ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿರಿ

ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿರಿ

‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’—ಇಬ್ರಿಯ 13:18.

1, 2. ನಾವು ಪ್ರಾಮಾಣಿಕರಾಗಿರಲು ಮಾಡುವ ಪ್ರಯತ್ನಗಳನ್ನು ನೋಡುವಾಗ ಯೆಹೋವನಿಗೆ ಏಕೆ ಸಂತೋಷವಾಗುತ್ತದೆ? ದೃಷ್ಟಾಂತಿಸಿ.

ಒಬ್ಬ ತಾಯಿಯೂ ಅವಳ ಚಿಕ್ಕ ಮಗನೂ ಒಂದು ಅಂಗಡಿಯಿಂದ ಹೊರಗೆ ಬರುತ್ತಾರೆ. ಆಗ ಹುಡುಗನು ಇದ್ದಕ್ಕಿದ್ದಂತೆ ನಿಂತುಬಿಡುತ್ತಾನೆ ಮತ್ತು ಅವನು ಹೆದರಿಹೋಗಿರುವುದು ಅವನ ಮುಖದಲ್ಲಿ ಕಾಣುತ್ತದೆ. ಅವನು ಅಂಗಡಿಯಲ್ಲಿ ನೋಡಲು ತೆಗೆದುಕೊಂಡಿದ್ದ ಒಂದು ಸಣ್ಣ ಆಟಿಕೆ ಅವನ ಕೈಯಲ್ಲಿದೆ. ಅವನು ಅದನ್ನು ವಾಪಸ್‌ ಇಡಲು ಅಥವಾ ತನ್ನ ತಾಯಿ ಅದನ್ನು ತನಗೆ ಕೊಡಿಸುವಳೋ ಎಂದು ಕೇಳಲು ಮರೆತುಹೋದನು. ಅವನು ದುಃಖಿತನಾಗಿ ಸಹಾಯಕ್ಕಾಗಿ ತನ್ನ ತಾಯಿಯನ್ನು ಕರೆಯುತ್ತಾನೆ. ಅವಳು ಅವನನ್ನು ಸಮಾಧಾನಪಡಿಸುತ್ತಾಳೆ ಮತ್ತು ಅವನು ಆ ವಸ್ತುವನ್ನು ಹಿಂದಿರುಗಿಸಿ ಕ್ಷಮೆಯಾಚಿಸುವಂತೆ ಅವನನ್ನು ಪುನಃ ಅಂಗಡಿಗೆ ಕರೆದುಕೊಂಡು ಹೋಗುತ್ತಾಳೆ. ಅವನು ಹಾಗೆ ಮಾಡಿದಾಗ ತಾಯಿಯ ಹೃದಯ ಸಂತೋಷ ಮತ್ತು ಹೆಮ್ಮೆಯಿಂದ ಬೀಗುತ್ತದೆ. ಏಕೆ?

2 ತಮ್ಮ ಮಕ್ಕಳು ಪ್ರಾಮಾಣಿಕತೆಯ ಮೌಲ್ಯವನ್ನು ಕಲಿಯುತ್ತಿದ್ದಾರೆ ಎಂಬುದನ್ನು ನೋಡುವಾಗ ಹೆತ್ತವರಿಗೆ ಯಾವಾಗಲೂ ಸಂತೋಷವಾಗುತ್ತದೆ. ಮತ್ತು “ಸತ್ಯದ ದೇವರಾದ” (NIBV) ನಮ್ಮ ಸ್ವರ್ಗೀಯ ತಂದೆಗೂ ಇದರಿಂದ ಸಂತೋಷವಾಗುತ್ತದೆ. (ಕೀರ್ತನೆ 31:5) ನಾವು ಆಧ್ಯಾತ್ಮಿಕವಾಗಿ ಪ್ರೌಢತೆಗೇರುತ್ತಿರುವುದನ್ನು ಆತನು ಗಮನಿಸುವಾಗ ನಾವು ಪ್ರಾಮಾಣಿಕರಾಗಿರಲು ಶ್ರಮಿಸುತ್ತಿರುವುದನ್ನು ನೋಡಿ ಆತನು ಸಂತೋಷಪಡುತ್ತಾನೆ. ನಾವು ಆತನನ್ನು ಸಂತೋಷಪಡಿಸಲು ಮತ್ತು ಆತನ ಪ್ರೀತಿಯಲ್ಲಿ ಉಳಿಯಲು ಬಯಸುವುದರಿಂದ ಅಪೊಸ್ತಲ ಪೌಲನಿಂದ ವ್ಯಕ್ತಪಡಿಸಲ್ಪಟ್ಟ ಭಾವನೆಗಳನ್ನು ನಾವೂ ಪ್ರತಿಧ್ವನಿಸುತ್ತೇವೆ. ಅವನು ಹೇಳಿದ್ದು: ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’ (ಇಬ್ರಿಯ 13:18) ನಾವು ಪ್ರಾಮಾಣಿಕರಾಗಿರಲು ಕೆಲವೊಮ್ಮೆ ವಿಶೇಷವಾಗಿ ಪಂಥಾಹ್ವಾನವಾಗಿ ಕಂಡುಕೊಳ್ಳಬಹುದಾದ ಜೀವನದ ನಾಲ್ಕು ಮುಖ್ಯ ಕ್ಷೇತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸೋಣ. ಇದರ ಫಲಿತಾಂಶವಾಗಿ ಸಿಗುವ ಕೆಲವು ಆಶೀರ್ವಾದಗಳನ್ನು ನಾವು ತದನಂತರ ಪರಿಗಣಿಸುವೆವು.

ನಮಗೆ ನಾವೇ ಪ್ರಾಮಾಣಿಕರಾಗಿರುವುದು

3-5. (ಎ) ಆತ್ಮವಂಚನೆಯ ಅಪಾಯಗಳ ಕುರಿತು ದೇವರ ವಾಕ್ಯವು ಹೇಗೆ ನಮ್ಮನ್ನು ಎಚ್ಚರಿಸುತ್ತದೆ? (ಬಿ) ನಮಗೆ ನಾವೇ ಪ್ರಾಮಾಣಿಕರಾಗಿರಲು ಯಾವುದು ನಮಗೆ ಸಹಾಯಮಾಡುವುದು?

3 ನಮಗೆ ನಾವೇ ಪ್ರಾಮಾಣಿಕರಾಗಿರಲು ಕಲಿಯುವುದು ಮೊದಲನೇ ಪಂಥಾಹ್ವಾನವಾಗಿದೆ. ಅಪರಿಪೂರ್ಣ ಮಾನವರಾಗಿರುವ ನಾವು ಆತ್ಮವಂಚನೆಗೆ ಬಲಿಯಾಗುವುದು ತುಂಬ ಸುಲಭ. ಉದಾಹರಣೆಗೆ, ಲವೊದಿಕೀಯದಲ್ಲಿದ್ದ ಕ್ರೈಸ್ತರು ಆಧ್ಯಾತ್ಮಿಕವಾಗಿ ‘ಬಡವರು, ಕುರುಡರು ಮತ್ತು ಬಟ್ಟೆಯಿಲ್ಲದವರು’ ಆಗಿದ್ದರೂ ತಾವು ಐಶ್ವರ್ಯವಂತರಾಗಿದ್ದೇವೆ ಎಂದು ನೆನಸಿ ತಮ್ಮನ್ನು ತಾವೇ ಮೋಸಗೊಳಿಸಿಕೊಂಡಿದ್ದರು ಎಂದು ಯೇಸು ಅವರಿಗೆ ಹೇಳಿದನು—ಇದು ನಿಜಕ್ಕೂ ಶೋಚನೀಯ ಸ್ಥಿತಿಯಾಗಿತ್ತು. (ಪ್ರಕಟನೆ 3:17) ಅವರ ಆತ್ಮವಂಚನೆಯು ಅವರ ಸನ್ನಿವೇಶವನ್ನು ಇನ್ನಷ್ಟು ಅಪಾಯಕಾರಿಯಾಗಿ ಮಾಡಿತಷ್ಟೆ.

