ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

“ನಾವೆಲ್ರೂ ಸೇರಿ ನಿರ್ಣಯ ಮಾಡಿದ್ವಿ”

“ನಾವೆಲ್ರೂ ಸೇರಿ ನಿರ್ಣಯ ಮಾಡಿದ್ವಿ”

ಆಡಳಿತ ಮಂಡಲಿ ಒಂದು ನಿರ್ಧಾರ ತಗೊಳ್ತು, ಇದ್ರಿಂದ ಸಭೆಗಳಲ್ಲಿ ಒಗ್ಗಟ್ಟು ಹೆಚ್ಚಾಯ್ತು

ಆಧಾರ: ಅಪೊಸ್ತಲರ ಕಾರ್ಯ 15:13-35

1, 2. (ಎ) ಒಂದನೇ ಶತಮಾನದ ಆಡಳಿತ ಮಂಡಲಿಯ ಮುಂದೆ ಯಾವ ದೊಡ್ಡದೊಡ್ಡ ಪ್ರಶ್ನೆಗಳಿದ್ವು? (ಬಿ) ಸರಿಯಾದ ತೀರ್ಮಾನ ಮಾಡೋಕೆ ಆ ಸಹೋದರರಿಗೆ ಯಾವ ಸಹಾಯ ಸಿಕ್ತು?

 ಯೆರೂಸಲೇಮಿನ ಒಂದು ಮನೆಯ ಕೋಣೆಯಲ್ಲಿ ಅಪೊಸ್ತಲರು ಮತ್ತು ಹಿರಿಯರು ಸೇರಿ ಬಂದಿದ್ರು. ಅವ್ರೆಲ್ಲರಿಗೆ ನಾವು ಒಂದು ಮುಖ್ಯವಾದ ಘಟ್ಟಕ್ಕೆ ಬಂದಿದ್ದೀವಿ ಅಂತ ಗೊತ್ತಿತ್ತು. ಅದಕ್ಕೆ ಎಲ್ಲರೂ ಮುಖ-ಮುಖ ನೋಡ್ಕೊಂಡ್ರು. ಅವ್ರು ಸುನ್ನತಿ ಬಗ್ಗೆ ಇದ್ದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ರ ಕೊಡಬೇಕಿತ್ತು. ಅದೇನಂದ್ರೆ ಕ್ರೈಸ್ತರು ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಕಾ? ಯೆಹೋವ ದೇವರು ಯೆಹೂದಿ ಕ್ರೈಸ್ತರು ಬೇರೆ, ಯೆಹೂದ್ಯರಲ್ಲದ ಕ್ರೈಸ್ತರು ಬೇರೆ ಅಂತ ಭೇದಭಾವ ಮಾಡ್ತಾರಾ?

2 ಇದಕ್ಕೆ ಉತ್ರ ತಿಳ್ಕೊಳ್ಳೋಕೆ ಈ ಸಹೋದರರು ಈಗಾಗ್ಲೇ ತುಂಬ ಆಧಾರಗಳನ್ನ ಪರೀಕ್ಷಿಸಿ ನೋಡಿದ್ರು. ಅದ್ರಲ್ಲಿ ಒಂದು, ದೇವರ ವಾಕ್ಯದಲ್ಲಿರೋ ಭವಿಷ್ಯವಾಣಿಗಳ ಬಗ್ಗೆ ಮಾತಾಡಿದ್ರು. ಇನ್ನೊಂದು ಯೆಹೂದ್ಯರಲ್ಲದ ಕ್ರೈಸ್ತರನ್ನ ಯೆಹೋವ ಆಶೀರ್ವದಿಸ್ತಾನೆ ಅಂತ ಸೂಚಿಸೋ ಪ್ರತ್ಯಕ್ಷಸಾಕ್ಷಿಗಳ ಮಾತುಗಳ ಬಗ್ಗೆನೂ ಮಾತಾಡಿದ್ರು. ಅಷ್ಟೇ ಅಲ್ಲ, ಕೂಡಿಬಂದಿದ್ದ ಪ್ರತಿಯೊಬ್ರು ಆ ವಿಚಾರದ ಬಗ್ಗೆ ತಮಗೆ ಗೊತ್ತಿದ್ದ ಎಲ್ಲ ವಿಷ್ಯಗಳನ್ನ, ತಮ್ಮ ಅನಿಸಿಕೆಗಳನ್ನ ಮನಸ್ಸುಬಿಚ್ಚಿ ಹೇಳಿದ್ರು. ಈಗ ಸರಿಯಾದ ನಿರ್ಧಾರ ಮಾಡೋಕೆ ಬೇಕಾದ ಎಲ್ಲಾ ಆಧಾರಗಳು ಅವರ ಹತ್ರ ಇತ್ತು. ಅವರು ಯಾವ ನಿರ್ಧಾರ ಮಾಡಬೇಕು ಅಂತ ಯೆಹೋವನ ಪವಿತ್ರಶಕ್ತಿ ಸ್ಪಷ್ಟವಾಗಿ ತೋರಿಸ್ಕೊಡ್ತು. ಆ ಮಾರ್ಗದರ್ಶನನಾ ಆ ಸಹೋದರರು ಪಾಲಿಸಿದ್ರಾ?

3. ಅಪೊಸ್ತಲರ ಕಾರ್ಯ 15ನೇ ಅಧ್ಯಾಯದಲ್ಲಿ ಹೇಳಿರೋ ಘಟನೆಯಿಂದ ನಮಗೆ ಹೇಗೆ ಪ್ರಯೋಜನ ಆಗುತ್ತೆ?

3 ಇದನ್ನ ಪಾಲಿಸೋಕೆ ಅವ್ರಿಗೆ ನಿಜವಾಗ್ಲೂ ನಂಬಿಕೆ, ಧೈರ್ಯ ಬೇಕಾಗಿತ್ತು. ಯಾಕಂದ್ರೆ ಇದನ್ನ ಪಾಲಿಸೋದ್ರಿಂದ ಯೆಹೂದಿ ಧರ್ಮಗುರುಗಳ ದ್ವೇಷ ಇನ್ನೂ ಜಾಸ್ತಿ ಆಗ್ತಿತ್ತು. ಅಷ್ಟೇ ಅಲ್ಲ, ಮೋಶೆಯ ನಿಯಮ ಪುಸ್ತಕವನ್ನ ಪಾಲಿಸಬೇಕಂತ ಸಭೆಯೊಳಗೆ ಹಠಹಿಡಿದವರಿಂದನೂ ವಿರೋಧ ಬರ್ತಿತ್ತು. ಹಾಗಾದ್ರೆ ಆಡಳಿತ ಮಂಡಲಿ ಏನು ಮಾಡ್ತು? ಬನ್ನಿ ನೋಡೋಣ. ಇದನ್ನ ಚರ್ಚೆ ಮಾಡುವಾಗ, ಆ ಸಹೋದರರು ಇಟ್ಟ ಮಾದರಿಗೆ ಗಮನ ಕೊಡೋಣ. ಇವತ್ತು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿನೂ ಇವ್ರ ಮಾದರಿಯನ್ನೇ ಅನುಸರಿಸುತ್ತೆ. ಕ್ರೈಸ್ತರಾಗಿ ನಮ್ಮ ಜೀವನದಲ್ಲಿ ತೀರ್ಮಾನಗಳನ್ನ ಮಾಡಬೇಕಾಗಿ ಬಂದಾಗ ನಾವೂ ಇವ್ರ ಮಾದರಿಯನ್ನೇ ಅನುಸರಿಸಬೇಕು.

