ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 8

ದೇವರು ಶುದ್ಧ ಜನರನ್ನು ಪ್ರೀತಿಸುತ್ತಾನೆ

ದೇವರು ಶುದ್ಧ ಜನರನ್ನು ಪ್ರೀತಿಸುತ್ತಾನೆ

‘[ನೀನು] ಶುದ್ಧನಿಗೆ ಪರಿಶುದ್ಧನೂ ಆಗಿರುವಿ.’—ಕೀರ್ತನೆ 18:26.

1-3. (ಎ) ಒಬ್ಬ ತಾಯಿಯು ತನ್ನ ಮಗನು ನೀಟಾಗಿಯೂ ಶುದ್ಧನಾಗಿಯೂ ಇದ್ದಾನೆ ಎಂಬುದನ್ನು ಏಕೆ ಖಚಿತಪಡಿಸಿಕೊಳ್ಳುತ್ತಾಳೆ? (ಬಿ) ಯೆಹೋವನು ತನ್ನ ಆರಾಧಕರು ಶುದ್ಧರಾಗಿರುವಂತೆ ಏಕೆ ಬಯಸುತ್ತಾನೆ ಮತ್ತು ನಮ್ಮನ್ನು ಶುದ್ಧರಾಗಿ ಇಟ್ಟುಕೊಳ್ಳಲು ಬಯಸುವಂತೆ ಯಾವುದು ಪ್ರಚೋದಿಸುತ್ತದೆ?

ಒಬ್ಬ ತಾಯಿಯು ಹೊರಗೆ ಹೋಗಲಿಕ್ಕಾಗಿ ತನ್ನ ಪುಟ್ಟ ಮಗನನ್ನು ಸಿದ್ಧಪಡಿಸುತ್ತಾಳೆ. ಅವನಿಗೆ ಸ್ನಾನಮಾಡಿಸಿ ಅವನ ಬಟ್ಟೆಗಳು ನೀಟಾಗಿಯೂ ಶುದ್ಧವಾಗಿಯೂ ಇವೆ ಎಂಬುದನ್ನು ಅವಳು ಖಚಿತಪಡಿಸಿಕೊಳ್ಳುತ್ತಾಳೆ. ಅವನು ಆರೋಗ್ಯದಿಂದಿರಬೇಕಾದರೆ ಶುದ್ಧತೆಯು ಅತ್ಯಾವಶ್ಯಕ ಎಂಬುದು ಅವಳಿಗೆ ಗೊತ್ತಿದೆ. ಮಗನ ಹೊರತೋರಿಕೆಯು ಅವನ ಹೆತ್ತವರಾದ ತಮಗೆ ಕೀರ್ತಿಯನ್ನು ತರುತ್ತದೆ ಎಂಬುದನ್ನೂ ಅವಳು ಅರಿತಿದ್ದಾಳೆ.

2 ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನು ತನ್ನ ಸೇವಕರು ಶುದ್ಧರಾಗಿರುವಂತೆ ಬಯಸುತ್ತಾನೆ. ‘[ನೀನು] ಶುದ್ಧನಿಗೆ ಪರಿಶುದ್ಧನೂ ಆಗಿರುವಿ’ ಎಂದು ಆತನ ವಾಕ್ಯವು ತಿಳಿಸುತ್ತದೆ. * (ಕೀರ್ತನೆ 18:26) ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ; ನಮ್ಮನ್ನು ಶುದ್ಧರಾಗಿಟ್ಟುಕೊಳ್ಳುವುದು ನಮಗೆ ತುಂಬ ಪ್ರಯೋಜನದಾಯಕ ಎಂಬುದು ಆತನಿಗೆ ತಿಳಿದಿದೆ. ಆತನ ಸಾಕ್ಷಿಗಳಾಗಿರುವ ನಾವು ಆತನಿಗೆ ಒಳ್ಳೇ ಹೆಸರನ್ನು ತರುವಂತೆಯೂ ನಿರೀಕ್ಷಿಸುತ್ತಾನೆ. ವಾಸ್ತವದಲ್ಲಿ ನಮ್ಮ ಶುದ್ಧವಾದ ಹೊರತೋರಿಕೆ ಮತ್ತು ಅತ್ಯುತ್ತಮ ನಡತೆಯು ಯೆಹೋವನಿಗೆ ಮತ್ತು ಆತನ ಪರಿಶುದ್ಧ ನಾಮಕ್ಕೆ ಕಳಂಕವನ್ನಲ್ಲ, ಮಹಿಮೆಯನ್ನು ತರುವುದು.—ಯೆಹೆಜ್ಕೇಲ 36:22; 1 ಪೇತ್ರ 2:12 ಓದಿ.

3 ದೇವರು ಶುದ್ಧ ಜನರನ್ನು ಪ್ರೀತಿಸುತ್ತಾನೆ ಎಂಬುದನ್ನು ತಿಳಿದಿರುವುದು ನಮ್ಮನ್ನು ಶುದ್ಧರಾಗಿರಿಸಿಕೊಳ್ಳುವಂತೆ ಪ್ರಚೋದಿಸುತ್ತದೆ. ನಾವು ಆತನನ್ನು ಪ್ರೀತಿಸುವುದರಿಂದ ನಮ್ಮ ಜೀವನ ರೀತಿಯು ಆತನಿಗೆ ಗೌರವವನ್ನು ತರುವಂತೆ ಬಯಸುತ್ತೇವೆ. ನಾವು ಆತನ ಪ್ರೀತಿಯಲ್ಲಿ ನಮ್ಮನ್ನು ಕಾಪಾಡಿಕೊಳ್ಳಲು ಸಹ ಬಯಸುತ್ತೇವೆ. ಆದುದರಿಂದ ನಾವು ನಮ್ಮನ್ನು ಏಕೆ ಶುದ್ಧರಾಗಿ ಇಟ್ಟುಕೊಳ್ಳಬೇಕು, ಶುದ್ಧರಾಗಿರುವುದರಲ್ಲಿ ಏನು ಒಳಗೂಡಿದೆ ಮತ್ತು ನಮ್ಮನ್ನು ನಾವು ಹೇಗೆ ಶುದ್ಧರಾಗಿರಿಸಿಕೊಳ್ಳಸಾಧ್ಯವಿದೆ ಎಂಬುದನ್ನು ಪರಿಶೀಲಿಸೋಣ. ಈ ರೀತಿ ಪರೀಕ್ಷಿಸಿಕೊಳ್ಳುವುದು ನಾವು ಪ್ರಗತಿಯನ್ನು ಮಾಡಬೇಕಾಗಿರುವ ಕ್ಷೇತ್ರಗಳಿವೆಯೋ ಎಂಬುದನ್ನು ಅವಲೋಕಿಸಲು ನಮಗೆ ಸಹಾಯಮಾಡಬಲ್ಲದು.

ನಮ್ಮನ್ನು ಏಕೆ ಶುದ್ಧರಾಗಿ ಇಟ್ಟುಕೊಳ್ಳಬೇಕು?

4, 5. (ಎ) ನಮ್ಮನ್ನು ಶುದ್ಧರಾಗಿ ಇಟ್ಟುಕೊಳ್ಳಲು ಯಾವುದು ಮುಖ್ಯ ಕಾರಣವಾಗಿದೆ? (ಬಿ) ಯೆಹೋವನ ಶುದ್ಧತೆಯು ಆತನ ದೃಷ್ಟಿಗೋಚರ ಸೃಷ್ಟಿಯಲ್ಲಿ ಹೇಗೆ ವ್ಯಕ್ತವಾಗುತ್ತದೆ?

4 ಯೆಹೋವನು ನಮ್ಮನ್ನು ಮುನ್ನಡಿಸುವ ಒಂದು ವಿಧವು ತನ್ನ ಮಾದರಿಯ ಮೂಲಕವೇ ಆಗಿದೆ. ಆದುದರಿಂದ “ದೇವರನ್ನು ಅನುಕರಿಸುವವರಾಗಿರಿ” ಎಂದು ಆತನ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (ಎಫೆಸ 5:1) ನಮ್ಮನ್ನು ಏಕೆ ಶುದ್ಧರಾಗಿ ಇಟ್ಟುಕೊಳ್ಳಬೇಕು ಎಂಬುದಕ್ಕೆ ಮುಖ್ಯ ಕಾರಣವು, ನಾವು ಆರಾಧಿಸುವ ದೇವರಾಗಿರುವ ಯೆಹೋವನು ಎಲ್ಲ ರೀತಿಯಲ್ಲಿ ಶುದ್ಧನೂ ನಿರ್ಮಲನೂ ಪವಿತ್ರನೂ ಆಗಿದ್ದಾನೆಂಬುದೇ.—ಯಾಜಕಕಾಂಡ 11:44, 45 ಓದಿ.

