ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ ಹದಿನೇಳು

ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ

ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
  • ನಾವು ದೇವರಿಗೆ ಏಕೆ ಪ್ರಾರ್ಥಿಸಬೇಕು?

  • ದೇವರು ನಮ್ಮ ಪ್ರಾರ್ಥನೆಗಳನ್ನು ಆಲಿಸಲು ನಾವೇನು ಮಾಡತಕ್ಕದ್ದು?

  • ನಮ್ಮ ಪ್ರಾರ್ಥನೆಗಳಿಗೆ ದೇವರು ಹೇಗೆ ಉತ್ತರ ಕೊಡುತ್ತಾನೆ?

‘ಭೂಪರಲೋಕಗಳನ್ನು ಉಂಟುಮಾಡಿರುವಾತನು’ ನಮ್ಮ ಪ್ರಾರ್ಥನೆಗಳನ್ನು ಕೇಳಲು ಸಿದ್ಧನಾಗಿದ್ದಾನೆ

1, 2. ನಾವು ಪ್ರಾರ್ಥನೆಯನ್ನು ಒಂದು ಸದವಕಾಶವಾಗಿ ಏಕೆ ವೀಕ್ಷಿಸಬೇಕು, ಮತ್ತು ಬೈಬಲ್‌ ಇದರ ಕುರಿತು ಏನು ಬೋಧಿಸುತ್ತದೆಂದು ನಾವು ತಿಳಿದುಕೊಳ್ಳುವುದು ಅಗತ್ಯವಾಗಿದೆಯೇಕೆ?

ವಿಶಾಲವಾದ ವಿಶ್ವಕ್ಕೆ ಹೋಲಿಸುವಾಗ ಈ ಭೂಮಿ ಅತಿ ಚಿಕ್ಕದು. ವಾಸ್ತವದಲ್ಲಿ, ‘ಭೂಪರಲೋಕಗಳನ್ನು ಉಂಟುಮಾಡಿರುವ’ ಯೆಹೋವನ ದೃಷ್ಟಿಯಲ್ಲಿ, ಮಾನವ ಜನಾಂಗಗಳು ಕಪಿಲೆಯಿಂದ ಉದುರುವ ಒಂದು ತುಂತುರಿನಂತಿವೆ. (ಕೀರ್ತನೆ 115:15; ಯೆಶಾಯ 40:15) ಆದರೂ ಬೈಬಲು ಹೇಳುವುದು: “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.” (ಕೀರ್ತನೆ 145:18, 19) ಇದರ ಅರ್ಥವನ್ನು ತುಸು ಯೋಚಿಸಿರಿ! ನಾವು “ಯಥಾರ್ಥವಾಗಿ ಮೊರೆಯಿಡುವದಾದರೆ” ಸರ್ವಶಕ್ತನಾದ ಸೃಷ್ಟಿಕರ್ತನು ನಮಗೆ ಹತ್ತಿರವಾಗಿದ್ದು ನಮಗೆ ಕಿವಿಗೊಡುತ್ತಾನೆ. ದೇವರಿಗೆ ಪ್ರಾರ್ಥನೆಮಾಡುವುದು ನಮಗಿರಬಲ್ಲ ಸದವಕಾಶವೇ ಸರಿ!

2 ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಆಲಿಸಬೇಕೆಂದು ನಾವು ಬಯಸುವುದಾದರೆ, ಆತನು ಒಪ್ಪುವ ರೀತಿಯಲ್ಲಿ ನಾವು ಆತನಿಗೆ ಪ್ರಾರ್ಥಿಸತಕ್ಕದ್ದು. ಆದರೆ ಬೈಬಲು ಪ್ರಾರ್ಥನೆಯ ವಿಷಯದಲ್ಲಿ ಏನು ಬೋಧಿಸುತ್ತದೆಂದು ತಿಳಿಯದೆ ಇರುವಲ್ಲಿ ನಾವಿದನ್ನು ಹೇಗೆ ಮಾಡಸಾಧ್ಯ? ಈ ವಿಷಯದಲ್ಲಿ ಬೈಬಲ್‌ ಏನನ್ನುತ್ತದೆಂದು ನಾವು ತಿಳಿದುಕೊಳ್ಳುವುದು ಮಹತ್ವವುಳ್ಳದ್ದು, ಏಕೆಂದರೆ ಪ್ರಾರ್ಥನೆಯು ನಾವು ಯೆಹೋವನಿಗೆ ಹೆಚ್ಚು ಸಮೀಪವಾಗಲು ಸಹಾಯಮಾಡುತ್ತದೆ.

ಯೆಹೋವನಿಗೆ ಏಕೆ ಪ್ರಾರ್ಥಿಸಬೇಕು?

3. ನಾವು ಯೆಹೋವನಿಗೆ ಏಕೆ ಪ್ರಾರ್ಥಿಸಬೇಕೆಂಬುದಕ್ಕೆ ಒಂದು ಪ್ರಮುಖ ಕಾರಣವೇನು?

3 ನಾವು ಯೆಹೋವನಿಗೆ ಪ್ರಾರ್ಥಿಸಬೇಕಾಗಿರುವ ಒಂದು ಪ್ರಮುಖ ಕಾರಣವು, ಪ್ರಾರ್ಥಿಸುವಂತೆ ಆತನು ನಮ್ಮನ್ನು ಆಮಂತ್ರಿಸುವುದೇ ಆಗಿದೆ. ಆತನ ವಾಕ್ಯವು ನಮ್ಮನ್ನು ಉತ್ತೇಜಿಸುವುದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಈ ವಿಶ್ವದ ಪರಮ ಪ್ರಭು ನಮಗಾಗಿ ಮಾಡಿರುವ ಇಂತಹ ದಯಾಪೂರ್ವಕ ಏರ್ಪಾಡನ್ನು ನಾವು ಅಸಡ್ಡೆಮಾಡಲು ಖಂಡಿತವಾಗಿಯೂ ಬಯಸೆವೆಂಬುದು ನಿಶ್ಚಯ!

4. ಯೆಹೋವನಿಗೆ ಕ್ರಮವಾಗಿ ಮಾಡುವ ಪ್ರಾರ್ಥನೆಯು ಆತನೊಂದಿಗೆ ನಮಗಿರುವ ಸಂಬಂಧವನ್ನು ಹೇಗೆ ಬಲಪಡಿಸುತ್ತದೆ?

