ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ಸತ್ಯಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಏಕೆ ಉಪಯೋಗಿಸುವುದಿಲ್ಲ?

ಸತ್ಯಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಏಕೆ ಉಪಯೋಗಿಸುವುದಿಲ್ಲ?

ಕೋಟ್ಯಂತರ ಸಂಖ್ಯೆಯಲ್ಲಿ ಜನರು ಶಿಲುಬೆಯನ್ನು ಪ್ರೀತಿಸಿ ಸನ್ಮಾನಿಸುತ್ತಾರೆ. ದಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕವು ಶಿಲುಬೆಯನ್ನು “ಕ್ರೈಸ್ತಧರ್ಮದ ಪ್ರಧಾನ ಪ್ರತೀಕ” ಎಂದು ಕರೆಯುತ್ತದೆ. ಆದರೂ ಸತ್ಯ ಕ್ರೈಸ್ತರು ಆರಾಧನೆಯಲ್ಲಿ ಶಿಲುಬೆಯನ್ನು ಉಪಯೋಗಿಸುವುದಿಲ್ಲ. ಇದೇಕೆ?

ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಸಾಯಲಿಲ್ಲ ಎಂಬುದು ಇದಕ್ಕಿರುವ ಒಂದು ಪ್ರಮುಖ ಕಾರಣವಾಗಿದೆ. ಸಾಮಾನ್ಯವಾಗಿ “ಶಿಲುಬೆ” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದವು ಸ್ಟಾವ್ರಾಸ್‌ ಆಗಿದ್ದು, ಅದರ ಮೂಲ ಅರ್ಥ “ನೆಟ್ಟನೆಯ ಒಂದು ದಸಿ ಅಥವಾ ಕಂಬ” ಎಂದಾಗಿದೆ. ದ ಕಂಪ್ಯಾನ್ಯನ್‌ ಬೈಬಲ್‌ ಹೇಳುವುದು: “[ಸ್ಟಾವ್ರಾಸ್‌] ಎಂಬುದರ ಅರ್ಥವು ಎಂದಿಗೂ, ಮರದ ಎರಡು ತುಂಡುಗಳು ಯಾವುದೇ ಕೋನದಲ್ಲಿ ಒಂದರ ಮೇಲೊಂದು ಇಟ್ಟವುಗಳು ಎಂದಾಗಿರುವುದಿಲ್ಲ . . . [ಹೊಸ ಒಡಂಬಡಿಕೆಯ] ಗ್ರೀಕ್‌ ಭಾಷೆಯಲ್ಲಿ, ಎರಡು ಮರದ ತುಂಡುಗಳಿದ್ದವು ಎಂಬುದನ್ನು ಸೂಚಿಸುವಂಥ ಯಾವುದೇ ವಿಷಯವು ದಾಖಲಿಸಲ್ಪಟ್ಟಿಲ್ಲ.”

ಅನೇಕ ವಚನಗಳಲ್ಲಿ ಬೈಬಲ್‌ ಲೇಖಕರು ಯೇಸು ಯಾವುದರ ಮೇಲೆ ಸತ್ತನೊ ಆ ಸಾಧನಕ್ಕೆ ಇನ್ನೊಂದು ಪದವನ್ನು ಉಪಯೋಗಿಸುತ್ತಾರೆ. ಅದು ಕ್ಸೈಲಾನ್‌ ಎಂಬ ಗ್ರೀಕ್‌ ಪದವಾಗಿದೆ. (ಅ. ಕೃತ್ಯಗಳು 5:30; 10:40; 13:29; ಗಲಾತ್ಯ 3:14; 1 ಪೇತ್ರ 2:24) ಈ ಪದದ ಅರ್ಥ ಕೇವಲ “ದಿಮ್ಮಿ” ಇಲ್ಲವೆ “ಕೋಲು, ದೊಣ್ಣೆ ಅಥವಾ ಮರ” ಆಗಿದೆ.