5 ಯೆಹೋವನ ಅನೇಕ ಗುಣಗಳು ಮತ್ತು ಮಾರ್ಗಗಳಂತೆಯೇ ಆತನ ಶುದ್ಧತೆಯು ಆತನ ದೃಷ್ಟಿಗೋಚರ ಸೃಷ್ಟಿಯಲ್ಲಿ ಸುವ್ಯಕ್ತವಾಗುತ್ತದೆ. (ರೋಮನ್ನರಿಗೆ 1:20) ಭೂಮಿಯು ಮಾನವರಿಗೆ ಶುದ್ಧವಾದ ಒಂದು ಬೀಡಾಗಿರುವಂತೆ ರಚಿಸಲ್ಪಟ್ಟಿತು. ನಾವು ಸೇವಿಸುವ ಗಾಳಿಯನ್ನು ಹಾಗೂ ನೀರನ್ನು ಶುದ್ಧೀಕರಿಸುವಂಥ ಪರಿಸರ ಚಕ್ರಗಳನ್ನು ಆತನು ಸ್ಥಾಪಿಸಿದನು. ಕೆಲವೊಂದು ಸೂಕ್ಷ್ಮಜೀವಿಗಳು ಒಂದು ರೀತಿಯಲ್ಲಿ ನೈರ್ಮಲ್ಯ ಇಲಾಖೆಯಂತೆ ಕ್ರಿಯೆಗೈಯುತ್ತಾ ಕಲ್ಮಶವನ್ನು ಹಾನಿರಹಿತ ಉತ್ಪನ್ನಗಳಾಗಿ ಮಾರ್ಪಡಿಸುತ್ತವೆ. ವಿಜ್ಞಾನಿಗಳು ಈ ಹಸಿದ ಸೂಕ್ಷ್ಮಾಣುಜೀವಿಗಳಲ್ಲಿ ಕೆಲವನ್ನು ತೈಲ ಸುರಿತಗಳನ್ನು ಹಾಗೂ ಮಾನವ ಸ್ವಾರ್ಥ ಮತ್ತು ದುರಾಶೆಯಿಂದ ಉಂಟುಮಾಡಲ್ಪಟ್ಟಿರುವ ಇತರ ಮಾಲಿನ್ಯವನ್ನು ಶುದ್ಧೀಕರಿಸಲು ಉಪಯೋಗಿಸಿದ್ದಾರೆ. ‘ಭೂಮಿಯನ್ನು ನಿರ್ಮಿಸಿದಾತನಿಗೆ’ ಶುದ್ಧತೆಯು ತುಂಬ ಪ್ರಾಮುಖ್ಯವಾಗಿದೆ ಎಂಬುದು ಸುಸ್ಪಷ್ಟ. (ಯೆರೆಮೀಯ 10:12) ಇದು ನಮಗೂ ಪ್ರಾಮುಖ್ಯವಾಗಿರಬೇಕು.

6, 7. ಯೆಹೋವನನ್ನು ಆರಾಧಿಸುವವರಿಂದ ಶುದ್ಧತೆಯು ಅಪೇಕ್ಷಿಸಲ್ಪಡುತ್ತದೆ ಎಂಬುದನ್ನು ಮೋಶೆಯ ಧರ್ಮಶಾಸ್ತ್ರವು ಹೇಗೆ ಒತ್ತಿಹೇಳಿತು?

6 ನಮ್ಮನ್ನು ಶುದ್ಧರಾಗಿ ಇಟ್ಟುಕೊಳ್ಳಲಿಕ್ಕಾಗಿರುವ ಇನ್ನೊಂದು ಕಾರಣವು, ಪರಮಾಧಿಕಾರಿ ಪ್ರಭುವಾದ ಯೆಹೋವನು ತನ್ನ ಆರಾಧಕರಿಂದ ಶುದ್ಧತೆಯನ್ನು ಅಗತ್ಯಪಡಿಸುತ್ತಾನೆ ಎಂಬುದೇ. ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ಧರ್ಮಶಾಸ್ತ್ರದ ಕೆಳಗೆ ಶುದ್ಧತೆ ಮತ್ತು ಆರಾಧನೆಯು ಪರಸ್ಪರ ನಿಕಟ ಸಂಬಂಧವನ್ನು ಹೊಂದಿದ್ದವು. ದೋಷಪರಿಹಾರಕ ದಿನದಂದು ಮಹಾ ಯಾಜಕನು ಒಂದು ಬಾರಿ ಅಲ್ಲ ಎರಡು ಬಾರಿ ಸ್ನಾನಮಾಡುವಂತೆ ಧರ್ಮಶಾಸ್ತ್ರವು ಸೂಚಿಸಿತ್ತು. (ಯಾಜಕಕಾಂಡ 16:4, 23, 24) ದೇವಾರಾಧನೆಯನ್ನು ನೆರವೇರಿಸುವ ಯಾಜಕರು ಯೆಹೋವನಿಗೆ ಯಜ್ಞಗಳನ್ನು ಅರ್ಪಿಸುವುದಕ್ಕೆ ಮುಂಚೆ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕಾಗಿತ್ತು. (ವಿಮೋಚನಕಾಂಡ 30:17-21; 2 ಪೂರ್ವಕಾಲವೃತ್ತಾಂತ 4:6) ಧರ್ಮಶಾಸ್ತ್ರವು ಸುಮಾರು 70 ರೀತಿಯ ಶಾರೀರಿಕ ಅಶುದ್ಧತೆ ಮತ್ತು ಮತಸಂಸ್ಕಾರಕ್ಕೆ ಸಂಬಂಧಿಸಿದ ಮಲಿನತೆಯನ್ನು ಸ್ಥೂಲವಾಗಿ ವಿವರಿಸಿತ್ತು. ಅಶುದ್ಧ ಸ್ಥಿತಿಯಲ್ಲಿರುವಾಗ ಒಬ್ಬ ಇಸ್ರಾಯೇಲ್ಯನು ಆರಾಧನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿರಲಿಲ್ಲ. ಇಂಥ ತಪ್ಪಿಗೆ ಕೆಲವೊಮ್ಮೆ ಮರಣದಂಡನೆಯನ್ನೂ ವಿಧಿಸಲಾಗುತ್ತಿತ್ತು. (ಯಾಜಕಕಾಂಡ 15:31) ಸ್ನಾನಮಾಡುವುದು ಮತ್ತು ಬಟ್ಟೆಗಳನ್ನು ಸ್ವಚ್ಛಗೊಳಿಸುವುದನ್ನೂ ಸೇರಿಸಿ ಇನ್ನಿತರ ರೀತಿಯ ಶುದ್ಧೀಕರಣ ಕಾರ್ಯವಿಧಾನಗಳನ್ನು ನಡೆಸಲು ಯಾವನಾದರೂ ನಿರಾಕರಿಸುವಲ್ಲಿ ಅಂಥವನನ್ನು ‘ಸಭೆಯಿಂದ ತೆಗೆದುಹಾಕಬೇಕಾಗಿತ್ತು.’—ಅರಣ್ಯಕಾಂಡ 19:17-20.

7 ನಾವು ಈಗ ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇಲ್ಲವಾದರೂ ಕೆಲವೊಂದು ವಿಷಯಗಳ ಕುರಿತಾದ ದೇವರ ಆಲೋಚನೆಯನ್ನು ಗ್ರಹಿಸಲು ಅದು ನಮಗೆ ಸಹಾಯಮಾಡುತ್ತದೆ. ದೇವರನ್ನು ಆರಾಧಿಸುವವರಿಂದ ಶುದ್ಧತೆಯು ಅಪೇಕ್ಷಿಸಲ್ಪಡುತ್ತದೆ ಎಂಬುದನ್ನು ಧರ್ಮಶಾಸ್ತ್ರವು ಒತ್ತಿಹೇಳಿತು ಎಂಬುದು ಸ್ಪಷ್ಟ. ಯೆಹೋವನು ಮಾರ್ಪಟ್ಟಿಲ್ಲ. (ಮಲಾಕಿಯ 3:6) ನಮ್ಮ ಆರಾಧನೆಯು ‘ಶುದ್ಧವೂ ಕಳಂಕರಹಿತವೂ ಆಗಿರದಿದ್ದಲ್ಲಿ’ ಅದು ಆತನಿಗೆ ಸ್ವೀಕಾರಾರ್ಹವಾಗಲು ಸಾಧ್ಯವಿಲ್ಲ. (ಯಾಕೋಬ 1:27) ಈ ವಿಷಯದಲ್ಲಿ ಆತನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ ಎಂಬುದನ್ನು ನಾವು ತಿಳಿದುಕೊಳ್ಳುವ ಅಗತ್ಯವಿದೆ.

