ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ರಕ್ತದ ಚಿಕ್ಕ ಅಂಶಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು

ರಕ್ತದ ಚಿಕ್ಕ ಅಂಶಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು

ರಕ್ತದ ಚಿಕ್ಕ ಅಂಶಗಳು. ಈ ಚಿಕ್ಕ ಅಂಶಗಳನ್ನು ರಕ್ತದ ನಾಲ್ಕು ಪ್ರಮುಖ ಘಟಕಗಳಾದ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು, ಪ್ಲೇಟ್‌ಲೆಟ್‌ಗಳು ಮತ್ತು ಪ್ಲಾಸ್ಮದಿಂದ ತೆಗೆಯಲಾಗುತ್ತದೆ. ಉದಾಹರಣೆಗೆ, ಕೆಂಪು ರಕ್ತಕಣಗಳಲ್ಲಿ ಹೀಮೊಗ್ಲೋಬಿನ್‌ ಎಂಬ ಪ್ರೋಟೀನ್‌ ಇದೆ. ಮಾನವನ ಅಥವಾ ಪ್ರಾಣಿಯ ಹೀಮೊಗ್ಲೋಬಿನ್‌ನಿಂದ ತಯಾರಿಸಲ್ಪಟ್ಟ ಉತ್ಪನ್ನಗಳನ್ನು ತೀವ್ರ ರಕ್ತಹೀನತೆ ಇಲ್ಲವೆ ಬಹಳಷ್ಟು ರಕ್ತನಷ್ಟವಾಗಿರುವ ರೋಗಿಗಳಿಗೆ ಚಿಕಿತ್ಸೆನೀಡಲು ಉಪಯೋಗಿಸಲಾಗುತ್ತದೆ.

ತೊಂಬತ್ತು ಪ್ರತಿಶತ ನೀರಾಗಿರುವ ಪ್ಲಾಸ್ಮದಲ್ಲೂ ನೂರಾರು ಹಾರ್ಮೋನುಗಳು, ಅಜೈವಿಕ ಲವಣಗಳು, ಕಿಣ್ವಗಳು ಮತ್ತು ಪೌಷ್ಟಿಕಾಂಶಗಳಿವೆ—ಈ ಪೌಷ್ಟಿಕಾಂಶಗಳಲ್ಲಿ ಖನಿಜಗಳು ಮತ್ತು ಸಕ್ಕರೆಯು ಒಳಗೂಡಿದೆ. ಪ್ಲಾಸ್ಮದಲ್ಲಿ ರಕ್ತಹೆಪ್ಪುಗಟ್ಟಿಸುವಂಥ ಅಂಶಗಳು, ರೋಗವನ್ನು ಪ್ರತಿರೋಧಿಸುವ ಪ್ರತಿಜನಕಗಳು ಮತ್ತು ಆಲ್ಬುಮಿನ್‌ನಂಥ ಪ್ರೋಟೀನ್‌ಗಳೂ ಇವೆ. ಒಬ್ಬ ವ್ಯಕ್ತಿಗೆ ನಿರ್ದಿಷ್ಟ ರೋಗವಿದ್ದರೆ ಈಗಾಗಲೇ ಸೋಂಕುರಕ್ಷೆಯನ್ನು ಪಡೆದುಕೊಂಡಿರುವ ಜನರ ಪ್ಲಾಸ್ಮದಿಂದ ತೆಗೆಯಲಾಗಿರುವ ಗ್ಯಾಮ ಗ್ಲಾಬುಲಿನ್‌ ಸೂಜಿಮದ್ದುಗಳನ್ನು ವೈದ್ಯರು ಬರೆದುಕೊಡಬಹುದು. ಕೆಲವೊಂದು ಸಾಂಕ್ರಾಮಿಕ ರೋಗಗಳ ಮತ್ತು ಕ್ಯಾನ್ಸರ್‌ ರೋಗಗಳ ಚಿಕಿತ್ಸೆಗಾಗಿ ಉಪಯೋಗಿಸಲಾಗುವ ಇಂಟರ್‌ಫೆರಾನ್‌ ಮತ್ತು ಇಂಟರ್‌ಲೂಕಿನ್‌ಗಳನ್ನು ಬಿಳಿ ರಕ್ತಕಣಗಳಿಂದ ತೆಗೆಯಬಹುದು.

