ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

ದೇವರು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸಿರಿ

ದೇವರು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸಿರಿ

“ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.

1-3. (ಎ) ಅಲ್ಲಗಳೆಯಲಾಗದ ಯಾವ ಸತ್ಯವನ್ನು ಬೈಬಲು ವ್ಯಕ್ತಪಡಿಸುತ್ತದೆ? (ಬಿ) ನಮ್ಮ ಮೇಲೆ ಒಳ್ಳೇ ಪ್ರಭಾವವನ್ನು ಬೀರುವಂಥ ಸ್ನೇಹಿತರನ್ನು ನಾವು ಹೇಗೆ ಆರಿಸಿಕೊಳ್ಳಬಲ್ಲೆವು?

ಒಂದರ್ಥದಲ್ಲಿ ಜನರು ಸ್ಪಂಜಿನಂತಿದ್ದಾರೆ; ತಮ್ಮ ಸುತ್ತಲೂ ಏನೇ ಇರಲಿ ಅದನ್ನು ಹೀರಿಕೊಳ್ಳುವ ಸ್ವಭಾವದವರಾಗಿದ್ದಾರೆ. ನಾವು ಯಾರೊಂದಿಗೆ ಆಪ್ತ ಸಹವಾಸಮಾಡುತ್ತೇವೋ ಅವರ ಮನೋಭಾವಗಳು, ಮಟ್ಟಗಳು ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳನ್ನು ಕೆಲವೊಮ್ಮೆ ನಮಗೆ ಗೊತ್ತಿಲ್ಲದೆಯೂ ಅಳವಡಿಸಿಕೊಳ್ಳುವುದು ತುಂಬ ಸುಲಭ.

2 ಬೈಬಲು “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು” ಎಂದು ಹೇಳುವಾಗ ಅಲ್ಲಗಳೆಯಲಾಗದಂಥ ಒಂದು ಸತ್ಯವನ್ನು ವ್ಯಕ್ತಪಡಿಸುತ್ತದೆ. (ಜ್ಞಾನೋಕ್ತಿ 13:20) ಈ ‘ಸಹವಾಸದ’ ಕುರಿತು ಹೇಳಿಕೆ ನೀಡುತ್ತಾ, ಇದು ‘ಪ್ರೀತಿ ಮತ್ತು ಒಲವನ್ನು ಸೂಚಿಸುವಂಥದ್ದಾಗಿದೆ’ ಎಂದು ಒಂದು ಬೈಬಲ್‌ ಪರಾಮರ್ಶನ ಕೃತಿಯು ಹೇಳುತ್ತದೆ. ನಾವು ಯಾರನ್ನು ಪ್ರೀತಿಸುತ್ತೇವೋ ಅವರನ್ನು ಅನುಕರಿಸುವ ಪ್ರವೃತ್ತಿ ನಮಗಿರುತ್ತದೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೆ? ನಾವು ಯಾರನ್ನು ಪ್ರೀತಿಸುತ್ತೇವೋ ಅವರೊಂದಿಗೆ ಭಾವನಾತ್ಮಕವಾಗಿ ಅಂಟಿಕೊಳ್ಳುವುದರಿಂದ ಅವರು ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರಬಲ್ಲರು. ಅಂದರೆ ನಮ್ಮ ಮೇಲೆ ಒಳ್ಳೇ ಪ್ರಭಾವವನ್ನು ಅಥವಾ ಕೆಟ್ಟ ಪ್ರಭಾವವನ್ನು ಬೀರಬಹುದು.

3 ನಾವು ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ಒಳ್ಳೇ ಪ್ರಭಾವವನ್ನು ಬೀರುವಂಥ ಸ್ನೇಹಿತರನ್ನು ಮಾಡಿಕೊಳ್ಳುವುದು ಅತ್ಯಾವಶ್ಯಕ. ನಾವು ಇದನ್ನು ಹೇಗೆ ಮಾಡಬಲ್ಲೆವು? ಸರಳವಾಗಿ ಹೇಳುವುದಾದರೆ, ದೇವರು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸುವ ಮೂಲಕ, ಆತನ ಸ್ನೇಹಿತರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮೂಲಕ ಇದನ್ನು ಮಾಡಸಾಧ್ಯವಿದೆ. ಸ್ವಲ್ಪ ಆಲೋಚಿಸಿ ನೋಡಿ. ತನ್ನ ಸ್ನೇಹಿತರಾಗುವವರಲ್ಲಿ ಯೆಹೋವನು ಯಾವ ಗುಣಗಳನ್ನು ನಿರೀಕ್ಷಿಸುತ್ತಾನೋ ಅಂಥ ಗುಣಗಳಿರುವವರನ್ನೇ ನಾವು ಆಪ್ತ ಸ್ನೇಹಿತರಾಗಿ ಆರಿಸಿಕೊಳ್ಳಬೇಕಲ್ಲವೆ? ಹಾಗಾದರೆ ದೇವರು ಎಂಥ ರೀತಿಯ ಜನರನ್ನು ಪ್ರೀತಿಸುತ್ತಾನೆ ಎಂಬುದನ್ನು ನಾವೀಗ ಪರಿಶೀಲಿಸೋಣ. ಯೆಹೋವನ ದೃಷ್ಟಿಕೋನವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಟ್ಟುಕೊಂಡವರಾಗಿ ನಾವು ಒಳ್ಳೇ ಪ್ರಭಾವವನ್ನು ಬೀರುವಂಥ ಸಹವಾಸಿಗಳನ್ನು ಆರಿಸಿಕೊಳ್ಳಲು ಹೆಚ್ಚು ಸನ್ನದ್ಧರಾಗಿರುವೆವು.

ದೇವರು ಎಂಥವರನ್ನು ಪ್ರೀತಿಸುತ್ತಾನೆ?

4. ಯೆಹೋವನಿಗೆ ತನ್ನ ಸ್ನೇಹಿತರನ್ನು ಆರಿಸಿಕೊಳ್ಳುವ ವಿಷಯದಲ್ಲಿ ತುಂಬ ಜಾಗ್ರತೆಯನ್ನು ಮಾಡುವ ಹಕ್ಕಿದೆ ಏಕೆ ಮತ್ತು ಯೆಹೋವನು ಅಬ್ರಹಾಮನನ್ನು “ನನ್ನ ಸ್ನೇಹಿತ” ಎಂದು ಸಂಬೋಧಿಸಿದ್ದೇಕೆ?