ದೇವರ ದೃಷ್ಟಿಯಲ್ಲಿ ಶುದ್ಧರಾಗಿರುವುದು ಏನನ್ನು ಒಳಗೂಡಿದೆ?

8. ಯಾವ ಕ್ಷೇತ್ರಗಳಲ್ಲಿ ನಾವು ಶುದ್ಧರಾಗಿರುವಂತೆ ಯೆಹೋವನು ನಿರೀಕ್ಷಿಸುತ್ತಾನೆ?

8 ಬೈಬಲಿನಲ್ಲಿ ಶುದ್ಧತೆಯ ವಿಚಾರವು ಕೇವಲ ಶಾರೀರಿಕ ಶುದ್ಧತೆಗಿಂತಲೂ ಹೆಚ್ಚಿನದ್ದನ್ನು ಒಳಗೂಡಿದೆ. ದೇವರ ದೃಷ್ಟಿಯಲ್ಲಿ ಶುದ್ಧರಾಗಿರುವುದು ನಮ್ಮ ಜೀವನದ ಎಲ್ಲ ಅಂಶಗಳಿಗೂ ಸಂಬಂಧಿಸಿದ್ದಾಗಿದೆ. ನಾಲ್ಕು ಮೂಲಭೂತ ಕ್ಷೇತ್ರಗಳಲ್ಲಿ ನಾವು ಶುದ್ಧರಾಗಿರುವಂತೆ ಯೆಹೋವನು ನಿರೀಕ್ಷಿಸುತ್ತಾನೆ—ಆಧ್ಯಾತ್ಮಿಕವಾಗಿ, ನೈತಿಕವಾಗಿ, ಮಾನಸಿಕವಾಗಿ ಮತ್ತು ಶಾರೀರಿಕವಾಗಿ. ಇವುಗಳಲ್ಲಿ ಪ್ರತಿಯೊಂದೂ ಏನನ್ನು ಒಳಗೂಡಿದೆ ಎಂಬುದನ್ನು ನಾವೀಗ ಪರಿಗಣಿಸೋಣ.

9, 10. ಆಧ್ಯಾತ್ಮಿಕವಾಗಿ ಶುದ್ಧರಾಗಿರಿಸಿಕೊಳ್ಳುವುದರ ಅರ್ಥವೇನು ಮತ್ತು ನಿಜ ಕ್ರೈಸ್ತರು ಯಾವುದರಿಂದ ದೂರವಿರುತ್ತಾರೆ?

9 ಆಧ್ಯಾತ್ಮಿಕ ಶುದ್ಧತೆ. ಸರಳವಾಗಿ ವಿವರಿಸುವುದಾದರೆ ಆಧ್ಯಾತ್ಮಿಕವಾಗಿ ಶುದ್ಧರಾಗಿರಿಸಿಕೊಳ್ಳುವುದರ ಅರ್ಥ ಸತ್ಯಾರಾಧನೆಯನ್ನು ಸುಳ್ಳು ಆರಾಧನೆಯೊಂದಿಗೆ ಬೆರಸದಿರುವುದೇ ಆಗಿದೆ. ಇಸ್ರಾಯೇಲ್ಯರು ಬಾಬೆಲನ್ನು ಬಿಟ್ಟು ಯೆರೂಸಲೇಮಿಗೆ ಹಿಂದಿರುಗುವಾಗ ಈ ಪ್ರೇರಿತ ಬುದ್ಧಿವಾದಕ್ಕೆ ಕಿವಿಗೊಡಬೇಕಾಗಿತ್ತು. ಅದೇನೆಂದರೆ, “ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವದನ್ನೂ ಮುಟ್ಟದಿರಿ, . . . ಶುದ್ಧರಾಗಿರಿ!” (ಯೆಶಾಯ 52:11) ಇಸ್ರಾಯೇಲ್ಯರು ಸ್ವದೇಶಕ್ಕೆ ಹಿಂದಿರುಗುತ್ತಿದ್ದ ಮುಖ್ಯ ಕಾರಣವು ಯೆಹೋವನ ಆರಾಧನೆಯನ್ನು ಪುನಸ್ಸ್ಥಾಪಿಸಲಿಕ್ಕಾಗಿಯೇ ಆಗಿತ್ತು. ಅಂಥ ಆರಾಧನೆಯು ಶುದ್ಧವಾಗಿರಬೇಕಿತ್ತು, ದೇವರಿಗೆ ಅಪಕೀರ್ತಿ ತರುವಂಥ ಬಾಬೆಲಿನ ಧರ್ಮದ ಬೋಧನೆಗಳು, ಆಚರಣೆಗಳು ಮತ್ತು ಪದ್ಧತಿಗಳಿಂದ ಕಳಂಕಿತವಾಗಿರಬಾರದಿತ್ತು.

10 ಇಂದು ನಿಜ ಕ್ರೈಸ್ತರಾಗಿರುವ ನಾವು ಸುಳ್ಳು ಆರಾಧನೆಯಿಂದ ಕಲುಷಿತರಾಗದಂತೆ ಜಾಗರೂಕತೆಯಿಂದಿರಬೇಕು. (1 ಕೊರಿಂಥ 10:21 ಓದಿ.) ಸುಳ್ಳು ಧರ್ಮದ ಪ್ರಭಾವವು ನಮ್ಮ ಸುತ್ತಲೂ ಇರುವುದರಿಂದ ಈ ವಿಷಯದಲ್ಲಿ ನಾವು ತುಂಬ ಎಚ್ಚರಕೆಯಿಂದಿರುವ ಅಗತ್ಯವಿದೆ. ಅನೇಕ ದೇಶಗಳಲ್ಲಿ ಬೇರೆಬೇರೆ ಸಂಪ್ರದಾಯಗಳು, ಚಟುವಟಿಕೆಗಳು ಮತ್ತು ಸಂಸ್ಕಾರಗಳು ಸುಳ್ಳು ಧಾರ್ಮಿಕ ಬೋಧನೆಗಳಿಗೆ ಸಂಬಂಧಿಸಿದ್ದಾಗಿವೆ. ಉದಾಹರಣೆಗೆ ನಮ್ಮೊಳಗಿರುವ ಒಂದು ಭಾಗವು ಮರಣಾನಂತರ ಬದುಕಿ ಉಳಿಯುತ್ತದೆ ಎಂದು ಅವು ಕಲಿಸುತ್ತವೆ. (ಪ್ರಸಂಗಿ 9:5, 6, 10) ಕ್ರೈಸ್ತರು ಸುಳ್ಳು ಧಾರ್ಮಿಕ ನಂಬಿಕೆಗಳನ್ನು ಒಳಗೂಡಿರುವ ಪದ್ಧತಿಗಳಿಂದ ದೂರವಿರುತ್ತಾರೆ. * ಇತರರಿಂದ ಬರುವ ಒತ್ತಡವು ಶುದ್ಧ ಆರಾಧನೆಯ ಕುರಿತಾಗಿರುವ ಬೈಬಲಿನ ಮಟ್ಟಗಳನ್ನು ರಾಜಿಮಾಡಿಕೊಳ್ಳಲು ಕಾರಣವಾಗುವಂತೆ ನಾವು ಅನುಮತಿಸುವುದಿಲ್ಲ.—ಅಪೊಸ್ತಲರ ಕಾರ್ಯಗಳು 5:29.

11. ನೈತಿಕ ಶುದ್ಧತೆಯಲ್ಲಿ ಏನು ಒಳಗೂಡಿದೆ ಮತ್ತು ಈ ಕ್ಷೇತ್ರದಲ್ಲಿ ನಾವು ಶುದ್ಧರಾಗಿರುವುದು ಅತ್ಯಾವಶ್ಯಕವಾಗಿದೆ ಏಕೆ?