“ಪ್ರವಾದಿಗಳು ಬರೆದಿರೋ ಮಾತಿಗೆ ಇದು ಹೊಂದಾಣಿಕೆಯಲ್ಲೂ ಇದೆ” (ಅ. ಕಾ. 15:13-21)

4, 5. ಪ್ರವಾದಿಗಳ ಯಾವ ಮಾತುಗಳನ್ನ ಯಾಕೋಬ ಹೇಳಿದ?

4 ಈಗ ಆ ಗುಂಪಿನಲ್ಲಿದ್ದ ಯೇಸುವಿನ ಮಲತಮ್ಮನಾದ ಶಿಷ್ಯ ಯಾಕೋಬ ಮಾತು ಶುರು ಮಾಡಿದ. a ಅವನೇ ಈ ಕೂಟದ ಅಧ್ಯಕ್ಷನಾಗಿದ್ದ ಅಂತ ಕಾಣುತ್ತೆ. ಈ ಇಡೀ ಗುಂಪು ಯಾವ ತೀರ್ಮಾನ ತಗೊಂಡಿತ್ತೋ ಅದನ್ನ ಅವನು ಚುಟುಕಾಗಿ ಹೀಗೆ ಹೇಳಿದ: “ಯೆಹೂದ್ಯರಲ್ಲದ ಜನ್ರಲ್ಲೂ ದೇವ್ರ ಹೆಸ್ರನ್ನ ಗೌರವಿಸೋ ಜನ್ರಿದ್ದಾರೆ. ಮೊದಲನೇ ಸಲ ದೇವರು ಅವ್ರ ಕಡೆ ಗಮನಕೊಟ್ಟು ಅವ್ರನ್ನ ತನ್ನ ಜನ್ರಾಗಿ ಆರಿಸ್ಕೊಂಡಿದ್ದಾನೆ. ಅದನ್ನೇ ಸಿಮೆಯೋನ ನಮಗೆ ತುಂಬ ಚೆನ್ನಾಗಿ ವಿವರಿಸಿದ. ಪ್ರವಾದಿಗಳು ಬರೆದಿರೋ ಮಾತಿಗೆ ಇದು ಹೊಂದಾಣಿಕೆಯಲ್ಲೂ ಇದೆ.”—ಅ. ಕಾ. 15:14, 15.

5 ಯಾಕೋಬ ಈ ಹಿಂದೆ ಸಿಮೆಯೋನ (ಸೀಮೋನ ಪೇತ್ರ) ಕೊಟ್ಟ ಭಾಷಣವನ್ನ ಮತ್ತು ಬಾರ್ನಬ, ಪೌಲ ಕೊಟ್ಟ ಆಧಾರಗಳನ್ನ ಕೇಳಿಸ್ಕೊಂಡಿದ್ದ. ಈ ತರ ಕೇಳಿಸ್ಕೊಂಡಿದ್ರಿಂದ ಕೆಲವು ಬೈಬಲ್‌ ವಚನಗಳು ನೆನಪಾಗಿರಬಹುದು. ಇದ್ರಿಂದ ಆಡಳಿತ ಮಂಡಲಿ ಸರಿಯಾದ ತೀರ್ಮಾನ ಮಾಡೋಕೆ ಆಯ್ತು. (ಯೋಹಾ. 14:26) ಅದಕ್ಕೆ ಅವನು ಆಮೋಸ 9:11, 12ರಲ್ಲಿರೋ “ಪ್ರವಾದಿಗಳು ಬರೆದಿರೋ ಮಾತಿಗೆ ಇದು ಹೊಂದಾಣಿಕೆಯಲ್ಲೂ ಇದೆ” ಅನ್ನೋ ಮಾತುಗಳನ್ನ ಹೇಳಿದ. ಆ ಪುಸ್ತಕವನ್ನ ಹೀಬ್ರು ಪವಿತ್ರಗ್ರಂಥದಲ್ಲಿ ಸಾಮಾನ್ಯವಾಗಿ “ಪ್ರವಾದಿಗಳ ಮಾತು” ಅನ್ನೋ ಭಾಗದಲ್ಲಿ ಪಟ್ಟಿಮಾಡಲಾಗಿತ್ತು. (ಮತ್ತಾ. 22:40; ಅ. ಕಾ. 15:16-18) ಯಾಕೋಬ ಹೇಳಿದ ಆ ಮಾತುಗಳು ಆಮೋಸ ಪುಸ್ತಕದಲ್ಲಿರೋ ಮಾತುಗಳಿಗಿಂತ ಸ್ವಲ್ಪ ಬೇರೆ ರೀತಿ ಇರೋದನ್ನ ನೀವು ಗಮನಿಸಿರಬಹುದು. ಯಾಕಂದ್ರೆ ಅವನು ಹೀಬ್ರು ಪವಿತ್ರಗ್ರಂಥದ ಗ್ರೀಕ್‌ ಭಾಷಾಂತರ ಆಗಿದ್ದ ಸೆಪ್ಟೂಅಜಂಟ್‌ನಿಂದ ಹೇಳಿದ್ದ ಅಂತ ಅನ್ಸುತ್ತೆ.

6. ಪವಿತ್ರಗ್ರಂಥದಲ್ಲಿದ್ದ ಮಾತುಗಳಿಗೆ ಏನು ಸ್ಪಷ್ಟವಾಗಿ ಗೊತ್ತಾಯ್ತು?

