ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 16

ಮೆಸ್ಸೀಯನ ಆಗಮನ

ಮೆಸ್ಸೀಯನ ಆಗಮನ

ನಜರೇತಿನ ಯೇಸುವನ್ನು ಬಹಳ ಹಿಂದೆ ವಾಗ್ದಾನಿಸಲಾದ ಮೆಸ್ಸೀಯನೆಂಬುದಾಗಿ ಯೆಹೋವನು ತೋರಿಸಿಕೊಡುತ್ತಾನೆ

ಮುಂತಿಳಿಸಲಾಗಿದ್ದ ಮೆಸ್ಸೀಯನನ್ನು ಗುರುತಿಸಲು ಯೆಹೋವನು ಜನರಿಗೆ ಸಹಾಯಮಾಡಿದನೋ? ಹೌದು. ಹೇಗೆಂಬುದನ್ನು ಪರಿಗಣಿಸಿರಿ. ಹೀಬ್ರು ಶಾಸ್ತ್ರಗ್ರಂಥವನ್ನು ಬರೆದು ಮುಗಿಸಿ ಈಗಾಗಲೇ ಸುಮಾರು 400 ವರ್ಷಗಳು ಕಳೆದಿದ್ದವು. ಗಲಿಲಾಯದ ಉತ್ತರ ಪ್ರಾಂತದಲ್ಲಿದ್ದ ನಜರೇತೆಂಬ ಪಟ್ಟಣದಲ್ಲಿ ಆಶ್ಚರ್ಯಕರ ಘಟನೆಯೊಂದು ಸಂಭವಿಸಿತು. ಆ ಪಟ್ಟಣದಲ್ಲಿ ವಾಸವಾಗಿದ್ದ ಮರಿಯಳೆಂಬ ಯುವತಿಗೆ ಗಬ್ರಿಯೇಲ ಎಂಬ ದೇವದೂತನು ದರ್ಶನ ನೀಡಿದನು! ದೇವರು ತನ್ನ ಪವಿತ್ರಾತ್ಮವನ್ನು ಅಂದರೆ ಕಾರ್ಯಕಾರಿ ಶಕ್ತಿಯನ್ನು ಆಕೆಯ ಮೇಲೆ ಉಪಯೋಗಿಸುವನೆಂದೂ, ಹೀಗೆ ಕನ್ಯೆಯಾಗಿರುವ ಅವಳು ಒಬ್ಬ ಮಗನಿಗೆ ಜನ್ಮನೀಡುವಳೆಂದೂ ಆ ದೇವದೂತನು ಮರಿಯಳಿಗೆ ಹೇಳಿದನು. ಅವಳಿಗೆ ಹುಟ್ಟುವ ಮಗನೇ ಬಹಳ ಹಿಂದೆ ದೇವರು ವಾಗ್ದಾನಿಸಿದ್ದ ರಾಜನಾಗಲಿರುವನು ಹಾಗೂ ಅವನ ಆಳ್ವಿಕೆಯು ಶಾಶ್ವತವಾಗಿರುವುದು ಎಂದು ಸಹ ಆ ದೇವದೂತನು ಹೇಳಿದನು. ಮಾತ್ರವಲ್ಲ, ಯೆಹೋವ ದೇವರು ಸ್ವರ್ಗದಲ್ಲಿದ್ದ ತನ್ನ ಮಗನ ಜೀವವನ್ನು ಮರಿಯಳ ಗರ್ಭಕ್ಕೆ ವರ್ಗಾಯಿಸುವನೆಂದೂ ಹುಟ್ಟುವ ಆ ಶಿಶು ದೇವರ ಮಗನೆನಿಸಿಕೊಳ್ಳುವನೆಂದೂ ಮರಿಯಳಿಗೆ ತಿಳಿಸಿದನು.