11 ನೈತಿಕ ಶುದ್ಧತೆ. ನೈತಿಕವಾಗಿ ಶುದ್ಧರಾಗಿಟ್ಟುಕೊಳ್ಳುವುದು ಎಲ್ಲ ರೀತಿಯ ಲೈಂಗಿಕ ಅನೈತಿಕತೆಯಿಂದ ದೂರವಿರುವುದನ್ನು ಒಳಗೂಡಿದೆ. (ಎಫೆಸ 5:5 ಓದಿ.) ನಾವು ನೈತಿಕವಾಗಿ ಶುದ್ಧರಾಗಿ ಉಳಿಯುವುದು ಅತ್ಯಾವಶ್ಯಕ. ನಾವು ಈ ಪುಸ್ತಕದ ಮುಂದಿನ ಅಧ್ಯಾಯದಲ್ಲಿ ನೋಡಲಿರುವಂತೆ, ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಾವು ‘ಜಾರತ್ವಕ್ಕೆ ದೂರವಾಗಿ ಓಡಿಹೋಗಬೇಕು.’ ಪಶ್ಚಾತ್ತಾಪಪಡದ ಜಾರರು “ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ.” (1 ಕೊರಿಂಥ 6:9, 10, 18) ದೇವರ ದೃಷ್ಟಿಯಲ್ಲಿ ಅಂಥವರು ‘ತಮ್ಮ ಹೊಲಸುತನದಲ್ಲಿ ಅಸಹ್ಯರಾಗಿದ್ದಾರೆ.’ ಅವರು ನೈತಿಕವಾಗಿ ಶುದ್ಧರಾಗಿರಿಸಿಕೊಳ್ಳಲು ವಿಫಲರಾಗುವಲ್ಲಿ ‘ಇಂಥವರಿಗೆ ಸಿಗುವ ಪಾಲು ಎರಡನೆಯ ಮರಣವಾಗಿದೆ.’—ಪ್ರಕಟನೆ 21:8.

12, 13. ಆಲೋಚನೆಗಳು ಮತ್ತು ಕ್ರಿಯೆಗಳ ಮಧ್ಯೆ ಯಾವ ಸಂಬಂಧವಿದೆ ಮತ್ತು ನಾವು ಹೇಗೆ ನಮ್ಮನ್ನು ಮಾನಸಿಕವಾಗಿ ಶುದ್ಧರಾಗಿರಿಸಿಕೊಳ್ಳಬಲ್ಲೆವು?

12 ಮಾನಸಿಕ ಶುದ್ಧತೆ. ಆಲೋಚನೆಗಳು ಕ್ರಿಯೆಗಳಿಗೆ ನಡಿಸುತ್ತವೆ. ಕೆಟ್ಟ ಆಲೋಚನೆಗಳು ನಮ್ಮ ಹೃದಮನಗಳಲ್ಲಿ ಬೇರೂರುವಂತೆ ಬಿಡುವಲ್ಲಿ ಒಂದಲ್ಲ ಒಂದು ದಿನ ನಾವು ಅಶುದ್ಧ ಕೃತ್ಯಗಳನ್ನು ಮಾಡುವುದು ಹೆಚ್ಚು ಸಂಭವನೀಯ. (ಮತ್ತಾಯ 5:28; 15:18-20) ಆದರೆ ನಮ್ಮ ಮನಸ್ಸನ್ನು ನಿಷ್ಕಳಂಕವಾದ ಶುದ್ಧ ವಿಚಾರಗಳಿಂದ ತುಂಬಿಸುವುದಾದರೆ ಶುದ್ಧವಾಗಿರುವ ನಡತೆಯನ್ನು ಕಾಪಾಡಿಕೊಳ್ಳುವಂತೆ ಪ್ರಚೋದಿಸಲ್ಪಡಬಲ್ಲೆವು. (ಫಿಲಿಪ್ಪಿ 4:8 ಓದಿ.) ನಾವು ಮಾನಸಿಕವಾಗಿ ಹೇಗೆ ನಮ್ಮನ್ನು ಶುದ್ಧರಾಗಿ ಇರಿಸಿಕೊಳ್ಳಸಾಧ್ಯವಿದೆ? ಒಂದು ವಿಷಯವೇನೆಂದರೆ, ನಮ್ಮ ಆಲೋಚನೆಯನ್ನು ಕಲುಷಿತಗೊಳಿಸುವಂಥ ಯಾವುದೇ ರೀತಿಯ ಮನೋರಂಜನೆಯಿಂದ ನಾವು ದೂರವಿರುವ ಅಗತ್ಯವಿದೆ. * ಅಷ್ಟುಮಾತ್ರವಲ್ಲದೆ, ದೇವರ ವಾಕ್ಯವನ್ನು ಕ್ರಮವಾಗಿ ಅಧ್ಯಯನಮಾಡುವ ಮೂಲಕ ನಮ್ಮ ಮನಸ್ಸನ್ನು ನಾವು ಶುದ್ಧವಾದ ವಿಚಾರಗಳಿಂದ ತುಂಬಿಸಸಾಧ್ಯವಿದೆ.—ಕೀರ್ತನೆ 19:8, 9.

13 ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ನಾವು ನಮ್ಮನ್ನು ಆಧ್ಯಾತ್ಮಿಕವಾಗಿ, ನೈತಿಕವಾಗಿ ಮತ್ತು ಮಾನಸಿಕವಾಗಿ ಶುದ್ಧರಾಗಿರಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಶುದ್ಧತೆಯ ಕುರಿತಾದ ಈ ಅಂಶಗಳನ್ನು ಈ ಪುಸ್ತಕದ ಬೇರೆ ಅಧ್ಯಾಯಗಳಲ್ಲಿ ಇನ್ನೂ ಹೆಚ್ಚಾಗಿ ಚರ್ಚಿಸಲಾಗಿದೆ. ಇಲ್ಲಿ ನಾಲ್ಕನೆಯ ಅಂಶದ ಕುರಿತು ಅಂದರೆ ಶಾರೀರಿಕ ಶುದ್ಧತೆಯ ಕುರಿತು ಪರಿಶೀಲಿಸೋಣ.

ನಾವು ಹೇಗೆ ನಮ್ಮನ್ನು ಶಾರೀರಿಕವಾಗಿ ಶುದ್ಧರಾಗಿರಿಸಿಕೊಳ್ಳಬಲ್ಲೆವು?

14. ಶಾರೀರಿಕ ಶುದ್ಧತೆಯು ಒಂದು ವೈಯಕ್ತಿಕ ವಿಷಯವಾಗಿಲ್ಲ ಏಕೆ?

14 ಶಾರೀರಿಕ ಶುದ್ಧತೆಯಲ್ಲಿ ನಮ್ಮ ದೇಹಗಳನ್ನು ಮತ್ತು ಸುತ್ತಣ ಪರಿಸರವನ್ನು ಶುದ್ಧವಾಗಿಡುವುದು ಒಳಗೂಡಿದೆ. ಇಂಥ ಶುದ್ಧತೆಯು ವೈಯಕ್ತಿಕ ವಿಷಯವಾಗಿದ್ದು ಇತರರು ಈ ವಿಷಯದಲ್ಲಿ ತಲೆಹಾಕಬಾರದಾಗಿದೆಯೊ? ಯೆಹೋವನ ಆರಾಧಕರ ವಿಷಯದಲ್ಲಿ ನಿಶ್ಚಯವಾಗಿಯೂ ಹೀಗೆ ಹೇಳಸಾಧ್ಯವಿಲ್ಲ. ಈಗಾಗಲೇ ಗಮನಿಸಿದಂತೆ, ನಮ್ಮ ಶಾರೀರಿಕ ಶುದ್ಧತೆಯು ನಮ್ಮ ಒಳಿತಿಗಾಗಿರುವುದಿಂದ ಮಾತ್ರವೇ ಅಲ್ಲ, ಇದು ಯೆಹೋವನಿಗೆ ಕೀರ್ತಿಯನ್ನು ತರುವುದರಿಂದಲೂ ಆತನು ಇದನ್ನು ಪ್ರಾಮುಖ್ಯವಾಗಿ ಪರಿಗಣಿಸುತ್ತಾನೆ. ಆರಂಭದಲ್ಲಿ ಉಪಯೋಗಿಸಿದ ಉದಾಹರಣೆಯ ಕುರಿತು ಆಲೋಚಿಸಿರಿ. ಯಾವಾಗಲೂ ಕೊಳಕಾಗಿರುವ ಅಥವಾ ತಲೆಕೆದರಿಕೊಂಡಿರುವ ಒಂದು ಮಗುವನ್ನು ನೋಡುವಾಗ ಅವನ ಹೆತ್ತವರು ಎಂಥವರಾಗಿರಬಹುದು ಎಂಬ ಆಲೋಚನೆ ನಿಮಗೆ ಬರುತ್ತದೆ ಅಲ್ಲವೆ? ನಮ್ಮ ಹೊರತೋರಿಕೆ ಅಥವಾ ನಮ್ಮ ಜೀವನ ರೀತಿಯ ಕುರಿತಾದ ಯಾವುದೇ ವಿಷಯವು ನಮ್ಮ ಸ್ವರ್ಗೀಯ ತಂದೆಗೆ ಅಪಕೀರ್ತಿಯನ್ನು ತರುವಂತೆ ಅಥವಾ ನಾವು ಸಾರುವ ಸಂದೇಶದಿಂದ ಅಪಕರ್ಷಿಸುವಂತೆ ನಾವು ಬಯಸುವುದಿಲ್ಲ. ದೇವರ ವಾಕ್ಯವು ಹೇಳುವುದು: “ನಮ್ಮ ಶುಶ್ರೂಷೆಯು ಲೋಪವುಳ್ಳದ್ದಾಗಿ ಕಂಡುಬರದಂತೆ ನಾವು ಯಾವುದೇ ವಿಧದಲ್ಲಿ ಎಡವಲು ಯಾವುದೇ ಕಾರಣವನ್ನು ಕೊಡುತ್ತಿಲ್ಲ. ಆದರೆ ಪ್ರತಿಯೊಂದು ವಿಧದಲ್ಲಿ ನಾವು ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತಿದ್ದೇವೆ.” (2 ಕೊರಿಂಥ 6:3, 4) ಹಾಗಾದರೆ ನಾವು ನಮ್ಮನ್ನು ಹೇಗೆ ಶಾರೀರಿಕವಾಗಿ ಶುದ್ಧರಾಗಿರಿಸಿಕೊಳ್ಳಬಲ್ಲೆವು?

15, 16. ಒಳ್ಳೇ ಶುದ್ಧತೆಯನ್ನು ಕಾಪಾಡಿಕೊಳ್ಳುವ ರೂಢಿಯಲ್ಲಿ ಏನು ಒಳಗೂಡಿದೆ ಮತ್ತು ನಮ್ಮ ಉಡುಪುಗಳು ಹೇಗಿರಬೇಕು?

15 ನಮ್ಮ ವೈಯಕ್ತಿಕ ಶುದ್ಧತೆ ಮತ್ತು ಹೊರತೋರಿಕೆ. ಸಂಸ್ಕೃತಿಗಳು ಮತ್ತು ಜೀವನದ ಪರಿಸ್ಥಿತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವಾದರೂ, ಪ್ರತಿದಿನವೂ ಸ್ನಾನಮಾಡಲು ಮತ್ತು ನಾವು ಹಾಗೂ ನಮ್ಮ ಮಕ್ಕಳು ಶುದ್ಧರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಕಾಗುವಷ್ಟು ಸೋಪು ಮತ್ತು ನೀರು ಲಭ್ಯವಿರುವುದನ್ನು ನಾವು ಸಾಮಾನ್ಯವಾಗಿ ಕಂಡುಕೊಳ್ಳಸಾಧ್ಯವಿದೆ. ಒಳ್ಳೇ ಶುದ್ಧತೆಯನ್ನು ಕಾಪಾಡಿಕೊಳ್ಳುವ ರೂಢಿಯಲ್ಲಿ ಆಹಾರವನ್ನು ಸೇವಿಸುವುದಕ್ಕೆ ಮೊದಲು ಅಥವಾ ಆಹಾರವನ್ನು ನಿರ್ವಹಿಸುವಾಗ, ಶೌಚಾಲಯವನ್ನು ಉಪಯೋಗಿಸಿದ ಬಳಿಕ ಮತ್ತು ಮಗುವಿಗೆ ಸ್ನಾನಮಾಡಿಸಿದ ಬಳಿಕ ಅಥವಾ ಅದರ ಬಟ್ಟೆ ಬದಲಾಯಿಸಿದ ನಂತರ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆಯುವುದು ಒಳಗೂಡಿದೆ. ಸೋಪು ಮತ್ತು ನೀರಿನಿಂದ ಕೈಗಳನ್ನು ತೊಳೆಯುವುದು ಅನಾರೋಗ್ಯವನ್ನು ತಡೆಗಟ್ಟಬಲ್ಲದು ಮತ್ತು ಜೀವವನ್ನು ರಕ್ಷಿಸಬಲ್ಲದು. ಇದು ಹಾನಿಕರ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಗಳ ಹರಡುವಿಕೆಯನ್ನು ತಡೆಗಟ್ಟಬಲ್ಲದು; ಹೀಗೆ ಭೇದಿಗೆ ಸಂಬಂಧಿಸಿದ ರೋಗಗಳಿಂದ ದೂರವಿರುವಂತೆ ಜನರಿಗೆ ಸಹಾಯಮಾಡಬಲ್ಲದು. ಯಾವ ದೇಶಗಳಲ್ಲಿ ಮನೆಗಳಿಗೆ ಸಾಮಾನ್ಯವಾದ ಶೌಚಾಲಯದ ವ್ಯವಸ್ಥೆಯು ಇರುವುದಿಲ್ಲವೋ ಅಂಥ ಸ್ಥಳಗಳಲ್ಲಿ, ಪುರಾತನ ಇಸ್ರಾಯೇಲಿನಲ್ಲಿ ಮಾಡಲಾಗುತ್ತಿದ್ದಂತೆ ಭೂಮಿಯನ್ನು ಅಗೆದು ಕಲ್ಮಶವನ್ನು ಮುಚ್ಚಿಬಿಡಸಾಧ್ಯವಿದೆ.—ಧರ್ಮೋಪದೇಶಕಾಂಡ 23:12, 13.

16 ನಮ್ಮ ಉಡುಪುಗಳು ಶುದ್ಧವಾಗಿಯೂ ನೋಡಲು ಚೆನ್ನಾಗಿಯೂ ಇರಬೇಕಾದರೆ ಅವುಗಳನ್ನು ಸಹ ಕ್ರಮವಾಗಿ ಒಗೆಯಬೇಕು. ಒಬ್ಬ ಕ್ರೈಸ್ತನ ಉಡುಪುಗಳು ದುಬಾರಿಯದ್ದಾಗಿ ಅಥವಾ ಅತ್ಯಾಧುನಿಕ ಶೈಲಿಯದ್ದಾಗಿ ಇರಬೇಕೆಂದೇನೂ ಇಲ್ಲ, ಆದರೆ ಅವು ನೀಟಾಗಿ, ಶುದ್ಧವಾಗಿ ಮತ್ತು ಸಭ್ಯವಾಗಿ ಇರಬೇಕು. (1 ತಿಮೊಥೆಯ 2:9, 10 ಓದಿ.) ನಾವು ಎಲ್ಲೇ ಇರಲಿ, ನಮ್ಮ ಹೊರತೋರಿಕೆಯು “ನಮ್ಮ ರಕ್ಷಕನಾದ ದೇವರ ಬೋಧನೆಯನ್ನು . . . ಅಲಂಕರಿಸುವಂತೆ” ಇರಲು ಬಯಸುತ್ತೇವೆ.—ತೀತ 2:10.

17. ನಮ್ಮ ಮನೆ ಮತ್ತು ಸುತ್ತಣ ಪರಿಸರವು ಶುದ್ಧವಾಗಿಯೂ ನೋಡಲು ಚೆನ್ನಾಗಿಯೂ ಇರಬೇಕು ಏಕೆ?

