎ) ದೇವರು ಕಲ್ಲೆದೆಯವನೆಂದು ಅನೇಕರು ನೆನಸಲು ಧಾರ್ಮಿಕ ಮುಖಂಡರೇ ಕಾರಣರಾಗಿರುವುದು ಹೇಗೆ? (ಬಿ) ನಮ್ಮ ಮೇಲೆ ಬರಬಹುದಾದ ಕಷ್ಟಗಳ ಬಗ್ಗೆ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

7 ಇದಕ್ಕಿಂತಲೂ ಹೆಚ್ಚು ಕೆಟ್ಟ ಸಂಗತಿಯೇನೆಂದರೆ, ದೇವರು ಕಲ್ಲೆದೆಯವನೆಂದು ಜನರು ನೆನಸಲು ಕೆಲವು ಬಾರಿ ಧಾರ್ಮಿಕ ಮುಖಂಡರೇ ಕಾರಣರಾಗಿರುತ್ತಾರೆ. ಹೇಗೆ? ಹೇಗೆಂದರೆ, ಥಟ್ಟನೆ ಯಾವುದಾದರೂ ದುರಂತವು ಸಂಭವಿಸುವಾಗ ಅದು ದೈವೇಚ್ಛೆ ಎಂದು ಅವರು ಹೇಳುತ್ತಾರೆ. ಕಾರ್ಯತಃ, ಇಂತಹ ಬೋಧಕರು ಸಂಭವಿಸುವ ದುರಂತಗಳಿಗೆ ದೇವರ ಮೇಲೆ ದೂರು ಹೊರಿಸುತ್ತಾರೆ. ಆದರೆ ಇದು ದೇವರ ಕುರಿತಾದ ಸತ್ಯವೊ? ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಯಾಕೋಬ 1:13 ಹೇಳುವುದು: “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ.” ಆದುದರಿಂದ, ನಿಮ್ಮ ಸುತ್ತಲಿರುವ ಲೋಕದಲ್ಲಿ ನೀವು ನೋಡುವ ದುಷ್ಟತನಕ್ಕೆ ದೇವರು ಎಂದಿಗೂ ಕಾರಣನಾಗಿರುವುದಿಲ್ಲ. (ಯೋಬ 34:10-12) ಕೆಟ್ಟ ಸಂಗತಿಗಳು ಸಂಭವಿಸುವಂತೆ ಆತನು ಬಿಡುತ್ತಾನೆಂಬುದೇನೊ ನಿಜ. ಆದರೆ ಯಾವುದೊ ವಿಷಯವು ಸಂಭವಿಸುವಂತೆ ಬಿಡುವುದಕ್ಕೂ ಅದಕ್ಕೆ ಕಾರಣನು ಆಗಿರುವುದಕ್ಕೂ ದೊಡ್ಡ ವ್ಯತ್ಯಾಸವಿದೆ.

8, 9. (ಎ) ದುಷ್ಟತನವು ಇರುವಂತೆ ಬಿಡುವುದು ಮತ್ತು ಅದಕ್ಕೆ ಕಾರಣನಾಗಿರುವುದು—ಇವುಗಳ ಮಧ್ಯೆ ಇರುವ ವ್ಯತ್ಯಾಸವನ್ನು ನೀವು ಹೇಗೆ ದೃಷ್ಟಾಂತಿಸಬಹುದು? (ಬಿ) ಮಾನವಕುಲವು ದುರ್ಮಾರ್ಗದಲ್ಲಿ ಮುಂದುವರಿಯುವಂತೆ ಬಿಡಲು ದೇವರು ಮಾಡಿರುವ ನಿರ್ಣಯದಲ್ಲಿ ನಾವು ದೋಷ ಹುಡುಕುವುದು ಅನ್ಯಾಯವಾಗಿರುವುದೇಕೆ?

8 ದೃಷ್ಟಾಂತಕ್ಕಾಗಿ, ವಿವೇಕಿಯೂ ಪ್ರೀತಿಪೂರ್ಣನೂ ಆದ ಒಬ್ಬ ತಂದೆಯ ಕುರಿತು ಯೋಚಿಸಿರಿ. ಅವನಿಗೆ, ಇನ್ನೂ ತನ್ನೊಂದಿಗೆ ಜೀವಿಸುತ್ತಿರುವ ಬೆಳೆದ ಮಗನಿದ್ದಾನೆ. ಆ ಮಗನು ಪ್ರತಿಭಟನೆ ತೋರಿಸಿ ಮನೆಯನ್ನು ಬಿಟ್ಟುಹೋಗಲು ನಿರ್ಣಯಿಸುವಾಗ ತಂದೆಯು ಅವನನ್ನು ತಡೆಯುವುದಿಲ್ಲ. ಆ ಮಗನು ಹಾನಿಕಾರಕ ಜೀವನರೀತಿಯನ್ನು ಅನುಸರಿಸಿ ತೊಂದರೆಯಲ್ಲಿ ಸಿಕ್ಕಿಬೀಳುತ್ತಾನೆ. ಈಗ, ಆ ಮಗನ ಸಮಸ್ಯೆಗಳಿಗೆ ಅವನ ತಂದೆಯು ಕಾರಣನೊ? ಇಲ್ಲ. (ಲೂಕ 15:11-13) ಅದೇ ರೀತಿ, ಮನುಷ್ಯರು ದುರ್ಮಾರ್ಗವನ್ನು ಹಿಡಿಯುವ ಆಯ್ಕೆಮಾಡಿದಾಗೆಲ್ಲ ದೇವರು ಅವರನ್ನು ತಡೆದು ನಿಲ್ಲಿಸಿಲ್ಲ. ಆದರೆ ಫಲಿಸಿರುವ ಸಮಸ್ಯೆಗಳಿಗೆ ಆತನು ಕಾರಣನೂ ಅಲ್ಲ. ಆದುದರಿಂದ, ಮಾನವರ ಮೇಲೆ ಬಂದಿರುವ ಎಲ್ಲ ತೊಂದರೆಗಳಿಗೆ ದೇವರ ಮೇಲೆ ದೂರು ಹೊರಿಸುವುದು ಅನ್ಯಾಯವೆಂಬುದು ಖಂಡಿತ.