4 ಶಿಷ್ಯನಾದ ಯಾಕೋಬನು, “ತಾನು ಔಪಚಾರಿಕವಾದ ಆರಾಧಕನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಸ್ವಂತ ಹೃದಯವನ್ನು ಮೋಸಗೊಳಿಸಿಕೊಳ್ಳುತ್ತಾ ಇರುವುದಾದರೆ ಅಂಥವನ ಆರಾಧನಾ ರೀತಿಯು ವ್ಯರ್ಥವಾದದ್ದಾಗಿದೆ” ಎಂದು ಎಚ್ಚರಿಸಿದನು ಎಂಬುದನ್ನು ಸಹ ನೀವು ಜ್ಞಾಪಿಸಿಕೊಳ್ಳಬಹುದು. (ಯಾಕೋಬ 1:26) ನಾವು ನಮ್ಮ ನಾಲಿಗೆಯನ್ನು ದುರುಪಯೋಗಿಸಸಾಧ್ಯವಿದೆ ಮತ್ತು ಅದೇ ಸಮಯದಲ್ಲಿ ಯೆಹೋವನನ್ನು ಅಂಗೀಕಾರಾರ್ಹವಾಗಿ ಆರಾಧಿಸಸಾಧ್ಯವಿದೆ ಎಂದು ಆಲೋಚಿಸುವುದಾದರೆ ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಿದ್ದೇವೆ ಅಷ್ಟೆ. ಯೆಹೋವನಿಗೆ ನಾವು ಸಲ್ಲಿಸುವ ಆರಾಧನೆಯು ವ್ಯರ್ಥವಾಗಿರುವುದು, ಸಂಪೂರ್ಣವಾಗಿ ನಿಷ್ಪ್ರಯೋಜಕವಾಗಿರುವುದು. ಇಂಥ ದುಃಖಕರ ಮಾರ್ಗಕ್ರಮದಿಂದ ಯಾವುದು ನಮ್ಮನ್ನು ದೂರವಿರಿಸಬಲ್ಲದು?

5 ಅದೇ ವಚನಭಾಗದಲ್ಲಿ ಯಾಕೋಬನು ದೇವರ ವಾಕ್ಯದಲ್ಲಿರುವ ಸತ್ಯವನ್ನು ಒಂದು ಕನ್ನಡಿಗೆ ಹೋಲಿಸುತ್ತಾನೆ. ದೇವರ ಪರಿಪೂರ್ಣ ನಿಯಮದೊಳಕ್ಕೆ ಇಣಿಕಿ ನೋಡಿ ಅದಕ್ಕನುಸಾರ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತೆ ಅವನು ಸಲಹೆ ನೀಡುತ್ತಾನೆ. (ಯಾಕೋಬ 1:23-25 ಓದಿ.) ನಮಗೆ ನಾವೇ ಪ್ರಾಮಾಣಿಕರಾಗಿರಲು ಮತ್ತು ಪ್ರಗತಿಯನ್ನು ಮಾಡಲು ಏನು ಮಾಡುವ ಅಗತ್ಯವಿದೆ ಎಂಬುದನ್ನು ಗ್ರಹಿಸಲು ಬೈಬಲು ನಮಗೆ ಸಹಾಯಮಾಡಬಲ್ಲದು. (ಪ್ರಲಾಪಗಳು 3:40; ಹಗ್ಗಾಯ 1:5) ನಾವು ಯೆಹೋವನಿಗೆ ಪ್ರಾರ್ಥನೆಯನ್ನೂ ಮಾಡಿ ಆತನು ನಮ್ಮನ್ನು ಪರೀಕ್ಷಿಸುವಂತೆ, ನಮ್ಮಲ್ಲಿರುವ ಯಾವುದೇ ಗಂಭೀರವಾದ ಕುಂದುಕೊರತೆಗಳನ್ನು ಗುರುತಿಸಲು ಮತ್ತು ಅದನ್ನು ಸರಿಪಡಿಸಿಕೊಳ್ಳಲು ಸಹಾಯಮಾಡುವಂತೆ ಕೇಳಿಕೊಳ್ಳಬಹುದು. (ಕೀರ್ತನೆ 139:23, 24) ಅಪ್ರಾಮಾಣಿಕತೆಯು ಗುಪ್ತವಾದ ಒಂದು ಬಲಹೀನತೆಯಾಗಿದೆ ಮತ್ತು ಅದರ ವಿಷಯದಲ್ಲಿ ನಮ್ಮ ಸ್ವರ್ಗೀಯ ತಂದೆಗಿರುವ ದೃಷ್ಟಿಕೋನವೇ ನಮಗೂ ಇರಬೇಕು. “ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು” ಎಂದು ಜ್ಞಾನೋಕ್ತಿ 3:32 ತಿಳಿಸುತ್ತದೆ. ಯೆಹೋವನಿಗೆ ಹೇಗನಿಸುತ್ತದೋ ಹಾಗೇ ನಮಗೂ ಅನಿಸಲು ಮತ್ತು ಆತನು ನಮ್ಮನ್ನು ವೀಕ್ಷಿಸುವ ರೀತಿಯಲ್ಲೇ ನಾವು ನಮ್ಮನ್ನು ವೀಕ್ಷಿಸಿಕೊಳ್ಳಲು ಆತನು ನಮಗೆ ಸಹಾಯಮಾಡಬಲ್ಲನು. ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ’ ಎಂದು ಪೌಲನು ಹೇಳಿದನು ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಈಗ ನಾವು ಪರಿಪೂರ್ಣರಾಗಿರಲು ಸಾಧ್ಯವಿಲ್ಲ, ಆದರೆ ನಾವು ಪ್ರಾಮಾಣಿಕರಾಗಿರಲು ಯಥಾರ್ಥವಾಗಿ ಬಯಸುತ್ತೇವೆ ಮತ್ತು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತೇವೆ.

ಕುಟುಂಬದಲ್ಲಿ ಪ್ರಾಮಾಣಿಕತೆ

ಪ್ರಾಮಾಣಿಕರಾಗಿರುವುದು ನಾವು ಮರೆಮಾಚುವಂತೆ ಪ್ರಲೋಭಿಸಲ್ಪಡಬಹುದಾದ ನಡತೆಯಿಂದ ದೂರವಿರಲು ನಮಗೆ ಸಹಾಯಮಾಡುತ್ತದೆ

6. ವಿವಾಹ ಸಂಗಾತಿಗಳು ಏಕೆ ಪರಸ್ಪರ ಪ್ರಾಮಾಣಿಕರಾಗಿರಬೇಕು ಮತ್ತು ಹೀಗೆ ಮಾಡುವ ಮೂಲಕ ಅವರು ಯಾವ ಅಪಾಯಗಳಿಂದ ದೂರವಿರುತ್ತಾರೆ?

6 ಪ್ರಾಮಾಣಿಕತೆಯು ಕ್ರೈಸ್ತ ಕುಟುಂಬದ ಒಂದು ಗುರುತು ಚಿಹ್ನೆಯಾಗಿರಬೇಕಾಗಿದೆ. ಆದುದರಿಂದ ಗಂಡ ಹೆಂಡತಿಯರು ಮನಸ್ಸು ಬಿಚ್ಚಿ ಮಾತಾಡಬೇಕು ಮತ್ತು ಪರಸ್ಪರ ಪ್ರಾಮಾಣಿಕರಾಗಿರಬೇಕು. ವಿವಾಹ ಸಂಗಾತಿಯಲ್ಲದ ಒಬ್ಬ ವ್ಯಕ್ತಿಯೊಂದಿಗೆ ಚೆಲ್ಲಾಟವಾಡುವುದು, ಇಂಟರ್‌ನೆಟ್‌ನ ಮೂಲಕ ಗೋಪ್ಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಅಥವಾ ಯಾವುದೇ ರೂಪದಲ್ಲಿ ಅಶ್ಲೀಲ ಸಾಹಿತ್ಯವನ್ನು ಉಪಯೋಗಿಸುವುದರಂಥ ಹಾನಿಕರ, ಅಶುದ್ಧ ದುರಭ್ಯಾಸಗಳಿಗೆ ಕ್ರೈಸ್ತ ವಿವಾಹದಲ್ಲಿ ಯಾವುದೇ ಆಸ್ಪದವಿಲ್ಲ. ಕೆಲವು ವಿವಾಹಿತ ಕ್ರೈಸ್ತರು ಇಂಥ ಕೆಟ್ಟ ನಡತೆಯಲ್ಲಿ ಒಳಗೂಡಿದ್ದಾರೆ ಮತ್ತು ತಮ್ಮ ಮುಗ್ಧ ಸಂಗಾತಿಯಿಂದ ಅದನ್ನು ಮರೆಮಾಚಿದ್ದಾರೆ. ಹೀಗೆ ಮಾಡುವುದು ಅಪ್ರಾಮಾಣಿಕತೆಯಾಗಿದೆ. ನಂಬಿಗಸ್ತನಾಗಿದ್ದ ರಾಜ ದಾವೀದನ ಮಾತುಗಳನ್ನು ಗಮನಿಸಿರಿ. “ನಾನು ಕುಟಿಲಸ್ವಭಾವಿಗಳ ಸಹವಾಸಮಾಡುವವನಲ್ಲ; ಕಪಟಿಗಳನ್ನು ಸೇರುವವನಲ್ಲ” ಎಂದು ಅವನು ಹೇಳಿದನು. (ಕೀರ್ತನೆ 26:4) ನೀವು ವಿವಾಹಿತರಾಗಿರುವಲ್ಲಿ ನಿಮ್ಮ ನಿಜ ವ್ಯಕ್ತಿತ್ವವನ್ನು ನಿಮ್ಮ ಸಂಗಾತಿಯಿಂದ ಮರೆಮಾಚುವಂತೆ ಪ್ರಲೋಭಿಸಬಹುದಾದ ಯಾವುದೇ ನಡತೆಯಲ್ಲಿ ಎಂದಿಗೂ ಒಳಗೂಡದಿರಿ!