17 ನಮ್ಮ ಮನೆ ಮತ್ತು ಸುತ್ತಣ ಪರಿಸರ. ನಮ್ಮ ಮನೆ ತುಂಬ ದೊಡ್ಡದಾಗಿಯೋ ವೈಭವಯುತವಾಗಿಯೋ ಇಲ್ಲದಿರಬಹುದು ಆದರೆ ಅದು ಸನ್ನಿವೇಶಗಳು ಅನುಮತಿಸುವಷ್ಟರ ಮಟ್ಟಿಗೆ ಶುದ್ಧವಾಗಿಯೂ ನೋಡಲು ಚೆನ್ನಾಗಿಯೂ ಇರಬೇಕಾಗಿದೆ. ಅದೇ ರೀತಿಯಲ್ಲಿ ಕೂಟಗಳಿಗೆ ಅಥವಾ ಕ್ಷೇತ್ರ ಸೇವೆಗೆ ಹೋಗಲಿಕ್ಕಾಗಿ ನಾವು ಒಂದು ವಾಹನವನ್ನು ಉಪಯೋಗಿಸುವಲ್ಲಿ ಅದರ ಒಳಗೂ ಹೊರಗೂ ಸಾಕಷ್ಟು ಶುದ್ಧವಾಗಿಡಲಿಕ್ಕಾಗಿ ನಮ್ಮಿಂದಾದುದೆಲ್ಲವನ್ನೂ ನಾವು ಮಾಡಸಾಧ್ಯವಿದೆ. ಶುದ್ಧವಾದ ಮನೆ ಮತ್ತು ಪರಿಸರವು ತಾನೇ ನಾವು ಆರಾಧಿಸುವ ದೇವರ ಕುರಿತು ಸಾಕ್ಷಿನೀಡುತ್ತದೆ ಎಂಬುದನ್ನು ನಾವು ಮರೆಯದಿರೋಣ. ಎಷ್ಟೆಂದರೂ ಯೆಹೋವನು ಶುದ್ಧ ದೇವರಾಗಿದ್ದಾನೆ, ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ಆತನು ನಾಶಮಾಡುವನು’ ಮತ್ತು ಶೀಘ್ರದಲ್ಲೇ ಆತನ ರಾಜ್ಯವು ನಮ್ಮ ಭೂಗೃಹವನ್ನು ಒಂದು ಪರದೈಸಾಗಿ ಮಾರ್ಪಡಿಸುವುದು ಎಂದು ನಾವೇ ಜನರಿಗೆ ಕಲಿಸುತ್ತೇವಲ್ಲಾ! (ಪ್ರಕಟನೆ 11:18; ಲೂಕ 23:43) ಖಂಡಿತವಾಗಿಯೂ ನಮ್ಮ ಮನೆ ಮತ್ತು ಸೊತ್ತುಗಳ ಹೊರತೋರಿಕೆಯು, ಬರಲಿರುವ ನೂತನ ಲೋಕದಲ್ಲಿ ಅಂಗೀಕೃತವಾಗುವಂಥ ಶುದ್ಧ ರೂಢಿಗಳನ್ನು ನಾವು ಈಗಲೇ ಬೆಳೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ಇತರರಿಗೆ ರುಜುಪಡಿಸುವಂತೆ ಬಯಸುತ್ತೇವೆ.

ಶಾರೀರಿಕ ಶುದ್ಧತೆಯಲ್ಲಿ ನಮ್ಮ ದೇಹಗಳನ್ನು ಮತ್ತು ಸುತ್ತಣ ಪರಿಸರವನ್ನು ಶುದ್ಧವಾಗಿಡುವುದು ಒಳಗೂಡಿದೆ

18. ನಮ್ಮ ರಾಜ್ಯ ಸಭಾಗೃಹಕ್ಕೆ ನಾವು ಹೇಗೆ ಗೌರವವನ್ನು ತೋರಿಸಬಲ್ಲೆವು?

18 ನಮ್ಮ ಆರಾಧನಾ ಸ್ಥಳ. ಯೆಹೋವನ ಮೇಲಿರುವ ನಮ್ಮ ಪ್ರೀತಿಯು ನಮ್ಮ ಕ್ಷೇತ್ರದಲ್ಲಿ ಸತ್ಯಾರಾಧನೆಯ ಕೇಂದ್ರವಾಗಿರುವ ನಮ್ಮ ರಾಜ್ಯ ಸಭಾಗೃಹಕ್ಕೆ ಗೌರವವನ್ನು ತೋರಿಸುವಂತೆ ಪ್ರಚೋದಿಸುತ್ತದೆ. ಹೊಸಬರು ಸಭಾಗೃಹಕ್ಕೆ ಬರುವಾಗ ನಮ್ಮ ಕೂಟದ ಸ್ಥಳದ ವಿಷಯದಲ್ಲಿ ಅವರಿಗೆ ಸದ್ಭಾವನೆ ಉಂಟಾಗುವಂತೆ ನಾವು ಬಯಸುತ್ತೇವೆ. ಸಭಾಗೃಹವು ನೋಡಲು ಯೋಗ್ಯವಾಗಿಯೂ ಆಕರ್ಷಕವಾಗಿಯೂ ಇರಬೇಕಾದರೆ ಕ್ರಮವಾದ ಸ್ವಚ್ಛತೆ ಮತ್ತು ದುರಸ್ತಿಯ ಆವಶ್ಯಕತೆಯಿದೆ. ನಮ್ಮ ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನು ಮಾಡುವ ಮೂಲಕ ನಾವು ಅದಕ್ಕೆ ಗೌರವವನ್ನು ತೋರಿಸುತ್ತೇವೆ. ನಮ್ಮ ಆರಾಧನಾ ಸ್ಥಳವನ್ನು ಶುದ್ಧಮಾಡುವುದರಲ್ಲಿ ಹಾಗೂ ‘ಭದ್ರಮಾಡಿ, ದುರಸ್ತುಮಾಡುವುದರಲ್ಲಿ’ ನಮ್ಮ ಸಮಯವನ್ನು ಸ್ವಇಚ್ಛೆಯಿಂದ ವಿನಿಯೋಗಿಸುವುದು ಒಂದು ಸುಯೋಗವಾಗಿದೆ. (2 ಪೂರ್ವಕಾಲವೃತ್ತಾಂತ 34:10, NIBV) ಸಮ್ಮೇಳನ ಹಾಲ್‌ನಲ್ಲಿ ಅಥವಾ ಸಮ್ಮೇಳನಗಳು ಇಲ್ಲವೆ ಅಧಿವೇಶನಗಳಿಗಾಗಿರುವ ಬೇರೊಂದು ಸೌಕರ್ಯದಲ್ಲಿ ನಾವು ಕೂಡಿಬರುವಾಗಲೂ ಇದೇ ಮೂಲತತ್ತ್ವವು ಅನ್ವಯವಾಗುತ್ತದೆ.

ಅಶುದ್ಧ ಅಭ್ಯಾಸಗಳು ಮತ್ತು ರೂಢಿಗಳಿಂದ ನಮ್ಮನ್ನು ಶುದ್ಧರಾಗಿರಿಸಿಕೊಳ್ಳುವುದು

19. ನಮ್ಮನ್ನು ಶಾರೀರಿಕವಾಗಿ ಶುದ್ಧವಾಗಿರಿಸಿಕೊಳ್ಳಲಿಕ್ಕಾಗಿ ನಾವು ಯಾವುದರಿಂದ ನಮ್ಮನ್ನು ದೂರವಿರಿಸಿಕೊಳ್ಳುವ ಅಗತ್ಯವಿದೆ ಮತ್ತು ಈ ವಿಷಯದಲ್ಲಿ ಬೈಬಲು ನಮಗೆ ಹೇಗೆ ಸಹಾಯಮಾಡುತ್ತದೆ?

