ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

ದೇವರನ್ನು ಅಸಂತೋಷಗೊಳಿಸುವ ಆಚರಣೆಗಳು

ದೇವರನ್ನು ಅಸಂತೋಷಗೊಳಿಸುವ ಆಚರಣೆಗಳು

“ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಇರಿ.”–ಎಫೆಸ 5:10.

1. ಯಾವ ರೀತಿಯ ಜನರನ್ನು ಯೆಹೋವನು ತನ್ನ ಕಡೆಗೆ ಸೆಳೆಯುತ್ತಾನೆ ಮತ್ತು ಅವರು ಆಧ್ಯಾತ್ಮಿಕವಾಗಿ ಎಚ್ಚರಿಕೆಯಿಂದ ಇರಬೇಕು ಏಕೆ?

‘ಸತ್ಯಾರಾಧಕರು ತಂದೆಯನ್ನು ಪವಿತ್ರಾತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು. ಏಕೆಂದರೆ ತಂದೆಯು ತನ್ನನ್ನು ಆರಾಧಿಸಲು ಇಂಥವರನ್ನೇ ಹುಡುಕುತ್ತಿದ್ದಾನೆ’ ಎಂದು ಯೇಸು ಹೇಳಿದನು. (ಯೋಹಾನ 4:23) ಯೆಹೋವನು ನಿಮ್ಮನ್ನು ಹುಡುಕಿ ಕಂಡುಕೊಂಡಿರುವಂತೆಯೇ ಪವಿತ್ರಾತ್ಮದಿಂದ ಮತ್ತು ಸತ್ಯದಿಂದ ಆರಾಧಿಸಲು ಬಯಸುವಂಥ ವ್ಯಕ್ತಿಗಳನ್ನು ಹುಡುಕಿ ಕಂಡುಕೊಳ್ಳುವಾಗ, ಆತನು ಅವರನ್ನು ತನ್ನ ಕಡೆಗೆ ಮತ್ತು ತನ್ನ ಪುತ್ರನ ಕಡೆಗೆ ಸೆಳೆಯುತ್ತಾನೆ. (ಯೋಹಾನ 6:44) ಇದು ಎಷ್ಟು ಗೌರವಾರ್ಹವಾದ ವಿಷಯವಾಗಿದೆ! ಆದರೆ ಬೈಬಲ್‌ ಸತ್ಯವನ್ನು ಪ್ರೀತಿಸುವವರು “ಕರ್ತನಿಗೆ ಯಾವುದು ಅಂಗೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾ” ಇರಬೇಕಾಗಿದೆ. ಏಕೆಂದರೆ ಸೈತಾನನು ನಿಪುಣ ವಂಚಕನಾಗಿದ್ದಾನೆ.—ಎಫೆಸ 5:10; ಪ್ರಕಟನೆ 12:9.

2. ಸತ್ಯ ಧರ್ಮವನ್ನು ಸುಳ್ಳು ಧರ್ಮದೊಂದಿಗೆ ಐಕ್ಯಗೊಳಿಸಲು ಪ್ರಯತ್ನಿಸುವವರನ್ನು ಯೆಹೋವನು ಹೇಗೆ ಪರಿಗಣಿಸುತ್ತಾನೆ ಎಂಬುದನ್ನು ವಿವರಿಸಿ.

2 ಸೀನಾಯಿ ಬೆಟ್ಟದ ಬಳಿಯಲ್ಲಿ ಇಸ್ರಾಯೇಲ್ಯರು ಆರೋನನಿಗೆ ತಮಗೋಸ್ಕರ ಒಬ್ಬ ದೇವನನ್ನು ಮಾಡಿಕೊಡುವಂತೆ ಕೇಳಿದಾಗ ಏನು ಸಂಭವಿಸಿತೆಂಬುದನ್ನು ಪರಿಗಣಿಸಿರಿ. ಆರೋನನು ಇದಕ್ಕೆ ಸಮ್ಮತಿಸಿ ಚಿನ್ನದ ಒಂದು ಬಸವನನ್ನು ಮಾಡಿದನು, ಆದರೆ ಅದು ಯೆಹೋವನನ್ನು ಪ್ರತಿನಿಧಿಸುತ್ತದೆಂದು ಪರೋಕ್ಷವಾಗಿ ಸೂಚಿಸಿ, “ನಾಳೆ ಯೆಹೋವನಿಗೆ ಉತ್ಸವವಾಗಬೇಕು” ಎಂದು ಅವನು ಹೇಳಿದನು. ಸತ್ಯ ಧರ್ಮ ಮತ್ತು ಸುಳ್ಳು ಧರ್ಮದ ಈ ಬೆಸುಗೆಯನ್ನು ನೋಡಿ ಯೆಹೋವನು ಸುಮ್ಮನಿದ್ದನೊ? ಇಲ್ಲ. ಆತನು ಸುಮಾರು ಮೂರು ಸಾವಿರ ಮಂದಿ ವಿಗ್ರಹಾರಾಧಕರನ್ನು ಕೊಲ್ಲಿಸಿದನು. (ವಿಮೋಚನಕಾಂಡ 32:1-6, 10, 28) ಇದರಿಂದ ನಾವು ಯಾವ ಪಾಠವನ್ನು ಕಲಿಯಬೇಕು? ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು ಬಯಸುವುದಾದರೆ ನಾವು ‘ಅಶುದ್ಧವಾದ ಯಾವದನ್ನೂ ಮುಟ್ಟಬಾರದು’ ಮತ್ತು ಸತ್ಯವನ್ನು ಯಾವುದೇ ರೀತಿಯ ಭ್ರಷ್ಟತೆಯ ವಿರುದ್ಧ ಹುರುಪಿನಿಂದ ಸಂರಕ್ಷಿಸಬೇಕು.—ಯೆಶಾಯ 52:11; ಯೆಹೆಜ್ಕೇಲ 44:23; ಗಲಾತ್ಯ 5:9.

3, 4. ಜನಪ್ರಿಯ ಪದ್ಧತಿಗಳು ಮತ್ತು ಆಚರಣೆಗಳನ್ನು ಪರೀಕ್ಷಿಸುವಾಗ ನಾವು ಬೈಬಲಿನ ಮೂಲತತ್ತ್ವಗಳಿಗೆ ನಿಕಟವಾದ ಗಮನವನ್ನು ಕೊಡುವ ಅಗತ್ಯವಿದೆ ಏಕೆ?

3 ದುಃಖಕರವಾಗಿ, ಧರ್ಮಭ್ರಷ್ಟತೆಯ ವಿರುದ್ಧ ಪ್ರತಿಬಂಧಕವಾಗಿ ಕಾರ್ಯನಡಿಸುತ್ತಿದ್ದ ಅಪೊಸ್ತಲರ ಮರಣಾನಂತರ ಬೈಬಲಿನ ಸತ್ಯದ ವಿಷಯದಲ್ಲಿ ಪ್ರೀತಿಯಿಲ್ಲದಿದ್ದಂಥ ಕ್ರೈಸ್ತರೆನಿಸಿಕೊಳ್ಳುವ ಜನರು ವಿಧರ್ಮಿ ಪದ್ಧತಿಗಳು, ಆಚರಣೆಗಳು ಮತ್ತು ಹಬ್ಬಗಳನ್ನು ಅಂಗೀಕರಿಸಲಾರಂಭಿಸಿದರು ಮತ್ತು ಇವು ಕ್ರೈಸ್ತರಿಗೆ ಸ್ವೀಕಾರಯೋಗ್ಯವಾಗಿವೆ ಎಂದು ತಿಳಿಸಿದರು. (2 ಥೆಸಲೊನೀಕ 2:7, 10) ಈ ಆಚರಣೆಗಳಲ್ಲಿ ಕೆಲವನ್ನು ನೀವು ಪರಿಗಣಿಸುವಾಗ, ಅವು ದೇವರ ಆತ್ಮವನ್ನಲ್ಲ ಲೋಕದ ಆತ್ಮವನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದನ್ನು ಗಮನಿಸಿರಿ. ಒಟ್ಟಿನಲ್ಲಿ ಹೇಳುವುದಾದರೆ ಲೌಕಿಕ ಆಚರಣೆಗಳಲ್ಲಿ ಏಕ ರೀತಿಯ ವೈಶಿಷ್ಟ್ಯವಿರುತ್ತದೆ: ಇವು ಶಾರೀರಿಕ ಬಯಕೆಗಳಿಗೆ ಹಿಡಿಸುವಂತಿರುತ್ತವೆ ಮತ್ತು ‘ಮಹಾ ಬಾಬೆಲಿನ’ ಗುರುತುಚಿಹ್ನೆಯಾಗಿರುವ ಸುಳ್ಳು ಧಾರ್ಮಿಕ ನಂಬಿಕೆಗಳು ಮತ್ತು ಪ್ರೇತವ್ಯವಹಾರವನ್ನು ಉತ್ತೇಜಿಸುತ್ತವೆ. * (ಪ್ರಕಟನೆ 18:2-4, 23) ಅನೇಕ ಜನಪ್ರಿಯ ಪದ್ಧತಿಗಳು ಯಾವುದರಿಂದ ಬಂದಿವೆಯೋ ಆ ಅಸಹ್ಯಕರವಾದ ವಿಧರ್ಮಿ ಧಾರ್ಮಿಕ ರೂಢಿಗಳನ್ನು ಯೆಹೋವನು ವೈಯಕ್ತಿಕವಾಗಿ ಗಮನಿಸಿದನು ಎಂಬುದನ್ನು ಸಹ ಮನಸ್ಸಿನಲ್ಲಿಡಿ. ತದ್ರೀತಿಯಲ್ಲಿ ಇಂದು ಸಹ ಅಂಥ ಆಚರಣೆಗಳು ಆತನಿಗೆ ಅಷ್ಟೇ ಅಸಹ್ಯಕರವಾಗಿ ಕಂಡುಬರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇಂಥ ಆಚರಣೆಗಳ ವಿಷಯದಲ್ಲಿ ನಾವು ಆತನ ದೃಷ್ಟಿಕೋನಕ್ಕೇ ಹೆಚ್ಚು ಪ್ರಮುಖತೆ ಕೊಡಬೇಕಾಗಿದೆಯಲ್ಲವೆ?—2 ಯೋಹಾನ 6, 7.

