ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

“ದೇವರ ಮೇಲಣ ಪ್ರೀತಿ ಏನೆಂದರೆ”

“ದೇವರ ಮೇಲಣ ಪ್ರೀತಿ ಏನೆಂದರೆ”

“ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ.” —1 ಯೋಹಾನ 5:3.

1, 2. ಯೆಹೋವ ದೇವರನ್ನು ಪ್ರೀತಿಸುವಂತೆ ನಿಮ್ಮನ್ನು ಯಾವುದು ಪ್ರಚೋದಿಸುತ್ತದೆ?

ನೀವು ದೇವರನ್ನು ಪ್ರೀತಿಸುತ್ತೀರೊ? ಈಗಾಗಲೇ ನೀವು ಯೆಹೋವ ದೇವರೊಂದಿಗೆ ಸಮರ್ಪಿತ ಸಂಬಂಧಕ್ಕೆ ಬಂದಿರುವಲ್ಲಿ, ನಿಮ್ಮ ಉತ್ತರವು ನಿಶ್ಚಯವಾಗಿಯೂ ‘ಹೌದು’ ಎಂದಾಗಿರುವುದು ಮಾತ್ರವಲ್ಲ ಅದು ನ್ಯಾಯಸಮ್ಮತವೂ ಆಗಿದೆ! ನಾವು ಯೆಹೋವನನ್ನು ಪ್ರೀತಿಸುವುದು ಸಹಜವೇ, ಆಶ್ಚರ್ಯವೇನಲ್ಲ. ಏಕೆಂದರೆ ದೇವರು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಆತನನ್ನು ಪ್ರೀತಿಸುತ್ತೇವೆ. ಈ ವಿಷಯದಲ್ಲಿ ಬೈಬಲ್‌, “ಆತನು [ಯೆಹೋವನು] ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ” ಎಂದು ತಿಳಿಸುತ್ತದೆ.—1 ಯೋಹಾನ 4:19.

2 ನಮ್ಮ ಕಡೆಗೆ ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಯೆಹೋವನು ಮೊದಲ ಹೆಜ್ಜೆ ತೆಗೆದುಕೊಂಡಿದ್ದಾನೆ. ಆತನು ಸುಂದರವಾದ ಭೂಮಿಯನ್ನು ನಮಗೆ ಮನೆಯಾಗಿ ಒದಗಿಸಿದ್ದಾನೆ. ಆತನು ನಮ್ಮ ಶಾರೀರಿಕ ಮತ್ತು ಭೌತಿಕ ಆವಶ್ಯಕತೆಗಳನ್ನು ಪೂರೈಸುತ್ತಾನೆ. (ಮತ್ತಾಯ 5:43-48) ಅದಕ್ಕಿಂತ ಮುಖ್ಯವಾಗಿ ಆತನು ನಮ್ಮ ಆಧ್ಯಾತ್ಮಿಕ ಆವಶ್ಯಕತೆಗಳನ್ನು ನೋಡಿಕೊಳ್ಳುತ್ತಾನೆ. ತನ್ನ ವಾಕ್ಯವಾದ ಬೈಬಲನ್ನು ನಮಗೆ ಕೊಟ್ಟಿದ್ದಾನೆ. ಇದಕ್ಕೆ ಕೂಡಿಸಿ, ತನಗೆ ಪ್ರಾರ್ಥನೆಮಾಡುವಂತೆ ಆತನು ನಮಗೆ ಕರೆಕೊಡುತ್ತಾನೆ ಮತ್ತು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಟ್ಟು ನಮ್ಮ ಸಹಾಯಾರ್ಥವಾಗಿ ತನ್ನ ಪವಿತ್ರಾತ್ಮವನ್ನು ದಯಪಾಲಿಸುವ ಆಶ್ವಾಸನೆಯನ್ನೂ ಕೊಡುತ್ತಾನೆ. (ಕೀರ್ತನೆ 65:2; ಲೂಕ 11:13) ಎಲ್ಲಕ್ಕಿಂತಲೂ ಮಿಗಿಲಾಗಿ, ನಾವು ಪಾಪ ಮತ್ತು ಮರಣದಿಂದ ಬಿಡಿಸಲ್ಪಡುವಂತೆ ತನ್ನ ಅತ್ಯಮೂಲ್ಯ ಕುಮಾರನನ್ನು ನಮ್ಮ ವಿಮೋಚಕನಾಗಿರಲಿಕ್ಕಾಗಿ ಕಳುಹಿಸಿದನು. ಯೆಹೋವನು ನಮಗೆ ಎಷ್ಟು ಮಹತ್ತರವಾದ ಪ್ರೀತಿಯನ್ನು ತೋರಿಸಿದ್ದಾನೆ!—ಯೋಹಾನ 3:16; ರೋಮನ್ನರಿಗೆ 5:8 ಓದಿ.

3. (ಎ) ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ನಾವು ಏನು ಮಾಡುವ ಅಗತ್ಯವಿದೆ? (ಬಿ) ನಾವು ಯಾವ ಪ್ರಮುಖ ಪ್ರಶ್ನೆಯನ್ನು ಪರಿಗಣಿಸಬೇಕಾಗಿದೆ ಮತ್ತು ಇದಕ್ಕೆ ಉತ್ತರವು ಎಲ್ಲಿ ಕಂಡುಬರುತ್ತದೆ?

3 ನಾವು ಆತನ ಪ್ರೀತಿಯಿಂದ ಅನಂತಕಾಲ ಪ್ರಯೋಜನ ಪಡೆಯಬೇಕೆಂದು ಯೆಹೋವನು ಬಯಸುತ್ತಾನೆ. ಆದರೆ ನಾವು ಪ್ರಯೋಜನ ಪಡೆದುಕೊಳ್ಳುವೆವೊ ಇಲ್ಲವೊ ಎಂಬುದು ನಮಗೆ ಬಿಟ್ಟದ್ದಾಗಿದೆ. ದೇವರ ವಾಕ್ಯವು ನಮಗೆ, “ನಿತ್ಯಜೀವವನ್ನು ದೃಷ್ಟಿಯಲ್ಲಿಟ್ಟವರಾಗಿ . . . ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಎಂದು ಉತ್ತೇಜಿಸುತ್ತದೆ. (ಯೂದ 21) ‘ನಿಮ್ಮನ್ನು ಕಾಪಾಡಿಕೊಳ್ಳಿರಿ’ ಎಂಬ ಪದಗುಚ್ಛವು ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ನಾವು ಕ್ರಿಯೆಗೈಯುವುದು ಅಗತ್ಯವೆಂಬುದನ್ನು ಸೂಚಿಸುತ್ತದೆ. ನಾವು ಆತನ ಪ್ರೀತಿಗೆ ನಿಶ್ಚಿತ ವಿಧಗಳಲ್ಲಿ ಪ್ರತಿವರ್ತಿಸುವ ಆವಶ್ಯಕತೆಯಿದೆ. ಹೀಗಿರುವುದರಿಂದ, ‘ನಾನು ದೇವರಿಗಾಗಿರುವ ನನ್ನ ಪ್ರೀತಿಯನ್ನು ಹೇಗೆ ತೋರಿಸಬಲ್ಲೆ?’ ಎಂಬ ಪ್ರಮುಖ ಪ್ರಶ್ನೆಯನ್ನು ನಾವು ಪರಿಗಣಿಸಬೇಕಾಗಿದೆ. ಅಪೊಸ್ತಲ ಯೋಹಾನನ ಪ್ರೇರಿತ ಮಾತುಗಳಲ್ಲಿ ಇದಕ್ಕೆ ಉತ್ತರವು ಕಂಡುಬರುತ್ತದೆ. “ದೇವರ ಮೇಲಣ ಪ್ರೀತಿ ಏನೆಂದರೆ ನಾವು ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ; ಆದರೂ ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂದು ಅವನು ಹೇಳಿದನು. (1 ಯೋಹಾನ 5:3) ನಾವು ಈ ಮಾತುಗಳ ಅರ್ಥವನ್ನು ಜಾಗರೂಕತೆಯಿಂದ ಪರೀಕ್ಷಿಸುವುದು ಒಳ್ಳೇದು, ಏಕೆಂದರೆ ನಾವು ನಮ್ಮ ದೇವರನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ಆತನಿಗೆ ತೋರಿಸಲು ಬಯಸುತ್ತೇವೆ.