6 ಪ್ರವಾದಿ ಆಮೋಸನ ಮೂಲಕ ಯೆಹೋವ “ದಾವೀದನ ಡೇರೆಯನ್ನ” ಮತ್ತೆ ಕಟ್ಟೋ ಸಮಯ ಬರುತ್ತೆ ಅಂತನೂ ಹೇಳಿದ್ದನು. ಈ ಮಾತುಗಳ ಮೂಲಕ ದಾವೀದನ ವಂಶ ಮತ್ತೆ ಆಳ್ವಿಕೆ ಮಾಡುತ್ತೆ, ಅದೇ ವಂಶದಲ್ಲಿ ಮೆಸ್ಸೀಯ ಬಂದು ಆಳ್ತಾನೆ ಅಂತ ಹೇಳಿದನು. (ಯೆಹೆ. 21:26, 27) ಯೆಹೋವ ದೇವರು ಮತ್ತೆ ಇನ್ನೊಂದು ಸಲ ಯೆಹೂದ್ಯರನ್ನ ತನ್ನ ಜನಾಂಗವಾಗಿ ಆರಿಸ್ಕೊಳ್ತಾರೆ ಅಂತ ಇದ್ರ ಅರ್ಥನಾ? ಇಲ್ಲ. ಆ ಭವಿಷ್ಯವಾಣಿಯಲ್ಲಿ ‘ಎಲ್ಲ ದೇಶಗಳಲ್ಲಿರೋ ಜನ್ರನ್ನ ಜೊತೆ ಸೇರಿಸಲಾಗುತ್ತೆ. ಯೆಹೋವ ದೇವ್ರ ಹೆಸ್ರನ್ನ ಆ ಜನ ಹಾಡಿ ಹೊಗಳ್ತಾರೆ’ ಅಂತಾನೂ ಇದೆ. ಯಾಕೋಬ ಮಾತಾಡೋ ಮುಂಚೆ ಪೇತ್ರ ಏನು ಹೇಳಿದ್ದ ಅಂತ ನಿಮಗೆ ನೆನಪಿದ್ಯಾ? ದೇವರು “ನಮ್ಗೂ [ಯೆಹೂದಿ ಕ್ರೈಸ್ತರಿಗೂ] ಅವ್ರಿಗೂ [ಬೇರೆ ಜನಾಂಗಗಳ ಕ್ರೈಸ್ತರಿಗೂ] ಯಾವುದೇ ಭೇದಭಾವ ಮಾಡಲಿಲ್ಲ. ಅವ್ರ ನಂಬಿಕೆ ನೋಡಿ ಅವ್ರ ಪಾಪಗಳನ್ನ ಕ್ಷಮಿಸಿ ಅವ್ರ ಹೃದಯಗಳನ್ನ ಶುದ್ಧಮಾಡಿದನು” ಅಂತ ಹೇಳಿದ್ದ. (ಅ. ಕಾ. 15:9) ಇನ್ನೊಂದು ಮಾತಲ್ಲಿ ಹೇಳೋದಾದ್ರೆ, ಯೆಹೂದ್ಯರನ್ನ ಮತ್ತು ಯೆಹೂದ್ಯರಲ್ಲದ ಕ್ರೈಸ್ತರನ್ನ ದೇವರ ಆಳ್ವಿಕೆಯ ವಾರಸುದಾರರಾಗಿ ಮಾಡೋದು ದೇವರ ಇಷ್ಟ ಅನ್ನೋದೇ ಅದ್ರ ಅರ್ಥ ಆಗಿತ್ತು. (ರೋಮ. 8:17; ಎಫೆ. 2:17-19) ಹಾಗಾಗಿ ದೇವರ ಪ್ರೇರಣೆಯಿಂದ ಬರೆದ ಈ ಭವಿಷ್ಯವಾಣಿಗಳಲ್ಲಿ ಎಲ್ಲೂ ಯೆಹೂದ್ಯರಲ್ಲದ ಕ್ರೈಸ್ತರು ಸುನ್ನತಿ ಮಾಡಿಸ್ಕೊಬೇಕು ಅಥವಾ ಯೆಹೂದ್ಯರಾಗಿ ಮತಾಂತರ ಆಗಬೇಕು ಅಂತ ಸೂಚಿಸಿಲ್ಲ.

7, 8. (ಎ) ಯಾಕೋಬ ಏನಂತ ಹೇಳಿದ? (ಬಿ) ಯಾಕೋಬ ಅವರ ಮೇಲೆ ಅಧಿಕಾರ ಚಲಾಯಿಸ್ತಾ ಇದ್ದಾನಾ?

7 ಹೀಗೆ ಪವಿತ್ರಗ್ರಂಥದಲ್ಲಿದ್ದ ಇಂಥ ಆಧಾರಗಳಿಂದ ಮತ್ತು ಬೇರೆಯವರು ಕೊಟ್ಟ ಒಳ್ಳೇ ಆಧಾರದಿಂದ ಯಾಕೋಬ ಅಲ್ಲಿದ್ದವರಿಗೆ ಹೀಗೆ ಹೇಳಿದ: “ಹಾಗಾಗಿ ನನ್ನ ಅಭಿಪ್ರಾಯ ಏನಂದ್ರೆ, ದೇವ್ರ ಕಡೆ ತಿರುಗಿ ಬರ್ತಿರೋ ಬೇರೆ ಜನ್ರಿಗೆ ತೊಂದ್ರೆ ಕೊಡೋದು ಬೇಡ. ಆದ್ರೆ ನಾವು ಅವ್ರಿಗೆ ಪತ್ರ ಬರೆದು, ಮೂರ್ತಿಗಳಿಗೆ ಸಂಬಂಧ ಪಟ್ಟ ಎಲ್ಲ ವಿಷ್ಯಗಳಿಂದ ದೂರ ಇರೋಕೆ, ಲೈಂಗಿಕ ಅನೈತಿಕತೆಯ ಬಲೆಗೆ ಬೀಳದೇ ಇರೋಕೆ, ಕತ್ತು ಹಿಸುಕಿ ಕೊಂದ ಪ್ರಾಣಿಯ ಮಾಂಸ ತಿನ್ನದೇ ಇರೋಕೆ ಮತ್ತು ರಕ್ತದಿಂದ ದೂರ ಇರೋಕೆ ಹೇಳೋಣ. ಯಾಕಂದ್ರೆ ತುಂಬ ವರ್ಷಗಳಿಂದ ಮೋಶೆ ಬರೆದ ಪುಸ್ತಕಗಳಲ್ಲಿರೋ ಈ ಆಜ್ಞೆಗಳನ್ನ ಎಲ್ಲ ಊರುಗಳಲ್ಲಿ ಹೇಳ್ತಾ ಇದ್ದಾರೆ. ಪ್ರತಿ ಸಬ್ಬತ್‌ ದಿನ ಆ ಪುಸ್ತಕಗಳಲ್ಲಿರೋ ಮಾತುಗಳನ್ನ ಸಭಾಮಂದಿರಗಳಲ್ಲಿ ಜೋರಾಗಿ ಓದುತ್ತಿದ್ದಾರೆ.”—ಅ. ಕಾ. 15:19-21.

8 ಹಾಗಾದ್ರೆ ಯಾಕೋಬ ಆ ಕೂಟದ ಅಧ್ಯಕ್ಷನಾಗಿ ತನ್ನ ಅಧಿಕಾರವನ್ನ ಅಲ್ಲಿದ್ದ ಸಹೋದರರ ಮೇಲೆ ಚಲಾಯಿಸ್ತಾ, ತನಗೆ ಇಷ್ಟ ಬಂದ ತರ ನಿರ್ಧಾರ ಮಾಡಿದ್ನಾ? ಖಂಡಿತ ಇಲ್ಲ! “ನನ್ನ ಅಭಿಪ್ರಾಯ” ಅಂತ ಹೇಳಿದ ಮಾತು ಅವನು ಇಡೀ ಮಂಡಲಿಯ ಮೇಲೆ ಅಧಿಕಾರ ಚಲಾಯಿಸ್ತಾ ಇರಲಿಲ್ಲ ಅಂತ ತೋರಿಸುತ್ತೆ. ಬದಲಿಗೆ ಬೇರೆಯವರು ಕೊಟ್ಟ ಆಧಾರಗಳನ್ನ ಮತ್ತು ಆ ವಿಷ್ಯದ ಬಗ್ಗೆ ಪವಿತ್ರಗ್ರಂಥ ಹೇಳಿದ ಮಾತುಗಳನ್ನ ಆಧರಿಸಿ ಒಂದು ನಿರ್ಧಾರಕ್ಕೆ ಬನ್ನಿ ಅಂತ ಕೇಳ್ಕೊಂಡಿದ್ದ ತರ ಇತ್ತು!

9. ಯಾಕೋಬ ಹೇಳಿದ ತರ ಮಾಡೋದ್ರಿಂದ ಯಾವೆಲ್ಲ ಪ್ರಯೋಜನ ಆಗ್ತಿತ್ತು?

