ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 12

‘ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವುದನ್ನೇ’ ಮಾತಾಡಿರಿ

‘ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವುದನ್ನೇ’ ಮಾತಾಡಿರಿ

“ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; ಆದರೆ . . . ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ.”—ಎಫೆಸ 4:29.

1-3. (ಎ) ಯೆಹೋವನು ನಮಗೆ ಕೊಟ್ಟಿರುವ ಒಂದು ಉಡುಗೊರೆಯು ಏನಾಗಿದೆ ಮತ್ತು ಅದನ್ನು ಹೇಗೆ ದುರುಪಯೋಗಿಸಸಾಧ್ಯವಿದೆ? (ಬಿ) ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ನಾವು ಮಾತಿನ ವರದಾನವನ್ನು ಹೇಗೆ ಉಪಯೋಗಿಸುವ ಅಗತ್ಯವಿದೆ?

ನಿಮಗೆ ಪ್ರಿಯರಾದವರೊಬ್ಬರಿಗೆ ನೀವು ಒಂದು ಉಡುಗೊರೆಯನ್ನು ಕೊಟ್ಟಿದ್ದು, ಅವರು ಅದನ್ನು ಬೇಕುಬೇಕೆಂದೇ ದುರುಪಯೋಗಿಸುವಲ್ಲಿ ನಿಮಗೆ ಹೇಗನಿಸಬಹುದು? ನೀವು ಅವರಿಗೆ ಒಂದು ಕಾರನ್ನು ಕೊಟ್ಟಿದ್ದೀರಿ ಎಂದಿಟ್ಟುಕೊಳ್ಳಿ. ಅವರು ಅದನ್ನು ಇತರರಿಗೆ ಹಾನಿಯನ್ನು ಉಂಟುಮಾಡುವಂಥ ರೀತಿಯಲ್ಲಿ ತುಂಬ ಅಜಾಗರೂಕತೆಯಿಂದ ಡ್ರೈವ್‌ಮಾಡಿದ್ದಾರೆಂಬುದು ನಿಮಗೆ ಅನಂತರ ತಿಳಿದುಬರುತ್ತದೆ. ಆಗ ನಿಮಗೆ ಆಶಾಭಂಗವಾಗುತ್ತದಲ್ಲವೆ?

2 ಗ್ರಹಿಸಲು ಸಾಧ್ಯವಾದ ರೀತಿಯಲ್ಲಿ ಮಾತನಾಡುವ ಸಾಮರ್ಥ್ಯವು ‘ಪ್ರತಿಯೊಂದು ಒಳ್ಳೆಯ ದಾನ ಮತ್ತು ಪ್ರತಿಯೊಂದು ಒಳ್ಳೆಯ ವರದ’ ದಾತನಾಗಿರುವ ಯೆಹೋವನಿಂದ ಕೊಡಲ್ಪಟ್ಟಿರುವ ಒಂದು ಉಡುಗೊರೆಯಾಗಿದೆ. (ಯಾಕೋಬ 1:17) ಪ್ರಾಣಿ ಸೃಷ್ಟಿಯಿಂದ ಮಾನವ ಕುಟುಂಬವನ್ನು ಪ್ರತ್ಯೇಕಿಸುವಂಥ ಈ ಉಡುಗೊರೆ ಅಥವಾ ಕೊಡುಗೆಯು, ನಮ್ಮ ಆಲೋಚನೆಗಳನ್ನು ಮಾತ್ರವಲ್ಲ ನಮ್ಮ ಭಾವನೆಗಳನ್ನು ಸಹ ಇತರರಿಗೆ ವ್ಯಕ್ತಪಡಿಸಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಆದರೆ ಒಂದು ಮೋಟಾರು ವಾಹನದಂತೆ ಮಾತಿನ ಕೊಡುಗೆಯನ್ನೂ ದುರುಪಯೋಗಿಸಸಾಧ್ಯವಿದೆ. ಇತರರಿಗೆ ಮನೋವೇದನೆ ಹಾಗೂ ನೋವನ್ನು ಉಂಟುಮಾಡುವಂಥ ರೀತಿಯಲ್ಲಿ ಮಾತನ್ನು ಅಜಾಗರೂಕವಾಗಿ ಉಪಯೋಗಿಸುವಾಗ ಯೆಹೋವನಿಗೆ ಅದೆಷ್ಟು ಆಶಾಭಂಗವನ್ನು ಉಂಟುಮಾಡುತ್ತದೆ!

3 ದೇವರ ಪ್ರೀತಿಯಲ್ಲಿ ಉಳಿಯಬೇಕಾದರೆ ನಾವು ಮಾತಿನ ವರದಾನವನ್ನು ಕೊಟ್ಟಾತನು ಉದ್ದೇಶಿಸುವ ಪ್ರಕಾರವೇ ಅದನ್ನು ಉಪಯೋಗಿಸುವ ಅಗತ್ಯವಿದೆ. ಯಾವ ರೀತಿಯ ಮಾತು ತನಗೆ ಪ್ರಿಯವಾಗಿದೆ ಎಂಬುದನ್ನು ಯೆಹೋವನು ಸ್ಪಷ್ಟವಾಗಿ ತಿಳಿಯಪಡಿಸುತ್ತಾನೆ. “ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ; ಆದರೆ ಅಗತ್ಯಕ್ಕನುಸಾರ ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು ಆಡಿರಿ; ಇದು ಕೇಳುವವರಿಗೆ ಪ್ರಯೋಜನವನ್ನು ಉಂಟುಮಾಡಬಹುದು” ಎಂದು ಆತನ ವಾಕ್ಯವು ತಿಳಿಸುತ್ತದೆ. (ಎಫೆಸ 4:29) ನಾವು ಮಾತಿನ ವಿಷಯದಲ್ಲಿ ಏಕೆ ಜಾಗ್ರತೆವಹಿಸುವ ಅಗತ್ಯವಿದೆ, ಎಂಥ ರೀತಿಯ ಮಾತಿನಿಂದ ನಾವು ದೂರವಿರಬೇಕು ಮತ್ತು “ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ” ಮಾತುಗಳನ್ನು ನಾವು ಹೇಗೆ ಆಡಸಾಧ್ಯವಿದೆ ಎಂಬುದನ್ನು ನಾವೀಗ ಚರ್ಚಿಸೋಣ.

ನಾವು ಮಾತಿನ ವಿಷಯದಲ್ಲಿ ಏಕೆ ಜಾಗ್ರತೆವಹಿಸುವ ಅಗತ್ಯವಿದೆ?

4, 5. ಮಾತುಗಳ ಶಕ್ತಿಯನ್ನು ಬೈಬಲಿನ ಕೆಲವು ಜ್ಞಾನೋಕ್ತಿಗಳು ಹೇಗೆ ವರ್ಣಿಸುತ್ತವೆ?

4 ನಾವು ಮಾತಿನ ವಿಷಯದಲ್ಲಿ ಜಾಗ್ರತೆವಹಿಸಲಿಕ್ಕಾಗಿರುವ ಒಂದು ಕಾರಣವು ಯಾವುದೆಂದರೆ, ಮಾತುಗಳಿಗೆ ಶಕ್ತಿಯಿದೆ. ಜ್ಞಾನೋಕ್ತಿ 15:4 ಹೇಳುವುದು: “ಸಂತೈಸುವ ನಾಲಿಗೆ ಜೀವವೃಕ್ಷವು; ಬಲಾತ್ಕರಿಸುವ ನಾಲಿಗೆ ಮನಮುರಿಯುವದು.” * ನೀರಿನ ಆವಶ್ಯಕತೆಯುಳ್ಳ ಒಂದು ಮರವನ್ನು ನೀರು ಹೇಗೆ ಪುನಶ್ಚೈತನ್ಯಗೊಳಿಸುತ್ತದೋ ಹಾಗೆಯೇ ಸಂತೈಸುವ ನಾಲಿಗೆಯಿಂದ ಹೊರಡುವ ಸಾಂತ್ವನದಾಯಕ ಮಾತು ಅದನ್ನು ಕೇಳಿಸಿಕೊಳ್ಳುವವರ ಮನಸ್ಸನ್ನು ಚೈತನ್ಯಗೊಳಿಸಬಲ್ಲದು. ಇದಕ್ಕೆ ವಿರುದ್ಧವಾಗಿ ವಕ್ರವಾದ ನಾಲಿಗೆಯ ವಿಕೃತ ಮಾತುಗಳು ಇತರರ ಮನಸ್ಸನ್ನು ಮುದುರಿಸಬಲ್ಲವು. ವಾಸ್ತವದಲ್ಲಿ ನಾವು ಆಡುವ ಮಾತುಗಳಿಗೆ ಹಾನಿಮಾಡುವ ಅಥವಾ ವಾಸಿಮಾಡುವ ಶಕ್ತಿಯಿದೆ.—ಜ್ಞಾನೋಕ್ತಿ 18:21.