“ದೇವರ ಮೇಲಣ ಪ್ರೀತಿ ಏನೆಂದರೆ”

4, 5. ಯೆಹೋವನ ಮೇಲಣ ಪ್ರೀತಿ ನಿಮ್ಮ ಹೃದಯದಲ್ಲಿ ಹೇಗೆ ಬೆಳೆಯತೊಡಗಿತು ಎಂಬುದನ್ನು ವರ್ಣಿಸಿರಿ.

4 “ದೇವರ ಮೇಲಣ ಪ್ರೀತಿ” ಎಂಬ ಮಾತುಗಳನ್ನು ಬರೆದಾಗ ಅಪೊಸ್ತಲ ಯೋಹಾನನ ಮನಸ್ಸಿನಲ್ಲಿ ಏನಿತ್ತು? ನಿಮ್ಮ ಹೃದಯದಲ್ಲಿ ಯೆಹೋವನ ಮೇಲಣ ಪ್ರೀತಿಯು ಯಾವಾಗ ಬೆಳೆಯತೊಡಗಿತು ಎಂಬುದನ್ನು ನೀವು ನೆನಪಿಸಿಕೊಳ್ಳಬಲ್ಲಿರೊ?

ಸಮರ್ಪಣೆ ಮತ್ತು ದೀಕ್ಷಾಸ್ನಾನವು ಯೆಹೋವನಿಗೆ ಪ್ರೀತಿಪೂರ್ಣ ವಿಧೇಯತೆಯನ್ನು ತೋರಿಸುವ ಜೀವನದ ಆರಂಭವನ್ನು ಗುರುತಿಸುತ್ತದೆ

5 ನೀವು ಪ್ರಥಮ ಬಾರಿಗೆ ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತಾದ ಸತ್ಯವನ್ನು ಕಲಿತುಕೊಂಡು ನಂಬಿಕೆಯನ್ನು ಇಡಲಾರಂಭಿಸಿದ ಸಮಯವನ್ನು ತುಸು ಜ್ಞಾಪಿಸಿಕೊಳ್ಳಿರಿ. ನೀವು ದೇವರಿಂದ ವಿಮುಖರಾದ ಒಬ್ಬ ಪಾಪಿಯಾಗಿ ಜನಿಸಿದರೂ, ಆದಾಮನು ಕಳೆದುಕೊಂಡ ಪರಿಪೂರ್ಣತೆಯನ್ನು ನೀವು ಪಡೆದುಕೊಳ್ಳಲು ಮತ್ತು ನಿತ್ಯಜೀವಕ್ಕೆ ಬಾಧ್ಯರಾಗಲು ಯೆಹೋವನು ಕ್ರಿಸ್ತನ ಮೂಲಕ ನಿಮಗೋಸ್ಕರ ಮಾರ್ಗವನ್ನು ತೆರೆದನು ಎಂಬುದನ್ನು ಅರ್ಥಮಾಡಿಕೊಂಡಿರಿ. (ಮತ್ತಾಯ 20:28; ರೋಮನ್ನರಿಗೆ 5:12, 18) ತನ್ನ ಅತ್ಯಮೂಲ್ಯ ಕುಮಾರನನ್ನು ನಿಮಗೋಸ್ಕರ ಸಾಯುವಂತೆ ಕಳುಹಿಸುವುದರಲ್ಲಿ ಯೆಹೋವನು ಮಾಡಿದ ತ್ಯಾಗದ ಪ್ರಮಾಣವನ್ನು ನೀವು ಗಣ್ಯಮಾಡಲಾರಂಭಿಸಿದಿರಿ. ಇದು ನಿಮ್ಮ ಹೃದಯವನ್ನು ಪ್ರಚೋದಿಸಿತು ಮತ್ತು ನಿಮಗೋಸ್ಕರ ಇಂಥ ಮಹತ್ತರ ಪ್ರೀತಿಯನ್ನು ತೋರಿಸಿರುವ ದೇವರನ್ನು ನೀವು ಪ್ರೀತಿಸತೊಡಗಿದಿರಿ.—1 ಯೋಹಾನ 4:9, 10 ಓದಿ.

6. ನಿಜವಾದ ಪ್ರೀತಿಯನ್ನು ಹೇಗೆ ತೋರಿಸಲಾಗುತ್ತದೆ ಮತ್ತು ದೇವರ ಮೇಲಣ ಪ್ರೀತಿಯು ಏನು ಮಾಡುವಂತೆ ನಿಮ್ಮನ್ನು ಪ್ರೇರಿಸಿತು?

