ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ಯೇಸು ಡಿಸೆಂಬರ್‌ ತಿಂಗಳಿನಲ್ಲಿ ಹುಟ್ಟಿದನೊ?

ಯೇಸು ಡಿಸೆಂಬರ್‌ ತಿಂಗಳಿನಲ್ಲಿ ಹುಟ್ಟಿದನೊ?

ಯೇಸು ಯಾವಾಗ ಹುಟ್ಟಿದನೆಂದು ಬೈಬಲು ತಿಳಿಸುವುದಿಲ್ಲ. ಆದರೂ ಅವನು ಡಿಸೆಂಬರ್‌ನಲ್ಲಿ ಜನಿಸಲಿಲ್ಲವೆಂದು ತೀರ್ಮಾನಿಸಲು ಅದು ನಮಗೆ ದೃಢವಾದ ಕಾರಣವನ್ನು ಕೊಡುತ್ತದೆ.

ಯೇಸು ಹುಟ್ಟಿದ ಬೇತ್ಲೆಹೇಮಿನಲ್ಲಿ ವರುಷದ ಆ ಸಮಯದಲ್ಲಿದ್ದ ಹವಾಮಾನದ ಪರಿಸ್ಥಿತಿಗಳನ್ನು ಪರಿಗಣಿಸಿರಿ. ಯೆಹೂದಿ ತಿಂಗಳಾದ ಕಿಸ್ಲೆವ್‌ (ನವೆಂಬರ್‌/ಡಿಸೆಂಬರ್‌ಗೆ ಸರಿಹೊಂದುತ್ತದೆ) ಚಳಿ ಮತ್ತು ಮಳೆಯ ತಿಂಗಳಾಗಿತ್ತು. ಇದರ ನಂತರದ ತಿಂಗಳು ಟೆಬೆತ್‌ (ಡಿಸೆಂಬರ್‌/ಜನವರಿ) ಆಗಿತ್ತು. ಆ ತಿಂಗಳು ವರುಷದಲ್ಲಿಯೇ ಅತಿ ಕನಿಷ್ಠ ತಾಪಮಾನವಿದ್ದ ತಿಂಗಳಾಗಿದ್ದು, ಪರ್ವತ ಪ್ರದೇಶಗಳಲ್ಲಿ ಆಗಾಗ ಹಿಮಬೀಳುತ್ತಿತ್ತು. ಆ ಪ್ರದೇಶದ ಹವಾಮಾನದ ಕುರಿತು ಬೈಬಲ್‌ ಏನು ಹೇಳುತ್ತದೆಂದು ನೋಡೋಣ.

ಕಿಸ್ಲೆವ್‌ ತಿಂಗಳು ಚಳಿ ಮತ್ತು ಮಳೆಗೆ ಪ್ರಸಿದ್ಧವಾಗಿತ್ತೆಂಬುದನ್ನು ಬೈಬಲ್‌ ಲೇಖಕನಾದ ಎಜ್ರನು ತೋರಿಸುತ್ತಾನೆ. “ಒಂಭತ್ತನೆಯ ತಿಂಗಳಿನ [ಕಿಸ್ಲೆವ್‌] ಇಪ್ಪತ್ತನೆಯ ದಿನದಲ್ಲಿ” ಯೆರೂಸಲೇಮಿನಲ್ಲಿ ಜನರು ಕೂಡಿಬಂದಿದ್ದರು ಎಂದು ಹೇಳಿದ ಮೇಲೆ, ಅವರು ‘ದೊಡ್ಡ ಮಳೆಯ ದೆಸೆಯಿಂದ ನಡುಗುತ್ತಾ’ ಇದ್ದರೆಂದು ಎಜ್ರನು ವರದಿಮಾಡುತ್ತಾನೆ. ವರುಷದ ಆ ಸಮಯದಲ್ಲಿ ಹವಾಮಾನದ ಕುರಿತು ನೆರೆದುಬಂದಿದ್ದವರೇ ಹೇಳಿದ್ದು: “ಈಗ ಮಳೆಗಾಲ; ಹೊರಗೆ ನಿಲ್ಲುವದು ಅಸಾಧ್ಯ.” (ಎಜ್ರ 10:9, 13; ಯೆರೆಮೀಯ 36:22) ಆದಕಾರಣ, ಬೇತ್ಲೆಹೇಮಿನ ಸುತ್ತಲಿನ ಆ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಕುರುಬರು, ಡಿಸೆಂಬರ್‌ ಬಂದಾಗ ರಾತ್ರಿಕಾಲದಲ್ಲಿ ತಮ್ಮ ಮಂದೆಗಳೊಂದಿಗೆ ಹೊರಗಡೆ ಇರದಂತೆ ನೋಡಿಕೊಳ್ಳುತ್ತಾರೆಂಬದರಲ್ಲಿ ಆಶ್ಚರ್ಯವಿಲ್ಲ!