ಕ್ರೈಸ್ತರು ತಮ್ಮ ವೈದ್ಯಕೀಯ ಚಿಕಿತ್ಸೆಯಲ್ಲಿ ಇಂಥ ರಕ್ತದ ಅಂಶಗಳನ್ನು ತೆಗೆದುಕೊಳ್ಳಬೇಕೊ? ಬೈಬಲ್‌ ಅದರ ಬಗ್ಗೆ ನಿರ್ದಿಷ್ಟ ವಿವರಗಳನ್ನು ಕೊಡುವುದಿಲ್ಲ, ಆದುದರಿಂದ ಪ್ರತಿಯೊಬ್ಬನು ದೇವರ ಮುಂದೆ ತನ್ನ ಸ್ವಂತ ಮನಸ್ಸಾಕ್ಷಿಗನುಸಾರ ನಿರ್ಣಯವನ್ನು ಮಾಡಬೇಕು. ಕೆಲವರು, ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮವು ಒಂದು ಜೀವಿಯಿಂದ ತೆಗೆಯಲಾಗುವ ರಕ್ತವನ್ನು ‘ಭೂಮಿಯ ಮೇಲೆ ಸುರಿದುಬಿಡುವುದನ್ನು’ ಅವಶ್ಯಪಡಿಸಿತೆಂದು ತರ್ಕಿಸುತ್ತಾ ರಕ್ತದ ಎಲ್ಲ ಅಂಶಗಳನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. (ಧರ್ಮೋಪದೇಶಕಾಂಡ 12:22-24) ಇತರರು, ಪೂರ್ಣ ರಕ್ತ ಅಥವಾ ಅದರ ಪ್ರಮುಖ ಘಟಕಾಂಶಗಳ ಪೂರಣಗಳನ್ನು ನಿರಾಕರಿಸುತ್ತಾರಾದರೂ ರಕ್ತದ ಚಿಕ್ಕ ಅಂಶಗಳು ಒಳಗೂಡಿರುವ ಚಿಕಿತ್ಸೆಗಳನ್ನು ಸ್ವೀಕರಿಸಬಹುದು. ಒಂದು ಹಂತದಲ್ಲಿ ರಕ್ತದಿಂದ ತೆಗೆಯಲ್ಪಟ್ಟ ಚಿಕ್ಕ ಅಂಶಗಳು ಆ ರಕ್ತವು ತೆಗೆಯಲ್ಪಟ್ಟ ಜೀವಿಯ ಜೀವವನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ತರ್ಕಿಸಬಹುದು.

ರಕ್ತದ ಚಿಕ್ಕ ಅಂಶಗಳ ಬಗ್ಗೆ ನಿರ್ಣಯಗಳನ್ನು ಮಾಡಲಿಕ್ಕಿರುವಾಗ ಈ ಮುಂದಿನ ಪ್ರಶ್ನೆಗಳನ್ನು ಪರಿಗಣಿಸಿರಿ: ನಾನು ರಕ್ತದ ಎಲ್ಲ ಅಂಶಗಳನ್ನು ನಿರಾಕರಿಸುವುದರ ಅರ್ಥ, ರೋಗಗಳೊಂದಿಗೆ ಹೋರಾಡುವಂಥ ಇಲ್ಲವೆ ರಕ್ತಸ್ರಾವ ನಿಲ್ಲಿಸಲಿಕ್ಕಾಗಿ ರಕ್ತಹೆಪ್ಪುಗಟ್ಟುವಂತೆ ಸಹಾಯಮಾಡಬಹುದಾದ ಉತ್ಪನ್ನಗಳನ್ನು ಒಳಗೂಡಿರುವ ಕೆಲವೊಂದು ಔಷಧಗಳನ್ನು ಸಹ ಸ್ವೀಕರಿಸುವುದಿಲ್ಲ ಎಂಬುದು ನನಗೆ ತಿಳಿದಿದೆಯೊ? ರಕ್ತದ ಒಂದು ಅಥವಾ ಹೆಚ್ಚು ಅಂಶಗಳ ಬಳಕೆಯನ್ನು ನಾನೇಕೆ ನಿರಾಕರಿಸುತ್ತೇನೆ ಅಥವಾ ಸ್ವೀಕರಿಸುತ್ತೇನೆ ಎಂಬುದನ್ನು ನಾನು ಒಬ್ಬ ವೈದ್ಯನಿಗೆ ವಿವರಿಸಬಲ್ಲೆನೊ?

ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು. ಇವುಗಳಲ್ಲಿ ಹೀಮೊಡೈಲ್ಯೂಷನ್‌ ಮತ್ತು ಸೆಲ್‌ ಸ್ಯಾಲ್ವೇಜ್‌ ಒಳಗೂಡಿದೆ. ಹೀಮೊಡೈಲ್ಯೂಷನ್‌ನಲ್ಲಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತವನ್ನು ಬೇರೆಡೆಗೆ ವರ್ಗಾಯಿಸಿ ಅದಕ್ಕೆ ಬದಲಿಯಾಗಿ ನಾನ್‌-ಬ್ಲಡ್‌ ವಾಲ್ಯೂಮ್‌ ಎಕ್ಸ್‌ಪಾಂಡರನ್ನು ದೇಹದಲ್ಲಿ ತುಂಬಿಸಿ ಶಸ್ತ್ರಚಿಕಿತ್ಸೆಯ ಬಳಿಕ ರಕ್ತವನ್ನು ಪುನಃ ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ. ಸೆಲ್‌ ಸ್ಯಾಲ್ವೇಜ್‌ ವಿಧಾನದಿಂದ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಷ್ಟವಾಗುವ ರಕ್ತವನ್ನು ಸಂಗ್ರಹಿಸಿ ಪುನಃ ದೇಹದೊಳಗೆ ಸೇರಿಸಲಾಗುತ್ತದೆ. ಒಂದು ವ್ರಣದಿಂದ ಹರಿದುಬರುತ್ತಿರುವ ರಕ್ತವನ್ನು ಸಂಗ್ರಹಿಸಿ ಸೋಸಲಾಗುತ್ತದೆ ಮತ್ತು ತದನಂತರ ಅದನ್ನು ರೋಗಿಯ ದೇಹದೊಳಗೆ ಪುನಃ ಸೇರಿಸಲಾಗುತ್ತದೆ. ಈ ಪ್ರಯೋಗ ವಿಧಾನಗಳನ್ನು ಬಳಸುವ ವಿಧಗಳು ವೈದ್ಯರಿಂದ ವೈದ್ಯರಿಗೆ ಭಿನ್ನವಾಗಿರಲು ಸಾಧ್ಯವಿರುವುದರಿಂದ, ತನ್ನ ವೈದ್ಯನು ಯಾವ ವಿಧವನ್ನು ಬಳಸಲಿದ್ದಾನೆ ಎಂಬುದನ್ನು ಒಬ್ಬ ಕ್ರೈಸ್ತನು ವಿಚಾರಿಸಿ ತಿಳಿದುಕೊಳ್ಳಬೇಕು.