4 ಪ್ರಾರ್ಥಿಸಲಿಕ್ಕಾಗಿರುವ ಇನ್ನೊಂದು ಕಾರಣವು ಯಾವುದೆಂದರೆ, ನಾವು ಯೆಹೋವನಿಗೆ ಕ್ರಮವಾಗಿ ಪ್ರಾರ್ಥಿಸುವುದು ಆತನೊಂದಿಗೆ ನಮಗಿರುವ ಸಂಬಂಧವನ್ನು ಬಲಪಡಿಸುವ ಒಂದು ಮಾರ್ಗವಾಗಿದೆ. ನಿಜ ಸ್ನೇಹಿತರು ತಮಗೇನಾದರೂ ಅಗತ್ಯವಿರುವಾಗ ಮಾತ್ರ ಒಬ್ಬರನ್ನೊಬ್ಬರು ಸಂಪರ್ಕಿಸುವುದಿಲ್ಲ. ಒಳ್ಳೆಯ ಸ್ನೇಹಿತರು ಪರಸ್ಪರರಲ್ಲಿ ಆಸಕ್ತಿವಹಿಸುತ್ತಾರೆ, ಮತ್ತು ಅವರು ತಮ್ಮ ಯೋಚನೆ, ಚಿಂತೆ ಹಾಗೂ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವಾಗ ಅವರ ಮಿತ್ರತ್ವವು ಇನ್ನೂ ಹೆಚ್ಚು ಬಲಗೊಳ್ಳುತ್ತದೆ. ಕೆಲವೊಂದು ರೀತಿಗಳಲ್ಲಿ, ಯೆಹೋವ ದೇವರೊಂದಿಗೆ ನಮಗಿರುವ ಸಂಬಂಧವೂ ಹೀಗೆಯೇ ಇದೆ. ಈ ಪುಸ್ತಕದ ಸಹಾಯದಿಂದ ನೀವು ಯೆಹೋವನು, ಆತನ ವ್ಯಕ್ತಿತ್ವ ಮತ್ತು ಆತನ ಉದ್ದೇಶಗಳ ಕುರಿತು ಬೈಬಲ್‌ ಏನನ್ನು ಬೋಧಿಸುತ್ತದೆ ಎಂಬುದರ ಬಗ್ಗೆ ಎಷ್ಟೋ ವಿಷಯಗಳನ್ನು ಕಲಿತುಕೊಂಡಿದ್ದೀರಿ. ಆತನನ್ನು ಒಬ್ಬ ನಿಜ ವ್ಯಕ್ತಿಯಾಗಿ ನೀವು ತಿಳಿದುಕೊಂಡಿದ್ದೀರಿ. ಪ್ರಾರ್ಥನೆಯು ನಿಮ್ಮ ಆಲೋಚನೆಗಳನ್ನೂ ಅಂತರಾಳದ ಅನಿಸಿಕೆಗಳನ್ನೂ ನಿಮ್ಮ ಸ್ವರ್ಗೀಯ ಪಿತನಿಗೆ ವ್ಯಕ್ತಪಡಿಸಲು ಸಂದರ್ಭವನ್ನು ಒದಗಿಸುತ್ತದೆ. ನೀವು ಹಾಗೆ ಮಾಡುವಾಗ, ಯೆಹೋವನಿಗೆ ಹೆಚ್ಚು ಸಮೀಪವಾಗುತ್ತೀರಿ.—ಯಾಕೋಬ 4:8.

ನಾವು ಯಾವ ಆವಶ್ಯಕತೆಗಳನ್ನು ಪೂರೈಸಬೇಕು?

5. ಯೆಹೋವನು ಎಲ್ಲ ಪ್ರಾರ್ಥನೆಗಳನ್ನು ಆಲಿಸುವುದಿಲ್ಲ ಎಂಬುದನ್ನು ಯಾವುದು ತೋರಿಸುತ್ತದೆ?

5 ಯೆಹೋವನು ಎಲ್ಲ ಪ್ರಾರ್ಥನೆಗಳನ್ನು ಆಲಿಸುತ್ತಾನೊ? ಆತನು ಪ್ರವಾದಿಯಾದ ಯೆಶಾಯನ ದಿನಗಳಲ್ಲಿ ದಂಗೆಕೋರ ಇಸ್ರಾಯೇಲ್ಯರಿಗೆ ಏನು ಹೇಳಿದನೆಂದು ಪರಿಗಣಿಸಿರಿ: “ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.” (ಯೆಶಾಯ 1:15) ಹೀಗೆ ಕೆಲವು ಕೃತ್ಯಗಳು, ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡದಂತೆ ಮಾಡಬಲ್ಲವು. ಹೀಗಿರುವುದರಿಂದ, ನಮ್ಮ ಪ್ರಾರ್ಥನೆಗಳನ್ನು ದೇವರು ಆಲಿಸಬೇಕಾದರೆ ನಾವು ಕೆಲವೊಂದು ಮೂಲ ಆವಶ್ಯಕತೆಗಳನ್ನು ಪೂರೈಸತಕ್ಕದ್ದು.

6. ದೇವರು ನಮ್ಮ ಪ್ರಾರ್ಥನೆಗಳನ್ನು ಆಲಿಸಬೇಕಾದರೆ, ಪ್ರಧಾನವಾದ ಒಂದು ಆವಶ್ಯಕತೆಯೇನು, ಮತ್ತು ಅದನ್ನು ನಾವು ಹೇಗೆ ಪೂರೈಸಬಲ್ಲೆವು?

6 ಒಂದು ಪ್ರಧಾನ ಆವಶ್ಯಕತೆಯು ನಾವು ನಂಬಿಕೆಯನ್ನಿಡುವುದೇ ಆಗಿದೆ. (ಮಾರ್ಕ 11:24) ಅಪೊಸ್ತಲ ಪೌಲನು ಬರೆದುದು: “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ನಿಜ ನಂಬಿಕೆಯನ್ನು ಹೊಂದಿರುವುದರ ಅರ್ಥ, ದೇವರು ಇದ್ದಾನೆ ಮತ್ತು ನಮ್ಮ ಪ್ರಾರ್ಥನೆಗಳನ್ನು ಆಲಿಸಿ ಉತ್ತರ ಕೊಡುತ್ತಾನೆ ಎಂದು ತಿಳಿದಿರುವುದು ಅಷ್ಟೇ ಅಲ್ಲ. ನಂಬಿಕೆಯು ನಮ್ಮ ಕ್ರಿಯೆಗಳಿಂದ ರುಜುವಾಗುತ್ತದೆ. ನಾವು ಪ್ರತಿದಿನ ಹೇಗೆ ಜೀವಿಸುತ್ತೇವೊ ಅದರ ಮೂಲಕ ನಮಗೆ ನಂಬಿಕೆಯಿದೆ ಎಂಬುದಕ್ಕೆ ಸ್ಪಷ್ಟ ಪ್ರಮಾಣವನ್ನು ಕೊಡತಕ್ಕದ್ದು.—ಯಾಕೋಬ 2:26.

7. (ಎ) ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮಾತಾಡುವಾಗ ನಾವೇಕೆ ಗೌರವಭರಿತರಾಗಿರಬೇಕು? (ಬಿ) ದೇವರಿಗೆ ಪ್ರಾರ್ಥಿಸುವಾಗ, ನಮ್ಮಲ್ಲಿ ದೀನಭಾವ ಮತ್ತು ಯಥಾರ್ಥಭಾವ ಇದೆಯೆಂದು ನಾವು ಹೇಗೆ ತೋರಿಸಬಲ್ಲೆವು?

