ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹನ್ನೊಂದು

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?

ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ?
  • ಲೋಕದಲ್ಲಿರುವ ಕಷ್ಟಸಂಕಟಗಳಿಗೆ ದೇವರು ಕಾರಣನಾಗಿದ್ದಾನೊ?

  • ಏದೆನ್‌ ತೋಟದಲ್ಲಿ ಯಾವ ವಿವಾದಾಂಶವು ಎಬ್ಬಿಸಲ್ಪಟ್ಟಿತು?

  • ಮಾನವ ಕಷ್ಟಸಂಕಟಗಳಿಂದ ಉಂಟಾಗಿರುವ ಹಾನಿಯನ್ನು ದೇವರು ಹೇಗೆ ಸರಿಪಡಿಸುವನು?

1, 2. ಇಂದು ಜನರು ಯಾವ ರೀತಿಯ ಕಷ್ಟಸಂಕಟಗಳಿಗೆ ತುತ್ತಾಗುತ್ತಾರೆ, ಮತ್ತು ಇದು ಅನೇಕರು ಯಾವ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತದೆ?

ಯುದ್ಧಛಿದ್ರ ದೇಶವೊಂದರಲ್ಲಿ ನಡೆದ ಒಂದು ಭೀಕರ ಕದನದ ತರುವಾಯ, ಹತರಾದ ಸಾವಿರಾರು ಮಂದಿ ಅಯೋಧ ಸ್ತ್ರೀಯರನ್ನೂ ಮಕ್ಕಳನ್ನೂ ಒಂದು ಸಾಮೂಹಿಕ ಸಮಾಧಿಯಲ್ಲಿ ಹೂಳಿಡಲಾಯಿತು ಮತ್ತು ಅದರ ಸುತ್ತಲೂ ಚಿಕ್ಕ ಶಿಲುಬೆಗಳನ್ನು ಇಡಲಾಯಿತು. ಪ್ರತಿಯೊಂದು ಶಿಲುಬೆಯ ಮೇಲೆ “ಏಕೆ?” ಎಂಬ ಪ್ರಶ್ನೆ ಕೆತ್ತಲ್ಪಟ್ಟಿತ್ತು. ಕೆಲವು ಸಲ, ಈ ಪ್ರಶ್ನೆಯೇ ಎಲ್ಲದಕ್ಕಿಂತಲೂ ಹೆಚ್ಚು ನೋವನ್ನು ಉಂಟುಮಾಡುತ್ತದೆ. ಈ ಪ್ರಶ್ನೆಯನ್ನು ಜನರು ಯುದ್ಧ, ವಿಪತ್ತು, ರೋಗ ಅಥವಾ ಪಾತಕವು ಅವರ ಮುಗ್ಧ ಪ್ರಿಯರನ್ನು ಬಲಿತೆಗೆದುಕೊಳ್ಳುವಾಗ, ಅವರ ಮನೆಯನ್ನು ನಾಶಮಾಡುವಾಗ ಇಲ್ಲವೆ ಅವರ ಮೇಲೆ ಹೇಳಲಾಗದಷ್ಟು ರೀತಿಯ ಬೇರೆ ಕಷ್ಟಸಂಕಟಗಳನ್ನು ತಂದೊಡ್ಡುವಾಗ, ದುಃಖತುಂಬಿದವರಾಗಿ ಕೇಳುತ್ತಾರೆ. ಇಂತಹ ದುರಂತಗಳು ತಮ್ಮ ಮೇಲೆ ಏಕೆ ಬರುತ್ತವೆಂಬುದನ್ನು ಅವರು ತಿಳಿಯಬಯಸುತ್ತಾರೆ.

2 ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ? ಯೆಹೋವ ದೇವರು ಸರ್ವಶಕ್ತನೂ, ಪ್ರೀತಿಪೂರ್ಣನೂ, ವಿವೇಕಿಯೂ, ನ್ಯಾಯವಂತನೂ ಆಗಿರುವಲ್ಲಿ ಈ ಜಗತ್ತು ಇಷ್ಟೊಂದು ದ್ವೇಷ ಮತ್ತು ಅನ್ಯಾಯದಿಂದ ತುಂಬಿರುವುದೇಕೆ? ನೀವೇ ಈ ವಿಷಯಗಳ ಕುರಿತು ಎಂದಾದರೂ ಯೋಚಿಸಿದ್ದುಂಟೋ?

3, 4. (ಎ) ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆಂದು ಕೇಳುವುದು ತಪ್ಪಲ್ಲವೆಂಬುದನ್ನು ಯಾವುದು ತೋರಿಸುತ್ತದೆ? (ಬಿ) ದುಷ್ಟತನ ಮತ್ತು ಕಷ್ಟಸಂಕಟಗಳ ವಿಷಯದಲ್ಲಿ ಯೆಹೋವನ ಅನಿಸಿಕೆಯೇನು?

3 ದೇವರು ಕಷ್ಟಸಂಕಟಗಳನ್ನು ಏಕೆ ಅನುಮತಿಸುತ್ತಾನೆ ಎಂದು ಕೇಳುವುದು ತಪ್ಪೊ? ಕೆಲವರು, ಇಂತಹ ಪ್ರಶ್ನೆಯನ್ನು ಕೇಳುವುದು ತಮ್ಮಲ್ಲಿ ನಂಬಿಕೆಯ ಕೊರತೆ ಇದೆಯೆಂಬುದನ್ನು ತೋರಿಸುತ್ತದೆ ಅಥವಾ ದೇವರಿಗೆ ಅಗೌರವವನ್ನು ತೋರಿಸುತ್ತದೆಂದು ನೆನಸಿ ಚಿಂತಾಕ್ರಾಂತರಾಗುತ್ತಾರೆ. ಆದರೆ ಬೈಬಲನ್ನು ಓದುವಾಗ, ನಂಬಿಗಸ್ತರಾಗಿದ್ದ ದೇವಭಯವುಳ್ಳ ಜನರಿಗೂ ಇದೇ ರೀತಿಯ ಪ್ರಶ್ನೆಗಳಿದ್ದವು ಎಂದು ನಿಮಗೆ ತಿಳಿದುಬರುವುದು. ದೃಷ್ಟಾಂತಕ್ಕಾಗಿ, ಪ್ರವಾದಿಯಾದ ಹಬಕ್ಕೂಕನು ಯೆಹೋವನನ್ನು ಕೇಳಿದ್ದು: “ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ, ವ್ಯಾಜ್ಯವೇಳುತ್ತಿದೆ.”—ಹಬಕ್ಕೂಕ 1:3.

