ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 21

ಯೇಸುವಿನ ಪುನರುತ್ಥಾನ!

ಯೇಸುವಿನ ಪುನರುತ್ಥಾನ!

ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡು ಅವರಿಗೆ ನಿರ್ದೇಶನ ನೀಡಿ ಪ್ರೋತ್ಸಾಹಿಸುತ್ತಾನೆ

ಯೇಸು ಸಾವನ್ನಪ್ಪಿದ ಮೂರನೆಯ ದಿನ ನಡೆದ ಘಟನೆ. ಯೇಸುವಿನ ಕೆಲವು ಶಿಷ್ಯೆಯರು ಅವನ ಸಮಾಧಿ ಹತ್ತಿರ ಹೋದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಸಮಾಧಿಯ ಬಾಯಿಗೆ ಮಚ್ಚಲಾಗಿದ್ದ ಕಲ್ಲು ಪಕ್ಕಕ್ಕೆ ಹೊರಳಿತ್ತು ಮತ್ತು ಸಮಾಧಿಯು ಖಾಲಿಯಾಗಿತ್ತು!

ಆಗ ಇಬ್ಬರು ದೇವದೂತರು ಆ ಸ್ತ್ರೀಯರಿಗೆ ಕಾಣಿಸಿಕೊಂಡರು. ಅವರಲ್ಲಿ ಒಬ್ಬನು, “ನಜರೇತಿನ ಯೇಸುವನ್ನು ನೀವು ಹುಡುಕುತ್ತಿದ್ದೀರಲ್ಲವೇ. ಅವನು . . . ಎಬ್ಬಿಸಲ್ಪಟ್ಟಿದ್ದಾನೆ” ಎಂದು ತಿಳಿಸಿದನು. (ಮಾರ್ಕ 16:6) ಅವನು ಹೇಳಿದ ವಿಷಯವನ್ನು ಅಪೊಸ್ತಲರಿಗೆ ತಿಳಿಸಲಿಕ್ಕಾಗಿ ಕೂಡಲೇ ಆ ಸ್ತ್ರೀಯರು ಅಲ್ಲಿಂದ ಹೋದರು. ಅವರು ದಾರಿಯಲ್ಲಿ ಹೋಗುತ್ತಿರುವಾಗ ಯೇಸು ಅವರಿಗೆ ಕಾಣಿಸಿಕೊಂಡು, “ಭಯಪಡಬೇಡಿ! ಹೋಗಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗುವಂತೆ ಅವರಿಗೆ ವರದಿಮಾಡಿರಿ; ಅಲ್ಲಿ ಅವರು ನನ್ನನ್ನು ಕಾಣುವರು” ಎಂದು ಹೇಳಿದನು.—ಮತ್ತಾಯ 28:10.

ಅದೇ ದಿನ ಇಬ್ಬರು ಶಿಷ್ಯರು ಯೆರೂಸಲೇಮಿನಿಂದ ಎಮ್ಮಾಹು ಎಂಬ ಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆ ಒಬ್ಬ ಅಪರಿಚಿತ ವ್ಯಕ್ತಿ ಅವರೊಂದಿಗೆ ಸೇರಿಕೊಂಡು ಅವರು ಯಾವ ವಿಷಯದ ಬಗ್ಗೆ ಮಾತಾಡುತ್ತಾ ಹೋಗುತ್ತಿದ್ದಾರೆ ಎಂದು ವಿಚಾರಿಸಿದನು. ಆ ಅಪರಿಚಿತ ವ್ಯಕ್ತಿ ಬೇರೆ ಯಾರೂ ಅಲ್ಲ, ಪುನರುತ್ಥಾನವಾದ ಯೇಸುವೇ ಆಗಿದ್ದನು. ಬೇರೊಂದು ರೂಪದಲ್ಲಿ ಅವರಿಗೆ ಕಾಣಿಸಿಕೊಂಡದ್ದರಿಂದ ಆ ಶಿಷ್ಯರಿಗೆ ಅವನ ಗುರುತು ಸಿಗಲಿಲ್ಲ. ಆ ಇಬ್ಬರು ಶಿಷ್ಯರು ತಾವು ಯೇಸುವಿನ ಕುರಿತು ಮಾತಾಡುತ್ತಿದ್ದೇವೆಂದು ಬಹಳ ದುಃಖದಿಂದ ಹೇಳಿದರು. ಅಪರಿಚಿತನಂತೆ ಕಾಣಿಸುತ್ತಿದ್ದ ಯೇಸು ಅವರಿಗೆ ಮೆಸ್ಸೀಯನ ಕುರಿತು ಸಮಸ್ತ ಶಾಸ್ತ್ರಗಳಲ್ಲಿ ತಿಳಿಸಲ್ಪಟ್ಟಿದ್ದ ವಿಷಯಗಳನ್ನು ವಿವರಿಸಿ ಹೇಳತೊಡಗಿದನು. ನಿಜವೇನೆಂದರೆ, ಮೆಸ್ಸೀಯನ ಕುರಿತು ನುಡಿಯಲ್ಪಟ್ಟಿದ್ದ ವಿಷಯಗಳಲ್ಲಿ ಒಂದನ್ನೂ ಬಿಡದೆ ಎಲ್ಲವನ್ನು ಯೇಸು ನೆರವೇರಿಸಿದ್ದನು. * ತಮ್ಮೊಂದಿಗೆ ಮಾತಾಡುತ್ತಿರುವ ಅಪರಿಚಿತ ವ್ಯಕ್ತಿ ಆತ್ಮ ಶರೀರದಲ್ಲಿ ಪುನರುತ್ಥಾನಗೊಂಡಿರುವ ಯೇಸುವೆಂದು ಆ ಶಿಷ್ಯರು ಗುರುತು ಹಿಡಿದರು. ಅಷ್ಟರಲ್ಲಿ ಯೇಸು ಕಣ್ಮರೆಯಾದನು.

