ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 4

ಯೇಸು ಕ್ರಿಸ್ತ ಯಾರು?

ಯೇಸು ಕ್ರಿಸ್ತ ಯಾರು?

1, 2. (ಎ) ಒಬ್ಬ ವ್ಯಕ್ತಿಯ ಹೆಸರು ಗೊತ್ತಿದೆ ಅಂದ ಮಾತ್ರಕ್ಕೆ ಅವನ ಬಗ್ಗೆ ನಿಮಗೆ ಎಲ್ಲ ಗೊತ್ತಿದೆ ಅಂತ ಅರ್ಥನಾ? ವಿವರಿಸಿ. (ಬಿ) ಯೇಸು ಯಾರೆಂದು ಜನರು ಅಂದುಕೊಂಡಿದ್ದಾರೆ?

ಪ್ರಪಂಚದಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಇದ್ದಾರೆ. ಅವರ ಹೆಸರು ನಿಮಗೆ ಗೊತ್ತಿರಬಹುದು. ಹೆಸರು ಗೊತ್ತಿದೆ ಅಂದ ಮಾತ್ರಕ್ಕೆ ಅವರ ಬಗ್ಗೆ ನಿಮಗೆ ಎಲ್ಲ ಗೊತ್ತಿದೆ ಅಂತ ಅರ್ಥನಾ? ಇಲ್ಲ. ಏಕೆಂದರೆ ಅವರ ಹಿನ್ನೆಲೆಯ ಬಗ್ಗೆ, ಜೀವನದ ಬಗ್ಗೆ, ಅವರ ಗುಣಗಳ ಬಗ್ಗೆ ನಿಮಗೆ ಗೊತ್ತಿರಲಿಕ್ಕಿಲ್ಲ.

2 ಯೇಸು ಕ್ರಿಸ್ತನು ಜೀವಿಸಿದ್ದು ಸುಮಾರು 2,000 ವರ್ಷಗಳ ಹಿಂದೆಯಾದರೂ ಆತನೊಬ್ಬ ಪ್ರಸಿದ್ಧ ವ್ಯಕ್ತಿಯೆಂದು ಈಗಲೂ ತುಂಬ ಜನರಿಗೆ ಗೊತ್ತಿದೆ. ಅನೇಕರಿಗೆ ಆತನ ಹೆಸರು ಗೊತ್ತಿದೆಯಾದರೂ ಆತನು ಯಾವ ರೀತಿಯ ವ್ಯಕ್ತಿ, ಆತನಲ್ಲಿ ಎಂಥ ಗುಣಗಳಿದ್ದವು ಎಂದು ಗೊತ್ತಿಲ್ಲ. ಕೆಲವರು ಆತನೊಬ್ಬ ಒಳ್ಳೇ ವ್ಯಕ್ತಿ ಎಂದು ಹೇಳುತ್ತಾರೆ. ಇನ್ನು ಕೆಲವರು ಆತನನ್ನು ಪ್ರವಾದಿ ಅನ್ನುತ್ತಾರೆ. ಮಾತ್ರವಲ್ಲ ಆತನನ್ನು ದೇವರು ಎಂದು ಸಹ ಕೆಲವರು ನಂಬುತ್ತಾರೆ. ನಿಮಗೆ ಏನು ಅನಿಸುತ್ತದೆ? ಯೇಸು ಯಾರು?—ಟಿಪ್ಪಣಿ 12⁠ನ್ನು ನೋಡಿ.

3. ಯೆಹೋವ ದೇವರ ಬಗ್ಗೆ ಮತ್ತು ಯೇಸು ಕ್ರಿಸ್ತನ ಬಗ್ಗೆ ಯಾಕೆ ತಿಳಿದುಕೊಳ್ಳಬೇಕು?

3 ಯೇಸು ಕ್ರಿಸ್ತನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವುದು ತುಂಬ ಪ್ರಾಮುಖ್ಯ. ಏಕೆಂದರೆ ಬೈಬಲಿನಲ್ಲಿ ಹೀಗಿದೆ: “ಒಬ್ಬನೇ ಸತ್ಯ ದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವುದೇ ನಿತ್ಯಜೀವ.” (ಯೋಹಾನ 17:3) ಅಂದರೆ, ನಾವು ಯೆಹೋವ ದೇವರ ಬಗ್ಗೆ ಮತ್ತು ಯೇಸು ಕ್ರಿಸ್ತನ ಬಗ್ಗೆ ಚೆನ್ನಾಗಿ ತಿಳಿದುಕೊಂಡರೆ ಮುಂದೆ ಈ ಭೂಮಿ ಸುಂದರ ತೋಟವಾದಾಗ ಅದರಲ್ಲಿ ಸಾವಿಲ್ಲದ ಜೀವನ ನಮಗೆ ಸಿಗುತ್ತದೆ. (ಯೋಹಾನ 14:6) ಅಷ್ಟೇ ಅಲ್ಲ, ಯೇಸುವಿನ ಬಗ್ಗೆ ತಿಳಿದುಕೊಳ್ಳುವುದರಿಂದ ನಾವು ಹೇಗೆ ಜೀವಿಸಬೇಕು, ಬೇರೆಯವರೊಟ್ಟಿಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿಯುತ್ತೇವೆ. (ಯೋಹಾನ 13:34, 35) 1⁠ನೇ ಅಧ್ಯಾಯದಲ್ಲಿ ಯೆಹೋವ ದೇವರ ಬಗ್ಗೆ ಕಲಿತೆವು. ಈಗ ಯೇಸುವಿನ ಬಗ್ಗೆ ಕಲಿಯೋಣ.

ನಮಗೆ ಮೆಸ್ಸೀಯನು ಸಿಕ್ಕಿದ್ದಾನೆ

4. ತುಂಬ ವರ್ಷಗಳ ಹಿಂದೆಯೇ ದೇವರು ಏನೆಂದು ಮಾತು ಕೊಟ್ಟಿದ್ದನು?