7, 8. ಪ್ರಾಮಾಣಿಕತೆಯ ಮೌಲ್ಯವನ್ನು ಕಲಿಯಲು ಮಕ್ಕಳಿಗೆ ಯಾವ ಬೈಬಲ್‌ ಉದಾಹರಣೆಗಳು ಸಹಾಯಮಾಡಬಲ್ಲವು?

7 ತಮ್ಮ ಮಕ್ಕಳಿಗೆ ಪ್ರಾಮಾಣಿಕತೆಯ ಮೌಲ್ಯವನ್ನು ಕಲಿಸಿಕೊಡಲು ಹೆತ್ತವರು ಬೈಬಲ್‌ ಉದಾಹರಣೆಗಳನ್ನು ಉಪಯೋಗಿಸುವುದು ವಿವೇಕಯುತವಾಗಿದೆ. ಅಪ್ರಾಮಾಣಿಕತೆಯ ಕೆಲವು ಉದಾಹರಣೆಗಳನ್ನು ಸೂಚಿಸಬೇಕಾದರೆ, ಕಳ್ಳತನಮಾಡಿ ಅದನ್ನು ಮರೆಮಾಚಲು ಪ್ರಯತ್ನಿಸಿದ ಆಕಾನ, ಹಣಕಾಸಿನ ಲಾಭಕ್ಕಾಗಿ ಸುಳ್ಳನ್ನು ಹೇಳಿದ ಗೇಹಜಿ ಮತ್ತು ಕಳವುಮಾಡಿದ ಹಾಗೂ ಯೇಸುವಿಗೆ ಹಾನಿಮಾಡಲು ದ್ವೇಷಾಸೂಯೆಯಿಂದ ಸುಳ್ಳುಹೇಳಿದ ಯೂದನ ವೃತ್ತಾಂತಗಳಿವೆ.—ಯೆಹೋಶುವ 6:17-19; 7:11-25; 2 ಅರಸುಗಳು 5:14-16, 20-27; ಮತ್ತಾಯ 26:14, 15; ಯೋಹಾನ 12:6.

8 ಪ್ರಾಮಾಣಿಕತೆಯ ಕೆಲವು ಉದಾಹರಣೆಗಳನ್ನು ಹೇಳಬೇಕಾದರೆ, ತನ್ನ ಗಂಡುಮಕ್ಕಳ ಚೀಲಗಳಲ್ಲಿ ಯಾರೋ ತಿಳಿಯದೆ ಇಟ್ಟಿರಬಹುದು ಎಂದು ತಾನು ಭಾವಿಸಿದ ಹಣವನ್ನು ಹಿಂದಿರುಗಿಸುವಂತೆ ತನ್ನ ಗಂಡುಮಕ್ಕಳನ್ನು ಪ್ರಚೋದಿಸಿದ ಯಾಕೋಬನ ವೃತ್ತಾಂತವಿದೆ; ಯೆಪ್ತಾಹನ ಮತ್ತು ಮಹಾ ವೈಯಕ್ತಿಕ ತ್ಯಾಗವನ್ನು ಮಾಡಿ ತನ್ನ ತಂದೆಯ ಹರಕೆಯನ್ನು ಪೂರೈಸಿದ ಅವನ ಮಗಳ ವೃತ್ತಾಂತವಿದೆ; ಮತ್ತು ಪ್ರವಾದನೆಯನ್ನು ನೆರವೇರಿಸುವ ಸಲುವಾಗಿ ಹಾಗೂ ತನ್ನ ಸ್ನೇಹಿತರನ್ನು ಸಂರಕ್ಷಿಸಲಿಕ್ಕಾಗಿ ಒಂದು ಉಗ್ರವಾದ ದೊಂಬಿಯ ಮುಂದೆ ತನ್ನನ್ನು ಧೈರ್ಯದಿಂದ ಗುರುತಿಸಿಕೊಂಡ ಯೇಸುವಿನ ವೃತ್ತಾಂತವಿದೆ. (ಆದಿಕಾಂಡ 43:12; ನ್ಯಾಯಸ್ಥಾಪಕರು 11:30-40; ಯೋಹಾನ 18:3-11) ಈ ಕೆಲವು ಉದಾಹರಣೆಗಳು ದೇವರ ವಾಕ್ಯದಲ್ಲಿ ಎಂಥ ಅಮೂಲ್ಯವಾದ ಮಾಹಿತಿಯು ಅಡಕವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೆತ್ತವರಿಗೆ ಸಹಾಯಮಾಡುತ್ತವೆ; ಇವು ಪ್ರಾಮಾಣಿಕತೆಯನ್ನು ಪ್ರೀತಿಸಿ ಅದನ್ನು ಅಮೂಲ್ಯವಾಗಿ ಪರಿಗಣಿಸುವಂತೆ ತಮ್ಮ ಮಕ್ಕಳಿಗೆ ಕಲಿಸಲು ಅವರಿಗೆ ಸಹಾಯಮಾಡಬಲ್ಲವು.

9. ಹೆತ್ತವರು ತಮ್ಮ ಮಕ್ಕಳಿಗೆ ಪ್ರಾಮಾಣಿಕತೆಯ ವಿಷಯದಲ್ಲಿ ಒಳ್ಳೇ ಮಾದರಿಯನ್ನು ಇಡಲು ಬಯಸುವುದಾದರೆ ಅವರು ಯಾವುದರಿಂದ ದೂರವಿರಬೇಕು ಮತ್ತು ಇಂಥ ಮಾದರಿಯು ಏಕೆ ಪ್ರಮುಖವಾಗಿದೆ?