4 ಯೆಹೋವನು ಕೆಲವು ಆಚರಣೆಗಳನ್ನು ಇಷ್ಟಪಡುವುದಿಲ್ಲ ಎಂಬುದು ನಿಜ ಕ್ರೈಸ್ತರಾಗಿರುವ ನಮಗೆ ತಿಳಿದಿದೆ. ಆದರೆ ನಾವು ಅವುಗಳಲ್ಲಿ ಯಾವುದರಲ್ಲಿಯೂ ಭಾಗವಹಿಸದಿರಲು ನಮ್ಮ ಹೃದಯದಲ್ಲಿ ದೃಢವಾದ ನಿರ್ಧಾರವನ್ನು ಮಾಡುವ ಅಗತ್ಯವಿದೆ. ಅಂಥ ಆಚರಣೆಗಳು ಯೆಹೋವನನ್ನು ಏಕೆ ಅಸಂತೋಷಗೊಳಿಸುತ್ತವೆ ಎಂಬುದರ ಕುರಿತಾದ ಪುನರ್ವಿಮರ್ಶೆಯು, ದೇವರ ಪ್ರೀತಿಯಲ್ಲಿ ಉಳಿಯುವುದರಿಂದ ನಮ್ಮನ್ನು ತಡೆಗಟ್ಟಬಹುದಾದ ಯಾವುದೇ ವಿಷಯದಿಂದ ದೂರವಿರುವ ನಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸುವುದು.

ಕ್ರಿಸ್ಮಸ್‌—ಸೂರ್ಯನ ಆರಾಧನೆಗೆ ಹೊಸ ಹೆಸರು

5. ಯೇಸು ಡಿಸೆಂಬರ್‌ 25⁠ರಂದು ಜನಿಸಲಿಲ್ಲ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ ಏಕೆ?

5 ಯೇಸುವಿನ ಜನ್ಮದಿನಾಚರಣೆಯ ಕುರಿತು ಬೈಬಲು ಎಲ್ಲಿಯೂ ತಿಳಿಸುವುದಿಲ್ಲ. ವಾಸ್ತವದಲ್ಲಿ ಅವನು ಹುಟ್ಟಿದ ನಿರ್ದಿಷ್ಟ ತಾರೀಖು ಅಜ್ಞಾತವಾಗಿದೆ. ಆದರೂ ಲೋಕದ ಆ ಭಾಗದಲ್ಲಿ ಚಳಿಗಾಲದ ಶೀತಲ ಸಮಯವಾದ ಡಿಸೆಂಬರ್‌ 25⁠ರಂದು ಅವನು ಜನಿಸಲಿಲ್ಲ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. * ಒಂದು ಕಾರಣವೇನೆಂದರೆ, ಯೇಸು ಹುಟ್ಟಿದಾಗ “ಕುರುಬರು ಮನೆಗಳಿಂದ ಹೊರಗೆ” ವಾಸಿಸುತ್ತಾ ತಮ್ಮ ಕುರಿಗಳನ್ನು ಕಾಯುತ್ತಿದ್ದರು ಎಂದು ಲೂಕನು ದಾಖಲಿಸಿದನು. (ಲೂಕ 2:8-11) ವರ್ಷಪೂರ್ತಿ ಕುರುಬರು “ಮನೆಗಳಿಂದ ಹೊರಗೆ” ವಾಸಿಸುವುದು ಅವರ ರೂಢಿಯಾಗಿರುತ್ತಿದ್ದಲ್ಲಿ ಈ ವಿಷಯವೇನೂ ಅಷ್ಟು ಗಮನಾರ್ಹವಾಗಿರುತ್ತಿರಲಿಲ್ಲ. ಆದರೆ ಚಳಿಗಾಲದಲ್ಲಿ ಬೇತ್ಲೆಹೇಮಿನಲ್ಲಿ ಶೀತಲ ಮಳೆಯೂ ಹಿಮವೂ ಇರುತ್ತದೆ ಮತ್ತು ಚಳಿಗಾಲದಲ್ಲಿ ಕುರಿಮಂದೆಗಳನ್ನು ಹಟ್ಟಿಯಿಂದ ಹೊರಗೆ ತರುತ್ತಿರಲಿಲ್ಲ ಹಾಗೂ ಕುರುಬರು “ಮನೆಗಳಿಂದ ಹೊರಗೆ” ವಾಸಿಸುತ್ತಿರಲಿಲ್ಲ. ಅಷ್ಟುಮಾತ್ರವಲ್ಲ, ಕೈಸರನಾದ ಅಗಸ್ಟಸನು ಜನಗಣತಿಗಾಗಿ ಆಜ್ಞೆಯನ್ನು ಹೊರಡಿಸಿದ್ದ ಕಾರಣ ಯೋಸೇಫನೂ ಮರಿಯಳೂ ಬೇತ್ಲೆಹೇಮಿಗೆ ಹೋದರು. (ಲೂಕ 2:1-7) ರೋಮನ್ನರ ಆಳ್ವಿಕೆಯ ವಿಷಯದಲ್ಲಿ ಅಸಮಾಧಾನಗೊಂಡಿದ್ದ ಜನರಿಗೆ ವಿಪರೀತ ಚಳಿಗಾಲದ ಕಾಲಾವಧಿಯಲ್ಲಿ ತಮ್ಮ ಪೂರ್ವಜರ ಸ್ಥಳಗಳಿಗೆ ಪ್ರಯಾಣಿಸುವಂತೆ ಕೈಸರನು ಆಜ್ಞೆಯನ್ನಿತ್ತಿದ್ದಿರುವುದು ತೀರ ಅಸಂಭವನೀಯ.

6, 7. (ಎ) ಕ್ರಿಸ್ಮಸ್‌ನ ಅನೇಕ ಪದ್ಧತಿಗಳ ಮೂಲವು ಏನಾಗಿದೆ? (ಬಿ) ಕ್ರಿಸ್ಮಸ್‌ ಕೊಡುವಿಕೆ ಮತ್ತು ಕ್ರೈಸ್ತರ ಕೊಡುವಿಕೆಯ ನಡುವೆ ಯಾವ ವ್ಯತ್ಯಾಸವನ್ನು ನೋಡಸಾಧ್ಯವಿದೆ?

6 ಕ್ರಿಸ್ಮಸ್‌ ಹಬ್ಬದ ಮೂಲಗಳು ಬೈಬಲಿನಲ್ಲಿ ಕಂಡುಬರದೆ ಕೃಷಿ ದೇವತೆ ಸ್ಯಾಟರ್ನ್‌ಗೆ ಮುಡಿಪಾಗಿರಿಸಲ್ಪಟ್ಟಿದ್ದ ರೋಮನ್‌ ಸ್ಯಾಟರ್ನೇಲಿಯಗಳಂಥ ಪುರಾತನ ವಿಧರ್ಮಿ ಹಬ್ಬಗಳಲ್ಲಿ ಕಂಡುಬರುತ್ತವೆ. ತದ್ರೀತಿಯಲ್ಲಿ ಅವರ ಲೆಕ್ಕಾಚಾರಕ್ಕನುಸಾರ ಮಿಥ್ರ ಎಂಬ ದೇವತೆಯ ಆರಾಧಕರು ಡಿಸೆಂಬರ್‌ 25⁠ನ್ನು “ಅಜೇಯ ಸೂರ್ಯನ ಜನ್ಮದಿನವಾಗಿ” ಆಚರಿಸುತ್ತಿದ್ದರು ಎಂದು ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ ತಿಳಿಸುತ್ತದೆ. ಕ್ರಿಸ್ತನ ಮರಣಾನಂತರ ಸುಮಾರು ಮೂರು ಶತಮಾನಗಳ ಬಳಿಕ ಅಂದರೆ “ರೋಮ್‌ನಲ್ಲಿ ಸೂರ್ಯನ ಆರಾಧನೆಯು ವಿಶೇಷವಾಗಿ ಬಲವಾಗಿದ್ದ ಸಮಯದಲ್ಲಿ ಕ್ರಿಸ್ಮಸ್‌ ಹಬ್ಬವು ಪ್ರಾರಂಭವಾಯಿತು” ಎಂದು ಅದು ತಿಳಿಸುತ್ತದೆ.