4 ತುಂಬ ವರ್ಷಗಳ ಹಿಂದೆಯೇ, ಮೆಸ್ಸೀಯನನ್ನು ಅಥವಾ ಕ್ರಿಸ್ತನನ್ನು ಕಳುಹಿಸುತ್ತೇನೆ ಎಂದು ದೇವರು ಮಾತು ಕೊಟ್ಟಿದ್ದನು. “ಮೆಸ್ಸೀಯ” ಎಂಬ ಪದ ಹೀಬ್ರು ಭಾಷೆಯಿಂದ ಬಂದದ್ದು. “ಕ್ರಿಸ್ತ” ಎಂಬ ಪದ ಗ್ರೀಕ್‌ ಭಾಷೆಯಿಂದ ಬಂದದ್ದು. ಈ ಎರಡೂ ಬಿರುದುಗಳ ಅರ್ಥ ‘ದೇವರು ಒಬ್ಬ ವ್ಯಕ್ತಿಯನ್ನು ಆರಿಸಿ ಅವನಿಗೆ ವಿಶೇಷ ಸ್ಥಾನವನ್ನು ಕೊಡುತ್ತಾನೆ’ ಎಂದಾಗಿದೆ. ದೇವರು ಕೊಟ್ಟಿರುವ ಮಾತುಗಳನ್ನೆಲ್ಲ ಆ ವ್ಯಕ್ತಿ ನಿಜ ಮಾಡಲಿದ್ದನು. ಮೆಸ್ಸೀಯ ಅಥವಾ ಕ್ರಿಸ್ತನಿಂದ ನಾವು ಪಡೆಯಲಿರುವ ಪ್ರಯೋಜನಗಳ ಬಗ್ಗೆ ಮುಂದೆ ಕಲಿಯಲಿದ್ದೇವೆ. ಆದರೆ ‘ದೇವರು ಕಳುಹಿಸಿದ ಆ ಮೆಸ್ಸೀಯ ಯಾರು?’ ಎಂಬ ಪ್ರಶ್ನೆ ನಿಮಗೆ ಬರಬಹುದು. ಯೇಸು ಹುಟ್ಟುವುದಕ್ಕಿಂತ ಮುಂಚೆ ಕೂಡ ತುಂಬ ಜನರಿಗೆ ಮೆಸ್ಸೀಯನು ಯಾರು ಎಂಬ ಕುತೂಹಲವಿತ್ತು.

5. ಯೇಸುವಿನ ಶಿಷ್ಯರಿಗೆ ಯೇಸುವೇ ಮೆಸ್ಸೀಯ ಎಂಬ ನಂಬಿಕೆ ಇತ್ತಾ?

5 ಯೇಸುವೇ ಮೆಸ್ಸೀಯನು ಅಥವಾ ಕ್ರಿಸ್ತನು ಎಂದು ಯೇಸುವಿನ ಶಿಷ್ಯರಿಗೆ ಚೆನ್ನಾಗಿ ಗೊತ್ತಿತ್ತು. ಅದರ ಬಗ್ಗೆ ಅವರಿಗೆ ಸ್ವಲ್ಪವೂ ಸಂದೇಹ ಇರಲಿಲ್ಲ. (ಯೋಹಾನ 1:41) ಸೀಮೋನ ಪೇತ್ರ ಒಮ್ಮೆ ಯೇಸುವಿಗೆ “ನೀನು ಕ್ರಿಸ್ತನು” ಎಂದು ಹೇಳಿದನು. (ಮತ್ತಾಯ 16:16) ಯೇಸುವೇ ಮೆಸ್ಸೀಯನು ಎಂದು ಅವರಿಗೆ ಹೇಗೆ ಗೊತ್ತಾಯಿತು?

6. ಮೆಸ್ಸೀಯನು ಯಾರೆಂದು ಕಂಡುಹಿಡಿಯಲು ಯೆಹೋವ ದೇವರು ಜನರಿಗೆ ಹೇಗೆ ಸಹಾಯ ಮಾಡಿದನು?

6 ಯೇಸು ಹುಟ್ಟುವುದಕ್ಕಿಂತ ತುಂಬ ಮುಂಚೆ ದೇವರು ಪ್ರವಾದಿಗಳ ಮೂಲಕ ಮೆಸ್ಸೀಯನ ಬಗ್ಗೆ ಅನೇಕ ವಿವರಗಳನ್ನು ಬರೆಸಿಟ್ಟಿದ್ದನು. ಈ ವಿವರಗಳು ಮೆಸ್ಸೀಯನು ಯಾರೆಂದು ಕಂಡುಹಿಡಿಯಲು ಸಹಾಯ ಮಾಡಿದವು. ಇದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆ ನೋಡಿ. ನೀವು ಬಸ್‌ ನಿಲ್ದಾಣಕ್ಕೆ ಹೋಗಿ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬರಬೇಕು. ಆದರೆ ಅವನನ್ನು ನೀವು ಇಲ್ಲಿಯವರೆಗೆ ಒಂದು ಸಲವೂ ನೋಡಿಲ್ಲ. ಹಾಗಾದರೆ ಹೇಗೆ ಅವನನ್ನು ಗುರುತು ಹಿಡಿಯುತ್ತೀರಿ? ಆ ವ್ಯಕ್ತಿ ನೋಡಲು ಹೇಗಿದ್ದಾನೆ, ಯಾವ ಬಣ್ಣದ ಬಟ್ಟೆ ಹಾಕಿದ್ದಾನೆ, ಎಷ್ಟು ಗಂಟೆಗೆ ಬರುತ್ತಾನೆ ಅನ್ನುವ ವಿವರಗಳನ್ನು ಕೊಟ್ಟರೆ ನೀವು ಅವನನ್ನು ಸುಲಭವಾಗಿ ಗುರುತು ಹಿಡಿಯಬಹುದು. ಹಾಗೆಯೇ ಮೆಸ್ಸೀಯನು ಏನೆಲ್ಲ ಮಾಡುತ್ತಾನೆ, ಆತನಿಗೆ ಏನಾಗುತ್ತದೆ, ಇಂಥ ಅನೇಕ ವಿವರಗಳನ್ನು ಯೆಹೋವ ದೇವರು ಪ್ರವಾದಿಗಳ ಮೂಲಕ ಕೊಟ್ಟಿದ್ದನು. ಈ ಎಲ್ಲ ವಿವರಗಳು ಯೇಸುವಿನ ಜೀವನದಲ್ಲಿ ನಿಜ ಆಗಿದ್ದರಿಂದ ಆತನೇ ಮೆಸ್ಸೀಯ ಎಂದು ಕಂಡುಹಿಡಿಯಲು ಜನರಿಗೆ ಸುಲಭವಾಯಿತು.

7. ಯೇಸುವೇ ಮೆಸ್ಸೀಯನು ಎಂದು ಕಂಡುಹಿಡಿಯಲು ಸಹಾಯಮಾಡಿದ ವಿವರಗಳಲ್ಲಿ ಎರಡನ್ನು ತಿಳಿಸಿ.