ದೇವದೂತನು ನೀಡಿದ ಆ ಅಪೂರ್ವ ಹೊಣೆಗಾರಿಕೆಯನ್ನು ಮರಿಯಳು ದೀನತೆಯಿಂದ ಸ್ವೀಕರಿಸಿದಳು. ದೇವರು ತನ್ನ ದೂತನನ್ನು ಯೋಸೇಫನೆಂಬ ಬಡಗಿಯ ಬಳಿಗೆ ಕಳುಹಿಸಿದನು. ಈ ಯೋಸೇಫನಿಗೆ ಮರಿಯಳೊಂದಿಗೆ ಈಗಾಗಲೇ ನಿಶ್ಚಿತಾರ್ಥವಾಗಿತ್ತು. ಮರಿಯಳು ಗರ್ಭಿಣಿಯಾಗಲು ಕಾರಣವೇನೆಂಬುದನ್ನು ಆ ದೂತನು ವಿವರಿಸಿದ ಮೇಲೆ ಯೋಸೇಫನು ಮರಿಯಳನ್ನು ಮದುವೆಯಾದನು. ಅವರಿಬ್ಬರೂ ನಜರೇತಿನಲ್ಲಿ ವಾಸಿಸಿದರು. ಆದರೆ ಮೆಸ್ಸೀಯನು ಬೇತ್ಲೆಹೇಮಿನಲ್ಲಿ ಹುಟ್ಟುವನೆಂದು ಪ್ರವಾದನೆ ಹೇಳಲಾಗಿತ್ತಲ್ಲವೇ? (ಮೀಕ 5:2) ಆ ಚಿಕ್ಕ ಪಟ್ಟಣವಾದ ಬೇತ್ಲೆಹೇಮ್‌ ನಜರೇತಿನಿಂದ ಸುಮಾರು 140 ಕಿ.ಮೀ. ದೂರದಲ್ಲಿತ್ತು! ಹಾಗಾದರೆ ಆ ಪ್ರವಾದನೆ ಹೇಗೆ ನೆರವೇರಿತು?

ಆ ಸಮಯದಲ್ಲಿ ಅಧಿಕಾರದಲ್ಲಿದ್ದ ರೋಮನ್‌ ಚಕ್ರವರ್ತಿಯು ಜನಗಣತಿಯನ್ನು ಮಾಡಲು ನಿರ್ಧರಿಸಿದನು. ಆದ್ದರಿಂದ ಪ್ರತಿಯೊಬ್ಬರು ಹೆಸರನ್ನು ನೋಂದಾಯಿಸಿಕೊಳ್ಳಲು ತಮ್ಮ ಹುಟ್ಟೂರಿಗೆ ಹೋಗಬೇಕಿತ್ತು. ಯೋಸೇಫನು ಮತ್ತು ಮರಿಯಳು ಬೇತ್ಲೆಹೇಮಿನವರೇ ಆಗಿದ್ದಿರಬೇಕು. ಹಾಗಾಗಿ ಯೋಸೇಫನು ತುಂಬು ಗರ್ಭಿಣಿಯಾಗಿದ್ದ ಮರಿಯಳನ್ನು ಬೇತ್ಲೆಹೇಮಿಗೆ ಕರೆದುಕೊಂಡು ಹೋದನು. (ಲೂಕ 2:3) ಅಲ್ಲಿ ಕೊಟ್ಟಿಗೆಯೊಂದರಲ್ಲಿ ಮರಿಯಳು ಮಗುವಿಗೆ ಜನ್ಮನೀಡಿ ಮಗುವನ್ನು ಗೋದಲಿಯಲ್ಲಿ ಮಲಗಿಸಿದಳು. ವಾಗ್ದತ್ತ ಮೆಸ್ಸೀಯನು ಅಥವಾ ಕ್ರಿಸ್ತನು ಹುಟ್ಟಿದ್ದಾನೆಂಬ ಈ ಸುದ್ದಿಯನ್ನು ಬೆಟ್ಟದ ತಪ್ಪಲಿನಲ್ಲಿ ಕುರಿಕಾಯುತ್ತಿದ್ದವರಿಗೆ ತಿಳಿಸಲು ದೇವರು ಒಬ್ಬ ದೇವದೂತನನ್ನು ಕಳುಹಿಸಿದನು.