4 ಸ್ನೇಹಿತರನ್ನು ಆರಿಸಿಕೊಳ್ಳುವ ವಿಷಯದಲ್ಲಿ ಯೆಹೋವನು ತುಂಬ ಜಾಗ್ರತೆ ವಹಿಸುತ್ತಾನೆ. ಹಾಗೆ ಮಾಡುವ ಹಕ್ಕು ಆತನಿಗಿದೆಯಲ್ಲವೆ? ಎಷ್ಟೆಂದರೂ ಆತನು ವಿಶ್ವದ ಪರಮಾಧಿಕಾರಿ ಕರ್ತನಾಗಿದ್ದಾನೆ ಮತ್ತು ಆತನೊಂದಿಗೆ ಸ್ನೇಹಸಂಬಂಧವನ್ನು ಬೆಳೆಸಿಕೊಳ್ಳುವುದು ಎಲ್ಲಕ್ಕಿಂತಲೂ ಮಿಗಿಲಾದ ಸುಯೋಗವಾಗಿದೆ. ಹಾಗಾದರೆ ಆತನು ಎಂಥವರನ್ನು ತನ್ನ ಸ್ನೇಹಿತರಾಗಿ ಆರಿಸಿಕೊಳ್ಳುತ್ತಾನೆ? ತನ್ನಲ್ಲಿ ಭರವಸೆಯಿಡುವವರಿಗೆ ಮತ್ತು ತನ್ನನ್ನು ಸಂಪೂರ್ಣವಾಗಿ ನಂಬುವವರಿಗೆ ಆತನು ಆಪ್ತನಾಗುತ್ತಾನೆ. ಉದಾಹರಣೆಗೆ, ಮೂಲಪಿತನಾಗಿದ್ದ ಅಬ್ರಹಾಮನನ್ನು ಪರಿಗಣಿಸಿರಿ. ಅವನು ತನ್ನ ಗಮನಾರ್ಹ ನಂಬಿಕೆಗೆ ಹೆಸರುವಾಸಿಯಾಗಿದ್ದನು. ಒಬ್ಬ ಮಾನವ ತಂದೆಗೆ ತನ್ನ ಮಗನನ್ನು ಯಜ್ಞವಾಗಿ ಅರ್ಪಿಸುವಂತೆ ಕೇಳಿಕೊಳ್ಳುವಾಗ ಎದುರಾಗುವ ನಂಬಿಕೆಯ ಪರೀಕ್ಷೆಗಿಂತ ದೊಡ್ಡದಾದ ಪರೀಕ್ಷೆಯನ್ನು ಊಹಿಸಿಕೊಳ್ಳುವುದು ತುಂಬ ಕಷ್ಟ. * ಆದರೂ ಅಬ್ರಹಾಮನು “ದೇವರು [ಇಸಾಕನನ್ನು] ಸತ್ತವರೊಳಗಿಂದಲೂ ಎಬ್ಬಿಸಲು ಶಕ್ತನಾಗಿದ್ದಾನೆ” ಎಂದು ಪೂರ್ಣ ನಂಬಿಕೆಯುಳ್ಳವನಾಗಿದ್ದು ಅವನನ್ನು “ಅರ್ಪಿಸುವಷ್ಟರ ಮಟ್ಟಿಗೆ” ಮುಂದುವರಿದನು. (ಇಬ್ರಿಯ 11:17-19) ಅಬ್ರಹಾಮನು ಇಂಥ ನಂಬಿಕೆ ಮತ್ತು ವಿಧೇಯತೆಯನ್ನು ತೋರಿಸಿದ್ದರಿಂದಲೇ ಯೆಹೋವನು ಅವನನ್ನು “ನನ್ನ ಸ್ನೇಹಿತ” ಎಂದು ಪ್ರೀತಿಪೂರ್ಣವಾಗಿ ಸಂಬೋಧಿಸಿ ಮಾತಾಡಿದನು.—ಯೆಶಾಯ 41:8; ಯಾಕೋಬ 2:21-23.

5. ತನಗೆ ನಿಷ್ಠೆಯಿಂದ ವಿಧೇಯರಾಗುವವರ ಬಗ್ಗೆ ಯೆಹೋವನಿಗೆ ಯಾವ ನೋಟವಿದೆ?

5 ಯೆಹೋವನು ನಿಷ್ಠೆಯಿಂದ ಕೂಡಿದ ವಿಧೇಯತೆಗೆ ಬಹಳ ಮಹತ್ವವನ್ನು ಕೊಡುತ್ತಾನೆ. ಎಲ್ಲಕ್ಕಿಂತಲೂ ಮಿಗಿಲಾಗಿ ತನಗೆ ನಿಷ್ಠೆಯನ್ನು ತೋರಿಸಲು ಬಯಸುವವರನ್ನು ಆತನು ಪ್ರೀತಿಸುತ್ತಾನೆ. (2 ಸಮುವೇಲ 22:26 ಓದಿ.) ಈ ಪುಸ್ತಕದ ಅಧ್ಯಾಯ 1ರಲ್ಲಿ ನಾವು ನೋಡಿದಂತೆ ಪ್ರೀತಿಯಿಂದ ತನಗೆ ವಿಧೇಯರಾಗಲು ಆರಿಸಿಕೊಳ್ಳುವವರು ಯೆಹೋವನಿಗೆ ತುಂಬ ಪ್ರಿಯರಾಗಿದ್ದಾರೆ. “ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು” ಎಂದು ಜ್ಞಾನೋಕ್ತಿ 3:32 ತಿಳಿಸುತ್ತದೆ. ಯೆಹೋವ ದೇವರು ಕೇಳಿಕೊಳ್ಳುವಂಥದ್ದನ್ನು ನಿಷ್ಠೆಯಿಂದ ಮಾಡುವವರಿಗೆ ಆತನು ಈ ದಯಾಭರಿತ ಆಮಂತ್ರಣವನ್ನು ನೀಡುತ್ತಾನೆ: ಅವರು ಆತನ “ಗುಡಾರದಲ್ಲಿ” ಅತಿಥಿಗಳಾಗಿರಸಾಧ್ಯವಿದೆ ಅಂದರೆ ಆತನನ್ನು ಆರಾಧಿಸುವ ಮತ್ತು ಪ್ರಾರ್ಥನೆಯಲ್ಲಿ ಆತನನ್ನು ಮುಕ್ತವಾಗಿ ಸಮೀಪಿಸುವ ಆಹ್ವಾನ ಅವರಿಗಿದೆ.—ಕೀರ್ತನೆ 15:1-5.

6. ನಾವು ಯೇಸುವನ್ನು ಪ್ರೀತಿಸುತ್ತೇವೆ ಎಂಬುದನ್ನು ಹೇಗೆ ತೋರಿಸಬಲ್ಲೆವು ಮತ್ತು ತನ್ನ ಮಗನನ್ನು ಪ್ರೀತಿಸುವವರ ಕುರಿತು ಯೆಹೋವನಿಗೆ ಹೇಗನಿಸುತ್ತದೆ?

6 ಯೆಹೋವನು ಯಾರು ತನ್ನ ಏಕೈಕಜಾತ ಪುತ್ರನಾದ ಯೇಸುವನ್ನು ಪ್ರೀತಿಸುತ್ತಾರೋ ಅವರನ್ನು ಪ್ರೀತಿಸುತ್ತಾನೆ. ಯೇಸು ಹೇಳಿದ್ದು: “ಯಾರಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವನು ಮತ್ತು ನನ್ನ ತಂದೆಯು ಅವನನ್ನು ಪ್ರೀತಿಸುವನು; ನಾವು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು.” (ಯೋಹಾನ 14:23) ನಾವು ಯೇಸುವಿನ ಮೇಲಣ ನಮ್ಮ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು? ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಒಳಗೊಂಡು ಅವನ ಆಜ್ಞೆಗಳನ್ನೆಲ್ಲ ಕೈಕೊಂಡು ನಡೆಯುವ ಮೂಲಕವೇ ಎಂಬುದಂತೂ ಖಂಡಿತ. (ಮತ್ತಾಯ 28:19, 20; ಯೋಹಾನ 14:15, 21) ಅಪರಿಪೂರ್ಣ ಮಾನವರಾಗಿ ನಮ್ಮಿಂದ ಸಾಧ್ಯವಿರುವಷ್ಟು ಮಟ್ಟಿಗೆ ನಮ್ಮ ನಡೆನುಡಿಗಳಲ್ಲಿ ಯೇಸುವಿನ ‘ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಾಗಲೂ’ ಅವನ ಮೇಲಣ ನಮ್ಮ ಪ್ರೀತಿಯನ್ನು ನಾವು ತೋರಿಸುತ್ತೇವೆ. (1 ಪೇತ್ರ 2:21) ತನ್ನ ಮಗನ ಕಡೆಗಿರುವ ಪ್ರೀತಿಯು ಕ್ರಿಸ್ತಸದೃಶ ಮಾರ್ಗವನ್ನು ಬೆನ್ನಟ್ಟುವಂತೆ ಯಾರನ್ನು ಪ್ರಚೋದಿಸುತ್ತದೋ ಅವರ ಪ್ರಯತ್ನಗಳಿಂದಾಗಿ ಯೆಹೋವನ ಹೃದಯವು ಪ್ರಸನ್ನಗೊಳ್ಳುತ್ತದೆ.

7. ಯೆಹೋವನ ಸ್ನೇಹಿತರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ವಿವೇಕಪ್ರದವಾಗಿದೆ ಏಕೆ?