ಯೆಹೋವನು ಎಲ್ಲಾ ಕಷ್ಟಸಂಕಟವನ್ನು ಅಂತ್ಯಗೊಳಿಸುವನು

4 ನಂಬಿಗಸ್ತ ಪ್ರವಾದಿಯಾದ ಹಬಕ್ಕೂಕನು ಅಂತಹ ಪ್ರಶ್ನೆಗಳನ್ನು ಕೇಳಿದ್ದಕ್ಕೆ ಯೆಹೋವನು ಅವನನ್ನು ಗದರಿಸಿದನೊ? ಇಲ್ಲ. ಬದಲಾಗಿ, ದೇವರು ಹಬಕ್ಕೂಕನ ಆ ಪ್ರಾಮಾಣಿಕ ಮಾತುಗಳನ್ನು ಪ್ರೇರಿತ ಬೈಬಲ್‌ ದಾಖಲೆಯಲ್ಲಿ ಸೇರಿಸಿದನು. ಅವನು ವಿಷಯಗಳ ಕುರಿತು ಹೆಚ್ಚು ಸ್ಪಷ್ಟವಾದ ತಿಳಿವಳಿಕೆಯನ್ನು ಗಳಿಸುವಂತೆ ಮತ್ತು ಹೆಚ್ಚು ನಂಬಿಕೆಯನ್ನು ಪಡೆದುಕೊಳ್ಳುವಂತೆಯೂ ದೇವರು ಅವನಿಗೆ ಸಹಾಯಮಾಡಿದನು. ನಿಮ್ಮ ವಿಷಯದಲ್ಲಿಯೂ ಹಾಗೆಯೇ ಮಾಡುವುದು ಯೆಹೋವನ ಬಯಕೆಯಾಗಿದೆ. ಬೈಬಲು, “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂದು ಹೇಳುತ್ತದೆಂಬುದನ್ನು ಜ್ಞಾಪಿಸಿಕೊಳ್ಳಿರಿ. (1 ಪೇತ್ರ 5:7) ದುಷ್ಟತನ ಮತ್ತು ಅದರಿಂದ ಉಂಟಾಗುವ ಕಷ್ಟಸಂಕಟವನ್ನು, ಯಾವ ಮನುಷ್ಯನಿಗಿಂತಲೂ ಎಷ್ಟೋ ಹೆಚ್ಚಾಗಿ ದೇವರೇ ದ್ವೇಷಿಸುತ್ತಾನೆ. (ಯೆಶಾಯ 55:8, 9) ಹಾಗಾದರೆ ಈ ಲೋಕದಲ್ಲಿ ಇಷ್ಟೊಂದು ಕಷ್ಟಸಂಕಟಗಳು ಇರುವುದೇಕೆ?

ಇಷ್ಟೊಂದು ಕಷ್ಟಸಂಕಟವೇಕೆ?

5. ಮಾನವನ ಕಷ್ಟಸಂಕಟವು ಏಕೆ ಇದೆಯೆಂಬುದನ್ನು ವಿವರಿಸಲು ಹಲವು ಬಾರಿ ಯಾವ ಕಾರಣಗಳನ್ನು ಕೊಡಲಾಗುತ್ತದೆ, ಆದರೆ ಬೈಬಲ್‌ ಏನು ಬೋಧಿಸುತ್ತದೆ?

5 ವಿವಿಧ ಧರ್ಮಗಳವರು ತಮ್ಮ ಧಾರ್ಮಿಕ ಮುಖಂಡರ ಮತ್ತು ಧರ್ಮಬೋಧಕರ ಬಳಿಗೆ ಹೋಗಿ ಇಷ್ಟೊಂದು ಕಷ್ಟಸಂಕಟ ಏಕಿದೆ ಎಂದು ಕೇಳಿದ್ದಾರೆ. ಅನೇಕವೇಳೆ ಅವರಿಗೆ ಸಿಕ್ಕಿರುವ ಉತ್ತರವೇನೆಂದರೆ, ಕಷ್ಟಸಂಕಟವು ದೈವೇಚ್ಛೆಯಾಗಿದೆ, ದುರಂತಗಳು ಮಾತ್ರವಲ್ಲ ನಡೆಯಲಿಕ್ಕಿರುವ ಎಲ್ಲ ಸಂಗತಿಗಳನ್ನು ಆತನು ಮೊದಲೇ ನಿರ್ಧರಿಸಿರುತ್ತಾನೆ ಎಂಬುದೇ. ದೇವರ ಮಾರ್ಗಗಳು ವಿವರಿಸಲಾಗದಂಥವುಗಳೆಂದೊ ಅಥವಾ ಜನರು—ಮಕ್ಕಳು ಸಹ—ತನ್ನೊಂದಿಗೆ ಸ್ವರ್ಗದಲ್ಲಿರುವಂತೆ ದೇವರು ಅವರಿಗೆ ಸಾವನ್ನು ಬರಮಾಡುತ್ತಾನೆಂದೊ ಅನೇಕರಿಗೆ ಹೇಳಲಾಗುತ್ತದೆ. ಆದರೆ ನೀವು ಕಲಿತಿರುವಂತೆ, ಯೆಹೋವನು ಎಂದೂ ಕೆಟ್ಟದ್ದಕ್ಕೆ ಕಾರಣನಾಗಿರುವುದಿಲ್ಲ. ಬೈಬಲು ಹೇಳುವುದು: “ದೇವರು ಕೆಟ್ಟದ್ದನ್ನು ಮಾಡಾನೆಂಬ ಯೋಚನೆಯೂ ಸರ್ವಶಕ್ತನು ಅನ್ಯಾಯವನ್ನು ನಡಿಸಾನೆಂಬ ಭಾವನೆಯೂ ದೂರವಾಗಿರಲಿ!”—ಯೋಬ 34:10.

6. ಅನೇಕರು ಲೋಕದಲ್ಲಿರುವ ಕಷ್ಟಸಂಕಟಗಳಿಗೆ ದೇವರ ಮೇಲೆ ದೂರು ಹೊರಿಸುವ ತಪ್ಪನ್ನು ಮಾಡುವುದೇಕೆ?

6 ಲೋಕದಲ್ಲಿರುವ ಎಲ್ಲ ಕಷ್ಟಸಂಕಟಗಳಿಗೆ ದೇವರ ಮೇಲೆ ದೂರು ಹೊರಿಸುವ ತಪ್ಪನ್ನು ಜನರು ಮಾಡುವುದೇಕೆಂದು ನಿಮಗೆ ಗೊತ್ತೋ? ಅನೇಕ ಸಂದರ್ಭಗಳಲ್ಲಿ ಅವರು ಸರ್ವಶಕ್ತ ದೇವರ ಮೇಲೆ ದೂರು ಹೊರಿಸಲು ಕಾರಣ, ಆತನೇ ನಿಜವಾಗಿ ಈ ಲೋಕದ ಅಧಿಪತಿಯೆಂದು ನೆನಸುವುದರಿಂದಲೇ. ಬೈಬಲ್‌ ಬೋಧಿಸುವಂಥ ಒಂದು ಸರಳವಾದ ಆದರೆ ಪ್ರಮುಖವಾದ ಸತ್ಯವು ಅವರಿಗೆ ತಿಳಿದಿರುವುದಿಲ್ಲ. ಆ ಸತ್ಯವನ್ನು ನೀವು ಈ ಪುಸ್ತಕದ 3ನೆಯ ಅಧ್ಯಾಯದಲ್ಲಿ ಕಲಿತುಕೊಂಡಿರಿ. ಅದೇನೆಂದರೆ ನಿಜವಾಗಿಯೂ ಈ ಲೋಕದ ಅಧಿಪತಿಯು ಪಿಶಾಚನಾದ ಸೈತಾನನು ಎಂಬುದೇ.

