ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 11

ಸಾಂತ್ವನ ಹಾಗೂ ಉಪದೇಶ ನೀಡುವ ಕೀರ್ತನೆಗಳು

ಸಾಂತ್ವನ ಹಾಗೂ ಉಪದೇಶ ನೀಡುವ ಕೀರ್ತನೆಗಳು

ದಾವೀದ ಮತ್ತಿತರರು ದೇವಾರಾಧನೆಗಾಗಿ ಅನೇಕ ಸ್ತುತಿಗೀತೆಗಳನ್ನು ರಚಿಸುತ್ತಾರೆ. ಅಂಥ 150 ಗೀತೆಗಳು ಕೀರ್ತನೆ ಪುಸ್ತಕದಲ್ಲಿವೆ

ಕೀರ್ತನೆಗಳು ಪುಸ್ತಕವು ಬೈಬಲಿನಲ್ಲಿರುವ ಅತಿ ದೊಡ್ಡ ಪುಸ್ತಕವಾಗಿದೆ. ಈ ಪುಸ್ತಕವು ಪವಿತ್ರ ಗೀತೆಗಳ ಒಂದು ಸಂಗ್ರಹವಾಗಿದೆ. ಇದನ್ನು ಸುಮಾರು 1,000 ವರ್ಷಗಳ ಕಾಲಾವಧಿಯಲ್ಲಿ ಬರೆಯಲಾಯಿತು. ಕೀರ್ತನೆ ಪುಸ್ತಕದ ಕೆಲವು ಗೀತೆಗಳಲ್ಲಿ ಕೀರ್ತನೆಗಾರರ ಗಾಢವಾದ ನಂಬಿಕೆ ಎದ್ದುಕಾಣುವಂತಿದ್ದು, ಇಂಥ ಮನಸ್ಪರ್ಶಿಸುವ ಮಾತುಗಳನ್ನು ಬೇರೆಲ್ಲೂ ಕಾಣಸಾಧ್ಯವಿಲ್ಲ. ಈ ಪುಸ್ತಕದಲ್ಲಿ ಮಾನವರ ಭಾವನೆಗಳನ್ನು ಮನಮೋಹಕವಾಗಿ ಚಿತ್ರಿಸಲಾಗಿದೆ. ಆನಂದ, ಸ್ತುತಿ, ಉಪಕಾರಸ್ಮರಣೆ ಮೊದಲುಗೊಂಡು ದುಗುಡ, ಶೋಕ, ಪಶ್ಚಾತ್ತಾಪದಂಥ ಅಂತರಾಳದ ವಿವಿಧ ಭಾವನೆಗಳಿಗೆ ಇಲ್ಲಿ ಜೀವತುಂಬಲಾಗಿದೆ. ಕೀರ್ತನೆಗಾರರು ದೇವರಿಗೆ ಅತ್ಯಾಪ್ತರಾಗಿದ್ದು ಆತನಲ್ಲಿ ಪೂರ್ಣ ಭರವಸೆಯಿಟ್ಟಿದ್ದರು ಎಂಬುದು ಇವುಗಳನ್ನು ಓದುವಾಗ ನಮ್ಮ ಅರಿವಿಗೆ ಬರುತ್ತದೆ. ಈ ಕೀರ್ತನೆಗಳಲ್ಲಿ ಮೂಡಿಬಂದಿರುವ ಕೆಲವೊಂದು ವಿಷಯಗಳನ್ನು ಗಮನಿಸಿ.

ಯೆಹೋವನೇ ನಿಜವಾದ ಪರಮಾಧಿಕಾರಿಯಾಗಿದ್ದು ನಮ್ಮ ಸ್ತುತಿ ಮತ್ತು ಆರಾಧನೆಗೆ ಅರ್ಹನು. “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು” ನಾವು ಕೀರ್ತನೆ 83:18 ರಲ್ಲಿ ಓದುತ್ತೇವೆ. ಅನೇಕ ಕೀರ್ತನೆಗಳು ಸೃಷ್ಟಿಕಾರ್ಯಗಳಿಗಾಗಿ ಯೆಹೋವನನ್ನು ಸ್ತುತಿಸುತ್ತವೆ. ನಕ್ಷತ್ರಖಚಿತ ಆಕಾಶ, ನಿಸರ್ಗದಲ್ಲಿರುವ ಬೆರಗುಗೊಳಿಸುವ ಜೀವವಿನ್ಯಾಸ, ಮಾನವ ದೇಹದ ಅದ್ಭುತ ರಚನೆ ಮುಂತಾದ ವಿಸ್ಮಯಕರ ಸೃಷ್ಟಿಕಾರ್ಯಗಳಿಗಾಗಿ ಅವು ದೇವರನ್ನು ಹಾಡಿಹೊಗಳುತ್ತವೆ. (ಕೀರ್ತನೆ 8, 19, 139, 148) ಇತರ ಕೆಲವು ಕೀರ್ತನೆಗಳು, ನಿಷ್ಠಾವಂತ ಜನರನ್ನು ರಕ್ಷಿಸಿ ಕಾಪಾಡುವ ದೇವರೆಂದು ಯೆಹೋವನನ್ನು ಮಹಿಮೆಪಡಿಸುತ್ತವೆ. (ಕೀರ್ತನೆ 18, 97, 138) ಇನ್ನು ಕೆಲವು ಕೀರ್ತನೆಗಳು ಯೆಹೋವನನ್ನು ನ್ಯಾಯವುಳ್ಳ ದೇವರೆಂದು ಕೊಂಡಾಡುವುದಲ್ಲದೆ, ಆತನು ಕುಗ್ಗಿಹೋದವರಿಗೆ ಉಪಶಮನ ನೀಡುತ್ತಾನೆಂದೂ ದುಷ್ಟರನ್ನು ಶಿಕ್ಷಿಸುತ್ತಾನೆಂದೂ ಹೇಳುತ್ತವೆ.—ಕೀರ್ತನೆ 11, 68, 146.