9 ಯಾಕೋಬ ಹೇಳಿದ್ದು ಸರಿಯಾಗಿತ್ತಾ? ಹೌದು, ಅದಕ್ಕೇ ಅಪೊಸ್ತಲರು ಮತ್ತು ಹಿರಿಯರು ಅದನ್ನ ಒಪ್ಕೊಂಡ್ರು. ಯಾಕೋಬ ಹೇಳಿದ ತರ ಮಾಡೋದ್ರಿಂದ ಯಾವ ಪ್ರಯೋಜನ ಆಗ್ತಿತ್ತು? ಒಂದು, ಯೆಹೂದ್ಯರಲ್ಲದ ಕ್ರೈಸ್ತರ ಮೇಲೆ ಮೋಶೆಯ ನಿಯಮ ಪುಸ್ತಕದ ನಿಯಮಗಳನ್ನ ಬಲವಂತವಾಗಿ ಹೇರಿ ಅವ್ರಿಗೆ “ತೊಂದ್ರೆ” ಕೊಡೋದನ್ನ ತಪ್ಪಿಸಬಹುದಿತ್ತು. (ಅ. ಕಾ. 15:19) ಎರಡು, ‘ಪ್ರತಿ ಸಬ್ಬತ್‌ ದಿನ ಮೋಶೆ ಬರೆದ ಪುಸ್ತಕಗಳಲ್ಲಿರೋ ಮಾತುಗಳನ್ನ ಸಭಾಮಂದಿರಗಳಲ್ಲಿ ಜೋರಾಗಿ ಓದೋದನ್ನ’ ಎಷ್ಟೋ ವರ್ಷಗಳಿಂದ ಕೇಳಿಸ್ಕೊಂಡಿದ್ದ ಯೆಹೂದಿ ಕ್ರೈಸ್ತರ ಮನಸ್ಸಾಕ್ಷಿಯನ್ನ ಗೌರವಿಸಿದ ಹಾಗೆನೂ ಆಗ್ತಿತ್ತು. b (ಅ. ಕಾ. 15:21) ಹಾಗಾಗಿ ಈ ತೀರ್ಮಾನದಿಂದ ಯೆಹೂದಿ ಮತ್ತು ಯೆಹೂದ್ಯರಲ್ಲದ ಕ್ರೈಸ್ತರ ಮಧ್ಯೆ ಬಾಂಧವ್ಯ ಇನ್ನೂ ಗಟ್ಟಿ ಆಯ್ತು. ಎಲ್ಲದಕ್ಕಿಂತ ಮುಖ್ಯವಾಗಿ ಯೆಹೋವ ದೇವರಿಗೆ ಇದ್ರಿಂದ ತುಂಬ ಸಂತೋಷ ಆಯ್ತು. ಯಾಕಂದ್ರೆ ಅದು ಆತನ ಇಷ್ಟಕ್ಕೆ ಹೊಂದಿಕೆಯಲ್ಲಿತ್ತು. ದೇವಜನರ ಇಡೀ ಸಭೆಯ ಒಗ್ಗಟ್ಟನ್ನ ಮುರಿದುಹಾಕೋ ಒಂದು ಸಮಸ್ಯೆಯನ್ನ ಅವರು ಎಷ್ಟು ಚೆನ್ನಾಗಿ ಬಗೆಹರಿಸಿದ್ರು ಅಲ್ವಾ? ಇವತ್ತಿರೋ ಕ್ರೈಸ್ತ ಸಭೆಗೂ ಇದೊಂದು ಒಳ್ಳೇ ಮಾದರಿ!

1998ರಲ್ಲಿ ಒಂದು ಅಂತರಾಷ್ಟ್ರೀಯ ಅಧಿವೇಶನದಲ್ಲಿ ಮಾತಾಡ್ತಿರೋ ಸಹೋದರ ಆಲ್ಬರ್ಟ್‌ ಶ್ರೋಡರ್‌

10. ಇವತ್ತಿರೋ ಆಡಳಿತ ಮಂಡಲಿ ಒಂದನೇ ಶತಮಾನದ ಆಡಳಿತ ಮಂಡಲಿ ತರ ಏನು ಮಾಡುತ್ತೆ?

10 ಹಿಂದಿನ ಅಧ್ಯಾಯದಲ್ಲಿ ನೋಡಿದ ಹಾಗೆ, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಒಂದನೇ ಶತಮಾನದಲ್ಲಿದ್ದ ಆಡಳಿತ ಮಂಡಲಿ ತರಾನೇ ಎಲ್ಲ ವಿಷ್ಯದಲ್ಲೂ ವಿಶ್ವದ ರಾಜನಾಗಿರೋ ಯೆಹೋವ ಮತ್ತು ಕ್ರೈಸ್ತ ಸಭೆಯ ಯಜಮಾನನಾದ ಯೇಸು ಕ್ರಿಸ್ತನ ನಿರ್ದೇಶನವನ್ನ ಪಡೆಯುತ್ತೆ. c (1 ಕೊರಿಂ. 11:3) ಹೇಗೆ? 1974ರಿಂದ ತನ್ನ ಭೂಜೀವನ ಮುಗಿಸೋ ತನಕ ಅಂದ್ರೆ ಮಾರ್ಚ್‌ 2006ರ ತನಕ ಆಡಳಿತ ಮಂಡಲಿಯ ಸದಸ್ಯರಾಗಿದ್ದ ಆಲ್ಬರ್ಟ್‌ ಶ್ರೋಡರ್‌ ಹೀಗೆ ಹೇಳಿದ್ರು: “ಆಡಳಿತ ಮಂಡಲಿ ಬುಧವಾರ ಒಂದು ಕೂಟಕ್ಕಾಗಿ ಸೇರಿಬರುತ್ತೆ. ಪ್ರತಿ ಸಲ ಕೂಟ ಶುರುಮಾಡೋ ಮುಂಚೆ ಪ್ರಾರ್ಥನೆ ಮಾಡಿ ಯೆಹೋವನ ಪವಿತ್ರಶಕ್ತಿಯ ಮಾರ್ಗದರ್ಶನಕ್ಕಾಗಿ ಬೇಡ್ಕೊಳ್ತೀವಿ. ಏನೇ ಮಾಡಿದ್ರೂ ಯಾವುದೇ ನಿರ್ಧಾರ ತಗೊಂಡ್ರೂ ಅದು ದೇವರ ವಾಕ್ಯವಾದ ಬೈಬಲಿಗೆ ತಕ್ಕ ಹಾಗೆ ಇರೋ ತರ ನೋಡ್ಕೊಳ್ತೀವಿ.” ಇದೇ ರೀತಿಯ ಮಾತುಗಳನ್ನ ಮಿಲ್ಟನ್‌ ಜಿ. ಹೆನ್ಷಲ್‌ ಹೇಳಿದ್ರು. ಇವರು ತುಂಬ ವರ್ಷಗಳ ತನಕ ಆಡಳಿತ ಮಂಡಲಿಯ ಸದಸ್ಯರಾಗಿದ್ರು. 2003ರ ಮಾರ್ಚ್‌ನಲ್ಲಿ ತಮ್ಮ ಭೂಜೀವನ ಮುಗಿಸಿದ್ರು. ಇವರು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 101ನೇ ತರಗತಿಯ ಪದವಿಪ್ರಧಾನ ಮಾಡ್ತಿದ್ದಾಗ, “ಮುಖ್ಯವಾದ ತೀರ್ಮಾನಗಳನ್ನ ಮಾಡೋ ಮುಂಚೆ ದೇವರ ವಾಕ್ಯವಾದ ಬೈಬಲನ್ನ ಪರಿಶೀಲಿಸಿ ನೋಡೋ ಆಡಳಿತ ಮಂಡಲಿ ಇರೋ ಬೇರೆ ಯಾವುದಾದ್ರೂ ಸಂಘಟನೆ ನಿಮಗೆ ಗೊತ್ತಾ?” ಅಂತ ಕೇಳಿದ್ರು. ಯೆಹೋವನ ಸಂಘಟನೆ ಬಿಟ್ಟು ಬೇರೆ ಯಾವುದೂ ಇಲ್ಲ ಅಂತ ನಮಗೆ ಚೆನ್ನಾಗಿ ಗೊತ್ತು!