6 ಆದರೆ ಆ ಭಾವನೆಯು ಯೆಹೋವನ ಮೇಲೆ ಉಂಟಾದ ನಿಜವಾದ ಪ್ರೀತಿಯ ಆರಂಭವಾಗಿತ್ತಷ್ಟೆ. ಪ್ರೀತಿಯು ಕೇವಲ ಒಂದು ಭಾವನೆಯಾಗಿಲ್ಲ ಅಥವಾ ಬರಿಯ ಮಾತುಗಳಲ್ಲಿ ವ್ಯಕ್ತಪಡಿಸುವಂಥದ್ದೂ ಅಲ್ಲ. ದೇವರ ಮೇಲಣ ನಿಜವಾದ ಪ್ರೀತಿಯಲ್ಲಿ, “ನಾನು ಯೆಹೋವನನ್ನು ಪ್ರೀತಿಸುತ್ತೇನೆ” ಎಂದಷ್ಟೇ ಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ನಂಬಿಕೆಯಂತೆಯೇ, ನಿಜವಾದ ಪ್ರೀತಿಯನ್ನು ಸಹ ಅದು ಪ್ರಚೋದಿಸುವಂಥ ಕ್ರಿಯೆಗಳಿಂದ ನಿರೂಪಿಸಲಾಗುತ್ತದೆ ಮತ್ತು ವಿವರಿಸಲಾಗುತ್ತದೆ. (ಯಾಕೋಬ 2:26) ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಪ್ರೀತಿಸುವ ವ್ಯಕ್ತಿಗೆ ಇಷ್ಟಕರವಾಗುವ ವಿಷಯಗಳನ್ನು ಮಾಡುವ ಮೂಲಕ ನಾವು ನಮ್ಮ ಪ್ರೀತಿಯನ್ನು ತೋರಿಸುತ್ತೇವೆ. ಆದುದರಿಂದ ಯೆಹೋವನ ಮೇಲಣ ಪ್ರೀತಿಯು ನಿಮ್ಮ ಹೃದಯದಲ್ಲಿ ಬೇರೂರಿದಾಗ, ನಿಮ್ಮ ಸ್ವರ್ಗೀಯ ತಂದೆಗೆ ಇಷ್ಟಕರವಾಗುವ ರೀತಿಯಲ್ಲಿ ಜೀವಿಸುವ ಬಯಕೆ ನಿಮ್ಮಲ್ಲಿ ಬೆಳೆಯಿತು. ನೀವು ದೀಕ್ಷಾಸ್ನಾನ ಪಡೆದುಕೊಂಡಿರುವ ಸಾಕ್ಷಿಯಾಗಿದ್ದೀರೊ? ಹಾಗಿರುವಲ್ಲಿ, ಈ ಅಪಾರವಾದ ಮಮತೆ ಮತ್ತು ಭಕ್ತಿಯು ನಿಮ್ಮ ಜೀವನದ ಅತಿ ಪ್ರಮುಖ ನಿರ್ಣಯವನ್ನು ಮಾಡುವಂತೆ ಪ್ರೇರಿಸಿತು. ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿ ನೀವು ನಿಮ್ಮನ್ನು ಆತನಿಗೆ ಸಮರ್ಪಿಸಿಕೊಂಡಿರಿ ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಸಮರ್ಪಣೆಯನ್ನು ತೋರಿಸಿಕೊಟ್ಟಿರಿ. (ರೋಮನ್ನರಿಗೆ 14:7, 8 ಓದಿ.) ಯೆಹೋವನಿಗೆ ಮಾಡಿರುವ ಈ ವೈಯಕ್ತಿಕ ವಚನವನ್ನು ಪೂರೈಸುವುದರಲ್ಲಿ ಅಪೊಸ್ತಲ ಯೋಹಾನನು ಮುಂದೆ ಏನು ಹೇಳುತ್ತಾನೋ ಅದು ಒಳಗೂಡಿದೆ.

‘ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದು’

7. ದೇವರ ಆಜ್ಞೆಗಳಲ್ಲಿ ಕೆಲವು ಯಾವುವು ಮತ್ತು ಇವುಗಳನ್ನು ಕೈಕೊಂಡು ನಡೆಯುವುದರಲ್ಲಿ ಏನು ಒಳಗೂಡಿದೆ?

7 ದೇವರ ಮೇಲಣ ಪ್ರೀತಿಯ ಅರ್ಥ, “ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವುದೇ” ಎಂದು ಯೋಹಾನನು ವಿವರಿಸುತ್ತಾನೆ. ದೇವರ ಆಜ್ಞೆಗಳು ಯಾವುವು? ಯೆಹೋವನು ತನ್ನ ವಾಕ್ಯವಾದ ಬೈಬಲಿನ ಮೂಲಕ ನಮಗೆ ಹಲವಾರು ನಿರ್ದಿಷ್ಟ ಆಜ್ಞೆಗಳನ್ನು ಕೊಡುತ್ತಾನೆ. ಉದಾಹರಣೆಗೆ ಆತನು ಕುಡುಕತನ, ಹಾದರ, ವಿಗ್ರಹಾರಾಧನೆ, ಕಳ್ಳತನ ಮತ್ತು ಸುಳ್ಳಾಡುವುದರಂಥ ದುರಭ್ಯಾಸಗಳನ್ನು ನಿಷೇಧಿಸುತ್ತಾನೆ. (1 ಕೊರಿಂಥ 5:11; 6:18; 10:14; ಎಫೆಸ 4:28; ಕೊಲೊಸ್ಸೆ 3:9) ದೇವರ ಆಜ್ಞೆಗಳನ್ನು ಕೈಕೊಂಡು ನಡೆಯುವುದರಲ್ಲಿ ಬೈಬಲಿನ ಸ್ಪಷ್ಟವಾದ ನೈತಿಕ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವುದು ಒಳಗೂಡಿದೆ.

8, 9. ನೇರವಾದ ಬೈಬಲ್‌ ನಿಯಮವಿಲ್ಲದಿರುವಂಥ ಸನ್ನಿವೇಶಗಳಲ್ಲಿಯೂ ಯೆಹೋವನನ್ನು ಯಾವುದು ಮೆಚ್ಚಿಸುತ್ತದೆಂದು ನಾವು ಹೇಗೆ ತಿಳಿಯಬಲ್ಲೆವು? ಒಂದು ಉದಾಹರಣೆಯನ್ನು ಕೊಡಿ.

8 ಆದರೆ ಯೆಹೋವನನ್ನು ಮೆಚ್ಚಿಸಲಿಕ್ಕಾಗಿ ನಾವು ಆತನ ನೇರವಾದ ಆಜ್ಞೆಗಳಿಗೆ ವಿಧೇಯರಾಗುವುದಕ್ಕಿಂತಲೂ ಹೆಚ್ಚನ್ನು ಮಾಡುವ ಅಗತ್ಯವಿದೆ. ನಮ್ಮ ದೈನಂದಿನ ಜೀವನದ ಪ್ರತಿಯೊಂದು ಅಂಶವನ್ನು ನಿಯಂತ್ರಿಸುವಂಥ ನಿಯಮಗಳಿಂದ ಯೆಹೋವನು ನಮ್ಮನ್ನು ನಿರ್ಬಂಧಿಸುವುದಿಲ್ಲ. ಆದುದರಿಂದ ಪ್ರತಿ ದಿನ ನಾವು ನಿರ್ದಿಷ್ಟ ಬೈಬಲ್‌ ಆಜ್ಞೆಗಳು ಇಲ್ಲದಿರುವಂಥ ಅನೇಕ ಸನ್ನಿವೇಶಗಳನ್ನು ಎದುರಿಸಬಹುದು. ಇಂಥ ಸನ್ನಿವೇಶಗಳಲ್ಲಿ ಏನು ಮಾಡುವುದು ಯೆಹೋವನಿಗೆ ಮೆಚ್ಚಿಕೆಯಾಗಿರುವುದು ಎಂಬುದನ್ನು ನಾವು ಹೇಗೆ ತಿಳಿದುಕೊಳ್ಳಸಾಧ್ಯವಿದೆ? ದೇವರ ಆಲೋಚನಾ ರೀತಿಯ ಕುರಿತಾದ ಸ್ಪಷ್ಟವಾದ ಸೂಚನೆಗಳು ಬೈಬಲಿನಲ್ಲಿ ಕಂಡುಬರುತ್ತವೆ. ನಾವು ಬೈಬಲಿನ ಅಧ್ಯಯನಮಾಡುವಾಗ ಯೆಹೋವನು ಏನನ್ನು ಇಷ್ಟಪಡುತ್ತಾನೆ ಮತ್ತು ಏನನ್ನು ಹಗೆಮಾಡುತ್ತಾನೆ ಎಂಬುದು ನಮಗೆ ತಿಳಿದುಬರುತ್ತದೆ. (ಕೀರ್ತನೆ 97:10 ಓದಿ; ಜ್ಞಾನೋಕ್ತಿ 6:16-19) ಆತನು ಅಮೂಲ್ಯವಾಗಿ ಪರಿಗಣಿಸುವಂಥ ಮನೋಭಾವಗಳು ಮತ್ತು ಕ್ರಿಯೆಗಳನ್ನು ನಾವು ಗ್ರಹಿಸಲಾರಂಭಿಸುತ್ತೇವೆ. ಯೆಹೋವನ ವ್ಯಕ್ತಿತ್ವ ಮತ್ತು ಮಾರ್ಗಗಳ ಕುರಿತು ನಾವು ಎಷ್ಟು ಹೆಚ್ಚಾಗಿ ತಿಳಿದುಕೊಳ್ಳುತ್ತೇವೋ ಅಷ್ಟೇ ಹೆಚ್ಚಾಗಿ ಆತನ ಆಲೋಚನೆಯು ನಮ್ಮ ನಿರ್ಣಯಗಳನ್ನು ಮಾರ್ಗದರ್ಶಿಸುವಂತೆ ಮತ್ತು ನಮ್ಮ ಕ್ರಿಯೆಗಳನ್ನು ಪ್ರಭಾವಿಸುವಂತೆ ಬಿಡಲು ಶಕ್ತರಾಗುವೆವು. ಹೀಗೆ ಬೈಬಲಿನ ನಿರ್ದಿಷ್ಟ ನಿಯಮವು ಇಲ್ಲದಿರುವಂಥ ಸನ್ನಿವೇಶಗಳಲ್ಲಿಯೂ ನಾವು “ಯೆಹೋವನ ಚಿತ್ತವೇನೆಂಬುದನ್ನು” ಅನೇಕವೇಳೆ ಗ್ರಹಿಸಬಲ್ಲೆವು.—ಎಫೆಸ 5:17.

