ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ತಂದೆ, ಮಗ ಮತ್ತು ಪವಿತ್ರಾತ್ಮದ ಕುರಿತಾದ ಸತ್ಯ

ತಂದೆ, ಮಗ ಮತ್ತು ಪವಿತ್ರಾತ್ಮದ ಕುರಿತಾದ ಸತ್ಯ

ತ್ರಯೈಕ್ಯ ಬೋಧನೆಯನ್ನು ನಂಬುವವರು, ದೇವರಲ್ಲಿ ತಂದೆ, ಮಗ ಮತ್ತು ಪವಿತ್ರಾತ್ಮ ಎಂಬ ಮೂವರು ವ್ಯಕ್ತಿಗಳು ಸೇರಿದ್ದಾರೆಂದು ಹೇಳುತ್ತಾರೆ. ಈ ವ್ಯಕ್ತಿಗಳಲ್ಲಿ ಪ್ರತಿಯೊಬ್ಬನು ಅವರಲ್ಲಿರುವ ಇತರರಿಗೆ ಸರಿಸಮಾನನೆಂದು ಹೇಳಲಾಗುತ್ತದೆ. ಪ್ರತಿಯೊಬ್ಬನು ಸರ್ವಶಕ್ತನು ಮತ್ತು ಆದಿಯಿಲ್ಲದವನು. ಹೀಗೆ ತ್ರಯೈಕ್ಯ ತತ್ತ್ವಕ್ಕನುಸಾರ, ತಂದೆಯು ದೇವರು, ಮಗನು ದೇವರು ಮತ್ತು ಪವಿತ್ರಾತ್ಮವೂ ದೇವರು, ಆದರೂ ಒಟ್ಟಿನಲ್ಲಿ ಇರುವವನು ಏಕಮಾತ್ರ ದೇವರು.

ತ್ರಯೈಕ್ಯವನ್ನು ನಂಬುವ ಅನೇಕರು, ಈ ಬೋಧನೆಯನ್ನು ವಿವರಿಸಲು ತಾವು ಅಶಕ್ತರೆಂದು ಒಪ್ಪಿಕೊಳ್ಳುತ್ತಾರೆ. ಆದರೂ, ಬೈಬಲ್‌ ಅದನ್ನು ಬೋಧಿಸುತ್ತದೆಂದು ಅವರು ನಂಬಬಹುದು. ಆದರೆ, “ತ್ರಯೈಕ್ಯ” ಎಂಬ ಪದವು ಬೈಬಲಿನಲ್ಲಿ ಎಲ್ಲಿಯೂ ಕಂಡುಬರುವುದಿಲ್ಲ ಎಂಬುದು ಗಮನಾರ್ಹ. ಹಾಗಾದರೆ ತ್ರಯೈಕ್ಯದ ವಿಚಾರವಾದರೂ ಬೈಬಲಿನಲ್ಲಿ ಕಂಡುಬರುತ್ತದೊ? ಈ ಪ್ರಶ್ನೆಗೆ ಉತ್ತರ ಕೊಡುವ ಕಾರಣದಿಂದ, ತ್ರಯೈಕ್ಯವನ್ನು ಸಮರ್ಥಿಸುವವರು ಅನೇಕವೇಳೆ ತೋರಿಸುವ ಒಂದು ಶಾಸ್ತ್ರವಚನವನ್ನು ನಾವು ಪರೀಕ್ಷಿಸೋಣ.

“ಆ ವಾಕ್ಯವು ದೇವರಾಗಿತ್ತು”

“ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು” ಎಂದು ಯೋಹಾನ 1:1 ಹೇಳುತ್ತದೆ. ತದನಂತರ ಅದೇ ಅಧ್ಯಾಯದಲ್ಲಿ ಅಪೊಸ್ತಲ ಯೋಹಾನನು, “ಆ ವಾಕ್ಯವು” ಯೇಸುವೆಂದು ಸ್ಪಷ್ಟವಾಗಿ ತೋರಿಸುತ್ತಾನೆ. (ಯೋಹಾನ 1:14) ಆದರೆ ವಾಕ್ಯವನ್ನು ದೇವರು ಎಂದು ಕರೆದಿರುವುದರಿಂದ, ಮಗನೂ ತಂದೆಯೂ ಒಂದೇ ದೇವರ ಭಾಗವಾಗಿರಲೇಬೇಕು ಎಂದು ಕೆಲವರು ತೀರ್ಮಾನಿಸುತ್ತಾರೆ.

