ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಆರು

ಮೃತಜನರು ಎಲ್ಲಿದ್ದಾರೆ?

ಮೃತಜನರು ಎಲ್ಲಿದ್ದಾರೆ?
  • ನಾವು ಸತ್ತಾಗ ನಮಗೇನು ಸಂಭವಿಸುತ್ತದೆ?

  • ನಾವು ಏಕೆ ಸಾಯುತ್ತೇವೆ?

  • ಮರಣದ ಕುರಿತಾದ ಸತ್ಯಾಂಶವನ್ನು ತಿಳಿಯುವುದು ಸಾಂತ್ವನ ನೀಡುವುದೊ?

1-3. ಜನರು ಮರಣದ ಕುರಿತು ಯಾವ ಪ್ರಶ್ನೆಗಳನ್ನು ಕೇಳುತ್ತಾರೆ, ಮತ್ತು ವಿವಿಧ ಧರ್ಮಗಳು ಯಾವ ಉತ್ತರಗಳನ್ನು ಕೊಡುತ್ತವೆ?

ಈ ಪ್ರಶ್ನೆಗಳ ಕುರಿತು ಸಾವಿರಾರು ವರುಷಗಳಿಂದ ಜನರು ಯೋಚಿಸಿದ್ದಾರೆ. ಇವು ಪ್ರಾಮುಖ್ಯವಾದ ಪ್ರಶ್ನೆಗಳಾಗಿವೆ ಎಂಬುದು ನಿಶ್ಚಯ ಮತ್ತು ನಾವು ಯಾರೇ ಆಗಿರಲಿ, ಎಲ್ಲಿಯೇ ಜೀವಿಸುತ್ತಿರಲಿ, ಇವುಗಳಿಗಾಗಿರುವ ಉತ್ತರಗಳು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಂಬಂಧಪಟ್ಟವುಗಳಾಗಿವೆ.

2 ನಾವು ಹಿಂದಿನ ಅಧ್ಯಾಯದಲ್ಲಿ, ಯೇಸುವಿನ ವಿಮೋಚನಾ ಮೌಲ್ಯದ ಯಜ್ಞವು ಹೇಗೆ ನಿತ್ಯಜೀವದ ದಾರಿಯನ್ನು ತೆರೆಯಿತೆಂಬುದನ್ನು ಚರ್ಚಿಸಿದೆವು. ‘ಇನ್ನು ಮುಂದೆ ಮರಣವಿರದ’ ಒಂದು ಸಮಯವನ್ನು ಬೈಬಲು ಮುಂತಿಳಿಸುತ್ತದೆ ಎಂಬುದನ್ನೂ ನಾವು ಕಲಿತೆವು. (ಪ್ರಕಟನೆ 21:4) ಆದರೆ ಆ ಸಮಯ ಬರುವವರೆಗೂ ಮನುಷ್ಯರು ಸಾಯುತ್ತಿರುತ್ತಾರೆ. ‘ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟು’ ಎಂದನು ವಿವೇಕಿಯಾದ ಅರಸ ಸೊಲೊಮೋನನು. (ಪ್ರಸಂಗಿ 9:5) ನಾವು ಸಾಧ್ಯವಾಗುವಷ್ಟು ಹೆಚ್ಚು ಕಾಲ ಬದುಕಲು ಪ್ರಯತ್ನಿಸುತ್ತೇವೆ. ಹಾಗಿದ್ದರೂ, ನಾವು ಸತ್ತ ಮೇಲೆ ನಮಗೇನು ಸಂಭವಿಸುತ್ತದೆಂದು ಚಿಂತಿಸುತ್ತೇವೆ.

3 ನಮ್ಮ ಪ್ರಿಯಜನರು ಸತ್ತಾಗ ನಾವು ದುಃಖಿಸುತ್ತೇವೆ. ನಾವು ಹೀಗೆ ಕೇಳಬಹುದು: ‘ಅವರಿಗೆ ಏನು ಸಂಭವಿಸಿದೆ? ಅವರು ನರಳುತ್ತಿದ್ದಾರೊ? ಅವರು ನಮ್ಮನ್ನು ಗಮನಿಸುತ್ತಿದ್ದಾರೊ? ನಾವು ಅವರಿಗೆ ಸಹಾಯಮಾಡಲು ಸಾಧ್ಯವಿದೆಯೆ? ನಾವೆಂದಾದರೂ ಅವರನ್ನು ಪುನಃ ನೋಡುವೆವೊ?’ ಲೋಕದ ಧರ್ಮಗಳು ಈ ಪ್ರಶ್ನೆಗಳಿಗೆ ವಿಭಿನ್ನವಾದ ಉತ್ತರಗಳನ್ನು ಕೊಡುತ್ತವೆ. ಕೆಲವು ಧರ್ಮಗಳು, ನೀವು ಒಳ್ಳೇ ಜೀವನ ನಡೆಸುವಲ್ಲಿ ಸ್ವರ್ಗಕ್ಕೆ ಹೋಗುವಿರೆಂದೂ ಕೆಟ್ಟ ಜೀವನ ನಡೆಸುವಲ್ಲಿ ಯಾತನೆಯ ಸ್ಥಳದಲ್ಲಿ ಸುಡಲ್ಪಡುವಿರೆಂದೂ ಬೋಧಿಸುತ್ತವೆ. ಇತರ ಧರ್ಮಗಳು, ಜನರು ಸತ್ತ ಮೇಲೆ ತಮ್ಮ ಪೂರ್ವಿಕರೊಂದಿಗಿರಲು ಆತ್ಮಲೋಕಕ್ಕೆ ಹೋಗುತ್ತಾರೆಂದು ಬೋಧಿಸುತ್ತವೆ. ಇನ್ನೂ ಕೆಲವು ಧರ್ಮಗಳು, ಮೃತರು ನ್ಯಾಯವಿಚಾರಣೆಗಾಗಿ ಅಧೋಲೋಕಕ್ಕೆ ಹೋಗಿ, ಬಳಿಕ ಇನ್ನೊಂದು ದೇಹದಲ್ಲಿ ಪುನರ್ಜನ್ಮ ಹೊಂದುತ್ತಾರೆಂದೂ ಬೋಧಿಸುತ್ತವೆ.