5 ಮಾತುಗಳ ಶಕ್ತಿಯನ್ನು ಸ್ಪಷ್ಟವಾಗಿ ವಿವರಿಸುತ್ತಾ ಇನ್ನೊಂದು ಜ್ಞಾನೋಕ್ತಿಯು ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು.” (ಜ್ಞಾನೋಕ್ತಿ 12:18) ಆತುರದಿಂದ ಆಡಲ್ಪಡುವ ದುಡುಕಿನ ಮಾತುಗಳು ಆಳವಾದ ಭಾವನಾತ್ಮಕ ಗಾಯಗಳನ್ನು ಉಂಟುಮಾಡಬಲ್ಲವು ಮತ್ತು ಸಂಬಂಧಗಳನ್ನು ಹಾಳುಮಾಡಬಲ್ಲವು. ಮಾತಿನ ಕತ್ತಿಯ ತಿವಿತಗಳಿಗೆ ಸಿಕ್ಕಿ ನಿಮ್ಮ ಹೃದಯವು ಎಂದಾದರೂ ತೀವ್ರ ವೇದನೆಯನ್ನು ಅನುಭವಿಸಿದೆಯೊ? ಇದೇ ಜ್ಞಾನೋಕ್ತಿಯು ಉತ್ತೇಜನದಾಯಕವಾಗಿ ಹೇಳುವುದು: “[ವಿವೇಕಿಗಳ] ನಾಲಿಗೆಯು ಸ್ವಸ್ಥತೆಯನ್ನು ತರುವುದು.” (NIBV) ದೈವಿಕ ವಿವೇಕವನ್ನು ತೋರಿಸುವಂಥ ಒಬ್ಬ ವ್ಯಕ್ತಿಯ ಆಲೋಚನಾಭರಿತ ಮಾತುಗಳು ನೋವನ್ನು ಅನುಭವಿಸುತ್ತಿರುವ ಹೃದಯಕ್ಕೆ ಸ್ವಸ್ಥತೆಯನ್ನು ಉಂಟುಮಾಡಬಲ್ಲವು ಮತ್ತು ಸಂಬಂಧಗಳನ್ನು ಸರಿಪಡಿಸಬಲ್ಲವು. ದಯಾಭರಿತ ಮಾತುಗಳ ಸ್ವಸ್ಥಮಾಡುವ ಶಕ್ತಿಯನ್ನು ನೀವು ಅನುಭವಿಸಿದ ಸಂದರ್ಭವನ್ನು ನೆನಪಿಸಿಕೊಳ್ಳಬಲ್ಲಿರೊ? (ಜ್ಞಾನೋಕ್ತಿ 16:24 ಓದಿ.) ನಾವು ಏನು ಹೇಳುತ್ತೇವೋ ಅದು ಇತರರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತವರಾಗಿದ್ದು, ನಮ್ಮ ಮಾತನ್ನು ಇತರರಿಗೆ ನೋವುಮಾಡಲಿಕ್ಕಾಗಿ ಅಲ್ಲ ಬದಲಾಗಿ ಸ್ವಸ್ಥತೆಯನ್ನು ಉಂಟುಮಾಡಲಿಕ್ಕಾಗಿ ಉಪಯೋಗಿಸಲು ಬಯಸುತ್ತೇವೆ ಎಂಬುದು ನಿಶ್ಚಯ.

ಸಂತೈಸುವ ಮಾತು ಚೈತನ್ಯದಾಯಕವಾಗಿರುತ್ತದೆ

6. ನಮ್ಮ ನಾಲಿಗೆಯನ್ನು ಹತೋಟಿಯಲ್ಲಿಡುವುದು ನಿಜವಾದ ಹೋರಾಟವಾಗಿದೆ ಏಕೆ?

6 ನಾವು ಎಷ್ಟೇ ಕಠಿನ ಪ್ರಯತ್ನವನ್ನು ಮಾಡುವುದಾದರೂ ನಮ್ಮ ನಾಲಿಗೆಯನ್ನು ಸಂಪೂರ್ಣವಾಗಿ ಹತೋಟಿಯಲ್ಲಿಡಲು ಸಾಧ್ಯವಿಲ್ಲ. ಆದುದರಿಂದ ನಮ್ಮ ಮಾತಿನ ವಿಷಯದಲ್ಲಿ ಜಾಗ್ರತೆವಹಿಸಲಿಕ್ಕಾಗಿರುವ ಎರಡನೆಯ ಕಾರಣವು ಇಲ್ಲಿ ಕೊಡಲ್ಪಟ್ಟಿದೆ: ಪಾಪ ಮತ್ತು ಅಪರಿಪೂರ್ಣತೆಯು ನಾವು ನಮ್ಮ ನಾಲಿಗೆಯನ್ನು ದುರುಪಯೋಗಿಸುವ ಪ್ರವೃತ್ತಿಯುಳ್ಳವರಾಗುವಂತೆ ಮಾಡುತ್ತದೆ. ಮಾತುಗಳು ನಮ್ಮ ಹೃದಯದ ಉತ್ಪನ್ನವಾಗಿವೆ ಮತ್ತು ‘ಮನುಷ್ಯರ ಮನಸ್ಸಂಕಲ್ಪವು ಕೆಟ್ಟದ್ದಾಗಿದೆ.’ (ಆದಿಕಾಂಡ 8:21; ಲೂಕ 6:45) ಆದುದರಿಂದ ನಮ್ಮ ನಾಲಿಗೆಗೆ ಕಡಿವಾಣಹಾಕುವುದು ನಿಜವಾದ ಹೋರಾಟವಾಗಿದೆ. (ಯಾಕೋಬ 3:2-4 ಓದಿ.) ನಮ್ಮ ನಾಲಿಗೆಯನ್ನು ನಾವು ಸಂಪೂರ್ಣವಾಗಿ ಹತೋಟಿಯಲ್ಲಿಡಲು ಸಾಧ್ಯವಿಲ್ಲವಾದರೂ, ನಾವು ಅದನ್ನು ಹೇಗೆ ಉಪಯೋಗಿಸುತ್ತೇವೋ ಅದರಲ್ಲಿ ಪ್ರಗತಿಯನ್ನು ಮಾಡುತ್ತಾ ಇರಸಾಧ್ಯವಿದೆ. ಪ್ರವಾಹಕ್ಕೆ ಎದುರಾಗಿ ಈಜಲು ಪ್ರಯತ್ನಿಸುತ್ತಿರುವ ಈಜುಗಾರನು ಪ್ರವಾಹದೊಂದಿಗೆ ಹೋರಾಡುತ್ತಾ ಇರಬೇಕಾಗಿರುವಂತೆಯೇ ನಮ್ಮ ನಾಲಿಗೆಯನ್ನು ದುರುಪಯೋಗಿಸುವ ಪಾಪಪೂರಿತ ಪ್ರವೃತ್ತಿಯ ವಿರುದ್ಧ ನಾವು ಹೋರಾಟ ನಡೆಸುತ್ತಾ ಇರಬೇಕಾಗಿದೆ.

7, 8. ನಮ್ಮ ಮಾತುಗಳಿಗಾಗಿ ಯೆಹೋವನು ಎಷ್ಟರ ಮಟ್ಟಿಗೆ ನಮ್ಮಿಂದ ಲೆಕ್ಕವನ್ನು ಕೇಳುತ್ತಾನೆ?

7 ಮಾತಿನ ವಿಷಯದಲ್ಲಿ ಜಾಗ್ರತೆವಹಿಸಲಿಕ್ಕಾಗಿರುವ ಮೂರನೆಯ ಕಾರಣವು, ನಮ್ಮ ಮಾತುಗಳ ವಿಷಯದಲ್ಲಿ ನಾವು ಯೆಹೋವನ ಮುಂದೆ ಲೆಕ್ಕ ಒಪ್ಪಿಸಬೇಕು. ನಾವು ನಮ್ಮ ನಾಲಿಗೆಯನ್ನು ಉಪಯೋಗಿಸುವ ರೀತಿಯು ಜೊತೆ ಮಾನವರೊಂದಿಗಿನ ನಮ್ಮ ಸಂಬಂಧದ ಮೇಲೆ ಮಾತ್ರವಲ್ಲ ಯೆಹೋವನೊಂದಿಗಿನ ನಮ್ಮ ನಿಲುವಿನ ಮೇಲೆಯೂ ಪರಿಣಾಮ ಬೀರುತ್ತದೆ. ಯಾಕೋಬ 1:26 ಹೇಳುವುದು: “ಔಪಚಾರಿಕವಾದ ಆರಾಧಕನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಸ್ವಂತ ಹೃದಯವನ್ನು ಮೋಸಗೊಳಿಸಿಕೊಳ್ಳುತ್ತಾ ಇರುವುದಾದರೆ ಅಂಥವನ ಆರಾಧನಾ ರೀತಿಯು ವ್ಯರ್ಥವಾದದ್ದಾಗಿದೆ.” * ನಾವು ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ ನಮ್ಮ ಮಾತು ನಮ್ಮ ಆರಾಧನೆಗೆ ನಿಕಟವಾಗಿ ಸಂಬಂಧಿಸಿದೆ. ನಮ್ಮ ನಾಲಿಗೆಗೆ ಕಡಿವಾಣವನ್ನು ಹಾಕದೇ ಇರುವಲ್ಲಿ, ಅಂದರೆ ಅದು ಅನೇಕವೇಳೆ ನೋವನ್ನುಂಟುಮಾಡುವ ಹಾನಿಕರ ಮಾತುಗಳನ್ನು ಹೊರಹಾಕುತ್ತಾ ಇರುವಲ್ಲಿ, ನಾವು ಮಾಡುವ ಎಲ್ಲ ಕ್ರೈಸ್ತ ಕಾರ್ಯಗಳು ದೇವರ ದೃಷ್ಟಿಯಲ್ಲಿ ವ್ಯರ್ಥವಾಗಿ ಪರಿಣಮಿಸಸಾಧ್ಯವಿದೆ. ಇದು ತುಂಬ ಗಂಭೀರವಾದ ವಿಚಾರವಾಗಿದೆಯಲ್ಲವೆ?—ಯಾಕೋಬ 3:8-10.