9 ಇಂಥ ಕಲಿಸುವಿಕೆಯು ಹೆತ್ತವರ ಮೇಲೆ ಪ್ರಮುಖವಾದ ಒಂದು ಜವಾಬ್ದಾರಿಯನ್ನು ಹೊರಿಸುತ್ತದೆ. “ಇತರರಿಗೆ ಬೋಧಿಸುವ ನೀನು ನಿನಗೇ ಬೋಧಿಸಿಕೊಳ್ಳದೆ ಇದ್ದೀಯೊ? ‘ಕದಿಯಬಾರದು’ ಎಂದು ಸಾರುವ ನೀನು ಕದಿಯುತ್ತೀಯೊ?” ಎಂದು ಅಪೊಸ್ತಲ ಪೌಲನು ಕೇಳಿದನು. (ರೋಮನ್ನರಿಗೆ 2:21) ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಪ್ರಾಮಾಣಿಕತೆಯ ಕುರಿತು ಕಲಿಸುತ್ತಾರೆ, ಆದರೆ ಅದೇ ಸಮಯದಲ್ಲಿ ತಾವು ಅಪ್ರಾಮಾಣಿಕರಾಗಿ ವರ್ತಿಸುವ ಮೂಲಕ ಮಕ್ಕಳನ್ನು ಗಲಿಬಿಲಿಗೊಳಿಸುತ್ತಾರೆ. ಅವರು ಸಣ್ಣಪುಟ್ಟ ವಸ್ತುಗಳನ್ನು ಕದಿಯುವುದನ್ನು ಮತ್ತು ಅಸತ್ಯದ ಮಾತುಗಳನ್ನಾಡುವುದನ್ನು ಸಮರ್ಥಿಸುತ್ತಾ “ಇದನ್ನು ತೆಗೆದುಕೊಂಡು ಹೋದರೆ ತಪ್ಪೇನಿಲ್ಲ” ಅಥವಾ “ಇದೊಂದು ಜುಜುಬಿ ಸುಳ್ಳು” ಎಂದು ತರ್ಕಿಸಬಹುದು. ವಾಸ್ತವದಲ್ಲಿ ಕದ್ದ ವಸ್ತುವಿನ ಬೆಲೆ ಏನೇ ಆಗಿದ್ದರೂ ಕಳ್ಳತನ ಕಳ್ಳತನವೇ; ಯಾವ ವಿಷಯದಲ್ಲೇ ಸುಳ್ಳು ಹೇಳಿರಲಿ ಅಥವಾ ಎಷ್ಟೇ ಚಿಕ್ಕ ಅಥವಾ ದೊಡ್ಡ ಸುಳ್ಳಾಗಿರಲಿ ಸುಳ್ಳು ಸುಳ್ಳೇ. * (ಲೂಕ 16:10 ಓದಿ.) ಮಕ್ಕಳು ಕಪಟತನವನ್ನು ಬೇಗ ಗುರುತಿಸುತ್ತಾರೆ ಮತ್ತು ಇದು ಅವರ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಬಹುದು. (ಎಫೆಸ 6:4) ಆದರೆ ಅವರು ತಮ್ಮ ಹೆತ್ತವರ ಮಾದರಿಯಿಂದ ಪ್ರಾಮಾಣಿಕತೆಯನ್ನು ಕಲಿಯುವಾಗ ಈ ಅಪ್ರಾಮಾಣಿಕ ಲೋಕದಲ್ಲಿ ಯೆಹೋವನನ್ನು ಮಹಿಮೆಪಡಿಸುವ ವ್ಯಕ್ತಿಗಳಾಗಿ ಬೆಳೆಯುವ ಸಾಧ್ಯತೆ ಇದೆ.—ಜ್ಞಾನೋಕ್ತಿ 22:6.

ಸಭೆಯಲ್ಲಿ ಪ್ರಾಮಾಣಿಕತೆ

10. ಜೊತೆ ವಿಶ್ವಾಸಿಗಳ ಮಧ್ಯೆ ಪ್ರಾಮಾಣಿಕವಾದ ಮಾತುಕತೆಯ ವಿಷಯದಲ್ಲಿ ನಾವು ಯಾವ ಎಚ್ಚರಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು?

10 ಜೊತೆ ಕ್ರೈಸ್ತರೊಂದಿಗೆ ಸಹವಾಸಮಾಡುವುದು ಪ್ರಾಮಾಣಿಕತೆಯನ್ನು ಬೆಳೆಸಿಕೊಳ್ಳಲು ನಮಗೆ ಅನೇಕ ಸಂದರ್ಭಗಳನ್ನು ಒದಗಿಸುತ್ತದೆ. ನಾವು ಅಧ್ಯಾಯ 12⁠ರಲ್ಲಿ ಕಲಿತಂತೆ, ನಮ್ಮ ಮಾತಿನ ಉಡುಗೊರೆಯನ್ನು ನಾವು ಹೇಗೆ ಉಪಯೋಗಿಸುತ್ತೇವೆ, ವಿಶೇಷವಾಗಿ ನಮ್ಮ ಆಧ್ಯಾತ್ಮಿಕ ಸಹೋದರ ಸಹೋದರಿಯರ ಮಧ್ಯೆ ಹೇಗೆ ಉಪಯೋಗಿಸುತ್ತೇವೆ ಎಂಬ ವಿಷಯದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ. ಸಾಮಾನ್ಯವಾದ ಸಂಭಾಷಣೆಯು ತುಂಬ ಸುಲಭದಲ್ಲಿ ಹಾನಿಕರವಾದ ಹರಟೆಮಾತಾಗಿ, ಮಿಥ್ಯಾಪವಾದವಾಗಿ ಸಹ ಬದಲಾಗಬಹುದು! ಅನಿಶ್ಚಿತವಾದ ಮೂಲದಿಂದ ಬಂದ ಒಂದು ಕಥೆಯನ್ನು ನಾವು ಇನ್ನೊಬ್ಬರಿಗೆ ಹೇಳುವಲ್ಲಿ ಒಂದು ಸುಳ್ಳನ್ನು ಹಬ್ಬಿಸಲು ನಾವು ಸಹಾಯಮಾಡುತ್ತಿರಬಹುದು. ಆದುದರಿಂದ ನಮ್ಮ ನಾಲಿಗೆಗೆ ಕಡಿವಾಣ ಹಾಕುವುದು ಹೆಚ್ಚು ಉತ್ತಮ. (ಜ್ಞಾನೋಕ್ತಿ 10:19) ಇನ್ನೊಂದು ಬದಿಯಲ್ಲಿ, ಒಂದು ವಿಷಯ ಸತ್ಯ ಎಂದು ನಮಗೆ ತಿಳಿದಿರಬಹುದು, ಆದರೆ ಅದನ್ನು ಹೇಳಲೇಬೇಕು ಎಂದೇನಿಲ್ಲ. ಉದಾಹರಣೆಗೆ, ಅದು ನಮಗೆ ಸಂಬಂಧಪಡದ ವಿಚಾರವಾಗಿರಬಹುದು ಅಥವಾ ಅದರ ಕುರಿತು ಮಾತಾಡುವುದು ನಿರ್ದಯವಾಗಿರಬಹುದು. (1 ಥೆಸಲೊನೀಕ 4:11) ಕೆಲವರು ಒರಟುತನವನ್ನು ಪ್ರಾಮಾಣಿಕತೆ ಎಂದು ಕರೆಯುವ ಮೂಲಕ ಅದನ್ನು ಸಮರ್ಥಿಸಲು ಪ್ರಯತ್ನಿಸುತ್ತಾರೆ, ಆದರೆ ನಮ್ಮ ಮಾತುಗಳು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ದಯಾಭರಿತವಾಗಿಯೂ ಇರತಕ್ಕದ್ದು.—ಕೊಲೊಸ್ಸೆ 4:6 ಓದಿ.

11, 12. (ಎ) ಗಂಭೀರವಾದ ತಪ್ಪಿನಲ್ಲಿ ಒಳಗೂಡುವ ಕೆಲವರು ಯಾವ ವಿಧಗಳಲ್ಲಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಾರೆ? (ಬಿ) ಗಂಭೀರವಾದ ಪಾಪಗಳ ವಿಷಯದಲ್ಲಿ ಸೈತಾನನು ಉತ್ತೇಜಿಸುವಂಥ ಕೆಲವು ಸುಳ್ಳುಗಳು ಯಾವುವು ಮತ್ತು ನಾವು ಅವುಗಳನ್ನು ಹೇಗೆ ಎದುರಿಸಬಲ್ಲೆವು? (ಸಿ) ಯೆಹೋವನ ಸಂಘಟನೆಯೊಂದಿಗೆ ನಾವು ಪ್ರಾಮಾಣಿಕರಾಗಿದ್ದೇವೆ ಎಂಬುದನ್ನು ಹೇಗೆ ತೋರಿಸಬಲ್ಲೆವು?