4. ಅನೇಕ ಧರ್ಮಗಳಲ್ಲಿ ಮರಣದ ಕುರಿತಾದ ಯಾವ ಮೂಲಭೂತ ವಿಚಾರವು ಅಡಕವಾಗಿದೆ?

4 ಈ ಧಾರ್ಮಿಕ ಬೋಧನೆಗಳಲ್ಲೆಲ್ಲ ಒಂದೇ ಮೂಲಭೂತ ವಿಚಾರವು ಅಡಕವಾಗಿದೆ, ಏನಂದರೆ ನಮ್ಮ ಶರೀರವು ಸತ್ತ ಮೇಲೆ ಅದರ ಯಾವುದೋ ಭಾಗವು ಬದುಕಿ ಉಳಿಯುತ್ತದೆ ಎಂಬುದೇ. ಗತಕಾಲದ ಮತ್ತು ಇಂದಿನ ಹೆಚ್ಚುಕಡಮೆ ಪ್ರತಿಯೊಂದು ಧರ್ಮಕ್ಕನುಸಾರ ನಾವು ಮರಣಾನಂತರವೂ ನೋಡುವ, ಕೇಳಿಸಿಕೊಳ್ಳುವ ಮತ್ತು ಆಲೋಚಿಸುವ ಸಾಮರ್ಥ್ಯವುಳ್ಳವರಾಗಿ ಸದಾ ಬದುಕಿರುತ್ತೇವೆ. ಆದರೆ ಅದು ಹೇಗೆ ತಾನೇ ಸಾಧ್ಯ? ನಮ್ಮ ಯೋಚನೆಗಳು ಮತ್ತು ಜ್ಞಾನೇಂದ್ರಿಯಗಳೆಲ್ಲವೂ ನಮ್ಮ ಮಿದುಳು ಕಾರ್ಯಪ್ರವೃತ್ತವಾಗಿರುವುದರ ಮೇಲೆ ಹೊಂದಿಕೊಂಡಿರುತ್ತವೆ. ಮರಣದಲ್ಲಿ ನಮ್ಮ ಮಿದುಳು ತನ್ನ ಕಾರ್ಯವನ್ನು ನಿಲ್ಲಿಸುತ್ತದೆ. ನಮ್ಮ ಸ್ಮರಣೆಗಳು, ಭಾವನೆಗಳು ಮತ್ತು ಜ್ಞಾನೇಂದ್ರಿಯಗಳು ಸ್ವತಂತ್ರವಾಗಿ ಯಾವುದೊ ರಹಸ್ಯಗರ್ಭಿತ ರೀತಿಯಲ್ಲಿ ಕೆಲಸ ನಡೆಸುವುದಿಲ್ಲ. ನಮ್ಮ ಮಿದುಳು ನಾಶವಾಗುವಾಗ ಅದೆಲ್ಲವು ಬದುಕಿ ಉಳಿಯುವುದಿಲ್ಲ.

ಸತ್ತಾಗ ನಿಜವಾಗಿಯೂ ಏನು ಸಂಭವಿಸುತ್ತದೆ?

5, 6. ಸತ್ತವರ ಸ್ಥಿತಿಯ ಕುರಿತು ಬೈಬಲು ಏನು ಬೋಧಿಸುತ್ತದೆ?

5 ಸತ್ತ ಮೇಲೆ ಏನು ಸಂಭವಿಸುತ್ತದೆಂಬುದು ಮಿದುಳಿನ ನಿರ್ಮಾಣಿಕನಾದ ಯೆಹೋವನಿಗೆ ರಹಸ್ಯದ ಸಂಗತಿಯಾಗಿರುವುದಿಲ್ಲ. ಆತನಿಗೆ ಸತ್ಯಾಂಶವು ತಿಳಿದದೆ, ಮತ್ತು ತನ್ನ ವಾಕ್ಯವಾದ ಬೈಬಲಿನಲ್ಲಿ ಆತನು ಮೃತರ ಸ್ಥಿತಿ ಏನಾಗಿದೆ ಎಂಬುದನ್ನು ವಿವರಿಸುತ್ತಾನೆ. ಅದರ ಸ್ಪಷ್ಟ ಬೋಧನೆ ಇದಾಗಿದೆ: ಒಬ್ಬ ವ್ಯಕ್ತಿ ಸತ್ತಾಗ, ಅವನು ಅಸ್ತಿತ್ವದಲ್ಲಿ ಇಲ್ಲದೆ ಹೋಗುತ್ತಾನೆ. ಮರಣವು ಜೀವಕ್ಕೆ ವಿರುದ್ಧವಾದದ್ದಾಗಿದೆ. ಮೃತರಿಗೆ ನೋಡುವ, ಕೇಳಿಸಿಕೊಳ್ಳುವ ಅಥವಾ ಆಲೋಚಿಸುವ ಸಾಮರ್ಥ್ಯವಿರುವುದಿಲ್ಲ. ಶರೀರವು ಸಾಯುವಾಗ ಅದರಲ್ಲಿನ ಯಾವುದೇ ಭಾಗವು ಬದುಕಿ ಉಳಿಯುವುದಿಲ್ಲ. ನಮ್ಮಲ್ಲಿ ಅಮರವಾದ ಆತ್ಮವು ಇರುವುದಿಲ್ಲ. *

ಜ್ವಾಲೆ ಎಲ್ಲಿ ಹೋಯಿತು?