7, 8. (ಎ) ಈ ಲೋಕವು ಅದರ ಅಧಿಪತಿಯ ಸ್ವಭಾವವನ್ನು ಹೇಗೆ ಪ್ರತಿಬಿಂಬಿಸುತ್ತದೆ? (ಬಿ) ಮಾನವ ಅಪರಿಪೂರ್ಣತೆಯೂ ‘ಕಾಲವೂ ಮುಂಗಾಣದ ಘಟನೆಯೂ’ ಹೇಗೆ ಕಷ್ಟಸಂಕಟಗಳಿಗೆ ಕಾರಣವಾಗಿರುತ್ತದೆ?

7 ಬೈಬಲು ಸ್ಪಷ್ಟವಾಗಿ ತಿಳಿಸುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಈ ಕುರಿತು ಯೋಚಿಸುವಾಗ, ಇದು ಸರಿ ಎಂದು ನಿಮಗನಿಸುವುದಿಲ್ಲವೆ? ಈ ಲೋಕವು, “ಭೂಲೋಕದವರನ್ನೆಲ್ಲಾ ಮರುಳುಗೊಳಿಸುವ” ಆ ಅದೃಶ್ಯ ಆತ್ಮಜೀವಿಯ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. (ಪ್ರಕಟನೆ 12:9) ಸೈತಾನನು ದ್ವೇಷಭರಿತನೂ ವಂಚಕನೂ ಕ್ರೂರಿಯೂ ಆಗಿದ್ದಾನೆ. ಆದಕಾರಣವೇ, ಅವನ ಪ್ರಭಾವದಡಿಯಲ್ಲಿರುವ ಈ ಲೋಕವು ದ್ವೇಷ, ವಂಚನೆ ಮತ್ತು ಕ್ರೌರ್ಯದಿಂದ ತುಂಬಿದೆ. ಇಷ್ಟೊಂದು ಕಷ್ಟಸಂಕಟಗಳಿರಲು ಒಂದು ಕಾರಣವು ಇದೇ ಆಗಿದೆ.

8 ಇಷ್ಟೊಂದು ಕಷ್ಟಸಂಕಟಗಳಿರಲು ಎರಡನೆಯ ಕಾರಣವು, 3ನೆಯ ಅಧ್ಯಾಯದಲ್ಲಿ ಚರ್ಚಿಸಲ್ಪಟ್ಟಿರುವಂತೆ, ಏದೆನ್‌ ತೋಟದಲ್ಲಿ ನಡೆದ ದಂಗೆಯಂದಿನಿಂದ ಮಾನವಕುಲವು ಅಪರಿಪೂರ್ಣವೂ ಪಾಪಭರಿತವೂ ಆಗಿರುವುದೇ. ಪಾಪಪೂರ್ಣ ಮಾನವರಿಗೆ ಅಧಿಕಾರಕ್ಕಾಗಿ ಹೋರಾಡುವ ಪ್ರವೃತ್ತಿಯಿರುತ್ತದೆ ಮತ್ತು ಇದು ಯುದ್ಧಗಳು, ಶೋಷಣೆ ಹಾಗೂ ಕಷ್ಟಸಂಕಟಗಳನ್ನು ತಂದೊಡ್ಡುತ್ತದೆ. (ಪ್ರಸಂಗಿ 4:1; 8:9) ಕಷ್ಟಸಂಕಟಗಳಿಗಿರುವ ಮೂರನೆಯ ಕಾರಣವು, “ಕಾಲವೂ ಪ್ರಾಪ್ತಿಯೂ [“ಮುಂಗಾಣದಂಥ ಘಟನೆ,” NW]” ಆಗಿದೆ. (ಪ್ರಸಂಗಿ 9:11) ಯೆಹೋವನು ಸಂರಕ್ಷಣೆಯನ್ನು ನೀಡುವ ಒಬ್ಬ ಅಧಿಪತಿಯಾಗಿಲ್ಲದಿರುವ ಲೋಕದಲ್ಲಿ ಜನರು ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿ ಇರುವ ಕಾರಣ ಕಷ್ಟಸಂಕಟಗಳಿಗೆ ಈಡಾಗುತ್ತಾರೆ.

9. ಕಷ್ಟಸಂಕಟವು ಮುಂದುವರಿಯುವಂತೆ ಬಿಡಲು ದೇವರಿಗೆ ಸಕಾರಣವಿರಲೇಬೇಕೆಂದು ನಾವೇಕೆ ನಿಶ್ಚಯದಿಂದಿರಬಲ್ಲೆವು?

9 ದೇವರು ಕಷ್ಟಸಂಕಟಗಳಿಗೆ ಕಾರಣನಲ್ಲವೆಂದು ತಿಳಿಯುವುದು ನಮಗೆ ಸಾಂತ್ವನ ಕೊಡುತ್ತದೆ. ಜನರ ನರಳಾಟಕ್ಕೆ ಕಾರಣವಾಗಿರುವ ಯುದ್ಧಗಳು, ಪಾತಕಗಳು, ದಬ್ಬಾಳಿಕೆ ಅಥವಾ ನೈಸರ್ಗಿಕ ವಿಪತ್ತುಗಳಿಗೆ ಸಹ ಆತನು ಜವಾಬ್ದಾರನಲ್ಲ. ಹೀಗಿರುವುದಾದರೂ, ಯೆಹೋವನು ಈ ಎಲ್ಲ ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ನಾವು ತಿಳಿಯುವುದು ಆವಶ್ಯಕ. ಆತನು ಸರ್ವಶಕ್ತನಾಗಿರುವುದರಿಂದ ಅದನ್ನು ನಿಲ್ಲಿಸುವ ಶಕ್ತಿ ಆತನಿಗಿದೆ. ಹೀಗಿರುವಾಗ, ಆತನು ಆ ಶಕ್ತಿಯನ್ನು ಉಪಯೋಗಿಸುವುದರಿಂದ ತನ್ನನ್ನು ಏಕೆ ತಡೆಹಿಡಿದಿದ್ದಾನೆ? ನಾವು ಪರಿಚಯಮಾಡಿಕೊಂಡಿರುವ ಪ್ರೀತಿಪೂರ್ಣ ದೇವರಿಗೆ ಇದಕ್ಕಾಗಿ ಸಕಾರಣವಿರಲೇಬೇಕು.—1 ಯೋಹಾನ 4:8.

ಅತಿ ಮುಖ್ಯವಾದ ವಿವಾದಾಂಶವೊಂದು ಎಬ್ಬಿಸಲ್ಪಟ್ಟಿತು

10. ಸೈತಾನನು ಯಾವುದರ ಬಗ್ಗೆ ಪ್ರಶ್ನಿಸಿದನು, ಮತ್ತು ಹೇಗೆ?