19 ನಮ್ಮನ್ನು ಶಾರೀರಿಕವಾಗಿ ಶುದ್ಧವಾಗಿರಿಸಿಕೊಳ್ಳಲಿಕ್ಕಾಗಿ ನಾವು ಧೂಮಪಾನ, ಮದ್ಯಪಾನದ ದುರುಪಯೋಗ ಮತ್ತು ಚಟಹಿಡಿಸುವಂಥ ಅಥವಾ ಮನಸ್ಥಿತಿಯನ್ನು ಬದಲಾಯಿಸುವಂಥ ವಸ್ತುಗಳ ಅವೈದ್ಯಕೀಯ ಉಪಯೋಗದಂಥ ಅಶುದ್ಧ ಅಭ್ಯಾಸಗಳು ಮತ್ತು ರೂಢಿಗಳಿಂದ ನಮ್ಮನ್ನು ದೂರವಿರಿಸಿಕೊಳ್ಳುವ ಅಗತ್ಯವಿದೆ. ಇಂದು ಪ್ರಚಲಿತವಾಗಿರುವ ಎಲ್ಲ ರೀತಿಯ ಅಶುದ್ಧ ಮತ್ತು ಅಸಹ್ಯಕರ ಅಭ್ಯಾಸಗಳು ಹಾಗೂ ರೂಢಿಗಳನ್ನು ಬೈಬಲು ನಿರ್ದಿಷ್ಟವಾಗಿ ಹೆಸರಿಸುವುದಿಲ್ಲ, ಆದರೆ ಇಂಥ ವಿಷಯಗಳ ಕುರಿತು ನಿಜವಾಗಿಯೂ ಯೆಹೋವನಿಗೆ ಹೇಗನಿಸುತ್ತದೆ ಎಂಬುದನ್ನು ನಾವು ಗ್ರಹಿಸುವಂತೆ ಸಹಾಯಮಾಡಬಲ್ಲ ಮೂಲತತ್ತ್ವಗಳು ಅದರಲ್ಲಿವೆ. ವಿಷಯಗಳ ಕುರಿತಾದ ಯೆಹೋವನ ದೃಷ್ಟಿಕೋನವು ನಮಗೆ ಗೊತ್ತಿರುವುದರಿಂದ, ಆತನ ಮೇಲೆ ನಮಗಿರುವ ಪ್ರೀತಿಯು ಆತನ ಸಮ್ಮತಿಯನ್ನು ತರುವಂಥ ಮಾರ್ಗವನ್ನು ಆಯ್ಕೆಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಾವೀಗ ಶಾಸ್ತ್ರಾಧಾರಿತವಾದ ಐದು ಮೂಲತತ್ತ್ವಗಳನ್ನು ಪರಿಗಣಿಸೋಣ.

20, 21. ಯಾವ ರೀತಿಯ ರೂಢಿಗಳಿಂದ ನಾವು ದೂರವಿರುವಂತೆ ಯೆಹೋವನು ಬಯಸುತ್ತಾನೆ ಮತ್ತು ಇದಕ್ಕೆ ವಿಧೇಯರಾಗಲು ನಮಗೆ ಯಾವ ಪ್ರಬಲವಾದ ಕಾರಣವಿದೆ?

20 “ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ ನಾವು ಶರೀರ ಮತ್ತು ಮನಸ್ಸಿನ ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಲ್ಲಿ ಪವಿತ್ರತೆಯನ್ನು ಪರಿಪೂರ್ಣಗೊಳಿಸೋಣ.” (2 ಕೊರಿಂಥ 7:1) ನಮ್ಮ ಶರೀರಗಳನ್ನು ಮಲಿನಗೊಳಿಸುವ ಮತ್ತು ನಮ್ಮ ಮನೋಭಾವವನ್ನು ಅಥವಾ ಪ್ರಮುಖ ಆಲೋಚನಾ ರೀತಿಯನ್ನು ಹಾಳುಮಾಡುವ ರೂಢಿಗಳಿಂದ ದೂರವಿರುವಂತೆ ಯೆಹೋವನು ಬಯಸುತ್ತಾನೆ. ಆದುದರಿಂದ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಹಾನಿಕರವೆಂದು ಜ್ಞಾತವಾಗಿರುವ ಚಟಹಿಡಿಸುವ ವರ್ತನೆಗಳಿಂದ ನಾವು ದೂರವಿರಬೇಕು.

21 ‘ಪ್ರತಿಯೊಂದು ಕಲ್ಮಶದಿಂದ ನಮ್ಮನ್ನು ಶುಚಿಮಾಡಿಕೊಳ್ಳಲು’ ಬೈಬಲು ನಮಗೆ ಒಂದು ಪ್ರಬಲವಾದ ಕಾರಣವನ್ನು ಕೊಡುತ್ತದೆ. 2 ಕೊರಿಂಥ 7:1, “ಈ ವಾಗ್ದಾನಗಳು ನಮಗಿರುವುದರಿಂದ” ಎಂಬ ಮಾತುಗಳಿಂದ ಆರಂಭಗೊಳ್ಳುತ್ತದೆ ಎಂಬುದನ್ನು ಗಮನಿಸಿ. ಯಾವ ವಾಗ್ದಾನಗಳು? ಮುಂಚಿನ ವಚನಗಳಲ್ಲಿ ತಿಳಿಸಲ್ಪಟ್ಟಿರುವಂತೆ, “ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು. ನಾನು ನಿಮಗೆ ತಂದೆಯಾಗಿರುವೆನು” ಎಂದು ಯೆಹೋವನು ವಾಗ್ದಾನಿಸುತ್ತಾನೆ. (2 ಕೊರಿಂಥ 6:17, 18) ತುಸು ಕಲ್ಪಿಸಿಕೊಳ್ಳಿ: ತನ್ನ ಸಂರಕ್ಷಣಾ ಆರೈಕೆಯ ಕೆಳಗೆ ನಿಮ್ಮನ್ನು ಇಡುತ್ತೇನೆ ಮತ್ತು ಒಬ್ಬ ತಂದೆಯು ಮಗನನ್ನೊ ಮಗಳನ್ನೊ ಪ್ರೀತಿಸುವಂತೆ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಯೆಹೋವನು ವಾಗ್ದಾನಿಸುತ್ತಾನೆ. ಆದರೆ ನೀವು “ಶರೀರ ಮತ್ತು ಮನಸ್ಸಿನ” ಕಲ್ಮಶಗಳಿಂದ ದೂರವಿರುವುದಾದರೆ ಮಾತ್ರ ಯೆಹೋವನು ಈ ವಾಗ್ದಾನಗಳನ್ನು ನೆರವೇರಿಸುವನು. ಹಾಗಾದರೆ ಯಾವುದೇ ರೀತಿಯ ಅಸಹ್ಯಕರ ಅಭ್ಯಾಸ ಅಥವಾ ರೂಢಿಯು ಯೆಹೋವನೊಂದಿಗಿನ ಇಂಥ ಒಂದು ಅಮೂಲ್ಯವಾದ ಮತ್ತು ನಿಕಟವಾದ ಸಂಬಂಧವನ್ನು ನಿಮ್ಮಿಂದ ಕಸಿದುಕೊಳ್ಳುವಂತೆ ಬಿಟ್ಟುಕೊಡುವುದು ಎಷ್ಟು ಮೂರ್ಖತನವಾಗಿರುವುದು!

22-25. ದುರಭ್ಯಾಸಗಳಿಂದ ಅಥವಾ ಕೆಟ್ಟ ರೂಢಿಗಳಿಂದ ದೂರವಿರಲು ಯಾವ ಶಾಸ್ತ್ರಾಧಾರಿತ ಮೂಲತತ್ತ್ವಗಳು ನಮಗೆ ಸಹಾಯಮಾಡಬಲ್ಲವು?

22 “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.” (ಮತ್ತಾಯ 22:37) ಯೇಸು ಇದನ್ನು ಅತಿ ದೊಡ್ಡದಾದ ಆಜ್ಞೆಯಾಗಿ ಆಯ್ಕೆಮಾಡಿದನು. (ಮತ್ತಾಯ 22:38) ಯೆಹೋವನು ನಮ್ಮಿಂದ ಇಂಥ ಪ್ರೀತಿಯನ್ನು ಪಡೆಯಲು ಅರ್ಹನಾಗಿದ್ದಾನೆ. ನಮ್ಮ ಪೂರ್ಣ ಹೃದಯ, ಪ್ರಾಣ ಮತ್ತು ಮನಸ್ಸಿನಿಂದ ಆತನನ್ನು ಪ್ರೀತಿಸಬೇಕಾದರೆ ನಾವು ನಮ್ಮ ಜೀವಿತವನ್ನು ಮೊಟಕುಗೊಳಿಸಸಾಧ್ಯವಿರುವ ಅಥವಾ ನಮ್ಮ ದೇವದತ್ತ ಆಲೋಚನಾ ಸಾಮರ್ಥ್ಯಗಳನ್ನು ಮಂಕುಗೊಳಿಸಸಾಧ್ಯವಿರುವ ರೂಢಿಗಳಿಂದ ದೂರವಿರಬೇಕಾಗಿದೆ.