6 ಜೀವಿತರಿಗೆ ಸಾಯುತ್ತೇವೆಂಬ ತಿಳಿವಳಿಕೆ ಇದೆಯೆಂದು ಹೇಳಿದ ಬಳಿಕ ಸೊಲೊಮೋನನು ಬರೆದುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” ಆ ಬಳಿಕ ಅವನು ಈ ಮೂಲಸತ್ಯವನ್ನು ವಿಕಸಿಸುತ್ತ, ಸತ್ತವರಿಗೆ ಪ್ರೀತಿಯೂ ಹಗೆಯೂ ಇರುವುದಿಲ್ಲವೆಂದು ಹಾಗೂ “ಪಾತಾಳದಲ್ಲಿ [“ಸಮಾಧಿಯಲ್ಲಿ,” NIBV] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ” ಎಂದೂ ಹೇಳಿದನು. (ಪ್ರಸಂಗಿ 9:5, 6, 10) ಅದೇ ರೀತಿಯಲ್ಲಿ, ಕೀರ್ತನೆ 146:4 ಸಹ ಮನುಷ್ಯನು ಸತ್ತ ಮೇಲೆ ‘ಅವನ ಸಂಕಲ್ಪಗಳೆಲ್ಲಾ ಹಾಳಾಗುತ್ತವೆ’ ಎಂದು ಹೇಳುತ್ತದೆ. ನಾವು ಮರ್ತ್ಯ ಮಾನವರಾಗಿರುವುದರಿಂದ ಮರಣಾನಂತರ ನಾವು ಬದುಕಿ ಉಳಿಯುವುದಿಲ್ಲ. ನಮ್ಮಲ್ಲಿರುವ ಜೀವವು ಒಂದು ಮೇಣದ ಬತ್ತಿಯ ಜ್ವಾಲೆಯಂತಿದೆ. ಆ ಜ್ವಾಲೆ ಆರಿಸಲ್ಪಟ್ಟಾಗ ಅದು ಎಲ್ಲಿಗೂ ಹೋಗುವುದಿಲ್ಲ. ಅದು ಅಸ್ತಿತ್ವದಲ್ಲಿಲ್ಲದೆ ಹೋಗುತ್ತದೆ ಅಷ್ಟೇ.

ಮರಣದ ಬಗ್ಗೆ ಯೇಸು ಏನಂದನು?

7. ಮರಣವು ಯಾವುದರಂತಿದೆ ಎಂದು ಯೇಸು ವಿವರಿಸಿದನು?

7 ಯೇಸು ಕ್ರಿಸ್ತನು ಮೃತರ ಸ್ಥಿತಿಯ ಕುರಿತು ಮಾತಾಡಿದನು. ಇದನ್ನು ಅವನು ಲಾಜರನೆಂಬ ವ್ಯಕ್ತಿಯ ಸಂಬಂಧದಲ್ಲಿ ಮಾಡಿದನು. ಈ ಲಾಜರನು ಯೇಸುವಿಗೆ ಚೆನ್ನಾಗಿ ಪರಿಚಯವಿದ್ದ ವ್ಯಕ್ತಿಯಾಗಿದ್ದನು, ಮತ್ತು ಅವನು ಮರಣಪಟ್ಟನು. ಯೇಸು ತನ್ನ ಶಿಷ್ಯರಿಗೆ, “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಾನೆ” ಎಂದು ಹೇಳಿದನು. ಆಗ ಶಿಷ್ಯರು, ಲಾಜರನು ಯಾವುದೊ ಅಸ್ವಸ್ಥತೆಯಿಂದ ಗುಣಮುಖನಾಗುತ್ತ ವಿಶ್ರಾಂತಿಗಾಗಿ ನಿದ್ರಿಸುತ್ತಿದ್ದಾನೆಂದು ನೆನಸಿದರು. ಆದರೆ ಅವರ ಎಣಿಕೆ ತಪ್ಪಾಗಿತ್ತು. ಯೇಸು ವಿವರಿಸಿದ್ದು: “ಲಾಜರನು ಸತ್ತುಹೋದನು.” (ಯೋಹಾನ 11:11-14) ಇಲ್ಲಿ ಯೇಸು ಮರಣವನ್ನು ವಿಶ್ರಾಂತಿಯ ನಿದ್ರೆಗೆ ಹೋಲಿಸಿದ್ದನ್ನು ಗಮನಿಸಿರಿ. ಲಾಜರನು ಸ್ವರ್ಗದಲ್ಲೂ ಇರಲಿಲ್ಲ, ಬೆಂಕಿ ಉರಿಯುತ್ತಿರುವ ನರಕದಲ್ಲೂ ಇರಲಿಲ್ಲ. ಅವನು ದೇವದೂತರನ್ನಾಗಲಿ ತನ್ನ ಪೂರ್ವಿಕರನ್ನಾಗಲಿ ಭೇಟಿಮಾಡುತ್ತಿರಲಿಲ್ಲ. ಲಾಜರನು ಇನ್ನೊಬ್ಬ ಮಾನವನಾಗಿ ಪುನರ್ಜನ್ಮವನ್ನು ಪಡೆಯುತ್ತಿರಲೂ ಇಲ್ಲ. ಅವನು ಸ್ವಪ್ನಗಳಿಲ್ಲದ ಗಾಢನಿದ್ರೆಯಲ್ಲಿಯೋ ಎಂಬಂತೆ ಮರಣದಲ್ಲಿ ವಿಶ್ರಮಿಸುತ್ತಿದ್ದನು. ಬೇರೆ ಶಾಸ್ತ್ರವಚನಗಳೂ ಮರಣವನ್ನು ನಿದ್ರೆಗೆ ಹೋಲಿಸುತ್ತವೆ. ದೃಷ್ಟಾಂತಕ್ಕೆ, ಶಿಷ್ಯನಾದ ಸ್ತೆಫನನು ಕಲ್ಲೆಸೆದು ಕೊಲ್ಲಲ್ಪಟ್ಟಾಗ, ಅವನು “ನಿದ್ರೆಹೋದನು” ಎನ್ನುತ್ತದೆ ಬೈಬಲು. (ಅ. ಕೃತ್ಯಗಳು 7:60) ಅದೇ ರೀತಿ, ತನ್ನ ದಿನಗಳಲ್ಲಿ ಮರಣದಲ್ಲಿ “ನಿದ್ರೆಹೋಗಿದ್ದ” ಕೆಲವರ ವಿಷಯದಲ್ಲಿ ಅಪೊಸ್ತಲ ಪೌಲನು ಬರೆದನು.—1 ಕೊರಿಂಥ 15:6.

ಭೂಮಿಯ ಮೇಲೆ ಸದಾಕಾಲ ಜೀವಿಸುವಂತೆ ಯೆಹೋವನು ಮಾನವರನ್ನು ನಿರ್ಮಿಸಿದನು

8. ಜನರು ಸಾಯುವುದು ದೇವರ ಉದ್ದೇಶವಾಗಿರಲಿಲ್ಲವೆಂದು ನಮಗೆ ಹೇಗೆ ಗೊತ್ತು?