ಬೈಬಲಿನ ಈ ಭಾಗವು ಮೂಲತಃ ಗ್ರೀಕ್‌ ಭಾಷೆಯಲ್ಲಿ ಬರೆಯಲ್ಪಟ್ಟಿತೆಂಬುದನ್ನು ಮನಸ್ಸಿನಲ್ಲಿಡಿರಿ. ತರುವಾಯ, ಭಾಷಾಂತರಕಾರರು ಈ ಗ್ರೀಕ್‌ ಮೂಲಗ್ರಂಥಪಾಠವನ್ನು ಇತರ ಭಾಷೆಗಳಿಗೆ ಅನುವಾದಿಸಿದರು. ಆದರೆ ಅನೇಕ ಮಂದಿ ಬೈಬಲ್‌ ಭಾಷಾಂತರಕಾರರು “ಆ ವಾಕ್ಯವು ದೇವರಾಗಿತ್ತು” ಎಂಬ ವಾಕ್ಸರಣಿಯನ್ನು ಉಪಯೋಗಿಸಲಿಲ್ಲ. ಅದೇಕೆ? ಏಕೆಂದರೆ ಬೈಬಲ್‌ ಕಾಲದ ಗ್ರೀಕ್‌ ಭಾಷೆಯ ಬಗ್ಗೆ ಅವರಿಗಿದ್ದ ಜ್ಞಾನಾನುಸಾರ, “ಆ ವಾಕ್ಯವು ದೇವರಾಗಿತ್ತು” ಎಂಬ ಆ ವಾಕ್ಸರಣಿಯನ್ನು ಬೇರೆ ವಿಧದಲ್ಲಿ ಭಾಷಾಂತರಿಸಬೇಕೆಂದು ಅವರು ತೀರ್ಮಾನಿಸಿದರು. ಹೇಗೆ? ಕೆಲವು ಉದಾಹರಣೆಗಳು ಈ ಕೆಳಗಿನಂತಿವೆ: “ಆ ಲೋಗೊಸ್‌ [ವಾಕ್ಯ] ದೇವರಂಥವನಾಗಿದ್ದನು.” (ಎ ನ್ಯೂ ಟ್ರಾನ್ಸ್‌ಲೇಶನ್‌ ಆಫ್‌ ದ ಬೈಬಲ್‌) “ಆ ವಾಕ್ಯ ಒಬ್ಬ ದೇವನಾಗಿದ್ದನು.” (ದ ನ್ಯೂ ಟೆಸ್ಟಮೆಂಟ್‌ ಇನ್‌ ಆ್ಯನ್‌ ಇಂಪ್ರೂವ್ಡ್‌ ವರ್ಷನ್‌) “ಆ ವಾಕ್ಯ ದೇವರೊಂದಿಗಿದ್ದು ಆತನದ್ದೇ ಸ್ವಭಾವವುಳ್ಳವನಾಗಿದ್ದನು.” (ದ ಟ್ರಾನ್ಸ್‌ಲೇಟರ್ಸ್‌ ನ್ಯೂ ಟೆಸ್ಟಮೆಂಟ್‌) ಈ ಭಾಷಾಂತರಗಳಿಗನುಸಾರ, ಆ ವಾಕ್ಯವು ಸ್ವತಃ ದೇವರಾಗಿರಲಿಲ್ಲ. * ಅದಕ್ಕೆ ಬದಲಾಗಿ, ಯೆಹೋವನ ಸೃಷ್ಟಿಜೀವಿಗಳ ಮಧ್ಯದಲ್ಲಿ ಅವನಿಗಿದ್ದ ಉನ್ನತ ಸ್ಥಾನದ ಕಾರಣ, ಆ ವಾಕ್ಯವನ್ನು “ಒಬ್ಬ ದೇವನು” ಎಂದು ಸೂಚಿಸಲಾಗಿದೆ. ಇಲ್ಲಿ ತಿಳಿಸಲ್ಪಟ್ಟಿರುವ “ದೇವನು” ಎಂಬ ಪದದ ಅರ್ಥ “ಶಕ್ತನಾದ ಒಬ್ಬನು” ಎಂದಾಗಿದೆ.