7 ಯೆಹೋವನು ಪ್ರವಾದಿಗಳ ಮೂಲಕ ಬರೆಸಿದ ವಿವರಗಳಲ್ಲಿ ಎರಡನ್ನು ನಾವೀಗ ನೋಡೋಣ. ಮೊದಲನೇದಾಗಿ, ಯೇಸು ಹುಟ್ಟುವ 700 ವರ್ಷಗಳ ಮುಂಚೆಯೇ ದೇವರು ಪ್ರವಾದಿ ಮೀಕನ ಮೂಲಕ ಮೆಸ್ಸೀಯನು ಬೇತ್ಲೆಹೇಮ್‌ ಎಂಬ ಚಿಕ್ಕ ಪಟ್ಟಣದಲ್ಲಿ ಹುಟ್ಟುತ್ತಾನೆ ಎಂದು ಬರೆಸಿದನು. (ಮೀಕ 5:2) ಯೇಸು ಜನಿಸಿದ್ದು ಅದೇ ಪಟ್ಟಣದಲ್ಲಿ! (ಮತ್ತಾಯ 2:1, 3-9) ಎರಡನೇದಾಗಿ, ಮೆಸ್ಸೀಯನು ಕ್ರಿ.ಶ. 29⁠ರಲ್ಲಿ ಬರುತ್ತಾನೆ ಎಂದು ದಾನಿಯೇಲ ಎಂಬ ಪ್ರವಾದಿಯ ಮೂಲಕ ದೇವರು ಹೇಳಿದ್ದನು. (ದಾನಿಯೇಲ 9:25) ಅದು ಕೂಡ ಯೇಸುವಿನ ವಿಷಯದಲ್ಲಿ ನಿಜವಾಯಿತು. ಯೇಸುವೇ ಮೆಸ್ಸೀಯನು ಎಂದು ಸ್ಪಷ್ಟವಾಗಿ ರುಜುಪಡಿಸುವ ಇನ್ನೂ ಅನೇಕ ವಿವರಗಳು ಬೈಬಲಿನಲ್ಲಿವೆ.—ಟಿಪ್ಪಣಿ 13⁠ನ್ನು ನೋಡಿ.

ಯೇಸು ದೀಕ್ಷಾಸ್ನಾನ ಪಡೆದುಕೊಂಡ ಸಂದರ್ಭದಲ್ಲಿ ಮೆಸ್ಸೀಯ ಅಥವಾ ಕ್ರಿಸ್ತನಾದನು

8, 9. ಸ್ನಾನಿಕನಾದ ಯೋಹಾನನಿಗೆ ಯೇಸುವೇ ಮೆಸ್ಸೀಯನು ಎಂದು ಹೇಗೆ ಗೊತ್ತಾಯಿತು?

8 ಸ್ನಾನಿಕನಾದ ಯೋಹಾನನಿಗೆ ಸಹ ಮೆಸ್ಸೀಯ ಯಾರೆಂದು ಕಂಡುಹಿಡಿಯಲು ಯೆಹೋವ ದೇವರು ಒಂದು ಸುಳಿವನ್ನು ಕೊಟ್ಟಿದ್ದನು. ಕ್ರಿ.ಶ. 29⁠ರಲ್ಲಿ ಸ್ನಾನಿಕನಾದ ಯೋಹಾನನು ಯೇಸುವಿಗೆ ಯೋರ್ದನ್‌ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿದಾಗ ಯೆಹೋವನು ಹೇಳಿದಂತೆಯೇ ಆಯಿತು. ಅದರ ಕುರಿತು ಬೈಬಲಿನಲ್ಲಿ ಹೀಗೆ ಹೇಳಲಾಗಿದೆ: “ಯೇಸು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ ನೀರಿನಿಂದ ಕೂಡಲೆ ಮೇಲಕ್ಕೆ ಬರಲು, ಇಗೋ! ಆಕಾಶವು ತೆರೆಯಲ್ಪಟ್ಟಿತು ಮತ್ತು ದೇವರಾತ್ಮವು ಪಾರಿವಾಳದ ರೂಪದಲ್ಲಿ ಅವನ ಮೇಲೆ ಇಳಿದುಬರುತ್ತಿರುವುದನ್ನು ಯೋಹಾನನು ಕಂಡನು. ಇದಲ್ಲದೆ ಆಕಾಶದಿಂದ ಒಂದು ವಾಣಿಯು, ‘ಇವನು ಪ್ರಿಯನಾಗಿರುವ ನನ್ನ ಮಗನು; ಇವನನ್ನು ನಾನು ಮೆಚ್ಚಿದ್ದೇನೆ’ ಎಂದು ಹೇಳಿತು.” (ಮತ್ತಾಯ 3:16, 17) ಹೀಗೆ, ಪವಿತ್ರಾತ್ಮ ಬರುವುದನ್ನು ನೋಡಿದಾಗ ಮತ್ತು ಯೆಹೋವ ದೇವರ ಮಾತುಗಳನ್ನು ಕೇಳಿದಾಗ ಯೋಹಾನನಿಗೆ ಯೇಸುವೇ ಮೆಸ್ಸೀಯನೆಂದು ಸ್ಪಷ್ಟವಾಗಿ ಗೊತ್ತಾಯಿತು. (ಯೋಹಾನ 1:32-34) ಯಾವಾಗ ಯೆಹೋವನು ತನ್ನ ಪವಿತ್ರಾತ್ಮವನ್ನು ಯೇಸುವಿನ ಮೇಲೆ ಸುರಿಸಿದನೋ ಆಗಲೇ ಯೇಸು ಮೆಸ್ಸೀಯನು ಅಥವಾ ಕ್ರಿಸ್ತನು ಆದನು. ಹೀಗೆ ಯೆಹೋವನು ಆತನನ್ನು ನಾಯಕನನ್ನಾಗಿ ಮತ್ತು ರಾಜನನ್ನಾಗಿ ಆಯ್ಕೆಮಾಡಿದನು.—ಯೆಶಾಯ 55:4.

9 ಯೆಹೋವನು ಪ್ರವಾದಿಗಳ ಮೂಲಕ ಬರೆಸಿಟ್ಟಿದ್ದ ವಿವರಗಳು, ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಕಾಣಿಸಿದ ಸೂಚನೆಗಳು ಮತ್ತು ಕೇಳಿಸಿದ ಯೆಹೋವನ ಮಾತುಗಳು ‘ದೇವರು ಕಳುಹಿಸಿದ ಮೆಸ್ಸೀಯನು’ ಯೇಸುವೇ ಎಂದು ರುಜುಪಡಿಸಿದವು. ಆದರೆ ಯೇಸು ಎಲ್ಲಿಂದ ಬಂದನು? ಆತನು ಎಂಥ ವ್ಯಕ್ತಿಯಾಗಿದ್ದನು? ಈ ವಿಷಯಗಳ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ನೋಡೋಣ.