10 ದೇವರು ಕಷ್ಟಸಂಕಟವನ್ನು ಏಕೆ ಅನುಮತಿಸುತ್ತಾನೆಂದು ಕಂಡುಹಿಡಿಯಲಿಕ್ಕಾಗಿ, ನಾವು ಕಷ್ಟಸಂಕಟವು ಆರಂಭವಾದ ಸಮಯಕ್ಕೆ ಹಿಂದೆ ಹೋಗುವುದು ಆವಶ್ಯಕ. ಆದಾಮಹವ್ವರು ಯೆಹೋವನಿಗೆ ಅವಿಧೇಯರಾಗುವಂತೆ ಸೈತಾನನು ನಡೆಸಿದಾಗ ಒಂದು ಪ್ರಮುಖ ಪ್ರಶ್ನೆಯು ಎಬ್ಬಿಸಲ್ಪಟ್ಟಿತು. ಸೈತಾನನು ಯೆಹೋವನ ಶಕ್ತಿಯ ಕುರಿತು ಸವಾಲೊಡ್ಡಲಿಲ್ಲ, ಏಕೆಂದರೆ ಯೆಹೋವನ ಶಕ್ತಿ ಅಪರಿಮಿತವಾದದ್ದೆಂದು ಸೈತಾನನಿಗೂ ತಿಳಿದಿತ್ತು. ಇದಕ್ಕೆ ಬದಲಾಗಿ, ಸೈತಾನನು ಯೆಹೋವನಿಗಿರುವ ಆಳುವ ಹಕ್ಕನ್ನು ಪ್ರಶ್ನಿಸಿದನು. ಯೆಹೋವ ದೇವರು, ತನ್ನ ಪ್ರಜೆಗಳಿಂದ ಒಳಿತನ್ನು ತಡೆಹಿಡಿಯುವ ಸುಳ್ಳುಗಾರನೆಂದು ಕರೆಯುವ ಮೂಲಕ ಆತನು ಒಬ್ಬ ಕೆಟ್ಟ ಪ್ರಭುವೆಂದು ಸೈತಾನನು ಆರೋಪ ಹೊರಿಸಿದನು. (ಆದಿಕಾಂಡ 3:2-5) ದೇವರ ಪ್ರಭುತ್ವ ಇಲ್ಲದಿರುವುದೇ ಮಾನವಕುಲಕ್ಕೆ ಹಿತಕರವೆಂದು ಸೈತಾನನು ಪರೋಕ್ಷವಾಗಿ ವ್ಯಕ್ತಪಡಿಸಿದನು. ಇದು ಯೆಹೋವನ ಪರಮಾಧಿಕಾರದ ಮೇಲೆ, ಆತನ ಆಳುವ ಹಕ್ಕಿನ ಮೇಲೆ ಮಾಡಿದ ಆಕ್ರಮಣವಾಗಿತ್ತು.

11. ಏದೆನಿನಲ್ಲಿನ ಆ ದಂಗೆಕೋರರನ್ನು ದೇವರು ಒಡನೆ ಏಕೆ ನಾಶಮಾಡಲಿಲ್ಲ?

11 ಆದಾಮಹವ್ವರು ಯೆಹೋವನ ವಿರುದ್ಧ ದಂಗೆಯೆದ್ದರು. ಅವರು ಕಾರ್ಯತಃ ಹೀಗೆ ಹೇಳಿದರು: ‘ಯೆಹೋವನು ನಮ್ಮ ಅಧಿಪತಿಯಾಗಿರುವ ಅಗತ್ಯವಿಲ್ಲ. ನಮಗೆ ಯಾವುದು ಸರಿ ಯಾವುದು ತಪ್ಪೆಂದು ನಾವೇ ಸ್ವತಃ ನಿರ್ಣಯಿಸಬಲ್ಲೆವು.’ ಹಾಗಾದರೆ ಯೆಹೋವನು ಈ ವಿವಾದಾಂಶವನ್ನು ಹೇಗೆ ಇತ್ಯರ್ಥಗೊಳಿಸಸಾಧ್ಯವಿತ್ತು? ಈ ದಂಗೆಕೋರರ ಎಣಿಕೆ ತಪ್ಪೆಂದು ಮತ್ತು ತನ್ನ ಮಾರ್ಗವು ನಿಜವಾಗಿಯೂ ಸರ್ವೋತ್ಕೃಷ್ಟವೆಂದು ಸಕಲ ಬುದ್ಧಿಜೀವಿಗಳಿಗೆ ಆತನು ಹೇಗೆ ಕಲಿಸಸಾಧ್ಯವಿತ್ತು? ದೇವರು ಆ ದಂಗೆಕೋರರನ್ನು ಅಲ್ಲಿಯೇ ನಾಶಮಾಡಿ, ಒಂದು ಹೊಸ ಪ್ರಾರಂಭವನ್ನು ಮಾಡಬೇಕಾಗಿತ್ತೆಂದು ಯಾರಾದರೂ ಹೇಳಬಹುದು. ಆದರೆ ಭೂಮಿಯನ್ನು ಆದಾಮಹವ್ವರ ಸಂತಾನದಿಂದ ತುಂಬಿಸುವ ತನ್ನ ಉದ್ದೇಶವನ್ನು ಯೆಹೋವನು ಈಗಾಗಲೇ ಪ್ರಕಟಪಡಿಸಿದ್ದನು, ಮತ್ತು ಅವರು ಭೂಪರದೈಸಿನಲ್ಲಿ ಜೀವಿಸುವುದು ಆತನ ಅಪೇಕ್ಷೆಯಾಗಿತ್ತು. (ಆದಿಕಾಂಡ 1:28) ಯೆಹೋವನು ತನ್ನ ಉದ್ದೇಶಗಳನ್ನು ಸದಾ ನೆರವೇರಿಸುವಾತನು. (ಯೆಶಾಯ 55:10, 11) ಅಷ್ಟಲ್ಲದೆ, ಏದೆನಿನಲ್ಲಿನ ಆ ದಂಗೆಕೋರರನ್ನು ನಿರ್ಮೂಲಮಾಡುವುದು ಯೆಹೋವನ ಆಳುವ ಹಕ್ಕಿನ ವಿಷಯದಲ್ಲಿ ಎಬ್ಬಿಸಲಾಗಿದ್ದ ಪ್ರಶ್ನೆಗೆ ಉತ್ತರವನ್ನು ಕೊಡುತ್ತಿರಲಿಲ್ಲ.

12, 13. ಸೈತಾನನು ಈ ಲೋಕದ ಅಧಿಪತಿಯಾಗುವಂತೆ ಯೆಹೋವನು ಏಕೆ ಬಿಟ್ಟಿದ್ದಾನೆ ಮತ್ತು ಮಾನವರು ತಮ್ಮನ್ನೇ ಆಳಿಕೊಳ್ಳುವಂತೆ ದೇವರು ಏಕೆ ಅನುಮತಿಸಿದ್ದಾನೆ ಎಂಬುದಕ್ಕೆ ದೃಷ್ಟಾಂತವನ್ನು ಕೊಡಿರಿ.