8 ಮಾತಿನ ವರದಾನವನ್ನು ದುರುಪಯೋಗಿಸುವುದರ ವಿರುದ್ಧ ಜಾಗ್ರತೆವಹಿಸಲು ನಮಗೆ ಬಲವಾದ ಕಾರಣಗಳಿವೆ ಎಂಬುದು ಸ್ಪಷ್ಟ. ನಾವು ಭಕ್ತಿವೃದ್ಧಿಮಾಡುವಂಥ ಮಾತಿನ ಹಿತಕರವಾದ ರೂಪಗಳನ್ನು ಪರಿಗಣಿಸುವುದಕ್ಕೆ ಮೊದಲು, ಒಬ್ಬ ನಿಜ ಕ್ರೈಸ್ತನ ಜೀವನದಲ್ಲಿ ಆಸ್ಪದವೇ ಇಲ್ಲದ ರೀತಿಯ ಮಾತಿನ ಕುರಿತು ಚರ್ಚಿಸೋಣ.

ಮನಗುಂದಿಸುವಂಥ ಮಾತು

9, 10. (ಎ) ಇಂದಿನ ಲೋಕದಲ್ಲಿ ಯಾವ ರೀತಿಯ ಮಾತು ಜನಸಾಮಾನ್ಯ ಬಳಕೆಯ ಭಾಗವಾಗಿಬಿಟ್ಟಿದೆ? (ಬಿ) ನಾವು ಅಶ್ಲೀಲ ಭಾಷೆಯನ್ನು ತಿರಸ್ಕರಿಸುವ ಅಗತ್ಯವಿದೆ ಏಕೆ? (ಪಾದಟಿಪ್ಪಣಿಯನ್ನೂ ನೋಡಿ.)

9 ಅಶ್ಲೀಲ ಭಾಷೆ. ಶಪಿಸುವುದು, ಪಾಷಂಡ ಭಾಷೆ ಹಾಗೂ ಇತರ ರೀತಿಯ ಅಶ್ಲೀಲ ಭಾಷೆಯು ಇಂದಿನ ಲೋಕದಲ್ಲಿ ಜನಸಾಮಾನ್ಯ ಬಳಕೆಯ ಭಾಗವಾಗಿಬಿಟ್ಟಿದೆ. ತಮ್ಮ ಮಾತನ್ನು ಒತ್ತಿಹೇಳಬೇಕಾಗಿರುವಾಗ ಅಥವಾ ಸೂಕ್ತವಾದ ಪದವನ್ನು ಬಳಸಲು ಗೊತ್ತಿಲ್ಲದಿರುವಾಗ ಅನೇಕರು ಅಪಶಬ್ದಗಳನ್ನು ಅವಲಂಬಿಸುತ್ತಾರೆ. ಹಾಸ್ಯನಟರು ಜನರನ್ನು ನಗಿಸಲಿಕ್ಕಾಗಿ ಅನೇಕವೇಳೆ ಅಸಭ್ಯವಾದ, ಸೆಕ್ಸ್‌ಗೆ ಸಂಬಂಧಿಸಿದ ಮಾತುಗಳನ್ನು ಉಪಯೋಗಿಸುತ್ತಾರೆ. ಆದರೆ ಅಶ್ಲೀಲ ಭಾಷೆಯು ನಗುವಂಥ ವಿಷಯವಲ್ಲ, ಇದು ತುಂಬ ಗಂಭೀರವಾದ ವಿಷಯವಾಗಿದೆ. ಸುಮಾರು 2,000 ವರ್ಷಗಳ ಹಿಂದೆ ಪ್ರೇರಿತ ಅಪೊಸ್ತಲ ಪೌಲನು ಕೊಲೊಸ್ಸೆ ಸಭೆಗೆ ‘ಅಶ್ಲೀಲವಾದ ಮಾತನ್ನು’ ತೊಲಗಿಸಿಬಿಡುವಂತೆ ಸಲಹೆ ನೀಡಿದ್ದನು. (ಕೊಲೊಸ್ಸೆ 3:8) ‘ಅಶ್ಲೀಲವಾದ ತಮಾಷೆಯು’ ನಿಜ ಕ್ರೈಸ್ತರು ‘ಪ್ರಸ್ತಾಪವನ್ನೂ’ ಮಾಡಬಾರದಾದಂಥ ವಿಷಯಗಳಲ್ಲಿ ಒಂದಾಗಿದೆ ಎಂದು ಪೌಲನು ಎಫೆಸ ಸಭೆಗೆ ತಿಳಿಸಿದನು.—ಎಫೆಸ 5:3, 4.

10 ಅಶ್ಲೀಲ ಮಾತು ಯೆಹೋವನಿಗೆ ಅಸಹ್ಯಕರ. ಯಾರು ಆತನನ್ನು ಪ್ರೀತಿಸುತ್ತಾರೋ ಅವರಿಗೂ ಇದು ಅಸಹ್ಯಕರ. ವಾಸ್ತವದಲ್ಲಿ ಯೆಹೋವನ ಮೇಲೆ ನಮಗಿರುವ ಪ್ರೀತಿಯು ಅಶ್ಲೀಲ ಭಾಷೆಯನ್ನು ತಿರಸ್ಕರಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ‘ಶರೀರಭಾವದ ಕರ್ಮಗಳನ್ನು’ ಪಟ್ಟಿಮಾಡುವಾಗ ಪೌಲನು ‘ಅಶುದ್ಧತೆಯನ್ನು’ ಹೆಸರಿಸುತ್ತಾನೆ; ಇದು ಕೊಳಕು ಮಾತನ್ನು ಒಳಗೂಡಿರಸಾಧ್ಯವಿದೆ. (ಗಲಾತ್ಯ 5:19-21) ಇದು ಗಂಭೀರವಾದ ವಿಷಯವಾಗಿದೆ. ಒಬ್ಬನಿಗೆ ಪುನಃ ಪುನಃ ಸಲಹೆಯು ಕೊಡಲ್ಪಟ್ಟಿರುವುದಾದರೂ ಅವನು ಯಾವುದೇ ರೀತಿಯ ಪಶ್ಚಾತ್ತಾಪವನ್ನು ತೋರಿಸದೆ, ವಿಪರೀತ ಅನೈತಿಕವಾಗಿರುವ, ಹೀನವಾಗಿರುವ ಮತ್ತು ಭ್ರಷ್ಟಕಾರಕ ವಿಷಯಗಳಿಗೆ ಸೂಚಿತವಾಗಿರುವ ಅಥವಾ ಅಂಥ ವಿಷಯಗಳನ್ನು ಪ್ರವರ್ಧಿಸುವ ಮಾತುಗಳನ್ನೇ ರೂಢಿಯಾಗಿ ಆಡುವುದಾದರೆ ಅಂಥ ವ್ಯಕ್ತಿಯು ಸಭೆಯಿಂದ ಬಹಿಷ್ಕರಿಸಲ್ಪಡುವ ಸಾಧ್ಯತೆಯಿದೆ. *

11, 12. (ಎ) ಹರಟೆಮಾತು ಎಂದರೇನು ಮತ್ತು ಇದು ಹೇಗೆ ಹಾನಿಕರವಾಗಿ ಪರಿಣಮಿಸಸಾಧ್ಯವಿದೆ? (ಬಿ) ಯೆಹೋವನ ಆರಾಧಕರು ಮಿಥ್ಯಾಪವಾದವು ಒಳಗೂಡಿರುವಂಥ ಮಾತಿನಿಂದ ದೂರವಿರಬೇಕು ಏಕೆ?