ಯೇಸು ಎಲ್ಲಿಂದ ಬಂದನು?

10. ಭೂಮಿಗೆ ಬರುವ ಮುಂಚೆ ಯೇಸು ಎಲ್ಲಿದ್ದನು?

10 ಯೇಸು ಭೂಮಿಗೆ ಬರುವ ಮುಂಚೆ ಸ್ವರ್ಗದಲ್ಲಿ ಕೋಟ್ಯಂತರ ವರ್ಷಗಳು ಇದ್ದನು. ಅದು ಹೇಗೆ ಗೊತ್ತಾಗುತ್ತದೆ? ಬೈಬಲಿನ ಮೀಕ ಪುಸ್ತಕದಲ್ಲಿ ಆತನ “ಮೂಲವು ಪುರಾತನ” ಎಂದು ಹೇಳಲಾಗಿದೆ. (ಮೀಕ 5:2) ತಾನು ಭೂಮಿಗೆ ಬರುವ ಮೊದಲು ಸ್ವರ್ಗದಲ್ಲಿದ್ದೆ ಎಂದು ಸ್ವತಃ ಯೇಸುವೇ ತುಂಬ ಸಲ ಹೇಳಿದನು. (ಯೋಹಾನ 3:13; 6:38, 62; 17:4, 5 ಓದಿ.) ಸ್ವರ್ಗದಲ್ಲಿದ್ದಾಗಲೂ ಯೇಸುವಿಗೆ ಯೆಹೋವ ದೇವರೊಟ್ಟಿಗೆ ಆಪ್ತ ಸಂಬಂಧವಿತ್ತು.

11. ಯೆಹೋವ ದೇವರಿಗೆ ಯೇಸು ಅಂದರೆ ತುಂಬ ಪ್ರೀತಿ ಯಾಕೆ?

11 ಯೆಹೋವ ದೇವರಿಗೆ ಯೇಸು ಅಂದರೆ ತುಂಬ ಪ್ರೀತಿ. ಯಾಕೆ? ಯಾಕೆಂದರೆ ನಮ್ಮ ಕಣ್ಣಿಗೆ ಕಾಣುವ, ಕಾಣದಿರುವ ಎಲ್ಲವನ್ನು ಸೃಷ್ಟಿಸುವ ಮುಂಚೆ ದೇವರು ಯೇಸುವನ್ನು ಸೃಷ್ಟಿಸಿದನು. ಹಾಗಾಗಿಯೇ ಆತನನ್ನು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ” ಎಂದು ಬೈಬಲಿನಲ್ಲಿ ಕರೆಯಲಾಗಿದೆ. * (ಕೊಲೊಸ್ಸೆ 1:15) ಮಾತ್ರವಲ್ಲ, ಯೆಹೋವನು ಬೇರೆ ಯಾರ ಸಹಾಯವನ್ನು ಪಡೆದುಕೊಳ್ಳದೆ ತಾನೇ ಸೃಷ್ಟಿಸಿದ ಒಬ್ಬನೇ ವ್ಯಕ್ತಿ ಯೇಸು. ಹಾಗಾಗಿ ಆತನಿಗೆ “ಏಕೈಕಜಾತ ಪುತ್ರ” ಅಂದರೆ ‘ಒಬ್ಬನೇ ಮಗ’ ಎಂಬ ಬಿರುದು ಇದೆ. (ಯೋಹಾನ 3:16) ಇನ್ನೊಂದು ವಿಷಯ ಗೊತ್ತಾ? ಯೆಹೋವ ದೇವರು ಯೇಸುವಿನ ಮೂಲಕವೇ ಉಳಿದ ಎಲ್ಲವನ್ನು ಸೃಷ್ಟಿಸಿದನು. (ಕೊಲೊಸ್ಸೆ 1:16) ಯೆಹೋವ ದೇವರು ದೇವದೂತರಿಗೂ ಮನುಷ್ಯರಿಗೂ ಸಂದೇಶಗಳನ್ನು-ಸೂಚನೆಗಳನ್ನು ಯೇಸುವಿನ ಮೂಲಕ ಕಳುಹಿಸುತ್ತಿದ್ದನು. ಹಾಗಾಗಿ ಆತನಿಗೆ ಮಾತ್ರ “ವಾಕ್ಯ” ಎಂಬ ಹೆಸರಿದೆ.—ಯೋಹಾನ 1:14.

12. ಯೇಸು ಮತ್ತು ದೇವರು ಬೇರೆ ಬೇರೆ ವ್ಯಕ್ತಿಗಳು ಎಂದು ನಮಗೆ ಹೇಗೆ ಗೊತ್ತು?

12 ಕೆಲವರು ಯೇಸು ಮತ್ತು ದೇವರು ಬೇರೆ ಬೇರೆಯಲ್ಲ ಒಬ್ಬರೇ ಎಂದು ನಂಬುತ್ತಾರೆ. ಆದರೆ ಬೈಬಲ್‌ ಹಾಗೆ ಕಲಿಸುವುದಿಲ್ಲ. ಯೇಸುವನ್ನು ಸೃಷ್ಟಿ ಮಾಡಲಾಯಿತು ಎಂದು ಬೈಬಲ್‌ ಹೇಳುತ್ತದೆ. ಅಂದಮೇಲೆ ಆತನಿಗೆ ಒಂದು ಆರಂಭ ಇತ್ತು ತಾನೇ? ಆದರೆ ಎಲ್ಲವನ್ನು ಯೆಹೋವನೇ ಸೃಷ್ಟಿಸಿದ್ದರಿಂದ ಆತನಿಗೆ ಆರಂಭ ಇಲ್ಲ, ಕಾರಣ ಆತನು ಯಾವಾಗಲೂ ಇರುವವನು. (ಕೀರ್ತನೆ 90:2) ಯೇಸು ದೇವರ ಮಗನಾಗಿದ್ದರೂ ತಾನು ದೇವರಾಗಬೇಕು ಎಂದು ಯಾವತ್ತೂ ಯೋಚನೆ ಮಾಡಲಿಲ್ಲ. ಅಲ್ಲದೆ, ತಂದೆಯು ಮಗನಿಗಿಂತಲೂ ದೊಡ್ಡವನು ಎಂದು ಬೈಬಲ್‌ ಸ್ಪಷ್ಟವಾಗಿ ಕಲಿಸುತ್ತದೆ. (ಯೋಹಾನ 14:28 ಓದಿ; 1 ಕೊರಿಂಥ 11:3) ಯೆಹೋವನೊಬ್ಬನೇ “ಸರ್ವಶಕ್ತನಾದ ದೇವರು.” (ಆದಿಕಾಂಡ 17:1) ಆತನು ವಿಶ್ವದಲ್ಲೇ ಮಹಾನ್‌ ವ್ಯಕ್ತಿ ಮತ್ತು ಶಕ್ತಿಶಾಲಿ.—ಟಿಪ್ಪಣಿ 14⁠ನ್ನು ನೋಡಿ.

