ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 4

ಅಪ್ಪ ಮತ್ತು ಯೆಹೋವನನ್ನು ಖುಷಿಪಡಿಸಿದ ಮಗಳು

ಅಪ್ಪ ಮತ್ತು ಯೆಹೋವನನ್ನು ಖುಷಿಪಡಿಸಿದ ಮಗಳು

ಯೆಪ್ತಾಹ ಯೆಹೋವನಿಗೆ ಏನಂತ ಮಾತು ಕೊಡುತ್ತಿದ್ದಾನೆ?

ಕಷ್ಟವಾದರೂ ಯೆಪ್ತಾಹನ ಮಗಳು ಅಪ್ಪನ ಮಾತನ್ನು ನಡೆಸಿಕೊಟ್ಟಳು

ಈ ಚಿತ್ರದಲ್ಲಿರುವ ಹುಡುಗಿ ಯಾರು ಅಂತ ಗೊತ್ತಾ?— ಅವಳು ಯೆಪ್ತಾಹ ಎಂಬವನ ಮಗಳು. ಬೈಬಲಲ್ಲಿ ಅವಳ ಹೆಸರಿಲ್ಲ. ಆದರೆ ಅವಳು ತನ್ನ ಅಪ್ಪನನ್ನು ಮತ್ತು ಯೆಹೋವ ದೇವರನ್ನು ಹೇಗೆ ಸಂತೋಷಪಡಿಸಿದಳು ಅಂತ ಇದೆ. ನಾವೀಗ ಅವಳ ಬಗ್ಗೆ ಮತ್ತು ಅವಳ ಅಪ್ಪ ಯೆಪ್ತಾಹನ ಬಗ್ಗೆ ತಿಳಿಯೋಣ.

ಯೆಪ್ತಾಹ ಒಬ್ಬ ಒಳ್ಳೇ ಮನುಷ್ಯನಾಗಿದ್ದ. ಮಗಳಿಗೆ ಯೆಹೋವನ ಬಗ್ಗೆ ಕಲಿಸಲು ತುಂಬ ಸಮಯ ಕೊಡುತ್ತಿದ್ದ. ಅಷ್ಟೇ ಅಲ್ಲ ಅವನಿಗೆ ತುಂಬ ಶಕ್ತಿ ಇತ್ತು. ಒಳ್ಳೇ ನಾಯಕ ಕೂಡ ಆಗಿದ್ದ. ಹಾಗಾಗಿ ಇಸ್ರಾಯೇಲ್ಯರು ವೈರಿಗಳ ಜೊತೆ ಯುದ್ಧ ಮಾಡುವಾಗ ತಮ್ಮ ನಾಯಕನಾಗಿರಲು ಅವನನ್ನು ಕೇಳಿಕೊಂಡರು.

ಆ ಯುದ್ಧದಲ್ಲಿ ಗೆಲ್ಲಲು ಯೆಪ್ತಾಹ ದೇವರ ಸಹಾಯಕ್ಕಾಗಿ ಬೇಡಿಕೊಂಡ. ಅಷ್ಟೇ ಅಲ್ಲ ಯೆಹೋವನಿಗೆ ಒಂದು ಮಾತುಕೊಟ್ಟ. ಅದೇನೆಂದರೆ ಒಂದುವೇಳೆ ಯುದ್ಧದಲ್ಲಿ ಗೆದ್ದರೆ, ಮನೆಗೆ ಬಂದಾಗ ಮೊದಲು ಹೊರಗೆ ಬರುವವರನ್ನು ನಿನಗೆ ಕೊಡುತ್ತೇನೆ ಅಂತ ಹೇಳಿದ. ಇದರರ್ಥ ಆ ವ್ಯಕ್ತಿ ದೇವರ ಗುಡಾರದಲ್ಲೇ ಇದ್ದು ಇಡೀ ಜೀವಮಾನ ಆತನ ಸೇವೆ ಮಾಡಬೇಕಿತ್ತು. * ದೇವರ ಗುಡಾರ ಹಿಂದಿನ ಕಾಲದಲ್ಲಿ ಜನರು ದೇವರನ್ನು ಆರಾಧಿಸುವ ಸ್ಥಳವಾಗಿತ್ತು. ಯೆಪ್ತಾಹ ಬೇಡಿಕೊಂಡಂತೆ ಯುದ್ಧದಲ್ಲಿ ಗೆದ್ದೇ ಬಿಟ್ಟ! ಗೆದ್ದು ಮನೆಗೆ ಬರುವಾಗ ಮನೆಯಿಂದ ಮೊದಲು ಹೊರಗೆ ಬಂದದ್ದು ಯಾರು ಗೊತ್ತಾ?—