8 ಜನರು ಸಾಯಬೇಕೆಂಬುದು ದೇವರ ಮೂಲ ಉದ್ದೇಶವಾಗಿತ್ತೊ? ಖಂಡಿತವಾಗಿಯೂ ಇಲ್ಲ! ಯೆಹೋವನು ಮನುಷ್ಯನನ್ನು ಭೂಮಿಯ ಮೇಲೆ ಸದಾ ಜೀವಿಸಲಿಕ್ಕಾಗಿ ನಿರ್ಮಿಸಿದನು. ನಾವು ಈ ಪುಸ್ತಕದಲ್ಲಿ ಆರಂಭದಲ್ಲೇ ಕಲಿತಂತೆ, ದೇವರು ಪ್ರಥಮ ಮಾನವ ದಂಪತಿಯನ್ನು ಒಂದು ಆಹ್ಲಾದಕರವಾದ ಪರದೈಸಿನಲ್ಲಿಟ್ಟನು. ಅವರಿಗೆ ಪರಿಪೂರ್ಣ ಆರೋಗ್ಯವನ್ನಿತ್ತನು. ಯೆಹೋವನು ಅವರಿಗೆ ಕೇವಲ ಒಳಿತನ್ನೇ ಬಯಸಿದನು. ಪ್ರೀತಿಯುಳ್ಳ ಯಾವ ತಂದೆಯಾದರೂ ತನ್ನ ಮಕ್ಕಳು ವೃದ್ಧಾಪ್ಯದ ನೋವನ್ನು ಅನುಭವಿಸಿ ಸಾಯಬೇಕೆಂದು ಬಯಸುವನೆ? ನಿಶ್ಚಯವಾಗಿಯೂ ಇಲ್ಲ! ಯೆಹೋವನು ತನ್ನ ಮಕ್ಕಳನ್ನು ಪ್ರೀತಿಸುತ್ತಿದ್ದನು ಮತ್ತು ಅವರು ಭೂಮಿಯ ಮೇಲೆ ಅನಂತ ಸಂತೋಷವನ್ನು ಅನುಭವಿಸಬೇಕೆಂದು ಬಯಸಿದನು. ಅವರ ಕುರಿತು ಬೈಬಲು ಹೇಳುವುದು: ಯೆಹೋವನು “ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ.” (ಪ್ರಸಂಗಿ 3:11) ದೇವರು ನಮ್ಮನ್ನು ಸೃಷ್ಟಿಸಿದಾಗ ಸದಾಕಾಲಕ್ಕೂ ಬದುಕಬೇಕೆಂಬ ಆಸೆಯನ್ನು ನಮ್ಮಲ್ಲಿಟ್ಟನು. ಮತ್ತು ಆ ಆಸೆಯು ಈಡೇರುವಂತೆ ಆತನು ಒಂದು ದಾರಿಯನ್ನೂ ತೆರೆದಿದ್ದಾನೆ.

ಮಾನವರು ಸಾಯುವುದೇಕೆ?

9. ಯೆಹೋವನು ಆದಾಮನಿಗೆ ಯಾವ ನಿರ್ಬಂಧವನ್ನು ಹಾಕಿದನು, ಮತ್ತು ಈ ಆಜ್ಞೆಗೆ ವಿಧೇಯತೆ ತೋರಿಸುವುದು ಏಕೆ ಕಷ್ಟಕರವಾಗಿರಲಿಲ್ಲ?

9 ಹಾಗಾದರೆ, ಮಾನವರು ಸಾಯುವುದೇಕೆ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಲಿಕ್ಕಾಗಿ, ಈ ಭೂಮಿಯ ಮೇಲೆ ಕೇವಲ ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀ ಇದ್ದಾಗ ಏನು ಸಂಭವಿಸಿತೆಂಬುದನ್ನು ನಾವು ತಿಳಿಯಬೇಕು. ಬೈಬಲು ವಿವರಿಸುವುದು: “ಯೆಹೋವದೇವರು ನೋಟಕ್ಕೆ ರಮ್ಯವಾಗಿಯೂ ಊಟಕ್ಕೆ ಅನುಕೂಲವಾಗಿಯೂ ಇರುವ ಎಲ್ಲಾ ತರದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯಮಾಡಿದನು.” (ಆದಿಕಾಂಡ 2:9) ಆದರೂ ಅಲ್ಲಿ ಒಂದು ನಿರ್ಬಂಧವಿತ್ತು. ಯೆಹೋವನು ಆದಾಮನಿಗೆ ಹೇಳಿದ್ದು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:16, 17) ಇದು ವಿಧೇಯತೆ ತೋರಿಸಲು ಕಷ್ಟಕರವಾದ ಆಜ್ಞೆಯಾಗಿರಲಿಲ್ಲ. ಏಕೆಂದರೆ ಆದಾಮಹವ್ವರಿಗೆ ತಿನ್ನಲು ಇನ್ನೆಷ್ಟೋ ಮರಗಳ ಫಲಗಳು ಇದ್ದವು. ಆದರೆ ಈಗ ಅವರಿಗೆ, ತಮಗೆ ಪರಿಪೂರ್ಣ ಜೀವದೊಂದಿಗೆ ಸಕಲವನ್ನೂ ಕೊಟ್ಟಿದ್ದ ದೇವರಿಗೆ ಕೃತಜ್ಞತೆಯನ್ನು ತೋರಿಸಲು ಒಂದು ವಿಶೇಷ ಅವಕಾಶ ಸಿಕ್ಕಿತು. ಅವರು ತೋರಿಸಲಿದ್ದ ವಿಧೇಯತೆಯು, ಅವರು ತಮ್ಮ ಸ್ವರ್ಗೀಯ ತಂದೆಯ ಅಧಿಕಾರವನ್ನು ತಾವು ಗೌರವಿಸುತ್ತೇವೆ ಮತ್ತು ಆತನ ಪ್ರೀತಿಪೂರ್ವಕವಾದ ಮಾರ್ಗದರ್ಶನವನ್ನು ತಾವು ಬಯಸುತ್ತೇವೆ ಎಂಬುದನ್ನೂ ತೋರಿಸಲಿಕ್ಕಿತ್ತು.