13. ಯೇಸುವನ್ನು “ಅದೃಶ್ಯನಾದ ದೇವರ ಪ್ರತಿರೂಪ” ಎಂದು ಬೈಬಲ್‌ ಯಾಕೆ ಕರೆಯುತ್ತದೆ?

13 ಯೆಹೋವ ದೇವರು ಮತ್ತು ಯೇಸು ಕೋಟಿಗಟ್ಟಲೆ ವರ್ಷ ಜೊತೆಜೊತೆಯಾಗಿ ಕೆಲಸಮಾಡಿದರು. ಆಗ ದೇವದೂತರನ್ನು, ನಕ್ಷತ್ರಗಳನ್ನು, ಸೂರ್ಯ-ಚಂದ್ರರನ್ನು ಸೃಷ್ಟಿ ಮಾಡಿದರು. ಯೋಚಿಸಿ, ಅಷ್ಟು ವರ್ಷ ಒಟ್ಟಿಗೆ ಕೆಲಸಮಾಡಿ ಅವರೆಷ್ಟು ಆಪ್ತರಾಗಿರಬೇಕು, ತಂದೆ-ಮಗನ ಪ್ರೀತಿ ಎಷ್ಟು ಗಾಢವಾಗಿರಬೇಕು! (ಯೋಹಾನ 3:35; 14:31) ಯೇಸು ತನ್ನ ತಂದೆಯಲ್ಲಿದ್ದ ಗುಣಗಳನ್ನೇ ತೋರಿಸಿದನು. ಎಷ್ಟರ ಮಟ್ಟಿಗೆಂದರೆ ಆತನನ್ನು ಬೈಬಲಿನಲ್ಲಿ “ಅದೃಶ್ಯನಾದ ದೇವರ ಪ್ರತಿರೂಪ” ಎಂದು ಕರೆಯಲಾಗಿದೆ.—ಕೊಲೊಸ್ಸೆ 1:15.

14. ಯೆಹೋವ ದೇವರ ಮುದ್ದುಮಗನು ಮನುಷ್ಯನಾಗಿ ಹುಟ್ಟಿದ್ದು ಹೇಗೆ?

14 ಯೆಹೋವ ದೇವರ ಈ ಮುದ್ದುಮಗ ಸ್ವರ್ಗದಿಂದ ಭೂಮಿಗೆ ಬರಲು ಸಿದ್ಧನಾದನು. ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಲು ಸಹ ಹಿಂಜರಿಯಲಿಲ್ಲ. ಆದರೆ ಸ್ವರ್ಗದಲ್ಲಿದ್ದ ಯೇಸು ಮನುಷ್ಯನಾಗಿ ಹುಟ್ಟಲು ಹೇಗೆ ಸಾಧ್ಯವಾಯಿತು? ಯೆಹೋವನು ಒಂದು ಅದ್ಭುತವನ್ನು ಮಾಡಿದನು. ಸ್ವರ್ಗದಲ್ಲಿದ್ದ ಯೇಸುವಿನ ಜೀವವನ್ನು ಭೂಮಿಯಲ್ಲಿದ್ದ ಮರಿಯ ಎಂಬ ಕನ್ಯೆಯ ಗರ್ಭದಲ್ಲಿಟ್ಟನು. ಮಾನವ ತಂದೆಯಿಂದ ಯೇಸು ಹುಟ್ಟದಿದ್ದ ಕಾರಣ ಆತನಲ್ಲಿ ಪಾಪ ಇರಲಿಲ್ಲ, ಆತನು ಪರಿಪೂರ್ಣನಾಗಿದ್ದನು. ಮರಿಯಳು ಆತನಿಗೆ ಯೇಸು ಎಂದು ಹೆಸರಿಟ್ಟಳು.—ಲೂಕ 1:30-35.

ಯೇಸು ಎಂಥ ವ್ಯಕ್ತಿಯಾಗಿದ್ದನು?

15. ಯೆಹೋವನ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬೇಕಾದರೆ ನೀವೇನು ಮಾಡಬೇಕು? ಮತ್ತು ಯಾಕೆ?

15 ಬೈಬಲಿನಲ್ಲಿರುವ ಮತ್ತಾಯ, ಮಾರ್ಕ, ಲೂಕ, ಯೋಹಾನ ಎಂಬ ಪುಸ್ತಕಗಳಲ್ಲಿ ಯೇಸುವಿನ ಬಗ್ಗೆ ತುಂಬ ವಿಷಯಗಳನ್ನು ಬರೆದಿಡಲಾಗಿದೆ. ಈ ಪುಸ್ತಕಗಳನ್ನು “ಸುವಾರ್ತೆಯ ಪುಸ್ತಕಗಳು” ಎಂದು ಕರೆಯಲಾಗುತ್ತದೆ. ಅವುಗಳನ್ನು ಓದುವುದರಿಂದ ನೀವು ಯೇಸುವಿನ ಬಗ್ಗೆ, ಆತನ ಜೀವನದ ಬಗ್ಗೆ, ಆತನ ಗುಣಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು. ಯೆಹೋವ ದೇವರಲ್ಲಿದ್ದ ಗುಣಗಳೇ ಯೇಸುವಲ್ಲಿ ಇದ್ದದರಿಂದ, ನೀವು ಯೇಸುವಿನ ಬಗ್ಗೆ ಕಲಿತರೆ ಯೆಹೋವನ ಬಗ್ಗೆ ಕಲಿತಂತೆ. ಹಾಗಾಗಿಯೇ ಯೇಸು, “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ” ಎಂದು ಹೇಳಿದನು.—ಯೋಹಾನ 14:9.

16. (ಎ) ಯೇಸು ಜನರಿಗೆ ಯಾವ ವಿಷಯವನ್ನು ಕಲಿಸಿದನು? (ಬಿ) ಯೇಸು ತನ್ನ ಮನಸ್ಸಿಗೆ ಬಂದದ್ದನ್ನು ಕಲಿಸಲಿಲ್ಲ ಎಂದು ಹೇಗೆ ಹೇಳಬಹುದು?