7 ಯೆಹೋವನು ತನ್ನ ಸ್ನೇಹಿತರಲ್ಲಿ ಅಪೇಕ್ಷಿಸುವಂಥ ಗುಣಗಳಲ್ಲಿ ನಂಬಿಕೆ, ನಿಷ್ಠೆ, ವಿಧೇಯತೆ ಮತ್ತು ಯೇಸುವಿಗಾಗಿಯೂ ಅವನ ಮಾರ್ಗಗಳಿಗಾಗಿಯೂ ಇರುವ ಪ್ರೀತಿ ಸೇರಿದೆ. ನಮ್ಮಲ್ಲಿ ಪ್ರತಿಯೊಬ್ಬರೂ ಸ್ವತಃ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ಇಂಥ ಗುಣಗಳು ಮತ್ತು ರೀತಿನೀತಿಗಳು ನನ್ನ ಆಪ್ತ ಸ್ನೇಹಿತರಲ್ಲಿ ಕಂಡುಬರುತ್ತವೊ? ನಾನು ಯೆಹೋವನ ಸ್ನೇಹಿತರನ್ನು ನನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದೇನೊ?’ ಹೀಗೆ ಮಾಡುವುದು ವಿವೇಕಪ್ರದವಾಗಿದೆ. ದೈವಿಕ ಗುಣಗಳನ್ನು ಬೆಳೆಸಿಕೊಳ್ಳುವ ಮತ್ತು ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಸಾರುವ ವ್ಯಕ್ತಿಗಳು ನಮ್ಮ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಾ, ದೇವರನ್ನು ಸಂತೋಷಪಡಿಸುವ ನಮ್ಮ ದೃಢನಿರ್ಧಾರಕ್ಕನುಸಾರ ಜೀವಿಸುವಂತೆ ನಮ್ಮನ್ನು ಪ್ರಭಾವಿಸಬಲ್ಲರು.—“ ಯಾರು ಒಳ್ಳೇ ಸ್ನೇಹಿತರು?” ಎಂಬ ಚೌಕವನ್ನು ನೋಡಿ.

ಬೈಬಲಿನ ಒಂದು ಉದಾಹರಣೆಯಿಂದ ಪಾಠವನ್ನು ಕಲಿಯುವುದು

8. (ಎ) ನೊವೊಮಿ ಮತ್ತು ರೂತ್‌, (ಬಿ) ಮೂವರು ಇಬ್ರಿಯ ಯುವಕರು ಮತ್ತು (ಸಿ) ಪೌಲ ಹಾಗೂ ತಿಮೊಥೆಯನ ನಡುವೆ ಇದ್ದ ಸ್ನೇಹಸಂಬಂಧದ ವಿಷಯದಲ್ಲಿ ನಿಮಗೆ ಯಾವುದು ತುಂಬ ಹಿಡಿಸುತ್ತದೆ?

8 ಒಳ್ಳೇ ಸ್ನೇಹಿತರನ್ನು ಆರಿಸಿಕೊಂಡದ್ದರಿಂದ ಪ್ರಯೋಜನವನ್ನು ಪಡೆದುಕೊಂಡಂಥ ಅನೇಕರ ಉದಾಹರಣೆಗಳು ಶಾಸ್ತ್ರಗ್ರಂಥದಲ್ಲಿವೆ. ನೊವೊಮಿ ಮತ್ತು ಅವಳ ಸೊಸೆಯಾಗಿದ್ದ ರೂತಳ ನಡುವೆ, ಬಾಬೆಲಿನಲ್ಲಿದ್ದಾಗ ಗಾಢವಾದ ಸ್ನೇಹವನ್ನು ಬೆಳೆಸಿಕೊಂಡಿದ್ದ ಮೂವರು ಇಬ್ರಿಯ ಯುವಕರ ನಡುವೆ ಮತ್ತು ಪೌಲ ಹಾಗೂ ತಿಮೊಥೆಯರ ನಡುವೆ ಇದ್ದ ಸ್ನೇಹಸಂಬಂಧದ ಕುರಿತು ನೀವು ಓದಸಾಧ್ಯವಿದೆ. (ರೂತಳು 1:16; ದಾನಿಯೇಲ 3:17, 18; 1 ಕೊರಿಂಥ 4:17; ಫಿಲಿಪ್ಪಿ 2:20-22) ಆದರೆ ನಾವೀಗ ಗಮನಾರ್ಹವಾದ ಇನ್ನೊಂದು ಉದಾಹರಣೆಯ ಮೇಲೆ ಗಮನವನ್ನು ಕೇಂದ್ರೀಕರಿಸೋಣ: ಇದು ದಾವೀದ ಮತ್ತು ಯೋನಾತಾನರ ನಡುವೆ ಇದ್ದ ಸ್ನೇಹವಾಗಿದೆ.

9, 10. ದಾವೀದ ಮತ್ತು ಯೋನಾತಾನರ ನಡುವೆ ಇದ್ದ ಸ್ನೇಹಕ್ಕೆ ಯಾವುದು ಆಧಾರವಾಗಿತ್ತು?

9 ದಾವೀದನು ಗೊಲ್ಯಾತನನ್ನು ಹತಿಸಿದ ಬಳಿಕ, “ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ಇವನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು” ಎಂದು ಬೈಬಲ್‌ ತಿಳಿಸುತ್ತದೆ. (1 ಸಮುವೇಲ 18:1) ಹೀಗೆ ಆರಂಭವಾದ ಬೇರ್ಪಡಿಸಲಾಗದ ಸ್ನೇಹವು ಸಾಕಷ್ಟು ವಯೋವ್ಯತ್ಯಾಸದ ಹೊರತೂ ಯೋನಾತಾನನು ಕದನರಂಗದಲ್ಲಿ ಸಾಯುವ ತನಕ ಮುಂದುವರಿಯಿತು. * (2 ಸಮುವೇಲ 1:26) ಈ ಇಬ್ಬರು ಸ್ನೇಹಿತರ ನಡುವೆ ಬೆಸೆದ ಅತಿ ಆಪ್ತ ಬಂಧಕ್ಕೆ ಯಾವುದು ಆಧಾರವಾಗಿತ್ತು?

10 ದಾವೀದ ಯೋನಾತಾನರಿಗೆ ದೇವರ ಮೇಲಿದ್ದ ಪ್ರೀತಿ ಮತ್ತು ಆತನಿಗೆ ನಂಬಿಗಸ್ತರಾಗಿ ಉಳಿಯಲು ಅವರಿಗಿದ್ದ ಕಟ್ಟಾಸೆಯು ಅವರಿಬ್ಬರನ್ನು ಆಪ್ತ ಸಂಬಂಧಕ್ಕೆ ತಂದಿತ್ತು. ದೇವರನ್ನು ಸಂತೋಷಪಡಿಸುವ ಬಯಕೆಯು ಈ ಇಬ್ಬರೂ ಪುರುಷರಲ್ಲಿ ಇದ್ದುದರಿಂದ ಅವರಲ್ಲಿ ಐಕ್ಯಭಾವ ಉಂಟಾಯಿತು. ಇವರನ್ನು ಪರಸ್ಪರ ಆತ್ಮೀಯರನ್ನಾಗಿ ಮಾಡುವ ಗುಣಗಳು ಇಬ್ಬರಲ್ಲಿಯೂ ಇದ್ದವು. ಯೆಹೋವನ ಹೆಸರನ್ನು ನಿರ್ಭಯವಾಗಿ ಸಮರ್ಥಿಸಿದಂಥ ಯುವಕನ ಧೈರ್ಯ ಮತ್ತು ಹುರುಪನ್ನು ನೋಡಿ ಯೋನಾತಾನನು ಪ್ರಭಾವಿತನಾದನು ಎಂಬುದರಲ್ಲಿ ಸಂದೇಹವಿಲ್ಲ. ಯೆಹೋವನ ಏರ್ಪಾಡುಗಳನ್ನು ನಿಷ್ಠೆಯಿಂದ ಬೆಂಬಲಿಸಿದ ಮತ್ತು ನಿಸ್ವಾರ್ಥಭಾವದಿಂದ ತನ್ನ ಅಭಿರುಚಿಗಳಿಗಿಂತಲೂ ದಾವೀದನ ಅಭಿರುಚಿಗಳಿಗೆ ಪ್ರಥಮ ಸ್ಥಾನವನ್ನು ನೀಡಿದಂಥ ಹಿರಿಯನಾದ ಯೋನಾತಾನನನ್ನು ದಾವೀದನು ತುಂಬ ಗೌರವಿಸಿದನು ಎಂಬುದಂತೂ ನಿಸ್ಸಂಶಯ. ಉದಾಹರಣೆಗೆ, ಯೋನಾತಾನನ ತಂದೆಯಾಗಿದ್ದ ದುಷ್ಟ ರಾಜ ಸೌಲನ ಕೋಪದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅರಣ್ಯದಲ್ಲಿ ಅಲೆಮಾರಿಯಾಗಿ ಜೀವಿಸುತ್ತಿದ್ದ ದಾವೀದನು ತನ್ನ ಜೀವನದ ಅತಿ ದುಃಖಕರ ಸನ್ನಿವೇಶದಲ್ಲಿದ್ದಾಗ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿ. ಗಮನಾರ್ಹ ರೀತಿಯಲ್ಲಿ ನಿಷ್ಠೆಯನ್ನು ತೋರಿಸುತ್ತಾ ಯೋನಾತಾನನು ಮೊದಲ ಹೆಜ್ಜೆಯನ್ನು ತೆಗೆದುಕೊಂಡು ‘ದೇವರಲ್ಲಿ ಅವನನ್ನು ಬಲಪಡಿಸಲಿಕ್ಕಾಗಿ’ ದಾವೀದನ ಬಳಿಗೆ ಹೋದನು. (1 ಸಮುವೇಲ 23:17) ತನ್ನ ಆತ್ಮೀಯ ಸ್ನೇಹಿತನು ತನ್ನ ಬಳಿಗೆ ಬಂದು ಬೆಂಬಲ ಮತ್ತು ಉತ್ತೇಜನವನ್ನು ಕೊಟ್ಟಾಗ ದಾವೀದನಿಗೆ ಹೇಗನಿಸಿದ್ದಿರಬೇಕು ಎಂಬುದನ್ನು ಊಹಿಸಿಕೊಳ್ಳಿರಿ! *