ಯೇಸುವೇ ವಾಗ್ದತ್ತ ಮೆಸ್ಸೀಯನೆಂಬುದನ್ನು ತದನಂತರ ಇತರ ಜನರು ಸಹ ದೃಢಪಡಿಸಿದರು. ಮೆಸ್ಸೀಯನು ಮಾಡಲಿದ್ದ ಮಹತ್ತ್ವದ ಕೆಲಸಕ್ಕಾಗಿ ದಾರಿ ಸಿದ್ಧಪಡಿಸುವ ವ್ಯಕ್ತಿಯೊಬ್ಬನು ಬರಲಿದ್ದಾನೆಂದು ಯೆಶಾಯ ಪ್ರವಾದಿಯು ಮುಂತಿಳಿಸಿದ್ದನು. (ಯೆಶಾಯ 40:3) ಆ ವ್ಯಕ್ತಿ ಸ್ನಾನಿಕನಾದ ಯೋಹಾನನಾಗಿದ್ದನು. ಈ ಯೋಹಾನನು ಯೇಸುವನ್ನು ಕಂಡೊಡನೆ, “ನೋಡಿ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ!” ಎಂದು ಉದ್ಗರಿಸಿದನು. ಕೂಡಲೇ ಯೋಹಾನನ ಶಿಷ್ಯರಲ್ಲಿ ಅನೇಕರು ಯೇಸುವನ್ನು ಹಿಂಬಾಲಿಸಲು ಪ್ರಾರಂಭಿಸಿದರು. ಅವರಲ್ಲಿ ಒಬ್ಬನು “ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ” ಎಂದು ಹೇಳಿದನು.—ಯೋಹಾನ 1:29, 36, 41.

ಯೇಸುವೇ ಮೆಸ್ಸೀಯನೆಂದು ತೋರಿಸಿದ ಮತ್ತೊಂದು ರುಜುವಾತೂ ಇತ್ತು. ಯೇಸು ಸ್ನಾನಿಕನಾದ ಯೋಹಾನನಿಂದ ದೀಕ್ಷಾಸ್ನಾನ ಪಡೆದುಕೊಂಡಾಗ ಸ್ವತಃ ಯೆಹೋವ ದೇವರೇ ಸ್ವರ್ಗದಿಂದ ಮಾತಾಡಿದನು. ಪವಿತ್ರಾತ್ಮದ ಮೂಲಕ ಯೇಸುವನ್ನು ಮೆಸ್ಸೀಯನಾಗಿ ಅಭಿಷೇಕಿಸಿ, “ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ” ಎಂದು ದೇವರು ಹೇಳಿದನು. (ಮತ್ತಾಯ 3:16, 17) ಎಷ್ಟೋ ಸಮಯಗಳಿಂದ ಎದುರುನೋಡುತ್ತಿದ್ದ ಮೆಸ್ಸೀಯನು ಈಗ ಆಗಮಿಸಿದ್ದನು!

ಇದು ಯಾವಾಗ ನಡೆಯಿತು? ಕ್ರಿ.ಶ. 29ರಲ್ಲಿ. ಅಂದರೆ ಸರಿಯಾಗಿ, ದಾನಿಯೇಲನು ಹೇಳಿದ 483 ವರ್ಷಗಳು ಮುಗಿದ ಮೇಲೆ! ಇದು ಸಹ ಯೇಸುವೇ ಮೆಸ್ಸೀಯನು ಅಥವಾ ಕ್ರಿಸ್ತನು ಎಂಬುದಕ್ಕೆ ಅಲ್ಲಗಳೆಯಲಾಗದ ಒಂದು ರುಜುವಾತಾಗಿದೆ. ಈ ಮೆಸ್ಸೀಯನು ಭೂಮಿಯಲ್ಲಿದ್ದಾಗ ಯಾವ ಸಂದೇಶವನ್ನು ಸಾರಿದನು?

ಮತ್ತಾಯ ಅಧ್ಯಾಯ 1ರಿಂದ 3; ಮಾರ್ಕ ಅಧ್ಯಾಯ 1; ಲೂಕ ಅಧ್ಯಾಯ 2; ಯೋಹಾನ ಅಧ್ಯಾಯ 1ರ ಮೇಲೆ ಆಧಾರಿತವಾಗಿದೆ.