ನಿಜ ಕ್ರೈಸ್ತರು ಪ್ರೀತಿಯಿಂದ ಕೊಡುತ್ತಾರೆ

7 ತಮ್ಮ ಆಚರಣೆಗಳ ಸಮಯದಲ್ಲಿ ವಿಧರ್ಮಿಗಳು ಉಡುಗೊರೆಗಳನ್ನು ವಿನಿಮಯಮಾಡಿಕೊಳ್ಳುತ್ತಿದ್ದರು ಮತ್ತು ಭಾರೀ ಭೋಜನಗಳಲ್ಲಿ ಒಳಗೂಡುತ್ತಿದ್ದರು. ಈ ರೂಢಿಗಳು ಈಗಲೂ ಕ್ರಿಸ್ಮಸ್‌ ಆಚರಣೆಯ ಭಾಗವಾಗಿವೆ. ಜನರು ಇಂದು ಕೊಡುವ ಉಡುಗೊರೆಗಳ ವಿಷಯದಲ್ಲಿ ನಿಜವಾಗಿರುವಂತೆ ರೋಮನ್‌ ಸಮಯಗಳಲ್ಲಿ ಕೊಡಲ್ಪಡುತ್ತಿದ್ದ ಕ್ರಿಸ್ಮಸ್‌ ಕೊಡುಗೆಯಲ್ಲಿ ಹೆಚ್ಚಿನದ್ದು 2 ಕೊರಿಂಥ 9:7⁠ರಲ್ಲಿ ತಿಳಿಸಲ್ಪಟ್ಟಿರುವ ಮನೋಭಾವಕ್ಕನುಸಾರವಾಗಿರಲಿಲ್ಲ. ಅದು ತಿಳಿಸುವುದು: “ಪ್ರತಿಯೊಬ್ಬನು ಒಲ್ಲದ ಮನಸ್ಸಿನಿಂದಾಗಲಿ ಒತ್ತಾಯದಿಂದಾಗಲಿ ಮಾಡದೆ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರವೇ ಮಾಡಲಿ; ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” ನಿಜ ಕ್ರೈಸ್ತರು ಪ್ರೀತಿಯಿಂದ ಕೊಡುತ್ತಾರೆ, ಅವರ ಕೊಡುವಿಕೆಯು ನಿರ್ದಿಷ್ಟ ತಾರೀಖಿನ ಮೇಲೆ ಹೊಂದಿಕೊಂಡಿಲ್ಲ ಮತ್ತು ಅವರು ಪ್ರತಿಯಾಗಿ ಉಡುಗೊರೆಯನ್ನು ನಿರೀಕ್ಷಿಸುವುದಿಲ್ಲ. (ಲೂಕ 14:12-14; ಅಪೊಸ್ತಲರ ಕಾರ್ಯಗಳು 20:35 ಓದಿ.) ಅಷ್ಟುಮಾತ್ರವಲ್ಲದೆ ಕ್ರಿಸ್ಮಸ್‌ನ ಭ್ರಮಾವೇಶದಿಂದ ಸ್ವತಂತ್ರರಾಗಿರುವುದನ್ನು ಮತ್ತು ವರ್ಷದ ಆ ಸಮಯದಲ್ಲಿ ಅನೇಕರು ತಮ್ಮ ಮೇಲೆ ತಂದುಕೊಳ್ಳಬಹುದಾದ ಹಣಕಾಸಿನ ಸಾಲದ ಹೊರೆಯಿಂದ ವಿಮುಕ್ತರಾಗಿರುವುದನ್ನು ಅವರು ಬಹಳವಾಗಿ ಗಣ್ಯಮಾಡುತ್ತಾರೆ.—ಮತ್ತಾಯ 11:28-30; ಯೋಹಾನ 8:32.

8. ಜ್ಯೋತಿಷಿಗಳು ಯೇಸುವಿಗೆ ಹುಟ್ಟುಹಬ್ಬದ ಉಡುಗೊರೆಗಳನ್ನು ಕೊಟ್ಟರೊ? ವಿವರಿಸಿ.

8 ಆದರೆ ಜ್ಯೋತಿಷಿಗಳು ಯೇಸುವಿಗೆ ಹುಟ್ಟುಹಬ್ಬದ ಉಡುಗೊರೆಗಳನ್ನು ಕೊಟ್ಟರಲ್ಲವೆ? ಎಂದು ಕೆಲವರು ವಾದಿಸಬಹುದು. ಇಲ್ಲ. ಅವರು ಉಡುಗೊರೆಯನ್ನು ಕೊಟ್ಟದ್ದು ಒಬ್ಬ ಗಣ್ಯ ವ್ಯಕ್ತಿಗೆ ತಮ್ಮ ಗೌರವವನ್ನು ಸಲ್ಲಿಸುವ ಒಂದು ವಿಧವಾಗಿತ್ತಷ್ಟೆ; ಬೈಬಲಿನ ಸಮಯಗಳಲ್ಲಿ ಇದು ಒಂದು ಸಾಮಾನ್ಯ ರೂಢಿಯಾಗಿತ್ತು. (1 ಅರಸುಗಳು 10:1, 2, 10, 13; ಮತ್ತಾಯ 2:2, 11) ವಾಸ್ತವದಲ್ಲಿ ಅವರು ಯೇಸು ಹುಟ್ಟಿದ ರಾತ್ರಿಯೇ ಅವನನ್ನು ಸಂಧಿಸಲು ಹೋಗಲಿಲ್ಲ. ಅವರು ಬಂದಾಗ ಯೇಸು ಗೋದಲಿಯಲ್ಲಿನ ಶಿಶುವಾಗಿರಲಿಲ್ಲ, ಅನೇಕ ತಿಂಗಳುಗಳ ಮಗುವಾಗಿದ್ದು ಒಂದು ಮನೆಯಲ್ಲಿ ವಾಸಿಸುತ್ತಿದ್ದನು.

 

ಹುಟ್ಟುಹಬ್ಬಗಳ ವಿಷಯದಲ್ಲಿ ಬೈಬಲು ಏನು ಹೇಳುತ್ತದೆ?

9. ಬೈಬಲಿನಲ್ಲಿ ಪ್ರಸ್ತಾಪಿಸಲಾಗಿರುವ ಹುಟ್ಟುಹಬ್ಬದ ಆಚರಣೆಗಳ ವಿಷಯದಲ್ಲಿ ಯಾವುದು ಗಮನಾರ್ಹವಾಗಿದೆ?

9 ಒಂದು ಮಗುವಿನ ಜನನವು ಯಾವಾಗಲೂ ಅತ್ಯಧಿಕ ಸಂತೋಷವನ್ನು ಉಂಟುಮಾಡಿದೆಯಾದರೂ ದೇವರ ಒಬ್ಬ ಸೇವಕನು ತನ್ನ ಹುಟ್ಟುಹಬ್ಬವನ್ನು ಆಚರಿಸಿದ್ದರ ಕುರಿತು ಬೈಬಲು ಎಲ್ಲಿಯೂ ಉಲ್ಲೇಖಿಸುವುದಿಲ್ಲ. (ಕೀರ್ತನೆ 127:3) ಕೇವಲ ಅಜಾಗರೂಕತೆಯ ಕಾರಣದಿಂದ ಹೀಗಾಗಿದೆಯೊ? ಇಲ್ಲ, ಏಕೆಂದರೆ ಬೈಬಲಿನಲ್ಲಿ ಇಬ್ಬರು ವ್ಯಕ್ತಿಗಳ ಹುಟ್ಟುಹಬ್ಬದ ಆಚರಣೆಗಳ ಕುರಿತು ಪ್ರಸ್ತಾಪಿಸಲಾಗಿದೆ—ಒಂದು ಐಗುಪ್ತದ ಫರೋಹನದ್ದು ಹಾಗೂ ಇನ್ನೊಂದು ಹೆರೋದ ಅಂತಿಪನದ್ದು. (ಆದಿಕಾಂಡ 40:20-22; ಮಾರ್ಕ 6:21-29 ಓದಿ.) ಆದರೆ ಎರಡೂ ಘಟನೆಗಳನ್ನು ಅಹಿತಕರ ಘಟನೆಗಳಾಗಿ ಪ್ರಸ್ತುತಪಡಿಸಲಾಗಿದೆ—ವಿಶೇಷವಾಗಿ ಹೆರೋದ ಅಂತಿಪನ ಹುಟ್ಟುಹಬ್ಬದ ಆಚರಣೆಯಂದು ಸ್ನಾನಿಕನಾದ ಯೋಹಾನನು ಕೊಲ್ಲಲ್ಪಟ್ಟನು.

10, 11. ಆದಿಕ್ರೈಸ್ತರು ಹುಟ್ಟುಹಬ್ಬದ ಆಚರಣೆಗಳನ್ನು ಹೇಗೆ ಪರಿಗಣಿಸಿದರು ಮತ್ತು ಏಕೆ?

10 “ಆದಿಕ್ರೈಸ್ತರು ಯಾವುದೇ ವ್ಯಕ್ತಿಯ ಹುಟ್ಟುಹಬ್ಬದ ಆಚರಣೆಯನ್ನು ವಿಧರ್ಮಿ ಪದ್ಧತಿಯಾಗಿ ಪರಿಗಣಿಸುತ್ತಿದ್ದರು” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ತಿಳಿಸುತ್ತದೆ. ಉದಾಹರಣೆಗೆ, ಪ್ರತಿಯೊಬ್ಬ ವ್ಯಕ್ತಿಗೆ ಒಂದು ಸಂರಕ್ಷಕ ಆತ್ಮವಿರುತ್ತದೆ ಮತ್ತು ಅದು ಆ ವ್ಯಕ್ತಿಯ ಜನನಕ್ಕೆ ಹಾಜರಾಗಿ ಅಂದಿನಿಂದ ಅವನ ಮೇಲೆ ಕಾವಲುಕಾಯುತ್ತದೆ ಎಂದು ಪುರಾತನ ಗ್ರೀಕರು ನಂಬುತ್ತಿದ್ದರು. ಆ ಆತ್ಮವು “ಯಾವ ದೇವನ ಜನ್ಮದಿನದಂದು ಈ ವ್ಯಕ್ತಿಯು ಹುಟ್ಟಿದನೋ ಆ ದೇವನೊಂದಿಗೆ ರಹಸ್ಯಾತ್ಮಕ ಸಂಬಂಧವನ್ನು ಹೊಂದಿತ್ತು” ಎಂದು ಜನ್ಮದಿನಗಳ ಸಿದ್ಧಾಂತ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುತ್ತದೆ. ಜನ್ಮದಿನಗಳು ಜ್ಯೋತಿಶ್ಶಾಸ್ತ್ರ ಮತ್ತು ಜಾತಕದೊಂದಿಗೂ ದೀರ್ಘಕಾಲದ ಹಾಗೂ ಅತಿ ನಿಕಟವಾದ ಸಂಬಂಧವನ್ನು ಹೊಂದಿವೆ.