ಹೆಚ್ಚು ನಿಜತ್ವಗಳನ್ನು ಪಡೆದುಕೊಳ್ಳಿರಿ

ಅನೇಕ ಜನರಿಗೆ ಬೈಬಲ್‌ ಕಾಲದ ಗ್ರೀಕ್‌ ಭಾಷೆ ತಿಳಿದಿರುವುದಿಲ್ಲ. ಹಾಗಿರುವಾಗ ಅಪೊಸ್ತಲ ಯೋಹಾನನು ಈ ಮಾತುಗಳನ್ನು ಬರೆದಾಗ ಅವನ ಮನಸ್ಸಿನಲ್ಲೇನಿತ್ತು ಎಂಬುದು ನಮಗೆ ಹೇಗೆ ಗೊತ್ತು? ಈ ದೃಷ್ಟಾಂತದ ಕುರಿತು ಯೋಚಿಸಿರಿ: ಒಬ್ಬ ಉಪಾಧ್ಯಾಯನು ತನ್ನ ವಿದ್ಯಾರ್ಥಿಗಳಿಗೆ ಒಂದು ಪಾಠವನ್ನು ವಿವರಿಸುತ್ತಾನೆ. ಬಳಿಕ, ಆ ವಿವರಣೆಯನ್ನು ಅರ್ಥಮಾಡಿಕೊಳ್ಳುವುದರ ಬಗ್ಗೆ ವಿದ್ಯಾರ್ಥಿಗಳು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಆ ವಿದ್ಯಾರ್ಥಿಗಳು ಆ ಸಂಗತಿಯನ್ನು ಹೇಗೆ ಬಗೆಹರಿಸಬಲ್ಲರು? ಹೌದು, ಅವರು ಆ ಉಪಾಧ್ಯಾಯನಿಂದಲೇ ಹೆಚ್ಚಿನ ಮಾಹಿತಿಯನ್ನು ಕೇಳಬಹುದು. ಅಧಿಕ ನಿಜತ್ವಗಳ ಕಲಿಕೆಯು, ಅವರು ಆ ಪಾಠವನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಂತೆ ಸಹಾಯಮಾಡುವುದು ನಿಶ್ಚಯ. ತದ್ರೀತಿ, ಯೋಹಾನ 1:1 ರ ಅರ್ಥವನ್ನು ಗ್ರಹಿಸಲು, ಯೇಸುವಿನ ಸ್ಥಾನದ ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀವು ಯೋಹಾನನ ಸುವಾರ್ತೆಯಲ್ಲೇ ಹುಡುಕಬಲ್ಲಿರಿ. ಈ ವಿಷಯದ ಬಗ್ಗೆ ಹೆಚ್ಚಿನ ನಿಜತ್ವಗಳ ಕಲಿಕೆಯು ನೀವು ಸರಿಯಾದ ತೀರ್ಮಾನಕ್ಕೆ ಬರುವಂತೆ ನಿಮಗೆ ಸಹಾಯಮಾಡುವುದು.

ಉದಾಹರಣೆಗೆ, ಅಧ್ಯಾಯ 1 ವಚನ 18 ರಲ್ಲಿ ಯೋಹಾನನು ಇನ್ನೂ ಏನನ್ನು ಬರೆಯುತ್ತಾನೆಂದು ಪರಿಗಣಿಸಿರಿ: ಸರ್ವಶಕ್ತ “ದೇವರನ್ನು ಯಾರೂ ಎಂದೂ ಕಂಡಿಲ್ಲ.” ಆದರೆ, ಮಾನವರು ಮಗನಾದ ಯೇಸುವನ್ನು ನೋಡಿದ್ದಾರೆ, ಏಕೆಂದರೆ ಯೋಹಾನನು ಹೇಳುವುದು: “ಆ ವಾಕ್ಯ [ಯೇಸು]ವೆಂಬವನು ನರಾವತಾರ ಎತ್ತಿ [“ನರನಾಗಿ ಮಾಡಲ್ಪಟ್ಟು,” KJ] ನಮ್ಮ ಮಧ್ಯದಲ್ಲಿ ವಾಸಮಾಡಿದನು.” (ಯೋಹಾನ 1:14) ಹಾಗಿರುವಾಗ, ಮಗನು ಸರ್ವಶಕ್ತನಾದ ದೇವರ ಭಾಗವಾಗುವುದು ಹೇಗೆ ಸಾಧ್ಯ? ಆ ವಾಕ್ಯವೆಂಬಾತನು “ದೇವರ ಬಳಿ” ಇದ್ದನೆಂದೂ ಯೋಹಾನನು ಹೇಳುತ್ತಾನೆ. ಹಾಗಾದರೆ ಒಬ್ಬ ವ್ಯಕ್ತಿ ಇನ್ನೊಬ್ಬನ ಬಳಿ ಇರುವಾಗ ಅದೇ ಸಮಯದಲ್ಲಿ ಅವನು ಆ ಇನ್ನೊಬ್ಬನಾಗಿ ಇರುವುದು ಹೇಗೆ ಸಾಧ್ಯ? ಇದಲ್ಲದೆ, ಯೋಹಾನ 17:3 ರಲ್ಲಿ ಹೇಳಲ್ಪಟ್ಟಿರುವಂತೆ, ಯೇಸು ತನ್ನ ಮತ್ತು ತನ್ನ ಸ್ವರ್ಗೀಯ ಪಿತನ ಮಧ್ಯೆ ಸ್ಪಷ್ಟವಾದ ಪ್ರತ್ಯೇಕತೆಯನ್ನು ತೋರಿಸುತ್ತಾನೆ. ಅವನು ತನ್ನ ತಂದೆಯನ್ನು “ಒಬ್ಬನೇ ಸತ್ಯದೇವರು” ಎಂದು ಕರೆಯುತ್ತಾನೆ. ಮತ್ತು ತನ್ನ ಸುವಾರ್ತಾ ಪುಸ್ತಕದ ಅಂತ್ಯಭಾಗದಲ್ಲಿ, ಯೋಹಾನನು ಹೀಗೆ ಸಾರಾಂಶಿಸುತ್ತಾನೆ: “ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆ . . . ಇಷ್ಟೆಲ್ಲಾ ಬರೆದದೆ.” (ಯೋಹಾನ 20:31) ಗಮನಿಸಿರಿ: ಇಲ್ಲಿ ಯೇಸುವನ್ನು ದೇವರೆಂದಲ್ಲ, ದೇವಕುಮಾರನೆಂದು ಕರೆಯಲಾಗಿದೆ. ಯೋಹಾನನ ಸುವಾರ್ತೆಯು ಒದಗಿಸುವ ಈ ಹೆಚ್ಚಿನ ಮಾಹಿತಿಯು, ಯೋಹಾನ 1:1 ನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ತೋರಿಸುತ್ತದೆ. ವಾಕ್ಯವಾಗಿರುವ ಯೇಸು, ಅವನಿಗಿರುವ ಉನ್ನತ ಸ್ಥಾನದ ಅರ್ಥದಲ್ಲಿ “ಒಬ್ಬ ದೇವನು” ಆಗಿದ್ದಾನಾದರೂ ಅವನು ಸರ್ವಶಕ್ತನಾದ ದೇವರಾಗಿರುವುದಿಲ್ಲ.

ನಿಜತ್ವಗಳನ್ನು ದೃಢೀಕರಿಸಿರಿ

ಆ ಶಾಲಾ ಉಪಾಧ್ಯಾಯ ಮತ್ತು ವಿದ್ಯಾರ್ಥಿಗಳ ಕುರಿತು ಪುನಃ ಯೋಚಿಸಿರಿ. ಆ ಉಪಾಧ್ಯಾಯನು ಕೊಟ್ಟ ಹೆಚ್ಚಿನ ವಿವರಣೆಯನ್ನು ಕೇಳಿದ ಮೇಲೆಯೂ ಅವರಲ್ಲಿ ಸಂಶಯಗಳಿವೆಯೆಂದು ಭಾವಿಸಿ. ಈಗ ಅವರೇನು ಮಾಡಬಲ್ಲರು? ಅದೇ ವಿಷಯದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅವರು ಇನ್ನೊಬ್ಬ ಉಪಾಧ್ಯಾಯನ ಬಳಿ ಹೋಗಬಹುದು. ಆ ಎರಡನೆಯ ಉಪಾಧ್ಯಾಯನು ಮೊದಲನೆಯವನ ವಿವರಣೆಯನ್ನು ದೃಢೀಕರಿಸುವಲ್ಲಿ, ಅವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಸಂದೇಹಗಳು ನಿವಾರಿಸಲ್ಪಡಬಹುದು. ಅದೇ ರೀತಿ, ಬೈಬಲ್‌ ಲೇಖಕನಾದ ಯೋಹಾನನು ಯೇಸು ಮತ್ತು ಸರ್ವಶಕ್ತನಾದ ದೇವರ ಮಧ್ಯೆ ಇರುವ ಸಂಬಂಧದ ಕುರಿತು ನಿಜವಾಗಿಯೂ ಏನು ಹೇಳುತ್ತಿದ್ದಾನೆಂದು ನಿಮಗೆ ನಿಖರವಾಗಿ ಅರ್ಥವಾಗದಿರುವಲ್ಲಿ, ಹೆಚ್ಚಿನ ಮಾಹಿತಿಗಾಗಿ ನೀವು ಇನ್ನೊಬ್ಬ ಬೈಬಲ್‌ ಲೇಖಕನ ಬಳಿ ಹೋಗಬಹುದು. ದೃಷ್ಟಾಂತಕ್ಕೆ, ಮತ್ತಾಯನು ಏನು ಬರೆದನೊ ಅದನ್ನು ಪರಿಗಣಿಸಿರಿ. ಈ ವ್ಯವಸ್ಥೆಯ ಅಂತ್ಯದ ಕುರಿತು ಯೇಸು ಹೀಗೆ ಹೇಳಿರುವುದನ್ನು ಅವನು ಉಲ್ಲೇಖಿಸುತ್ತಾನೆ: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:36) ಯೇಸು ಸರ್ವಶಕ್ತನಾದ ದೇವರಲ್ಲವೆಂಬುದನ್ನು ಈ ಮಾತುಗಳು ಹೇಗೆ ದೃಢೀಕರಿಸುತ್ತವೆ?

ತಂದೆಗೆ ಮಗನಿಗಿಂತ ಹೆಚ್ಚು ತಿಳಿದದೆಯೆಂದು ಯೇಸು ಇಲ್ಲಿ ಹೇಳುತ್ತಾನೆ. ಆದರೆ ಯೇಸು ಸರ್ವಶಕ್ತ ದೇವರ ಒಂದು ಭಾಗವಾಗಿರುವಲ್ಲಿ, ತಂದೆಗೆ ಗೊತ್ತಿರುವಷ್ಟೇ ನಿಜತ್ವಗಳು ಮಗನಿಗೂ ತಿಳಿದಿರುತ್ತಿದ್ದವು. ಈ ಕಾರಣದಿಂದ, ಮಗನೂ ತಂದೆಯೂ ಸರಿಸಮಾನರಾಗಿರುವುದು ಅಸಾಧ್ಯ. ಆದರೂ, ಕೆಲವರು ಹೀಗನ್ನುತ್ತಾರೆ: ‘ಯೇಸುವಿಗೆ ಎರಡು ಪ್ರಕೃತಿಗಳಿದ್ದವು. ಇಲ್ಲಿ ಅವನು ಮನುಷ್ಯನಾಗಿ ಮಾತಾಡುತ್ತಾನೆ.’ ಆದರೆ ಒಂದುವೇಳೆ ಇದು ಸರಿಯಾಗಿದ್ದರೂ, ಪವಿತ್ರಾತ್ಮದ ಕುರಿತೇನು? ಅದೂ ತಂದೆಯ ಹಾಗೆ ಆ ದೇವರ ಭಾಗವಾಗಿದ್ದರೆ, ತಂದೆಗೆ ತಿಳಿದಿರುವುದು ಅದಕ್ಕೂ ತಿಳಿದದೆಯೆಂದು ಯೇಸು ಏಕೆ ಹೇಳುವುದಿಲ್ಲ?

ನೀವು ನಿಮ್ಮ ಬೈಬಲ್‌ ಅಧ್ಯಯನಗಳನ್ನು ಮುಂದುವರಿಸುವಾಗ, ಈ ವಿಷಯಕ್ಕೆ ಸಂಬಂಧಿಸಿರುವ ಇನ್ನೂ ಅನೇಕ ಬೈಬಲ್‌ ಭಾಗಗಳ ಪರಿಚಯ ನಿಮಗಾಗುವುದು. ಅವು ತಂದೆ, ಮಗ ಮತ್ತು ಪವಿತ್ರಾತ್ಮದ ಕುರಿತಾದ ಸತ್ಯವನ್ನು ದೃಢೀಕರಿಸುತ್ತವೆ.—ಕೀರ್ತನೆ 90:2; ಅ. ಕೃತ್ಯಗಳು 7:55; ಕೊಲೊಸ್ಸೆ 1:15.

^ ಪ್ಯಾರ. 4 ಯೋಹಾನ 1:1 ರ ಕುರಿತು ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ ಪರಿಶಿಷ್ಟ 3ನ್ನು ನೋಡಿ.