ಮರಣದಂಡನೆಗಾಗಿ ಇಂತಹ ಸಾಮಾನ್ಯ ಕಂಬವನ್ನು ಏಕೆ ಅನೇಕಬಾರಿ ಉಪಯೋಗಿಸಲಾಗುತ್ತಿತ್ತು ಎಂಬುದನ್ನು ವಿವರಿಸುತ್ತ ಹರ್ಮಾನ್‌ ಫುಲ್ಡ ಎಂಬವರು ಬರೆದ ಡಾಸ್‌ ಕ್ರಾಯಿಟ್ಸ್‌ ಉಂಟ್‌ ಕ್ರಾಯಿಟ್ಸೀಗುಂಗ್‌ (ಶಿಲುಬೆ ಮತ್ತು ಕ್ರೂಶಾರೋಹಣ) ಎಂಬ ಪುಸ್ತಕವು ಹೇಳುವುದು: “ಬಹಿರಂಗ ಮರಣದಂಡನೆಗಾಗಿ ಆರಿಸಲ್ಪಟ್ಟ ಪ್ರತಿಯೊಂದು ಸ್ಥಳಗಳಲ್ಲಿ ಮರಗಳು ಲಭ್ಯವಿರುತ್ತಿರಲಿಲ್ಲ. ಆದಕಾರಣ ಒಂದು ಸಾಮಾನ್ಯ ಕಂಬವನ್ನು ನೆಲದೊಳಕ್ಕೆ ಇಳಿಸಲಾಗುತ್ತಿತ್ತು. ಅದರ ಮೇಲೆ ದುಷ್ಕರ್ಮಿಗಳನ್ನು, ಅವರ ಕೈಗಳನ್ನು ಮೇಲಕ್ಕೆತ್ತಿ ಬಿಗಿಯಲಾಗುತ್ತಿತ್ತು ಇಲ್ಲವೆ ಮೊಳೆಯಿಂದ ಜಡಿಯಲಾಗುತ್ತಿತ್ತು. ಅನೇಕವೇಳೆ ಅವರ ಕಾಲುಗಳಿಗೂ ಹಾಗೆಯೇ ಮಾಡಲಾಗುತ್ತಿತ್ತು.”

ಆದರೆ ಎಲ್ಲದಕ್ಕಿಂತ ಹೆಚ್ಚು ಮನದಟ್ಟುಮಾಡಿಸುವ ರುಜುವಾತು ದೇವರ ವಾಕ್ಯದಿಂದಲೇ ಬರುತ್ತದೆ. ಅಪೊಸ್ತಲ ಪೌಲನು ಹೇಳುವುದು: “ಕ್ರಿಸ್ತನು ನಮ್ಮ ನಿಮಿತ್ತ ಶಾಪವಾಗಿ ಧರ್ಮಶಾಸ್ತ್ರದಲ್ಲಿ ಹೇಳಿರುವ ಶಾಪದೊಳಗಿಂದ ನಮ್ಮನ್ನು ಬಿಡಿಸಿದನು. ಮರಕ್ಕೆ ತೂಗಹಾಕಲ್ಪಟ್ಟ ಪ್ರತಿಯೊಬ್ಬನು ಶಾಪಗ್ರಸ್ತನು ಎಂದು ಶಾಸ್ತ್ರದಲ್ಲಿ ಬರೆದದೆಯಲ್ಲಾ.” (ಗಲಾತ್ಯ 3:14) ಇಲ್ಲಿ ಪೌಲನು ಧರ್ಮೋಪದೇಶಕಾಂಡ 21:22, 23 ನ್ನು ಉಲ್ಲೇಖಿಸುತ್ತಾನೆ. ಅದು ಶಿಲುಬೆಯನ್ನಲ್ಲ, ಬದಲಾಗಿ ಸ್ಪಷ್ಟವಾಗಿ ಒಂದು ಕಂಬವನ್ನು ಸೂಚಿಸುತ್ತದೆ. ಮರಣದಂಡನೆಯ ಈ ಸಾಧನವು ಒಬ್ಬ ವ್ಯಕ್ತಿಯನ್ನು “ಶಾಪಗ್ರಸ್ತನು” ಆಗಿ ಮಾಡುವುದರಿಂದ, ಕ್ರೈಸ್ತರು ತಮ್ಮ ಮನೆಗಳನ್ನು ಜಡಿಯಲ್ಪಟ್ಟ ಕ್ರಿಸ್ತನ ಮೂರ್ತಿಗಳಿಂದ ಅಲಂಕರಿಸುವುದು ಯೋಗ್ಯವಲ್ಲ.