12 ಒಂದು ದೃಷ್ಟಾಂತವನ್ನು ಪರಿಗಣಿಸೋಣ. ಒಬ್ಬ ಉಪಾಧ್ಯಾಯನು ಕ್ಲಿಷ್ಟವಾದ ಲೆಕ್ಕವೊಂದನ್ನು ಹೇಗೆ ಬಿಡಿಸಬೇಕೆಂದು ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾನೆಂದು ಭಾವಿಸಿರಿ. ಆಗ, ಜಾಣನಾದರೂ ದಂಗೆಯೇಳುವ ಸ್ವಭಾವದವನಾಗಿರುವ ಒಬ್ಬ ವಿದ್ಯಾರ್ಥಿಯು ಲೆಕ್ಕವನ್ನು ಬಿಡಿಸಲು ಉಪಾಧ್ಯಾಯನು ಉಪಯೋಗಿಸುವ ವಿಧಾನವು ತಪ್ಪೆಂದು ಹೇಳುತ್ತಾನೆ. ಈ ಮೂಲಕ ಅವನು, ಆ ಉಪಾಧ್ಯಾಯನು ಅರ್ಹನಲ್ಲವೆಂದೂ, ಆ ಲೆಕ್ಕವನ್ನು ಬಿಡಿಸಲು ತನಗೆ ಹೆಚ್ಚು ಉತ್ತಮವಾದ ವಿಧಾನ ಗೊತ್ತಿದೆಯೆಂದೂ ಪಟ್ಟುಹಿಡಿಯುತ್ತಾನೆ. ಕೆಲವು ಮಂದಿ ವಿದ್ಯಾರ್ಥಿಗಳು ಅವನೇ ಸರಿಯೆಂದು ನಂಬಿ, ಅವರೂ ದಂಗೆಯೇಳುತ್ತಾರೆ. ಆಗ ಆ ಉಪಾಧ್ಯಾಯನು ಏನು ಮಾಡಬೇಕು? ಅವನು ಆ ದಂಗೆಕೋರರನ್ನು ತರಗತಿಯಿಂದ ಹೊರಹಾಕುವುದಾದರೆ, ಬೇರೆ ವಿದ್ಯಾರ್ಥಿಗಳ ಮೇಲೆ ಇದು ಎಂತಹ ಪರಿಣಾಮವನ್ನು ಬೀರೀತು? ತಮ್ಮ ಆ ಸಹಪಾಠಿಯೂ ಅವನೊಂದಿಗೆ ಜೊತೆಗೂಡಿದವರೂ ಹೇಳಿದ್ದು ಸರಿ ಎಂದು ಅವರೂ ನಂಬಲಿಕ್ಕಿಲ್ಲವೆ? ಆ ತರಗತಿಯಲ್ಲಿರುವ ಉಳಿದೆಲ್ಲ ವಿದ್ಯಾರ್ಥಿಗಳು, ಆ ಉಪಾಧ್ಯಾಯನು ತಾನು ತಪ್ಪೆಂದು ಸಾಬೀತಾಗುವುದರ ಕುರಿತಾಗಿ ಹೆದರುತ್ತಾನೆಂದು ನೆನಸಿ ಅವನ ಕಡೆಗೆ ತಮಗಿದ್ದ ಗೌರವವನ್ನು ಕಳೆದುಕೊಳ್ಳಬಹುದು. ಆದರೆ ಆ ದಂಗೆಕೋರನು ಆ ಲೆಕ್ಕವನ್ನು ಹೇಗೆ ಬಿಡಿಸುತ್ತಾನೆಂಬುದನ್ನು ಅವನೇ ಆ ತರಗತಿಗೆ ತೋರಿಸುವಂತೆ ಉಪಾಧ್ಯಾಯನು ಅವಕಾಶಕೊಡುತ್ತಾನೆಂದು ಭಾವಿಸಿರಿ.

ವಿದ್ಯಾರ್ಥಿಯು ಉಪಾಧ್ಯಾಯನಿಗಿಂತ ಹೆಚ್ಚು ಅರ್ಹತೆಯುಳ್ಳವನೊ?

13 ಯೆಹೋವನು ಆ ಉಪಾಧ್ಯಾಯನು ಏನು ಮಾಡಿದನೊ ಅದಕ್ಕೆ ಹೋಲಿಕೆಯಾದದ್ದನ್ನೇ ಮಾಡಿದ್ದಾನೆ. ಇದರಲ್ಲಿ ಒಳಗೂಡಿದ್ದವರು ಏದೆನಿನಲ್ಲಿದ್ದ ದಂಗೆಕೋರರು ಮಾತ್ರವಲ್ಲ ಎಂಬುದನ್ನು ನೆನಪಿನಲ್ಲಿಡಿರಿ. ಕೋಟ್ಯಾನುಕೋಟಿ ದೇವದೂತರು ಇದನ್ನು ನೋಡುತ್ತಾ ಇದ್ದರು. (ಯೋಬ 38:7; ದಾನಿಯೇಲ 7:10) ಯೆಹೋವನು ಆ ದಂಗೆಯನ್ನು ನಿರ್ವಹಿಸುವ ವಿಧವು, ಆ ಸಕಲ ದೇವದೂತರನ್ನು ಮತ್ತು ಅಂತಿಮವಾಗಿ ಬುದ್ಧಿಶಕ್ತಿಯಿರುವ ಸಕಲ ಸೃಷ್ಟಿಯನ್ನು ಮಹತ್ತಾದ ರೀತಿಯಲ್ಲಿ ಪ್ರಭಾವಿಸಲಿಕ್ಕಿತ್ತು. ಆದುದರಿಂದ ಯೆಹೋವನು ಏನು ಮಾಡಿದ್ದಾನೆ? ಸೈತಾನನು ಮಾನವಕುಲವನ್ನು ಹೇಗೆ ಆಳುತ್ತಾನೆಂಬುದನ್ನು ತೋರಿಸುವಂತೆ ಅವನಿಗೆ ಅನುಮತಿಕೊಟ್ಟಿದ್ದಾನೆ. ಮತ್ತು ಸೈತಾನನ ಮಾರ್ಗದರ್ಶನದ ಕೆಳಗೆ, ಮಾನವರು ತಮ್ಮನ್ನೇ ಆಳಿಕೊಳ್ಳುವಂತೆಯೂ ದೇವರು ಅನುಮತಿಸಿದ್ದಾನೆ.

14. ಮಾನವರು ತಮ್ಮನ್ನೇ ಆಳಿಕೊಳ್ಳುವಂತೆ ಅನುಮತಿಸಲು ಯೆಹೋವನು ಮಾಡಿದ ನಿರ್ಣಯದಿಂದ ಯಾವ ಪ್ರಯೋಜನ ಸಿಗುವುದು?

14 ನಮ್ಮ ದೃಷ್ಟಾಂತದ ಉಪಾಧ್ಯಾಯನಿಗೆ ದಂಗೆಯೆದ್ದ ಆ ವಿದ್ಯಾರ್ಥಿಯೂ ಅವನ ಜೊತೆಗಾರರೂ ತಪ್ಪೆಂಬುದು ತಿಳಿದಿರುತ್ತದೆ. ಆದರೆ ಅವರ ವಾದವು ಸರಿಯೆಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಲಿಕ್ಕಾಗಿ ಒಂದು ಸಂದರ್ಭವನ್ನು ಕೊಡುವುದು ಇಡೀ ತರಗತಿಗೆ ಪ್ರಯೋಜನವನ್ನು ತರುತ್ತದೆಂಬುದೂ ಅವನಿಗೆ ತಿಳಿದಿರುತ್ತದೆ. ಆ ದಂಗೆಕೋರರು ವಿಫಲಗೊಳ್ಳುವಾಗ, ಎಲ್ಲ ಪ್ರಾಮಾಣಿಕ ವಿದ್ಯಾರ್ಥಿಗಳು ತರಗತಿಯನ್ನು ನಡೆಸಲು ತಮ್ಮ ಉಪಾಧ್ಯಾಯನು ಮಾತ್ರ ಅರ್ಹನೆಂಬುದನ್ನು ಮನಗಾಣುವರು. ಆ ಸಮಯದ ಬಳಿಕ ಯಾರಾದರೂ ದಂಗೆಯೇಳುವಲ್ಲಿ ಅವರನ್ನು ಉಪಾಧ್ಯಾಯನು ತರಗತಿಯಿಂದ ಹೊರಹಾಕುವುದು ಏಕೆಂದು ಅವರಿಗೆ ಅರ್ಥವಾಗುವುದು. ಅದೇ ರೀತಿಯಲ್ಲಿ, ಸೈತಾನನೂ ಅವನ ಜೊತೆ ದಂಗೆಕೋರರೂ ವಿಫಲರಾಗಿದ್ದಾರೆ ಮತ್ತು ಮಾನವರು ತಮ್ಮನ್ನು ತಾವೇ ಆಳಿಕೊಳ್ಳಲಾರರು ಎಂಬುದನ್ನು ನೋಡುವುದರಿಂದ ಪ್ರಾಮಾಣಿಕ ಹೃದಯದ ಎಲ್ಲ ಮಾನವರೂ ದೇವದೂತರೂ ಪ್ರಯೋಜನ ಹೊಂದುವರೆಂದು ಯೆಹೋವನಿಗೆ ತಿಳಿದಿದೆ. ಪೂರ್ವಕಾಲದ ಯೆರೆಮೀಯನಂತೆಯೇ ಅವರೂ ಈ ಅತಿ ಮುಖ್ಯ ಸತ್ಯವನ್ನು ಕಲಿತುಕೊಳ್ಳುವರು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.