11. ಸ್ನೇಹದ ವಿಷಯದಲ್ಲಿ ಯೋನಾತಾನ ಮತ್ತು ದಾವೀದರ ಉದಾಹರಣೆಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

11 ಯೋನಾತಾನ ಮತ್ತು ದಾವೀದರ ಉದಾಹರಣೆಯಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ? ಎಲ್ಲಕ್ಕಿಂತಲೂ ಮಿಗಿಲಾಗಿ, ಸ್ನೇಹಿತರಲ್ಲಿ ಸಾಮಾನ್ಯವಾಗಿ ಇರಬೇಕಾದ ಪ್ರಾಮುಖ್ಯ ಅಂಶವು ಆಧ್ಯಾತ್ಮಿಕ ಮೌಲ್ಯಗಳೇ ಆಗಿವೆ ಎಂಬುದು ನಮಗೆ ಇದರಿಂದ ತಿಳಿದುಬರುತ್ತದೆ. ನಮ್ಮಂತಹದ್ದೇ ನಂಬಿಕೆಗಳು, ನೈತಿಕ ಮೌಲ್ಯಗಳು ಮತ್ತು ದೇವರಿಗೆ ನಂಬಿಗಸ್ತರಾಗಿ ಉಳಿಯುವ ಬಯಕೆಯಿರುವವರೊಂದಿಗೆ ನಾವು ಆಪ್ತರಾಗುವಾಗ, ಪ್ರೋತ್ಸಾಹದಾಯಕವಾದ ಮತ್ತು ಭಕ್ತಿವೃದ್ಧಿಮಾಡುವಂಥ ವಿಚಾರಗಳು, ಭಾವನೆಗಳು ಮತ್ತು ಅನುಭವಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಸಾಧ್ಯವಿದೆ. (ರೋಮನ್ನರಿಗೆ 1:11, 12 ಓದಿ.) ಆಧ್ಯಾತ್ಮಿಕ ಮನೋಭಾವವಿರುವ ಇಂಥ ಸಹವಾಸಿಗಳು ನಮಗೆ ಜೊತೆ ಆರಾಧಕರ ನಡುವೆ ಸಿಗುತ್ತಾರೆ. ಆದರೂ ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಬರುವ ಪ್ರತಿಯೊಬ್ಬರೂ ಒಳ್ಳೇ ಸಹವಾಸಿಯಾಗಿದ್ದಾರೆ ಎಂಬುದು ಇದರ ಅರ್ಥವೊ? ಹಾಗೆಂದೇನಿಲ್ಲ.

ಆಪ್ತ ಸ್ನೇಹಿತರನ್ನು ಆರಿಸಿಕೊಳ್ಳುವುದು

12, 13. (ಎ) ಜೊತೆ ಕ್ರೈಸ್ತರ ನಡುವೆ ಸಹ ಸಹವಾಸಿಗಳನ್ನು ಆರಿಸಿಕೊಳ್ಳುವಾಗ ನಾವು ಏಕೆ ಜಾಗ್ರತೆವಹಿಸಬೇಕು? (ಬಿ) ಪ್ರಥಮ ಶತಮಾನದ ಸಭೆಗಳು ಯಾವ ಪಂಥಾಹ್ವಾನವನ್ನು ಎದುರಿಸಿದವು ಮತ್ತು ಇದು ಪೌಲನು ಯಾವ ಬಲವಾದ ಎಚ್ಚರಿಕೆಗಳನ್ನು ನೀಡುವಂತೆ ಪ್ರಚೋದಿಸಿತು?

12 ನಮ್ಮ ಸಹವಾಸಿಗಳು ಆಧ್ಯಾತ್ಮಿಕವಾಗಿ ಭಕ್ತಿವೃದ್ಧಿ ಮಾಡುವಂಥವರಾಗಿರಬೇಕಾದರೆ ಸಭೆಯೊಳಗೆ ಸಹ ನಾವು ಸ್ನೇಹಿತರನ್ನು ಜಾಗ್ರತೆಯಿಂದ ಆರಿಸಿಕೊಳ್ಳಬೇಕಾಗಿದೆ. ಇದು ನಮ್ಮನ್ನು ಆಶ್ಚರ್ಯಗೊಳಿಸಬೇಕೊ? ಹಾಗೇನಿಲ್ಲ. ಮರದ ಯಾವುದಾದರೊಂದು ಕಾಯಿಯು ಹಣ್ಣಾಗಲು ಹೆಚ್ಚುಕಾಲ ಹಿಡಿಯುವಂತೆಯೇ ಸಭೆಯಲ್ಲಿರುವ ಕೆಲವು ಕ್ರೈಸ್ತರಿಗೆ ಆಧ್ಯಾತ್ಮಿಕ ಪ್ರೌಢತೆಯನ್ನು ತಲಪಲು ಹೆಚ್ಚುಕಾಲ ಹಿಡಿಯಬಹುದು. ಆದುದರಿಂದ ಪ್ರತಿಯೊಂದು ಸಭೆಯಲ್ಲಿ ಆಧ್ಯಾತ್ಮಿಕ ಬೆಳವಣಿಗೆಯ ಭಿನ್ನ ಹಂತಗಳಲ್ಲಿರುವ ಕ್ರೈಸ್ತರನ್ನು ನಾವು ಕಂಡುಕೊಳ್ಳುತ್ತೇವೆ. (ಇಬ್ರಿಯ 5:12–6:3) ನಾವು ಹೊಸಬರಿಗೆ ಅಥವಾ ಬಲಹೀನರಿಗೆ ತಾಳ್ಮೆ ಮತ್ತು ಪ್ರೀತಿಯನ್ನು ತೋರಿಸುತ್ತೇವೆ, ಏಕೆಂದರೆ ಆಧ್ಯಾತ್ಮಿಕವಾಗಿ ಬೆಳೆಯುವಂತೆ ಅವರಿಗೆ ಸಹಾಯಮಾಡಲು ನಾವು ಬಯಸುತ್ತೇವೆ ಎಂಬುದು ನಿಶ್ಚಯ.—ರೋಮನ್ನರಿಗೆ 14:1; 15:1.