7 ಪ್ರಾರ್ಥನೆಯ ಮೂಲಕ ತನ್ನನ್ನು ಸಮೀಪಿಸುವವರು ದೀನಭಾವದಿಂದಲೂ ಯಥಾರ್ಥಭಾವದಿಂದಲೂ ಸಮೀಪಿಸಬೇಕೆಂದು ಸಹ ಯೆಹೋವನು ಅಪೇಕ್ಷಿಸುತ್ತಾನೆ. ಯೆಹೋವನೊಂದಿಗೆ ಮಾತಾಡುವಾಗ ದೀನಭಾವ ತೋರಿಸಲು ನಮಗೆ ಕಾರಣವಿದೆಯಲ್ಲವೊ? ಒಬ್ಬ ಅರಸ ಇಲ್ಲವೆ ರಾಷ್ಟ್ರಾಧ್ಯಕ್ಷರೊಂದಿಗೆ ಮಾತಾಡುವ ಸಂದರ್ಭ ಜನರಿಗಿರುವಾಗ, ಸಾಮಾನ್ಯವಾಗಿ ಅವರು ಆ ಅಧಿಕಾರಿಯ ಉನ್ನತ ಸ್ಥಾನವನ್ನು ಅಂಗೀಕರಿಸುತ್ತ ಗೌರವಪೂರ್ವಕವಾಗಿ ಮಾತಾಡುತ್ತಾರೆ. ಹಾಗಾದರೆ, ಯೆಹೋವನನ್ನು ಸಮೀಪಿಸುವಾಗ ನಾವು ಇನ್ನೆಷ್ಟು ಹೆಚ್ಚು ಗೌರವಭರಿತರಾಗಿರಬೇಕು! (ಕೀರ್ತನೆ 138:6) ಎಷ್ಟೆಂದರೂ, ಆತನು “ಸರ್ವಶಕ್ತನಾದ ದೇವರು.” (ಆದಿಕಾಂಡ 17:1) ದೇವರಿಗೆ ಪ್ರಾರ್ಥಿಸುವಾಗ ನಾವಾತನನ್ನು ಸಮೀಪಿಸುವ ವಿಧವು, ಆತನ ಮುಂದೆ ನಮ್ಮ ಸ್ಥಾನವನ್ನು ದೀನಭಾವದಿಂದ ಒಪ್ಪಿಕೊಳ್ಳುತ್ತೇವೆಂಬುದನ್ನು ತೋರಿಸಬೇಕು. ಇಂತಹ ದೀನಭಾವವು, ನಾವು ಯಾಂತ್ರಿಕವಾಗಿ ಮತ್ತು ಹೇಳಿದ್ದನ್ನೇ ಪುನಃ ಪುನಃ ಹೇಳುವಂಥ ರೀತಿಯ ಪ್ರಾರ್ಥನೆಗಳನ್ನು ಮಾಡದೆ, ನಮ್ಮ ಹೃದಯದಿಂದ ಯಥಾರ್ಥವಾಗಿ ಪ್ರಾರ್ಥಿಸುವಂತೆ ಸಹ ನಮ್ಮನ್ನು ಪ್ರಚೋದಿಸುವುದು.—ಮತ್ತಾಯ 6:7, 8.

8. ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತೇವೊ ಅದಕ್ಕೆ ಹೊಂದಿಕೆಯಲ್ಲಿ ಹೇಗೆ ಕ್ರಿಯೆಗೈಯಬಲ್ಲೆವು?

8 ನಮ್ಮ ಪ್ರಾರ್ಥನೆಗಳು ದೇವರಿಂದ ಆಲಿಸಲ್ಪಡಬೇಕಾದರೆ ಅದಕ್ಕಿರುವ ಇನ್ನೊಂದು ಆವಶ್ಯಕತೆಯು, ನಾವು ನಮ್ಮ ಪ್ರಾರ್ಥನೆಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯುವುದೇ ಆಗಿದೆ. ನಾವು ಯಾವುದಕ್ಕಾಗಿ ಪ್ರಾರ್ಥಿಸುತ್ತೇವೊ ಅದನ್ನು ಪೂರೈಸಲು ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡಬೇಕೆಂದು ಯೆಹೋವನು ನಮ್ಮಿಂದ ನಿರೀಕ್ಷಿಸುತ್ತಾನೆ. ದೃಷ್ಟಾಂತಕ್ಕೆ, “ನಮ್ಮ ಅನುದಿನದ ಆಹಾರವನ್ನು ಈ ಹೊತ್ತೂ ದಯಪಾಲಿಸು” ಎಂದು ನಾವು ಪ್ರಾರ್ಥಿಸುವಲ್ಲಿ, ನಾವು ಮಾಡಲು ಶಕ್ತರಾಗಿರುವ ಯಾವುದೇ ಲಭ್ಯ ಕೆಲಸವನ್ನು ನಾವು ಕಷ್ಟಪಟ್ಟು ಮಾಡಬೇಕು. (ಮತ್ತಾಯ 6:11; 2 ಥೆಸಲೊನೀಕ 3:10) ನಮ್ಮ ಶಾರೀರಿಕ ಬಲಹೀನತೆಯನ್ನು ಹೋಗಲಾಡಿಸಲು ಬೇಕಾದ ಸಹಾಯಕ್ಕಾಗಿ ನಾವು ಪ್ರಾರ್ಥಿಸುವಲ್ಲಿ, ನಮ್ಮನ್ನು ಪ್ರಲೋಭನೆಗೆ ನಡೆಸಬಲ್ಲ ಪರಿಸ್ಥಿತಿಗಳಿಂದ ಮತ್ತು ಸನ್ನಿವೇಶಗಳಿಂದ ನಾವು ದೂರವಿರಲು ಜಾಗರೂಕತೆಯಿಂದಿರಬೇಕು. (ಕೊಲೊಸ್ಸೆ 3:5) ಈ ಮೂಲ ಆವಶ್ಯಕತೆಗಳಲ್ಲದೆ, ಪ್ರಾರ್ಥನೆಯ ವಿಷಯದಲ್ಲಿ ನಮಗೆ ಉತ್ತರ ಬೇಕಾಗಿರುವ ಇತರ ಪ್ರಶ್ನೆಗಳಿವೆ.

ಪ್ರಾರ್ಥನೆಯ ಸಂಬಂಧದಲ್ಲಿ ಕೆಲವು ಪ್ರಶ್ನೆಗಳನ್ನು ಉತ್ತರಿಸುವುದು

9. ನಾವು ಯಾರಿಗೆ ಪ್ರಾರ್ಥಿಸಬೇಕು, ಮತ್ತು ಯಾರ ಮುಖಾಂತರ?