ಇಷ್ಟು ದೀರ್ಘಕಾಲವೇಕೆ?

15, 16. (ಎ) ಕಷ್ಟಸಂಕಟವು ಇಷ್ಟು ದೀರ್ಘಕಾಲ ಮುಂದುವರಿಯುವಂತೆ ಯೆಹೋವನು ಏಕೆ ಬಿಟ್ಟಿದ್ದಾನೆ? (ಬಿ) ಭಯಂಕರ ಪಾತಕಗಳಂತಹ ಸಂಗತಿಗಳು ನಡೆಯುವುದನ್ನು ದೇವರು ಏಕೆ ತಡೆದಿಲ್ಲ?

15 ಆದರೆ ಕಷ್ಟಸಂಕಟವು ಇಷ್ಟು ದೀರ್ಘಕಾಲ ಮುಂದುವರಿಯುವಂತೆ ದೇವರು ಬಿಟ್ಟಿರುವುದೇಕೆ? ಮತ್ತು ಕೆಟ್ಟ ಸಂಗತಿಗಳು ಸಂಭವಿಸುವುದನ್ನು ಆತನು ಏಕೆ ತಡೆಯುತ್ತಿಲ್ಲ? ಒಳ್ಳೆಯದು, ನಮ್ಮ ದೃಷ್ಟಾಂತದಲ್ಲಿ ಆ ಉಪಾಧ್ಯಾಯನು ಮಾಡದೆ ಇರುವ ಎರಡು ವಿಷಯಗಳನ್ನು ಪರಿಗಣಿಸಿರಿ. ಒಂದನೆಯದಾಗಿ, ಆ ದಂಗೆಕೋರ ವಿದ್ಯಾರ್ಥಿಯು ತನ್ನ ಪಕ್ಷದ ವಾದವನ್ನು ಆರಂಭಿಸುವಾಗಲೇ ಆ ಉಪಾಧ್ಯಾಯನು ಅವನನ್ನು ತಡೆದು ನಿಲ್ಲಿಸುವುದಿಲ್ಲ. ಎರಡನೆಯದಾಗಿ, ಆ ದಂಗೆಕೋರನು ತನ್ನ ವಾದವನ್ನು ಸಮರ್ಥಿಸಲು ಉಪಾಧ್ಯಾಯನು ಅವನಿಗೆ ಸಹಾಯಮಾಡುವುದಿಲ್ಲ. ಹಾಗೆಯೇ, ಯೆಹೋವನು ಮಾಡದಿರಲು ನಿರ್ಧರಿಸಿರುವ ಎರಡು ವಿಷಯಗಳನ್ನು ಪರಿಗಣಿಸಿರಿ. ಒಂದನೆಯದಾಗಿ, ಸೈತಾನನೂ ಅವನ ಪಕ್ಷದಲ್ಲಿರುವವರೂ ತಾವು ಸರಿ ಎಂದು ಸಾಬೀತುಪಡಿಸಲು ಪ್ರಯತ್ನಿಸುವುದರಿಂದ ಆತನು ಅವರನ್ನು ತಡೆದು ನಿಲ್ಲಿಸಿರುವುದಿಲ್ಲ. ಆದುದರಿಂದ ಸಮಯ ದಾಟುವಂತೆ ಬಿಡುವುದು ಅಗತ್ಯವಾಗಿದೆ. ಮಾನವ ಇತಿಹಾಸದ ಸಾವಿರಾರು ವರುಷಗಳಲ್ಲಿ, ಮಾನವಕುಲವು ಪ್ರತಿಯೊಂದು ವಿಧದ ಸ್ವಯಂ-ಆಳ್ವಿಕೆಯನ್ನು ಅಥವಾ ಮಾನವ ಸರಕಾರವನ್ನು ಪ್ರಯೋಗಿಸಿ ನೋಡಲು ಸಾಧ್ಯವಾಗಿದೆ. ವಿಜ್ಞಾನವೇ ಮುಂತಾದ ಕೆಲವು ಕ್ಷೇತ್ರಗಳಲ್ಲಿ ಮಾನವಕುಲವು ಸ್ವಲ್ಪಮಟ್ಟಿಗೆ ಪ್ರಗತಿಯನ್ನು ಮಾಡಿದೆಯಾದರೂ, ಅನ್ಯಾಯ, ದಾರಿದ್ರ್ಯ, ಪಾತಕ ಮತ್ತು ಯುದ್ಧದ ಸನ್ನಿವೇಶಗಳು ಹೆಚ್ಚೆಚ್ಚು ಕೆಡುತ್ತಾ ಹೋಗುತ್ತಿವೆ. ಮಾನವಾಳ್ವಿಕೆಯ ವೈಫಲ್ಯವು ಈಗ ಕಂಡುಬಂದಿರುತ್ತದೆ.

16 ಎರಡನೆಯದಾಗಿ, ಸೈತಾನನು ಈ ಜಗತ್ತನ್ನು ಆಳಲು ಯೆಹೋವನು ಅವನಿಗೆ ಸಹಾಯವನ್ನು ಮಾಡಿಲ್ಲ. ಉದಾಹರಣೆಗೆ, ಭಯಂಕರ ಪಾತಕಗಳು ನಡೆಯದಂತೆ ದೇವರು ತಡೆಯುವಲ್ಲಿ, ಆತನು ಕಾರ್ಯತಃ ಆ ದಂಗೆಕೋರರ ವಾದವನ್ನು ಬೆಂಬಲಿಸಿದಂತಾಗುವುದಿಲ್ಲವೆ? ಮಾನವರು ವಿಪತ್ಕಾರಕ ಪರಿಣಾಮಗಳಿಲ್ಲದೆ ತಮ್ಮನ್ನೇ ಆಳಿಕೊಳ್ಳಲು ಶಕ್ತರು ಎಂದು ಜನರು ನೆನಸುವಂತೆ ದೇವರು ಮಾಡಿದಂತಾಗುವುದಿಲ್ಲವೆ? ಯೆಹೋವನು ಆ ರೀತಿಯಲ್ಲಿ ವರ್ತಿಸುತ್ತಿದ್ದಲ್ಲಿ, ಆತನು ಒಂದು ಸುಳ್ಳಿನಲ್ಲಿ ಶಾಮೀಲಾದಂತಾಗುತ್ತಿತ್ತು. ಆದರೆ, “ಸುಳ್ಳಾಡುವುದು ದೇವರಿಗೆ ಅಸಾಧ್ಯ.”—ಇಬ್ರಿಯ 6:18, NW.