9 ಉದಾಹರಣೆಗೆ, ಘೋರವಾದ ಹಿಂಸಾಚಾರ ಅಥವಾ ಲೈಂಗಿಕ ಅನೈತಿಕತೆ ಇರುವಂಥ ಚಲನಚಿತ್ರಗಳು ಅಥವಾ ಟಿವಿ ಕಾರ್ಯಕ್ರಮಗಳನ್ನು ನೋಡಬಾರದೆಂದು ಹೇಳುವಂಥ ನೇರವಾದ ಆಜ್ಞೆ ಬೈಬಲಿನಲ್ಲಿ ಇಲ್ಲ. ಆದರೆ ಅಂಥ ವಿಷಯಗಳನ್ನು ನೋಡಬಾರದೆಂಬುದಕ್ಕೆ ನಿರ್ದಿಷ್ಟ ನಿಯಮವೊಂದು ನಮಗೆ ನಿಜವಾಗಿಯೂ ಬೇಕಾಗಿದೆಯೊ? ಈ ವಿಷಯಗಳನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಎಂಬುದು ನಮಗೆ ಗೊತ್ತಿದೆ. ಆತನ ವಾಕ್ಯವು ನಮಗೆ, “ಯೆಹೋವನು . . . ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ” ಎಂದು ಸ್ಪಷ್ಟವಾಗಿ ಹೇಳುತ್ತದೆ. (ಕೀರ್ತನೆ 11:5) “ದೇವರು ಜಾರರಿಗೂ ವ್ಯಭಿಚಾರಿಗಳಿಗೂ ನ್ಯಾಯತೀರಿಸುವನು” ಎಂದು ಸಹ ಅದು ತಿಳಿಸುತ್ತದೆ. (ಇಬ್ರಿಯ 13:4) ಈ ಪ್ರೇರಿತ ಮಾತುಗಳ ಕುರಿತು ಮನನಮಾಡುವ ಮೂಲಕ ನಾವು ಯೆಹೋವನ ಚಿತ್ತವೇನಾಗಿದೆ ಎಂಬುದನ್ನು ಸ್ಪಷ್ಟವಾಗಿ ಗ್ರಹಿಸಬಲ್ಲೆವು. ಆದುದರಿಂದ ನಮ್ಮ ದೇವರು ಹಗೆಮಾಡುವಂಥ ಕೃತ್ಯಗಳ ಕಣ್ಣಿಗೆ ಕಟ್ಟುವಂಥ ಚಿತ್ರಗಳನ್ನು ನೋಡಿ ಆನಂದಿಸದಿರುವ ಆಯ್ಕೆಯನ್ನು ನಾವು ಮಾಡುತ್ತೇವೆ. ಈ ಲೋಕವು ಯಾವುದನ್ನು ಹಾನಿರಹಿತ ಮನೋರಂಜನೆ ಎಂದು ವಂಚನಾತ್ಮಕವಾಗಿ ಪ್ರಸ್ತುತಪಡಿಸಲು ಪ್ರಯತ್ನಿಸುತ್ತದೋ ಅಂಥ ನೈತಿಕ ಭ್ರಷ್ಟತೆಯಿಂದ ನಾವು ದೂರವಿರುವುದು ಯೆಹೋವನಿಗೆ ಮೆಚ್ಚಿಕೆಯಾಗುತ್ತದೆ ಎಂಬುದು ನಮಗೆ ತಿಳಿದಿದೆ. *

10, 11. ನಾವು ಯೆಹೋವನಿಗೆ ವಿಧೇಯತೆ ತೋರಿಸುವ ಮಾರ್ಗಕ್ರಮವನ್ನು ಏಕೆ ಆರಿಸಿಕೊಳ್ಳುತ್ತೇವೆ ಮತ್ತು ಯಾವ ರೀತಿಯ ವಿಧೇಯತೆಯನ್ನು ಆತನಿಗೆ ಸಲ್ಲಿಸುತ್ತೇವೆ?