9 ನಾವು ಯಾರಿಗೆ ಪ್ರಾರ್ಥಿಸಬೇಕು? “ಪರಲೋಕದಲ್ಲಿರುವ ನಮ್ಮ ತಂದೆ”ಗೆ ಪ್ರಾರ್ಥಿಸಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:10) ಆದಕಾರಣ, ನಮ್ಮ ಪ್ರಾರ್ಥನೆಗಳು ಯೆಹೋವ ದೇವರಿಗೆ ಮಾತ್ರ ಮಾಡಲ್ಪಡಬೇಕು. ಆದರೂ, ತನ್ನ ಏಕಜಾತ ಪುತ್ರನಾದ ಯೇಸು ಕ್ರಿಸ್ತನ ಸ್ಥಾನವನ್ನೂ ನಾವು ಒಪ್ಪಿಕೊಳ್ಳಬೇಕೆಂದು ಯೆಹೋವನು ಅಪೇಕ್ಷಿಸುತ್ತಾನೆ. ನಾವು 5ನೆಯ ಅಧ್ಯಾಯದಲ್ಲಿ ಕಲಿತಂತೆ, ನಮ್ಮನ್ನು ಪಾಪ ಮತ್ತು ಮರಣದಿಂದ ರಕ್ಷಿಸುವ ಸಲುವಾಗಿ ವಿಮೋಚನಾ ಮೌಲ್ಯದ ರೂಪದಲ್ಲಿ ಯೇಸುವನ್ನು ಭೂಮಿಗೆ ಕಳುಹಿಸಲಾಯಿತು. (ಯೋಹಾನ 3:16; ರೋಮಾಪುರ 5:12) ಅವನು ನೇಮಿತ ಮಹಾಯಾಜಕನೂ ನ್ಯಾಯಾಧಿಪತಿಯೂ ಆಗಿದ್ದಾನೆ. (ಯೋಹಾನ 5:22; ಇಬ್ರಿಯ 6:20) ಈ ಕಾರಣದಿಂದ, ನಾವು ಯೇಸುವಿನ ಮುಖಾಂತರ ಪ್ರಾರ್ಥಿಸಬೇಕೆಂದು ಶಾಸ್ತ್ರವಚನಗಳು ನಿರ್ದೇಶಿಸುತ್ತವೆ. ಅವನು ತಾನೇ ಹೇಳಿದ್ದು: “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.” (ಯೋಹಾನ 14:6) ನಮ್ಮ ಪ್ರಾರ್ಥನೆಗಳು ಆಲಿಸಲ್ಪಡಬೇಕಾದರೆ ನಾವು ಯೆಹೋವನಿಗೆ ಮಾತ್ರ ಆತನ ಪುತ್ರನ ಮುಖಾಂತರ ಪ್ರಾರ್ಥಿಸತಕ್ಕದ್ದು.

10. ನಾವು ಪ್ರಾರ್ಥಿಸುವಾಗ ಒಂದು ನಿರ್ದಿಷ್ಟ ದೇಹಭಂಗಿಯು ಏಕೆ ಅಗತ್ಯವಿಲ್ಲ?

10 ನಾವು ಪ್ರಾರ್ಥಿಸುವಾಗ ವಿಶೇಷ ರೀತಿಯ ದೇಹಭಂಗಿ ಇರಬೇಕೊ? ಇಲ್ಲ. ಯೆಹೋವನು ಕೈಗಳದ್ದಾಗಲಿ ಇಡೀ ಶರೀರದ್ದಾಗಲಿ ಯಾವುದೇ ನಿರ್ದಿಷ್ಟ ಭಂಗಿಯನ್ನು ಕೇಳಿಕೊಳ್ಳುವುದಿಲ್ಲ. ವಿಭಿನ್ನ ರೀತಿಯ ಭಂಗಿಗಳಲ್ಲಿ ಪ್ರಾರ್ಥಿಸುವುದು ಸ್ವೀಕರಣೀಯವೆಂದು ಬೈಬಲ್‌ ಬೋಧಿಸುತ್ತದೆ. ಈ ಭಂಗಿಗಳಲ್ಲಿ ಕುಳಿತುಕೊಳ್ಳುವುದು, ತಲೆ ಬಾಗಿಸುವುದು, ಮೊಣಕಾಲೂರುವುದು ಮತ್ತು ನಿಲ್ಲುವುದು ಸೇರಿದೆ. (1 ಪೂರ್ವಕಾಲವೃತ್ತಾಂತ 17:16; ನೆಹೆಮೀಯ 8:6; ದಾನಿಯೇಲ 6:10; ಮಾರ್ಕ 11:25) ಆದರೆ ನಿಜವಾಗಿಯೂ ಪ್ರಾಮುಖ್ಯವಾಗಿರುವುದು, ಯೋಗ್ಯವಾದ ಹೃದಯ ಭಾವವೇ ಹೊರತು ಬೇರೆಯವರು ನೋಡಸಾಧ್ಯವಿರುವ ಯಾವುದೋ ವಿಶೇಷ ರೀತಿಯ ಭಂಗಿಯಲ್ಲ. ವಾಸ್ತವದಲ್ಲಿ, ನಮ್ಮ ದೈನಂದಿನ ಕೆಲಸದ ಸಮಯದಲ್ಲಿ ಇಲ್ಲವೆ ತುರ್ತುಪರಿಸ್ಥಿತಿ ಏಳುವಾಗ, ನಾವು ಎಲ್ಲಿಯೇ ಇರಲಿ, ಒಂದು ಮೌನ ಪ್ರಾರ್ಥನೆಯನ್ನು ಮಾಡಬಹುದು. ನಮ್ಮ ಸುತ್ತಲಿರುವವರು ಅದನ್ನು ಗಮನಿಸದಿರಬಹುದಾದರೂ ಯೆಹೋವನು ಅಂತಹ ಪ್ರಾರ್ಥನೆಗಳನ್ನು ಆಲಿಸುತ್ತಾನೆ.—ನೆಹೆಮೀಯ 2:1-6.

11. ಪ್ರಾರ್ಥನೆಯಲ್ಲಿ ತಿಳಿಸಲು ಯೋಗ್ಯವಾಗಿರುವಂತಹ ಕೆಲವು ವೈಯಕ್ತಿಕ ಚಿಂತೆಗಳಾವುವು?