16 ಜನರು ಯೇಸುವನ್ನು “ಬೋಧಕ” ಎಂದು ಕರೆಯುತ್ತಿದ್ದರು. (ಯೋಹಾನ 1:38; 13:13) ಆತನು ಜನರಿಗೆ ಬೋಧಿಸಿದ ಅಥವಾ ಕಲಿಸಿದ ಮುಖ್ಯ ವಿಷಯ “ರಾಜ್ಯದ ಸುವಾರ್ತೆ” ಆಗಿತ್ತು. ಆದರೆ ಯಾವುದು ಆ ರಾಜ್ಯ? ಅದು ದೇವರ ರಾಜ್ಯ ಅಥವಾ ಸರ್ಕಾರ. ಬೇಗನೆ ಆ ಸರ್ಕಾರ ಸ್ವರ್ಗದಿಂದ ಭೂಮಿಯ ಮೇಲೆ ಆಳ್ವಿಕೆ ನಡೆಸಲಿದೆ ಮತ್ತು ದೇವರ ಮಾತಿನ ಪ್ರಕಾರ ನಡೆಯುವವರಿಗೆ ತುಂಬ ಒಳ್ಳೇ ಜೀವನವನ್ನು ಕೊಡಲಿದೆ. (ಮತ್ತಾಯ 4:23) ದೇವರ ರಾಜ್ಯದ ಬಗ್ಗೆ ಕಲಿಸಲು ಯೇಸುವಿಗೆ ಹೇಳಿದ್ದೇ ಯೆಹೋವ ದೇವರು. ಯೇಸು ತನ್ನ ಮನಸ್ಸಿಗೆ ಬಂದದ್ದನ್ನು ಯಾವತ್ತೂ ಕಲಿಸಲಿಲ್ಲ. ಹಾಗಾಗಿಯೇ “ನಾನು ಏನನ್ನು ಬೋಧಿಸುತ್ತೇನೋ ಅದು ನನ್ನದಲ್ಲ, ನನ್ನನ್ನು ಕಳುಹಿಸಿದಾತನಿಗೆ ಸೇರಿದ್ದು” ಎಂದು ಯೇಸು ಹೇಳಿದನು. (ಯೋಹಾನ 7:16) ದೇವರ ಸರ್ಕಾರವು ಭೂಮಿಯ ಮೇಲೆ ಆಳ್ವಿಕೆ ನಡೆಸಲಿದೆ ಎಂಬ ಒಳ್ಳೇ ಸುದ್ದಿಯನ್ನು ಎಲ್ಲ ಜನರು ತಿಳಿಯಬೇಕೆನ್ನುವುದು ದೇವರ ಇಷ್ಟವೆಂದು ಯೇಸುವಿಗೆ ಗೊತ್ತಿತ್ತು. ಆದ್ದರಿಂದಲೇ ಅದನ್ನು ಆತನು ಜನರಿಗೆ ತಿಳಿಸಿದನು.

17. (ಎ) ಯೇಸು ಜನರಿಗೆ ಕಲಿಸಲು ಎಲ್ಲೆಲ್ಲ ಹೋದನು? (ಬಿ) ಅವರಿಗೆ ಕಲಿಸಲು ಯೇಸು ಅಷ್ಟೊಂದು ಪ್ರಯತ್ನ ಮಾಡಿದ್ದು ಏಕೆ?

17 ಯೇಸು ಜನರಿಗೆ ಕಲಿಸಲಿಕ್ಕಾಗಿ ಎಲ್ಲೆಲ್ಲ ಹೋದನು? ನಗರ, ಗ್ರಾಮ, ಹಳ್ಳಿಗಳಲ್ಲಿ, ಮಾರುಕಟ್ಟೆ, ದೇವಾಲಯ, ಸಭಾಮಂದಿರಗಳಲ್ಲಿ, ಮನೆಗಳಲ್ಲಿ ಹೀಗೆ ಜನರು ಎಲ್ಲೆಲ್ಲಿ ಸಿಗುತ್ತಿದ್ದರೋ ಅಲ್ಲೆಲ್ಲ ಹೋಗಿ ಕಲಿಸಿದನು. ಜನರೇ ತನ್ನ ಹತ್ತಿರ ಬರಲಿ ಎಂದು ಕಾಯದೆ ಹೆಚ್ಚಾಗಿ ತಾನೇ ಅವರ ಹತ್ತಿರ ಹೋದನು. (ಮಾರ್ಕ 6:56; ಲೂಕ 19:5, 6) ಜನರಿಗೆ ಕಲಿಸಲಿಕ್ಕಾಗಿ ತನ್ನ ಶಕ್ತಿ, ಸಮಯವನ್ನೆಲ್ಲ ಯೇಸು ಬಳಸಿದನು. ಏಕೆಂದರೆ, ತಾನು ಹಾಗೆ ಮಾಡಬೇಕು ಅನ್ನುವುದು ದೇವರ ಇಷ್ಟ ಅಂತ ಆತನಿಗೆ ಗೊತ್ತಿತ್ತು. ಜೊತೆಗೆ ದೇವರ ಇಷ್ಟದಂತೆ ಮಾಡಲು ಯೇಸುವಿಗೆ ಮನಸ್ಸೂ ಇತ್ತು. (ಯೋಹಾನ 8:28, 29) ಇನ್ನೊಂದು ಕಾರಣ ಏನೆಂದರೆ, ಆಗ ಇದ್ದ ಧಾರ್ಮಿಕ ಗುರುಗಳು ದೇವರ ಬಗ್ಗೆಯಾಗಲಿ, ದೇವರ ರಾಜ್ಯದ ಬಗ್ಗೆಯಾಗಲಿ ಜನರಿಗೆ ಕಲಿಸುತ್ತಿರಲಿಲ್ಲ. ಆ ಜನರನ್ನು ನೋಡಿ ಯೇಸುವಿಗೆ ‘ಅಯ್ಯೋ ಪಾಪ’ ಅನಿಸುತ್ತಿತ್ತು. (ಮತ್ತಾಯ 9:35, 36 ಓದಿ.) ಹಾಗಾಗಿ ದೇವರ ರಾಜ್ಯದ ಬಗ್ಗೆ ತನ್ನಿಂದಾದಷ್ಟು ಹೆಚ್ಚನ್ನು ತಿಳಿಸಿದನು.

18. ಯೇಸುವಿನ ಯಾವ ಗುಣ ನಿಮಗೆ ತುಂಬ ಇಷ್ಟ?