10, 11. (ಎ) ಪ್ರಥಮ ಮಾನವ ದಂಪತಿಯು ದೇವರಿಗೆ ಅವಿಧೇಯತೆಯನ್ನು ತೋರಿಸುವಂತಾದದ್ದು ಹೇಗೆ? (ಬಿ) ಆದಾಮಹವ್ವರು ತೋರಿಸಿದ ಅವಿಧೇಯತೆ ಏಕೆ ಗಂಭೀರವಾದ ವಿಷಯವಾಗಿತ್ತು?

10 ವಿಷಾದಕರವಾಗಿ, ಪ್ರಥಮ ಮಾನವ ದಂಪತಿಯು ಯೆಹೋವನಿಗೆ ಅವಿಧೇಯತೆ ತೋರಿಸುವ ಆಯ್ಕೆಮಾಡಿದರು. ಸರ್ಪದ ಮೂಲಕ ಮಾತಾಡುತ್ತ ಸೈತಾನನು ಹವ್ವಳಿಗೆ, “ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ”? ಎಂದು ಕೇಳಿದನು. ಆಗ ಹವ್ವಳು, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ ಅಂದಳು.”—ಆದಿಕಾಂಡ 3:1-3.

11 ಆಗ ಸೈತಾನನು, “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ; ಇದು ದೇವರಿಗೆ ಚೆನ್ನಾಗಿ ಗೊತ್ತುಂಟು” ಅಂದನು. (ಆದಿಕಾಂಡ 3:4, 5) ನಿಷೇಧಿಸಲ್ಪಟ್ಟ ಆ ಹಣ್ಣನ್ನು ತಿನ್ನುವುದರಿಂದ ತನಗೆ ಪ್ರಯೋಜನವಾಗುತ್ತದೆಂದು ಹವ್ವಳು ನಂಬಬೇಕೆಂಬುದು ಸೈತಾನನ ಅಪೇಕ್ಷೆಯಾಗಿತ್ತು. ಅವನಿಗನುಸಾರ, ಸರಿ ಯಾವುದು ತಪ್ಪು ಯಾವುದು ಎಂಬುದನ್ನು ನಿರ್ಧರಿಸುವ ಹಕ್ಕು ಆಕೆಗಿತ್ತು; ಆದುದರಿಂದ ಅವಳು ತನಗೆ ಇಷ್ಟಬಂದಂತೆ ಮಾಡಬಹುದಾಗಿತ್ತು. ಆ ಹಣ್ಣನ್ನು ತಿನ್ನುವುದರ ಪರಿಣಾಮದ ಕುರಿತು ಯೆಹೋವನು ಸುಳ್ಳಾಡಿದ್ದಾನೆಂದೂ ಸೈತಾನನು ಆರೋಪಹೊರಿಸಿದನು. ಹವ್ವಳು ಸೈತಾನನು ಹೇಳಿದ್ದನ್ನು ನಂಬಿದಳು. ಆದುದರಿಂದ ಆಕೆ ಹಣ್ಣನ್ನು ತೆಗೆದುಕೊಂಡು ತಿಂದಳು. ಅದನ್ನು ತನ್ನ ಗಂಡನಿಗೆ ಕೊಡಲಾಗಿ ಅವನೂ ತಿಂದನು. ಅವರು ಇದನ್ನು ಏನೂ ತಿಳಿಯದಿದ್ದ ಕಾರಣ ಮಾಡಲಿಲ್ಲ. ಮಾಡಲೇ ಬಾರದು ಎಂದು ದೇವರು ಹೇಳಿದ ಮಾತಿಗೆ ತೀರ ವಿರುದ್ಧವಾದುದನ್ನು ತಾವು ಮಾಡುತ್ತಿದ್ದೇವೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಹೀಗೆ, ಹಣ್ಣನ್ನು ತಿನ್ನುವ ಮೂಲಕ ಅವರು ಸರಳವೂ ನ್ಯಾಯಸಮ್ಮತವೂ ಆದ ಒಂದು ಆಜ್ಞೆಗೆ ಬೇಕುಬೇಕೆಂದೇ ಅವಿಧೇಯರಾದರು. ತಮ್ಮ ಸ್ವರ್ಗೀಯ ತಂದೆಯನ್ನೂ ಆತನ ಅಧಿಕಾರವನ್ನೂ ಅವರು ಧಿಕ್ಕರಿಸಿದರು. ಅವರ ಪ್ರೀತಿಭರಿತ ಸೃಷ್ಟಿಕರ್ತನಿಗೆ ತೋರಿಸಿದ ಇಂತಹ ಅಗೌರವವು ಅಕ್ಷಮ್ಯವಾಗಿತ್ತು!

12. ಆದಾಮಹವ್ವರು ಯೆಹೋವ ದೇವರಿಗೆ ವಿರುದ್ಧವಾಗಿದ್ದ ಮಾರ್ಗವನ್ನು ಆರಿಸಿಕೊಂಡಾಗ ಆತನಿಗೆ ಹೇಗನಿಸಿರಬೇಕೆಂಬುದನ್ನು ಅರಿತುಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ?

12 ದೃಷ್ಟಾಂತಕ್ಕಾಗಿ, ನೀವು ಸಾಕಿಸಲಹಿದ ಮಗನೊ ಮಗಳೊ ದೊಡ್ಡವರಾಗಿ, ನಿಮ್ಮ ಕಡೆಗೆ ಸ್ವಲ್ಪವೂ ಗೌರವವಾಗಲಿ ಪ್ರೀತಿಯಾಗಲಿ ಇಲ್ಲವೆಂದು ತೋರಿಸುವ ರೀತಿಯಲ್ಲಿ ನಿಮಗೆ ಅವಿಧೇಯರಾಗುವಲ್ಲಿ ನಿಮಗೆ ಹೇಗನಿಸೀತು? ಅದು ನಿಮ್ಮ ಮನಸ್ಸಿಗೆ ಬಹಳಷ್ಟು ನೋವನ್ನುಂಟುಮಾಡುವುದು. ಹಾಗಾದರೆ, ಆದಾಮಹವ್ವರಿಬ್ಬರೂ ತನಗೆ ವಿರುದ್ಧವಾದ ಮಾರ್ಗವನ್ನು ಆರಿಸಿಕೊಂಡಾಗ ಯೆಹೋವನಿಗೆ ಎಷ್ಟೊಂದು ನೋವಾಗಿದ್ದಿರಬೇಕು ಎಂಬುದನ್ನು ಸ್ವಲ್ಪ ಯೋಚಿಸಿ.

