ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ಮಾನವರಲ್ಲಿ ಅದೃಶ್ಯವಾದ ಅಮರ ಭಾಗವೊಂದು ನಿಜವಾಗಿಯೂ ಇದೆಯೊ?

ಮಾನವರಲ್ಲಿ ಅದೃಶ್ಯವಾದ ಅಮರ ಭಾಗವೊಂದು ನಿಜವಾಗಿಯೂ ಇದೆಯೊ?

“ಆತ್ಮ” ಎಂಬ ಪದ ನಿಮ್ಮ ಕಿವಿಗೆ ಬೀಳುವಾಗ ನಿಮ್ಮ ಮನಸ್ಸಿಗೆ ಯಾವ ವಿಚಾರ ಬರುತ್ತದೆ? ಅದು ತಮ್ಮೊಳಗಿರುವ ಅದೃಶ್ಯ ಹಾಗೂ ಅಮರವಾದದ್ದೇನೊ ಆಗಿದೆಯೆಂದು ಅನೇಕರು ನಂಬುತ್ತಾರೆ. ಮರಣದ ಸಮಯದಲ್ಲಿ ಇದು ಮಾನವ ಶರೀರದಿಂದ ಹೊರಬಂದು ಜೀವಿಸುವುದನ್ನು ಮುಂದುವರಿಸುತ್ತದೆ ಎಂದು ಅವರು ನೆನಸುತ್ತಾರೆ. ನಂತರ ಅದು ಇನ್ನೊಂದು ದೇಹದಲ್ಲಿ ಪುನರ್ಜನ್ಮ ಪಡೆಯುತ್ತದೆ ಅಥವಾ ಸ್ವರ್ಗಕ್ಕೊ ನರಕಕ್ಕೊ ಹೋಗುತ್ತದೆಂದು ಜನರು ನಂಬುತ್ತಾರೆ. ಈ ನಂಬಿಕೆಯು ತುಂಬ ವ್ಯಾಪಕವಾಗಿರುವುದರಿಂದ, ಬೈಬಲ್‌ ಇದನ್ನು ಕಲಿಸುವುದೇ ಇಲ್ಲವೆಂಬುದನ್ನು ಕೇಳಿ ಅನೇಕರಿಗೆ ಆಶ್ಚರ್ಯವಾಗುತ್ತದೆ.

ಬೈಬಲನ್ನು ಭಾರತೀಯ ಭಾಷೆಗಳಿಗೆ ಅನುವಾದಿಸುವಾಗ ಬೈಬಲ್‌ ಭಾಷಾಂತರಕಾರರು ಉಪಯೋಗಿಸಿರುವ ಪದಗಳಿಂದಾಗಿ ಗಲಿಬಿಲಿ ಹುಟ್ಟಿಕೊಂಡಿದೆ. ಇದರಿಂದಾಗಿ, ಶರೀರವು ಸಾಯುವಾಗ ಏನೋ ಬದುಕಿ ಉಳಿಯುತ್ತದೆ ಎಂಬುದನ್ನು ಬೈಬಲು ಸಹ ಬೋಧಿಸುತ್ತದೆಂದು ಕೆಲವರು ಭಾವಿಸುತ್ತಾರೆ. ಆದುದರಿಂದ ಬೈಬಲಿನ ಮೂಲ ಭಾಷೆಗಳಲ್ಲಿ ಉಪಯೋಗಿಸಲಾಗಿರುವ ಪದಗಳ ಹೆಚ್ಚು ಸೂಕ್ಷ್ಮವಾದ ಪರಿಶೀಲನೆಯು ಬೈಬಲು ನಿಜವಾಗಿಯೂ ಏನು ಬೋಧಿಸುತ್ತದೆಂಬುದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯಮಾಡಬಲ್ಲದು.