ತಕ್ಷಣವೇ ಆ ಇಬ್ಬರು ಶಿಷ್ಯರು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಬಂದಾಗ ಅಪೊಸ್ತಲರೆಲ್ಲರೂ ಒಂದು ಕಡೆ ಸೇರಿ ಬಾಗಿಲು ಮುಚ್ಚಿಕೊಂಡಿದ್ದರು. ಆ ಇಬ್ಬರು ಶಿಷ್ಯರು ದಾರಿಯಲ್ಲಿ ತಮಗಾದ ಅನುಭವವನ್ನು ಅವರಿಗೆ ಹೇಳತೊಡಗಿದರು. ಆಗ ಯೇಸು ಅವರೆಲ್ಲರಿಗೆ ಕಾಣಿಸಿಕೊಂಡನು. ಅಪೊಸ್ತಲರಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಅವರು ದಿಗ್ಭ್ರಮೆಯಿಂದ ನಿಂತುಬಿಟ್ಟರು! ಯೇಸು ಅವರಿಗೆ, “ನಿಮ್ಮ ಹೃದಯಗಳಲ್ಲಿ ಸಂಶಯಗಳು ಹುಟ್ಟುವುದೇಕೆ?” ಎಂದು ಕೇಳುತ್ತಾ, ‘ಕ್ರಿಸ್ತನು ಕಷ್ಟವನ್ನು ಅನುಭವಿಸಿ ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎಬ್ಬಿಸಲ್ಪಡುವನೆಂದು ಬರೆಯಲ್ಪಟ್ಟಿದೆಯಲ್ಲಾ’ ಎಂದು ಹೇಳಿದನು.—ಲೂಕ 24:38, 46, 47.

ಯೇಸು ಪುನರುತ್ಥಾನಗೊಂಡು 40 ದಿನಗಳ ವರೆಗೆ ತನ್ನ ಶಿಷ್ಯರಿಗೆ ಬೇರೆ ಬೇರೆ ಸಂದರ್ಭಗಳಲ್ಲಿ ಕಾಣಿಸಿಕೊಂಡನು. ಒಂದು ಸಂದರ್ಭದಲ್ಲಂತೂ 500ಕ್ಕಿಂತಲೂ ಹೆಚ್ಚು ಜನರಿಗೆ ಕಾಣಿಸಿಕೊಂಡನು! ಪ್ರಾಯಶಃ ಆ ಸಂದರ್ಭದಲ್ಲಿಯೇ ಅವನು, “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳುತ್ತಾ ಒಂದು ದೊಡ್ಡ ಜವಾಬ್ದಾರಿಯನ್ನು ತನ್ನ ಶಿಷ್ಯರಿಗೆ ನೀಡಿದ್ದಿರಬೇಕು.—ಮತ್ತಾಯ 28:19, 20.

ಯೇಸು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರನ್ನು ಕೊನೆಯ ಸಲ ಭೇಟಿಯಾದಾಗ, “ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದು ವಾಗ್ದಾನ ಮಾಡಿದನು. (ಅಪೊಸ್ತಲರ ಕಾರ್ಯಗಳು 1:8) ಹಾಗೆ ಹೇಳಿದ ಮೇಲೆ ಯೇಸು ಮೇಲಕ್ಕೆ ಏರಿಹೋದನು. ಅವನು ಸ್ವರ್ಗಕ್ಕೆ ಏರಿ ಹೋಗುವಾಗ ಮೋಡವು ಅಡ್ಡಬಂದು ಶಿಷ್ಯರ ಕಣ್ಣಿಗೆ ಮರೆಯಾದನು.

ಮತ್ತಾಯ ಅಧ್ಯಾಯ 28; ಮಾರ್ಕ ಅಧ್ಯಾಯ 16; ಲೂಕ ಅಧ್ಯಾಯ 24; ಯೋಹಾನ ಅಧ್ಯಾಯ 20 ಮತ್ತು 21; ಮತ್ತು 1 ಕೊರಿಂಥ 15:5, 6 ರ ಮೇಲೆ ಆಧಾರಿತವಾಗಿದೆ.

^ ಪ್ಯಾರ. 6 ಮೆಸ್ಸೀಯನ ಕುರಿತ ಪ್ರವಾದನೆಗಳನ್ನು ಯೇಸು ನೆರವೇರಿಸಿದ ಕೆಲವು ಉದಾಹರಣೆಗಳನ್ನು ತಿಳಿದುಕೊಳ್ಳಲಿಕ್ಕಾಗಿ ಈ ಕಿರುಪುಸ್ತಿಕೆಯ 17ರಿಂದ 19ರ ವರೆಗಿನ ಪುಟಗಳನ್ನು ಹಾಗೂ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ ಪುಟ 200ರಿಂದ 201ನ್ನು ನೋಡಿರಿ.