ಆದಾಮನು ಮಣ್ಣಿನಿಂದ ಬಂದು ಮಣ್ಣಿಗೇ ಹಿಂದಿರುಗಿದನು

13. ಆದಾಮನು ಸಾಯುವಾಗ ಏನು ಸಂಭವಿಸುವುದೆಂದು ಯೆಹೋವನು ಹೇಳಿದನು, ಮತ್ತು ಇದರ ಅರ್ಥವೇನು?

13 ಅವಿಧೇಯರಾದ ಆದಾಮಹವ್ವರನ್ನು ಸದಾ ಅಸ್ತಿತ್ವದಲ್ಲಿಡಲು ಯೆಹೋವನಿಗೆ ಯಾವುದೇ ಸಕಾರಣವಿರಲಿಲ್ಲ. ಆದುದರಿಂದಲೇ, ಆತನು ಮುಂತಿಳಿಸಿದಂತೆಯೇ ಅವರು ಸತ್ತುಹೋದರು. ಅವರು ಅಸ್ತಿತ್ವದಿಂದ ಇಲ್ಲವಾಗಿ ಹೋದರು. ಅವರು ಯಾವುದೊ ಆತ್ಮಲೋಕದಲ್ಲಿ ಜೀವಿಸಲಿಕ್ಕಾಗಿ ಇಲ್ಲಿಂದ ಹೋಗಿಬಿಡಲಿಲ್ಲ. ನಮಗಿದು ತಿಳಿದಿರುವುದು ಹೇಗೆಂದರೆ ಯೆಹೋವನು ಆದಾಮನನ್ನು ಕರೆದು ಅವನ ಅವಿಧೇಯತೆಗೆ ಕಾರಣವನ್ನು ಕೇಳಿದ ಬಳಿಕ ಆತನು ಹೇಳಿದ್ದು: “ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ.” (ಆದಿಕಾಂಡ 3:19) ದೇವರು ಆದಾಮನನ್ನು ನೆಲದ ಮಣ್ಣಿನಿಂದ ನಿರ್ಮಿಸಿದ್ದನು. (ಆದಿಕಾಂಡ 2:7) ಅದಕ್ಕೆ ಮೊದಲು ಆದಾಮನು ಅಸ್ತಿತ್ವದಲ್ಲೇ ಇರಲಿಲ್ಲ. ಆದುದರಿಂದ, ಆದಾಮನು ಮಣ್ಣಿಗೆ ಹಿಂದಿರುಗುವನೆಂದು ಯೆಹೋವನು ನುಡಿದಾಗ, ಅವನು ಅಸ್ತಿತ್ವದಲ್ಲೇ ಇಲ್ಲದ ಸ್ಥಿತಿಗೆ ಹಿಂದಿರುಗುವನೆಂಬ ಅರ್ಥದಲ್ಲಿ ಹಾಗೆ ಹೇಳಿದನು. ಆದಾಮನನ್ನು ಯಾವುದರಿಂದ ನಿರ್ಮಿಸಲಾಗಿತ್ತೊ ಆ ಮಣ್ಣಿನಂತೆಯೇ ಅವನೂ ನಿರ್ಜೀವವಾಗಲಿದ್ದನು.

14. ನಾವು ಏಕೆ ಸಾಯುತ್ತೇವೆ?

14 ಆದಾಮಹವ್ವರು ಇಂದು ಜೀವದಿಂದಿರುವ ಸಾಧ್ಯತೆ ಇತ್ತು. ಆದರೆ ಅವರು ದೇವರಿಗೆ ಅವಿಧೇಯರಾಗುವ ಆಯ್ಕೆಯನ್ನು ಮಾಡಿ, ಪಾಪಮಾಡಿದ್ದರಿಂದ ಸತ್ತುಹೋದರು. ಮತ್ತು ನಾವು ಏಕೆ ಸಾಯುತ್ತೇವೆಂದರೆ, ಆದಾಮನ ಪಾಪಪೂರ್ಣ ಸ್ಥಿತಿ ಹಾಗೂ ಮರಣವು ಅವನ ಸಕಲ ವಂಶಸ್ಥರಿಗೆ ದಾಟಿಸಲ್ಪಟ್ಟಿರುವುದರಿಂದಲೇ. (ರೋಮಾಪುರ 5:12) ಆ ಪಾಪವು, ಯಾವುದರಿಂದ ಯಾರೊಬ್ಬನೂ ತಪ್ಪಿಸಿಕೊಳ್ಳಲಾರನೊ ಅಂತಹ ರಕ್ತಗತವಾಗಿ ಬಂದಿರುವ ಒಂದು ಭಯಂಕರ ರೋಗದಂತಿದೆ. ಅದರ ಅಂತ್ಯಫಲವಾದ ಮರಣವು ಒಂದು ಶಾಪವಾಗಿದೆ. ಮರಣವು ಒಂದು ಶತ್ರುವೇ ಹೊರತು ಮಿತ್ರನಲ್ಲ. (1 ಕೊರಿಂಥ 15:26) ನಮ್ಮನ್ನು ಈ ಭಯಂಕರ ಶತ್ರುವಿನಿಂದ ರಕ್ಷಿಸಲು ವಿಮೋಚನಾ ಮೌಲ್ಯವನ್ನು ಒದಗಿಸಿದ್ದಕ್ಕಾಗಿ ನಾವು ಯೆಹೋವನಿಗೆ ಎಷ್ಟು ಕೃತಜ್ಞರಾಗಿರಬಲ್ಲೆವು!

ಮರಣದ ಕುರಿತಾದ ಸತ್ಯಾಂಶವನ್ನು ತಿಳಿಯುವುದು ಪ್ರಯೋಜನಕರ

15. ಮರಣದ ಕುರಿತಾದ ಸತ್ಯವನ್ನು ತಿಳಿಯುವುದು ಸಾಂತ್ವನದಾಯಕವೇಕೆ?