“ಆತ್ಮ” ಏನೆಂಬುದನ್ನು ಗುರುತಿಸುವುದು

ಬೈಬಲನ್ನು ಮೂಲತಃ ಹೀಬ್ರು ಮತ್ತು ಗ್ರೀಕ್‌ ಭಾಷೆಯಲ್ಲಿ ಬರೆಯಲ್ಪಟ್ಟಿತು ಎಂಬುದು ನಿಮಗೆ ನೆನಪಿರಬಹುದು. ಮೂಲಗ್ರಂಥಪಾಠದಲ್ಲಿ ಬೈಬಲ್‌ ಲೇಖಕರು ಆಗಾಗ್ಗೆ (1) ಜನರಿಗೆ, (2) ಪ್ರಾಣಿಗಳಿಗೆ ಮತ್ತು (3) ವ್ಯಕ್ತಿ ಅಥವಾ ಪ್ರಾಣಿಯಲ್ಲಿರುವ ಜೀವವನ್ನು ಸೂಚಿಸಲು ನೆಫೆಶ್‌ ಎಂಬ ಹೀಬ್ರು ಪದವನ್ನು ಮತ್ತು ಸೈಖೀ ಎಂಬ ಗ್ರೀಕ್‌ ಪದವನ್ನು ಬಳಸಿದರು. (1 ಪೇತ್ರ 3:20; ಆದಿಕಾಂಡ 1:20, 24; ಯೋಹಾನ 10:11) ಈ ಮೂಲಭಾಷಾ ಪದಗಳನ್ನು ಕನ್ನಡ ಬೈಬಲಿನಲ್ಲಿ ಪ್ರಾಣ, ಪ್ರಾಣಿ, ಜೀವ, ಮನ, ಮನಸ್ಸು, ಕೆಲವೊಮ್ಮೆ ನೇರವಾಗಿ ವ್ಯಕ್ತಿಯೊಬ್ಬನಿಗೆ ಸೂಚಿಸುತ್ತಾ ಸಂದರ್ಭಕ್ಕೆ ತಕ್ಕಂತೆ ಭಾಷಾಂತರಿಸಲಾಗಿದೆ. ಆದರೆ ಇನ್ನೂ ಕೆಲವು ಕಡೆಗಳಲ್ಲಿ ಆ ಪದಗಳನ್ನು, “ಆತ್ಮ” ಎಂದು ಸಹ ಭಾಷಾಂತರಿಸಲಾಗಿದೆ. ಉದಾಹರಣೆಗೆ, ಮತ್ತಾಯ 10:28: “ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು [ಗ್ರೀಕ್‌, ಸೈಖೀ] ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ [ಗ್ರೀಕ್‌, ಸೈಖೀ] ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.” ಇದನ್ನೇ ಯೋಬ 7:15; 27:8; 33:18, 28; ಕೀರ್ತನೆ 63:8, ಜ್ಞಾನೋಕ್ತಿ 23:14, ಯೆಶಾಯ 38:17, ಮೀಕ 7:4, 1 ಪೇತ್ರ 2:11 ರಂಥ ವಚನಗಳಲ್ಲೂ ಉಪಯೋಗಿಸಲಾಗಿದೆ. ಇದು, ಅಮರವಾದ ಅದೃಶ್ಯ ಭಾಗವೊಂದು ಇದೆ ಎಂಬ ವಿಚಾರವನ್ನು ಜನರ ಮನಸ್ಸಿನಲ್ಲಿ ಮೂಡಿಸುತ್ತದೆ. ಆದರೆ ಬೈಬಲ್‌ನ ಆಳವಾದ ಅಧ್ಯಯನದಿಂದ, ಬೈಬಲ್‌ ನಿಜವಾಗಿಯೂ ಹೀಗೆ ಬೋಧಿಸುವುದಿಲ್ಲ ಎಂಬುದನ್ನು ನೀವು ಕಂಡುಕೊಳ್ಳುವಿರಿ.