‘ಸಹೋದರರನ್ನ ಆರಿಸ್ಕೊಂಡು ಕಳಿಸಿದ್ರು’ (ಅ. ಕಾ. 15:22-29)

11. ಆಡಳಿತ ಮಂಡಲಿಯ ತೀರ್ಮಾನವನ್ನ ಎಲ್ಲಾ ಸಭೆಗಳಿಗೆ ಹೇಗೆ ತಿಳಿಸಿದ್ರು?

11 ಸುನ್ನತಿಯ ವಿವಾದದ ಬಗ್ಗೆ ಆಡಳಿತ ಮಂಡಲಿಯಲ್ಲಿದ್ದ ಎಲ್ಲರೂ ಸೇರಿ ಒಂದು ತೀರ್ಮಾನಕ್ಕೆ ಬಂದಿದ್ರು. ಆ ತೀರ್ಮಾನವನ್ನ ಸ್ಪಷ್ಟವಾಗಿ, ಚೆನ್ನಾಗಿ, ಪ್ರೋತ್ಸಾಹ ಕೊಡೋ ರೀತಿಯಲ್ಲಿ ಹೇಳಿದ್ರೆ ಸಭೆಗಳಲ್ಲಿದ್ದ ಎಲ್ಲಾ ಸಹೋದರ ಸಹೋದರಿಯರು ಒಗ್ಗಟ್ಟಾಗಿ ಇರ್ತಾರೆ ಅಂತ ಅವ್ರಿಗೆ ಗೊತ್ತಿತ್ತು. ಅದಕ್ಕೆ ಅವರು ಏನು ಮಾಡಿದ್ರು? “ಅಪೊಸ್ತಲರು, ಹಿರಿಯರು ಮತ್ತು ಸಭೆಯಲ್ಲಿದ್ದ ಎಲ್ಲ ಸಹೋದರರು ಸೇರಿ ಒಂದು ನಿರ್ಣಯಕ್ಕೆ ಬಂದ್ರು. ಅವರು ಇಬ್ರು ಸಹೋದರರನ್ನ ಆರಿಸ್ಕೊಂಡು ಪೌಲ ಬಾರ್ನಬನ ಜೊತೆ ಅಂತಿಯೋಕ್ಯಕ್ಕೆ ಕಳಿಸಬೇಕು ಅಂದ್ಕೊಂಡ್ರು. ಹಾಗಾಗಿ ಮೇಲ್ವಿಚಾರಕರಾಗಿದ್ದ ಯೂದ (ಬಾರ್ಸಬ) ಮತ್ತು ಸೀಲನನ್ನ ಆರಿಸ್ಕೊಂಡ್ರು.” ಜೊತೆಗೆ ಅವರ ಹತ್ರ ಅಂತಿಯೋಕ್ಯ, ಸಿರಿಯ ಮತ್ತು ಕಿಲಿಕ್ಯದಲ್ಲಿರೋ ಎಲ್ಲಾ ಸಭೆಗಳಿಗೆ ಓದೋಕೆ ಒಂದು ಪತ್ರ ಬರೆದು ಕಳಿಸಿದ್ರು.—ಅ. ಕಾ. 15:22-26.

12, 13. (ಎ) ಆಡಳಿತ ಮಂಡಲಿ ಯೂದ ಮತ್ತು ಸೀಲನನ್ನ ಕಳಿಸಿದ್ರಿಂದ ಏನು ಒಳ್ಳೇದಾಯ್ತು? (ಬಿ) ಪತ್ರ ಕಳಿಸಿದ್ರಿಂದ ಏನು ಒಳ್ಳೇದಾಯ್ತು?

12 “ಮೇಲ್ವಿಚಾರಕರಾಗಿದ್ದ” ಯೂದ ಮತ್ತು ಸೀಲಗೆ ಆಡಳಿತ ಮಂಡಲಿಯ ಪ್ರತಿನಿಧಿಗಳಾಗಿ ಕೆಲಸ ಮಾಡೋ ಅರ್ಹತೆ ಇತ್ತು. ಈ ನಾಲ್ಕು ಸಹೋದರರನ್ನ “ಆರಿಸ್ಕೊಂಡು” ಅವರ ಹತ್ರ ಒಂದು ಪತ್ರ ಕೊಟ್ಟು ಕಳಿಸಿರೋದು ಬರೀ ಪ್ರಶ್ನೆಗೆ ಉತ್ರ ಕೊಡೋಕೆ ಮಾತ್ರ ಅಲ್ಲ, ಬದಲಿಗೆ ಆಡಳಿತ ಮಂಡಲಿಯಿಂದ ಏನೋ ನಿರ್ದೇಶನ ಇದೆ ಅಂತ ಸಭೆಗಳಿಗೆ ಗೊತ್ತಾಯ್ತು. ಪೌಲ, ಬಾರ್ನಬರ ಜೊತೆ ಯೂದ ಮತ್ತು ಸೀಲ ಬಂದಿದ್ದು ಯೆರೂಸಲೇಮಿನಲ್ಲಿದ್ದ ಯೆಹೂದಿ ಕ್ರೈಸ್ತರಿಗೂ ದೂರದಲ್ಲಿರೋ ಬೇರೆ ಜನಾಂಗದ ಕ್ರೈಸ್ತರಿಗೂ ಆಪ್ತ ಬಂಧ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತು. ಈ ರೀತಿ ಕಳಿಸಿದ್ದು ನಿಜಕ್ಕೂ ವಿವೇಕದ ಕೆಲ್ಸ ಆಗಿತ್ತು. ಅಷ್ಟೇ ಅಲ್ಲ, ಇದ್ರಿಂದ ದೇವಜನರ ಮಧ್ಯೆ ಶಾಂತಿ ಮತ್ತು ಒಗ್ಗಟ್ಟು ಜಾಸ್ತಿ ಆಯ್ತು. ಹೀಗೆ ಆಡಳಿತ ಮಂಡಲಿ ತಮ್ಮನ್ನ ತುಂಬಾ ಪ್ರೀತಿಸುತ್ತೆ ಅಂತ ಆ ಸಭೆಗಳ ಸಹೋದರರಿಗೆ ಗೊತ್ತಾಯ್ತು.