15 ಮೃತರ ಸ್ಥಿತಿಯ ಕುರಿತು ಬೈಬಲು ಏನನ್ನು ಬೋಧಿಸುತ್ತದೊ ಅದು ಸಾಂತ್ವನದಾಯಕವಾಗಿದೆ. ನಾವು ಈಗಾಗಲೇ ನೋಡಿರುವಂತೆ, ಮೃತರು ನೋವನ್ನಾಗಲಿ, ಮನೋವ್ಯಥೆಯನ್ನಾಗಲಿ ಅನುಭವಿಸುವುದಿಲ್ಲ. ನಾವು ಅವರಿಗೆ ಭಯಪಡಲು ಕಾರಣವೇ ಇಲ್ಲ, ಏಕೆಂದರೆ ನಮಗೆ ಹಾನಿಮಾಡಲು ಅವರಿಗೆ ಸಾಧ್ಯವಿಲ್ಲ. ನಮ್ಮ ಸಹಾಯದ ಅಗತ್ಯ ಅವರಿಗಿಲ್ಲ, ಮತ್ತು ಅವರೂ ನಮಗೆ ಸಹಾಯಮಾಡಲು ಸಾಧ್ಯವಿಲ್ಲ. ನಾವು ಅವರೊಂದಿಗೆ ಮಾತನಾಡುವುದೂ ಅವರು ನಮ್ಮೊಂದಿಗೆ ಮಾತನಾಡುವುದೂ ಅಸಾಧ್ಯ. ತಾವು ಮೃತರಿಗೆ ಸಹಾಯಮಾಡಶಕ್ತರೆಂದು ಅನೇಕ ಧಾರ್ಮಿಕ ಮುಖಂಡರು ಸುಳ್ಳಾಗಿ ಹೇಳಿಕೊಳ್ಳುತ್ತಾರೆ ಮತ್ತು ಅಂತಹ ಮುಖಂಡರನ್ನು ನಂಬುವ ಜನರು ಅವರಿಗೆ ಹಣವನ್ನು ಕೊಡುತ್ತಾರೆ. ಆದರೆ ಮರಣದ ಕುರಿತಾದ ಸತ್ಯಜ್ಞಾನವು ಇಂತಹ ಸುಳ್ಳುಗಳನ್ನು ಬೋಧಿಸುವವರಿಂದ ನಾವು ವಂಚಿಸಲ್ಪಡದಂತೆ ನಮ್ಮನ್ನು ಸಂರಕ್ಷಿಸುತ್ತದೆ.

16. ಅನೇಕ ಧರ್ಮಗಳ ಬೋಧನೆಗಳನ್ನು ಯಾರು ಪ್ರಭಾವಿಸಿರುತ್ತಾನೆ, ಮತ್ತು ಯಾವ ವಿಧದಲ್ಲಿ?

16 ಬೈಬಲು ಸತ್ತವರ ಕುರಿತು ಏನನ್ನು ಬೋಧಿಸುತ್ತದೊ ಅದನ್ನು ಹೆಚ್ಚಿನ ಧರ್ಮಗಳು ಒಪ್ಪುತ್ತವೊ? ಅನೇಕ ಧರ್ಮಗಳು ಒಪ್ಪುವುದಿಲ್ಲ. ಏಕೆ? ಏಕೆಂದರೆ ಅವುಗಳ ಬೋಧನೆಗಳು ಸೈತಾನನಿಂದ ಪ್ರಭಾವಿಸಲ್ಪಟ್ಟಿವೆ. ಶರೀರವು ಸತ್ತ ಮೇಲೆ ಆತ್ಮವು ಜೀವಿಸುತ್ತ ಮುಂದುವರಿಯುವುದೆಂದು ಜನರು ನಂಬುವಂತೆ ಮಾಡಲು ಅವನು ಸುಳ್ಳು ಧರ್ಮವನ್ನು ಬಳಸುತ್ತಾನೆ. ಸೈತಾನನು ಬೇರೆ ಸುಳ್ಳುಗಳೊಂದಿಗೆ ಈ ಸುಳ್ಳನ್ನು ಮೇಳಿಸುತ್ತಾ ಜನರು ಯೆಹೋವ ದೇವರಿಗೆ ಬೆನ್ನುಹಾಕುವಂತೆ ಮಾಡುತ್ತಾನೆ. ಇದು ಹೇಗೆ?

17. ನಿತ್ಯಯಾತನೆ ಎಂಬ ಬೋಧನೆಯು ಯೆಹೋವನಿಗೆ ಏಕೆ ಅಗೌರವವನ್ನು ತರುತ್ತದೆ?

17 ಈ ಮೊದಲೇ ಗಮನಿಸಿರುವಂತೆ, ಒಬ್ಬ ವ್ಯಕ್ತಿಯು ಕೆಟ್ಟ ಜೀವನವನ್ನು ನಡೆಸುವಲ್ಲಿ, ಅವನು ಮರಣಾನಂತರ ಅಗ್ನಿಭರಿತ ಯಾತನಾ ಸ್ಥಳವೊಂದಕ್ಕೆ ಹೋಗಿ ಅಲ್ಲಿ ನರಳಾಡುತ್ತಾನೆಂದು ಕೆಲವು ಧರ್ಮಗಳು ಬೋಧಿಸುತ್ತವೆ. ಈ ಬೋಧನೆ ದೇವರಿಗೆ ಅಗೌರವವನ್ನು ತರುತ್ತದೆ. ಯೆಹೋವನು ಪ್ರೀತಿಯ ದೇವರು ಮತ್ತು ಆತನೆಂದಿಗೂ ಜನರು ಈ ರೀತಿಯಲ್ಲಿ ನರಳುವಂತೆ ಮಾಡನು. (1 ಯೋಹಾನ 4:8) ತನ್ನ ಮಾತಿಗೆ ಅವಿಧೇಯನಾದ ಮಗನ ಕೈಯನ್ನು ಬೆಂಕಿಯ ಮೇಲಿರಿಸಿ ಶಿಕ್ಷಿಸುವ ಒಬ್ಬ ವ್ಯಕ್ತಿಯ ಬಗ್ಗೆ ನಿಮಗೆ ಹೇಗನಿಸುವುದು? ಅವನನ್ನು ನೀವು ಗೌರವಿಸುವಿರಾ? ಅದಿರಲಿ, ನೀವು ಅವನ ಪರಿಚಯ ಮಾಡಿಕೊಳ್ಳಲಾದರೂ ಬಯಸುವಿರಾ? ಇಲ್ಲವೆಂಬುದು ನಿಶ್ಚಯ! ಅವನು ವಿಪರೀತ ಕ್ರೂರಿಯೆಂದು ನೀವು ಯೋಚಿಸಬಹುದು. ಯೆಹೋವನು ಜನರನ್ನು ಶಾಶ್ವತವಾಗಿ ಅಗ್ನಿಯಲ್ಲಿ ಯಾತನೆಗೊಳಪಡಿಸುತ್ತಾನೆಂದು ಜನರು ನಂಬಬೇಕೆಂಬುದು ಸೈತಾನನ ಅಪೇಕ್ಷೆಯಾಗಿದೆ.