11 ನಾವು ಯಾವುದಕ್ಕಾಗಿ ಪ್ರಾರ್ಥಿಸಬಹುದು? ಬೈಬಲು ವಿವರಿಸುವುದು: “ನಾವು ದೇವರ [ಯೆಹೋವನ] ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.” (1 ಯೋಹಾನ 5:14) ಆದುದರಿಂದ ದೇವರ ಚಿತ್ತಾನುಸಾರವಾದ ಯಾವುದೇ ವಿಷಯಕ್ಕಾಗಿ ನಾವು ಪ್ರಾರ್ಥಿಸಬಹುದು. ನಾವು ನಮ್ಮ ವೈಯಕ್ತಿಕ ಚಿಂತೆಗಳ ಕುರಿತು ದೇವರಿಗೆ ಪ್ರಾರ್ಥಿಸುವುದು ಆತನ ಚಿತ್ತವಾಗಿದೆಯೊ? ನಿಶ್ಚಯವಾಗಿಯೂ ಹೌದು! ದೇವರಿಗೆ ಮಾಡುವ ಪ್ರಾರ್ಥನೆಯು ಬಹಳಷ್ಟು ಮಟ್ಟಿಗೆ ಒಬ್ಬ ಆಪ್ತ ಮಿತ್ರನೊಂದಿಗೆ ಮಾತಾಡುವುದನ್ನು ಹೋಲುತ್ತದೆ. ನಾವು ಮುಕ್ತ ಮನಸ್ಸಿನಿಂದ, ‘ಹೃದಯ ಬಿಚ್ಚಿ’ ದೇವರೊಂದಿಗೆ ಮಾತಾಡಬಹುದು. (ಕೀರ್ತನೆ 62:8) ನಾವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುವುದೂ ಯುಕ್ತವೇ, ಏಕೆಂದರೆ ನಾವು ಸರಿಯಾದದ್ದನ್ನು ಮಾಡುವಂತೆ ಅದು ಸಹಾಯಮಾಡುತ್ತದೆ. (ಲೂಕ 11:13) ವಿವೇಕಪೂರ್ಣವಾದ ನಿರ್ಣಯಗಳನ್ನು ಮಾಡಲಿಕ್ಕಾಗಿ ಮಾರ್ಗದರ್ಶನವನ್ನೂ ಕಷ್ಟಗಳನ್ನು ನಿಭಾಯಿಸಲಿಕ್ಕಾಗಿ ಬಲವನ್ನೂ ನಾವು ಕೇಳಿಕೊಳ್ಳಬಲ್ಲೆವು. (ಯಾಕೋಬ 1:5) ನಾವು ಪಾಪಮಾಡುವಾಗ, ಕ್ರಿಸ್ತನ ಯಜ್ಞದ ಆಧಾರದ ಮೇಲೆ ನಾವು ಕ್ಷಮೆಯಾಚಿಸಬೇಕು. (ಎಫೆಸ 1:3, 7) ಆದರೆ, ನಮ್ಮ ಪ್ರಾರ್ಥನೆಗಳಲ್ಲಿ ಕೇವಲ ನಮ್ಮ ವೈಯಕ್ತಿಕ ವಿಷಯಗಳೇ ಇರಬಾರದು ಎಂಬುದಂತೂ ನಿಶ್ಚಯ. ನಾವು ನಮ್ಮ ಪ್ರಾರ್ಥನೆಗಳನ್ನು ವಿಶಾಲಗೊಳಿಸಿ ಅದರಲ್ಲಿ ಇತರರನ್ನು, ಅಂದರೆ ನಮ್ಮ ಕುಟುಂಬದ ಸದಸ್ಯರನ್ನು ಮತ್ತು ಜೊತೆ ಆರಾಧಕರನ್ನೂ ಸೇರಿಸಬೇಕು.—ಅ. ಕೃತ್ಯಗಳು 12:5; ಕೊಲೊಸ್ಸೆ 4:12.

12. ನಮ್ಮ ಪ್ರಾರ್ಥನೆಗಳಲ್ಲಿ ನಮ್ಮ ಸ್ವರ್ಗೀಯ ಪಿತನಿಗೆ ಸಂಬಂಧಪಟ್ಟ ವಿಷಯಗಳಿಗೆ ನಾವು ಹೇಗೆ ಪ್ರಥಮ ಪ್ರಮುಖತೆಯನ್ನು ಕೊಡಬಹುದು?

12 ನಮ್ಮ ಪ್ರಾರ್ಥನೆಗಳಲ್ಲಿ ಯೆಹೋವ ದೇವರಿಗೆ ಸಂಬಂಧಪಟ್ಟ ವಿಷಯಗಳಿಗೆ ಪ್ರಥಮ ಪ್ರಮುಖತೆಯನ್ನು ಕೊಡಬೇಕು. ಆತನ ಸಕಲ ಒಳ್ಳೇತನಕ್ಕಾಗಿ ಹೃತ್ಪೂರ್ವಕವಾದ ಸ್ತುತಿ ಮತ್ತು ಉಪಕಾರಗಳನ್ನು ವ್ಯಕ್ತಪಡಿಸಲು ನಿಶ್ಚಯವಾಗಿಯೂ ನಮಗೆ ಸಕಾರಣವಿದೆ. (1 ಪೂರ್ವಕಾಲವೃತ್ತಾಂತ 29:10-13) ಮತ್ತಾಯ 6:9-13 ರಲ್ಲಿ ದಾಖಲಿಸಲ್ಪಟ್ಟಿರುವ ಮಾದರಿ ಪ್ರಾರ್ಥನೆಯನ್ನು ಯೇಸು ತಿಳಿಸಿದಾಗ, ದೇವರ ನಾಮವು ಪರಿಶುದ್ಧವೆಂದೆಣಿಸಲ್ಪಡುವಂತೆ ಪ್ರಾರ್ಥಿಸಲು ಅವನು ಕಲಿಸಿದನು. ಬಳಿಕ, ದೇವರ ರಾಜ್ಯವು ಬರುವಂತೆಯೂ, ದೇವರ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರುವಂತೆ ಪ್ರಾರ್ಥನೆಯಲ್ಲಿ ತಿಳಿಸಲಾಗಿದೆ. ಯೆಹೋವನಿಗೆ ಸಂಬಂಧಪಟ್ಟ ಈ ಪ್ರಮುಖ ವಿಷಯಗಳ ಬಳಿಕವೇ ಯೇಸು ವ್ಯಕ್ತಿಪರವಾದ ಚಿಂತೆಗಳಿಗೆ ಗಮನವನ್ನು ಕೊಟ್ಟನು. ನಾವೂ ಹಾಗೆಯೇ ನಮ್ಮ ಪ್ರಾರ್ಥನೆಗಳಲ್ಲಿ ದೇವರಿಗೆ ಅತಿ ಪ್ರಮುಖ ಸ್ಥಾನವನ್ನು ಕೊಡುವಾಗ, ನಾವು ನಮ್ಮ ಸ್ವಂತ ಕ್ಷೇಮಕ್ಕಿಂತ ಹೆಚ್ಚಿನದ್ದರಲ್ಲಿ ಆಸಕ್ತರಾಗಿದ್ದೇವೆಂದು ತೋರಿಸುತ್ತೇವೆ.

13. ಅಂಗೀಕಾರಾರ್ಹವಾದ ಪ್ರಾರ್ಥನೆಗಳು ಎಷ್ಟು ಉದ್ದವಾಗಿರಬೇಕು ಎಂಬ ವಿಷಯದಲ್ಲಿ ಶಾಸ್ತ್ರವಚನಗಳು ಏನು ಸೂಚಿಸುತ್ತವೆ?