13 ಆ ಪತ್ರದಲ್ಲಿ, ಯೆಹೂದ್ಯರಲ್ಲದ ಕ್ರೈಸ್ತರಿಗೆ ಸುನ್ನತಿಯ ವಿವಾದದ ಬಗ್ಗೆ ಮಾರ್ಗದರ್ಶನ ಕೊಡಲಾಗಿತ್ತು. ಅಷ್ಟೇ ಅಲ್ಲ, ಯೆಹೋವ ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಅವರೇನು ಮಾಡಬೇಕಂತನೂ ಇತ್ತು. ಆ ಪತ್ರದಲ್ಲಿದ್ದ ಮುಖ್ಯ ವಿಷ್ಯ ಹೀಗಿತ್ತು: “ತುಂಬ ಪ್ರಾಮುಖ್ಯವಾಗಿರೋ ವಿಷ್ಯಗಳನ್ನ ಬಿಟ್ಟು ಬೇರೆ ಯಾವುದೇ ಭಾರವನ್ನ ನಾವು ನಿಮ್ಮ ಮೇಲೆ ಹಾಕಬಾರದು ಅನ್ನೋ ನಿರ್ಣಯಕ್ಕೆ ಬರೋಕೆ ನಮ್ಗೆ ಪವಿತ್ರಶಕ್ತಿ ಸಹಾಯ ಮಾಡಿತು. ಮೂರ್ತಿಗಳಿಗೆ ಬಲಿ ಕೊಟ್ಟಿದ್ದನ್ನ, ಕತ್ತು ಹಿಸುಕಿ ಕೊಂದ ಮಾಂಸವನ್ನ ತಿನ್ನಬೇಡಿ. ರಕ್ತದಿಂದ ದೂರ ಇರಿ. ಲೈಂಗಿಕ ಅನೈತಿಕತೆಯ ಬಲೆಗೆ ಬೀಳಬೇಡಿ. ಈ ಎಲ್ಲ ವಿಷ್ಯಗಳಿಂದ ನೀವು ದೂರ ಇದ್ರೆ ನಿಮ್ಮ ಜೀವನ ಚೆನ್ನಾಗಿರುತ್ತೆ. ನಿಮಗೆ ಒಳ್ಳೇ ಆರೋಗ್ಯ ಇರಲಿ!”—ಅ. ಕಾ. 15:28, 29.

14. ಒಗ್ಗಟ್ಟೇ ಇಲ್ಲದಿರೋ ಈ ಲೋಕದಲ್ಲಿ ಯೆಹೋವನ ಜನ್ರು ಒಗ್ಗಟ್ಟಾಗಿ ಇರೋಕೆ ಕಾರಣ ಏನು?

14 ಇವತ್ತು ಇಡೀ ಲೋಕದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಸಭೆಗಳಲ್ಲಿ 80 ಲಕ್ಷಕ್ಕಿಂತ ಜಾಸ್ತಿ ಯೆಹೋವನ ಸಾಕ್ಷಿಗಳಿದ್ದಾರೆ. ಅವರೆಲ್ಲರ ನಂಬಿಕೆಗಳು ಒಂದೇ, ಅಷ್ಟೇ ಅಲ್ಲ ಅವರು ನಡ್ಕೊಳ್ಳೋ ರೀತಿನೂ ಒಂದೇ. ಇವತ್ತು ಲೋಕದಲ್ಲಿ ಒಬ್ಬೊಬ್ರು ಒಂದೊಂದು ತರ ಯೋಚ್ನೆ ಮಾಡ್ತಾರೆ. ಹಾಗಾಗಿ ಗಲಿಬಿಲಿ, ಗೊಂದಲನೇ ಜಾಸ್ತಿ. ಹಾಗಿರುವಾಗ ಯೆಹೋವನ ಸಾಕ್ಷಿಗಳು ಒಗ್ಗಟ್ಟಾಗಿರೋಕೆ ಏನು ಕಾರಣ? ಇದಕ್ಕೆ ಮುಖ್ಯ ಕಾರಣ, ಸಭೆಯ ಯಜಮಾನನಾಗಿರೋ ಯೇಸು ಕ್ರಿಸ್ತ ‘ನಂಬಿಗಸ್ತ, ವಿವೇಕಿ ಆದ ಆಳಿನ’ ಅಂದ್ರೆ ಆಡಳಿತ ಮಂಡಲಿಯ ಮೂಲಕ ಕೊಡೋ ಸ್ಪಷ್ಟ ನಿರ್ದೇಶನ ಮತ್ತು ಮಾರ್ಗದರ್ಶನಗಳೇ. (ಮತ್ತಾ. 24:45-47) ಇನ್ನೊಂದು ಕಾರಣ, ಆಡಳಿತ ಮಂಡಲಿ ಕೊಡೋ ಮಾರ್ಗದರ್ಶನಕ್ಕೆ ಲೋಕದಲ್ಲಿ ಎಲ್ಲಾ ಕಡೆ ಇರೋ ಸಹೋದರ ಸಹೋದರಿಯರು ಮನಸಾರೆ ಕೊಡ್ತಿರೋ ಸಹಕಾರ.

“ಪ್ರೋತ್ಸಾಹದ ಮಾತುಗಳನ್ನ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು” (ಅ. ಕಾ. 15:30-35)

15, 16. (ಎ) ಸುನ್ನತಿಯ ವಿವಾದದ ಬಗ್ಗೆ ತಗೊಂಡ ತೀರ್ಮಾನವನ್ನ ಸಭೆಗಳಿಗೆ ಹೇಳಿದಾಗ ಏನಾಯ್ತು? (ಬಿ) ಆ ವಿವಾದ ಚೆನ್ನಾಗಿ ಬಗೆಹರಿಸಿದ್ದಕ್ಕೆ ಕಾರಣ ಏನು?

15 ಆಡಳಿತ ಮಂಡಲಿ ಕಳಿಸಿದ ಸಹೋದರರು ಯೆರೂಸಲೇಮಿಂದ ಅಂತಿಯೋಕ್ಯಕ್ಕೆ ಬಂದಾಗ, “ಅಲ್ಲಿದ್ದ ಶಿಷ್ಯರನ್ನೆಲ್ಲ ಒಂದು ಜಾಗದಲ್ಲಿ ಸೇರಿಸಿ ಆ ಪತ್ರವನ್ನ ಅವ್ರಿಗೆ ಕೊಟ್ರು” ಅಂತ ಅಪೊಸ್ತಲರ ಕಾರ್ಯ ಪುಸ್ತಕ ಹೇಳುತ್ತೆ. ಆಡಳಿತ ಮಂಡಲಿ ಕೊಟ್ಟ ನಿರ್ದೇಶನಕ್ಕೆ ಅಲ್ಲಿನ ಸಹೋದರರು ಹೇಗೆ ಪ್ರತಿಕ್ರಿಯಿಸಿದ್ರು? “ಅದನ್ನ ಓದಿದ ಮೇಲೆ ಅದ್ರಲ್ಲಿದ್ದ ಪ್ರೋತ್ಸಾಹದ ಮಾತುಗಳನ್ನ ನೋಡಿ ಅವ್ರಿಗೆ ತುಂಬ ಖುಷಿ ಆಯ್ತು.” (ಅ. ಕಾ. 15:30, 31) ಅಷ್ಟೇ ಅಲ್ಲ ಯೂದ ಮತ್ತು ಸೀಲ “ತುಂಬ ಭಾಷಣಗಳನ್ನ ಕೊಟ್ಟು ಸಹೋದರರನ್ನ ಪ್ರೋತ್ಸಾಹಿಸಿದ್ರು, ಬಲಪಡಿಸಿದ್ರು.” ಹಾಗಾಗಿ ಬಾರ್ನಬ, ಪೌಲ ಮತ್ತು ಬೇರೆಯವರ ತರ ಈ ಇಬ್ರು ಸಹೋದರರೂ ಒಂದರ್ಥದಲ್ಲಿ ‘ಪ್ರವಾದಿಗಳಾಗಿದ್ರು.’ ಪ್ರವಾದಿ ಅನ್ನೋ ಪದದ ಅರ್ಥ ದೇವರ ಇಷ್ಟವನ್ನ ಬೇರೆಯವ್ರಿಗೆ ತಿಳಿಸುವವನು ಅಂತಾಗಿದೆ.—ಅ. ಕಾ. 13:1; 15:32; ವಿಮೋ. 7:1, 2.

