ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ನ್ಯಾಯವಿಚಾರಣೆಯ ದಿನ—ಅದೇನು?

ನ್ಯಾಯವಿಚಾರಣೆಯ ದಿನ—ಅದೇನು?

ನ್ಯಾಯವಿಚಾರಣೆಯ ದಿನವನ್ನು ನೀವು ಹೇಗೆ ಚಿತ್ರಿಸಿಕೊಳ್ಳುತ್ತೀರಿ? ಕೋಟ್ಯಂತರ ಜನರು ಒಬ್ಬೊಬ್ಬರಾಗಿ ದೇವರ ಸಿಂಹಾಸನದ ಮುಂದೆ ತರಲ್ಪಡುವರೆಂಬುದು ಅನೇಕರ ಅಭಿಪ್ರಾಯ. ಆಗ ಅಲ್ಲಿ ಪ್ರತಿಯೊಬ್ಬನಿಗೆ ತೀರ್ಪು ಕೊಡಲ್ಪಡುವುದು. ಕೆಲವರಿಗೆ ಸ್ವರ್ಗಾನಂದದ ಪ್ರತಿಫಲವು ಕೊಡಲ್ಪಡುವುದು ಮತ್ತು ಇತರರಿಗೆ ನಿತ್ಯಯಾತನೆಯ ದಂಡನೆಯು ವಿಧಿಸಲ್ಪಡುವುದು. ಆದರೆ ಬೈಬಲು ಈ ಸಮಯಾವಧಿಯ ವಿಷಯದಲ್ಲಿ ಭಿನ್ನವಾದ ಚಿತ್ರಣವನ್ನು ಕೊಡುತ್ತದೆ. ಅದು ಭಯಾನಕ ಸಮಯವಾಗಿರದೆ ನಿರೀಕ್ಷೆ ಮತ್ತು ಪುನಸ್ಸ್ಥಾಪನೆಯ ಸಮಯವಾಗಿರುತ್ತದೆಂದು ದೇವರ ವಾಕ್ಯವು ವರ್ಣಿಸುತ್ತದೆ.

ಪ್ರಕಟನೆ 20:11, 12 ರಲ್ಲಿ ನಾವು ನ್ಯಾಯವಿಚಾರಣೆಯ ದಿನದ ಕುರಿತಾದ ಅಪೊಸ್ತಲ ಯೋಹಾನನ ವರ್ಣನೆಯನ್ನು ಓದುತ್ತೇವೆ: “ಆ ಮೇಲೆ ಬೆಳ್ಳಗಿರುವ ಮಹಾ ಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಇನ್ನು ಕಾಣಿಸದ ಹಾಗಾದವು. ಇದಲ್ಲದೆ ಸತ್ತವರಾದ ದೊಡ್ಡವರೂ ಚಿಕ್ಕವರೂ ಸಿಂಹಾಸನದ ಮುಂದೆ ನಿಂತಿರುವದನ್ನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಮತ್ತು ಜೀವಬಾಧ್ಯರ ಪಟ್ಟಿ ಎಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು.” ಇಲ್ಲಿ ವರ್ಣಿಸಲಾಗಿರುವ ನ್ಯಾಯಾಧಿಪತಿ ಯಾರು?

ಯೆಹೋವ ದೇವರೇ ಮಾನವಕುಲದ ಪರಮಶ್ರೇಷ್ಠ ನ್ಯಾಯಾಧಿಪತಿ. ಆದರೂ, ಆತನು ನ್ಯಾಯತೀರಿಸುವ ಕೆಲಸವನ್ನು ಮತ್ತೊಬ್ಬನಿಗೆ ಒಪ್ಪಿಸಿಕೊಡುತ್ತಾನೆ. ದೇವರು “[ತಾನು] ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ” ಎಂದು ಅಪೊಸ್ತಲ ಪೌಲನು ಅಪೊಸ್ತಲರ ಕೃತ್ಯಗಳು 17:31 ರಲ್ಲಿ ಹೇಳಿದನು. ನಿಷ್ಕರ್ಷಿಸಲ್ಪಟ್ಟ ಈ ನ್ಯಾಯಾಧೀಶನು ಪುನರುತ್ಥಿತ ಯೇಸು ಕ್ರಿಸ್ತನೇ. (ಯೋಹಾನ 5:22) ಆದರೆ ನ್ಯಾಯವಿಚಾರಣೆಯ ದಿನ ಯಾವಾಗ ಆರಂಭವಾಗುತ್ತದೆ? ಅದೆಷ್ಟು ದೀರ್ಘವಾಗಿರುತ್ತದೆ?