13 ನಮ್ಮ ಪ್ರಾರ್ಥನೆಗಳು ಎಷ್ಟು ಉದ್ದವಾಗಿರಬೇಕು? ನಮ್ಮ ಖಾಸಗಿ ಅಥವಾ ಸಾರ್ವಜನಿಕ ಪ್ರಾರ್ಥನೆಗಳು ಎಷ್ಟು ಉದ್ದವಾಗಿರಬೇಕು ಎಂಬ ವಿಷಯದಲ್ಲಿ ಬೈಬಲು ಯಾವುದೇ ಮಿತಿಯನ್ನು ಇಡುವುದಿಲ್ಲ. ಅವುಗಳ ಉದ್ದವು ಊಟಕ್ಕೆ ಮುಂಚೆ ಮಾಡಲ್ಪಡುವ ಸಂಕ್ಷಿಪ್ತ ಪ್ರಾರ್ಥನೆಯಿಂದ ಹಿಡಿದು ನಮ್ಮ ಹೃದಯವನ್ನು ಯೆಹೋವನಿಗೆ ಬಿಚ್ಚಿ ಹೇಳುವಾಗ ಮಾಡಲ್ಪಡುವ ದೀರ್ಘವಾದ ಖಾಸಗಿ ಪ್ರಾರ್ಥನೆಯಷ್ಟು ಭಿನ್ನ ವ್ಯಾಪ್ತಿಯದ್ದಾಗಿರಬಹುದು. (1 ಸಮುವೇಲ 1:12, 15) ಆದರೂ ಯೇಸು, ಇತರರ ಮುಂದೆ ಉದ್ದುದ್ದವಾದ, ಆಡಂಬರದ ಪ್ರಾರ್ಥನೆಗಳನ್ನು ಮಾಡುತ್ತಿದ್ದ ಸ್ವನೀತಿವಂತರನ್ನು ಖಂಡಿಸಿದನು. (ಲೂಕ 20:46, 47) ಅಂತಹ ಪ್ರಾರ್ಥನೆಗಳು ಯೆಹೋವನನ್ನು ಮೆಚ್ಚಿಸುವುದಿಲ್ಲ. ನಾವು ಹೃದಯದಾಳದಿಂದ ಏನು ಪ್ರಾರ್ಥಿಸುತ್ತೇವೆಂಬುದೇ ಪ್ರಾಮುಖ್ಯವಾಗಿದೆ. ಈ ಕಾರಣದಿಂದ, ಅಂಗೀಕಾರಾರ್ಹವಾದ ಪ್ರಾರ್ಥನೆಗಳ ಉದ್ದವು, ಆವಶ್ಯಕತೆಗಳ ಮತ್ತು ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿದ್ದು ಭಿನ್ನಭಿನ್ನವಾಗಿರಬಹುದು.

ನಿಮ್ಮ ಪ್ರಾರ್ಥನೆ ಯಾವ ಸಂದರ್ಭದಲ್ಲಿ ಮಾಡಲ್ಪಟ್ಟರೂ ಆಲಿಸಲ್ಪಡುವುದು

14. ‘ಸತತವಾಗಿ ಪ್ರಾರ್ಥಿಸಿರಿ’ ಎಂದು ಬೈಬಲು ಪ್ರೋತ್ಸಾಹಿಸುವುದು ಯಾವ ಅರ್ಥದಲ್ಲಿ, ಮತ್ತು ಇದರಲ್ಲಿ ಸಾಂತ್ವನದಾಯಕ ವಿಚಾರವೇನು?

14 ನಾವು ಎಷ್ಟು ಬಾರಿ ಪ್ರಾರ್ಥಿಸಬೇಕು? ‘ಸತತವಾಗಿ ಪ್ರಾರ್ಥಿಸಿರಿ,’ ‘ಪ್ರಾರ್ಥನೆಯಲ್ಲಿ ಪಟ್ಟುಹಿಡಿಯಿರಿ,’ ಮತ್ತು ‘ಎಡೆಬಿಡದೆ ಪ್ರಾರ್ಥಿಸಿರಿ’ ಎಂದು ಬೈಬಲು ನಮಗೆ ಪ್ರೋತ್ಸಾಹ ನೀಡುತ್ತದೆ. (ಮತ್ತಾಯ 26:41, NW; ರೋಮಾಪುರ 12:12, NW; 1 ಥೆಸಲೊನೀಕ 5:17) ಈ ಹೇಳಿಕೆಗಳ ಅರ್ಥವು ನಾವು ದಿನದ ಪ್ರತಿಯೊಂದು ಕ್ಷಣದಲ್ಲಿಯೂ ಪ್ರಾರ್ಥಿಸುತ್ತಿರಬೇಕು ಎಂದಾಗುವುದಿಲ್ಲ ನಿಜ. ಬದಲಿಗೆ, ನಾವು ಕ್ರಮವಾಗಿ ಪ್ರಾರ್ಥಿಸಬೇಕೆಂದು, ಯೆಹೋವನು ನಮಗೆ ತೋರಿಸಿರುವ ಒಳ್ಳೆಯತನಕ್ಕಾಗಿ ಆತನಿಗೆ ಎಡೆಬಿಡದೆ ಉಪಕಾರ ಸಲ್ಲಿಸಬೇಕೆಂದು ಮತ್ತು ಮಾರ್ಗದರ್ಶನ, ಸಾಂತ್ವನ ಹಾಗೂ ಬಲಕ್ಕಾಗಿ ಆತನ ಕಡೆಗೆ ನೋಡಬೇಕೆಂದು ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. ಯೆಹೋವನು ನಾವು ಎಷ್ಟು ಹೊತ್ತು ಪ್ರಾರ್ಥಿಸಬೇಕು ಇಲ್ಲವೆ ಎಷ್ಟು ಬಾರಿ ಪ್ರಾರ್ಥಿಸಬೇಕೆಂಬ ವಿಷಯದಲ್ಲಿ ಮಿತಿಯನ್ನು ಹಾಕಿರುವುದಿಲ್ಲ ಎಂದು ತಿಳಿಯುವುದು ಸಾಂತ್ವನದಾಯಕ ವಿಚಾರವಲ್ಲವೆ? ನಾವು ಪ್ರಾರ್ಥನೆಯನ್ನು ನಿಜವಾಗಿಯೂ ಮಾನ್ಯಮಾಡುವಲ್ಲಿ, ನಮ್ಮ ಸ್ವರ್ಗೀಯ ಪಿತನಿಗೆ ಪ್ರಾರ್ಥಿಸಲಿಕ್ಕಾಗಿ ನಾವು ಅನೇಕ ಸಂದರ್ಭಗಳನ್ನು ಹುಡುಕುವೆವು.

15. ವೈಯಕ್ತಿಕ ಮತ್ತು ಸಾರ್ವಜನಿಕ ಪ್ರಾರ್ಥನೆಗಳ ಅಂತ್ಯದಲ್ಲಿ ನಾವು “ಆಮೆನ್‌” ಎಂದು ಏಕೆ ಹೇಳಬೇಕು?