 

11 ದೇವರ ಸೇವಕರು ಕೇವಲ ವಿಧರ್ಮಿ ಹಾಗೂ ಪ್ರೇತವ್ಯವಹಾರದ ಮೂಲಗಳ ಕಾರಣದಿಂದ ಮಾತ್ರ ಹುಟ್ಟುಹಬ್ಬದ ಪದ್ಧತಿಗಳನ್ನು ತಿರಸ್ಕರಿಸುವುದಿಲ್ಲ; ಗತಕಾಲದ ದೇವರ ಸೇವಕರು ನೈತಿಕ ದೃಷ್ಟಿಯ ಕಾರಣದಿಂದಲೂ ಅವುಗಳನ್ನು ತಿರಸ್ಕರಿಸಿದ್ದಿರುವ ಸಂಭವನೀಯತೆ ಇದೆ. ಏಕೆ? ಇವರು ದೀನಭಾವದ ಸ್ತ್ರೀಪುರುಷರಾಗಿದ್ದು ತಮ್ಮ ಜನನವು ಆಚರಣೆಗೆ ಯೋಗ್ಯವಾಗಿರುವಷ್ಟು ಪ್ರಾಮುಖ್ಯವಾದದ್ದಲ್ಲ ಎಂಬುದನ್ನು ಮನಗಂಡವರಾಗಿದ್ದರು. * (ಮೀಕ 6:8; ಲೂಕ 9:48) ಅದಕ್ಕೆ ಬದಲಾಗಿ, ಜೀವದ ಅಮೂಲ್ಯ ಉಡುಗೊರೆಗಾಗಿ ಅವರು ಯೆಹೋವನನ್ನು ಕೊಂಡಾಡಿದರು ಮತ್ತು ಕೃತಜ್ಞತೆಯನ್ನು ಸಲ್ಲಿಸಿದರು. *ಕೀರ್ತನೆ 8:3, 4; 36:9; ಪ್ರಕಟನೆ 4:11.

12. ನಮ್ಮ ಜನನದಿನಕ್ಕಿಂತ ಮರಣದಿನವು ಮೇಲು ಎಂದು ಹೇಳಸಾಧ್ಯವಿದೆ ಏಕೆ?

12 ಮರಣಹೊಂದಿದಾಗ ಯಥಾರ್ಥತೆಯನ್ನು ಕಾಪಾಡಿಕೊಂಡಿರುವವರೆಲ್ಲರೂ ದೇವರ ಜ್ಞಾಪಕದಲ್ಲಿ ಸುರಕ್ಷಿತರಾಗಿದ್ದಾರೆ ಮತ್ತು ಅವರ ಭಾವೀ ಜೀವನವು ನಿಶ್ಚಿತವಾಗಿದೆ. (ಯೋಬ 14:14, 15) ಪ್ರಸಂಗಿ 7:1 ಹೇಳುವುದು: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು.” ನಮ್ಮ “ಹೆಸರು” ನಮ್ಮ ನಂಬಿಗಸ್ತ ಸೇವೆಯ ಮೂಲಕ ನಾವು ದೇವರೊಂದಿಗೆ ಪಡೆದುಕೊಂಡಿರುವ ಸತ್ಕೀರ್ತಿಯೇ ಆಗಿದೆ. ಕ್ರೈಸ್ತರು ಆಚರಿಸುವಂತೆ ಆಜ್ಞಾಪಿಸಲ್ಪಟ್ಟಿರುವ ಏಕಮಾತ್ರ ಘಟನೆಯು ಜನ್ಮದಿನವಲ್ಲ ಬದಲಾಗಿ ಮರಣದಿನವಾಗಿದೆ ಎಂಬುದು ಗಮನಾರ್ಹ—ಇದು ಯೇಸುವಿನ ಮರಣದ ದಿನವಾಗಿದ್ದು ಅವನ ಶ್ರೇಷ್ಠವಾದ “ಹೆಸರು” ನಮ್ಮ ರಕ್ಷಣೆಗೆ ಅತ್ಯಾವಶ್ಯಕವಾಗಿದೆ.—ಇಬ್ರಿಯ 1:3, 4; ಲೂಕ 22:17-20.

ಈಸ್ಟರ್‌—ವಾಸ್ತವದಲ್ಲಿ ಇದು ಸಂತಾನೋತ್ಪತ್ತಿಯ ಆರಾಧನೆಯಾಗಿದೆ

13, 14. ಜನಪ್ರಿಯ ಈಸ್ಟರ್‌ ಹಬ್ಬವು ಯಾವ ಮೂಲಗಳಿಂದ ಬಂದದ್ದಾಗಿದೆ?

13 ಕ್ರಿಸ್ತನ ಪುನರುತ್ಥಾನದ ಆಚರಣೆಯೆಂದು ಪ್ರಸಿದ್ಧವಾಗಿರುವ ಈಸ್ಟರ್‌ ಹಬ್ಬವು ವಾಸ್ತವದಲ್ಲಿ ಸುಳ್ಳು ಧಾರ್ಮಿಕ ಮೂಲದಿಂದ ಬಂದದ್ದಾಗಿದೆ. ಈಸ್ಟರ್‌ ಎಂಬ ಹೆಸರೇ, ಈಓಸ್ಟರ್‌ ಅಥವಾ ಓಸ್ಟಾರಾ ಎಂಬ ಅರುಣೋದಯ ಹಾಗೂ ವಸಂತಕಾಲದ ಆಂಗ್ಲೊ-ಸ್ಯಾಕ್ಸನ್‌ ದೇವತೆಗೆ ಸಂಬಂಧಿಸಿದ್ದಾಗಿದೆ. ಇದಲ್ಲದೆ ಈಸ್ಟರ್‌ ಹಬ್ಬದ ಸಂಬಂಧದಲ್ಲಿ ಮೊಟ್ಟೆಗಳು ಹಾಗೂ ಮೊಲಗಳು ಹೇಗೆ ಬಳಕೆಗೆ ಬಂದವು? ಮೊಟ್ಟೆಗಳು “ಹೊಸ ಜೀವನ ಮತ್ತು ಪುನರುತ್ಥಾನದ ಸಂಕೇತಗಳಾಗಿ ಪ್ರಸಿದ್ಧವಾಗಿವೆ” ಎಂದು ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ ಮತ್ತು ಅದೇ ಸಮಯದಲ್ಲಿ ಮೊಲಗಳು ದೀರ್ಘಕಾಲದಿಂದಲೂ ಸಂತಾನೋತ್ಪತ್ತಿಯ ಸಂಕೇತಗಳಾಗಿ ಉಪಯೋಗಿಸಲ್ಪಡುತ್ತಿವೆ. ಆದುದರಿಂದ ಈಸ್ಟರ್‌ ಹಬ್ಬವು ವಾಸ್ತವದಲ್ಲಿ ಸಂತಾನೋತ್ಪತ್ತಿಯ ಒಂದು ಮತಾಚರಣೆಯಾಗಿದೆ, ಆದರೆ ಮೇಲ್ನೋಟಕ್ಕೆ ಇದು ಕ್ರಿಸ್ತನ ಪುನರುತ್ಥಾನದ ಆಚರಣೆಯ ಸೋಗಿನಲ್ಲಿದೆ. *

14 ತನ್ನ ಪುತ್ರನ ಪುನರುತ್ಥಾನವನ್ನು ಆಚರಿಸಲಿಕ್ಕಾಗಿ ಯೆಹೋವನು ಅಸಹ್ಯಕರವಾದ ಸಂತಾನೋತ್ಪತ್ತಿ ಮತಾಚರಣೆಯ ಬಳಕೆಯನ್ನು ಅಂಗೀಕರಿಸುವನೊ? ಎಂದಿಗೂ ಇಲ್ಲ! (2 ಕೊರಿಂಥ 6:17, 18) ವಾಸ್ತವದಲ್ಲಿ, ಎಲ್ಲಕ್ಕಿಂತಲೂ ಪ್ರಮುಖವಾಗಿ ಶಾಸ್ತ್ರವಚನಗಳು ಯೇಸುವಿನ ಪುನರುತ್ಥಾನವನ್ನು ಆಚರಿಸುವಂತೆ ಆಜ್ಞಾಪಿಸುವುದೂ ಇಲ್ಲ, ಅದನ್ನು ಸಮರ್ಥಿಸುವುದೂ ಇಲ್ಲ. ಆದುದರಿಂದ ಈಸ್ಟರ್‌ ಹಬ್ಬದ ಹೆಸರಿನಲ್ಲಿ ಅದನ್ನು ಆಚರಿಸುವುದು ಎರಡರಷ್ಟು ನಂಬಿಕೆದ್ರೋಹವಾಗಿದೆ.