18 ಯೇಸುವಿಗೆ ಜನರ ಮೇಲೆ ತುಂಬ ಪ್ರೀತಿ ಇತ್ತು. ಅವರ ಕಡೆಗೆ ಕಾಳಜಿ ತೋರಿಸುತ್ತಿದ್ದನು. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದನು. ಯಾರು ಬೇಕಾದರೂ ಹಿಂಜರಿಕೆಯಿಲ್ಲದೆ ಆತನ ಹತ್ತಿರ ಮಾತಾಡಬಹುದಿತ್ತು. ಮಕ್ಕಳಿಗೂ ಆತನ ಜೊತೆ ಇರಲಿಕ್ಕೆ ತುಂಬ ಖುಷಿಯಾಗುತ್ತಿತ್ತು. (ಮಾರ್ಕ 10:13-16) ಯೇಸು ಭೇದಭಾವ ಮಾಡುತ್ತಿರಲಿಲ್ಲ. ಭ್ರಷ್ಟಾಚಾರ, ಅನ್ಯಾಯವನ್ನು ಸ್ವಲ್ಪವೂ ಸಹಿಸುತ್ತಿರಲಿಲ್ಲ. (ಮತ್ತಾಯ 21:12, 13) ಆ ಕಾಲದಲ್ಲಿ, ಸ್ತ್ರೀಯರಿಗೆ ಕಿಂಚಿತ್ತೂ ಗೌರವ ಕೊಡದೆ ತುಂಬ ಕೀಳಾಗಿ ನೋಡುತ್ತಿದ್ದರು. ಆದರೆ ಯೇಸು ಸ್ತ್ರೀಯರಿಗೆ ಗೌರವ, ಮರ್ಯಾದೆ ಕೊಟ್ಟನು. (ಯೋಹಾನ 4:9, 27) ಆತನಲ್ಲಿ ಸ್ವಲ್ಪವೂ ಅಹಂಕಾರ ಇರಲಿಲ್ಲ. ಹಾಗಾಗಿಯೇ ತನ್ನ ಶಿಷ್ಯರ ಕಾಲುಗಳನ್ನು ತೊಳೆದನು. ಇದು ಸಾಮಾನ್ಯವಾಗಿ ಒಬ್ಬ ಆಳು ಮಾಡುವ ಕೆಲಸವಾಗಿತ್ತು.—ಯೋಹಾನ 13:2-5, 12-17.

ಜನರು ಇರುವಲ್ಲಿಗೆ ಹೋಗಿ ಯೇಸು ಕಲಿಸಿದನು

19. ಯೇಸುವಿಗೆ ಜನರ ಅಗತ್ಯ ತಿಳಿದಿತ್ತು ಮತ್ತು ಅವರಿಗೆ ಸಹಾಯಮಾಡಲು ಬಯಸಿದನು ಎಂದು ನಮಗೆ ಹೇಗೆ ಗೊತ್ತು?

19 ಜನರಿಗೆ ನಿಜವಾಗಿಯೂ ಏನು ಅಗತ್ಯ ಇದೆ ಎಂದು ಯೇಸುವಿಗೆ ಗೊತ್ತಿತ್ತು ಮತ್ತು ಅವರಿಗೆ ಸಹಾಯ ಮಾಡುವ ಬಯಕೆಯಿತ್ತು. ಹಾಗಾಗಿಯೇ ಯೇಸು ದೇವರ ಶಕ್ತಿಯನ್ನು ಬಳಸಿ ಜನರನ್ನು ವಾಸಿಮಾಡಿದನು. (ಮತ್ತಾಯ 14:14) ಒಮ್ಮೆ, ಕುಷ್ಠರೋಗವಿದ್ದ ವ್ಯಕ್ತಿಯೊಬ್ಬ ಯೇಸುವಿನ ಹತ್ತಿರ ಬಂದು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಹೇಳಿದ. ಆ ಮನುಷ್ಯನ ನೋವು, ನರಳಾಟ ನೋಡಿ ಯೇಸುವಿಗೆ ತುಂಬ ಸಂಕಟವಾಯಿತು. ಹಾಗಾಗಿ ಕೈಚಾಚಿ ಆ ಕುಷ್ಠರೋಗಿಯನ್ನು ಮುಟ್ಟಿದನು. ಮಾತ್ರವಲ್ಲ “ನನಗೆ ಮನಸ್ಸುಂಟು. ಶುದ್ಧನಾಗು” ಎಂದು ಹೇಳಿದನು. ತಕ್ಷಣ ಆ ಮನುಷ್ಯನಿಗಿದ್ದ ಕುಷ್ಠವೆಲ್ಲ ವಾಸಿಯಾಯಿತು! (ಮಾರ್ಕ 1:40-42) ಯೋಚಿಸಿ, ಆಗ ಆ ವ್ಯಕ್ತಿಗೆ ಎಷ್ಟು ಸಂತೋಷ ಆಗಿರಬೇಕು!

ತಂದೆಗೆ ನಂಬಿಗಸ್ತನಾಗಿಯೇ ಉಳಿದ ಮಗ

20, 21. ಯೆಹೋವನಿಗೆ ವಿಧೇಯತೆ ತೋರಿಸಿದವರಲ್ಲಿ ಯೇಸು ಅತ್ಯುತ್ತಮನು ಎಂದು ಹೇಗೆ ಹೇಳಬಹುದು?

20 ಯೆಹೋವನಿಗೆ ವಿಧೇಯತೆ ತೋರಿಸಿದವರು ಅನೇಕರಿದ್ದಾರೆ. ಅವರಲ್ಲಿ ಯೇಸುವೇ ಅತ್ಯುತ್ತಮನು. ಏಕೆಂದರೆ ಏನೇ ಆದರೂ, ವಿರೋಧಿಗಳು ಏನೇ ಮಾಡಿದರೂ ಯೇಸು ಮಾತ್ರ ತನ್ನ ತಂದೆ ಹೇಳಿದ್ದನ್ನೇ ಮಾಡಿದನು. ಸೈತಾನನು ಆತನನ್ನು ಕೆಟ್ಟ ದಾರಿಗೆ ಎಳೆಯಲು ಪ್ರಯತ್ನಿಸಿದಾಗಲೂ ಯೇಸು ತಪ್ಪು ಮಾಡಲಿಲ್ಲ. (ಮತ್ತಾಯ 4:1-11) ಆತನ ಕುಟುಂಬದಲ್ಲೇ ಕೆಲವರು ಆತನು ಮೆಸ್ಸೀಯನೆಂದು ನಂಬಲಿಲ್ಲ. ಅಷ್ಟೇ ಅಲ್ಲ, ‘ಅವನಿಗೆ ಹುಚ್ಚುಹಿಡಿದಿದೆ’ ಎಂದು ಸಹ ಹೇಳಿದರು. ಆದರೂ ದೇವರ ಸೇವೆ ಮಾಡುವುದನ್ನು ಯೇಸು ಬಿಡಲಿಲ್ಲ. (ಮಾರ್ಕ 3:21) ವಿರೋಧಿಗಳು ಆತನನ್ನು ಕ್ರೂರವಾಗಿ ಹಿಂಸಿಸಿದರೂ ದೇವರು ಇಷ್ಟಪಡುವುದನ್ನೇ ಮಾಡಿದನು. ಅಷ್ಟೇಕೆ, ವಿರೋಧಿಗಳಿಗೂ ಕೆಟ್ಟದ್ದನ್ನು ಮಾಡಲಿಲ್ಲ.—1 ಪೇತ್ರ 2:21-23.