10 ನಾವು ದೇವರ ಆಜ್ಞೆಗಳನ್ನು ಪಾಲಿಸಲಿಕ್ಕಾಗಿರುವ ಪ್ರಮುಖ ಕಾರಣವು ಏನಾಗಿದೆ? ಯಾವುದು ದೇವರ ಆಲೋಚನಾ ರೀತಿಯೆಂದು ನಮಗೆ ತಿಳಿದಿದೆಯೋ ಅದಕ್ಕೆ ಹೊಂದಿಕೆಯಲ್ಲಿ ನಾವು ಪ್ರತಿ ದಿನ ಜೀವಿಸಲು ಏಕೆ ಬಯಸುತ್ತೇವೆ? ನಾವು ಅಂಥ ಮಾರ್ಗಕ್ರಮವನ್ನು ಆರಿಸಿಕೊಳ್ಳುವುದು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿಯೊ ದೇವರ ಚಿತ್ತವನ್ನು ಅಲಕ್ಷಿಸುವವರು ಅನುಭವಿಸುವಂಥ ಹಾನಿಕರ ಪರಿಣಾಮಗಳಿಂದ ದೂರವಿರಲಿಕ್ಕಾಗಿಯೋ ಅಲ್ಲ. (ಗಲಾತ್ಯ 6:7) ಅದಕ್ಕೆ ಬದಲಾಗಿ, ಯೆಹೋವನಿಗೆ ನಾವು ತೋರಿಸುವ ವಿಧೇಯತೆಯನ್ನು ಆತನ ಮೇಲೆ ನಮಗಿರುವ ಪ್ರೀತಿಯನ್ನು ವ್ಯಕ್ತಪಡಿಸುವ ಅಮೂಲ್ಯ ಅವಕಾಶವಾಗಿ ಪರಿಗಣಿಸುತ್ತೇವೆ. ಒಂದು ಮಗು ತನ್ನ ತಂದೆಯ ಮೆಚ್ಚುಗೆಯನ್ನು ಪಡೆಯಲು ಹಾತೊರೆಯುವಂತೆಯೇ ನಾವು ಸಹ ಯೆಹೋವನ ಅಂಗೀಕಾರವನ್ನು ಪಡೆಯಲು ಬಯಸುತ್ತೇವೆ. (ಕೀರ್ತನೆ 5:12) ಆತನು ನಮ್ಮ ತಂದೆಯಾಗಿದ್ದಾನೆ ಮತ್ತು ನಾವು ಆತನನ್ನು ಪ್ರೀತಿಸುತ್ತೇವೆ. ನಾವು “ಯೆಹೋವನ ಅಂಗೀಕಾರವನ್ನು ಪಡೆಯುವಂಥ” ರೀತಿಯಲ್ಲಿ ಜೀವಿಸುತ್ತಿದ್ದೇವೆ ಎಂದು ತಿಳಿದಿರುವುದರಲ್ಲಿ ಸಿಗುವುದಕ್ಕಿಂತ ಹೆಚ್ಚು ಅಪಾರವಾದ ಆನಂದ ಅಥವಾ ಬಹಳವಾದ ಸಂತೃಪ್ತಿಯು ಇನ್ನಾವುದರಲ್ಲಿಯೂ ಸಿಗುವುದಿಲ್ಲ.—ಜ್ಞಾನೋಕ್ತಿ 12:2, NW.

11 ಆದುದರಿಂದ ನಾವು ಒಲ್ಲದ ಮನಸ್ಸಿನಿಂದ ವಿಧೇಯತೆ ತೋರಿಸುವುದಿಲ್ಲ ಅಥವಾ ಕೆಲವೊಂದು ವಿಷಯಗಳಲ್ಲಿ ಮಾತ್ರ ವಿಧೇಯತೆ ತೋರಿಸುವುದಿಲ್ಲ ಇಲ್ಲವೆ ಅದು ಷರತ್ತಿನಿಂದ ಕೂಡಿದ್ದೂ ಆಗಿರುವುದಿಲ್ಲ. * ನಾವು ಯಾವ ಆಜ್ಞೆಗಳಿಗೆ ವಿಧೇಯರಾಗುವೆವು ಅಥವಾ ಯಾವ ಆಜ್ಞೆಗಳನ್ನು ಅಲಕ್ಷಿಸುವೆವು ಎಂದು ನಿರ್ಧರಿಸುವುದಿಲ್ಲ. ಅಂದರೆ ನಮಗೆ ಅನುಕೂಲವಾಗಿರುವಾಗ ಮಾತ್ರ ವಿಧೇಯರಾಗುವುದಿಲ್ಲ ಇಲ್ಲವೆ ವಿಧೇಯರಾಗುವುದು ಅಷ್ಟು ಕಷ್ಟಕರವಾಗಿಲ್ಲದಿರುವಾಗ ಅಥವಾ ಯಾವುದೇ ರೀತಿಯಲ್ಲಿ ಕಷ್ಟಕರವಾಗಿಲ್ಲದಿರುವಾಗ ಮಾತ್ರ ವಿಧೇಯರಾಗುವುದಿಲ್ಲ. ಅದಕ್ಕೆ ಬದಲಾಗಿ ನಾವು ‘ಹೃದಯದಿಂದ ವಿಧೇಯತೆ’ ತೋರಿಸುವವರಾಗಿದ್ದೇವೆ. (ರೋಮನ್ನರಿಗೆ 6:17) “ನಿನ್ನ ಆಜ್ಞೆಗಳಲ್ಲಿ ಆನಂದಪಡುತ್ತೇನೆ; ಅವು ನನಗೆ ಇಷ್ಟವಾಗಿವೆ” ಎಂದು ಬರೆದ ಬೈಬಲಿನ ಕೀರ್ತನೆಗಾರನಂಥದ್ದೇ ಅನಿಸಿಕೆ ನಮಗೂ ಆಗುತ್ತದೆ. (ಕೀರ್ತನೆ 119:47) ಹೌದು, ಯೆಹೋವನಿಗೆ ವಿಧೇಯರಾಗುವುದು ನಮಗೆ ಇಷ್ಟ. ಆತನು ನಮ್ಮ ಸಂಪೂರ್ಣವಾದ ಮತ್ತು ಯಾವ ಷರತ್ತೂ ಇಲ್ಲದ ವಿಧೇಯತೆಗೆ ಅರ್ಹನಾಗಿದ್ದಾನೆ ಮತ್ತು ಅದನ್ನು ಅಗತ್ಯಪಡಿಸುತ್ತಾನೆ. (ಧರ್ಮೋಪದೇಶಕಾಂಡ 12:32) ಯೆಹೋವನ ವಾಕ್ಯವು ನೋಹನ ವಿಷಯದಲ್ಲಿ ಹೇಳಿದಂತೆಯೇ ನಮ್ಮ ವಿಷಯದಲ್ಲಿಯೂ ಆತನು ಹೇಳಬೇಕೆಂಬುದು ನಮ್ಮ ಬಯಕೆಯಾಗಿದೆ. ಅನೇಕ ದಶಕಗಳ ವರೆಗೆ ವಿಧೇಯನಾಗಿರುವ ಮೂಲಕ ದೇವರಿಗಾಗಿ ಪ್ರೀತಿಯನ್ನು ತೋರಿಸಿದಂಥ ಆ ನಂಬಿಗಸ್ತ ಮೂಲಪಿತನ ಕುರಿತು, “ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು” ಎಂದು ಬೈಬಲ್‌ ಹೇಳುತ್ತದೆ.—ಆದಿಕಾಂಡ 6:22.

12. ನಮ್ಮ ವಿಧೇಯತೆಯು ಯಾವಾಗ ಯೆಹೋವನ ಹೃದಯವನ್ನು ಸಂತೋಷಪಡಿಸುತ್ತದೆ?