13 ಕೆಲವೊಮ್ಮೆ ಸಭೆಯಲ್ಲಿರುವಂಥ ಒಂದು ಸನ್ನಿವೇಶವು ನಮ್ಮ ಸಹವಾಸಿಗಳ ವಿಷಯದಲ್ಲಿ ನಾವು ಎಚ್ಚರಿಕೆ ವಹಿಸುವಂತೆ ಕೇಳಿಕೊಳ್ಳಬಹುದು. ಕೆಲವರು ಸಂಶಯಾಸ್ಪದವಾದ ನಡವಳಿಕೆಯಲ್ಲಿ ಒಳಗೂಡಬಹುದು. ಇತರರು ಕಹಿಭಾವ ಅಥವಾ ದೂರುಹೊರಿಸುತ್ತಾ ಇರುವ ಮನೋಭಾವವನ್ನು ಬೆಳೆಸಿಕೊಳ್ಳಬಹುದು. ಸಾ.ಶ. ಪ್ರಥಮ ಶತಮಾನದಲ್ಲಿದ್ದ ಸಭೆಗಳು ತದ್ರೀತಿಯ ಪಂಥಾಹ್ವಾನವನ್ನು ಎದುರಿಸಿದವು. ಸಭೆಯ ಹೆಚ್ಚಿನ ಸದಸ್ಯರು ನಂಬಿಗಸ್ತರಾಗಿದ್ದರೂ ಕೆಲವರು ಯೋಗ್ಯವಾಗಿ ನಡೆದುಕೊಳ್ಳುತ್ತಿರಲಿಲ್ಲ. ಕೊರಿಂಥ ಸಭೆಯಲ್ಲಿದ್ದ ಕೆಲವರು ಕೆಲವು ಕ್ರೈಸ್ತ ಬೋಧನೆಗಳನ್ನು ಸಮರ್ಥಿಸದ ಕಾರಣ ಅಪೊಸ್ತಲ ಪೌಲನು ಆ ಸಭೆಗೆ, “ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ” ಎಂದು ಎಚ್ಚರಿಸಿದನು. (1 ಕೊರಿಂಥ 15:12, 33) ಜೊತೆ ಕ್ರೈಸ್ತರ ನಡುವೆ ಸಹ ಗೌರವಾರ್ಹವಾಗಿ ವರ್ತಿಸದಂಥ ಕೆಲವರು ಇರಬಹುದು ಎಂದು ಪೌಲನು ತಿಮೊಥೆಯನಿಗೆ ಎಚ್ಚರಿಕೆ ನೀಡಿದನು. ಇಂಥವರನ್ನು ತನ್ನ ಆಪ್ತ ಸ್ನೇಹಿತರಾಗಿ ಮಾಡಿಕೊಳ್ಳದೆ ಅವರಿಂದ ದೂರವಿರುವಂತೆ ತಿಮೊಥೆಯನಿಗೆ ಹೇಳಲಾಯಿತು.—2 ತಿಮೊಥೆಯ 2:20-22 ಓದಿ.

14. ಸಹವಾಸಗಳ ಕುರಿತಾದ ಪೌಲನ ಎಚ್ಚರಿಕೆಯ ಮಾತುಗಳ ಹಿಂದಿರುವ ಮೂಲತತ್ತ್ವವನ್ನು ನಾವು ಹೇಗೆ ಅನ್ವಯಿಸಿಕೊಳ್ಳಸಾಧ್ಯವಿದೆ?

14 ಪೌಲನ ಎಚ್ಚರಿಕೆಯ ಮಾತುಗಳ ಹಿಂದಿರುವ ಮೂಲತತ್ತ್ವವನ್ನು ನಾವು ಹೇಗೆ ಅನ್ವಯಿಸಿಕೊಳ್ಳಬಲ್ಲೆವು? ಭ್ರಷ್ಟಕರ ಪ್ರಭಾವವನ್ನು ಬೀರಸಾಧ್ಯವಿರುವಂಥ ಯಾರೊಂದಿಗೂ—ಅವರು ಸಭೆಯ ಒಳಗಿರಬಹುದು ಅಥವಾ ಹೊರಗಿರಬಹುದು—ನಿಕಟವಾದ ಸಹವಾಸವನ್ನು ಮಾಡದಿರುವ ಮೂಲಕವೇ. (2 ಥೆಸಲೊನೀಕ 3:6, 7, 14) ನಮ್ಮ ಆಧ್ಯಾತ್ಮಿಕತೆಯನ್ನು ನಾವು ಸಂರಕ್ಷಿಸುವ ಅಗತ್ಯವಿದೆ. ಒಂದು ಸ್ಪಂಜಿನಂತೆ ನಾವು ನಮ್ಮ ಆಪ್ತ ಸ್ನೇಹಿತರ ಮನೋಭಾವಗಳು ಮತ್ತು ಮಾರ್ಗಗಳನ್ನು ಹೀರಿಕೊಳ್ಳುತ್ತೇವೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಿರಿ. ನಾವು ಒಂದು ಸ್ಪಂಜನ್ನು ಗಲೀಜು ನೀರಿನಲ್ಲಿ ಅದ್ದಿ ಅದರಲ್ಲಿ ಶುದ್ಧವಾದ ನೀರು ತುಂಬಿಕೊಳ್ಳುವಂತೆ ನಿರೀಕ್ಷಿಸುವುದಿಲ್ಲ; ಅದೇ ರೀತಿಯಲ್ಲಿ ನಾವು ನಕಾರಾತ್ಮಕ ಪ್ರಭಾವವನ್ನು ಬೀರುವಂಥವರೊಂದಿಗೆ ಸಹವಾಸಮಾಡಿ ಸಕಾರಾತ್ಮಕ ವಿಷಯಗಳನ್ನು ಹೀರಿಕೊಳ್ಳುವಂತೆ ನಿರೀಕ್ಷಿಸಸಾಧ್ಯವಿಲ್ಲ.—1 ಕೊರಿಂಥ 5:6.

ಜೊತೆ ಆರಾಧಕರ ನಡುವೆ ನೀವು ಒಳ್ಳೇ ಸ್ನೇಹಿತರನ್ನು ಕಂಡುಕೊಳ್ಳಬಲ್ಲಿರಿ

15. ಸಭೆಯಲ್ಲಿ ಆಧ್ಯಾತ್ಮಿಕ ಮನೋಭಾವವಿರುವ ಸ್ನೇಹಿತರನ್ನು ಕಂಡುಕೊಳ್ಳಲು ನೀವೇನು ಮಾಡಬಲ್ಲಿರಿ?

15 ಸಂತೋಷಕರವಾಗಿಯೇ, ಜೊತೆ ಆರಾಧಕರ ನಡುವೆ ಒಳ್ಳೇ ಸ್ನೇಹಿತರನ್ನು ಕಂಡುಕೊಳ್ಳುವ ಸಾಧ್ಯತೆ ಬಹಳಷ್ಟಿದೆ ಎಂಬುದಂತೂ ಖಂಡಿತ. (ಕೀರ್ತನೆ 133:1) ನೀವು ಸಭೆಯಲ್ಲಿ ಆಧ್ಯಾತ್ಮಿಕ ಮನೋಭಾವವಿರುವ ಸ್ನೇಹಿತರನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? ನೀವು ದೈವಿಕ ಗುಣಗಳನ್ನು ಮತ್ತು ರೀತಿನೀತಿಗಳನ್ನು ಬೆಳೆಸಿಕೊಳ್ಳುತ್ತಾ ಹೋದಂತೆ ಅದೇ ರೀತಿಯ ಮನೋಭಾವವುಳ್ಳ ಇತರರು ನಿಮ್ಮ ಕಡೆಗೆ ಸೆಳೆಯಲ್ಪಡುವರು ಎಂಬುದರಲ್ಲಿ ಸಂದೇಹವಿಲ್ಲ. ಅದೇ ಸಮಯದಲ್ಲಿ ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲಿಕ್ಕಾಗಿ ಮುನ್ನೆಜ್ಜೆಯನ್ನು ತೆಗೆದುಕೊಳ್ಳಲು ಕೆಲವು ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳುವ ಅಗತ್ಯವಿರಬಹುದು. (“ ನಾವು ಒಳ್ಳೇ ಸ್ನೇಹಿತರನ್ನು ಮಾಡಿಕೊಂಡ ವಿಧ” ಎಂಬ ಚೌಕವನ್ನು ನೋಡಿ.) ನೀವು ತೋರಿಸಲು ಬಯಸುವ ಗುಣಗಳನ್ನೇ ತೋರಿಸುವಂಥವರಿಗಾಗಿ ಹುಡುಕಿರಿ. ‘ವಿಶಾಲಗೊಳ್ಳುವಂತೆ’ ಕೊಡಲ್ಪಟ್ಟಿರುವ ಬೈಬಲ್‌ ಸಲಹೆಯನ್ನು ಪಾಲಿಸುತ್ತಾ ಜಾತಿ, ರಾಷ್ಟ್ರ ಅಥವಾ ಸಂಸ್ಕೃತಿ ಎಂಬ ಭೇದವಿಲ್ಲದೆ ಜೊತೆ ಆರಾಧಕರೊಂದಿಗೆ ಸ್ನೇಹಸಂಬಂಧವನ್ನು ಬೆಸೆಯಲು ಪ್ರಯತ್ನಿಸಿರಿ. (2 ಕೊರಿಂಥ 6:13; 1 ಪೇತ್ರ 2:17 ಓದಿ.) ನಿಮ್ಮ ವಯಸ್ಸಿನವರೊಂದಿಗೆ ಮಾತ್ರವೇ ಸಹವಾಸಮಾಡಬೇಡಿ. ಯೋನಾತಾನನು ದಾವೀದನಿಗಿಂತ ತುಂಬ ದೊಡ್ಡವನಾಗಿದ್ದನು ಎಂಬುದನ್ನು ನೆನಪಿನಲ್ಲಿಡಿ. ವಯಸ್ಸಿನಲ್ಲಿ ದೊಡ್ಡವರಾಗಿರುವ ಅನೇಕರು ತಮ್ಮ ಅನುಭವ ಹಾಗೂ ವಿವೇಕದಿಂದ ಸ್ನೇಹವನ್ನು ಸಂಪದ್ಭರಿತಗೊಳಿಸಬಲ್ಲರು.