ನ್ಯಾಯವಿಚಾರಣೆಯ ದಿನವು, ಭೂಮಿಯ ಮೇಲಿರುವ ಸೈತಾನನ ವ್ಯವಸ್ಥೆಯು ಅರ್ಮಗೆದೋನ್‌ ಯುದ್ಧದಲ್ಲಿ ನಾಶಗೊಂಡ ಬಳಿಕ ಆರಂಭವಾಗುತ್ತದೆಂದು ಪ್ರಕಟನೆ ಪುಸ್ತಕವು ತೋರಿಸುತ್ತದೆ. * (ಪ್ರಕಟನೆ 16:14, 16; 19:19–20:3) ಅರ್ಮಗೆದೋನಿನ ಬಳಿಕ ಸೈತಾನನೂ ಅವನ ದೆವ್ವಗಳೂ ಅಧೋಲೋಕದಲ್ಲಿ ಒಂದು ಸಾವಿರ ವರುಷಗಳ ವರೆಗೆ ಬಂಧಿಸಲ್ಪಡುವರು. ಅದೇ ಸಮಯದಲ್ಲಿ, 1,44,000 ಮಂದಿ ಸ್ವರ್ಗೀಯ ಜೊತೆಬಾಧ್ಯಸ್ಥರು ನ್ಯಾಯಧೀಶರಾಗಿರುವರು ಮತ್ತು ‘ಸಾವಿರ ವರುಷ ಕ್ರಿಸ್ತನೊಂದಿಗೆ ಆಳುವರು.’ (ಪ್ರಕಟನೆ 14:1-3; 20:1-4; ರೋಮಾಪುರ 8:17) ನ್ಯಾಯವಿಚಾರಣೆಯ ದಿನವು ಕೇವಲ 24 ತಾಸುಗಳಲ್ಲಿ ಮುಗಿದುಹೋಗುವ ತರಾತುರಿಯ ಸಂಭವವಲ್ಲ. ಅದು ಒಂದು ಸಾವಿರ ವರುಷಗಳಷ್ಟು ಉದ್ದವಾಗಿದೆ.

ಆ ಸಾವಿರ ವರುಷಗಳ ಅವಧಿಯಲ್ಲಿ ಯೇಸು ಕ್ರಿಸ್ತನು, “ಜೀವಿಸುವವರಿಗೂ ಸತ್ತವರಿಗೂ ನ್ಯಾಯ”ತೀರಿಸುವನು. (2 ತಿಮೊಥೆಯ 4:1) ಆಗ ‘ಜೀವಿಸುವವರು,’ ಅರ್ಮಗೆದೋನನ್ನು ಪಾರಾಗಿ ಉಳಿಯುವ “ಮಹಾಸಮೂಹ”ದವರಾಗಿದ್ದಾರೆ. (ಪ್ರಕಟನೆ 7:9-17) ಅಪೊಸ್ತಲ ಯೋಹಾನನು, ‘ಸತ್ತವರು’ ಸಹ ತೀರ್ಪಿನ “ಸಿಂಹಾಸನದ ಮುಂದೆ” ನಿಂತಿರುವುದನ್ನು ಕಂಡನು. ಯೇಸು ವಚನಕೊಟ್ಟಂತೆ, ‘[ಸ್ಮಾರಕ] ಸಮಾಧಿಗಳಲ್ಲಿ ಇರುವವರು [ಕ್ರಿಸ್ತನ] ಧ್ವನಿಯನ್ನು ಕೇಳಿ’ ಪುನರುತ್ಥಾನದ ಮುಖೇನ ‘ಹೊರಗೆ ಬರುವರು.’ (ಯೋಹಾನ 5:28, 29; ಅ. ಕೃತ್ಯಗಳು 24:15) ಆದರೆ ಇವರೆಲ್ಲರಿಗೆ ಯಾವ ಆಧಾರದ ಮೇಲೆ ತೀರ್ಪಾಗುವುದು?