ಬೈಬಲಿನಲ್ಲಿ, ಅದರ ಲೇಖಕರು ಹೀಬ್ರು ಪದವಾದ ರೂಆಖ್‌ ಇಲ್ಲವೆ ಗ್ರೀಕ್‌ ಪದವಾದ ನ್ಯೂಮವನ್ನು ಸಹ ಬಳಸಿದರು. ಶಾಸ್ತ್ರವಚನಗಳೇ ಈ ಪದಗಳ ಅರ್ಥವೇನೆಂಬುದನ್ನು ಸೂಚಿಸುತ್ತವೆ. ದೃಷ್ಟಾಂತಕ್ಕಾಗಿ, ಕೀರ್ತನೆ 104:29 ಹೇಳುವುದು: “ನೀನು [ಯೆಹೋವನು] . . . ಅವುಗಳ ಶ್ವಾಸವನ್ನು [ಹೀಬ್ರು, ರೂಆಖ್‌] ತೆಗೆದುಕೊಳ್ಳಲು ಅವು ಸತ್ತು ತಿರಿಗಿ ಮಣ್ಣಿಗೆ ಸೇರುತ್ತವೆ.” ಮತ್ತು ಯಾಕೋಬ 2:26 ಹೇಳುವುದು, ‘ಆತ್ಮವಿಲ್ಲದ [ಗ್ರೀಕ್‌, ನ್ಯೂಮ] ದೇಹವು ಸತ್ತದ್ದಾಗಿದೆ.’ ಹಾಗಾದರೆ ಈ ವಚನಗಳಲ್ಲಿ ಶ್ವಾಸ ಇಲ್ಲವೆ ಆತ್ಮವು, ದೇಹವನ್ನು ಸಚೇತನಗೊಳಿಸುವ ಜೀವಕ್ಕೆ ಸೂಚಿಸುತ್ತದೆ. ಲೂಕ 8:55 ಹೇಳುವುದು: “ಆಕೆಯ ಪ್ರಾಣ [ಗ್ರೀಕ್‌, ನ್ಯೂಮ] ತಿರಿಗಿ ಬಂದು ತಕ್ಷಣವೇ ಆಕೆ ಎದ್ದಳು.” ಹೀಗೆ ಮನುಷ್ಯರ ಮತ್ತು ಪ್ರಾಣಿಗಳ ವಿಷಯದಲ್ಲಿ ಹೀಬ್ರು ಪದ ರೂಆಖ್‌ ಮತ್ತು ಗ್ರೀಕ್‌ ಪದ ನ್ಯೂಮ ಅನ್ನು ಉಪಯೋಗಿಸುವಾಗ, ಅದನ್ನು ಕನ್ನಡ ಬೈಬಲಿನಲ್ಲಿ “ಆತ್ಮ,” “ಪ್ರಾಣ,” “ಉಸಿರು,” “ಜೀವಶ್ವಾಸ,” “ಜೀವಾತ್ಮ” ಇತ್ಯಾದಿ ಆಗಿ ಭಾಷಾಂತರಿಸಲಾಗಿದೆ. ಇದು ಎಲ್ಲ ಜೀವಿಗಳನ್ನು ಚೇತನಗೊಳಿಸುವ ಒಂದು ಅದೃಶ್ಯ ಶಕ್ತಿಗೆ (ಜೀವಕ್ಕೆ) ಸೂಚಿಸುತ್ತದೆ.

ಈ “ಆತ್ಮ,” ಅಂದರೆ ಜೀವದ ವಿಷಯವನ್ನು ದೃಷ್ಟಾಂತಿಸಲು, ಎಲ್ಲಿ ಬೇಕಾದರೂ ಒಯ್ಯಬಲ್ಲ ಒಂದು ರೇಡಿಯೊ ಬಗ್ಗೆ ಯೋಚಿಸಿ. ಅಂಥ ರೇಡಿಯೊದಲ್ಲಿ ನೀವು ಬ್ಯಾಟರಿಗಳನ್ನು ಹಾಕಿ, ಆನ್‌ ಮಾಡಿದರೆ ಆ ಬ್ಯಾಟರಿಗಳಲ್ಲಿರುವ ವಿದ್ಯುಚ್ಛಕ್ತಿಯು ಅದನ್ನು ಒಂದು ರೀತಿಯಲ್ಲಿ ಸಜೀವಗೊಳಿಸುತ್ತದೆ, ಅಂದರೆ ಕೆಲಸಮಾಡುವಂತೆ ಶಕ್ತಗೊಳಿಸುತ್ತದೆ. ಆದರೆ ಬ್ಯಾಟರಿಗಳಿಲ್ಲದಿದ್ದರೆ ಆ ರೇಡಿಯೊ ಸತ್ತ ಹಾಗಿರುತ್ತದೆ ಅಂದರೆ ಕೆಲಸಮಾಡಲಾರದು. ಅದೇ ರೀತಿಯಲ್ಲಿ ನಮ್ಮ ದೇಹಗಳನ್ನು ಸಚೇತನಗೊಳಿಸಲು, ಜೀವವು ಅಗತ್ಯವಿದೆ. ಅಲ್ಲದೆ, ವಿದ್ಯುಚ್ಛಕ್ತಿಗೆ ಹೇಗೆ ಯಾವುದೇ ಭಾವನೆಗಳು ಮತ್ತು ಯೋಚಿಸುವ ಸಾಮರ್ಥ್ಯವಿಲ್ಲವೊ ಹಾಗೆಯೇ ಆತ್ಮಕ್ಕೂ ಅಂದರೆ ಜೀವಕ್ಕೂ ಭಾವನೆಗಳೂ ಯೋಚಿಸುವ ಸಾಮರ್ಥ್ಯವೂ ಇಲ್ಲ. ಅದೊಂದು ವ್ಯಕ್ತಿಸ್ವರೂಪವಿಲ್ಲದ ಶಕ್ತಿಯಾಗಿದೆ ಅಷ್ಟೆ. ಆದರೆ ಈ ಆತ್ಮ ಅಂದರೆ ಜೀವವು ಇಲ್ಲದಿರುವಲ್ಲಿ ಕೀರ್ತನೆಗಾರನು ಹೇಳಿದಂತೆ ನಮ್ಮ ದೇಹಗಳು “ಸತ್ತು ತಿರಿಗಿ ಮಣ್ಣಿಗೆ ಸೇರುತ್ತವೆ.”