12 ನಾವು ಇಷ್ಟಪೂರ್ವಕವಾಗಿ ವಿಧೇಯತೆ ತೋರಿಸುವಾಗ ಯೆಹೋವನಿಗೆ ಹೇಗನಿಸುತ್ತದೆ? ನಾವು ಆತನ ‘[ಹೃದಯವನ್ನು] ಸಂತೋಷಪಡಿಸುತ್ತೇವೆ’ ಎಂದು ಆತನ ವಾಕ್ಯವು ತಿಳಿಸುತ್ತದೆ. (ಜ್ಞಾನೋಕ್ತಿ 27:11) ನಮ್ಮ ವಿಧೇಯತೆಯು ವಿಶ್ವದ ಪರಮಾಧಿಕಾರಿ ಕರ್ತನ ಹೃದಯವನ್ನು ನಿಜವಾಗಿಯೂ ಸಂತೋಷಪಡಿಸುತ್ತದೊ? ಖಂಡಿತವಾಗಿಯೂ ಸಂತೋಷಪಡಿಸುತ್ತದೆ ಮತ್ತು ಇದಕ್ಕೆ ಸಕಾರಣವೂ ಇದೆ! ಯೆಹೋವನು ನಮ್ಮನ್ನು ಸ್ವತಂತ್ರ ನೈತಿಕ ವ್ಯಕ್ತಿಗಳಾಗಿ ಸೃಷ್ಟಿಸಿದನು. ಇದರ ಅರ್ಥ ನಮಗೆ ಆಯ್ಕೆಮಾಡುವ ಸ್ವಾತಂತ್ರ್ಯ ಇದೆ; ನಾವು ದೇವರಿಗೆ ವಿಧೇಯರಾಗುವ ಅಥವಾ ಆತನಿಗೆ ಅವಿಧೇಯರಾಗುವ ಆಯ್ಕೆಯನ್ನು ಮಾಡಸಾಧ್ಯವಿದೆ. (ಧರ್ಮೋಪದೇಶಕಾಂಡ 30:15, 16, 19, 20) ನಾವು ಇಷ್ಟಪೂರ್ವಕವಾಗಿ ಯೆಹೋವನಿಗೆ ವಿಧೇಯರಾಗುವ ಆಯ್ಕೆಯನ್ನು ಮಾಡುವಾಗ ಮತ್ತು ಈ ನಿರ್ಣಯದ ಹಿಂದಿರುವ ಪ್ರಚೋದಕ ಶಕ್ತಿಯು ದೇವರ ಮೇಲಣ ಹೃತ್ಪೂರ್ವಕ ಪ್ರೀತಿಯಾಗಿರುವಾಗ, ನಮ್ಮ ಸ್ವರ್ಗೀಯ ತಂದೆಗೆ ನಾವು ಮಹದಾನಂದವನ್ನೂ ಸಂತೋಷವನ್ನೂ ಉಂಟುಮಾಡುತ್ತೇವೆ. (ಕೀರ್ತನೆ 51:6) ಅಷ್ಟುಮಾತ್ರವಲ್ಲ ಜೀವನದ ಅತ್ಯುತ್ತಮ ಮಾರ್ಗವನ್ನು ಸಹ ನಾವು ಆರಿಸಿಕೊಳ್ಳುತ್ತೇವೆ.

“ಆತನ ಆಜ್ಞೆಗಳು ಭಾರವಾದವುಗಳಲ್ಲ”

13, 14. ದೇವರ “ಆಜ್ಞೆಗಳು ಭಾರವಾದವುಗಳಲ್ಲ” ಎಂದು ಏಕೆ ಹೇಳಸಾಧ್ಯವಿದೆ ಮತ್ತು ಇದನ್ನು ಹೇಗೆ ದೃಷ್ಟಾಂತಿಸಬಹುದು?

13 ಅಪೊಸ್ತಲ ಯೋಹಾನನು ಯೆಹೋವನ ಆವಶ್ಯಕತೆಗಳ ಕುರಿತು ತುಂಬ ಪುನರಾಶ್ವಾಸನೆ ನೀಡುವಂಥ ವಿಷಯವನ್ನು ನಮಗೆ ತಿಳಿಸುತ್ತಾನೆ: “ಆತನ ಆಜ್ಞೆಗಳು ಭಾರವಾದವುಗಳಲ್ಲ.” ಒಂದನೆಯ ಯೋಹಾನ 5:3⁠ರಲ್ಲಿ “ಭಾರವಾದ” ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದದ ಅಕ್ಷರಾರ್ಥವು “ಹೊರೆಯಾದ” ಎಂದಾಗಿದೆ. * ಇನ್ನೊಂದು ಬೈಬಲ್‌ ಭಾಷಾಂತರವು, “ಆತನ ಆಜ್ಞೆಗಳು ನಮ್ಮನ್ನು ಅದುಮಿಬಿಡುವುದಿಲ್ಲ” ಎಂದು ತಿಳಿಸುತ್ತದೆ. (ನ್ಯೂ ಇಂಗ್ಲಿಷ್‌ ಟ್ರಾನ್ಸ್‌ಲೇಷನ್‌) ಯೆಹೋವನು ಅಗತ್ಯಪಡಿಸುವ ವಿಷಯಗಳು ನ್ಯಾಯವಲ್ಲದವುಗಳೊ ಅಥವಾ ಕಠೋರವಾದವುಗಳೊ ಆಗಿರುವುದಿಲ್ಲ. ಆತನ ನಿಯಮಗಳು ಅಪರಿಪೂರ್ಣ ಮಾನವರ ವಿಧೇಯರಾಗುವ ಸಾಮರ್ಥ್ಯಕ್ಕೆ ಮಿಗಿಲಾದವುಗಳಲ್ಲ.

14 ನಾವು ಇದನ್ನು ಈ ರೀತಿಯಲ್ಲಿ ದೃಷ್ಟಾಂತಿಸಬಹುದು. ಒಬ್ಬ ಆಪ್ತ ಮಿತ್ರನು ಮನೆ ಬದಲಾಯಿಸುವಾಗ ತನಗೆ ಸಹಾಯಮಾಡುವಂತೆ ನಿಮ್ಮನ್ನು ಕೇಳಿಕೊಳ್ಳುತ್ತಾನೆ. ಅನೇಕ ಪೆಟ್ಟಿಗೆಗಳನ್ನು ಸಾಗಿಸಲಿಕ್ಕಿದೆ. ಅವುಗಳಲ್ಲಿ ಕೆಲವು ಪೆಟ್ಟಿಗೆಗಳು ಒಬ್ಬನೇ ಸುಲಭದಲ್ಲಿ ಹೊತ್ತುಕೊಂಡು ಹೋಗುವಷ್ಟು ಹಗುರವಾಗಿವೆ, ಆದರೆ ಇತರ ಪೆಟ್ಟಿಗೆಗಳು ಭಾರವಾಗಿವೆ ಮತ್ತು ಅವುಗಳನ್ನು ಎತ್ತಲು ಇಬ್ಬರ ಆವಶ್ಯಕತೆ ಇದೆ. ನಿಮ್ಮ ಮಿತ್ರನು ನೀವು ಸಾಗಿಸಬೇಕಾದ ಪೆಟ್ಟಿಗೆಗಳನ್ನು ಆರಿಸುತ್ತಾನೆ. ನಿಮಗೆ ತುಂಬ ಭಾರವಾಗಬಹುದೆಂದು ಅವನಿಗೆ ತಿಳಿದಿರುವ ಪೆಟ್ಟಿಗೆಗಳನ್ನು ಎತ್ತಿಕೊಂಡು ಹೋಗುವಂತೆ ಅವನು ನಿಮ್ಮನ್ನು ಕೇಳಿಕೊಳ್ಳುವನೊ? ಇಲ್ಲ. ನೀವು ಒಬ್ಬರೇ ಅವುಗಳನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿ ನಿಮಗೆ ನೋವುಮಾಡಿಕೊಳ್ಳುವುದನ್ನು ಅವನು ಬಯಸಲಿಕ್ಕಿಲ್ಲ. ತದ್ರೀತಿಯಲ್ಲಿ, ಪ್ರೀತಿಪೂರ್ಣನೂ ದಯಾಭರಿತನೂ ಆಗಿರುವ ನಮ್ಮ ದೇವರು ಪೂರೈಸಲು ತುಂಬ ಕಷ್ಟಕರವಾಗಿರುವ ಆಜ್ಞೆಗಳನ್ನು ಪಾಲಿಸುವಂತೆ ನಮ್ಮನ್ನು ಕೇಳಿಕೊಳ್ಳುವುದಿಲ್ಲ. (ಧರ್ಮೋಪದೇಶಕಾಂಡ 30:11-14) ಅಷ್ಟು ಭಾರವಾದ ಹೊರೆಯನ್ನು ಹೊತ್ತುಕೊಳ್ಳುವಂತೆ ಆತನು ಎಂದಿಗೂ ನಮ್ಮನ್ನು ಕೇಳಿಕೊಳ್ಳುವುದಿಲ್ಲ. ಯೆಹೋವನು ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ, ಏಕೆಂದರೆ “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.”—ಕೀರ್ತನೆ 103:14.