9 ಮಾನವಕುಲವು ದುರ್ಮಾರ್ಗವನ್ನು ಅನುಸರಿಸುವಂತೆ ಬಿಡಲು ದೇವರಿಗೆ ಸಕಾರಣಗಳಿವೆ. ವಿವೇಕಿಯೂ ಬಲಾಢ್ಯನೂ ಆದ ನಮ್ಮ ಸೃಷ್ಟಿಕರ್ತನಾದ ಆತನಿಗೆ, ಇದಕ್ಕಿರುವ ಕಾರಣಗಳನ್ನು ನಮಗೆ ವಿವರಿಸಬೇಕೆಂದಿರುವುದಿಲ್ಲ. ಆದರೂ, ಪ್ರೀತಿಯ ಕಾರಣದಿಂದ ದೇವರು ನಮಗೆ ಅದನ್ನು ವಿವರಿಸುತ್ತಾನೆ. ಈ ಕಾರಣಗಳ ಕುರಿತು ಹೆಚ್ಚನ್ನು ನೀವು 11ನೆಯ ಅಧ್ಯಾಯದಲ್ಲಿ ಕಲಿತುಕೊಳ್ಳುವಿರಿ. ಆದರೆ ಈ ವಿಷಯದಲ್ಲಿ ಈ ನಿಶ್ಚಿತ ಆಶ್ವಾಸನೆ ನಿಮಗಿರಲಿ: ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ದೇವರು ಜವಾಬ್ದಾರನಲ್ಲ. ಇದಕ್ಕೆ ತದ್ವಿರುದ್ಧವಾಗಿ, ಇವೆಲ್ಲವುಗಳಿಗಿರುವ ಏಕಮಾತ್ರ ಪರಿಹಾರದ ನಿರೀಕ್ಷೆಯನ್ನು ಆತನು ನಮಗೆ ಒದಗಿಸುತ್ತಾನೆ!—ಯೆಶಾಯ 33:2.

10. ದೇವರು ದುಷ್ಟತನದ ಎಲ್ಲ ದುಷ್ಪರಿಣಾಮಗಳನ್ನು ಸರಿಪಡಿಸುವನೆಂದು ನಾವೇಕೆ ಆತನಲ್ಲಿ ಭರವಸೆಯಿಡಬಲ್ಲೆವು?

10 ಇದಲ್ಲದೆ, ದೇವರು ಪರಿಶುದ್ಧನು. (ಯೆಶಾಯ 6:3) ಅಂದರೆ, ಆತನು ನಿರ್ಮಲನೂ ಶುದ್ಧನೂ ಆಗಿದ್ದಾನೆಂದು ಅರ್ಥ. ಆತನಲ್ಲಿ ಕೆಟ್ಟತನದ ಸುಳಿವೇ ಇಲ್ಲ. ಆದಕಾರಣ ನಾವು ಆತನಲ್ಲಿ ಪೂರ್ಣವಾಗಿ ಭರವಸೆಯಿಡಬಲ್ಲೆವು. ಇಷ್ಟೊಂದು ಪೂರ್ಣ ಭರವಸೆಯನ್ನು ನಾವು ಮಾನವರಲ್ಲಿಡಲು ಸಾಧ್ಯವಿಲ್ಲ. ಏಕೆಂದರೆ ಅವರು ಕೆಲವೊಮ್ಮೆ ಭ್ರಷ್ಟರಾಗಿಬಿಡುತ್ತಾರೆ. ಕೆಟ್ಟ ಜನರು ಮಾಡುವ ಹಾನಿಯನ್ನು ಸರಿಪಡಿಸಲು ಅಧಿಕಾರದಲ್ಲಿರುವ ಅತಿ ಪ್ರಾಮಾಣಿಕ ವ್ಯಕ್ತಿಗೂ ಅನೇಕವೇಳೆ ಶಕ್ತಿಯಿರುವುದಿಲ್ಲ. ಆದರೆ ದೇವರು ಸರ್ವಶಕ್ತನು. ದುಷ್ಟತನವು ಮಾನವಕುಲದ ಮೇಲೆ ತಂದಿರುವ ಸಕಲ ದುಷ್ಪರಿಣಾಮಗಳನ್ನು ಆತನು ಸರಿಪಡಿಸಶಕ್ತನಾಗಿರುವುದು ಮಾತ್ರವಲ್ಲ, ಹಾಗೆ ಖಂಡಿತವಾಗಿಯೂ ಮಾಡುವನು ಸಹ. ಮತ್ತು ದೇವರು ಕ್ರಮ ಕೈಕೊಳ್ಳುವಾಗ ದುಷ್ಟತನವನ್ನು ನಿತ್ಯಕ್ಕೂ ಇಲ್ಲವಾಗಿಸುವನು!—ಕೀರ್ತನೆ 37:9-11.

ನಾವು ಎದುರಿಸುವ ಅನ್ಯಾಯಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ?

11. (ಎ) ಅನ್ಯಾಯದ ಬಗ್ಗೆ ದೇವರ ಅನಿಸಿಕೆಯೇನು? (ಬಿ) ನಿಮ್ಮ ಕಷ್ಟಸಂಕಟದ ಬಗ್ಗೆ ದೇವರಿಗೆ ಹೇಗನಿಸುತ್ತದೆ?