ಮಾನವನ ಮರಣದ ಕುರಿತಾಗಿ ಪ್ರಸಂಗಿ 12:7 ಹೇಳುವುದು: “ಮಣ್ಣು ಭೂಮಿಗೆ ಸೇರಿ ಇದ್ದ ಹಾಗಾಗುವದು; ಆತ್ಮವು [ಹೀಬ್ರು, ರೂಆಖ್‌] ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವದು.” ಆತ್ಮ ಅಂದರೆ ಜೀವವು ದೇಹದಿಂದ ಹೊರಬರುವಾಗ, ದೇಹವು ಎಲ್ಲಿಂದ ಬಂದಿತ್ತೊ ಅಲ್ಲಿಗೇ ಅಂದರೆ ಭೂಮಿಗೆ ಸೇರುತ್ತದೆ. ತದ್ರೀತಿಯಲ್ಲಿ ಜೀವವು ಎಲ್ಲಿಂದ ಬಂದಿತ್ತೊ ಅಲ್ಲಿಗೆ ಅಂದರೆ ದೇವರ ಬಳಿಗೆ ಹಿಂದಿರುಗುತ್ತದೆ. (ಯೋಬ 34:14, 15; ಕೀರ್ತನೆ 36:9) ಆ ಜೀವವು ವಾಸ್ತವದಲ್ಲಿ ಸ್ವರ್ಗಕ್ಕೆ ಪ್ರಯಾಣ ಬೆಳೆಸುತ್ತದೆಂದು ಇದರರ್ಥವಲ್ಲ. ಬದಲಿಗೆ, ಮೃತಪಡುವ ಒಬ್ಬ ವ್ಯಕ್ತಿಯ ಭಾವೀ ಜೀವನದ ಯಾವುದೇ ನಿರೀಕ್ಷೆಯು ಈಗ ಯೆಹೋವ ದೇವರ ಮೇಲೆ ಹೊಂದಿಕೊಂಡಿದೆ ಎಂದು ಇದರರ್ಥ. ಕೇವಲ ದೇವರ ಶಕ್ತಿಯಿಂದ, ಆ ಆತ್ಮ ಅಂದರೆ ಜೀವವು ಆ ವ್ಯಕ್ತಿ ಪುನಃ ಬದುಕುವಂತೆ ಅವನಿಗೆ ಹಿಂದೆ ಕೊಡಲ್ಪಡಸಾಧ್ಯವಿದೆ.

ಸ್ಮರಣೆಯ ‘ಸಮಾಧಿಗಳಲ್ಲಿರುವವರೆಲ್ಲರಿಗೂ’ ದೇವರು ನಿಶ್ಚಯವಾಗಿಯೂ ಇದನ್ನು ಮಾಡಲಿದ್ದಾನೆಂಬುದನ್ನು ತಿಳಿಯುವುದು ಎಷ್ಟು ಸಾಂತ್ವನದಾಯಕ! (ಯೋಹಾನ 5:28, 29) ಮರಣದಲ್ಲಿ ನಿದ್ರಿಸುತ್ತಿರುವವರಿಗೆ ಯೆಹೋವನು ಪುನರುತ್ಥಾನದ ಸಮಯದಲ್ಲಿ ಒಂದು ಹೊಸ ದೇಹವನ್ನು ರಚಿಸಿ ಅದರಲ್ಲಿ ಆತ್ಮ ಅಂದರೆ ಜೀವವನ್ನು ತುಂಬಿಸುವನು. ಅದು ಎಷ್ಟು ಹರ್ಷಕರವಾದ ಜೀವನವಾಗಿರಬಹುದು!