ಯೆಪ್ತಾಹನ ಮಗಳು! ಅವಳನ್ನು ಬಿಟ್ಟರೆ ಅವನಿಗೆ ಬೇರೆ ಮಕ್ಕಳೇ ಇರಲಿಲ್ಲ. ಈಗ ಅವಳನ್ನೇ ದೇವರ ಗುಡಾರಕ್ಕೆ ಕಳುಹಿಸಬೇಕಾಗಿತ್ತು. ಅವನಿಗೆ ತುಂಬ ಬೇಜಾರಾಯಿತು. ಆದರೆ ಅವನು ದೇವರಿಗೆ ಮಾತುಕೊಟ್ಟಿದ್ದನು ಅಲ್ವಾ. ತಕ್ಷಣ ಮಗಳು, ‘ಅಪ್ಪಾ, ನೀವು ಯೆಹೋವನಿಗೆ ಮಾತುಕೊಟ್ಟಿದ್ದೀರಿ. ಕೊಟ್ಟ ಮಾತಿನಂತೆ ನಡೆಯಬೇಕು ಅಪ್ಪಾ’ ಎಂದಳು.

ಯೆಪ್ತಾಹನ ಮಗಳನ್ನು ನೋಡಲು ಅವಳ ಗೆಳತಿಯರು ಪ್ರತಿ ವರ್ಷ ಹೋಗುತ್ತಿದ್ದರು

ಅವಳಿಗೂ ತುಂಬ ಬೇಜಾರಾಯಿತು. ಯಾಕೆಂದರೆ ದೇವರ ಗುಡಾರಕ್ಕೆ ಹೋದಮೇಲೆ ಅವಳು ಮದುವೆ ಆಗುವಂತಿರಲಿಲ್ಲ. ಅವಳಿಗೆ ಮಕ್ಕಳಾಗುವಂತಿರಲಿಲ್ಲ. ಆದರೆ ದೇವರಿಗೆ ಅಪ್ಪ ಕೊಟ್ಟ ಮಾತನ್ನು ನಡೆಸಿ ಕೊಡುವುದು ಮತ್ತು ಯೆಹೋವನನ್ನು ಖುಷಿಪಡಿಸುವುದೇ ಅವಳಿಗೆ ಮುಖ್ಯವಾಗಿತ್ತು. ಮದುವೆಯಾಗುವುದು, ಮಕ್ಕಳಾಗುವುದು ಮುಖ್ಯ ಆಗಿರಲಿಲ್ಲ. ಹಾಗಾಗಿ ಅವಳು ದೇವರ ಗುಡಾರಕ್ಕೆ ಹೋಗಿ ಜೀವನ ಪೂರ್ತಿ ಅಲ್ಲೇ ಇದ್ದಳು.

ಅವಳು ಹೀಗೆ ಮಾಡಿದಾಗ ಅವಳ ಅಪ್ಪ ಮತ್ತು ಯೆಹೋವನಿಗೆ ಖುಷಿ ಆಯಿತಾ?— ಹೌದು ಖುಷಿ ಆಯಿತು! ಯೆಪ್ತಾಹನ ಮಗಳಂತೆ ನೀನು ಕೂಡ ಹೇಳಿದ ಮಾತು ಕೇಳಿದರೆ ಮತ್ತು ಯೆಹೋವನನ್ನು ಪ್ರೀತಿಸಿದರೆ ಅಪ್ಪಅಮ್ಮನಿಗೆ ಮತ್ತು ಯೆಹೋವನಿಗೆ ಖುಷಿ ಆಗುತ್ತದೆ.

^ ಪ್ಯಾರ. 5 ನ್ಯಾಯಸ್ಥಾಪಕರು 11:31⁠ರಲ್ಲಿ ತಿಳಿಸಲಾದ “ಮೊದಲು ಬರುವಂಥ ಪ್ರಾಣಿ” ಎಂಬದನ್ನು ನೂತನ ಲೋಕ ಭಾಷಾಂತರ “ಮೊದಲು ಬರುವ ವ್ಯಕ್ತಿ” ಎಂದು ಹೇಳುತ್ತದೆ.