11 ಈ ಮಧ್ಯೆ, ಜಗತ್ತಿನಲ್ಲಿ ಮತ್ತು ನಮ್ಮ ಬದುಕಿನಲ್ಲಿ ಸಂಭವಿಸುತ್ತಿರುವ ಸಂಗತಿಗಳ ಬಗ್ಗೆ ದೇವರಿಗೆ ಹೇಗನಿಸುತ್ತದೆ? ದೇವರು “ನ್ಯಾಯವನ್ನು ಪ್ರೀತಿಸುತ್ತಾನೆ” ಎಂದು ಬೈಬಲು ಬೋಧಿಸುತ್ತದೆ. (ಕೀರ್ತನೆ 37:28, NIBV) ಆದಕಾರಣ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಆತನು ತುಂಬ ಗಂಭೀರವಾದದ್ದಾಗಿ ಪರಿಗಣಿಸುತ್ತಾನೆ. ಎಲ್ಲ ರೀತಿಯ ಅನ್ಯಾಯವನ್ನು ಆತನು ದ್ವೇಷಿಸುತ್ತಾನೆ. ಗತಕಾಲಗಳಲ್ಲಿ ಜಗತ್ತಿನಲ್ಲಿ ದುಷ್ಟತನವು ತುಂಬಿದ್ದಾಗ, ದೇವರು “ಹೃದಯದಲ್ಲಿ ನೊಂದುಕೊಂಡನು” ಎಂದು ಬೈಬಲು ಹೇಳುತ್ತದೆ. (ಆದಿಕಾಂಡ 6:5, 6) ದೇವರು ಮಾರ್ಪಟ್ಟಿಲ್ಲ ಅಥವಾ ಬದಲಾಗಿಲ್ಲ. (ಮಲಾಕಿಯ 3:6) ಲೋಕದಲ್ಲೆಲ್ಲಾ ಇರುವ ಕಷ್ಟಸಂಕಟವನ್ನು ನೋಡಲು ಆತನು ಈಗಲೂ ಇಷ್ಟಪಡುವುದಿಲ್ಲ. ಜನರು ನರಳುವುದನ್ನು ನೋಡಲು ದೇವರಿಗೆ ಮನಸ್ಸಿಲ್ಲ. “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತದೆ ಬೈಬಲು.—1 ಪೇತ್ರ 5:7.

ಯೆಹೋವನು ವಿಶ್ವದ ಪ್ರೀತಿಪರ ಸೃಷ್ಟಿಕರ್ತನಾಗಿದ್ದಾನೆಂದು ಬೈಬಲ್‌ ಕಲಿಸುತ್ತದೆ

12, 13. (ಎ) ಪ್ರೀತಿಯಂಥ ಸುಗುಣಲಕ್ಷಣಗಳು ನಮ್ಮಲ್ಲಿರುವುದೇಕೆ, ಮತ್ತು ಪ್ರೀತಿಯು ಲೋಕದ ಕಡೆಗಿನ ನಮ್ಮ ವೀಕ್ಷಣವನ್ನು ಹೇಗೆ ಪ್ರಭಾವಿಸುತ್ತದೆ? (ಬಿ) ಲೋಕದ ಸಮಸ್ಯೆಗಳ ಬಗ್ಗೆ ದೇವರು ನಿಜವಾಗಿಯೂ ಏನಾದರೂ ಮಾಡುವನೆಂದು ನೀವೇಕೆ ನಿಶ್ಚಯದಿಂದಿರಬಲ್ಲಿರಿ?

12 ಕಷ್ಟಸಂಕಟಗಳನ್ನು ನೋಡಲು ದೇವರು ಇಷ್ಟಪಡುವುದಿಲ್ಲವೆಂದು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು? ಇನ್ನೂ ಹೆಚ್ಚು ರುಜುವಾತು ಇಲ್ಲಿದೆ: ಮನುಷ್ಯನು ದೇವರ ಸ್ವರೂಪದಲ್ಲಿ ಮಾಡಲ್ಪಟ್ಟನೆಂದು ಬೈಬಲು ಬೋಧಿಸುತ್ತದೆ. (ಆದಿಕಾಂಡ 1:26) ಆದಕಾರಣ, ದೇವರಲ್ಲಿರುವಂಥ ಸುಗುಣಲಕ್ಷಣಗಳೇ ನಮ್ಮಲ್ಲಿಯೂ ಇವೆ. ದೃಷ್ಟಾಂತಕ್ಕಾಗಿ, ಮುಗ್ಧ ಜನರು ಕಷ್ಟಾನುಭವಿಸುವುದನ್ನು ನೋಡುವಾಗ ಆ ದೃಶ್ಯವು ನಿಮ್ಮನ್ನು ಕಾಡಿಸುತ್ತಿರುತ್ತದೆಯೆ? ಇಂತಹ ಅನ್ಯಾಯಗಳನ್ನು ನೀವು ಮನಸ್ಸಿಗೆ ತೆಗೆದುಕೊಳ್ಳುವುದಾದರೆ, ದೇವರು ಅವುಗಳ ವಿಷಯದಲ್ಲಿ ಇನ್ನೂ ಹೆಚ್ಚು ಚಿಂತೆಪಡುತ್ತಾನೆಂಬ ಖಾತ್ರಿ ನಿಮಗಿರಲಿ.

