ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ದಾನಿಯೇಲನ ಪ್ರವಾದನೆಯು ಮೆಸ್ಸೀಯನ ಆಗಮನವನ್ನು ಮುಂತಿಳಿಸುವ ವಿಧ

ದಾನಿಯೇಲನ ಪ್ರವಾದನೆಯು ಮೆಸ್ಸೀಯನ ಆಗಮನವನ್ನು ಮುಂತಿಳಿಸುವ ವಿಧ

ಪ್ರವಾದಿಯಾದ ದಾನಿಯೇಲನು ಯೇಸುವಿನ ಜನನಕ್ಕಿಂತ 500ಕ್ಕೂ ಹೆಚ್ಚು ವರ್ಷಗಳ ಮುಂಚೆ ಜೀವಿಸಿದನು. ಆದರೂ, ಯೇಸು ಮೆಸ್ಸೀಯನಾಗಿ ಅಥವಾ ಕ್ರಿಸ್ತನಾಗಿ ಅಭಿಷಿಕ್ತನಾಗುವ ಇಲ್ಲವೆ ನೇಮಕಹೊಂದುವ ಸಮಯವನ್ನು ನಿಷ್ಕೃಷ್ಟವಾಗಿ ತಿಳಿಯಲು ಸಾಧ್ಯವಾಗುವಂಥ ಮಾಹಿತಿಯನ್ನು ಯೆಹೋವನು ದಾನಿಯೇಲನಿಗೆ ತಿಳಿಯಪಡಿಸಿದನು. ದಾನಿಯೇಲನಿಗೆ ಹೀಗೆ ಹೇಳಲಾಯಿತು: “ಇದನ್ನು ತಿಳಿದು ಮಂದಟ್ಟುಮಾಡಿಕೋ; ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ ಏಳು ವಾರಗಳು ಕಳೆಯಬೇಕು [“ಏಳು ವಾರಗಳೂ ಅರುವತ್ತರೆಡು ವಾರಗಳೂ ಕಳೆಯಬೇಕು,” BSI Reference Edition ಪಾದಟಿಪ್ಪಣಿ]!”—ದಾನಿಯೇಲ 9:25.

ಮೆಸ್ಸೀಯನ ಆಗಮನದ ಸಮಯವನ್ನು ನಿರ್ಧರಿಸಲು, ನಾವು ಮೊದಲಾಗಿ ಮೆಸ್ಸೀಯನ ಬಳಿ ನಡೆಸುವ ಸಮಯಾವಧಿಯ ಪ್ರಾರಂಭ ಬಿಂದುವನ್ನು ತಿಳಿದುಕೊಳ್ಳುವುದು ಅವಶ್ಯಕ. ಪ್ರವಾದನೆಗನುಸಾರ ಅದು “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ” ಆಗಿದೆ. ಹಾಗಾದರೆ ಈ ದೈವೋಕ್ತಿ ಅಥವಾ ಆಜ್ಞೆಯು ನೀಡಲ್ಪಟ್ಟದ್ದು ಯಾವಾಗ? ಬೈಬಲ್‌ ಲೇಖಕನಾದ ನೆಹೆಮೀಯನಿಗನುಸಾರ, ಯೆರೂಸಲೇಮಿನ ಸುತ್ತಲೂ ಗೋಡೆಗಳನ್ನು ಪುನಃ ಕಟ್ಟುವ ಆಜ್ಞೆಯು “ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರುಷ”ದಲ್ಲಿ ಹೊರಡಿಸಲ್ಪಟ್ಟಿತು. (ನೆಹೆಮೀಯ 2:1, 5-8) ಸಾ.ಶ.ಪೂ. 474ನೆಯ ವರುಷವು ಅರ್ತಷಸ್ತನ ಆಳ್ವಿಕೆಯ ಮೊದಲನೆಯ ಪೂರ್ಣ ವರುಷವಾಗಿತ್ತೆಂದು ಇತಿಹಾಸಕಾರರು ದೃಢೀಕರಿಸುತ್ತಾರೆ. ಆದುದರಿಂದ, ಅವನ ಆಳ್ವಿಕೆಯ 20ನೆಯ ವರುಷವು ಸಾ.ಶ.ಪೂ. 455 ಆಗಿತ್ತು. ಹೀಗೆ ಈಗ ನಮಗೆ ಮೆಸ್ಸೀಯನ ಕುರಿತಾದ ದಾನಿಯೇಲನ ಪ್ರವಾದನೆಯ ಪ್ರಾರಂಭ ಬಿಂದು ಸಾ.ಶ.ಪೂ. 455 ಆಗಿತ್ತೆಂದು ತಿಳಿದುಬರುತ್ತದೆ.