11 ನಾವು ಮುಂದಾಳುತ್ವ ವಹಿಸುತ್ತಿರುವವರೊಂದಿಗೆ ಪ್ರಾಮಾಣಿಕರಾಗಿರುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಗಂಭೀರವಾದ ತಪ್ಪಿನಲ್ಲಿ ಒಳಗೂಡುವ ಕೆಲವರು ತಮ್ಮ ಪಾಪವನ್ನು ಮರೆಮಾಚಲು ಪ್ರಯತ್ನಿಸುವ ಮೂಲಕ ಮತ್ತು ಅದರ ಕುರಿತು ಪ್ರಶ್ನಿಸಲ್ಪಟ್ಟಾಗ ಸಭಾ ಹಿರಿಯರಿಗೆ ಸುಳ್ಳು ಹೇಳುವ ಮೂಲಕ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಾರೆ. ಇಂಥವರು ಇಬ್ಬಗೆಯ ಜೀವನವನ್ನೂ ನಡೆಸಲು ಆರಂಭಿಸುತ್ತಾರೆ; ಯೆಹೋವನನ್ನು ಸೇವಿಸುವ ಸೋಗನ್ನು ಹಾಕಿಕೊಂಡಿರುವಾಗಲೇ ಗಂಭೀರವಾದ ಪಾಪವನ್ನೂ ಮಾಡುತ್ತಾ ಮುಂದುವರಿಯುತ್ತಾರೆ. ಕಾರ್ಯತಃ, ಇಂಥ ಮಾರ್ಗಕ್ರಮವು ಒಬ್ಬನ ಇಡೀ ಜೀವನವನ್ನು ಸುಳ್ಳಾಗಿ ಮಾಡಿಬಿಡುತ್ತದೆ. (ಕೀರ್ತನೆ 12:2) ಇತರರು ಹಿರಿಯರಿಗೆ ಸ್ವಲ್ಪ ಮಾತ್ರ ಸತ್ಯವನ್ನು ಹೇಳುತ್ತಾರೆ, ಆದರೆ ಅಗತ್ಯವಿರುವ ವಾಸ್ತವಾಂಶಗಳನ್ನು ಮರೆಮಾಚುತ್ತಾರೆ. (ಅಪೊಸ್ತಲರ ಕಾರ್ಯಗಳು 5:1-11) ಸೈತಾನನು ಉತ್ತೇಜಿಸುವಂಥ ಸುಳ್ಳುಗಳಲ್ಲಿ ನಂಬಿಕೆಯಿಡುವುದರಿಂದ ಅನೇಕವೇಳೆ ಇಂಥ ಅಪ್ರಾಮಾಣಿಕತೆಯು ಹುಟ್ಟುತ್ತದೆ.—“ ಗಂಭೀರವಾದ ಪಾಪಗಳ ವಿಷಯದಲ್ಲಿ ಸೈತಾನನ ಸುಳ್ಳುಗಳು” ಎಂಬ ಚೌಕವನ್ನು ನೋಡಿ.

12 ನಾವು ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉತ್ತರಗಳನ್ನು ಕೊಡುವಾಗಲೂ ಯೆಹೋವನ ಸಂಘಟನೆಗೆ ಪ್ರಾಮಾಣಿಕರಾಗಿರುವುದು ಪ್ರಾಮುಖ್ಯ. ಉದಾಹರಣೆಗೆ, ನಮ್ಮ ಕ್ಷೇತ್ರ ಸೇವಾ ಚಟುವಟಿಕೆಯನ್ನು ವರದಿಸುವಾಗ ನಾವು ವಾಸ್ತವಾಂಶಗಳನ್ನು ತಪ್ಪಾಗಿ ನಿರೂಪಿಸುವುದರ ಬಗ್ಗೆ ಜಾಗ್ರತೆ ವಹಿಸುತ್ತೇವೆ. ಅದೇ ರೀತಿಯಲ್ಲಿ ಯಾವುದೇ ಸೇವಾ ಸುಯೋಗಕ್ಕಾಗಿ ಅರ್ಜಿಯನ್ನು ಭರ್ತಿಮಾಡುವಾಗಲೂ ನಮ್ಮ ಆರೋಗ್ಯದ ನಿಜ ಸ್ಥಿತಿಯನ್ನು ಅಥವಾ ನಮ್ಮ ದಾಖಲೆಗೆ ಸಂಬಂಧಪಟ್ಟ ಇನ್ನಾವುದೇ ಅಂಶವನ್ನು ಎಂದಿಗೂ ತಪ್ಪಾಗಿ ನಿರೂಪಿಸಬಾರದು.—ಜ್ಞಾನೋಕ್ತಿ 6:16-19 ಓದಿ.

13. ಒಬ್ಬ ಜೊತೆ ವಿಶ್ವಾಸಿಯೊಂದಿಗೆ ನಾವು ವ್ಯಾಪಾರದ ಸಂಬಂಧವನ್ನು ಹೊಂದಿರುವಲ್ಲಿ ಹೇಗೆ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬಲ್ಲೆವು?

13 ಜೊತೆ ವಿಶ್ವಾಸಿಗಳೊಂದಿಗಿನ ನಮ್ಮ ಪ್ರಾಮಾಣಿಕತೆಯು ವ್ಯಾಪಾರಕ್ಕೆ ಸಂಬಂಧಪಟ್ಟ ವಿಷಯಗಳಿಗೂ ಅನ್ವಯಿಸುತ್ತದೆ. ಕೆಲವೊಮ್ಮೆ ಕ್ರೈಸ್ತ ಸಹೋದರ ಸಹೋದರಿಯರು ಇತರ ಸಹೋದರರೊಂದಿಗೆ ಅಥವಾ ಸಹೋದರಿಯರೊಂದಿಗೆ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಬಹುದು. ಅವರು ರಾಜ್ಯ ಸಭಾಗೃಹದಲ್ಲಿ ಅಥವಾ ಶುಶ್ರೂಷೆಯಲ್ಲಿ ಒಂದುಗೂಡಿ ನಡೆಸುವ ಆರಾಧನೆಯಿಂದ ಇಂಥ ವಿಚಾರಗಳನ್ನು ಪ್ರತ್ಯೇಕವಾಗಿಡುವ ವಿಷಯದಲ್ಲಿ ಜಾಗ್ರತೆ ವಹಿಸಬೇಕು. ವ್ಯಾಪಾರ ಸಂಬಂಧವು ಒಬ್ಬ ಧಣಿ ಮತ್ತು ನೌಕರನ ಮಧ್ಯೆ ಇರುವಂಥ ಸಂಬಂಧವಾಗಿರಬಹುದು. ನಾವು ಸಹೋದರರನ್ನು ಅಥವಾ ಸಹೋದರಿಯರನ್ನು ಕೆಲಸಕ್ಕೆ ಇಟ್ಟುಕೊಳ್ಳುವಲ್ಲಿ, ಅವರಿಗೆ ಸಮಯಕ್ಕೆ ಸರಿಯಾಗಿ ಸಂಬಳವನ್ನು ಕೊಡುವ ಮೂಲಕ, ನಿಗದಿಪಡಿಸಿದಷ್ಟು ಹಣವನ್ನು ಕೊಡುವ ಮೂಲಕ ಮತ್ತು ಏರ್ಪಡಿಸಲ್ಪಟ್ಟಿರುವ ಅಥವಾ ಕಾನೂನಿನಿಂದ ಅಗತ್ಯಪಡಿಸಲ್ಪಟ್ಟಿರುವ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರೊಂದಿಗೆ ಪ್ರಾಮಾಣಿಕರಾಗಿ ವರ್ತಿಸುವ ವಿಷಯದಲ್ಲಿ ಜಾಗ್ರತೆ ವಹಿಸುತ್ತೇವೆ. (1 ತಿಮೊಥೆಯ 5:18; ಯಾಕೋಬ 5:1-4) ಅದೇ ರೀತಿಯಲ್ಲಿ, ಒಬ್ಬ ಸಹೋದರನೋ ಸಹೋದರಿಯೋ ನಮ್ಮನ್ನು ಕೆಲಸಕ್ಕೆ ಇಟ್ಟಿರುವಲ್ಲಿ, ಪೂರ್ಣ ಮೊತ್ತದ ಕೆಲಸವನ್ನು ಕೊಟ್ಟು ಸಂಬಳವನ್ನು ಪಡೆಯುತ್ತೇವೆ. (2 ಥೆಸಲೊನೀಕ 3:10) ನಮ್ಮ ಆಧ್ಯಾತ್ಮಿಕ ಸಂಬಂಧದ ನಿಮಿತ್ತ ನಮಗೆ ಬೇರೆಯವರಿಗಿಂತ ಆದ್ಯತೆಯ ಪರಿಗಣನೆ ಸಿಗಬೇಕೆಂದು ನಾವು ಬಯಸುವುದಿಲ್ಲ, ಅಂದರೆ ಇತರ ನೌಕರರಿಗೆ ಸಿಗದಂಥ ರಜೆ, ಸೌಲಭ್ಯಗಳು ಅಥವಾ ಇತರ ಸವಲತ್ತುಗಳನ್ನು ನಮಗೆ ಒದಗಿಸುವ ಹಂಗು ಧಣಿಗಿದೆ ಎಂದು ನಾವು ಭಾವಿಸುವುದಿಲ್ಲ.—ಎಫೆಸ 6:5-8.