ಸಮಸ್ಯೆಗಳು ಎದುರಾಗುವಾಗ

16, 17. ಒಬ್ಬ ಜೊತೆ ಆರಾಧಕನು ಯಾವುದಾದರೊಂದು ರೀತಿಯಲ್ಲಿ ನಮಗೆ ನೋವನ್ನುಂಟುಮಾಡುವಾಗ ನಾವು ಸಭೆಯಿಂದ ದೂರ ಉಳಿಯಬಾರದೇಕೆ?

16 ಸಭೆಯಲ್ಲಿರುವವರು ಬೇರೆ ಬೇರೆ ರೀತಿಯ ವ್ಯಕ್ತಿತ್ವವುಳ್ಳವರಾಗಿದ್ದು ಭಿನ್ನ ಹಿನ್ನೆಲೆಗಳಿಂದ ಬಂದವರಾಗಿರುವುದರಿಂದ ಆಗಿಂದಾಗ್ಗೆ ಸಮಸ್ಯೆಗಳು ಎದುರಾಗಬಹುದು. ಒಬ್ಬ ಜೊತೆ ವಿಶ್ವಾಸಿಯು ನಮ್ಮ ಭಾವನೆಗಳನ್ನು ನೋಯಿಸುವಂಥ ರೀತಿಯಲ್ಲಿ ಮಾತಾಡಬಹುದು ಅಥವಾ ವರ್ತಿಸಬಹುದು. (ಜ್ಞಾನೋಕ್ತಿ 12:18) ಕೆಲವೊಮ್ಮೆ ವ್ಯಕ್ತಿತ್ವ ಸಂಘರ್ಷಗಳು, ಅಪಾರ್ಥಗಳು ಅಥವಾ ಭಿನ್ನಾಭಿಪ್ರಾಯಗಳಿಂದ ಸಮಸ್ಯೆಗಳು ತಲೆದೋರುತ್ತವೆ. ಇಂಥ ಪಂಥಾಹ್ವಾನಗಳು ಎದುರಾದಾಗ ನಾವು ಎಡವಿದವರಾಗಿ ಸಭೆಯಿಂದ ದೂರ ಉಳಿಯುವೆವೊ? ಯೆಹೋವನಿಗಾಗಿ ಮತ್ತು ಆತನು ಯಾರನ್ನು ಪ್ರೀತಿಸುತ್ತಾನೋ ಅವರಿಗಾಗಿ ನಿಜವಾದ ಪ್ರೀತಿಯಿರುವಲ್ಲಿ ನಾವು ಹಾಗೆ ಮಾಡುವುದಿಲ್ಲ.

17 ನಮ್ಮ ಸೃಷ್ಟಿಕರ್ತನೂ ಜೀವಸಂರಕ್ಷಕನೂ ಆಗಿರುವ ಯೆಹೋವನು ನಮ್ಮ ಪ್ರೀತಿ ಮತ್ತು ಪೂರ್ಣ ಭಕ್ತಿಗೆ ಅರ್ಹನಾಗಿದ್ದಾನೆ. (ಪ್ರಕಟನೆ 4:11) ಇದಲ್ಲದೆ ಆತನು ಉಪಯೋಗಿಸಲು ಇಷ್ಟಪಡುವ ಸಭೆಯೂ ನಮ್ಮ ನಿಷ್ಠೆಯ ಬೆಂಬಲಕ್ಕೆ ಅರ್ಹವಾಗಿದೆ. (ಇಬ್ರಿಯ 13:17) ಆದುದರಿಂದ ಒಬ್ಬ ಜೊತೆ ಆರಾಧಕನು ಯಾವುದಾದರೊಂದು ರೀತಿಯಲ್ಲಿ ನಮಗೆ ನೋವನ್ನುಂಟುಮಾಡುವಾಗ ಅಥವಾ ನಿರಾಶೆಗೊಳಿಸುವಾಗ, ನಾವೆಷ್ಟು ಅಸಮಾಧಾನಗೊಂಡಿದ್ದೇವೆ ಎಂಬುದನ್ನು ತೋರಿಸಲಿಕ್ಕಾಗಿ ನಾವು ಸಭೆಯಿಂದ ದೂರ ಉಳಿಯುವುದಿಲ್ಲ. ಹಾಗೆ ಮಾಡಲು ನಮಗೆ ಹೇಗಾದರೂ ಮನಸ್ಸು ಬಂದೀತು? ನಮ್ಮ ಮನಸ್ಸನ್ನು ನೋಯಿಸಿದ್ದು ಯೆಹೋವನಲ್ಲವಲ್ಲ. ಯೆಹೋವನ ಮೇಲಣ ಪ್ರೀತಿಯು ಆತನನ್ನು ಮತ್ತು ಆತನ ಜನರನ್ನು ತಿರಸ್ಕರಿಸಲು ನಮ್ಮನ್ನು ಎಂದಿಗೂ ಬಿಡುವುದಿಲ್ಲ!—ಕೀರ್ತನೆ 119:165 ಓದಿ.

18. (ಎ) ಸಭೆಯಲ್ಲಿ ಶಾಂತಿಯನ್ನು ಉತ್ತೇಜಿಸಲು ನಾವೇನು ಮಾಡಬಲ್ಲೆವು? (ಬಿ) ಕ್ಷಮಿಸಲು ಬಲವಾದ ಆಧಾರವಿರುವಾಗ ಹಾಗೆ ಮಾಡುವುದು ಯಾವ ಆಶೀರ್ವಾದಗಳನ್ನು ತರುತ್ತದೆ?