11 ಹಾನಿಕರವಾದ ಹರಟೆಮಾತು, ಮಿಥ್ಯಾಪವಾದ. ಹರಟೆಮಾತು ಎಂದರೆ ಜನರ ಕುರಿತು ಮತ್ತು ಅವರ ಜೀವನದ ಕುರಿತು ನಿರರ್ಥಕವಾಗಿ ಮಾತಾಡುವುದೇ ಆಗಿದೆ. ಎಲ್ಲ ರೀತಿಯ ಹರಟೆಮಾತು ತಪ್ಪಾಗಿದೆಯೊ? ನಾವು ಹಾನಿರಹಿತವಾದ ಸಂಭಾಷಣೆಯಲ್ಲಿ ಒಳಗೂಡುವುದಾದರೆ ಅದು ತಪ್ಪಾಗಿರುವುದಿಲ್ಲ. ಉದಾಹರಣೆಗೆ, ಇತ್ತೀಚೆಗೆ ಯಾರು ದೀಕ್ಷಾಸ್ನಾನ ಪಡೆದುಕೊಂಡರು ಅಥವಾ ಯಾರಿಗೆ ಪ್ರೋತ್ಸಾಹಭರಿತ ಮಾತುಗಳ ಅಗತ್ಯವಿದೆ ಎಂಬಂಥ ಸಕಾರಾತ್ಮಕ ಇಲ್ಲವೆ ಸಹಾಯಕರ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದು ತಪ್ಪಲ್ಲ. ಪ್ರಥಮ ಶತಮಾನದ ಕ್ರೈಸ್ತರಿಗೆ ಪರಸ್ಪರರ ಹಿತಕ್ಷೇಮದ ವಿಷಯದಲ್ಲಿ ಅತ್ಯಾಸಕ್ತಿಯಿತ್ತು ಮತ್ತು ಜೊತೆ ಆರಾಧಕರ ವಿಷಯದಲ್ಲಿ ಅವರು ಸೂಕ್ತವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. (ಎಫೆಸ 6:21, 22; ಕೊಲೊಸ್ಸೆ 4:8, 9) ಆದರೆ ಒಂದುವೇಳೆ ಹರಟೆಮಾತು ವಾಸ್ತವಾಂಶಗಳಿಗೆ ತಪ್ಪರ್ಥ ನೀಡುವಲ್ಲಿ ಅಥವಾ ಖಾಸಗಿ ವಿಚಾರಗಳನ್ನು ಬಯಲುಪಡಿಸುವಲ್ಲಿ ಅದು ಹಾನಿಕರವಾಗಿರಸಾಧ್ಯವಿದೆ. ಅದು ಇನ್ನೂ ಸ್ವಲ್ಪ ಗಂಭೀರವಾಗುವಲ್ಲಿ ಮಿಥ್ಯಾಪವಾದಕ್ಕೆ ನಡಿಸಬಲ್ಲದು; ಇದು ಯಾವಾಗಲೂ ಹಾನಿಕರ. “ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಕೆಡಿಸುವ ಮತ್ತು ಕಳಂಕ ತರುವಂಥ . . . ಸುಳ್ಳಾರೋಪಗಳನ್ನು ನುಡಿಯುವುದೇ” ಮಿಥ್ಯಾಪವಾದವಾಗಿದೆ. ಉದಾಹರಣೆಗೆ, ಯೇಸುವಿಗೆ ಅಪಕೀರ್ತಿ ತರುವ ಪ್ರಯತ್ನದಿಂದ ಫರಿಸಾಯರು ಮತ್ಸರದಿಂದ ಕೂಡಿದ ಮಿಥ್ಯಾಪವಾದವನ್ನು ಉಪಯೋಗಿಸಿದರು. (ಮತ್ತಾಯ 9:32-34; 12:22-24) ಮಿಥ್ಯಾಪವಾದವು ಅನೇಕವೇಳೆ ಜಗಳವನ್ನು ಉಂಟುಮಾಡುತ್ತದೆ.—ಜ್ಞಾನೋಕ್ತಿ 26:20.

12 ಇತರರ ಹೆಸರನ್ನು ಕೆಡಿಸಲಿಕ್ಕಾಗಿ ಅಥವಾ ಒಡಕುಗಳನ್ನು ಉಂಟುಮಾಡಲಿಕ್ಕಾಗಿ ಮಾತಿನ ವರದಾನವನ್ನು ಉಪಯೋಗಿಸುವವರನ್ನು ಯೆಹೋವನು ಲಘುವಾಗಿ ಪರಿಗಣಿಸುವುದಿಲ್ಲ. “ಒಡಹುಟ್ಟಿದವರಲ್ಲಿ ಜಗಳಗಳನ್ನು” ಹುಟ್ಟಿಸುವವನನ್ನು ಆತನು ದ್ವೇಷಿಸುತ್ತಾನೆ. (ಜ್ಞಾನೋಕ್ತಿ 6:16-19) “ಮಿಥ್ಯಾಪವಾದಿ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು ದಿಯಾಬೊಲೊಸ್‌ ಎಂದಾಗಿದ್ದು, ಇದನ್ನು ಸೈತಾನನ ಬಿರುದಾಗಿಯೂ ಉಪಯೋಗಿಸಲಾಗುತ್ತದೆ. ಅವನು “ಪಿಶಾಚ”ನಾಗಿದ್ದಾನೆ, ದೇವರ ವಿರುದ್ಧ ಮಾತಾಡಿದ ಕೆಟ್ಟ ಮಿಥ್ಯಾಪವಾದಿಯಾಗಿದ್ದಾನೆ. (ಪ್ರಕಟನೆ 12:9, 10) ಖಂಡಿತವಾಗಿಯೂ ನಮ್ಮನ್ನು ಕಾರ್ಯತಃ ಒಬ್ಬ ಪಿಶಾಚನನ್ನಾಗಿ ಮಾಡಸಾಧ್ಯವಿರುವಂಥ ಮಾತಿನಿಂದ ನಾವು ದೂರವಿರಲು ಬಯಸುತ್ತೇವೆ. “ಕಲಹ” ಮತ್ತು “ಭೇದಗಳು” ಇಂಥ ಶರೀರಭಾವದ ಕರ್ಮಗಳನ್ನು ಉಂಟುಮಾಡುವಂಥ ಮಿಥ್ಯಾಪವಾದದ ಮಾತಿಗೆ ಸಭೆಯಲ್ಲಿ ಅವಕಾಶವೇ ಇಲ್ಲ. (ಗಲಾತ್ಯ 5:19-21) ಆದುದರಿಂದ, ಯಾರಾದರೊಬ್ಬರ ಕುರಿತಾದ ಒಂದು ಸುದ್ದಿಯನ್ನು ಇನ್ನೊಬ್ಬರಿಗೆ ಹೇಳುವುದಕ್ಕೆ ಮುಂಚೆ, ‘ಇದು ನಿಜವೊ? ಇದನ್ನು ಇನ್ನೊಬ್ಬರಿಗೆ ಹೇಳುವುದು ಒಳ್ಳೇದಾಗಿರುವುದೊ? ಈ ಮಾಹಿತಿಯನ್ನು ಇತರರಿಗೆ ಹಬ್ಬಿಸುವ ಅಗತ್ಯವಿದೆಯೊ ಅಥವಾ ಹಾಗೆ ಮಾಡುವುದು ಯೋಗ್ಯವೊ?’ ಎಂದು ಸ್ವತಃ ಕೇಳಿಕೊಳ್ಳಿ.—1 ಥೆಸಲೊನೀಕ 4:11 ಓದಿ.

13, 14. (ಎ) ನಿಂದಾತ್ಮಕ ಮಾತುಗಳನ್ನು ಕೇಳಿಸಿಕೊಳ್ಳುವವರ ಮೇಲೆ ಅದು ಯಾವ ಪರಿಣಾಮವನ್ನು ಬೀರಬಲ್ಲದು? (ಬಿ) ದೂಷಿಸುವುದು ಎಂದರೇನು ಮತ್ತು ಒಬ್ಬ ದೂಷಕನು ಸ್ವತಃ ತನ್ನನ್ನು ಅಪಾಯದಲ್ಲಿ ಹಾಕಿಕೊಳ್ಳುವವನಾಗಿದ್ದಾನೆ ಏಕೆ?