14. ಕ್ರೈಸ್ತರು ಜಂಟಿ ಉದ್ಯಮದಲ್ಲಿ ಒಳಗೂಡುವುದಾದರೆ ಅವರು ವಿವೇಕದಿಂದ ಯಾವ ಮುಂಜಾಗ್ರತೆಯನ್ನು ತೆಗೆದುಕೊಳ್ಳುತ್ತಾರೆ ಮತ್ತು ಏಕೆ?

14 ನಮ್ಮ ವ್ಯಾಪಾರದಲ್ಲಿ ಪ್ರಾಯಶಃ ಬಂಡವಾಳ ಹೂಡಿಕೆ ಅಥವಾ ಸಾಲದಂಥ ಜಂಟಿ ಉದ್ಯಮ ಒಳಗೂಡಿರುವುದಾದರೆ ಆಗೇನು? ಬೈಬಲು ಪ್ರಮುಖವಾದ ಮತ್ತು ಪ್ರಾಯೋಗಿಕವಾದ ಒಂದು ಮೂಲತತ್ತ್ವವನ್ನು ಕೊಡುತ್ತದೆ. ಅದೇನೆಂದರೆ, ಎಲ್ಲವನ್ನೂ ಲಿಖಿತರೂಪದಲ್ಲಿ ದಾಖಲಿಸಿ! ಉದಾಹರಣೆಗೆ, ಯೆರೆಮೀಯನು ಒಂದು ಜಮೀನನ್ನು ಕೊಂಡುಕೊಂಡಾಗ ಅವನು ಕ್ರಯಪತ್ರದ ನಕಲುಪ್ರತಿಯನ್ನು ಮಾಡಿಸಿದನು, ಅದಕ್ಕೆ ಯೋಗ್ಯವಾದ ಸಾಕ್ಷಿಗಳಿಂದ ರುಜುಹಾಕಿಸಿದನು ಮತ್ತು ಭವಿಷ್ಯತ್ತಿನಲ್ಲಿ ಉಪಯೋಗಿಸಲಿಕ್ಕಾಗಿ ಅದನ್ನು ಸುರಕ್ಷಿತವಾಗಿ ಇರಿಸಿದನು. (ಯೆರೆಮೀಯ 32:9-12; ಆದಿಕಾಂಡ 23:16-20 ಸಹ ನೋಡಿ.) ಜೊತೆ ವಿಶ್ವಾಸಿಗಳೊಂದಿಗೆ ವ್ಯಾಪಾರ ವ್ಯವಹಾರದಲ್ಲಿ ಒಳಗೂಡುವಾಗ ಎಲ್ಲ ವಿವರಗಳನ್ನು ಜಾಗರೂಕತೆಯಿಂದ ಸಿದ್ಧಪಡಿಸಿದ, ಸಹಿಹಾಕಿದ ಮತ್ತು ಸಾಕ್ಷಿಗಳ ಸಹಿಯನ್ನು ಹೊಂದಿರುವ ಕಾಗದಪತ್ರದಲ್ಲಿ ದಾಖಲಿಸುವುದು ಅವರ ಮೇಲೆ ಅಪನಂಬಿಕೆಯನ್ನು ಸೂಚಿಸುವುದಿಲ್ಲ. ಬದಲಿಗೆ ಅಪಾರ್ಥಗಳು, ಆಶಾಭಂಗಗಳು ಮತ್ತು ಒಡಕನ್ನು ಉಂಟುಮಾಡುವ ಭಿನ್ನಾಭಿಪ್ರಾಯಗಳು ಸಹ ಏಳುವುದನ್ನು ತಡೆಗಟ್ಟಲು ಇದು ಸಹಾಯಮಾಡುತ್ತದೆ. ಒಟ್ಟಿಗೆ ವ್ಯಾಪಾರ ವ್ಯವಹಾರದಲ್ಲಿ ಒಳಗೂಡುವ ಕ್ರೈಸ್ತರು, ಯಾವುದೇ ವ್ಯಾಪಾರವು ಸಭೆಯ ಐಕ್ಯಭಾವ ಮತ್ತು ಶಾಂತಿಯನ್ನು ಅಪಾಯಕ್ಕೊಡ್ಡುವಲ್ಲಿ ಅದು ನಮಗೆ ಯೋಗ್ಯವಾದದ್ದಲ್ಲ ಎಂಬುದನ್ನು ಮನಸ್ಸಿನಲ್ಲಿಡಬೇಕು. *1 ಕೊರಿಂಥ 6:1-8.

ಐಹಿಕ ಲೋಕದಲ್ಲಿ ಪ್ರಾಮಾಣಿಕತೆ

15. ಅಪ್ರಾಮಾಣಿಕ ವ್ಯಾಪಾರದ ರೂಢಿಗಳ ಬಗ್ಗೆ ಯೆಹೋವನಿಗೆ ಹೇಗನಿಸುತ್ತದೆ ಮತ್ತು ಇಂಥ ಜನಪ್ರಿಯ ಪ್ರವೃತ್ತಿಗಳಿಗೆ ಕ್ರೈಸ್ತರು ಹೇಗೆ ಪ್ರತಿಕ್ರಿಯಿಸುತ್ತಾರೆ?

15 ಒಬ್ಬ ಕ್ರೈಸ್ತನ ಪ್ರಾಮಾಣಿಕತೆಯು ಸಭೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ’ ಎಂದು ಪೌಲನು ಹೇಳಿದನು. (ಇಬ್ರಿಯ 13:18) ಐಹಿಕ ವ್ಯಾಪಾರ ವ್ಯವಹಾರದ ವಿಷಯದಲ್ಲಿಯೂ ನಮ್ಮ ಸೃಷ್ಟಿಕರ್ತನು ಪ್ರಾಮಾಣಿಕತೆಗೆ ಆದ್ಯತೆ ನೀಡುತ್ತಾನೆ. ಜ್ಞಾನೋಕ್ತಿಗಳು ಪುಸ್ತಕ ಒಂದರಲ್ಲಿಯೇ ಮೋಸದ ತ್ರಾಸಿನ ಬಗ್ಗೆ ಹಲವಾರು ಬಾರಿ ಉಲ್ಲೇಖಿಸಲಾಗಿದೆ. (ಜ್ಞಾನೋಕ್ತಿ 11:1; 20:10, 23) ಪುರಾತನ ಕಾಲಗಳಲ್ಲಿ, ವ್ಯಾಪಾರ ವ್ಯವಹಾರಗಳಲ್ಲಿ ಖರೀದಿಸಲ್ಪಟ್ಟ ಸರಕುಗಳನ್ನು ಮತ್ತು ಅವುಗಳನ್ನು ಖರೀದಿಸಲು ಉಪಯೋಗಿಸುವ ಹಣವನ್ನು ತೂಕಮಾಡಲು ಸಾಮಾನ್ಯವಾಗಿ ತ್ರಾಸುಗಳನ್ನು ಹಾಗೂ ತೂಕದ ಕಲ್ಲುಗಳನ್ನು ಉಪಯೋಗಿಸಲಾಗುತ್ತಿತ್ತು. ಅಪ್ರಾಮಾಣಿಕ ವ್ಯಾಪಾರಿಗಳು ತಮ್ಮ ಗಿರಾಕಿಗಳನ್ನು ವಂಚಿಸಿ ಮೋಸಮಾಡಲಿಕ್ಕಾಗಿ ಎರಡು ಬಗೆಯ ತೂಕದ ಕಲ್ಲುಗಳನ್ನು ಮತ್ತು ಲೋಪವುಳ್ಳ ತ್ರಾಸನ್ನು ಉಪಯೋಗಿಸುತ್ತಿದ್ದರು. * ಯೆಹೋವನು ಇಂಥ ರೂಢಿಗಳನ್ನು ಹಗೆಮಾಡುತ್ತಾನೆ! ಆತನ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಾವು ಎಲ್ಲ ರೀತಿಯ ಅಪ್ರಾಮಾಣಿಕ ವ್ಯಾಪಾರದ ರೂಢಿಗಳಿಂದ ಕಟ್ಟುನಿಟ್ಟಾಗಿ ದೂರವಿರುತ್ತೇವೆ.