ಯೆಹೋವನು ತನ್ನ ಭಕ್ತರಿಗೆ ಸಹಾಯ ನೀಡಿ ಸಂತೈಸುತ್ತಾನೆ. ಕೀರ್ತನೆ ಪುಸ್ತಕದ 23ನೇ ಕೀರ್ತನೆಯು ಬಹುಮಟ್ಟಿಗೆ ಎಲ್ಲರಿಗೂ ಚಿರಪರಿಚಿತ. ಅದರಲ್ಲಿ ದಾವೀದನು ಯೆಹೋವನನ್ನು ಒಬ್ಬ ಪ್ರೀತಿಯ ಕುರುಬನಿಗೆ ಹೋಲಿಸುತ್ತಾನೆ. ಯೆಹೋವನು ತನ್ನ ಕುರಿಗಳಿಗೆ ರಕ್ಷಣೆ ಒದಗಿಸಿ ಅವುಗಳನ್ನು ಪ್ರೀತಿಯಿಂದ ನಡೆಸುತ್ತಾನೆಂದು ಅವನು ಹೇಳುತ್ತಾನೆ. ಯೆಹೋವನು “ಪ್ರಾರ್ಥನೆಯನ್ನು ಕೇಳುವ” ದೇವರೆಂದು ಕೀರ್ತನೆ 65:2 ದೇವಾರಾಧಕರಿಗೆ ನೆನಪುಹುಟ್ಟಿಸುತ್ತದೆ. ಗಂಭೀರ ಪಾಪಗಳನ್ನು ಮಾಡಿದ ಎಷ್ಟೋ ಜನರಿಗೆ 39 ಮತ್ತು 51ನೇ ಕೀರ್ತನೆಯು ಸಾಂತ್ವನದ ಮೂಲವಾಗಿದೆ. ಅಲ್ಲಿ ದಾವೀದನು ತಾನು ಗೈದ ಘೋರ ಪಾಪಗಳಿಗಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ ಪರಿಯು ಮನಮುಟ್ಟುವಂಥದ್ದಾಗಿದೆ. ಮತ್ತು ಯೆಹೋವನು ತನ್ನನ್ನು ಕ್ಷಮಿಸುತ್ತಾನೆಂಬ ವಿಶ್ವಾಸವನ್ನು ದಾವೀದನು ಆ ಕೀರ್ತನೆಯಲ್ಲಿ ತೋರ್ಪಡಿಸುತ್ತಾನೆ. ನಮ್ಮೆಲ್ಲ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಿ ಆತನಲ್ಲೇ ಪೂರ್ಣ ಭರವಸೆಯಿಡುವಂತೆ ಕೀರ್ತನೆ 55:22 ನಮ್ಮನ್ನು ಪ್ರೇರೇಪಿಸುತ್ತದೆ.

ಯೆಹೋವನು ಮೆಸ್ಸೀಯನ ಸರ್ಕಾರದ ಮೂಲಕ ಲೋಕಕ್ಕೆ ಬದಲಾವಣೆ ತರುವನು. ಕೀರ್ತನೆಗಳ ಅನೇಕ ಭಾಗಗಳು ಮೆಸ್ಸೀಯನ ಕುರಿತು ಮಾತಾಡುತ್ತವೆ. ಮುಂತಿಳಿಸಲ್ಪಟ್ಟಿದ್ದ ಈ ರಾಜನು ತನ್ನನ್ನು ವಿರೋಧಿಸುವ ದುಷ್ಟ ಜನಾಂಗಗಳನ್ನು ಸಂಪೂರ್ಣವಾಗಿ ಅಳಿಸಿಬಿಡುವನೆಂದು 2ನೇ ಕೀರ್ತನೆ ಭವಿಷ್ಯ ನುಡಿಯುತ್ತದೆ. ಕೀರ್ತನೆ 72, ಈ ರಾಜನು ಬಡತನ, ಅನ್ಯಾಯ ಹಾಗೂ ಕಷ್ಟಸಂಕಟಗಳನ್ನು ಕೊನೆಗೊಳಿಸುವನೆಂದು ಸ್ಪಷ್ಟಪಡಿಸುತ್ತದೆ. ಕೀರ್ತನೆ 46:9 ರ ಪ್ರಕಾರ ದೇವರು ಮೆಸ್ಸೀಯನ ರಾಜ್ಯದ ಮೂಲಕ ಯುದ್ಧವನ್ನು ನಿಲ್ಲಿಸಿ ಎಲ್ಲ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲಿರುವನು. ದುಷ್ಟನು ಕಾಣಿಸದೆ ಹೋಗುವನು ಹಾಗೂ ನೀತಿವಂತರೆಲ್ಲರೂ ಈ ಭೂಮಿಯಲ್ಲಿ ನಿತ್ಯನಿರಂತರಕ್ಕೂ ಶಾಂತಿ ಐಕ್ಯದ ಬಾಳ್ವೆ ನಡೆಸುವರೆಂದು 37ನೇ ಕೀರ್ತನೆಯಲ್ಲಿ ನಾವು ಓದುತ್ತೇವೆ.

ಕೀರ್ತನೆ ಪುಸ್ತಕದ ಮೇಲೆ ಆಧಾರಿತವಾಗಿದೆ.