15. ಯೆಹೋವನ ಆಜ್ಞೆಗಳು ನಮ್ಮ ಪರಮ ಹಿತಕ್ಕಾಗಿವೆಯೆಂದು ನಾವೇಕೆ ದೃಢಭರವಸೆಯಿಂದಿರಬಲ್ಲೆವು?

15 ಯೆಹೋವನ ಆಜ್ಞೆಗಳು ಖಂಡಿತವಾಗಿಯೂ ಭಾರವಾದವುಗಳಲ್ಲ, ಅವು ನಮ್ಮ ಪರಮ ಹಿತಕ್ಕಾಗಿವೆ. (ಯೆಶಾಯ 48:17 ಓದಿ.) ಆದುದರಿಂದಲೇ ಮೋಶೆಯು ಪುರಾತನ ಇಸ್ರಾಯೇಲಿಗೆ, “ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ ಆತನು ಇಂದಿನಂತೆ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿರಬೇಕು” ಎಂದು ಹೇಳಸಾಧ್ಯವಿತ್ತು. (ಧರ್ಮೋಪದೇಶಕಾಂಡ 6:24) ನಮಗೆ ತನ್ನ ನಿಯಮಗಳನ್ನು ಕೊಡುವ ಮೂಲಕ ಯೆಹೋವನಿಗೆ ನಮ್ಮ ವಿಷಯದಲ್ಲಿ ಹಿತಾಸಕ್ತಿಯಿದೆ ಅಂದರೆ ನಮ್ಮ ದೀರ್ಘಾವಧಿಯ ನಿತ್ಯ ಹಿತಕ್ಷೇಮದಲ್ಲಿ ಆತನಿಗೆ ಆಸಕ್ತಿಯಿದೆ ಎಂಬ ದೃಢಭರವಸೆ ನಮಗೂ ಇರಸಾಧ್ಯವಿದೆ. ವಾಸ್ತವದಲ್ಲಿ, ಇದಕ್ಕೆ ವಿರುದ್ಧವಾಗಿ ಯೆಹೋವನು ಕ್ರಿಯೆಗೈಯಲಿಕ್ಕಿಲ್ಲ. ಯೆಹೋವನು ಅಪರಿಮಿತ ವಿವೇಕದ ದೇವರಾಗಿದ್ದಾನೆ. (ರೋಮನ್ನರಿಗೆ 11:33) ಆದುದರಿಂದ ನಮಗೆ ಯಾವುದು ಅತ್ಯುತ್ತಮವಾದದ್ದು ಎಂಬುದು ಆತನಿಗೆ ತಿಳಿದಿದೆ. ಯೆಹೋವನು ಪ್ರೀತಿಯ ಸಾಕಾರಮೂರ್ತಿಯೂ ಆಗಿದ್ದಾನೆ. (1 ಯೋಹಾನ 4:8) ಆತನ ಮೂಲಗುಣವಾಗಿರುವ ಪ್ರೀತಿಯು ಆತನು ಹೇಳುವ ಮತ್ತು ಮಾಡುವ ಸಕಲವನ್ನೂ ಪ್ರಭಾವಿಸುತ್ತದೆ. ಆತನು ತನ್ನ ಸೇವಕರಿಗೆ ಕೊಡುವಂಥ ಎಲ್ಲ ಆಜ್ಞೆಗಳಿಗೆ ಇದೇ ಆಧಾರವಾಗಿದೆ.

16. ಕೀಳ್ಮಟ್ಟದ ಈ ಲೋಕದ ದುಷ್ಪ್ರಭಾವಗಳು ಮತ್ತು ಅಪರಿಪೂರ್ಣ ಶರೀರದ ಪ್ರವೃತ್ತಿಗಳ ಹೊರತೂ ನಾವು ವಿಧೇಯ ಮಾರ್ಗಕ್ರಮವನ್ನು ಬೆನ್ನಟ್ಟಸಾಧ್ಯವಿದೆ ಏಕೆ?

16 ದೇವರಿಗೆ ವಿಧೇಯತೆ ತೋರಿಸುವುದು ಸುಲಭ ಎಂಬುದು ಇದರ ಅರ್ಥವಲ್ಲ. ‘ಕೆಡುಕನ ವಶದಲ್ಲಿ ಬಿದ್ದಿರುವ’ ಈ ಕೀಳ್ಮಟ್ಟದ ಲೋಕದ ದುಷ್ಪ್ರಭಾವಗಳ ವಿರುದ್ಧ ನಾವು ಹೋರಾಡಬೇಕಾಗಿದೆ. (1 ಯೋಹಾನ 5:19) ದೇವರ ನಿಯಮಗಳನ್ನು ಉಲ್ಲಂಘಿಸುವಂತೆ ನಮ್ಮನ್ನು ಪ್ರೇರಿಸುವ ಅಪರಿಪೂರ್ಣ ಶರೀರದೊಂದಿಗೂ ನಾವು ಹೋರಾಟ ನಡೆಸಬೇಕಾಗಿದೆ. (ರೋಮನ್ನರಿಗೆ 7:21-25) ಆದರೂ ದೇವರಿಗಾಗಿರುವ ನಮ್ಮ ಪ್ರೀತಿಯು ಜಯಹೊಂದಬಲ್ಲದು. ತಮ್ಮ ವಿಧೇಯತೆಯ ಮೂಲಕ ತನ್ನ ಕಡೆಗಿರುವ ಪ್ರೀತಿಯನ್ನು ರುಜುಪಡಿಸಲು ಬಯಸುವವರನ್ನು ಯೆಹೋವನು ಆಶೀರ್ವದಿಸುತ್ತಾನೆ. ‘ಪ್ರಭುವಾಗಿರುವ ತನಗೆ ವಿಧೇಯರಾಗುವವರಿಗೆ’ ಆತನು ತನ್ನ ಪವಿತ್ರಾತ್ಮವನ್ನು ಕೊಡುತ್ತಾನೆ. (ಅಪೊಸ್ತಲರ ಕಾರ್ಯಗಳು 5:32) ಈ ಪವಿತ್ರಾತ್ಮವು ನಮ್ಮಲ್ಲಿ ಅತ್ಯುತ್ತಮ ಫಲವನ್ನು ಅಂದರೆ ಒಂದು ವಿಧೇಯ ಮಾರ್ಗಕ್ರಮವನ್ನು ಬೆನ್ನಟ್ಟುವುದರಲ್ಲಿ ನಮಗೆ ಸಹಾಯಮಾಡಬಲ್ಲ ಅಮೂಲ್ಯ ಗುಣಗಳನ್ನು ಉತ್ಪಾದಿಸುತ್ತದೆ.—ಗಲಾತ್ಯ 5:22, 23.

