ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 19

ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಯಾರು?

ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಯಾರು?

ಆಧ್ಯಾತ್ಮಿಕ ಆಹಾರದ ಪ್ರಯೋಜನ ಅಪಾರ

ಯೇಸು ತಾನು ಸಾವನ್ನಪ್ಪುವ ಕೆಲವು ದಿನಗಳ ಮುಂಚೆ ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯ ಎಂಬ ತನ್ನ ನಾಲ್ವರು ಶಿಷ್ಯರ ಜೊತೆ ಮಾತುಕತೆ ನಡೆಸಿದನು. ಅವರಿಗೆ ದುಷ್ಟ ಲೋಕದ ಅಂತ್ಯ ಯಾವಾಗ ಎಂದು ಸೂಚನೆ ನೀಡುವಾಗ ಒಂದು ಪ್ರಶ್ನೆ ಕೇಳಿದನು. “ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?” (ಮತ್ತಾಯ 24:3, 45; ಮಾರ್ಕ 13:3, 4) ಅದು ಕೇವಲ ಪ್ರಶ್ನೆ ಆಗಿರಲಿಲ್ಲ. ಯಜಮಾನನಾದ ಯೇಸು ನೀಡಿದ ಭರವಸೆಯಾಗಿತ್ತು. ಕಡೇದಿವಸಗಳಲ್ಲಿ ತನ್ನ ಅನುಯಾಯಿಗಳಿಗೆ ಆಧ್ಯಾತ್ಮಿಕ ಆಹಾರ ಒದಗಿಸಲು ಕೆಲವರನ್ನು ನೇಮಿಸುವುದಾಗಿ ಯೇಸು ಹೇಳಿದನು. ಅವರನ್ನೇ “ಆಳು” ಎಂದನು. ಆ “ಆಳು” ಯಾರು?

ಯೇಸುವಿನ ಅಭಿಷಿಕ್ತ ಹಿಂಬಾಲಕರ ಒಂದು ಚಿಕ್ಕ ಗುಂಪು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಈ ‘ಆಳಾಗಿ’ ಕಾರ್ಯನಿರ್ವಹಿಸುತ್ತಿದೆ. ಈ ಆಳು ಸಹಆರಾಧಕರಿಗೆ ಆಧ್ಯಾತ್ಮಿಕ ಆಹಾರ ಒದಗಿಸುವುದರಲ್ಲಿ ಕ್ರಿಯಾಶೀಲ. ನಮ್ಮ ಪಾಲಿನ ಆಧ್ಯಾತ್ಮಿಕ ಆಹಾರವನ್ನು ತಕ್ಕ ಸಮಯಕ್ಕೆ ಹೇರಳವಾಗಿ ಅಳೆದುಕೊಡುವುದರಿಂದ ನಾವು ಸದಾ ಆ ಆಳಿನ ಮೇಲೆ ಅವಲಂಬಿತರು.—ಲೂಕ 12:42.

ದೇವರ ಭೂಪರಿವಾರವನ್ನು ನೋಡಿಕೊಳ್ಳುತ್ತದೆ. (1 ತಿಮೊಥೆಯ 3:15) ಯೆಹೋವ ದೇವರ ಸಂಘಟನೆಯ ಭೂ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯೇಸು ಈ ನಂಬಿಗಸ್ತ ಆಳಿಗೆ ಒಪ್ಪಿಸಿದ್ದಾನೆ. ಸುವಾರ್ತೆ ಸಾರುವ ಕೆಲಸ, ಸಭೆಯ ಮೂಲಕ ನಮಗೆ ಉಪದೇಶ ನೀಡುವ ಕಾರ್ಯ ಹಾಗೂ ಸಂಘಟನೆಯ ಎಲ್ಲಾ ಆಸ್ತಿಪಾಸ್ತಿಗಳ ಉಸ್ತುವಾರಿಯನ್ನು ಆಳು ನೋಡಿಕೊಳ್ಳುತ್ತದೆ. ಹೀಗೆ ಇಂದು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ನಮಗೆ ಬೇಕಾದ ಆಧ್ಯಾತ್ಮಿಕ ಆಹಾರವನ್ನು ಸಾಹಿತ್ಯ, ಸಭಾ ಕೂಟ, ಸಮ್ಮೇಳನಗಳ ಮುಖೇನ ಸಮಯಕ್ಕೆ ಸರಿಯಾಗಿ ಒದಗಿಸುತ್ತಿದೆ.

ಈ ಆಳು ನಿಜವಾಗಲೂ ನಂಬಿಗಸ್ತ. ಏಕೆಂದರೆ ಬೈಬಲ್‌ ಹೇಳುವುದನ್ನು ಹಾಗೂ ಸುವಾರ್ತೆ ಸಾರುವುದನ್ನು ನಿಷ್ಠೆಯಿಂದ ಮಾಡುತ್ತದೆ. ಅದೇ ರೀತಿ ವಿವೇಚನೆಯುಳ್ಳ ಆಳು. ಏಕೆಂದರೆ ಕ್ರಿಸ್ತನು ಅವರ ವಶಕ್ಕೆ ಒಪ್ಪಿಸಿರುವ ಸಕಲವನ್ನೂ ಜಾಣ್ಮೆಯಿಂದ ನಿರ್ವಹಿಸಿ ನೋಡಿಕೊಳ್ಳುತ್ತದೆ. (ಅಪೊಸ್ತಲರ ಕಾರ್ಯಗಳು 10:42) ಈ ಆಳು ಮಾಡುತ್ತಿರುವ ಕೆಲಸವನ್ನು ದೇವರು ಆಶೀರ್ವದಿಸಿ ಹೇರಳ ಆಧ್ಯಾತ್ಮಿಕ ಆಹಾರ ಒದಗಿಸಲು ಸಹಾಯ ಮಾಡುತ್ತಿದ್ದಾನೆ.—ಯೆಶಾಯ 60:22; 65:13.

  • ತನ್ನ ಅನುಯಾಯಿಗಳಿಗೆ ಆಧ್ಯಾತ್ಮಿಕ ಆಹಾರ ಒದಗಿಸಲು ಯೇಸು ಯಾರನ್ನು ನೇಮಿಸಿದನು?

  • ಈ ಆಳನ್ನು ನಂಬಿಗಸ್ತನೂ ವಿವೇಚನೆಯುಳ್ಳವನೂ ಎಂದು ಹೇಳುವುದೇಕೆ?