15 ಪ್ರಾರ್ಥನೆಯ ಅಂತ್ಯದಲ್ಲಿ ನಾವು “ಆಮೆನ್‌” ಎಂದು ಏಕೆ ಹೇಳಬೇಕು? “ಆಮೆನ್‌” ಎಂಬ ಪದದ ಅರ್ಥ “ನಿಶ್ಚಯವಾಗಿಯೂ” ಅಥವಾ “ಹಾಗೆಯೇ ಆಗಲಿ” ಎಂದಾಗಿದೆ. ವೈಯಕ್ತಿಕ ಮತ್ತು ಸಾರ್ವಜನಿಕ ಪ್ರಾರ್ಥನೆಯ ಅಂತ್ಯದಲ್ಲಿ “ಆಮೆನ್‌” ಎಂದು ಹೇಳುವುದು ಸೂಕ್ತವೆಂದು ಶಾಸ್ತ್ರಾಧಾರಿತ ಮಾದರಿಗಳು ತೋರಿಸುತ್ತವೆ. (1 ಪೂರ್ವಕಾಲವೃತ್ತಾಂತ 16:36; ಕೀರ್ತನೆ 41:13) ನಮ್ಮ ಸ್ವಂತ ಪ್ರಾರ್ಥನೆಯ ಮುಕ್ತಾಯದಲ್ಲಿ “ಆಮೆನ್‌” ಎಂದು ಹೇಳುವ ಮೂಲಕ ನಮ್ಮ ಪ್ರಾರ್ಥನೆ ಯಥಾರ್ಥಭಾವದಿಂದ ಮಾಡಲ್ಪಟ್ಟಿದೆ ಎಂಬುದನ್ನು ನಾವು ಸ್ಥಿರೀಕರಿಸುತ್ತೇವೆ. ಇನ್ನೊಬ್ಬರು ಮಾಡುವ ಸಾರ್ವಜನಿಕ ಪ್ರಾರ್ಥನೆಯ ಅಂತ್ಯದಲ್ಲಿ ನಾವು “ಆಮೆನ್‌” ಎಂದು ಮೌನವಾಗಿ ಇಲ್ಲವೆ ಗಟ್ಟಿಯಾಗಿ ಹೇಳುವಾಗ, ನಾವು ಆ ಪ್ರಾರ್ಥನೆಯಲ್ಲಿ ವ್ಯಕ್ತಪಡಿಸಲ್ಪಟ್ಟ ವಿಚಾರಗಳೊಂದಿಗೆ ಸಹಮತದಲ್ಲಿದ್ದೇವೆಂದು ಸೂಚಿಸುತ್ತೇವೆ.—1 ಕೊರಿಂಥ 14:16.

ದೇವರು ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುವ ವಿಧ

16. ಪ್ರಾರ್ಥನೆಯ ಬಗ್ಗೆ ನಮಗೆ ಯಾವ ಭರವಸೆಯಿರಸಾಧ್ಯವಿದೆ?

16 ಯೆಹೋವನು ಪ್ರಾರ್ಥನೆಗಳಿಗೆ ನಿಜವಾಗಿಯೂ ಉತ್ತರ ಕೊಡುತ್ತಾನೊ? ಹೌದು, ನಿಶ್ಚಯವಾಗಿ! “ಪ್ರಾರ್ಥನೆಯನ್ನು ಕೇಳುವವನು” ಲಕ್ಷಗಟ್ಟಲೆ ಮಾನವರು ಮಾಡುವ ಯಥಾರ್ಥವಾದ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂದು ಭರವಸೆಯಿಂದಿರಲು ಸ್ಥಿರವಾದ ಆಧಾರ ನಮಗಿದೆ. (ಕೀರ್ತನೆ 65:2) ನಮ್ಮ ಪ್ರಾರ್ಥನೆಗಳಿಗೆ ಯೆಹೋವನ ಉತ್ತರವು ವಿವಿಧ ವಿಧಗಳಲ್ಲಿ ಬರಬಹುದು.

17. ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡಲು ದೇವರು ತನ್ನ ದೂತರನ್ನೂ ಭೂಸೇವಕರನ್ನೂ ಉಪಯೋಗಿಸುತ್ತಾನೆಂದು ಏಕೆ ಹೇಳಸಾಧ್ಯವಿದೆ?

17 ಯೆಹೋವನು ಪ್ರಾರ್ಥನೆಗಳಿಗೆ ಉತ್ತರ ಕೊಡಲು ತನ್ನ ದೂತರನ್ನು ಮತ್ತು ಭೂಸೇವಕರನ್ನು ಉಪಯೋಗಿಸುತ್ತಾನೆ. (ಇಬ್ರಿಯ 1:13, 14) ಒಬ್ಬ ವ್ಯಕ್ತಿಯು ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಕ್ಕಾಗಿ ದೇವರ ಬಳಿ ಪ್ರಾರ್ಥಿಸಿದ ಸ್ವಲ್ಪ ಸಮಯದಲ್ಲೇ ಯೆಹೋವನ ಸೇವಕರಲ್ಲೊಬ್ಬರು ಅವನನ್ನು ಸಂಪರ್ಕಿಸಿರುವುದರ ಕುರಿತಾದ ಅನೇಕ ಅನುಭವಗಳು ಇವೆ. ಇಂತಹ ಅನುಭವಗಳು ರಾಜ್ಯದ ಸಾರುವ ಕೆಲಸದಲ್ಲಿ ದೇವದೂತರ ಮಾರ್ಗದರ್ಶನವಿದೆ ಎಂಬುದಕ್ಕೆ ಪ್ರಮಾಣವನ್ನು ಒದಗಿಸುತ್ತವೆ. (ಪ್ರಕಟನೆ 14:6) ನಿಜವಾದ ಕಷ್ಟಕಾಲದಲ್ಲಿ ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ ಕ್ರೈಸ್ತರೊಬ್ಬರು ನಮ್ಮ ಸಹಾಯಕ್ಕೆ ಬರುವಂತೆ ಯೆಹೋವನು ಪ್ರಚೋದಿಸಬಹುದು.—ಜ್ಞಾನೋಕ್ತಿ 12:25; ಯಾಕೋಬ 2:16.

ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿ, ಕ್ರೈಸ್ತರೊಬ್ಬರು ನಮ್ಮ ಸಹಾಯಕ್ಕೆ ಬರುವಂತೆ ಯೆಹೋವನು ಪ್ರಚೋದಿಸಬಲ್ಲನು

18. ಯೆಹೋವನು ತನ್ನ ಸೇವಕರ ಪ್ರಾರ್ಥನೆಗಳಿಗೆ ಉತ್ತರ ಕೊಡಲು ತನ್ನ ಪವಿತ್ರಾತ್ಮವನ್ನು ಮತ್ತು ತನ್ನ ವಾಕ್ಯವನ್ನು ಹೇಗೆ ಉಪಯೋಗಿಸುತ್ತಾನೆ?

