ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ನಾವು ಹಬ್ಬ, ಉತ್ಸವಗಳನ್ನು ಆಚರಿಸಬೇಕೊ?

ನಾವು ಹಬ್ಬ, ಉತ್ಸವಗಳನ್ನು ಆಚರಿಸಬೇಕೊ?

ಇಂದು ಲೋಕದ ಅನೇಕ ಭಾಗಗಳಲ್ಲಿ ಆಚರಿಸಲಾಗುತ್ತಿರುವ ಜನಪ್ರಿಯ ಧಾರ್ಮಿಕ ಹಾಗೂ ಮತಾತೀತ ಹಬ್ಬೋತ್ಸವಗಳ ಮೂಲವು ಬೈಬಲಾಗಿರುವುದಿಲ್ಲ. ಹಾಗಾದರೆ ಇವುಗಳ ಮೂಲವೇನು? ನೀವು ಗ್ರಂಥಾಲಯದಲ್ಲಿ ಸಂಶೋಧನೆ ಮಾಡಲು ಶಕ್ತರಾಗಿರುವಲ್ಲಿ, ನೀವು ಜೀವಿಸುತ್ತಿರುವ ಸ್ಥಳದಲ್ಲಿ ಜನಪ್ರಿಯವಾಗಿರುವ ಹಬ್ಬಗಳ ಕುರಿತು ಪರಾಮರ್ಶಕ ಕೃತಿಗಳು ಏನು ಹೇಳುತ್ತವೆಂಬುದನ್ನು ನೋಡುವುದು ನಿಮಗೆ ಆಸಕ್ತಿದಾಯಕವಾಗಿರುವುದು. ಕೆಲವು ದೃಷ್ಟಾಂತಗಳನ್ನು ಪರಿಗಣಿಸಿರಿ.

ಈಸ್ಟರ್‌ ಹಬ್ಬ. “ಹೊಸ ಒಡಂಬಡಿಕೆಯಲ್ಲಿ ಈಸ್ಟರ್‌ ಹಬ್ಬದ ಆಚರಣೆಯ ಸೂಚನೆಯೇ ಇಲ್ಲ,” ಎನ್ನುತ್ತದೆ ದಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ. ಹಾಗಾದರೆ ಈಸ್ಟರ್‌ ಹೇಗೆ ಆರಂಭಗೊಂಡಿತು? ಇದರ ಮೂಲ ವಿಧರ್ಮಿ ಆರಾಧನೆಯಲ್ಲಿದೆ. ಈ ಹಬ್ಬವು ಯೇಸುವಿನ ಪುನರುತ್ಥಾನದ ಸ್ಮರಣಾರ್ಥವಾಗಿ ಆಚರಿಸಲ್ಪಡುತ್ತದೆಂದು ಭಾವಿಸಲ್ಪಡುವುದಾದರೂ, ಅದರೊಂದಿಗೆ ಸಂಬಂಧಿಸಿರುವ ಪದ್ಧತಿಗಳು ಕ್ರಿಸ್ತೀಯವಲ್ಲ. ಉದಾಹರಣೆಗೆ, ಜನಪ್ರಿಯವಾಗಿರುವ “ಈಸ್ಟರ್‌ ಬನಿ” (ಮುದ್ದುಮೊಲ) ವಿಷಯದಲ್ಲಿ ದ ಕ್ಯಾಥೊಲಿಕ್‌ ಎನ್‌ಸೈಕ್ಲಪೀಡಿಯ ಹೇಳುವುದು: “ಮೊಲವು ವಿಧರ್ಮಿ ಚಿಹ್ನೆಯಾಗಿದ್ದು, ಅದು ಯಾವಾಗಲೂ ಫಲವಂತಿಕೆಯ ದ್ಯೋತಕವಾಗಿತ್ತು.”

ಹೊಸ ವರ್ಷದ ಆಚರಣೆಗಳು. ಹೊಸ ವರ್ಷದ ಆಚರಣೆಗಳ ದಿನ ಮತ್ತು ಪದ್ಧತಿಗಳು ದೇಶದಿಂದ ದೇಶಕ್ಕೆ ವ್ಯತ್ಯಸ್ತವಾಗಿರುತ್ತವೆ. ಈ ಆಚರಣೆಯ ಮೂಲದ ಕುರಿತು, ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯ ಹೇಳುವುದು: “ಕ್ರಿ.ಪೂ. 46ರಲ್ಲಿ ರೋಮನ್‌ ಪ್ರಭು ಜೂಲಿಯಸ್‌ ಸೀಸರನು ಜನವರಿ 1ನ್ನು ಹೊಸ ವರ್ಷದ ದಿನವಾಗಿ ಸ್ಥಾಪಿಸಿದನು. ರೋಮನರು ಈ ದಿನವನ್ನು ಹೆಬ್ಬಾಗಿಲುಗಳು, ದ್ವಾರಗಳು ಮತ್ತು ಪ್ರಾರಂಭಗಳ ದೇವನಾದ ಜೇನಸ್‌ ಎಂಬವನಿಗೆ ಮೀಸಲಾಗಿಟ್ಟರು. ಒಂದು ಮುಂದಕ್ಕೆ ಇನ್ನೊಂದು ಹಿಂದಕ್ಕೆ ನೋಡುತ್ತಿದ್ದ ಎರಡು ಮುಖಗಳಿದ್ದ ಜೇನಸ್‌ನಿಂದ ಈ ತಿಂಗಳಿಗೆ ಜನವರಿ ಎಂಬ ಹೆಸರು ಬಂತು.” ಹೀಗೆ ಹೊಸ ವರ್ಷದ ಆಚರಣೆಗಳು ವಿಧರ್ಮಿ ಸಂಪ್ರದಾಯಗಳ ಮೇಲೆ ಆಧಾರಿತವಾಗಿವೆ.