“ಅಭಿಷಿಕ್ತನಾದ ಪ್ರಭು”ವಿನ ಆಗಮನಕ್ಕೆ ನಡೆಸುವ ಸಮಯಾವಧಿ ಎಷ್ಟು ದೀರ್ಘವಾಗಿದೆಯೆಂದು ದಾನಿಯೇಲನು ಸೂಚಿಸುತ್ತಾನೆ. ಪ್ರವಾದನೆಯು ಅದನ್ನು ‘ಏಳು ವಾರಗಳು’ ಮತ್ತು ‘ಅರುವತ್ತೆರಡು ವಾರಗಳು,’ ಅಂದರೆ ಒಟ್ಟು 69 ವಾರಗಳು ಎಂದು ತಿಳಿಸುತ್ತದೆ. ಈ ಸಮಯಾವಧಿಯ ಉದ್ದವೆಷ್ಟು? ಇವು ಏಳು ದಿನಗಳ ವಾರಗಳಲ್ಲ ಬದಲಾಗಿ ವರುಷವಾರಗಳು ಎಂದು ಅನೇಕ ಬೈಬಲ್‌ ಭಾಷಾಂತರಗಳು ಅಭಿಪ್ರಯಿಸುತ್ತವೆ. ವರುಷವಾರಗಳು ಅಂದರೆ, ಪ್ರತಿಯೊಂದು ವಾರವು ಏಳು ವರುಷಗಳನ್ನು ಪ್ರತಿನಿಧಿಸುತ್ತದೆ. ಈ ವರುಷವಾರಗಳ ವಿಚಾರವು ಪುರಾತನಕಾಲದ ಯೆಹೂದ್ಯರಿಗೆ ಪರಿಚಿತವಾದ ವಿಷಯವಾಗಿತ್ತು. ಉದಾಹರಣೆಗೆ, ಅವರು ಪ್ರತಿ ಏಳನೆಯ ವರುಷದಲ್ಲಿ ಸಬ್ಬತ್‌ ವರುಷವನ್ನು ಆಚರಿಸುತ್ತಿದ್ದರು. (ವಿಮೋಚನಕಾಂಡ 23:10, 11) ಆದಕಾರಣ, ಈ ಪ್ರವಾದನಾತ್ಮಕ 69 ವಾರಗಳು, ಪ್ರತಿಯೊಂದು ವಾರದಲ್ಲಿ 7 ವರುಷಗಳಿರುವ 69 ವಾರಗಳಾಗಿವೆ, ಇಲ್ಲವೆ 483 ವರುಷಗಳಾಗುತ್ತವೆ.

ಈಗ ನಮಗೆ ಮಾಡಲಿಕ್ಕಿರುವುದು ಕೇವಲ ಎಣಿಕೆಯಾಗಿದೆ. ನಾವು ಸಾ.ಶ.ಪೂ. 455ರಿಂದ 483 ವರುಷಗಳನ್ನು ಲೆಕ್ಕಿಸುವಲ್ಲಿ ಅದು ನಮ್ಮನ್ನು ಸಾ.ಶ. 29ನೆಯ ವರುಷಕ್ಕೆ ಕೊಂಡೊಯ್ಯುತ್ತದೆ. ಯೇಸು ದೀಕ್ಷಾಸ್ನಾನ ಹೊಂದಿ ಮೆಸ್ಸೀಯನಾದ ವರುಷ ಸರಿಯಾಗಿ ಅದೇ ಆಗಿತ್ತು! * (ಲೂಕ 3:1, 2, 21, 22) ಇದು ಬೈಬಲ್‌ ಪ್ರವಾದನೆಯ ಗಮನಾರ್ಹವಾದ ನೆರವೇರಿಕೆಯಾಗಿಲ್ಲವೊ?

^ ಪ್ಯಾರ. 3 ಸಾ.ಶ.ಪೂ. 455ರಿಂದ ಸಾ.ಶ.ಪೂ. 1ರ ತನಕ 454 ವರುಷಗಳು. ಸಾ.ಶ.ಪೂ. 1ರಿಂದ ಸಾ.ಶ. 1ರ ತನಕ ಒಂದೇ ವರುಷ ಆಗುತ್ತದೆ (ಸೊನ್ನೆ ವರುಷ ಇರಲಿಲ್ಲ). ಮತ್ತು ಸಾ.ಶ. 1ರಿಂದ ಸಾ.ಶ. 29ರ ವರೆಗೆ 28 ವರುಷಗಳು. ಈ ಮೂರು ಸಂಖ್ಯೆಗಳನ್ನು ಕೂಡಿಸುವಲ್ಲಿ ನಮಗೆ ಒಟ್ಟು 483 ವರುಷಗಳು ದೊರೆಯುತ್ತವೆ. ಯೇಸು ಸಾ.ಶ. 33ರಲ್ಲಿ, 70ನೆಯ ವರುಷವಾರದಲ್ಲಿ ಮರಣದಲ್ಲಿ ‘ಛೇದಿಸಲ್ಪಟ್ಟನು.’ (ದಾನಿಯೇಲ 9:24, 26) ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ ಅಧ್ಯಾಯ 11ನ್ನು ಮತ್ತು ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಸಂಪುಟ 2ರ 899-901ನೇ ಪುಟಗಳನ್ನು ನೋಡಿ. ಇವೆರಡೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.