17, 18. ಮಾನವರ ಆಳ್ವಿಕೆಯಿಂದ ಮತ್ತು ಸೈತಾನನ ಪ್ರಭಾವದಿಂದ ಫಲಿಸಿರುವ ಸಕಲ ಹಾನಿಯ ವಿಷಯದಲ್ಲಿ ಯೆಹೋವನು ಏನು ಮಾಡುವನು?

17 ಆದರೆ ದೇವರ ವಿರುದ್ಧ ನಡೆದಿರುವ ಈ ದೀರ್ಘ ದಂಗೆಯ ಸಮಯದಲ್ಲಿ ಆಗಿರುವ ಹಾನಿಯ ವಿಷಯದಲ್ಲೇನು? ಯೆಹೋವನು ಸರ್ವಶಕ್ತನೆಂಬುದನ್ನು ನಾವು ನೆನಪಿನಲ್ಲಿಡಬೇಕು. ಆದುದರಿಂದ, ಮಾನವಕುಲವು ಅನುಭವಿಸುತ್ತಿರುವ ಕಷ್ಟಸಂಕಟದಿಂದ ಉಂಟಾಗಿರುವ ಪರಿಣಾಮಗಳನ್ನು ತೆಗೆದುಹಾಕಲು ಆತನು ಶಕ್ತನಾಗಿರುವುದು ಮಾತ್ರವಲ್ಲ, ಅದನ್ನು ಖಂಡಿತವಾಗಿ ತೆಗೆದುಹಾಕುವನು ಸಹ. ನಾವು ಈಗಾಗಲೇ ಕಲಿತಿರುವಂತೆ, ಈ ಭೂಮಿಯನ್ನು ಪರದೈಸಾಗಿ ಮಾರ್ಪಡಿಸುವ ಮೂಲಕ ನಮ್ಮ ಭೂಗ್ರಹದ ಹಾಳುಮಾಡುವಿಕೆಯನ್ನು ಸರಿಪಡಿಸಲಾಗುವುದು. ಯೇಸುವಿನ ವಿಮೋಚನಾ ಮೌಲ್ಯದ ಯಜ್ಞದಲ್ಲಿನ ನಂಬಿಕೆಯ ಮೂಲಕ ಪಾಪದ ಪರಿಣಾಮಗಳು ತೆಗೆದುಹಾಕಲ್ಪಡುವವು ಮತ್ತು ಮರಣದಿಂದ ಉಂಟಾಗಿರುವ ಪರಿಣಾಮಗಳನ್ನು ಪುನರುತ್ಥಾನದ ಮೂಲಕ ವಿಪರ್ಯಸ್ತಗೊಳಿಸಲಾಗುವುದು. ಹೀಗೆ ದೇವರು, “ಸೈತಾನನ ಕೆಲಸಗಳನ್ನು ಲಯ”ಮಾಡಲು ಯೇಸುವನ್ನು ಉಪಯೋಗಿಸುವನು. (1 ಯೋಹಾನ 3:8) ಯೆಹೋವನು ಇವೆಲ್ಲವನ್ನೂ ನಿಷ್ಕೃಷ್ಟವಾಗಿ ಸರಿಯಾದ ಸಮಯದಲ್ಲಿ ಕೈಗೂಡಿಸುವನು. ಆತನು ಈ ಮೊದಲೇ ಕ್ರಮಕೈಕೊಳ್ಳದಿದ್ದುದಕ್ಕೆ ನಾವು ಸಂತೋಷಪಡಬಲ್ಲೆವು. ಏಕೆಂದರೆ ಆತನ ದೀರ್ಘಶಾಂತಿಯು ನಮಗೆ ಸತ್ಯವನ್ನು ಕಲಿಯುವ ಮತ್ತು ಆತನನ್ನು ಸೇವಿಸುವ ಅವಕಾಶವನ್ನು ಕೊಟ್ಟಿರುತ್ತದೆ. (2 ಪೇತ್ರ 3:9, 10) ಈ ಮಧ್ಯೆ, ದೇವರು ಯಥಾರ್ಥವಂತರಾದ ಆರಾಧಕರನ್ನು ಸಕ್ರಿಯವಾಗಿ ಹುಡುಕುತ್ತ, ಈ ತೊಂದರೆಗ್ರಸ್ತ ಲೋಕದಲ್ಲಿ ಅವರ ಮೇಲೆ ಬರಬಹುದಾದ ಯಾವುದೇ ಕಷ್ಟವನ್ನು ಅವರು ಸಹಿಸಿಕೊಳ್ಳುವಂತೆ ಸಹಾಯ ನೀಡುತ್ತಿದ್ದಾನೆ.—ಯೋಹಾನ 4:23; 1 ಕೊರಿಂಥ 10:13.

18 ಕೆಲವರು ಹೀಗೆ ಯೋಚಿಸಬಹುದು: ದೇವರು ಆದಾಮಹವ್ವರನ್ನು ಅವರು ದಂಗೆಯೇಳಲು ಸಾಧ್ಯವೇ ಇದ್ದಿರದ ಹಾಗೆ ಸೃಷ್ಟಿಸುತ್ತಿದ್ದಲ್ಲಿ, ಈ ಎಲ್ಲ ಕಷ್ಟಸಂಕಟವನ್ನು ತಡೆಗಟ್ಟಬಹುದಿತ್ತಲ್ಲವೆ? ಈ ಪ್ರಶ್ನೆಯ ಉತ್ತರಕ್ಕಾಗಿ, ಯೆಹೋವನು ನಿಮಗೆ ಕೊಟ್ಟಿರುವ ಒಂದು ಅಮೂಲ್ಯ ವರದಾನವನ್ನು ನೀವು ನೆನಪಿಗೆ ತಂದುಕೊಳ್ಳಬೇಕು.

ದೇವರು ಕೊಟ್ಟಿರುವ ವರದಾನವನ್ನು ನೀವು ಹೇಗೆ ಉಪಯೋಗಿಸುವಿರಿ?

ಕಷ್ಟಸಂಕಟಗಳನ್ನು ತಾಳಿಕೊಳ್ಳುವಂತೆ ದೇವರು ನಿಮಗೆ ಸಹಾಯಮಾಡುವನು

19. ಯೆಹೋವನು ನಮಗೆ ಯಾವ ಅಮೂಲ್ಯ ವರದಾನವನ್ನು ಕೊಟ್ಟಿದ್ದಾನೆ, ಮತ್ತು ನಾವು ಅದನ್ನು ಅಮೂಲ್ಯವಾದುದಾಗಿ ಏಕೆ ಪರಿಗಣಿಸಬೇಕು?