16 ಆಡಳಿತ ಮಂಡಲಿ ಸುನ್ನತಿಯ ವಿವಾದವನ್ನ ಚೆನ್ನಾಗಿ ಬಗೆಹರಿಸ್ತು. ಅದಕ್ಕೋಸ್ಕರ ಅವರು ಮಾಡಿದ ಎಲ್ಲಾ ಏರ್ಪಾಡಿನ ಮೇಲೆ ಯೆಹೋವನ ಆಶೀರ್ವಾದ ಇತ್ತು. ಯಾಕಂದ್ರೆ ಆಡಳಿತ ಮಂಡಲಿ ದೇವರ ವಾಕ್ಯ ಮತ್ತು ಪವಿತ್ರಶಕ್ತಿಯ ಸಹಾಯದಿಂದ ತಕ್ಕ ಸಮಯಕ್ಕೆ ಸ್ಪಷ್ಟವಾದ ಮಾರ್ಗದರ್ಶನ ಕೊಡ್ತು. ಅಷ್ಟೇ ಅಲ್ಲ, ಪ್ರೀತಿಯಿಂದ ವೈಯಕ್ತಿಕವಾಗಿ ಎಲ್ಲಾ ಸಭೆಗಳಿಗೆ ಹೋಗಿ ಆ ತೀರ್ಮಾನವನ್ನ ತಿಳಿಸೋಕೆ ಏರ್ಪಾಡು ಮಾಡ್ತು.

17. ಒಂದನೇ ಶತಮಾನದ ಮಾದರಿಯನ್ನ ಇವತ್ತು ಸಂಚರಣ ಮೇಲ್ವಿಚಾರಕರು ಹೇಗೆ ಅನುಕರಿಸ್ತಾರೆ?

17 ಇದೇ ತರ ಇವತ್ತಿರೋ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಕೂಡ ಲೋಕದಲ್ಲಿರೋ ಎಲ್ಲಾ ಸಹೋದರ ಸಹೋದರಿಯರಿಗೆ ತಕ್ಕ ಸಮಯಕ್ಕೆ ಮಾರ್ಗದರ್ಶನ ಕೊಡ್ತಿದೆ. ಹೊಸ ನಿರ್ದೇಶನಗಳನ್ನ ಸಭೆಗಳಿಗೆ ನೇರವಾಗಿ, ಸ್ಪಷ್ಟವಾಗಿ ತಿಳಿಸುತ್ತೆ. ಹೇಗೆ? ಒಂದು ವಿಧಾನ, ಸಂಚರಣ ಮೇಲ್ವಿಚಾರಕರ ಮೂಲಕ ತಿಳಿಸುತ್ತೆ. ಈ ಸಹೋದರರು ಏನು ಬೇಕಾದ್ರೂ ತ್ಯಾಗ ಮಾಡೋ ಮನಸ್ಸು ಇರೋರು. ಅವರು ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗಿ ನಿರ್ದೇಶನಗಳನ್ನ ಸ್ಪಷ್ಟವಾಗಿ, ಪ್ರೀತಿಯಿಂದ ತಿಳಿಸ್ತಾರೆ, ಬೇಕಾದ ಪ್ರೋತ್ಸಾಹನೂ ಕೊಡ್ತಾರೆ. ಅವರು ಪೌಲ ಮತ್ತು ಬಾರ್ನಬರ ತರ “ತುಂಬ ಸಹೋದರರ ಜೊತೆ ಸೇರಿ ಯೆಹೋವನ ಸಂದೇಶವನ್ನ ಅಂದ್ರೆ ಸಿಹಿಸುದ್ದಿಯನ್ನ ಸಾರ್ತಾ, ಕಲಿಸ್ತಾ” ಸೇವೆಯಲ್ಲೇ ತುಂಬ ಸಮಯ ಕಳೀತಾರೆ. (ಅ. ಕಾ. 15:35) ಅವರು ಯೂದ ಮತ್ತು ಸೀಲ ತರ ‘ಭಾಷಣಗಳನ್ನ ಕೊಟ್ಟು ಸಹೋದರರನ್ನ ಪ್ರೋತ್ಸಾಹಿಸ್ತಾರೆ, ಬಲಪಡಿಸ್ತಾರೆ.’

18. ಯೆಹೋವನ ಆಶೀರ್ವಾದ ಸಿಗ್ತಾ ಇರಬೇಕಂದ್ರೆ ದೇವಜನರು ಏನು ಮಾಡಬೇಕು?

18 ಎಲ್ಲಾ ಸಭೆಗಳು ಶಾಂತಿ-ಸಾಮರಸ್ಯದಿಂದ, ಸಂತೋಷದಿಂದ, ಒಗ್ಗಟಿಂದ ಇರೋಕೆ ಯಾವುದು ಸಹಾಯ ಮಾಡುತ್ತೆ? ಶಿಷ್ಯ ಯಾಕೋಬ ಏನು ಬರೆದ ಅಂತ ನೆನಪಿಸ್ಕೊಳ್ಳಿ: “ಸ್ವರ್ಗದಿಂದ ಬರೋ ವಿವೇಕ ಮೊದ್ಲು ಒಬ್ಬ ವ್ಯಕ್ತಿಗೆ ಶುದ್ಧ ಮನಸ್ಸನ್ನ ಕೊಡುತ್ತೆ. ಆಮೇಲೆ ಸಮಾಧಾನವಾಗಿ ಇರೋಕೆ ಕಲಿಸುತ್ತೆ, ನಾನು ಹೇಳಿದ್ದೇ ನಡಿಬೇಕು ಅನ್ನೋ ಸ್ವಭಾವವನ್ನ ತೆಗೆದುಹಾಕುತ್ತೆ, ಮಾತು ಕೇಳೋ ಮನಸ್ಸನ್ನ ಕೊಡುತ್ತೆ . . . ಎಲ್ರ ಜೊತೆ ಸಮಾಧಾನವಾಗಿ ಇರುವವರು ಶಾಂತಿ ಕಾಪಾಡ್ಕೊಳ್ತಾರೆ. ಇದ್ರಿಂದ ಅವರು ಮಾಡೋ ಕೆಲಸಗಳೆಲ್ಲ ಸರಿಯಾಗಿ ಇರುತ್ತೆ.” (ಯಾಕೋ. 3:17, 18) ಇದನ್ನ ಯಾಕೋಬ ಯೆರೂಸಲೇಮಲ್ಲಿ ನಡೆದ ಆ ಕೂಟದ ಬಗ್ಗೆ ಯೋಚಿಸ್ತಾ ಬರೆದ್ನಾ? ಅದು ನಮಗೆ ಗೊತ್ತಿಲ್ಲ. ಆದ್ರೆ ಅಪೊಸ್ತಲರ ಕಾರ್ಯ 15ನೇ ಅಧ್ಯಾಯದಲ್ಲಿರೋ ಆ ಘಟನೆಯಿಂದ ಸಹೋದರರ ಮಧ್ಯೆ ಒಗ್ಗಟ್ಟು ಇದ್ರೆ, ಮೇಲ್ವಿಚಾರಕರು ಕೊಡೋ ನಿರ್ದೇಶನಗಳನ್ನ ಪಾಲಿಸಿದ್ರೆ ಮಾತ್ರ ಯೆಹೋವನ ಆಶೀರ್ವಾದ ಇರುತ್ತೆ ಅಂತ ನಮಗೆ ಚೆನ್ನಾಗಿ ಗೊತ್ತು.