13 ನಿಂದಾತ್ಮಕ ಮಾತು. ಈ ಮುಂಚೆ ಗಮನಿಸಿದಂತೆ ಮಾತುಗಳಿಗೆ ನೋವನ್ನು ಉಂಟುಮಾಡುವ ಶಕ್ತಿಯಿದೆ. ಕೆಲವೊಮ್ಮೆ ಮಾನವ ಅಪರಿಪೂರ್ಣತೆಯ ಕಾರಣ ನಾವೆಲ್ಲರೂ ಏನಾದರೂ ಮಾತಾಡಿಬಿಡುತ್ತೇವೆ ಮತ್ತು ಬಳಿಕ ಅದಕ್ಕಾಗಿ ವಿಷಾದಪಡುತ್ತೇವೆ ಎಂಬುದು ನಿಜ. ಆದರೆ ಒಂದು ಕ್ರೈಸ್ತ ಮನೆವಾರ್ತೆಯಲ್ಲಿ ಅಥವಾ ಸಭೆಯಲ್ಲಿ ಮಾತಾಡಲೇ ಬಾರದಾಗಿರುವ ಮಾತಿನಧಾಟಿಯ ಕುರಿತು ಬೈಬಲು ಎಚ್ಚರಿಕೆ ನೀಡುತ್ತದೆ. ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು . . . ನಿಮ್ಮಿಂದ ತೆಗೆದುಹಾಕಿರಿ.” (ಎಫೆಸ 4:31) ಬೇರೆ ಭಾಷಾಂತರಗಳು “ನಿಂದಾತ್ಮಕ ಮಾತು” ಎಂಬ ವಾಕ್ಸರಣಿಯನ್ನು “ಕೆಟ್ಟ ಮಾತು,” “ದುರ್ಭಾಷೆ” ಮತ್ತು “ಹೀನೈಸುವ ಭಾಷೆ” ಎಂಬುದಾಗಿ ತರ್ಜುಮೆಮಾಡುತ್ತವೆ. ಅವಮಾನಕರವಾದ ರೀತಿಯಲ್ಲಿ ಅಡ್ಡ ಹೆಸರುಗಳನ್ನು ಇಟ್ಟು ಕರೆಯುವುದು ಮತ್ತು ಕಟುವಾದ, ಸತತ ಟೀಕೆಗಳನ್ನು ಒಳಗೂಡಿರುವ ನಿಂದಾತ್ಮಕ ಮಾತು, ಇತರರ ಮರ್ಯಾದೆಯನ್ನು ತೆಗೆಯಸಾಧ್ಯವಿದೆ ಮತ್ತು ಅವರಲ್ಲಿ ಅನರ್ಹ ಭಾವನೆಗಳನ್ನು ಉಂಟುಮಾಡಸಾಧ್ಯವಿದೆ. ವಿಶೇಷವಾಗಿ ಮಕ್ಕಳ ಕೋಮಲವಾದ ಹಾಗೂ ನಂಬುವ ಹೃದಯಗಳು ನಿಂದಾತ್ಮಕ ಮಾತುಗಳ ನೋವುಭರಿತ ಪರಿಣಾಮಗಳಿಗೆ ಸುಲಭವಾಗಿ ಬಲಿಯಾಗುತ್ತವೆ.—ಕೊಲೊಸ್ಸೆ 3:21.

14 ತುಂಬ ಬಲವತ್ತಾದ ಮಾತುಗಳನ್ನು ಉಪಯೋಗಿಸುವ ಮೂಲಕ ಬೈಬಲು ದೂಷಿಸುವ ರೂಢಿಯನ್ನು ಅಂದರೆ ಅವಮಾನಕರವಾದ, ಜರೆಯುವ ಅಥವಾ ನಿಂದಾತ್ಮಕ ಭಾಷೆಯನ್ನು ಉಪಯೋಗಿಸಿ ಇತರರನ್ನು ಹಳಿಯುವ ರೂಢಿಯನ್ನು ಖಂಡಿಸುತ್ತದೆ. ಇಂಥ ಮಾತಿನ ಶೈಲಿಯನ್ನು ರೂಢಿಸಿಕೊಂಡಿರುವ ಒಬ್ಬ ವ್ಯಕ್ತಿಯು ಸ್ವತಃ ತನ್ನನ್ನು ಅಪಾಯದಲ್ಲಿ ಹಾಕಿಕೊಳ್ಳುತ್ತಾನೆ, ಏಕೆಂದರೆ ಒಬ್ಬ ದೂಷಕನನ್ನು ಬದಲಾಯಿಸಲು ಅನೇಕ ಬಾರಿ ಪ್ರಯತ್ನಗಳನ್ನು ಮಾಡಿದಾಗ್ಯೂ ಅವನು ಕೇಳದಿರುವಲ್ಲಿ ಅಂಥವನನ್ನು ಸಭೆಯಿಂದ ತೆಗೆದುಹಾಕಸಾಧ್ಯವಿದೆ. ಅವನು ತನ್ನ ಮಾರ್ಗಗಳನ್ನು ಬದಲಾಯಿಸದೇ ಹೋದರೆ ನೂತನ ಲೋಕದಲ್ಲಿ ಜೀವಿಸುವ ಆಶೀರ್ವಾದವನ್ನು ಸಹ ಕಳೆದುಕೊಳ್ಳಸಾಧ್ಯವಿದೆ. (1 ಕೊರಿಂಥ 5:11-13; 6:9, 10) ಆದುದರಿಂದ, ನಾವು ಅಹಿತಕರವಾದ, ಅಸತ್ಯವಾದ ಮತ್ತು ನಿರ್ದಯವಾದ ಮಾತುಗಳನ್ನಾಡುವ ರೂಢಿಯನ್ನು ಮಾಡಿಕೊಳ್ಳುವಲ್ಲಿ ನಿಶ್ಚಯವಾಗಿಯೂ ನಾವು ದೇವರ ಪ್ರೀತಿಯಲ್ಲಿ ಉಳಿಯಲಾರೆವು ಎಂಬುದು ಸುಸ್ಪಷ್ಟ. ಈ ರೀತಿಯ ಮಾತು ಛಿದ್ರಗೊಳಿಸುತ್ತದೆ.

“ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ” ಮಾತುಗಳು

15. ಯಾವ ರೀತಿಯ ಮಾತು ‘ಭಕ್ತಿವೃದ್ಧಿಮಾಡಲು ಯೋಗ್ಯವಾಗಿದೆ?’

15 ಮಾತಿನ ವರದಾನವನ್ನು ನಾವು ಅದನ್ನು ಕೊಟ್ಟಾತನು ಉದ್ದೇಶಿಸಿದಂಥ ರೀತಿಯಲ್ಲಿ ಹೇಗೆ ಉಪಯೋಗಿಸಸಾಧ್ಯವಿದೆ? “ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ ಮಾತನ್ನು” ಆಡುವಂತೆ ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ ಎಂಬುದನ್ನು ಜ್ಞಾಪಿಸಿಕೊಳ್ಳಿ. (ಎಫೆಸ 4:29) ನಾವು ಇತರರ ಭಕ್ತಿವೃದ್ಧಿಮಾಡುವ, ಅವರನ್ನು ಉತ್ತೇಜಿಸುವ ಹಾಗೂ ಬಲಪಡಿಸುವ ಮಾತುಗಳನ್ನು ಆಡುವಾಗ ಅದು ಯೆಹೋವನಿಗೆ ಸಂತೋಷವನ್ನುಂಟುಮಾಡುತ್ತದೆ. ಇಂಥ ಮಾತುಗಳನ್ನಾಡಲು ತುಂಬ ಜಾಗರೂಕವಾಗಿ ಆಲೋಚಿಸುವ ಅಗತ್ಯವಿದೆ. ಈ ವಿಷಯದಲ್ಲಿ ಬೈಬಲು ನಮಗೆ ನಿರ್ದಿಷ್ಟ ನಿಯಮಗಳನ್ನು ಕೊಡುವುದಿಲ್ಲ; ಅಥವಾ “ಹಿತಕರವಾದ ಮಾತುಗಳ” ಒಂದು ಅಂಗೀಕೃತ ಪಟ್ಟಿಯನ್ನೂ ಅದು ಒಳಗೂಡಿರುವುದಿಲ್ಲ. (ತೀತ 2:8) “ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವ” ಮಾತುಗಳನ್ನಾಡಬೇಕಾದರೆ, ಭಕ್ತಿವೃದ್ಧಿಮಾಡುವ ಮಾತಿನ ಸ್ವರೂಪವನ್ನು ನಿರೂಪಿಸುವಂಥ ಮೂರು ಸರಳವಾದ ಆದರೆ ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಒಳ್ಳೇದು: ಅದು ಹಿತಕರವಾಗಿರುತ್ತದೆ, ಸತ್ಯವಾಗಿರುತ್ತದೆ ಮತ್ತು ದಯನೀಯವಾಗಿರುತ್ತದೆ. ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡವರಾಗಿ ಭಕ್ತಿವೃದ್ಧಿಮಾಡುವಂಥ ಮಾತಿನ ಕೆಲವು ನಿರ್ದಿಷ್ಟ ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ.—“ ನನ್ನ ಮಾತು ಭಕ್ತಿವೃದ್ಧಿಮಾಡುವಂಥದ್ದಾಗಿದೆಯೊ?” ಎಂಬ ಚೌಕವನ್ನು ನೋಡಿ.

16, 17. (ಎ) ನಾವು ಇತರರನ್ನು ಏಕೆ ಪ್ರಶಂಸಿಸಬೇಕು? (ಬಿ) ಸಭೆಯಲ್ಲಿ ಮತ್ತು ಕುಟುಂಬದಲ್ಲಿ ಇತರರನ್ನು ಪ್ರಶಂಸಿಸಲು ಯಾವ ಅವಕಾಶಗಳಿವೆ?