18 ಯೆಹೋವ ದೇವರು ತನ್ನ ಸೇವಕರ ಪ್ರಾರ್ಥನೆಗಳಿಗೆ ಉತ್ತರ ಕೊಡಲು ತನ್ನ ಪವಿತ್ರಾತ್ಮವನ್ನು ಮತ್ತು ತನ್ನ ವಾಕ್ಯವಾದ ಬೈಬಲನ್ನು ಸಹ ಉಪಯೋಗಿಸುತ್ತಾನೆ. ಪರೀಕ್ಷೆಗಳನ್ನು ಎದುರಿಸಲು ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳಿಗೆ ತನ್ನ ಪವಿತ್ರಾತ್ಮದ ಮೂಲಕ ಮಾರ್ಗದರ್ಶನ ಮತ್ತು ಬಲವನ್ನು ನೀಡಿ ಆತನು ಉತ್ತರ ಕೊಡಬಹುದು. (2 ಕೊರಿಂಥ 4:7) ಅನೇಕವೇಳೆ ಮಾರ್ಗದರ್ಶನಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳಿಗೆ ಉತ್ತರವು ಬೈಬಲಿನಿಂದ ಬರುತ್ತದೆ. ಅದರ ಮೂಲಕ ಯೆಹೋವನು ನಮಗೆ ವಿವೇಕಪೂರ್ಣ ನಿರ್ಣಯಗಳನ್ನು ಮಾಡಲು ಸಹಾಯವನ್ನು ಕೊಡುತ್ತಾನೆ. ನಮ್ಮ ಸ್ವಂತ ಬೈಬಲ್‌ ಅಧ್ಯಯನದ ಸಮಯದಲ್ಲಿ ಮತ್ತು ನಾವು ಈ ಪುಸ್ತಕದಂತಹ ಕ್ರೈಸ್ತ ಪ್ರಕಾಶನಗಳನ್ನು ಓದುವಾಗ ಸಹಾಯಕರವಾದ ಶಾಸ್ತ್ರವಚನಗಳು ನಮಗೆ ದೊರಕಬಹುದು. ನಾವು ಪರಿಗಣಿಸಬೇಕಾಗಿರುವ ಶಾಸ್ತ್ರೀಯ ಅಂಶಗಳು ಕ್ರೈಸ್ತ ಕೂಟಗಳಲ್ಲೊಂದರಲ್ಲಿ ಏನು ಹೇಳಲ್ಪಡುತ್ತದೊ ಅದರ ಮೂಲಕ ಅಥವಾ ಸಭೆಯಲ್ಲಿ ನಮ್ಮ ಕಾಳಜಿವಹಿಸುವ ಹಿರಿಯರೊಬ್ಬರ ಮಾತುಗಳ ಮೂಲಕ ನಮ್ಮ ಗಮನಕ್ಕೆ ತರಲ್ಪಡಬಹುದು.—ಗಲಾತ್ಯ 6:1.

19. ನಮ್ಮ ಪ್ರಾರ್ಥನೆಗೆ ಕೆಲವು ಸಲ ಉತ್ತರವು ಸಿಗುತ್ತಿಲ್ಲ ಎಂಬಂತೆ ತೋರುವಲ್ಲಿ ನಾವು ಏನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

19 ನಮ್ಮ ಪ್ರಾರ್ಥನೆಗಳನ್ನು ಉತ್ತರಿಸಲು ಯೆಹೋವನು ವಿಳಂಬಿಸುತ್ತಿದ್ದಾನೆ ಎಂಬಂತೆ ತೋರುವಲ್ಲಿ, ಆತನು ಉತ್ತರ ಕೊಡಲು ಶಕ್ತನಲ್ಲ ಎಂಬ ಕಾರಣದಿಂದ ಎಂದಿಗೂ ಹಾಗಾಗುವುದಿಲ್ಲ. ಬದಲಿಗೆ ಯೆಹೋವನು ತನ್ನ ಚಿತ್ತಾನುಸಾರ ಮತ್ತು ತನ್ನ ಕ್ಲುಪ್ತಕಾಲದಲ್ಲಿ ನಮ್ಮ ಪ್ರಾರ್ಥನೆಗಳಿಗೆ ಉತ್ತರ ಕೊಡುತ್ತಾನೆಂಬುದನ್ನು ನಾವು ನೆನಪಿಡತಕ್ಕದ್ದು. ನಮ್ಮ ಅಗತ್ಯಗಳೇನು ಮತ್ತು ಅವನ್ನು ಹೇಗೆ ಪೂರೈಸಬೇಕು ಎಂಬುದನ್ನು ನಮಗಿಂತಲೂ ಎಷ್ಟೋ ಉತ್ತಮವಾಗಿ ಆತನು ಬಲ್ಲನು. ಆತನು ಅನೇಕವೇಳೆ, ನಾವು ‘ಬೇಡುತ್ತ, ಹುಡುಕುತ್ತ, ತಟ್ಟುತ್ತ’ ಇರುವಂತೆ ಅವಕಾಶವನ್ನು ಕೊಡುತ್ತಾನೆ. (ಲೂಕ 11:5-10) ನಾವು ಹೀಗೆ ಪಟ್ಟುಹಿಡಿಯುವುದು, ನಮ್ಮಗಿರುವ ಬಯಕೆಯು ಗಾಢವಾದುದೆಂಬುದನ್ನೂ ನಮ್ಮ ನಂಬಿಕೆಯು ನೈಜವಾದುದೆಂಬುದನ್ನೂ ದೇವರಿಗೆ ತೋರಿಸುತ್ತದೆ. ಇದಲ್ಲದೆ, ಯೆಹೋವನು ನಮ್ಮ ಪ್ರಾರ್ಥನೆಗೆ ಉತ್ತರವನ್ನು ನಮಗೆ ವ್ಯಕ್ತವಾಗದ ರೀತಿಯಲ್ಲಿ ಕೊಡಬಹುದು. ಉದಾಹರಣೆಗೆ, ನಿರ್ದಿಷ್ಟ ಪರೀಕ್ಷೆಯ ಕುರಿತು ನಾವು ಮಾಡಿರುವ ಪ್ರಾರ್ಥನೆಗೆ ಆತನು ಉತ್ತರವನ್ನು, ಆ ತಾಪತ್ರಯವನ್ನು ತೊಲಗಿಸುವ ಮೂಲಕವಲ್ಲ ಬದಲಾಗಿ ನಮಗೆ ಅದನ್ನು ತಾಳಿಕೊಳ್ಳಲು ಶಕ್ತಿಯನ್ನು ನೀಡುವ ಮೂಲಕ ಕೊಡಬಹುದು.—ಫಿಲಿಪ್ಪಿ 4:13.

20. ಪ್ರಾರ್ಥನೆಯೆಂಬ ಅಮೂಲ್ಯವಾದ ಸದವಕಾಶದ ಪೂರ್ಣ ಪ್ರಯೋಜನವನ್ನು ನಾವೇಕೆ ಪಡೆದುಕೊಳ್ಳಬೇಕು?

20 ಈ ವಿಶಾಲವಾದ ವಿಶ್ವದ ಸೃಷ್ಟಿಕರ್ತನು, ಪ್ರಾರ್ಥನೆಯ ಮುಖಾಂತರ ತನಗೆ ಸರಿಯಾದ ರೀತಿಯಲ್ಲಿ ಮೊರೆಯಿಡುವ ಸಕಲರಿಗೆ ಹತ್ತಿರದಲ್ಲಿದ್ದಾನೆಂಬುದಕ್ಕೆ ನಾವೆಷ್ಟು ಕೃತಜ್ಞರಾಗಿರಬಲ್ಲೆವು! (ಕೀರ್ತನೆ 145:18) ನಮಗಿರುವ ಪ್ರಾರ್ಥನೆಯೆಂಬ ಈ ಸದವಕಾಶದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳೋಣ. ನಾವು ಹಾಗೆ ಮಾಡುವಲ್ಲಿ, ಪ್ರಾರ್ಥನೆಯನ್ನು ಕೇಳುವವನಾದ ಯೆಹೋವನಿಗೆ ಸದಾ ಹೆಚ್ಚೆಚ್ಚು ಸಮೀಪವಾಗುತ್ತಾ ಇರುವ ಹರ್ಷಕರ ಪ್ರತೀಕ್ಷೆ ನಮ್ಮದಾಗಿರುವುದು.