ಅಪೊಸ್ತಲ ಯೋಹಾನನ ದರ್ಶನಕ್ಕನುಸಾರ, ಆಗ “ಪುಸ್ತಕಗಳು ತೆರೆಯಲ್ಪಟ್ಟವು” ಮತ್ತು “ಆ ಪುಸ್ತಕಗಳಲ್ಲಿ ಬರೆದಿದ್ದ ಸಂಗತಿಗಳ ಆಧಾರದಿಂದ ಅವರವರ ಕೃತ್ಯಗಳ ಪ್ರಕಾರ ಸತ್ತವರಿಗೆ ನ್ಯಾಯತೀರ್ಪಾಯಿತು.” ಆ ಪುಸ್ತಕಗಳು ಜನರು ಹಿಂದೆ ಮಾಡಿದಂಥ ಕೃತ್ಯಗಳ ಕುರಿತಾದ ದಾಖಲೆಗಳಾಗಿವೆಯೊ? ಇಲ್ಲ. ಏಕೆಂದರೆ ಆ ತೀರ್ಪು, ಜನರು ಸಾಯುವುದಕ್ಕೆ ಮೊದಲು ಮಾಡಿದ ಕೃತ್ಯಗಳ ಮೇಲೆ ಆಧರಿಸುವುದಿಲ್ಲ. ಅದು ನಮಗೆ ಹೇಗೆ ಗೊತ್ತು? ಬೈಬಲು ಹೇಳುವುದು: “ಸತ್ತವನು ಪಾಪದ ವಶದಿಂದ ಬಿಡುಗಡೆ ಹೊಂದಿದ್ದಾನಷ್ಟೆ.” (ರೋಮಾಪುರ 6:7) ಹೀಗೆ, ಪುನರುತ್ಥಾನದ ಮೂಲಕ ಜೀವಕ್ಕೆ ಬರುವವರ ಹಿಂದಿನ ಎಲ್ಲ ಪಾಪಗಳು ರದ್ದುಗೊಳಿಸಲ್ಪಟ್ಟಿರುವವು. ಆದುದರಿಂದ ಈ ಪುಸ್ತಕಗಳು, ದೇವರು ಮುಂದೆ ಕೊಡುವ ಆವಶ್ಯಕತೆಗಳನ್ನು ಪ್ರತಿನಿಧಿಸುತ್ತಿರಬೇಕು. ಅರ್ಮಗೆದೋನನ್ನು ಪಾರಾದವರು ಮತ್ತು ಪುನರುತ್ಥಾನ ಹೊಂದಿದವರು ಅನಂತವಾಗಿ ಜೀವಿಸಬೇಕಾದರೆ, ಯೆಹೋವನು ಸಾವಿರ ವರುಷಗಳಲ್ಲಿ ತಿಳಿಯಪಡಿಸುವ ಯಾವುದೇ ಹೊಸ ಆವಶ್ಯಕತೆಗಳ ಸಮೇತ ಬೇರೆಲ್ಲಾ ದೇವಾಜ್ಞೆಗಳಿಗೆ ವಿಧೇಯರಾಗಬೇಕು. ಹೀಗೆ ನ್ಯಾಯವಿಚಾರಣೆಯ ದಿನದ ಅವಧಿಯಲ್ಲಿ ವ್ಯಕ್ತಿಗಳು ಏನು ಮಾಡುತ್ತಾರೋ ಅದರ ಆಧಾರದ ಮೇರೆಗೆ ಅವರಿಗೆ ತೀರ್ಪನ್ನು ಮಾಡಲಾಗುವುದು.

ನ್ಯಾಯವಿಚಾರಣೆಯ ದಿನವು ಕೋಟ್ಯಂತರ ಜನರಿಗೆ ದೇವರ ಚಿತ್ತದ ಕುರಿತು ಕಲಿಯುವ ಮತ್ತು ಅದಕ್ಕೆ ಹೊಂದಿಕೊಳ್ಳುವ ಪ್ರಥಮ ಅವಕಾಶವನ್ನು ಒದಗಿಸುವುದು. ಇದರ ಅರ್ಥ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಶೈಕ್ಷಣಿಕ ಕಾರ್ಯವು ನಡೆಯುವುದು. ಹೌದು, ‘ಭೂಲೋಕದ ನಿವಾಸಿಗಳು ನೀತಿಯನ್ನು ಕಲಿಯುವರು.’ (ಯೆಶಾಯ 26:9, NIBV) ಆದರೂ, ದೇವರ ಚಿತ್ತಕ್ಕೆ ಹೊಂದಿಕೊಳ್ಳಲು ಎಲ್ಲರೂ ಮನಸ್ಸುಮಾಡರು. ಯೆಶಾಯ 26:10 ಹೇಳುವುದು: “ದುಷ್ಟರನ್ನು ಕರುಣಿಸಿದರೂ ಅವರು ಧರ್ಮಜ್ಞಾನವನ್ನು ಪಡೆಯರು; ಯೆಹೋವನ ಮಹಿಮೆಯನ್ನು ಲಕ್ಷಿಸದೆ ಯಥಾರ್ಥವಂತರ ದೇಶದಲ್ಲಿಯೂ ಅನ್ಯಾಯವನ್ನಾಚರಿಸುವರು.” ಈ ಕಾರಣದಿಂದ, ದುಷ್ಟರು ನ್ಯಾಯವಿಚಾರಣೆಯ ದಿನದಲ್ಲಿ ನಿತ್ಯಕ್ಕೂ ನಾಶಗೊಳಿಸಲ್ಪಡುವರು.—ಯೆಶಾಯ 65:20.

ನ್ಯಾಯವಿಚಾರಣೆಯ ದಿನಾಂತ್ಯದೊಳಗೆ, ಬದುಕಿ ಉಳಿದಿರುವ ಮಾನವರು ಪರಿಪೂರ್ಣರಾಗುವಾಗ ಪೂರ್ಣ ರೀತಿಯಲ್ಲಿ ‘ಜೀವಿತರಾಗಿ ಎದ್ದು’ ಬಂದಿರುವರು. (ಪ್ರಕಟನೆ 20:5) ಹೀಗೆ, ನ್ಯಾಯವಿಚಾರಣೆಯ ದಿನದಲ್ಲಿ ಮಾನವಕುಲವು ಅದರ ಆರಂಭದ ಪರಿಪೂರ್ಣ ಸ್ಥಿತಿಗೆ ಪುನಸ್ಸ್ಥಾಪಿಸಲ್ಪಡುವುದು. (1 ಕೊರಿಂಥ 15:24-28) ಆಗ ಅಂತಿಮ ಪರೀಕ್ಷೆಯೊಂದು ನಡೆಯುವುದು. ಸೈತಾನನನ್ನು ಸೆರೆಯಿಂದ ಬಿಡುಗಡೆಮಾಡಿ ಮಾನವಕುಲವನ್ನು ತಪ್ಪು ದಾರಿಯಲ್ಲಿ ನಡೆಸಲು ಪ್ರಯತ್ನಿಸುವಂತೆ ಕೊನೆಯ ಬಾರಿ ಅವನಿಗೆ ಅವಕಾಶ ಕೊಡಲಾಗುವುದು. (ಪ್ರಕಟನೆ 20:3, 7-10) ಆಗ ಅವನನ್ನು ಪ್ರತಿರೋಧಿಸುವವರು, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂಬ ಬೈಬಲಿನ ವಾಗ್ದಾನದ ಪೂರ್ಣ ನೆರವೇರಿಕೆಯಲ್ಲಿ ಸಂತೋಷಿಸುವರು. (ಕೀರ್ತನೆ 37:29) ಹೌದು, ಹೀಗೆ ನ್ಯಾಯವಿಚಾರಣೆಯ ದಿನವು ಸಕಲ ನಂಬಿಗಸ್ತ ಮಾನವಕುಲಕ್ಕೆ ಆಶೀರ್ವಾದವಾಗಿ ಪರಿಣಮಿಸುವುದು!

^ ಪ್ಯಾರ. 1 ಅರ್ಮಗೆದೋನಿಗೆ ಸಂಬಂಧಿಸಿದ ವಿಷಯಗಳಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಸಂಪುಟ 1, 594-5, 1037-8ನೇ ಪುಟಗಳನ್ನು, ಮತ್ತು ಒಬ್ಬನೇ ಸತ್ಯದೇವರನ್ನು ಆರಾಧಿಸಿರಿ ಎಂಬ ಪುಸ್ತಕದ 20ನೆಯ ಅಧ್ಯಾಯವನ್ನು ನೋಡಿ.