21 ಯೆಹೋವನ ಇಷ್ಟದ ಪ್ರಕಾರ ಜೀವಿಸಿದ್ದಕ್ಕಾಗಿ ಯೇಸು ಕ್ರೂರ ಹಿಂಸೆ ಅನುಭವಿಸಬೇಕಾಯಿತು, ತುಂಬ ನೋವಿನಿಂದ ಪ್ರಾಣ ಬಿಡಬೇಕಾಯಿತು. (ಫಿಲಿಪ್ಪಿ 2:8 ಓದಿ.) ಆತನು ಅನುಭವಿಸಿದ ಹಿಂಸೆ, ನೋವು ಹೇಗಿದ್ದಿರಬೇಕು ಎಂದು ಸ್ವಲ್ಪ ಊಹಿಸಿ. ವಿರೋಧಿಗಳು ಆತನನ್ನು ಹಿಡಿದುಕೊಂಡು ಹೋದರು. ದೇವರ ವಿರುದ್ಧ ದೂಷಣೆ ಮಾಡಿದ್ದಾನೆಂದು ಸುಳ್ಳು ಆರೋಪ ಹೊರಿಸಿದರು. ಮೋಸಗಾರರಾಗಿದ್ದ ನ್ಯಾಯಾಧೀಶರು ಆತನಿಗೆ ಮರಣ ದಂಡನೆಯಾಗಬೇಕೆಂದು ತೀರ್ಪು ಕೊಟ್ಟರು. ಗುಂಪುಗೂಡಿದ್ದ ಜನರು ಆತನ ಬಗ್ಗೆ ಗೇಲಿಮಾಡಿ ನಗಾಡಿದರು. ಸೈನಿಕರು ಚಿತ್ರಹಿಂಸೆ ಕೊಟ್ಟರು. ನಂತರ ಮರದ ಕಂಬಕ್ಕೆ ಆತನನ್ನು ಮೊಳೆಗಳಿಂದ ಜಡಿದು ತೂಗುಹಾಕಿದರು. ಕಡೆಯದಾಗಿ ಯೇಸು “ನೆರವೇರಿತು” ಎಂದು ಹೇಳಿ ತನ್ನ ಕೊನೇ ಉಸಿರೆಳೆದನು. (ಯೋಹಾನ 19:30) ಮೂರು ದಿನಗಳ ನಂತರ ಯೆಹೋವನು ಯೇಸುವನ್ನು ಪುನಃ ಜೀವಂತಗೊಳಿಸಿ ಆತ್ಮಿಕ ದೇಹವನ್ನು ಅಂದರೆ ನಮ್ಮ ಕಣ್ಣಿಗೆ ಕಾಣದ ದೇಹವನ್ನು ಕೊಟ್ಟನು. (1 ಪೇತ್ರ 3:18) ಇದಾಗಿ ಕೆಲವು ವಾರಗಳ ನಂತರ ಯೇಸು ಸ್ವರ್ಗಕ್ಕೆ ಹಿಂತಿರುಗಿ ಹೋದನು. ತನ್ನನ್ನು ರಾಜನಾಗಿ ಮಾಡುವ ತನಕ ದೇವರ ‘ಬಲಗಡೆಯಲ್ಲಿ ಕುಳಿತುಕೊಂಡನು.’—ಇಬ್ರಿಯ 10:12, 13.

22. ಯೇಸು ತನ್ನ ತಂದೆಗೆ ವಿಧೇಯನಾಗಿಯೇ ಉಳಿದದ್ದರಿಂದ ನಮಗೆ ಯಾವ ಪ್ರಯೋಜನ ಸಿಗಲಿದೆ?

22 ಯೇಸು ತನ್ನ ತಂದೆಗೆ ವಿಧೇಯನಾಗಿಯೇ ಉಳಿದದ್ದರಿಂದ ನಮಗೆ ಪ್ರಯೋಜನವಿದೆ. ಈ ಭೂಮಿ ಸುಂದರ ತೋಟ ಆಗುವಾಗ ಅದರಲ್ಲಿ ನಿತ್ಯಕ್ಕೂ ಜೀವಿಸುವ ಸೌಭಾಗ್ಯ ನಮ್ಮದಾಗಲಿದೆ. ಅದು ಹೇಗೆ ಎಂದು ಮುಂದಿನ ಅಧ್ಯಾಯದಲ್ಲಿ ಕಲಿಯೋಣ.

^ ಪ್ಯಾರ. 11 ಯೆಹೋವ ದೇವರು ನಮಗೆ ಜೀವ ಕೊಟ್ಟದ್ದರಿಂದ ಬೈಬಲಿನಲ್ಲಿ ಆತನನ್ನು “ನಮ್ಮ ತಂದೆ” ಎಂದು ಕರೆಯಲಾಗಿದೆ. (ಯೆಶಾಯ 64:8) ಯೇಸುವನ್ನು ದೇವರ ಮಗನೆಂದು ಕರೆಯಲಾಗಿದೆ. ಏಕೆಂದರೆ ಯೇಸುವನ್ನು ಸೃಷ್ಟಿಸಿದ್ದು ಯೆಹೋವ ದೇವರು.ಅಲ್ಲದೆ, ಆದಾಮನನ್ನು ಸಹ ದೇವರ ಮಗನೆಂದು, ದೇವದೂತರನ್ನು ದೇವರ ಕುಮಾರರೆಂದು ಕರೆಯಲಾಗಿದೆ.—ಯೋಬ 38:6; ಲೂಕ 3:38.