ಹೊಸ ವರ್ಷದ ದಿನದ ಮೂಲ

15. ಹೊಸ ವರ್ಷದ ದಿನದ ಮೂಲವು ಏನಾಗಿದೆ?

15 ತುಂಬ ಜನಪ್ರಿಯವಾಗಿರುವ ಇನ್ನೊಂದು ಆಚರಣೆಯು ಹೊಸ ವರ್ಷದ ಆಚರಣೆಯಾಗಿದೆ. ಈ ಆಚರಣೆಯು ಎಲ್ಲಿಂದ ಬಂತು? ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯಕ್ಕನುಸಾರ, “ಕ್ರಿ. ಪೂ. 46⁠ರಲ್ಲಿ ರೋಮನ್‌ ಪ್ರಭುವಾಗಿದ್ದ ಜೂಲಿಯಸ್‌ ಸೀಸರನು ಜನವರಿ 1⁠ನ್ನು ಹೊಸ ವರ್ಷದ ದಿನವಾಗಿ ಸ್ಥಾಪಿಸಿದನು. ರೋಮನ್ನರು ಈ ದಿನವನ್ನು ಹೆಬ್ಬಾಗಿಲುಗಳು, ದ್ವಾರಗಳು ಮತ್ತು ಪ್ರಾರಂಭಗಳ ದೇವನಾದ ಜೇನಸ್‌ ಎಂಬವನಿಗೆ ಮೀಸಲಾಗಿಟ್ಟರು. ಒಂದು ಮುಂದಕ್ಕೆ ಇನ್ನೊಂದು ಹಿಂದಕ್ಕೆ ನೋಡುತ್ತಿದ್ದ ಎರಡು ಮುಖಗಳಿದ್ದ ಜೇನಸ್‌ನಿಂದ ಈ ತಿಂಗಳಿಗೆ ಜನವರಿ ಎಂಬ ಹೆಸರು ಬಂತು.” ಹೊಸ ವರ್ಷದ ಆಚರಣೆಗಳ ದಿನ ಮತ್ತು ಪದ್ಧತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಅನೇಕ ಸ್ಥಳಗಳಲ್ಲಿ ಭಾರೀ ಮೋಜು ಮತ್ತು ಕುಡಿತವು ಈ ಉತ್ಸವಾಚರಣೆಗಳ ಭಾಗವಾಗಿದೆ. ಆದರೆ ರೋಮನ್ನರಿಗೆ 13:13 ಈ ಸಲಹೆಯನ್ನು ಕೊಡುತ್ತದೆ: “ಭಾರೀ ಮೋಜು, ಕುಡಿದು ಮತ್ತೇರಿದ ಸರದಿಗಳು, ನಿಷಿದ್ಧ ಸಂಭೋಗ, ಸಡಿಲು ನಡತೆ, ಜಗಳ ಮತ್ತು ಹೊಟ್ಟೆಕಿಚ್ಚು ಮುಂತಾದವುಗಳಲ್ಲಿ ನಿರತರಾಗಿರದೆ ಹಗಲಿಗೆ ತಕ್ಕಹಾಗೆ ಸಭ್ಯತೆಯಿಂದ ನಡೆಯೋಣ.” *

ನಿಮ್ಮ ವಿವಾಹವನ್ನು ಕಲುಷಿತಗೊಳಿಸಬೇಡಿ

16, 17. (ಎ) ಮದುವೆಯಾಗಲು ಯೋಜಿಸುತ್ತಿರುವಂಥ ಕ್ರೈಸ್ತ ಜೋಡಿಗಳು ವಿವಾಹದ ಕುರಿತಾದ ಸ್ಥಳಿಕ ಪದ್ಧತಿಗಳನ್ನು ಬೈಬಲಿನ ಮೂಲತತ್ತ್ವಗಳ ಬೆಳಕಿನಲ್ಲಿ ಪರೀಕ್ಷಿಸಬೇಕು ಏಕೆ? (ಬಿ) ಅಕ್ಕಿಯನ್ನು ಅಥವಾ ಇತರ ವಸ್ತುಗಳನ್ನು ವಧೂವರರತ್ತ ಎರಚುವಂಥ ಪದ್ಧತಿಗಳ ವಿಷಯದಲ್ಲಿ ಕ್ರೈಸ್ತರು ಏನನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ?

16 ಇನ್ನು ಸ್ವಲ್ಪದರಲ್ಲೇ, “ವರನ ಮತ್ತು ವಧುವಿನ ಸ್ವರವು [ಮಹಾ ಬಾಬೆಲಿನಲ್ಲಿ] ಇನ್ನೆಂದಿಗೂ ಕೇಳಿಬರದು.” (ಪ್ರಕಟನೆ 18:23) ಏಕೆ? ಇದಕ್ಕೆ ಒಂದು ಕಾರಣವು ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಅದರ ಆಚರಣೆಗಳೇ ಆಗಿವೆ. ಇವು ಒಂದು ವಿವಾಹವನ್ನು ಮದುವೆಯ ದಿನದಿಂದಲೇ ಕಲುಷಿತಗೊಳಿಸಬಲ್ಲವು.—ಮಾರ್ಕ 10:6-9.

17 ವಿವಾಹದ ಪದ್ಧತಿಗಳು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತವೆ. ಮುಗ್ಧವಾಗಿ ತೋರಿಬರಬಹುದಾದ ಕೆಲವು ಪದ್ಧತಿಗಳು, ವಿವಾಹ ದಂಪತಿಗಳಿಗೆ ಅಥವಾ ಅವರ ಅತಿಥಿಗಳಿಗೆ ‘ಶುಭವನ್ನು’ (NIBV) ತರುತ್ತದೆಂದು ಭಾವಿಸಲಾಗುವಂಥ ಬಾಬೆಲಿನ ಆಚರಣೆಗಳಿಂದ ಬಂದವುಗಳಾಗಿದ್ದಿರಬಹುದು. (ಯೆಶಾಯ 65:11) ಇಂಥ ಒಂದು ಸಂಪ್ರದಾಯವು ಅಕ್ಕಿಯನ್ನು ಅಥವಾ ಇತರ ವಸ್ತುಗಳನ್ನು ವಧೂವರರತ್ತ ಎರಚುವುದೇ ಆಗಿದೆ. ಈ ಪದ್ಧತಿಯು, ಆಹಾರವು ದುರಾತ್ಮಗಳನ್ನು ಶಾಂತಗೊಳಿಸುತ್ತದೆ ಮತ್ತು ವಧೂವರರಿಗೆ ಹಾನಿಮಾಡುವುದರಿಂದ ಅವುಗಳನ್ನು ದೂರವಿರಿಸುತ್ತದೆ ಎಂಬ ನಂಬಿಕೆಯಿಂದ ಬಂದದ್ದಾಗಿರಬಹುದು. ಅಷ್ಟುಮಾತ್ರವಲ್ಲ, ದೀರ್ಘಸಮಯದಿಂದಲೂ ಅಕ್ಕಿಯು ಸಂತಾನೋತ್ಪತ್ತಿ, ಸಂತೋಷ ಮತ್ತು ದೀರ್ಘಾಯುಷ್ಯದೊಂದಿಗೆ ರಹಸ್ಯಾರ್ಥಕ ಸಂಬಂಧವನ್ನು ಹೊಂದಿದೆ. ದೇವರ ಪ್ರೀತಿಯಲ್ಲಿ ಉಳಿಯಲು ಬಯಸುವವರೆಲ್ಲರೂ ಇಂಥ ಭ್ರಷ್ಟ ಪದ್ಧತಿಗಳಿಂದ ದೂರವಿರುವರು ಎಂಬುದು ಸುಸ್ಪಷ್ಟ.—2 ಕೊರಿಂಥ 6:14-18 ಓದಿ.

18. ಮದುವೆಯನ್ನು ಯೋಜಿಸುತ್ತಿರುವ ದಂಪತಿಗಳನ್ನು ಮತ್ತು ಮದುವೆಗೆ ಹಾಜರಾಗಲು ಆಮಂತ್ರಿಸಲ್ಪಟ್ಟಿರುವವರನ್ನು ಬೈಬಲಿನ ಯಾವ ಮೂಲತತ್ತ್ವಗಳು ಮಾರ್ಗದರ್ಶಿಸತಕ್ಕದ್ದು?