19 ಅಧ್ಯಾಯ 5ರಲ್ಲಿ ಗಮನಿಸಿರುವಂತೆ, ಮಾನವರನ್ನು ಇಚ್ಛಾಸ್ವಾತಂತ್ರ್ಯ ಉಳ್ಳವರಾಗಿ ಸೃಷ್ಟಿಸಲಾಯಿತು. ಅದೆಷ್ಟು ಅಮೂಲ್ಯವಾದ ವರದಾನವೆಂಬುದನ್ನು ನೀವು ಅರಿತಿದ್ದೀರೊ? ದೇವರು ಅಗಣಿತ ಸಂಖ್ಯೆಯ ಪ್ರಾಣಿಗಳನ್ನು ಸೃಷ್ಟಿಸಿದ್ದಾನೆ, ಮತ್ತು ಇವು ಬಹುಮಟ್ಟಿಗೆ ಹುಟ್ಟರಿವಿನಿಂದ ಕಾರ್ಯನಡೆಸುತ್ತವೆ. ಮನುಷ್ಯನು ರಚಿಸಿರುವ ಕೆಲವು ಯಂತ್ರಮಾನವರನ್ನು ಮನುಷ್ಯನ ಪ್ರತಿಯೊಂದು ಆಜ್ಞೆಯನ್ನು ಪಾಲಿಸುವಂತೆ ಪ್ರೋಗ್ರ್ಯಾಮ್‌ ಮಾಡಲಾಗಿದೆ. ಆದರೆ ಒಂದುವೇಳೆ ದೇವರು ನಮ್ಮನ್ನು ಹಾಗೆ ಮಾಡಿರುತ್ತಿದ್ದಲ್ಲಿ ನಮಗೆ ಸಂತೋಷವಾಗುತ್ತಿತ್ತೊ? ಇಲ್ಲ, ನಾವು ಯಾವ ವಿಧದ ವ್ಯಕ್ತಿಗಳಾಗಬೇಕು, ಯಾವ ಜೀವನಮಾರ್ಗವನ್ನು ಬೆನ್ನಟ್ಟಬೇಕು, ಯಾವ ರೀತಿಯ ಮಿತ್ರತ್ವಗಳನ್ನು ಬೆಳೆಸಿಕೊಳ್ಳಬೇಕು ಇತ್ಯಾದಿ ವಿಷಯಗಳನ್ನು ಆಯ್ಕೆಮಾಡುವ ಸ್ವಾತಂತ್ರ್ಯ ನಮಗಿರುವುದಕ್ಕಾಗಿ ನಾವು ಆನಂದಿಸುತ್ತೇವೆ. ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯವಿರುವುದು ನಮಗೆ ಪ್ರಿಯವಾದ ವಿಷಯವಾಗಿದೆ ಮತ್ತು ನಮಗಾಗಿ ದೇವರು ಇದನ್ನೇ ಬಯಸುತ್ತಾನೆ.

20, 21. ಇಚ್ಛಾಸ್ವಾತಂತ್ರ್ಯ ಎಂಬ ವರದಾನವನ್ನು ಅತಿ ಪ್ರಯೋಜನಕರವಾದ ರೀತಿಯಲ್ಲಿ ನಾವು ಹೇಗೆ ಉಪಯೋಗಿಸಬಹುದು, ಮತ್ತು ನಾವು ಹಾಗೆ ಮಾಡಲು ಏಕೆ ಬಯಸಬೇಕು?

20 ಒತ್ತಾಯಪೂರ್ವಕವಾಗಿ ಮಾಡಲ್ಪಡುವ ಸೇವೆಯಲ್ಲಿ ಯೆಹೋವನಿಗೆ ಅಭಿರುಚಿಯಿಲ್ಲ. (2 ಕೊರಿಂಥ 9:7) ದೃಷ್ಟಾಂತಕ್ಕೆ: ಹೆತ್ತವರನ್ನು ಯಾವುದು ಹೆಚ್ಚು ಮೆಚ್ಚಿಸೀತು—ಮಗುವಿಗೆ ಹೇಳಿಕೊಟ್ಟ ಮೇಲೆ ಅದು, “ನನಗೆ ನೀವು ತುಂಬ ಇಷ್ಟ” ಎಂದು ಹೇಳುವುದೊ ಇಲ್ಲವೆ ಮಗುವು ಸಹಜವಾಗಿಯೇ ಹೃದಯದಾಳದಿಂದ ಹಾಗೆ ಹೇಳುವುದೊ? ಆದುದರಿಂದ, ಪ್ರಾಮುಖ್ಯವಾದ ಪ್ರಶ್ನೆಯೇನೆಂದರೆ, ಯೆಹೋವನು ನಿಮಗೆ ದಯಪಾಲಿಸಿರುವ ಇಚ್ಛಾಸ್ವಾತಂತ್ರ್ಯವನ್ನು ನೀವು ಹೇಗೆ ಉಪಯೋಗಿಸುವಿರಿ? ಸೈತಾನನು ಮತ್ತು ಆದಾಮಹವ್ವರು ತಮಗಿದ್ದ ಇಚ್ಛಾಸ್ವಾತಂತ್ರ್ಯವನ್ನು ಅತಿ ಕೆಟ್ಟದಾದ ರೀತಿಯಲ್ಲಿ ಉಪಯೋಗಿಸಿಕೊಂಡರು. ಅವರು ಯೆಹೋವ ದೇವರನ್ನೇ ಧಿಕ್ಕರಿಸಿದರು. ನೀವೇನು ಮಾಡುವಿರಿ?

21 ಆ ಇಚ್ಛಾಸ್ವಾತಂತ್ರ್ಯ ಎಂಬ ಆಶ್ಚರ್ಯಕರವಾದ ವರದಾನವನ್ನು ಅತಿ ಪ್ರಯೋಜನಕರವಾದ ರೀತಿಯಲ್ಲಿ ಉಪಯೋಗಿಸುವ ಸದವಕಾಶ ನಿಮಗಿದೆ. ಯೆಹೋವನ ಪಕ್ಷದಲ್ಲಿ ತಮ್ಮ ನಿಲುವನ್ನು ತೆಗೆದುಕೊಂಡಿರುವ ಲಕ್ಷಾಂತರ ಜನರೊಂದಿಗೆ ನೀವು ಜೊತೆಗೂಡಬಲ್ಲಿರಿ. ಈ ಜನರು ಸೈತಾನನು ಸುಳ್ಳುಗಾರನೆಂದೂ ಒಬ್ಬ ಅಧಿಪತಿಯಾಗಿ ಶೋಚನೀಯ ರೀತಿಯಲ್ಲಿ ವಿಫಲನಾಗಿದ್ದಾನೆಂದೂ ತೋರಿಸಿಕೊಡುವುದರಲ್ಲಿ ಕ್ರಿಯಾಶೀಲ ಪಾತ್ರವನ್ನು ವಹಿಸುತ್ತ ದೇವರನ್ನು ಸಂತೋಷಪಡಿಸುತ್ತಿದ್ದಾರೆ. (ಜ್ಞಾನೋಕ್ತಿ 27:11) ಜೀವನದಲ್ಲಿ ಸರಿಯಾದ ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ ನೀವು ಸಹ ಹಾಗೆ ಮಾಡಬಲ್ಲಿರಿ. ಇದನ್ನು ಮುಂದಿನ ಅಧ್ಯಾಯವು ವಿವರಿಸುವುದು.