16 ಯಥಾರ್ಥ ಪ್ರಶಂಸೆ. ಪ್ರಶಂಸೆಯ ಮತ್ತು ಅಂಗೀಕಾರದ ಮಾತುಗಳನ್ನಾಡುವುದರ ಆವಶ್ಯಕತೆಯನ್ನು ಯೆಹೋವನೂ ಯೇಸುವೂ ಮನಗಾಣುತ್ತಾರೆ. (ಮತ್ತಾಯ 3:17; 25:19-23; ಯೋಹಾನ 1:47) ಕ್ರೈಸ್ತರಾಗಿರುವ ನಾವೂ ಇತರರನ್ನು ಯಥಾರ್ಥವಾಗಿ ಪ್ರಶಂಸಿಸುವುದು ಒಳ್ಳೇದಾಗಿದೆ. ಏಕೆ? “ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು!” ಎಂದು ಜ್ಞಾನೋಕ್ತಿ 15:23 (NIBV) ತಿಳಿಸುತ್ತದೆ. ಸ್ವತಃ ಹೀಗೆ ಕೇಳಿಕೊಳ್ಳಿ: ‘ನನ್ನನ್ನು ಯಾರಾದರೂ ಹೃತ್ಪೂರ್ವಕವಾಗಿ ಪ್ರಶಂಸಿಸುವಾಗ ನನಗೆ ಹೇಗನಿಸುತ್ತದೆ? ಅದು ನನಗೆ ಒಳ್ಳೇ ಅನಿಸಿಕೆಯನ್ನು ಉಂಟುಮಾಡಿ ನನ್ನಲ್ಲಿ ಸಂತೃಪ್ತ ಭಾವನೆಯನ್ನು ಮೂಡಿಸುತ್ತದಲ್ಲವೊ?’ ವಾಸ್ತವದಲ್ಲಿ ಯಥಾರ್ಥವಾದ ಪ್ರಶಂಸೆಯ ಒಂದು ಮಾತು, ಇತರರು ನಿಮ್ಮನ್ನು ಗಮನಿಸುತ್ತಾರೆ, ಇತರರು ನಿಮ್ಮ ಕುರಿತು ಕಾಳಜಿವಹಿಸುತ್ತಾರೆ ಮತ್ತು ನೀವು ಮಾಡಿದ ಪ್ರಯತ್ನವು ತುಂಬ ಪ್ರಯೋಜನಾರ್ಹವಾಗಿದೆ ಎಂಬುದನ್ನು ನಿಮಗೆ ತಿಳಿಯಪಡಿಸುತ್ತದೆ. ಇಂಥ ಪುನರಾಶ್ವಾಸನೆಯು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಮುಂದೆ ಇನ್ನಷ್ಟು ಶ್ರದ್ಧೆಯಿಂದ ಕಾರ್ಯನಿರ್ವಹಿಸುವಂತೆ ನಿಮ್ಮನ್ನು ಪ್ರಚೋದಿಸುತ್ತದೆ. ನೀವು ಪ್ರಶಂಸೆಯನ್ನು ಪಡೆದುಕೊಳ್ಳುವಾಗ ಅದನ್ನು ಗಣ್ಯಮಾಡುವುದರಿಂದ, ಪ್ರತಿಯಾಗಿ ನೀವು ಸಹ ಇತರರಿಗೆ ಪ್ರಶಂಸೆಯನ್ನು ನೀಡಲಿಕ್ಕಾಗಿ ನಿಮ್ಮಿಂದಾದುದೆಲ್ಲವನ್ನೂ ಮಾಡಬಾರದೊ?—ಮತ್ತಾಯ 7:12 ಓದಿ.

17 ಬೇರೆಯವರಲ್ಲಿ ಒಳ್ಳೇದನ್ನು ಹುಡುಕಲು ನಿಮ್ಮನ್ನು ತರಬೇತಿಗೊಳಿಸಿಕೊಳ್ಳಿರಿ. ತದನಂತರ ನಿಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿರಿ. ಸಭೆಯಲ್ಲಿ, ಒಂದು ಕೂಟದಲ್ಲಿ ಚೆನ್ನಾಗಿ ವಿಕಸಿಸಲ್ಪಟ್ಟ ಒಂದು ಭಾಷಣವನ್ನು ನೀವು ಕೇಳಿಸಿಕೊಳ್ಳಬಹುದು, ಒಬ್ಬ ಯುವಕನು ಆಧ್ಯಾತ್ಮಿಕ ಗುರಿಗಳನ್ನು ತಲಪಲು ಪ್ರಯತ್ನಿಸುತ್ತಿರುವುದನ್ನು ಗಮನಿಸಬಹುದು ಅಥವಾ ವೃದ್ಧಾಪ್ಯದ ಇತಿಮಿತಿಗಳ ಹೊರತಾಗಿಯೂ ಒಬ್ಬ ವೃದ್ಧ ವ್ಯಕ್ತಿಯು ತಪ್ಪದೆ ಕೂಟಗಳಿಗೆ ಹಾಜರಾಗುವುದನ್ನು ಗಮನಿಸಬಹುದು. ಯಥಾರ್ಥವಾದ ಪ್ರಶಂಸೆಯ ಒಂದು ಮಾತು ಇಂಥವರ ಹೃದಯಗಳನ್ನು ಸ್ಪರ್ಶಿಸಬಹುದು ಮತ್ತು ಅವರನ್ನು ಆಧ್ಯಾತ್ಮಿಕವಾಗಿ ಬಲಪಡಿಸಬಹುದು. ಕುಟುಂಬದಲ್ಲಿ ಗಂಡನು ಹೆಂಡತಿಗೆ ಮತ್ತು ಹೆಂಡತಿಯು ಗಂಡನಿಗೆ ಯಥಾರ್ಥವಾದ ಪ್ರಶಂಸೆಯ ಹಾಗೂ ಗಣ್ಯತೆಯ ಮಾತುಗಳನ್ನು ವ್ಯಕ್ತಪಡಿಸುವ ಆವಶ್ಯಕತೆಯಿದೆ. (ಜ್ಞಾನೋಕ್ತಿ 31:10, 28) ವಿಶೇಷವಾಗಿ, ತಮ್ಮನ್ನು ಗಮನಿಸಲಾಗುತ್ತಿದೆ ಮತ್ತು ಗಣ್ಯಮಾಡಲಾಗುತ್ತಿದೆ ಎಂಬ ಅನಿಸಿಕೆಯು ಮಕ್ಕಳಲ್ಲಿ ತುಂಬ ಸಂತೋಷವನ್ನು ಉಂಟುಮಾಡುತ್ತದೆ. ಸೂರ್ಯನ ಬೆಳಕು ಮತ್ತು ನೀರು ಒಂದು ಸಸ್ಯಕ್ಕೆ ಚೈತನ್ಯ ಮತ್ತು ಪುಷ್ಟಿಯನ್ನು ನೀಡುವಂತೆಯೇ ಪ್ರಶಂಸೆ ಹಾಗೂ ಮೆಚ್ಚುಗೆಯ ಮಾತು ಒಂದು ಮಗುವಿಗೆ ಚೈತನ್ಯ ಹಾಗೂ ಪುಷ್ಟಿಯನ್ನು ನೀಡುತ್ತದೆ. ಹೆತ್ತವರೇ, ನಿಮ್ಮ ಮಕ್ಕಳಲ್ಲಿರುವ ಹೊಗಳಿಕೆಗೆ ಅರ್ಹವಾದ ಗುಣಗಳು ಮತ್ತು ಪ್ರಯತ್ನಗಳಿಗಾಗಿ ಅವರನ್ನು ಪ್ರಶಂಸಿಸುವ ಅವಕಾಶಗಳಿಗಾಗಿ ಹುಡುಕಿರಿ. ಇಂಥ ಪ್ರಶಂಸೆಯು ನಿಮ್ಮ ಮಕ್ಕಳಲ್ಲಿ ಧೈರ್ಯವನ್ನೂ ಆತ್ಮವಿಶ್ವಾಸವನ್ನೂ ಹೆಚ್ಚಿಸಬಲ್ಲದು ಮತ್ತು ಸರಿಯಾದುದನ್ನು ಮಾಡಲು ಇನ್ನೂ ಹೆಚ್ಚು ಕಠಿನವಾಗಿ ಪರಿಶ್ರಮಿಸುವಂತೆ ಅವರನ್ನು ಪ್ರಚೋದಿಸಬಲ್ಲದು.

18, 19. ಜೊತೆ ವಿಶ್ವಾಸಿಗಳನ್ನು ಸಂತೈಸಲು ಮತ್ತು ಅವರಿಗೆ ಸಮಾಧಾನಮಾಡಲು ನಮ್ಮಿಂದಾದುದೆಲ್ಲವನ್ನೂ ಮಾಡುವ ಅಗತ್ಯವಿದೆ ಏಕೆ ಹಾಗೂ ನಾವದನ್ನು ಹೇಗೆ ಮಾಡಸಾಧ್ಯವಿದೆ?

18 ಸಾಂತ್ವನ ಮತ್ತು ಸಮಾಧಾನ. ಯೆಹೋವನು ‘ದೀನರ’ ವಿಷಯದಲ್ಲಿ ಮತ್ತು ‘ಜಜ್ಜಿಹೋದವರ’ ವಿಷಯದಲ್ಲಿ ಬಹಳವಾಗಿ ಕಾಳಜಿವಹಿಸುತ್ತಾನೆ. (ಯೆಶಾಯ 57:15) “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ . . . ಇರಿ” ಮತ್ತು “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ” ಎಂದು ಆತನ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ಥೆಸಲೊನೀಕ 5:11, 14) ಯಾರ ಹೃದಯಗಳು ದುಃಖದಿಂದ ತುಂಬಿವೆಯೋ ಆ ಜೊತೆ ವಿಶ್ವಾಸಿಗಳನ್ನು ಸಂತೈಸಲು ಹಾಗೂ ಅವರಿಗೆ ಸಮಾಧಾನಮಾಡಲು ನಾವು ಮಾಡುವ ಪ್ರಯತ್ನಗಳನ್ನು ದೇವರು ಗಮನಿಸುತ್ತಾನೆ ಮತ್ತು ಗಣ್ಯಮಾಡುತ್ತಾನೆ ಎಂಬ ಖಾತ್ರಿ ನಮಗಿರಬಲ್ಲದು.

ಇತರರಿಗೆ ಭಕ್ತಿವೃದ್ಧಿಮಾಡುವಂಥ ಮಾತುಗಳನ್ನು ನಾವು ಆಡುವಾಗ ಯೆಹೋವನಿಗೆ ಸಂತೋಷವಾಗುತ್ತದೆ

19 ಆದರೂ ನಿರುತ್ಸಾಹಗೊಂಡಿರುವ ಅಥವಾ ಖಿನ್ನನಾಗಿರುವ ಒಬ್ಬ ಜೊತೆ ಕ್ರೈಸ್ತನ ಭಕ್ತಿವೃದ್ಧಿಮಾಡಲು ನೀವು ಏನು ಹೇಳಸಾಧ್ಯವಿದೆ? ನೀವು ಸಮಸ್ಯೆಯನ್ನು ಬಗೆಹರಿಸಲೇಬೇಕು ಎಂದು ಭಾವಿಸಬೇಡಿ. ಅನೇಕವೇಳೆ ಸರಳವಾದ ಮಾತುಗಳೇ ಅತಿ ಹೆಚ್ಚು ಸಹಾಯಕರವಾಗಿರುತ್ತವೆ. ಎದೆಗುಂದಿರುವ ವ್ಯಕ್ತಿಯ ವಿಷಯದಲ್ಲಿ ನಿಮಗೆ ಕಾಳಜಿ ಮತ್ತು ಹಿತಾಸಕ್ತಿಯಿದೆ ಎಂಬ ಆಶ್ವಾಸನೆಯನ್ನು ಅವನಿಗೆ ಕೊಡಿರಿ. ನಿರುತ್ಸಾಹಗೊಂಡಿರುವ ವ್ಯಕ್ತಿಯೊಂದಿಗೆ ಗಟ್ಟಿದನಿಯಲ್ಲಿ ಪ್ರಾರ್ಥಿಸಲು ನೀವು ಸಿದ್ಧರೆಂದು ಹೇಳಿರಿ; ಅವನನ್ನು ಅಥವಾ ಅವಳನ್ನು ಇತರರು ಹಾಗೂ ದೇವರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಆ ವ್ಯಕ್ತಿಯು ಅರಿತುಕೊಳ್ಳಲು ಸಹಾಯಮಾಡುವಂತೆ ಯೆಹೋವನ ಬಳಿ ನೀವು ವಿನಂತಿಸಿಕೊಳ್ಳಸಾಧ್ಯವಿದೆ. (ಯಾಕೋಬ 5:14, 15) ಸಭೆಯ ಸದಸ್ಯನಾಗಿರುವ ಅವನು ತಮಗೆ ಬೇಕಾಗಿದ್ದಾನೆ ಮತ್ತು ಅಮೂಲ್ಯನಾಗಿದ್ದಾನೆ ಎಂಬ ಪುನರಾಶ್ವಾಸನೆಯನ್ನು ಅವನಿಗೆ ಕೊಡಿರಿ. (1 ಕೊರಿಂಥ 12:12-26) ಯೆಹೋವನು ನಿಜವಾಗಿಯೂ ಅವನ ಕುರಿತು ವೈಯಕ್ತಿಕವಾಗಿ ಕಾಳಜಿವಹಿಸುತ್ತಾನೆ ಎಂಬ ಆಶ್ವಾಸನೆಯನ್ನು ನೀಡಲಿಕ್ಕಾಗಿ ಬೈಬಲಿನಿಂದ ಉತ್ತೇಜನದಾಯಕವಾದ ಒಂದು ವಚನವನ್ನು ಓದಿರಿ. (ಕೀರ್ತನೆ 34:18; ಮತ್ತಾಯ 10:29-31) ಎದೆಗುಂದಿದ ವ್ಯಕ್ತಿಯೊಂದಿಗೆ ‘ಕನಿಕರದ ಮಾತನ್ನು’ ಹಂಚಿಕೊಳ್ಳಲಿಕ್ಕಾಗಿ ಸಾಕಷ್ಟು ಸಮಯವನ್ನು ತೆಗೆದುಕೊಳ್ಳುವುದು ಮತ್ತು ನಿಮ್ಮ ಹೃದಯದಾಳದಿಂದ ಮಾತಾಡುವುದು, ತನ್ನನ್ನು ಪ್ರೀತಿಸಲಾಗುತ್ತದೆ ಮತ್ತು ಗಣ್ಯಮಾಡಲಾಗುತ್ತದೆ ಎಂಬ ಅನಿಸಿಕೆಯನ್ನು ಅವನಲ್ಲಿ ಉಂಟುಮಾಡಲು ಸಹಾಯಮಾಡುವುದು ಎಂಬುದರಲ್ಲಿ ಸಂಶಯವೇ ಇಲ್ಲ.—ಜ್ಞಾನೋಕ್ತಿ 12:25 ಓದಿ.

20, 21. ಯಾವ ಅಂಶಗಳು ಸಲಹೆಯನ್ನು ಕಾರ್ಯಸಾಧಕವಾಗಿ ಮಾಡುತ್ತವೆ?

20 ಕಾರ್ಯಸಾಧಕ ಸಲಹೆ. ಅಪರಿಪೂರ್ಣ ಸೃಷ್ಟಿಜೀವಿಗಳಾಗಿರುವುದರಿಂದ ನಮಗೆಲ್ಲರಿಗೂ ಆಗಿಂದಾಗ್ಗೆ ಸಲಹೆಯನ್ನು ಪಡೆದುಕೊಳ್ಳುವ ಅಗತ್ಯವಿರುತ್ತದೆ. ಬೈಬಲು ನಮ್ಮನ್ನು ಉತ್ತೇಜಿಸುವುದು: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ [ವಿವೇಕಿಯಾಗುವಿ].” (ಜ್ಞಾನೋಕ್ತಿ 19:20) ಇತರರಿಗೆ ಸಲಹೆ ನೀಡುವುದು ಹಿರಿಯರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಹೆತ್ತವರು ಮಕ್ಕಳಿಗೆ ಸಲಹೆ ನೀಡುತ್ತಾರೆ. (ಎಫೆಸ 6:4) ಪ್ರೌಢ ಸಹೋದರಿಯರು ಯುವ ಸ್ತ್ರೀಯರಿಗೆ ಸಲಹೆಯನ್ನು ನೀಡುವ ಅಗತ್ಯವಿರಬಹುದು. (ತೀತ 2:3-5) ಇತರರ ಕಡೆಗಿನ ಪ್ರೀತಿಯು, ಸಲಹೆಯನ್ನು ಪಡೆದುಕೊಳ್ಳುವಂಥ ವ್ಯಕ್ತಿಯು ಜಜ್ಜಿದ ಅನಿಸಿಕೆಯಿಲ್ಲದೇ ಅದನ್ನು ಸ್ವೀಕರಿಸಬಲ್ಲಂಥ ಸಲಹೆಯನ್ನು ನಾವು ಕೊಡಲು ಬಯಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಇಂಥ ಸಲಹೆಯನ್ನು ಕೊಡಲು ಯಾವುದು ನಮಗೆ ಸಹಾಯಮಾಡಬಲ್ಲದು? ಸಲಹೆಯನ್ನು ಹೆಚ್ಚು ಕಾರ್ಯಸಾಧಕವಾಗಿ ಮಾಡುವಂಥ ಮೂರು ಅಂಶಗಳನ್ನು ಪರಿಗಣಿಸಿರಿ: ಸಲಹೆಗಾರನ ಮನೋಭಾವ ಮತ್ತು ಹೇತು, ಸಲಹೆಗಾಗಿರುವ ಆಧಾರ ಹಾಗೂ ಅದು ಕೊಡಲ್ಪಡುವ ವಿಧ.

21 ಸಲಹೆಯ ಕಾರ್ಯಸಾಧಕತೆಯು ಅದನ್ನು ಕೊಡುವಂಥ ವ್ಯಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ. ‘ಸಲಹೆಯನ್ನು ಅಂಗೀಕರಿಸುವುದು ನನಗೆ ಯಾವಾಗ ಸುಲಭವಾಗಿರುತ್ತದೆ?’ ಎಂದು ಸ್ವತಃ ಕೇಳಿಕೊಳ್ಳಿ. ಸಲಹೆ ನೀಡುತ್ತಿರುವಂಥ ವ್ಯಕ್ತಿಯು ನಿಮ್ಮ ಕುರಿತು ಕಾಳಜಿವಹಿಸುತ್ತಾನೆ, ಅವನು ವೈಯಕ್ತಿಕ ಆಶಾಭಂಗದಿಂದ ಮಾತಾಡುತ್ತಿಲ್ಲ ಮತ್ತು ಅವನಲ್ಲಿ ಯಾವುದೇ ಗುಪ್ತ ಹೇತುಗಳಿಲ್ಲ ಎಂಬುದು ನಿಮಗೆ ತಿಳಿದಿರುವಾಗ ಸಲಹೆಯನ್ನು ಅಂಗೀಕರಿಸುವುದು ಹೆಚ್ಚು ಸುಲಭ. ಆದುದರಿಂದ ನೀವು ಇತರರಿಗೆ ಸಲಹೆ ನೀಡುವಾಗ ನಿಮ್ಮ ಮನೋಭಾವ ಮತ್ತು ಹೇತುವಿನ ವಿಷಯದಲ್ಲಿಯೂ ಇದೆಲ್ಲ ನಿಜವಾಗಿರಬೇಕು ಅಲ್ಲವೆ? ಒಳ್ಳೇ ಫಲಿತಾಂಶಗಳನ್ನು ಉಂಟುಮಾಡುವಂಥ ಸಲಹೆಯು ದೇವರ ವಾಕ್ಯದ ಮೇಲೆ ಆಧಾರಿತವಾಗಿರುತ್ತದೆ ಕೂಡ. (2 ತಿಮೊಥೆಯ 3:16) ನಾವು ಬೈಬಲಿನಿಂದ ನೇರವಾಗಿ ಉಲ್ಲೇಖಿಸುತ್ತಿರಲಿ ಇಲ್ಲದಿರಲಿ, ನಾವು ಕೊಡುವಂಥ ಯಾವುದೇ ಸಲಹೆಗೆ ಶಾಸ್ತ್ರಾಧಾರವು ಇರಲೇಬೇಕು. ಹೀಗೆ ಹಿರಿಯರು ತಮ್ಮ ಸ್ವಂತ ದೃಷ್ಟಿಕೋನಗಳನ್ನು ಇತರರ ಮೇಲೆ ಹೇರದಿರಲು ಜಾಗರೂಕರಾಗಿರುವುದು ಮಾತ್ರವಲ್ಲ ತಮ್ಮ ವೈಯಕ್ತಿಕ ದೃಷ್ಟಿಕೋನವನ್ನು ಬೈಬಲು ಸಮರ್ಥಿಸುತ್ತದೆ ಎಂಬ ಅಭಿಪ್ರಾಯವನ್ನು ಕೊಡಲು ಶಾಸ್ತ್ರವಚನಗಳನ್ನು ತಪ್ಪಾಗಿ ಬಳಸುವುದಿಲ್ಲ ಇಲ್ಲವೆ ತಿರುಚುವುದಿಲ್ಲ. ಸಲಹೆಯನ್ನು ಸರಿಯಾದ ವಿಧದಲ್ಲಿ ಕೊಡುವುದಾದರೆ ಅದು ಹೆಚ್ಚು ಕಾರ್ಯಸಾಧಕವೂ ಆಗಿರುತ್ತದೆ. ದಯೆಯಿಂದ ಕೂಡಿದ ಸಲಹೆಯು ಅಂಗೀಕರಿಸಲು ಹೆಚ್ಚು ಸುಲಭವಾಗಿರುತ್ತದೆ ಮತ್ತು ಅದನ್ನು ಪಡೆದುಕೊಳ್ಳುವವನು ತನ್ನ ಘನತೆಯನ್ನು ಕಾಪಾಡಿಕೊಳ್ಳುವಂತೆ ಅದು ಅನುಮತಿಸುತ್ತದೆ.—ಕೊಲೊಸ್ಸೆ 4:6.

22. ಮಾತಿನ ಉಡುಗೊರೆಯ ಉಪಯೋಗದ ವಿಷಯದಲ್ಲಿ ನಿಮ್ಮ ದೃಢನಿರ್ಧಾರವೇನಾಗಿದೆ?

22 ಮಾತು ದೇವರಿಂದ ಕೊಡಲ್ಪಟ್ಟಿರುವ ಅಮೂಲ್ಯವಾದ ಉಡುಗೊರೆಯಾಗಿದೆ ಎಂಬುದಂತೂ ಖಂಡಿತ. ಯೆಹೋವನಿಗಾಗಿರುವ ನಮ್ಮ ಪ್ರೀತಿಯು ನಾವು ಈ ಉಡುಗೊರೆಯನ್ನು ದುರುಪಯೋಗಿಸುವಂತೆ ಅಲ್ಲ, ಉಪಯೋಗಿಸುವಂತೆ ನಮ್ಮನ್ನು ಪ್ರಚೋದಿಸಬೇಕಾಗಿದೆ. ನಾವು ಇತರರಿಗೆ ಆಡುವ ಮಾತುಗಳು ಅವರ ಭಕ್ತಿವೃದ್ಧಿಮಾಡುವ ಅಥವಾ ಅವರ ಮನಸ್ಸನ್ನು ಛಿದ್ರಗೊಳಿಸುವ ಶಕ್ತಿಯನ್ನು ಹೊಂದಿವೆ ಎಂಬುದನ್ನು ನಾವೆಲ್ಲರೂ ನೆನಪಿನಲ್ಲಿಡೋಣ. ಹೀಗಿರುವುದರಿಂದ ಈ ಉಡುಗೊರೆಯನ್ನು ಕೊಟ್ಟಿರುವಾತನು ಉದ್ದೇಶಿಸುವ ಮೇರೆಗೆ ನಾವು ಇದನ್ನು ‘ಭಕ್ತಿವೃದ್ಧಿಮಾಡಲಿಕ್ಕಾಗಿ’ ಉಪಯೋಗಿಸಲು ಶ್ರಮಿಸೋಣ. ಹೀಗೆ ನಮ್ಮ ಮಾತು ನಮ್ಮ ಸುತ್ತಲೂ ಇರುವವರಿಗೆ ಉತ್ತೇಜನದಾಯಕವಾಗಿರುವುದು ಮತ್ತು ನಾವು ದೇವರ ಪ್ರೀತಿಯಲ್ಲಿ ಉಳಿಯುವಂತೆ ಸಹಾಯಮಾಡುವುದು.

^ ಪ್ಯಾರ. 4 ಜ್ಞಾನೋಕ್ತಿ 15:4 ರಲ್ಲಿ “ಬಲಾತ್ಕರಿಸುವ” ಎಂದು ಭಾಷಾಂತರಿಸಲಾಗಿರುವ ಹೀಬ್ರು ಪದಕ್ಕೆ “ಕುಟಿಲತೆ, ವಕ್ರತನ” ಎಂಬ ಅರ್ಥವೂ ಇದೆ.

^ ಪ್ಯಾರ. 7 “ವ್ಯರ್ಥ” ಎಂದು ಭಾಷಾಂತರಿಸಲಾಗಿರುವ ಗ್ರೀಕ್‌ ಪದಕ್ಕೆ “ನಿಷ್ಪ್ರಯೋಜಕ” ಎಂಬ ಅರ್ಥವೂ ಇದೆ.—1 ಕೊರಿಂಥ 15:17.

^ ಪ್ಯಾರ. 10 ಶಾಸ್ತ್ರವಚನಗಳಲ್ಲಿ ಉಪಯೋಗಿಸಲ್ಪಟ್ಟಿರುವಂತೆ “ಅಶುದ್ಧತೆ” ಎಂಬ ಪದವು ವಿಶಾಲಾರ್ಥವಿರುವ ಪದವಾಗಿದ್ದು ಬೇರೆ ಬೇರೆ ರೀತಿಯ ಪಾಪಗಳನ್ನು ಒಳಗೂಡಿರಸಾಧ್ಯವಿದೆ. ಎಲ್ಲ ರೀತಿಯ ಅಶುದ್ಧತೆಯು ನ್ಯಾಯನಿರ್ಣಾಯಕ ಕ್ರಮವನ್ನು ಅಗತ್ಯಪಡಿಸುವುದಿಲ್ಲವಾದರೂ, ಒಬ್ಬ ವ್ಯಕ್ತಿಯು ಯಾವುದೇ ಪಶ್ಚಾತ್ತಾಪವಿಲ್ಲದೆ ಘೋರವಾದ ಅಶುದ್ಧತೆಯನ್ನು ರೂಢಿಸಿಕೊಂಡಿರುವಲ್ಲಿ ಅಂಥವನು ಸಭೆಯಿಂದ ಬಹಿಷ್ಕರಿಸಲ್ಪಡಸಾಧ್ಯವಿದೆ.—2 ಕೊರಿಂಥ 12:21; ಎಫೆಸ 4:19; ಜುಲೈ 15, 2006 ರ ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನವನ್ನು ನೋಡಿ.