18 ಜೊತೆ ಆರಾಧಕರ ಮೇಲಿರುವ ಪ್ರೀತಿಯು ಸಭೆಯಲ್ಲಿ ಶಾಂತಿಯನ್ನು ಉತ್ತೇಜಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಯೆಹೋವನು ತಾನು ಯಾರನ್ನು ಪ್ರೀತಿಸುತ್ತಾನೋ ಅವರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ; ನಾವು ಸಹ ನಿರೀಕ್ಷಿಸಬಾರದು. ನಾವೆಲ್ಲರೂ ಅಪರಿಪೂರ್ಣರಾಗಿದ್ದೇವೆ ಮತ್ತು ತಪ್ಪುಗಳನ್ನು ಮಾಡುತ್ತೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾ, ಚಿಕ್ಕಪುಟ್ಟ ತಪ್ಪುಗಳನ್ನು ಲಕ್ಷಿಸದಿರುವಂತೆ ಪ್ರೀತಿಯು ನಮಗೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 17:9; 1 ಪೇತ್ರ 4:8) “ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿ” ಮುಂದುವರಿಯುವಂತೆ ಪ್ರೀತಿಯು ನಮಗೆ ಸಹಾಯಮಾಡುತ್ತದೆ. (ಕೊಲೊಸ್ಸೆ 3:13) ಈ ಸಲಹೆಯನ್ನು ಅನ್ವಯಿಸಿಕೊಳ್ಳುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ನಕಾರಾತ್ಮಕ ಭಾವನೆಗಳು ನಮ್ಮ ಮೇಲೆ ಮೇಲುಗೈ ಪಡೆಯುವಂತೆ ಬಿಡುವಲ್ಲಿ, ನಮ್ಮ ಕೋಪದಿಂದಾಗಿ ನಮ್ಮ ಮನಸ್ಸನ್ನು ನೋಯಿಸಿದವನಿಗೆ ಒಂದು ಅರ್ಥದಲ್ಲಿ ಶಿಕ್ಷೆಯಾಗುತ್ತಿದೆ ಎಂಬ ಅನಿಸಿಕೆಯಿಂದ ನಾವು ಅಸಮಾಧಾನವನ್ನು ಮುಂದುವರಿಸುವ ಪ್ರವೃತ್ತಿಯವರಾಗಬಹುದು. ಆದರೆ ವಾಸ್ತವದಲ್ಲಿ ಅಸಮಾಧಾನವನ್ನು ಮನಸ್ಸಿನಲ್ಲೇ ಇಟ್ಟುಕೊಂಡಿರುವುದು ನಮಗೇ ಹಾನಿಕರವಾದದ್ದಾಗಿದೆ. ಕ್ಷಮಿಸಲು ಬಲವಾದ ಆಧಾರವಿರುವಾಗ ಕ್ಷಮಾಪಣೆ ನೀಡುವ ಆಯ್ಕೆಯನ್ನು ಮಾಡುವುದು ಸಮೃದ್ಧವಾದ ಆಶೀರ್ವಾದಗಳನ್ನು ತರುತ್ತದೆ. (ಲೂಕ 17:3, 4) ಇದು ನಮ್ಮ ಹೃದಮನಗಳಿಗೆ ಶಾಂತಿಯನ್ನು ನೀಡುತ್ತದೆ, ಸಭೆಯ ಶಾಂತಿಯನ್ನು ಕಾಪಾಡುತ್ತದೆ ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಸಂರಕ್ಷಿಸುತ್ತದೆ.—ಮತ್ತಾಯ 6:14, 15; ರೋಮನ್ನರಿಗೆ 14:19.

ಒಬ್ಬರ ಸಹವಾಸವನ್ನು ಯಾವಾಗ ಬಿಡಬೇಕಾಗಬಹುದು?

19. ಯಾರಾದರೊಬ್ಬರೊಂದಿಗೆ ಸಹವಾಸವನ್ನು ಬಿಡುವಂತೆ ಅಗತ್ಯಪಡಿಸಬಹುದಾದ ಯಾವ ಸನ್ನಿವೇಶಗಳು ನಮಗೆ ಎದುರಾಗಬಹುದು?

19 ಕೆಲವೊಮ್ಮೆ ಸಭೆಯ ಸದಸ್ಯನಾಗಿರುವ ಒಬ್ಬನ ಸಹವಾಸವನ್ನು ಬಿಟ್ಟುಬಿಡುವಂತೆ ನಮಗೆ ಹೇಳಲಾಗುತ್ತದೆ. ಪಶ್ಚಾತ್ತಾಪಪಡದೆ ದೇವರ ನಿಯಮವನ್ನು ಉಲ್ಲಂಘಿಸುವಂಥ ವ್ಯಕ್ತಿಯು ಸಭೆಯಿಂದ ಬಹಿಷ್ಕರಿಸಲ್ಪಡುವಾಗ ಅಥವಾ ಸುಳ್ಳು ಸಿದ್ಧಾಂತವನ್ನು ಬೋಧಿಸುವ ಮೂಲಕ ಇಲ್ಲವೆ ಸಭೆಯಿಂದ ಸ್ವತಃ ತನ್ನನ್ನು ಬೇರ್ಪಡಿಸಿಕೊಳ್ಳುವ ಮೂಲಕ ನಂಬಿಕೆಯನ್ನು ತಿರಸ್ಕರಿಸುವಾಗ ಇಂಥ ಸನ್ನಿವೇಶವು ಎದುರಾಗುತ್ತದೆ. ಇಂಥವರ ‘ಸಹವಾಸವನ್ನು ಬಿಟ್ಟುಬಿಡುವಂತೆ’ ದೇವರ ವಾಕ್ಯವು ನಮಗೆ ಸ್ಪಷ್ಟವಾಗಿ ತಿಳಿಸುತ್ತದೆ. * (1 ಕೊರಿಂಥ 5:11-13 ಓದಿ; 2 ಯೋಹಾನ 9-11) ಇಷ್ಟರ ತನಕ ಒಬ್ಬ ಸ್ನೇಹಿತನಾಗಿದ್ದವನಿಂದ ಅಥವಾ ಸಂಬಂಧಿಕನಾಗಿರುವವನಿಂದ ದೂರವಾಗುವುದು ಖಂಡಿತವಾಗಿಯೂ ಒಂದು ಪಂಥಹ್ವಾನವಾಗಿರಬಹುದು. ನಾವು ದೃಢವಾದ ನಿಲುವನ್ನು ತೆಗೆದುಕೊಳ್ಳುವ ಮೂಲಕ, ಬೇರೆಲ್ಲದಕ್ಕಿಂತಲೂ ಹೆಚ್ಚಾಗಿ ನಾವು ಯೆಹೋವನಿಗೆ ಮತ್ತು ಆತನ ನೀತಿಭರಿತ ನಿಯಮಗಳಿಗೆ ನಿಷ್ಠೆ ತೋರಿಸುವುದಕ್ಕೆ ಪ್ರಥಮ ಸ್ಥಾನವನ್ನು ಕೊಡುತ್ತೇವೆ ಎಂಬುದನ್ನು ತೋರಿಸುವೆವೊ? ಯೆಹೋವನು ನಿಷ್ಠೆ ಮತ್ತು ವಿಧೇಯತೆಯನ್ನು ಬಹುಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದನ್ನು ಮರೆಯದಿರಿ.

20, 21. (ಎ) ಬಹಿಷ್ಕರಿಸುವ ಏರ್ಪಾಡು ಪ್ರೀತಿಪೂರ್ಣ ಒದಗಿಸುವಿಕೆಯಾಗಿದೆ ಏಕೆ? (ಬಿ) ನಮ್ಮ ಸ್ನೇಹಿತರನ್ನು ವಿವೇಕಯುತವಾಗಿ ಆರಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ ಏಕೆ?