13 ಮಾನವರಿಗಿರುವ ಅತ್ಯಂತ ಶ್ರೇಷ್ಠ ಗುಣಗಳಲ್ಲಿ ಒಂದು, ಪ್ರೀತಿಸುವ ಸಾಮರ್ಥ್ಯವೇ ಆಗಿದೆ. ಅದು ದೇವರನ್ನು ಪ್ರತಿಬಿಂಬಿಸುತ್ತದೆ ಸಹ. “ದೇವರು ಪ್ರೀತಿಸ್ವರೂಪಿಯು” ಎಂದು ಬೈಬಲು ಬೋಧಿಸುತ್ತದೆ. (1 ಯೋಹಾನ 4:8) ದೇವರು ಪ್ರೀತಿಸುತ್ತಾನೆಂಬ ಕಾರಣದಿಂದ ನಾವೂ ಪ್ರೀತಿಸುತ್ತೇವೆ. ನೀವು ಲೋಕದಲ್ಲಿ ನೋಡುವ ನರಳಾಟ ಹಾಗೂ ಅನ್ಯಾಯವನ್ನು ಕೊನೆಗೊಳಿಸಲು ಪ್ರೀತಿಯು ನಿಮ್ಮನ್ನು ಪ್ರೇರಿಸೀತೆ? ನಿಮ್ಮಲ್ಲಿ ಆ ಶಕ್ತಿ ಇರುತ್ತಿದ್ದರೆ, ನೀವು ಹಾಗೆ ಮಾಡುತ್ತಿದ್ದಿರೊ? ಮಾಡುತ್ತಿದ್ದಿರಿ ಎಂಬುದು ನಿಶ್ಚಯ! ದೇವರೂ ಹಾಗೆಯೇ ನರಳಾಟ ಮತ್ತು ಅನ್ಯಾಯವನ್ನು ಕೊನೆಗೊಳಿಸುವನೆಂಬ ಅದೇ ಖಾತ್ರಿ ನಿಮಗಿರಬಲ್ಲದು. ಈ ಪುಸ್ತಕದ ಮುನ್ನುಡಿಯಲ್ಲಿ ಹೇಳಲ್ಪಟ್ಟಿರುವ ವಾಗ್ದಾನಗಳು ಕೇವಲ ಸ್ವಪ್ನಗಳೂ ಅಲ್ಲ, ನಿರರ್ಥಕವಾದ ನಿರೀಕ್ಷೆಗಳೂ ಅಲ್ಲ. ದೇವರ ವಾಗ್ದಾನಗಳು ನೆರವೇರುವುದು ನಿಶ್ಚಯ! ಆದರೆ, ಇಂತಹ ವಾಗ್ದಾನಗಳಲ್ಲಿ ನೀವು ನಂಬಿಕೆಯಿಡಬೇಕಾದರೆ, ಆ ವಾಗ್ದಾನಗಳನ್ನು ಮಾಡಿರುವ ದೇವರ ಬಗ್ಗೆ ನೀವು ಇನ್ನೂ ಹೆಚ್ಚನ್ನು ತಿಳಿಯುವುದು ಆವಶ್ಯಕ.

ತಾನು ಯಾರೆಂಬುದನ್ನು ನೀವು ತಿಳಿದುಕೊಳ್ಳಬೇಕೆಂಬುದು ದೇವರ ಬಯಕೆ

ಯಾರಾದರೂ ನಿಮ್ಮ ಪರಿಚಯ ಮಾಡಿಕೊಳ್ಳಬೇಕೆಂದು ನೀವು ಬಯಸುವಾಗ, ನಿಮ್ಮ ಹೆಸರನ್ನು ಅವರಿಗೆ ತಿಳಿಸುವಿರಲ್ಲವೇ? ದೇವರು ತನ್ನ ಹೆಸರನ್ನು ನಮಗೆ ಬೈಬಲಿನಲ್ಲಿ ತಿಳಿಸಿದ್ದಾನೆ

14. ದೇವರ ಹೆಸರೇನು, ಮತ್ತು ನಾವು ಅದನ್ನು ಏಕೆ ಉಪಯೋಗಿಸಬೇಕು?

14 ಯಾರಾದರೂ ನಿಮ್ಮ ಪರಿಚಯ ಮಾಡಿಕೊಳ್ಳಬೇಕೆಂದು ನೀವು ಬಯಸುವುದಾದರೆ ನೀವೇನು ಮಾಡುತ್ತೀರಿ? ಆ ವ್ಯಕ್ತಿಗೆ ನಿಮ್ಮ ಹೆಸರನ್ನು ಹೇಳುತ್ತೀರಿ, ಅಲ್ಲವೆ? ಹಾಗಾದರೆ ದೇವರಿಗೆ ಒಂದು ಹೆಸರಿದೆಯೆ? ಆತನ ಹೆಸರು “ದೇವರು” ಅಥವಾ “ಕರ್ತನು” ಎಂಬುದು ಅನೇಕ ಧರ್ಮಗಳ ಉತ್ತರವಾಗಿದೆ. ಆದರೆ ಅವು ಆತನ ವೈಯಕ್ತಿಕ ಹೆಸರುಗಳಲ್ಲ. ಅವು ಬಿರುದುಗಳಾಗಿವೆ, “ಅರಸ” ಮತ್ತು “ಅಧ್ಯಕ್ಷ” ಎಂಬವುಗಳ ಹಾಗೆ. ಬೈಬಲು, ದೇವರಿಗೆ ಅನೇಕ ಬಿರುದುಗಳಿವೆಯೆಂದು ಬೋಧಿಸುತ್ತದೆ. ಅವುಗಳಲ್ಲಿ “ದೇವರು” ಮತ್ತು “ಕರ್ತನು” ಎಂಬವೂ ಸೇರಿವೆ. ಆದರೆ ದೇವರಿಗೆ ಒಂದು ವೈಯಕ್ತಿಕ ಹೆಸರೂ ಇದೆಯೆಂದು, ಅದು ಯೆಹೋವ ಎಂದೂ ಬೈಬಲು ಬೋಧಿಸುತ್ತದೆ. ಕೀರ್ತನೆ 83:18 ಹೇಳುವುದು: “ಆಗ ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು ಗ್ರಹಿಸುವರು.” ಒಂದುವೇಳೆ ನಿಮ್ಮ ಬೈಬಲ್‌ ಭಾಷಾಂತರದಲ್ಲಿ ಆ ಹೆಸರು ಇಲ್ಲದಿರುವಲ್ಲಿ, ಹೀಗೇಕೆ ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ನೀವು ಈ ಪುಸ್ತಕದಲ್ಲಿರುವ ಪರಿಶಿಷ್ಟದ 195-7ನೇ ಪುಟಗಳನ್ನು ನೋಡಬಹುದು. ಸತ್ಯ ವಿಷಯವೇನಂದರೆ, ಬೈಬಲಿನ ಪುರಾತನ ಹಸ್ತಪ್ರತಿಗಳಲ್ಲಿ ದೇವರ ಹೆಸರು ಸಾವಿರಾರು ಬಾರಿ ಕಂಡುಬರುತ್ತದೆ. ಆದುದರಿಂದ ತನ್ನ ಹೆಸರನ್ನು ನೀವು ತಿಳಿದಿರಬೇಕೆಂಬುದೂ ಅದನ್ನು ಬಳಸಬೇಕೆಂಬುದೂ ಯೆಹೋವನ ಅಪೇಕ್ಷೆಯಾಗಿದೆ. ಒಂದು ಅರ್ಥದಲ್ಲಿ, ದೇವರು ತನ್ನನ್ನು ನಿಮಗೆ ಪರಿಚಯಿಸಲು ಬೈಬಲನ್ನು ಉಪಯೋಗಿಸುತ್ತಿದ್ದಾನೆ ಎಂದು ಹೇಳಸಾಧ್ಯವಿದೆ.