18. ಸತ್ತವರ ಆರಾಧನೆ ಯಾವ ಧಾರ್ಮಿಕ ಸುಳ್ಳಿನ ಮೇಲೆ ಆಧರಿಸಿದೆ?

18 ಮರಣಾನಂತರ ಜನರು ಆತ್ಮಗಳಾಗುತ್ತಾರೆಂದು ಮತ್ತು ಜೀವಿತರು ಅವರನ್ನು ಸನ್ಮಾನಿಸಿ ಗೌರವಿಸಬೇಕೆಂದು ಬೋಧಿಸುವಂತೆಯೂ ಸೈತಾನನು ಕೆಲವು ಧರ್ಮಗಳನ್ನು ಉಪಯೋಗಿಸುತ್ತಾನೆ. ಈ ಬೋಧನೆಗನುಸಾರ, ಸತ್ತವರ ಆತ್ಮಗಳಿಗೆ ಮನುಷ್ಯರ ಬಲಾಢ್ಯ ಮಿತ್ರರಾಗುವ ಅಥವಾ ಭಯಂಕರ ಶತ್ರುಗಳಾಗುವ ಸಾಮರ್ಥ್ಯವಿದೆ. ಅನೇಕ ಜನರು ಈ ಸುಳ್ಳನ್ನು ನಂಬುತ್ತಾರೆ. ಅವರು ಮೃತರಿಗೆ ಭಯಪಡುತ್ತಾರೆ ಮತ್ತು ಅವರಿಗೆ ಗೌರವ ಹಾಗೂ ಆರಾಧನೆಯನ್ನು ಸಲ್ಲಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, ಮೃತರು ನಿದ್ರಿಸುತ್ತಿದ್ದಾರೆ ಮತ್ತು ನಾವು ನಮ್ಮ ಸೃಷ್ಟಿಕರ್ತನೂ ಪೋಷಿಸುವಾತನೂ ಆಗಿರುವ ಸತ್ಯದೇವರಾದ ಯೆಹೋವನನ್ನು ಮಾತ್ರ ಆರಾಧಿಸಬೇಕೆಂದು ಬೈಬಲು ಬೋಧಿಸುತ್ತದೆ.—ಪ್ರಕಟನೆ 4:11.

19. ಮರಣದ ಬಗ್ಗೆ ಸತ್ಯಾಂಶವನ್ನು ತಿಳಿದುಕೊಳ್ಳುವುದು ಬೇರೆ ಯಾವ ಬೈಬಲ್‌ ಬೋಧನೆಯನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುತ್ತದೆ?

19 ಮೃತರ ಸ್ಥಿತಿಯ ಬಗ್ಗೆ ಸತ್ಯವನ್ನು ತಿಳಿದುಕೊಳ್ಳುವುದು ಧಾರ್ಮಿಕ ಸುಳ್ಳುಗಳಿಂದ ನೀವು ತಪ್ಪುದಾರಿಗೆ ಸೆಳೆಯಲ್ಪಡದಂತೆ ನಿಮ್ಮನ್ನು ರಕ್ಷಿಸುತ್ತದೆ. ಮತ್ತು ಇತರ ಬೈಬಲ್‌ ಬೋಧನೆಗಳನ್ನು ತಿಳಿದುಕೊಳ್ಳುವಂತೆಯೂ ಇದು ನಿಮಗೆ ಸಹಾಯಮಾಡುತ್ತದೆ. ಉದಾಹರಣೆಗೆ, ಮರಣದ ಬಳಿಕ ಜನರು ಆತ್ಮಲೋಕಕ್ಕೆ ಹೋಗುವುದಿಲ್ಲವೆಂಬುದನ್ನು ನೀವು ಗ್ರಹಿಸುವಾಗ, ಭೂಪರದೈಸಿನಲ್ಲಿ ನಿತ್ಯಜೀವದ ವಾಗ್ದಾನವು ನಿಮಗೆ ನೈಜವಾದದ್ದಾಗಿ ಪರಿಣಮಿಸುತ್ತದೆ.

20. ಮುಂದಿನ ಅಧ್ಯಾಯದಲ್ಲಿ ಯಾವ ಪ್ರಶ್ನೆಯನ್ನು ನಾವು ಪರಿಗಣಿಸುವೆವು?

20 ಬಹಳ ಹಿಂದೆ, ಯೋಬನೆಂಬ ನೀತಿವಂತನು ಈ ಪ್ರಶ್ನೆಯನ್ನು ಕೇಳಿದನು: “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” (ಯೋಬ 14:14) ಮರಣದಲ್ಲಿ ನಿದ್ರೆಹೋಗಿರುವ ಒಬ್ಬ ನಿರ್ಜೀವ ವ್ಯಕ್ತಿಯನ್ನು ಪುನಃ ಜೀವಕ್ಕೆ ತರಲು ಸಾಧ್ಯವೆ? ಮುಂದಿನ ಅಧ್ಯಾಯವು ತೋರಿಸಲಿರುವಂತೆ, ಇದರ ಕುರಿತು ಬೈಬಲು ಏನನ್ನು ಬೋಧಿಸುತ್ತದೊ ಅದು ತುಂಬ ಸಾಂತ್ವನದಾಯಕವಾಗಿದೆ.

^ ಪ್ಯಾರ. 5 “ಆತ್ಮ” ಎಂಬ ಪದದ ಚರ್ಚೆಗಾಗಿ, ದಯವಿಟ್ಟು ಪರಿಶಿಷ್ಟದ 209-11ನೇ ಪುಟಗಳನ್ನು ನೋಡಿ.