ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

ಕುಟುಂಬ ಆರಾಧನೆ ಅಂದರೇನು?

ಕುಟುಂಬ ಆರಾಧನೆ ಅಂದರೇನು?

ದಕ್ಷಿಣ ಕೊರಿಯ

ಬ್ರೆಜಿಲ್‌

ಆಸ್ಟ್ರೇಲಿಯ

ಗಿನಿ

ಕುಟುಂಬ ಸದಸ್ಯರಲ್ಲಿ ಪ್ರೀತಿ ಐಕ್ಯತೆಯ ಬಾಂಧವ್ಯ ಇರಬೇಕು ಹಾಗೂ ಆಧ್ಯಾತ್ಮ ಸ್ಥಿತಿ ಚೆನ್ನಾಗಿರಬೇಕು ಎನ್ನುವುದು ಯೆಹೋವ ದೇವರ ಇಚ್ಛೆ. ಹಾಗಾಗಿ ಕುಟುಂಬ ಸದಸ್ಯರು ಒಟ್ಟಿಗೆ ಸಮಯ ಕಳೆಯಬೇಕೆಂದು ಆತನು ಅಗತ್ಯಪಡಿಸಿದನು. (ಧರ್ಮೋಪದೇಶಕಾಂಡ 6:6, 7) ಆ ಕಾರಣದಿಂದಲೇ ಯೆಹೋವನ ಸಾಕ್ಷಿಗಳು ವಾರದ ಒಂದು ದಿನ ನಿರ್ದಿಷ್ಟ ಸಮಯವನ್ನು ಕುಟುಂಬ ಆರಾಧನೆಗೆಂದು ಮೀಸಲಿಡುತ್ತಾರೆ. ಎಲ್ಲರೂ ಒಟ್ಟುಗೂಡಿ ಉಲ್ಲಾಸಮಯವಾಗಿ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುತ್ತಾರೆ. ನೀವು ಒಬ್ಬಂಟಿಯಾಗಿದ್ದರೂ ಇದೇ ರೀತಿ ನಿರ್ದಿಷ್ಟ ಸಮಯ ಮೀಸಲಿಟ್ಟು ಬೈಬಲನ್ನು ಆಳವಾಗಿ ತಿಳಿದುಕೊಳ್ಳಲು ಕಾರ್ಯಯೋಜನೆ ಹಾಕಿಕೊಳ್ಳಬಹುದು.

ಯೆಹೋವ ದೇವರೊಂದಿಗೆ ಆಪ್ತರಾಗುವ ಸಮಯ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ನಾವು ಯೆಹೋವ ದೇವರಿಗೆ ಸಮೀಪವಾಗಬೇಕಾದರೆ ಆತನ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕೆ ಆತನ ವಾಕ್ಯವಾದ ಬೈಬಲನ್ನು ಓದುವುದು ಅಗತ್ಯ. ಅದರಲ್ಲಿ ಆತನ ವ್ಯಕ್ತಿತ್ವ ಹಾಗೂ ಕಾರ್ಯವೈಖರಿಯ ಬಗ್ಗೆ ಬೇಕಾದಷ್ಟು ವಿವರಗಳಿವೆ. ಬೈಬಲನ್ನು ಒಟ್ಟಿಗೆ ಓದುವುದು ಕುಟುಂಬ ಆರಾಧನೆಯನ್ನು ಆರಂಭಿಸುವ ಒಂದು ಸುಲಭ ವಿಧಾನ. ಜೀವನ ಮತ್ತು ಸೇವೆ ಕೂಟದ ಕಾರ್ಯತಖ್ತೆಯಲ್ಲಿ ಆಯಾ ವಾರಕ್ಕೆ ಬೈಬಲಿನ ಇಂತಿಷ್ಟು ಅಧ್ಯಾಯಗಳನ್ನು ನಿಗದಿಸಲಾಗಿರುತ್ತದೆ. ಆ ಅಧ್ಯಾಯಗಳನ್ನೇ ನೀವು ಕುಟುಂಬವಾಗಿ ಓದಬಹುದು. ಓದುವಿಕೆಯಲ್ಲಿ ಎಲ್ಲರೂ ಭಾಗ ತೆಗೆದುಕೊಳ್ಳಬಹುದು. ನಂತರ ಅವುಗಳಲ್ಲಿರುವ ಪಾಠಗಳನ್ನು ಪ್ರತಿಯೊಬ್ಬರು ಹಂಚಿಕೊಳ್ಳಬಹುದು.