18 ತದ್ರೀತಿಯಲ್ಲಿ ಯೆಹೋವನ ಸೇವಕರು, ಮದುವೆಗಳು ಹಾಗೂ ಮದುವೆಯ ರಿಸೆಪ್‌ಷನ್‌ಗಳಲ್ಲಿ ಕ್ರೈಸ್ತ ಘನತೆಗೆ ಕುಂದುತರಬಹುದಾದ ಅಥವಾ ಕೆಲವರ ಮನಸ್ಸಾಕ್ಷಿಯನ್ನು ನೋಯಿಸಬಹುದಾದ ಲೌಕಿಕ ಆಚರಣೆಗಳಿಂದ ದೂರವಿರುತ್ತಾರೆ. ಉದಾಹರಣೆಗೆ, ಅವರು ನೋಯಿಸುವ ಮೂದಲಿಕೆ ಅಥವಾ ಲೈಂಗಿಕ ವ್ಯಂಗೋಕ್ತಿಗಳಿಂದ ಕಲುಷಿತಗೊಂಡಿರುವ ಭಾಷಣಗಳನ್ನು ಕೊಡುವುದರಿಂದ ದೂರವಿರುತ್ತಾರೆ ಮತ್ತು ನವದಂಪತಿಗಳಿಗೆ ಅಥವಾ ಇತರರಿಗೆ ಮುಜುಗರವನ್ನು ಉಂಟುಮಾಡಸಾಧ್ಯವಿರುವ ಕುಚೇಷ್ಟೆಗಳು ಇಲ್ಲವೆ ಟೀಕೆಗಳಿಂದ ದೂರವಿರುತ್ತಾರೆ. (ಜ್ಞಾನೋಕ್ತಿ 26:18, 19; ಲೂಕ 6:31; 10:27) ಅಷ್ಟುಮಾತ್ರವಲ್ಲ, ನಿರಾಡಂಬರತೆಯನ್ನಲ್ಲ ಬದಲಾಗಿ ‘ಜೀವನೈಶ್ವರ್ಯದ ಆಡಂಬರ ಪ್ರದರ್ಶನವನ್ನು’ ಪ್ರತಿಬಿಂಬಿಸುವಂಥ ತುಂಬ ವೈಭವದಿಂದ ಕೂಡಿದ ಅದ್ದೂರಿ ರಿಸೆಪ್‌ಷನ್‌ಗಳನ್ನು ಏರ್ಪಡಿಸುವುದರಿಂದಲೂ ಅವರು ದೂರವಿರುತ್ತಾರೆ. (1 ಯೋಹಾನ 2:16) ನೀವು ಮದುವೆಯನ್ನು ಯೋಜಿಸುತ್ತಿರುವುದಾದರೆ, ನಿಮ್ಮ ವಿವಾಹದ ದಿನದ ಕುರಿತು ನೀವು ಪರ್ಯಾಲೋಚಿಸುವಾಗ ಅದು ವಿಷಾದದ ಅನಿಸಿಕೆಯನ್ನಲ್ಲ, ಆನಂದದ ಅನಿಸಿಕೆಯನ್ನು ತರಬೇಕೆಂಬುದನ್ನೇ ಯೆಹೋವನು ಬಯಸುತ್ತಾನೆ ಎಂಬುದನ್ನು ಎಂದಿಗೂ ಮರೆಯದಿರಿ. *

ಸ್ವಸ್ತಿಪಾನ—ಧಾರ್ಮಿಕ ಅರ್ಥವುಳ್ಳದ್ದಾಗಿದೆಯೊ?

19, 20. ಸ್ವಸ್ತಿಪಾನವು ಯಾವ ಮೂಲದಿಂದ ಬಂದಿದೆ ಎಂಬ ವಿಷಯದಲ್ಲಿ ಒಂದು ಐಹಿಕ ಮೂಲವು ಏನು ತಿಳಿಸುತ್ತದೆ ಮತ್ತು ಈ ಪದ್ಧತಿಯು ಕ್ರೈಸ್ತರಿಗೆ ಅನಂಗೀಕೃತವಾಗಿದೆ ಏಕೆ?

19 ಮದುವೆಗಳಲ್ಲಿ ಹಾಗೂ ಇತರ ಸಾಮಾಜಿಕ ಸಮಾರಂಭಗಳಲ್ಲಿ ಸರ್ವಸಾಮಾನ್ಯವಾಗಿರುವ ಒಂದು ಆಚರಣೆಯು ಸ್ವಸ್ತಿಪಾನ (ಟೋಸ್ಟಿಂಗ್‌) ಮಾಡುವುದಾಗಿದೆ. 1995 ಮದ್ಯಪಾನ ಮತ್ತು ಸಂಸ್ಕೃತಿಯ ಕುರಿತಾದ ಅಂತಾರಾಷ್ಟ್ರೀಯ ಕೈಪಿಡಿ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಸ್ವಸ್ತಿಪಾನಮಾಡುವುದು . . . ಬಹುಶಃ ಪುರಾತನ ಯಜ್ಞಾರ್ಪಿತ ಮದ್ಯತರ್ಪಣಗಳ ಒಂದು ಐಹಿಕ ಕುರುಹಾಗಿದ್ದು, ಒಂದು ಹಾರೈಕೆಗೆ, ‘ದೀರ್ಘಾಯುಷ್ಯ’ ಅಥವಾ ‘ನಿನ್ನ ಆರೋಗ್ಯಕ್ಕೆ’ ಎಂಬ ಮಾತುಗಳಲ್ಲಿ ಸಂಕ್ಷೇಪಿಸಲ್ಪಟ್ಟಿರುವ ಪ್ರಾರ್ಥನೆಗೆ ಬದಲಿಯಾಗಿ . . . ಈ ತರ್ಪಣಗಳಲ್ಲಿ ಪವಿತ್ರ ದ್ರವವನ್ನು ದೇವದೇವತೆಗಳಿಗೆ ಅರ್ಪಿಸಲಾಗುತ್ತಿತ್ತು.”

20 ಅನೇಕರು ಸ್ವಸ್ತಿಪಾನವನ್ನು ಧಾರ್ಮಿಕ ಅಥವಾ ಮೂಢನಂಬಿಕೆಯ ಅರ್ಥವುಳ್ಳದ್ದಾಗಿ ಪ್ರಜ್ಞಾಪೂರ್ವಕವಾಗಿ ಪರಿಗಣಿಸದಿರಬಹುದೆಂಬುದು ನಿಜ. ಆದರೂ ದ್ರಾಕ್ಷಾಮದ್ಯದ ಗ್ಲಾಸುಗಳನ್ನು ಆಕಾಶದತ್ತ ಎತ್ತುವ ಪದ್ಧತಿಯನ್ನು, ಆಶೀರ್ವಾದಕ್ಕಾಗಿ “ಆಕಾಶವನ್ನು” ಅಂದರೆ ಮಾನವಾತೀತ ಶಕ್ತಿಯನ್ನು ವಿನಂತಿಸಿಕೊಳ್ಳುವಂತೆ ಪರಿಗಣಿಸಬಹುದಾಗಿದ್ದು, ಇದು ಶಾಸ್ತ್ರವಚನಗಳಲ್ಲಿ ತಿಳಿಸಲ್ಪಟ್ಟಿರುವ ವಿಷಯಗಳಿಗೆ ಹೊಂದಿಕೆಯಲ್ಲಿಲ್ಲ.—ಯೋಹಾನ 14:6; 16:23. *

“ಯೆಹೋವನನ್ನು ಪ್ರೀತಿಸುವವರೇ, ಕೆಟ್ಟತನವನ್ನು ಹಗೆಮಾಡಿರಿ”

21. ಜನಪ್ರಿಯ ಆಚರಣೆಗಳು ಧಾರ್ಮಿಕ ನಂಬಿಕೆಗಳನ್ನು ಒಳಗೂಡಿಲ್ಲದಿರಬಹುದಾದರೂ ಕ್ರೈಸ್ತರು ಎಂಥ ರೀತಿಯ ಆಚರಣೆಗಳಿಂದ ದೂರವಿರಬೇಕು ಮತ್ತು ಏಕೆ?

21 ಮಹಾ ಬಾಬೆಲಿನಿಂದ ನೇರವಾಗಿ ಅಥವಾ ಪರೋಕ್ಷವಾಗಿ ಉತ್ತೇಜಿಸಲ್ಪಡುತ್ತಿರುವ ಒಂದು ಪ್ರವೃತ್ತಿಯನ್ನು ಅಂದರೆ ಇಂದಿನ ಲೋಕದ ತೀವ್ರವಾಗಿ ಕುಸಿಯುತ್ತಿರುವ ಮಟ್ಟಗಳನ್ನು ಪ್ರತಿಬಿಂಬಿಸುತ್ತಾ ಕೆಲವು ದೇಶಗಳು ವಾರ್ಷಿಕ ಕಾರ್ನಿವಲ್‌ ಹಬ್ಬಗಳನ್ನು ಪ್ರಾಯೋಜಿಸುತ್ತವೆ. ಈ ಹಬ್ಬಗಳು ಕಾಮುಕ ನೃತ್ಯಗಳನ್ನು ಒಳಗೂಡಿರುತ್ತವೆ ಮತ್ತು ಸಲಿಂಗಕಾಮಿ ಗಂಡಸರ ಹಾಗೂ ಸಲಿಂಗ ಸ್ತ್ರೀಕಾಮಿಗಳ ಜೀವನ ಶೈಲಿಯನ್ನೂ ವಿಧಿವತ್ತಾಗಿ ಆಚರಿಸಬಹುದು. ಯೆಹೋವನನ್ನು ಪ್ರೀತಿಸುವವರು ಇಂಥ ಘಟನೆಗೆ ಹಾಜರಾಗುವುದು ಅಥವಾ ಇದನ್ನು ವೀಕ್ಷಿಸುವುದು ಸೂಕ್ತವಾಗಿರುವುದೊ? ಒಬ್ಬ ಕ್ರೈಸ್ತನು ಹೀಗೆ ಮಾಡುವುದು ಅವನು ಕೆಟ್ಟತನವನ್ನು ನಿಜವಾಗಿಯೂ ಹಗೆಮಾಡುತ್ತಾನೆಂಬುದನ್ನು ತೋರಿಸುತ್ತದೊ? (ಕೀರ್ತನೆ 1:1, 2; 97:10) “ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು” ಎಂದು ಪ್ರಾರ್ಥಿಸಿದಂಥ ಕೀರ್ತನೆಗಾರನ ಮನೋಭಾವವನ್ನು ಅನುಕರಿಸುವುದು ಎಷ್ಟು ಉತ್ತಮ!—ಕೀರ್ತನೆ 119:37.