15. ಯೆಹೋವ ಎಂಬ ಹೆಸರಿನ ಅರ್ಥವೇನು?

15 ದೇವರು ತನಗೆ ಒಂದು ಅರ್ಥಭರಿತವಾದ ಹೆಸರನ್ನು ಕೊಟ್ಟನು. ಯೆಹೋವ ಎಂಬ ಆತನ ಹೆಸರಿನ ಅರ್ಥವು, ದೇವರು ತಾನು ಮಾಡುವ ಯಾವುದೇ ವಾಗ್ದಾನವನ್ನು ನೆರವೇರಿಸಬಲ್ಲನು ಮತ್ತು ತನ್ನ ಮನಸ್ಸಿನಲ್ಲಿರುವ ಯಾವುದೇ ಉದ್ದೇಶವನ್ನು ಪೂರೈಸಬಲ್ಲನು ಎಂದಾಗಿದೆ. * ದೇವರ ಹೆಸರು ಅದ್ವಿತೀಯವಾದದ್ದು, ನಿಜವಾಗಿಯೂ ಅಪೂರ್ವವಾದದ್ದು. ಅದು ಆತನಿಗೆ ಮಾತ್ರ ಸೇರಿದ್ದಾಗಿದೆ. ಯೆಹೋವನು ಹಲವಾರು ವಿಧಗಳಲ್ಲಿ ಅದ್ವಿತೀಯನು. ಅದು ಹೇಗೆ?

16, 17. (ಎ) “ಸರ್ವಶಕ್ತನು” (ಬಿ) ‘ನಿತ್ಯತೆಯ ಅರಸನು’ (ಸಿ) ‘ಸೃಷ್ಟಿಕರ್ತನು’ ಎಂಬ ಬಿರುದುಗಳಿಂದ ನಾವು ಯೆಹೋವನ ಬಗ್ಗೆ ಏನನ್ನು ಕಲಿಯಬಹುದು?

16 ಕೀರ್ತನೆ 83:18 ಯೆಹೋವನ ಕುರಿತು, ‘ನೀನೊಬ್ಬನೇ ಸರ್ವೋನ್ನತನು’ ಎಂದು ಹೇಳಿರುವುದನ್ನು ನಾವು ನೋಡಿದೆವು. ಅದೇ ರೀತಿ, ಯೆಹೋವನನ್ನು ಮಾತ್ರ “ಸರ್ವಶಕ್ತನು” ಎಂದು ಸೂಚಿಸಲಾಗಿದೆ. ಪ್ರಕಟನೆ 15:3 ಹೇಳುವುದು: “ದೇವರಾದ ಕರ್ತನೇ [“ಯೆಹೋವನೇ,” NW], ಸರ್ವಶಕ್ತನೇ, ನಿನ್ನ ಕೃತ್ಯಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಸರ್ವಜನಾಂಗಗಳ [“ನಿತ್ಯತೆಯ,” NW] ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ.” “ಸರ್ವಶಕ್ತನು” ಎಂಬ ಬಿರುದು, ಎಲ್ಲ ಜೀವಿಗಳಲ್ಲಿ ಯೆಹೋವನೇ ಅತಿ ಬಲಾಢ್ಯನೆಂದು ಕಲಿಸುತ್ತದೆ. ಆತನ ಶಕ್ತಿಗೆ ಸರಿಸಾಟಿಯಾದದ್ದು ಯಾವುದೂ ಇಲ್ಲ; ಅದು ಸರ್ವೋಚ್ಚವಾದ ಶಕ್ತಿ. ಮತ್ತು ‘ನಿತ್ಯತೆಯ ಅರಸನು’ ಎಂಬ ಬಿರುದು, ಯೆಹೋವನು ಇನ್ನೊಂದು ವಿಧದಲ್ಲಿ ಅದ್ವಿತೀಯನೆಂದು ನಮಗೆ ಜ್ಞಾಪಕ ಹುಟ್ಟಿಸುತ್ತದೆ. ಅದು ಯಾವುದೆಂದರೆ, ಆತನೊಬ್ಬನೇ ಸದಾ ಅಸ್ತಿತ್ವದಲ್ಲಿರುವಾತನು. ಕೀರ್ತನೆ 90:2 ಹೇಳುವುದು: “ಯುಗಯುಗಾಂತರಗಳಲ್ಲಿಯೂ [ಅಥವಾ, ಶಾಶ್ವತವಾಗಿಯೂ] ನೀನೇ ದೇವರು.” ಆ ಯೋಚನೆಯೇ ನಮ್ಮಲ್ಲಿ ಭಯವಿಸ್ಮಯವನ್ನು ಉಂಟುಮಾಡುತ್ತದಲ್ಲವೆ?