16, 17. ಅಪ್ರಾಮಾಣಿಕತೆಯ ಯಾವ ರೂಪಗಳು ಇಂದಿನ ಲೋಕದಲ್ಲಿ ಸಾಮಾನ್ಯವಾಗಿವೆ ಮತ್ತು ನಿಜ ಕ್ರೈಸ್ತರು ಯಾವ ದೃಢನಿರ್ಧಾರವನ್ನು ಮಾಡಿದ್ದಾರೆ?

16 ಸೈತಾನನು ಈ ಲೋಕದ ಅಧಿಪತಿಯಾಗಿರುವುದರಿಂದ ಅಪ್ರಾಮಾಣಿಕತೆಯು ನಮ್ಮ ಸುತ್ತಲೂ ಇರುವುದನ್ನು ನೋಡಿ ನಮಗೆ ಆಶ್ಚರ್ಯವಾಗುವುದಿಲ್ಲ. ಅಪ್ರಾಮಾಣಿಕರಾಗಿ ವರ್ತಿಸಲು ನಮ್ಮನ್ನು ಪ್ರಲೋಭಿಸುವಂಥ ಸನ್ನಿವೇಶಗಳನ್ನು ನಾವು ದಿನಾಲೂ ಎದುರಿಸಬಹುದು. ಜನರು ಒಂದು ಕೆಲಸಕ್ಕಾಗಿ ಅರ್ಹತಾ ವಿವರವನ್ನು ಕೊಡುವಾಗ ಯೋಗ್ಯತಾಪತ್ರಗಳನ್ನು ಕಲ್ಪಿಸುವ ಮೂಲಕ ಮತ್ತು ಇಲ್ಲದ ಅನುಭವವನ್ನು ಇದೆ ಎಂದು ಹೇಳುವ ಮೂಲಕ ಸುಳ್ಳಾಡುವುದು ಹಾಗೂ ಉತ್ಪ್ರೇಕ್ಷಿಸುವುದು ಸರ್ವಸಾಮಾನ್ಯವಾಗಿದೆ. ಜನರು ವಲಸೆಗಾರಿಕೆ, ತೆರಿಗೆ, ವಿಮೆ ಮುಂತಾದ ವಿಷಯಗಳಿಗಾಗಿರುವ ಫಾರ್ಮುಗಳನ್ನು ತುಂಬಿಸುವಾಗ ತಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಲಿಕ್ಕಾಗಿ ಸಾಮಾನ್ಯವಾಗಿ ಸುಳ್ಳು ಉತ್ತರಗಳನ್ನು ಕೊಡುತ್ತಾರೆ. ಅನೇಕ ವಿದ್ಯಾರ್ಥಿಗಳು ಪರೀಕ್ಷೆಗಳ ಸಮಯದಲ್ಲಿ ಮೋಸಮಾಡುತ್ತಾರೆ ಅಥವಾ ಶಾಲೆಯ ವ್ಯಾಸಂಗದ ಭಾಗವಾಗಿ ಪ್ರಬಂಧಗಳನ್ನು ಮತ್ತು ವರದಿಗಳನ್ನು ಬರೆಯುವಾಗ ಇಂಟರ್‌ನೆಟ್‌ಗೆ ಹೋಗಿ ಅಲ್ಲಿ ಸಿಗುವಂಥ ಮಾಹಿತಿಯನ್ನು ಕದ್ದುಬಳಸಿ ಬೇರೊಬ್ಬನ ಆಲೋಚನೆಯನ್ನು ತಮ್ಮದೇ ಎಂದು ನಿರೂಪಿಸಬಹುದು. ಜನರು ಭ್ರಷ್ಟ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ತಮಗೆ ಬೇಕಾಗಿರುವುದನ್ನು ಪಡೆದುಕೊಳ್ಳಲಿಕ್ಕಾಗಿ ಅನೇಕವೇಳೆ ಲಂಚವನ್ನು ಕೊಡುತ್ತಾರೆ. ಅನೇಕರು “ಸ್ವಪ್ರೇಮಿಗಳೂ ಹಣಪ್ರೇಮಿಗಳೂ . . . ಒಳ್ಳೇತನವನ್ನು ಪ್ರೀತಿಸದವರೂ” ಆಗಿರುವಂಥ ಒಂದು ಲೋಕದಲ್ಲಿ ನಾವು ಇಂಥ ವರ್ತನೆಯನ್ನೇ ನಿರೀಕ್ಷಿಸುತ್ತೇವೆ.—2 ತಿಮೊಥೆಯ 3:1-5.

17 ನಿಜ ಕ್ರೈಸ್ತರು ಇಂಥ ಯಾವುದೇ ರೂಢಿಗಳಲ್ಲಿ ಒಳಗೂಡದಿರುವ ದೃಢನಿರ್ಧಾರವನ್ನು ಮಾಡಿದ್ದಾರೆ. ಇಂಥ ಅಪ್ರಾಮಾಣಿಕ ಕಾರ್ಯವಿಧಾನಗಳಲ್ಲಿ ಒಳಗೂಡುವವರು ಯಶಸ್ಸನ್ನು ಪಡೆಯುತ್ತಿರುವಂತೆ ಮತ್ತು ಇಂದಿನ ಲೋಕದಲ್ಲಿ ಏಳಿಗೆಯನ್ನೂ ಹೊಂದುತ್ತಿರುವಂತೆ ತೋರುವಾಗ ಪ್ರಾಮಾಣಿಕರಾಗಿರುವುದು ಕೆಲವೊಮ್ಮೆ ಪಂಥಾಹ್ವಾನವಾಗಿರುತ್ತದೆ. (ಕೀರ್ತನೆ 73:1-8) ಅದೇ ಸಮಯದಲ್ಲಿ ಕ್ರೈಸ್ತರು “ಎಲ್ಲ ವಿಷಯಗಳಲ್ಲಿ” ಪ್ರಾಮಾಣಿಕರಾಗಿರಲು ಬಯಸುವುದರಿಂದ ಆರ್ಥಿಕವಾಗಿ ಕಷ್ಟವನ್ನು ಅನುಭವಿಸಬಹುದು. ಇಷ್ಟೆಲ್ಲ ತ್ಯಾಗವನ್ನು ಮಾಡುವುದು ಸಾರ್ಥಕವಾಗಿದೆಯೊ? ಖಂಡಿತವಾಗಿಯೂ ಸಾರ್ಥಕವಾಗಿದೆ! ಏಕೆ? ಪ್ರಾಮಾಣಿಕ ನಡತೆಯಿಂದ ಯಾವ ಆಶೀರ್ವಾದಗಳು ಸಿಗುತ್ತವೆ?

ಪ್ರಾಮಾಣಿಕರಾಗಿರುವುದರಿಂದ ಸಿಗುವ ಆಶೀರ್ವಾದಗಳು

18. ಪ್ರಾಮಾಣಿಕರೆಂಬ ಹೆಸರನ್ನು ಹೊಂದಿರುವುದು ಅತ್ಯಮೂಲ್ಯ ಏಕೆ?