ವ್ಯಾಲಂಟೈನ್ಸ್‌ ಡೇ. ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡಿಯ ಹೇಳುವುದು: “ವ್ಯಾಲೆಂಟೈನನ ದಿನವು, ವ್ಯಾಲೆಂಟೈನ್‌ ಎಂಬ ಹೆಸರಿನ ಇಬ್ಬರು ಭಿನ್ನ ಕ್ರೈಸ್ತ ಹುತಾತ್ಮರ ಹಬ್ಬದ ದಿನದಂದು ಬರುತ್ತದೆ. ಆದರೆ ಆ ದಿನದೊಂದಿಗೆ ಜೋಡಿಸಲ್ಪಟ್ಟಿರುವ ಪದ್ಧತಿಗಳು ಪ್ರಾಯಶಃ . . . ಪ್ರತಿ ವರ್ಷದ ಫೆಬ್ರವರಿ 15ರಂದು ನಡೆಯುತ್ತಿದ್ದ ಲೂಪರ್‌ಕಾಲಿಯ ಎಂಬ ಪ್ರಾಚೀನ ರೋಮನ್‌ ಹಬ್ಬದಿಂದ ಬಂದಿವೆ. ಈ ಹಬ್ಬವು, ಸ್ತ್ರೀಯರ ಮತ್ತು ವಿವಾಹದ ರೋಮನ್‌ ದೇವತೆಯಾದ ಜೂನೊಳ ಮತ್ತು ಪ್ರಕೃತಿ ದೇವನಾದ ಪ್ಯಾನ್‌ನ ಗೌರವಾರ್ಥವಾಗಿ ಆಚರಿಸಲ್ಪಡುತ್ತಿತ್ತು.”

ಬೇರೆ ಹಬ್ಬದ ದಿನಗಳು. ಲೋಕವ್ಯಾಪಕವಾಗಿ ಆಚರಿಸಲ್ಪಡುವ ಎಲ್ಲ ಹಬ್ಬದ ದಿನಗಳ ಕುರಿತು ಚರ್ಚಿಸಲು ಸಾಧ್ಯವಾಗುವುದಿಲ್ಲ. ಆದರೂ, ಮಾನವರನ್ನು ಅಥವಾ ಮಾನವ ಸಂಘಟನೆಗಳನ್ನು ಘನತೆಗೇರಿಸುವ ಹಬ್ಬದ ದಿನಗಳು ಯೆಹೋವನಿಗೆ ಸ್ವೀಕರಣೀಯವಾಗಿರುವುದಿಲ್ಲ. (ಯೆರೆಮೀಯ 17:5-7; ಅ. ಕೃತ್ಯಗಳು 10:25, 26) ಮತ್ತು ಧಾರ್ಮಿಕಾಚರಣೆಗಳ ಮೂಲಕ್ಕೂ ಅವು ದೇವರನ್ನು ಮೆಚ್ಚಿಸುತ್ತವೊ ಇಲ್ಲವೊ ಎಂಬುದಕ್ಕೂ ಸಂಬಂಧವಿದೆಯೆಂಬುದನ್ನು ಜ್ಞಾಪಿಸಿಕೊಳ್ಳಿರಿ. (ಯೆಶಾಯ 52:11; ಪ್ರಕಟನೆ 18:4) ಈ ಪುಸ್ತಕದ 16ನೆಯ ಅಧ್ಯಾಯದಲ್ಲಿರುವ ಬೈಬಲ್‌ ಮೂಲತತ್ತ್ವಗಳು, ಮತಾತೀತ ಉತ್ಸವಗಳಲ್ಲಿ ಭಾಗವಹಿಸುವುದನ್ನು ದೇವರು ಹೇಗೆ ವೀಕ್ಷಿಸುತ್ತಾನೆಂದು ತಿಳಿಯಲು ನಿಮಗೆ ಸಹಾಯಮಾಡುವವು.