17, 18. (ಎ) ಈ ಪುಸ್ತಕದಲ್ಲಿ ನಾವು ಏನನ್ನು ಪರಿಶೀಲಿಸುವೆವು ಮತ್ತು ನಾವು ಹಾಗೆ ಮಾಡುವಾಗ ಏನನ್ನು ಮನಸ್ಸಿನಲ್ಲಿಡಬೇಕು? (ಬಿ) ಮುಂದಿನ ಅಧ್ಯಾಯದಲ್ಲಿ ಏನನ್ನು ಚರ್ಚಿಸಲಾಗುವುದು?

17 ಈ ಪುಸ್ತಕದಲ್ಲಿ ನಾವು ಯೆಹೋವನ ಮೂಲತತ್ತ್ವಗಳು ಮತ್ತು ನೈತಿಕ ಮಟ್ಟಗಳು ಹಾಗೂ ಆತನ ಚಿತ್ತದ ಕುರಿತಾದ ಇತರ ಅನೇಕ ಸೂಚನೆಗಳನ್ನು ಪರಿಶೀಲಿಸುವೆವು. ಹಾಗೆ ಮಾಡುವಾಗ ನಾವು ಅನೇಕ ಪ್ರಮುಖ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ನಾವು ಯೆಹೋವನ ನಿಯಮಗಳಿಗೆ ಮತ್ತು ಮೂಲತತ್ತ್ವಗಳಿಗೆ ವಿಧೇಯರಾಗುವಂತೆ ಆತನು ನಮ್ಮನ್ನು ಒತ್ತಾಯಿಸುವುದಿಲ್ಲ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳೋಣ; ನಮ್ಮ ಹೃದಯದಿಂದ ಹೊರಹೊಮ್ಮುವ ಇಷ್ಟಪೂರ್ವಕವಾದ ವಿಧೇಯತೆಯನ್ನು ಆತನು ಬಯಸುತ್ತಾನೆ. ಈಗ ಹೇರಳವಾದ ಆಶೀರ್ವಾದಗಳನ್ನು ತರುವ ಮತ್ತು ಭವಿಷ್ಯತ್ತಿನಲ್ಲಿ ನಿತ್ಯಜೀವಕ್ಕೆ ನಡಿಸುವ ರೀತಿಯಲ್ಲಿ ನಾವು ಜೀವಿಸುವಂತೆ ಯೆಹೋವನು ನಮ್ಮನ್ನು ಕೇಳಿಕೊಳ್ಳುತ್ತಿದ್ದಾನೆ ಎಂಬುದನ್ನು ಮರೆಯದಿರೋಣ. ನಮ್ಮ ಹೃತ್ಪೂರ್ವಕವಾದ ವಿಧೇಯತೆಯನ್ನು ನಾವು ಯೆಹೋವನನ್ನು ಎಷ್ಟು ಪ್ರೀತಿಸುತ್ತೇವೆ ಎಂಬುದನ್ನು ತೋರಿಸಲಿಕ್ಕಾಗಿರುವ ಒಂದು ಅಮೂಲ್ಯ ಸದವಕಾಶವಾಗಿ ಪರಿಗಣಿಸೋಣ.

18 ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ವಿವೇಚಿಸಿ ತಿಳಿದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಯೆಹೋವನು ಪ್ರೀತಿಯಿಂದ ಮನಸ್ಸಾಕ್ಷಿಯೆಂಬ ಸಹಜಶಕ್ತಿಯನ್ನು ದಯಪಾಲಿಸಿದ್ದಾನೆ. ಆದರೂ, ನಮ್ಮ ಮನಸ್ಸಾಕ್ಷಿಯು ಭರವಸಾರ್ಹ ಮಾರ್ಗದರ್ಶಿಯಾಗಿರಬೇಕಾದರೆ ಅದನ್ನು ತರಬೇತುಗೊಳಿಸುವ ಅಗತ್ಯವಿದೆ. ಇದನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗುವುದು.

^ ಪ್ಯಾರ. 11 ದೆವ್ವಗಳು ಸಹ ಒಲ್ಲದ ಮನಸ್ಸಿನಿಂದ ವಿಧೇಯವಾಗಬಲ್ಲವು. ದೆವ್ವಹಿಡಿದಿದ್ದ ಕೆಲವು ಜನರಿಂದ ಹೊರಬರುವಂತೆ ಯೇಸು ದೆವ್ವಗಳಿಗೆ ಆಜ್ಞಾಪಿಸಿದಾಗ, ಅವು ಅವನ ಅಧಿಕಾರವನ್ನು ಅಂಗೀಕರಿಸಿ ಇಷ್ಟವಿಲ್ಲದಿದ್ದರೂ ಅವನಿಗೆ ವಿಧೇಯತೆ ತೋರಿಸುವಂತೆ ಒತ್ತಾಯಿಸಲ್ಪಟ್ಟವು.—ಮಾರ್ಕ 1:27; 5:7-13.

^ ಪ್ಯಾರ. 13 ಮತ್ತಾಯ 23:4⁠ರಲ್ಲಿ ಈ ಪದವನ್ನು “ಭಾರವಾದ ಹೊರೆಗಳನ್ನು” ಅಂದರೆ ಶಾಸ್ತ್ರಿಗಳು ಮತ್ತು ಫರಿಸಾಯರು ಜನಸಾಮಾನ್ಯರ ಮೇಲೆ ಹೊರಿಸಿದಂಥ ಅತಿಸೂಕ್ಷ್ಮವಾದ ನಿಯಮಗಳನ್ನು ಹಾಗೂ ಮನುಷ್ಯನಿರ್ಮಿತ ಸಂಪ್ರದಾಯಗಳನ್ನು ವರ್ಣಿಸಲಿಕ್ಕಾಗಿ ಉಪಯೋಗಿಸಲಾಗಿದೆ. ಇದೇ ಪದವನ್ನು ಅಪೊಸ್ತಲರ ಕಾರ್ಯಗಳು 20:29, 30⁠ರಲ್ಲಿ “ಕ್ರೂರವಾದ” ಎಂದು ತರ್ಜುಮೆಮಾಡಲಾಗಿದೆ ಮತ್ತು “ವಕ್ರವಾದ ವಿಷಯಗಳನ್ನು ಮಾತಾಡಿ” ಇತರರನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುವಂಥ ಕಠೋರಮನಸ್ಸಿನ ಧರ್ಮಭ್ರಷ್ಟರಿಗೆ ಇದು ಸೂಚಿತವಾಗಿದೆ.