22. ಒಂದು ಆಚರಣೆಯಲ್ಲಿ ಭಾಗವಹಿಸುವನೊ ಇಲ್ಲವೊ ಎಂಬ ವಿಷಯದಲ್ಲಿ ಒಬ್ಬ ಕ್ರೈಸ್ತನು ಯಾವಾಗ ಮಾತ್ರ ತನ್ನ ಸ್ವಂತ ಮನಸ್ಸಾಕ್ಷಿಗನುಸಾರ ನಿರ್ಣಯವನ್ನು ಮಾಡಬಹುದು?

22 ಲೌಕಿಕ ಆಚರಣೆಗಳ ದಿನದಂದು ಒಬ್ಬ ಕ್ರೈಸ್ತನ ವರ್ತನೆಯು ಅವನೂ ಆಚರಣೆಯಲ್ಲಿ ಜೊತೆಗೂಡುತ್ತಿದ್ದಾನೆ ಎಂಬ ಅಭಿಪ್ರಾಯವನ್ನು ಕೊಡದಿರುವಂತೆ ಜಾಗ್ರತೆ ವಹಿಸುತ್ತಾನೆ. “ನೀವು ತಿಂದರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ” ಎಂದು ಪೌಲನು ಬರೆದನು. (1 ಕೊರಿಂಥ 10:31; “ ವಿವೇಕಯುತ ನಿರ್ಣಯಗಳನ್ನು ಮಾಡುವುದು” ಎಂಬ ಚೌಕವನ್ನು ನೋಡಿ.) ಇನ್ನೊಂದು ಕಡೆಯಲ್ಲಿ, ಒಂದು ಪದ್ಧತಿ ಅಥವಾ ಆಚರಣೆಯಲ್ಲಿ ಯಾವುದೇ ರೀತಿಯ ಸುಳ್ಳು ಧಾರ್ಮಿಕ ಅರ್ಥವು ಒಳಗೂಡಿಲ್ಲವೆಂಬುದು ಸ್ಪಷ್ಟವಾಗಿರುವಾಗ, ಅದು ರಾಜಕೀಯ ಇಲ್ಲವೆ ದೇಶಭಕ್ತಿಯ ಆಚರಣೆಯ ಭಾಗವಾಗಿಲ್ಲದಿರುವಾಗ ಮತ್ತು ಬೈಬಲಿನ ಯಾವುದೇ ಮೂಲತತ್ತ್ವಗಳನ್ನು ಉಲ್ಲಂಘಿಸದಿರುವಾಗ, ಅದರಲ್ಲಿ ಭಾಗವಹಿಸಬೇಕೊ ಇಲ್ಲವೊ ಎಂಬ ವಿಷಯದಲ್ಲಿ ಪ್ರತಿಯೊಬ್ಬ ಕ್ರೈಸ್ತನು ವೈಯಕ್ತಿಕ ನಿರ್ಣಯವನ್ನು ಮಾಡಬಹುದು. ಅದೇ ಸಮಯದಲ್ಲಿ ಇತರರು ಎಡವಲು ಕಾರಣವಾಗದಿರುವಂತೆ ಅವನು ಇತರರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳುವನು.

ಮಾತಿನಲ್ಲಿಯೂ ಕಾರ್ಯದಲ್ಲಿಯೂ ದೇವರನ್ನು ಮಹಿಮೆಪಡಿಸಿರಿ

23, 24. ಯೆಹೋವನ ನೀತಿಯ ಮಟ್ಟಗಳ ವಿಷಯದಲ್ಲಿ ನಾವು ಹೇಗೆ ಒಂದು ಒಳ್ಳೇ ಸಾಕ್ಷಿಯನ್ನು ಕೊಡಬಹುದು?

23 ಅನೇಕರು ಕೆಲವು ಜನಪ್ರಿಯ ಆಚರಣೆಗಳ ದಿನಗಳನ್ನು ಮುಖ್ಯವಾಗಿ ಕುಟುಂಬದವರು ಹಾಗೂ ಸ್ನೇಹಿತರು ಒಟ್ಟುಗೂಡಿಬರುವಂಥ ಸದವಕಾಶಗಳಾಗಿ ಪರಿಗಣಿಸುತ್ತಾರೆ. ಆದುದರಿಂದ ನಮ್ಮ ಶಾಸ್ತ್ರಾಧಾರಿತ ನಿಲುವು ಪ್ರೀತಿರಹಿತವಾದದ್ದಾಗಿದೆ ಅಥವಾ ವಿಪರೀತವಾಗಿದೆ ಎಂದು ಯಾರಾದರೂ ತಪ್ಪಾಗಿ ನೆನಸುವಲ್ಲಿ, ಯೆಹೋವನ ಸಾಕ್ಷಿಗಳು ಕುಟುಂಬದವರ ಹಾಗೂ ಸ್ನೇಹಿತರ ಹಿತಕರವಾದ ಒಟ್ಟುಗೂಡುವಿಕೆಗಳನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ ಎಂದು ನಾವು ದಯಾಭಾವದಿಂದ ವಿವರಿಸಸಾಧ್ಯವಿದೆ. (ಜ್ಞಾನೋಕ್ತಿ 11:25; ಪ್ರಸಂಗಿ 3:12, 13; 2 ಕೊರಿಂಥ 9:7) ವರ್ಷಾದ್ಯಂತ ಬೇರೆ ಸಮಯಗಳಲ್ಲಿ ನಾವು ಪ್ರಿಯ ಜನರೊಂದಿಗಿನ ಸಾಹಚರ್ಯದಲ್ಲಿ ಆನಂದಿಸುತ್ತೇವಾದರೂ, ದೇವರ ಮತ್ತು ಆತನ ನೀತಿಯ ಮಟ್ಟಗಳ ಮೇಲಿನ ಪ್ರೀತಿಯ ಕಾರಣದಿಂದ ನಾವು ಇಂಥ ಸಂತೋಷಭರಿತ ಸಂದರ್ಭಗಳನ್ನು ದೇವರ ಮನಸ್ಸನ್ನು ನೋಯಿಸುವಂಥ ಪದ್ಧತಿಗಳಿಂದ ಕಲುಷಿತಗೊಳಿಸಲು ಬಯಸುವುದಿಲ್ಲ.—“ ಸತ್ಯ ಆರಾಧನೆಯು ಅತ್ಯಧಿಕ ಆನಂದವನ್ನು ತರುತ್ತದೆ” ಎಂಬ ಚೌಕವನ್ನು ನೋಡಿ.

 

24 ಕೆಲವು ಸಾಕ್ಷಿಗಳು ಯಥಾರ್ಥ ಮನಸ್ಸಿನಿಂದ ಪ್ರಶ್ನಿಸುವವರೊಂದಿಗೆ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಪುಸ್ತಕದ 16ನೆಯ ಅಧ್ಯಾಯದಿಂದ ಕೆಲವು ಅಂಶಗಳನ್ನು ಹಂಚಿಕೊಳ್ಳುವುದರಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ನಮ್ಮ ಗುರಿಯು ವಾಗ್ವಾದಗಳನ್ನು ಗೆಲ್ಲುವುದಲ್ಲ ಬದಲಾಗಿ ಹೃದಯಗಳನ್ನು ಗೆಲ್ಲುವುದೇ ಆಗಿದೆ ಎಂಬುದನ್ನು ನೆನಪಿನಲ್ಲಿಡಿ. ಆದುದರಿಂದ ಗೌರವಭಾವದವರಾಗಿರಿ, ಸೌಮ್ಯಭಾವವನ್ನು ಕಾಪಾಡಿಕೊಳ್ಳಿರಿ ಮತ್ತು “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ.”—ಕೊಲೊಸ್ಸೆ 4:6.

25, 26. ನಂಬಿಕೆಯಲ್ಲಿ ಮತ್ತು ಯೆಹೋವನಿಗಾಗಿರುವ ಪ್ರೀತಿಯಲ್ಲಿ ಬೆಳೆಯಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಬಲ್ಲರು?

25 ಯೆಹೋವನ ಸೇವಕರಾಗಿರುವ ನಾವು ಸುಜ್ಞಾನ ಸಂಗ್ರಹಿಸಿಕೊಂಡಿರುವವರಾಗಿದ್ದೇವೆ. ನಾವು ಏಕೆ ಕೆಲವು ವಿಷಯಗಳನ್ನು ನಂಬುತ್ತೇವೆ ಮತ್ತು ಮಾಡುತ್ತೇವೆ ಹಾಗೂ ಕೆಲವು ವಿಷಯಗಳಿಂದ ದೂರವಿರುತ್ತೇವೆ ಎಂಬುದು ನಮಗೆ ತಿಳಿದಿದೆ. (ಇಬ್ರಿಯ 5:14) ಆದುದರಿಂದ ಹೆತ್ತವರೇ, ನಿಮ್ಮ ಮಕ್ಕಳಿಗೆ ಬೈಬಲಿನ ಮೂಲತತ್ತ್ವಗಳ ಆಧಾರದ ಮೇಲೆ ತರ್ಕಿಸುವುದನ್ನು ಕಲಿಸಿರಿ. ಹೀಗೆ ಮಾಡುವ ಮೂಲಕ ನೀವು ಅವರ ನಂಬಿಕೆಯನ್ನು ಬಲಗೊಳಿಸುತ್ತೀರಿ, ಅವರ ನಂಬಿಕೆಗಳ ಕುರಿತು ಪ್ರಶ್ನೆಯೆಬ್ಬಿಸುವವರಿಗೆ ಶಾಸ್ತ್ರಾಧಾರಿತ ಉತ್ತರಗಳನ್ನು ಕೊಡುವಂತೆ ಅವರಿಗೆ ಸಹಾಯಮಾಡುತ್ತೀರಿ ಮತ್ತು ಅವರಿಗೆ ಯೆಹೋವನ ಪ್ರೀತಿಯ ಆಶ್ವಾಸನೆಯನ್ನು ಕೊಡುತ್ತೀರಿ.—ಯೆಶಾಯ 48:17, 18; 1 ಪೇತ್ರ 3:15.