ಕ್ರಿಸ್ತನು ಮರಣಪಟ್ಟ ಬಳಿಕದ ಪ್ರಥಮ 300 ವರುಷಗಳಲ್ಲಿ, ಕ್ರೈಸ್ತರೆಂದು ಹೇಳಿಕೊಂಡವರು ಆರಾಧನೆಯಲ್ಲಿ ಶಿಲುಬೆಯನ್ನು ಉಪಯೋಗಿಸಿದರೆಂಬುದಕ್ಕೆ ಪುರಾವೆಯೇ ಇಲ್ಲ. ಆದರೆ ನಾಲ್ಕನೆಯ ಶತಮಾನದಲ್ಲಿ, ವಿಧರ್ಮಿ ಚಕ್ರವರ್ತಿ ಕಾನ್‌ಸ್ಟೆಂಟೀನನು ಧರ್ಮಭ್ರಷ್ಟವಾಗಿದ್ದ ಕ್ರೈಸ್ತಮತಕ್ಕೆ ಮತಾಂತರಗೊಂಡು ಶಿಲುಬೆಯನ್ನು ಕ್ರೈಸ್ತಮತದ ಪ್ರತೀಕವಾಗಿ ಪ್ರವರ್ಧಿಸಿದನು. ಕಾನ್‌ಸ್ಟೆಂಟೀನನ ಹೇತು ಏನೇ ಆಗಿದ್ದಿರಲಿ, ಶಿಲುಬೆಗೂ ಯೇಸು ಕ್ರಿಸ್ತನಿಗೂ ಯಾವುದೇ ಸಂಬಂಧವಿರಲಿಲ್ಲ. ವಾಸ್ತವವೇನಂದರೆ, ಈ ಶಿಲುಬೆ ವಿಧರ್ಮಿ ಮೂಲದ್ದು. ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಒಪ್ಪಿಕೊಳ್ಳುವುದು: “ಶಿಲುಬೆಯು ಕ್ರೈಸ್ತಪೂರ್ವದ ಮತ್ತು ಕ್ರೈಸ್ತ್ಯೇತರ ಸಂಸ್ಕೃತಿಗಳಲ್ಲಿ ಕಂಡುಬರುತ್ತದೆ.” ಇನ್ನಿತರ ಅನೇಕ ವಿದ್ವಾಂಸರು ಈ ಶಿಲುಬೆಯನ್ನು ನಿಸರ್ಗಾರಾಧನೆ ಮತ್ತು ವಿಧರ್ಮಿಗಳ ಲೈಂಗಿಕ ಸಂಸ್ಕಾರಗಳಿಗೆ ಜೋಡಿಸುತ್ತಾರೆ.

ಹಾಗಾದರೆ, ಈ ವಿಧರ್ಮಿ ಪ್ರತೀಕವನ್ನು ಏಕೆ ಪ್ರವರ್ಧಿಸಲಾಯಿತು? ವಿಧರ್ಮಿಗಳು “ಕ್ರೈಸ್ತಮತ”ವನ್ನು ಅಂಗೀಕರಿಸುವುದನ್ನು ಹೆಚ್ಚು ಸುಲಭವಾಗಿ ಮಾಡಲಿಕ್ಕಾಗಿಯೇ ಎಂಬುದು ವ್ಯಕ್ತ. ಆದರೆ, ಯಾವುದೇ ವಿಧರ್ಮಿ ಪ್ರತೀಕಕ್ಕೆ ಭಕ್ತಿ ಸಲ್ಲಿಸುವುದನ್ನು ಬೈಬಲು ಸ್ಪಷ್ಟವಾಗಿ ಖಂಡಿಸುತ್ತದೆ. (2 ಕೊರಿಂಥ 6:14-18) ಶಾಸ್ತ್ರವಚನಗಳು ವಿಗ್ರಹಾರಾಧನೆಯ ಸಕಲ ರೂಪಗಳನ್ನೂ ನಿಷೇಧಿಸುತ್ತವೆ. (ವಿಮೋಚನಕಾಂಡ 20:4, 5; 1 ಕೊರಿಂಥ 10:14) ಹೀಗೆ ಸತ್ಯ ಕ್ರೈಸ್ತರು ಶಿಲುಬೆಯನ್ನು ಆರಾಧನೆಯಲ್ಲಿ ಉಪಯೋಗಿಸದಿರಲು ಅತಿ ಬಲವಾದ ಕಾರಣವಿದೆ. *

^ ಪ್ಯಾರ. 2 ಶಿಲುಬೆಯ ಕುರಿತಾದ ಸವಿವರ ಚರ್ಚೆಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌) ಪುಸ್ತಕದ 89-93ನೇ ಪುಟಗಳನ್ನು ನೋಡಿ.