17 ಯೆಹೋವನೊಬ್ಬನೇ ಸೃಷ್ಟಿಕರ್ತನಾಗಿರುವುದರಿಂದಲೂ ಆತನು ಅದ್ವಿತೀಯನು. ಪ್ರಕಟನೆ 4:11 ರಲ್ಲಿ ನಾವು ಹೀಗೆ ಓದುತ್ತೇವೆ: “ಕರ್ತನೇ [“ಯೆಹೋವನೇ,” NW] ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.” ನಿಮ್ಮಿಂದ ಯೋಚಿಸಸಾಧ್ಯವಿರುವ ಸಮಸ್ತವೂ, ಅಂದರೆ ಸ್ವರ್ಗದಲ್ಲಿರುವ ಅದೃಶ್ಯ ಆತ್ಮಜೀವಿಗಳಿಂದ ಹಿಡಿದು, ರಾತ್ರಿ ಆಕಾಶದಲ್ಲಿ ತುಂಬಿ ಬೆಳಗುವ ತಾರೆಗಳು, ವೃಕ್ಷಗಳಲ್ಲಿ ಬೆಳೆಯುತ್ತಿರುವ ಹಣ್ಣುಹಂಪಲುಗಳು ಮತ್ತು ಸಾಗರ ಹಾಗೂ ನದಿಗಳಲ್ಲಿ ಈಜುತ್ತಿರುವ ಮೀನುಗಳ ವರೆಗೂ—ಇವೆಲ್ಲವೂ ಯೆಹೋವನು ಸೃಷ್ಟಿಕರ್ತನಾಗಿರುವ ಕಾರಣವೇ ಅಸ್ತಿತ್ವದಲ್ಲಿವೆ!

ನೀವು ಯೆಹೋವನ ಸಮೀಪಕ್ಕೆ ಬರಬಲ್ಲಿರೊ?

18. ತಾವು ಎಂದಿಗೂ ದೇವರ ಸಮೀಪಕ್ಕೆ ಬರಸಾಧ್ಯವಿಲ್ಲವೆಂದು ಕೆಲವರು ಭಾವಿಸುವುದೇಕೆ, ಆದರೆ ಬೈಬಲು ಏನು ಬೋಧಿಸುತ್ತದೆ?

18 ಭಯಮಿಶ್ರಿತ ಗೌರವವನ್ನು ಪ್ರೇರಿಸುವ ಯೆಹೋವನ ಗುಣಗಳ ಬಗ್ಗೆ ಓದುವಾಗ ಕೆಲವರು ತುಸು ಗಾಬರಿಗೊಳ್ಳುತ್ತಾರೆ. ತಮಗೆ ಹೋಲಿಸುವಾಗ ದೇವರು ತೀರ ಉನ್ನತನು ಮತ್ತು ತಾವೆಂದಿಗೂ ಆತನ ಸಮೀಪಕ್ಕೆ ಬರಸಾಧ್ಯವಿಲ್ಲವೆಂದು ಇಲ್ಲವೆ ಅಂತಹ ಉನ್ನತ ದೇವರ ದೃಷ್ಟಿಯಲ್ಲಿ ತಾವು ಲಕ್ಷ್ಯಕ್ಕೆ ಕೂಡ ಬರಲಾರೆವೆಂಬುದು ಅವರ ಶಂಕೆಯಾಗಿದೆ. ಆದರೆ ಈ ವಿಚಾರವು ಸರಿಯೊ? ಇಲ್ಲ, ಬೈಬಲು ಇದಕ್ಕೆ ತದ್ವಿರುದ್ಧವಾದದ್ದನ್ನು ಬೋಧಿಸುತ್ತದೆ. “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂದು ಅದು ಯೆಹೋವನ ಬಗ್ಗೆ ಹೇಳುತ್ತದೆ. (ಅ. ಕೃತ್ಯಗಳು 17:27) “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಸಹ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಯಾಕೋಬ 4:8.

19. (ಎ) ನಾವು ಹೇಗೆ ದೇವರ ಸಮೀಪಕ್ಕೆ ಬರಬಲ್ಲೆವು, ಮತ್ತು ಇದರಿಂದ ಯಾವ ಪ್ರಯೋಜನ ಸಿಗುವುದು? (ಬಿ) ದೇವರ ಯಾವ ಗುಣಗಳು ನಿಮಗೆ ಅತ್ಯಾಕರ್ಷಣೀಯವಾಗಿರುತ್ತವೆ?

19 ನೀವು ಹೇಗೆ ದೇವರ ಸಮೀಪಕ್ಕೆ ಬರಬಲ್ಲಿರಿ? ಪ್ರಥಮವಾಗಿ, ನೀವೀಗ ಏನನ್ನು ಮಾಡುತ್ತಿದ್ದೀರೊ ಅದನ್ನು ಅಂದರೆ ದೇವರ ಬಗ್ಗೆ ಕಲಿಯುತ್ತಿರುವುದನ್ನು ಮುಂದುವರಿಸಿರಿ. ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ಹೌದು, ಯೆಹೋವನ ಮತ್ತು ಯೇಸುವಿನ ಬಗ್ಗೆ ಕಲಿಯುತ್ತಿರುವುದು ನಿತ್ಯಜೀವಕ್ಕೆ ನಡೆಸುತ್ತದೆಂದು ಬೈಬಲು ಬೋಧಿಸುತ್ತದೆ! ಈಗಾಗಲೇ ಗಮನಿಸಿರುವಂತೆ, “ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:16) ಇದಲ್ಲದೆ ಯೆಹೋವನಿಗೆ ಇನ್ನೂ ಅನೇಕ ಸೊಗಸಾದ ಮತ್ತು ಆಕರ್ಷಕವಾದ ಗುಣಗಳಿವೆ. ಉದಾಹರಣೆಗೆ, ಯೆಹೋವನು “ಕನಿಕರವೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು,” ಎನ್ನುತ್ತದೆ ಬೈಬಲು. (ವಿಮೋಚನಕಾಂಡ 34:6) ಆತನು “ಒಳ್ಳೆಯವನೂ ಕ್ಷಮಿಸುವುದಕ್ಕೆ ಸಿದ್ಧನೂ” ಆಗಿದ್ದಾನೆ. (ಕೀರ್ತನೆ 86:5, NIBV) ಆತನು ನಂಬಿಗಸ್ತನು. (1 ಕೊರಿಂಥ 1:9) ನೀವು ಬೈಬಲನ್ನು ಇನ್ನೂ ಹೆಚ್ಚಾಗಿ ಓದುವಾಗ, ಯೆಹೋವನಲ್ಲಿ ಈ ಗುಣಗಳಲ್ಲದೆ ಇನ್ನೂ ಅನೇಕ ಆಕರ್ಷಕ ಗುಣಗಳು ಇರುವುದನ್ನು ಆತನು ಹೇಗೆ ತೋರಿಸಿಕೊಟ್ಟಿದ್ದಾನೆಂಬುದನ್ನು ನೋಡುವಿರಿ.

20-22. (ಎ) ನಾವು ದೇವರನ್ನು ನೋಡಸಾಧ್ಯವಿಲ್ಲದಿರುವುದು, ನಾವು ಆತನ ಸಮೀಪಕ್ಕೆ ಬರುವುದನ್ನು ತಡೆಯುತ್ತದೊ? ವಿವರಿಸಿ. (ಬಿ) ಸದಭಿಪ್ರಾಯವುಳ್ಳ ಕೆಲವರು ನೀವೇನು ಮಾಡುವಂತೆ ಒತ್ತಾಯಿಸಬಹುದು, ಆದರೆ ನೀವೇನು ಮಾಡಬೇಕು?

20 ದೇವರು ಅದೃಶ್ಯವಾದ ಆತ್ಮಜೀವಿಯಾಗಿರುವುದರಿಂದ ನೀವಾತನನ್ನು ನೋಡಲಾರಿರಿ ಎಂಬುದು ನಿಜ. (ಯೋಹಾನ 1:18; 4:24; 1 ತಿಮೊಥೆಯ 1:17) ಆದರೆ ಬೈಬಲಿನ ಪುಟಗಳಿಂದ ನೀವು ಆತನ ಬಗ್ಗೆ ಕಲಿಯುವ ಮೂಲಕ, ನೀವು ಆತನನ್ನು ಒಬ್ಬ ವ್ಯಕ್ತಿಯಾಗಿ ಪರಿಚಯ ಮಾಡಿಕೊಳ್ಳಬಲ್ಲಿರಿ. ಕೀರ್ತನೆಗಾರನು ಹೇಳಿದಂತೆ, ನೀವು “ಯೆಹೋವನ . . . ಪ್ರಸನ್ನತೆಯನ್ನು” ನೋಡಬಲ್ಲಿರಿ. (ಕೀರ್ತನೆ 27:4; ರೋಮಾಪುರ 1:20) ಯೆಹೋವನ ಕುರಿತು ನೀವು ಹೆಚ್ಚನ್ನು ಕಲಿತುಕೊಂಡಂತೆ ಆತನು ನಿಮಗೆ ಹೆಚ್ಚು ನೈಜನಾಗುವನು ಮಾತ್ರವಲ್ಲ, ಆತನನ್ನು ಪ್ರೀತಿಸಿ, ಆತನ ಸಮೀಪಕ್ಕೆ ಬರಲು ನಿಮಗೆ ಹೆಚ್ಚು ಕಾರಣಗಳೂ ಸಿಗುವವು.

ಒಬ್ಬ ಪ್ರೀತಿಯ ತಂದೆಗೆ ತನ್ನ ಮಕ್ಕಳ ಕಡೆಗಿರುವ ಪ್ರೀತಿಯು, ನಮ್ಮ ಸ್ವರ್ಗೀಯ ಪಿತನಿಗೆ ನಮ್ಮ ಮೇಲಿರುವ ಹೆಚ್ಚಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ

21 ಯೆಹೋವನನ್ನು ನಮ್ಮ ತಂದೆಯಾಗಿ ನಾವು ಪರಿಗಣಿಸುವಂತೆ ಬೈಬಲು ಏಕೆ ನಮಗೆ ಬೋಧಿಸುತ್ತದೆಂಬುದರ ತಿಳಿವಳಿಕೆಯನ್ನು ನೀವು ಕ್ರಮೇಣ ಪಡೆದುಕೊಳ್ಳುವಿರಿ. (ಮತ್ತಾಯ 6:9, 10) ಆತನೇ ನಮಗೆ ಜೀವ ಕೊಟ್ಟಿದ್ದಾನೆ ಮಾತ್ರವಲ್ಲ, ಒಬ್ಬ ಪ್ರೀತಿಪೂರ್ಣನಾದ ತಂದೆಯು ತನ್ನ ಮಕ್ಕಳಿಗಾಗಿ ಬಯಸುವಂಥ ಅತ್ಯುತ್ತಮವಾದ ಜೀವನವನ್ನೇ ದೇವರು ಸಹ ನಮಗಾಗಿ ಬಯಸುತ್ತಾನೆ. (ಕೀರ್ತನೆ 36:9) ಮಾನವರು ಯೆಹೋವನ ಸ್ನೇಹಿತರಾಗಬಲ್ಲರೆಂದೂ ಬೈಬಲು ಬೋಧಿಸುತ್ತದೆ. (ಯಾಕೋಬ 2:23) ಸ್ವಲ್ಪ ಯೋಚಿಸಿ—ನೀವು ಇಡೀ ವಿಶ್ವದ ಸೃಷ್ಟಿಕರ್ತನ ಸ್ನೇಹಿತರಾಗಬಲ್ಲಿರಿ!

22 ನೀವು ಬೈಬಲಿನಿಂದ ಇನ್ನೂ ಹೆಚ್ಚು ವಿಷಯಗಳನ್ನು ಕಲಿತುಕೊಳ್ಳುವಾಗ, ಸದಭಿಪ್ರಾಯವುಳ್ಳ ಕೆಲವರು, ಇಂತಹ ಅಧ್ಯಯನಗಳನ್ನು ನಿಲ್ಲಿಸಿಬಿಡುವಂತೆ ನಿಮ್ಮನ್ನು ಒತ್ತಾಯಿಸಬಹುದು. ನೀವು ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವಿರಿ ಎಂಬ ಚಿಂತೆ ಅವರಿಗಿರಬಹುದು. ಆದರೆ ನಿಮಗಿರಸಾಧ್ಯವಿರುವುದರಲ್ಲಿ ಅತ್ಯಂತ ಉತ್ತಮವಾದ ಸ್ನೇಹವನ್ನು ಬೆಸೆಯುವಾಗ ಯಾರೂ ಅಡ್ಡಬಂದು ನಿಮ್ಮನ್ನು ತಡೆಯುವಂತೆ ಬಿಡಬೇಡಿರಿ.

23, 24. (ಎ) ನೀವೇನು ಕಲಿಯುತ್ತಿದ್ದೀರೊ ಅದರ ಬಗ್ಗೆ ಏಕೆ ಪ್ರಶ್ನೆಗಳನ್ನು ಕೇಳುತ್ತ ಹೋಗಬೇಕು? (ಬಿ) ಮುಂದಿನ ಅಧ್ಯಾಯದ ವಿಷಯವೇನು?

23 ಆರಂಭದಲ್ಲಿ ಅರ್ಥವಾಗದ ಕೆಲವು ವಿಷಯಗಳಿರುವವು ಎಂಬುದು ಖಂಡಿತ. ಆಗ ಸಹಾಯಕ್ಕಾಗಿ ಕೇಳಿಕೊಳ್ಳಲು ದೈನ್ಯಭಾವ ಬೇಕಾದೀತು, ಆದರೆ ಮುಜುಗರದ ಕಾರಣ ಹಿಂಜರಿಯಬೇಡಿರಿ. ಯೇಸು ಹೇಳಿದ್ದೇನೆಂದರೆ ಒಂದು ಚಿಕ್ಕ ಮಗುವಿನಂತೆ ನಮ್ರರಾಗಿರುವುದು ಅಥವಾ ದೀನರಾಗಿರುವುದು ಒಳ್ಳೇದು. (ಮತ್ತಾಯ 18:2-4) ಮತ್ತು ನಮಗೆ ತಿಳಿದಿರುವಂತೆ ಮಕ್ಕಳು ಅನೇಕಾನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ನೀವು ಕಂಡುಹಿಡಿಯಬೇಕೆಂಬುದು ದೇವರ ಅಪೇಕ್ಷೆ. ದೇವರ ಬಗ್ಗೆ ಕಲಿಯಲು ತವಕಪಡುತ್ತಿದ್ದ ಕೆಲವರನ್ನು ಬೈಬಲು ಹೊಗಳುತ್ತದೆ. ಅವರು ಏನು ಕಲಿಯುತ್ತಿದ್ದರೊ ಅದು ಸತ್ಯವೆಂದು ಖಚಿತಪಡಿಸಿಕೊಳ್ಳಲಿಕ್ಕಾಗಿ ಅವರು ಶಾಸ್ತ್ರವನ್ನು ಜಾಗರೂಕತೆಯಿಂದ ಪರೀಕ್ಷಿಸಿದರು.—ಅ. ಕೃತ್ಯಗಳು 17:11.

24 ಯೆಹೋವನ ಕುರಿತು ಕಲಿಯುವ ಅತ್ಯುತ್ತಮ ಮಾರ್ಗವು ಬೈಬಲನ್ನು ಪರಿಶೀಲಿಸುವುದೇ ಆಗಿದೆ. ಬೇರೆ ಗ್ರಂಥಗಳಿಗಿಂತ ಅದು ಭಿನ್ನವಾಗಿದೆ. ಆದರೆ ಯಾವ ವಿಧದಲ್ಲಿ? ಮುಂದಿನ ಅಧ್ಯಾಯವು ಈ ವಿಷಯವನ್ನು ಪರಿಗಣಿಸುವುದು.

^ ಪ್ಯಾರ. 15 ದೇವರ ಹೆಸರಿನ ಅರ್ಥ ಹಾಗೂ ಉಚ್ಚಾರಣೆಯ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯು ಪರಿಶಿಷ್ಟದ 195-7 ನೇ ಪುಟಗಳಲ್ಲಿದೆ.