20 ಬಹಿಷ್ಕರಿಸುವ ಏರ್ಪಾಡು ನಿಜವಾಗಿಯೂ ಯೆಹೋವನು ಮಾಡಿರುವ ಪ್ರೀತಿಪೂರ್ಣ ಒದಗಿಸುವಿಕೆಯಾಗಿದೆ. ಅದು ಹೇಗೆ? ಪಶ್ಚಾತ್ತಾಪಪಡದ ಪಾಪಿಯನ್ನು ಬಹಿಷ್ಕರಿಸುವುದು ಯೆಹೋವನ ಪವಿತ್ರ ನಾಮಕ್ಕಾಗಿ ಮತ್ತು ಅದು ಏನನ್ನು ಪ್ರತಿನಿಧಿಸುತ್ತದೋ ಅದಕ್ಕಾಗಿ ಪ್ರೀತಿಯನ್ನು ತೋರಿಸುತ್ತದೆ. (1 ಪೇತ್ರ 1:15, 16) ಬಹಿಷ್ಕರಿಸುವುದು ಸಭೆಯನ್ನು ಸುರಕ್ಷಿತವಾಗಿಡುತ್ತದೆ. ಸಭೆಯ ನಂಬಿಗಸ್ತ ಸದಸ್ಯರು ಬೇಕುಬೇಕೆಂದೇ ಪಾಪಮಾಡುವವರ ಅಹಿತಕರ ಪ್ರಭಾವದಿಂದ ಸಂರಕ್ಷಿಸಲ್ಪಡುತ್ತಾರೆ ಮತ್ತು ಈ ದುಷ್ಟ ಲೋಕದಲ್ಲಿ ಸಭೆಯು ಸುರಕ್ಷಿತ ತಾಣವಾಗಿದೆ ಎಂದು ತಿಳಿದವರಾಗಿದ್ದು ಅವರು ತಮ್ಮ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗಸಾಧ್ಯವಿದೆ. (1 ಕೊರಿಂಥ 5:7; ಇಬ್ರಿಯ 12:15, 16) ಈ ಕಟ್ಟುನಿಟ್ಟಾದ ಶಿಸ್ತು ತಪ್ಪಿತಸ್ಥನ ಕಡೆಗಿರುವ ಪ್ರೀತಿಯನ್ನು ತೋರಿಸುತ್ತದೆ. ಈ ಆಘಾತವೇ ಅವನು ತನ್ನ ತಪ್ಪನ್ನು ಅರಿತುಕೊಂಡು ಯೆಹೋವನ ಬಳಿಗೆ ಹಿಂದಿರುಗಲು ಅಗತ್ಯವಿರುವ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ಅವನಿಗೆ ಸಹಾಯಮಾಡಬಹುದು.—ಇಬ್ರಿಯ 12:11.

21 ನಮ್ಮ ಆಪ್ತ ಸಹವಾಸಿಗಳು ನಮ್ಮ ಮೇಲೆ ಬಲವತ್ತಾದ, ನಮ್ಮ ವ್ಯಕ್ತಿತ್ವವನ್ನೇ ರೂಪಿಸುವಂಥ ಪ್ರಭಾವವನ್ನು ಬೀರಬಲ್ಲರು ಎಂಬುದು ಅಲ್ಲಗಳೆಯಲಾಗದ ಸತ್ಯವಾಗಿದೆ. ಆದುದರಿಂದ ನಮ್ಮ ಸ್ನೇಹಿತರನ್ನು ವಿವೇಕಯುತವಾಗಿ ಆರಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಯಾರು ಯೆಹೋವನಿಗೆ ಸ್ನೇಹಿತರಾಗಿದ್ದಾರೋ ಅವರನ್ನು ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುವಾಗ, ದೇವರು ಯಾರನ್ನು ಪ್ರೀತಿಸುತ್ತಾನೋ ಅವರನ್ನು ನಾವು ಪ್ರೀತಿಸುವಾಗ ಸಾಧ್ಯವಿರುವುದರಲ್ಲೇ ಅತ್ಯುತ್ತಮವಾದ ಸ್ನೇಹಿತರು ನಮ್ಮ ಸುತ್ತಲೂ ಇರುವರು. ಒಂದು ಸ್ಪಂಜಿನಂತೆ ನಾವು ಅವರಿಂದ ಏನನ್ನು ಹೀರಿಕೊಳ್ಳುತ್ತೇವೋ ಅದು ಯೆಹೋವನನ್ನು ಸಂತೋಷಪಡಿಸುವ ನಮ್ಮ ದೃಢನಿರ್ಧಾರಕ್ಕನುಸಾರ ಜೀವಿಸಲು ನಮಗೆ ಸಹಾಯಮಾಡುವುದು.

^ ಪ್ಯಾರ. 4 ಹೀಗೆ ಮಾಡುವಂತೆ ಅಬ್ರಹಾಮನನ್ನು ಕೇಳಿಕೊಳ್ಳುವ ಮೂಲಕ ಯೆಹೋವನು, ತನ್ನ ಏಕೈಕಜಾತ ಪುತ್ರನನ್ನು ಯಜ್ಞವಾಗಿ ಅರ್ಪಿಸುವುದರಲ್ಲಿ ಸ್ವತಃ ಮಾಡಲಿಕ್ಕಿದ್ದ ತ್ಯಾಗದ ಚಿತ್ರಣವನ್ನು ಒದಗಿಸಿದನು. (ಯೋಹಾನ 3:16) ಅಬ್ರಹಾಮನ ವಿಷಯದಲ್ಲಿಯಾದರೋ ಯೆಹೋವನು ಹಸ್ತಕ್ಷೇಪಮಾಡಿದನು ಮತ್ತು ಇಸಾಕನಿಗೆ ಬದಲಿಯಾಗಿ ಒಂದು ಟಗರನ್ನು ಒದಗಿಸಿದನು.—ಆದಿಕಾಂಡ 22:1, 2, 9-13.

^ ಪ್ಯಾರ. 9 ದಾವೀದನು ಗೊಲ್ಯಾತನನ್ನು ಕೊಂದಾಗ ಯುವಕನಾಗಿದ್ದನು ಅಂದರೆ “ಇನ್ನೂ ಹುಡುಗ”ನಾಗಿದ್ದನು ಮತ್ತು ಯೋನಾತಾನನ ಮರಣದ ಸಮಯದಷ್ಟಕ್ಕೆ ಸುಮಾರು 30⁠ರ ಪ್ರಾಯದವನಾಗಿದ್ದನು. (1 ಸಮುವೇಲ 17:33; 31:2; 2 ಸಮುವೇಲ 5:4) ಯೋನಾತಾನನು ಮೃತಪಡುವಾಗ ಸುಮಾರು 60 ವರ್ಷ ಪ್ರಾಯದವನಾಗಿದ್ದು, ದಾವೀದನಿಗಿಂತ ಸುಮಾರು 30 ವರ್ಷ ದೊಡ್ಡವನಾಗಿದ್ದನು ಎಂಬುದು ಸುವ್ಯಕ್ತ.

^ ಪ್ಯಾರ. 10 ಒಂದನೇ ಸಮುವೇಲ 23:17⁠ರಲ್ಲಿ ದಾಖಲಿಸಲಾಗಿರುವಂತೆ, ದಾವೀದನನ್ನು ಉತ್ತೇಜಿಸಲಿಕ್ಕಾಗಿ ಯೋನಾತಾನನು ಐದು ವಿಷಯಗಳನ್ನು ತಿಳಿಸಿದನು: (1) ಭಯಪಡದಿರುವಂತೆ ಅವನು ದಾವೀದನನ್ನು ಉತ್ತೇಜಿಸಿದನು. (2) ಅವನು ದಾವೀದನಿಗೆ ಸೌಲನ ಪ್ರಯತ್ನಗಳು ವಿಫಲಗೊಳ್ಳುವವು ಎಂಬ ಆಶ್ವಾಸನೆಯನ್ನು ನೀಡಿದನು. (3) ದೇವರು ವಾಗ್ದಾನಿಸಿದಂತೆಯೇ ದಾವೀದನು ರಾಜತ್ವವನ್ನು ಪಡೆದುಕೊಳ್ಳುವನು ಎಂಬುದನ್ನು ಅವನಿಗೆ ನೆನಪು ಹುಟ್ಟಿಸಿದನು. (4) ದಾವೀದನಿಗೆ ತಾನು ನಿಷ್ಠನಾಗಿರುವೆನು ಎಂದು ಮಾತುಕೊಟ್ಟನು. (5) ಯೋನಾತಾನನು ದಾವೀದನಿಗೆ ನಿಷ್ಠನಾಗಿರುವುದು ಸೌಲನಿಗೂ ತಿಳಿದಿದೆ ಎಂದು ಅವನು ದಾವೀದನಿಗೆ ಹೇಳಿದನು.

^ ಪ್ಯಾರ. 19 ಸಭೆಯಿಂದ ಬಹಿಷ್ಕರಿಸಲ್ಪಟ್ಟವರೊಂದಿಗೆ ಅಥವಾ ಬೇರ್ಪಡಿಸಿಕೊಂಡವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತಾದ ಹೆಚ್ಚಿನ ಮಾಹಿತಿಗಾಗಿ “ಬಹಿಷ್ಕೃತ ವ್ಯಕ್ತಿಯೊಂದಿಗೆ ವ್ಯವಹರಿಸಬೇಕಾದ ವಿಧ” ಎಂಬ ಪರಿಶಿಷ್ಟ ನೋಡಿ.