ಈ ಕಾರ್ಯವಿಧಾನಗಳ ಕುರಿತಾದ ನಿರ್ಣಯಗಳನ್ನು ಮಾಡುವಾಗ ಸ್ವತಃ ಹೀಗೆ ಕೇಳಿಕೊಳ್ಳಿ: ‘ಒಂದುವೇಳೆ ನನ್ನ ರಕ್ತವು ದೇಹದಿಂದ ಹೊರಗೆ ಕಳುಹಿಸಲ್ಪಟ್ಟು, ಬಹುಶಃ ಅದರ ಹರಿವು ಕೇವಲ ಸ್ವಲ್ಪ ಸಮಯಕ್ಕೆ ನಿಲ್ಲಿಸಲ್ಪಡುವುದಾದರೂ ಆ ರಕ್ತವು ಇನ್ನೂ ನನ್ನ ದೇಹದ ಭಾಗವಾಗಿದೆ ಎಂದು ಪರಿಗಣಿಸಿ, ಈ ಕಾರಣದಿಂದ ಅದನ್ನು “ಭೂಮಿಯ ಮೇಲೆ ಸುರಿಸುವ” ಅಗತ್ಯವಿಲ್ಲ ಎಂಬ ವಿಚಾರವನ್ನು ನನ್ನ ಮನಸ್ಸಾಕ್ಷಿ ಅನುಮತಿಸುವುದೊ? (ಧರ್ಮೋಪದೇಶಕಾಂಡ 12:23, 24) ಒಂದುವೇಳೆ ಒಂದು ವೈದ್ಯಕೀಯ ಕಾರ್ಯವಿಧಾನದಲ್ಲಿ ನನ್ನ ಸ್ವಂತ ರಕ್ತವನ್ನು ಹೊರತಂದು, ಮಾರ್ಪಡಿಸಿ, ಪುನಃ ನನ್ನ ದೇಹದೊಳಕ್ಕೆ ಸೇರಿಸಲಾಗುವುದಾದರೆ, ನನ್ನ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ನನ್ನನ್ನು ಕಾಡುವುದೊ? ನನ್ನ ಸ್ವಂತ ರಕ್ತವನ್ನು ಉಪಯೋಗಿಸಲಾಗುವ ಎಲ್ಲ ವೈದ್ಯಕೀಯ ಕಾರ್ಯವಿಧಾನಗಳನ್ನು ನಿರಾಕರಿಸುವುದರ ಅರ್ಥ, ನಾನು ರಕ್ತಪರೀಕ್ಷೆ, ಹೀಮೊಡಯಾಲಿಸಿಸ್‌ ಇಲ್ಲವೆ ಹೃದಯ-ಶ್ವಾಸಕೋಶ ಬೈಪಾಸ್‌ ಯಂತ್ರವನ್ನು ಸಹ ಸ್ವೀಕರಿಸುವುದಿಲ್ಲ ಎಂದಾಗಿದೆ ಎಂಬುದು ನನಗೆ ತಿಳಿದಿದೆಯೊ?’

ಒಂದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಒಬ್ಬ ಕ್ರೈಸ್ತನು ತನ್ನ ಸ್ವಂತ ರಕ್ತವನ್ನು ಹೇಗೆ ಉಪಯೋಗಿಸಲು ಅನುಮತಿಸುತ್ತಾನೆ ಎಂಬ ವಿಷಯದಲ್ಲಿ ಅವನು ಸ್ವಂತ ನಿರ್ಣಯವನ್ನು ಮಾಡತಕ್ಕದ್ದು. ಒಬ್ಬನ ಸ್ವಂತ ರಕ್ತದಿಂದ ಸ್ವಲ್ಪವನ್ನು ಹೊರತೆಗೆದು, ಪ್ರಾಯಶಃ ಯಾವುದೋ ವಿಧದಲ್ಲಿ ಅದನ್ನು ಮಾರ್ಪಡಿಸಿ, ಅನಂತರ ಅದನ್ನು ದೇಹದೊಳಗೆ ಸೇರಿಸುವುದನ್ನು ಒಳಗೂಡುವ ವೈದ್ಯಕೀಯ ಪರೀಕ್ಷೆಗಳು ಮತ್ತು ಪ್ರಚಲಿತ ಚಿಕಿತ್ಸಾಕ್ರಮಗಳಿಗೂ ಇದು ಅನ್ವಯವಾಗುತ್ತದೆ.