ಆದರೆ, ಯೇಸು ಹುಟ್ಟಿದ ರಾತ್ರಿಯಂದು ಕುರುಬರು ಹೊಲಗಳಲ್ಲಿ ತಮ್ಮ ಮಂದೆಗಳನ್ನು ಕಾಯುತ್ತಿದ್ದರೆಂದು ಬೈಬಲ್‌ ವರದಿಸುತ್ತದೆ. ವಾಸ್ತವದಲ್ಲಿ, ಆ ಸಮಯದಲ್ಲಿ ಬೇತ್ಲೆಹೇಮಿನ ಸಮೀಪದಲ್ಲಿ ಆ “ಕುರುಬರು ಹೊಲದಲ್ಲಿದ್ದುಕೊಂಡು [“ಹೊಲದಲ್ಲಿ ತಂಗಿದ್ದು,” NW] ರಾತ್ರಿಯಲ್ಲಿ ತಮ್ಮ ಕುರೀಹಿಂಡನ್ನು ಕಾಯುತ್ತ” ಇದ್ದರೆಂದು ಬೈಬಲ್‌ ಲೇಖಕನಾದ ಲೂಕನು ತೋರಿಸುತ್ತಾನೆ. (ಲೂಕ 2:8-12) ಆ ಕುರುಬರು ಹೊಲದಲ್ಲೇ ತಂಗಿದ್ದರು ಎಂಬುದನ್ನು ಗಮನಿಸಿರಿ, ಅವರು ಕೇವಲ ದಿನದ ಸಮಯದಲ್ಲಿ ಆಚೀಚೆ ನಡೆದಾಡುತ್ತಿರಲಿಲ್ಲ. ಅವರ ಹಿಂಡುಗಳು ರಾತ್ರಿಕಾಲದಲ್ಲಿ ಹೊಲದಲ್ಲಿದ್ದವು. ಹೊರಗಡೆ ಜೀವಿಸುವ ಈ ವರ್ಣನೆ, ಡಿಸೆಂಬರ್‌ನಲ್ಲಿ ಬೇತ್ಲೆಹೇಮಿನ ಚಳಿ ಮತ್ತು ಮಳೆಯ ಹವಾಮಾನಕ್ಕೆ ತಾಳೆಬೀಳುತ್ತದೆಯೆ? ಇಲ್ಲ. ಹೀಗೆ ಯೇಸುವಿನ ಜನನವನ್ನು ಆವರಿಸಿರುವ ಪರಿಸ್ಥಿತಿಗಳು ಅವನು ಡಿಸೆಂಬರ್‌ನಲ್ಲಿ ಹುಟ್ಟಲಿಲ್ಲವೆಂದು ಸೂಚಿಸುತ್ತವೆ. *

ಯೇಸು ಯಾವಾಗ ಮೃತಪಟ್ಟನೆಂದು ದೇವರ ವಾಕ್ಯವು ನಿಷ್ಕೃಷ್ಟವಾಗಿ ತಿಳಿಸುತ್ತದೆ. ಆದರೆ ಅವನು ಹುಟ್ಟಿದ್ದು ಯಾವಾಗ ಎಂಬ ವಿಷಯದಲ್ಲಿ ನೇರವಾದ ಸೂಚನೆಗಳು ತೀರ ಕಡಿಮೆ. ಇದು, “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು” ಎಂಬ ರಾಜ ಸೊಲೊಮೋನನ ಮಾತುಗಳನ್ನು ಜ್ಞಾಪಕಕ್ಕೆ ತರುತ್ತದೆ. (ಪ್ರಸಂಗಿ 7:1) ಹಾಗಾದರೆ, ಬೈಬಲು ಯೇಸುವಿನ ಶುಶ್ರೂಷೆ ಮತ್ತು ಮರಣದ ವಿಷಯದಲ್ಲಿ ಅನೇಕ ವಿವರಗಳನ್ನು ಕೊಟ್ಟಿರುವುದಾದರೂ ಅವನ ಜನನದ ವಿಷಯದಲ್ಲಿ ಕೇವಲ ಕೆಲವೇ ವಿವರಗಳನ್ನು ಕೊಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಯೇಸು ಹುಟ್ಟಿದಾಗ ಕುರುಬರು ತಮ್ಮ ಮಂದೆಗಳೊಂದಿಗೆ ರಾತ್ರಿಯಲ್ಲಿ ಹೊಲಗಳಲ್ಲಿದ್ದರು

^ ಪ್ಯಾರ. 1 ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ಶಾಸ್ತ್ರವಚನಗಳಿಂದ ತರ್ಕಿಸುವುದು (ಇಂಗ್ಲಿಷ್‌), 176-9ನೇ ಪುಟಗಳನ್ನು ನೋಡಿ.