ಕುಟುಂಬ ಸದಸ್ಯರು ಪರಸ್ಪರ ಆಪ್ತರಾಗುವ ಸಮಯ. ಕುಟುಂಬವಾಗಿ ಬೈಬಲನ್ನು ಓದುವಾಗ ಪತಿ-ಪತ್ನಿ, ಪೋಷಕರು-ಮಕ್ಕಳ ನಡುವೆ ಪ್ರೀತಿ ಹೆಚ್ಚಿ ಸಂಬಂಧ ಬಿಗಿಯಾಗುತ್ತದೆ. ಕುಟುಂಬ ಆರಾಧನೆಯ ಸಮಯ ಉಲ್ಲಾಸವಾಗಿ ಇರಬೇಕು, ಕುಟುಂಬದ ಪ್ರತಿ ಸದಸ್ಯರು ಆ ಸಮಯಕ್ಕಾಗಿ ಮುನ್ನೋಡುವಂತೆ ಇರಬೇಕು. ಹಾಗಿರಬೇಕೆಂದರೆ ಹೆತ್ತವರು ತಮ್ಮ ಮಕ್ಕಳ ವಯೋಮಿತಿಗೆ ತಕ್ಕ ಹಾಗೂ ಅವರಿಗೆ ನೆರವಾಗುವ ವಿಚಾರಗಳನ್ನು ಚರ್ಚಿಸಬೇಕು. ಅಂಥ ವಿಚಾರಗಳು ನಿಮಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯಲ್ಲಿ ಅಥವಾ ನಮ್ಮ jw.org ವೆಬ್‌ಸೈಟಿನಲ್ಲಿ ಸಿಗುತ್ತವೆ. ಮಕ್ಕಳಿಗೆ ಶಾಲೆಯಲ್ಲಿ ಸಮಸ್ಯೆಗಳಿವೆಯೋ ಎಂದು ಕೇಳಿ ತಿಳಿದು ಅವನ್ನು ನಿವಾರಿಸುವುದು ಹೇಗೆಂದು ತಿಳಿಸಿ. ಅದಕ್ಕಾಗಿ JW ಪ್ರಸಾರದಲ್ಲಿ (tv.pr418.com) ಬರುವ ಕಾರ್ಯಕ್ರಮವನ್ನು ನೋಡಿ, ಕುಟುಂಬವಾಗಿ ಚರ್ಚಿಸಿ. ಸಭಾ ಕೂಟಗಳಲ್ಲಿ ಹಾಡಲಾಗುವ ಸ್ತುತಿಗೀತೆಗಳನ್ನು ಪ್ರ್ಯಾಕ್ಟಿಸ್‌ ಮಾಡುವುದು ಮತ್ತು ಕೊನೆಗೆ ತಿಂಡಿತಿನಿಸುಗಳನ್ನು ಸವಿಯುವುದು ಎಲ್ಲರಲ್ಲೂ ಹರ್ಷಾನಂದ ಹೆಚ್ಚಿಸುತ್ತದೆ.

ಹೀಗೆ ಪ್ರತಿವಾರ ಕುಟುಂಬ ಆರಾಧನೆ ಮಾಡಿ ಯೆಹೋವ ದೇವರನ್ನು ಸ್ತುತಿಸಿ. ಬೈಬಲ್‌ ವಿಷಯಗಳನ್ನು ಕಲಿತು ಹರ್ಷಾನಂದ ಕಂಡುಕೊಳ್ಳಲು ಇದು ಕುಟುಂಬಕ್ಕೆ ಸುಸಮಯ ಒದಗಿಸುತ್ತದೆ. ಕುಟುಂಬ ಆರಾಧನೆಯನ್ನು ತಪ್ಪದೆ ಮಾಡಲು ನೀವು ಹಾಕುವ ಶ್ರಮವನ್ನು ದೇವರು ನಿಸ್ಸಂದೇಹವಾಗಿ ಆಶೀರ್ವದಿಸುತ್ತಾನೆ.—ಕೀರ್ತನೆ 1:1-3.

  • ನಾವೇಕೆ ಕುಟುಂಬ ಆರಾಧನೆಗೆ ಸಮಯ ಮೀಸಲಿಡುತ್ತೇವೆ?

  • ಕುಟುಂಬ ಆರಾಧನೆ ಆನಂದಮಯ ಆಗಿರಲು ಹೆತ್ತವರು ಏನು ಮಾಡಬೇಕು?