26 ದೇವರನ್ನು “ಪವಿತ್ರಾತ್ಮದಿಂದಲೂ ಸತ್ಯದಿಂದಲೂ” ಆರಾಧಿಸುವವರೆಲ್ಲರು ಶಾಸ್ತ್ರಾಧಾರವಿಲ್ಲದ ಆಚರಣೆಗಳಿಂದ ದೂರವಿರುತ್ತಾರೆ ಮಾತ್ರವಲ್ಲ ಜೀವನದ ಎಲ್ಲ ಅಂಶಗಳಲ್ಲಿ ಪ್ರಮಾಣಿಕರಾಗಿರಲೂ ಹೆಣಗಾಡುತ್ತಾರೆ. (ಯೋಹಾನ 4:23) ಇಂದು ಅನೇಕರು ಪ್ರಾಮಾಣಿಕತೆಯನ್ನು ಅಪ್ರಾಯೋಗಿಕವಾದದ್ದಾಗಿ ಪರಿಗಣಿಸುತ್ತಾರೆ. ಆದರೆ ನಾವು ಮುಂದಿನ ಅಧ್ಯಾಯದಲ್ಲಿ ನೋಡಲಿರುವಂತೆ ದೇವರ ಮಾರ್ಗಗಳು ಯಾವಾಗಲೂ ಅತ್ಯುತ್ತಮವಾಗಿರುತ್ತವೆ.

^ ಪ್ಯಾರ. 3 ನಾನು ಆಚರಣೆಯಲ್ಲಿ ಭಾಗವಹಿಸಬೇಕೊ?” ಎಂಬ ಚೌಕವನ್ನು ನೋಡಿ. ನಿರ್ದಿಷ್ಟವಾದ ಅನೇಕ ಹಬ್ಬಗಳನ್ನು ಹಾಗೂ ಆಚರಣೆಗಳನ್ನು ಯೆಹೋವನ ಸಾಕ್ಷಿಗಳು ಪ್ರಕಟಿಸಿರುವ ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ನಲ್ಲಿ ಪಟ್ಟಿಮಾಡಲಾಗಿದೆ.

^ ಪ್ಯಾರ. 5 ಬೈಬಲಿನ ಕಾಲಗಣನಶಾಸ್ತ್ರ ಮತ್ತು ಐಹಿಕ ಇತಿಹಾಸದ ಆಧಾರದ ಮೇಲೆ, ಯೇಸು ಸಾ.ಶ.ಪೂ. 2 ರಲ್ಲಿ ಎಥನಿಮ್‌ ಎಂಬ ಯೆಹೂದಿ ತಿಂಗಳಿನಲ್ಲಿ ಜನಿಸಿರುವುದು ಸಂಭಾವ್ಯ. ಇದು ನಮ್ಮ ಪ್ರಸ್ತುತ ಕ್ಯಾಲೆಂಡರಿನಲ್ಲಿ ಸೆಪ್ಟಂಬರ್‌/ಅಕ್ಟೋಬರ್‌ ತಿಂಗಳಿಗೆ ಹೊಂದಿಕೆಯಾಗುತ್ತದೆ.—ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಶಾಸ್ತ್ರವಚನಗಳ ಒಳನೋಟ (ಇಂಗ್ಲಿಷ್‌), ಸಂಪುಟ 2⁠ರ ಪುಟಗಳು 56-57⁠ನ್ನು ನೋಡಿ.

^ ಪ್ಯಾರ. 11 ಹಬ್ಬಗಳು ಮತ್ತು ಸೈತಾನಪಂಥ” ಎಂಬ ಚೌಕವನ್ನು ನೋಡಿ.

^ ಪ್ಯಾರ. 11 ಒಬ್ಬ ಸ್ತ್ರೀಯು ಮಗುವನ್ನು ಹೆತ್ತ ಬಳಿಕ ದೇವರಿಗೆ ದೋಷಪರಿಹಾರಕ ಯಜ್ಞವನ್ನು ಅರ್ಪಿಸುವಂತೆ ಧರ್ಮಶಾಸ್ತ್ರದ ಒಡಂಬಡಿಕೆಯು ಅಗತ್ಯಪಡಿಸಿತ್ತು. (ಯಾಜಕಕಾಂಡ 12:1-8) ಈ ಶಾಸನಬದ್ಧ ಆವಶ್ಯಕತೆಯು ಇಸ್ರಾಯೇಲ್ಯರಿಗೆ, ಮಾನವರು ತಮ್ಮ ಮಕ್ಕಳಿಗೆ ಪಾಪವನ್ನು ರವಾನಿಸುತ್ತಾರೆ ಎಂಬ ವಾಸ್ತವಾಂಶವನ್ನು ಒತ್ತಿಹೇಳುವ ಒಂದು ಜ್ಞಾಪನವಾಗಿತ್ತು ಮತ್ತು ಇದು ಮಗುವಿನ ಜನನದ ವಿಷಯದಲ್ಲಿ ಸಮತೂಕ ನೋಟವನ್ನು ಹೊಂದಿರುವಂತೆ ಹಾಗೂ ಹುಟ್ಟುಹಬ್ಬದ ವಿಧರ್ಮಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ದೂರವಿರುವಂತೆ ಮಾಡಿದ್ದಿರಬಹುದು.—ಕೀರ್ತನೆ 51:5.

^ ಪ್ಯಾರ. 13 ಈಸ್ಟರ್‌ ಹಬ್ಬವು ಫಿನೀಷಿಯದ ಸಂತಾನೋತ್ಪತ್ತಿ ದೇವತೆಯಾದ ಅಸ್ಟಾರ್ಟೀ ಆರಾಧನೆಯೊಂದಿಗೂ ಸಂಬಂಧವನ್ನು ಹೊಂದಿದೆ. ಈ ದೇವತೆಯ ಸಂಕೇತಗಳು ಮೊಟ್ಟೆ ಮತ್ತು ಮೊಲಗಳಾಗಿದ್ದವು. ಅಸ್ಟಾರ್ಟೀ ದೇವತೆಯ ಪ್ರತಿಮೆಗಳು ಅವಳನ್ನು ಅತಿ ದೊಡ್ಡ ಲೈಂಗಿಕ ಇಂದ್ರಿಯಗಳನ್ನು ಹೊಂದಿರುವಂತೆ ಅಥವಾ ಅವಳ ಪಕ್ಕದಲ್ಲಿ ಒಂದು ಮೊಲವೂ ಕೈಯಲ್ಲಿ ಒಂದು ಮೊಟ್ಟೆಯೂ ಇರುವಂತೆ ಬೇರೆ ಬೇರೆ ವಿಧದಲ್ಲಿ ಚಿತ್ರಿಸುತ್ತವೆ.

^ ಪ್ಯಾರ. 15 ಇಸವಿ 2005, ಡಿಸೆಂಬರ್‌ 15 ರ ಕಾವಲಿನಬುರುಜು ಪತ್ರಿಕೆಯ ಪುಟ 7, “ಕ್ರಿಸ್ಮಸ್‌ ಕಾಲವು ಯಾವುದಕ್ಕೆ ಪ್ರಮುಖತೆಯನ್ನು ನೀಡುತ್ತದೆ?” ಎಂಬ ಲೇಖನವನ್ನು ಮತ್ತು 2002, ಫೆಬ್ರವರಿ 8⁠ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಪುಟಗಳು 20-21⁠ರಲ್ಲಿರುವ “ಬೈಬಲಿನ ದೃಷ್ಟಿಕೋನ—ಕ್ರೈಸ್ತರು ಹೊಸ ವರ್ಷದ ಉತ್ಸವಾಚರಣೆಗಳಲ್ಲಿ ಭಾಗವಹಿಸಬೇಕೊ?” ಎಂಬ ಲೇಖನವನ್ನು ನೋಡಿ.

^ ಪ್ಯಾರ. 18 ನವೆಂಬರ್‌ 1, 2006⁠ರ ಕಾವಲಿನಬರುಜು ಪತ್ರಿಕೆಯ 12-23ನೆಯ ಪುಟಗಳಲ್ಲಿ ವಿವಾಹಗಳು ಮತ್ತು ಸಾಮಾಜಿಕ ಸಮಾರಂಭಗಳ ಕುರಿತಾದ ಮೂರು ಲೇಖನಗಳನ್ನು ನೋಡಿ.

^ ಪ್ಯಾರ. 20 ಫೆಬ್ರವರಿ 15, 2007⁠ರ ಕಾವಲಿನಬುರುಜು ಪತ್ರಿಕೆಯ (ಇಂಗ್ಲಿಷ್‌) ಪುಟಗಳು 30-31ನ್ನು ನೋಡಿ.

^ ಪ್ಯಾರ. 24 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿದೆ.