ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 1

ಪರದೈಸ್‌—ದೇವರು ಕೊಟ್ಟ ಉದ್ಯಾನವನ

ಪರದೈಸ್‌—ದೇವರು ಕೊಟ್ಟ ಉದ್ಯಾನವನ

ದೇವರು ಆಕಾಶ-ಭೂಮಿ ಮತ್ತು ಜೀವಿಗಳನ್ನು ಉಂಟುಮಾಡುತ್ತಾನೆ. ಪರಿಪೂರ್ಣರಾಗಿದ್ದ ಪುರುಷ ಮತ್ತು ಸ್ತ್ರೀಯನ್ನು ಆತನು ಸೃಷ್ಟಿಸುತ್ತಾನೆ. ಅವರನ್ನು ಒಂದು ಸುಂದರ ಉದ್ಯಾನವನ ಅಥವಾ ತೋಟದಲ್ಲಿಟ್ಟು ತನ್ನ ಆಜ್ಞೆಗಳಿಗೆ ಸದಾ ವಿಧೇಯರಾಗಿರುವಂತೆ ಹೇಳುತ್ತಾನೆ

“ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು.” ಬೈಬಲಿನಲ್ಲಿರುವ ಈ ಆರಂಭದ ಮಾತು ಬಹಳ ಜನಪ್ರಿಯವಾಗಿದೆ. (ಆದಿಕಾಂಡ 1:1) ಈ ಸರಳ ಸುಂದರ ವಾಕ್ಯವು, ಬೈಬಲ್‌ ಯಾರನ್ನು ಮಹೋನ್ನತನೆಂದು ವರ್ಣಿಸುತ್ತದೋ ಆ ಸರ್ವಶಕ್ತ ದೇವರಾದ ಯೆಹೋವನನ್ನು ನಮಗೆ ಪರಿಚಯಪಡಿಸುತ್ತದೆ. ಈ ವಚನವು, ವಿಶಾಲವಾದ ವಿಶ್ವದ ಸೃಷ್ಟಿಕರ್ತನು ದೇವರೇ ಆಗಿದ್ದಾನೆ ಎಂಬ ಸತ್ಯವನ್ನು ನಮ್ಮ ಮುಂದೆ ಬಿಚ್ಚಿಡುತ್ತದೆ. ಅನಂತರದ ವಚನಗಳು, ದೇವರು ನಮ್ಮ ಸುತ್ತಮುತ್ತಲಿರುವ ಅದ್ಭುತ ಪ್ರಕೃತಿಯನ್ನು ಹೇಗೆ ಸೃಷ್ಟಿಸಿದನು ಎಂಬುದನ್ನು ವಿವರಿಸುತ್ತವೆ. ಮನುಷ್ಯರು ವಾಸಿಸಲು ಯೋಗ್ಯವಾಗುವಂತೆ ಈ ಭೂಗ್ರಹವನ್ನು ಸಿದ್ಧಪಡಿಸಲು ದೇವರು ಹಲವಾರು ‘ದಿನ’ಗಳನ್ನು ತೆಗೆದುಕೊಂಡನು ಎಂದು ಆ ವಚನಗಳು ತಿಳಿಸುತ್ತವೆ. ಈ ದಿನ 24 ತಾಸುಗಳ ದಿನವಾಗಿರಲಿಲ್ಲ, ಬದಲಿಗೆ ದೀರ್ಘವಾದ ಕಾಲಾವಧಿಯಾಗಿತ್ತು.

ದೇವರು ಭೂಮಿಯಲ್ಲಿ ಉಂಟುಮಾಡಿದ ಎಲ್ಲ ಸೃಷ್ಟಿಗಳಲ್ಲಿ ಮಾನವನು ಅತಿಶ್ರೇಷ್ಠ ಜೀವಿಯಾಗಿದ್ದನು. ಅವನನ್ನು ದೇವರು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು. ಅಂದರೆ ದೇವರಲ್ಲಿರುವ ಪ್ರೀತಿ, ವಿವೇಕ ಮುಂತಾದ ಗುಣಗಳನ್ನು ತೋರಿಸುವ ಸಾಮರ್ಥ್ಯ ಅವನಲ್ಲಿತ್ತು. ದೇವರು ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿದನು. ಅವನಿಗೆ ‘ಆದಾಮ’ ಎಂದು ಹೆಸರಿಟ್ಟನು. ತದನಂತರ ಅವನನ್ನು ಪರದೈಸಿನಲ್ಲಿ ಅಂದರೆ ಏದೆನ್‌ ಎಂಬ ಒಂದು ಸುಂದರ ತೋಟದಲ್ಲಿ ಇಟ್ಟನು. ಆ ತೋಟವನ್ನು ದೇವರೇ ಉಂಟುಮಾಡಿದನು ಮತ್ತು ಅದರಲ್ಲಿ ಸುಂದರ ಫಲಪುಷ್ಪ ಬಿಡುವ ಮರಗಳು ಹೇರಳವಾಗಿದ್ದವು.

ಆ ಮನುಷ್ಯನಿಗೆ ಬಾಳಸಂಗಾತಿಯೊಬ್ಬಳು ಇರುವುದು ಒಳ್ಳೇದೆಂದು ದೇವರಿಗೆ ಅನಿಸಿತು. ಆದುದರಿಂದ ದೇವರು ಆದಾಮನ ಒಂದು ಪಕ್ಕೆಲುಬಿನಿಂದ ಸ್ತ್ರೀಯನ್ನು ಮಾಡಿ ಆಕೆಯನ್ನು ಆದಾಮನಿಗೆ ಹೆಂಡತಿಯನ್ನಾಗಿ ಕೊಟ್ಟನು. ಆಕೆಯನ್ನು ‘ಹವ್ವ’ ಎಂದು ಕರೆಯಲಾಯಿತು. ಹವ್ವಳನ್ನು ನೋಡಿ ಉಲ್ಲಾಸಗೊಂಡ ಆದಾಮನು, “ಈಗ ಸರಿ; ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬೂ ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ” ಎಂದು ಒಂದು ಗೀತೆಯನ್ನೇ ಹಾಡಿದನು. “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ದೇವರು ವಿವರಿಸಿದನು.—ಆದಿಕಾಂಡ 2:22-24; 3:20.

ದೇವರು ಆದಾಮ ಹವ್ವರಿಗೆ ಎರಡು ಆಜ್ಞೆಗಳನ್ನು ಕೊಟ್ಟನು. ಮೊದಲನೆಯದ್ದು, ಅವರು ವ್ಯವಸಾಯ ಮಾಡಿ ಭೂಮಿಯನ್ನು ನೋಡಿಕೊಳ್ಳಬೇಕು ಮತ್ತು ಕಾಲಕ್ರಮೇಣ ತಮ್ಮ ಸಂತಾನದಿಂದ ಭೂಮಿಯನ್ನು ತುಂಬಿಸಬೇಕು ಎಂದಾಗಿತ್ತು. ಎರಡನೇ ಆಜ್ಞೆ, ಅವರು ಆ ವಿಶಾಲ ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣನ್ನು ತಿನ್ನಬಹುದು, ಆದರೆ “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ” ಹಣ್ಣನ್ನು ಮಾತ್ರ ತಿನ್ನಬಾರದು ಎಂದಾಗಿತ್ತು. (ಆದಿಕಾಂಡ 2:17) ಅವರು ದೇವರ ಈ ಮಾತನ್ನು ಮೀರಿ ಅವಿಧೇಯರಾದರೆ ಸಾಯುತ್ತಿದ್ದರು. ಈ ಆಜ್ಞೆಗಳನ್ನು ನೀಡುವ ಮೂಲಕ, ದೇವರನ್ನು ತಮ್ಮ ಅಧಿಪತಿಯಾಗಿ ಒಪ್ಪಿಕೊಳ್ಳುತ್ತೇವೆಂದು ತೋರಿಸುವ ಒಂದು ಅವಕಾಶವನ್ನು ದೇವರು ಅವರಿಗೆ ಕೊಟ್ಟನು. ಅವರು ತೋರಿಸುವ ವಿಧೇಯತೆಯು ದೇವರ ಕಡೆಗೆ ತಮಗೆ ಪ್ರೀತಿ ಮತ್ತು ಕೃತಜ್ಞತೆಯಿದೆ ಎಂಬುದನ್ನು ಸಹ ತೋರಿಸುತ್ತಿತ್ತು. ಆತನ ಪ್ರೀತಿಯ ಆಳ್ವಿಕೆ ಬೇಡ ಎಂದು ನಿರಾಕರಿಸಲು ಅವರಿಗೆ ಯಾವ ಕಾರಣವೂ ಇರಲಿಲ್ಲ. ಏಕೆಂದರೆ, ಆದಾಮಹವ್ವರು ಪರಿಪೂರ್ಣರಾಗಿದ್ದರು. ಅಂದರೆ, ಅವರಲ್ಲಿ ಯಾವ ದೋಷವೂ ಇರಲಿಲ್ಲ. “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು” ಎಂದು ಬೈಬಲ್‌ ಸಹ ಹೇಳುತ್ತದೆ.—ಆದಿಕಾಂಡ 1:31.

ಆದಿಕಾಂಡ ಅಧ್ಯಾಯ 1 ಮತ್ತು 2ರ ಮೇಲೆ ಆಧಾರಿತವಾಗಿದೆ.