18 ಪ್ರಾಮಾಣಿಕ, ಭರವಸಾರ್ಹ ವ್ಯಕ್ತಿ ಎಂಬ ಹೆಸರನ್ನು ಪಡೆಯುವುದಕ್ಕಿಂತ ಹೆಚ್ಚು ಮೌಲ್ಯವುಳ್ಳ ವಿಷಯಗಳನ್ನು ನಾವು ಜೀವನದಲ್ಲಿ ಕಂಡುಕೊಳ್ಳುವುದು ಅತಿ ವಿರಳ. (“ ನಾನು ಎಷ್ಟು ಪ್ರಾಮಾಣಿಕನಾಗಿದ್ದೇನೆ?” ಎಂಬ ಚೌಕವನ್ನು ನೋಡಿ.) ಮತ್ತು ತುಸು ಯೋಚಿಸಿ ನೋಡಿ, ಇಂಥ ಒಳ್ಳೇ ಹೆಸರನ್ನು ಯಾರು ಬೇಕಾದರೂ ಗಳಿಸಬಹುದು! ಇದು ನಿಮ್ಮ ಸಾಮರ್ಥ್ಯ, ಸಂಪತ್ತು, ಹೊರತೋರಿಕೆ, ಸಾಮಾಜಿಕ ಹಿನ್ನೆಲೆ ಅಥವಾ ನಿಮ್ಮ ನಿಲುಕಿಗೆ ಸಿಗದ ಯಾವುದೇ ಅಂಶದ ಮೇಲೆ ಹೊಂದಿಕೊಂಡಿಲ್ಲ. ಆದರೂ ಒಳ್ಳೇ ಹೆಸರೆಂಬ ಅತ್ಯಮೂಲ್ಯ ಆಸ್ತಿಯನ್ನು ಪಡೆದುಕೊಳ್ಳುವುದರಲ್ಲಿ ಅನೇಕರು ವಿಫಲರಾಗುತ್ತರೆ. ಒಳ್ಳೇ ಹೆಸರು ಅಪೂರ್ವ. (ಮೀಕ 7:2) ನೀವು ಪ್ರಾಮಾಣಿಕರಾಗಿರುವುದನ್ನು ನೋಡಿ ಕೆಲವರು ಗೇಲಿಮಾಡಬಹುದು, ಆದರೆ ಇತರರು ನಿಮ್ಮ ಪ್ರಾಮಾಣಿಕತೆಯನ್ನು ಮೆಚ್ಚಿ ನಿಮ್ಮ ಮೇಲೆ ಭರವಸೆಯಿಡುವರು ಮತ್ತು ನಿಮ್ಮನ್ನು ಗೌರವಿಸುವರು. ತಮ್ಮ ಪ್ರಾಮಾಣಿಕತೆಯು ಆರ್ಥಿಕವಾಗಿಯೂ ಪ್ರಯೋಜವನ್ನು ತಂದಿದೆ ಎಂದು ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಕಂಡುಕೊಂಡಿದ್ದಾರೆ. ಅಪ್ರಾಮಾಣಿಕ ನೌಕರರನ್ನು ಕೆಲಸದಿಂದ ವಜಾಮಾಡಿದಾಗ ಇವರು ತಮ್ಮ ಕೆಲಸಗಳನ್ನು ಉಳಿಸಿಕೊಂಡಿದ್ದಾರೆ ಅಥವಾ ಪ್ರಾಮಾಣಿಕ ನೌಕರರು ಅತ್ಯಗತ್ಯವಾಗಿ ಬೇಕಾಗಿರುವಾಗ ಇವರಿಗೆ ಕೆಲಸ ಸಿಕ್ಕಿದೆ.

19. ಪ್ರಾಮಾಣಿಕತೆಯ ಜೀವನ ಮಾರ್ಗವು ಹೇಗೆ ನಮ್ಮ ಮನಸ್ಸಾಕ್ಷಿಯನ್ನು ಮತ್ತು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಪ್ರಭಾವಿಸುತ್ತದೆ?

19 ಇದು ನಿಮ್ಮ ವಿಷಯದಲ್ಲಿ ಸಂಭವಿಸುತ್ತದೋ ಇಲ್ಲವೋ, ಆದರೆ ಪ್ರಾಮಾಣಿಕತೆಯು ಇನ್ನೂ ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ನೀವು ಒಂದು ಶುದ್ಧ ಮನಸ್ಸಾಕ್ಷಿಯಿಂದ ಆಶೀರ್ವದಿಸಲ್ಪಡುವಿರಿ. “ನಮಗೆ ಪ್ರಾಮಾಣಿಕವಾದ ಮನಸ್ಸಾಕ್ಷಿಯಿದೆ ಎಂದು ನಾವು ನಂಬುತ್ತೇವೆ” ಎಂದು ಪೌಲನು ಬರೆದನು. (ಇಬ್ರಿಯ 13:18) ಮಾತ್ರವಲ್ಲದೆ ನಿಮ್ಮ ಸತ್ಕೀರ್ತಿಯನ್ನು ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯು ಖಂಡಿತ ಗಮನಿಸುತ್ತಾನೆ ಮತ್ತು ಆತನು ಪ್ರಾಮಾಣಿಕ ಜನರನ್ನು ಪ್ರೀತಿಸುತ್ತಾನೆ. (ಕೀರ್ತನೆ 15:1, 2; ಜ್ಞಾನೋಕ್ತಿ 22:1 ಓದಿ.) ಹೌದು, ಪ್ರಾಮಾಣಿಕರಾಗಿರುವುದು ದೇವರ ಪ್ರೀತಿಯಲ್ಲಿ ಉಳಿಯಲು ನಿಮಗೆ ಸಹಾಯಮಾಡುತ್ತದೆ ಮತ್ತು ನಾವು ಪಡೆದುಕೊಳ್ಳಸಾಧ್ಯವಿರುವ ಅತಿ ದೊಡ್ಡ ಬಹುಮಾನವು ಇದೇ ಆಗಿದೆ. ಇದಕ್ಕೆ ಸಂಬಂಧಪಟ್ಟ ಮತ್ತೊಂದು ಅಂಶವನ್ನು ನಾವು ಮುಂದಿನ ಅಧ್ಯಾಯದಲ್ಲಿ ಪರಿಗಣಿಸಲಿದ್ದೇವೆ. ಅದು ಕೆಲಸದ ಕುರಿತಾದ ಯೆಹೋವನ ದೃಷ್ಟಿಕೋನವೇ ಆಗಿದೆ.

^ ಪ್ಯಾರ. 9 ಸಭೆಯಲ್ಲಿ ಯಾರಾದರೂ ಇತರರಿಗೆ ಹಾನಿಮಾಡುವ ಸ್ಪಷ್ಟ ಉದ್ದೇಶದಿಂದ ಕುತ್ಸಿತ ಮತ್ತು ದ್ವೇಷಭರಿತ ಸುಳ್ಳುಗಳನ್ನು ಹೇಳುವ ರೂಢಿಯನ್ನು ಮಾಡಿಕೊಂಡಿರುವಲ್ಲಿ, ಹಿರಿಯರು ನ್ಯಾಯನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಬಹುದು.

^ ಪ್ಯಾರ. 14 ಒಂದು ವ್ಯಾಪಾರದ ಏರ್ಪಾಡು ವಿಫಲವಾಗುವಲ್ಲಿ ಏನು ಮಾಡಬೇಕು ಎಂಬುದರ ಮಾಹಿತಿಗಾಗಿ “ವ್ಯಾಪಾರ-ವ್ಯವಹಾರದ ವಿಷಯಗಳಲ್ಲಿ ವ್ಯಾಜ್ಯಗಳನ್ನು ಬಗೆಹರಿಸುವುದು” ಎಂಬ ಪರಿಶಿಷ್ಟವನ್ನು ನೋಡಿ.

^ ಪ್ಯಾರ. 15 ಅವರು ಒಂದು ಬಗೆಯ ತೂಕದ ಕಲ್ಲುಗಳನ್ನು ಕೊಂಡುಕೊಳ್ಳಲಿಕ್ಕಾಗಿ ಮತ್ತು ಇನ್ನೊಂದು ಬಗೆಯ ತೂಕದ ಕಲ್ಲುಗಳನ್ನು ಮಾರಲಿಕ್ಕಾಗಿ ಉಪಯೋಗಿಸುತ್ತಿದ್ದರು; ಹೀಗೆ ಎರಡೂ ರೀತಿಯಲ್ಲಿ ತಮಗೇ ಲಾಭವಾಗುವಂತೆ ನೋಡಿಕೊಳ್ಳುತ್ತಿದ್ದರು. ಗಿರಾಕಿಯನ್ನು ಯಾವುದೇ ವ್ಯವಹಾರದಲ್ಲಿ ಮೋಸಮಾಡಲಿಕ್ಕಾಗಿ ಒಂದು ತೋಳು ಉದ್ದವಾಗಿರುವ ಅಥವಾ ಹೆಚ್ಚು ಭಾರವಾಗಿರುವ ತ್ರಾಸನ್ನೂ ಅವರು ಉಪಯೋಗಿಸುತ್ತಿದ್ದಿರಬಹುದು.