23 [ಯೆಹೋವನೇ] ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತನಾಗಿದ್ದಾನೆ.” (ಅಪೊಸ್ತಲರ ಕಾರ್ಯಗಳು 17:24, 25) ಜೀವವು ದೇವರಿಂದ ಕೊಡಲ್ಪಟ್ಟಿರುವ ಉಡುಗೊರೆಯಾಗಿದೆ. ಉಡುಗೊರೆ ಕೊಟ್ಟಾತನನ್ನು ನಾವು ಪ್ರೀತಿಸುತ್ತೇವೆ, ಆದುದರಿಂದ ಅದಕ್ಕೆ ಗೌರವವನ್ನು ತೋರಿಸಲು ಬಯಸುತ್ತೇವೆ. ನಮ್ಮ ಆರೋಗ್ಯಕ್ಕೆ ಹಾನಿಕರವಾಗಿರುವ ಯಾವುದೇ ಅಭ್ಯಾಸಗಳನ್ನು ಅಥವಾ ರೂಢಿಗಳನ್ನು ನಾವು ತೊರೆಯುತ್ತೇವೆ, ಏಕೆಂದರೆ ಇಂಥ ರೂಢಿಗಳು ಜೀವದ ಉಡುಗೊರೆಗೆ ಪೂರ್ಣ ರೀತಿಯಲ್ಲಿ ಅಗೌರವವನ್ನು ತೋರಿಸುತ್ತವೆ ಎಂಬ ಮನವರಿಕೆ ನಮಗಿದೆ.—ಕೀರ್ತನೆ 36:9.

24 “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು.” (ಮತ್ತಾಯ 22:39) ದುರಭ್ಯಾಸಗಳು ಮತ್ತು ರೂಢಿಗಳು ಅನೇಕವೇಳೆ ಅವುಗಳನ್ನು ಕಾರ್ಯತಃ ಆಚರಿಸುವವರ ಮೇಲೆ ಮಾತ್ರವಲ್ಲ ಅವರ ಸುತ್ತಲೂ ಇರುವವರ ಮೇಲೆ ಸಹ ಪ್ರಭಾವವನ್ನು ಬೀರುತ್ತವೆ. ಉದಾಹರಣೆಗೆ, ಧೂಮಪಾನಮಾಡದಿರುವವರು ಪರೋಕ್ಷವಾದ ರೀತಿಯಲ್ಲಿ ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು ಅವರ ಮೇಲೆ ಹಾನಿಕರ ಪರಿಣಾಮವನ್ನು ಬೀರಬಲ್ಲದು. ತನ್ನ ಸುತ್ತಲೂ ಇರುವವರಿಗೆ ಹಾನಿಮಾಡುವ ಒಬ್ಬ ವ್ಯಕ್ತಿಯು, ನಮ್ಮ ನೆರೆಯವನನ್ನು ಪ್ರೀತಿಸಬೇಕೆಂಬ ದೈವಿಕ ಆಜ್ಞೆಯನ್ನು ಉಲ್ಲಂಘಿಸುವವನಾಗಿದ್ದಾನೆ. ಅಷ್ಟುಮಾತ್ರವಲ್ಲ ತಾನು ದೇವರನ್ನು ಪ್ರೀತಿಸುತ್ತೇನೆ ಎಂಬ ಯಾವುದೇ ಪ್ರತಿಪಾದನೆಯನ್ನು ಅವನು ಸುಳ್ಳಾಗಿಸುತ್ತಾನೆ.—1 ಯೋಹಾನ 4:20, 21.

25 ‘ಸರಕಾರಗಳಿಗೆ ಮತ್ತು ಅಧಿಕಾರಿಗಳಿಗೆ ಅಧೀನರಾಗಿ ವಿಧೇಯರಾಗಿರಿ.’ (ತೀತ 3:1) ಅನೇಕ ದೇಶಗಳಲ್ಲಿ ಕೆಲವು ನಿರ್ದಿಷ್ಟ ಅಮಲೌಷಧಗಳನ್ನು ಹೊಂದಿರುವುದು ಅಥವಾ ಉಪಯೋಗಿಸುವುದು ನಿಯಮೋಲ್ಲಂಘನೆಯಾಗಿದೆ. ನಿಜ ಕ್ರೈಸ್ತರಾಗಿರುವ ನಾವು ಕಾನೂನುಬಾಹಿರ ಅಮಲೌಷಧಗಳನ್ನು ಇಟ್ಟುಕೊಳ್ಳುವುದಿಲ್ಲ ಅಥವಾ ಅವುಗಳನ್ನು ಉಪಯೋಗಿಸುವುದಿಲ್ಲ.—ರೋಮನ್ನರಿಗೆ 13:1.

26. (ಎ) ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಾವು ಏನು ಮಾಡುವ ಆವಶ್ಯಕತೆಯಿದೆ? (ಬಿ) ದೇವರ ದೃಷ್ಟಿಯಲ್ಲಿ ಶುದ್ಧರಾಗಿರಿಸಿಕೊಳ್ಳುವುದು ಅತ್ಯುತ್ತಮ ರೀತಿಯ ಜೀವನ ಮಾರ್ಗವಾಗಿದೆ ಏಕೆ?

26 ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಾವು ಒಂದೆರಡು ಕ್ಷೇತ್ರಗಳಲ್ಲಿ ಮಾತ್ರ ಅಲ್ಲ ಎಲ್ಲ ಕ್ಷೇತ್ರಗಳಲ್ಲಿ ನಮ್ಮನ್ನು ಶುದ್ಧರಾಗಿರಿಸಿಕೊಳ್ಳುವ ಆವಶ್ಯಕತೆಯಿದೆ. ಅಶುದ್ಧಕರವಾದ ಅಭ್ಯಾಸಗಳು ಮತ್ತು ರೂಢಿಗಳನ್ನು ತೊರೆಯುವುದು ಮತ್ತು ಅವುಗಳಿಂದ ದೂರವಿರುವುದು ಸುಲಭವಲ್ಲದಿರಬಹುದು, ಆದರೆ ಖಂಡಿತ ಸಾಧ್ಯ. * ನಿಜವಾಗಿಯೂ ಇದಕ್ಕಿಂತ ಉತ್ತಮವಾದ ಜೀವನ ಮಾರ್ಗವು ಬೇರೊಂದಿಲ್ಲ, ಏಕೆಂದರೆ ಯೆಹೋವನು ಬೋಧಿಸುವಂಥದ್ದು ಯಾವಾಗಲೂ ನಮಗೆ ಒಳಿತನ್ನೇ ಉಂಟುಮಾಡುತ್ತದೆ. (ಯೆಶಾಯ 48:17 ಓದಿ.) ಎಲ್ಲಕ್ಕಿಂತಲೂ ಮುಖ್ಯವಾಗಿ, ನಮ್ಮನ್ನು ಶುದ್ಧರಾಗಿರಿಸಿಕೊಳ್ಳುವ ಮೂಲಕ ನಾವು ಪ್ರೀತಿಸುವಂಥ ದೇವರಿಗೆ ಒಳ್ಳೇ ಹೆಸರನ್ನು ತರುತ್ತಿದ್ದೇವೆ ಎಂಬುದನ್ನು ತಿಳಿದಿರುವುದರಿಂದ ಸಿಗುವ ಸಂತೃಪ್ತಿ ನಮಗಿರಬಲ್ಲದು. ಹೀಗೆ ನಾವು ದೇವರ ಪ್ರೀತಿಯಲ್ಲಿ ಉಳಿಯುತ್ತೇವೆ.

^ ಪ್ಯಾರ. 2 “ಶುದ್ಧ” ಎಂದು ತರ್ಜುಮೆಮಾಡಲಾಗಿರುವ ಹೀಬ್ರು ಪದವು ಕೇವಲ ಶಾರೀರಿಕ ಶುದ್ಧತೆಯನ್ನು ಮಾತ್ರವಲ್ಲ ನೈತಿಕ ಅಥವಾ ಆಧ್ಯಾತ್ಮಿಕ ಶುದ್ಧತೆಯನ್ನು ಸಹ ವಿವರಿಸುತ್ತದೆ.

^ ಪ್ಯಾರ. 67 ಹೆಸರನ್ನು ಬದಲಾಯಿಸಲಾಗಿದೆ.