19, 20. (ಎ) ಅಂತಿಯೋಕ್ಯದಲ್ಲಿ ಶಾಂತಿ, ಒಗ್ಗಟ್ಟು ಇತ್ತು ಅಂತ ಹೇಗೆ ಗೊತ್ತಾಗುತ್ತೆ? (ಬಿ) ಇದೆಲ್ಲ ಆದ್ಮೇಲೆ ಪೌಲ ಮತ್ತು ಬಾರ್ನಬ ಏನು ಮಾಡಕ್ಕಾಯ್ತು?

19 ಅಂತಿಯೋಕ್ಯ ಸಭೆಯಲ್ಲಿ ಶಾಂತಿ, ಒಗ್ಗಟ್ಟು ಇತ್ತು ಅಂತ ಸ್ಪಷ್ಟವಾಗಿ ಕಾಣಿಸ್ತಿತ್ತು. ಅಂತಿಯೋಕ್ಯದ ಸಹೋದರರು ಯೆರೂಸಲೇಮಿನ ಸಹೋದರರ ಜೊತೆ ಇದ್ರ ಬಗ್ಗೆ ವಾದ ಮಾಡಲಿಲ್ಲ. ಬದಲಿಗೆ, ಯೂದ ಮತ್ತು ಸೀಲ ಭೇಟಿ ಮಾಡಿದಾಗ ಅದಕ್ಕೆ ತುಂಬ ಬೆಲೆ ಕೊಟ್ರು. ಇದನ್ನ ನಾವು ಹೇಗೆ ಹೇಳಬಹುದು? “ಸ್ವಲ್ಪ ದಿನ ಆದಮೇಲೆ ಸಹೋದರರು ಅವ್ರನ್ನ ಕಳಿಸ್ಕೊಟ್ರು” ಅಂದ್ರೆ ಅವರು ಸ್ವಲ್ಪ ದಿನ ಇದ್ದು ಆಮೇಲೆ ಯೆರೂಸಲೇಮಿಗೆ ವಾಪಸ್‌ ಹೋದ್ರು. d (ಅ. ಕಾ. 15:33) ಹೋದ್ಮೇಲೆ ಈ ಇಬ್ರು ಸಹೋದರರು ಯೆರೂಸಲೇಮಲ್ಲಿದ್ದ ಸಹೋದರರಿಗೆ ಏನೇನಾಯ್ತು ಅಂತ ವಿವರಿಸಿದಾಗ ಅವ್ರಿಗೆ ಖಂಡಿತ ಸಂತೋಷ ಆಗಿರಬೇಕು. ಸುನ್ನತಿಯ ವಿವಾದ ಈ ರೀತಿ ಬಗೆಹರಿದಿದ್ದಕ್ಕೆ ಯೆಹೋವನಿಗೆ ಸ್ತುತಿ ಮಹಿಮೆ ಸಲ್ಲಬೇಕು!

20 ಅಂತಿಯೋಕ್ಯದಲ್ಲೇ ಉಳ್ಕೊಂಡ ಪೌಲ ಮತ್ತು ಬಾರ್ನಬ ಇದಾದ ಮೇಲೆ ಸಾರೋ ಕೆಲಸದಲ್ಲಿ ಮುಂದಾಳತ್ವ ವಹಿಸೋದರ ಕಡೆಗೆ ಪೂರ್ತಿ ಗಮನ ಕೊಟ್ರು. ಇವತ್ತು ಸಂಚರಣ ಮೇಲ್ವಿಚಾರಕರು ತಮಗೆ ನೇಮಿಸಲಾದ ಸಭೆಗಳನ್ನ ಭೇಟಿ ಮಾಡುವಾಗ್ಲೂ ಇದನ್ನೇ ಮಾಡ್ತಾರೆ. (ಅ. ಕಾ. 13:2, 3) ಇದು ಯೆಹೋವನ ಜನ್ರಿಗೆ ಸಿಕ್ಕಿದ ಆಶೀರ್ವಾದ ಅಂತ ಹೇಳಬಹುದು! ಪೌಲ ಮತ್ತು ಬಾರ್ನಬನನ್ನ ಮುಂದಕ್ಕೆ ಯೆಹೋವ ಹೇಗೆಲ್ಲಾ ಉಪಯೋಗಿಸ್ಕೊಂಡನು ಮತ್ತು ಆಶೀರ್ವದಿಸಿದನು ಅಂತ ಮುಂದಿನ ಅಧ್ಯಾಯದಲ್ಲಿ ನೋಡೋಣ.

ಇವತ್ತು ಆಡಳಿತ ಮಂಡಲಿ ಮತ್ತು ಅದರ ಪ್ರತಿನಿಧಿಗಳು ಕೊಡ್ತಿರೋ ನಿರ್ದೇಶನಗಳಿಂದ ಕ್ರೈಸ್ತರು ಪ್ರಯೋಜನ ಪಡೀತಿದ್ದಾರೆ

a ಪ್ರಭುವಿನ ತಮ್ಮ ಯಾಕೋಬ” ಅನ್ನೋ ಚೌಕ ನೋಡಿ.

b ಯಾಕೋಬ ಮಾತಾಡುವಾಗ ಮೋಶೆ ಬರೆದ ಪುಸ್ತಕಗಳ ಬಗ್ಗೆ ಸೇರಿಸ್ಕೊಂಡಿದ್ದು ತುಂಬ ಒಳ್ಳೇದಾಯ್ತು. ಅದ್ರಲ್ಲಿ ನಿಯಮಗಳಷ್ಟೇ ಅಲ್ಲ, ನಿಯಮ ಪುಸ್ತಕವನ್ನ ಕೊಡೋದಕ್ಕೂ ಮುಂಚೆ ದೇವರು ಮನುಷ್ಯರ ಜೊತೆ ನಡ್ಕೊಂಡ ರೀತಿ ಬಗ್ಗೆನೂ ಇತ್ತು. ಆತನ ಇಷ್ಟದ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡೋ ಎಷ್ಟೋ ಘಟನೆಗಳ ಬಗ್ಗೆನೂ ಇತ್ತು. ಉದಾಹರಣೆಗೆ ರಕ್ತ, ಲೈಂಗಿಕ ಅನೈತಿಕತೆ, ಮೂರ್ತಿಪೂಜೆ ದೇವರಿಗೆ ಸ್ವಲ್ಪನೂ ಇಷ್ಟ ಆಗಲ್ಲ ಅನ್ನೋದು ಆದಿಕಾಂಡ ಪುಸ್ತಕದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತೆ. (ಆದಿ. 9:3, 4; 20:2-9; 35:2, 4) ಹೀಗೆ ಯೆಹೋವ ಎಲ್ಲಾ ಮನುಷ್ಯರಿಗೆ, ಯೆಹೂದ್ಯರಿಗೆ ಯೆಹೂದ್ಯರಲ್ಲದ ಜನ್ರಿಗೆ ಅನ್ವಯಿಸೋ ತತ್ವಗಳನ್ನ ಕೊಟ್ಟಿದ್ದನು.

d ಕೆಲವು ಬೈಬಲ್‌ ಭಾಷಾಂತರಗಳಲ್ಲಿ 34ನೇ ವಚನ, ಸೀಲ ಅಲ್ಲೇ ಇರೋಕೆ ತೀರ್ಮಾನ ಮಾಡಿದ ಅಂತ ಹೇಳುತ್ತೆ. (ಪವಿತ್ರ ಗ್ರಂಥ ಭಾಷಾಂತರ) ಆದ್ರೆ ಈ ವಚನವನ್ನ ಆಮೇಲೆ ಸೇರಿಸಿರಬೇಕು ಅಂತ ಅನ್ಸುತ್ತೆ.